Tag: ನರಗುಂದ

  • ಗದಗದಲ್ಲಿ ನಿಲ್ಲದ ಪ್ರವಾಹ ಪೀಡಿತರ ಕಣ್ಣೀರು – ನೆರೆ ಸಂತ್ರಸ್ತರಿಗೆ ಭೂಮಿಯೇ ಹಾಸಿಗೆ, ಆಕಾಶವೇ ಹೊದಿಕೆ

    ಗದಗದಲ್ಲಿ ನಿಲ್ಲದ ಪ್ರವಾಹ ಪೀಡಿತರ ಕಣ್ಣೀರು – ನೆರೆ ಸಂತ್ರಸ್ತರಿಗೆ ಭೂಮಿಯೇ ಹಾಸಿಗೆ, ಆಕಾಶವೇ ಹೊದಿಕೆ

    -ಸಂತ್ರಸ್ತರ ಬಾಳ ನೋವಿನ ಪಯಣದ ಬುತ್ತಿ

    ಗದಗ: ನೆರೆ ಬಂದುಹೋದ್ರು ನೆರೆ ಸಂತ್ರಸ್ತರ ಕಣ್ಣಿರು ಮಾತ್ರ ಇನ್ನೂ ನಿಲ್ಲದಾಗಿದೆ. ಆಳುವ ಸರ್ಕಾರಗಳು, ಜನಪ್ರತಿನಿಧಿಗಳು ನೆರೆಸಂತ್ರಸ್ತರನ್ನ ಮರೆತಂತಿದೆ. ಸಂತ್ರಸ್ತ ಮಹಿಳೆಯರ ಸ್ನಾನಸ್ಥಳ, ಶೌಚಾಲಯ, ವಾಸ ಮಾಡುವ ಸ್ಥಳದ ಸ್ಥಿತಿ ನೋಡಿದ್ರೆ ಇಡೀ ಮನುಕುಲವೆ ತಲೆತಗ್ಗಿಸುವಂತಿದೆ. ನೆರೆಬಂದು ಎರಡು ತಿಂಗಳಾದರೂ ನೊಂದ ಜನರ ಧ್ವನಿಯಾಗಬೇಕಾದ ವೋಟುಪಡೆದ ಮಹಾನ್ ಧನಿಗಳು ಎಲ್ಲಿಹೋದ್ರು? ಸಂತ್ರಸ್ತರ ಬಾಳ ನೋವಿನ ಪಯಣದ ಬುತ್ತಿ ಕುರಿತಾದ ಒಂದು ವರದಿ ಇಲ್ಲಿದೆ.

    ಗದಗ ಜಿಲ್ಲೆ ನರಗುಂದ ತಾಲೂಕಿನ ಬೂದಿಹಾಳ ಗ್ರಾಮದಲ್ಲಿ ನೆರೆ ಸಂತ್ರಸ್ತರಿಗೆ ಭೂಮಿಯೇ ಹಾಸಿಗೆ, ಆಕಾಶವೇ ಹೊದಿಕೆಯಾಗಿದೆ. ಮಲಪ್ರಭಾ ನದಿಯ ನೆರೆಯಿಂದಾಗಿ ಸಂತ್ರಸ್ತ ಮಹಿಳೆಯರ ಕಷ್ಟ ಹೇಳತೀರದಾಗಿದೆ. ನೆರೆ ಬಂದು 2 ತಿಂಗಳಾದರೂ ಸೂಕ್ತ ವಾಸ್ತವ್ಯ, ಪರಿಹಾರ ಸಿಗದೇ ಮಹಿಳೆಯರು ಪರದಾಡುತ್ತಿದ್ದಾರೆ. ಇದ್ದ ಮನೆ, ಜಮೀನು, ಆಸ್ತಿ ಕಳೆದುಕೊಂಡು ಕಣ್ಣೀರಲ್ಲಿ ಕೈತೊಳೆಯುತ್ತಿದ್ದಾರೆ. ಈ ಬಗ್ಗೆ ನಿಮ್ಮ ಪಬ್ಲಿಕ್ ಟಿವಿ ಸಂತ್ರಸ್ತರ ಕರುಳು ಹಿಂಡುವ ಅಸಲಿ ಬದುಕನ್ನು ಬಿಚ್ಚಿಡ್ತಿದೆ.

    ಸಂತ್ರಸ್ತ ಮಹಿಳೆಯರು ಸ್ನಾನ ಮಾಡಬೇಕೆಂದರೆ ಸುತ್ತಲು ಪರದೆಯಂತೆ ಸೀರೆ ಹಿಡಿದು ಮರೆಮಾಡಿ ಸ್ನಾನ ಮಾಡಬೇಕು. ಶೌಚಾಲಯ ಸ್ಥಿತಿ ಇದಕ್ಕಿಂತ ಕೆಟ್ಟದಾಗಿದೆ. ವಯಸ್ಕ ಮಹಿಳೆಯರು ರಾತ್ರಿ ಹೊತ್ತು ನಿದ್ರೆ ಮಾಡಲು ಹೆದರುತ್ತಿದ್ದಾರೆ. ಕತ್ತಲಾದರೆ ಮಹಿಳೆಯರು, ವಯೋವೃದ್ಧರು, ಮಕ್ಕಳು ಗುಡಿಸಲಿನಿಂದ ಹೊರಗೆ ಬರಲಾಗದೇ ಪರದಾಡುವಂತಾಗಿದೆ.

    ಮಲಪ್ರಭೆ ಕೆರಳಿ ಇದ್ದ ಬದುಕು ಕಸಿದು ಕೊಂಡಾಯ್ತು. ಆದರೆ ಕೊಚ್ಚಿ ಹೋದ ಬದುಕನ್ನು ಮತ್ತೆ ಕಟ್ಟಿ ಕೊಡಬೇಕಿದ್ದ ಜನಪ್ರತಿನಿಧಿಗಳು, ಸರ್ಕಾರ ಮಾತ್ರ ಕಣ್ಮುಚ್ಚಿ ಕುಳಿತಿದೆ. ಆದರೆ ನೆರೆಗಿಂತಲೂ ಭೀಕರ ಪರಿಸ್ಥಿತಿ ಎದುರಿಸುತ್ತಿರುವುದು ಸಂತ್ರಸ್ತ ಮಹಿಳೆಯರು. ಇನ್ನಾದರೂ ಸರ್ಕಾರ ಎಚ್ಚೆತ್ತುಕೊಳ್ಳುತ್ತಾ. ಕಾದು ನೋಡಬೇಕಿದೆ.

  • ನಿಸರ್ಗ ರಕ್ಷಣೆಗೆ ಪಣತೊಟ್ಟ ನರಗುಂದ ಯುವಕರು

    ನಿಸರ್ಗ ರಕ್ಷಣೆಗೆ ಪಣತೊಟ್ಟ ನರಗುಂದ ಯುವಕರು

    ಗದಗ: ವಾರಾಂತ್ಯ ಬಂದರೆ ಯುವಕರು ಮೋಜು ಮಸ್ತಿ ಮಾಡುತ್ತಾರೆ ಎನ್ನುವ ಮಾತು ಪ್ರಚಲಿತದಲ್ಲಿದೆ. ಆದರೆ ಗದಗ ಜಿಲ್ಲೆಯ ನರಗುಂದ ಪಟ್ಟಣದ ಯುವಕರು. ಇವರಿಗೆ ವೀಕೆಂಡ್ ಅಂದ್ರೆ ಮೋಜು ಮಸ್ತಿಯಲ್ಲ. ಅದು ಇವರ ಪಾಲಿಗೆ ಪರಿಸರ ಜಾಗೃತಿಯ ದಿನ. ಪ್ರತಿ ಭಾನುವಾರ ಪರಿಸರ ಸಂರಕ್ಷಣೆಗೆ ಮೀಸಲಿಟ್ಟಿ ಕೆಲಸ ಮಾಡುತ್ತಿದ್ದಾರೆ.

    `ನಿಸರ್ಗ ಸೇವಕರು’ ಎನ್ನುವ ಹೆಸರನ್ನು ತಮ್ಮ ತಂಡಕ್ಕೆ ಕಟ್ಟಿಕೊಂಡಿರುವ ಈ ಯುವಕರು ವಾರಾಂತ್ಯದ ದಿನಗಳಲ್ಲಿ ಪಿಕಾಸಿ, ಗುದ್ದಲಿ ಹಿಡಿದು ಸಸಿಗಳನ್ನ ನೆಡುತ್ತ ಜನರಲ್ಲಿ ಈ ಪರಿಸರ ಜಾಗ್ರತಿ ಮೂಡಿಸುತ್ತಿದ್ದಾರೆ.

    ಮೂಲತಃ ನೌಕರರು, ವ್ಯಾಪಾರಸ್ಥರು, ರೈತಾಪಿ ಜನ ಆಗಿರುವ ಈ ಗುಂಪಿನ ಸದಸ್ಯರು ಕಳೆದ ಒಂದು ವರ್ಷದಿಂದ ನರಗುಂದ ಪಟ್ಟಣ ಹಾಗೂ ಸುತ್ತಲಿನ ಹಳ್ಳಿಗಳ ಪ್ರಮುಖ ಬೀದಿ, ಸರ್ಕಾರಿ, ಅರೆಸರ್ಕಾರಿ ಕಚೇರಿಗಳು, ದೇವಸ್ಥಾನ, ಮಠ ಮಸೀದಿ, ಮಂದಿರಗಳ ಬಯಲು ಜಾದಲ್ಲಿ ನೂರಾರು ಸಸಿಗಳನ್ನ ನೆಟ್ಟು, ಪೋಷಿಸುತ್ತಿದ್ದಾರೆ.

    ಪ್ರತಿ ಭಾನುವಾರ ಬೆಳಗ್ಗೆ 7.30 ರಿಂದ ಮಧ್ಯಾಹ್ನ 12 ಗಂಟೆವರೆಗೆ ಶ್ರಮದಾನ ಮಾಡುತ್ತಿದ್ದಾರೆ. ನಿಸರ್ಗ ಉಳಿವಿಗೆ ಕನಸು ಕಟ್ಟಿಕೊಂಡ ಯುವಕರ ಈ ಸೇವೆಯನ್ನ ನರಗುಂದದ ಸಾರ್ವಜನಿಕರು ಹಾಗೂ ಗಣ್ಯ ವ್ಯಕ್ತಿಗಳು ಮುಕ್ತ ಕಂಠದಿಂದ ಹೊಗಳುತ್ತಿದೆ.

    https://www.youtube.com/watch?v=5rfRymnLGFo

  • ಮೋದಿ ಚೈನಾ ವಸ್ತುವಿದ್ದಂತೆ, ಗ್ಯಾರಂಟಿ, ವಾರಂಟಿ ಇಲ್ಲ: ಇಬ್ರಾಹಿಂ ಲೇವಡಿ

    ಮೋದಿ ಚೈನಾ ವಸ್ತುವಿದ್ದಂತೆ, ಗ್ಯಾರಂಟಿ, ವಾರಂಟಿ ಇಲ್ಲ: ಇಬ್ರಾಹಿಂ ಲೇವಡಿ

    ಗದಗ: ಪ್ರಧಾನಿ ಮೋದಿಯನ್ನು ಚೀನಾದ ವಸ್ತುಗಳಿಗೆ ಹೋಲಿಕೆ ಮಾಡಿ ಕಾಂಗ್ರೆಸ್ ಮುಖಂಡ, ವಿಧಾನ ಪರಿಷತ್ ಸದಸ್ಯ  ಸಿಎಂ ಇಬ್ರಾಹಿಂ ವ್ಯಂಗ್ಯವಾಡಿದ್ದಾರೆ.

    ಜಿಲ್ಲೆಯ ನರಗುಂದದಲ್ಲಿ ಚುನಾವಣಾ ಪ್ರಚಾರದ ವೇಳೆ ಮಾತನಾಡಿದ ಅವರು, ಮೋದಿ ಚೀನಾ ವಸ್ತುವಿದ್ದಂತೆ. ಅದಕ್ಕೆ ವಾರಂಟಿ, ಗ್ಯಾರಂಟಿ ಇಲ್ಲ ಹೇಳಿ ಲೇವಡಿ ಮಾಡಿದರು.

    ಆಜ್ ಬಿಜೆಪಿಕೋ ಕಥಮ್ ಕರನಾ ಹೈ. ಹಿಂದೂ ಮುಸಲ್ಮಾನ್ ಏಕ್ ಮಾಕೇ ಬಚ್ಚೆ ಜೈಸೇ ರಹೆಂಗೆ. ಮೋದಿಕೋ ಹಮ್ ಕಬಿಬೀ ಡರೆಂಗೆ ನಹಿ (ಬಿಜೆಪಿಯನ್ನು ಈಗ ಇಲ್ಲವಾಗಿಸಬೇಕು. ಹಿಂದೂ ಮತ್ತು ಮುಸ್ಲಿಮರು ಒಂದೇ ತಾಯಿ ಮಕ್ಕಳಂತೆ ಇರಬೇಕು. ಮೋದಿಗೆ ಯಾರು ಹೆದರುವ ಅವಶ್ಯಕತೆ ಇಲ್ಲ) ಎಂದರು.

    ಕಮಲಕ್ಕೆ ಸೂರ್ಯೋದಯದ ಚಿಂತೆ, ಸಿದ್ದರಾಮಯ್ಯಗೆ ಜನ್ರ ಚಿಂತೆಯಾದರೆ ಯಡಿಯೂರಪ್ಪಗೆ ಶೋಭಕ್ಕನ ಚಿಂತೆ. ಶೋಭಾ ಕರಂದ್ಲಾಜೆಗೆ ಟಿಕೇಟ್ ಸಿಗದಿರುವುದಕ್ಕೆ ಯಡಿಯೂರಪ್ಪನಿಗೆ ಶಾಕ್ ಆಗಿದೆ ಎಂದು ಹೇಳಿದರು.

    ನಿಮ್ಮೆದುರಿಗೆ ನಾವು ಕಂತಿ ಭಿಕ್ಷೆಗೆ ಬಂದಿದ್ದೇವೆ. ಐದು ವರ್ಷ ನುಡಿದಂತೆ ನಡೆದಿದ್ದೇವೆ. ಸಾವಿರಾರು ಮಂದಿಗೆ ದಾಸೋಹ ಕೊಟ್ರೆ ಅದು ದೊಡ್ಡ ಮಠವಾಗುತ್ತೆ. ಆದ್ರೆ ಸಿದ್ದರಾಮಯ್ಯ ಅವ್ರ ಮಠದಾಗ ಕೋಟ್ಯಾಂತರ ಜನರಿಗೆ ದಾಸೋಹ ನೀಡಲಾಗಿದೆ ಎಂದು ಹೊಗಳಿದರು.

    ಬೇಟಿ ಬಚಾವೋ, ಬೇಟಿ ಪಡಾವೋ ಎನ್ನುವುದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕೇವಲ ಭಾಷಣಕ್ಕಷ್ಟೆ ಸೀಮಿತವಾಗಿದೆ. ಜೈಲು, ಬೇಲಿನ ಜನರನ್ನು ಕಟ್ಟಿಕೊಂಡು ಚುನಾವಣೆಗೆ ಸಜ್ಜಾಗಿದ್ದಾರೆ. ಅವರ ಆಟ ಕರ್ನಾಟಕದ ಟಗರಿನ ಮುಂದೇ ನಡೆಯುವುದಿಲ್ಲ ಎಂದರು.

    ಪ್ರಧಾನಿ ನರೇಂದ್ರ ಮೋದಿ ಅವರೇ ನಿಮಗೆ ಈ ಟಗರಿನ ಸಾಮರ್ಥ್ಯ ಗೊತ್ತಿಲ್ಲ. ಕಳಂಕ ರಹಿತ ಆಡಳಿತವನ್ನು ಸಿಎಂ ಸಿದ್ದರಾಮಯ್ಯ ನೀಡಿದ್ದಾರೆ. ಜಾತಿಯನ್ನು ಒಡೆದವರು ಬಿಜೆಪಿಗರು. ಸಂವಿಧಾನದಿಂದಲೇ ನಮಗೆ ವೋಟು ಹಾಗೂ ಸಮಾನತೆಯ ಹಕ್ಕು ದೊರೆತಿದೆ. 11 ನೇ ಶತಮಾನದಲ್ಲಿ ಬಸವಣ್ಣ ಹೇಳಿದ್ದನ್ನೇ 2013 ರಲ್ಲಿ ಸಿದ್ದರಾಮಯ್ಯ ಹೇಳಿದ್ದರು. ಆದರೆ, ನೀವು ಅಸೆಂಬ್ಲಿಯಲ್ಲಿ ಏನು ಮಾಡಿದ್ದಿರಿ ಎನ್ನುವುದು ಕ್ಷೇತ್ರದ ಜನರಿಗೆ ಗೊತ್ತಿದೆ ಎಂದು ಸಿ.ಸಿ. ಪಾಟೀಲ್ ಅವರನ್ನು ಇಬ್ರಾಹಿಂ ಕುಟುಕಿದರು.

    ಸಿಎಂ ಸಿದ್ದರಾಮಯ್ಯ ಮತ್ತೆ ಪ್ರಮಾಣ ವಚನ ಸ್ವೀಕರಿಸುವುದು ಶತಸಿದ್ಧ ಎಂದು ಹೇಳಿ ಬಿಎಸ್‍ವೈ ಅವರಿಗೆ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಆಗಮಿಸುವಂತೆ ಆಹ್ವಾನ ನೀಡಿದರು.  ಇದನ್ನೂ ಓದಿ: ಮೋದಿಯವರೇ ಗಂಡಸ್ತನ ಇದ್ದರೆ ಸಿದ್ದರಾಮಯ್ಯರ ಭ್ರಷ್ಟಾಚಾರ ಆರೋಪ ಸಾಬೀತುಪಡಿಸಿ: ಸಿ.ಎಂ.ಇಬ್ರಾಹಿಂ

  • ಮಹದಾಯಿ ಹೋರಾಟಗಾರರ ಮೇಲೆ ಬಿಜೆಪಿ ಗೂಂಡಾಗಿರಿ..!

    ಮಹದಾಯಿ ಹೋರಾಟಗಾರರ ಮೇಲೆ ಬಿಜೆಪಿ ಗೂಂಡಾಗಿರಿ..!

    – ಸೊಬರದಮಠ ಮೇಲೆ ಹಲ್ಲೆ, ನಿಂದನೆ

    ಗದಗ: ಮಹದಾಯಿ ವಿಚಾರದಲ್ಲಿ ಆಶ್ವಾಸನೆ ನೀಡಿ ಹೋರಾಟಗಾರರ ಆಕ್ರೋಶಕ್ಕೆ ತುತ್ತಾಗಿದ್ದ ಬಿಜೆಪಿ ಇದೀಗ ಮತ್ತೊಂದು ಯಡವಟ್ ಮಾಡಿಕೊಂಡಿದೆ. ಬಿಜೆಪಿ ಕಚೇರಿ ಮುಂದೆ ಮಹದಾಯಿ ಹೋರಾಟಗಾರರ ಮೇಲೆ ಪ್ರತೀಕಾರ ದಾಳಿ ನಡೆಸಿದ ಆರೋಪಕ್ಕೆ ಕೇಸರಿ ಪಡೆ ತುತ್ತಾಗಿದೆ.

    900ನೇ ದಿನಕ್ಕೆ ಮಹದಾಯಿ ಹೋರಾಟ ಕಾಲಿಡ್ತಿರುವ ಸಂದರ್ಭದಲ್ಲಿಯೇ ನರಗುಂದ ರೈತ ಹೋರಾಟ ವೇದಿಕೆಗೆ ನುಗ್ಗಿ ಬಿಜೆಪಿ ನಾಯಕರು ದಾಂಧಲೆ ಎಬ್ಬಿಸಿದ್ದಾರೆ. ಹೋರಾಟದ ನೇತೃತ್ವ ವಹಿಸಿರುವ ವೀರೇಶ್ ಸೊಬರದಮಠ ಮೇಲೆ ಮಾಜಿ ಮಂತ್ರಿ ಸಿಸಿ ಪಾಟೀಲ್ ಬೆಂಬಲಿಗರು ಅಂತಾ ಹೇಳಲಾಗುವ ಕೆಲವರು ಹಲ್ಲೆ ನಡೆಸಿದ್ದಾರೆ. ನರಗುಂದ ಪುರಸಭೆ ಅಧ್ಯಕ್ಷ ಪ್ರಕಾಶ್ ಪಟ್ಟಣಶೆಟ್ಟಿ, ತಾಲೂಕು ಯುವ ಬಿಜೆಪಿ ಅಧ್ಯಕ್ಷ ಅನಿಲ ಧರಿಯಣ್ಣವರ್, ಎಪಿಎಂಸಿ ಅಧ್ಯಕ್ಷ ನಾಗಲಿಂಗರೆಡ್ಡಿ ಮೇಟಿ, ಗೋವಿಂದರೆಡ್ಡಿ ಸಿದ್ದನಾಳ ಸೇರಿದಂತೆ ಬಿಜೆಪಿಯ 20ಕ್ಕೂ ಹೆಚ್ಚು ಮಂದಿ ಹೋರಾಟಗಾರರ ಮೇಲೆ ಹಲ್ಲೆ ನಡೆಸಿ ಎಳೆದಾಡಿದ್ದಾರೆ.

    ಪಕ್ಷಾತೀತ ಹೋರಾಟವೆಂದು ಹೇಳಿಕೊಂಡು ಬಿಜೆಪಿ ವಿರುದ್ಧ ಹೋರಾಟ ಮಾಡ್ತಿದ್ದೀರಾ..? ಕಾಂಗ್ರೆಸ್‍ನವರಿಂದ ಹಣ ಪಡೆದು ಬಿಜೆಪಿ ಕಚೇರಿ ಬಳಿ ಪ್ರತಿಭಟನೆ ನಡೆಸಿದ್ದೀರಾ ಅಂತಾ ಬಿಜೆಪಿಯವರು ಆಕ್ರೋಶ ಹೊರಹಾಕಿದ್ದಾರೆ. ಬಿಜೆಪಿ ಗೂಂಡಾಗಿರಿಗೆ ಮಹದಾಯಿ ಹೋರಾಟಗಾರರು ತೀವ್ರ ಆಕ್ರೋಶ ಹೊರಹಾಕಿದ್ದಾರೆ. ಸಿಸಿ ಪಾಟೀಲ್ ಬೆಂಬಲಿಗರೇ ಈ ಕೃತ್ಯ ಎಸಗಿದ್ದು, ವೇದಿಕೆ ಕಿತ್ತೊಗೆಯುವುದಾಗಿ ಡಿಸೆಂಬರ್ 3ರಂದು ಬಹಿರಂಗ ಹೇಳಿಕೆ ನೀಡಿದ್ರು ಅಂತಾ ಶಂಕರ್ ಅಂಬಲಿ ಆರೋಪಿಸಿದ್ದಾರೆ.

    ಹೋರಾಟಗಾರರ ಮೇಲೆ ಹಲ್ಲೆ ನಡೆಸಿದವರನ್ನು ಪೊಲೀಸರು ಕೂಡಲೇ ಬಂಧಿಸಬೇಕು. ಇಲ್ಲದೇ ಹೋದ್ರೆ ರೈತರು ಕಾನೂನನ್ನು ಕೈಗೆ ತೆಗೆದುಕೊಳ್ಳುವ ಪ್ರಸಂಗ ಬರುತ್ತೆ ಅಂತಾ ಮಹದಾಯಿ ಹೋರಾಟಗಾರರು ಎಚ್ಚರಿಸಿದ್ದಾರೆ.

  • ಕಳಸಾ ಬಂಡೂರಿ ಹೋರಾಟಕ್ಕೆ 2 ವರ್ಷ: ಅಮರಣಾಂತ ಉಪವಾಸಕ್ಕೆ ಕುಳಿತ್ರು ರೈತರು

    ಕಳಸಾ ಬಂಡೂರಿ ಹೋರಾಟಕ್ಕೆ 2 ವರ್ಷ: ಅಮರಣಾಂತ ಉಪವಾಸಕ್ಕೆ ಕುಳಿತ್ರು ರೈತರು

    ಗದಗ: ಕಳಸಾ ಬಂಡೂರಿ, ಮಹದಾಯಿ ಹೋರಾಟ ಬರೋಬ್ಬರಿ ಎರಡು ವರ್ಷ ಪೂರೈಸಿದೆ. ಆದರೂ ಉತ್ತರ ಕರ್ನಾಟಕ ಭಾಗಕ್ಕೆ ನೀರು ಸಿಗುವ ಯಾವುದೇ ಲಕ್ಷಣ ಕಾಣುತ್ತಿಲ್ಲ. ಹೀಗಾಗಿ ಮಹದಾಯಿ ಹೋರಾಟಗಾರರು ಮಾಡು ಇಲ್ಲವೇ ಮಡಿ ಎನ್ನುವ ತೀರ್ಮಾನವನ್ನು ತೆಗೆದುಕೊಂಡು ಅಮರಣಾಂತ ಉಪವಾಸಕ್ಕೆ ಧುಮುಕಿದ್ದಾರೆ.

    ಹೌದು. ಭಾನುವಾರ ನರಗುಂದ ಪಟ್ಟಣದ ಬಾಬಾಸಾಹೇಬ್ ವೃತ್ತದಿಂದ ಹೋರಾಟ ವೇದಿಕೆಯವರೆಗೆ ಮೆರವಣಿಗೆ ಹಮ್ಮಿಕೊಳ್ಳಲಾಗಿತ್ತು. ವ್ಯಕ್ತಿಯೊಬ್ಬರು ಮಹಾತ್ಮಗಾಂಧಿ ವೇಷ ಧರಿಸಿ ಮೆರವಣಿಗೆಯಲ್ಲಿ ಪಾಲ್ಗೊಂಡು ಗಮನ ಸೆಳೆದರು. ನಂತರ ಹೋರಾಟ ವೇದಿಕೆಯಲ್ಲಿ ಜಮಾವಣೆಗೊಂಡ ಸಾವಿರಾರು ರೈತರು ರೈತಗೀತೆಗೆ ಹಸಿರು ಶಾಲು ಬೀಸುವ ಮೂಲಕ ಧ್ವನಿಗೂಡಿಸಿದ್ದು ವಿಶೇಷವಾಗಿತ್ತು.

    ಸುತ್ತಲಿನ ಸಾವಿರಾರು ಗ್ರಾಮಸ್ಥರು ಆಗಮಿಸಿ ಸಮಾವೇಶವನ್ನು ಬೆಂಬಲಿಸಿದರು. ನಾಡಿನ ಹಲವು ಸಂಘಟನೆ, ಹೋರಾಟಗಾರರು ಪಾಲ್ಗೊಂಡಿದ್ದರು. ಕಳಸಾ ಬಂಡೂರಿ, ಮಹದಾಯಿ ಯೋಜನೆ ಜಾರಿ ಆಗುವವರೆಗೂ ಉಪವಾಸ ಸತ್ಯಾಗ್ರಹಕ್ಕೆ ನಿರ್ಣಯ ಮಂಡಿಸಲಾಯಿತು. ಇನ್ನು ಉಪವಾಸದಿಂದ ಸಾವನ್ನಪ್ಪಿದ್ರೆ ಮಹದಾಯಿ ತೀರದಲ್ಲಿ ಅಂತ್ಯಕ್ರಿಯೆ ಮಾಡಲು ನಿರ್ಣಯ ಕೈಗೊಳ್ಳಲಾಯಿತು. ಈ ನಿರ್ಣಯ ನೆರೆದ ಸಾವಿರಾರು ರೈತರಲ್ಲಿ ಮತ್ತಷ್ಟು ಆಕ್ರೋಶದ ಕಿಡಿ ಹೊತ್ತಿಸಿತು.

    ಉತ್ತರ ಕರ್ನಾಟಕದ 4 ಜಿಲ್ಲೆ 11 ತಾಲೂಕಿಗೆ ವರವಾಗಬೇಕಿದ್ದ ಯೋಜನೆ ನೆನೆಗುದಿಗೆ ಬಿದ್ದು ಹಲವು ದಶಕವಾಯಿತು. ಎರಡು ವರ್ಷದ ಈ ಹೋರಾಟದಲ್ಲಿ ನೇತೃತ್ವ ವಹಿಸಿದ ವಿರೇಶ್ ಸೊಬರದಮಠ ಸನ್ಯಾಸ ಧೀಕ್ಷೆ ಸ್ವೀಕರಿಸುವ ಮೂಲಕ ಸರ್ಕಾರಗಳ ವಿರುದ್ಧ ಸಾತ್ವಿಕ ಆಕ್ರೋಶ ಹೊರಹಾಕಿದ್ರು. ಇದೀಗ ಮತ್ತೆ ಮಾಡು ಇಲ್ಲವೇ ಮಡಿ ಹೋರಾಟದ ಮೂಲಕ ಸೊಬರದಮಠ ಸರ್ಕಾರಗಳ ವಿರುದ್ಧ ಕಣಕಹಳೆ ಮೊಳಗಿಸಿದ್ದಾರೆ.

    ಈ ವೇಳೆ ಶಾಸಕ ಪುಟ್ಟಣ್ಣಯ್ಯ ಮಾತನಾಡಿ, ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯ ಬಗ್ಗೆ ಕಿಡಿಕಾರಿದರು. ಏಳು ವರ್ಷದ ನರಗುಂದದ ಬಾಲಕಿ ಶ್ರೇಯಾ ಹಾದಿಮನಿ ಹೋರಾಟ ವೇದಿಕೆಯಲ್ಲಿ ಕಣ್ಣೀರಿಟ್ಟಳು. ಹೋರಾಟ ವೇದಿಕೆಯಲ್ಲಿ ದುಃಖಿತಳಾದ ಶ್ರೇಯಾಗೆ ಹೋರಾಟಗಾರರು ಸಂತೈಸಿದರು. ನರಗುಂದ ಹೋರಾಟದಲ್ಲಿ ಮಹದಾಯಿ, ಕಳಸಾ ಬಂಡೂರಿ ಯೋಜನೆಗಾಗಿ ಸರ್ಕಾರಗಳ ವಿರುದ್ಧ ಬಾಲಕಿ ವಾಗ್ದಾಳಿ ನಡೆಸಿದಳು.