Tag: ನದಿ

  • ಸೇತುವೆ ಮೇಲೆ ಕಾರು ಪಾರ್ಕ್ ಮಾಡಿ ನದಿಗೆ ಜಿಗಿದ ಕೃಷಿ ಅಧಿಕಾರಿ

    ಸೇತುವೆ ಮೇಲೆ ಕಾರು ಪಾರ್ಕ್ ಮಾಡಿ ನದಿಗೆ ಜಿಗಿದ ಕೃಷಿ ಅಧಿಕಾರಿ

    – ಅರುಣಾ ಆತ್ಮಹತ್ಯೆಗೆ ಕಾರಣವೇನು..?

    ಹೈದರಾಬಾದ್: ಮಹಿಳಾ ಕೃಷಿ ಅಧಿಕಾರಿಯೊಬ್ಬರು ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಅಂಧ್ರಪ್ರದೇಶದ ಸಂಗರೆಡ್ಡಿ ಜಿಲ್ಲೆಯಲ್ಲಿ ನಡೆದಿದೆ.

    ಆತ್ಮಹತ್ಯೆ ಮಾಡಿಕೊಂಡ ಅಧಿಕಾರಿಯನ್ನು ಅರುಣಾ(23) ಎಂದು ಗುರುತಿಸಲಾಗಿದೆ. ಅರುಣಾ ಮನೋರ್ ಮಂಡಲದಲ್ಲಿರುವ ಮಂಜೀರಾ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈಕೆ ಸಂಗರೆಡ್ಡಿಯಲ್ಲಿರುವ ರೈತ ತರಬೇತಿ ಕೇಂದ್ರದಲ್ಲಿ ಕೃಷಿ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.

    ಈ ಘಟನೆ ಕಳೆದ ಶನಿವಾರವೇ ನಡೆದಿದೆ ಎನ್ನಲಾಗಿದ್ದು, ಸೇತುವೆಯ ಮೇಲೆ ಬಹಳ ದಿನಗಳಿಂದ ಕಾರು ನಿಂತಿರುವುದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಬಂದ ಪೊಲೀಸರು, ಕಾರನ್ನು ತಪಾಸಣೆ ಮಾಡಿದಾಗ ಅದರಲ್ಲಿ ಅರುಣಾ ಅವರ ಫೋನ್ ಮತ್ತು ಅವರು ವಾಲೆಟ್ ಸಿಕ್ಕಿದೆ. ನಂತರ ಅರುಣಾ ಮನೆಯವರನ್ನು ಸಂಪರ್ಕ ಮಾಡಿದ್ದು, ಅವರು ಕೂಡ ಅರುಣಾ ಅವರು ಕಾಣೆಯಾಗಿದ್ದಾರೆ ಎಂದು ದೂರು ನೀಡಿದ್ದಾರೆ. ಈ ವೇಳೆ ಪ್ರಕರಣ ಬೆಳಕಿಗೆ ಬಂದಿದೆ.

    ಈ ವಿಷಯ ತಿಳಿದ ಪೊಲೀಸರು ಅಗ್ನಿಶಾಮಕ ದಳವರ ಜೊತೆ ಬಂದು ಅರುಣಾ ಅವರ ಮೃತದೇಹಕ್ಕಾಗಿ ಹುಡುಕಾಟ ನಡೆಸಿದ್ದಾರೆ. ಅರುಣಾ ಆತ್ಮಹತ್ಯೆ ಮಾಡಿಕೊಳ್ಳಲು ಕಾರಣವೇನು ಎಂದು ತಿಳಿದು ಬಾರದ ಕಾರಣ ಪೊಲೀಸರು ತನಿಖೆಯನ್ನು ಆರಂಭ ಮಾಡಿದ್ದಾರೆ. ಈ ಸಂಬಂಧ ಸಂಗರೆಡ್ಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಹೆಸರಿಡುವ ಮುಂಚೆ ಶವವಾಯ್ತು ಪುಟ್ಟಮಗು- ಹೊಳೆಯಲ್ಲಿ ಒಂದೇ ಕುಟುಂಬದ ಮೂವರ ಶವ ಪತ್ತೆ

    ಹೆಸರಿಡುವ ಮುಂಚೆ ಶವವಾಯ್ತು ಪುಟ್ಟಮಗು- ಹೊಳೆಯಲ್ಲಿ ಒಂದೇ ಕುಟುಂಬದ ಮೂವರ ಶವ ಪತ್ತೆ

    ಕಾರವಾರ: ಇನ್ನು ಹೆಸರಿಡದ ಪುಟ್ಟು ಮಗು ಸೇರಿ ತಾಯಿ, ಮಗಳ ಮೃತ ದೇಹಗಳು ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಗಣೇಶ್ ಪಾಲ್ ಹೊಳೆಯಲ್ಲಿ ಇಂದು ಪತ್ತೆಯಾಗಿವೆ.

    ಯಲ್ಲಾಪುರ ತಾಲೂಕಿನ ಹಿತ್ಲಳ್ಳಿ ಗ್ರಾಮಪಂಚಾಯಿತಿ ವ್ಯಾಪ್ತಿಯ ಕಲಗೋಡ್ಲುವಿನಲ್ಲಿ ಶುಕ್ರವಾರ ಮನೆಯಿಂದ ಕಾಣೆಯಾಗಿದ್ದ ತಾಯಿ, ಮಗಳು ಹಾಗೂ ಮೊಮ್ಮಗನ ಮೃತದೇಹಗಳು ಪತ್ತೆಯಾಗಿದ್ದು, ಮೃತರನ್ನು ರಾಜೇಶ್ವರಿ ನಾರಾಯಣ ಹೆಗಡೆ(52), ವಾಣಿ ಪ್ರಕಾಶ್.ವೈ (28) ಹಾಗೂ ವಾಣಿಯವರ ಇನ್ನೂ ಹೆಸರಿಡದ 11 ತಿಂಗಳ ಗಂಡು ಮಗು ಎಂದು ಗುರುತಿಸಲಾಗಿದೆ.

    ಈ ಮೂವರೂ ನ.20ರಂದು ಮನೆಯಿಂದ ಕಾಣೆಯಾಗಿದ್ದರು. ಹಲವೆಡೆ ಹುಡುಕಾಡಿದ ಮನೆಯವರು ಇಂದು ದೂರು ನೀಡಲು ಯಲ್ಲಾಪುರ ಪೊಲೀಸ್ ಠಾಣೆಗೆ ಬಂದಿದ್ದರು. ಅದೇ ಸಮಯಕ್ಕೆ ಗಣೇಶ್ ಪಾಲ್ ಹೊಳೆಯಲ್ಲಿ ಮೃತದೇಹಗಳು ಸಿಕ್ಕಿರುವ ಮಾಹಿತಿ ಲಭಿಸಿದೆ. ಈ ವೇಳೆ ಶವವನ್ನು ಕುಟುಂಬದವರು ನೋಡಿ ಗುರುತಿಸಿದ್ದಾರೆ.

    ಹೆಸರಿಡುವ ಮುಂಚೆ ಮಗು ಸಾವು
    ವಾಣಿಯವರ ಗಂಡನ ಮನೆ ಶಿವಮೊಗ್ಗದಲ್ಲಿದೆ. ಅವರ ಮಗುವಿಗೆ ನಾಮಕರಣ ಕಾರ್ಯಕ್ರಮವನ್ನು ಇಂದು(ಭಾನುವಾರ)ನಿಗದಿ ಮಾಡಲಾಗಿತ್ತು. ಆದರೆ ಹೆಸರಿಡುವ ಮೊದಲೇ ಮಗುವಿನ ಉಸಿರು ನಿಂತುಹೋಗಿದೆ. ಯಲ್ಲಾಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದು, ಆತ್ಮಹತ್ಯೆಯೋ, ಕೊಲೆಯೋ ಎಂಬ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.

  • ಪ್ರತಿ 12 ವರ್ಷಕ್ಕೊಮ್ಮೆ ನಡೆಯುವ ತುಂಗಭದ್ರಾ ಪುಷ್ಕರ ಸ್ನಾನಕ್ಕೆ ಬ್ರೇಕ್

    ಪ್ರತಿ 12 ವರ್ಷಕ್ಕೊಮ್ಮೆ ನಡೆಯುವ ತುಂಗಭದ್ರಾ ಪುಷ್ಕರ ಸ್ನಾನಕ್ಕೆ ಬ್ರೇಕ್

    – ತಾಲೂಕು ಆಡಳಿತದಿಂದ ಆದೇಶ

    ಶಿವಮೊಗ್ಗ: ದಕ್ಷಿಣ ಭಾರತದ ವಾರಾಣಸಿ ಎಂದೇ ಖ್ಯಾತಿ ಪಡೆದಿರುವ ತುಂಗಾ-ಭದ್ರಾ ನದಿಯ ಸಂಗಮವಾಗಿರುವ ಕೂಡ್ಲಿಯಲ್ಲಿ ಈ ಬಾರಿ ಇತಿಹಾಸ ಪ್ರಸಿದ್ಧ ಪುಷ್ಕರ ಸ್ನಾನಕ್ಕೆ ಬ್ರೇಕ್ ಬಿದ್ದಿದೆ. ಕೋವಿಡ್-19 ಸೋಂಕು ಹರಡುವ ಭೀತಿ ಹಿನ್ನೆಲೆ ಈ ಬಾರಿಯ ಪುಷ್ಕರವನ್ನು ನಿಷೇಧಿಸಿ ತಾಲೂಕು ದಂಡಾಧಿಕಾರಿ ಆದೇಶ ಹೊರಡಿಸಿದ್ದಾರೆ.

    ಪ್ರಾಚೀನ ಕಾಲದಿಂದಲೂ ಪೂಜೆ, ಧ್ಯಾನ ಮತ್ತು ಶಾಂತಿಯ ಪ್ರಮುಖ ತಾಣವಾಗಿರುವ ಶಿವಮೊಗ್ಗ ಜಿಲ್ಲೆಯ ಕೂಡ್ಲಿಯಲ್ಲಿ ತುಂಗಾ ಮತ್ತು ಭದ್ರಾ ಎರಡು ನದಿಗಳ ಸಂಗಮವಾಗಿದೆ. ದೇಶದಲ್ಲಿ ನದಿಗಳು ಸೇರುವ ಪವಿತ್ರ ಸ್ಥಳಗಳಲ್ಲಿ ಪುಷ್ಕರ ನಡೆಯುವುದು ಸಂಪ್ರದಾಯವಾಗಿದ್ದು, ಇಂದಿನಿಂದ 12 ದಿನಗಳ ಕಾಲ ಈ ಪುಷ್ಕರ ಸಂಭ್ರಮ ನಡೆಯುತ್ತದೆ. ಗುರುವು ಇಂದಿನಿಂದ ತನ್ನ ಪಥ ಬದಲಾಯಿಸುತ್ತಿದ್ದು, ಧನು ರಾಶಿಯಿಂದ ಮಕರ ರಾಶಿಗೆ ಪ್ರವೇಶ ಮಾಡುತ್ತಾನೆ. ಈ ಪುಣ್ಯ ದಿನಗಳಂದು ಸಾವಿರಾರು ವರ್ಷಗಳ ಪುರಾಣ ಪ್ರಸಿದ್ಧ ತಾಣವಾಗಿರುವ ಕೂಡ್ಲಿಯಲ್ಲಿ ಪ್ರತಿ 12 ವರ್ಷಕ್ಕೊಮ್ಮೆ ಪುಷ್ಕರ ಸ್ನಾನ ನಡೆಯುವುದು ಸಂಪ್ರದಾಯವಾಗಿದೆ. ಆದರೆ ಈ ಬಾರಿ ಇತಿಹಾಸದಲ್ಲೇ ಮೊದಲ ಬಾರಿಗೆ ಬ್ರೇಕ್ ಬಿದ್ದಿದೆ.

    ಇಂದಿನಿಂದ ಆರಂಭವಾಗಬೇಕಿದ್ದ ಪುಷ್ಕರ ಸ್ನಾನಕ್ಕೆ ನಿರ್ಬಂಧ ಹೇರಲಾಗಿದ್ದು, ಕೂಡ್ಲಿ ಕ್ಷೇತ್ರಕ್ಕೆ ಹೊಂದಿಕೊಂಡಂತೆ ಇರುವ ಗ್ರಾಮ ಪಂಚಾಯಿತಿ ಈ ಬಾರಿಯ ಪುಷ್ಕರವನ್ನು ನಿಷೇಧಗೊಳಿಸಲು ಈಗಾಗಲೇ ತೀರ್ಮಾನಿಸಲಾಗಿದೆ. ಹೊರಗಿನಿಂದ ಬರುವವರಿಗೆ ಪ್ರವೇಶ ನಿರ್ಬಂಧಿಸಿರುವ ಹಿನ್ನೆಲೆಯಲ್ಲಿ ಇಂದು ಕೇವಲ ಬೆರಳೆಣಿಕೆಯಷ್ಟು ಜನ ಮಾತ್ರ ಪುಷ್ಕರ ಸ್ನಾನ ಮಾಡಿದರು.

    ರಾಜ್ಯದ ವಿವಿಧೆಡೆಯಿಂದ ಜನ ಆಗಮಿಸಿ ಪುಷ್ಕರದ ದಿನಗಳಲ್ಲಿ ಸ್ನಾನ ಮಾಡಲು ಆಗಮಿಸುತ್ತಿದ್ದರು. ಇಂದಿನ ಯೋಗದ ದಿನ ಸಂಗಮದಲ್ಲಿ ಸ್ನಾನ ಮಾಡಿದರೆ ರೋಗ-ರುಜಿನಗಳು ಮಾಯವಾಗುತ್ತದೆ ಎಂಬುದು ಭಕ್ತರ ನಂಬಿಕೆ. ಆದರೆ ಇದಕ್ಕೆ ಇದೀಗ ಬ್ರೇಕ್ ಬಿದ್ದಿದೆ. ತಾಲೂಕು ಆಡಳಿತದ ಕ್ರಮಕ್ಕೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದು, ಧಾರ್ಮಿಕ ಪ್ರಾಮುಖ್ಯತೆ ಹೊಂದಿರುವ ಪುಷ್ಕರ ನಡೆಸಲೇಬೇಕೆಂದು ಒತ್ತಾಯಿಸುತ್ತಿದ್ದಾರೆ.

  • ನಡುಗಡ್ಡೆಯಲ್ಲಿ ಸಿಲುಕಿದ ಏಳು ಜನ- ಬೋಟ್‍ಗಳ ಮೂಲಕ ರಕ್ಷಣಾ ಕಾರ್ಯಾಚರಣೆಗೆ ಸಿದ್ಧತೆ

    ನಡುಗಡ್ಡೆಯಲ್ಲಿ ಸಿಲುಕಿದ ಏಳು ಜನ- ಬೋಟ್‍ಗಳ ಮೂಲಕ ರಕ್ಷಣಾ ಕಾರ್ಯಾಚರಣೆಗೆ ಸಿದ್ಧತೆ

    ವಿಜಯಪುರ: ಉತ್ತರ ಕರ್ನಾಟಕ ಭಾಗದಲ್ಲಿ ಮತ್ತೆ ವರುಣನ ಅಬ್ಬರ ಜೋರಾಗಿದ್ದು, ಪ್ರವಾಹ ಪರಿಸ್ಥಿತಿಯಿಂದ ಜನ ಕಂಗಾಲಾಗಿದ್ದಾರೆ. ಇದೀಗ ನದಿಯ ನಡುಗಡ್ಡೆಯಲ್ಲಿ 7 ಜನ ಸಿಲುಕಿದ್ದು, ರಕ್ಷಣಾ ಕಾರ್ಯಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ.

    ಜಿಲ್ಲೆಯ ತಾಳಿಕೋಟೆ ಪಟ್ಟಣದ ಬಳಿಯ ಡೋಣಿ ನದಿಯ ನಡುಗಡ್ಡೆಯಲ್ಲಿ ಸಿಲುಕಿಕೊಂಡಿದ್ದು ಸಹಾಯಕ್ಕಾಗಿ ಪರದಾಡುತ್ತಿದ್ದಾರೆ. ಇದ್ದಿಲು ತಯಾರಿಸಲು ಬಂದಿರುವ ಮಹಾರಾಷ್ಟ್ರ ಮೂಲದ ಏಳು ಜನ ಡೋಣಿ ನದಿಯ ನಡುಗಡ್ಡೆಯಲ್ಲಿ ಸಿಲುಕಿದ್ದು, ಏಳು ಜನರ ಪೈಕಿ ಐವರು ಮಕ್ಕಳಿರುವ ಮಾಹಿತಿ ಲಭ್ಯವಾಗಿದೆ.

    ನದಿಯಲ್ಲಿ ಅಪಾಯ ಮಟ್ಟ ಮೀರಿ ಪ್ರವಾಹ ಬಂದರೂ ಹೊರ ಬಾರದೆ ನಡುಗಡ್ಡೆಯಲ್ಲಿ ಉಳಿದುಕೊಂಡಿದ್ದರು. ಪ್ರವಾಹ ಹೆಚ್ಚಾಗುತ್ತಿದ್ದಂತೆ ಹೊರ ಬರಲು ಸಾಧ್ಯವಾಗದೆ ಸ್ಥಳೀಯ ಅಧಿಕಾರಿಗಳಿಗೆ ಕರೆ ಮಾಡಿ ಸಹಾಯಯಾಚಿಸಿದ್ದಾರೆ. ಇದೀಗ ಏಳು ಜನರನ್ನು ಕರೆ ತರಲು ಬೋಟ್ ಗಳ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಗುರುವಾರ ರಾತ್ರಿಯೇ ಸ್ಥಳಕ್ಕೆ ಎಸಿ ಬಲರಾಮ ಲಮಾಣಿ ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇಂದು ನಡುಗಡ್ಡೆಯಲ್ಲಿ ಸಿಲುಕಿದವರ ರಕ್ಷಿಸಿ ಕರೆ ತರಲು ಕಂದಾಯ ಇಲಾಖೆ ಹಾಗೂ ಅಗ್ನಿಶಾಮಕ ಸಿಬ್ಬಂದಿ ಸಿದ್ಧತೆ ಮಾಡಿಕೊಂಡಿದ್ದಾರೆ.

    ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಭಾರೀ ಅನಾಹುತ ಸಂಭವಿಸಿದ್ದು, ನದಿ, ಹಳ್ಳಗಳು ತುಂಬಿ ಹರಿಯುತ್ತಿವೆ. ಇದರಿಂದಾಗಿ ಹಲವು ಗ್ರಾಮಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ವಿಪರೀತ ಮಳೆಯಿಂದಾಗಿ ಜನ ಕಂಗಾಲಾಗಿದ್ದಾರೆ.

  • ಗ್ಯಾಂಗ್‍ರೇಪ್ ಮಾಡಿ ಮಹಿಳೆ ಜೊತೆ ಮಗುವನ್ನ ನದಿಗೆ ಎಸೆದ್ರು- 5ರ ಕಂದಮ್ಮ ಸಾವು

    ಗ್ಯಾಂಗ್‍ರೇಪ್ ಮಾಡಿ ಮಹಿಳೆ ಜೊತೆ ಮಗುವನ್ನ ನದಿಗೆ ಎಸೆದ್ರು- 5ರ ಕಂದಮ್ಮ ಸಾವು

    – ಕಿಡ್ನಾಪ್ ಮಾಡಿ ಸಾಮೂಹಿಕ ಅತ್ಯಾಚಾರ
    – ಸಂತ್ರಸ್ತೆಯನ್ನ ರಕ್ಷಿಸಿದ ಸ್ಥಳೀಯರು

    ಪಾಟ್ನಾ: ಸಾಮೂಹಿಕ ಅತ್ಯಾಚಾರಕ್ಕೊಳಗಾದ ಮಹಿಳೆಯನ್ನು ಆಕೆಯ ಐದು ವರ್ಷದ ಮಗುವಿನೊಂದಿಗೆ ನದಿಗೆ ಎಸೆದಿದ್ದಾರೆ. ಆದರೆ ಸ್ಥಳೀಯರು ಮಹಿಳೆಯನ್ನು ರಕ್ಷಿಸಿದ್ದು, ಮಗು ಸಾವನ್ನಪ್ಪಿರುವ ಅಮಾನವೀಯ ಘಟನೆ ಬಿಹಾರದ ಬಕ್ಸಾರ್‌ನಲ್ಲಿ ನಡೆದಿದೆ.

    ಐದು ವರ್ಷದ ಮಗು ಸಾವನ್ನಪ್ಪಿದೆ. ಈ ಪ್ರಕರಣದ ಆರೋಪಿಗಳಲ್ಲಿ ಓರ್ವನನ್ನು ಬಂಧಿಸಲಾಗಿದೆ. ಸದ್ಯಕ್ಕೆ ಸಂತ್ರಸ್ತೆಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಮಹಿಳೆ ತನ್ನ ಐದು ವರ್ಷದ ಮಗುವಿನೊಂದಿಗೆ ಬ್ಯಾಂಕಿಗೆ ಹೋಗುತ್ತಿದ್ದರು. ಈ ವೇಳೆ ದುಷ್ಕರ್ಮಿಗಳು ಆಕೆಯನ್ನು ಸುತ್ತುವರಿದಿದ್ದು, ಅಪಹರಿಸಿ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ನಂತರ ಆರೋಪಿಗಳು ತಾಯಿ-ಮಗನನ್ನು ಕಟ್ಟಿ ಹಾಕಿ ನದಿಗೆ ಎಸೆದು ಪರಾರಿಯಾಗಿದ್ದಾರೆ ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ.

    ಸಂತ್ರಸ್ತೆ ತಕ್ಷಣ ಸಹಾಯಕ್ಕಾಗಿ ಕೂಗಾಡಿದ್ದಾರೆ. ಆಗ ಸ್ಥಳೀಯರು ಆಕೆಯನ್ನು ನೋಡಿ ನದಿಗೆ ಹಾರಿ ರಕ್ಷಣೆ ಮಾಡಿದ್ದಾರೆ. ಆದರೆ ಮಗುವನ್ನು ರಕ್ಷಿಸಲು ಸಾಧ್ಯವಾಗಿಲ್ಲ. ಸದ್ಯಕ್ಕೆ ಮಗುವಿನ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆಂದು ಆಸ್ಪತ್ರೆಗೆ ರವಾನಿಸಲಾಗಿದೆ. ಇತ್ತ ಮಹಿಳೆಯ ವೈದ್ಯಕೀಯ ಪರೀಕ್ಷೆ ನಡೆಯುತ್ತಿದ್ದು, ಆಕೆಯ ಪತಿಯ ಹೇಳಿಕೆಯನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ.

    ಈಗಾಗಲೇ ಆರೋಪಿಗಳಲ್ಲಿ ಒಬ್ಬನನ್ನು ಬಂಧಿಸಲಾಗಿದ್ದು, ಆತನನ್ನು ವಿಚಾರಣೆ ನಡೆಸಲಾಗುತ್ತಿದೆ. ಈ ಕುರಿತು ಎಫ್‍ಐಆರ್ ದಾಖಲಿಸಿದ್ದು, ಇತರ ಆರೋಪಿಗಳಿಗಾಗಿ ಶೋಧಕಾರ್ಯ ನಡೆಯುತ್ತಿದೆ ಎಂದು ಪೊಲೀಸ್ ಅಧಿಕಾರಿ ಕೆ.ಕೆ.ಸಿಂಗ್ ಹೇಳಿದ್ದಾರೆ.

  • ರಾತ್ರೋರಾತ್ರಿ ಶ್ರೀಮಂತಳಾದ ಅಜ್ಜಿ – ಅದೃಷ್ಟ ಬದಲಿಸಿದ ಸತ್ತ ಮೀನು

    ರಾತ್ರೋರಾತ್ರಿ ಶ್ರೀಮಂತಳಾದ ಅಜ್ಜಿ – ಅದೃಷ್ಟ ಬದಲಿಸಿದ ಸತ್ತ ಮೀನು

    – ಒಂದೇ ಮೀನು 3 ಲಕ್ಷಕ್ಕಿಂತ ಹೆಚ್ಚಿನ ಬೆಲೆಗೆ ಮಾರಾಟ

    ಕೋಲ್ಕತ್ತಾ: ನದಿಯಲ್ಲಿ ಬರೋಬ್ಬರಿ 52 ಕೆಜಿ ತೂಕದ ಸತ್ತ ಮೀನು ಹಿಡಿದ ನಂತರ ಅಜ್ಜಿಯೊಬ್ಬರು ರಾತ್ರೋರಾತ್ರಿ ಶ್ರೀಮಂತರಾಗಿರುವ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ.

    ದಕ್ಷಿಣ 24 ಪರಗಣ ಜಿಲ್ಲೆಯ ಸುಂದರ್‌ಬನ್ಸ್ ಪ್ರದೇಶದ ಸಾಗರ್ ದ್ವೀಪದ ಗ್ರಾಮದ ನಿವಾಸಿ ಪುಷ್ಪಾ ಕಾರ್ ಗೆ ಭಾರೀ ತೂಕದ ಸತ್ತ ಮೀನೊಂದು ಸಿಕ್ಕಿದೆ. ಆ ಮೀನನ್ನು 3 ಲಕ್ಷಕ್ಕಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡಿದ್ದಾರೆ. ಮೀನನ್ನು ಸ್ಥಳೀಯ ಮಾರುಕಟ್ಟೆಯಲ್ಲಿ ಪ್ರತಿ ಕೆಜಿಗೆ 6,200 ರೂಪಾಯಿಯಂತೆ ಮಾರಾಟ ಮಾಡಲಾಯಿತು. ಒಂದೇ ಮೀನನ್ನು 3 ಲಕ್ಷಕ್ಕೂ ಅಧಿಕ ಹಣಕ್ಕೆ ಮಾರಾಟ ಮಾಡಲಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

    ಪುಷ್ಪಾ ಕಾರ್ ಮೀನುಗಾರಿಕೆಗೆ ಹೋಗುವಾಗ ಆಕಸ್ಮಿಕವಾಗಿ ನದಿಯಿಂದ ದೊಡ್ಡ ಮೀನು ತೇಲಿ ಬರುತ್ತಿರುವುದನ್ನು ನೋಡಿದ್ದಾರೆ. ತಕ್ಷಣ ಪುಷ್ಪಾ ಕಾರ್ ನದಿಗೆ ಹಾರಿದ್ದು, ಮೀನನ್ನು ನದಿಯ ತೀರಕ್ಕೆ ಎಳೆದುಕೊಂಡು ಬಂದಿದ್ದಾರೆ. ಅಜ್ಜಿಗೆ ಮೀನನ್ನು ತೀರಕ್ಕೆ ತರಲು ಸ್ವಲ್ಪ ಸಮಯ ಮತ್ತು ಶ್ರಮ ಬೇಕಾಯಿತು. ನಂತರ ಆ ಮೀನನ್ನು ಭೋಲಾ ಮೀನು ಎಂದು ಗುರುತಿಸಲಾಗಿದೆ. ಬಳಿಕ ಅದನ್ನು ಮಾರುಕಟ್ಟೆಗೆ ಕೊಂಡೊಯ್ಯಲು ಸ್ಥಳೀಯರು ಸಹಾಯ ಮಾಡಿದ್ದರು.

    ಅಂದಹಾಗೆ ಆ ದೈತ್ಯ ಮೀನು ಬಹುಶಃ ಹಾದುಹೋಗುವ ಹಡಗಿಗೆ ಡಿಕ್ಕಿ ಹೊಡೆದು ಸತ್ತು ಹೋಗಿರಬಹುದು. ಒಂದು ವೇಳೆ ಮೀನು ಕೊಳೆಯಲು ಪ್ರಾರಂಭಿಸದಿದ್ದರೆ ಇನ್ನೂ ಹೆಚ್ಚಿನ ಹಣ ಪಡೆಯಬಹುದಿತ್ತು ಎಂದು ಸ್ಥಳೀಯ ಮೀನು ವ್ಯಾಪಾರಿಗಳು ಹೇಳಿದ್ದಾರೆ.

    “ಮೀನು ನನಗೆ ಜಾಕ್‍ಪಾಟ್ ಆಗಿ ಪರಿಣಮಿಸಿದೆ. ಸಗಟು ಮಾರುಕಟ್ಟೆಯಲ್ಲಿ ಪ್ರತಿ ಕೆಜಿಗೆ 6,200 ರೂ.ಗೆ ಮಾರಾಟ ಮಾಡುವ ಮೂಲಕ ನಾನು 3 ಲಕ್ಷಕ್ಕಿಂತ ಹೆಚ್ಚಿನ ಹಣವನ್ನು ಪಡೆದುಕೊಂಡಿದ್ದೇನೆ. ನನ್ನ ಜೀವನದಲ್ಲಿ ಇಂತಹ ದೈತ್ಯ ಮೀನನ್ನು ನಾನು ನೋಡಿಲ್ಲ. ಇದನ್ನು ಬಂಗಾಳಿ ಭಾಷೆಯಲ್ಲಿ ‘ಭೋಲಾ’ ಮೀನು ಎಂದು ಕರೆಯಲಾಗುತ್ತದೆ” ಎಂದು ಅಜ್ಜಿ ಹೇಳಿದ್ದಾರೆ.

    ಮೀನು ಕೊಳೆಯಲು ಪ್ರಾರಂಭಿಸಿದ್ದರಿಂದ ತಿನ್ನಲೂ ಸಾಧ್ಯವಿಲ್ಲ. ಜೊತೆಗೆ ಈ ಗಾತ್ರದ ಮೀನುಗಳ ಮಾಂಸವು ರಬ್ಬರ್ ಆಗಿರುವುದರಿಂದ ಇತರೆ ಉದ್ದೇಶಗಳಿಗೆ ಬಳಸಿಕೊಳ್ಳಬಹುದು. ಬ್ಲಬ್ಬರ್ ಎಂದು ಕರೆಯಲ್ಪಡುವ ಮೀನಿನ ಕೊಬ್ಬನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡಲಾಗುತ್ತದೆ. ಆಗ್ನೇಯ ಏಷ್ಯಾದ ದೇಶಗಳಿಗೆ ಬ್ಲಬ್ಬರ್ ನಂತಹ ಮೀನಿನ ಅಂಗಗಳನ್ನು ರಫ್ತು ಮಾಡಲಾಗುತ್ತದೆ. ಅಲ್ಲದೇ ಈ ಮೀನುಗಳನ್ನು ಔಷಧೀಯ ಉದ್ದೇಶಗಳಿಗಾಗಿ ಸಹ ಬಳಸಿಕೊಳ್ಳಲಾಗುತ್ತದೆ.

  • ಬೀದರ್‌, ಕಲಬುರಗಿಯಲ್ಲಿ ವರುಣನ ಅಬ್ಬರ – ಗ್ರಾಮಗಳು ಜಲಾವೃತ, ಸೇತುವೆಗಳು ಮುಳುಗಡೆ

    ಬೀದರ್‌, ಕಲಬುರಗಿಯಲ್ಲಿ ವರುಣನ ಅಬ್ಬರ – ಗ್ರಾಮಗಳು ಜಲಾವೃತ, ಸೇತುವೆಗಳು ಮುಳುಗಡೆ

    – ಉಕ್ಕಿ ಹರಿಯುತ್ತಿರೋ ಜೀವನದಿ ಮಾಂಜ್ರಾ

    ಬೀದರ್/ಕಲಬುರಗಿ: ಮಹಾಮಳೆಗೆ ಬೀದರ್ ಜಿಲ್ಲೆಯಾದ್ಯಂತ ಹಲವು ಗ್ರಾಮಗಳು ಜಲಾವೃತವಾಗಿದ್ದು, ಸೇತುವೆಗಳು ಮುಳುಗಡೆಯಾಗಿ ಪ್ರವಾಹ ಸೃಷ್ಟಿಯಾಗಿದೆ. ಇಷ್ಟು ದಿನ ನೀರು ಇಲ್ಲದೆ ಖಾಲಿ ಖಾಲಿಯಾಗಿದ್ದ ಜಿಲ್ಲೆಯ ಜೀವನದಿ ಮಾಂಜ್ರಾ ಉಕ್ಕಿ ಹರಿಯುತ್ತಿದೆ. ಸತತ ಸುರಿದ ಮಹಾಮಳೆಗೆ ಬೀದರ್ ಪಟ್ಟಣದ ಹಲವು ಮನೆಗಳಿಗೆ ನೀರು ನುಗ್ಗಿ ಅವಾಂತರಗಳು ಸೃಷ್ಟಿಯಾಗಿವೆ.

    ಬೀದರಿನಲ್ಲಿ ಸತತ ನಾಲ್ಕು ದಿನಗಳಿಂದ ಸುರಿಯುತ್ತಿರುವ ಮಹಾಮಳೆಗೆ ಬಸವಕಲ್ಯಾಣ, ಭಾಲ್ಕಿ, ಕಮಲಾನಗರ, ಹುಮ್ನಾಬಾದ್ ಸೇರಿದಂತೆ ಜಿಲ್ಲೆಯಾದ್ಯಂತ ಅವಾಂತರಗಳು ಎದುರಾಗಿವೆ. ಬಸವಕಲ್ಯಾಣ ತಾಲೂಕಿನ ಸಿರಗಾಪೂರ್ ಗ್ರಾಮದ ಬಳಿರುವ ಸೇತುವೆ ಮುಳುಗಡೆಯಾಗಿ ಸಿರಗಾಪೂರ್ ಟು ಕೋಹಿನೂರು ಸಂಪರ್ಕ ಕಡಿತವಾಗಿದೆ. ಸಿರಗಾಪೂರ್ ಕೆರೆ ತುಂಬಿ ರಸ್ತೆ ಮೇಲೆ ನೀರು ಹರಿದು ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ.

    ಭಾಲ್ಕಿ ತಾಲೂಕಿನ ಉಚ್ಛ ಗ್ರಾಮ ಸಂಪೂರ್ಣ ಜಲಾವೃತವಾಗಿದ್ದು, ಗ್ರಾಮದ ಹನುಮಾನ್ ದೇವಸ್ಥಾನ ಹಾಗೂ ರಸ್ತೆಗಳು ಕರೆಯಂತಾಗಿವೆ. ಭಾಲ್ಕಿ ಹಾಗೂ ಔರಾದ್ ತಾಲೂಕಿನ ಮಾಂಜ್ರಾ ನದಿಯ ದಡದಲ್ಲಿರುವ ಸಾವಿರಾರು ಎಕರೆ ಜಮೀನಿಗೆ ನೀರು ನುಗ್ಗಿ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ. ಜಿಲ್ಲೆಯಾದ್ಯಂತ ಸೋಯಾ, ಉದ್ದು, ತೊಗರಿ, ಕಬ್ಬು, ಜೋಳ ಸೇರಿದಂತೆ ಸಾವಿರಾರು ಎಕರೆಯ ಬೆಳೆಗಳು ಮಹಾಮಳೆಗೆ ನಾಶವಾಗಿದೆ.

    ಇನ್ನೂ ಕಲಬುರಗಿ ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ಧಾರಾಕಾರ ಮಳೆಯಾಗುತ್ತಿದ್ದು, ಹಲವು ಅವಾಂತರಗಳನ್ನು ಸೃಷ್ಟಿಸಿದೆ. ಕಾಗಿಣಾ ನದಿ ಅಪಾಯದ ಮಟ್ಟ ಮೀರಿ ಹರಿದ ಹಿನ್ನೆಲೆ ಉತ್ತರಾದಿ ಮಠಕ್ಕೆ ನೀರು ನುಗ್ಗಿದೆ. ಮುಂಗಾರು ಆರಂಭವಾಗಿ ಎರಡು ತಿಂಗಳು ಕಳೆದ ನಂತರ ಇದೀಗ ಕಲಬುರಗಿಯಲ್ಲಿ ಮಳೆಯ ಆರ್ಭಟ ಶುರುವಾಗಿದ್ದು, ಕೇವಲ ಎರಡು ದಿನಗಳ ಕಾಲ ಸುರಿದ ಧಾರಾಕಾರ ಮಳೆಗೆ ಕಲಬುರಗಿ ಜಿಲ್ಲೆಯ ಚಿಂಚೋಳಿ, ಸೇಡಂ ಹಾಗೂ ಆಳಂದ ತಾಲೂಕಿನ ಜನ ಅಕ್ಷರಶಃ ನಲುಗಿ ಹೋಗಿವೆ.

    ಕಾಗಿಣಾ ನದಿ ಅಪಾಯದ ಮಟ್ಟ ಮೀರಿ ಉಕ್ಕಿ ಹರಿಯುತ್ತಿದ್ದು, ಮಳಖೇಡ ಸೇತುವೆ ಸಂಪೂರ್ಣ ಜಲಾವೃತಗೊಂಡು ವಾಘ್ದಾರಿ ಟೂ ರಿಬ್ಬನಪಲ್ಲಿ ರಾಜ್ಯ ಹೆದ್ದಾರಿಯ ಸಂಚಾರ ಸಂಪೂರ್ಣ ಬಂದ್ ಆಗಿದೆ. ನದಿಯ ಪಕ್ಕದಲ್ಲಿರುವ ಉತ್ತರಾದಿ ಮಠಕ್ಕೂ ನೀರು ನುಗ್ಗಿ ಇಡೀ ಮಠವೇ ಸಂಪೂರ್ಣ ಜಲಾವೃತಗೊಂಡಿದೆ. ಆಳಂದ ತಾಲೂಕಿನ ಸಾಲೆಗವ್ ಗ್ರಾಮದ ಹಳ್ಳದಲ್ಲಿ ಟ್ರ್ಯಾಕ್ಟರ್ ಪಲ್ಟಿ ಆಗಿದೆ. ಅದೃಷ್ಟವಶಾತ್ ಟ್ರ್ಯಾಕ್ಟರ್‌ನಲ್ಲಿದ್ದ 7 ಮಂದಿಯೂ ಈಜಿ ದಡ ಸೇರಿ ಬಚಾವ್ ಆಗಿದ್ದಾರೆ. ಚಿಂಚೋಳಿ ತಾಲೂಕಿನ 10ಕ್ಕೂ ಹೆಚ್ಚು ಗ್ರಾಮಗಳಿಗೆ ನೀರು ನುಗ್ಗಿದೆ.

     

    ಸದ್ಯ ಜಿಲ್ಲೆಯಲ್ಲಿ ಸುರಿಯುತ್ತಿರುವ ಮಳೆಗೆ ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿವೆ. ಇನ್ನೆರಡು ದಿನ ಜಿಲ್ಲೆಯಲ್ಲಿ ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಇನ್ನೂ ರಾಯಚೂರು ಮತ್ತು ಬಾಗಲಕೋಟೆಯಲ್ಲೂ ಅಪಾರ ಪ್ರಮಾಣದಲ್ಲಿ ಮಳೆಯಾಗುತ್ತಿದ್ದು, ನದಿಗಳು ತುಂಬಿ ಹರಿಯುತ್ತಿವೆ. ಪರಿಣಾಮ ಜಿಲ್ಲೆಯ ಕೆಲ ಗ್ರಾಮಗಳಲ್ಲಿ ಪ್ರವಾಹದ ಭೀತಿ ಎದುರಾಗಿದೆ.

  • ಒಬ್ಬರನ್ನ ಉಳಿಸಲೆಂದು 6 ಜನ ನದಿಗೆ ಧುಮುಕಿದ್ರು – ಮೂವರ ಶವ ಪತ್ತೆ, ಮಕ್ಕಳಿಗಾಗಿ ಶೋಧ

    ಒಬ್ಬರನ್ನ ಉಳಿಸಲೆಂದು 6 ಜನ ನದಿಗೆ ಧುಮುಕಿದ್ರು – ಮೂವರ ಶವ ಪತ್ತೆ, ಮಕ್ಕಳಿಗಾಗಿ ಶೋಧ

    – ಒಂದೇ ಕುಟುಂಬದ ಆರು ಜನರು
    – ನದಿ ದಡದಲ್ಲಿ ಕುಟುಂಬಸ್ಥರ ಆಕ್ರಂದನ
    – ಗ್ರಾಮದಲ್ಲಿ ಸ್ಮಶಾನ ಮೌನ

    ಚಂಡೀಗಢ: ಒಂದೇ ಕುಟುಂಬದ ಆರು ಜನ ನದಿಯಲ್ಲಿ ಮುಳುಗಿರುವ ಘಟನೆ ಹರಿಯಾಣದ ಪಾಣಿಪತ್ ಜಿಲ್ಲೆಯ ಜಲ್ಮಾನಾ ಗ್ರಾಮದಲ್ಲಿ ನಡೆದಿದೆ. ಮಂಗಳವಾರ ಬೆಳಗ್ಗೆ ಕುಟುಂಸ್ಥರು ಯಮುನಾ ನದಿ ದಡದಲ್ಲಿ ವಾಯು ವಿಹಾರಕ್ಕೆ ತೆರಳಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಆರು ಜನರಲ್ಲಿ ಮೂವರ ಶವ ಪತ್ತೆಯಾಗಿದ್ದು, ಮಕ್ಕಳಿಗಾಗಿ ಶೋಧ ಕಾರ್ಯ ಮುಂದುವರಿದೆ.

    ನದಿ ದಡದಲ್ಲಿ ವಾಯು ವಿಹಾರಕ್ಕಾಗಿ ಸುಶೀಲ್ ಕುಟುಂಬದವರ ಜೊತೆ ತೆರಳಿದ್ದರು. ಸುಶೀಲ್ ಜೊತೆಯಲ್ಲಿ ಪತ್ನಿ ಸೋನಿಯಾ (32), ಮಕ್ಕಳಾದ ಸಾಗರ್ (15), ಪಾಯಲ್ (12), ಸಂಬಂಧಿ ಸರೀತಾ (18), ಸಂಬಂಧಿಯ ಮಕ್ಕಳಾದ ಬಾದಲ್ (18) ಮತ್ತು ಗರ್ವ್ (16) ಜೊತೆಯಾಗಿ ವಾಕಿಂಗ್ ಗೆ ಬಂದಿದ್ದರು. ಈ ವೇಳೆ ಮಕ್ಕಳು ನದಿಯಲ್ಲಿ ಸ್ನಾನ ಮಾಡೋದಾಗಿ ಹಠ ಹಿಡಿದಿದ್ದರಿಂದ ಸುಶೀಲ್ ನದಿ ದಡದಲ್ಲಿಯೇ ಕುಳಿತುಕೊಂಡಿದ್ದರು.

    ಪತ್ನಿ ಸೋನಿಯಾ ಮಕ್ಕಳನ್ನು ಕರೆದುಕೊಂಡು ನದಿಯಲ್ಲಿ ಇಳಿದಿದ್ದರು. ಮಕ್ಕಳು ನದಿ ಮಧ್ಯಭಾಗಕ್ಕೆ ತೆರಳುತ್ತಿದ್ದಂತೆ ಸೋನಿಯಾ ಅವರ ರಕ್ಷಣೆಗೆ ಧಾವಿಸಿದ್ದಾರೆ. ಸರೀತಾ ಸಹ ನದಿಯಲ್ಲಿ ಮುಳಗಲಾರಂಭಿಸಿದ್ದಾರೆ. ಹೀಗೆ ಒಬ್ಬರನ್ನೊಬ್ಬರು ರಕ್ಷಿಸಲು ಹೋಗಿ ಆರು ಜನ ಯುಮುನೆಯ ಪಾಲಾಗಿದ್ದಾರೆ. ಇನ್ನು ದಡದಲ್ಲಿ ಕುಳಿತಿದ್ದ ಸುಶೀಲ್ ಸಹಾಯಕ್ಕಾಗಿ ಕೂಗಿ ಕೂಗಿ ಜ್ಞಾನ ತಪ್ಪಿದ್ದಾರೆ.

    ಮಕ್ಕಳ ಧ್ವನಿ ಕೇಳಿದ್ದ ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದ ರೈತ ಮತ್ತು ಕುರಿಗಾಹಿ ನದಿಗೆ ಧುಮುಕಿದ್ರೂ ಯಾರನ್ನ ಉಳಿಸಲು ಸಾಧ್ಯವಾಗಿಲ್ಲ. ವಿಷಯ ತಿಳಿಯುತ್ತಿದ್ದಂತೆ ಗ್ರಾಮದ ಹಲವು ಯುವಕರು ನದಿಗೆ ಧುಮುಕಿ ಆರು ಜನರಿಗಾಗಿ ಶೋಧ ನಡೆಸಿದ್ದಾರೆ. ಪೊಲೀಸರು ಸಹ ಘಟನಾ ಸ್ಥಳಕ್ಕೆ ಆಗಮಿಸಿ ಈಜು ತಜ್ಞರ ಮೂಲಕ ಹುಡುಕಾಟ ನಡೆಸಿದ್ದರು. ಬೆಳಗ್ಗೆ 11 ಗಂಟೆಗೆ ಘಟನಾ ಸ್ಥಳದಿಂದ ಎರಡು ಕಿಲೋ ಮೀಟರ್ ದೂರದಲ್ಲಿ ಸೋನಿಯಾ, ಸರೀತಾ ಮತ್ತು ಬಾದಲ್ ಶವ ಪತ್ತೆಯಾಗಿದೆ. ಶವಗಳ ಮರಣೋತ್ತರ ಪರೀಕ್ಷೆ ನಡೆಸಿ ಮೃತದೇಹಗಳನ್ನು ಕುಟುಂಬಸ್ಥರಿಗೆ ನೀಡಲಾಗಿದೆ.

    ಡಿಸಿ ಧಮೇಂದ್ರ ಸಿಂಗ್, ಡಿಎಸ್‍ಪಿ ಪ್ರದೀಪ್ ಕುಮಾರ್, ಡಿಆರ್‍ಓ ಚಂದ್ರಮೋಹನ್, ತಹಶೀಲ್ದಾರ್ ನರೇಶ್ ಕೌಶಲ್ ಘಟನಾ ಸ್ಥಳದಲ್ಲಿದ್ದಾರೆ. ಬೋಟ್, ಮುಳುಗು ತಜ್ಞರ ಸಹಾಯದ ಮೂಲಕ ಉಳಿದವರ ಶೋಧ ಕಾರ್ಯ ನಡೆಸುತ್ತಿದ್ದಾರೆ. ಹಾಗೆ ಸುತ್ತಲಿನ ಗ್ರಾಮಗಳ ಈಜುಗಾರರು ಮತ್ತು ನಾವಿಕರನ್ನ ಶೋಧ ಕಾರ್ಯದಲ್ಲಿ ಬಳಸಿಕೊಳ್ಳಲಾಗುತ್ತಿದೆ. ಗ್ರಾಮದಲ್ಲಿ ನೀರವ ಮೌನ ಆವರಿಸಿದ್ದು, ನದಿ ದಡದಲ್ಲಿಯೇ ಗ್ರಾಮಸ್ಥರು ಬೀಡು ಬಿಟ್ಟಿದ್ದಾರೆ.

  • ಹಲವೆಡೆ ಧಾರಾಕಾರ ಮಳೆ – ಕೆರೆ ತುಂಬಿ ಜಮೀನುಗಳಿಗೆ ನುಗ್ಗಿದ ನೀರು

    ಹಲವೆಡೆ ಧಾರಾಕಾರ ಮಳೆ – ಕೆರೆ ತುಂಬಿ ಜಮೀನುಗಳಿಗೆ ನುಗ್ಗಿದ ನೀರು

    – ಅಪಾರ ಪ್ರಮಾಣದ ಬೆಳೆ ನಾಶ
    – ಹಲವು ಸೇತುವೆಗಳು ಮುಳುಗಡೆ

    ರಾಯಚೂರು/ಬೀದರ್: ರಾಜ್ಯದಲ್ಲಿ ವರುಣನ ಅಬ್ಬರ ಮುಂದುವರಿದಿದ್ದು, ಹಲವು ಜಿಲ್ಲೆಗಳಲ್ಲಿ ಹಳ್ಳ, ಕೊಳ್ಳಗಳು ತುಂಬಿ ಹರಿಯುತ್ತಿವೆ. ಬೀದರ್‌ನಲ್ಲಿ ತಡರಾತ್ರಿ ಸುರಿದ ಧಾರಾಕಾರ ಮಳೆಗೆ ಭಾಲ್ಕಿ ತಾಲೂಕಿನ ಆನಂದವಾಡಿ ಸೇತುವೆ ಮುಳುಗಡೆಯಾಗಿ ನಾಲ್ಕು ಗ್ರಾಮಗಳ ಸಂಪರ್ಕ ಸಂಪೂರ್ಣ ಕಡಿತವಾಗಿದೆ. ಇತ್ತ ರಾಯಚೂರಿನಲ್ಲಿ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ.

    ರಾಯಚೂರು ಜಿಲ್ಲೆಯಾದ್ಯಂತ ಮಳೆ ಮುಂದುವರಿದಿದ್ದು, ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ. ಮಳೆಯಿಂದಾಗಿ ಹತ್ತಿ ಬೆಳೆ ಸಂಪೂರ್ಣ ಹಾಳಾಗುವ ಭೀತಿ ಎದುರಾಗಿದೆ. ರಾಯಚೂರು ತಾಲೂಕಿನಲ್ಲಿ ಸಾಕಷ್ಟು ಅವಾಂತರ ಸೃಷ್ಟಿಸಿರೋ ಮಳೆಯಿಂದ ಕೆರೆ ಕೋಡಿ ತುಂಬಿ ರೈತರ ಜಮೀನುಗಳಿಗೆ ನೀರು ನುಗ್ಗಿದೆ. ಜಮೀನಿಗೆ ನೀರು ನುಗ್ಗಿರುವುದರಿಂದ ಬೆಳೆ ಹಾಳಾಗಿದ್ದು, ಮೊಣಕಾಲುವರೆಗೂ ಜಮೀನಿನಲ್ಲಿ ನೀರು ನಿಂತಿರುವುದರಿಂದ ಚೆನ್ನಾಗಿ ಬೆಳೆದಿದ್ದ ಬೆಳೆ ಹಾಳಾಗಿವೆ.

    ಸಿಂಧನೂರು ತಾಲೂಕಿನ ಬಳಗಾನೂರ ಗ್ರಾಮದಲ್ಲಿ ಮಳೆಯಿಂದ ಮನೆಗಳಿಗೆ ನೀರು ನುಗ್ಗಿದೆ. ಅಲ್ಲದೇ ರಸ್ತೆ ಮೇಲೆ ನೀರು ಹರಿದು ಓಡಾಟಕ್ಕೆ ತೊಂದರೆಯುಂಟಾಗಿದೆ. ರಾಯಚೂರಿನ ಎಸ್‍ಪಿ ಕಚೇರಿ ಬಳಿ ಮರ ನೆಲಕ್ಕುರುಳಿ ಕೆಲಕಾಲ ರಸ್ತೆ ಸಂಚಾರಕ್ಕೆ ಅಡ್ಡಿಯಾಗಿತ್ತು. ರಾತ್ರಿಯಿಡಿ ಸುರಿದ ಮಳೆಯಿಂದ ಜನ ಜೀವನ ಅಸ್ತವ್ಯಸ್ತವಾಗಿದ್ದು, ಜಿಲ್ಲೆಯಾದ್ಯಂತ ಮೋಡ ಕವಿದ ವಾತಾವರಣವಿದೆ.

    ಬೀದರ್‌ನಲ್ಲೂ ತಡರಾತ್ರಿ ಸುರಿದ ಧಾರಾಕಾರ ಮಳೆಗೆ ಜಿಲ್ಲೆಯಾದ್ಯಂತ ಹಲವು ಸೇತುವೆಗಳು ಮುಳುಗಡೆಯಾಗಿ ಸಾವಿರಾರು ಎಕರೆ ಜಮೀನಿಗೆ ನೀರು ನುಗ್ಗಿ ಬೆಳೆ ನಾಶವಾಗಿದೆ. ತಡರಾತ್ರಿ ಕಮಲಾನಗರ ತಾಲೂಕು ವ್ಯಾಪ್ತಿಯಲ್ಲಿ ಭರ್ಜರಿ ಮಳೆಯಾಗಿದ್ದು, ತಾಲೂಕಿನ ಸೋನಾಳ್, ಲಖಣ್ ಗಾಂವ್ ಹಾಗೂ ಬೆಳಕುಣಿ ಸೇತುವೆಗಳು ಸಂಪೂರ್ಣ ಮುಳುಗಡೆಯಾಗಿವೆ. ಜೊತೆಗೆ ಹಲವು ಗ್ರಾಮಗಳ ಸಂಪರ್ಕ ಸಂಪೂರ್ಣ ಬಂದಾಗಿದೆ. ಔರಾದ್ ತಾಲೂಕಿನ ಚಂದಾಪೂರ್ ಸೇತುವೆ ಬಳಿಯ ಸಾವಿರಾರು ಎಕರೆ ಜಮೀನಿನಲ್ಲಿ ಬೆಳೆದಿದ್ದ ಬೆಳೆ ಮಹಾ ಮಳೆಗೆ ನಾಶವಾಗಿದೆ. ಎರಡು ದಿನಗಳಲ್ಲಿ ಜಿಲ್ಲೆಯಾದ್ಯಂತ 100ಕ್ಕೂ ಹೆಚ್ಚು ಮೀಲಿ ಮೀಟರ್ ಮಳೆಯಾಗಿದ್ದು, ಹವಾಮಾನ ಇಲಾಖೆಯ ಪ್ರಕಾರ ಜಿಲ್ಲೆಯಲ್ಲಿ ಇನ್ನೂ ಮೂರು ದಿನಗಳ ಕಾಲ ಮಹಾಮಳೆಯಾಗಲಿದೆ ಎಂದು ಹೇಳಲಾಗುತ್ತಿದೆ.

    ಇನ್ನೂ ಬಳ್ಳಾರಿಯ ಹೊಸಪೇಟೆ ತಾಲೂಕಿನ ಡಣಾಯಕನ ಕೆರೆ ಕೋಡಿ ಒಡೆದು ನೂರಾರು ಎಕರೆ ಬೆಳೆಗೆ ನೀರು ನುಗ್ಗಿದೆ. ಕಳೆದ ವಾರ ಸುರಿದ ಮಳೆ ಕೆರೆ ಭರ್ತಿಯಾಗಿತ್ತು. ಈಗ ಮತ್ತೆ ಮಳೆಯಾಗಿದ್ದರಿಂದ ಕೋಡಿ ಒಡೆದು ಉತ್ತಮವಾಗಿ ಬೆಳದ ಫಸಲಿಗೆ ನೀರು ನುಗ್ಗಿದೆ. ಮೆಕ್ಕೆಜೋಳ, ಈರುಳ್ಳಿ, ಭತ್ತೆ ಸೇರಿದಂತೆ ನಾನಾ ಬೆಳೆಗಳಿಗೆ ಕೆರೆ ನೀರು ನುಗ್ಗಿದೆ. ಇತ್ತ ಕಲಬುರಗಿ ಜಿಲ್ಲೆಯಾದ್ಯಂತ ಭಾರೀ ಮಳೆಯಾಗುತ್ತಿರುವ ಹಿನ್ನೆಲೆ ಕಾಗಿನಾ ನದಿ ತುಂಬಿ ಹರಿಯುತ್ತಿದೆ. ಪರಿಣಾಮ ಜಿಲ್ಲೆಯ ಸೇಡಂ ತಾಲೂಕಿನ ಮಳಖೇಡ ಗ್ರಾಮದ ಬಳಿಯಿರುವ ಸೇತುವೆ ಸಂಪೂರ್ಣ ಜಲಾವೃತವಾಗಿದ್ದು, ಕಲಬುರಗಿ- ಸೇಡಂ ರಸ್ತೆ ಸಂಚಾರ ಸ್ಥಗಿತವಾಗಿದೆ.

  • ಪೊಲೀಸರಿಂದ ತಪ್ಪಿಸಿಕೊಳ್ಳಲು ನದಿಗೆ ಜಿಗಿದ ಐವರು ಗೆಳೆಯರು

    ಪೊಲೀಸರಿಂದ ತಪ್ಪಿಸಿಕೊಳ್ಳಲು ನದಿಗೆ ಜಿಗಿದ ಐವರು ಗೆಳೆಯರು

    -ಓರ್ವ ಸಾವು, ನಾಲ್ವರು ಪಾರು

    ದಿಸ್ಪುರ: ಪೊಲೀಸರಿಂದ ತಪ್ಪಿಸಿಕೊಳ್ಳಲು ನದಿಗೆ ಧುಮುಕಿದ ಐವರು ಗೆಳೆಯರಲ್ಲಿ ಓರ್ವ ಸಾವನ್ನಪ್ಪಿರುವ ಘಟನೆ ಅಸ್ಸಾಂ ರಾಜ್ಯದ ಕಮಪುರ ಜಿಲ್ಲೆಯಲ್ಲಿ ನಡೆದಿದೆ. ಸೋಮವಾರ ಸಂಜೆ ಯುವಕನ ಶವ ಪತ್ತೆಯಾಗಿದೆ.

    ಖೇಮಪುರದ ಠಾಣಾ ವ್ಯಾಪ್ತಿಯ ಅಂತರ್ಗತ ತೆತಲಿಸಾರಾ ಗ್ರಾಮದ ದೇವಾಶೀಷ ಮೃತ ಯುವಕ. ಸೆಪ್ಟೆಂಬರ್ 12ರಂದು ದೇವಾಶೀಷ ನಾಪತ್ತೆಯಾಗಿದ್ದನು. ಪೊಲೀಸರ ತಂಡ ಸೆಪ್ಟೆಂಬರ್ 12ರಿಂದ ದೇವಾಶೀಷ ಮತ್ತು ಆತನ ನಾಲ್ವರು ಗೆಳೆಯರನ್ನ ಹಿಂಬಾಲಿಸುತ್ತಿದ್ದರು. ದೇವಾಶೀಷ ಮತ್ತು ಆತನ ಗೆಳೆಯರು ದೇವಸ್ಥಾನದಲ್ಲಿ ನಶೆ ಪದಾರ್ಥ ಸೇವಿಸುತ್ತಿದ್ದರು.

    ಪೊಲೀಸರು ಬರುತ್ತಿರುವ ವಿಷಯ ತಿಳಿದು ದೇವಾಶೀಷ ಹಾಗೂ ಗೆಳೆಯರು ನಶೆಯಲ್ಲಿ ನದಿಗೆ ಧಮುಕಿದ್ದಾರೆ. ನಾಲ್ವರು ದಡ ಸೇರುವಲ್ಲಿ ಯಶಸ್ವಿಯಾದ್ರೆ, ದೇವಾಶೀಷ ಈಜಲು ಆಗದೇ ಮುಳುಗಿದ್ದಾನೆ. ಸೋಮವಾರ ಎಸ್‍ಡಿಆರ್‍ಎಫ್ ತಂಡ ದೇವಾಶೀಷ ಮೃತದೇಹವನ್ನು ಹೊರ ತೆಗೆದಿದ್ದಾರೆ. ಮರಣೋತ್ತರ ಶವ ಪರೀಕ್ಷೆ ಬಳಿಕ ಕುಟುಂಬಸ್ಥರಿಗೆ ನೀಡಲಾಗಿದೆ. ದೇವಾಲಯದಲ್ಲಿ ಯುವಕರನ್ನು ಪೊಲೀಸರು ಥಳಿಸಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಹಾಗಾಗಿ ಜಿಲ್ಲಾಡಳಿತ ಈ ಸಂಬಂಧ ಸೂಕ್ತ ತನಿಖೆ ನಡೆಸಬೇಕಿದೆ ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.