Tag: ನದಿ

  • 100 ವರ್ಷದ, 2 ಮೀಟರ್ ಉದ್ದದ ದೈತ್ಯ ಮೀನು ಅಮೇರಿಕಾದಲ್ಲಿ ಪತ್ತೆ

    100 ವರ್ಷದ, 2 ಮೀಟರ್ ಉದ್ದದ ದೈತ್ಯ ಮೀನು ಅಮೇರಿಕಾದಲ್ಲಿ ಪತ್ತೆ

    ವಾಷಿಂಗ್ಟನ್: ಅಪರೂಪದ ಜಾತಿಗೆ ಸೇರಿದ 100 ವರ್ಷದ ಸ್ಟರ್ಜಿಯನ್ ಎಂಬ ದೈತ್ಯ ಮೀನೊಂದು ಅಮೇರಿಕಾದ ಡೆಟ್ರಾಯ್ಟ್ ನದಿಯಲ್ಲಿ ಪತ್ತೆಯಾಗಿದೆ. 108 ಕೆಜಿ ತೂಕ ಮತ್ತು 2 ಮೀಟರ್ ಉದ್ದದ ಈ ಮೀನಿನ ಫೋಟೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

    ಈ ಮೀನಿನ ಫೋಟೋವನ್ನು ಅಲ್ಬೆನಾ ಫಿಶ್ ಮತ್ತು ವೈಲ್ಡ್ ಲೈಫ್ ಕನ್ಸರ್ವೇಶನ್ ಆಫೀಸ್, ತನ್ನ ಫೇಸ್ ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದು, ಮೀನಿನ ಪಕ್ಕ ಇಲಾಖೆಯ ಸಿಬ್ಬಂದಿಯೊಬ್ಬರು ಮಲಗಿರುವುದನ್ನು ಕಾಣಬಹುದಾದಿದೆ.

    Now that’s how you take a fish photo! The Alpena Fish and Wildlife Conservation Office crew caught this 240 pound, 6′ 10…

    Posted by U.S. Fish and Wildlife Service on Monday, May 3, 2021

     

    ಮೀನಿನ ಸುತ್ತಳತೆಯ ಆಧಾರದಲ್ಲಿ ಇದೊಂದು ಹೆಣ್ಣು ಮೀನು ಎಂದು ಅಂದಾಜಿಸಲಾಗಿದ್ದು, ಇದಕ್ಕೆ 100ಕ್ಕೂ ಅಧಿಕ ವರ್ಷ ವಯಸ್ಸಾಗಿದೆ. ಅಲ್ಲದೆ ಇದು ಅಮೆರಿಕದ ಇತಿಹಾಸದಲ್ಲಿಯೇ ಪತ್ತೆಯಾದ ಅತ್ಯಂತ ದೊಡ್ಡ ಸ್ಟರ್ಜಿಯನ್ ಮೀನಾಗಿದೆ ಎಂದು ತಿಳಿಸಲಾಗಿದೆ. ನಂತರ ಈ ಮೀನನ್ನು ಪುನಃ ನದಿಗೆ ಬಿಡುಗಡಲಾಗಿದೆ.

    ಸದ್ಯ ಈ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆಯೇ ಲೈಕ್ಸ್ ಹಾಗೂ ಕಾಮೆಂಟ್‍ಗಳು ಹರಿದುಬರುತ್ತಿದೆ.

  • ನೆರೆಮನೆ ಮಗುವಿನ ಪ್ರಾಣ ಉಳಿಸಿ ಪ್ರಾಣ ಬಿಟ್ಟ ಯುವತಿ

    ನೆರೆಮನೆ ಮಗುವಿನ ಪ್ರಾಣ ಉಳಿಸಿ ಪ್ರಾಣ ಬಿಟ್ಟ ಯುವತಿ

    ತಿರುವನಂತಪುರಂ: ನೆರೆಮನೆ ಮಗುವಿನ ಪ್ರಾಣವನ್ನು ಕಾಪಾಡಲು ಹೋಗಿ ತನ್ನ ಪ್ರಾಣವನ್ನು ಯುವತಿ ಕಳೆದುಕೊಂಡಿರುವ ಘಟನೆ ಕೇರಳದ ಮಟ್ಟನೂರ್ ನಲ್ಲಿ ನಡೆದಿದೆ.

    ಅಮೃತಾ(25) ಮೃತಳಾಗಿದ್ದಾಳೆ. ನಿನ್ನೆ ನದಿ ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ನೆರೆಮನೆಯ ಮಗುವಿನ ಪ್ರಾಣ ಉಳಿಸಲು ಹೋಗಿ ಅಮೃತಾ ನೀರಿನಲ್ಲಿ ಮುಳುಗಿ ಸಾವಿಗೀಡಾಗಿದ್ದಾಳೆ.

    ನದಿಗೆ ನೆರೆಮನೆಯ ಮಗು ಬಿದ್ದಿದೆ. ಇದನ್ನು ಕಂಡ ಅಮೃತಾ ನೀರಿಗೆ ಹಾರಿದ್ದಾಳೆ. ಆದರೆ ಸುಳಿಗೆ ಸಿಲುಕಿ ಪ್ರಾಣವನ್ನು ಬಿಟ್ಟಿದ್ದಾಳೆ. ಅದೃಷ್ಟವಶಾತ್ ಮಗು ಪ್ರಾಣಾಪಯಾದಿಂದ ಪಾರಾಗಿದೆ. ಅಮೃತಾ ಮುಂಡೇರಿ ಪ್ರೌಢಶಾಲೆಯ ಲ್ಯಾಬ್ ಸಹಾಯಕ ಸಿ ಬಾಲಕೃಷ್ಣನ್ ಅವರ ಪುತ್ರಿಯಾಗಿದ್ದಾಳೆ. ಮಗಳನ್ನು ಕಳೆದುಕೊಂಡ ಕುಟುಂಬ ಶೋಕ ಸಾಗರದಲ್ಲಿ ಮುಳುಗಿದೆ.

  • ಹಾಸ್ಟೆಲ್‍ನಲ್ಲಿ ನೀರಿಲ್ಲ- ಬಟ್ಟೆ ತೊಳೆಯಲು ನದಿಗೆ ತೆರಳಿದ್ದ ವಿದ್ಯಾರ್ಥಿ ನೀರು ಪಾಲು

    ಹಾಸ್ಟೆಲ್‍ನಲ್ಲಿ ನೀರಿಲ್ಲ- ಬಟ್ಟೆ ತೊಳೆಯಲು ನದಿಗೆ ತೆರಳಿದ್ದ ವಿದ್ಯಾರ್ಥಿ ನೀರು ಪಾಲು

    ಹಾಸನ: ಮೂರು ದಿನಗಳಿಂದ ಹಾಸ್ಟೆಲ್‍ನಲ್ಲಿ ನೀರು ಇಲ್ಲದ್ದಕ್ಕೆ ಡಿಪ್ಲೋಮಾ ವಿದ್ಯಾರ್ಥಿ ಬಟ್ಟೆ ತೊಳೆಯಲು ತನ್ನ ಸ್ನೇಹಿತರೊಂದಿಗೆ ನದಿಗೆ ತೆರಳಿದ್ದಾನೆ. ಈ ವೇಳೆ ನೀರಲ್ಲಿ ಮುಳುಗಿ ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ತಟ್ಟೆಕೆರೆ ಗ್ರಾಮದಲ್ಲಿ ನಡೆದಿದೆ.

    ಡಿಪ್ಲೋಮಾ ಕಾಲೇಜಿನ ಪ್ರಥಮ ವರ್ಷದ ಮೆಕಾನಿಕಲ್ ವಿದ್ಯಾರ್ಥಿ ಪ್ರತೀಶ್(17) ಮೃತಪಟ್ಟಿದ್ದಾನೆ. ವಿದ್ಯಾರ್ಥಿ ಮಂಡ್ಯ ಮೂಲದವನಾಗಿದ್ದು, ಕಾಲೇಜಿನ ಹಾಸ್ಟೆಲ್‍ನಲ್ಲಿ ವಾಸವಿದ್ದ. ನಾಲ್ಕು ಜನ ಸಹಪಾಠಿಗಳ ಜೊತೆ ಬೆಳಗ್ಗೆ 11 ಗಂಟೆಗೆ ನದಿಗೆ ತೆರಳಿದ್ದು, 12.15ರ ಸುಮಾರಿಗೆ ಘಟನೆ ನಡೆದಿದೆ ಎನ್ನಲಾಗಿದೆ. ಮೂರು ದಿನಗಳಿಂದ ಕಾಲೇಜಿನ ಹಾಸ್ಟೆಲ್‍ನಲ್ಲಿ ನೀರಿಲ್ಲದ ಕಾರಣ ನದಿಯಲ್ಲಿ ಬಟ್ಟೆ ತೊಳೆಯಲು ತೆರಳಿದಾಗ ದುರ್ಘಟನೆ ನಡೆದಿದೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ.

    ಮೃತನ ಪೋಷಕರು ಆಗಮಿಸುವ ತನಕ ಮೃತದೇಹ ನೀಡುವುದಿಲ್ಲವೆಂದು ತಟ್ಟೆಕೆರೆ ಗ್ರಾಮಸ್ಥರು ಒತ್ತಾಯ ಮಾಡುತ್ತಿದ್ದಾರೆ. ಗ್ರಾಮಾಂತರ ಠಾಣೆ ಸಬ್ ಇನ್‍ಸ್ಪೆಕ್ಟರ್ ನವೀನ್ ಕುಮಾರ್, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಮಂಜುನಾಥ್, ಹಾಸ್ಟೆಲ್ ವಾರ್ಡನ್ ಜ್ಞಾನೇಶ್ವರಿ ಸ್ಥಳಕ್ಕೆ ಭೇಟಿ ನೀಡಿದ್ದಾರೆ.

  • ಮೊಸಳೆ ಬಾಯಿಂದ ಜಸ್ಟ್ ಮಿಸ್ ಆಯ್ತು ಕೋಳಿ – ವೀಡಿಯೋ ವೈರಲ್

    ಮೊಸಳೆ ಬಾಯಿಂದ ಜಸ್ಟ್ ಮಿಸ್ ಆಯ್ತು ಕೋಳಿ – ವೀಡಿಯೋ ವೈರಲ್

    ನಾವು ಪ್ರಾಣಿಗಳು ಮಾಡುವ ಅವಿವೇಕತನ, ಚೇಷ್ಟೆ ಹೀಗೆ ಹಲವು ರೀತಿಯ ಹಾಸ್ಯಮಯವಾದ ವೀಡಿಯೋಗಳನ್ನು ನೋಡಿರುತ್ತೇವೆ. ಆದರೆ ಕೋಳಿಯೊಂದು ಮೊಸಳೆ ಮೇಲೆ ಆರಾಮವಾಗಿ ಕುಳಿತುಕೊಂಡು ನದಿ ದಾಟುವುದರ ಮೂಲಕ ಎಲ್ಲರಿಗೂ ಅಚ್ಚರಿ ಮೂಡಿಸಿದೆ. ಈ ವೀಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.

    ಹೌದು, ವೈರಲ್ ಆಗಿರುವ 10 ಸೆಕೆಂಡ್ ವೀಡಿಯೋದಲ್ಲಿ ಕೋಳಿಯು ಮೊಸಳೆಯ ತಲೆ ಮೇಲೆ ಕುಳಿತು ನದಿಯನ್ನು ದಾಟಿದೆ. ಮೊಸಳೆಯು ಕೋಳಿಯನ್ನು ತನ್ನ ತಲೆಯ ಇರಿಸಿಕೊಂಡು ನಿಧಾನವಾಗಿ ಸಮಾಧಾನದಿಂದ ಯಾವುದೇ ತೊಂದರೆಯಾಗದಂತೆ ನದಿಯ ದಡಕ್ಕೆ ಹೋಗುತ್ತದೆ. ಈ ವೇಳೆ ನದಿಯ ಅಂಚಿಗೆ ತಲುಪಿದ ನಂತರ ಕೋಳಿ ಮೊಸಳೆಯ ತಲೆ ಮೇಲಿಂದ ಕೆಳಗೆ ಇಳಿಯುತ್ತಿದ್ದಂತೆ ಮೊಸಳೆ ತನ್ನ ಬೃಹತ್ ಬಾಯಿಯನ್ನು ತೆರೆದು ಕೋಳಿಯನ್ನು ತಿನ್ನಲು ಹೋಗುತ್ತದೆ. ಆದರೆ ಚಾಣಾಕ್ಷ ಕೋಳಿ ಮೊಸಳೆ ಮೇಲಿಂದ ಇಳಿಯುತ್ತಿದ್ದಂತೆಯೇ ಮೊಸಳೆಗೆ ಹೆದರಿ ವೇಗವಾಗಿ ಓಡಿ ಹೋಗುತ್ತದೆ.

    ಈ ವೀಡಿಯೋವನ್ನು ಐಪಿಎಸ್ ಅಧಿಕಾರಿ ದೀಪಂಶು ಕಬ್ರಾ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ‘2020 ರಿಂದ 2021.. ಮತ್ತೆ 2021ರ ಆರಂಭ.. ಹಾಗೇ ಸುಮ್ಮನೆ’ ಎಂದು ಕ್ಯಾಪ್ಷನ್ ಹಾಕಿಕೊಂಡಿದ್ದಾರೆ. ಈ ವೀಡಿಯೋ ವೈರಲ್ ಆಗುತ್ತಿದ್ದಂತೆಯೇ 13.4 ಸಾವಿರ ವಿವ್ಸ್ ಪಡೆದುಕೊಂಡಿದ್ದು, ಹಲವಾರು ಕಮೆಂಟ್‍ಗಳು ಹರಿದು ಬಂದಿದೆ.

    ಅದರಲ್ಲಿ ಕೆಲವರು ಮೊಸಳೆ ಕೋಳಿಯನ್ನು ತಿಂದು ಬಿಡುತ್ತದೆ ಎಂದುಕೊಂಡಿದ್ದೇವು ಎಂದು ಕಮೆಂಟ್ ಮಾಡಿದರೆ, ಇನ್ನೂ ಕೆಲವರು ವೀಡಿಯೋ ಕೊನೆಯ ಭಾಗ ನೋಡಿ ಭಯಭೀತರಾದೆವು ಎಂದು ಕಮೆಂಟ್ ಮಾಡಿದ್ದಾರೆ.

  • ಆಹಾರ ಅರಸಿ ಬಂದಿದ್ದ ಬೃಹದಾಕಾರ ಮೊಸಳೆ ರಕ್ಷಣೆ

    ಆಹಾರ ಅರಸಿ ಬಂದಿದ್ದ ಬೃಹದಾಕಾರ ಮೊಸಳೆ ರಕ್ಷಣೆ

    ಚಿಕ್ಕೋಡಿ: ಆಹಾರ ಹುಡುಕುತ್ತಾ ಬಂದು ಬಾವಿಯಲ್ಲಿ ಸಿಲುಕಿದ್ದ ಬೃಹತ್ ಆಕಾರದ ಮೊಸಳೆಯನ್ನು ಹುಕ್ಕೇರಿ ತಾಲೂಕಿನ ಕೋಚರಿ ಗ್ರಾಮದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ರಕ್ಷಿಸಿದ್ದಾರೆ.

    ಕೋಚರಿ ಗ್ರಾಮದ ರೈತ ರಾವಸಾಹೇಬ ಮಗದುಮ್ಮ ಎಂಬುವವರ ಹೊಲದಲ್ಲಿನ ಬಾವಿಯಲ್ಲಿ ಕಳೆದ ಒಂದು ವಾರದ ಹಿಂದೆ ಮೊಸಳೆಯೊಂದು ಬಂದು ಸೇರಿಕೊಂಡಿತ್ತು. ಆಹಾರ ಅರಸಿ ಹಿರಣ್ಯಕೇಶಿ ನದಿಯಿಂದ ಬಂದ ಮೊಸಳೆ ಬಾವಿಯಲ್ಲಿ ಸೇರಿಕೊಂಡಿತ್ತು. ಇದನ್ನ ಕಂಡ ಇಲ್ಲಿನ ರೈತರು ಕೂಡಲೇ ಅರಣ್ಯ ಇಲಾಖೆ ಸಿಬ್ಬಂದಿಗೆ ತಿಳಿಸಿದ್ದರು.

    ಅರಣ್ಯ ಇಲಾಖೆಯ ಸಿಬ್ಬಂದಿ ಬಾವಿಯಲ್ಲಿರುವ ಬೃಹತ್ ಗಾತ್ರದ ಮೊಸಳೆಯನ್ನ ಸೆರೆ ಹಿಡಿಯಲು ಕಳೆದ ಒಂದು ವಾರದಿಂದ ಕಾರ್ಯಾಚರಣೆ ನಡೆಸುತ್ತಿದ್ದರು. ಆದರೆ ಚಾಲಾಕಿ ಮೊಸಳೆ ಅರಣ್ಯ ಇಲಾಖೆ ಸಿಬ್ಬಂದಿ ಬಲೆಗೆ ಬೀಳದೆ ತಪ್ಪಿಸಿಕೊಂಡು ಬಾವಿಯಲ್ಲಿ ಅವಿತು ಕುಳಿತಿತ್ತು. ಮೊಸಳೆ ಸೆರೆ ಸಿಗದೆ ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದರು.

    ಸತತ ಒಂದು ವಾರಗಳ ಕಾಲ ಕಾರ್ಯಾಚರಣೆ ಬಳಿಕ ಮೊಸಳೆಯನ್ನ ಸೆರೆ ಹಿಡಿದು ರಕ್ಷಣೆ ಮಾಡುವಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಇಂದು ಯಶಸ್ವಿಯಾಗಿದ್ದಾರೆ. ಸುಮಾರು 10 ಅಡಿ ಉದ್ದದ ಬೃಹತ್ ಮೊಸಳೆ ಇದಾಗಿದೆ.

  • ನದಿ ಸ್ನಾನಕ್ಕೆ ತೆರಳಿ ನಾಪತ್ತೆಯಾಗಿದ್ದ ಬಾಲಕ ಶವವಾಗಿ ಪತ್ತೆ

    ನದಿ ಸ್ನಾನಕ್ಕೆ ತೆರಳಿ ನಾಪತ್ತೆಯಾಗಿದ್ದ ಬಾಲಕ ಶವವಾಗಿ ಪತ್ತೆ

    ರಾಯಚೂರು: ಜಿಲ್ಲೆಯ ದೇವದುರ್ಗ ತಾಲೂಕಿನ ಮುದುಗೋಟ ಬಳಿ ಕೃಷ್ಣಾ ನದಿಯಲ್ಲಿ ಬುಧವಾರ ಸ್ನಾನಕ್ಕೆ ತೆರಳಿ ನಾಪತ್ತೆಯಾಗಿದ್ದ ಬಾಲಕ ಇಂದು ಶವವಾಗಿ ಪತ್ತೆಯಾಗಿದ್ದಾನೆ.

    ದೇವದುರ್ಗದ ರಂಗನಾಥ್ (12) ನದಿಯಲ್ಲಿ ಶವವಾಗಿ ಪತ್ತೆಯಾಗಿರೋ ದುರ್ದೈವಿ ಬಾಲಕ. ಮುದುಗೋಟ ಗ್ರಾಮದ ದ್ಯಾವಮ್ಮ ಜಾತ್ರೆಗೆ ಬಂದಿದ್ದ ಬಾಲಕ ಸ್ನೇಹಿತರೊಂದಿಗೆ ನದಿಗೆ ಈಜಾಡಲು ಹೋಗಿ ನಾಪತ್ತೆಯಾಗಿದ್ದ. ಬಾಲಕನಿಗಾಗಿ ಜಾಲಹಳ್ಳಿ ಠಾಣೆ ಪೊಲೀಸರು ಹಾಗೂ ಅಗ್ನಿಶಾಮಕ ದಳ ನಿನ್ನೆ ಸಂಜೆವರೆಗೂ ಹುಡುಕಾಟ ನಡೆಸಿದ್ದರು.

    ಇಂದು ಬೆಳಗ್ಗೆ ಬಾಲಕ ಶವವಾಗಿ ಪತ್ತೆಯಾಗಿದ್ದಾನೆ. ಘಟನೆ ಹಿನ್ನೆಲೆ ಜಾಲಹಳ್ಳಿ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಪತಿ ಚಪ್ಪಲಿ ಕೊಡಿಸದ ಕೋಪಕ್ಕೆ ಮಗುವನ್ನ ನದಿಗೆ ಎಸೆದ್ಳು

    ಪತಿ ಚಪ್ಪಲಿ ಕೊಡಿಸದ ಕೋಪಕ್ಕೆ ಮಗುವನ್ನ ನದಿಗೆ ಎಸೆದ್ಳು

    – ಗಂಡ, ಹೆಂಡ್ತಿ ಜಗಳದಲ್ಲಿ 3ರ ಕಂದಮ್ಮ ಬಲಿ

    ಲಕ್ನೋ: ಪತಿ ಚಪ್ಪಲಿ ಕೊಡಿಸದಿದ್ದಕ್ಕೆ ಮಹಿಳೆ ತನ್ನ ಮೂರು ವರ್ಷದ ಮಗುವನ್ನ ನದಿಗೆ ಎಸೆದಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಬಾಂದಾ ಜಿಲ್ಲೆಯಲ್ಲಿ ನಡೆದಿದೆ. ಶನಿವಾರ ಈ ಘಟನೆ ನಡೆದಿದ್ದು, ಪೊಲೀಸರು ಮಗುವಿನ ಶವವನ್ನ ನದಿಯಿಂದ ಮೇಲೆಕ್ಕೆತ್ತಿದ್ದಾರೆ.

    ಬಾಂದಾ ಜಿಲ್ಲೆಯ ಗಂಛಾ ಗ್ರಾಮದ ಪಪ್ಪು ನಿಷಾದ್ ಮತ್ತು ರನ್ನೋ ನಡುವೆ ಸದಾ ಜಗಳ ನಡೆಯುತ್ತಿತ್ತು. ಶನಿವಾರ ಪಪ್ಪು ಪತ್ನಿಗೆ ಚಪ್ಪಲಿ ಕೊಡಿಸಲು ಹಿಂದೇಟು ಹಾಕಿದ್ದಾರೆ. ಇದೇ ವಿಷಯಕ್ಕೆ ಇಬ್ಬರ ನಡುವೆ ಜಗಳ ಆಗಿದೆ. ಕೆಲವೇ ದಿನಗಳಲ್ಲಿ ಹಣ ನೀಡೋದಾಗಿ ಪತಿ ಹೇಳಿದ್ದಾನೆ.

    ಶನಿವಾರ ಮಗು ಕಾಣದಿದ್ದಾಗ ಕುಟುಂಬಸ್ಥರು ಆತಂಕಗೊಂಡು ರನ್ನೋಳನ್ನ ವಿಚಾರಿಸಿದ್ದಾರೆ. ಆರಂಭದಲ್ಲಿ ತನಗೆ ಏನು ತಿಳಿಯದಂತೆ ನಾಟಕ ಮಾಡಿದ್ದಾಳೆ. ಅನುಮಾನಗೊಂಡ ಕುಟುಂಬಸ್ಥರು ಪೊಲೀಸರಿಗೆ ಮಗು ಕಾಣೆಯಾಗಿರುವ ಬಗ್ಗೆ ದೂರು ಸಲ್ಲಿಸಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ರನ್ನೋಳನ್ನ ವಿಚಾರಣೆಗೆ ಒಳಪಡಿಸಿದಾಗ ಮಗುವನ್ನ ಕೇನ್ ನದಿಯಲ್ಲಿ ಎಸೆದಿರೋದಾಗಿ ಹೇಳಿದ್ದಾಳೆ.

    ಪೊಲೀಸರು ನದಿಗೆ ತೆರಳಿ ಸ್ಥಳೀಯ ಮೀನುಗಾರರು ಮತ್ತು ಗ್ರಾಮಸ್ಥರ ಸಹಾಯದೊಂದಿಗೆ ಮಗುವಿಗಾಗಿ ಶೋಧ ನಡೆಸಿದ್ದಾರೆ. ಕೆಲ ಗಂಟೆ ಬಳಿಕ ಮಗುವಿನ ಮೃತದೇಹ ಪತ್ತೆಯಾಗಿದೆ. ಆದ್ರೆ ರನ್ನೋ ಮಗುವನ್ನ ಎಷ್ಟೊತ್ತಿಗೆ ನದಿಗೆ ಎಸೆದಿರುವ ಬಗ್ಗೆ ಹೇಳದೇ ಮೌನವಾಗಿದ್ದಾಳೆ. ಪ್ರಕರಣಂ ದಾಖಲಿಸಿಕೊಂಡಿರುವ ಪೊಲೀಸರು ಮಹಿಳೆಯನ್ನ ಬಂಧಿಸಿದ್ದಾರೆ.

     

  • ಮದ್ವೆಯಾಗುವಂತೆ ಒತ್ತಡ ಹೇರಿದ್ದಕ್ಕೆ ಅಪ್ರಾಪ್ತ ಗರ್ಭಿಣಿಯನ್ನು ಕೊಂದ ಹುಡುಗ..!

    ಮದ್ವೆಯಾಗುವಂತೆ ಒತ್ತಡ ಹೇರಿದ್ದಕ್ಕೆ ಅಪ್ರಾಪ್ತ ಗರ್ಭಿಣಿಯನ್ನು ಕೊಂದ ಹುಡುಗ..!

    ರಾಂಚಿ: 17 ವರ್ಷದ ಗರ್ಭಿಣಿ ಹತ್ಯೆ ಮಾಡಿ ಸಮಾಧಿ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ  ಜಾರ್ಖಂಡ್ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

    ಮೃತ ಹುಡುಗಿ 18 ವರ್ಷದವನನ್ನು ಪ್ರೀತಿಸುತ್ತಿದ್ದಳು. ಆದರೆ ಗರ್ಭಿಣಿಯಾಗುತ್ತಿದ್ದಂತೆ ಪ್ರೇಮಿ ಮತ್ತು ಆತನ ಸ್ನೇಹಿತನನ್ನು ಹುಸೇನಾಬಾದ್ ಇಬ್ಬರು ಸೇರಿ ಹುಡುಗಿಯನ್ನು ಕೊಂದು ಸಮಾಧಿ ಮಾಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಠಾಣೆ ಪ್ರದೇಶದ ಕೊರಿಯಾಡಿ ಗ್ರಾಮದಿಂದ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಸಂಜೀವ್ ಕುಮಾರ್ ತಿಳಿಸಿದ್ದಾರೆ.

    ಗರ್ಭಿಣಿ ನನ್ನನ್ನು ಮದುವೆಯಾಗು ಎಂದು ತನ್ನ ಪ್ರೇಮಿಯನ್ನು ಒತ್ತಾಯಿಸಿದ್ದಾಳೆ. ಆದರೆ ಗರ್ಭಪಾತ ಮಾಡಿಸಲು ಪ್ರೇಮಿ, ನರ್ಸ್ ಒಬ್ಬಳನ್ನು ಸಂಪರ್ಕಿಸಿದ್ದಾನೆ. ಆದರೆ ಆಕೆ 10 ಸಾವಿರ ರೂಪಾಯಿ ಕೇಳಿದ್ದಾಳೆ. ಆ ಹಣವನ್ನು ಹೊಂದಿಸಲು ಸಾಧ್ಯವಾಗದೇ ಕೊಲೆ ಮಾಡಿದ್ದಾನೆ.

    ಫೆಬ್ರವರಿ 21 ರಂದು ಆಕೆಯನ್ನು ಅಪರಿಚಿತ ಸ್ಥಳಕ್ಕೆ ಕರೆದೊಯ್ದದಿದ್ದಾನೆ. ಈ ವೇಳೆ ಆಕೆಯ ಕತ್ತು ಕೊಯ್ದು ಕೊಲೆ ಮಾಡಿದ್ದಾನೆ. ನಂತರ ಸ್ನೇಹಿತನ ಜೊತೆ ಸೇರಿ ಸೋನೆ ನದಿಯ ಬಳಿ ಶವವನ್ನು ಸಮಾಧಿ ಮಾಡಿದ್ದಾನೆ. ಈ ಪ್ರಕರಣ ಕುರಿತಾಗಿ ತನಿಖೆ ನಡೆಸುತ್ತಿರುವ  ಪೊಲೀಸರ ಬಲೆಗೆ ಮೃತ ಹುಡುಗಿಯ ಪ್ರೇಮಿ ಮತ್ತು ಆತನ ಸ್ನೇಹಿತ ಸಿಕ್ಕಿ ಬಿದ್ದಿದ್ದಾರೆ.

  • ಪುರಾಣ ಪ್ರಸಿದ್ಧ ಕೋಟಿತೀರ್ಥ ಗಂಗೆ ಶುದ್ಧಿಗೆ ಶೀಘ್ರದಲ್ಲೇ ಅನುದಾನ

    ಪುರಾಣ ಪ್ರಸಿದ್ಧ ಕೋಟಿತೀರ್ಥ ಗಂಗೆ ಶುದ್ಧಿಗೆ ಶೀಘ್ರದಲ್ಲೇ ಅನುದಾನ

    ಕಾರವಾರ: ಪುರಾಣ ಪ್ರಸಿದ್ಧ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಗೋಕರ್ಣದ ಕೋಟಿ ತೀರ್ಥ ಕೆರೆಯ ಶುದ್ಧಿಗೆ ರಾಜ್ಯ ಸರ್ಕಾರದಿಂದ ಅಗತ್ಯ ಹಣ ನೀಡಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪ ಹೇಳಿದ್ದಾರೆ.

    ಕಳೆದ ವರ್ಷ ನವೆಂಬರ್ ತಿಂಗಳಲ್ಲಿ ಗೋಕರ್ಣಕ್ಕೆ ಆಗಮಿಸಿದ್ದ ಸಚಿವ ಈಶ್ವರಪ್ಪನವರು ಕೋಟಿ ತೀರ್ಥಕ್ಕೆ ಭೇಟಿ ನೀಡಿ ಅಲ್ಲಿನ ಸಮಸ್ಯೆಯನ್ನು ಆಲಿಸಿದ್ದರು. ಈ ವೇಳೆ ಪುಣ್ಯ ಕ್ಷೇತ್ರದ ಗಂಗೆ ಮಲೀನವಾಗಿದ್ದಕ್ಕೆ ಬೇಸರ ವ್ಯಕ್ತಪಡಿಸಿದ್ದ ಅವರು ಕೋಟಿ ತೀರ್ಥ ಅಭಿವೃದ್ಧಿ ಮಾಡುವ ಭರವಸೆ ನೀಡಿದ್ದರು.

    ಕೋಟಿತೀರ್ಥ ಅಭಿವೃದ್ಧಿಗೆ ಸೂಚನೆ: ಗೋಕರ್ಣದ ಕೋಟಿತೀರ್ಥ ಅಭಿವೃದ್ಧಿಗೆ 1.50 ಕೋಟಿ ಅಗತ್ಯವಿದೆ ಎಂದು ಅಧಿಕಾರಿಗಳು ಶನಿವಾರ ನಡೆದ ಸಭೆಯಲ್ಲಿ ಸಚಿವರಿಗೆ ಮಾಹಿತಿ ನೀಡಿದ್ದರು. ಈ ಕುರಿತು ಪ್ರತಿಕ್ರಿಯಿಸಿದ ಈಶ್ವರಪ್ಪ, ಜಿಲ್ಲಾ ಪಂಚಾಯಿತಿಯಲ್ಲಿ ಅನುದಾನದ ಲಭ್ಯತೆಯ ಬಗ್ಗೆ ಪರಿಶೀಲಿಸಿ, ಒಂದು ವೇಳೆ ಕೊರತೆಯಿದ್ದರೆ ತಿಳಿಸಿ, ಅನುದಾನ ಬಿಡುಗಡೆ ಮಾಡಿಸಲಾಗುವುದು. ಕೂಡಲೇ ಕಾಮಗಾರಿ ಆರಂಭವಾಗಬೇಕು ಅದಕ್ಕೆ ಬೇಕಾದ ವ್ಯವಸ್ಥೆಯನ್ನು ಮಾಡಲಾಗಿದೆ. ಶೀಘ್ರ ಸ್ವಚ್ಛತೆ ಮಾಡಲು ಸೂಚಿಸಲಾಗಿದೆ ಎಂದು ಪಬ್ಲಿಕ್ ಟಿ.ವಿ ಗೆ ಮಾಹಿತಿ ನೀಡಿದ್ದಾರೆ.

    ವೈಜ್ಞಾನಿಕ ಪದ್ಧತಿ ಅನುಸರಿಸಿ: ಕೋಟಿ ತೀರ್ಥ ಸ್ಥಳವು ಗೋಕರ್ಣದ ಮಧ್ಯ ಭಾಗದಲ್ಲಿದೆ. ಅಂತರಗಂಗೆಯಾಗಿ ಕೋಟಿ ತೀರ್ಥದಲ್ಲಿ ಪ್ರತ್ಯಕ್ಷವಾಗುವ ಪುಷ್ಕರಣಿಯ ನೀರು ಗಂಗಾ ಜಲದಷ್ಟೇ ಪವಿತ್ರವೆಂದು ಪುರಾಣದಲ್ಲಿ ವಿಶ್ಲೇಷಣೆಗಳಿವೆ. ಇದಲ್ಲದೇ ಈ ಪುಷ್ಕರಣಿ ನೀರಿನ ಆಗರವು ಸುತ್ತಮುತ್ತಲ ಪ್ರದೇಶದ ಜಲಮೂಲ ಸಹ ಆಗಿದೆ. ಹೀಗಾಗಿ ಇದರಲ್ಲಿರುವ ಹುಳು ತೆಗೆಯಲು ಹಾಗೂ ಶುದ್ಧತೆ ಮಾಡಲು ವೈಜ್ಞಾನಿಕ ಪದ್ದತಿ ಅನುಸರಿಸಬೇಕು ಎಂಬ ಸ್ಥಳೀಯರು ಒತ್ತಾಯಿಸಿದ್ದರು. ಈ ಕುರಿತು ಜಿಲ್ಲಾಡಳಿತ ಕೂಡ ಗಮನ ಹರಿಸುತಿದ್ದು, ಇದರ ಅಂದ ಕೆಡದೇ ಜಲಮೂಲ ಬತ್ತದಂತೆ ನೋಡಿಕೊಂಡು ಶುದ್ಧೀಕರಣಕ್ಕೆ ಜಿಲ್ಲಾಡಳಿತ ಪ್ರಯತ್ನ ನಡೆಸಿದೆ.

    ಕೋಟಿ ತೀರ್ಥವನ್ನು ಕಳೆದ ಆರು ವರ್ಷದ ಹಿಂದೆ ಸ್ವಚ್ಛತೆ ಮಾಡಲಾಗಿತ್ತು. ಹೊಂಡದ ಹೂಳೆತ್ತಿ ಒಂದು ಹಂತದ ಸ್ವಚ್ಛತೆ ಮಾಡಲಾಗಿತ್ತು. ಆದರೆ ಆ ಸಂದರ್ಭದಲ್ಲಿ ಅವೈಜ್ಞಾನಿಕ ಪದ್ದತಿ ಅನುಸರಿಸಿದರಿಂದ ಹೊಂಡ ಈ ರೀತಿ ಗಲೀಜಾಗಿದೆ ಎಂದು ಸ್ಥಳೀಯರು ದೂರಿದ್ದರು.

    ಮಲೀನದಿಂದ ಕೋಟಿ ತೀರ್ಥದ ನೀರು ಹಸಿರು ಬಣ್ಣಕ್ಕೆ ತಿರುಗಿದೆ. ಕಸ ಕಡ್ಡಿಗಳು, ಅವ್ಯಾಹತವಾಗಿ ಬೆಳೆದುಕೊಂಡು ಪಾಚಿ, ಕೊಳೆತು ನಾರುತ್ತಿರುವ ಹೂವುಗಳಿಂದ ಕೋಟಿ ತೀರ್ಥದ ಅಂದ ಕೆಟ್ಟು ಸ್ವಚ್ಚತೆ ಇಲ್ಲದೆ ಪ್ರಾಮುಖ್ಯತೆ ಕಳೆದುಕೊಂಡಿತ್ತು. ಇದರಲ್ಲಿ ಸ್ನಾನ ಮಾಡುವವರಿಗೆ ದೇಹದಲ್ಲಿ ತುರುಕೆ, ಚರ್ಮ ರೋಗಗಳು ಬಾಧಿಸುತಿತ್ತು. ಈ ಕಾರಣ ಭಕ್ತರು ಪಿಂಡ ಪ್ರಧಾನ ಮಾಡುವ ಸಮಯದಲ್ಲಿ ನೀರನ್ನು ಪ್ರೋಕ್ಷಣ್ಯ ಮಾತ್ರ ಮಾಡಿಕೊಳ್ಳುತಿದ್ದರು. ಹಿಂದೂ ಸಂಪ್ರದಾಯದ ವಿಧಿ ವಿಧಾನಗಳನ್ನು ಆಚರಿಸುವ ಪವಿತ್ರ ಪುಷ್ಕರಣಿ ಹೊಂಡ ಸದ್ಯ ತನ್ನ ಅಂದವನ್ನು ಕಳೆದುಕೊಂಡು ರೋಗ ಹರಡುವ ಮೂಲವಾಗಿದೆ.

    ಗೋಕರ್ಣ ದಲ್ಲಿ ಪ್ರತಿ ವರ್ಷ ಶಿವರಾತ್ರಿ ಸಂದರ್ಭದಲ್ಲಿ ಇಲ್ಲಿನ ಗ್ರಾಮ ಪಂಚಾಯತಿಯಿಂದ ಸ್ವಚ್ಛತೆ ಕಾರ್ಯ ಮಾಡಲಾಗುತ್ತದೆ. ಆದರೆ ಇದು ಕೇವಲ ತಾತ್ಕಾಲಿಕ. ಪೂರ್ಣ ಪ್ರಮಾಣದ ಸ್ವಚ್ಛತೆ ಆಗುತ್ತಿಲ್ಲ. ಇದರಿಂದಾಗಿ ಇಲ್ಲಿನ ನೀರಿನಲ್ಲಿ ಸ್ನಾನ ಮಾಡಲು ಸಹ ಭಕ್ತರು ಹೆದರುತಿದ್ದರು. ಸದ್ಯ ಹಣ ಬಿಡುಗಡೆಗೆ ಎಲ್ಲಾ ಸಿದ್ಧತೆಗಳು ನಡೆದಿದ್ದು ಶೀಘ್ರದಲ್ಲಿ ಪವಿತ್ರ ಗಂಗೆ ಶುದ್ಧವಾಗಲಿದ್ದಾಳೆ.

  • ಮಕ್ಕಳಿಬ್ಬರನ್ನ ನದಿಗೆ ಎಸೆದು ಮಹಿಳೆ ಆತ್ಮಹತ್ಯೆ

    ಮಕ್ಕಳಿಬ್ಬರನ್ನ ನದಿಗೆ ಎಸೆದು ಮಹಿಳೆ ಆತ್ಮಹತ್ಯೆ

    – ಜೊತೆಯಲ್ಲಿದ್ದ ಮತ್ತೋರ್ವ ಮಗಳು ಬಚಾವ್

    ಹೈದರಾಬಾದ್: ಮಕ್ಕಳಿಬ್ಬರನ್ನ ನದಿಗೆ ತಳ್ಳಿದ ತಾಯಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ತೆಲಂಗಾಣದ ಮಹಬೂಬನಗರ ಜಿಲ್ಲೆಯ ಹಂವಾಡ ತಾಲೂಕಿನ ಹಸನಾಬಾದ್ ಗ್ರಾಮದಲ್ಲಿ ನಡೆದಿದೆ. ತಾಯಿ ಅಕ್ಕ ಮತ್ತು ತಮ್ಮನನ್ನು ನದಿಗೆ ಎಸೆಯೋದನ್ನ ಕಂಡು ಮತ್ತೋರ್ವ ಮಗಳು ಅಮ್ಮನಿಂದ ತಪ್ಪಿಸಿಕೊಂಡು ಓಡಿ ಹೋಗಿ ಗ್ರಾಮಸ್ಥರಿಗೆ ವಿಷಯ ತಿಳಿಸಿದ್ದಾರೆ.

    28 ವರ್ಷದ ಯಲ್ಲಮ್ಮ ಮಕ್ಕಳಿಬ್ಬರನ್ನು ಕೊಂದು ಆತ್ಮಹತ್ಯೆಗೆ ಶರಣಾದ ಮಹಿಳೆ. 10 ವರ್ಷಗಳ ಹಿಂದೆ ಯಲ್ಲಮ್ಮ ಮದುವೆ ಸತ್ಯಪ್ಪ ಎಂಬಾತನ ಜತೆ ನಡೆದಿತ್ತು. ದಂಪತಿ ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ದಂಪತಿಗೆ ರಂಜಿತಾ (8), ಅನಿತಾ (6) ಮತ್ತು ರಾಜು (4) ಮೂರು ಮಕ್ಕಳಿದ್ದರು. ಆರ್ಥಿಕ ಸಂಕಷ್ಟ ಮತ್ತು ಪತಿ ಕುಟುಂಬಸ್ಥರ ಕಿರುಕುಳದಿಂದ ಬೇಸತ್ತ ಯಲ್ಲಮ್ಮ ಮೂರು ಮಕ್ಕಳ ಜೊತೆ ಮನೆಯಿಂದ ಹೊರ ಬಂದಿದ್ದಳು.

    ಊರಿಗೆ ತೆರಳುವ ಮಾರ್ಗ ಮಧ್ಯೆ ರಂಜಿತಾ ಮತ್ತು ರಾಜುನನ್ನು ನದಿಗೆ ಎಸೆದಿದ್ದಾಳೆ. ಇದನ್ನ ಕಂಡ ಅನಿತಾ ಅಮ್ಮನಿಂದ ತಪ್ಪಿಸಿಕೊಂಡು ಓಡಿ ಹೋಗಿದ್ದಾಳೆ. ಅನಿತಾ ಸಿಗದ ಹಿನ್ನೆಲೆ ಯಲ್ಲಮ್ಮ ಸಹ ನದಿಗೆ ಧುಮುಕಿದ್ದಾಳೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಪೊಲೀಸರು ಮೃತದೇಹಗಳನ್ನ ನದಿಯಿಂದ ಹೊರ ತೆಗೆದಿದ್ದಾರೆ.