Tag: ನರ್ತನ

  • ಲಾಕ್‍ಡೌನ್, ನಡು ರಸ್ತೆಯಲ್ಲಿ ನವಿಲುಗಳ ನರ್ತನ- ವಿಡಿಯೋ ನೋಡಿ

    ಲಾಕ್‍ಡೌನ್, ನಡು ರಸ್ತೆಯಲ್ಲಿ ನವಿಲುಗಳ ನರ್ತನ- ವಿಡಿಯೋ ನೋಡಿ

    ನವದೆಹಲಿ: ರಸ್ತೆಗಳಲ್ಲಿ ವಾಹನಗಳಿಂದ ಟ್ರಾಫಿಕ್ ಜಾಮ್ ಉಂಟಾಗುವುದು ಸಾಮಾನ್ಯ. ಆದರೆ ಇದೀಗ ಲಾಕ್‍ಡೌನ್‍ನಿಂದಾಗಿ ವಾಹನ ಸಂಚಾರ ಸ್ಥಗಿತವಾಗಿದ್ದರಿಂದ ವನ್ಯ ಜೀವಿಗಳು ರಸ್ತೆಯನ್ನು ತಮ್ಮದಾಗಿಸಿಕೊಂಡಿವೆ. ಇಂತಹ ಹಲವು ಉದಾಹರಣೆಗಳಿದ್ದು, ಇದೀಗ ಹತ್ತಾರು ನವಿಲುಗಳ ಗುಂಪು ರಸ್ತೆಯಲ್ಲೇ ನರ್ತಿಸಿ, ನಲಿದು ಊಹಿಸಲಾಗದ ಟ್ರಾಫಿಕ್ ಉಂಟುಮಾಡಿವೆ.

    ಭಾರತೀಯ ಅರಣ್ಯ ಇಲಾಖೆಯ ಅಧಿಕಾರಿ ಪ್ರವೀಣ್ ಕಸ್ವಾನ್ ಅವರು ಈ ವಿಡಿಯೋವನ್ನು ತಮ್ಮ ಟ್ವಿಟ್ಟರ್‍ನಲ್ಲಿ ಹಂಚಿಕೊಂಡಿದ್ದು, ಹತ್ತಾರು ನವಿಲುಗಳು ಯಾವುದೇ ಭಯ, ಹಂಗಿಲ್ಲದೆ ರಸ್ತೆಯಲ್ಲೇ ನರ್ತಿಸಿ, ನಲಿದಿವೆ. ಗರಿಬಿಚ್ಚಿ ಕುಣಿದು ಕುಪ್ಪಳಿಸಿವೆ. ಈ ವಿಡಿಯೋ 1.30 ಲಕ್ಷಕ್ಕೂ ಅಧಿಕ ವ್ಯೂವ್ಸ್ ಪಡೆದಿದೆ.

    ರಸ್ತೆ ತುಂಬೆಲ್ಲ ನವಿಲುಗಳದ್ದೇ ಕಾರುಬಾರು ಎನ್ನುವಂತಾಗಿದ್ದು, ಗುಂಪಾಗಿ ಸೇರಿಕೊಂಡು ಫುಲ್ ಟ್ರಾಫಿಕ್ ಜಾಮ್ ಮಾಡಿವೆ. ಸಾಮಾನ್ಯ ದಿನಗಳಲ್ಲಿ ವಾಹನಗಳ ಟ್ರಾಫಿಕ್ ಜಾಮ್ ನೋಡುತ್ತಿದ್ದ ಜನತೆ ನವಿಲುಗಳ ಟ್ರಾಫಿಕ್ ಜಾಮ್ ಕಂಡು ಆಶ್ಚರ್ಯಚಿಕಿತರಾಗಿದ್ದಾರೆ. ನವಿಲುಗಳ ಸೌಂದರ್ಯವನ್ನು ಕಂಡು ಮಾರುಹೋಗಿದ್ದಾರೆ.

    ಅರಣ್ಯಾಧಿಕಾರಿಗಳ ಟ್ವೀಟ್‍ಗೆ ಹಲವರು ಕಮೆಂಟ್ ಮಾಡಿದ್ದು, ವಾವ್ ಎಂತಹ ಆಸಕ್ತಿದಾಯಕ, ಆಹ್ಲಾದಕರ ಟ್ರಾಫಿಕ್ ಜಾಮ್ ಉಂಟಾಗಿದೆ ಎಂದು ಒಬ್ಬರು ಅಭಿಪ್ರಾಯ ತಿಳಿಸಿದರೆ, ಮತ್ತೊಬ್ಬರು ಈ ರೀತಿಯ ಟ್ರಾಫಿಕ್ ಜಾಮ್ ಆಗುತ್ತದೆ ಎಂದು ನಾನು ಊಹಿಸಿರಲಿಲ್ಲ. ನಮ್ಮ ರಾಷ್ಟ್ರೀಯ ಪಕ್ಷಿಗಳ ಸುಂದರವಾದ ಟ್ರಾಫಿಕ್ ಜಾಮ್ ಎಂದು ಬರೆದುಕೊಂಡಿದ್ದಾರೆ.