Tag: ನದಿ

  • ಕಾಳಿ ನದಿಯಿಂದ ಗ್ರಾಮಕ್ಕೆ ಬಂತು ಮೊಸಳೆ – ಆತಂಕದಲ್ಲಿ ಗ್ರಾಮಸ್ಥರು

    ಕಾಳಿ ನದಿಯಿಂದ ಗ್ರಾಮಕ್ಕೆ ಬಂತು ಮೊಸಳೆ – ಆತಂಕದಲ್ಲಿ ಗ್ರಾಮಸ್ಥರು

    ಕಾರವಾರ: ಆಹಾರ ಅರಸಿ ನದಿ ಭಾಗದಿಂದ ಮೊಸಳೆಯೊಂದು ಗ್ರಾಮಕ್ಕೆ ನುಗ್ಗಿದ ಘಟನೆ ದಾಂಡೇಲಿಯ ಕೊಗಿಲಬನ ಗ್ರಾಮದ ರಸ್ತೆಯಲ್ಲಿ ಇಂದು ನಡೆದಿದೆ.

    ಕಾಳಿ ನದಿಯಿಂದ ಆಹಾರ ಅರಸಿ ನದಿ ದಡಕ್ಕೆ ಬಂದ ಬೃಹದಾಕಾರದ ಮೊಸಳೆಯು ದಾಂಡೇಲಿಯ ಕಾಳಿ ನದಿ ಪಕ್ಕದಲ್ಲೇ ಇರುವ ಕೊಗಿಲಬನ ಗ್ರಾಮಕ್ಕೆ ನುಗ್ಗಿ ರಸ್ತೆಯಲ್ಲಿ ಸಂಚರಿಸಿದೆ.

    ಬೆಳಂಬೆಳಗ್ಗೆ ಗ್ರಾಮದಲ್ಲಿ ಓಡಾಡಿದ ಮೊಸಳೆಯನ್ನು ನೋಡಿದ ಗ್ರಾಮದ ಜನರು ಬೆಚ್ಚಿ ಬಿದ್ದಿದ್ದು ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಆದರೆ ಗ್ರಾಮದ ರಸ್ತೆಯಲ್ಲಿ ವಾಕ್ ಮಾಡಿದ ಮೊಸಳೆ ಅರಣ್ಯಾಧಿಕಾರಿಗಳು ಬರುವುದರೊಳಗೆ ಗ್ರಾಮವನ್ನು ದಾಟಿ ಕಾಡಿನ ಹಾದಿ ಮೂಲಕ ಮತ್ತೆ ನದಿಗೆ ಸೇರಿಕೊಂಡಿದೆ.

    ದಾಂಡೇಲಿಯ ಕಾಳಿ ನದಿಯಲ್ಲಿ ಸಾವಿರಾರು ಮೊಸಳೆಗಳು ವಾಸವಾಗಿವೆ. ಆದರೆ ನದಿಯನ್ನು ಬಿಟ್ಟು ಗ್ರಾಮಕ್ಕೆ ಇದೇ ಮೊದಲ ಬಾರಿ ಮೊಸಳೆ ಆಗಮಿಸಿದ್ದು ಜನರನ್ನು ಬೆಚ್ಚಿ ಬೀಳಿಸಿದೆ.

    ಈ ಹಿಂದೆ ನದಿ ಭಾಗದಲ್ಲಿ ಮೊಸಳೆಗಳು ಮನುಷ್ಯನ ಮೇಲೆ ಎರಗಿ ಸಾವುಗಳಾದ ಘಟನೆ ಸಹ ಈ ಭಾಗದಲ್ಲಿ ನಡೆದಿದೆ. ದಾಂಡೇಲಿಯ ಕಾಗದ ಕಾರ್ಖಾನೆ ಬಳಿ ನದಿ ತಡದಲ್ಲಿ ಅತೀ ಹೆಚ್ಚು ಮೊಸಳೆಗಳು ವಾಸಿಸುತ್ತಿವೆ. ಕಾರ್ಖಾನೆಯ ತ್ಯಾಜ್ಯಗಳೇ ಇವುಗಳಿಗೆ ಆಹಾರವಾಗಿದ್ದು ಲಾಕ್‍ಡೌನ್‍ನಿಂದ ಜನರ ಓಡಾಟ ಸಹ ಈ ಪ್ರದೇಶಗಳಲ್ಲಿ ಇಳಿಮುಖವಾಗಿತ್ತು. ಹೀಗಾಗಿ ಆಹಾರ ಅರಸಿ ಮೊಸಳೆಗಳು ನದಿ ದಡದಿಂದ ಸುತ್ತಮುತ್ತ ಓಡಾಟ ನಡೆಸುತಿದ್ದು, ಇಂದು ಗ್ರಾಮಕ್ಕೆ ಮೊಸಳೆ ನುಗ್ಗಿದ್ದರಿಂದ ಇದೀಗ ಜನರಲ್ಲಿ ಮತ್ತೆ ಆತಂಕ ಶುರುವಾಗಿದೆ. ಇದನ್ನೂ ಓದಿ:ಅಯೋಧ್ಯೆಯಲ್ಲಿ ರಾಮಮಂದಿರ ಅಡಿಪಾಯ ಕಾಮಗಾರಿ ವೀಕ್ಷಿಸಿದ ಪೇಜಾವರಶ್ರೀ

  • ಕೃಷ್ಣಾ ನದಿ ಪಾಲಾಗಿದ್ದ ನಾಲ್ವರು ಸಹೋದರರ ಶವ ಪತ್ತೆ

    ಕೃಷ್ಣಾ ನದಿ ಪಾಲಾಗಿದ್ದ ನಾಲ್ವರು ಸಹೋದರರ ಶವ ಪತ್ತೆ

    ಚಿಕ್ಕೋಡಿ: ಹಾಸಿಗೆ ತೊಳೆಯಲು ಹೋಗಿ ಕೃಷ್ಣಾ ನದಿಯಲ್ಲಿ ನೀರು ಪಾಲಾಗಿದ್ದ ನಾಲ್ವರು ಸಹೋದರರ ಶವಗಳನ್ನು ಎನ್‍ಡಿಆರ್‍ಎಫ್ ತಂಡ ಹಾಗೂ ಸ್ಥಳೀಯರು ಪತ್ತೆ ಹಚ್ಚಿ ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ.

    ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಹಲ್ಯಾಳ ಗ್ರಾಮದ ಬಳಿ ಕೃಷ್ಣಾ ನದಿಯಲ್ಲಿ ಹಾಸಿಗೆ ತೊಳೆಯಲು ಹೋಗಿ ನಾಲ್ಕು ಜನ ಸಹೋದರರು ನೀರು ಪಾಲಾಗಿದ್ದರು. ಇದೀಗ ನಾಲ್ವರ ಮೃತದೇಹವು ಪತ್ತೆಯಾಗಿದೆ. ನಿನ್ನೆ ಒಬ್ಬ ಹಾಗೂ ಇಂದು ಮೂವರ ಶವಗಳನ್ನು ಎನ್‍ಡಿಆರ್‍ಎಫ್ ಸಿಬ್ಬಂದಿ ಹಾಗೂ ಸ್ಥಳೀಯರು ನೀರಿನಲ್ಲಿ ಕಾರ್ಯಚರಣೆ ನಡೆಸಿ ಪತ್ತೆಹಚ್ಚಿ ಹೊರತೆಗೆದಿದ್ದಾರೆ. ಇದನ್ನೂ ಓದಿ: ಒಂದೇ ಕುಟುಂಬದ ನಾಲ್ವರು ಸಹೋದರರು ಕೃಷ್ಣಾ ನದಿ ಪಾಲು

    ನಿನ್ನೆ ಪರಶುರಾಮ ಬನಸೊಡೆ ಎಂಬವರ ಶವ ಪತ್ತೆಯಾಗಿತ್ತು. ಬಳಿಕ ಇಂದು ಸಹೋದರರಾದ ಶಂಕರ್, ಸದಾಶಿವ, ಹಾಗೂ ಧರೆಪ್ಪರವರ ಶವ ಹೊರಕ್ಕೆ ತೆಗೆಯಲಾಗಿದೆ. ಕಳೆದ ಮೂರು ದಿನಗಳಿಂದ ನಾಪತ್ತೆಯಾಗಿದ್ದ ಸಹೋದರರಿಗಾಗಿ ಕಾರ್ಯಾಚರಣೆ ನಡೆಸಲಾಗಿತ್ತು. ಮೂರು ದಿನಗಳ ಹಿಂದೆ ಹಾಸಿಗೆ ತೊಳೆಯಲು ಕೃಷ್ಣಾ ನದಿಗೆ ಹೋಗಿದ್ದಾಗ ಅಚಾನಕ್ಕಾಗಿ ಒಬ್ಬರನ್ನು ಕಾಪಾಡಲು ಹೋಗಿ ಮತ್ತೊಬ್ಬರಂತೆ ನಾಲ್ವರು ಸಹೋದರರು ನದಿ ನೀರು ಪಾಲಾಗಿದ್ದರು. ಇವರ ಶವ ಹೊರತೆಗೆಯುತ್ತಿದ್ದಂತೆ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಈ ಕುರಿತು ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ವಧುವನ್ನ ಹೆಗಲ ಮೇಲೆ ಹೊತ್ತು ನದಿ ದಾಟಿದ ವರ

    ವಧುವನ್ನ ಹೆಗಲ ಮೇಲೆ ಹೊತ್ತು ನದಿ ದಾಟಿದ ವರ

    ಪಾಟ್ನಾ: ಬಿಹಾರದಲ್ಲಿ ಮಳೆ ಬಂದ್ರೆ ಪ್ರವಾಹ ಬರೋದು ಸಾಮಾನ್ಯ. ಹಾಗಾಗಿಯೇ ಪ್ರವಾಹ ಸಮಯದಲ್ಲಿ ಅಲ್ಲಿಯ ದೋಣಿ, ತೆಪ್ಪಗಳನ್ನು ಬಳಸಿಕೊಳ್ಳುತ್ತಾರೆ. ಆದ್ರೂ ದೋಣಿ ಏರಬೇಕಾದ್ರೆ ಕೆಲ ನದಿಯಲ್ಲಿ ನಡೆಯಬೇಕು. ಊರಿಗೆ ಬಂದ ವಧುವನ್ನ ಪತಿಯೇ ಹೆಗಲ ಮೇಲೆ ಹೊತ್ತಿಕೊಂಡು ದೋಣಿವರೆಗು ಕರೆದುಕೊಂಡು ಹೋಗಿರುವ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.

    ಶನಿವಾರ ಪ್ರಖಂಡ ಕ್ಷೇತ್ರದ ಲೋಹಾಗಢಾ ಗ್ರಾಮಸ್ಥರು ಮದುವೆಗಾಗಿ ಪಕ್ಕದೂರಿಗೆ ತೆರಳಿದ್ದರು. ಭಾನುವಾರ ವಧು ಜೊತೆ ಎಲ್ಲರೂ ಗ್ರಾಮಕ್ಕೆ ಆಗಮಿಸಿದಾಗ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಳವಾಗಿತ್ತು. ಎಲ್ಲರೂ ಕೊಂಚ ದೂರ ನದಿಯಲ್ಲಿ ನಡೆದುಕೊಂಡು ದೋಣಿ ಏರಿದ್ದಾರೆ.

    ನವ ವಧುವನ್ನ ಪತಿಯೇ ಹೆಗಲ ಮೇಲೆ ಹೊತ್ತೊಕೊಂಡು ತೆಪ್ಪದವರೆಗೆ ಕರೆದುಕೊಂಡು ಹೋಗಿದ್ದಾನೆ. ನಂತರ ವಧುವನ್ನ ಈ ಬದಿಯಲ್ಲಿಯೂ ದಡದವರೆಗೂ ಕರೆ ತಂದಿದ್ದಾನೆ. ಸ್ಥಳೀಯರು ಈ ದೃಶ್ಯಗಳನ್ನು ಮೊಬೈಲ್ ನಲ್ಲಿ ಸೆರೆ ಹಿಡಿದು ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ್ದಾರೆ. ಇದನ್ನೂ ಓದಿ: ಗಟ್ಟಿಮೇಳದ ವೇಳೆ ತಾಳಿ ನಾಪತ್ತೆ – ತಾಳಿ ಇಲ್ಲದೆ ವಧು ವರರು ಗಲಿಬಿಲಿ

    ಈ ಗ್ರಾಮ ನೇಪಾಳದ ಗಡಿ ಭಾಗದಲ್ಲಿದ್ದು, ಇಲ್ಲಿ ಅಭಿವೃದ್ಧಿ ಕಾರ್ಯಗಳು ಮರೀಚಿಕೆಯಾಗಿವೆ. ಗ್ರಾಮಸ್ಥರು ಸೇತುವೆ ನಿರ್ಮಿಸುವಂತೆ ಮನವಿ ಮಾಡಿಕೊಂಡರು ಪ್ರಯೋಜನವಾಗಿಲ್ಲ. ಇದನ್ನೂ ಓದಿ: ವಿಡಿಯೋ: ಮದ್ವೆ ಮಂಟಪದಲ್ಲಿ ಅಲ್ಲಾಡ್ಸ್ ಅಲ್ಲಾಡ್ಸ್ ಹಾಡಿಗೆ ಕುಣಿದ ವಧು ವರರು- ಕಣ್ಣುದಾನ ಮಾಡಿ ಆದರ್ಶ ಮೆರೆದ ನವದಂಪತಿ

  • ವರದಾ ನದಿಯಲ್ಲಿ ಮುಳುಗಿ ಯುವಕ ಸಾವು

    ವರದಾ ನದಿಯಲ್ಲಿ ಮುಳುಗಿ ಯುವಕ ಸಾವು

    ಶಿವಮೊಗ್ಗ: ಎತ್ತುಗಳಿಗೆ ನೀರು ಕುಡಿಸಲು ವರದಾ ನದಿಗೆ ತೆರಳಿದ್ದ ಯುವಕ ಕಾಲು ಜಾರಿ ಬಿದ್ದು ಮೃತಪಟ್ಟ ಘಟನೆ ಜಿಲ್ಲೆಯ ಸೊರಬ ತಾಲೂಕಿನ ಭದ್ರಾಪುರ ಗ್ರಾಮದಲ್ಲಿ ನಡೆದಿದೆ.

    ಮೃತ ಯುವಕನನ್ನು ಮಹೇಶ್(25) ಎಂದು ಗುರುತಿಸಲಾಗಿದೆ. ಮೃತ ಮಹೇಶ್ ಗುರುವಾರ ಸಂಜೆ ಎತ್ತುಗಳಿಗೆ ನೀರು ಕುಡಿಸಲು ವರದಾ ನದಿಗೆ ತೆರಳಿದ್ದಾಗ ಕಾಲು ಜಾರಿ ನದಿಗೆ ಬಿದ್ದಿದ್ದಾರೆ. ಈ ವೇಳೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿ, ನದಿಯಲ್ಲಿ ಮುಳುಗಿದ್ದ ಯುವಕನಿಗಾಗಿ ಶೋಧ ಕಾರ್ಯ ಕೈಗೊಂಡಿದ್ದರು. ಆದರೆ ಯುವಕ ಪತ್ತೆಯಾಗಲಿಲ್ಲ.

    ನಂತರ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಶುಕ್ರವಾರ ಸಹ ಶೋಧ ಕಾರ್ಯ ಮುಂದುವರಿಸಿದ್ದರು. ಶುಕ್ರವಾರ ಮಧ್ಯಾಹ್ನ ಯುವಕನ ಶವ ನದಿಯಲ್ಲಿ ಪತ್ತೆಯಾಗಿದೆ. ಅಗ್ನಿಶಾಮಕ ಸಿಬ್ಬಂದಿ ಮೃತ ಯುವಕನ ಶವವನ್ನು ಹೊರಗೆ ತೆಗೆದಿದ್ದಾರೆ. ಘಟನೆ ಕುರಿತು ಸೊರಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಉಕ್ಕಿ ಹರಿಯುವ ನದಿಗೆ ಬಿದ್ದ ವ್ಯಕ್ತಿ- ಎನ್‌ಡಿಆರ್‌ಎಫ್‌ ತಂಡದಿಂದ ರಕ್ಷಣೆ

    ಉಕ್ಕಿ ಹರಿಯುವ ನದಿಗೆ ಬಿದ್ದ ವ್ಯಕ್ತಿ- ಎನ್‌ಡಿಆರ್‌ಎಫ್‌ ತಂಡದಿಂದ ರಕ್ಷಣೆ

    ಚಿಕ್ಕೋಡಿ/ಬೆಳಗಾವಿ: ಉಕ್ಕಿ ಹರಿಯುವ ವೇದಗಂಗಾ ನದಿ ದಾಟಲು ಹೋಗಿ ಆಯತಪ್ಪಿ ನದಿಗೆ ಬಿದ್ದು, ಸೇತುವೆಯಲ್ಲಿ ಸಿಲುಕಿದ್ದ ವ್ಯಕ್ತಿಯನ್ನು ಎನ್‍ಡಿಆರ್‍ಎಫ್ ತಂಡ ಹಾಗೂ ಪೊಲೀಸರು ಯಶಸ್ವಿ ಕಾರ್ಯಾಚರಣೆ ನಡೆಸಿ ನದಿಯಿಂದ ಹೊರಗೆ ಕರೆ ತಂದಿದ್ದಾರೆ.

    ಬೆಳಗಾವಿ ಜಿಲ್ಲೆಯ ಅಕ್ಕೋಳ-ಸಿದ್ನಾಳ ಗ್ರಾಮದ ಸಂಪರ್ಕ ಸೇತುವೆ ದಾಟುವಾಗ ನೀರಿನ ರಭಸಕ್ಕೆ ದಿಗ್ವಿಜಯ ಕುಲಕರ್ಣಿ ಕೊಚ್ಚಿ ಹೋಗಿ ಸೇತುವೆಯ ಬಳಿ ಮರದ ಕೊಂಬೆಯಲ್ಲಿ ಸಿಲುಕಿದ್ದರು. ವ್ಯಕ್ತಿಯನ್ನು ಈಗ ಯಶಸ್ವಿ ಕಾರ್ಯಾಚರಣೆ ಮಾಡಿ ಹೊರ ತರಲಾಗಿದೆ.

    ನೀರಿನ ರಭಸದ ನಡುವೆಯೂ ಯಶಸ್ವಿ ಕಾರ್ಯಾಚರಣೆ ನಡೆಸಿದ ಎನ್‍ಡಿಆರ್‍ಎಫ್ ಹಗ್ಗ ಕಟ್ಟಿ ಯುವಕನ ವರೆಗೂ ತಲುಪಿಸಿ, ಹಗ್ಗದಿಂದ ವ್ಯಕ್ತಿಯನ್ನು ರಕ್ಷಣೆ ಮಾಡಿದ್ದಾರೆ. ನಿಪ್ಪಾಣಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಕಾರ್ಯಾಚರಣೆಯಲ್ಲಿ ಎನ್‍ಡಿಆರ್‍ಎಫ್ ತಂಡದ ಸದಸ್ಯರು, ಚಿಕ್ಕೋಡಿ ಉಪ ವಿಬಾಗಾಧಿಕಾರಿ ಯತೀಶ್ ಕುಮಾರ್, ಡಿವೈಎಸ್‍ಪಿ ಮನೋಜ್ ನಾಯಕ್ ಭಾಗವಹಿಸಿದ್ದರು.

  • ಮಲೆನಾಡಲ್ಲಿ ಮಳೆ ಅಬ್ಬರ – ಅಜ್ಜಿ ಪಾರು, ಹೆದ್ದಾರಿ ಬಂದ್, ಮನೆ-ಕಟ್ಟಡಗಳ ಕುಸಿತ

    ಮಲೆನಾಡಲ್ಲಿ ಮಳೆ ಅಬ್ಬರ – ಅಜ್ಜಿ ಪಾರು, ಹೆದ್ದಾರಿ ಬಂದ್, ಮನೆ-ಕಟ್ಟಡಗಳ ಕುಸಿತ

    ಚಿಕ್ಕಮಗಳೂರು: ಜಿಲ್ಲೆಯ ಮಲೆನಾಡು ಭಾಗದಲ್ಲಿ ಇಂದು ಕೂಡ ಮಳೆಯ ಅಬ್ಬರ ಮುಂದುವರಿದಿದೆ. ಜಿಲ್ಲೆಯ ಮಲೆನಾಡು ಭಾಗಗಳಾದ ಮೂಡಿಗೆರೆ, ಶೃಂಗೇರಿ, ಕೊಪ್ಪ, ಎನ್.ಆರ್.ಪುರ, ಕಳಸ ತಾಲೂಕಿನಲ್ಲಿ ಭಾರೀ ಮಳೆ ಸುರಿದಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.

    ಕಳೆದ ರಾತ್ರಿಯಿಂದ ಸುರಿಯುತ್ತಿರುವ ಮಹಾ ಮಳೆಗೆ ಕೊಪ್ಪ ತಾಲೂಕಿನ ಗುಡ್ಡೆ ತೋಟ ಗ್ರಾಮದ ಬಳಿ ಬೈಂದೂರಿಗೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿ ಬಳಿ ರಸ್ತೆ ಬದಿಯಲ್ಲಿ ಗುಡ್ಡ ಕುಸಿದಿದ್ದು, ಕೆಲ ಕಾಲ ವಾಹನ ಸಂಚಾರ ಸ್ಥಗಿತಗೊಂಡಿತ್ತು. ಇದೇ ವೇಳೆ, ಜಯಪುರ ಸಮೀಪದ ಕೊಗ್ರೆ ಗ್ರಾಮದಲ್ಲಿ ಬೃಹತ್ ಮರಗಳು ರಸ್ತೆಗುರುಳಿವೆ ಹಾಗೂ ಧರೆ ಕುಸಿತ ಉಂಟಾಗಿದೆ.

    ಧಾರಾಕಾರ ಮಳೆಯಿಂದ ಮರ-ಮಣ್ಣು ರಸ್ತೆಗೆ ಉರುಳಿ ಬಿದ್ದಿದ್ದರಿಂದ ಕೊಗ್ರೆ-ಬಸರೀಕಟ್ಟೆ ಗ್ರಾಮದ ಸಂಪರ್ಕ ಕೂಡ ಸಂಪೂರ್ಣ ಬಂದ್ ಆಗಿದ್ದು, ಮೂಡಿಗೆರೆ ತಾಲೂಕಿನ ದಾರದಹಳ್ಳಿಯಲ್ಲೂ ಭಾರೀ ಗಾಳಿ-ಮಳೆಗೆ ಸೀತಮ್ಮ ಎಂಬವರ ಮನೆ ಕುಸಿದಿದೆ. ಮನೆಯಲ್ಲೇ ಅಜ್ಜಿ ಒಬ್ಬರೇ ವಾಸವಿದ್ದು, ಮನೆ ಬೀಳುವುದನ್ನ ಕಂಡು ಹೊರಗಡೆ ಓಡಿ ಬಂದು ಪ್ರಾಣ ಉಳಿಸಿಕೊಂಡಿದ್ದಾರೆ. ಅದೃಷ್ಟವಶಾತ್ ಕೂದಲೆಳೆ ಅಂತರದಲ್ಲಿ ದೊಡ್ಡ ಅನಾಹುತವೊಂದು ಪಾರಾಗಿದೆ.

    ಕಳಸ ತಾಲೂಕಿನ ಕುದುರೆಮುಖ ಸಮೀಪದ ನೆಲ್ಲಿಬೀಡು ಗ್ರಾಮದಲ್ಲಿ ಭಾರೀ ಮಳೆ-ಗಾಳಿಗೆ ಬಸ್ ತಂಗುದಾಣ ಕುಸಿದು ಬಿದ್ದಿದೆ. ಆ ಕುಸಿದ ಕಟ್ಟಡದ ಮತ್ತೊಂದು ಭಾಗದಲ್ಲಿ ಅಂಚೆ ಕಚೇರಿ ಇತ್ತು. ಆದರೆ, ಅಂಚೆ ಕಚೇರಿಗೆ ಏನೂ ಆಗಿಲ್ಲ. ಇನ್ನೂ ಕಳಸದಿಂದ ಹೊರನಾಡಿಗೆ ಸಂಪರ್ಕ ಕಲ್ಪಿಸುವ ಹೆಬ್ಬಾಳೆ ಸೇತುವೆ ಮುಳುಗಡೆಯಾಗಿದೆ. ಸೇತುವೆ ಮೇಲೆ ನೀರು ಹರಿದಿದ್ದು ವಾಹನ ಸಂಚಾರಕ್ಕೆ ಯಾವುದೇ ತೊಂದರೆಯಾಗಿಲ್ಲ. ವೇಗವಾಗಿ ಹರಿಯುತ್ತಿರೋ ಭದ್ರಾ ನದಿ ನೀರು ಸೇತುವೆ ಅಪ್ಪಳಿಸಿ ನೀರು ಸೇತುವೆ ಮೇಲೆ ನುಗ್ಗುತ್ತಿದ್ದು, ಈ ಸೇತುವೆ ಸಂಪೂರ್ಣ ಮುಳುಗಡೆಯಾದರೆ, ಮಾವಿನಹೊಳ್ಳ, ಮೆಣಸಿನಹಾಡ್ಯ, ತುರಾ, ಬಲಿಗೆ ಸೇರಿದಂತೆ ಏಳೆಂಟು ಗ್ರಾಮದ ಜನ ತೀವ್ರ ಸಂಕಷ್ಟಕ್ಕೀಡಾಗಲಿದ್ದಾರೆ.

    ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ, ದಾರದಹಳ್ಳಿ, ಬಣಕಲ್, ಚಾರ್ಮಾಡಿ ಘಾಟ್, ಬಾಳೂರು ಸುತ್ತಮುತ್ತ ಧಾರಾಕಾರ ಮಳೆ ಸುರಿದಿದ್ದು ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಮೂರು ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಭಾರೀ ಮಳೆಯಿಂದ ನಾಡಿನ ಜೀವನದಿಗಳಾದ ತುಂಗಾ-ಭದ್ರಾ, ಹೇಮಾವತಿ ನದಿಗಳು ಮೈದುಂಬಿ ಹರಿಯುತ್ತಿವೆ. ಮಲೆನಾಡಲ್ಲಿ ಇಂದು ಮಧ್ಯಾಹ್ನದ ಬಳಿಕ ಮಳೆಯ ಪ್ರಮಾಣ ಕೊಂಚ ತಗ್ಗಿದೆ. ಇದನ್ನೂ ಓದಿ: ರಾಜ್ಯದಲ್ಲಿ ಮುಂಗಾರು ಪ್ರಾರಂಭ – ಡಿಸಿಗಳ ಜೊತೆ ಸಿಎಂ ಸಭೆ

  • ನೀರು ಕುಡಿಯಲು ಹೋದ ಹಸು ಮೊಸಳೆ ದಾಳಿಗೆ ಬಲಿ

    ನೀರು ಕುಡಿಯಲು ಹೋದ ಹಸು ಮೊಸಳೆ ದಾಳಿಗೆ ಬಲಿ

    ರಾಯಚೂರು: ತಾಲೂಕಿನ ಡೊಂಗರಾಂಪೂರ ಬಳಿ ಕೃಷ್ಣಾ ನದಿ ದಡದಲ್ಲಿ ಮೊಸಳೆ ದಾಳಿಗೆ ಹಸು ಬಲಿಯಾಗಿರುವ ಘಟನೆ ನಡೆದಿದೆ.

    ನೀರು ಕುಡಿಯಲು ಹೋದ ಹಸುವನ್ನು ಎಳೆದೊಯ್ದು ಮೊಸಳೆ ತಿಂದು ಹಾಕಿದೆ. ರೈತ ಆಂಜನೇಯ ಎಂಬವರಿಗೆ ಸೇರಿದ ಹಸು ಮೊಸಳೆ ದಾಳಿಗೆ ಬಲಿಯಾಗಿದೆ. ನದಿ ಪಕ್ಕದಲ್ಲೇ ಜಮೀನು ಇದ್ದಿದ್ದರಿಂದ ರೈತ ಆಂಜನೇಯ ನಿನ್ನೆ ಸಂಜೆ ಹಸುವನ್ನ ನೀರು ಕುಡಿಯಲು ಬಿಟ್ಟಿದ್ದ, ಮೊಸಳೆ ದಾಳಿಗೆ ಹಸು ಬಲಿಯಾಗಿದ್ದು, ಇಂದು ಬೆಳಗ್ಗೆ ನದಿಯಲ್ಲಿ ತೇಲಾಡುತ್ತಿದ್ದಾಗ ರೈತರು ಗಮನಿಸಿದ್ದಾರೆ. ತೆಪ್ಪದ ಮೂಲಕ ಹೋಗಿ ತೇಲಾಡುತ್ತಿದ್ದ ಹಸು ಎಳೆದು ತಂದಿದ್ದಾರೆ. ಹಸುವಿನ ಮೈಮೇಲಿನ ಗಾಯಗಳಿಂದ ಮೊಸಳೆ ದಾಳಿ ಮಾಡಿರುವುದು ಖಚಿತವಾಗಿದೆ.

    ಈ ಹಿಂದೆ ಇದೇ ಸ್ಥಳದಲ್ಲಿ ಐದು ವರ್ಷದ ಬಾಲಕನನ್ನ ಮೊಸಳೆ ಎಳೆದುಕೊಂಡು ಹೋಗಿತ್ತು. ಹೀಗಾಗಿ ಕೃಷ್ಣಾ ನದಿ ಪಾತ್ರದ ಗ್ರಾಮಗಳ ಜನ ಮೊಸಳೆ ದಾಳಿಗೆ ಹೆದರಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಉತ್ತರ ಕನ್ನಡದಲ್ಲಿ ಮಳೆಯ ಅಬ್ಬರ- ಶಿರಸಿಯಲ್ಲಿ ಮತ್ತೆ ಭೂ ಕುಸಿತ

  • ದಶಕದಿಂದ ಹಕ್ಕು ಪತ್ರಕ್ಕಾಗಿ ನೆರೆ ಪೀಡಿತರ ಹೋರಾಟ – ಪಬ್ಲಿಕ್ ಟಿವಿ ವರದಿಗೆ ಸ್ಪಂದಿಸಿದ ಜಿಲ್ಲಾಡಳಿತ

    ದಶಕದಿಂದ ಹಕ್ಕು ಪತ್ರಕ್ಕಾಗಿ ನೆರೆ ಪೀಡಿತರ ಹೋರಾಟ – ಪಬ್ಲಿಕ್ ಟಿವಿ ವರದಿಗೆ ಸ್ಪಂದಿಸಿದ ಜಿಲ್ಲಾಡಳಿತ

    ಕಲಬುರಗಿ: ಪ್ರತಿ ವರ್ಷ ಮಹಾರಾಷ್ಟ್ರದಲ್ಲಿ ಧಾರಕಾರ ಮಳೆಯಾದ್ರೆ ಕಲಬುರಗಿ ಜಿಲ್ಲೆಯ ಭೀಮಾ ನದಿಯಲ್ಲಿ ಪ್ರವಾಹ ಎದುರಾಗುತ್ತದೆ. ಈ ಸಂದರ್ಭದಲ್ಲಿ ಅಫಜಲಪುರದ ದುಧಣಗಿ ಗ್ರಾಮ ಇಡೀ ಜಲಾವೃತಗೊಂಡು ಜನ ಸಂಕಷ್ಟದಲ್ಲಿ ಜೀವನ ಕಳೆಯುತ್ತಿದ್ದರು. ಈ ಗ್ರಾಮದ ಜನರಿಗೆ ಸ್ಥಳಾಂತರಕ್ಕೆ ಗ್ರಾಮದ ಹೊರವಲಯದಲ್ಲಿ ಜಮೀನು ಗುರುತಿಸಿ 10 ವರ್ಷ ಕಳೆದಿದ್ದರೂ ಹಕ್ಕುಪತ್ರ ನೀಡಿರಲಿಲ್ಲ. ಈ ಕುರಿತು ಪಬ್ಲಿಕ್ ಟಿವಿಯ ನಿರಂತರ ವರದಿಯ ಬಳಿಕ ಜಿಲ್ಲಾಡಳಿತ ಎಚ್ಚೆತ್ತುಕೊಂಡಿದೆ.

    ಜಿಲ್ಲೆಯಲ್ಲಿ ಮಳೆಗಾಲದ ಸಮಯದಲ್ಲಿ ಪ್ರವಾಹ ಬಂದು ಉಂಟಾಗಿದ್ದ ಸಮಸ್ಯೆಗಳ ಬಗ್ಗೆ ಅಧಿಕಾರಿಗಳು ನಿರ್ಲಕ್ಷ್ಯವಹಿಸಿದ್ದರು. ಈ ಕುರಿತು ಪಬ್ಲಿಕ್ ಟಿವಿ ನೆರೆ ಪೀಡಿತ ಗ್ರಾಮಕ್ಕೆ ಭೇಟಿ ನೀಡಿ ಅಲ್ಲಿನ ಸಮಸ್ಯೆ ಬಗ್ಗೆ ವಿಸ್ತೃತ ವರದಿ ಪ್ರಸಾರ ಮಾಡಿ, ಗ್ರಾಮದ 546 ಕುಟುಂಬಗಳಿಗೆ ಹಕ್ಕು ಪತ್ರ ನೀಡಲು ಕಲಬುರಗಿ ಜಿಲ್ಲಾಡಳಿತ ಮತ್ತು ರಾಜ್ಯ ಸರ್ಕಾರಕ್ಕೆ ಮನವಿ ಮಾಡಲಾಗಿತ್ತು. ಇದನ್ನೂ ಓದಿ: ಖಾಸಗಿ ಕ್ಲಿನಿಕ್‍ನಲ್ಲಿ ಸಿಕ್ಕಿ ಬಿದ್ದ ಸರ್ಕಾರಿ ಆಸ್ಪತ್ರೆಯ ವೈದ್ಯ

    ಪಬ್ಲಿಕ್ ಟಿವಿ ವರದಿಗೆ ಸ್ಪಂದಿಸಿದ ಜಿಲ್ಲಾಡಳಿತ ಇದೀಗ ನೆರೆ ಪೀಡಿತ ದುಧಣಗಿ ಗ್ರಾಮದ 546 ಕುಟುಂಬಗಳಿಗೆ ಹಕ್ಕು ಪತ್ರ ನೀಡಿದೆ. ಈ ಮೂಲಕ ಇನ್ನೇನು ಕೆಲ ದಿನಗಳಲ್ಲಿ ಪ್ರವಾಹ ಬರುತ್ತೆ ಅಂತಾ ಗ್ರಾಮದ ಜನ ಆತಂಕದಲ್ಲಿರುವಾಗಲೇ ಜಿಲ್ಲಾಡಳಿತ ಗ್ರಾಮದ ಪುನರ್‍ವಸತಿಗೆ ಬೇಕಾದ ಸಿದ್ಧತೆ ಮಾಡಿಕೊಂಡಿರುವುದು ಗ್ರಾಮಸ್ಥರಲ್ಲಿ ಸಂತಸ ಮೂಡಿಸಿದೆ.

  • ಪತಿಯನ್ನೇ ಕೊಂದ ಪತ್ನಿ- ಪುತ್ರ, ಪ್ರಿಯತಮನ ಸಾಥ್

    ಪತಿಯನ್ನೇ ಕೊಂದ ಪತ್ನಿ- ಪುತ್ರ, ಪ್ರಿಯತಮನ ಸಾಥ್

    ಚಿಕ್ಕೋಡಿ: ಪತ್ನಿಯ ಅನೈತಿಕ ಸಂಭಂಧವನ್ನು ಪತಿ  ಪ್ರಶ್ನಿಸಿದ್ದಕ್ಕೆ ಪತ್ನಿ, ಪುತ್ರ ಹಾಗೂ ಆಕೆಯ ಪ್ರಿಯತಮ ಸೇರಿ ಕೊಲೆ ಮಾಡಿರುವ ಘಟನೆ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಚಿಂಚಲಿ ಪಟ್ಟಣದಲ್ಲಿ ನಡೆದಿದೆ.

    ಕುಮಾರ ರಾಮು ಖೋತ (39) ಮೃತನಾಗಿದ್ದಾನೆ. ಪತ್ನಿಯಿಂದ ಕೊಲೆಯಾದ ಈತ ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ಚಿಂಚಲಿ ಪಟ್ಟಣದ ನಿವಾಸಿಯಾಗಿದ್ದನು. ಚಿಂಚಲಿ ಪಟ್ಟಣದ ಬಾಳೇಶ ಶ್ರೀಕಾಂತ ಹಾರೂಗೇರಿ, ಸಚಿನ್ ಕುಮಾರ ಖೋತ, ಗೀತಾ ಕುಮಾರ ಖೋತ, ಬೆಳಕೂಡ ಗ್ರಾಮದ ಅಪ್ಪಾಸಾಬ ಜಿನ್ನಾಪ್ಪಾ ತಪಕಿರೆ ಹಾಗೂ ಸಂತೋಷ ನೇಮಿನಾಥ ತಪಕಿರೆ ಬಂಧಿತ ಆರೋಪಿಗಳಾಗಿದ್ದಾರೆ.

    ಮೃತ ಕುಮಾರ ರಾಮು ಖೋತ ಪತ್ನಿ ಗೀತಾ ಕುಮಾರ ಖೋತ ಕುಡಚಿ ಪೊಲೀಸ್ ಠಾಣೆಗೆ ಜೂ.02 ರಂದು ಬಂದು ಠಾಣೆಯಲ್ಲಿ ಪತಿಯ ಬಗ್ಗೆ ಪ್ರಕರಣ ದಾಖಲಿಸಿದ್ದಾಳೆ.ನನ್ನ ಪತಿ ಮೇ. 27 ರಂದು ಸಾವನಪ್ಪಿದ್ದು, ನನ್ನ ಪತಿಯನ್ನು ಯಾರೋ ಆರೋಪಿತರು ಯಾವುದೋ ಕಾರಣಕ್ಕಾಗಿ ಯಾವುದೋ ಆಯುಧದಿಂದ ತಲೆಗೆ ಹೊಡೆದು ಭಾರಿ ಗಾಯಪಡಿಸಿ ಕೊಲೆ ಮಾಡಿದ್ದಾರೆ. ಸಾಕ್ಷಿ ನಾಶ ಮಾಡುವ ಉದ್ದೇಶದಿಂದ ಬಿಳಿಯ ಪ್ಲಾಸ್ಟಿಕನಲ್ಲಿ ಕಟ್ಟಿ ಮೃತದೇಹವನ್ನು ಕೃಷ್ಣಾ ನದಿಯಲ್ಲಿ ಒಗೆದು ಸಾಕ್ಷಿ ನಾಶ ಮಾಡಿದ್ದಾರೆ ಎಂದು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾಳೆ. ಇದನ್ನೂ ಓದಿ: ಅಭಿಮಾನಿಗಳಲ್ಲಿ ಕ್ಷಮೆ ಕೇಳಿದ ರಾಧಿಕಾ ಪಂಡಿತ್

    ಪೊಲೀಸರ ತನಿಖೆ ವೇಳೆ ಗೀತಾಗೆ ಚಿಂಚಲಿ ಗ್ರಾಮದ ಬಾಳೇಶ ಜೊತೆಗೆ ಅನೈತಿಕ ಸಂಬಂಧ ಹೊಂದಿದ್ದು, ಇದು ಕುಮಾರ ಖೋತನಿಗೆ ಗೊತ್ತಾಗಿ ಜಗಳ ಮಾಡಿದ್ದನು. ಈ ವೇಳೆ ಗೀತಾ ಪತಿಯ ಮೇಲೆ ಸಿಟ್ಟಾಗಿ ಮೃತನ ಹೆಂಡತಿ, ಮಗ ಸಚಿನ ಮತ್ತು ಬಾಳೇಶ ಹಾರೂಗೇರಿ ಕೂಡಿ ಕೊಲೆ ಸಂಚು ರೂಪಿಸಿ ಜೂ.27 ರಂದು ಕುಮಾರನಿಗೆ ಸಾರಾಯಿ ಕುಡಿಸಿ ಕಲ್ಲಿನಿಂದ ತಲೆಗೆ, ಎದೆಗೆ ಹೊಡೆದು ಕೊಲೆ ಮಾಡಿದ್ದಾರೆ. ನಂತರ ಮೃತನ ಶವವನ್ನು ಮೃತನ ಮಗ ಸಚಿನ್ ಹಾಗೂ ಬಾಳೇಶ ಇಬ್ಬರೂ ತೆಗೆದುಕೊಂಡು ಹೋಗಿ ಸಾಕ್ಷಿ ಹಾಳು ಮಾಡಲು ಚಿಂಚಲಿ ಜಾಕವೆಲ್ ಹತ್ತಿರ ಕೃಷ್ಣಾ ನದಿಯಲ್ಲಿ ಎಸೆದು ಹೋಗಿದ್ದಾರೆ ಎಂದು ಪೊಲೀಸರ ಬಳಿ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ. ಇದನ್ನೂ ಓದಿ : ಸಿಎಂ ಬದಲಾವಣೆ ಚರ್ಚೆಯಿಂದ ಸರ್ಕಾರದ ಇಮೇಜಿಗೆ ಧಕ್ಕೆ ಬರಲಿದೆ: ಶೆಟ್ಟರ್

    ಕುಡಚಿ ಪೊಲೀಸರು ಐದು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ಸದ್ಯ ಆರೋಪಿತರು ನ್ಯಾಯಾಂಗ ಬಂಧನದಲ್ಲಿದ್ದಾರೆ.

  • ಪತ್ನಿ ಮನೆಗೆ ಹೋಗೋದಾಗಿ ಹೇಳಿ ನದಿಗೆ ಹಾರಿ ಶಿಕ್ಷಕ ಆತ್ಮಹತ್ಯೆ

    ಪತ್ನಿ ಮನೆಗೆ ಹೋಗೋದಾಗಿ ಹೇಳಿ ನದಿಗೆ ಹಾರಿ ಶಿಕ್ಷಕ ಆತ್ಮಹತ್ಯೆ

    ಮೈಸೂರು: ಶಿಕ್ಷಕನೋರ್ವ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮೈಸೂರು ಜಿಲ್ಲೆಯಲ್ಲಿ ನಡೆದಿದೆ.

    ಆತ್ಮಹತ್ಯೆ ಮಾಡಿಕೊಂಡ ಶಿಕ್ಷಕನನ್ನು ಲೋಕೇಶ್ ಎಂದು ಗುರುತಿಸಲಾಗಿದ್ದು, ಮೈಸೂರು ಜಿಲ್ಲೆಯ ಕೆ.ಆರ್ ನಗರದ ಕೋಗಿಲೂರು ಗ್ರಾಮದ ನಿವಾಸಿ. ಇವರು ಕೋವಿಡ್ ಟೆಸ್ಟ್ ನಲ್ಲಿ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

    ಕೊರೊನಾ ಪಾಸಿಟಿವ್ ದೃಢವಾಗುತ್ತಿದ್ದಂತೆಯೇ ಮೃತ ಲೋಕೇಶ್ ಗೆ ಕುಟುಂಬಸ್ಥರು ಆತ್ಮಸ್ಥೈರ್ಯ ತುಂಬಿದ್ದರು. ಅಲ್ಲದೆ ವಾರ್ ರೂಂನಿಂದ ಕರೆ ಮಾಡಿ ಆತಂಕ ಪಡೆದಂತೆ ತಿಳಿಸಿದ್ದರು. ಆದರೂ ಭಯದಿಂದ ಮನೆ ಬಿಟ್ಟು ಹೋಗಿ ಲೋಕೇಶ್ ಸಾವಿಗೆ ಶರಣಾಗಿದ್ದಾರೆ.

    ಲೋಕೇಶ್ ಗೆ ಕಳೆದ ವರ್ಷವಷ್ಟೇ ಮದುವೆಯಾಗಿತ್ತು. ತನ್ನ ಪತ್ನಿ ಮನೆಗೆ ಹೋಗುವುದಾಗಿ ಹೇಳಿದ್ದ ಲೋಕೇಶ್, ಪತ್ನಿ ಮನೆ ಬಳಿ ಬೈಕ್ ನಿಲ್ಲಿಸಿ ಅಲ್ಲಿಯೇ ಮೊಬೈಲ್ ಇಟ್ಟು ನಾಪತ್ತೆಯಾಗಿದ್ದರು. ಎರಡು ದಿನದ ಬಳಿಕ ಹಾಸನ ಜಿಲ್ಲೆಯ ಅರಕಲಗೂಡಿನ ಕಾವೇರಿ ನದಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.

    ಈ ಸಂಬಂಧ ಕೊಣನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.