Tag: ನದಿ

  • ಮುಂದುವರಿದ ವರುಣನ ಆರ್ಭಟ – ಮಹಿಳೆ ಸೇರಿ ನಾಲ್ವರ ಬಲಿ

    ಮುಂದುವರಿದ ವರುಣನ ಆರ್ಭಟ – ಮಹಿಳೆ ಸೇರಿ ನಾಲ್ವರ ಬಲಿ

    ಬೆಂಗಳೂರು: ರಾಜ್ಯಾದ್ಯಂತ ಮುಂಗಾರು ಮಳೆ ಆರ್ಭಟ ದಿನದಿಂದ ದಿನಕ್ಕೆ ಒಂದೊಂದೇ ಜಿಲ್ಲೆಗೆ ವ್ಯಾಪಿಸುತ್ತಿದೆ. ಕರಾವಳಿಯಲ್ಲೂ ಭಾರೀ ಪ್ರಮಾಣದಲ್ಲಿ ಮಳೆಯಾಗಿದ್ದು ನದಿಯಲ್ಲಿ ಮಹಿಳೆ ಒಬ್ಬರು ಬಿದ್ದು ಮೃತಪಟ್ಟಿದ್ದಾರೆ.

    ಬೆಳ್ತಂಗಡಿಯ ಶಿರ್ಲಾಲಿನಲ್ಲಿ ತುಂಬಿ ಹರಿಯುತ್ತಿದ್ದ ಹೊಳೆಗೆ ಬಿದ್ದು ರೇವತಿ (50) ಸಾವನ್ನಪ್ಪಿದ್ದಾರೆ. ಕೊಡಗಿನಲ್ಲಿ ಸೋಮವಾರಪೇಟೆ ತಾಲೂಕಿನ ಸಿದ್ದಾಪುರದಲ್ಲಿ ಕೊಂಬೆ ಬಿದ್ದು, 67 ವರ್ಷದ ಪಿ.ಸಿ ಅಹ್ಮದ್ ಕುಟ್ಟಿ ಹಾಜಿ ಮೃತರಾದ್ರೆ, ಕುಶಾಲನಗರದ ಗುಮ್ಮನಕೊಲ್ಲಿಯ ಕಾವೇರಿ ನದಿಯಲ್ಲಿ ಮೈಸೂರು ಮೂಲದ ರಮೇಶ್ ಎಂಬವರು ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ. ಹಾಸನದ ಸಕಲೇಶಪುರ ತಾಲೂಕಿನ ಕಳಲೇ ಗ್ರಾಮದಲ್ಲಿ ಪುಟ್ಟಯ್ಯ (60) ಎಂಬರ ಮೇಲೆ ಮರದ ಕೊಂಬೆ ಮುರಿದು ಬಿದ್ದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

    ಮಂಗಳೂರಿನ ಕಾರ್ ಸ್ಟ್ರೀಟ್‍ನಲ್ಲಿ ಗಾಳಿ ಮಳೆಗೆ ಬೃಹತ್ ಮರಗಳು ಧರೆಗುರುಳಿದ್ದು, ಹಳೇ ಕಟ್ಟಡ ಕುಸಿದು ಬಿದ್ದಿದೆ. ಬಿರುಗಾಳಿ ಜೊತೆಗೆ ಕಡಲಿನ ರೌದ್ರ ನರ್ತನ ಜೋರಾಗಿದ್ದು, ಸಮುದ್ರ ಬದಿಯ ನಿವಾಸಿಗಳಲ್ಲಿ ಆತಂಕ ಮನೆ ಮಾಡಿದೆ. ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ಭಾರೀ ಮಳೆಯಾಗಿದ್ದು, ನಗರವೊಂದರಲ್ಲೇ ಕಳೆದ 24 ಗಂಟೆಗಳಲ್ಲಿ 153.4 ಮಿಲಿ ಮೀಟರ್ ಮಳೆಯಾಗಿದೆ. ಇದೇ ವೇಳೆ ಭಟ್ಕಳದ ಶಿರಾಲಿ ಅಳವೆಕೋಡಿ ಭಾಗದಲ್ಲಿ ತಾತ್ಕಾಲಿಕವಾಗಿ ನಿರ್ಮಿಸಿರುವ ರಸ್ತೆ ಮಳೆಯ ನೀರಿನಲ್ಲಿ ಕೊಚ್ಚಿ ಹೋಗಿದೆ.

    ಚಿಕ್ಕಮಗಳೂರಿನಲ್ಲಿ ಕಳೆದ 48 ಗಂಟೆಗಳಿಂದ ನಿರಂತರವಾಗಿ ಸುರಿಯುತ್ತಿದ್ದು, ಮೂಡಿಗೆರೆ, ಕಳಸದಲ್ಲಿ ಭಾಗದಲ್ಲಿ ಭಾರೀ ಜನರು ಸಮಸ್ಯೆ ಎದುರಿಸಿದ್ದಾರೆ. ತುಂಗಾ, ಭದ್ರಾ, ಹೇಮಾವತಿ ನದಿಗಳು ಮೈದುಂಬಿ ಹರಿಯುತ್ತಿವೆ. ಕೊಡಗಿನ ಸೋಮವಾರಪೇಟೆ ತಾಲೂಕಿನ ಕುಂಬೂರಿನಲ್ಲಿ ವಿದ್ಯುತ್ ಕಂಬಗಳು ಧರೆಗುರುಳಿದ್ದು, ಅಂಗನವಾಡಿಯ ಕಾಂಪೌಂಡ್ ಮೇಲೆ ಮರ ಬಿದ್ದು ಜಖಂ ಗೊಂಡಿದೆ. ಯಾದಗಿರಿ ಜಿಲ್ಲೆಯ ಶಹಾಪುರ ನಗರದಲ್ಲಿ ಇಂದು ಸಂಜೆ ವೇಳೆ ಸುಮಾರು ಒಂದು ಗಂಟೆಗಳ ಕಾಲ ಭಾರೀ ಮಳೆ ಸುರಿದ ಪರಿಣಾಮ ನಗರದ ವಿವಿಧೆಡೆ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿವೆ.

    ಮುಂಗಾರು ಮಳೆ ಶಿವಮೊಗ್ಗ ಜಿಲ್ಲೆಯನ್ನು ದಟ್ಟವಾಗಿ ಆಕ್ರಮಿಸುತ್ತಿದ್ದು, ತೀರ್ಥಹಳ್ಳಿ ತಾಲೂಕು ಹೊರಬೈಲು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ, ಪುಟ್ಟ ಸೇತುವೆ ಕೊಚ್ಚಿ ಹೋಗಿದೆ. ಸತತ ಮಳೆಯಿಂದ ಶಿವಮೊಗ್ಗ ಸೇರಿ, ತೀರ್ಥಹಳ್ಳಿ, ಸಾಗರ, ಹೊಸನಗರ ತಾಲೂಕುಗಳಲ್ಲಿನ ಕೆರೆ-ಕೊಳ್ಳಗಳು ತುಂಬಿ ಹರಿಯುತ್ತಿವೆ. ತುಂಗಾ, ವರದ, ಶರಾವತಿ ನದಿಗಳಲ್ಲಿ ಕ್ರಮೇಣ ನೀರು ತುಂಬುತ್ತಿವೆ. ಕಳೆದ ನಾಲ್ಕು ದಿನಗಳಲ್ಲಿ ಸರಾಸರಿ 58 ಮಿಲಿ ಮೀಟರ್ ಮಳೆ ಶಿವಮೊಗ್ಗ ಜಿಲ್ಲೆಯಲ್ಲಿ ಆಗಿದೆ. ತೀರ್ಥಹಳ್ಳಿಯಲ್ಲಿ 64, ಹೊಸನಗರದಲ್ಲಿ 85, ಸಾಗರದಲ್ಲಿ 80 ಮಿಲಿ ಮೀಟರ್ ಮಳೆಯಾಗಿದೆ.

    ಬೆಂಗಳೂರಿನಲ್ಲಿ ಇನ್ನೂ ಮೂರು ದಿನಗಳ ಕಾಲ ಮೋಡ ಕವಿದ ವಾತಾವರಣ ಮತ್ತು ಹಗುರವಾದ ಸಾಧಾರಣ ಮಳೆ ಹಾಗೂ ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ಮೂರು ದಿನ ಭಾರೀ ಮಳೆ ಕುರಿತು ರಾಜ್ಯ ನೈಸರ್ಗಿಕ ಪ್ರಕೃತಿ ವಿಕೋಪ ಇಲಾಖೆ ನಿರ್ದೇಶಕರಾದ ಶ್ರೀನಿವಾಸ್ ರೆಡ್ಡಿ ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದ್ದಾರೆ.

    https://www.youtube.com/watch?v=2NCzafRx74I

    https://www.youtube.com/watch?v=N1bhCcCelos

  • ಕಡೂರಿನಲ್ಲಿ ನೀರಿನಲ್ಲಿಯೇ ಬೆಳಗಿತು ದೀಪ – ಸ್ಥಳೀಯರಲ್ಲಿ ಅಚ್ಚರಿ

    ಕಡೂರಿನಲ್ಲಿ ನೀರಿನಲ್ಲಿಯೇ ಬೆಳಗಿತು ದೀಪ – ಸ್ಥಳೀಯರಲ್ಲಿ ಅಚ್ಚರಿ

    ಚಿಕ್ಕಮಗಳೂರು: ನೀರಲ್ಲಿ ದೀಪ ಉರಿಯುತ್ತೆ ಅಂದ್ರೆ ಯಾರೂ ನಂಬೋದಿಲ್ಲ. ಆದರೆ ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಕಂಡುಗದಹಳ್ಳಿ ಸೋಮೇಶ್ವರ ಸ್ವಾಮಿ ಸನ್ನಿಧಿಯಲ್ಲಿ ನಡೆಯೋ ಎಣ್ಣೆಹೊಳೆ ಪೂಜಾ ಕಾರ್ಯಕ್ರಮದಲ್ಲಿ ನೀರಿನಿಂದಲೇ ದೀಪ ಉರಿಸಿದ್ದಾರೆ.

    12 ವರ್ಷಕ್ಕೊಮ್ಮೆ ನಡೆಯೋ ಈ ಪೂಜಾ ಕಾರ್ಯ ಕಳೆದ ವರ್ಷವೇ ನಡೆದಿತ್ತು. ಅಂದು ಮಳೆ ಬಂದೇ ಬರುತ್ತೆ ಅಂತ ಜನ ಕಾದು ಕೂತಿದ್ದರು. ಆದರೆ ಮಳೆ ಬಂದಿರಲಿಲ್ಲ. ಆದರೆ ಕಳೆದ ಮೂರು ದಿನಗಳ ಹಿಂದೆ ಸುರಿದ ಭಾರೀ ಮಳೆಯಿಂದ ವೇದಾವತಿ ನದಿ ಮೈದುಂಬಿ ಹರಿದ ಹಿನ್ನೆಲೆಯಲ್ಲಿ ನದಿಗೆ ಪೂಜೆ ಮಾಡಿ ಆ ನೀರಿನಲ್ಲೇ ದೀಪ ಹಚ್ಚಿದ್ದಾರೆ.

    ದೇವರ ಮುಂದಿನ ದೀಪದ ತುಂಬ ಎಣ್ಣೆ ಬದಲು ನೀರನ್ನೇ ಹಾಕಿದ್ದಾರೆ. ನೀರು ಖಾಲಿಯಾಗೋವರೆಗೂ ದೀಪ ಉರಿದಿದೆ. ಈ ಸುಮಧುರ ಘಳಿಗೆಯನ್ನ ಕಂಡ ಸ್ಥಳಿಯರು ಆಶ್ಚರ್ಯಕ್ಕೀಡಾಗಿ ಸೋಮೇಶ್ವರ ಸ್ವಾಮಿಗೆ ಉಘೇ ಎಂದಿದ್ದಾರೆ.

  • ಕಾವೇರಿ ನೀರು ಹಂಚಿಕೆ ವಿವಾದಕ್ಕೆ ತಾರ್ಕಿಕ ಅಂತ್ಯ – ನಿರ್ವಹಣಾ ಮಂಡಳಿ ಅಧಿಕೃತಗೊಳಿಸಿದ ಕೇಂದ್ರ ಸರ್ಕಾರ

    ಕಾವೇರಿ ನೀರು ಹಂಚಿಕೆ ವಿವಾದಕ್ಕೆ ತಾರ್ಕಿಕ ಅಂತ್ಯ – ನಿರ್ವಹಣಾ ಮಂಡಳಿ ಅಧಿಕೃತಗೊಳಿಸಿದ ಕೇಂದ್ರ ಸರ್ಕಾರ

    ನವದೆಹಲಿ: ಸುಪ್ರೀಂಕೋರ್ಟ್ ನಿರ್ದೇಶನದ ಮೇರೆಗೆ ಕಾವೇರಿ ನೀರು ನಿರ್ವಹಣಾ ಸಮಿತಿಯನ್ನು ಭಾರತ ಸರ್ಕಾರದ ಗೆಜೆಟ್ ನಲ್ಲಿ ಅಧಿಕೃತವಾಗಿ ಇಂದು ಸೇರ್ಪಡೆ ಮಾಡಲಾಗಿದೆ. ಕೇಂದ್ರ ಜಲ ಸಂಪನ್ಮೂಲ ಇಲಾಖೆ ಗೆಜೆಟ್ ಸೇರಿಸಲು ಸೂಚಿಸಿದ ಬೆನ್ನೆಲ್ಲೇ ಕೇಂದ್ರ ಸರ್ಕಾರದ ತನ್ನ ಅಧಿಕೃತ ಗೆಜೆಟ್ ಗೆ ಕಾವೇರಿ ನೀರು ನಿರ್ವಹಣಾ ಸಮಿತಿಯನ್ನು ಸೇರ್ಪಡೆ ಮಾಡಿಕೊಂಡಿದೆ. ಈ ಮೂಲಕ ಮೂರು ರಾಜ್ಯಗಳು ಹಾಗೂ ಒಂದು ಕೇಂದ್ರಾಡಳಿತ ಪ್ರದೇಶದ ನಡುವೆ ಇದ್ದ ಹಗ್ಗ ಜಗ್ಗಾಟಕ್ಕೆ ಬ್ರೇಕ್ ಹಾಕುವ ಪ್ರಯತ್ನ ಮಾಡಲಾಗಿದೆ.

    ಕಾವೇರಿ ನದಿ ನೀರು ಹಂಚಿಕೆ ವಿಚಾರವಾಗಿ ಫೆಬ್ರವರಿ 16 ರಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿತ್ತು. ನೀರು ಹಂಚಿಕೆಗೆ ಸಮಿತಿ ರಚಿಸುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಿತ್ತು. ಸುಪ್ರೀಂ ಸೂಚನೆ ಹಿನ್ನೆಲೆ ಅಂತರಾಜ್ಯ ನದಿ ನೀರು ವಿವಾದ 1956 ರ ಕಾಯ್ದೆ ಅನ್ವಯ ಕರಡು ತಯಾರಿಸಿದ್ದ ಕೇಂದ್ರ ಸರ್ಕಾರ ಮೇ ಮೊದಲ ವಾರದಲ್ಲಿ ಸುಪ್ರೀಂ ಕೋರ್ಟ್ ಗೆ ಸಲ್ಲಿಸಿತ್ತು. ಈ ವೇಳೆ ಕೆಲ ಮಾರ್ಪಾಡುಗಳೊಂದಿಗೆ ಒಪ್ಪಿಗೆ ಸೂಚಿಸಿದ್ದ ಸುಪ್ರೀಂ ಕೋರ್ಟ್ ಸಮಿತಿ ಅನುಷ್ಠಾನಕ್ಕೆ ತರುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಿತ್ತು.

    ಇಂದು ಗೆಜೆಟ್ ಮುದ್ರಣ ವಿಭಾಗದ ಹಿರಿಯ ಜಂಟಿ ಆಯುಕ್ತ ಆರ್ ಕೆ ಕನೋಡಿಯಾ ಭಾರತ ಸರ್ಕಾರಿ ಮುದ್ರಣದ ಮ್ಯಾನೇಜರ್‍ಗೆ ಪ್ರಾಧಿಕಾರ ರಚನೆ ಕುರಿತಾಗಿ ಗ್ಯಾಜೆಟ್ ನಲ್ಲಿ ಪ್ರಕಟಿಸಲು ನಿರ್ದೇಶನ ನೀಡಿದರು. ಅದರಂತೆ ಗೆಜೆಟ್ ಮುದ್ರಣವಾಗಿದ್ದು ಅಧಿಕೃತವಾಗಿ ಕಾವೇರಿ ನೀರು ನಿರ್ವಹಣಾ ಸಮಿತಿ ಕಾರ್ಯನಿರ್ವಹಿಸಲಿದೆ.

    ಸ್ಕೀಂ ಕರಡಿನ ಮುಖ್ಯಾಂಶಗಳೇನು..?

    ಸ್ಕೀಂ ರಚನೆ: ನ್ಯಾಯಮಂಡಳಿ ಆದೇಶ ಮಾರ್ಪಡಿಸಿ ತೀರ್ಪನ ಅನ್ವಯ ಪ್ರಾಧಿಕಾರದ ಸ್ವರೂಪದ ಸ್ಕೀಂ ರಚನೆ ಮಾಡಲಾಗಿದೆ. ಪ್ರಾಧಿಕಾರವು ಕಾವೇರಿ ನೀರಿನ ಸಂಗ್ರಹ, ಹಂಚಿಕೆ ಮತ್ತು ನಿಯಂತ್ರಣ ಕುರಿತು ಗಮನಹರಿಸಲಿದೆ. ಜಲಾಶಯಗಳ ಮೇಲುಸ್ತುವಾರಿ ಹಾಗೂ ನೀರು ಬಿಡುಗಡೆಗೆ ಸಮಿತಿಯ ಸಹಕಾರ ಪಡೆಯಲಿದೆ. ಬಿಳಿಗುಂಡ್ಲು ಮಾಪಕ ಕೇಂದ್ರದ ಮೂಲಕ ನೀರಿನ ಅಳತೆ ಮಾಡುವ ಜವಾಬ್ದಾರಿ ಕೂಡ ಪ್ರಾಧಿಕಾರದ್ದಾಗಿರುತ್ತದೆ. ಪ್ರಾಧಿಕಾರ ತನ್ನ ಸಹಾಯಕ್ಕಾಗಿ ಒಂದು ಅಥವಾ ಎರಡು ಸಮಿತಿ ನೇಮಿಸಿಕೊಳ್ಳುವ ಅಧಿಕಾರ ಹೊಂದಿರುತ್ತದೆ. ನೀರಿನ ಒಳಹರಿವು, ಸಂಗ್ರಹ, ಬಳಕೆ ಮತ್ತು ಬಿಡುಗಡೆ ಕುರಿತಂತೆ ಪ್ರಾಧಿಕಾರವು 10 ದಿನಕ್ಕೊಮ್ಮೆ ಪರಿಶೀಲಿಸಿ, ಸಂಬಂಧಿಸಿದ ರಾಜ್ಯಗಳಿಗೆ ನಿಯಮಿತವಾಗಿ ನೀರನ್ನು ಪಡೆಯಲು ಅವಕಾಶ ನೀಡಲಿದೆ. ಹಂಚಿಕೆಯಾದ ನೀರನ್ನು ಸಂಬಂಧಿಸಿದ ರಾಜ್ಯಗಳಿಗೆ ಕೊಡಿಸಲು ಪ್ರಾಧಿಕಾರವು ಪ್ರಯತ್ನಿಸಲಿದೆ. ಮಳೆ ಕೊರತೆಯನ್ನು ಪರಿಶೀಲಿಸಿ ಅರಿಯಲಿರುವ ಪ್ರಾಧಿಕಾರವು ಕೊರತೆಗೆ ಅನುಗುಣವಾಗಿಯೇ ನೀರು ಹಂಚಲಿದೆ.

    ಮಾಹಿತಿ ಹಂಚಿಕೆ: ಪ್ರಮುಖವಾಗಿ ಆಯಾ ರಾಜ್ಯಗಳ ಬೆಳೆಯ ಪ್ರಮಾಣ, ಬೆಳೆ ಪದ್ಧತಿ, ನೀರಾವರಿ ಅವಲಂಬನೆ ಅರಿತು ಮತ್ತು ಕುಡಿಯುವ ನೀರು ಹಾಗೂ ಕೈಗಾರಿಕೆಗೂ ಮಳೆಯ ಪ್ರಮಾಣ ಆಧರಿಸಿಯೇ ನಿರ್ಧರಿಸಲಿದೆ. ಪ್ರಾಧಿಕಾರವು ಅತ್ಯುತ್ತಮ ಸಂವಹನ ಜಾಲ ರೂಪಿಸಿ ಎಲ್ಲಾ ಅಂಕಿ ಅಂಶಗಳು ಕಣಿವೆ ವ್ಯಾಪ್ತಿಯ ನಾಲ್ಕು ರಾಜ್ಯಗಳಿಗೆ ಲಭ್ಯವಾಗುವಂತೆ ಮಾಡಲಿದೆ. ಇದಕ್ಕಾಗಿ ಕೇಂದ್ರ ಜಲ ಆಯೋಗ ಮತ್ತು ಕೇಂದ್ರ-ರಾಜ್ಯ ಸರ್ಕಾರದ ಸಂಬಂಧಿಸಿದ ಇಲಾಖೆಗಳ ನೆರವು ಪಡೆಯಲಿದೆ.

    ಬೇಡಿಕೆ ಪಟ್ಟಿ: ಕಣಿವೆ ವ್ಯಾಪ್ತಿಯ ರಾಜ್ಯಗಳು ಆಯಾ ವರ್ಷದ ಬೇಡಿಕೆ ಪಟ್ಟಿಯನ್ನು ಜಲವರ್ಷದ ಆರಂಭದಲ್ಲೇ ಪ್ರಾಧಿಕಾರಕ್ಕೆ ನೀಡುವುದು ಕಡ್ಡಾಯ. ಬೇರೆ ಬೇರೆ ಜಲಾನಯನ ಪ್ರದೇಶಗಳಲ್ಲಿ ಬೇರೆ ಬೇರೆ ಸಂದರ್ಭಗಳಲ್ಲಿ ಸುರಿಯುವ ಮಳೆಯ ಪ್ರಮಾಣ ಆಧರಿಸಿ ಬೇಡಿಕೆ ಪಟ್ಟಿ ತಯಾರಿಸುವುದು ಕಡ್ಡಾಯ. ಕಾವೇರಿ ಕಣಿವೆಯಲ್ಲಿ ಕೈಗೊಳ್ಳುವ ಯಾವುದೇ ಕಾಮಗಾರಿಯನ್ನು ಪರಿಶೀಲಿಸುವ ಪ್ರಾಧಿಕಾರ ಹಾಗೂ ಅದರ ಸದಸ್ಯರಿಗೆ ಇರುತ್ತದೆ. ರಾಜ್ಯಗಳು ತೀರ್ಪಿನ ಅನುಷ್ಠಾನಕ್ಕೆ ಸಮ್ಮತಿಸದಿದ್ದರೆ ಮತ್ತೆ ಕೇಂದ್ರ ಸರ್ಕಾರದ ಮೊರೆ ಹೋಗುವುದು. ನೀರಿನ ಸದ್ಬಳಕೆ ಮತ್ತು ಸಂಗ್ರಹ ಕುರಿತಂತೆ ಪ್ರಾಧಿಕಾರವು ರಾಜ್ಯ ಸರ್ಕಾರಗಳಿಗೆ ಸಲಹೆ ನೀಡುವ ಅಧಿಕಾರ ಹೊಂದಿದೆ. ಕಾವೇರಿ ಜಲ ನಿಯಂತ್ರಣ ಸಮಿತಿ ಅಗತ್ಯ ಎಂದು ಕಂಡುಬಂದಲ್ಲಿ ಅದನ್ನು ರಚಿಸುವ ಅಧಿಕಾರ ಪ್ರಾಧಿಕಾರಕ್ಕೆ ಇರುತ್ತದೆ.

    ಬೆಳೆ ಪದ್ಧತಿ: ಬೆಳೆಯ ಪದ್ಧತಿಯಲ್ಲಿ ಬದಲಾವಣೆ ಹಾಗೂ ಹನಿ ನೀರಾವರಿ ಪದ್ಧತಿ ಅಳವಡಿಸಿಕೊಳ್ಳುವ ಮೂಲಕ ನೀರಿನ ನಿಯಮಿತ ಬಳಕೆ ಬಗ್ಗೆ ಪ್ರಾಧಿಕಾರವು ಸಲಹೆ ನೀಡಬೇಕು. ಪ್ರಾಧಿಕಾರವು ಪ್ರತಿವರ್ಷ ಸೆಪ್ಟೆಂಬರ್ 30ರೊಳಗೆ ತನ್ನ ಕಾರ್ಯಚಟುವಟಿಕೆಯನ್ನು ಒಳಗೊಂಡ ಪಟ್ಟಿಯನ್ನು ಕಣಿವೆ ವ್ಯಾಪ್ತಿಯ ನಾಲ್ಕು ರಾಜ್ಯಗಳಿಗೆ ನೀಡಬೇಕು. ಪ್ರಾಧಿಕಾರದಲ್ಲಿ ಇರುವ ಮಾಹಿತಿಯನ್ನು ರಾಜ್ಯಗಳು ಬಯಸಿದಾಗ ಕೊಡಬೇಕು.

    ವೆಚ್ಚ: ನೀರಿನ ಸಂಗ್ರಹ, ಬಳಕೆ, ಬಿಡುಗಡೆ, ಮಾಪನ ಕೇಂದ್ರಗಳ ಅಳವಡಿಕೆಯ ಖರ್ಚು ವೆಚ್ಚವನ್ನು ಆಯಾ ವ್ಯಾಪ್ತಿಯ ರಾಜ್ಯಗಳೇ ಭರಿಸಬೇಕಿದೆ. ಪ್ರಾಧಿಕಾರದ ಸಭೆ ಮತ್ತು ಚಟುವಟಿಕೆಗಳ ಎಲ್ಲಾ ದಾಖಲೆಗಳು ಹಾಗೂ ಲೆಕ್ಕಪತ್ರ ಸಂಗ್ರಹಿಸಿಡಲು ಸೂಕ್ತವಾದ ಕಚೇರಿ ಸ್ಥಾಪಿಸಬೇಕು. ದಾಖಲೆಗಳು ಮತ್ತು ಮಾಪನ ದತ್ತಾಂಶಗಳು ಈ ಕಚೇರಿಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಲಭ್ಯ ಇರಬೇಕು. ಈ ಪ್ರಾಧಿಕಾರದಲ್ಲಿ ಕಾರ್ಯನಿರ್ವಹಿಸಲಿರುವ ಎಲ್ಲಾ ಸಿಬ್ಬಂದಿ ಹಾಗೂ ಅಧಿಕಾರಗಳು ನೇಮಕ ಪ್ರಕ್ರಿಯೆ ಕೇಂದ್ರ ಸರ್ಕಾರದ ನಿಯಾಮವಳಿಗಳ ಪ್ರಕಾರ ಆಗಬೇಕು ಹಾಗೂ ಪ್ರಾಧಿಕಾರದ ಕೇಂದ್ರ ಕಚೇರಿಯು ದೆಹಲಿಯಲ್ಲೇ ಇರಬೇಕು ಎಂಬ ಅಂಶಗಳಿವೆ.

  • 30 ಅಡಿ ಆಳದ ಕಂದಕಕ್ಕೆ ಬಿತ್ತು ಸರ್ಕಾರಿ ಬಸ್ – 20 ಕ್ಕೂ ಅಧಿಕ ಮಂದಿಗೆ ಗಾಯ, ಮೂವರು ಗಂಭೀರ

    30 ಅಡಿ ಆಳದ ಕಂದಕಕ್ಕೆ ಬಿತ್ತು ಸರ್ಕಾರಿ ಬಸ್ – 20 ಕ್ಕೂ ಅಧಿಕ ಮಂದಿಗೆ ಗಾಯ, ಮೂವರು ಗಂಭೀರ

    ಚಿಕ್ಕಮಗಳೂರು: ಸರ್ಕಾರಿ ಬಸ್ಸೊಂದು ಸುಮಾರು 30 ಅಡಿ ಆಳದ ಕಂದಕಕ್ಕೆ ಬಿದ್ದಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.

    ಕಡೂರು ತಾಲೂಕು ತಂಗಲಿ ಸಮೀಪದ ವೇದಾ ನದಿ ಸೇತುವೆಯಿಂದ ಬಸ್ ಪಲ್ಟಿಯಾಗಿದೆ. ಬಸ್ಸಿನಲ್ಲಿ ಸುಮಾರು 20 ಅಧಿಕ ಮಂದಿ ಪ್ರಯಾಣಿಕರು ಪ್ರಯಾಣಿಸುತ್ತಿದ್ದರು. ಈ ಬಸ್ ಬೆಂಗಳೂರಿನಿಂದ ಕುಂದಾಪುರಕ್ಕೆ ಹೋಗುತ್ತಿತ್ತು. ಬಸ್ ತಂಗಲಿ ಸಮೀಪ ಬರುತ್ತಿದ್ದಂತೆ ಚಾಲಕನ ನಿಯಂತ್ರಣ ತಪ್ಪಿ ವೇದಾ ನದಿ ಸೇತುವೆಗೆ ಡಿಕ್ಕಿ ಹೊಡೆದು ನದಿಗೆ ಬಿದ್ದಿದೆ.

    ಬಸ್ ನದಿಗೆ ಬಿದ್ದ ಪರಿಣಾಮ ಬಸ್ಸಿನಲ್ಲಿದ್ದ 20ಕ್ಕೂ ಹೆಚ್ಚು ಜನರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಗಾಯಾಳಗಳಲ್ಲಿ ಮೂವರ ಸ್ಥಿತಿ ಗಂಭೀರವಾಗಿದ್ದು, ಅವರನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ರವಾನಿಸಲಾಗಿದೆ.

    ಇನ್ನು ಈ ಘಟನೆ ಬಗ್ಗೆ ಮಾಹಿತಿ ತಿಳಿದ ತಕ್ಷಣ ಕಡೂರು ಪೊಲೀಸರು ಹಾಗೂ ಅಗ್ನಿ ಶಾಮಕ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ವೇದಾ ನದಿ ಸುಮಾರು ವರ್ಷಗಳಿಂದ ನೀರಿಲ್ಲದೇ ಬತ್ತಿಹೋಗಿತ್ತು. ಈ ಘಟನೆ ಕಡೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

  • ಪ್ರವಾಸಿ ತಾಣವಾದ ಮುತ್ತತ್ತಿಯಲ್ಲಿ ಕಾವೇರಿ ನದಿಗಿಳಿದು ಈಜುವ ಮುನ್ನ ಈ ಸ್ಟೋರಿ ಓದಿ!

    ಪ್ರವಾಸಿ ತಾಣವಾದ ಮುತ್ತತ್ತಿಯಲ್ಲಿ ಕಾವೇರಿ ನದಿಗಿಳಿದು ಈಜುವ ಮುನ್ನ ಈ ಸ್ಟೋರಿ ಓದಿ!

    ಮಂಡ್ಯ: ಮಳವಳ್ಳಿ ತಾಲೂಕಿನ ಪ್ರಸಿದ್ಧ ಪ್ರವಾಸಿ ಸ್ಥಳ ಮುತ್ತತ್ತಿಗೆ ಆಗಮಿಸಿದ್ದ ಭಕ್ತನೊಬ್ಬ ಕಾವೇರಿ ನದಿಯಲ್ಲಿ ಈಜಲು ಹೋಗಿ ಮೊಸಳೆ ಪಾಲಾಗಿದ್ದಾನೆ.

    ಇಂದು ಮುತ್ತತ್ತಿಗೆ ಆಗಮಿಸಿದ್ದ 52 ವರ್ಷದ ವೆಂಕಟೇಶ್ ಕಾವೇರಿ ನದಿಯಲ್ಲಿ ಈಜುವಾಗ ಮೊಸಳೆ ದಾಳಿಗೆ ಬಲಿಯಾಗಿ ಮೃತಪಟ್ಟಿದ್ದಾರೆ. ಪ್ರವಾಸಿ ತಾಣವಾದ ಮುತ್ತತ್ತಿ ಅರಣ್ಯ ಪ್ರದೇಶದಲ್ಲಿ ಕಾವೇರಿ ನದಿ ಹರಿಯುತ್ತಿದ್ದು, ನದಿಯ ಸಮೀಪವೇ ಇರುವ ಆಂಜನೇಯಸ್ವಾಮಿ ದೇವಾಲಯ ಪ್ರಸಿದ್ಧಿ ಪಡೆದಿದೆ. ಹೀಗಾಗಿ ರಜಾ ದಿನಗಳಲ್ಲಿ ಮುತ್ತತ್ತಿಗೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ.

    ವೆಂಕಟೇಶ್ ಮುತ್ತತ್ತಿ ಆಂಜನೇಯ ಸ್ವಾಮಿಗೆ ಪೂಜೆ ಸಲ್ಲಿಸಲು ಕುಟುಂಬದವರೊಂದಿಗೆ ಆಗಮಿಸಿದ್ದರು. ಪೂಜೆಯ ನಂತರ ಕಾವೇರಿ ನದಿಯಲ್ಲಿ ಈಜಲು ತೆರಳಿದ್ದಾರೆ. ಈ ವೇಳೆ ಅವರ ಮೇಲೆ ಮೊಸಳೆ ದಾಳಿ ಮಾಡಿದೆ. ಇದನ್ನು ಗಮನಿಸಿದ ಸ್ಥಳೀಯರು ವೆಂಕಟೇಶ್ ಅವರನ್ನು ರಕ್ಷಿಸಲು ಪ್ರಯತ್ನಿಸಿದ್ದರು. ಆದರೆ ಅದು ಸಾಧ್ಯವಾಗದೇ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.

    ವೆಂಕಟೇಶ್ ಮೃತದೇಹ ಹೊರ ತೆಗೆಯಲಾಗಿದ್ದು, ಬಲಗೈ ಮತ್ತು ಎಡಗಾಲನ್ನು ಮೊಸಳೆ ತಿಂದು ಹಾಕಿದೆ. ಸೂಚನಾಫಲಕ ಗಮನಿಸದೇ ನೀರಿಗಿಳಿದಿದ್ದೇ ವೆಂಕಟೇಶ್ ಸಾವಿಗೆ ಕಾರಣ ಎಂದು ಹೇಳಲಾಗುತ್ತಿದೆ. ಆದ್ದರಿಂದ ಈ ಬಗ್ಗೆ ಪ್ರವಾಸಿಗರು ಗಮನಹರಿಸಬೇಕೆಂದು ಪೆÇಲೀಸರು ಮನವಿ ಮಾಡಿದ್ದಾರೆ. ಈ ಘಟನೆ ಸಂಬಂಧ ಹಲಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಕನ್ನಡಿಗರ ಕೈ ತಪ್ಪಲಿದೆಯೇ ಕಾವೇರಿ ನದಿ, ಡ್ಯಾಂಗಳು?

    ಕನ್ನಡಿಗರ ಕೈ ತಪ್ಪಲಿದೆಯೇ ಕಾವೇರಿ ನದಿ, ಡ್ಯಾಂಗಳು?

    ಬೆಂಗಳೂರು: ಕಾವೇರಿ ನದಿ ಮತ್ತು ಡ್ಯಾಂಗಳು ಕನ್ನಡಿಗರ ಕೈತಪ್ಪಿ ಹೋಗುವ ಸಾಧ್ಯತೆ ದಟ್ಟವಾಗಿದೆ. ಕರ್ನಾಟಕ-ತಮಿಳುನಾಡು ನಡುವಿನ ನದಿ ನೀರು ಹಂಚಿಕೆ ವಿವಾದ ಇತ್ಯರ್ಥಕ್ಕೆ ಕೇಂದ್ರ ಸರ್ಕಾರ 14 ಪುಟಗಳ ಕಾವೇರಿ ಸ್ಕೀಂ ಕರಡುವನ್ನು ಸುಪ್ರೀಂಕೋರ್ಟ್ ಗೆ ಸಲ್ಲಿಸಿದೆ.

    ಇಂದು ಇದರ ಬಗ್ಗೆ ವಿಚಾರಣೆ ನಡೆಯಲಿದ್ದು, ಎಲ್ಲಾ ರಾಜ್ಯಗಳಿಂದ ಒಟ್ಟು 9 ಜನ ಸದಸ್ಯರ ನೇಮಕ ಮಾಡುವುದಾಗಿ ಸ್ಕೀಂ ಕರಡುನಲ್ಲಿ ಉಲ್ಲೇಖಿಸಲಾಗಿದೆ. ಕಾವೇರಿ ಸ್ಕೀಂನ್ನು ಏನೆಂದು ಕರೆಯಬೇಕು, ಪ್ರಾಧಿಕಾರವೋ, ಸಮಿತಿಯೋ, ಮಂಡಳಿಯೋ ಎಂಬುದನ್ನು ನ್ಯಾಯಪೀಠವೇ ತೀರ್ಮಾನಿಸುತ್ತೆ ಅಂತ ಕೇಂದ್ರ ಸರ್ಕಾರ ಹೇಳಿದೆ. ಇದನ್ನೂ ಓದಿ: ಕಾವೇರಿ ಸ್ಕೀಂ ಸುಪ್ರೀಂಗೆ ಕರಡು ಅಫಿಡವಿಟ್ ಸಲ್ಲಿಕೆ: ಹೇಗಿರಲಿದೆ ಸ್ಕೀಂ? ಕಾರ್ಯಗಳು ಏನು? ಯಾರೆಲ್ಲ ಇರಲಿದ್ದಾರೆ?

    ಹಾಗಾದ್ರೆ ಕಾವೇರಿ ಡ್ರಾಫ್ಟ್ ಸ್ಕೀಂ ಕರಡುವಿನಲ್ಲಿರುವ ಅಂಶಗಳು ಏನೇನು ಅಂತ ನೋಡೋದಾದ್ರೆ..
    * ಕಾವೇರಿ ನೀರಿನ ಸಂಗ್ರಹ & ನಿಯಂತ್ರಣ
    * ಜಲಾಶಯ, ನೀರು ಬಿಡುಗಡೆಯ ಮೇಲ್ವಿಚಾರಣೆ
    * ಬಿಳಿಗುಂಡ್ಲು ಬಳಿ ನೀರಿನ ಅಳತೆ ಮಾಡುವ ಜವಾಬ್ದಾರಿ ಪ್ರಾಧಿಕಾರದ್ದೇ
    * ನ್ಯಾಯಮಂಡಳಿ ಆದೇಶದಂತೆ ಕಾವೇರಿ ನೀರು ಬಿಡುಗಡೆಗೆ ಕ್ರಮ ಕೈಗೊಳ್ಳುವುದು
    * ಪ್ರತಿ 10 ದಿನಕ್ಕೊಮ್ಮೆ ಕರ್ನಾಟಕದಿಂದ ತಮಿಳುನಾಡಿಗೆ ನೀರು ಬಿಡುಗಡೆ
    * ನೀರಿನ ಕೊರತೆ ಕಂಡು ಬಂದರೆ ರಾಜ್ಯಗಳ ಪಾಲಿನಲ್ಲಿ ಕಡಿತ
    * ಮುಂಗಾರು ಮಳೆಯ ಆಧರಿಸಿ ಪ್ರಾಧಿಕಾರದಿಂದ ನಿರ್ಧಾರ
    * ಕರ್ನಾಟಕದ ನಾಲ್ಕು ಡ್ಯಾಮ್‍ಗಳು, ಕೇರಳ, ತಮಿಳುನಾಡಿನ ಡ್ಯಾಂಗಳ ನಡುವೆ ಸಮನ್ವಯ
    * ಪ್ರಾಧಿಕಾರದ ಸೂಚನೆಯಂತೆ ಜಲಾಶಯಗಳ ಕಾರ್ಯನಿರ್ವಹಣೆ
    * ಕಾವೇರಿಕೊಳ್ಳದ ಬೆಳೆ ಪ್ರದೇಶ, ಬೆಳೆ ಸ್ವರೂಪದ ಬಗ್ಗೆ ನಿಗಾ
    * ಪ್ರತಿವರ್ಷ ಬೇಕಾದ ನೀರಿನ ಅಗತ್ಯತೆ ಬಗ್ಗೆ ಅಂದಾಜು ಸಲ್ಲಿಕೆ ಕಡ್ಡಾಯ
    * ಪ್ರಾಧಿಕಾರದ ಸದಸ್ಯರ ಡ್ಯಾಮ್‍ಗಳ ಭೇಟಿಗೆ ಪರಮಾಧಿಕಾರ
    * ಡ್ಯಾಮ್‍ಗಳ ಕಾಮಗಾರಿ ಗುತ್ತಿಗೆಗೆ ಪ್ರಾಧಿಕಾರದ ಪೂರ್ವಾನುಮತಿ ಅಗತ್ಯ
    * ಕಾವೇರಿಕೊಳ್ಳದ ರಾಜ್ಯಗಳು ಒಪ್ಪದಿದ್ದರೆ ಕೇಂದ್ರ ಸರ್ಕಾರ ಮಧ್ಯಪ್ರವೇಶ
    * ಕಾವೇರಿ ಪ್ರಾಧಿಕಾರದ ಕೇಂದ್ರ ಕಚೇರಿ ಬೆಂಗಳೂರಿನಲ್ಲಿ ಇರಲಿದೆ

  • ಗೋದಾವರಿ ನದಿಗೆ ಜಿಗಿದು ಅಪ್ರಾಪ್ತೆ ಜೊತೆ ಯುವಕ ಆತ್ಮಹತ್ಯೆ!

    ಗೋದಾವರಿ ನದಿಗೆ ಜಿಗಿದು ಅಪ್ರಾಪ್ತೆ ಜೊತೆ ಯುವಕ ಆತ್ಮಹತ್ಯೆ!

    ಹೈದರಾಬಾದ್: ಗೋದಾವರಿ ನದಿಗೆ ಜಿಗಿದು ಪ್ರೇಮಿಗಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಆಂಧ್ರ ಪ್ರದೇಶದ ಪೂರ್ವ ಗೋದಾವರಿ ಜಿಲ್ಲೆ ಪಾಶಾರ್ಲಪೂಡಿಯಲ್ಲಿ ನಡೆದಿದೆ.

    ನಾಗಸುಚಿತಾ(14) ಹಾಗೂ ಶಿವ ಆತ್ಮಹತ್ಯೆಗೈದ ಪ್ರೇಮಿಗಳು. ನಾಗಸುಚಿತಾ 9ನೇ ತರಗತಿ ಓದುತ್ತಿದ್ದು, ಶಿವ ಎಲೆಕ್ಟ್ರಿಷಿಯನ್ ಆಗಿ ಕೆಲಸ ಮಾಡಿಕೊಂಡಿದ್ದನು.

    ನಾಗ ಸುಚಿತಾಳಿಗೆ ಶಿವನ ಮೇಲೆ ಪ್ರೀತಿಯಾಗಿತ್ತು. ಕ್ರಮೇಣ ಇವರಿಬ್ಬರ ಪ್ರೀತಿ ಮನೆಯವರಿಗೆ ತಿಳಿಯಿತು. ಪರಿಣಾಮ ಇಬ್ಬರ ಮನೆಯಲ್ಲಿಯೂ ವಿರೋಧ ವ್ಯಕ್ತವಾಗಿದ್ದು, ಮನೆಯವರು ಇಬ್ಬರಿಗೂ ಬೈದಿದ್ದರು.

    ತನ್ನ ಪ್ರೀತಿಯನ್ನು ಮನೆಯವರು ನಿರಾಕರಿಸಿದ್ದರಿಂದ ಮನನೊಂದ ನಾಗಸುಚಿತಾ ತನ್ನ ಸೈಕಲ್ ತೆಗೆದುಕೊಂಡು ಸಂಬಂಧಿಕರ ಮನೆಗೆ ಹೋಗುವುದಾಗಿ ಹೇಳಿ ಹೋಗಿದ್ದಳು. ಹೀಗೆ ಸೈಕಲ್ ನಲ್ಲಿ ಹೋಗುತ್ತಿದ್ದಾಗ ದಾರಿ ಮಧ್ಯೆ ಶಿವ ಸಿಕ್ಕಿದ್ದಾನೆ. ಇದೇ ಸಂದರ್ಭವನ್ನು ಉಪಯೋಗಿಸಿಕೊಂಡ ಅವರಿಬ್ಬರೂ ಜೊತೆಯಾಗಿ ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರ ಕೈಗೊಂಡಿದ್ದು, ಗೋದಾವರಿ ಬ್ರಿಡ್ಜ್ ನಿಂದ ನದಿಗೆ ಜಿಗಿದಿದ್ದಾರೆ.

  • 100 ಮೀಟರ್ ಎತ್ತರದ ಸೇತುವೆಯಿಂದ ನದಿಗೆ ಬಿತ್ತು ಟ್ರಕ್-21 ಸಾವು, 20 ಮಂದಿಗೆ ಗಾಯ

    100 ಮೀಟರ್ ಎತ್ತರದ ಸೇತುವೆಯಿಂದ ನದಿಗೆ ಬಿತ್ತು ಟ್ರಕ್-21 ಸಾವು, 20 ಮಂದಿಗೆ ಗಾಯ

    ಭೋಪಾಲ್: ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ನದಿಗೆ ಉರುಳಿ ಬಿದ್ದ ಪರಿಣಾಮ 21 ಜನ ಸಾವನ್ನಪ್ಪಿದ್ದು, 20 ಮಂದಿ ಗಾಯಗೊಂಡಿರುವ ಭೀಕರ ಅಪಘಾತ ಮಧ್ಯಪ್ರದೇಶದಲ್ಲಿ ನಡೆದಿದೆ.

    ಸೀಧೀ ಜಿಲ್ಲೆಯ ಅಮೇಲಿಯಾ ಗ್ರಾಮದಲ್ಲಿ ಸೋನ್ ನದಿಗೆ ನಿರ್ಮಿಸಲಾಗಿದ್ದ ಸೇತುವೆಯಲ್ಲಿ ಟ್ರಕ್ ಹೋಗುತ್ತಿತ್ತು. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿದ ಟ್ರಕ್ 100 ಮೀಟರ್ ಎತ್ತರದಿಂದ ನದಿಗೆ ಬಿದ್ದಿದೆ. ಘಟನೆಯಲ್ಲಿ ಒಟ್ಟು 21 ಜನ ಸಾವನ್ನಪ್ಪಿದ್ದಾರೆ. ಅಪಘಾತದಲ್ಲಿ ಗಾಯಗೊಂಡ ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

    ಆಗಿದ್ದೇನು? ಸಿಂಗ್ರೌಲಿ ಜಿಲ್ಲೆಯ ನಿವಾಸಿಗಳಾದ 45 ಜನರು ಟ್ರಕ್ ನಲ್ಲಿ ಸೀಧೀ ಜಿಲ್ಲೆಯ ಹರ್‍ಬಿರ್ಜಿ ಗ್ರಾಮದಲ್ಲಿಯ ಮದುವೆಗೆ ಆಗಮಿಸಿದ್ರು. ಮದುವೆಯ ಹಿಂದಿರುಗುವ ವೇಳೆ ರಾತ್ರಿ ಸುಮಾರು 9.30ಕ್ಕೆ ಸೇತುವೆಯ ಮೇಲೆ ಚಾಲಕ ನಿಯಂತ್ರಣ ತಪ್ಪಿದ ಟ್ರಕ್ ನದಿಗೆ ಬಿದ್ದಿದೆ.

    ಘಟನೆಯಲ್ಲಿ ಒಟ್ಟು 21 ಜನ ಸಾವನ್ನಪ್ಪಿದ್ದು, 20 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಗಳಿವೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಮನೋಜ್ ಶ್ರೀವಾತ್ಸವ್ ತಿಳಿಸಿದ್ದಾರೆ.

    ಘಟನೆಯ ಬಳಿಕ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಮೃತರ ಕುಟುಂಬಸ್ಥರಿಗೆ 2 ಲಕ್ಷ ರೂ. ಮತ್ತು ಗಂಭೀರವಾಗಿ ಗಾಯಗೊಂಡವರಿಗೆ 50 ಸಾವಿರ ರೂ., ಉಳಿದ ಗಾಯಾಳುಗಳಿಗೆ 50 ಸಾವಿರ ರೂ. ಪರಿಹಾರ ಘೋಷಿಸಿದ್ದಾರೆ.

    https://www.youtube.com/watch?v=OTc7ncX_X1w

     

  • SSLC ಪರೀಕ್ಷೆ ಬರೆದು ಕಾವೇರಿ ನದಿಯಲ್ಲಿ ಈಜಲು ಹೋಗಿದ್ದ ಬಾಲಕರಿಬ್ಬರ ದುರ್ಮರಣ

    SSLC ಪರೀಕ್ಷೆ ಬರೆದು ಕಾವೇರಿ ನದಿಯಲ್ಲಿ ಈಜಲು ಹೋಗಿದ್ದ ಬಾಲಕರಿಬ್ಬರ ದುರ್ಮರಣ

    ಮೈಸೂರು: ಕಾವೇರಿ ನದಿಯಲ್ಲಿ ಈಜಲು ಹೋಗಿದ್ದ ಇಬ್ಬರು ಬಾಲಕರು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಕೆ.ಆರ್.ನಗರದ ಚುಂಚನಕಟ್ಟೆ ಡ್ಯಾಮ್ ಬಳಿ ನಡೆದಿದೆ.

    ಸಾಗರ್ (16) ಮತ್ತು ಚೇತನ್ (16) ಮೃತ ವಿದ್ಯಾರ್ಥಿಗಳು. ಇವರು ಕೆ.ಆರ್.ನಗರದ ಆದಿಚುಂಚನಗಿರಿ ಶಿಕ್ಷಣ ಸಂಸ್ಥೆಯಲ್ಲಿ ಎಸ್‍ಎಸ್‍ಎಲ್‍ಸಿ ಓದುತ್ತಿದ್ದ ವಿದ್ಯಾರ್ಥಿಗಳಾಗಿದ್ದು, ಬುಧವಾರ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಬರೆದು ಈಜಾಡಲೂ ನದಿಗೆ ತೆರಳಿ ಮೃತಪಟ್ಟಿದ್ದಾರೆ.

    ಸಾಗರ್ ಮತ್ತು ಚೇತನ್ ಪರೀಕ್ಷೆ ಬರೆದ ನಂತರ ಮತ್ತಿಬ್ಬರು ಗೆಳೆಯರ ಜೊತೆ ಹೋಗಿದ್ದಾರೆ. ಈ ಸಂದರ್ಭದಲ್ಲಿ ಇಬ್ಬರು ಸ್ನೇಹಿತರು ಜೆರಾಕ್ಸ್ ಗೆ ಹೋಗಿದ್ದ ಸಂದರ್ಭದಲ್ಲಿ ಈಜಲು ಕಾವೇರಿ ನದಿಗೆ ತೆರಳಿದ್ದಾರೆ. ಈ ವೇಳೆ ಈಜಲು ಬಾರದೆ ನೀರಿನಲ್ಲಿ ಮುಳುಗಿ ಇಬ್ಬರು ಮೃತಪಟ್ಟಿದ್ದಾರೆ. ಕೊಡಲೇ ಸ್ನೇಹಿತರು ಗಾಬರಿಗೊಂಡು ಅಲ್ಲಿದ್ದವರಿಗೆ ವಿಚಾರವನ್ನು ತಿಳಿಸಿದ್ದಾರೆ. ತಕ್ಷಣ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

    ಮಾಹಿತಿ ತಿಳಿದ ಪೊಲೀಸರು ಸ್ಥಳಕ್ಕೆ ಬಂದು ಇಬ್ಬರ ಮೃತದೇಹಕ್ಕಾಗಿ ಕಾರ್ಯಚರಣೆ ಮಾಡಿದ್ದು, ಸಾಗರ್ ಮತ್ತು ಚೇತನ್ ಮೃತದೇಹವನ್ನು ಮೇಲೆತ್ತಿದ್ದಾರೆ. ಈ ಘಟನೆ ಸಂಬಂಧ ಕೆ.ಆರ್.ನಗರ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

  • ಯುಗಾದಿ ಹಬ್ಬದಂದು ಪುಣ್ಯ ಸ್ನಾನ ಮಾಡಲು ಹೋಗಿ ಇಬ್ಬರ ದುರ್ಮರಣ

    ಯುಗಾದಿ ಹಬ್ಬದಂದು ಪುಣ್ಯ ಸ್ನಾನ ಮಾಡಲು ಹೋಗಿ ಇಬ್ಬರ ದುರ್ಮರಣ

    ಮೈಸೂರು: ನದಿಯಲ್ಲಿ ಮುಳುಗಿ ಇಬ್ಬರು ಸಾವನ್ನಪ್ಪಿರುವ ಘಟನೆ ಮೈಸೂರಿನ ಟಿ. ನರಸೀಪುರ ಪಟ್ಟಣದ ತ್ರಿವೇಣಿ ಸಂಗಮದಲ್ಲಿ ನಡೆದಿದೆ.

    12 ವರ್ಷದ ಪ್ರಮೋದ್ ಮತ್ತು 17 ವರ್ಷದ ತೇಜೇಂದ್ರ ಪ್ರಸಾದ್ ಮೃತ ದುರ್ದೈವಿಗಳು. ಈ ಇಬ್ಬರು ಬನ್ನಹಳ್ಳಿಹುಂಡಿ ಗ್ರಾಮದವರು ಎಂದು ಗುರುತಿಸಲಾಗಿದೆ. ಯುಗಾದಿ ಹಬ್ಬದ ಹಿನ್ನೆಲೆಯಲ್ಲಿ ಪುಣ್ಯ ಸ್ನಾನ ಮಾಡಲು ಹೋದಾಗ ಈ ಘಟನೆ ಸಂಭವಿಸಿದೆ.

    ಪ್ರಮೋದ್ ಮತ್ತು ತೇಜೇಂದ್ರ ಪ್ರಸಾದ್ ಯುಗಾದಿ ಹಬ್ಬಕ್ಕಾಗಿ ಪುಣ್ಯ ಸ್ನಾನ ಮಾಡಲು ಮಧ್ಯಾಹ್ನ ತ್ರಿವೇಣಿ ಸಂಗಮ ನದಿಗೆ ಇಳಿದಿದ್ದಾರೆ. ಆದರೆ ಸ್ವಲ್ಪ ಸಮಯದ ನಂತರ ಈಜು ಬರದೇ ಇಬ್ಬರು ಮುಳುಗಿ ಮೃತಪಟ್ಟಿದ್ದಾರೆ. ಅಲ್ಲೆ ಇದ್ದ ಸುತ್ತಮುತ್ತಲಿನವರು ತಕ್ಷಣ ಪೊಲೀಸರಿಗೆ ಈ ಬಗ್ಗೆ ಮಾಹಿತಿ ತಿಳಿಸಿದ್ದಾರೆ.

    ಮಾಹಿತಿ ತಿಳಿದು ಪೊಲೀಸರು ಸ್ಥಳಕ್ಕೆ ಬಂದು ನದಿಯಲ್ಲಿ ಮುಳುಗಿದವರ ಶವಕ್ಕಾಗಿ ಸುಮಾರು 1 ಗಂಟೆಗೂ ಹೆಚ್ಚು ಕಾಲ ಶೋಧ ಕಾರ್ಯ ನಡೆಸಿದ್ದು, ನಂತರ ಮೃತದೇಹಗಳು ಪತ್ತೆಯಾಗಿವೆ. ಈ ಘಟನೆ ಸಂಬಂಧ ಟಿ.ನರಸೀಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.