ಬೀಜಿಂಗ್: ಮಂಜುಗಟ್ಟಿದ ನೀರಿನಲ್ಲಿ ಸಿಲುಕಿದ್ದ ಮಹಿಳೆಯನ್ನು ವ್ಯಕ್ತಿಯೊಬ್ಬರು ಚೀನಾದಲ್ಲಿ ರಕ್ಷಿಸಿದ್ದು ವಿಡಿಯೋ ವೈರಲ್ ಆಗಿದೆ.
ಮಂಗಳವಾರ ಬೆಳಗ್ಗೆ ಉತ್ತರ ಚೀನಾದ ಹೆಬೈ ಪ್ರಾಂತ್ಯದಲ್ಲಿ ನಲ್ಲಿ ಈ ಘಟನೆ ನಡೆದಿದ್ದು, 54 ವರ್ಷದ ಶೀ ಲೀ ಎಂಬವರು ನದಿಗೆ ಜಾರಿ ಬಿದಿದ್ದಾರೆ. ಆಗ ಅಲ್ಲಿಂದಲ್ಲೇ ಹೋಗುತ್ತಿದ್ದ ವ್ಯಕ್ತಿ ತಕ್ಷಣ ತನ್ನ ವಾಹನವನ್ನು ನಿಲ್ಲಿಸಿ ಮಹಿಳೆಯನ್ನು ರಕ್ಷಿಸಲು ಮುಂದಾಗಿದ್ದಾರೆ.
ವ್ಯಕ್ತಿ ಬರಿಗೈಯಲ್ಲಿ ಮಂಜುಗಡ್ಡೆಯನ್ನು ಹೊಡೆದು ಮಹಿಳೆಯನ್ನು ರಕ್ಷಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಈಗ ವೈರಲ್ ಆಗಿದೆ. ಅಲ್ಲಿ ಮತ್ತೊಬ್ಬ ವ್ಯಕ್ತಿ ಅವರಿಬ್ಬರನ್ನು ಹಿಡಿದು ನಿಂತಿದ್ದರು.
ನೀರು ತುಂಬಾನೇ ಹೆಪ್ಪುಗಟ್ಟಿತ್ತು, ನನಗೆ ಬೇರೆ ವಿಷಯ ತಿಳಿಯುತ್ತಿರಲಿಲ್ಲ. ನಂತರ ಮನೆಗೆ ಹೋದ ಮೇಲೆ ಶುಂಠಿ ನೀರು ಕುಡಿದು ನಂತರ ನಾನು ಕೆಲಸಕ್ಕೆ ಹೋದೆ ಎಂದು ಮಹಿಳೆ ಶೀ ಲೀ ತಿಳಿಸಿದ್ದಾರೆ.
ತಿರುವನಂತಪುರ: ಹಿನ್ನೀರಿನಲ್ಲಿ ದೋಣಿ ಮುಗುಚಿದ ಪರಿಣಾಮ ಆರು ಮಕ್ಕಳು ಮೃತಪಟ್ಟಿರುವ ಹೃದಯ ವಿದ್ರಾವಕ ಘಟನೆ ಮಂಗಳವಾರ ಮಣಪುರಂ ಜಿಲ್ಲೆಯ ಚಂಗರಕುಳಂ ಗ್ರಾಮದಲ್ಲಿ ನಡೆದಿದೆ.
ಚಂಗರಕುಳಂ ಗ್ರಾಮದ ಬಳಿ ನಾರನಿಪುಜಂ ನದಿಯ ಹಿನ್ನೀರಿನಲ್ಲಿ ಈ ದೋಣಿ ದುರಂತ ನಡೆದಿದೆ. ವೈಶಣ್ (20), ಪ್ರಸೀನಾ (13), ಜನೀಶಾ (17), ಪೂಜಾ (13), ಅಭಿದೇವ್ (13) ಮತ್ತು ಆದಿನಾಥ್ (14) ದೋಣಿ ದುರಂತದಲ್ಲಿ ಮೃತ ದುರ್ದೈವಿಗಳು. ಇನ್ನು ಈ ದುರಂತದಲ್ಲಿ ಅಂಬಿಗ ವೇಲಾಯುಧ (55), ಫಾತಿಮಾ (9) ಮತ್ತು ಶಿಬಕಾ (11) ಬದುಕುಳಿದಿದ್ದಾರೆ.
ಮಕ್ಕಳೆಲ್ಲ ತಮ್ಮ ಸಂಬಂಧಿ ಅಂಬಿಗನಾದ ವೇಲಾಯುಧ ಜೊತೆ ಜಲಾಶಯ ನೋಡಲು ಚಿಕ್ಕದಾದ ಬೋಟ್ ನಲ್ಲಿ ತೆರಳಿದ್ದರು. ಕೇವಲ ಇಬ್ಬರು ಸಾಮರ್ಥವುಳ್ಳ ಬೋಟ್ ನಲ್ಲಿ ಒಂಭತ್ತು ಜನ ಪ್ರಯಾಣಿಸಿದ್ರಿಂದ ನದಿಯ ಮಧ್ಯಭಾಗದಲ್ಲಿ ಬೋಟ್ ಮುಗುಚಿ ಬಿದ್ದಿದೆ. ವೇಲಾಯುಧ ರಿಗೆ ಈಜು ಬರುತ್ತಿದ್ದರಿಂದ ಫಾತಿಮಾ ಎಂಬ ಬಾಲಕಿಯನ್ನು ರಕ್ಷಿಸಿ, ತಾನು ಬದುಕುಳಿದಿದ್ದಾರೆ. ಇತ್ತ 11 ವರ್ಷದ ಶಿಬಕಾ ಈಜಿ ದಡ ಸೇರಿದ್ದಾನೆ. ದೋಣಿಯಲ್ಲಿದ್ದ ವೇಲಾಯುಧ ಮಗ ವೈಶಾಲ್ ಗೆ ಈಜು ಬರುತ್ತಿದ್ದರೂ ಮಕ್ಕಳನ್ನು ಬದುಕಿಸಲು ಹೋಗಿ ಜಲಸಮಾಧಿ ಆಗಿದ್ದಾನೆ.
ಮೃತ ದೇಹಗಳನ್ನೆಲ್ಲಾ ನದಿಯಿಂದ ಹೊರ ತೆಗೆಯಲಾಗಿದೆ. ಬದುಕುಳಿದು ಬಂದವರನ್ನು ಚಿಕಿತ್ಸೆಗಾಗಿ ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಹೈದರಾಬಾದ್: ವಿದ್ಯಾರ್ಥಿ, ವಿದ್ಯಾರ್ಥಿಯ ಗೆಳತಿ ಕೃಷ್ಣನದಿಯನ್ನು ದಾಟುವ ವೇಳೆ ಅಕಸ್ಮಾತಾಗಿ ಬಿದ್ದು, ಸಾವನ್ನಪ್ಪಿರುವ ಘಟನೆ ಗದ್ವಾಲ್ ಜೋಗುಲಂಬಾ ಜಿಲ್ಲೆಯ ರೆಕುಲಪಲ್ಲಿಯಲ್ಲಿ ಶನಿವಾರ ಸಂಜೆ ನಡೆದಿದೆ.
ವಾರಿಸ್ (17) ಮತ್ತು ಸಾನಾ ಜಬೀನ್ (17) ಮೃತ ದುರ್ದೈವಿಗಳು ಎಂದು ಗುರುತಿಸಲಾಗಿದೆ. ವಾರಿಸ್ ಕುರ್ನೂಲ್ ಜಿಲ್ಲೆಯ ಎಮ್ಮಿಗನೂರ್ ನಿವಾಸಿಯಾಗಿದ್ದು, ಎರ್ರಾಕೋಟಾದಲ್ಲಿರುವ ಸೆಂಟ್ ಜೋಸೆಫ್ ಕಾಲೇಜಿನಲ್ಲಿ ಬಿ.ಫಾರ್ಮಸಿ ವ್ಯಾಸಂಗ ಮಾಡುತ್ತಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.
ಶನಿವಾರ ವಾರಿಸ್ ತನ್ನ ಪೋಷಕರಾದ ಮೊಹಮ್ಮದ್ ರಫಿ ಮತ್ತು ಮುನಿರಾಬಾ ಅವರಿಗೆ ಕಾಲೇಜಿಗೆ ಹೋಗುತ್ತೇನೆ ಎಂದು ಹೇಳಿ ಮನೆಯಿಂದ ಹೊರಟಿದ್ದಾನೆ. ನಂತರ ಗದ್ವಾಲ್‍ಗೆ ಹೋಗಿ ತನ್ನ ಚಿಕ್ಕಪ್ಪನ ಮಗಳಾದ ಸಾನಾ ಜಬೀನ್ ನನ್ನು ಜೊತೆಯಲ್ಲಿ ಕರೆದುಕೊಂಡು ಹೋಗಿದ್ದಾನೆ.
ಇಬ್ಬರು ದ್ವಿ ಚಕ್ರ ವಾಹದ ಮೇಲೆ ಜುರಾಲಾದ ಕೆಳಭಾಗದ ಪ್ರದೇಶಗಳಿಗೆ ಹೊರಟಿದ್ದಾರೆ. ಬಳಿಕ ಕೃಷ್ಣನದಿಯ ತೀರದಲ್ಲಿ ಸ್ವಲ್ಪ ಸಮಯ ಕಳೆದಿದ್ದಾರೆ. ಬಳಿಕ ಕತ್ತಲಾಗುತ್ತಿದ್ದಂತೆ ಇಬ್ಬರು ಮನೆಗೆ ಹಿಂದಿರುಗಲು ನದಿಯನ್ನು ದಾಟಲು ಪ್ರಯತ್ನಿಸಿದ್ದಾರೆ. ಆದರೆ ನೀರಿನ ರಭಸ ಜಾಸ್ತಿ ಇದ್ದ ಕಾರಣ ದಾಟಲು ಸಾಧ್ಯವಾಗದೇ ನದಿಯಲ್ಲಿ ಬಿದ್ದಿದ್ದಾರೆ.
ಮಕ್ಕಳು ಇಷ್ಟು ಹೊತ್ತಾದರೂ ಮನೆಗೆ ಬರಲಿಲ್ಲ ಎಂದು ಗಾಬರಿಗೊಂಡು ಪೋಷಕರು ಪೊಲೀಸರಿಗೆ ತಿಳಿಸಿದ್ದಾರೆ. ಪೊಲೀಸರು ನದಿಯ ಬಳಿ ಹೋಗಿ ಕಾರ್ಯಚರಣೆಯನ್ನು ನಡೆಸಿ ರೆಕುಲಪಲ್ಲಿಯಿಂದ ಸುಮಾರು ದೂರದಲ್ಲಿ ಇಬ್ಬರ ಮೃತದೇಹಗಳು ಪತ್ತೆಯಾಗಿವೆ.
ಉಡುಪಿ: ಹಾಲು ಕುಡ್ದ ಮಕ್ಕಳೇ ಬದುಕಲ್ಲ, ಇನ್ನು ಎಣ್ಣೆ ಕುಡ್ದೋರ್ ಉಳಿತಾರಾ… ಎಂಬ ಸಾಂಗ್ ಹಾಡಿಕೊಂಡು ಕಂಠಪೂರ್ತಿ ಕುಡಿದು ವ್ಯಕ್ತಿಯೊಬ್ಬ ರೈಲ್ವೆ ಬ್ರಿಡ್ಜ್ ನಿಂದ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಕಕ್ಕುಂಜೆಯ ಪೆರಂಪಳ್ಳಿ ರೈಲ್ವೆ ಸೇತುವೆ ಬಳಿ ನಡೆದಿದೆ.
ಹುಬ್ಬಳ್ಳಿ ಮೂಲದ ಕಾಪು ನಿವಾಸಿ ಸಾದಿಕ್, ಎಣ್ಣೆ ಹಾಡು ಹಾಡುತ್ತಲೇ ಸ್ವರ್ಣ ನದಿಗೆ ಜಿಗಿದು ಕುಡಿದ ಮತ್ತಿನಲ್ಲಿ ಈಜಲಾಗದೇ ಸಾವನ್ನಪ್ಪಿದ ಯುವಕ.
ಪೆರಂಪಳ್ಳಿ ರೈಲ್ವೇ ಪಟ್ಟಿಯ ಕೆಳಗೆ ಇರುವ ಪಿಲ್ಲರ್ ನ ಮೇಲೆ ಯುವಕರ ತಂಡವೊಂದು ಕುಳಿತು ಪಾರ್ಟಿ ಮಾಡುತ್ತಿದ್ದರು. ಮನಸೋ ಇಚ್ಛೆ ಬಂದಂತೆ ಕುಡಿದು ಮೋಜು ಮಾಡುತ್ತಿದ್ದರು. ಈ ಸಂದರ್ಭದಲ್ಲಿ ಸಾದಿಕ್ ಎಂಬ ಯುವಕ ಕಂಠಪೂರ್ತಿ ಕುಡಿದು ಹಾಲು ಕುಡ್ದ ಮಕ್ಕಳೇ ಬದುಕಲ್ಲ, ಇನ್ನು ಎಣ್ಣೆ ಕುಡ್ದೋರ್ ಉಳಿತಾರಾ ಎಂಬ ಹಾಡು ಹಾಡ್ತಾ ಹಾಡ್ತಾ ನೋಡ ನೋಡುತ್ತಿದ್ದಂತೆ ಸ್ವರ್ಣ ನದಿಗೆ ಜಿಗಿದಿದ್ದಾನೆ.
ಸಾದಿಕ್‍ನನ್ನು ರಕ್ಷಿಸಲು ಜೊತೆಗಿದ್ದ ಸಿಯಾನ್ ಎಂಬ ಯುವಕ ತಕ್ಷಣ ನದಿಗೆ ಹಾರಿದ್ದಾನೆ. ಆದರೆ ಸಾದಿಕ್‍ನನ್ನು ರಕ್ಷಿಸಲು ಸಾಧ್ಯವಾಗದೇ ಅಸ್ವಸ್ಥಗೊಂಡಿದ್ದಾನೆ. ಈ ಎಲ್ಲಾ ದೃಶ್ಯಗಳನ್ನು ಗೆಳೆಯರ ಮೊಬೈಲ್‍ನಲ್ಲಿ ಸೆರೆಯಾಗಿದೆ.
ಈ ಸಂಬಂಧ ಮಣಿಪಾಲ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಯುವಕರ ಮೋಜುಮಸ್ತಿ ಮಿತಿ ಮೀರಿದ್ದು, ಕುಡಿತ ಮತ್ತು ಗಾಂಜಾ ಸೇವಿಸಲು ಬಂದಿರಬಹುದು ಎಂದು ಶಂಕಿಸಲಾಗಿದೆ. ಅಷ್ಟೇ ಅಲ್ಲದೇ ಸಾದಿಕ್ ನದಿಗೆ ಹಾರುವ ಮೊದಲು ಹಗ್ಗಕಟ್ಟಿ ಸೇತುವೆಯಿಂದ ಕೆಳಗಿಳಿಯುವ ಯೋಚನೆಯನ್ನು ಕೂಡ ಮಾಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಕಲಬುರಗಿ: ನದಿ ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ನಾಯಿಯನ್ನು ನಾಲ್ವರು ಯುವಕರು ತಮ್ಮ ಪ್ರಾಣದ ಹಂಗು ತೊರೆದು ರಕ್ಷಣೆ ಮಾಡಿದ ಘಟನೆಯೊಂದು ನಡೆದಿದೆ.
ಈ ಘಟನೆ ಆಂಧ್ರ ಪ್ರದೇಶದಲ್ಲಿ ನಡೆದಿದ್ದು, ಅದರ ವಿಡಿಯೋ ಇದೀಗ ಫೇಸ್‍ಬುಕ್ ನಲ್ಲಿ ಸಖತ್ ವೈರಲ್ ಆಗಿದೆ. ವಿಡಿಯೋದಲ್ಲಿ ಮೂವರು ಯುವಕರು ಓರ್ವನ ಒಂದು ಕೈಯನ್ನು ಗಟ್ಟಿಯಾಗಿ ಹಿಡಿದುಕೊಂಡು ಇನ್ನೊಂದು ಕೈಯಲ್ಲಿ ನೀರಿನಲ್ಲಿ ಕೊಚ್ಚಿ ಹೋಗುತ್ತಿರೋ ನಾಯಿಯನ್ನು ರಕ್ಷಣೆ ಮಾಡಲು ಹರಸಾಹಸ ಮಡುತ್ತಿರೋ ದೃಶ್ಯವನ್ನ ಕಾಣಬಹುದು. ನೀರು ರಭಸವಾಗಿ ಹರಿಯುತ್ತಿದ್ದರೂ ನಾಯಿ ಕೂಡ ತನ್ನ ರಕ್ಷಣೆಗಾಗಿ ಹಾತೊರೆಯುತ್ತಿರೋ ದೃಶ್ಯ ಮನಕಲಕುವಂತಿದೆ. ಹರಿಯುತ್ತಿದ್ದ ನದಿಯಲ್ಲಿ ನಾಯಿ ಕೈಗೆ ಸಿಗುತ್ತಿದ್ದಂತೆಯೇ ಯುವಕರು ಖುಷಿಯಿಂದ ನಾಯಿಯನ್ನು ಹಿಡಿದುಕೊಂಡು ಮುದ್ದಾಡಿದ್ದಾರೆ.
ಈ ವಿಡಿಯೋ ರೈಟ್ ಟು ಫೈಟ್ ಎಂಬ ಫೇಸ್ ಬುಕ್ ಅಕೌಂಟ್ ನಲ್ಲಿ ಗುರುವಾರ ಸಂಜೆ ಅಪ್‍ಲೋಡ್ ಮಾಡಲಾಗಿದೆ. ಈವರೆಗೆ ಸುಮಾರು 7 ಲಕ್ಷಕ್ಕೂ ಅಧಿಕ ಮಂದಿ ಈ ವಿಡಿಯೋವನ್ನು ವೀಕ್ಷಿಸಿದ್ದಾರೆ.
ಪಾಟ್ನಾ: 1500 ರೂ. ಆಸೆಗಾಗಿ ರೈಲ್ವೇ ಪೊಲೀಸರೊಬ್ಬರು ಶವವನ್ನು ನಾಚಿಕೆಯಿಲ್ಲದೆ ನದಿಗೆ ಎಸೆದ ಘಟನೆ ಬಿಹಾರದಲ್ಲಿ ನಡೆದಿದೆ.
ರೈಲ್ವೆ ಪೊಲೀಸ್ ಅಧಿಕಾರಿ ಹಾಗು ಮತ್ತೊಬ್ಬ ವ್ಯಕ್ತಿ ಶವವನ್ನು ನದಿಗೆ ಎಸೆಯುವ ವೇಳೆ ಪ್ರತ್ಯಕ್ಷದರ್ಶಿಗಳು ಇದನ್ನ ಮೊಬೈಲ್‍ನಲ್ಲಿ ಸೆರೆಹಿಡಿದಿದ್ದಾರೆ. ದರ್ಭಂಗಾ ರೈಲ್ವೆ ನಿಲ್ದಾಣದ ಬಳಿ ಸರ್ಕಾರಿ ರೈಲ್ವೆ ಪೊಲೀಸರಿಗೆ(ಜಿಆರ್‍ಪಿ) ಗುರುವಾರದಂದ ಅಪರಿಚಿತ ಶವವೊಂದು ಪತ್ತೆಯಾದ ಬಳಿಕ ಈ ಘಟನೆ ನಡೆದಿದೆ.
ನಿಯಮಗಳ ಪ್ರಕಾರ ಅಪರಿಚಿತ ಶವ ಪತ್ತೆಯಾದಾಗ ಭಾರತೀಯ ರೈಲ್ವೇ ಶವ ಸಂಸ್ಕಾರಕ್ಕಾಗಿ 1500 ರೂ. ನೀಡುತ್ತದೆ. ಈ 1500 ರೂ. ಹಣವನ್ನ ಜೇಬಿಗಿಳಿಸಿಕೊಳ್ಳಬಹುದು ಎಂಬ ಆಸೆಯಿಂದ ಜಿಆರ್‍ಪಿ ಅಧಿಕಾರಿ ಅವ್ದೇಶ್ ಮಿಶ್ರಾ ಹಾಗೂ ಶವವನ್ನು ಇರಿಸಲಾಗಿದ್ದ ಆಂಬುಲೆನ್ಸ್‍ನ ಚಾಲಕ ದರ್ಭಂಗಾ- ಸಮಸ್ತಿಪುರ್ ರಸ್ತೆಯಲ್ಲಿನ ಬಾಗ್ಮತಿ ನದಿಗೆ ಶವವನ್ನು ಎಸೆಯಲು ನಿರ್ಧರಿಸಿದ್ದರು.
ಶವವನ್ನು ಎಸೆಯುವ ವೇಳೆ ಸ್ಥಳದಲ್ಲಿದ್ದವರು ಈ ದೃಶ್ಯವನ್ನ ಮೊಬೈಲ್‍ನಲ್ಲಿ ಸೆರೆಹಿಡಿದಿದ್ದಾರೆ. ಸ್ಥಳದಲ್ಲಿದ್ದವರು ಅವ್ದೇಶ್ ಹಾಗೂ ಆಂಬುಲೆನ್ಸ್ ಚಾಲಕನಿಗೆ ಏನು ಮಾಡ್ತೀದ್ದೀರ ಅಂತ ವಿಚಾರಿಸಿದ್ದರು. ಆಗ ಅವ್ದೇಶ್, ಶವ ಕೊಳೆತುಹೋಗಿದ್ದರಿಂದ ನದಿಗೆ ಎಸೆಯುತ್ತಿದ್ದೇವೆ ಎಂದು ಹೇಳಿದ್ದರು.
ಈ ದೃಶ್ಯವನ್ನ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದ ವ್ಯಕ್ತಿ ಇದನ್ನ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡ ನಂತರ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪೊಲೀಸ್ ಇಲಾಖೆಯ ವಿರುದ್ಧ ಕೋಪದಿಂದ ಕಮೆಂಟ್‍ಗಳನ್ನ ಮಾಡಿದ್ದಾರೆ. ವಿಡಿಯೋ ವೈರಲ್ ಆದ ನಂತರ ಎಸ್‍ಪಿ ಗೆ ಈ ಬಗ್ಗೆ ಮಾಹಿತಿ ತಿಳಿದು ತನಿಖೆಗೆ ಆದೇಶಿಸಿದ್ದರು. ರೈಲ್ವೆ ಪೊಲೀಸ್‍ನ ಈ ನಾಚಿಕೆಗೇಡಿನ ಕೃತ್ಯ ನಿಜವೆಂದು ಸಾಬೀತಾಗಿದೆ. ಕೂಡಲೇ ಇಲಾಖೆ ಕ್ರಮ ಕೈಗೊಂಡಿದ್ದು, ಅವ್ದೇಶ್‍ರನ್ನ ಅಮಾನತು ಮಾಡಿದೆ.
ಬಾಗಲಕೋಟೆ: ಮೂರು ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ಎಂಜಿನಿಯರಿಂಗ್ ವಿದ್ಯಾರ್ಥಿನಿಯ ಪ್ರಕರಣವನ್ನು ಬೇಧಿಸುವಲ್ಲಿ ಬಾಗಲಕೋಟೆ ಪೊಲೀಸರು ಯಶಸ್ವಿಯಾಗಿದ್ದಾರೆ.
ನಗರದ ವಿದ್ಯಾಗಿರಿಯ ನಿವಾಸಿ 20 ವರ್ಷದ ಶಿಲ್ಪಾ ಹುಲಗಣ್ಣಿ ಕೊಲೆಯಾದ ಯುವತಿ. ಮೂರು ವರ್ಷಗಳ ಹಿಂದೆ ಅಂದ್ರೆ 2014 ಅಗಸ್ಟ್ 22ರಂದು ಕಾಲೇಜ್‍ಗೆ ಹೋದ ಶಿಲ್ಪಾ ಕಾಣೆಯಾಗಿದ್ದಳು. ಮಗಳು ಕಾಣೆಯಾದ ಬಳಿಕ ಗಾಬರಿಗೊಳಗಾದ ಪೋಷಕರು ಎಲ್ಲ ಕಡೆ ಹುಡುಕಿದ್ದರು. ಆದರೆ ಶಿಲ್ಪಾ ಎಲ್ಲಿಯೂ ಪತ್ತೆಯಾಗಿರಲಿಲ್ಲ. ಕೊನೆಗೆ ಶಿಲ್ಪಾ ತಂದೆ ಶಿವಪ್ಪ ನವನಗರ ಪೊಲೀಸ್ ಠಾಣೆಯಲ್ಲಿ ಮಗಳು ಕಾಣೆಯಾಗಿರುವ ಬಗ್ಗೆ ದೂರು ದಾಖಲಿಸಿದ್ದರು.
ಮಗಳು ಕಾಣೆಯಾದ ಬಗ್ಗೆ ದೂರು ದಾಖಲಿಸಿದರೂ ಪೋಷಕರಿಗೆ ಶಿಲ್ಪಾಳ ಕುರಿತು ಯಾವುದೇ ಮಾಹಿತಿ ಸಿಕ್ಕಿರಲಿಲ್ಲ. ಡಿವೈಎಸ್ಪಿ ಆಗಿದ್ದ ವಿಠ್ಠಲ್ ಜಗಲಿ ಸರಿಯಾಗಿ ತನಿಖೆ ನಡೆಸದೇ ನಮಗೆ ಅನ್ಯಾಯ ಮಾಡಿದ್ರು ಎಂದು ಆರೋಪಿಸಿ ಧಾರವಾಡ ಉಚ್ಛ ನ್ಯಾಯಾಲಯದಲ್ಲಿ ಹೇಬಿಯಸ್ಸ್ ಕಾರ್ಪಸ್ಸ್ ಅಡಿ ಅರ್ಜಿ ಸಲ್ಲಿಸಿದ್ರು. ನ್ಯಾಯಾಲಯದ ಆದೇಶದನ್ವಯ ಇಂದು ಬಾಗಲಕೋಟೆ ಎ.ಎಸ್.ಪಿ. ಲಕ್ಷ್ಮೀಪ್ರಸಾದ್ ನೇತೃತ್ವದ ತಂಡ ಶಿಲ್ಪಾಳನ್ನು ಕೊಲೆ ಮಾಡಿದ ಆರೋಪಿಗಳನ್ನ ಸೆರೆಹಿಡಿದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಕೊಲೆಯಾಗಿದ್ದು ಹೇಗೆ?: ಶಿಲ್ಪಾಳ ಸೋದರ ಮಾವ ಮಹೇಶ್ ಎಂಬಾತ ಆಗಸ್ಟ್ 2014ರಂದು ಕಾಲೇಜು ಬಳಿ ಆಕೆಯನ್ನು ಪಿಕಪ್ ಮಾಡಿದ್ದಾನೆ. ಮಹೇಶ್ ತನ್ನ ಅಕ್ಕನ ಮಗಳಾದ ಶಿಲ್ಪಾಳನ್ನು ಪ್ರೀತಿಸುತ್ತಿದ್ದನು. ಆದ್ರೆ ಶಿಲ್ಪಾ ಈ ಪ್ರೀತಿಯನ್ನು ನಿರಾಕರಿಸಿದ್ದಳು. ಇದ್ರಿಂದ ಕುಪಿತಗೊಂಡ ಮಹೇಶ್ ಅಕ್ಕನ ಮಗಳ ಕೊಲೆಗೆ ಸಂಚು ರೂಪಿಸಿದ್ದನು. ಶಿಲ್ಪಾ ಯಾವಾಗಲೂ ಸೋದರ ಮಾವ ಎಂಬ ಸಲುಗೆಯಿಂದ ಮಹೇಶ್ ಜೊತೆ ಇರುತ್ತಿದ್ದಳು.
ಆಗಸ್ಟ್ 24 ರಂದು ಮಹೇಶ್ ತನ್ನ ಕಾರಿನಲ್ಲಿ ಬಂದು ಶಿಲ್ಪಾಳಿಗೆ ಜಾತ್ರೆಗೆಂದು ಕಾರಿನಲ್ಲಿ ಕರೆದುಕೊಂಡು ಹೋಗಿದ್ದಾನೆ. ಈ ವೇಳೆ ಮಹೇಶ್ ತನ್ನ ಜೊತೆ ಜಾವೇದ್ ಮತ್ತು ವಾಸು ರೆಡ್ಡಿ ಎಂಬವರನ್ನು ಕರೆದುಕೊಂಡು ಬಂದಿದ್ದಾನೆ. ಬಾಗಲಕೋಟೆಯಿಂದ ವಿಜಯಪುರ ಜಿಲ್ಲೆಯ ಮನಗೂಳಿಯ ಹೋಗುವ ಮಾರ್ಗದಲ್ಲಿ ಕೋಲಾರ ಬ್ರಿಡ್ಜ್ ಬಳಿ ಬರುವಷ್ಟರಲ್ಲಿಯೇ ಶಿಲ್ಪಾಳನ್ನು ಮೂವರು ಉಸಿರುಗಟ್ಟಿ ಕೊಲೆ ಮಾಡಿದ್ದಾರೆ. ನಂತರ ಶಿಲ್ಪಾಳ ಶವವನ್ನು ಕೃಷ್ಣಾ ನದಿಗೆ ಬಿಸಾಡಿದ್ದಾರೆ. ಅನುಮಾನ ಬಾರದರಿಲಿ ಎಂದು ಮಹೇಶ್ ತನ್ನ ಸ್ವಗ್ರಾಮ ಮನಗೂಳಿಗೆ ತೆರಳಿ ಎಲ್ಲರೊಂದಿಗೆ ಜಾತ್ರೆಯಲ್ಲಿ ಭಾಗವಹಿಸಿದ್ದಾನೆ.
ಮಹೇಶ್ ಸಿಕ್ಕಿದ್ದು ಹೇಗೆ?: ಶಿಲ್ಪಾ ಕಾಣೆಯಾದ ಬಳಿಕ ಮಹೇಶ್ ಆಕೆಯ ಪೋಷಕರೊಂದಿಗೆ ಹುಡುಕಾಟ ನಡೆಸುವಂತೆ ನಾಟಕ ಮಾಡಿದ್ದನು. ಕೊನೆಗೆ ಪೋಷಕರೊಂದಿಗೆ ಬಂದು ದೂರು ದಾಖಲಿಸಿದ್ದನು. ಆದರೆ ಶಿಲ್ಪಾ ಪೋಷಕರು ಮಾತ್ರ ಮಹೇಶ್ ಬಗ್ಗೆ ಅನುಮಾನವನ್ನು ವ್ಯಕ್ತಪಡಿಸಿದ್ದರು. ಅನುಮಾನದ ಬಳಿಕವೂ ಪೊಲೀಸರು ಯಾವುದೇ ಕ್ರಮವನ್ನು ಕೈಗೊಂಡಿರಲಿಲ್ಲ. ಹೇಬಿಯಸ್ ಕಾರ್ಪಸ್ ಅಡಿ ದೂರು ದಾಖಲಾದಾಗ ಪೊಲೀಸರು ಮಹೇಶನನ್ನು ಮಂಪರು ಪರೀಕ್ಷೆಗೆ ಒಳಪಡಿಸಲಾಗಿತ್ತು. ಇಲ್ಲಿಯೂ ಸಹ ಮಹೇಶ್ ತಪ್ಪಿಸಿಕೊಂಡಿದ್ದನು.
ಪೊಲೀಸರ ವಿಚಾರಣೆಯಿಂದ ಅನುಮಾನಗೊಂಡು ಮಹೇಶ್ ಗೆಳಯ ವಾಸುರೆಡ್ಡಿ ಎಂಬಾತನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಕೊಲೆಯ ರಹಸ್ಯ ಬೆಳಕಿಗೆ ಬಂದಿದೆ. ಸದ್ಯ ನದಿಗೆ ಬಿಸಾಡಿದ್ದರಿಂದ ಶಿಲ್ಪಾಳ ಶವ ಪತ್ತೆಯಾಗಿಲ್ಲ. ಮತ್ತೊಬ್ಬ ಆರೋಪಿ ಜಾವೇದ್ ನಾಪತ್ತೆಯಾಗಿದ್ದು, ಆತನ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
ಕಾಣೆಯಾದ ಮಗಳು ಇಂದಲ್ಲ ನಾಳೆ ಮನೆಗೆ ಹಿಂದಿರುಗಿ ಬರುತ್ತಾಳೆ ಎಂಬ ನಿರೀಕ್ಷೆಯಲ್ಲಿದ್ದ ಶಿಲ್ಪಾ ಪೋಷಕರಿಗೆ ಮಗಳ ಕೊಲೆಯ ಸುದ್ದಿ ದೊಡ್ಡ ಆಘಾತವನ್ನುಂಟು ಮಾಡಿದೆ.
ಮಂಡ್ಯ: ತಂದೆ ಮತ್ತು ಗಂಡನಿಗೆ ಮೆಸೇಜ್ ಮಾಡಿ ಗೃಹಿಣಿಯೊಬ್ಬರು ಕಾವೇರಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಬಳಿ ನಡೆದಿದೆ.
ಮೈಸೂರು ಜಿಲ್ಲೆ ಬನ್ನೂರು ತಾಲೂಕಿನ ಯಾಚೇನಹಳ್ಳಿ ಗ್ರಾಮದ ಜಯಂತ್ ಎಂಬವರ ಪತ್ನಿ ಉಷಾ ಪ್ರಿಯಾ ಆತ್ಮಹತ್ಯೆಗೆ ಶರಣಾದ ಗೃಹಿಣಿ. ಉಷಾ ಅವರ ಮೃತದೇಹ ಇಂದು ಕಾವೇರಿ ನದಿಯಲ್ಲಿ ಪತ್ತೆಯಾಗಿದೆ.
ಮೈಸೂರಿನ ಕೆ.ಆರ್.ಆಸ್ಪತ್ರೆಯಲ್ಲಿ ನರ್ಸ್ ಆಗಿದ್ದ ಉಷಾ ಭೀಮನ ಅಮವಾಸ್ಯೆ ದಿನ ಊರಿಗೆ ಹೋಗಿ ಬರುವುದಾಗಿ ಹೇಳಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಾಯುವ ಮುನ್ನ ತನ್ನ ಗಂಡ ಮತ್ತು ಪೋಷಕರಿಗೆ ತಾನು ಆತ್ಮಹತ್ಯೆ ಮಾಡಿಕೊಳ್ತಿರೋದಾಗಿ ಮೊಬೈಲ್‍ನಲ್ಲಿ ಮೆಸೇಜ್ ಮಾಡಿದ್ದಾರೆ. ಉಷಾ ಅವರಿಗೆ ಕೇವಲ ಒಂದು ವರ್ಷದ ಹಿಂದಷ್ಟೇ ಮದುವೆಯಾಗಿತ್ತು.
ನದಿಯಲ್ಲಿ ಶವ ಪತ್ತೆಯಾದ ವಿಷಯ ತಿಳಿದು ಸ್ಥಳಕ್ಕೆ ಶ್ರೀರಂಗಪಟ್ಟಣ ಪೊಲೀಸ್ರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆತ್ಮಹತ್ಯೆಗೆ ಕಾರಣ ಏನು ಎಂಬುದರ ಬಗ್ಗೆ ತನಿಖೆ ನಡೆಸಿದ್ದಾರೆ.
ಕೌಲಾಲಂಪುರ: ನದಿಯೊಂದರಲ್ಲಿ ಈಜಾಡುತ್ತಿದ್ದ ಭಾರೀ ಗಾತ್ರದ ಹೆಬ್ಬಾವೊಂದನ್ನ ಮಲೇಷಿಯಾದಲ್ಲಿ ಸೆರೆಹಿಡಿಯಲಾಗಿದೆ.
ಇಲ್ಲಿನ ಜೆಲಿ ಜಿಲ್ಲೆಯ ಸುಂಗೈ ಲಾಂಗ್ ಗ್ರಾಮದ ನದಿಯೊಂದರಲ್ಲಿ ಬರೋಬ್ಬರಿ 20 ಅಡಿ ಉದ್ದದ ಈ ಹೆಬ್ಬಾವು ಕಾಣಿಸಿಕೊಂಡಿತ್ತು. ಸೋಮವಾರದಂದು ಸೆರೆಹಿಡಿಯಲಾಗಿರುವ ವಿಡಿಯೋದಲ್ಲಿ, ದಡದ ಬಳಿ ಬರುತ್ತಿದ್ದ ಹಾವಿನ ಮೇಲೆ ವ್ಯಕ್ತಿಯೊಬ್ಬ ಕಲ್ಲು ಎಸೆಯುತ್ತಿರೋದನ್ನ ಕಾಣಬಹುದು.
ಈ ಹಾವನ್ನ ನದಿಯಿಂದ ಹೊರತರೋದಕ್ಕೆ 6 ಜನರು ಹರಸಾಹಸ ಪಡಬೇಕಾಯ್ತು ಅಂತ ವಿಡಿಯೋ ಸೆರೆಹಿಡಿದ ವ್ಯಕ್ತಿ ಪತ್ರಿಕೆಯೊಂದಕ್ಕೆ ಹೇಳಿದ್ದಾರೆ. ನಂತರ ಈ ಹಾವನ್ನ ಸ್ಥಳೀಯ ಅಧಿಕಾರಿಗಳಿಗೆ ನೀಡಲಾಗಿದೆ. ಸ್ಥಳೀಯ ಮೃಗಾಲಯವೊಂದರಲ್ಲಿ ಈ ಹೆಬ್ಬಾವಿಗೆ ಆಶ್ರಯ ಸಿಗಲಿದೆ ಎಂದು ವರದಿಯಾಗಿದೆ.
ಹಾವು ಕಾಣಿಸಿಕೊಂಡ ವೇಳೆ ನದಿಯ ದಡದ ಬಳಿ ಸಾಕಷ್ಟು ಮೇಕೆಗಳು ಮೇಯುತ್ತಿದ್ದವು. ಬಹುಶಃ ಹಾವು ಆಹಾರ ಹುಡುಕಿಕೊಂಡು ಬಂದಿರಬೇಕು ಎಂದು ಗ್ರಾಮಸ್ಥರು ಹೇಳಿದ್ದಾರೆ.
ಡೆಹ್ರಾಡೂನ್: ಯಾತ್ರಿಕರು ಪ್ರಯಾಣಿಸುತ್ತಿದ್ದ ಬಸ್ಸೊಂದು 100 ಮೀಟರ್ ಆಳಕ್ಕೆ ಉರುಳಿ ಬಿದ್ದ ಪರಿಣಾಮ 24 ಮಂದಿ ಮೃತಪಟ್ಟ ಘಟನೆ ಮಂಗಳವಾರ ಸಂಜೆ ನಡೆದಿದೆ.
ಉತ್ತರಾಖಂಡ್ ನ ಉತ್ತರಕಾಶಿಯ ಗಂಗೋತ್ರಿಯಿಂದ ಯಾತ್ರಿಕರಿದ್ದ ಬಸ್ ಹಿಂದಿರುಗುತ್ತಿದ್ದ ವೇಳೆ ನಲುಪಾಣಿ ಬಳಿ ಚಾಲಕನ ನಿಯಂತ್ರಣ ತಪ್ಪಿ ಭಾಗೀರಥಿ ನದಿಗೆ ಉರುಳಿ ಬಿದ್ದಿದೆ.
ಘಟನೆ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ವಿಷಾದ ವ್ಯಕ್ತಪಡಿಸಿದ್ದು, ದುರಂತದಲ್ಲಿ ಮೃತಪಟ್ಟವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿಯನ್ನು ಆ ದೇವರು ನೀಡಲಿ, ಗಾಯಾಳುಗಳು ಬೇಗ ಗುಣಮುಖರಾಗಲಿ ಅಂತಾ ಟ್ವೀಟ್ ಮಾಡಿದ್ದಾರೆ. ಅಲ್ಲದೇ ಘಟನೆಯಲ್ಲಿ ಮೃತಪಟ್ಟವರ ಕುಟುಂಬಕ್ಕೆ 2 ಲಕ್ಷ ರೂ. ಪರಿಹಾರ ಘೋಷಣೆ ಮಾಡಿದ್ದಾರೆ.
ಮಂಗಳವಾರ ಸಂಜೆ ಸುಮಾರು 6 ಗಂಟೆ ವೇಳೆಯಲ್ಲಿ ಈ ದುರಂತ ಸಂಭವಿಸಿದೆ. ಬಸ್‍ನಲ್ಲಿದ್ದವರು ಮಧ್ಯಪ್ರದೇಶ ಮೂಲದವರಾಗಿದ್ದು, ಗಂಗೋತ್ರಿಯಿಂದ ರಿಷಿಕೇಶ್‍ಗೆ ಬರುವಾಗ 100 ಅಡಿ ಆಳದ ಕಂದಕಕ್ಕೆ ಬಿದ್ದು ಅವಘಢ ಸಂಭವಿಸಿದೆ. ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹ್ವಾಣ್ ಮೃತರ ಕುಟುಂಬದವರಿಗೆ 2 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ.
ಐಟಿಬಿಪಿ, ಎಸ್‍ಡಿಆರ್‍ಎಫ್ ಪಡೆ ಹಾಗೂ ಪೊಲೀಸರಿಂದ ರಕ್ಷಣಾ ಕಾರ್ಯ ನಡೆಯುತ್ತಿದ್ದು, ಪರ್ವತ ತುಂಬಾ ಕಡಿದಾದುದ್ದರಿಂದ ಮತ್ತಷ್ಟು ವಿಳಂಬವಾಗಿ ಬೆಳಗ್ಗೆವರೆಗೂ ಕಾರ್ಯಾಚರಣೆ ನಡೆದಿದೆ.
ಉತ್ತರಾಖಂಡ್ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ಕೂಡ ಘಟನೆ ಬಗ್ಗೆ ಸಂತಾಪ ವ್ಯಕ್ತಪಡಿಸಿದ್ದು, ಮೃತರ ಪ್ರತೀ ಕುಟುಂಬಕ್ಕೂ 1 ಲಕ್ಷ ಹಾಗೂ ಗಯಾಳುಗಳಿಗೆ 50,000 ಪರಿಹಾರ ಘೋಷಿಸಿದ್ದಾರೆ.