Tag: ನವದೆಹಹಲಿ

  • ಲಾಲ್ ಬಹದ್ದೂರ್ ಶಾಸ್ತ್ರಿಗೆ ಪ್ರಿಯಾಂಕ ವಾದ್ರಾ ಅವಮಾನ – ವಿಡಿಯೋ ಹರಿಬಿಟ್ಟ ಸ್ಮೃತಿ ಇರಾನಿ

    ಲಾಲ್ ಬಹದ್ದೂರ್ ಶಾಸ್ತ್ರಿಗೆ ಪ್ರಿಯಾಂಕ ವಾದ್ರಾ ಅವಮಾನ – ವಿಡಿಯೋ ಹರಿಬಿಟ್ಟ ಸ್ಮೃತಿ ಇರಾನಿ

    ನವದೆಹಲಿ: ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರಿಗೆ ಕಾಂಗ್ರೆಸ್ ನಾಯಕಿ ಪ್ರಿಯಾಂಕ ಗಾಂಧಿ ವಾದ್ರಾ ಅವಮಾನ ಮಾಡಿದ್ದಾರೆ ಎಂದು ಕೇಂದ್ರ ಸಚಿವೆ, ಬಿಜೆಪಿ ನಾಯಕಿ ಸ್ಮೃತಿ ಇರಾನಿ ವಿಡಿಯೋವನ್ನು ಟ್ವೀಟ್ ಮಾಡಿದ್ದಾರೆ.

    ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ಉತ್ತರ ಪ್ರದೇಶದಲ್ಲಿ ಚುನಾವಣಾ ಪ್ರಚಾರ ನಡೆಸುತ್ತಿರುವ ಪ್ರಿಯಾಂಕ ಗಾಂಧಿ ವಾದ್ರಾ ತಮ್ಮ ಕೊರಳಿನಲ್ಲಿದ್ದ ಹಾರವನ್ನು ತೆಗೆದು ಶಾಸ್ತ್ರಿ ಅವರ ಪುತ್ಥಳಿಗೆ ಹಾಕಿದ್ದಾರೆ. ಈ ವಿಡಿಯೋವನ್ನೇ ಸ್ಮೃತಿ ಇರಾನಿ ಟ್ವೀಟ್ ಮಾಡಿ ಆರೋಪ ಮಾಡಿದ್ದಾರೆ.

    ಬಳಸಲಾದ ಹೂವಿನ ಹಾರವನ್ನು ಶಾಸ್ತ್ರಿ ಅವರ ಪ್ರತಿಮೆಗೆ ಹಾಕಿ ಪ್ರಿಯಾಂಕ ಗಾಂಧಿ ವಾದ್ರಾ ಅವಮಾನ ಮಾಡಿದ್ದಾರೆ. ಈ ವಿಡಿಯೋ ಪ್ರಿಯಾಂಕ ಅವರ ನಡೆಗೆ ಸಾಕ್ಷಿಯಾಗಿದೆ. ಇದು ಕಾಂಗ್ರೆಸ್ ಪಕ್ಷದ ಮೌಲ್ಯಗಳನ್ನು ಪ್ರದರ್ಶಿಸುತ್ತದೆ ಎಂದು ಟೀಕಿಸಿದ್ದಾರೆ. ಸ್ಮೃತಿ ಅವರ ಟ್ವೀಟಿಗೆ ಪ್ರತಿಕ್ರಿಯೆ ನೀಡಿರುವ ಹಲವು ಬಿಜೆಪಿ ನಾಯಕರು ಕೂಡ ಪ್ರಿಯಾಂಕ ನಡೆಯ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ ಕಿಡಿಕಾರಿದ್ದಾರೆ.

    ಪ್ರಧಾನಿ ನರೇಂದ್ರ ಅವರ ಕ್ಷೇತ್ರವಾಗಿರುವ ಉತ್ತರ ಪ್ರದೇಶದ ವಾರಾಣಾಸಿಯಲ್ಲಿ ಮೂರು ದಿನ ಚುನಾವಣಾ ಪ್ರಚಾರ ಕಾರ್ಯವನ್ನು ನಡೆಸುತ್ತಿರುವ ಪ್ರಿಯಾಂಕ ಗಾಂಧಿ, ಈ ಬಾರಿಯ ಚುನಾವಣೆಯನ್ನು ಸ್ವಾತಂತ್ರ್ಯ ಸಂಗ್ರಾಮಕ್ಕೆ ಹೋಲಿಕೆ ಮಾಡಿದ್ದಾರೆ. ಪ್ರಚಾರದ ಭಾಗವಾಗಿ ಪ್ರಿಯಾಂಕ ಗಾಂಧಿ ಅವರು ಸುಮಾರು 140 ಕಿಮೀ ದೂರದ ಗಂಗಾ ಯಾತ್ರೆಯನ್ನು ಮಾಡಿದ್ದರು. ಈ ವೇಳೆ ಹುತಾತ್ಮರಾದ ಯೋಧರ ಮನೆಗೆ ಭೇಟಿ ನೀಡಿದ್ದರು. ಅಲ್ಲದೇ ರೈತರನ್ನು ಭೇಟಿ ಮಾಡಿ ಸಮಸ್ಯೆಗಳನ್ನು ಆಲಿಸಿದ್ದರು.