Tag: ನವಜೋಡಿ

  • ಮನೆಗೆ ಕರೆಸಿ ನವಜೋಡಿಯನ್ನು ಹತ್ಯೆ ಮಾಡಿದ ನವವಧು ಪೋಷಕರು

    ಮನೆಗೆ ಕರೆಸಿ ನವಜೋಡಿಯನ್ನು ಹತ್ಯೆ ಮಾಡಿದ ನವವಧು ಪೋಷಕರು

    ಚೆನ್ನೈ: ಹೊಸದಾಗಿ ಜೀವನ ನಡೆಸಬೇಕಾಗಿದ್ದ ನವಜೋಡಿಯನ್ನು ನವವಧು ಸಹೋದರ ಮತ್ತು ಪೋಷಕರು ಕೊಲೆ ಮಾಡಿರುವ ಘಟನೆ ತಮಿಳುನಾಡಿನ ಕುಂಭಕೋಣಂನಲ್ಲಿ ನಡೆದಿದೆ.

    ಬೇರೆ ಜಾತಿ ಯುವಕನನ್ನು ಪ್ರೀತಿಸಿ ಓಡಿ ಹೋಗಿ ಯುವತಿ ಮದುವೆಯಾಗಿದ್ದಳು. ಈ ಹಿನ್ನೆಲೆ ಮದುವೆ ಒಪ್ಪದ ನವವಧು ಪೋಷಕರು ನವವಿವಾಹಿತರನ್ನು ಮನೆಗೆ ಕರೆಸಿ ಹತ್ಯೆ ಮಾಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನವವಧುವಿನ ಸಹೋದರ ಮತ್ತು ಪೋಷಕರನ್ನು ಪೊಲೀಸರು ಬಂಧಿಸಿದರು. ಇದನ್ನೂ ಓದಿ: ಮೊದಲಬಾರಿಗೆ ಟ್ವಿಟ್ಟರ್ ಉದ್ಯೋಗಿಗಳ ಜೊತೆ ಮಾತನಾಡಲಿದ್ದಾರೆ ಮಸ್ಕ್

    ನಡೆದಿದ್ದೇನು?
    ಈ ಕುರಿತು ಪೊಲೀಸರು ಮಾತನಾಡಿದ್ದು, ಮೃತ ನವವಧು ತನ್ನ ಸಂಬಂಧಿಕನ ಜೊತೆ ಸಂಬಂಧ ಹೊಂದಿದ್ದಳು. ಆದರೆ ಕೊನೆಗೆ ಬೇರೆ ಯುವಕನನ್ನು ಮದುವೆಯಾಗಿದ್ದಾಳೆ. ಈ ಹಿನ್ನೆಲೆ ನವವಧು ಮನೆಯವರು ಅವರ ಮೇಲೆ ಸೇಡು ತೀರಿಸಿಕೊಳ್ಳಲು ಮುಂದಾಗಿದ್ದಾರೆ. ಅದಕ್ಕೆ ವಧು ಸಹೋದರ ಎಲ್ಲವನ್ನು ಮರೆತಿರುವಂತೆ ನಟಿಸಿ ನವಜೋಡಿಯನ್ನು ಮನೆಗೆ ಆಹ್ವಾನಿಸಿದ್ದಾರೆ. ಅವರನ್ನು ನಂಬಿ ನವಜೋಡಿ ಮನೆಗೆ ಹೋಗಿದ್ದಾರೆ. ಸಮಯ ನೋಡಿಕೊಂಡು ಇಬ್ಬರನ್ನು ಸಹೋದರ ಮತ್ತು ಪೋಷಕರು ಸೇರಿ ಹತ್ಯೆ ಮಾಡಿದ್ದಾರೆ ಎಂದು ವಿವರಿಸಿದರು.

    CRIME 2

    ಪೊಲೀಸರ ಪ್ರಾಥಮಿಕ ತನಿಖೆ ಹಿನ್ನೆಲೆ, ನವವಧು ಪರಿಶಿಷ್ಟ ಜಾತಿಗೆ ಸೇರಿದವಳು. ಅವಳ ಪತಿ ಅತ್ಯಂತ ಹಿಂದುಳಿದ ಜಾತಿಗೆ ಸೇರಿದವನು. ಆದರೆ ಇದು ಮರ್ಯಾದೆ ಹತ್ಯೆಯ ಪ್ರಕರಣವಲ್ಲ ಎಂದು ತನಿಖಾಧಿಕಾರಿಗಳು ಹೇಳುತ್ತಿದ್ದಾರೆ. ಇದನ್ನೂ ಓದಿ: ಅಮರನಾಥ ಯಾತ್ರೆ ಮೇಲೆ ದಾಳಿಗೆ ಯೋಜಿಸಿದ್ದ ಮೂವರು ಉಗ್ರರ ಹತ್ಯೆ 

  • ವಿವಾಹ ಮುಗಿಸಿ ವಾಪಸ್ಸಾಗುತ್ತಿದ್ದ ನವಜೋಡಿಗಳಿದ್ದ ವಾಹನ ಪಲ್ಟಿ!

    ವಿವಾಹ ಮುಗಿಸಿ ವಾಪಸ್ಸಾಗುತ್ತಿದ್ದ ನವಜೋಡಿಗಳಿದ್ದ ವಾಹನ ಪಲ್ಟಿ!

    ಚಿಕ್ಕಮಗಳೂರು: ಮದುವೆ ಮುಗಿಸಿಕೊಂಡು ಊರಿಗೆ ಹಿಂದಿರುಗುವಾಗ ಚಾಲಕನ ನಿಯಂತ್ರಣ ತಪ್ಪಿ ಟಿಟಿ ವಾಹನವೊಂದು ಕಂದಕಕ್ಕೆ ಉರುಳಿರುವ ಘಟನೆ ಜಿಲ್ಲೆಯ ಕೊಟ್ಟಿಗೆಹಾರ ಸಮೀಪದ ಚಾರ್ಮಾಡಿ ಘಾಟ್ ಬಳಿ ನಡೆದಿದೆ.

    ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳದಲ್ಲಿ ಚಿಕ್ಕಮಗಳೂರು ಜಿಲ್ಲೆಯ ವಧು-ವರರ ಮದುವೆ ಕಾರ್ಯಕ್ರಮವಿತ್ತು. ಮದುವೆ ಮುಗಿಸಿಕೊಂಡು ಚಿಕ್ಕಮಗಳೂರಿಗೆ ಹಿಂದಿರುಗುವಾಗ ಚಾರ್ಮಾಡಿ ಘಾಟಿಯ ನಾಲ್ಕನೇ ತಿರುವಿನಲ್ಲಿ ಟಿಟಿ ವಾಹನ ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿದೆ. ಅದೃಷ್ಟವಶಾತ್ ಗಾಡಿಯಲ್ಲಿದ್ದ ಯಾರಿಗೂ ಯಾವುದೇ ತೊಂದರೆಯಾಗಿಲ್ಲ. ಇದನ್ನೂ ಓದಿ: ಸಿಎಂ ಬದಲಾವಣೆ ಮಾತು ಕಪೋಲ ಕಲ್ಪಿತವಾದದ್ದು: ಬಿ.ವೈ ವಿಜಯೇಂದ್ರ

    ಬೆಳಗ್ಗೆಯಷ್ಟೆ ನವಜೀವನಕ್ಕೆ ಕಾಲಿಟ್ಟಿದ್ದ ಜೋಡಿ ಅಪಾಯದಿಂದ ಪಾರಾಗಿದೆ. ಗಾಡಿಯಲ್ಲಿ ಸುಮಾರು 10-12 ಜನರಿದ್ದರು. ಯಾರಿಗೂ ದೊಡ್ಡ ಅನಾಹುತವಾಗಿಲ್ಲ. ಕೆಲವರಿಗೆ ಸಣ್ಣ-ಪುಟ್ಟ ಗಾಯಗಳಾಗಿವೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದನ್ನೂ ಓದಿ: ಗೃಹಿಣಿ, ಮಗುವಿನ ತಾಯಿಯಾಗಬಯಸಿದ್ದಾರಂತೆ ಕಂಗನಾ- ಬಾಳ ಸಂಗಾತಿ ಬಗ್ಗೆ ನಟಿ ಸುಳಿವು!

    ಈ ಭಾಗದಲ್ಲಿ ಆಗಾಗ್ಗೆ ಅಪಘಾತಗಳು ಸಂಭವಿಸುತ್ತಿವೆ. ನುರಿತ ಚಾಲಕರು ವಾಹನ ಚಾಲನೆ ಮಾಡಬೇಕು. ಈ ಭಾಗದಲ್ಲಿ ಎಚ್ಚರಿಕೆಯಿಂದ ವಾಹನಗಳನ್ನು ಚಲಾಯಿಸಬೇಕು ಎಂದು ಸ್ಥಳೀಯರು ವಾಹನ ಸವಾರರಿಗೆ ಎಚ್ಚರಿಕೆ ನೀಡಿದ್ದಾರೆ.

  • ತಲಕಾಡಿನಲ್ಲಿ ಪ್ರಿ ವೆಡ್ಡಿಂಗ್ ಫೋಟೋಶೂಟ್ – ತೆಪ್ಪ ಮುಳುಗಿ ನವಜೋಡಿ ಸಾವು

    ತಲಕಾಡಿನಲ್ಲಿ ಪ್ರಿ ವೆಡ್ಡಿಂಗ್ ಫೋಟೋಶೂಟ್ – ತೆಪ್ಪ ಮುಳುಗಿ ನವಜೋಡಿ ಸಾವು

    ಮೈಸೂರು: ಪ್ರಿ ವೆಡ್ಡಿಂಗ್ ಫೋಟೋಶೂಟ್ ಮಾಡಿಸಲು ಹೋದ ನವಜೋಡಿ ತೆಪ್ಪ ಮುಳಗಿ ಸಾವನ್ನಪ್ಪಿರುವ ಘಟನೆ ಮೈಸೂರಿನ ತಲಕಾಡಿನಲ್ಲಿ ನಡೆದಿದೆ.

    ಇತ್ತೀಚೆಗೆ ಮದುವೆಗೂ ಮುಂಚೆ ವಧು ಮತ್ತು ವರ ಸ್ಟೈಲಿಶ್ ಆಗಿ ಪ್ರಿ ವೆಡ್ಡಿಂಗ್ ಫೋಟೋ ಶೂಟ್ ಮಾಡಿಸುವ ಹೊಸ ಟ್ರೆಂಡ್ ಹುಟ್ಟಿಕೊಂಡಿದೆ. ಫೋಟೋ ವಿಭಿನ್ನವಾಗಿ ಮತ್ತು ಚೆನ್ನಾಗಿ ಬರಬೇಕು ಎಂದು ಹುಚ್ಚು ಸಾಹಸಕ್ಕೆ ಕೈಹಾಕಿ ಜೋಡಿಗಳು ಫೋಟೋ ಶೂಟ್ ಮಾಡಿಸುತ್ತಾರೆ. ಹೀಗೆ ಫೋಟೋ ಶೂಟ್ ಮಾಡಿಸಲು ಹೋಗಿ ನವಜೋಡಿಗಳು ತಮ್ಮ ಪ್ರಾಣವನ್ನೇ ಕಳೆದುಕೊಂಡಿದ್ದಾರೆ.

    ಮೈಸೂರಿನ ಕ್ಯಾತಮಾರನಹಳ್ಳಿ ನಿವಾಸಿಗಳಾಗಿದ್ದ ಚಂದ್ರು ಮತ್ತು ಶಶಿಕಲಾ ಮದುವೆ ನಿಶ್ಚಯವಾಗಿತ್ತು. ಅಂತೆಯೇ ನವೆಂಬರ್ 22ರಂದು ಮದುವೆ ಮಾಡಲು ಕುಟುಂಬಸ್ಥರು ತಯಾರಿ ಕೂಡ ನಡೆಸಿದ್ದರು. ಆದರೆ ಚಂದ್ರು ಮತ್ತು ಶಶಿಕಲಾ ಪ್ರಿ ವೆಡ್ಡಿಂಗ್ ಫೋಟೋಶೂಟ್ ಮಾಡಿಸಲು ಮನೆಯವರಿಗೆ ಹೇಳದೇ ಮೈಸೂರಿನ ತಲಕಾಡಿನ ಮುಡುಕುತೊರೆ ಗ್ರಾಮದಲ್ಲಿ ಹರಿಯುವ ಕಾವೇರಿ ನದಿಗೆ ಹೋಗಿದ್ದಾರೆ.

    ಮುಡುಕುತೊರೆಯ ಕಾವೇರಿ ನದಿಯಲ್ಲಿ ತೆಪ್ಪವನ್ನು ತೆಗೆದುಕೊಂಡು ಮಧ್ಯಭಾಗದಲ್ಲಿ ಫೋಟೋಶೂಟ್ ಮಾಡಿಸಲು ತೆರೆಳಿದ್ದಾರೆ. ಈ ವೇಳೆ ತೆಪ್ಪ ಮುಳುಗಿ ನವಜೋಡಿಗಳಿಬ್ಬರು ನೀರುಪಾಲಾಗಿದ್ದಾರೆ. ನಂತರ ಸ್ಥಳಕ್ಕೆ ಬಂದ ಪೊಲೀಸರು ಕಾರ್ಯಾಚರಣೆ ಮಾಡಿ ಇಬ್ಬರ ಶವಗಳನ್ನು ಹೊರಕ್ಕೆ ತೆಗೆದಿದ್ದಾರೆ. ಈ ಸಂಬಂಧ ತಲಕಾಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಚಾರ್ಮಾಡಿ ಘಾಟ್ ರಸ್ತೆ ತಿರುವಿನಲ್ಲಿ ನವಜೋಡಿಯ ಫೋಟೋಶೂಟ್

    ಚಾರ್ಮಾಡಿ ಘಾಟ್ ರಸ್ತೆ ತಿರುವಿನಲ್ಲಿ ನವಜೋಡಿಯ ಫೋಟೋಶೂಟ್

    – ಆಕ್ರೋಶ ವ್ಯಕ್ತಪಡಿಸಿದ ಸಾರ್ವಜನಿಕರು

    ಚಿಕ್ಕಮಗಳೂರು: ಮಂಗಳೂರು-ಚಿಕ್ಕಮಗಳೂರು ಸಂಪರ್ಕಿಸುವ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟ್ ನಲ್ಲಿ ಈಗಾಗಲೇ ಸೆಲ್ಫಿಗೆ ನಿಷೇಧ ಹೇರಲಾಗಿದೆ. ಆದರೆ ಇದೀಗ ನವಜೋಡಿಯೊಂದು ರಸ್ತೆ ತಿರುವಿನಲ್ಲಿ ಫೋಟೋಶೂಟ್ ಮಾಡಿಸಿಕೊಳ್ಳುವ ಮೂಲಕ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.

    ಹೌದು. ಹಾಸನ ಮೂಲದ ನವ ಜೋಡಿ ರಾಷ್ಟ್ರೀಯ ಹೆದ್ದಾರಿ, ಅರಣ್ಯ ಪ್ರದೇಶದ ಆಸು-ಪಾಸಿನಲ್ಲಿ ನಾನಾ ಭಂಗಿಯ ಫೋಟೋಗಳನ್ನು ತೆಗೆಯಲಾಗಿದೆ. ನಡುರಸ್ತೆಯಲ್ಲೇ ನವ ಜೋಡಿ ಪ್ರೀ ವೆಡ್ಡಿಂಗ್ ಫೋಟೋ ಶೂಟ್ ಮಾಡಿಸಿಕೊಂಡಿದೆ. ಆದರೆ ಚಾರ್ಮಾಡಿ ಘಾಟ್ ನಲ್ಲಿ ಸೆಲ್ಫಿಗೆ ನಿಷೇಧವಿದ್ದರೂ ಫೋಟೋ ಶೂಟ್ ಮಾಡಿರುವ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಒಟ್ಟಿನಲ್ಲಿ ಅಪಾಯದ ಸ್ಥಳ, ರಸ್ತೆಯ ತಿರುವಿನಲ್ಲಿ ನವ ಜೋಡಿಯ ಫೋಟೋ ಶೂಟ್‍ಗೆ ಭಾರೀ ವಿರೋಧ ವ್ಯಕ್ತವಾಗಿದೆ.

  • ಮದ್ವೆಯಂದೇ ಕೋವಿಡ್ ಆಸ್ಪತ್ರೆಗೆ 50 ಬೆಡ್, ಆಕ್ಸಿಜನ್ ಸಿಲಿಂಡರ್ ನೀಡಿದ ಜೋಡಿ

    ಮದ್ವೆಯಂದೇ ಕೋವಿಡ್ ಆಸ್ಪತ್ರೆಗೆ 50 ಬೆಡ್, ಆಕ್ಸಿಜನ್ ಸಿಲಿಂಡರ್ ನೀಡಿದ ಜೋಡಿ

    ಮುಂಬೈ: ಕೊರೊನಾ ವೈರಸ್ ಮಹಾಮಾರಿಗೆ ಬಲಿಯಾಗುವವರ ಹಾಗೂ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ನವಜೋಡಿಯೊಂದು ಸತ್ಪಾಲಾ ಗ್ರಾಮದಲ್ಲಿರುವ ಕೋವಿಡ್ ಆಸ್ಪತ್ರೆಗೆ 50 ಬೆಡ್ ಹಾಗೂ ಆಕ್ಸಿಜನ್ ಸಿಲಿಂಡರ್ ನೀಡಿ ಮಾನವೀಯತೆ ಮೆರೆಯುವ ಮೂಲಕ ಸುದ್ದಿಯಾಗಿದ್ದಾರೆ.

    ಈ ಘಟನೆ ಮಹಾರಾಷ್ಟ್ರದ ವಾಸೈನಲ್ಲಿರುವ ನಂದಕುಲ ಗ್ರಾಮದಲ್ಲಿ ನಡೆದಿದೆ. ಎರಿಕ್ ಆ್ಯಂಟನ್ ಲೊಬೊ(28) ಹಾಗೂ ಮೆರ್ಲಿಣ್(27) ಎಂಬ ಜೋಡಿ ಈ ರೀತಿ ಸಹಾಯ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

    ಕ್ರಿಶ್ಚಿಯನ್ ಸಮುದಾಯಕ್ಕೆ ಸೇರಿದ ಇವರ ಮದುವೆಗೆ ಸಾಮಾನ್ಯವಾಗಿ ಸುಮಾರು 2 ಸಾವಿರ ಮಂದಿ ಸೇರುವವರಿದ್ದರು. ಅಲ್ಲದೆ ವೈನ್ ಹಾಗೂ ಒಳ್ಳೆಯ ಊಟ ಇಲ್ಲವೆಂದರೆ ಇವರ ಮದುವೆ ಅಪೂರ್ಣವೆಂದೇ ಅರ್ಥ. ಇದಕ್ಕಾಗಿ ಸಾಕಷ್ಟು ಹಣ ಖರ್ಚಾಗುತ್ತದೆ. ಹೀಗಾಗಿ ಈ ಹಣವನ್ನು ಬೇರೆ ರೀತಿಯಲ್ಲಿ ಬಳಕೆ ಮಾಡಲು ತೀರ್ಮಾನಿದೆವು ಎಂದು ಲೊಬೊ ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ.

    ಕೊರೊನಾ ವೈರಸ್ ಹಿನ್ನೆಲೆಯಿಂದಾಗಿ ಮದುವೆಗೆ ಕೇವಲ 22 ಮಂದಿಯಷ್ಟೇ ಭಾಗಿಯಾಗಿದ್ದು ಎಲ್ಲರೂ ಮಾಸ್ಕ್ ಧರಿಸಿದ್ದರು. ಅಲ್ಲದೆ ಸಾಮಾಜಿಕ ಅಂತರ ಕೂಡ ಕಾಯ್ದುಕೊಳ್ಳಲಾಗಿತ್ತು. ಪಲ್ಘಾರ್ ಜಿಲ್ಲೆಯಲ್ಲಿ ಸರಿಸುಮಾರು 90 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ. ಸುಮಾರು 1, 500ಕ್ಕಿಂತಲೂ ಹೆಚ್ಚು ಮಂದಿಗೆ ಕೊರೊನಾ ಪಾಸಿಟಿವ್ ಎಂದು ವರದಿ ಬಂದಿದೆ. ಹೀಗಾಗಿ ನಾವು ಕೋವಿಡ್ ಆಸ್ಪತ್ರೆಗೆ ಬೆಡ್ ಹಾಗೂ ಆಕ್ಸಿಜನ್ ಸಿಲಿಂಡರ್ ನೀಡುವ ನಿರ್ಧಾರಕ್ಕೆ ಬಂದೆವು ಎಂದು ವಿವರಿಸಿದ್ದಾರೆ.

    ಲೊಬೊ ಮತ್ತು ಮರ್ಲಿನ್ ಕಳೆದ ಮಾರ್ಚ್ ತಿಂಗಳಿನಲ್ಲಿ ಈ ಬಗ್ಗೆ ಶಾಸಕ ಕ್ಷಿತಿಜಿ ಠಾಕೂರ್ ಬಳಿ ಈ ಬಗ್ಗೆ ಪ್ರಸ್ತಾಪ ಮಾಡಿದ್ದರು. ಈ ವೇಳೆ ಶಾಸಕರು, ಜಿಲ್ಲಾಧಿಕಾರಿ ಡಾ. ಕೈಲಾಸ್ ಶಿಂಧೆ ಅವರ ಗಮನಕ್ಕೆ ತಂದರು. ಜೋಡಿಯ ಐಡಿಯಾಕ್ಕೆ ಜಿಲ್ಲಾಧಿಕಾರಿ ಕೂಡ ಸಾಥ್ ನೀಡಿದ್ದು, ವಿಶೇಷ ಯೋಜನೆಗೆ ಜಿಲ್ಲಾಧಿಕಾರಿ ಗ್ರೀನ್ ಸಿಗ್ನಲ್ ನೀಡಿದರು.

    ಆ ನಂತರ ಜೋಡಿ ವಾಸೈನಲ್ಲಿರುವ ಆಸ್ಪತ್ರೆಯ ಬೆಡ್ ತಯಾರು ಮಾಡುವವರ ಬಳಿ ಹೋಗಿ ವಿವರಿಸಿದ್ದಾರೆ. ಅಲ್ಲದೆ ಉತ್ತಮವಾದ ಹಾಸಿಗೆ, ಹೊದಿಕೆ, ತಲೆದಿಂಬು, ಬೆಡ್‍ಶೀಟ್ ಹಾಗೂ ಇತರ ಅಗತ್ಯ ವಸ್ತುಗಳ ತಯಾರು ಮಾಡಿಕೊಡುವಂತೆ ಕೇಳಿಕೊಂಡಿದ್ದಾರೆ. ಜೊತೆಗೆ ಕೋವಿಡ್ 19 ರೋಗಿಗಳಿಗೆ ಚಿಕಿತ್ಸೆ ನೀಡಲು ಆರೋಗ್ಯ ಇಲಾಖೆಗೆ ಅಗತ್ಯವಾಗಿ ಬೇಕಾಗುವ ಆಕ್ಸಿಜನ್ ಸಿಲಿಂಡರ್ ಕೂಡ ನೀಡಲು ತೀರ್ಮಾನಿಸದೆವು ಎಂದು ಲೊಬೊ ಹೇಳಿದ್ದಾರೆ.

    ಸಮಾಜಕ್ಕೆ ಜೋಡಿ ನೀಡಿದ ಕೊಡುಗೆಗೆ ಶಾಸಕರು ಧನ್ಯವಾದ ಅರ್ಪಿಸಿದ್ದಾರೆ. ಸದ್ಯ ಜೋಡಿ ವಲಸೆ ಕಾರ್ಮಿಕರು ಸೇರಿದಂತೆ ಸಾಕಷ್ಟು ಮಂದಿಗೆ ಸಹಾಯ ಮಾಡುತ್ತಿದೆ.

  • ಮಾಸ್ಕ್ ಧರಿಸಿ ಮದುವೆ ಮಾಡಿಕೊಂಡ ವಧು-ವರ

    ಮಾಸ್ಕ್ ಧರಿಸಿ ಮದುವೆ ಮಾಡಿಕೊಂಡ ವಧು-ವರ

    ಹುಬ್ಬಳ್ಳಿ: ಲಾಕ್‍ಡೌನ್ ವೇಳೆ ಹುಬ್ಬಳ್ಳಿಯ ಹುಡುಗ ಸಿಂಧನೂರಿನ ಯುವತಿಯನ್ನು ಕೈ ಹಿಡಿಯುವ ಮೂಲಕ ಸಾಮಾಜಿಕ ಅಂತರ ಕಾಯ್ದುಕೊಂಡು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

    ಹೌದು ಲಾಕ್‍ಡೌನ್ ಸಂದರ್ಭದಲ್ಲಿ ಮದುವೆಗಳಿಗೆ ಷರತ್ತುಬದ್ಧ ಅನುಮತಿ ನೀಡಿ, ಕೆಲ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಲಾಗಿದೆ. ಆದರೂ ಕೂಡ ಸಾಮಾಜಿಕ ಅಂತರ ಕಾಯ್ದುಕೊಂಡು ಮಾಸ್ಕ್ ಧರಿಸಿಕೊಂಡೆ ಸಿಂಧನೂರಿನ ವಧುವನ್ನು ಹುಬ್ಬಳ್ಳಿಯ ಹುಡುಗ ಮದುವೆಯಾಗಿದ್ದಾರೆ.

    ಸಿಂಧನೂರಿನಲ್ಲಿ ಸಚೇತಿಯವರ ಮನೆಯಲ್ಲಿ ಸರಳವಾಗಿ ಮದುವೆಯ ಸಮಾರಂಭ ಜರುಗಿದ್ದು, ವಧು ಪೂನಂ ಸಚೇತಿ, ವರ ಹಸ್ಮುಖ ಜೈನ್ ಮಾಸ್ಕ್ ಧರಿಸಿಕೊಂಡು ಸಾಮಾಜಿಕ ಅಂತರ ಕಾಯ್ದುಕೊಂಡು ಮದುವೆಯಾಗುವ ಮೂಲಕ ಹೊಸ ಜೀವನ ಆರಂಭಿಸಿದ್ದಾರೆ.

    ಬಿಇ ಸಿವಿಲ್ ಓದಿರುವ ಹಸ್ಮುಖ ಜೈನ್ ಹುಬ್ಬಳ್ಳಿಯಲ್ಲಿ ಒಂದು ಖಾಸಗಿ ಕಂಪನಿ ನಡೆಸುತ್ತಿದ್ದು, ಜಿಲ್ಲಾಧಿಕಾರಿಗಳ ಅನುಮತಿ ಪಡೆದುಕೊಂಡು ಹುಬ್ಬಳ್ಳಿಯಿಂದ ಹತ್ತು ಜನರು ಮದುವೆ ಕಾರ್ಯಕ್ಕೆ ತೆರಳಿದ್ದರು. ಸರಳವಾಗಿ ನಡೆದ ಮದುವೆ ಸಮಾರಂಭದಲ್ಲಿ ವಧು ವರರ ಕಡೆಯಿಂದ 20 ಜನರು ಭಾಗಿಯಾಗಿದ್ದರು. ಮದುವೆ ಕಾರ್ಯದ ನಂತರ ವಧು-ವರರು ಹುಬ್ಬಳ್ಳಿಗೆ ಆಗಮಿಸಿದ್ದಾರೆ.

  • ಹಾಸನದಲ್ಲಿ ನವಜೋಡಿಯಿಂದ ಜನತಾ ಕರ್ಫ್ಯೂಗೆ ಜೈ

    ಹಾಸನದಲ್ಲಿ ನವಜೋಡಿಯಿಂದ ಜನತಾ ಕರ್ಫ್ಯೂಗೆ ಜೈ

    ಹಾಸನ: ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿರುವ ಜನತಾ ಕರ್ಫ್ಯೂಗೆ ಇಂದು ಮದುವೆಯಾಗಿ ಹೊಸ ಜೀವನಕ್ಕೆ ಕಾಲಿಡುತ್ತಿರುವ ನವ ಜೋಡಿ ಕೂಡ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ.

    ಹಾಸನದಲ್ಲಿ ನಿಗದಿಯಂತೆ ಮದುವೆಗಳು ನಡೆಯುತ್ತಿದ್ದರು ಕೂಡ ನೂರಕ್ಕಿಂತ ಕಡಿಮೆ ಜನರನ್ನು ಸೇರಿಸಿ ಮದುವೆ ಮಾಡಿಕೊಳ್ಳುತ್ತಿದ್ದಾರೆ.

    ಈ ಬಗ್ಗೆ ಮಾತನಾಡಿರುವ ನವಜೋಡಿ ಭೂಮೇಶ್ ಮತ್ತು ಹರಿಣಾಕ್ಷಿ ಎಂಬವರು, ಮದುವೆ ಮೊದಲೇ ನಿಗದಿಯಾಗಿದ್ದರಿಂದ ಇಂದು ಮದುವೆ ನಡೆಯುತ್ತಿದೆ. ಪ್ರಧಾನಿ ನರೇಂದ್ರ ಮೋದಿ ನಮ್ಮ ಆರೋಗ್ಯದ ದೃಷ್ಟಿಯಿಂದ ಜನತಾ ಕರ್ಫ್ಯೂಗೆ ಕರೆ ನೀಡಿದ್ದು, ಅವರಿಗೆ ಬೆಂಬಲ ಸೂಚಿಸಲು ತೀರ ಹತ್ತಿರದ ಸಂಬಂಧಿಕರನ್ನು ಬಿಟ್ಟು ಬೇರೆ ಯಾರನ್ನು ಮದುವೆಗೆ ಬರಬೇಡಿ ಎಂದು ಮನವಿ ಮಾಡಿದ್ದೇವೆ. ಹೀಗಾಗಿ ಸಾವಿರಾರು ಜನ ಸೇರುವ ಕಡೆ ಕೇವಲ ನೂರಕ್ಕೂ ಕಡಿಮೆ ಜನರ ಸಮ್ಮುಖದಲ್ಲಿ ನಮ್ಮ ಮದುವೆಯಾಗುತ್ತಿದೆ ಎಂದು ಹೇಳೀದ್ದಾರೆ.

    ಇನ್ನೂ ಕೆಲವು ಕಲ್ಯಾಣ ಮಂಟಪದಲ್ಲಿ ಬೆಳಗ್ಗೆ ಎಂಟು ಗಂಟೆಯೊಳಗೆ ಮದುವೆ ಮುಗಿಸಿ ಮೋದಿಗೆ ಮನವಿಗೆ ಜೈ ಎಂದಿದ್ದಾರೆ.

  • ಮಾಸ್ಕ್ ಧರಿಸಿ ಮದುವೆಯಾದ ನವಜೋಡಿ

    ಮಾಸ್ಕ್ ಧರಿಸಿ ಮದುವೆಯಾದ ನವಜೋಡಿ

    ಚಿಕ್ಕಬಳ್ಳಾಪುರ: ಕೊರೊನಾ ವೈರಸ್ ಹರಡದಂತೆ ಮುಂಜಾಗ್ರತಾ ಕ್ರಮವಾಗಿ ನವಜೋಡಿಯೊಂದು ವಿನೂತನ ರೀತಿಯಲ್ಲಿ ಜಾಗೃತಿ ಮೂಡಿಸಿದೆ. ಮಾಸ್ಕ್ ಧರಿಸಿದ ನವಜೋಡಿ ಮದುವೆಗೆ ಬಂದಿದ್ದ ಬಂಧು-ಬಳಗ ಮತ್ತು ಆಪ್ತರಿಗೂ ಮಾಸ್ಕ್ ವಿತರಿಸಿ ಜಾಗೃತಿ ಮೂಡಿಸಿದೆ.

    ಅಂದಹಾಗೆ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಅಪ್ಪೇಗೌಡನಹಳ್ಳಿ ಗ್ರಾಮದ ಯುವಕ ರಂಜಿತ್ ಹಾಗೂ ದೇವನಹಳ್ಳಿ ತಾಲೂಕಿನ ಚೀಮಾಚನಹಳ್ಳಿ ಗ್ರಾಮದ ರಂಜಿತ ವಿವಾಹ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕು ವಿಜಯಪುರದ ಗಿರಿಜಾಶಂಕರ ಕಲ್ಯಾಣ ಮಂಟಪದಲ್ಲಿ ನೇರವೇರಿತ್ತು.

    ಈ ಮದುವೆಯಲ್ಲಿ ಧಾರೆ ವೇಳೆ ನವ ಜೋಡಿ ಮಾಸ್ಕ್ ಧರಿಸಿದ್ದಾರೆ. ಹಾಗೆಯೇ ಬಂಧು ಬಳಗ ಸ್ನೇಹಿತರು ಕೂಡ ಮುಖಕ್ಕೆ ಮಾಸ್ಕ್ ಧರಿಸಿ ಧಾರೆಯೆರೆದಿದ್ದಾರೆ. ಮದುವೆ ಮನೆಯಲ್ಲಿನ ಈ ಕೊರೊನಾ ಜಾಗೃತಿಯ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.

  • ನವಜೋಡಿ ಮೇಲೆ ಲಕ್ಷಾಂತರ ರೂ. ಸುರಿಮಳೆ: ವಿಡಿಯೋ ನೋಡಿ

    ನವಜೋಡಿ ಮೇಲೆ ಲಕ್ಷಾಂತರ ರೂ. ಸುರಿಮಳೆ: ವಿಡಿಯೋ ನೋಡಿ

    ಹೈದರಾಬಾದ್: ಮದುವೆಯಾದ ನವಜೋಡಿ ಮೇಲೆ ಪೋಷಕರು ಲಕ್ಷಾಂತರ ರೂ. ಹಣವನ್ನು ಸುರಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಸುಶಾಂತ್ ಕೋಟಾ ಹಾಗೂ ಮೇಘನಾ ಗೌಡ್ ಮಾರ್ಚ್ 17ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಸುಶಾಂತ್ ಕೋಟಾ ಸಾಫ್ಟ್ ವೇರ್ ಎಂಜಿನಿಯರ್ ಆಗಿದ್ದು, ಹೈದರಾಬಾದ್‍ನ ಐಟಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಹೈದರಾಬಾದ್‍ನಲ್ಲಿ ನಡೆದ ಈ ಮದುವೆಯ ವಿಡಿಯೋ ವೈರಲ್ ಆಗಿದೆ.

    ವರ ಹಾಗೂ ವಧುವಿನ ಪೋಷಕರು ನವಜೋಡಿ ಮೇಲೆ ಹಣದ ಹೊಳೆಯನ್ನೇ ಹರಿಸಲು ಒಂದು ದೊಡ್ಡ ಬಾಸ್ಕೆಟ್‍ನಲ್ಲಿ ನೋಟುಗಳನ್ನು ತೆಗೆದುಕೊಂಡು ಬಂದಿದ್ದರು. ಮದುವೆ ನಂತರ ಆ ಹಣವನ್ನು ನವಜೋಡಿ ಮೇಲೆ ಸುರಿಸಿದ್ದಾರೆ.

    ವೇದಿಕೆ ಮೇಲೆಯೇ ನವಜೋಡಿ ಮೇಲೆ ಪೋಷಕರು ಲಕ್ಷಾಂತರ ಹಣವನ್ನು ಅವರ ಮೇಲೆ ಸುರಿದಿದ್ದಾರೆ. ಅವರು ಹಣವನ್ನು ಸುರಿಯುತ್ತಿದ್ದಂತೆ ಅಲ್ಲಿದ್ದ ಮಕ್ಕಳು ಹಾಗೂ ಸಂಬಂಧಿಕರು ಹಣದ ನೋಟುಗಳನ್ನು ತೆಗೆದುಕೊಳ್ಳಲು ವೇದಿಕೆ ಹತ್ತಿದ್ದಾರೆ.

    ವೈರಲ್ ಆಗಿರುವ ಈ ವಿಡಿಯೋ ಬಗ್ಗೆ ಸಾಕಷ್ಟು ಜನ ಚರ್ಚೆ ಮಾಡುತ್ತಿದ್ದಾರೆ.

  • ಮದ್ವೆ ಮನೆಯಲ್ಲೂ ಶುರುವಾಯ್ತು ಮೋದಿ ಮತ್ತೊಮ್ಮೆ ಘೋಷಣೆ!

    ಮದ್ವೆ ಮನೆಯಲ್ಲೂ ಶುರುವಾಯ್ತು ಮೋದಿ ಮತ್ತೊಮ್ಮೆ ಘೋಷಣೆ!

    ದಾವಣಗೆರೆ: ನವ ಜೋಡಿಗಳು ತಮ್ಮ ಆಹ್ವಾನ ಪತ್ರಿಕೆಯಲ್ಲಿ ಪಕ್ಷದ ಅಭ್ಯರ್ಥಿ ಪರ ಪ್ರಚಾರ ನಡೆಸಿರುವುದು ಗೊತ್ತೇ ಇದೆ. ಈಗ ಮದುವೆ ಮನೆಯಲ್ಲಿ ನವಜೋಡಿಗಳು ‘ಮತ್ತೊಮ್ಮೆ ಮೋದಿ’ ಎಂದು ಕೂಗಿದ್ದಾರೆ.

    ದಾವಣಗೆರೆಯ ಹರಿಹರದ ಸೀತಮ್ಮ ಕಲ್ಯಾಣ ಮಂಟಪದಲ್ಲಿ ನಡೆದ ನವಜೋಡಿ ವಿಜಯ್ ಮತ್ತು ನಾಗಲಕ್ಷ್ಮಿ ಮದುವೆಯ ಆರತಕ್ಷತೆಯಲ್ಲಿ ಮೋದಿ ಮತ್ತೊಮ್ಮೆ ಎಂದು ಕೂಗಿ ಸ್ನೇಹಿತರಲ್ಲಿ, ಬಂಧು-ಬಾಂಧವರಲ್ಲಿ ಮೋದಿಗೆ ವೋಟ್ ಹಾಕುವಂತೆ ಮನವಿ ಮಾಡಿಕೊಂಡಿದ್ದಾರೆ.

    ವಿಜಯ್ ಹಾಗೂ ನಾಗಲಕ್ಷ್ಮಿ ಮೋದಿ ಬಗ್ಗೆ ಅಪಾಯ ಅಭಿಮಾನ ಹೊಂದಿದ್ದಾರೆ. ಈ ಬಾರಿ ಮೋದಿ ಮತ್ತೆ ಪ್ರಧಾನಿ ಆಗಬೇಕೆಂದು ನವಜೋಡಿ ಆರತಕ್ಷತೆಯಲ್ಲಿ ಸ್ನೇಹಿತರ ಜೊತೆ ಮೋದಿ ಮತ್ತೊಮ್ಮೆ ಎಂದು ಘೋಷಣೆ ಕೂಗಿದ್ದಾರೆ.

    ಈ ಹಿಂದೆ ದಕ್ಷಿಣ ಕನ್ನಡದ ಸುಳ್ಯದ ಮದುವೆ ಮನೆಯಲ್ಲಿ ಮೋದಿ ಅವರ ಮನ್ ಕೀ ಬಾತ್ ಕೇಳಿಸಿತ್ತು. ಸುಳ್ಯ ತಾಲೂಕಿನ ಬಿಜೆಪಿ ಕಾರ್ಯಕರ್ತ ಜಯರಾಮ ಅವರು ಪ್ರಧಾನಿ ನರೇಂದ್ರ ಮೋದಿಯವರ 53ನೇ ಮನದ ಮಾತು ಕೇಳುತ್ತಲೇ ಗ್ರಹಸ್ಥಾಶ್ರಮಕ್ಕೆ ಕಾಲಿರಿಸಿದ್ದರು. ಸುಳ್ಯ ನಗರದ ಮಹಾವಿಷ್ಣು ದೇವಸ್ಥಾನ ಕಾಯರ್ತೋಡಿಯಲ್ಲಿ ಜಯರಾಮ ಹಸೆಮಣೆ ಏರಿದ್ದರು.

    ಮೋದಿಯ ಮನ್ ಕೀ ಬಾತ್ ದಿನವಾಗಿದ್ದರಿಂದ ಮದುವೆಗೆ ಆಗಮಿಸಿದ್ದ ಜನರಿಗೆ ಮೋದಿಯ ರೇಡಿಯೋ ಮಾತು ಕೇಳುವಂತೆ ವ್ಯವಸ್ಥೆ ಮಾಡಿದ್ದರು. 11.30ರ ವೇಳೆಗೆ ಧಾರಾ ಮುಹೂರ್ತದಲ್ಲಿ ಮದುವೆಯಾದ ಜಯರಾಮ, ಅತ್ತ ಮೋದಿ ಮಾತು ಕೇಳುತ್ತಲೇ ಹಸೆಮಣೆ ತುಳಿದಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv