Tag: ನರೇಗಾ

  • ನರೇಗಾದಲ್ಲಿ ಭಾರೀ ಗೋಲ್ಮಾಲ್‌ – ಬಿಲ್ ಪಡೆಯಲು ಸೀರೆಯುಟ್ಟ ಯುವಕ!

    ನರೇಗಾದಲ್ಲಿ ಭಾರೀ ಗೋಲ್ಮಾಲ್‌ – ಬಿಲ್ ಪಡೆಯಲು ಸೀರೆಯುಟ್ಟ ಯುವಕ!

    ಬಾಗಲಕೋಟೆ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ (MGNREGA)ಬಿಲ್ ಪಡೆಯಲು ಯುವಕನೊಬ್ಬ ಸೀರೆಯುಟ್ಟು ಫೋಟೋಗೆ ಪೋಸ್ ನೀಡಿ ಅಕ್ರಮ ಎಸಗಿರುವ ಘಟನೆ ಹುನಗುಂದ (Hungunda) ಹಾಗೂ ಇಳಕಲ್ (Ilkal) ತಾಲೂಕಿನ ವ್ಯಾಪ್ತಿಯಲ್ಲಿ ನಡೆದಿದೆ.

    ಯುವಕನೋರ್ವ MGNREGA ಬಿಲ್ ಪಡೆಯಲು ಸೀರೆ ಉಟ್ಟು ಫೋಟೋಗೆ ಫೋಸ್‌ ನೀಡಿ ವೆಬ್‌ಸೈಟ್‌ಗೆ ಅಪ್ಲೋಡ್ ಮಾಡಿಸಿದ್ದಾನೆ. ಇಳಕಲ್ ತಾಲ್ಲೂಕಿನ ಚಿಕನಾಳ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ‌ ಸಿದ್ದನಕೊಳ್ಳ ಗ್ರಾಮದಲ್ಲಿ ಬ್ಲಾಕ್ ಪ್ಲಾಂಟೇಷನ್ ಕಾಮಗಾರಿಗೆ ಮಂಗಳಮ್ಮ ಆರಿ ಹೆಸರಲ್ಲಿ ಯುವಕ ಸೀರೆ ಉಟ್ಟು ಪೋಸ್ ಕೊಟ್ಟಿದ್ದಾನೆ.

    ಪಂಚಾಯತ್ ರಾಜ್ ಹಾಗೂ ಗ್ರಾಮ ಪಂಚಾಯತ್‌ಗಳಿಂದ (Village Panchayat) ನಿಯಮ ಮೀರಿದ ಕಾಮಗಾರಿ ಮಾಡಲಾಗಿದ್ದು, ಬಿಲ್‌ಪಾಸ್ ಮಾಡಿಕೊಳ್ಳಲು ಈ ರೀತಿಯ ವಿನೂತನ ರೀತಿಯಲ್ಲಿ ಭ್ರಷ್ಟಾಚಾರ ಮಾಡಿ ಯುವಕ ಈಗ ಸುದ್ದಿಯಾಗಿದ್ದಾನೆ. ಇದನ್ನೂ ಓದಿ: ಆನ್‌ಲೈನ್‌ನಲ್ಲಿ ಬುಕ್‌ ಮಾಡಿ – ಪಾರ್ಸೆಲ್ ಪಡೆಯಲು ಮನೆಗೆ ಬರ್ತಾರೆ ಪೋಸ್ಟ್‌ಮ್ಯಾನ್‌!

    ಅಧಿಕಾರಿಗಳು ಅಂಗನವಾಡಿ ಕಟ್ಟಡಕ್ಕೆ ಉದ್ಯೋಗ ಖಾತ್ರಿ ಯೋಜನೆಯ ಕಾರ್ಮಿಕರನ್ನು ಬಳಕೆ‌ ಮಾಡಿದ್ದಾರೆ. ಹುನಗುಂದ ಪಂಚಾಯತ್ ರಾಜ್‌ ಇಲಾಖೆ ವತಿಯಿಂದ ನಡೆದಿರುವ ಅಕ್ರಮ ಇದಾಗಿದ್ದು ಇದರಲ್ಲಿ ಅಧಿಕಾರಿಗಳು ಭಾಗಿಯಾಗಿರುವ ಗಂಭೀರ ಆರೋಪ ಬಂದಿದೆ. ಇದನ್ನೂ ಓದಿ: ಬಿಜೆಪಿ ಕಚೇರಿಗೆ ದಿಢೀರ್ ಭೇಟಿ – ಅಸಮಾಧಾನಿತರ ಜೊತೆ ಮಾತುಕತೆಗೆ ಸಿದ್ಧ ಎಂದ ಬಿಎಸ್‌ವೈ

    ಕೂಲಿಕಾರ್ಮಿಕರ ಒಂದೇ ಫೋಟೋ ಎರಡೆರಡು ಗ್ರಾಮ ಪಂಚಾಯತ್‌ಗಳಲ್ಲಿ ಬಳಕೆ ಮಾಡಿಕೊಂಡಿರುವದು ಬೆಳಕಿಗೆ ಬಂದಿದೆ. ಗಂಜಿಹಾಳ ಗ್ರಾಮ ಪಂಚಾಯತಿ ವ್ಯಾಪ್ತಿ ಅಂಗನವಾಡಿ ಕಟ್ಟಡ ಮತ್ತು ಬಿಂಜವಾಡಗಿ ಗ್ರಾಪಂ ವ್ಯಾಪ್ತಿಯ ಅಂಗನವಾಡಿ ಕಟ್ಟಡಕ್ಕೆ ಕೂಲಿ ಕಾರ್ಮಿಕರ ಒಂದೇ ಫೋಟೋ ಅಪ್ಲೋಡ್ ಮಾಡಲಾಗಿದ್ದು, ಹೆಸರು ಮಾತ್ರ ಬೇರೆ ಬೇರೆ ಮಾಡಲಾಗಿದೆ.

    ಇದೇ ರೀತಿ ಹುನಗುಂದ ಹಾಗೂ ಇಳಕಲ್ ತಾಲೂಕಿನ ರಾಮವಾಡಗಿ, ಚಿನ್ನಾಪುರ ಎಸ್ ಟಿ ಅಂಗನವಾಡಿ ಕಟ್ಟಡಕ್ಕೆ ಒಂದೇ ರೀತಿಯ ಫೋಟೋ ಅಪ್ಲೋಡ್ ಮಾಡಲಾಗಿದೆ. ಇವುಗಳನ್ನು ನೋಡಿದಾಗ ಅಧಿಕಾರಿಗಳು ಈ ಅಕ್ರಮದಲ್ಲಿ ಭಾಗಿಯಾಗಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

  • ಬೆಳಗಾವಿ, ಕಲಬುರಗಿಯಲ್ಲಿ ತಾಪಮಾನ ಹೆಚ್ಚಳ; ನರೇಗಾ ಕಾರ್ಮಿಕರಿಗೆ 30% ಕೆಲಸದ ಪ್ರಮಾಣ ಕಡಿತ: ಪ್ರಿಯಾಂಕ್ ಖರ್ಗೆ

    ಬೆಳಗಾವಿ, ಕಲಬುರಗಿಯಲ್ಲಿ ತಾಪಮಾನ ಹೆಚ್ಚಳ; ನರೇಗಾ ಕಾರ್ಮಿಕರಿಗೆ 30% ಕೆಲಸದ ಪ್ರಮಾಣ ಕಡಿತ: ಪ್ರಿಯಾಂಕ್ ಖರ್ಗೆ

    ಬೆಂಗಳೂರು: ಪ್ರಸಕ್ತ ಸಾಲಿನ ಬೇಸಿಗೆಯಲ್ಲಿ ವಾಡಿಕೆಗಿಂತ ಹೆಚ್ಚು ತಾಪಮಾನ ಏರಿಕೆಯಾಗಿದ್ದು, ಹೆಚ್ಚಿನ ಬಿಸಿಲು ಇರುವ ಕಾರಣ, ಗ್ರಾಮೀಣ ಭಾಗದ ಜೀವನೋಪಾಯದ ಪ್ರಮುಖ ಭಾಗವಾದ ನರೇಗಾ ಯೋಜನೆಯಡಿ(MGNREGA Project) ಕೂಲಿ ಕೆಲಸ ಮಾಡುವ ಬೆಳಗಾವಿ(Belagavi) ಮತ್ತು ಕಲಬುರಗಿ(Kalaburagi) ಕಂದಾಯ ವಿಭಾಗದ ಕಾರ್ಮಿಕರಿಗೆ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ 30% ರಷ್ಟು ಹಾಗೂ ಜೂನ್‌ನಲ್ಲಿ 20% ರಷ್ಟು ಕೆಲಸದ ಪ್ರಮಾಣದಲ್ಲಿ ರಿಯಾಯಿತಿ ಘೋಷಿಸಿರುವುದಾಗಿ ಸಚಿವ ಪ್ರಿಯಾಂಕ್ ಖರ್ಗೆ(Priyank Kharge) ತಿಳಿಸಿದ್ದಾರೆ.

    ಬೇಸಿಗೆ ದಿನಗಳಲ್ಲಿ ಕೂಲಿ ಕಾರ್ಮಿಕರು ಶಾಖಾಘಾತದಿಂದ, ತಮ್ಮ ಆರೋಗ್ಯದ ಮೇಲೆ ಉಂಟಾಗುವ ದುಷ್ಪರಿಣಾಮಗಳನ್ನು ತಪ್ಪಿಸಲು ಬಿಳಿಯ ಬಣ್ಣದ ಸಡಿಲವಾದ ಖಾದಿ ಬಟ್ಟೆಗಳನ್ನು ಹಾಗೂ ತಲೆಯ ಮೇಲೆ ಬಿಳಿ ಬಣ್ಣದ ರುಮಾಲು ಧರಿಸಿ ಕೆಲಸ ಮಾಡಬೇಕು. ಚಹಾ, ಕಾಫಿ, ತಂಪಾದ ಪಾನೀಯಗಳು, ಮಸಾಲೆ ಮತ್ತು ಎಣ್ಣೆಭರಿತ ಆಹಾರದ ಬದಲಾಗಿ ಹೆಚ್ಚು ತೇವಾಂಶವುಳ್ಳ ತರಕಾರಿ, ಅಂಬಲಿ, ಮಜ್ಜಿಗೆ, ಎಳೆನೀರು ಸೇವನೆ ಮಾಡಬೇಕು. ನೀರನ್ನು ಯಥೇಚ್ಛವಾಗಿ ಕುಡಿಯಬೇಕು ಎಂದು ಸಲಹೆ ನೀಡಿದ್ದಾರೆ. ಇದನ್ನೂ ಓದಿ: ಕುಮಾರಸ್ವಾಮಿ ಮಗು ಇದ್ದಂತೆ ಚಾಕ್ಲೇಟ್ ಕೊಟ್ಟವರ ಕಡೆ ಹೋಗ್ತಾರೆ: ಪ್ರದೀಪ್ ಈಶ್ವರ್ ಲೇವಡಿ

    ಸಂಬಂಧಿಸಿದ ಅಧಿಕಾರಿಗಳು ಕಾಮಗಾರಿ ಸ್ಥಳಗಳಲ್ಲಿ ಯೋಜನೆಯ ಮಾರ್ಗಸೂಚಿಯಂತೆ ಕಡ್ಡಾಯವಾಗಿ ನೆರಳು, ಶುದ್ಧ ಕುಡಿಯುವ ನೀರು, ಪ್ರಥಮ ಚಿಕಿತ್ಸಾ ಪೆಟ್ಟಿಗೆ ಮುಂತಾದ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಕ್ರಮವಹಿಸಲು ನಿರ್ದೇಶನ ನೀಡಿದ್ದಾರೆ. ಇದನ್ನೂ ಓದಿ: ʻವಕ್ಫ್‌ ವಾರ್‌ʼ – ಸೋನಿಯಾ ಗಾಂಧಿ ಕ್ಷಮೆ ಯಾಚಿಸಲಿ: ಬಿಜೆಪಿ ಪಟ್ಟು

  • ಉದ್ಯೋಗ ಖಾತ್ರಿ | 150 ಮಾನವ ದಿನಗಳಿಗೆ ಏರಿಸದಿರುವುದು ಬೇಸರದ ಸಂಗತಿ – ಪ್ರಿಯಾಂಕ್ ಖರ್ಗೆ

    ಉದ್ಯೋಗ ಖಾತ್ರಿ | 150 ಮಾನವ ದಿನಗಳಿಗೆ ಏರಿಸದಿರುವುದು ಬೇಸರದ ಸಂಗತಿ – ಪ್ರಿಯಾಂಕ್ ಖರ್ಗೆ

    ಬೆಂಗಳೂರು: ಗ್ರಾಮೀಣ ಜನರ ಜೀವನವನ್ನು ನಿರ್ಮಾಣ ಮಾಡುತ್ತಿರುವ ಉದ್ಯೋಗ ಖಾತ್ರಿ ಯೋಜನೆಯಾದ ನರೇಗಾ ಕಾರ್ಯಕ್ರಮದಲ್ಲಿ 100 ಮಾನವ ದಿನಗಳನ್ನು 150 ಮಾನವ ದಿನಗಳಿಗೆ ಏರಿಸಲು ತಾವು ಕೇಂದ್ರ ಸರ್ಕಾರಕ್ಕೆ ಮಾಡಿದ ಮನವಿಯ ಬಗ್ಗೆ ಗಮನ ಹರಿಸದಿರುವುದು ಅತ್ಯಂತ ಬೇಸರದ ಸಂಗತಿ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಹೇಳಿದರು.

    ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಬೆಂಗಳೂರಿನಲ್ಲಿ ಬುಧವಾರ ಏರ್ಪಡಿಸಿದ್ದ ನರೇಗಾ ಹಬ್ಬ ಕಾರ್ಯಕ್ರಮವನ್ನು ಉದ್ಘಾಟಿಸಿ, ಯೋಜನೆಯನ್ನು ಅತ್ಯುತ್ತಮವಾಗಿ ಅನುಷ್ಠಾನ ಮಾಡಿದ ಮೂರು ಹಂತದ ಪಂಚಾಯತಿಗಳು ಹಾಗೂ ಅನುಷ್ಠಾನ ಇಲಾಖೆಗಳಿಗೆ ಸಚಿವರು ಪ್ರಶಸ್ತಿ ವಿತರಿಸಿ ಮಾತನಾಡಿದರು.ಇದನ್ನೂ ಓದಿ: ಕೊಡವರ ಸಂಸ್ಕೃತಿ ಉಳಿವಿಗಾಗಿ ಪಾದಯಾತ್ರೆ – ಫೆ.7ರಂದು ದಕ್ಷಿಣ ಕೊಡಗಿನ 5 ಶಾಲಾ ಕಾಲೇಜಿಗೆ ರಜೆ ಘೋಷಣೆ

    ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಯ ದೂರದೃಷ್ಟಿ ಹಾಗೂ ಸಂಕಲ್ಪವನ್ನಿರಿಸಿಕೊಂಡು 2005ರಲ್ಲಿ ಅಂದಿನ ಪ್ರಧಾನಮಂತ್ರಿಗಳಾಗಿದ್ದ ಮನಮೋಹನ್ ಸಿಂಗ್ ಅವರು ನರೇಗಾ ಕಾರ್ಯಕ್ರಮವನ್ನು ಜಾರಿಗೆ ತಂದರು. ಈ ಕಾರ್ಯಕ್ರಮ ಇಂದು ಗ್ರಾಮೀಣ ಜನರ ಜೀವನೋಪಾಯವಾಗಿ ಉಳಿಯದೇ, ಜೀವನ ನಿರ್ಮಾಣ ಮಾಡುವ ಕಾರ್ಯಕ್ರಮವಾಗಿದೆ. ರಾಜ್ಯದಲ್ಲಿ ಶೇ.54ರಷ್ಟು ಮಹಿಳೆಯರು ಉದ್ಯೋಗ ಖಾತ್ರಿ ಯೋಜನೆಗಳಲ್ಲಿ ತೊಡಗಿಕೊಂಡಿದ್ದಾರೆ. ಈ ಯೋಜನೆಯಡಿ ಸರ್ಕಾರ ಮಹಿಳೆಯರು ಹಾಗೂ ಪುರುಷರಿಗೆ ತಾರತಮ್ಯವಿಲ್ಲದೆ ವೇತನ ನೀಡುತ್ತಿರುವುದರೊಂದಿಗೆ ಬಸವಣ್ಣನವರ ಸರ್ವರಿಗೂ ಸಮಪಾಲು, ಸಮಬಾಳು ತತ್ತ್ವವನ್ನು ಪಾಲಿಸುತ್ತಿದೆ. ನರೇಗಾ ಯೋಜನೆ ಗ್ರಾಮೀಣ ಕುಟುಂಬಗಳಲ್ಲಿ ಆರ್ಥಿಕ ಸ್ಥಿರತೆ ತಂದು ಕೊಟ್ಟಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.

    ಸಂವಿಧಾನ ಪೀಠಿಕೆಯಲ್ಲಿರುವಂತೆ ಗ್ರಾಮಗಳಲ್ಲಿ ಇಂದು ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ಸಮಾನತೆ ಪಾಲನೆಯಾಗುತ್ತಿದೆ. ಗ್ರಾಮ ಪಂಚಾಯತಿಗಳೇ ಸರ್ಕಾರಗಳಾಗಿ ಅಭಿವೃದ್ಧಿ ಕಾರ್ಯಗಳಲ್ಲಿ ತೊಡಗಿಕೊಂಡಿವೆ. ನರೇಗಾ ಕಾರ್ಯಕ್ರಮಗಳಡಿ ರಾಜ್ಯದಲ್ಲಿ 17 ಲಕ್ಷ ಆಸ್ತಿಗಳನ್ನು ಸೃಷ್ಟಿ ಮಾಡಲಾಗಿದೆ. ಇವು ಗ್ರಾಮೀಣ ಭಾಗಕ್ಕೆ ಶಾಶ್ವತ ಕೊಡುಗೆಗಳಾಗಿವೆ ಎಂದು ಶ್ಲಾಘನೆ ವ್ಯಕ್ತಪಡಿಸಿದ ಸಚಿವರು, ಕೇಂದ್ರ ಸರ್ಕಾರ ರಾಜ್ಯಕ್ಕೆ ನೀಡುತ್ತಿರುವ ನರೇಗಾ ಅನುದಾನವನ್ನು ವರ್ಷ ವರ್ಷವೂ ಕಡಿತಗೊಳಿಸುತ್ತಾ ಹೋಗುತ್ತಿದೆ. ಇದು ಗ್ರಾಮೀಣ ಅಭಿವೃದ್ಧಿಗೆ ಧಕ್ಕೆ ತರಲಿದೆ. ಗ್ರಾಮ ಪಂಚಾಯತಿಗಳು ವೈಜ್ಞಾನಿಕವಾಗಿ ಹಾಗೂ ಪ್ರಜ್ಞಾವಂತಿಕೆಯಿಂದ ಕಾರ್ಯ ನಿರ್ವಹಿಸುವದರೊಂದಿಗೆ ಗ್ರಾಮಗಳನ್ನು ಮತ್ತಷ್ಟು ಅಭಿವೃದ್ಧಿ ಮಾಡಲು ಮುಂದಾಗಬೇಕೆಂದು ಸಲಹೆ ಮಾಡಿದರು.

    ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕರ್ನಾಟಕ ವಿಧಾನಪರಿಷತ್ತಿನ ಸಭಾಪತಿಗಳದ ಬಸವರಾಜ ಹೊರಟ್ಟಿ ಅವರು ಗ್ರಾಮೀಣಾಬಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆ ಕೂಸಿನ ಮನೆಗಳನ್ನು ಆರಂಭಿಸುವ ಮೂಲಕ ಗ್ರಾಮೀಣ ಪ್ರದೇಶಗಳಲ್ಲಿ ದುಡಿಯುವ ಮಹಿಳೆಯರಿಗೆ ಒತ್ತಾಸೆಯಾಗಿದೆ ಎಂದು ಹೇಳಿದರು.

    ಕಿಯೊನಿಕ್ಸ್ ಅಧ್ಯಕ್ಷ, ಹೊಸಕೋಟೆ ಶಾಸಕ ಶರತ್ ಬಚ್ಚೇಗೌಡ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದು, ಸಂವಿಧಾನದ ಆಶಯದಂತೆ ಭಾರತದ ಪ್ರಧಾನಮಂತ್ರಿಗಳಾಗಿದ್ದ ಮನಮೋಹನ ಸಿಂಗ್ ಅವರು ಜಾರಿಗೆ ತಂದ ನರೇಗಾ ಕಾರ್ಯಕ್ರಮ ಇಂದು ಗ್ರಾಮೀಣ ಜನ ಜೀವನದ ಅನಿವಾರ್ಯ ಭಾಗವಾಗಿ ಪರಿಣಮಿಸಿದೆ ಎಂದು ಹೇಳಿದರು.

    ಶಿವಾಜಿನಗರ ಶಾಸಕ ರಿಜ್ವಾನ್ ಅರ್ಷದ್ ಅಧ್ಯಕ್ಷತೆ ವಹಿಸಿದ್ದರು. ಸಚಿವರು ರಾಜ್ಯದ ವಿವಿಧ ಪಂಚಾಯತ್ ರಾಜ್ ಸಂಸ್ಥೆಗಳು ಆಯೋಜಿಸಿದ್ದ ಪ್ರದರ್ಶನ ಮಳಿಗೆಗಳನ್ನು ವೀಕ್ಷಿಸಿದರು. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳಾದ ಉಮಾ ಮಹದೇವನ್ ಮತ್ತು ಅಂಜುಂ ಪರವೇಜ್, ನರೇಗಾ ಆಯುಕ್ತ ಪವನ್ ಕುಮಾರ್ ಮಾಲಪಾಟಿ, ಪಂಚಾಯತ್ ರಾಜ್ ಆಯುಕ್ತೆ ಡಾ.ಅರುಂಧತಿ ಚಂದ್ರಶೇಖರ್, ಗ್ರಾಮೀಣ ನೀರು ಸರಬರಾಜು ಇಲಾಖೆ ನಿರ್ದೇಶಕ ಕೆ.ನಾಗೇಂದ್ರ ಪ್ರಸಾದ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.ಇದನ್ನೂ ಓದಿ: Delhi Exit Poll | ದೆಹಲಿಯಲ್ಲಿ ಆಪ್‌ ಹ್ಯಾಟ್ರಿಕ್‌ ಸಾಧನೆ: WeePreside ಸಮೀಕ್ಷೆ

  • ಜಿ.ಪಂ ಸಿಇಓ ಸಹಿ ನಕಲು ಮಾಡಿ ಎಂಜಿನಿಯರ್‌ಗೆ ನೇಮಕಾತಿ ಪತ್ರ – ಎಫ್‌ಡಿಎ ಮೇಲೆ ಎಫ್‌ಐಆರ್

    ಜಿ.ಪಂ ಸಿಇಓ ಸಹಿ ನಕಲು ಮಾಡಿ ಎಂಜಿನಿಯರ್‌ಗೆ ನೇಮಕಾತಿ ಪತ್ರ – ಎಫ್‌ಡಿಎ ಮೇಲೆ ಎಫ್‌ಐಆರ್

    ರಾಮನಗರ: ಜಿಲ್ಲಾ ಪಂಚಾಯತ್ (Zilla Panchayat) ಎಫ್‌ಡಿಎ (FDA) ಸುಳ್ಳು ಆದೇಶ ಪತ್ರ ಸೃಷ್ಟಿಸಿ ಗುತ್ತಿಗೆ ಆಧಾರದ ಮೇಲೆ ನರೇಗಾ ಎಂಜಿನಿಯರ್ ನೇಮಕ ಮಾಡಿಕೊಂಡಿರುವ ಘಟನೆ ರಾಮನಗರ (Ramanagara) ಜಿಲ್ಲಾ ಪಂಚಾಯತ್‌ನಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

    ರಾಮನಗರ ಜಿ.ಪಂ ಕಚೇರಿಯಲ್ಲಿ ಪ್ರಥಮ ದರ್ಜೆ ಸಹಾಯಕನಾಗಿ ಕೆಲಸ ಮಾಡುತ್ತಿರುವ ಅಭಿಷೇಕ್ ಎಂಬಾತ ಮಧು ಎಂಬ ವ್ಯಕ್ತಿಯನ್ನು ಗುತ್ತಿಗೆ ಆಧಾರದಲ್ಲಿ ಎಂಜಿನಿಯರ್ ಕೆಲಸಕ್ಕೆ ನೇಮಕ ಮಾಡುಕೊಳ್ಳುವ ವಿಷಯವಾಗಿ ಜಿ.ಪಂ ಸಿಇಓ ದಿಗ್ವಿಜಯ್ ಬೋಡ್ಕೆರವರ ನಕಲಿ ಸಹಿ ಮಾಡಿ ನಕಲಿ ಆದೇಶ ಪತ್ರ ನೀಡಿರೋದು ಬೆಳಕಿಗೆ ಬಂದಿದೆ. ಇದನ್ನೂ ಓದಿ: ಮಹಿಳೆಯರ ಒಳ ಉಡುಪು ಕದಿಯುತ್ತಿದ್ದ ಕಳ್ಳನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ ಸ್ಥಳೀಯರು

    ಕಳೆದ ಮೂರು ತಿಂಗಳಿನಿಂದ ಮಧು ನರೇಗಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ. ಈ ಕುರಿತು ಮಧು ನೇಮಕಾತಿ ಮೇಲೆ ಅನುಮಾನ ವ್ಯಕ್ತಪಡಿಸಿ, ಪರಿಶೀಲನೆ ನಡೆಸಿದ ವೇಳೆ ನಕಲಿ ಆದೇಶದ ಮೂಲಕ ನೇಮಕಾತಿ ಮಾಡಿಕೊಂಡಿರೋದು ಬಯಲಾಗಿದೆ. ಈ ಸಂಬಂಧ ರಾಮನಗರ ಟೌನ್ ಪೊಲೀಸ್ ಠಾಣೆಯಲ್ಲಿ ಎಫ್‌ಡಿಎ ಅಭಿಷೇಕ್ ಹಾಗೂ ಮಧು ಮೇಲೆ ಎಫ್‌ಐಆರ್ ದಾಖಲಾಗಿದೆ. ಇತ್ತ ದೂರು ದಾಖಲಾಗುತ್ತಿದ್ದಂತೆಯೇ ಆರೋಪಿ ಅಭಿಷೇಕ್ ತಲೆಮರೆಸಿಕೊಂಡಿದ್ದಾನೆ. ಆರೋಪಿ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ಇದನ್ನೂ ಓದಿ: ಬಾಣಂತಿಯರ ಸರಣಿ ಸಾವು ಕೇಸ್ – ಬಳ್ಳಾರಿ ಜಿಲ್ಲಾಸ್ಪತ್ರೆ ಮೇಲೆ ‘ಲೋಕಾ’ ದಾಳಿ

  • ನರೇಗಾ ಕಾಮಗಾರಿಯಲ್ಲಿ ಕೋಟ್ಯಂತರ ರೂ. ಗೋಲ್ಮಾಲ್- ಅಧಿಕಾರಿಗಳಿಬ್ಬರ ವಿರುದ್ಧ ಎಫ್‌ಐಆರ್

    ನರೇಗಾ ಕಾಮಗಾರಿಯಲ್ಲಿ ಕೋಟ್ಯಂತರ ರೂ. ಗೋಲ್ಮಾಲ್- ಅಧಿಕಾರಿಗಳಿಬ್ಬರ ವಿರುದ್ಧ ಎಫ್‌ಐಆರ್

    ರಾಯಚೂರು: ಜಿಲ್ಲೆಯ ದೇವದುರ್ಗ (Devadurga) ತಾಲೂಕಿನಲ್ಲಿ 2020-21 ರಿಂದ 2022-23ರವರೆಗೆ ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಅನುಷ್ಠಾನದಲ್ಲಿ ಮಹಾ ಲೂಟಿ ನಡೆದಿರುವುದು ವಿಶೇಷ ಸಾಮಾಜಿಕ ಲೆಕ್ಕ ಪರಿಶೋಧನಾ ಸಮಿತಿ ವರದಿಯಲ್ಲಿ ಬಯಲಾದ ಬೆನ್ನಲ್ಲೇ ದೇವದುರ್ಗ ತಾಲೂಕು ಪಂಚಾಯ್ತಿಯ (Taluk Panchayat) ಹಿಂದಿನ ಇಬ್ಬರು ಅಧಿಕಾರಿಗಳ ವಿರುದ್ಧ ಎಫ್‌ಐಆರ್ (FIR) ದಾಖಲಾಗಿದೆ.

    ಹಿಂದಿನ ಇಓ ಪಂಪಾಪತಿ ಹಿರೇಮಠ ಹಾಗೂ ಸಹಾಯಕ ನಿರ್ದೇಶಕ ಬಸಣ್ಣ ವಿರುದ್ಧ ಪ್ರಕರಣ ದಾಖಲಾಗಿದೆ. ನರೇಗಾ ಕಾಮಗಾರಿಗಳ ಒಟ್ಟು 49.29 ಕೋಟಿ ರೂ. ಸರ್ಕಾರದ ಹಣ ನಷ್ಟ ಮಾಡಿದ ಆರೋಪ ಹಿನ್ನೆಲೆ ದೇವದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದೇವದುರ್ಗ ತಾಲೂಕಿನ 33 ಗ್ರಾ.ಪಂ ನರೇಗಾ (NREGA) ಕಾಮಗಾರಿಯಲ್ಲಿ ಲೂಟಿಯಾಗಿರುವುದು ಬಯಲಾಗಿದ್ದು, ದೇವದುರ್ಗ ತಾ.ಪಂ ಸಹಾಯಕ ನಿರ್ದೇಶಕ ಅಣ್ಣಾರಾವ್ ದೂರು ದಾಖಲಿಸಿದ್ದಾರೆ. ಇದನ್ನೂ ಓದಿ: ಇಂದು ಬೆಂಗಳೂರಲ್ಲಿ 2ನೇ ದಿನದ ಕಂಬಳ – ಏನೇನಿದೆ ಕಾರ್ಯಕ್ರಮ?

    115 ಕಾಮಗಾರಿಗಳು ಅನುಷ್ಠಾನಗೊಳ್ಳದೇ ಇದ್ದರೂ 66.86 ಕೋಟಿ ರೂ. ಪಾವತಿ ಮಾಡಲಾಗಿದೆ. ಅಸ್ತಿತ್ವದಲ್ಲೇ ಇರದ ಮಾರುತೇಶ್ವರ ಎಂಟರ್ಪ್ರೈಸ್ ಸಾಮಗ್ರಿ ಖರೀದಿ ಅಂತ 102 ಕೋಟಿ ರೂ. ಪಾವತಿ ಮಾಡಿದ್ದು, 19.26 ಕೋಟಿ ರೂ. ಮೊತ್ತದ ಕಾಮಗಾರಿಗಳಿಗೆ ಕಡತಗಳೇ ಇಲ್ಲಾ. ಈ ಎಲ್ಲಾ ಗೋಲ್‌ಮಾಲ್‌ಗಳ ಹಿನ್ನೆಲೆ ಜಿಲ್ಲಾ ಪಂಚಾಯ್ತಿ ಸಿಇಓ ನಿರ್ದೇಶನ ಮೇರೆಗೆ ಎಫ್‌ಐಆರ್ ದಾಖಲಿಸಲಾಗಿದೆ. ಇದನ್ನೂ ಓದಿ: ಹಣ ಲಪಟಾಯಿಸಿದ್ರೂ ಬಿಡದಿ ಇನ್ಸ್‌ಪೆಕ್ಟರ್‌ ಸಸ್ಪೆಂಡ್ ಯಾಕಿಲ್ಲ?- ಭ್ರಷ್ಟನಿಗೆ ರಾಜಕೀಯ ರಕ್ಷಣೆ ಎಂದ ಮಾಜಿ ಶಾಸಕ

  • ವಯಸ್ಸಿಗೆ ಸವಾಲೆಸೆದ ನರೇಗಾ ಕೂಲಿಕಾರ – ತಲೆ ಕೆಳಗೆ, ಕಾಲು ಮೇಲೆ ಮಾಡಿ ನಿಲ್ಲುವ ವೃದ್ಧ

    ವಯಸ್ಸಿಗೆ ಸವಾಲೆಸೆದ ನರೇಗಾ ಕೂಲಿಕಾರ – ತಲೆ ಕೆಳಗೆ, ಕಾಲು ಮೇಲೆ ಮಾಡಿ ನಿಲ್ಲುವ ವೃದ್ಧ

    ಕೊಪ್ಪಳ: 68ರ ವಯಸ್ಸಿನಲ್ಲೂ ಯುವಕರಂತೆ ಕೆಲಸ ಮಾಡುವ ಜೊತೆಗೆ ಸಕಲಕಲಾವಲ್ಲಭ. ಇಳಿವಯಸ್ಸಲ್ಲೂ ಯುವಕರಂತೆ ಕೆಲಸ, ನರೇಗಾ ಕೆಲಸ ಮಾಡುವ ಈ ವೃದ್ಧ (Old Man) ಕೂಲಿಕಾರನ ಸಾಹಸ ನೋಡಿದರೆ ಎಲ್ಲರೂ ಅಚ್ಚರಿ ಪಡುತ್ತಾರೆ.

    ಕೊಪ್ಪಳದ (Koppala) ಗಂಗಾವತಿ ತಾಲೂಕಿನ ಹೇರೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೂಲಿಕಾರರಾದ (Laborer) ಯಲಪ್ಪ ಹೂಗಾರ (Yellappa Hugar) ಅವರಿಗೆ ವಯಸ್ಸು 68. ಆದರೆ ಅವರ ಕೆಲಸ, ಕ್ರಿಯಾಶೀಲತೆ ಯುವಕರಂತೆ ಇದೆ. 7 ಮಕ್ಕಳಿರೋ ಯಲ್ಲಪ್ಪ ಹೂಗಾರ ಅವರಿಗೆ ತಾವೇ ಸರಿಸಾಠಿಯಾಗಿದ್ದಾರೆ. ನರೇಗಾ ಕೂಲಿಕಾರರಿಗೆ ಬೇಸರವಾದಾಗ ಯಲ್ಲಪ್ಪ ಅವರು ಅಂತಿಪದ ಹಾಡಿ ಮನರಂಜಿಸುತ್ತಾರೆ. ಸಕಲಕಲಾವಲ್ಲಭರಾಗಿರುವ ಇವರು ಗುದ್ದಲಿ, ಸಲಾಕೆ ಹಿಡಿದು ಕೆಲಸ ಮಾಡುತ್ತಾರೆ. ಇವರು ಕೆಲಸಕ್ಕೂ ಸೈ, ಹಾಡಿಗೂ ಸೈ ಎನ್ನುತ್ತಾರೆ.

    68 ವಯಸ್ಸಾದರೂ ತಲೆ ಕೆಳಗೆ, ಕಾಲು ಮೇಲೆ ಮಾಡಿ ನಿಮಿಷಕ್ಕೂ ಹೆಚ್ಚು ಕಾಲ ನಿಂತು ಯುವಕರನ್ನೇ ನಾಚಿಸುತ್ತಾರೆ ಯಲ್ಲಪ್ಪ. ನರೇಗಾ ಕಾಮಗಾರಿ ಸ್ಥಳದಲ್ಲಿ ತಲೆ ಕೆಳಗೆ ಮಾಡಿ, ಕಾಲು ಮೇಲೆ ಮಾಡಿದ ಸಾಹಸ ನೋಡಿ ಗ್ರಾಪಂ ಅಭಿವೃದ್ಧಿ ಅಧಿಕಾರಿ ರವಿಶಾಸ್ತ್ರಿ ಹಾಗೂ ಎಲ್ಲ ಕೂಲಿಕಾರರು ಅವರಿಗೆ ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸಿದ್ದಾರೆ.

    ಹೇರೂರು ಗ್ರಾಮದಲ್ಲಿ ನಿತ್ಯ ಕೂಲಿ ಕೆಲಸ ಮಾಡುತ್ತಾ, ಕೆಲಸ ಇಲ್ಲದಿದ್ದಾಗ ನರೇಗಾ ಕೆಲಸಕ್ಕೆ ಬಂದು ಎಲ್ಲರಂತೆ ಕೆಲಸ ಮಾಡುತ್ತಾ ಸ್ವಾವಲಂಬಿ ಬದುಕು ಕಟ್ಟಿಕೊಂಡು ತನ್ನ ವಯಸ್ಸಿಗೆ ಸವಾಲು ಎಸೆದಿದ್ದಾರೆ ಯಲ್ಲಪ್ಪ ಹೂಗಾರ. ಇದನ್ನೂ ಓದಿ: ಬಿಜೆಪಿಯವರು ಯಾರೂ ಮನೆಯಲ್ಲಿ ಒಂದು ಆಕಳು ಕಟ್ಟಿಲ್ಲ, ಮಾತಾಡ್ತಾರೆ ಅಷ್ಟೇ: ವಿನಯ್ ಕುಲಕರ್ಣಿ

    ಇಳಿವಯಸ್ಸಿನಲ್ಲೂ ಕುಗ್ಗದ ಉತ್ಸಾಹ:
    ‘ನನಗೆ 68 ವಯಸ್ಸು, ನಿತ್ಯ ದುಡಿಯುವೆ, ಊರಲ್ಲಿ ಕೆಲಸ ಇಲ್ಲದಿದ್ದಾಗ ನರೇಗಾ ಕೆಲಸ ಮಾಡುತ್ತಾ ಸ್ವಾವಲಂಬಿ ಬದುಕು ನಡೆಸುತ್ತಿರುವೆ. ಆರೋಗ್ಯವೇ ಮಹಾಭಾಗ್ಯ ಎಲ್ಲರೂ ಆರೋಗ್ಯ ಕಾಪಾಡಿಕೊಳ್ಳಬೇಕು. ನಾನು ಈ ವಯಸ್ಸಲ್ಲೂ ಅರ್ಧ ಗಂಟೆಯಲ್ಲಿ 10ಕ್ಕೂ ಹೆಚ್ಚು ತೆಂಗಿನ ಮರ ಏರಿ ಇಳಿಯಬಲ್ಲೆ. ನಿಮಿಷಕ್ಕೂ ಹೆಚ್ಚು ಕಾಲ ತಲೆ ಕೆಳಗೆ, ಕಾಲು ಮೇಲೆ ಮಾಡಿ ನಿಲ್ಲಬಲ್ಲೆ ಎನ್ನುತ್ತಾರೆ ಯಲ್ಲಪ್ಪ.

    ಯಲ್ಲಪ್ಪ ಅವರ ಸಾಹಸ ಹಾಗೂ ಸ್ವಾವಲಂಬಿ ಜೀವನಕ್ಕೆ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮಹಾಂತಗೌಡ ಪಾಟೀಲ್ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹೇರೂರು ಗ್ರಾಪಂ ನರೇಗಾ ಕೂಲಿಕಾರರಾದ ಯಲ್ಲಪ್ಪ ಹೂಗಾರ ಅವರು ಸದ್ಯ ನಾಗಲಾಪುರ ಕೆರೆ ಹೂಳೆತ್ತುವ ಕೆಲಸ ಮಾಡುತ್ತಿದ್ದಾರೆ. ಇದನ್ನೂ ಓದಿ: ಕುಸಿದೇ ಬಿಡ್ತು 1,700 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿದ್ದ ಸೇತುವೆ

  • ಪಬ್ಲಿಕ್ ಟಿವಿ ವರದಿ ಬೆನ್ನಲ್ಲೇ ನರೇಗಾ ಬಿಲ್ ಪಾವತಿಗೆ ಲಂಚಕ್ಕೆ ಬೇಡಿಕೆಯಿಟ್ಟಿದ್ದ ತಾಂತ್ರಿಕ ಸಹಾಯಕ ವಜಾ

    ಪಬ್ಲಿಕ್ ಟಿವಿ ವರದಿ ಬೆನ್ನಲ್ಲೇ ನರೇಗಾ ಬಿಲ್ ಪಾವತಿಗೆ ಲಂಚಕ್ಕೆ ಬೇಡಿಕೆಯಿಟ್ಟಿದ್ದ ತಾಂತ್ರಿಕ ಸಹಾಯಕ ವಜಾ

    ಬೀದರ್: ಪಬ್ಲಿಕ್ ಟಿವಿ ವರದಿ ಬೆನ್ನಲ್ಲೇ ನರೇಗಾ ಯೋಜನೆಯಡಿ ಕೈಗೊಂಡ ಕಾಮಗಾರಿಯ ಬಿಲ್ ಪಾವತಿಗೆ ಲಂಚಕ್ಕೆ (Bribery) ಬೇಡಿಕೆಯಿಟ್ಟ ತಾಂತ್ರಿಕ ಸಹಾಯಕನನ್ನು (Technical Assistant) ಕೆಲಸದಿಂದ ವಜಾ ಮಾಡಲಾಗಿದೆ.

    ಬಸವಕಲ್ಯಾಣ ತಾ.ಪಂ. ತಾಂತ್ರಿಕ ಸಹಾಯಕ ಸೂರ್ಯಕಾಂತ್ ಪಾಟೀಲ್‌ನನ್ನು ಕೆಲಸದಿಂದ ವಜಾಗೊಳಿಸಿ ಬೀದರ್ (Bidar) ಜಿಲ್ಲಾ ಪಂಚಾಯತ್ ಸಿಇಒ ಶಿಲ್ಪಾ ಎಂ ಆದೇಶ ನೀಡಿದ್ದಾರೆ.

    ನರೇಗಾ ಯೋಜನೆಯಡಿ ಕೈಗೊಂಡ ಕಾಮಗಾರಿಯ ಬಿಲ್ ಪಾವತಿಗೆ ಲಂಚಕ್ಕೆ ಬೇಡಿಕೆಯಿಟ್ಟಿದ್ದಾರೆ ಎಂದು ಎತ್ತುಗಳ ಸಮೇತ ತಾ.ಪಂ.ಗೆ ಬಂದು ರೈತರೊಬ್ಬರು ಆರೋಪ ಮಾಡಿದ್ದರು. ಈ ಸುದ್ದಿ ಪಬ್ಲಿಕ್ ಟಿವಿಯಲ್ಲಿ ಬಿತ್ತರವಾಗಿರುವ ಹಿನ್ನೆಲೆ ಅಧಿಕಾರಿಗಳಿಂದ ವರದಿ ಪರಿಶೀಲನೆ ಮಾಡಲಾಗಿತ್ತು. ರೈತನ ಬಿಲ್ ಪಾವತಿ ಮಾಡದೆ ಮೇಲ್ನೋಟಕ್ಕೆ ಕರ್ತವ್ಯ ನಿರ್ಲಕ್ಷ್ಯ ತೊರಿದ್ದು ಕಂಡುಬಂದಿದೆ. ಹೀಗಾಗೀ ತಾಂತ್ರಿಕ ಸಹಾಯಕ ಸೂರ್ಯಕಾಂತ್ ಪಾಟೀಲ್‌ನನ್ನು ಸೇವೆಯಿಂದ ವಜಾ ಮಾಡಲಾಗದೆ ಎಂದು ಜಿ.ಪಂ. ಸಿಇಒ ಆದೇಶಿಸಿದ್ದಾರೆ. ಇದನ್ನೂ ಓದಿ: ವಿಧಾನಸಭೆ ಚುನಾವಣೆ ದಿನಾಂಕ ಪ್ರಕಟ – ಜಿಲ್ಲಾ ಪ್ರವಾಸ ಮೊಟಕುಗೊಳಿಸಿ ಸಿಎಂ ಬೆಂಗಳೂರಿಗೆ ವಾಪಸ್

     

    ನರೇಗಾ ಕಾಮಗಾರಿ ಬಿಲ್ ಪಾವತಿ ಮಾಡಲು ರೈತನ ಬಳಿ ಲಂಚ ಕೇಳಿದ್ದ ತಾಲೂಕು ಪಂಚಾಯತ್ ಅಧಿಕಾರಿಗೆ ಲಂಚ ಕೊಡಲು ಹಣವಿಲ್ಲದೆ ತನ್ನ 2 ಎತ್ತುಗಳನ್ನು ನೀಡಲು ರೈತ ಮುಂದಾಗಿದ್ದ. ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಬಗದುರಿ ಗ್ರಾಮದ ರೈತ ಪ್ರಶಾಂತ್ ಬಿರಾದಾರ ಲಂಚ ರೂಪದಲ್ಲಿ ತನ್ನ 2 ಎತ್ತುಗಳನ್ನು ಕೊಡಲು ತಾ.ಪಂ. ಕಚೇರಿಗೆ ಬಂದಿದ್ದ. ಎತ್ತುಗಳ ಸಮೇತ ಬಂದಿದ್ದ ರೈತನನ್ನು ಕಂಡು ಅಧಿಕಾರಿಗಳು ಶಾಕ್ ಆಗಿದ್ದರು. ಇದನ್ನೂ ಓದಿ: ರಾಜ್ಯ ವಿಧಾನಸಭೆ ಚುನಾವಣೆಗೆ ಇಂದೇ ಮುಹೂರ್ತ ಫಿಕ್ಸ್

  • ನರೇಗಾ ಬಿಲ್ ಪಾವತಿಗೆ ಗ್ರಾ.ಪಂ ಅಧಿಕಾರಿಯಿಂದ ಲಂಚಕ್ಕೆ ಬೇಡಿಕೆ- ಹಣವಿಲ್ಲದೆ ಎತ್ತುಗಳನ್ನು ನೀಡಲು ಮುಂದಾದ ರೈತ

    ನರೇಗಾ ಬಿಲ್ ಪಾವತಿಗೆ ಗ್ರಾ.ಪಂ ಅಧಿಕಾರಿಯಿಂದ ಲಂಚಕ್ಕೆ ಬೇಡಿಕೆ- ಹಣವಿಲ್ಲದೆ ಎತ್ತುಗಳನ್ನು ನೀಡಲು ಮುಂದಾದ ರೈತ

    ಬೀದರ್: ನರೇಗಾ (NREGA) ಬಿಲ್ ಪಾವತಿಸಲು ಲಂಚಕ್ಕೆ (Bribe) ಬೇಡಿಕೆಯನ್ನಿಟ್ಟ ಗ್ರಾಮ ಪಂಚಾಯತಿ ಅಧಿಕಾರಿಗೆ ನೀಡಲು ಹಣವಿಲ್ಲದೆ ತನ್ನ ಎರಡು ಎತ್ತುಗಳನ್ನು (Ox) ಲಂಚದ ರೂಪದಲ್ಲಿ ನೀಡಲು ರೈತ ಮುಂದಾದ ಘಟನೆ ಬೀದರ್ (Bidar) ಜಿಲ್ಲೆಯ ಬಸವಕಲ್ಯಾಣ ಪಟ್ಟಣದ ತಾಲೂಕು ಪಂಚಾಯತ್ ಕಚೇರಿ ಬಳಿ ನಡೆದಿದೆ.

    ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಬಗದೂರಿ ಗ್ರಾಮದ ರೈತ ಪ್ರಶಾಂತ ಬಿರಾದಾರ ತನ್ನ ಎರಡು ಎತ್ತುಗಳನ್ನು ಲಂಚದ ರೂಪದಲ್ಲಿ ನೀಡಲು ಮುಂದಾಗಿ ಅಧಿಕಾರಿಗಳಿಗೆ ಶಾಕ್ ನೀಡಿದ್ದಾರೆ. ಉದ್ಯೋಗ ಖಾತರಿ ಯೋಜನೆಯಲ್ಲಿ ರೈತನ ಜಮೀನಿಗೆ ತಡೆಗೋಡೆ ನಿರ್ಮಾಣ ಮಾಡಲಾಗಿದ್ದು, ಈ ಕಾಮಗಾರಿಗೆ ಒಂದು 1 ಲಕ್ಷ ರೂ. ಅನುದಾನ ಮಂಜೂರಾಗಿತ್ತು. 1 ಲಕ್ಷ ರೂ. ಅನುದಾನದ ಪೈಕಿ 55 ಸಾವಿರ ಹಣ ಮಾತ್ರ ಅಧಿಕಾರಿಗಳು ನೀಡಿದ್ದು, ಉಳಿದ 45 ಸಾವಿರ ಹಣ ನೀಡಲು ಗ್ರಾ.ಪಂ ಅಧಿಕಾರಿ (Grampanchayat Officer) ಲಂಚಕ್ಕೆ ಬೇಡಿಕೆಯಿಟ್ಟಿದ್ದಾರೆ. ಇದರಿಂದ ಬೇಸತ್ತ ರೈತ ತನ್ನ ಎರಡು ಎತ್ತುಗಳನ್ನು ಲಂಚದ ರೂಪದಲ್ಲಿ ನೀಡಲು ಮುಂದಾಗಿದ್ದಾರೆ. ಇದನ್ನೂ ಓದಿ: ಡಿಸ್ನಿಯಲ್ಲೂ ಶುರುವಾಯ್ತು ಜಾಬ್ ಕಟ್ – ಮುಂದಿನ 4 ದಿನದಲ್ಲಿ 7,000 ಉದ್ಯೋಗಿಗಳು ವಜಾ 

    ರೈತ ತನ್ನ ಎರಡು ಎತ್ತುಗಳ ಸಮೇತ ತಾಲೂಕು ಪಂಚಾಯತ್‌ಗೆ ಆಗಮಿಸಿದ್ದು, ಲಂಚದ ರೂಪದಲ್ಲಿ ಈ ಎರಡು ಎತ್ತುಗಳನ್ನು ತೆಗೆದುಕೊಂಡು ಉಳಿದ 45 ಸಾವಿರ ಹಣ ನೀಡಿ ಎಂದು ಪಟ್ಟು ಹಿಡಿದಿದ್ದಾರೆ. ಈ ಘಟನೆಯಿಂದಾಗಿ ಕೆಲ ಕಾಲ ತಾ.ಪಂ ಅಧಿಕಾರಿಗಳಿಗೆ ಮುಜುಗರ ಉಂಟಾಗಿದ್ದು, ಸುದ್ದಿ ತಿಳಿದು ತಾ.ಪಂ ಎಡಿ ಸಂತೋಷ್ ಚವ್ಹಾಣ್ ಸ್ಥಳಕ್ಕೆ ಬಂದು ರೈತನಿಗೆ ಬಿಲ್ ಪಾವತಿಸುವುದಾಗಿ ಭರವಸೆ ನೀಡಿ ರೈತನನ್ನು ಮನೆಗೆ ಕಳುಹಿಸಿದ್ದಾರೆ. ಇದನ್ನೂ ಓದಿ: ಹುಬ್ಬಳ್ಳಿ ಪ್ರತಿಷ್ಠಿತ ಉದ್ಯಮಿ ಗಡಿಪಾರು!

  • ನರೇಗಾ ಕಾಮಗಾರಿ ಬಿಲ್ ಪಾಸ್ ಮಾಡಲು ಕಮಿಷನ್ ಕೊಡಿ – PDO ಆಡಿಯೋ ವೈರಲ್

    ನರೇಗಾ ಕಾಮಗಾರಿ ಬಿಲ್ ಪಾಸ್ ಮಾಡಲು ಕಮಿಷನ್ ಕೊಡಿ – PDO ಆಡಿಯೋ ವೈರಲ್

    ರಾಮನಗರ: ನರೇಗಾ ಕಾಮಗಾರಿ ಬಿಲ್ ಪಾಸ್ ಮಾಡಲು ಕಮಿಷನ್ ನೀಡುವಂತೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ(PDO) ಒತ್ತಾಯಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

    ಚನ್ನಪಟ್ಟಣ ತಾಲೂಕಿನ ಬಿ.ವಿ.ಹಳ್ಳಿ ಗ್ರಾ.ಪಂ ಪಿಡಿಒ ಶೋಭಾ ಕಾಮಗಾರಿ ಬಿಲ್ ಪಾಸ್ ಮಾಡಲು 20% ಕಮಿಷನ್(Commission) ಕೊಡುವಂತೆ ಕೇಳಿರುವ ಆಡಿಯೋ ವೈರಲ್ ಆಗಿದೆ. ಇದನ್ನೂ ಓದಿ: ಬಿಜೆಪಿ ಹೈಕಮಾಂಡ್‌ನಿಂದ ಗುಪ್ತ ಆಪರೇಷನ್‌ 23

    ಕಾಮಗಾರಿ ನಡೆಸಿರುವ ವ್ಯಕ್ತಿ ಹಾಗೂ ಪಿಡಿಓ ಶೋಭಾ ನಡುವಿನ ಸಂಭಾಷಣೆ ಎನ್ನಲಾದ ಆಡಿಯೋ(Audio) ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಆಡಿಯೋದಲ್ಲಿ ಅಧ್ಯಕ್ಷರಿಗೆ, ಇಂಜಿನಿಯರ್, ಇಓ, ಡಿಎಸ್ ಹಾಗೂ ಕಚೇರಿ ಸಿಬ್ಬಂದಿಗೂ ಪರ್ಸೆಂಟೇಜ್ ನೀಡಬೇಕು. ಹಾಗಾಗಿ 20% ಕಮಿಷನ್ ನೀಡುವಂತೆ ಪಿಡಿಓ ಚೌಕಾಸಿ ನಡೆಸಿದ್ದಾರೆ ಎಂಬ ಆರೋಪ ಬಂದಿದೆ. ಪಿಡಿಓ ವಿರುದ್ಧ ಕ್ರಮವಹಿಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ನೆರೆಹೊರೆಯವರ ಗಲಾಟೆ – ಮಕ್ಕಳ ಮೇಲೆ ಹಲ್ಲೆ ತಡೆಯಲು ಹೋದ ತಾಯಿಯ ಕೊಲೆ

    ನೆರೆಹೊರೆಯವರ ಗಲಾಟೆ – ಮಕ್ಕಳ ಮೇಲೆ ಹಲ್ಲೆ ತಡೆಯಲು ಹೋದ ತಾಯಿಯ ಕೊಲೆ

    ಚಿಕ್ಕಬಳ್ಳಾಪುರ: ನರೇಗಾ ಕಾಮಗಾರಿ ಮಾಡಿ ಅಕ್ರಮ ಬಿಲ್ ಮಾಡಿಕೊಳ್ಳುತ್ತಿದ್ದಾರೆ ಎಂದು ಹಿರಿಯ ಅಧಿಕಾರಿಗಳು ಹಾಗೂ ಶಾಸಕರಿಗೆ ದೂರು ನೀಡಿದ್ದಾರೆ ಎಂಬ ಅನುಮಾನಕ್ಕೆ ಅಕ್ಕ ಪಕ್ಕದ ಮನೆಯವರ ನಡುವೆ ಗಲಾಟೆ ನಡೆದಿದೆ. ಈ ವೇಳೆ ಮಕ್ಕಳ ಮೇಲೆ ಹಲ್ಲೆ ತಡೆಯಲು ಮುಂದಾದ ತಾಯಿ ಕೊಲೆಯಾಗಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಚಿಕ್ಕಮುದ್ದೇನಹಳ್ಳಿ ಗ್ರಾಮದಲ್ಲಿ ನಡೆದಿದೆ.

    ಗ್ರಾಮದ ನಿವಾಸಿ ಗೌರಮ್ಮ(60) ಮೃತ ಮಹಿಳೆ. ಗ್ರಾಮದ ಹನುಮಂತರಾಯಪ್ಪ ಮಾಜಿ ಗ್ರಾಮ ಪಂಚಾಯಿತಿ ಸದಸ್ಯನಾಗಿದ್ದು, ಗ್ರಾಮ ವ್ಯಾಪ್ತಿಯಲ್ಲಿ ನರೇಗಾ ಕಾಮಗಾರಿಗಳನ್ನು ಮಾಡಿಸುತ್ತಿದ್ದರು. ಕಾಮಗಾರಿ ಮಾಡಿದ ತದನಂತರ ನರೇಗಾ ಜಾಬ್ ಕಾರ್ಡ್ ಇರುವ ಗ್ರಾಮಸ್ಥರ ಖಾತೆಗೆ ಬಂದ ಹಣವನ್ನು ವಸೂಲಿ ಮಾಡಿಕೊಳ್ಳುತ್ತಿದ್ದರು ಎನ್ನಲಾಗಿದೆ. ಇದನ್ನೂ ಓದಿ: 7 ಭ್ರೂಣಗಳ ಪತ್ತೆ ಪ್ರಕರಣ – ಭ್ರೂಣಗಳನ್ನು ಎಸೆದಿದ್ದ ಆಸ್ಪತ್ರೆ ಸೀಜ್ ಮಾಡಿದ DHO

    ಈ ವಿಚಾರದ ಬಗ್ಗೆ ಗೌರಮ್ಮನ ಮಕ್ಕಳು ಹಿರಿಯ ಅಧಿಕಾರಿಗಳು ಹಾಗೂ ಶಾಸಕ ವೆಂಕಟರಮಣಯ್ಯನಿಗೆ ದೂರು ನೀಡಿದ್ದಾರೆ ಎಂದು ಅನುಮಾನಗೊಂಡು ಅಕ್ಕಪಕ್ಕದ ಮನೆಯವರು ಅವರ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ. ಚನ್ನರಾಯಪ್ಪ, ಸುಧಾಕರ್, ಮಾರುತಿ ಹಾಗೂ ಗಂಗಮ್ಮನ ಮಕ್ಕಳ ನಡುವೆ ಗಲಾಟೆ ನಡೆದಿದ್ದು, ಈ ವೇಳೆ ತನ್ನ ಮಕ್ಕಳ ಪರವಾಗಿ ಹಲ್ಲೆ ತಡೆಯಲು ಗೌರಮ್ಮ ಧಾವಿಸಿದ್ದರು. ಬಳಿಕ ಅವರೂ ಹಲ್ಲೆಗೆ ಒಳಗಾಗಿ ಕುಸಿದುಬಿದ್ದಿದ್ದು, ಆಸ್ಪತ್ರೆಗೆ ಸಾಗಿಸುವ ವೇಳೆ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ. ಇದನ್ನೂ ಓದಿ: ಜೈಲಿನಲ್ಲಿದ್ದ 9 ಕೈದಿಗಳಿಗೆ ಕೊರೊನಾ ಪಾಸಿಟಿವ್

    ಈ ಸಂಬಂಧ ಹನುಮಂತರಾಯಪ್ಪ, ಮಾರುತಿ, ಸುಧಾಕರ್, ಚಿನ್ನಕ್ಕ ವಿರುದ್ಧ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳು ಗ್ರಾಮ ತೊರೆದು ತಲೆಮರೆಸಿಕೊಂಡಿದ್ದಾರೆ. ಮೃತದೇಹವನ್ನು ದೊಡ್ಡಬಳ್ಳಾಪುರ ಸಾರ್ವಜನಿಕ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಿದ್ದು, ಜಿಲ್ಲಾಧಿಕಾರಿ ಶ್ರೀನಿವಾಸ್, ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

    Live Tv