Tag: ನವದಂಪತಿ

  • ಹೊಂದಾಣಿಕೆ ಕೊರತೆ – ಮದುವೆಯಾದ 6 ತಿಂಗಳಲ್ಲಿ ಬಾವಿಗೆ ಹಾರಿದ ನವದಂಪತಿ

    ಹೊಂದಾಣಿಕೆ ಕೊರತೆ – ಮದುವೆಯಾದ 6 ತಿಂಗಳಲ್ಲಿ ಬಾವಿಗೆ ಹಾರಿದ ನವದಂಪತಿ

    ಬೀದರ್: ಮದುವೆಯಾದ 6 ತಿಂಗಳಲ್ಲಿಯೇ ನವ ದಂಪತಿ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ತಡೋಳಾ ಗ್ರಾಮದಲ್ಲಿ ತಡರಾತ್ರಿ ನಡೆದಿದೆ.

    ಗ್ರಾಮದ ಅಂಜಲಿ (25) ಹಾಗೂ ಅವರ ಪತಿ ಉಮೇಶ ಮಡಿವಾಳ (28) ಆತ್ಮಹತ್ಯೆ ಮಾಡಿಕೊಂಡ ದಂಪತಿ. ಕಳೆದ ಮೇ ತಿಂಗಳಲ್ಲಿ ತಾಲೂಕಿನ ಮಂಠಾಳ ಗ್ರಾಮದ ಅಂಜಲಿಯನ್ನು ತಡೋಳ ಗ್ರಾಮದ ಉಮೇಶನಿಗೆ ಮದುವೆ ಮಾಡಿ ಕೊಡಲಾಗಿತ್ತು. ಮದುವೆಯಾದಾಗಿನಿಂದ ದಂಪತಿ ನಡುವೆ ಹೊಂದಾಣಿಕೆ ಕೊರತೆಯಿಂದಾಗಿ ಆಗಾಗ ಕಲಹ ನಡೆಯುತ್ತಿತ್ತು ಎನ್ನಲಾಗಿದೆ.

    ಗುರುವಾರ ತಡ ರಾತ್ರಿ ಇಬ್ಬರ ನಡುವೆ ಮತ್ತೆ ಜಗಳ ಆರಂಭವಾಗಿದ್ದು, ಇಬ್ಬರು ಕೂಡಿಯೇ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸುದ್ದಿ ತಿಳಿದು ಬೆಳಗ್ಗೆ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳೀಯರ ಸಹಾಯದೊಂದಿಗೆ ಬಾವಿಯಿಂದ ಶವಗಳನ್ನು ಮೇಲೆತ್ತಿದ್ದಾರೆ. ಸ್ಥಳಕ್ಕೆ ಮಂಠಾಳ ಸಿಪಿಐ ಮಹೇಶಗೌಡ ಪಾಟೀಲ, ಪಿಎಸ್‍ಐ ಅರುಣಕುಮಾರ ಆಗಮಿಸಿ ಪರಿಶೀಲನೆ ಬಳಿಕ ಪ್ರಕರಣ ದಾಖಲಿಸಿಕೊಂಡಿದ್ದಾರೆ.

  • ಮದ್ವೆಯಾದ ಕೆಲವೇ ಕ್ಷಣದಲ್ಲಿ ಪ್ರಾಣಬಿಟ್ಟ ನವದಂಪತಿ

    ಮದ್ವೆಯಾದ ಕೆಲವೇ ಕ್ಷಣದಲ್ಲಿ ಪ್ರಾಣಬಿಟ್ಟ ನವದಂಪತಿ

    -ನವಜೋಡಿಯ ಕನಸಿಗೆ ಕೊಳ್ಳಿಯಿಟ್ಟ ಅಪಘಾತ

    ವಾಷಿಂಗ್ಟನ್: ಆಗಷ್ಟೇ ಮದುವೆ ಮಾಡಿಕೊಂಡು ಚರ್ಚ್ ನಿಂದ ಹೊರ ಬರುತ್ತಿದ್ದ ನವದಂಪತಿಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಇಬ್ಬರೂ ಸ್ಥಳದಲ್ಲೇ ಸಾವನ್ನಪ್ಪಿದ ದುರಂತ ಯುಎಸ್‍ನ ಟೆಕ್ಸಾಸ್‍ನಲ್ಲಿ ನಡೆದಿದೆ.

    ಹಾರ್ಲೇ(19) ಮತ್ತು ರಿಯಾನನ್ ಮೋರ್ಗನ್(20) ಮೃತ ದುರ್ದೈವಿಗಳು. ಹಾರ್ಲೇ ಹಾಗೂ ರಿಯಾನನ್ ಪ್ರೀತಿಸಿ ಮದುವೆಯಾಗಿದ್ದರು. ಟೆಕ್ಸಾಸ್‍ನ ಜಾಯ್ ಡುಬೋಸ್-ಸಿಮಂಟನ್ ಬಳಿಯ ಜಸ್ಟಿಸ್ ಆಫ್ ಪೀಸ್‍ನ ಚೆಂಬರ್ ಹತ್ತಿರ ಈ ಅಪಘಾತ ಸಂಭವಿಸಿದೆ. ಲಾರಿ ಚಾಲಕನ ಅಜಾಗರೂಕತೆಗೆ ಹೊಸ ಜೀವನ ಆರಂಭಿಸಬೇಕಿದ್ದ ದಂಪತಿ ಮಸಣ ಸೇರಿದ್ದಾರೆ.

    ಶುಕ್ರವಾರದಂದು ಅದ್ಧೂರಿಯಾಗಿ ಕಾರ್ಲೇ ಮತ್ತು ರಿಯಾನನ್ ಕುಟುಂಬಸ್ಥರ ಸಮ್ಮುಖದಲ್ಲಿ ವಿವಾಹವಾಗಿದ್ದರು. ಆದರೆ ಈ ಖುಷಿ ಬಹಳ ಹೊತ್ತು ಉಳಿಯಲಿಲ್ಲ. ಕೋರ್ಟ್‌ಹೌಸ್‌ನಲ್ಲಿ ತಮ್ಮ ಮದುವೆ ಪರವಾನಗಿಯನ್ನು ಸಲ್ಲಿಸಲು ಹಾಗೂ ರಿಯಾನಾನ್‍ನ ಹೆಸರನ್ನು ಕಾನೂನಿನ ಪ್ರಕಾರ ಬದಲಾಯಿಸಲು ನವ ವಧು-ವರ ಕಾರಿನ ಬಳಿ ಬರುತ್ತಿದ್ದರು. ಜೊತೆಗೆ ಹೊರಗಡೆ ಮದುವೆಯ ಸಂತೋಷ ಕ್ಷಣದ ಫೋಟೋಗಳನ್ನು ಕ್ಲಿಕ್ಕಿಸಿಕೊಳ್ಳಲು ದಂಪತಿ ಸಜ್ಜಾಗಿದ್ದರು. ಆದರೆ ಈ ವೇಳೆ ರಸ್ತೆಯಲ್ಲಿ ವೇಗದಿಂದ ಬಂದ ಲಾರಿ ಅವರಿಬ್ಬರಿಗೂ ಡಿಕ್ಕಿ ಹೊಡೆದಿದೆ.

    ಪರಿಣಾಮ ಇಬ್ಬರೂ ತಮ್ಮ ದಾಂಪತ್ಯ ಜೀವನ ಆರಂಭಿಸುವ ಮೊದಲೇ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕುಟುಂಬಸ್ಥರ ಎದುರಲ್ಲೇ ಈ ದುರ್ಘಟನೆ ಸಂಭವಿಸಿದರೂ ನವದಂಪತಿಯ ಜೀವ ಉಳಿಸಲು ಸಾಧ್ಯವಾಗಿಲ್ಲ. ಈ ಬಗ್ಗೆ ಮೋರ್ಗನ್ ತಾಯಿ ಪ್ರತಿಕ್ರಿಯಿಸಿ, ನಮ್ಮ ಕಣ್ಣೆದುರೇ ನಮ್ಮ ಮಕ್ಕಳು ಅಪಘಾತಕ್ಕೀಡಾದರು. ಆದರೆ ಅವರನ್ನು ಉಳಿಸಿಕೊಳ್ಳಲು ನಮ್ಮಿಂದ ಸಾಧ್ಯವಾಗಲಿಲ್ಲ. ಅವರ ರಕ್ತದ ಕಲೆಗಳು ಇನ್ನೂ ನಮ್ಮ ಅಂಗೈ ಮೇಲಿದೆ. ಇಬ್ಬರೂ ಸಾಕಷ್ಟು ಕನಸು ಕಟ್ಟಿಕೊಂಡು ವಿವಾಹವಾಗಿದ್ದರು. ಆದರೆ ಅವರ ಖುಷಿಯ ಕ್ಷಣ ಈ ಅಪಘಾಯದಿಂದ ದುರಂತ ಕ್ಷಣವಾಯಿತು. ನಮ್ಮ ಮಕ್ಕಳ ಸಾವನ್ನು ನಾವೇ ನೋಡುವ ಸ್ಥಿತಿ ಬಂತು ಎಂದು ಕಣ್ಣೀರಿಟ್ಟಿದ್ದಾರೆ.

    ಸದ್ಯ ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತನಿಖೆ ನಡೆಸುತ್ತಿದ್ದಾರೆ. ಆರೋಪಿ ಲಾರಿ ಚಾಲಕನನ್ನು ಪತ್ತೆ ಮಾಡುತ್ತೇವೆ, ಆದಷ್ಟು ಬೇಗ ಆತನನ್ನು ಬಂಧಿಸಲಾಗುತ್ತದೆ ಎಂದು ಪೊಲೀಸರು ಭರವಸೆ ನೀಡಿದ್ದಾರೆ.

  • ಅದ್ಧೂರಿಯಾಗಿ ನಡೆದ ಆಷಾಢದಲ್ಲಿ ನವದಂಪತಿ ಸೇರುವ ಜಾತ್ರಾ ಮಹೋತ್ಸವ

    ಅದ್ಧೂರಿಯಾಗಿ ನಡೆದ ಆಷಾಢದಲ್ಲಿ ನವದಂಪತಿ ಸೇರುವ ಜಾತ್ರಾ ಮಹೋತ್ಸವ

    ರಾಮನಗರ: ಆಷಾಢ ಮಾಸದಲ್ಲಿ ನೂತನ ದಂಪತಿಗಳನ್ನು ಬೇರೆ ಮಾಡಿ, ಹೆಣ್ಣನ್ನು ತವರು ಮನೆಗೆ ಕಳಿಸುವುದು ವಾಡಿಕೆ. ಯಾಕೆಂದರೆ ಆಷಾಢ ಮಾಸದಲ್ಲಿ ಅತ್ತೆ-ಸೊಸೆ ಒಂದೇ ಬಾಗಿಲಿನಲ್ಲಿ ಓಡಾಡಿದರೆ ಕೇಡಾಗುತ್ತೆ ಎನ್ನಲಾಗುತ್ತದೆ.

    ಆದರೆ ದಂಪತಿಗಳನ್ನು ಆಷಾಢದಲ್ಲಿ ಒಂದೆಡೆ ಸೇರಿಸುವಂತಹ ಜಾತ್ರಾ ಮಹೋತ್ಸವ ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ದೇವರ ಹೊಸಹಳ್ಳಿಯಲ್ಲಿ ನಡೆಯುತ್ತದೆ. ನೂತನ ದಂಪತಿಗಳನ್ನು ಒಂದೆಡೆ ಸೇರಿಸುವ ಸಂಜೀವರಾಯಸ್ವಾಮಿಯ ಜಾತ್ರಾ ಮಹೋತ್ಸವ ಇಂದು ಅದ್ಧೂರಿಯಾಗಿ ನಡೆಯಿತು.

    ದೇವರ ಹೊಸಹಳ್ಳಿಯ ಪುರಾತನವಾದ ಸಂಜೀವರಾಯ ಸ್ವಾಮಿ ಬ್ರಹ್ಮರಥೋತ್ಸವದಲ್ಲಿ ಹೊಸ ದಂಪತಿಗಳು ಇಲ್ಲಿಗೆ ಬಂದು ದೇವರಲ್ಲಿ ಇಷ್ಟಾರ್ಥವನ್ನು ನೆನೆದು ಪೂಜೆ ಸಲ್ಲಿಸುತ್ತಾರೆ. ಅಲ್ಲದೇ ನೂತನ ದಂಪತಿಗಳು ಈ ದೇವರ ಸನ್ನಿಧಿಯಲ್ಲಿ ಸಂತಾನ ಬಯಸಿ ಪೂಜೆ ಸಲ್ಲಿಸಿದರೆ ಇಷ್ಟಾರ್ಥ ನೆರವೇರುತ್ತೆ ಎಂಬ ಪ್ರತೀತಿ ಸಹ ಇದೆ. ಬೇರೆಯಾಗಿರುವ ದಂಪತಿಗಳಿಗೆ ಈ ಜಾತ್ರೆ ವೇದಿಕೆಯಾಗಿದ್ದು ರಾಮನಗರ ಜಿಲ್ಲೆ ಅಲ್ಲದೇ ಸುತ್ತಮುತ್ತಲ ಜಿಲ್ಲೆಯ ನೂತನ ದಂಪತಿಗಳು ಸಹ ಇಂದು ನಡೆದ ಜಾತ್ರೆಯಲ್ಲಿ ಪಾಲ್ಗೊಂಡಿದ್ದರು.

    ಆಷಾಢದ ವಿರುದ್ಧವಾಗಿ ನಡೆಯುವ ಜಾತ್ರೆಗಳಲ್ಲಿ ಸಂಜೀವರಾಯ ಸ್ವಾಮಿಯ ಜಾತ್ರೆಯೂ ಕೂಡಾ ಒಂದಾಗಿದ್ದು, ಬ್ರಹ್ಮರಥೋತ್ಸವದಲ್ಲಿ ನೂತನ ದಂಪತಿಗಳು ಇಷ್ಟಾರ್ಥವನ್ನು ನೆನೆದು ರಥವನ್ನು ಎಳೆದು ಜಾತ್ರೆಯಲ್ಲೆಲ್ಲ ದಂಪತಿಗಳು ಕೈ ಕೈ ಹಿಡಿದು ಓಡಾಡಿದ್ದು ವಿಶೇಷವಾಗಿತ್ತು.

  • ಸ್ವಯಂ ಪ್ರೇರಿತರಾಗಿ ಮತದಾನ ಜಾಗೃತಿಗೆ ಮುಂದಾದ ನವಜೋಡಿ

    ಸ್ವಯಂ ಪ್ರೇರಿತರಾಗಿ ಮತದಾನ ಜಾಗೃತಿಗೆ ಮುಂದಾದ ನವಜೋಡಿ

    ಯಾದಗಿರಿ: ಲೋಕಸಭೆ ಚುನಾವಣೆ ಕಾವು ಜೋರಾಗಿದೆ. ಮತದಾನ ಮಹತ್ವದ ತಿಳಿಸುವ ನಿಟ್ಟಿನಲ್ಲಿ ಚುನಾವಣೆ ಆಯೋಗ ಸಾಕಷ್ಟು ಜಾಗೃತಿ ಸಹ ಮೂಡಿಸುತ್ತಿದೆ. ಆದರೆ ಯಾದಗಿರಿಯಲ್ಲಿ ನವ ವಿವಾಹಿತರು ಸ್ವಯಂ ಪ್ರೇರಿತರಾಗಿ ಮತದಾನ ಜಾಗೃತಿ ನಡೆಸಿದ್ದಾರೆ.

    ಮದುವೆ ಸಮಾರಂಭದಲ್ಲಿ ಲೋಕಸಭಾ ಚುನಾವಣೆಯ ಮತದಾನದ, ಮಹತ್ವ ಸಾರುವ ಮೂಲಕ ವಿಭಿನ್ನವಾಗಿ ಮದುವೆ ಕಾರ್ಯಕ್ರಮವೊಂದು ಇಂದು ಜರುಗಿದೆ. ಜಿಲ್ಲೆಯ ಶಹಾಪುರ ತಾಲೂಕಿನ ನಾಲ್ವಡಗಿ ಗ್ರಾಮದಲ್ಲಿ ಈ ಮದುವೆ ನಡೆದಿದೆ. ಗ್ರಾಮದ ಶಿವರಾಜ್ ಹಾಗೂ ವಿಜಯಲಕ್ಷ್ಮಿ ಅವರು ತಮ್ಮ ವಿವಾಹಕ್ಕೆ ಬಂದ ಅತಿಥಿಗಳಿಗೆ ಮತದಾನ ಮಾಡುವಂತೆ ಜಾಗೃತಿಗೊಳಿಸಿ ಇತರರಿಗೆ ಮಾದರಿಯಾಗಿದ್ದಾರೆ.

    ನವದಂಪತಿ ವೇದಿಕೆ ಮೇಲೆ ಮತದಾನದ ಹಕ್ಕನ್ನು ಕಡ್ಡಾಯವಾಗಿ ಚಲಾಯಿಸಬೇಕು ಎಂಬ ಬರಹವಿರುವ ಫಲಕ ತೋರಿಸಿ, ನಾವು ಕಡ್ಡಾಯವಾಗಿ ಮತ ಹಾಕುತ್ತೇವೆ ಮತ್ತು ನೀವು ಕೂಡ ಮತ ಹಾಕಬೇಕೆಂದು ಅತಿಥಿಗಳ ಜೊತೆ ಪ್ರಮಾಣವಚನ ಸ್ವೀಕರಿಸಿದರು.

    ಇದೇ ವೇಳೆ ದಂಪತಿಯ ಸಂಬಂಧಿಯೊಬ್ಬರು ಮಾತನಾಡಿ ಮತದಾರರು, ಹಣ ಹಾಗೂ ಹೆಂಡದ ಆಮಿಷಕ್ಕೆ ಬಲಿಯಾಗದೇ ಉತ್ತಮ ಅಭ್ಯರ್ಥಿಗೆ ಮತ ಚಲಾಯಿಸಬೇಕು. ಮತದಾನದ ದಿನ ರಜೆ ಮೇಲೆ ಊರಿಗೆ ತೆರಳದೇ ಅಂದು ಮತದಾನ ಮಾಡಬೇಕೆಂದು ಮದುವೆಗೆ ಬಂದ ಅತಿಥಿಗಳಿಗೆ ಜಾಗೃತಿ ಸಂದೇಶ ನೀಡಿದರು.

  • ಪೊಲೀಸ್ ಠಾಣೆ ಎದುರೇ ನವದಂಪತಿ ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಯತ್ನ

    ಪೊಲೀಸ್ ಠಾಣೆ ಎದುರೇ ನವದಂಪತಿ ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಯತ್ನ

    ಕೋಲಾರ: ಪೊಲೀಸ್ ಠಾಣೆ ಎದುರೇ ನವದಂಪತಿ ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆ ಎದುರು ನಡೆದಿದೆ.

    ಕೋಲಾರ ತಾಲೂಕು ದಂಡಿಗಾನಹಳ್ಳಿ ಗ್ರಾಮದ ನವದಂಪತಿಯಾದ ಹೇಮಂತ್ ಕುಮಾರ್ ಹಾಗೂ ಚೈತ್ರ ಪೊಲೀಸರ ಎದುರೇ ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಸದ್ಯ ಗ್ರಾಮಾಂತರ ಪೊಲೀಸರು ನವದಂಪತಿಯನ್ನು ರಕ್ಷಿಸಿ ವಿಚಾರಣೆ ನಡೆಸುತ್ತಿದ್ದಾರೆ.

    ಕಳೆದ 9 ತಿಂಗಳ ಹಿಂದೆ ದಂಡಿಗಾನಹಳ್ಳಿಯ ಹೇಮಂತ್ ಕುಮಾರ್ ಪಕ್ಕದ ನೆರ್ನಹಳ್ಳಿಯ ಚೈತ್ರರನ್ನು ಮದುವೆಯಾಗಿದ್ದರು. ಅಂತರ್ಜಾತಿ ವಿವಾಹದ ಹಿನ್ನೆಲೆಯಲ್ಲಿ ಎರಡೂ ಕುಟುಂಬಂಗಳು ಈ ಸಂಬಂಧಕ್ಕೆ ವಿರೋಧ ವ್ಯಕ್ತಪಡಿಸಿತ್ತು.

    ಮದುವೆಯಾಗಿ ಕೆಲ ತಿಂಗಳು ಬೇರೆ ಮನೆ ಮಾಡಿದ್ದ ದಂಪತಿ ವಾಸವಾಗಿದ್ದರು. ಈಗ ಪತ್ನಿ ಗರ್ಭಿಣಿಯಾದ ಹಿನ್ನೆಲೆಯಲ್ಲಿ ಹೇಮಂತ್ ಕುಮಾರ್ ತನ್ನ ಮನೆಗೆ ಪತ್ನಿಯನ್ನು ಕರೆದುಕೊಂಡು ಬಂದಿದ್ದಾರೆ. ದಿನದಿಂದ ದಿನಕ್ಕೆ ಕಿರುಕುಳ ಹೆಚ್ಚಾಗುತ್ತಿದ್ದು, ಇಂದು ನವದಂಪತಿ ಇಬ್ಬರು ಪೊಲೀಸ್ ಠಾಣೆಯ ಎದುರು ಬಾಟಲಿನಲ್ಲಿ ತಂದಿದ್ದ ಸೀಮೆಎಣ್ಣೆಯನ್ನು ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಕೂಡಲೇ ಅಲ್ಲಿದ್ದ ಪೊಲೀಸರು ಕಾರ್ಯಪ್ರವೃತ್ತರಾಗಿ ನವದಂಪತಿಯನ್ನು ರಕ್ಷಣೆ ಮಾಡಿದ್ದಾರೆ.

    ಚೈತ್ರ ಆರೋಪ ಏನು?
    ಪತಿಯ ತಂದೆ ಶ್ರೀನಿವಾಸ್, ತಾಯಿ ಮುನಿರತ್ನಮ್ಮ ಮತ್ತು ತಮ್ಮ ಕಾರ್ತಿಕ್ ಕಿರುಕುಳ ನೀಡುತ್ತಿದ್ದಾರೆ. ಕಳೆದ ಹಲವು ದಿನಗಳಿಂದ ಪೊಲೀಸರಿಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ. ನನ್ನ ಕಾಲು ಹಾಗೂ ಕೈ ಮೇಲೆ ಹಲ್ಲೆ ಮಾಡಿದ್ದಾರೆ. ಹೀಗಾಗಿ ಅತ್ತೆ, ಮಾವ ಮತ್ತು ಮೈದುನ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಚೈತ್ರ ಪೊಲೀಸರಲ್ಲಿ ಮನವಿ ಮಾಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಪ್ರೀತಿಸಿ ಮದುವೆಯಾಗಿದ್ದಕ್ಕೆ ನವ ವಿವಾಹಿತೆ ತಾಳಿ, ಕಾಲುಂಗುರ ತೆಗೆಸಿದ ಪೊಲೀಸ್ರು?

    ಪ್ರೀತಿಸಿ ಮದುವೆಯಾಗಿದ್ದಕ್ಕೆ ನವ ವಿವಾಹಿತೆ ತಾಳಿ, ಕಾಲುಂಗುರ ತೆಗೆಸಿದ ಪೊಲೀಸ್ರು?

    ಬೆಂಗಳೂರು: ತುಮಕೂರಿನಲ್ಲಿ ಪೊಲೀಸರು ನವ ವಿವಾಹಿತೆ ತಾಳಿ ಹಾಗೂ ಕಾಲುಂಗುರ ತೆಗೆಸಿದ್ದಾರೆ ಎಂದು ಆರೋಪಿಸಿ, ಈಗ ನ್ಯಾಯ ಕೋರಿ ನವ ಜೋಡಿ ಬೆಂಗಳೂರಿನ ಐಜಿಪಿ ಕಚೇರಿಗೆ ಬಂದಿದ್ದಾರೆ.

    ಒಬಲೇಶ್ ಹಾಗೂ ನೇತ್ರಾವತಿ(ಹೆಸರು ಬದಲಾಯಿಸಲಾಗಿದೆ) ಕಿರುಕುಳಕ್ಕೆ ಒಳಗಾದ ನವ ಜೋಡಿ. ಒಬಲೇಶ್ ಹಾಗೂ ನೇತ್ರಾವತಿ ಕೆಲ ವರ್ಷದಿಂದ ಒಬ್ಬರಿಗೊಬ್ಬರು ಪ್ರೀತಿಸುತ್ತಿದ್ದರು. ಆದರೆ ಇದಕ್ಕೆ ನೇತ್ರಾವತಿ ಮನೆಯವರ ವಿರೋಧವಿತ್ತು.

    ಮನೆಯವರು ನಿರಾಕರಿಸಿದ ಕಾರಣ ಈ ಇಬ್ಬರು ದೇವಸ್ಥಾನದಲ್ಲಿ ಮದುವೆಯಾಗಿದ್ದರು. ಆದರೆ ಪೋಷಕರಿಂದ ಬೆದರಿಕೆ ಇದ್ದ ಹಿನ್ನೆಲೆಯಲ್ಲಿ ನವ ದಂಪತಿಗಳು ರಕ್ಷಣೆಗಾಗಿ ಮಿಡಿಗೇಶಿ ಪೊಲೀಸ್ ಠಾಣೆಗೆ ಹೋಗಿದ್ದರು.

    ಈ ವೇಳೆ ಮಿಡಗೇಶಿ ಠಾಣೆಯ ಸಬ್ ಇನ್ಸ್ ಪೆಕ್ಟರ್ ನವ ದಂಪತಿಗೆ ಹಿಂಸೆ ನೀಡಿದ್ದಾರೆ. ನೇತ್ರಾವತಿ ತಾಳಿ, ಕಾಲುಂಗುರ ಕಿತ್ತು ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ನವದಂಪತಿ ಆರೋಪಿಸಿದ್ದಾರೆ.

    ಸದ್ಯ ನವ ದಂಪತಿ ಕೇಂದ್ರ ವಲಯ ಐಜಿಗೆ ದೂರು ನೀಡಿದ್ದಾರೆ.

  • ಮದುವೆಗೆ ಬಂದ ಅತಿಥಿಗಳಿಗೆ ಗಿಡಗಳನ್ನು ಉಡುಗೊರೆಯಾಗಿ ನೀಡಿದ ದಂಪತಿ!

    ಮದುವೆಗೆ ಬಂದ ಅತಿಥಿಗಳಿಗೆ ಗಿಡಗಳನ್ನು ಉಡುಗೊರೆಯಾಗಿ ನೀಡಿದ ದಂಪತಿ!

    ಮಂಗಳೂರು: ಮದುವೆ ಸಮಾರಂಭಗಳಲ್ಲಿ ವಿಶಿಷ್ಟ ಆಚರಣೆಗಳು ನಡೆಯುತ್ತಿರುವುದು ಇಂದು ಸಾಮಾನ್ಯವಾಗಿದ್ದು, ಮಂಗಳೂರಿನಲ್ಲಿ ನೂತನ ದಂಪತಿಗಳು ಮದುವೆಗೆ ಆಗಮಿಸಿದ ಅತಿಥಿಗಳಿಗೆ ಗಿಡಗಳನ್ನು ಉಡುಗೊರೆಯಾಗಿ ನೀಡಿ ಪರಿಸರ ಪ್ರೇಮ ಮೆರೆದಿದ್ದಾರೆ.

    ಜಿಲ್ಲೆಯ ಬಂಟ್ವಾಳ ತಾಲೂಕಿನ ಪುಣಚದಲ್ಲಿ ಇಂದು ನಡೆದ ಮದುವೆ ಎಲ್ಲರ ಗಮನ ಸೆಳೆಯಿತು. ಭಜರಂಗದಳದ ಮುಖಂಡ ಮುರಳೀಕೃಷ್ಣ ಹಸಂತಡ್ಕ ಎಂಬವರ ವಿವಾಹವು ಪುಣಚದ ಮಹಿಷಮರ್ದಿನಿ ಸಭಾಂಗಣದಲ್ಲಿ ನಡೆದಿತ್ತು. ಈ ವೇಳೆ ಮದುವೆಗೆ ಆಗಮಿಸಿದ ಅತಿಥಿಗಳಿಗೆ ದಂಪತಿ ಬೆಲೆಬಾಳುವ ರಕ್ತಚಂದನ, ಶ್ರೀಗಂಧ ಹಾಗೂ ಅನೇಕ ಮರದ ಗಿಡಗಳನ್ನು ಉಡುಗೊರೆಯಾಗಿ ನೀಡಿದ್ದಾರೆ. ಇದನ್ನೂ ಓದಿ: ಮದುವೆಯಲ್ಲೂ ಕೆಲಸದ ಪ್ರೀತಿ ಮೆರೆದ ವರ- ಜೆಸಿಬಿಯಲ್ಲೇ ದಿಬ್ಬಣ!

    ಜಿಲ್ಲೆಯಾದ್ಯಂತ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಪರಿಸರ ಉಳಿಸುವ ದೃಷ್ಠಿಯಿಂದ ದಂಪತಿಯು ಈ ಯೋಜನೆಯನ್ನು ಹಾಕಿಕೊಂಡಿದ್ದರು. ಈ ವೇಳೆ ಅತಿಥಿಗಳಿಗೆ ಗಿಡಗಳನ್ನು ಕೊಟ್ಟು ಪೋಷಿಸಲು ಪ್ರೇರೆಪಿಸಿದ್ದಾರೆ. ಇವರ ಈ ಕಾರ್ಯವು ಪರಿಸರ ರಕ್ಷಣೆಗೆ ಮಾದರಿಯಾಗಿದೆ. ಮದುವೆಗೆ ಬಂದ ಸಾವಿರಾರು ಅತಿಥಿಗಳು ಗಿಡಗಳನ್ನು ಹೊತ್ತೊಯ್ದಿದ್ದು ವಿಶೇಷವಾಗಿತ್ತು. ಇದನ್ನೂ ಓದಿ: ಮದ್ವೆಯಲ್ಲಿ ಅತಿಥಿಗಳಿಂದ ಉಡುಗೊರೆಯಾಗಿ ಪುಸ್ತಕಗಳನ್ನು ಪಡೆದ ನವ ದಂಪತಿ

  • ಆರತಕ್ಷತೆಯಲ್ಲಿ ನೀಡಿದ್ದ ಗಿಫ್ಟ್ ತೆರೆದಾಗ ಸ್ಫೋಟ- ಮದ್ವೆಯಾದ ಐದೇ ದಿನಕ್ಕೆ ವರ ಸಾವು!

    ಆರತಕ್ಷತೆಯಲ್ಲಿ ನೀಡಿದ್ದ ಗಿಫ್ಟ್ ತೆರೆದಾಗ ಸ್ಫೋಟ- ಮದ್ವೆಯಾದ ಐದೇ ದಿನಕ್ಕೆ ವರ ಸಾವು!

    ಭುವನೇಶ್ವರ್: ಮದುವೆಯಲ್ಲಿ ಬಂದ ಉಡುಗೊರೆಯನ್ನು ತೆರೆದಾಗ ಅದು ಸ್ಫೋಟವಾಗಿ ವರ ಹಾಗೂ ಆತನ ಅಜ್ಜಿ ಸಾವನ್ನಪ್ಪಿದ್ದು, ವಧುವಿಗೆ ಗಂಭೀರ ಗಾಯಗಳಾಗಿರುವ ಘಟನೆ ಒಡಿಶಾದ ಬೋಲಾಂಗೀರ್ ಜಿಲ್ಲೆಯಲ್ಲಿ ನಡೆದಿದೆ.

    5 ದಿನಗಳ ಹಿಂದೆ ಈ ಜೋಡಿಯ ಮದುವೆಯಾಗಿತ್ತು. ಬುಧವಾರದಂದು ಆರತಕ್ಷತೆಯ ಸಮಯದಲ್ಲಿ ಬಂದ ಉಡುಗೊರೆಯನ್ನು ತೆರೆದಾಗ ಸ್ಫೋಟವಾಗಿದೆ. ಆರತಕ್ಷತೆಯಲ್ಲಿ ಈ ಉಡುಗೊರೆ ಯಾರು ನೀಡಿದ್ದು ಎಂದು ನಾವು ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.

    ಉಡುಗೊರೆ ಸ್ಫೋಟವಾಗುತ್ತಿದ್ದಂತೆ ಮನೆಯಲ್ಲಿದ್ದ ವರನ ಅಜ್ಜಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ತೀವ್ರವಾಗಿ ಗಾಯಗೊಂಡಿದ್ದ ವರ ಚಿಕಿತ್ಸೆ ಫಲಿಸದೇ ರೂರ್ಕೆಲಾ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಸ್ಫೋಟದಿಂದ ವಧುವಿಗೂ ಗಂಭೀರ ಗಾಯಗಳಾಗಿದ್ದು, ಬುರ್ಲಾದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

    ಈಗಾಗಲೇ ಸಾಕ್ಷಿಗಳನ್ನ ಸಂಗ್ರಹಿಸಲಾಗಿದ್ದು, ತನಿಖೆ ಶುರು ಮಾಡಿಕೊಂಡಿದ್ದೇವೆ ಎಂದು ಪಟ್ನಾಗಢ ಉಪ-ವಿಭಾಗೀಯ ಪೊಲೀಸ್ ಅಧಿಕಾರಿ ಸೆಸ್ದೇವ ಬರಿಹಾ ತಿಳಿಸಿದ್ದಾರೆ. ವರನ ಅಜ್ಜಿಯನ್ನು ಆಸ್ಪತ್ರೆಗೆ ಕರೆತರುವಾಗಲೇ ಅವರು ಸಾವನ್ನಪ್ಪಿದ್ದರು ಹಾಗೂ ಉಡುಗೊರೆ ಸ್ಫೋಟಗೊಂಡಾಗ ಗಾಯಗೊಂಡಿದ್ದ ವರ ಕೂಡ ರೂರ್ಕೆಲಾದ ಇಸ್ಪಟ್ ಜನರಲ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ ಎಂದು ಬೋಲಾಂಗೀರ್ ನ ಮುಖ್ಯ ಜಿಲ್ಲಾ ವೈದ್ಯಕೀಯ ಅಧಿಕಾರಿ ಎಸ್. ಮಿಶ್ರಾ ತಿಳಿಸಿದ್ದಾರೆ.

  • ವಿವಾಹವಾದ ಪ್ರೇಮ ಪಕ್ಷಿಗಳಿಗೆ ಜೀವ ಭಯ – ರಕ್ಷಣೆ ಕೋರಿ ಎಸ್ಪಿ ಮೊರೆ ಹೋದ ನವ ಜೋಡಿ

    ವಿವಾಹವಾದ ಪ್ರೇಮ ಪಕ್ಷಿಗಳಿಗೆ ಜೀವ ಭಯ – ರಕ್ಷಣೆ ಕೋರಿ ಎಸ್ಪಿ ಮೊರೆ ಹೋದ ನವ ಜೋಡಿ

    ತುಮಕೂರು: ಈ ಯುವ ಜೋಡಿಗಳದ್ದು ಧರ್ಮ ಮೀರಿದ್ದ ಪ್ರೀತಿ. ಇವರಿಬ್ಬರ ಅನುರಾಗಕ್ಕೆ ಹಿಂದೂ-ಮುಸ್ಲಿಂ ಎಂಬ ಧರ್ಮದ ಬೇಧ ಬಂದಿಲ್ಲ. ಅದನ್ನೂ ಮೀರಿ ಮದುವೆಯಾಗಿದ್ದಾರೆ. ಆದರೆ ಈ ಯುವ ಜೋಡಿಗೆ ಈಗ ಜೀವ ಭಯವಿದೆಯಂತೆ. ಹಾಗಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೊರೆ ಹೋಗಿದ್ದಾರೆ.

    ಪ್ರೀತಿ ಜಾತಿ ಧರ್ಮ, ಮತ-ಪಂಥವನ್ನೂ ಮೀರಿದ್ದು ಎನ್ನುವುದು ಸಾರ್ವಕಾಲಿಕ ಮಾತು. ಇದೇ ರೀತಿ ತುಮಕೂರು ಜಿಲ್ಲೆ ತುರುವೇಕೆರೆ ತಾಲೂಕಿನ ಬಾಣಸಂದ್ರದ ಶಿವಶಂಕರ್ ಹಾಗೂ ಮುಸ್ಲಿಂ ಯುವತಿ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದಾರೆ. ಅಕ್ಕಪಕ್ಕದ ಮನೆಯವರಾದ ಈ ಯುವ ಜೋಡಿ ಕಳೆದ ಒಂದೂವರೆ ವರ್ಷದಿಂದ ಪ್ರೀತಿಸುತ್ತಿದ್ದರು.

    ಕಳೆದ ಸೋಮವಾರ ಹಿಂದೂ ಸಂಪ್ರದಾಯದಂತೆ ದೇವಸ್ಥಾನವೊಂದರಲ್ಲಿ ಮದುವೆಯಾಗಿದ್ದಾರೆ. ಮದುವೆಯಾದ ವಿಚಾರ ತಿಳಿಯುತ್ತಿದ್ದಂತೆಯೇ ಯುವತಿಯ ಸಂಬಂಧಿಕರು ಬೆದರಿಕೆ ಹಾಕಿದ್ದಾರೆ. ಇದರಿಂದ ಭಯಭೀತರಾದ ಶಿವಶಂಕರ್ ಹಾಗೂ ಯುವತಿ ರಕ್ಷಣೆ ಕೋರಿ ಎಸ್ ಪಿ ಮೊರೆ ಹೋಗಿದ್ದಾರೆ.

    ಇನ್ನೂ ಶಿವಶಂಕರ್ ಸಾರಿಗೆ ಇಲಾಖೆಯ ಡಿಪೋದಲ್ಲಿ ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿದ್ದು, ಯುವತಿ ಮಾಲ್  ವೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಇಬ್ಬರ ಮದುವೆಗೆ ಶಿವಶಂಕರ್ ತಂದೆ-ತಾಯಿ ಒಪ್ಪಿಕೊಂಡು ಅನ್ಯಧರ್ಮಿಯ ಸೊಸೆಯನ್ನು ಮನೆತುಂಬಿಸಿಕೊಂಡಿದ್ದಾರೆ.

    ಆದರೆ ಯುವತಿ ತಂದೆ- ತಾಯಿ ಈ ಪ್ರೇಮವಿವಾಹಕ್ಕೆ ಆಕ್ಷೇಪ ವ್ಯಕ್ತಪಡಿಸಿ ವಿಲನ್ ಆಗಿದ್ದಾರೆ. ಹಾಗಾಗಿ ದಿಕ್ಕು ತೋಚದ ನವ ಜೋಡಿ ರಕ್ಷಣೆಗಾಗಿ ಪೊಲೀಸ್ ಇಲಾಖೆ ಮೊರೆ ಹೋಗಿದೆ. ಶಿವಶಂಕರ್ ಮತ್ತು ಯುವತಿಯ ಧರ್ಮ ಬೇಧ ಮೀರಿ ಮದುವೆಯಾಗಿದ್ದಾರೆ. ಭಯದಲ್ಲಿ ಬದುಕುತ್ತಿರೋ ಈ ದಂಪತಿಗೆ ಪೊಲೀಸರು ರಕ್ಷಣೆ ನೀಡಬೇಕಿದೆ.

  • ಪ್ರೀತಿಸಿ ಮದ್ವೆಯಾಗಿ, ಏಳೇ ತಿಂಗಳಿಗೆ ನವದಂಪತಿ ಆತ್ಮಹತ್ಯೆ-ಡೆತ್ ನೋಟ್ ನಲ್ಲಿ ಮನಕಲಕುವ ಮಾತು

    ಪ್ರೀತಿಸಿ ಮದ್ವೆಯಾಗಿ, ಏಳೇ ತಿಂಗಳಿಗೆ ನವದಂಪತಿ ಆತ್ಮಹತ್ಯೆ-ಡೆತ್ ನೋಟ್ ನಲ್ಲಿ ಮನಕಲಕುವ ಮಾತು

    ಮುಂಬೈ: ಏಳು ತಿಂಗಳ ಹಿಂದೆ ಮದುವೆಯಾಗಿ ಹೊಸ ಜೀವನಕ್ಕೆ ಕಾಲಿಟ್ಟ ನವದಂಪತಿ, ಜೊತೆಯಾಗಿ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಹಾರಾಷ್ಟ್ರದ ಧೂಲೆ ಜಿಲ್ಲೆಯ ಥಾಡಣೆ ಗ್ರಾಮದಲ್ಲಿ ನಡೆದಿದೆ.

    ಆತ್ಮಹತ್ಯೆ ಮಾಡಿಕೊಂಡಿರುವ ನವದಂಪತಿಗಳನ್ನು ಸಚಿನ್ ಬಾಗುಲ್, ದಿಪಾಲಿ ಚವ್ಹಾನ್ ಎಂದು ಗುರುತಿಸಲಾಗಿದೆ.

    ಮೃತರಿಬ್ಬರು ಒಂದೇ ಗ್ರಾಮಕ್ಕೆ ಸೇರಿದವರಾಗಿದ್ದು, ಇಬ್ಬರು ಪರಸ್ಪರ ಪ್ರೀತಿಸಿ ಮದುವೆಯಾಗಲು ನಿರ್ಧರಿಸಿದ್ದರು. ಆದರೆ ಸಚಿನ್ ಹಾಗೂ ದಿಪಾಲಿ ಇಬ್ಬರು ಬೇರೆ ಬೇರೆ ಜಾತಿಗೆ ಸೇರಿದ ಕಾರಣದಿಂದ ಇಬ್ಬರ ಮದುವೆಗೆ ಕುಟುಂಬ ಸದಸ್ಯರಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ಅದರೂ ಕಳೆದ ಮೇ 4 ರಂದು ಸ್ನೇಹಿತರ ಸಹಾಯದಿಂದ ಯಾರಿಗೂ ತಿಳಿಯದಂತೆ ವಿವಾಹವಾಗಿದ್ದರು.

    ಮದುವೆಯಾದ ಬಳಿಕ ಇಬ್ಬರೂ ತಮ್ಮ ಮನೆಯಲ್ಲಿ ಯಾವುದೇ ವಿಷಯವನ್ನು ತಿಳಿಸದೇ, ಇಬ್ಬರೂ ಬೇರೆ ಬೇರೆಯಾಗಿ ವಾಸಿಸುತ್ತಿದ್ದರು. ಆದರೂ ಪೋಷಕರಿಗೆ ಮೂರನೇ ವ್ಯಕ್ತಿಯಿಂದಾಗಿ ಮಕ್ಕಳ ಮದುವೆ ವಿಷಯ ಗೊತ್ತಾಗಿತ್ತು. ವಿವಾಹದ ನಂತರ ಕುಟುಂಬ ಸದಸ್ಯರಿಗೆ ಮಾಹಿತಿ ತಿಳಿದು ಮದುವೆಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಇಬ್ಬರಿಗೂ ಜೀವ ಬೆದರಿಕೆ ಹಾಕಿದ್ದರು ಎನ್ನಲಾಗಿದೆ. ಈ ಕುರಿತು ಪತ್ರ ಬರೆದಿರುವ ನವದಂಪತಿ, ಇಬ್ಬರನ್ನು ಒಂದಾಗಿ ಜೀವನ ನಡೆಸಲು ನಮ್ಮ ಕುಟುಂಬಗಳು ಬಿಡುತ್ತಿಲ್ಲ. ಬೇರೆ ಮಾಡಲು ಪ್ರಯತ್ನಿಸಿ ಒತ್ತಡ ಹಾಕುತ್ತಿದ್ದಾರೆ. ಕುಟುಂಬ ಸದ್ಯಸರ ಒತ್ತಡವನ್ನು ತಡೆಯಲು ಸಾಧ್ಯವಾಗದೇ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ತಿಳಿಸಿ, ಕೊನೆಗೆ ಪೋಷಕರಿಗೆ ನೀವಾದರೂ ಚೆನ್ನಾಗಿರಿ ಎಂದು ಮನಕಲಕುವ ಸಾಲುಗಳನ್ನು ಬರೆದಿದ್ದಾರೆ.

    ಕಳೆದ ಎರಡು ದಿನಗಳ ಹಿಂದೆ ತಾವು ವಾಸಿಸುತ್ತಿರುವ ಗ್ರಾಮ ಹೊರವಲಯದಲ್ಲಿರುವ ಮರಕ್ಕೆ ನವದಂಪತಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಬ್ಬರ ಮೃತ ದೇಹಗಳನ್ನು ಕಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನವದಂಪತಿಗಳು ಆತ್ಮಹತ್ಯೆ ಮಾಡಿಕೊಂಡಿರುವ ಮಾಹಿತಿ ಪಡೆದ ಪೊಲೀಸರು ಘಟನಾ ಸ್ಥಳಕ್ಕೆ ಧವಿಸಿ ಪರಿಶೀಲನೆ ನಡೆಸಿದ್ದಾರೆ.