Tag: ನರ್ಸರಿ ಶಾಲೆ

  • ಮಲ್ಲೇಶ್ವರದಲ್ಲಿ 25 ನರ್ಸರಿ ಶಾಲೆ ಆರಂಭ – ಎಲ್ಲ ಸರ್ಕಾರಿ ಶಾಲಾ-ಕಾಲೇಜುಗಳಲ್ಲಿ ಡಿಜಿಟಲ್ ಕಲಿಕೆಗೆ ಕ್ರಮ

    ಮಲ್ಲೇಶ್ವರದಲ್ಲಿ 25 ನರ್ಸರಿ ಶಾಲೆ ಆರಂಭ – ಎಲ್ಲ ಸರ್ಕಾರಿ ಶಾಲಾ-ಕಾಲೇಜುಗಳಲ್ಲಿ ಡಿಜಿಟಲ್ ಕಲಿಕೆಗೆ ಕ್ರಮ

    – ಕೋವಿಡ್ ಸೋಂಕಿತರಿಗೆ ಸ್ಥಳೀಯ ಸರ್ಕಾರಿ ಆಸ್ಪತ್ರೆಗಳಲ್ಲೇ ಅತ್ಯುತ್ತಮ ಚಿಕಿತ್ಸೆ

    ಬೆಂಗಳೂರು: ಮಲ್ಲೇಶ್ವರ ಕ್ಷೇತ್ರದ ವ್ಯಾಪ್ತಿಯಲ್ಲಿರುವ 13 ಸರ್ಕಾರಿ ಶಾಲೆಗಳೂ ಸೇರಿದಂತೆ ಒಟ್ಟು 25 ಕಡೆ ನರ್ಸರಿ ಶಾಲೆಗಳನ್ನು ಆರಂಬಿಸಲಾಗುವುದು ಎಂದು ಉಪಮುಖ್ಯಮಂತ್ರಿ ಡಾ.ಸಿ.ಎನ್ ಅಶ್ವಥ್ ನಾರಾಯಣ್ ಪ್ರಕಟಿಸಿದರು.

    ಮಲ್ಲೇಶ್ವರದಲ್ಲಿ ಮಂಗಳವಾರ ಏರ್ಪಡಿಸಲಾಗಿದ್ದ ಬಿಜೆಪಿ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮೊದಲು 13 ನರ್ಸರಿಗಳನ್ನು ಶುರು ಮಾಡಲಾಗುವುದು. ತದನಂತರ ಉಳಿದ ನರ್ಸರಿ ಶಾಲೆಗಳನ್ನು ತೆರೆಯಲಾಗುವುದು. ಎಲ್ಲ ಕಡೆಯು ಕನ್ನಡ ಮಾಧ್ಯಮದ ಜೊತೆಗೆ ಇಂಗ್ಲಿಷ್ ಮಾಧ್ಯಮ ಕೂಡ ಇರುತ್ತದೆ ಎಂದರು.

    ಕ್ಷೇತ್ರದ ಎಲ್ಲ ಶಾಲೆ-ಕಾಲೇಜುಗಳಲ್ಲಿ ಡಿಜಿಟಲ್ ಶಿಕ್ಷಣಕ್ಕೆ ಒತ್ತು ನೀಡಿ ಅದಕ್ಕೆ ಬೇಕಾದ ಎಲ್ಲ ವ್ಯವಸ್ಥೆಯನ್ನು ಮಾಡಲಾಗುತ್ತಿದೆ. ಕ್ಷೇತ್ರದ ಎಲ್ಲ ಪ್ರೌಢಶಾಲೆಯ 8,9 ಮತ್ತು 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಎಲ್ಲ ಮಕ್ಕಳಿಗೆ ಉಚಿತವಾಗಿ ಟ್ಯಾಬ್‍ಗಳನ್ನೂ ನೀಡಲಾಗಿದೆ. ಅದಕ್ಕೆ ಪೂರಕವಾಗಿ ಶೀಘ್ರದಲ್ಲಿಯೇ ಶಾಲೆ-ಕಾಲೇಜುಗಳ ತರಗತಿಗಳಲ್ಲಿ ಸ್ಮಾರ್ಟ್ ಬೋರ್ಡ್ ವ್ಯವಸ್ಥೆ ಮಾಡಲಾಗುವುದು ಎಂದು ಅವರು ಹೇಳಿದರು.

    ಕೋವಿಡ್ ಸೋಂಕಿತರಿಗೆ ಕ್ಷೇತ್ರದಲ್ಲೇ ಚಿಕಿತ್ಸೆ: ಕೋವಿಡ್ ಎರಡನೇ ಅಲೆ ತೀವ್ರವಾಗಿರುವ ಕಾರಣದಿಂದ ಮಲ್ಲೇಶ್ವರ ಕ್ಷೇತ್ರದ ಜನರಿಗೆ ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿಯೇ ಅತ್ಯುತ್ತಮ ಚಿಕಿತ್ಸೆ ನೀಡಲು ವ್ಯವಸ್ಥೆ ಮಾಡಲಾಗಿದೆ. ಕ್ಷೇತ್ರದ ಸೋಂಕಿತರು ಭಯಪಡುವುದು ಬೇಡ ಎಂದು ಅಶ್ವಥ್ ನಾರಾಯಣ್ ತಿಳಿಸಿದರು.

    ಸೋಂಕಿತರಿಗೆ ಪರೀಕ್ಷೆ ಮಾಡುವುದು ಹಾಗೂ ಅವರಿಗೆ ಗುಣಮಟ್ಟದ ಚಿಕಿತ್ಸೆ ನೀಡಲು ಕ್ಷೇತ್ರದ ಐದೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿಯೂ ಉತ್ತಮ ವ್ಯವಸ್ಥೆ ಮಾಡಲಾಗಿದೆ. ಇಪ್ಪತ್ತು ದಿನಗಳಲ್ಲಿ ಎಲ್ಲ ಸೌಲಭ್ಯಗಳು ಸಿಗಲಿವೆ ಎಂದು ಅವರು ನುಡಿದರು.

    ಸುರಕ್ಷತೆಗೆ ಅತ್ಯುತ್ತಮ ಸಿಸಿ ಕ್ಯಾಮೆರಾ: ಮಲ್ಲೇಶ್ವರ ಕ್ಷೇತ್ರದ ಜನರ ಸುರಕ್ಷತೆಗಾಗಿ ಎಲ್ಲ ಸಾರ್ವಜನಿಕ ಸ್ಥಳಗಳಲ್ಲಿ 1,300 ಹೈ ಕ್ವಾಲಿಟಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗುವುದು. ಕತ್ತಲಿನಲ್ಲಿ ಓಡಾಡಿದರೂ ಗುರುತಿಸಬಹುದಾದ ಗುಣಮಟ್ಟದ ಕ್ಯಾಮೆರಾಗಳನ್ನು ಅಳವಡಿಸಲಾಗುತ್ತಿದೆ ಎಂದು ಇದೇ ವೇಳೆ ಡಿಸಿಎಂ ಹೇಳಿದರು.

    ಕಾರ್ಯಕರ್ತರಿಗೆ ಕಿವಿಮಾತು: ದೇಶ ಮೊದಲು ಪಕ್ಷ ನಂತರ ಎಂಬ ಸಿದ್ಧಾಂತ ನಮ್ಮ ಪಕ್ಷದ್ದು. ಎಲ್ಲ ನಾಯಕರು, ಕಾರ್ಯಕರ್ತರು ಇದೇ ಬದ್ಧತೆಯಿಂದ ಕೆಲಸ ಮಾಡುತ್ತಿದ್ದಾರೆಂದ ಅವರು, ಸಜ್ಜನಿಕೆ ಹಾಗೂ ಉದಾತ್ತ ಮನೋಭಾವದಿಂದ ನಾವೆಲ್ಲರೂ ಪಕ್ಷದ ಕೆಲಸ ಮಾಡೋಣ. ಯಾವ ಕಾರಣಕ್ಕೂ ಮಾತೃರೂಪಿಯಾದ ಪಕ್ಷಕ್ಕೆ ಅಗೌರವ ತೋರುವ, ಹಾನಿ ಉಂಟು ಮಾಡುವ ಕೆಲಸ ಮಾಡಬಾರದು ಎಂದು ಕರೆ ನೀಡಿದರು.

    ಶ್ಯಾಮ್ ಪ್ರಸಾದ್ ಮುಖರ್ಜಿ ಅವರು ಕಂಡ ಕನಸುಗಳು ನನಸಾಗುತ್ತಿದೆ. ಆ ಮಹಾ ಪುರುಷನ ಸಂಕಲ್ಪದಂತೆ ನರೇಂದ್ರ ಮೋದಿ ಅವರು ಜಮ್ಮು-ಕಾಶ್ಮೀರಕ್ಕಿದ್ದ 370ನೇ ವಿಧಿಯನ್ನು ತೆಗೆದುಹಾಕಿದರಲ್ಲದೆ, ಅಲ್ಲಿನ ಜನರನ್ನು ಭಾರತದ ಮುಖ್ಯವಾಹಿನಿಯಲ್ಲಿ ಬೆರೆಯುವಂತೆ ಮಾಡಿದರು. ಅನೇಕ ರಾಜ್ಯಗಳಲ್ಲಿ ಪಕ್ಷ ಅಧಿಕಾರದಲ್ಲಿದೆ. ಜೊತೆಗೆ ದೇಶದಲ್ಲಿ ದೊಡ್ಡ ಪ್ರಮಾಣದಲ್ಲಿ ಸುಧಾರಣೆ ಆಗುತ್ತಿವೆ ಎಂದು ಅವರು ನುಡಿದರು.

    ಈ ಸಂದರ್ಭದಲ್ಲಿ ಪಕ್ಷಕ್ಕಾಗಿ ಸಮರ್ಪಣಾ ಮನೋಭಾವದಿಂದ ಸೇವೆ ಮಾಡಿದ ಕಾರ್ಯಕರ್ತರನ್ನು ಡಿಸಿಎಂ ಅವರು ಗೌರವಿಸಿ ಸನ್ಮಾನಿಸಿದರು. ಬೆಂಗಳೂರು ಉತ್ತರ ಭಾಗದ ಬಿಜೆಪಿ ಅಧ್ಯಕ್ಷ ನಾರಾಯಣ ಗೌಡ, ಪಕ್ಷದ ಹಿರಿಯ ಮುಖಂಡ ಗೋಪಿನಾಥ ರೆಡ್ಡಿ, ವಾಸುದೇವ್, ವೆಂಕಟಾಚಲಯ್ಯ ಮುಂತಾದವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

  • ನರ್ಸರಿ ಆರಂಭಿಸಿ ಮಕ್ಕಳ ಜೀವದ ಜೊತೆ ಚೆಲ್ಲಾಟವಾಡುತ್ತಿದೆ ಶಾಲೆ

    ನರ್ಸರಿ ಆರಂಭಿಸಿ ಮಕ್ಕಳ ಜೀವದ ಜೊತೆ ಚೆಲ್ಲಾಟವಾಡುತ್ತಿದೆ ಶಾಲೆ

    – ಸರ್ಕಾರ ಆದೇಶ ನೀಡದಿದ್ದರೂ ಶಾಲೆ ಆರಂಭಿಸಿದ ಆಡಳಿತ ಮಂಡಳಿ
    – ಕೊರೊನಾ ತಾಂಡವಾಡುತ್ತಿದ್ದರೂ ನರ್ಸರಿ ಶಾಲೆ ಆರಂಭ
    – ಪೋಷಕರಿಂದ ಹಣ ವಸೂಲಿಯೂ ಪ್ರಾರಂಭ

    ವಿಜಯಪುರ: ರಾಜ್ಯದಲ್ಲಿ ಕೊರೊನಾ ಅಟ್ಟಹಾಸ ಮುಂದುವರಿದಿದೆ. ಜನ ಜೀವ ಕೈಯ್ಯಲ್ಲಿ ಹಿಡಿದುಕೊಂಡು ಬದುವಂತಾಗಿದೆ. ಇಂತಹ ಕಠಿಣ ಪರಿಸ್ಥಿತಿಯಲ್ಲಿಯೂ ಖಾಸಗಿ ಶಾಲೆಯೊಂದು ಮಕ್ಕಳ ಜೀವದ ಜೊತೆ ಚಲ್ಲಾಟವಾಡುತ್ತಿದ್ದು, ನರ್ಸರಿ ಶಾಲೆಯನ್ನು ಆರಂಭಿಸಿ ಮಕ್ಕಳನ್ನು ಕೂಡಿ ಹಾಕಿದೆ.

    ಸರ್ಕಾರದ ಆದೇಶಕ್ಕೆ ಕಿಮ್ಮತ್ತು ನೀಡದೆ ವಿಜಯಪುರದ ರಹೀಂ ನಗರದಲ್ಲಿರುವ ರೋಜ್ ಲೈನ್ ನರ್ಸರಿ ಸ್ಕೂಲ್ ತರಗತಿಗಳನ್ನು ಆರಂಭಿಸಿದೆ. ಈ ಮೂಲಕ ಶಾಲೆ ತೆರೆಯಲು ಅನುಮತಿ ಇಲ್ಲದಿದ್ದರೂ ಪ್ರಾರಂಭ ಮಾಡಿದೆ. ಪುಟಾಣಿ ಮಕ್ಕಳ ಜೀವದ ಜೊತೆ ಚೆಲ್ಲಾಟವಾಡುತ್ತಿದೆ.

    ಶಾಲೆ ಪ್ರಾರಂಭಿಸಿ ಪೋಷಕರಿಂದ ಹಣ ವಸೂಲಿ ಶುರು ಮಾಡಿದ್ದು, ನರ್ಸರಿ ಶಾಲೆ ತೆರೆದು ಪೋಷಕರ ಬಳಿ ಆಡಳಿತ ಮಂಡಳಿ ಹಣ ಕೇಳುತ್ತಿದೆ. ಒಂದೆಡೆ ಕೊರೊನಾ ಭಯ, ಇನ್ನೊಂದೆಡೆ ಶಿಕ್ಷಣ ಸಂಸ್ಥೆ ಸುಲಿಗೆ ಮಾಡುತ್ತಿದೆ. ಇಷ್ಟಾದರೂ ಶಿಕ್ಷಣ ಇಲಾಖೆ ಮಾತ್ರ ಕಣ್ಮುಚ್ಚಿ ಕುಳಿತಿದ್ದು, ಈ ವರೆಗೆ ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ. ಆಡಳಿತ ಮಂಡಳಿ ಆದೇಶದ ಹಿನ್ನೆಲೆ ಪೋಷಕರ ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸುತ್ತಿದ್ದಾರೆ.

  • ಸರ್ಕಾರದ ಆದೇಶ ಮೀರಿ ನಡೆಯುತ್ತಿವೆ ನರ್ಸರಿ ಸ್ಕೂಲ್

    ಸರ್ಕಾರದ ಆದೇಶ ಮೀರಿ ನಡೆಯುತ್ತಿವೆ ನರ್ಸರಿ ಸ್ಕೂಲ್

    – ಶಾಲೆಗೆ ಬೀಗ ಹಾಕಿ ಪುಟಾಣಿಗಳಿಗೆ ಕ್ಲಾಸ್
    – ಪಬ್ಲಿಕ್ ಟಿವಿ ಕ್ಯಾಮೆರಾ ಕಾಣುತ್ತಿದ್ದಂತೆ ಉಲ್ಟಾ ಹೊಡೆದ ಶಾಲಾ ಸಿಬ್ಬಂದಿ

    ಬೆಂಗಳೂರು: ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಬೆಂಗಳೂರು ನಗರ ಹಾಗೂ ಗ್ರಾಮಾಂತದ ಎಲ್ಲಾ ನರ್ಸರಿ ಶಾಲೆಗಳಿಗೆ ಸರ್ಕಾರ ರಜೆ ಘೋಷಿಸಿದೆ. ಆದರೆ ಚಾಮರಾಜಪೇಟೆಯ ನರ್ಸರಿ ಸ್ಕೂಲ್ ಒಂದು ತರಗತಿ ನಡೆಸುತ್ತಿದೆ.

    ಚಾಮರಾಜಪೇಟೆಯ ದಿ ಚೈಲ್ಡ್ ಕಿಂಗಡಮ್ ಸ್ಕೂಲ್‍ಗೆ ಬೀಗ ಹಾಕಿ ಪುಟಾಣಿ ಮಕ್ಕಳಿಗೆ ಕ್ಲಾಸ್ ತೆಗೆದುಕೊಳ್ಳಲಾಗುತ್ತಿದೆ. ಈ ಕುರಿತು ವರದಿ ಮಾಡಲು ಪಬ್ಲಿಕ್ ಟಿವಿ ಹೋದಾಗ ಕ್ಯಾಮೆರಾ ನೋಡಿದ ಕೂಡಲೇ ಶಿಕ್ಷಕಿಯೊಬ್ಬರು ಮಕ್ಕಳನ್ನು ತರಗತಿಯೊಳಗೆ ಒಳ ಕಳಿಸಿದರು.

    ಈ ಕುರಿತು ಪ್ರತಿಕ್ರಿಯೆ ನೀಡಿದ ಶಿಕ್ಷಕಿಯೊಬ್ಬರು, ನಾವು ತರಗತಿ ಕ್ಲೋಸ್ ಮಾಡಲ್ಲ. ನೀವ್ಯಾರು ಇದನ್ನು ಕೇಳೋಕೆ? ನೀವು ಮೀಡಿಯಾದವರೆ ಸಮಸ್ಯೆ ಮಾಡ್ತಿರೋದು. ಸರ್ಕಾರದ ಆದೇಶ ನಮ್ಗೆ ಗೊತ್ತಿದೆ ಎಂದು ರೇಗಾಡಿದರು. ಬಳಿಕ ರಿಪೋರ್ಟ್ ಕಾರ್ಡ್ ಕೊಡೋದಕ್ಕೆ ನರ್ಸರಿ ಸ್ಕೂಲ್ ಅನ್ನು ತೆರೆದಿದ್ದೇವೆ. ಸ್ಕೂಲ್ ಮಕ್ಕಳಿಗೆ ರಿಪೋರ್ಟ್ ಕಾರ್ಡ್ ಮುಖ್ಯ ಅಲ್ವಾ ಅಂತ ಕಥೆ ಹೇಳಿದರು.

    ಪಬ್ಲಿಕ್ ಟಿವಿಯ ಮಾಹಿತಿ ಸಿಗುತ್ತಿದ್ದಂತೆ ಕ್ಷೇತ್ರ ಶಿಕ್ಷಣ ಇಲಾಖೆ ಅಧಿಕಾರಿಯೊಬ್ಬರು ಸ್ಥಳಕ್ಕೆ ಬಂದರು. ಆದರೆ ಶಾಲಾ ಆಡಳಿತ ಮಂಡಳಿಯು ಅವರನ್ನು ಶಾಲೆಯ ಅವರಣದೊಳಗೆ ಬಿಡಲೇ ಇಲ್ಲ.

    ಸರ್ಕಾರದ ಆದೇಶದಲ್ಲಿ ಏನಿದೆ?
    ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಮಾರ್ಚ್ 8ರಂದು ಟ್ವೀಟ್ ಮಾಡಿ, ರಾಜ್ಯದ ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನಿರ್ಧರಿಸಿದಂತೆ ಬಿಬಿಎಂಪಿ, ಬೆಂಗಳೂರುನಗರ ಜಿಲ್ಲೆ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಎಲ್ಲಾ ಪ್ರಾಥಮಿಕ ಶಾಲೆಗಳಿಗೆ ಮುಂದಿನ ಆದೇಶದವರೆಗೆ ರಜೆ ಘೋಷಿಸಲಾಗಿದೆ ಎಂದು ತಿಳಿಸಿದ್ದರು.

    1-9ನೇ ತರಗತಿವರೆಗಿನ ಪರೀಕ್ಷೆ ಶೀಘ್ರವೇ ಮುಗಿಸಿ ಶಾಲೆಗಳಿಗೆ ರಜೆ ಘೋಷಣೆ ಮಾಡುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆಗೆ ರಾಜ್ಯದ ಎಲ್ಲಾ ಶಾಲೆಗಳಿಗೆ ಸುತ್ತೋಲೆ ಹೊರಡಿಸಿದೆ. 1-5 ನೇ ತರಗತಿ ಮಾರ್ಚ್ 11ರಿಂದ 16ವರೆಗೆ ಪರೀಕ್ಷೆ ಮುಗಿಸಬೇಕು. 6-9 ನೇ ತರಗತಿ- ಮಾರ್ಚ್ 23 ರ ಒಳಗೆ ಮುಗಿಸಬೇಕು. 10 ನೇ ತರಗತಿ ಮೊದಲೇ ನಿಗದಿ ಪಡಿಸಿದ ವೇಳಾಪಟ್ಟಿಯಂತೆ ಮುಗಿಸಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆದೇಶಿಸಿದೆ.

    ಎಲ್ಲ ಸರ್ಕಾರಿ ಮತ್ತು ಖಾಸಗಿ ಶಾಲೆಗಳ ಪ್ರೀ ನರ್ಸರಿ, ಎಲ್‍ಕೆಜಿ ಮತ್ತು ಯುಕೆಜಿ ಮಕ್ಕಳಿಗೆ ರಜೆ ಘೋಷಣೆಯಾದ ಬೆನ್ನಲ್ಲೇ ಅಂಗನವಾಡಿಗಳಿಗೂ ರಜೆ ನೀಡಿ ಆದೇಶಿಸಲಾಗಿತ್ತು. ದಿನಾಂಕ 10-03-2020 ರಿಂದ 17-03-2020ರವರೆ ಅಂಗನವಾಡಿಗಳಿಗೆ ರಜೆ ನೀಡಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನಿರ್ಧರಿಸಿ ಸುತ್ತೋಲೆ ಹೊರಡಿಸಿದೆ.