Tag: ನರೇಗಾ

  • ಇಂಜಿನೀಯರ್ ಬಾಳಿಗೆ ಆಸರೆಯಾದ ನರೇಗಾ – ಹೆಚ್ಚಿನ ವಿದ್ಯಾಭ್ಯಾಸಕ್ಕೆ ಕೂಲಿ ಹಣ ಬಳಕೆ

    ಇಂಜಿನೀಯರ್ ಬಾಳಿಗೆ ಆಸರೆಯಾದ ನರೇಗಾ – ಹೆಚ್ಚಿನ ವಿದ್ಯಾಭ್ಯಾಸಕ್ಕೆ ಕೂಲಿ ಹಣ ಬಳಕೆ

    – ಲಾಕ್‍ಡೌನ್ ಕಷ್ಟದಲ್ಲಿ ಕುಟುಂಬಕ್ಕೆ ಆಸರೆ

    ಕೊಪ್ಪಳ: ಕೋವಿಡ್ ಹಿನ್ನೆಲೆಯಲ್ಲಿ ಸಾಕಷ್ಟು ಜನ ನಿರುದ್ಯೋಗಿಗಳಾಗಿದ್ದು, ಕೆಲಸದ ನಿರೀಕ್ಷೆಯಲ್ಲಿ ಇದ್ದ ಪದವೀಧರರಿಗೂ ಮಹಾಮಾರಿ ಕೊರೊನಾ ಸಂಕಷ್ಟವನ್ನು ಉಂಟು ಮಾಡಿತ್ತು. ಆದರೆ ಇಂತಹ ಪರಿಸ್ಥಿತಿಯಲ್ಲಿ ಇಂಜಿನೀಯರಿಂಗ್ ಮುಗಿಸಿ ಕೆಲಸದ ನಿರೀಕ್ಷೆಯಲ್ಲಿದ್ದ ಯುವಕನಿಗೆ ಸರ್ಕಾರದ ನರೇಗಾ ಯೋಜನೆಯು ಆಸರೆ ಆಗಿದೆ.

    ಕೊಪ್ಪಳ ಗಂಗಾವತಿ ತಾಲೂಕಿನ ಸಣಾಪೂರ ಗ್ರಾಮದ ಬಡ ಕುಟುಂಬದ ನಿವಾಸಿ ರಾಮಾಂಜನೇಯ ಬೆಂಗಳೂರಿನಲ್ಲಿ ಬಿಇ ಮೆಕ್ಯಾನಿಕಲ್ ಎಂಜಿನಿಯರಿಂಗ್ ಪದವಿ ಪಡೆದುಕೊಂಡಿದ್ದರು. ಬಿಇ ಮುಗಿಸಿಕೊಂಡು ಕೆಲಸಕ್ಕೆ ಹುಡುಕುವ ವೇಳೆಯಲ್ಲಿಯೇ ಕೋವಿಡ್ ಅಲೆಯಿಂದಾಗಿ ಲಾಕ್‍ಡೌನ್ ಘೋಷಣೆ ಆಯ್ತು. ಉದ್ಯೋಗ ಇಲ್ಲದೆ ಮಾನಸಿಕವಾಗಿ ನೊಂದ ರಾಮಾಂಜನೇಯ ಬರಿಗೈಯಲ್ಲಿ ಗ್ರಾಮಕ್ಕೆ ವಾಪಸ್ಸ ಆಗಮಿಸಿದ್ದರು. ಉದ್ಯೋಗ ಇಲ್ಲದೆ ಗ್ರಾಮದಲ್ಲಿ ತಿಂಗಳುಗಳ ಕಾಲ ಕಳೆದ ವಿದ್ಯಾರ್ಥಿಗೆ ಸದ್ಯ ಉದ್ಯೋಗ ಖಾತರಿ ಯೋಜನೆಯು ಆಸರೆಯಾಗಿದೆ.

    ಗ್ರಾಮದಲ್ಲಿ ವಿದ್ಯಾರ್ಥಿಯ ಕುಟುಂಬಸ್ಥರು, ಗ್ರಾಮಸ್ಥರು ನರೇಗಾ ಯೋಜನೆಯಲ್ಲಿ ಕೆಲಸ ಮಾಡುವುದನ್ನು ಕಂಡು ರಾಮಾಂಜನೇಯ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ತಾನು ಕೂಡ ನರೇಗಾ ಯೋಜನೆಯಲ್ಲಿ ಕೆಲಸ ಮಾಡಲು ಪಂಚಾಯಿತಿ ಅಧಿಕಾರಿಗಳಿಗೆ ತಿಳಿಸಿದ್ದಾರೆ. ಅಧಿಕಾರಿಗಳು ನಿಯಮಗಳ ಪ್ರಕಾರ ಅರ್ಜಿಯನ್ನು ಪಡೆದುಕೊಂಡು, ವಿದ್ಯಾರ್ಥಿಗೆ ಕೆಲಸವನ್ನು ನೀಡಿದ್ದಾರೆ. ಕಳೆದ ಒಂದು ವರ್ಷದಿಂದ ನರೇಗಾ ಯೋಜನೆಯಡಿಯಲ್ಲಿ ಕೆಲಸ ಮಾಡುತ್ತಿರುವ ರಾಮಾಂಜನೇಯ ಬರುವ ಕೂಲಿ ಹಣದಲ್ಲಿ ಕುಟುಂಬಕ್ಕೆ ಆಸರೆಯಾಗುವುದರ ಜೊತೆಗೆ ಆತನ ಹೆಚ್ಚಿನ ವಿದ್ಯಾಭ್ಯಾಸಕ್ಕೂ ಕೂಡ ಅನುಕೂಲವಾಗಿದೆ.

    ಆನ್‍ಲೈನ್ ಕ್ಲಾಸ್‍ಗೂ ಅನುಕೂಲ: ಹೊರಗಡೆ ಕೆಲಸ ಇಲ್ಲದೆ ಮನೆಯಲ್ಲಿ ಇದ್ದ ರಾಮಾಂಜನೇಯ ನರೇಗಾದಡಿಯಲ್ಲಿ ಕೆಲಸ ಪಡೆದುಕೊಂಡಿದ್ದಾರೆ. ಕೆಲಸಕ್ಕೆ ತಕ್ಕ ಕೂಲಿಯನ್ನು ನೇರವಾಗಿ ಖಾತೆಗೆ ಜಮಾ ಆಗುತ್ತಿರೋದರಿಂದ ರಾಮಾಂಜನೇಯನಿಗೆ ಸಾಕಷ್ಟು ಅನುಕೂಲವಾಗಿದೆ. ಹೆಚ್ಚಿನ ವಿದ್ಯಾಭ್ಯಾಸ ಮಾಡುವ ಆಸೆಯನ್ನು ಹೊಂದಿರುವ ವಿದ್ಯಾರ್ಥಿಗೆ ನರೇಗಾದಿಂದ ಆರ್ಥಿಕ ಸಹಾಯಕ್ಕೆ ಆಗುತ್ತಿರುವುದರಿಂದ ಸದ್ಯ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿಯನ್ನು ನಡೆಸಿದ್ದಾರೆ. ಬರುವ ಕೂಲಿ ಹಣದಲ್ಲಿ ಕುಟುಂಬಕ್ಕೆ ಒಂದಿಷ್ಟು ನೀಡಿ, ತನ್ನ ಅಭ್ಯಾಸಕ್ಕೂ ಕೂಡ ಬಳಕೆ ಮಾಡುತ್ತಿದ್ದಾರೆ.

    ಸ್ಪರ್ಧಾತ್ಮಕ ಪರೀಕ್ಷೆಯ ತಯಾರಿಯಲ್ಲಿ ಇರುವ ರಾಮಾಂಜನೇಯ ಅದಕ್ಕೆ ಸಂಬಂಧಪಟ್ಟಂತೆ ಆನ್‍ಲೈನ್ ತರಗತಿಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಕುಟುಂಬಸ್ಥರಿಗೆ ಹೊರೆಯಾಗಿದ್ದ ರಾಮಾಂಜನೇಯ ನರೇಗಾ ಯೋಜನೆಯು ಆಸರೆಯಾಗಿದ್ದು, ಬರುವ ಕೂಲಿ ಹಣದಲ್ಲಿ ಹೆಚ್ಚಿನ ವಿದ್ಯಾಭ್ಯಾಸವನ್ನು ಮುಂದುವರಿಸಿದ್ದಾರೆ. ಇದನ್ನೂ ಓದಿ: ಸೂಪರ್‌ ಟೆಕ್ನಾಲಜಿ ಅಭಿವೃದ್ಧಿ ಪಡಿಸಿದವರಿಗೆ 729 ಕೋಟಿ ಬಹುಮಾನ ಘೋಷಿಸಿದ ಮಸ್ಕ್‌

    ಇಂಜಿನಿಯರಿಂಗ್ ಮುಗಿಸಿಕೊಂಡು ಕಳೆದ ವರ್ಷ ಕೋವಿಡ್ ಸಮಯಕ್ಕೆ ಗ್ರಾಮಕ್ಕೆ ಆಗಮಿಸಿದೆ. ಎಲ್ಲೂ ಕೆಲಸ ಸಿಗದೇ ಇರುವುದರಿಂದ ನಮ್ಮೂರಲ್ಲಿಯೇ ಉದ್ಯೋಗ ಖಾತರಿ ಯೋಜನಯಲ್ಲಿ ಕೆಲಸ ಮಾಡುತ್ತಿದ್ದೆನೆ. ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ನರೇಗಾದಡಿಯಲ್ಲಿ ಕೆಲಸ ಮಾಡುತ್ತೇನೆ. ಉಳಿದ ಸಮಯದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರು ನಡೆಸುತ್ತಿದ್ದೆನೆ. ನರೇಗಾ ಯೋಜನೆಯಿಂದ ಸಾಕಷ್ಟು ಅನುಕೂಲವಾಗಿದೆ. ಇದನ್ನೂ ಓದಿ: ಕೃಷಿಯಲ್ಲಿ ಯಶಸ್ಸು ಕಂಡ ಕಾನೂನು ಪದವೀಧರೆ – ದಿನಕ್ಕೆ 30 ಸಾವಿರ ರೂ. ವ್ಯಾಪಾರ

  • ನರೇಗಾ ಕಾಮಗಾರಿ ವೇಳೆ ಟ್ರಾಕ್ಟರ್ ಪಲ್ಟಿ – ಚಾಲಕ ಸಾವು

    ನರೇಗಾ ಕಾಮಗಾರಿ ವೇಳೆ ಟ್ರಾಕ್ಟರ್ ಪಲ್ಟಿ – ಚಾಲಕ ಸಾವು

    ತುಮಕೂರು: ನರೇಗಾ ಕಾಮಗಾರಿ ವೇಳೆ ಟ್ರಾಕ್ಟರ್ ಮಗುಚಿ ಚಾಲಕನೋರ್ವ ಸಾವನ್ನಪ್ಪಿರುವ ಘಟನೆ ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ದೊಮ್ಮಡಿಗೆರೆಯಲ್ಲಿ ನಡೆದಿದೆ.

    ಸಿದ್ದಪ್ಪ(30) ಮೃತ ಟ್ರಾಕ್ಟರ್ ಚಾಲಕ. ದೊಡ್ಡಾಳ ಕಟ್ಟೆ ಕಾಮಗಾರಿ ವೇಳೆ ಈ ಘಟನೆ ನಡೆದಿದ್ದು, ಮಡಿಕೇಹಳ್ಳಿ ಗ್ರಾಮ ಪಂಚಾಯತಿಯಿಂದ ನರೇಗಾ ಕಾಮಗಾರಿಯನ್ನು ನಿಯಮ ಮೀರಿ ಜೆಸಿಬಿ ಮತ್ತು ಟ್ರಾಕ್ಟರ್ ಬಳಸಿ ನಡೆಸಲಾಗುತ್ತಿತ್ತು. ಈ ವೇಳೆ ಮಣ್ಣು ತುಂಬಿಕೊಂಡು ಸಾಗುತ್ತಿದ್ದ ಟ್ರಾಕ್ಟರ್ ಏಕಾಏಕಿ ಪಲ್ಟಿಯಾಗಿದೆ.  ಇದನ್ನೂ ಓದಿ: ಅಕ್ರಮವಾಗಿ ಸಾಗಿಸ್ತಿದ್ದ ಒಂಟೆಗಳ ರಕ್ಷಣೆ

    ನಿಯಮದ ಪ್ರಕಾರ ಉದ್ಯೋಗ ಖಾತ್ರಿ ಯೋಜನೆಯಡಿ ಸ್ಥಳೀಯ ಕಾರ್ಮಿಕರನ್ನು ಬಳಿಸಿಕೊಂಡು ಕಾಮಗಾರಿ ಮಾಡಬೇಕಿತ್ತು. ಆದರೆ ಟ್ರಾಕ್ಟರ್ ಮತ್ತು ಜೆಸಿಬಿ ಬಳಸಿ ಕಾಮಗಾರಿ ನಡೆಸುತ್ತಿದ್ದರಿಂದ ಈ ಅವಘಡ ಸಂಭವಿಸಿದೆ. ಕುಣಿಗಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.

  • ನರೇಗಾ ಯೋಜನೆಯಡಿ ಬಾಳೆ ಬೆಳೆದು ಬಾಳು ಹಸನಾಗಿಸಿಕೊಂಡ ಕೊಪ್ಪಳದ ರೈತ

    ನರೇಗಾ ಯೋಜನೆಯಡಿ ಬಾಳೆ ಬೆಳೆದು ಬಾಳು ಹಸನಾಗಿಸಿಕೊಂಡ ಕೊಪ್ಪಳದ ರೈತ

    ಕೊಪ್ಪಳ: ತಾಲೂಕಿನ ಹ್ಯಾಟಿ ಗ್ರಾಮ ಬಾಳೆ ಬೆಳೆಗೆ ಖ್ಯಾತಿ ಪಡೆದಿದ್ದು, ಇಲ್ಲಿಯ ಮಸಾರಿ ಮಣ್ಣು ಹಾಗೂ ನೀರು ಬಾಳೆ ಬೆಳೆಗೆ ಉತ್ತಮವಾಗಿದೆ. ಈ ಗ್ರಾಮದ ವಿರೂಪಾಕ್ಷಪ್ಪ ಇಲ್ಲಿy ನೈಸರ್ಗಿಕ ಸಂಪತ್ತಿನ ಜತೆಗೆ 2020-21ನೇ ಸಾಲಿನಲ್ಲಿ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ಹನಿ ನೀರಾವರಿ ಅಳವಡಿಸಿಕೊಂಡು ಹಾಗೂ ತೋಟಗಾರಿಕೆ ಇಲಾಖೆ ಯೋಜನೆಯನ್ನು ಸದುಪಯೋಗ ಪಡೆದುಕೊಂಡು ಒಂದು ಹೆಕ್ಟರ್ ಪ್ರದೇಶದಲ್ಲಿ ಬಾಳೆ ಬೆಳೆದಿದ್ದಾರೆ. ಕೋವಿಡ್ ಸಂಕಷ್ಟದಲ್ಲೂ ಸಹ ತೋಟಗಾರಿಕೆ ಅಧಿಕಾರಿಗಳ ಸಹಾಯ ಪಡೆದು ಆರ್ಥಿಕ ಪ್ರಗತಿ ಸಾಧಿಸಿದ್ದಾರೆ.

    ವಿರೂಪಾಕ್ಷಪ್ಪ ಅವರಿಗೆ ಹೋಬಳಿ ಅಧಿಕಾರಿ ಕೃಷ್ಣಮೂರ್ತಿ ಪಾಟೀಲ್ ಮಾರ್ಗದರ್ಶನ ನೀಡಿದ್ದಾರೆ. ಅದರಂತೆ 2020ರ ಜೂನ್ ನಲ್ಲಿ ಬೆಂಗಳೂರಿನ ಖಾಸಗಿ ಕಂಪನಿಯಿಂದ ಬಾಳೆ ಸಸಿಗಳನ್ನು 13 ರೂ. ಗೆ ಒಂದರಂತೆ ತಂದು 6*6 ಅಡಿ ಅಂತರದಲ್ಲಿ 2 ಎಕರೆಯಲ್ಲಿ 3,000 ಗಿಡಗಳನ್ನು ನಾಟಿ ಮಾಡಿದ್ದಾರೆ. ಬಾಳೆ ನಾಟಿ, ಸಸ್ಯ ಸಂರಕ್ಷಣೆ, ನೀರು ಹಾಗೂ ಪೋಷಕಾಂಶಗಳ ನಿರ್ವಹಣೆ ಬಗ್ಗೆ ಹಾರ್ಟಿ ಕ್ಲಿನಿಕ್ ವಿಷಯ ತಜ್ಞರಿಂದ ಸಲಹೆ ಪಡೆದಿದ್ದಾರೆ. ಜೂನ್‍ನಲ್ಲಿ ನಾಟಿ ಮಾಡಿದ ಬಾಳೆ ಈಗ ಕೊಯ್ಲಿಗೆ ಬಂದಿದ್ದು, ಸುಮಾರು 5 ಕ್ವಿಂಟಲ್ ಕಾಯಿಗಳನ್ನು 5 ರೂ. ಗೆ ಒಂದು ಕಿ.ಗ್ರಾಂ. ನಂತೆ ಸ್ಥಳೀಯ ಮಾರುಕಟ್ಟೆಗೆ ಮಾರಾಟ ಮಾಡಿದ್ದಾರೆ.

    ಲಾಕ್‍ಡೌನ್‍ನಿಂದಾಗಿ ಬೆಲೆ ಕಡಿಮೆ ಆಗಿ ಹಾಗೂ ಖರೀದಿದಾರರೇ ಇಲ್ಲದ ಸಮಯದಲ್ಲಿ ತೋಟಗಾರಿಕೆ ಇಲಾಖೆ ಮಧ್ಯ ಪ್ರವೇಶಿಸಿ, ಸ್ಥಳೀಯವಾಗಿ ಮಾರುಕಟ್ಟೆ ಕಲ್ಪಿಸಿಕೊಟ್ಟಿದ್ದಾರೆ. ಮುಂದಿನ ದಿನಗಳಲ್ಲಿ ಬೇರೆ ಜಿಲ್ಲೆಗಳಿಗೆ ಕಳುಹಿಸಲಾಗುವುದು. ಸದ್ಯದ ಪರಿಸ್ಥಿತಿಯಲ್ಲಿ ಮಾರಾಟ ಮಾಡುವುದೊಂದೇ ಸವಾಲಾಗಿದೆ. ಮಾರಾಟವಾಗದಿದ್ದಲ್ಲಿ ಹಣ್ಣುಗಳು ಹಾಳಾಗುತ್ತವೆ. ಮೊದಲೇ ಗಾಳಿಯಿಂದಾಗಿ ನೂರಾರು ಗಿಡಗಳು ಬಿದ್ದು ನಷ್ಟವಾಗಿವೆ, ಈಗ ಮತ್ತಷ್ಟು ನಷ್ಟವಾಗುವುದು ಬೇಡ ಎಂದು ಅಧಿಕಾರಿಗಳ ಸಲಹೆ ನೀಡಿದ್ದಾರೆ. ತೋಟಗಾರಿಕೆ ಅಧಿಕಾರಿಗಳ ಸಲಹೆಯಂತೆ ಬೆಳೆದ ಬಾಳೆ ಉತ್ತಮವಾಗಿದೆ, ಮುಂದಿನ ದಿನಗಳಲ್ಲಿ ಉತ್ತಮ ದರ ಸಿಗುವ ನಿರೀಕ್ಷೆ ಇದೆ ಎನ್ನುತ್ತಾರೆ.

    ಇಲಾಖೆಯ ಯೋಜನೆಯನ್ನು ಸದ್ಬಳಕೆ ಮಾಡಿಕೊಂಡು ಅಧಿಕಾರಿಗಳ ಸಲಹೆ ಪಡೆದ ವಿರೂಪಾಕ್ಷ ಅವರು ಉತ್ತಮ ಬೆಳೆ ಬೆಳೆದಿದ್ದಾರೆ. ಕೋವಿಡ್-19 ಲಾಕ್‍ಡೌನ್‍ನಿಂದಾಗಿ ಇವರಿಗೆ ಮಾರುಕಟ್ಟೆ ತೊಂದರೆ ಆಗಿತ್ತು. ಸದ್ಯ ಕಡಿಮೆ ದರ ಇದ್ದರೂ ಸ್ಥಳೀಯ ವ್ಯಾಪಾರಸ್ಥರು ತಾವೇ ಕೊಯ್ಲು ಮಾಡಿ ಕಾಯಿಗಳನ್ನು ಒಯ್ಯುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಹೆಚ್ಚಿನ ದರ ಸಿಗಬಹುದು. ರೈತರು ಎದೆಗುಂದಬಾರದು. ತೋಟಗಾರಿಕೆ ಇಲಾಖೆ ಸದಾ ರೈತರ ನೆರವಿಗೆ ಇರುತ್ತದೆ ಎಂದು ಹಿರಿಯ ಸಹಾಯಕ ತೋಟಗಾರಿಗೆ ನಿರ್ದೇಶಕರಾದ (ಹಿ.ಸ.ತೋ.ನಿ) ಜಗನ್ನಾಥರೆಡ್ಡಿ ಹೇಳುತ್ತಾರೆ.

  • ನರೇಗಾ ಯೋಜನೆಯಡಿ ಕೆರೆ ಹೂಳೆತ್ತುತ್ತಿದ್ದಾನೆ ಬಿಕಾಂ ಮುಗಿಸಿದ ಯುವಕ

    ನರೇಗಾ ಯೋಜನೆಯಡಿ ಕೆರೆ ಹೂಳೆತ್ತುತ್ತಿದ್ದಾನೆ ಬಿಕಾಂ ಮುಗಿಸಿದ ಯುವಕ

    ಧಾರವಾಡ: ಲಾಕ್‍ಡೌನ್ ಸಂದರ್ಭದಲ್ಲಿ ಕೆಲಸವಿಲ್ಲದೆ ಖಾಲಿ ಕುಳಿತಿದ್ದ ಕೂಲಿಕಾರರಿಗೆ ನರೇಗಾ ಯೋಜನೆಯಡಿ ಜಿಲ್ಲಾ ಪಂಚಾಯಿತಿ ಕೆಲಸ ನೀಡಿದೆ. ಕೆರೆ ಹೂಳೆತ್ತುವ ಈ ಕಾರ್ಯಕ್ಕೆ ಈಗ ಪದವಿ ಮುಗಿಸಿದವರೂ ಬರುವಂತಾಗಿದೆ.

    ಜಿಲ್ಲೆಯ ಪ್ರಭುನಗರ ಹೊನ್ನಾಪುರ ಗ್ರಾಮದ ಪದವಿ ಮುಗಿಸಿದ ಯುವಕ ಪ್ರಕಾಶ್ ಕೆರೆ ಹೂಳೆತ್ತುವ ಕಾಮಗಾರಿಗೆ ಬರುತ್ತಿದ್ದಾನೆ. ಬಿಕಾಂ ಮುಗಿಸಿರುವ ಇವರಿಗೆ ಈಗ ಕೆಲಸ ಇಲ್ಲ. ಹೀಗಾಗಿ ನರೇಗಾ ಕಾಮಗಾರಿ ಆರಂಭವಾಗುತಿದ್ದಂತೆ ಇವರು ಸಹ ಕೆರೆ ಹೂಳೆತ್ತುವ ಕೆಲಸಕ್ಕೆ ಹೋಗುತ್ತಿದ್ದಾರೆ. ದಿನಕ್ಕೆ 275 ರೂ.ಗಳಿಗೆ ಕೂಲಿ ಮಾಡುತ್ತಿದ್ದು, ವಾರಕ್ಕೆ 1,925 ರೂ.ಗಳನ್ನ ಗಳಿಸಿ ಜೀವನ ಸಾಗಿಸುತಿದ್ದಾರೆ.  ಇದನ್ನೂ ಓದಿ: ನರೇಗ ಕೂಲಿ ಕೆಲಸ ಮಾಡ್ತಿದ್ದ ಎಂಎಸ್ಸಿ ಪದವೀಧರೆ- ಸಚಿವರಿಂದ ಉದ್ಯೋಗದ ಭರವಸೆ

    ಲಾಕ್‍ಡೌನ್ ಪರಿಣಾಮವಾಗಿ ಕೆಲಸ ಇಲ್ಲದ ಪದವೀಧರರು ಸಹ ನರೇಗಾ ಯೋಜನೆಯಡಿ ಕೆಲಸ ಮಾಡಿ ಬದುಕು ಕಟ್ಟಿಕೊಳ್ಳುತಿದ್ದಾರೆ. ಅಲ್ಲದೆ ರೈತರ ಬಳಿ ಕೂಲಿ ಕೆಲಸಕ್ಕೆ ಹೋಗುತಿದ್ದ ಹಲವು ಕಾರ್ಮಿಕರು ಹಾಗೂ ಕಡಿಮೆ ಜಮೀನು ಇರುವ ರೈತರಿಗೆ ನರೇಗಾ ಆಸರೆಯಾಗಿದೆ. ಸದ್ಯ ಗ್ರಾಮದ ಕೆರೆ ಹೂಳೆತ್ತುವ ಕೆಲಸ ನಡೆದಿದ್ದು, ಕೆರೆ ಕೆಲಸ ಮುಗಿನ ನಂತರ ನರೇಗಾದಲ್ಲಿ ಬೇರೆ ಕೆಲಸ ಸಿಕ್ಕರೆ ಜನ ಅಲ್ಲಿಗೇ ಹೋಗಲಿದ್ದಾರೆ.

  • ಸಿಎಂ ಬದಲಾವಣೆ ವಿಚಾರವನ್ನು ಯಾರೋ ಕುಡಿದವರು ಮಾತನಾಡುತ್ತಾರೆ: ಈಶ್ವರಪ್ಪ ವ್ಯಂಗ್ಯ

    ಸಿಎಂ ಬದಲಾವಣೆ ವಿಚಾರವನ್ನು ಯಾರೋ ಕುಡಿದವರು ಮಾತನಾಡುತ್ತಾರೆ: ಈಶ್ವರಪ್ಪ ವ್ಯಂಗ್ಯ

    ಹುಬ್ಬಳ್ಳಿ: ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆಯೇ ಇಲ್ಲ. ಮುಖ್ಯಮಂತ್ರಿ ಬದಲಾವಣೆ ವಿಚಾರವನ್ನು ಯಾರೋ ಕುಡಿದವರು ಮಾತನಾಡುತ್ತಾರೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ.

    ಇಂದು ನಗರದ ಸರ್ಕ್ಯೂಟ್ ಹೌಸ್‍ನಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಬಳಿಕ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ವಿಚಾರ ಬಂದಿಲ್ಲ. ಇದನ್ನು ಯಾರೋ ಕುಡಿದವರು ಮಾತನಾಡುತ್ತಾರೆ ಎಂದು ಅವರು ವ್ಯಂಗ್ಯವಾಡಿದರು. ನರೇಗಾ ಅಡಿಯಲ್ಲಿ ಉದ್ಯೋಗ ನೀಡುವಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ಛತ್ತೀಸ್‍ಗಢ್ ಮೊದಲನೆ ಸ್ಥಾನದಲ್ಲಿದೆ. ನರೇಗಾದಲ್ಲಿ 1,861 ಕೋಟಿ ಹಣ ಬಂದಿದೆ ಎಂದು ಹೇಳಿದ್ದಾರೆ.

    ಹಿಂದಿನ ಸರಕಾರದಲ್ಲಿದ್ದ ಬಾಕಿ ಹಣ ಕೊಟ್ಟು, ಸರ್ಕಾರದ ಬಳಿ 1,000 ಕೋಟಿ ಉಳಿದಿದ್ದು, ಅಂತರ್ಜಲ ಚೇತನ ಕಾರ್ಯಕ್ರಮ ಎಲ್ಲಾ ಜಿಲ್ಲೆಗಳಲ್ಲಿ ಆರಂಭವಾಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು. ಗ್ರಾಮ ಪಂಚಾಯ್ತಿಗಳಿಗೆ ಆಡಳಿತ ಸಮಿತಿ ನೇಮಕ ಮಾಡುವ ನಿಟ್ಟಿನಲ್ಲಿ ಚರ್ಚೆಯಾಗಿದೆ. ಕ್ಯಾಬಿನೆಟ್ ನಲ್ಲಿ ಚರ್ಚಿಸಿ ತೀರ್ಮಾನ ಮಾಡುತ್ತೇವೆ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಮಾಹಿತಿ ನೀಡಿದ್ದಾರೆ.

  • ಇವರನ್ನ ಇಟ್ಟುಕೊಂಡರೆ ಪಂಚಾಯಿತಿ ಉದ್ಧಾರವಾಗಲ್ಲ: ಪಿಡಿಒ ವಿರುದ್ಧ ಶಾಸಕ ಗರಂ

    ಇವರನ್ನ ಇಟ್ಟುಕೊಂಡರೆ ಪಂಚಾಯಿತಿ ಉದ್ಧಾರವಾಗಲ್ಲ: ಪಿಡಿಒ ವಿರುದ್ಧ ಶಾಸಕ ಗರಂ

    – ಬಡವರಿಗೆ ಜಾಬ್ ಕಾರ್ಡ್ ನೀಡದ್ದಕ್ಕೆ ಶಾಸಕ ಆಕ್ರೋಶ

    ಚಾಮರಾಜನಗರ: ಬಡ ಕೂಲಿಗಾರರಿಗೆ ಭಾರೀ ಮೊಸ ಮಾಡ್ತಿದ್ದಾರೆ, ಇವರನ್ನ ಇಲ್ಲೇ ಇಟ್ಟುಕೊಂಡರೆ ಪಂಚಾಯಿತಿ ಖಂಡಿತ ಉದ್ಧಾರ ಆಗುವುದಿಲ್ಲ ಎಂದು ಶಾಸಕ ಆರ್.ನರೇಂದ್ರ ಪಿಡಿಒಗೆ ಚಳಿ ಬಿಡಿಸಿದರು.

    ಮಂಗಳವಾರ ಮಂಗಲ ಗ್ರಾಮಪಂಚಾಯಿತಿಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ(ಪಿಡಿಒ) ಆನಂದ್ ಬಂಡವಾಳ ಬಯಲಾಗಿದೆ. ಒಟ್ಟು 1,137 ಜಾಬ್ ಕಾರ್ಡ್ ಇದ್ದರೂ ಕೇವಲ 100-150 ಮಂದಿಗೆ ಮಾತ್ರ ಕೆಲಸ ನೀಡಲಾಗಿದೆ. ಅಲ್ಲದೆ 637 ಮಂದಿ ಕೂಲಿ ಬೇಕು ಎಂದು ಅರ್ಜಿ ಸಲ್ಲಿಸಿದರು. ಇದನ್ನು ಕಂಡ ಶಾಸಕರು ಕೆಲಸ ನೀಡದಿರುವುದಕ್ಕೆ ಕೆಂಡಾಮಂಡಲರಾದರು.

    ಕಚೇರಿಯಲ್ಲಿ ಕುಳಿತು ಸುಮ್ಮನೆ ಆಟ ಆಡಿಕೊಂಡು ಹೋಗಲು ಬರ್ತಿಯಾ, ಇವನ್ನ ಇಲ್ಲೇ ಇಟ್ಟುಕೊಂಡರೆ ಪಂಚಾಯಿತಿ ಖಂಡಿತ ಉದ್ಧಾರವಾಗುವದಿಲ್ಲ. ಬಡವರಿಗೆ ಅನ್ಯಾಯ ಮಾಡುತಿದ್ದೀಯಾ ನಿನಗೆ ಒಳ್ಳೆಯದಾಗುವುದಿಲ್ಲ ಎಂದು ತೀವ್ರ ತರಾಟೆಗೆ ತೆಗೆದುಕೊಂಡರು.

    ಹನೂರು ಕ್ಷೇತ್ರದಲ್ಲಿ ಕೂಲಿ ಮಾಡಿ ಜೀವನ ಸಾಗಿಸುವವರೇ ಹೆಚ್ಚಾಗಿದ್ದಾರೆ. ಇವರು ಕೆಲಸ ಇಲ್ಲದೆ ಕೂಲಿ ಅರಸಿ ನಗರ ಪ್ರದೇಶಗಳಿಗೆ ಹಾಗೂ ಕೇರಳ, ತಮಿಳುನಾಡಿನ ಪ್ರದೇಶಗಳಿಗೆ ಹೋಗಿದ್ದರು. ಕೊರೊನಾ ಲಾಕ್ ಡೌನ್‍ನಿಂದಾಗಿ ಎಲ್ಲರೂ ತಮ್ಮ ಗ್ರಾಮಗಳಿಗೆ ಮರಳಿ ಬಂದು, ಜೀವನ ಸಾಗಿಸಲು ಕೂಲಿಗಾಗಿ ಪರಿತಪಿಸುತ್ತಿದ್ದಾರೆ. ಇದನ್ನು ಮನಗಂಡ ಶಾಸಕ ನರೇಂದ್ರ, ನನ್ನ ಕ್ಷೇತ್ರದ ಬಡವರು ಹಸಿವಿನಿಂದ ಇರಬಾರದು ಎಂದು 40 ದಿನಗಳಿಂದಲೂ ಎಲ್ಲ ಗ್ರಾಮಗಳ ಬಡವರನ್ನು ಗುರುತಿಸಿ ಅಹಾರ ಕಿಟ್ ನೀಡಿ ಕೊರೊನಾ ಹರಡದಂತೆ ಮಾಸ್ಕ್ ಕೊಟ್ಟು ಅರಿವು ಮೂಡಿಸುತ್ತಿದ್ದಾರೆ.

    ನಂತರ ಎಲ್ಲ ಪಂಚಾಯತಿಗಳಿಗೂ ಭೇಟಿ ನೀಡಿದ್ದಾರೆ. ಪ್ರತಿ ಪಂಚಾಯಿತಿಯಲ್ಲಿ ನರೇಗಾ ಯೋಜನೆಯ ಕೋಟಿಗಟ್ಟಲೆ ಅನುದಾನ ಕೊಳೆಯುತಿತ್ತು. ಇದನ್ನು ಕಂಡು ಅಸಮಾಧಾನಗೊಂಡ ಶಾಸಕರು, ದಿನಕ್ಕೆ ಐದು ಪಂಚಾಯತಿಗಳಿಗೆ ಭೇಟಿ ನೀಡಿ ಪಿಡಿಒ, ಕಾರ್ಯದರ್ಶಿ ಹಾಗೂ ಸಿಬ್ಬಂದಿಗೆ ತರಾಟೆಗೆ ತೆಗೆದುಕೊಂಡು ಕೆರೆಕಟ್ಟೆಗಳಲ್ಲಿ ನೂರಾರು ಕೂಲಿ ಕಾರ್ಮಿಕರಿಗೆ ಕೆಲಸ ನೀಡುವಂತೆ ಸೂಚಿಸಿದರು.

  • ನರೇಗಾ ಬಗ್ಗೆ ಸಿದ್ದರಾಮಯ್ಯ ತಪ್ಪು ತಿಳ್ಕೊಂಡಿದ್ದಾರೆ- ಸಚಿವ ಈಶ್ವರಪ್ಪ ತಿರುಗೇಟು

    ನರೇಗಾ ಬಗ್ಗೆ ಸಿದ್ದರಾಮಯ್ಯ ತಪ್ಪು ತಿಳ್ಕೊಂಡಿದ್ದಾರೆ- ಸಚಿವ ಈಶ್ವರಪ್ಪ ತಿರುಗೇಟು

    ಶಿವಮೊಗ್ಗ: ಉದ್ಯೋಗ ಖಾತ್ರಿ ಯೋಜನೆಯಡಿ ಒಂದು ಕುಟುಂಬಕ್ಕೆ ಒಂದು ಜಾಬ್ ಕಾರ್ಡ್ ಮಾತ್ರ ನೀಡಲಾಗುತ್ತಿದೆ ಎಂಬ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಟ್ವೀಟ್‍ಗೆ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ತಿರುಗೇಟು ನೀಡಿದ್ದಾರೆ.

    ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಒಂದು ಕಾರ್ಡ್ ಗೆ ಒಬ್ಬರಿಗೆ ಉದ್ಯೋಗ ಎಂಬ ನಿರ್ಬಂಧವಿಲ್ಲ. ಒಂದು ಕುಟುಂಬದ ಅರ್ಹ ಸದಸ್ಯರೆಲ್ಲರೂ ಜಾಬ್ ಕಾರ್ಡ್ ಗೆ ಅರ್ಜಿ ಸಲ್ಲಿಸಿದರೆ ಕಾರ್ಡ್ ನೀಡಲಾಗುವುದು ಎಂದು ಸಚಿವ ಈಶ್ವರಪ್ಪ ತಿಳಿಸಿದ್ದಾರೆ.

    ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಒಂದು ಕುಟುಂಬದ ಜಾಬ್ ಕಾರ್ಡ್ ಗೆ ಒಬ್ಬರಿಗೆ ಉದ್ಯೋಗ ನೀಡುತ್ತಿದ್ದಾರೆ. ಉಳಿದವರಿಗೆ ಉದ್ಯೋಗ ಖಾತ್ರಿ ಯೋಜನೆಯಡಿ ಉದ್ಯೋಗ ನೀಡುತ್ತಿಲ್ಲ ಎಂದು ಟ್ವೀಟ್ ಮಾಡಿದ್ದರು. ಸಿದ್ದರಾಮಯ್ಯನವರು ನರೇಗಾದ ಬಗ್ಗೆ ತಪ್ಪು ತಿಳಿದುಕೊಂಡಿದ್ದಾರೆ. ಸರ್ಕಾರಿ ನೌಕರರು, ಜನಪ್ರತಿನಿಧಿಗಳು ಮತ್ತು ಆದಾಯ ತೆರಿಗೆದಾರರನ್ನು ಹೊರತುಪಡಿಸಿ ಯಾರು ಬೇಕಾದರೂ ಜಾಬ್ ಕಾರ್ಡ್ ಗೆ ಅರ್ಜಿ ಸಲ್ಲಿಸಬಹುದಾಗಿದೆ. ಇದೀಗ ರಾಜ್ಯದಲ್ಲಿ ನಿರೀಕ್ಷೆಗೂ ಮೀರಿ ಜನರು ಉದ್ಯೋಗಕ್ಕಾಗಿ ಮುಂದೆ ಬರುತ್ತಿದ್ದು, 15 ದಿನಗಳ ಒಳಗಾಗಿ ಕೂಲಿ ಮೊತ್ತವನ್ನು ಪಾವತಿಸಲಾಗುತ್ತಿದೆ ಎಂದು ಸಚಿವರು ಸ್ಪಷ್ಟನೆ ನೀಡಿದರು.

  • ಲಾಕ್‍ಡೌನ್‍ನಿಂದ ಸಂಕಷ್ಟದಲ್ಲಿದ್ದ ಕೊಪ್ಪಳದ ಗ್ರಾಮಸ್ಥರ ಕೈ ಹಿಡಿದ ನರೇಗಾ ಯೋಜನೆ

    ಲಾಕ್‍ಡೌನ್‍ನಿಂದ ಸಂಕಷ್ಟದಲ್ಲಿದ್ದ ಕೊಪ್ಪಳದ ಗ್ರಾಮಸ್ಥರ ಕೈ ಹಿಡಿದ ನರೇಗಾ ಯೋಜನೆ

    ಕೊಪ್ಪಳ: ಕೊರೊನಾ ಲಾಕ್‍ಡೌನ್ ಜಾರಿಯಲ್ಲಿರುವ ಸಂಕಷ್ಟದ ಸ್ಥಿತಿಯಲ್ಲಿ ಗ್ರಾಮೀಣ ಭಾಗದ ಕೂಲಿಕಾರರಿಗೆ ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ಉದ್ಯೋಗ ಒದಗಿಸುವ ನಿಟ್ಟಿನಲ್ಲಿ, ಜಿಲ್ಲೆಯ ಪ್ರತಿ ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ಮತ್ತು ಕೃಷಿ, ತೋಟಗಾರಿಕೆ ಇಲಾಖೆಗಳಿಂದ ಕೂಲಿ ಆಧಾರಿತ ಕಾಮಗಾರಿಗಳನ್ನು ಗುರುತಿಸಿಸಲಾಗಿದೆ. ಅಲ್ಲದೇ ಕೋವಿಡ್-19ರ ಹಿನ್ನೆಲೆಯಲ್ಲಿ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಕೂಲಿಕಾರರಿಗೆ ಕೆಲಸವನ್ನು ನೀಡಲಾಗಿದೆ ಎಂದು ಜಿಲ್ಲಾ ಪಂಚಾಯ್ತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಘುನಂದನ್ ಮೂರ್ತಿ ತಿಳಿಸಿದ್ದಾರೆ.

    ಕೊಪ್ಪಳ ತಾಲೂಕಿನ ಇರಕಲ್ಲಗಡಾ, ಹುಲಿಗಿ, ಅಳವಂಡಿ, ಬೆಟಗೇರಿ, ಹಲಗೇರಿ, ಬಿಸರಳ್ಳಿ, ಗುಳದಳ್ಳಿ, ಕಲ್ತಾವರಗೇರಾ, ಚಿಕ್ಕಬೊಮ್ಮನಾಳ, ಹಿರೇಬೊಮ್ಮನಾಳ, ಗೊಂಡಬಾಳ, ಕುಷ್ಟಗಿ ತಾಲೂಕಿನ ಶಿರಗುಂಪಿ, ಬಿಜಕಲ್, ಹೂಲಗೇರಾ, ಚಳಗೇರಾ, ಹಿರೇಬನ್ನಿಗೊಳ, ತಳುವಗೇರಾ, ಹನುಮನಾಳ, ಬೆನಕನಾಳ, ಮಾಲಗಿತ್ತಿ, ನಿಲೋಗಲ್, ಜುಮಲಾಪುರ, ಕಿಲ್ಲಾರಹಟ್ಟಿ, ಮೆಣೇಧಾಳ, ಯಲಬುರ್ಗಾ ತಾಲೂಕಿನ ಮುಧೋಳ, ಬಂಡಿ, ತುಮ್ಮರಗುದ್ದಿ, ಬಳೂಟಗಿ, ಬೇವೂರು, ಗೆದಗೇರಿ, ಹಿರೇವಂಕಲಕುಂಟಾ, ಚಿಕ್ಕೊಪ್ಪಾ, ಗಂಗಾವತಿ ತಾಲೂಕಿನ ಮುಸಲಾಪುರ, ಹುಲಿಹೈದರ, ಬಸರಿಹಾಳ, ಗೌರಿಪುರ, ಚಿಕ್ಕಮಾದಿನಾಳ, ಸುಳೇಕಲ್, ಆಗೋಲಿ, ನವಲಿ ಗ್ರಾಮ ಪಂಚಾಯ್ತಿಗಳಲ್ಲಿ ಕ್ಷೇತ್ರ ಬದು ನಿರ್ಮಾಣ, ಕೃಷಿ ಹೊಂಡ, ನಾಲಾ ಅಭಿವೃದ್ಧಿ ಇನ್ನೂ ಮುಂತಾದ ಕೂಲಿ ಆಧಾರಿತ ಕಾಮಗಾರಿಗಳಲ್ಲಿ ಕೆಲಸ ಒದಗಿಸಿ ಸಕಾಲದಲ್ಲಿ ಕೂಲಿ ಹಣ ಪಾವತಿಗೆ ಕ್ರಮವಹಿಸಲಾಗಿದೆ. ಸರ್ಕಾರದ ಆದೇಶದಂತೆ 5 ಜನರಿಗಿಂತ ಹೆಚ್ಚು ಕೂಲಿಕಾರರು ಕೆಲಸ ನಿರ್ವಹಿಸದಂತೆ ನಿಗಾವಹಿಸಿ ಮತ್ತು ಪರಸ್ಪರ ಸಾಕಷ್ಟು ಅಂತರವನ್ನು ಕಾಯ್ದುಕೊಳ್ಳುವಂತೆ ನಿಗಾವಹಿಸಲಾಗುತ್ತಿದೆ.

    ಕೃಷಿಗೆ ಪೂರಕ ನರೇಗಾ ಯೋಜನೆ :
    ರೈತರು ತಮ್ಮ ಸ್ವಂತ ಜಮೀನುಗಳಲ್ಲಿ ಮುಂಗಾರು ಹಂಗಾಮಿಗೆ ಪೂರ್ವತಯಾರಿ ಮಾಡಿಕೊಳ್ಳುತ್ತಿದ್ದಾರೆ. ಅದರಂತೆ ಜಿಲ್ಲೆಯಲ್ಲಿ ನೀರಾವರಿ ಇಲ್ಲದ ಪ್ರದೇಶಗಳಲ್ಲಿ ಕೃಷಿ ಇಲಾಖೆಯಿಂದ ಕ್ಷೇತ್ರ ಬದು ಮತ್ತು ಕಂದಕ ಬದು ನಿರ್ಮಾಣ, ಕೃಷಿ ಹೊಂಡ ನಿರ್ಮಾಣ ಕಾಮಗಾರಿಗಳಲ್ಲಿ ಕೆಲಸ ನೀಡಲಾಗಿದೆ.

    ನೀರಾವರಿ ಇರುವ ಪ್ರದೇಶಗಳಲ್ಲಿ ರೈತರು ತಮ್ಮ ತಮ್ಮ ಹೊಲಗಳಲ್ಲಿ ಬದು ನಿರ್ಮಾಣ, ಕೃಷಿ ಹೊಂಡ ಕಾಮಗಾರಿಗಳನ್ನು ನಿರ್ಮಾಣ ಮಾಡಿಕೊಳ್ಳುತ್ತಿದ್ದಾರೆ. ಇದರಿಂದ ಮಳೆಗಾಲದಲ್ಲಿ ನೀರು ಸಂಗ್ರಹವಾಗಿ ಅಂತರ್ಜಲ ಹೆಚ್ಚಿಸಿಕೊಳ್ಳಲು ಮತ್ತು ಕೃಷಿ ಚಟುವಟಿಕೆಗಳಿಗೆ ಪ್ರಯೋಜನಕಾರಿಯಾಗಿವೆ.

    ಸಂಕಷ್ಟದ ಜನತೆಗೆ ಪರಿಹಾರವಾದ ನರೇಗಾ:
    ಕೊರೊನಾ ಸಂಕಷ್ಟದಿಂದ ಎಲ್ಲಾ ಕಡೆ ಉದ್ಯೋಗಗಳು ಸ್ಥಗಿತಗೊಂಡಿವೆ. ಉದ್ಯೋಗಕ್ಕೆಂದು ಮಹಾನಗರಗಳಿಗೆ ವಲಸೆ ಹೋದ ಅನೇಕ ಕೂಲಿಕಾರರು ತಮ್ಮ ಗ್ರಾಮಗಳಿಗೆ ಮರಳಿದ್ದಾರೆ. ಉದ್ಯೋಗವಿಲ್ಲದೆ ಕುಳಿತುಕೊಂಡಿದ್ದ ಗ್ರಾಮಸ್ಥರಿಗೆ, ಕೃಷಿ ಕಾರ್ಮಿಕರಿಗೆ, ರೈತರಿಗೆ ಮಹಾತ್ಮಗಾಂಧಿ ನರೇಗಾ ಯೋಜನೆಯಿಂದ ಸ್ವಗ್ರಾಮಗಳಲ್ಲಿ ಉದ್ಯೋಗವನ್ನು ಒದಗಿಸಲಾಗಿದೆ. ಇದರಿಂದ ಜನರು ಆರ್ಥಿಕವಾಗಿ ಕೊಂಚ ಗಟ್ಟಿಯಾಗಿದ್ದಾರೆ. ನರೇಗಾ ಯೋಜನೆಯಡಿ ಒಂದು ದಿನಕ್ಕೆ ಪ್ರಸ್ತುತ 275 ರೂಪಾಯಿಗಳನ್ನು ನೀಡಲಾಗುತ್ತಿದೆ. ಕೆಲಸಕ್ಕೆ ಬರುವರರು ತಮ್ಮದೇ ಗುದ್ದಲಿ, ಸಲಕೆ ತಂದರೆ ಹೆಚ್ಚುವರಿಯಾಗಿ 10 ರೂಪಾಯಿ ಸೇರಿ ಒಟ್ಟು 285 ರೂಪಾಯಿಗಳನ್ನು ನೀಡಲಾಗುತ್ತದೆ.

    ಈಗಾಗಲೇ ಜಿಲ್ಲೆಯಲ್ಲಿ 52,655 ಮಾನವ ದಿನಗಳನ್ನು ಸೃಜಿಸಲಾಗಿದೆ. ಇನ್ನೂ ಹೆಚ್ಚಿನ ಪ್ರಗತಿ ಸಾಧಿಸುವ ಗುರಿಯನ್ನು ಹೊಂದಲಾಗಿದೆ. ಕೋವಿಡ್-19ರ ಹಿನ್ನೆಲೆಯಲ್ಲಿ ನಗರ ಪ್ರದೇಶಗಳಲ್ಲಿನ ಗ್ರಾಮೀಣ ಕೂಲಿಕಾರರು ತಮ್ಮ ಗ್ರಾಮಗಳಿಗೆ ಹಿಂದಿರುಗುತ್ತಿದ್ದು, ಅವರು ಜಾಬ್‍ಕಾರ್ಡ ಕೇಳಿದಲ್ಲಿ ತುರ್ತಾಗಿ ಜಾಬ್‍ಕಾರ್ಡ ಒದಗಿಸಿ ಕೆಲಸ ನೀಡಲಾಗಿದೆ. ಪ್ರತಿ ದಿನ ಕೂಲಿಕಾರರು ಸ್ಥಳದಲ್ಲಿ ಕೆಲಸ ಪ್ರಾರಂಭಿಸುವ ಮುನ್ನ ಕೋವಿಡ್-19ರ ಕುರಿತು ಅರಿವು ಮೂಡಿಸುವ ಪ್ರತಿಜ್ಞಾ ವಿಧಿಯನ್ನು ಬೋಧಿಸಲಾಗುತ್ತಿದೆ. ಕೆಲಸದ ಸ್ಥಳದಲ್ಲಿ ಕುಡಿಯುವ ನೀರು, ಕೈತೊಳೆಯಲು ನೀರು ಹಾಗೂ ಸಾಬೂನು, ನೆರಳಿನ ವ್ಯವಸ್ಥೆ, ಮಕ್ಕಳ ಪಾಲನೆಗೆ ವ್ಯವಸ್ಥೆ, ಪ್ರಥಮ ಚಿಕಿತ್ಸಾ ಸೌಲಭ್ಯ, ಸ್ಯಾನಿಟೈಜರ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.

    ತಾಂತ್ರಿಕ ಸಹಾಯಕರು, ಬೇರ್ ಫುಟ್ ಟೆಕ್ನಿಷಿಯನ್, ಕಾಯಕ ಬಂಧುಗಳನ್ನು ನೇಮಿಸಿ ಕೂಲಿಕಾರರಲ್ಲಿ ನೆಗಡಿ, ಕೆಮ್ಮು, ಜ್ವರ ಇತ್ಯಾದಿ ಅನಾರೋಗ್ಯ ಕಂಡುಬಂದಲ್ಲಿ ಸಮೀಪದ ಆರೋಗ್ಯ ಕೇಂದ್ರದಲ್ಲಿ ಆರೋಗ್ಯ ಪರೀಕ್ಷೆಗೆ ಹಾಗೂ ವೈದ್ಯಕೀಯ ಚಿಕಿತ್ಸೆ ತೆಗೆದುಕೊಳ್ಳಲು ಸೂಚಿಸಲಾಗುತ್ತಿದೆ. ಆದ್ದರಿಂದ ಜಿಲ್ಲೆಯ ಗ್ರಾಮೀಣ ಭಾಗದ ಕೂಲಿಕಾರರು ಕೊರೊನಾ ವೈರಸ್ ಹರಡುವುದನ್ನು ತಡೆಯಲು ಮುನ್ನೆಚ್ಚರಿಕೆ ವಹಿಸುವುದು ಅಗತ್ಯವಿದ್ದು, ಸ್ವಪ್ರೇರಿತರಾಗಿ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಮಹಾತ್ಮಗಾಂಧಿ ನರೇಗಾ ಯೋಜನೆಯಲ್ಲಿ ಕೆಲಸ ನಿರ್ವಹಿಸುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.

  • ಡಿಕೆ ಶಿವಕುಮಾರ್ ಎಲ್ಲೆಲ್ಲೋ ಮಲಗಿಕೊಂಡು ಬಂದವರು: ಕೆ.ಎಸ್.ಈಶ್ವರಪ್ಪ

    ಡಿಕೆ ಶಿವಕುಮಾರ್ ಎಲ್ಲೆಲ್ಲೋ ಮಲಗಿಕೊಂಡು ಬಂದವರು: ಕೆ.ಎಸ್.ಈಶ್ವರಪ್ಪ

    -ಲೂಟಿ ಮಾಡೋದರಲ್ಲಿ ಡಿಕೆಶಿ ಅನುಭವಸ್ಥರು

    ಚಿಕ್ಕಬಳ್ಳಾಪುರ: ಗ್ರಾಮೀಣಾಭಿವೃದ್ದಿ ಇಲಾಖೆಯಲ್ಲಿ ಅವ್ಯವಹಾರ ಆಗಿದೆ. ನರೇಗಾ ಯೋಜನೆಯಲ್ಲಿ ಅಕ್ರಮ ನಡೆದಿದೆ ಅಂತ ಬಹಿರಂಗ ಸವಾಲು ಹಾಕಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ಸಚಿವ ಕೆ.ಎಸ್.ಈಶ್ವರಪ್ಪ ತಿರುಗೇಟು ನೀಡಿದ್ದಾರೆ.

    ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ನರೇಗಾ ಕಾಮಗಾರಿಗಳನ್ನ ಪರಿಶೀಲಿಸಿ ಮಾಧ್ಯಮಗಳೊಂದಿಗೆ ಮಾತನಾಡಿದರು. ಈ ವೇಳೆ ಡಿಕೆ ಶಿವಕುಮಾರ್ ಅವರಿಗೆ ತಿರುಗೇಟು ನೀಡಿದ ಕೆ.ಎಸ್.ಈಶ್ವರಪ್ಪ, ನಾನು ಹಾಗೂ ನಮ್ಮ ಇಲಾಖೆ ಮಲಗಿದೆ ಅಂತ ಡಿಕೆಶಿ ಹೇಳಿದ್ದಾರೆ. ಆದರೆ ಡಿಕೆಶಿ ಎಲ್ಲೆಲ್ಲೋ ಹೋಗಿ ಮಲಗಿ ಬಂದಿದ್ರು. ನಾನು ಅದರ ಸುದ್ದಿಗೆ ಹೋಗಲ್ಲ. ನಮ್ಮ ಇಲಾಖೆ ಮಲಗಿಲ್ಲ ಅನ್ನೋದಕ್ಕೆ ನಮ್ಮ ಇಲಾಖಾಧಿಕಾರಿಗಳು ಮತ್ತು ನಾನು ಓಡಾಡ್ತಿರೋದೆ ಸಾಕ್ಷಿ, ಸುಮ್ನೆ ಏನೇನೋ ಹೇಳಿಕೆ ನೀಡಿ ಉತ್ತರ ಕುಮಾರನ ಪೌರುಷ ತೋರಿಸಬೇಡಿ ಎಂದು ವ್ಯಂಗ್ಯ ಮಾಡಿದರು.

    ಡಿಕೆ ಶಿವಕುಮಾರ್ ಲೂಟಿ ಮಾಡಿದೊರಲ್ಲಿ ಅನುಭವಸ್ಥರು. ನಾನು ಅವರ ಜೊತೆ ಚರ್ಚೆಗೆ ಎಲ್ಲಿಗೆ ಬರಲಿ? ಎಲ್ಲೆಲ್ಲಿ ಲೂಟಿ ಮಾಡಿ ನಿಮಗೆ ಅಭ್ಯಾಸ ಇದೆಯಲ್ಲಾ ನನಗೆ ಹೇಳಿಕೊಡಿ. ನಾನು ಬಿಗಿ ಮಾಡ್ತೀನಿ. ನಾನು ಹೊಸದಾಗಿ ಈ ಇಲಾಖೆಗೆ ಬಂದಿದ್ದೀನಿ. ನನ್ನ ಇಲಾಖೆಯ ನರೇಗಾದಲ್ಲಿ ಎಲ್ಲೆಲ್ಲಿ ಲೂಟಿ ಆಗಿದೆ ಅಂತ ಹೇಳಿ, ನನ್ನ ಗಮನಕ್ಕೆ ಬಂದು ಒಂದು ಪೈಸೆ ಏನಾದ್ರೂ ದುರಪಯೋಗ ಆಗಿದ್ರೆ ನಾನು ನಿಮ್ಮ ಚಾಲೆಂಜ್ ಸ್ವೀಕರಿಸುತ್ತೇನೆ ಎಂದರು.

    ಎಲ್ಲೆಲ್ಲಿ ಲೂಟಿ ಆಗಿದೆ ಅಂತ ಹೇಳಿ ಬಿಗಿ ಮಾಡ್ತೀನಿ ಅದು ಬಿಟ್ಟು ರಾಜಕಾರಣ ಮಾಡಬೇಡಿ. ಹೊಸದಾಗಿ ಕೆಪಿಸಿಸಿ ಅಧ್ಯಕ್ಷರಾಗಿದ್ದೀನಿ ಅಂತ ತೋರಿಸಿಕೊಳ್ಳೋಕೆ ನಾಟಕ ಮಾಡಬೇಡಿ. ನರೇಗಾದಲ್ಲೂ ಯಾಕೆ ರಾಜಕೀಯ ಮಾಡ್ತೀರಿ? ಜನರಿಗೆ ಕೆಲಸ ಕೊಡಬೇಕು ಅಂತ ತೀರ್ಮಾನ ಮಾಡಿದ್ದೀವಿ, ಜನ ಖುಷಿಯಿಂದ ಕೆಲಸ ಮಾಡ್ತಿದ್ದಾರೆ ಎಂದು ತಿರುಗೇಟು ನೀಡಿದರು.

  • ಧಾರವಾಡ ಜಿಲ್ಲೆಯಲ್ಲಿ ನರೇಗಾ ಚಟುವಟಿಕೆಗಳು ಪ್ರಾರಂಭ

    ಧಾರವಾಡ ಜಿಲ್ಲೆಯಲ್ಲಿ ನರೇಗಾ ಚಟುವಟಿಕೆಗಳು ಪ್ರಾರಂಭ

    ಧಾರವಾಡ: ಎಲ್ಲೆಡೆ ಹರಡುತ್ತಿರುವ ಕೊರೊನಾ ವೈರಸ್ ನಿಯಂತ್ರಣಕ್ಕಾಗಿ ಲಾಕ್‍ಡೌನ್ ಜಾರಿಯಲ್ಲಿರುವ ಅವಧಿಯಲ್ಲಿ ಗ್ರಾಮೀಣ ಜನರಿಗೆ ಉದ್ಯೋಗ ಸಮಸ್ಯೆಗಳು ಉಂಟಾಗಬಾರದು ಎಂಬ ಮಹತ್ವಾಕಾಂಕ್ಷೆಯೊಂದಿಗೆ, ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಕಾಮಗಾರಿಗಳನ್ನು(ನರೇಗಾ) ಮುಂದುವರೆಸಲು ಕ್ರಮ ಕೈಗೊಳ್ಳಲಾಗಿದೆ.

    ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ನಿರ್ದೇಶನದ ಮೇರೆಗೆ ಧಾರವಾಡ ಜಿಲ್ಲೆಯಾದ್ಯಂತ ಎಲ್ಲಾ ಗ್ರಾಮಪಂಚಾಯತ್‍ಗಳಲ್ಲಿ ನರೇಗಾ ಚಟುವಟಿಕೆಗಳು ಪ್ರಾರಂಭವಾಗವೆ. ಜಿಲ್ಲೆಯ ಕಲಘಟಗಿ ತಾಲೂಕಿನಲ್ಲಿ ಚಟುವಟಿಕೆಗಳು ಈಗಾಗಲೇ ಪ್ರಾರಂಭವಾಗಿದ್ದು, ದೇವಲಿಂಗಿಕೊಪ್ಪದ ಕೆರೆಗೆ ನೀರಿನ ಕಾಲುವೆ ನಿರ್ಮಾಣ ಕಾರ್ಯ, ಬೀರುವಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಬೆಂಡಲಗಟ್ಟಿ ಗ್ರಾಮದ ಕೆರೆಯ ಹೂಳೆತ್ತುವ ಕಾಮಗಾರಿ ಸೇರಿದಂತೆ ರಸ್ತೆ, ದನದ ಕೊಟ್ಟಿಗೆ, ಜಂಗಲ್ ಕಟಾವು ಸೇರಿದಂತೆ ವಿವಿಧ ಕಾಮಗಾರಿಗಳು ಪ್ರಾರಂಭವಾಗಿವೆ.

    ಕೊರೊನಾ ಲಾಕ್‍ಡೌನ್ ಅವಧಿಯಲ್ಲಿ ನಡೆಯುತ್ತಿರುವ ನರೇಗಾ ಕಾಮಗಾರಿಗಳಿಗೆ ಸರ್ಕಾರ ನಿಯಮಾವಳಿಗಳನ್ನು ನೀಡಿದೆ. ಕೃಷಿಹೊಂಡ, ಬದು ನಿರ್ಮಾಣ, ಎರೇಹುಳು ಗೊಬ್ಬರ ಘಟಕದಂತಹ ಚಟುವಟಿಕೆಗಳಿಗೆ ಹೆಚ್ಚು ಅವಕಾಶವಿದೆ. ಉದ್ಯೋಗ ಬಯಸುವವರಿಗೆ ಹಾಗೂ ಕೂಲಿಗಾರರಿಗೆ ಕೆಲಸ ನೀಡಲಾಗುವುದು. ಕೂಲಿ ದರವನ್ನು ಏ. 1ರಿಂದ 249 ರೂಪಾಯಿಗಳಿಂದ 275 ರೂಪಾಯಿಗೆ ಹೆಚ್ಚಿಸಲಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಡಾ.ಬಿ.ಸಿ ಸತೀಶ್ ತಿಳಿಸಿದ್ದಾರೆ.