Tag: ನರಸಿಂಹ

  • ಕ್ರಷರ್ ದುರಂತಕ್ಕೂ ರಾಜಕೀಯಕ್ಕೂ ಇದ್ಯಾ ನಂಟು? – ಜೆಡಿಎಸ್ ಮುಖಂಡ ನರಸಿಂಹ ಪೊಲೀಸರ ವಶಕ್ಕೆ

    ಕ್ರಷರ್ ದುರಂತಕ್ಕೂ ರಾಜಕೀಯಕ್ಕೂ ಇದ್ಯಾ ನಂಟು? – ಜೆಡಿಎಸ್ ಮುಖಂಡ ನರಸಿಂಹ ಪೊಲೀಸರ ವಶಕ್ಕೆ

    ಶಿವಮೊಗ್ಗ: ಜಿಲ್ಲೆಯ ಹುಣಸೋಡು ಗ್ರಾಮದಲ್ಲಿ ಗುರುವಾರ ರಾತ್ರಿ ಸಂಭವಿಸಿದ ಕ್ರಷರ್ ದುರಂತಕ್ಕೆ ಸಂಬಂಧಿಸಿದಂತೆ ಇದೀಗ ಪೊಲೀಸರು ಜೆಡಿಎಸ್ ಮುಖಂಡ ನರಸಿಂಹರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

    ನಿನ್ನೆ ರಾತ್ರಿ ಹುಣಸೋಡು ಗ್ರಾಮದಲ್ಲಿ ಒಂದು ಲಾರಿಯಲ್ಲಿ ತಂದಿಟ್ಟುಕೊಂಡಿದ್ದ ಸುಮಾರು 50 ಡಬ್ಬಗಳಲ್ಲಿದ್ದ ಜಿಲೆಟಿನ್ ಕಡ್ಡಿಗಳು ಸ್ಫೋಟಗೊಂಡು ಕಾರ್ಮಿಕರು ಮೃತಪಟ್ಟಿದ್ದಾರೆ. ಈ ಅವಘಡಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಆರಂಭಿಸಿದ್ದು, ಇದೀಗ ಶಿವಮೊಗ್ಗ ಗ್ರಾಮಾಂತರ ಪೊಲೀಸರು ಜೆಡಿಎಸ್ ಮುಖಂಡ ನರಸಿಂಹ ವಶಕ್ಕೆ ಪಡೆದಿದ್ದಾರೆ. ಅಲ್ಲದೆ ಗಣಿಗಾರಿಕೆಯಲ್ಲಿ ನರಸಿಂಹರವರ ಪಾಲುದಾರಕೆ ಇದೆಯಾ ಎಂಬುದರ ಕುರಿತು ವಿಚಾರಣೆ ನಡೆಸುತ್ತಿದ್ದಾರೆ. ಈ ಎಲ್ಲಾ ಬೆಳವಣಿಗೆಗಳನ್ನು ಗಮನಿಸುತ್ತಿದ್ದರೆ ಶಿವಮೊಗ್ಗ ಕ್ರಷರ್ ದುರಂತಕ್ಕೂ ರಾಜಕೀಯಕ್ಕೂ ನಂಟು ಇದೆಯಾ ಎಂಬ ಅನುಮಾನ ವ್ಯಕ್ತವಾಗುತ್ತಿದೆ.

    ಅಲ್ಲದೆ ದುರಂತಕ್ಕೆ ಸಂಬಂಧಿಸಿದಂತೆ ಕ್ರಷರ್ ಮಾಲೀಕ ಸುಧಾಕರ್ ನನ್ನು ಪೊಲೀಸರು ಈಗಾಗಲೇ ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಗಣಿಗಾರಿಕೆಗೆ ಭೂಮಿ ಕೊಟ್ಟಿರುವ ಅನಿಲ್ ಕುಲಕರ್ಣಿಯನ್ನು ಕೂಡ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

    ಗುರುವಾರ ರಾತ್ರಿ ನಡೆದ ಸುಮಾರು 15 ಮಂದಿ ಮೃತ ಪಟ್ಟಿದ್ದು, ದುರಂತದಲ್ಲಿ ಕಾರ್ಮಿಕರ ದೇಹಗಳು ಛಿದ್ರಛಿದ್ರವಾಗಿದೆ. ಅವರಲ್ಲಿ ಬೆಳಗ್ಗೆ 7 ಮಂದಿಯ ಶವವನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಈ ಕುರಿತಂತೆ ಪೊಲೀಸರು ಹೆಚ್ಚಿನ ತನಿಖೆಯಲ್ಲಿ ಕಾರ್ಯನಿರತರಾಗಿದ್ದಾರೆ.

  • ಜಲಾಸುರನನ್ನು ಸಂಹರಿಸಿದ ಉಗ್ರನರಸಿಂಹ – ಬೀದರ್‌ನಲ್ಲಿದೆ ಪವಿತ್ರ ಝೀರ

    ಜಲಾಸುರನನ್ನು ಸಂಹರಿಸಿದ ಉಗ್ರನರಸಿಂಹ – ಬೀದರ್‌ನಲ್ಲಿದೆ ಪವಿತ್ರ ಝೀರ

    ಭಾರತದ 22ನೇ ಸ್ವಚ್ಛನಗರ ಮತ್ತು ಕರ್ನಾಟಕ ರಾಜ್ಯದ 5ನೇ ಸ್ವಚ್ಛ ನಗರ, ಬೆಂಗಳೂರಿನಿಂದ ಸುಮಾರು 700 ಕಿಮೀ ದೂರದಲ್ಲಿರುವ ಬೀದರ್ ಜಿಲ್ಲೆಗೆ ನಿಮ್ಮನ್ನ ಕರೆದುಕೊಂಡು ಹೋಗ್ತೀನಿ. ಬಿದರಿ ಕರಕುಶಲತೆಯಿಂದ ಇದಕ್ಕೆ ಬೀದರ್ ಎಂಬ ಹೆಸರು ಬಂದಿದೆ. ಈ ಕಲೆ ಪರ್ಶಿಯಾ ದೇಶದಿಂದ 14ನೇ ಶತಮಾನದಲ್ಲಿ ಬಹಮನಿ ಸುಲ್ತಾನರ ಕಾಲದಲ್ಲಿ ಇಲ್ಲಿಗೆ ಬಂದಿದೆ. ತದನಂತರ ಇದು ಹೊಸ ರೂಪವನ್ನ ಪಡೆದುಕೊಂಡಿದೆ.

    ಕುಶಲ ಕೆಲಸಗಾರರು ತಾಮ್ರ ಮತ್ತು ಸತುವಿನ ಧಾತುಗಳನ್ನು ಮಿಶ್ರಣಮಾಡಿ ಹೂಜಿ ಹಾಗೂ ವಿವಿಧ ಶೈಲಿಯ ವಸ್ತುಗಳನ್ನ ತಯಾರಿಸಿ ಅವುಗಳ ಮೇಲೆ ಸಣ್ಣದಾಗಿ ಕೊರೆದು, ಕೊರೆದಿರುವ ಜಾಗದಲ್ಲಿ ಬೆಳ್ಳಿಯ ತಂತಿಯನ್ನ ಕೂರಿಸಿ, ಅದಕ್ಕೆ ಹೊಳಪು ಕೊಡುತ್ತಾರೆ. ಈಗಲೂ ಬೀದರ್‍ನಲ್ಲಿ ಬಿದರಿ ಕರಕುಶಲ ವಸ್ತುಗಳನ್ನ ತಯಾರಿಸಿ ಮಾರಾಟ ಮಾಡಲಾಗುತ್ತೆ. ಈ ಬಿದರಿ ಕಲೆಗೆ ವಿದೇಶಗಳಲ್ಲೂ ಭಾರಿ ಬೇಡಿಕೆ ಇದೆ. ಇಂತಹ ಬೀದರ್ ಜಿಲ್ಲೆಯಲ್ಲಿ ಹಲವು ಪ್ರವಾಸಿ ಕ್ಷೇತ್ರಗಳಿವೆ.

    ನರಸಿಂಹ ಝೀರ:
    ನಿಮಗೆಲ್ಲ ಭಕ್ತ ಪ್ರಹ್ಲಾದ ಅವನ ತಂದೆ ಹಿರಣ್ಯಕಶಪುವಿನ ಕಥೆ ಗೊತ್ತೆ ಇದೆ. ಭಗವಾನ್ ವಿಷ್ಣು ಉಗ್ರನರಸಿಂಹನ ಅವತಾರ ತಾಳಿ ಹಿರಣ್ಯಕಶಪುವಿನ ವಧೆ ಮಾಡಿ ಮುಂದೆ ಎಲ್ಲಿ ಹೋದ ಅಂತಾ ಬಹುತೇಕರಿಗೆ ಗೊತ್ತೆ ಇಲ್ಲ. ಹಿರಣ್ಯಕಶಪುವಿನ ವಧೆ ಮಾಡಿ ಮತ್ತೊಬ್ಬ ಅಸುರನು, ಶಿವಭಕ್ತನು ಆಗಿದ್ದ ಜಲಾಸುರನ ವಧೆ ಮಾಡಲು ಉಗ್ರ ನರಸಿಂಹ ಬರುತ್ತಾನೆ. ಉಗ್ರ ನರಸಿಂಹ ಮತ್ತು ಜಲಾಸುರನ ನಡುವೆ ಘೋರ ಯುದ್ಧ ನಡೆದು ಜಲಾಸುರ ಸೋಲನ್ನೊಪ್ಪುತ್ತಾನೆ. ಕೊನೆಗೆ ಜಲಾಸುರ ಸಾಯುವ ಸಂದರ್ಭದಲ್ಲಿ ನರಸಿಂಹನ ಕಾಲು ಹಿಡಿದು ಜನರಿಗೆ ಒಳಿತನ್ನು ಮಾಡಲು ನೀನು ಇಲ್ಲೆ ನೆಲೆಸಬೇಕೆಂದು ಕೇಳಿಕೊಳ್ಳುತ್ತಾ ನರಸಿಂಹನ ಪಾದದಲ್ಲಿ ಜಲಾಸುರನು ನೀರಾಗಿ ಹರಿಯಲು ಪ್ರಾರಂಭ ಮಾಡಿ ದೇಹ ತ್ಯಾಗ ಮಾಡುತ್ತಾನೆ. ಅವನಿಗೆ ಕೊಟ್ಟ ಮಾತಿನಂತೆ ನರಸಿಂಹನು ಒಂದು ಗುಹೆಯೊಳಗೆ ಐಕ್ಯನಾಗಿಬಿಡುತ್ತಾನೆ. ಅಲ್ಲಿಂದ ಇಲ್ಲಿಯವರೆಗೂ ನರಸಿಂಹನ ಪಾದದಿಂದ ಸದಾ ನೀರು ಹರಿಯುತ್ತಿದೆ. ಈ ಜಾಗವನ್ನೆ ನರಸಿಂಹ ಝೀರ ಎಂದು ಕರೆಯುತ್ತಾರೆ.

    ಹೋಗೋದು ಹೇಗೆ?
    ಬೆಂಗಳೂರಿನಿಂದ ಬೀದರ್ ಗೆ ಬಸ್‍ಗಳಿವೆ, ಟ್ರೇನ್ ಮೂಲಕ ಹೋಗಬಹುದು. ಗೆಳೆಯರೆಲ್ಲ ಸೇರಿ ಹೋಗುವುದಾದರೆ ಕಾರು ಮಾಡಿಕೊಂಡು ಹೋಗಬಹುದು. ಬೀದರ್ ನಗರಕ್ಕೆ ಹೋದ ಬಳಿಕ ಅಲ್ಲಿಂದ ಪೂರ್ವ ಭಾಗದಲ್ಲಿ ಸುಮಾರು 12 ಕಿಮೀ ದೂರದಲ್ಲಿ ನರಸಿಂಹ ಝೀರ ಸಿಗುತ್ತೆ. ಸಿಟಿ ಬಸ್‍ಗಳು, ಆಟೋಗಳ ಮೂಲಕ ಈ ಜಾಗಕ್ಕೆ ಹೋಗಬಹುದು.

    ವೈಶಿಷ್ಟ್ಯತೆ – ನಮ್ಮ ದೇಶದಲ್ಲೆ ಎಲ್ಲೂ ಕಾಣಿಸಿಕೊಳ್ಳದೆ ವಿಶೇಷತೆ ಇಲ್ಲಿದೆ. ಇಲ್ಲಿ ದೇವರ ದರ್ಶನ ಪಡೆಯಬೇಕಂದ್ರೆ ನೀವು ಸುಮಾರು ಅರ್ಧ ಕಿಲೋ ಮೀಟರ್ ಅಂದ್ರೆ 500 ಮೀಟರ್‍ನಷ್ಟು ಗುಹೆಯೊಳಗೆ ಅದರಲ್ಲೂ ನೀರು ತುಂಬಿದ ಗುಹೆಯೊಳಗೆ ನಡೆದುಕೊಂಡೆ ಹೋಗಬೇಕು. ಯೆಸ್..ಸರಿ ಸುಮಾರು 3 ರಿಂದ 4 ಅಡಿ ನೀರು ಸದಾ ಈ ಗುಹೆಯೊಳಗೆ ಸದಾ ಹರಿಯುತ್ತೆ. ಒಳಗಡೆ ಗಾಳಿಯಾಡೋದು ಕಷ್ಟ. ಹಾಗಾಗಿ ಇಲ್ಲಿ ಗಾಳಿಯಾಡಲು ಪೈಪ್‍ನ ವ್ಯವಸ್ಥೆ ಮಾಡಲಾಗಿದೆ. ಇನ್ನೊಂದು ವಿಶೇಷತೆ ಅಂದ್ರೆ, ಗುಹೆಯೊಳಗೆ ಎಲ್ಲ ಕಡೆಯೂ ಬಾವಲಿಗಳು ಕಾಣಿಸುತ್ವೆ. ಆದ್ರೆ, ಈ ಬಾವಲಿಗಳು ಯಾರಿಗೂ ಏನೂ ಹಾನಿಯುಂಟು ಮಾಡಲ್ಲ. ಇಲ್ಲಿಗೆ ಬರುವ ಭಕ್ತರು ಅತ್ಯಂತ ಶ್ರದ್ಧೆಯಿಂದ ಭಕ್ತಿಯಿಂದ ಮಡಿಯಿಂದ 4 ಅಡಿ ನೀರಿನಲ್ಲಿ ಗುಹೆಯಲ್ಲಿ ನಡೆದುಕೊಂಡು ನರಸಿಂಹನಿಗೆ ನೈವೇದ್ಯ ಅರ್ಪಿಸುತ್ತಾರೆ.

    – ಅರುಣ್ ಬಡಿಗೇರ್