Tag: ನವಜಾತಶಿಶು

  • ಆಕ್ಸಿಜನ್ ಇಲ್ಲದಿದ್ರೂ ಚಿಕಿತ್ಸೆಗೆ ಕರೆದೊಯ್ದ ಚಾಲಕ: ಉಸಿರಾಟದ ಕೊರತೆಯಿಂದ ನವಜಾತ ಶಿಶು ಸಾವು

    ಆಕ್ಸಿಜನ್ ಇಲ್ಲದಿದ್ರೂ ಚಿಕಿತ್ಸೆಗೆ ಕರೆದೊಯ್ದ ಚಾಲಕ: ಉಸಿರಾಟದ ಕೊರತೆಯಿಂದ ನವಜಾತ ಶಿಶು ಸಾವು

    ದಾವಣಗೆರೆ: ರಾಜ್ಯ ಸರ್ಕಾರ ತುರ್ತು ಚಿಕಿತ್ಸಾ ಸಹಾಯಕ್ಕಾಗಿ 108 ಅಂಬುಲೆನ್ಸ್ ಸೇವೆ ಪ್ರಾರಂಭಿಸಿದೆ. ಆದರೆ ಆಂಬುಲೆನ್ಸ್ ನಲ್ಲಿ ಪ್ರಥಮ ಚಿಕಿತ್ಸೆಗೆ ಬೇಕಾದ ಸೂಕ್ತ ಸೌಲಭ್ಯವಿಲ್ಲದೆ ನವಜಾತ ಶಿಶುವೊಂದನ್ನು ಬಲಿ ಪಡೆದುಕೊಂಡಿದೆ.

    ಹೌದು… ಅಂಬುಲೆನ್ಸ್ ನಲ್ಲಿ ಆಕ್ಸಿಜನ್ ಇಲ್ಲದ ಕಾರಣ ಉಸಿರಾಟದ ಕೊರತೆಯಾಗಿ ನವಜಾತ ಶಿಶುವೊಂದು ಮೃತಪಟ್ಟಿರುವ ಘಟನೆ ಚೆನ್ನಗಿರಿ ತಾಲ್ಲೂಕಿನ ಬಸವಪಟ್ಟಣ ಗ್ರಾಮದಲ್ಲಿ ನಡೆದಿದೆ. ಇಲ್ಲಿನ ಶೃಂಗಾಯಬಾಬು ತಾಂಡದ ಹಾಲೇಶ್ ನಾಯಕ್ ಹಾಗೂ ಸ್ವಾತಿ ದಂಪತಿಯ ಮೊದಲ ಮಗುವೇ ಮೃತಪಟ್ಟಿರುವುದು. ಇದನ್ನೂ ಓದಿ: ಚಂದ್ರು ಹತ್ಯೆ ಕೇಸ್‌ಗೆ ಬಿಗ್ ಟ್ವಿಸ್ಟ್- ಘಟನೆಯ ಇಂಚಿಂಚು ಮಾಹಿತಿ ನೀಡಿದ ಸ್ನೇಹಿತ ಸೈಮನ್ ರಾಜ್

    HOSPITAL

    ಏನಿದು ಘಟನೆ?
    ಶುಕ್ರವಾರ ರಾತ್ರಿ 2 ಗಂಟೆ ವೇಳೆ ಸ್ವಾತಿ ಅವರಿಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ಈ ವೇಳೆ ಬಸವಪಟ್ಟಣ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಿದ್ದು, ಬೆಳಗ್ಗೆ 7 ಗಂಟೆ ವೇಳೆಗೆ ಹೆರಿಗೆ ಮಾಡಿಸಲಾಗಿದೆ. ಮಗುವಿಗೆ ಉಸಿರಾಟ ತೊಂದರೆಯಿದ್ದ ಕಾರಣ ಹೆಚ್ಚಿನ ಚಿಕಿತ್ಸೆಗಾಗಿ ಹೊನ್ನಾಳಿಗೆ ಕರೆದೊಯ್ಯಲು ಪೋಷಕರು ಮುಂದಾಗಿದ್ದಾರೆ. ಆದರೆ, ಆಸ್ಪತ್ರೆಗೆ ಕರೆದೊಯ್ಯಬೇಕಿದ್ದ ಆಂಬ್ಯುಲೆನ್ಸ್‌ನಲ್ಲಿ ಆಕ್ಸಿಜನ್ ಇಲ್ಲದಿದ್ದರೂ ಚಾಲಕ ಮಾರ್ಗಮಧ್ಯೆ ಬೇರೊಂದು ಆಂಬುಲೆನ್ಸ್ ಬರುತ್ತದೆ ಎಂದು ಹೇಳಿ ಕರೆದೊಯ್ದಿದ್ದಾನೆ. ಹೊನ್ನಾಳಿಗೆ ತಲುಪುವವರೆಗೂ ಆಕ್ಸಿಜನ್ ಸಿಗದ ಕಾರಣ ಮಗು ಮಾರ್ಗಮಧ್ಯೆಯೇ ಮೃತಪಟ್ಟಿದೆ. ಇದನ್ನೂ ಓದಿ: ಕೆನಡಾ ತುಂಬಾ ಸೇಫ್ ಎನ್ನುತ್ತಿದ್ದ ಭಾರತದ ವಿದ್ಯಾರ್ಥಿ ಗುಂಡೇಟಿಗೆ ಬಲಿ

    108 ambulance karnataka A copy
    ಸಾಂದರ್ಭಿಕ ಚಿತ್ರ

    ಇದರಿಂದಾಗಿ ಪೋಷಕರು ಹಾಗೂ ಮಗುವಿನ ಸಂಬಂಧಿಕರು ಆಸ್ಪತ್ರೆ ಸಿಬ್ಬಂದಿ ವಿರುದ್ಧ ಆಕ್ರೋಶಗೊಂಡಿದ್ದು, ಆಸ್ಪತ್ರೆಯ ಮುಂಭಾಗ ಪ್ರತಿಭಟನೆ ನಡೆಸುತ್ತಿದ್ದಾರೆ. ಮೊದಲೇ ಇಲ್ಲಿ ಸರಿಯಾದ ಸಮಯಕ್ಕೆ 108 ಅಂಬುಲೆನ್ಸ್ ಬರುತ್ತಿಲ್ಲ. ಇದ್ದ ಅಂಬುಲೆನ್ಸ್ ನಲ್ಲಿ ಸರಿಯಾದ ಚಿಕಿತ್ಸಾ ವ್ಯವಸ್ಥೆಯಿಲ್ಲ ಎಂದು ದೂರುತ್ತಿದ್ದಾರೆ. ಜಿಲ್ಲಾ ಆರೋಗ್ಯಾಧಿಕಾರಿಗಳು ಬರುವವರೆಗೂ ಸ್ಥಳದಿಂದ ಕದಲುವುದಿಲ್ಲ ಎಂದು ಪಟ್ಟುಹಿಡಿದಿದ್ದಾರೆ. ಸದ್ಯ ಸ್ಥಳಕ್ಕೆ ಬಸವಪಟ್ಟಣ ಠಾಣೆ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

  • ಅಪ್ರಾಪ್ತೆಯನ್ನ ಅತ್ಯಾಚಾರಗೈದ ಚಿಕ್ಕಪ್ಪ – ಸಿಟ್ಟಿಗೆ ಶಿಶುವನ್ನು ಕಿಟಕಿಯಿಂದ ಎಸೆದು ಕೊಂದ ಸಂತ್ರಸ್ತೆ

    ಅಪ್ರಾಪ್ತೆಯನ್ನ ಅತ್ಯಾಚಾರಗೈದ ಚಿಕ್ಕಪ್ಪ – ಸಿಟ್ಟಿಗೆ ಶಿಶುವನ್ನು ಕಿಟಕಿಯಿಂದ ಎಸೆದು ಕೊಂದ ಸಂತ್ರಸ್ತೆ

    ಶಿಮ್ಲಾ: ಅಪ್ರಾಪ್ತೆಯನ್ನು ಆಕೆಯ ಚಿಕ್ಕಪ್ಪನೇ ಅತ್ಯಾಚಾರಗೈದು ಗರ್ಭವತಿ ಮಾಡಿದ ನಾಚಿಕೆಗೇಡಿ ಪ್ರಕರಣವೊಂದು ಹಿಮಾಚಲ ಪ್ರದೇಶದ ರಾಜಧಾನಿ ಶಿಮ್ಲಾದಲ್ಲಿ ನಡೆದಿದ್ದು, ಇದೇ ಸಿಟ್ಟಿನಿಂದ ಆಗತಾನೆ ಜನಿಸಿದ್ದ ಶಿಶುವನ್ನು ಬಾಲಕಿ ಆಸ್ಪತ್ರೆ ಶೌಚಾಲಯದ ಕಿಟಕಿಯಿಂದ ಎಸೆದು ಕೊಲೆ ಮಾಡಿದ್ದಾಳೆ.

    ಬುಧವಾರದಂದು ರೋಹ್ರು ಜಿಲ್ಲಾಸ್ಪತ್ರೆಯಲ್ಲಿ ನವಜಾತ ಶಿಶುವಿನ ಮೃತದೇಹ ಪತ್ತೆಯಾದಾಗ ಪ್ರಕರಣ ಬೆಳಕಿಗೆ ಬಂದಿದೆ. ಆಸ್ಪತ್ರೆಯಲ್ಲಿ ಸ್ವಚ್ಛತೆ ಕೆಲಸ ಮಾಡುತ್ತಿದ್ದ ಸಿಬ್ಬಂದಿಗೆ ಶೌಚಾಲಯದ ಪಕ್ಕದಲ್ಲಿದ್ದ ಕಿಟಕಿ ಕೆಳಗೆ ನವಜಾತ ಶಿಶುವಿನ ಶವ ಕಂಡಿದೆ. ಅದನ್ನು ನೋಡಿದ ಬಳಿಕ ಸಿಬ್ಬಂದಿ ಆಸ್ಪತ್ರೆಯ ಹಿರಿಯ ಅಧಿಕಾರಿಗಳಿಗೆ ಈ ಬಗ್ಗೆ ತಿಳಿಸಿದ್ದಾರೆ. ಆಸ್ಪತ್ರೆಯ ದಾಖಲೆ ಪುಸ್ತಕದಲ್ಲಿ ಘಟನೆ ನಡೆದ ದಿನ ಯಾವುದೇ ಗರ್ಭವತಿ ಆಸ್ಪತ್ರೆಗೆ ಬಂದಿರಲಿಲ್ಲ.

    ಶವ ಹೇಗೆ ಆಸ್ಪತ್ರೆ ಆವರಣದಲ್ಲಿ ಬಂತು ಎಂದು ತಲೆಕೆಡಿಸಿಕೊಂಡ ಆಸ್ಪತ್ರೆ ಅಧಿಕಾರಿಗಳು ಈ ಪ್ರಕರಣ ಪತ್ತೆ ಮಾಡಲು ಸದ್ಯದಲ್ಲಿ ಆಸ್ಪತ್ರೆಗೆ ಬಂದಿದ್ದ ಗರ್ಭಿಣಿಯರ ದಾಖಲೆಗಳನ್ನು ಪರಿಶೀಲಿಸಿದ್ದಾರೆ. ಈ ವೇಳೆ ಎರಡು ದಿನಗಳ ಹಿಂದೆ ದಾಖಲಾಗಿದ್ದ ಅಪ್ರಾಪ್ತೆಯೇ ಈ ಕೃತ್ಯವೆಸೆಗಿದ್ದಾಳೆ ಎಂದು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.

    ಪ್ರಕರಣ ದಾಖಲಿಸಿಕೊಂಡು, ಅಪ್ರಾಪ್ತೆಯನ್ನು ಬಂಧಿಸಲಾಗಿದೆ. ವಿಚಾರಣೆ ವೇಳೆ ಅಪ್ರಾಪ್ತೆ ತಪ್ಪೊಪ್ಪಿಕೊಂಡಿದ್ದಾಳೆ. ತನ್ನ ಮೇಲೆ ಚಿಕ್ಕಪ್ಪ ಅತ್ಯಾಚಾರ ಮಾಡಿದ್ದಕ್ಕೆ ತಾನು ಗರ್ಭ ಧರಿಸಿದ್ದೆ. ಆದ್ದರಿಂದ ಸೋಮವಾರ ಹೆರಿಗೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದೆ. ಆಗ ಆಸ್ಪತ್ರೆ ಶೌಚಾಲಯಕ್ಕೆ ತೆರಳಿದ್ದಾಗ ಹೆರಿಗೆ ಆಯ್ತು. ಚಿಕ್ಕಪ್ಪನ ಮೇಲಿದ್ದ ಸಿಟ್ಟಿಗೆ ಶೌಚಾಲಯದ ಕಿಟಕಿಯಿಂದ ನವಜಾತ ಶಿಶುವನ್ನು ಎಸೆದೆ ಎಂದು ಹೇಳಿದ್ದಾಳೆ. ಕಿಟಕಿಯಿಂದ ಎಸೆದ ಪರಿಣಾಮ ಶಿಶುವು ಗಂಭೀರ ಗಾಯಗೊಂಡು ಸ್ಥಳದಲ್ಲೇ ಸಾವನ್ನಪ್ಪಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಈ ಬಗ್ಗೆ ಹಿರಿಯ ಪೊಲೀಸ್ ಅಧಿಕಾರಿ ಮಾತನಾಡಿ, ಕುಟುಂಬದ ಮರ್ಯಾದೆ ಹೋಗುತ್ತೆ ಎನ್ನುವ ಕಾರಣಕ್ಕೆ ಈ ಕೃತ್ಯದ ಬಗ್ಗೆ ಕುಟುಂಬಸ್ಥರು ಎಲ್ಲೂ ಬಾಯಿಬಿಟ್ಟಿರಲಿಲ್ಲ. ಆಸ್ಪತ್ರೆ ಸಿಬ್ಬಂದಿ ಘಟನೆ ಬಗ್ಗೆ ತಿಳಿಸಿದ ನಂತರ ಪೊಲೀಸರು ಬಾಲಕಿ ಹಾಗೂ ಅತ್ಯಾಚಾರ ಆರೋಪಿಯನ್ನು ಬಂಧಿಸಿದ್ದಾರೆ. ಈ ಸಂಬಂಧ ಪೋಸ್ಕೋ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.