– ರೈತರ ಜೊತೆ ಮಾತನಾಡುತ್ತೇವೆ
ನವದೆಹಲಿ: ನೂತನ ಮೂರು ಕೃಷಿ ಕಾನೂನುಗಳನ್ನು ಯಾವುದೇ ಕಾರಣಕ್ಕೂ ಹಿಂಪಡೆಯಲ್ಲ. ಈ ವಿಷಯವಾಗಿ ರೈತರ ಜೊತೆ ಮಾತುಕತೆ ನಡೆಸುತ್ತೇವೆ ಎಂದು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಹೇಳಿದ್ದಾರೆ.
ಶುಕ್ರವಾರ ಟ್ವಿಟರ್ ನಲ್ಲಿ ತೋಮರ್ ವೀಡಿಯೋ ಶೇರ್ ಮಾಡಿಕೊಂಡಿದ್ದಾರೆ. ಸರ್ಕಾರ ಕೃಷಿ ಕಾನೂನು ಹಿಂಪಡೆಯುವ ಬದಲಾಗಿ, ರೈತರ ಜೊತೆ ಅರ್ಧ ರಾತ್ರಿಯಲ್ಲಿ ಮಾತುಕತೆ ನಡೆಸಲು ಸಿದ್ಧವಿದೆ. ಯಾವುದೇ ರೈತ ಸಂಘಟನೆಯ ಪ್ರಮುಖರು ಮಾತುಕತೆ ಬಂದ್ರೆ ನಾವು ಸ್ವಾಗತಿಸುತ್ತೇವೆ ಎಂದು ಹೇಳಿರುವ ವೀಡಿಯೋ ಹಂಚಿಕೊಂಡಿದ್ದಾರೆ.
11 ಬಾರಿ ಸಭೆ:
ಕೇಂದ್ರ ಸರ್ಕಾರ ಜಾರಿಗೆ ತಂದಿರುವ ನೂತನ ಮೂರು ಕೃಷಿ ಕಾನೂನುಗಳನ್ನು ವಿರೋಧಿಸಿ ರೈತರು ದೆಹಲಿ ಗಡಿಭಾಗದಲ್ಲಿ ಕಳೆದ ಆರು ತಿಂಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಇದವರೆಗೂ ಸರ್ಕಾರ ಮತ್ತು ರೈತರ ನಡುವೆ 11 ಬಾರಿ ನಡೆಸಿದ ಸಭೆ ವಿಫಲವಾಗಿವೆ. ಜನವರಿ 22ರಂದು ಕೊನೆಯದಾಗಿ ರೈತರು ಕೇಂದ್ರದ ಜೊತೆ ಚರ್ಚೆ ನಡೆಸಿದ್ದರು. ಜನವರಿ 26ರ ಘಟನೆ ಬಳಿಕ ಯಾವುದೇ ಮಾತುಕತೆ ನಡೆದಿಲ್ಲ.

ಸುಪ್ರಿಂ ತಡೆ:
ಕೇಂದ್ರ ಸರ್ಕಾರದ ನೂತನ ಮೂರು ಕೃಷಿ ಕಾಯ್ದೆ ಜಾರಿಗೆ ಸುಪ್ರೀಂಕೋರ್ಟ್ ತಡೆ ನೀಡಿದೆ. ಸಮಸ್ಯೆ ಇತ್ಯರ್ಥಕ್ಕಾಗಿ ನಾಲ್ವರು ಸದಸ್ಯರ ಸಮಿತಿ ರಚನೆಗೆ ಸುಪ್ರೀಂಕೋರ್ಟ್ ಸೂಚಿಸಿದೆ. ಸುಪ್ರೀಂಕೋರ್ಟ್ ಸಮಿತಿಯಲ್ಲಿ ಧನವಂತ್ ಶೇಖಾವತ್, ಜೀತೇಂದ್ರ ಸಿಂಗ್ ಮಾನ್, ಅಶೋಕ್ ಗುಲಾಟಿ ಮತ್ತು ಡಾ.ಪ್ರಮೋದ್ ಕುಮಾರ್ ಇರಲಿದ್ದಾರೆ. ಇದನ್ನೂ ಓದಿ: ದೆಹಲಿಯಲ್ಲಿ ಪೊಲೀಸರನ್ನು ಅಟ್ಟಾಡಿಸಿದ ಉದ್ರಿಕ್ತರು – 10 ಅಡಿ ಆಳದ ಕೋಟೆಯಿಂದ ಜಿಗಿದು ಬಚಾವ್

ರಾಕೇಶ್ ಟಿಕಾಯತ್ ಎಚ್ಚರಿಕೆ:
ರೈತರು ದೆಹಲಿಯ ಗಡಿಯಿಂದ ಹಿಂದಿರುಗಲ್ಲ. ಆದ್ರೆ ಒಂದು ಷರತ್ತಿನ ಮೇಲೆ ರೈತರು ಹಿಂದಿರಗಬಹುದು. ಅದು ಮೂರು ಕಾನೂನುಗಳನ್ನ ರದ್ದುಗೊಳಿಸಿ, ಎಂಎಸ್‍ಪಿ ಗೆ ಕಾನೂನು ರೂಪಿಸಿದ ದಿನ. ಈ ಆಂದೋಲನದಲ್ಲಿ ದೇಶದ ರೈತರು ಒಗ್ಗಟ್ಟಾಗಿದ್ದಾರೆ. ಔಷಧಿಗಳ ರೀತಿಯಲ್ಲಿ ಆಹಾರವನ್ನ ಕಾಳಸಂತೆಗೆ ತಲುಪಲು ಬಿಡಲ್ಲ ಎಂದು ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಯಾವುದೇ ರಾಜ್ಯದಲ್ಲಿ ಆಂದೋಲದಲ್ಲಿ ಭಾಗಿಯಾದ ರೈತರ ವಿರುದ್ಧ ಪ್ರಕರಣ ದಾಖಲಿಸೋದು, ತನಿಖೆ ನಡೆಸುವ ಪ್ರಕ್ರಿಯೆ ಆರಂಭವಾದ್ರೆ ನಮ್ಮ ಹೋರಾಟ ತೀವ್ರ ಸ್ವರೂಪ ಪಡೆದುಕೊಳ್ಳಲಿದೆ ಎಂದು ರೈತ ಮುಖಂಡ ರಾಕೇಶ್ ಟಿಕಾಯತ್ ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ರೈತನಾಯಕ ರಾಕೇಶ್ ಟಿಕಾಯತ್ 80 ಕೋಟಿ ಆಸ್ತಿಯ ಒಡೆಯ