Tag: ನಮೋ ಭಾರತ ಮಿಷನ್

  • ಪುಕ್ಕಟೆ ಉಪವಾಸ ಕೂತಿದ್ದಕ್ಕೆ ನಮಗೆ ಸ್ವಾತಂತ್ರ್ಯ ಬಂದಿಲ್ಲ: ಅನಂತಕುಮಾರ್ ಹೆಗಡೆ

    ಪುಕ್ಕಟೆ ಉಪವಾಸ ಕೂತಿದ್ದಕ್ಕೆ ನಮಗೆ ಸ್ವಾತಂತ್ರ್ಯ ಬಂದಿಲ್ಲ: ಅನಂತಕುಮಾರ್ ಹೆಗಡೆ

    ದಾವಣಗೆರೆ: ಪುಕ್ಕಟೆ ಉಪವಾಸ ಕೂತಿದ್ದಕ್ಕೆ ನಮಗೆ ಸ್ವಾತಂತ್ರ್ಯ ಬಂದಿಲ್ಲ. ಅಸಂಖ್ಯಾತ ಜನರ ರಕ್ತ ಚೆಲ್ಲಿ ಹೋರಾಟ ಮಾಡಿದ ಫಲದಿಂದ ಸಿಕ್ಕಿದೆ ಎಂದು ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

    ನಗರದ ನಡೆದ ಎಸ್.ಎಸ್. ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಸಭೆ ನಮೋ ಭಾರತ-ಮಿಷನ್ 365+ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಚಿವರು, ಕೇವಲ ಸರ್ಕಾರಿ ಕಚೇರಿಯಲ್ಲಿನ ಮೂರು ಫೋಟೋಗಳಿಂದ ಸ್ವಾತಂತ್ರ್ಯ ದೊರೆತಿಲ್ಲ. ದೇಶದ ಸ್ವಾತಂತ್ರ್ಯಕ್ಕೆ ಏಕೀಕೃತ ರೂಪ ಕೊಟ್ಟಿದ್ದು ಸರ್ದಾರ್ ವಲ್ಲಭಭಾಯ್ ಪಟೇಲ್ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಎಂದು ತಿಳಿಸಿದರು.

    ರಾಜಕಾರಣ ಬಗ್ಗೆ ಹೇಳಲು ಹೇಸಿಗೆಯಾಗುವಂತೆ ಮಾಡಿದ್ದು ಒಂದು ರಾಜಕಾರಣದ ಕುಟುಂಬ. ದೇಶ ರಾಜಕೀಯದಲ್ಲಿ ಅವರು 70 ವರ್ಷಗಳ ಕಾಲ ಹೊಲಸು ಆಳ್ವಿಕೆಯನ್ನು ತೋರಿಸಿದರು. ಅವರು ದೇಶ ಕಾಯುವ ಸೈನಿಕರ ಕೈಯಲ್ಲಿ ಬಂದೂಕು ಕೊಡದೆ, ವೈರಿಗಳ ಮಧ್ಯೆ ಬಿಟ್ಟರು. ನಾವು ಹೊರದೇಶದಲ್ಲಿ ಮೋಜು, ಮಸ್ತಿ ಮಾಡಿದ ಪ್ರಧಾನಿಯನ್ನು ನೋಡಿದ್ದೇವೆ. ಅದು ಮನೆ ಮುರುಕ ಹಾಗೂ ಇಚ್ಛಾಶಕ್ತಿ ಇಲ್ಲದಿರುವ ಸರ್ಕಾರ ಎಂದು ನೆಹರು ಕುಟುಂಬದ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.

    ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ನಂತರದಲ್ಲಿ ಮನೆ ಮುರುಕ ಸರ್ಕಾರ ಆಡಳಿತಕ್ಕೆ ಬಂತು. ಈಗ ಬಿಜೆಪಿ ಅಧಿಕಾರದಲ್ಲಿದೇ ಮತ್ತೇ ನಮ್ಮ ಪಕ್ಷ ಅಧಿಕಾರಕ್ಕೆ ಬರಬೇಕು ಎನ್ನುವುದು ದೇಶದ ಜನರ ಅಭಿಪ್ರಾಯವಾಗಿದೆ. ಒಂದು ಕಡೆ ಅಪ್ರಭುದ್ಧತೆಯ ಪ್ರತೀಕ, ಮತ್ತೊಂದು ಕಡೆ ಪ್ರಭುತ್ವದ ಮೇರು ಪರ್ವತ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಕಾಲೆಳೆದು ಪ್ರಧಾನಿ ನರೇಂದ್ರ ಮೋದಿಯನ್ನು ಹೊಗಳಿದರು.

    ಸತ್ಯ ಹೇಳಿದರೆ ಕೆಲವರು ಮೂಗು ಮುರಿಯುತ್ತಾರೆ. ಮತ್ತೊಂದು ಕಡೆ ಶಬ್ಧಗಳ ಅರ್ಥ ತಿಳಿಯದೇ ಬುದ್ಧಿ ಜೀವಿಗಳ ವ್ಯಭಿಚಾರವನ್ನು ಮಾಧ್ಯಮಗಳು ಮಾಡುತ್ತಿವೆ ಎಂದು ಮಾಧ್ಯಮವದರ ವಿರುದ್ಧ ಏಕವಚನದಲ್ಲಿಯೇ ವಾಗ್ದಾಳಿ ನಡೆಸಿದರು.

    ಕುರ್ಚಿ ಖಾಲಿ ಖಾಲಿ:
    ಉದ್ಘಾಟನೆ ಕಾರ್ಯಕ್ರಮಕ್ಕೆ ಸಚಿವ ಅನಂತಕುಮಾರ್ ಹೆಗಡೆ ಬರಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರುತ್ತಾರೆ ಎನ್ನುವ ನಿರೀಕ್ಷೆ ಇತ್ತು. ಆದರೆ ಒಂದು ಸಾವಿರ ಕುರ್ಚಿಗಳಲ್ಲಿ ಅರ್ಧಕ್ಕೂ ಹೆಚ್ಚು ಖಾಲಿ ಉಳಿದಿದ್ದವು. ಆದರೆ ಸಭಾಂಗಣದ ಒಳಗೆ ಹೊರಗೆ 500ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ಭದ್ರತೆಗೆ ನೇಮಿಸಲಾಗಿತ್ತು.

    ಹೆಗಡೆ ವಿರುದ್ಧ ಪ್ರತಿಭಟನೆ:
    ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಕಾರ್ಯಕ್ರಮಕ್ಕೆ ಬರುವುದನ್ನು ವಿರೋಧಿಸಿ ದಲಿತ ಸಂಘಟನೆಗಳು ನಗರದ ಜಿಲ್ಲಾ ಪಂಚಾಯಿತ್ ಕಚೇರಿ ಬಳಿ ಇರುವ ಸರ್ಕೀಟ್ ಹೌಸ್ ಬಳಿ ಪ್ರತಿಭಟನೆ ನಡೆಸಿದ್ದವು. ಹೀಗಾಗಿ 20ಕ್ಕೂ ಹೆಚ್ಚು ಜನ ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದರು.