Tag: ನದಿ

  • ದಕ್ಷಿಣ ಕನ್ನಡದಲ್ಲಿ ಭಾರೀ ಮಳೆ – ಶಾಲಾ, ಕಾಲೇಜುಗಳಿಗೆ ರಜೆ

    ದಕ್ಷಿಣ ಕನ್ನಡದಲ್ಲಿ ಭಾರೀ ಮಳೆ – ಶಾಲಾ, ಕಾಲೇಜುಗಳಿಗೆ ರಜೆ

    – ಪುತ್ತೂರಲ್ಲಿ ಗೋಡೆ ಕುಸಿದು ಇಬ್ಬರು ಬಲಿ,

    ದಕ್ಷಿಣ ಕನ್ನಡ/ಚಿಕ್ಕಮಗಳೂರು: ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಭಾರೀ ಮಳೆ ಆಗುತ್ತಿದ್ದು, ಜನರ ಜೀವನ ಅಸ್ತವ್ಯಸ್ತವಾಗಿದೆ.

    ಕರಾವಳಿಯಲ್ಲಿ ಭಾರೀ ಮಳೆಯಾಗುತ್ತಿದ್ದು, ಪುತ್ತೂರು, ಸುಳ್ಯ, ಬೆಳ್ತಂಗಡಿ, ಬಂಟ್ವಾಳ, ಮೂಡಬಿದಿರೆಯಲ್ಲಿ ಜನಜೀವನ ಅಸ್ತವ್ಯಸ್ತವಾಗಿದೆ. ಹಲವೆಡೆ ರಸ್ತೆ ಮತ್ತು ಕೃಷಿ ಭೂಮಿ ಜಲಾವೃತವಾಗಿದೆ. ನದಿಗಳು ಅಪಾಯ ಮಟ್ಟ ಮೀರಿ ಉಕ್ಕಿ ಹರಿಯುತ್ತಿವೆ. ಮಳೆ ಹಿನ್ನೆಲೆಯಲ್ಲಿ ಮೂಡಬಿದಿರೆ ಸೇರಿದಂತೆ ಸುಳ್ಯ, ಬೆಳ್ತಂಗಡಿ ತಾಲೂಕಿನ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.

    ಇನ್ನು ಭಾರೀ ಮಳೆಗೆ ತಡರಾತ್ರಿ ಪುತ್ತೂರಿನ ಹೆಬ್ಬಾರಬೈಲಿನಲ್ಲಿ ತಡೆಗೋಡೆ ಕುಸಿದು ಅಜ್ಜಿ, ಮೊಮ್ಮಗ ಸಾವನ್ನಪ್ಪಿದ್ದಾರೆ. ಮನೆಯಲ್ಲಿ ಮಲಗಿದ್ದ ಪಾರ್ವತಿ(65) ಮತ್ತ 6 ವರ್ಷದ ಮೊಮ್ಮಗ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನೆ ನಡೆದ ಸ್ಥಳಕ್ಕೆ ಪುತ್ತೂರು ಸಹಾಯಕ ಕಮಿಷನರ್ ಹೆಚ್. ಕೃಷ್ಣಮೂರ್ತಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

    ಜಿಲ್ಲಾಡಳಿತಕ್ಕೆ ತರಾಟೆ:
    ಶುಕ್ರವಾರ ಬೆಳಗ್ಗೆಯಿಂದ ಬಿಟ್ಟು ಬಿಡದೇ ಜೋರಾಗಿ ಮಳೆ ಸುರಿಯುತ್ತಿದೆ. ರಾತ್ರಿಯೂ ಜೋರಾಗಿ ಸುರಿದಿದೆ. ಹೀಗಿರುವಾಗ ಶಾಲೆಗಳಿಗ ಮೊದಲೇ ರಜೆಯನ್ನು ಘೋಷಿಸಬೇಕು. ಪೋಷಕರು ಮಕ್ಕಳನ್ನು ಶಾಲೆಗಳಿಗೆ ಕರೆತಂದು ಬಿಟ್ಟ ಮೇಲೆ ಘೋಷಣೆ ಮಾಡುವುದು ಎಷ್ಟು ಸರಿ? 5-6 ಕಿ.ಮೀ ದೂರದಿಂದ ನಾವು ಮಕ್ಕಳನ್ನು ಕಳುಹಿಸುತ್ತೇವೆ. ಬೆಳಗ್ಗೆ ಕಡಿಮೆಯಾಗದಿದ್ದರೆ ಆಗ ರಜೆ ನೀಡುವ ನಿರ್ಧಾರವನ್ನು ಶಿಕ್ಷಣ ಇಲಾಖೆ ಪ್ರಕಟಿಸುವುದು ಸರಿಯಲ್ಲ ಎಂದು ಕಡಬ ವಿದ್ಯಾರ್ಥಿಯ ಪೋಷಕ ಶಿವಕುಮಾರ್ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.

    ಚಿಕ್ಕಮಗಳೂರು ಜಿಲ್ಲೆಯಲ್ಲಿ ಶುಕ್ರವಾರದಿಂದಲೂ ಧಾರಾಕಾರ ಮಳೆ ಸುರಿಯುತ್ತಿದೆ. ಮೂಡಿಗೆರೆ, ಚಾರ್ಮಾಡಿ, ಕಳಸ, ಕುದುರೆಮುಖ, ಶೃಂಗೇರಿ ಭಾಗದಲ್ಲಿ ಭಾರೀ ಮಳೆಯಿಂದ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಅಪಾಯದ ಮಟ್ಟ ಮೀರಿ ತುಂಗಾ, ಭದ್ರಾ ನದಿಗಳು ಹರಿಯುತ್ತಿವೆ. ಅಕ್ಕಪಕ್ಕದ ರಸ್ತೆ, ಜಮೀನುಗಳಿಗೆ ನುಗ್ಗಿದ ನದಿ ನೀರು ನುಗ್ಗಿದ್ದು, ಹಲವೆಡೆ ರಸ್ತೆ ಸಂಪರ್ಕ ಹಾಗೂ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.

    ಹೊರನಾಡು ಸಮೀಪದ ಹೆಬ್ಬಾಳೆ ಸೇತುವೆ ಭದ್ರಾ ನದಿಯ ನೀರು ಅಪ್ಪಳಿಸುತ್ತಿದ್ದು, ಮುಳುಗಡೆ ಆಗುವ ಸಾಧ್ಯತೆ ಇದೆ. ಆದ್ದರಿಂದ ಭದ್ರಾ ನದಿಯ ರಭಸ ನೋಡಿ ಪ್ರವಾಸಿಗರು ವಾಹನ ನಿಲ್ಲಿಸಿದ್ದಾರೆ. ಸದ್ಯಕ್ಕೆ ಕಳಸ – ಹೊರನಾಡು ರಸ್ತೆ ಸಂಪರ್ಕ ಬಂದ್ ಆಗಿದೆ. ಶುಕ್ರವಾರ ರಾತ್ರಿಯಿಂದ ಕುದುರೆಮುಖ, ಕಳಸ, ಹೊರನಾಡು ಸುತ್ತಮುತ್ತ ಮಳೆ ಹಿನ್ನೆಲೆಯಲ್ಲಿ ಭದ್ರಾ ನದಿಯ ನೀರಿನ ಒಳಹರಿವು ಹೆಚ್ಚಳಗೊಂಡಿದೆ.

  • ಬೈಕಿನಿಂದ ಪುಟಿದು ಕೃಷ್ಣಾ ನದಿಗೆ ಬಿದ್ದ ಮಗಳು – ಪುತ್ರಿಯನ್ನ ರಕ್ಷಿಸಲು ಹೋದ ತಂದೆ, ಇಬ್ಬರೂ ನೀರುಪಾಲು

    ಬೈಕಿನಿಂದ ಪುಟಿದು ಕೃಷ್ಣಾ ನದಿಗೆ ಬಿದ್ದ ಮಗಳು – ಪುತ್ರಿಯನ್ನ ರಕ್ಷಿಸಲು ಹೋದ ತಂದೆ, ಇಬ್ಬರೂ ನೀರುಪಾಲು

    ಬಾಗಲಕೋಟೆ: ಬೈಕ್ ನಿಂದ ಪುಟಿದು ನದಿಗೆ ಬಿದ್ದ ಮಗಳನ್ನ ರಕ್ಷಿಸಲು ಹೋಗಿ ತಂದೆ ಹಾಗೂ ಪುಟ್ಟ ಮಗಳು ಇಬ್ಬರೂ ಸಾವನ್ನಪ್ಪಿರುವ ಘಟನೆ ಜಿಲ್ಲೆ ಬೀಳಗಿ ತಾಲೂಕಿನ ಗಲಗಲಿ ಗ್ರಾಮದಲ್ಲಿ ನಡೆದಿದೆ.

    ಮೂರು ವರ್ಷದ ಆನಮ್ ಹಾಗೂ 29 ವರ್ಷದ ದಸ್ತಗೀರ್ ಗೌಂಡಿ ಮೃತ ದುರ್ದೈವಿಗಳು. ತಂದೆ ದಸ್ತಗೀರ್ ಗೌಂಡಿ, ಪಕ್ಕದಲ್ಲಿರುವ ಚಿಕ್ಕ ಗಲಗಲಿ ಗ್ರಾಮದ ಶಾಲೆಗೆ ತೆರಳಿ ಮಗಳನ್ನ ಬೈಕ್ ಮೇಲೆ ಮನೆಗೆ ಕರೆದುಕೊಂಡು ವಾಪಸ್ಸಾಗುವ ವೇಳೆ ಕೃಷ್ಣಾ ನದಿ ಸೇತುವೆ ಮೇಲೆ ಈ ಘಟನೆ ನಡೆದಿದೆ.

    ಗೌಂಡಿ ಸ್ವಲ್ಪ ಬೈಕ್ ವೇಗವಾಗಿ ಚಲಿಸುತ್ತಿದ್ದರಿಂದ ಬೈಕ್ ಮೇಲಿದ್ದ ಮಗಳು ಆನಮ್ ಪುಟಿದು ನೇರವಾಗಿ ಕೃಷ್ಣಾ ನದಿಯಲ್ಲಿ ಬಿದ್ದಿದ್ದಾಳೆ. ತಕ್ಷಣ ಮಗಳನ್ನ ರಕ್ಷಿಸಲು ತಂದೆ ನದಿಗೆ ಹಾರಿದ್ದಾರೆ. ಆದರೆ ದಸ್ತಗೀರ್ ಸಹ ಮಗಳ ಜೊತೆ ನೀರುಪಾಲಾಗಿದ್ದಾರೆ. ಸದ್ಯ ತಂದೆ ಮಗಳ ಶವಗಳನ್ನ ಹೊರತಗೆಯಲಾಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

    ಮಳೆಗಾಲದ ಪ್ರವಾಹ ಸಂದರ್ಭದಲ್ಲಿ ಈ ಸೇತುವೆ ಮುಳುಗುತ್ತಿದ್ದ ಕಾರಣ ಸಮೀಪದಲ್ಲೇ ದೊಡ್ಡ ಸೇತುವೆಯನ್ನು ನಿರ್ಮಾಣ ಮಾಡಲಾಗಿದೆ. ಹೊಸ ಸೇತುವೆ ನಿರ್ಮಾಣ ಆಗಿದ್ದರೂ ತಡೆಗೋಡೆ ಇಲ್ಲದ ಹಳೆ ಸೇತುವೆಯಲ್ಲಿ ಜನರು ಓಡಾಟ ಮಾಡುತ್ತಿದ್ದಾರೆ. ಈ ಹಳೆ ಸೇತುವೆಯಲ್ಲಿ ದಸ್ತಗೀರ್ ಗೌಂಡಿ ಬೈಕ್ ಚಲಾಯಿಸಿದ ಪರಿಣಾಮ ಈ ದುರಂತ ಸಂಭವಿಸಿದೆ. ಸ್ಥಳಕ್ಕೆ ಎಸ್.ಪಿ ರಿಷ್ಯಂತ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

  • ರಾಜಕೀಯ ಮರೆತು ಕಾವೇರಿಗಾಗಿ ಪಕ್ಷಾತೀತ ಹೋರಾಟ – ಸುಪ್ರೀಂ ಮೆಟ್ಟಿಲೇರಲು ಸರ್ವಪಕ್ಷಗಳ ಸಭೆ ನಿರ್ಣಯ

    ರಾಜಕೀಯ ಮರೆತು ಕಾವೇರಿಗಾಗಿ ಪಕ್ಷಾತೀತ ಹೋರಾಟ – ಸುಪ್ರೀಂ ಮೆಟ್ಟಿಲೇರಲು ಸರ್ವಪಕ್ಷಗಳ ಸಭೆ ನಿರ್ಣಯ

    ಬೆಂಗಳೂರು: ರಾಜಕೀಯ ಜಂಜಾಟದಲ್ಲಿ ಕಾವೇರಿ ವಿವಾದವನ್ನು ಮರೆತಿದ್ದ ರಾಜ್ಯದ ಜನಪ್ರತಿನಿಧಿಗಳು ಕೊನೆಗೂ ಒಗ್ಗಟ್ಟು ಪ್ರದರ್ಶಿಸಿದ್ದಾರೆ. ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರ ರಚನೆ ಕುರಿತಂತೆ ಕರೆದಿದ್ದ ಸರ್ವಪಕ್ಷಗಳ ಸಭೆಯಲ್ಲಿ ಕಾನೂನು ಹೋರಾಟಕ್ಕೆ ನಿರ್ಧರಿಸಿದ್ದಾರೆ.

    ಮುಖ್ಯಮಂತ್ರಿ ಕುಮಾರಸ್ವಾಮಿ ನೇತೃತ್ವದಲ್ಲಿ ವಿಧಾನಸೌಧದ ಸಮ್ಮೇಳನ ಸಭಾಗಂಣದಲ್ಲಿ ನಡೆದ ಸಭೆಯಲ್ಲಿ, ಜುಲೈ 2ರಂದು ನಡೆಯಲಿರುವ ಪ್ರಾಧಿಕಾರದ ಸಭೆಗೆ ರಾಜ್ಯದ ಪ್ರತಿನಿಧಿಗಳಾದ ಜಲಸಂಪನ್ಮೂಲ ಇಲಾಖೆ ಕಾರ್ಯದರ್ಶಿ ರಾಕೇಶ್ ಸಿಂಗ್ ಮತ್ತು ಕಾವೇರಿ ನೀರಾವರಿ ನಿಗಮದ ಎಂಡಿ ಪ್ರಸನ್ನ ಅವರನ್ನ ಕಳುಹಿಸಲು ತೀರ್ಮಾನಿಸಲಾಗಿದೆ.

    ಈ ವೇಳೆ ವಿಪಕ್ಷ ನಾಯಕ ಯಡಿಯೂರಪ್ಪ, ಉಭಯ ಸದನಗಳ ನಾಯಕರು, ಕೇಂದ್ರ ಸಚಿವರು, ಸಂಸದರು ಹಾಗೂ ಸಿದ್ದರಾಮಯ್ಯ ಪುತ್ರ ಯತೀಂದ್ರ ಸೇರಿದಂತೆ ಕಾವೇರಿ ಜಲಾನಯನ ಭಾಗದ ಶಾಸಕರು ಪಾಲ್ಗೊಂಡು ಸರ್ಕಾರಕ್ಕೆ ಬೆಂಬಲ ನೀಡಿದ್ದಾರೆ.

    ಸಭೆ ಬಳಿಕ ಮಾತನಾಡಿದ ಸಿಎಂ ಕುಮಾರಸ್ವಾಮಿ ಅವರು, ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರ ಸಭೆಗೆ ರಾಜ್ಯದಿಂದ ನಮ್ಮ ಪ್ರತಿನಿಧಿಗಳನ್ನು ಕಳುಹಿಸುತ್ತೇವೆ. ಜುಲೈ 2 ರಂದು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಸಭೆ ಇದೆ. ಆ ಸಭೆಯಲ್ಲಿ ನಮ್ಮ ಪ್ರತಿನಿಧಿ ಇರುತ್ತಾರೆ. ಅಷ್ಟೇ ಅಲ್ಲ ನಮಗಾಗಿರುವ ಅನ್ಯಾಯವನ್ನು ಕೇಂದ್ರದ ಮುಂದೆ ಪ್ರತಿಭಟಿಸಲು ಸರ್ವಾನುಮತದಿಂದ ನಿರ್ಧರಿಸಲಾಗಿದೆ. ಅಂತಿಮ ಹಂತದ ನ್ಯಾಯಾಲಯದ ಹೋರಾಟದಲ್ಲಿ ಹೇಗೆ ವಾದ ಮಂಡನೆ ಮಾಡಬೇಕು ಎಂದು ಇಂದಿನ ಸಭೆಯಲ್ಲಿ ಚರ್ಚಿಸಲಾಗಿದೆ ಎಂದರು.

    ಇದೇ ವೇಳೆ ಮತನಾಡಿದ ವಿಪಕ್ಷ ನಾಯಕ ಯಡಿಯೂರಪ್ಪ ಅವರು, ನಿರ್ವಹಣಾ ಮಂಡಳಿ ಬಗ್ಗೆ ಲೋಕಸಭೆ ಅಧಿವೇಶನದಲ್ಲಿ ಚರ್ಚಿಸಲು ತೀರ್ಮಾನ ಮಾಡಲಾಗಿದೆ. ಸಾಧ್ಯವಾದರೆ ಸಂವಿಧಾನ ಪೀಠದಲ್ಲಿ ಪ್ರಶ್ನೆ ಮಾಡಲು ಸಿದ್ಧರಿದ್ದೇವೆ. ಸಭೆಯಲ್ಲಿ ಉತ್ತಮ ಚರ್ಚೆಯಾಗಿದೆ. ಜಲ, ನಾಡು, ನುಡಿ ವಿಚಾರದಲ್ಲಿ ನಾವು ಯಾವಾಗಲೂ ಸರ್ಕಾರದ ಜೊತೆಗೆ ಇದ್ದೇವೆ. ಕಾವೇರಿ ವಿಚಾರದಲ್ಲಿ ಸರ್ಕಾರಕ್ಕೆ ನಮ್ಮ ಸಂಪೂರ್ಣ ಬೆಂಬಲ ಇದೆ. ಲೋಕಸಭೆ ಅಧಿವೇಶನದಲ್ಲಿ ಈ ಕುರಿತು ನಾವು ಚರ್ಚಿಸುತ್ತೇವೆ. ಕೇಂದ್ರ ಸಚಿವರು ಕೂಡ ಸಹಕಾರ ಕೊಡುತ್ತಾರೆ. ಅನಂತಕುಮಾರ್ ಕೂಡ ಈ ಕುರಿತು ಹಲವು ಸಲಹೆ ಕೊಟ್ಟಿದ್ದಾರೆ ಎಂದರು.

    ಮಾಜಿ ಸಿಎಂ ಗೈರು: ಮಾಜಿ ಮುಖ್ಯಮಂತ್ರಿ ಹಾಗೂ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಬೆಂಗಳೂರಿನಲ್ಲಿದ್ದರೂ ಕೂಡ ಸಭೆಗೆ ಗೈರು ಹಾಜರಾಗಿದ್ದರು. ಕಾವೇರಿಯಂತಹ ಪ್ರಮುಖ ವಿಚಾರದ ಬಗ್ಗೆ ಚರ್ಚೆ ನಡೆಯುತ್ತಿದ್ದರೂ, ತಮ್ಮ ಸ್ವಗೃಹದಲ್ಲಿ ಮಾಜಿ ಸಚಿವ ಎಂ.ಬಿ. ಪಾಟೀಲ್ ಜೊತೆ ರಾಜಕೀಯ ವಿದ್ಯಮಾನಗಳ ಬಗ್ಗೆ ಸಮಾಲೋಚನೆ ನಡೆಸಿದ್ದರು.

  • ಮುಂದುವರಿದ ಮಳೆಯ ಅಬ್ಬರ – ಅಪಾಯದ ಮಟ್ಟ ಮೀರಿದ ನದಿಗಳು, ಮುಳುಗಿದ ದೇವಾಲಯ

    ಮುಂದುವರಿದ ಮಳೆಯ ಅಬ್ಬರ – ಅಪಾಯದ ಮಟ್ಟ ಮೀರಿದ ನದಿಗಳು, ಮುಳುಗಿದ ದೇವಾಲಯ

    ಬೆಂಗಳೂರು: ಕೊಡಗು ಮತ್ತು ಚಿಕ್ಕಮಗಳೂರು ಜಿಲ್ಲೆಯಲ್ಲಿ ಬುಧವಾರ ಧಾರಾಕಾರ ಮಳೆಯಾಗಿದ್ದು, ಇಂದು ಉಡುಪಿ ಜಿಲ್ಲೆಯಲ್ಲಿ ಮುಂಜಾನೆಯಿಂದಲೇ ಮಳೆ ಆರಂಭವಾಗಿದೆ.

    ನಗರದ ಬೈಂದೂರು, ಕಾಪು ಮತ್ತು ಹೆಬ್ರಿಯಲ್ಲಿ ಭಾರೀ ಮಳೆಯಾಗಿದೆ. ಇನ್ನು ಮಳೆಯಿಂದ ಬೈಂದೂರಿನ ಒತ್ತಿನೆಣೆಯಲ್ಲಿ ಗುಡ್ಡಕುಸಿತವಾಗಿದೆ. ಗುಡ್ಡ ಕುಸಿಯದಂತೆ ರಚಿಸಿದ್ದ ಸ್ಲೋಪ್ ಪ್ರೊಟೆಕ್ಷನ್ ವಾಲ್ ಬಳಿಯೇ ಕುಸಿತವಾಗಿದೆ. ಗುಡ್ಡ ಕುಸಿತದಿಂದ ಹೆದ್ದಾರಿಗೆ ಮಣ್ಣು ಬಿದ್ದಿದ್ದರಿಂದ ತೆರವು ಕಾರ್ಯ ಆರಂಭವಾಗಿದೆ.

    ಇನ್ನು ಕೊಡಗು ಜಿಲ್ಲೆಯಲ್ಲಿ ಮಳೆ ಮುಂದುವರೆದಿದ್ದು, ಜಿಲ್ಲೆಯ ಸೋಮವಾರಪೇಟೆ ಶುಂಟಿಕೊಪ್ಪ, ಸಿದ್ದಾಪುರ ವೀರಾಜಪೇಟೆ, ಹಾಗೂ ಜಿಲ್ಲೆಯ ವಿವಿಧೆಡೆಗಳಲ್ಲಿ ಸುರಿದ ಮಳೆಯಿಂದಾಗಿ ಇಳೆ ತಂಪಾಗಿದೆ. ಬುಧವಾರ ಬಹುತೇಕ ಕಡೆಗಳಲ್ಲಿ ಸುಮಾರು ಎರಡು ಘಂಟೆಗಳ ಕಾಲ ಧಾರಕಾರವಾಗಿ ವರುಣನ ಅರ್ಭಟ ಹೆಚ್ಚಾಗಿತ್ತು. ಜಿಲ್ಲೆಯ ಅನೇಕ ಗ್ರಾಮಗಳಲ್ಲಿ ವಿದ್ಯುತ್ ಇಲ್ಲದೇ ಗ್ರಾಮೀಣ ಭಾಗದ ಜನರು ಕತ್ತಲೆಯಲ್ಲಿಯೇ ದಿನ ದೂಡುವಂತೆಯಾಗಿತ್ತು. ಮಳೆಯಿಂದ ಕಾವೇರಿ ಲಕ್ಮಣ ತೀರ್ಥ ನದಿ ತುಂಬಿದ್ದು, ಆತಂಕದಲ್ಲಿ ನದಿ ಪಾತ್ರದ ಜನರ ಜೀವನ ಅಸ್ತವ್ಯಸ್ತವಾಗಿದೆ. ಜೊತೆಗೆ ಹಾರಂಗಿ ಜಲಾಶಯಕ್ಕೆ ಒಳಹರಿವು ಹೆಚ್ಚಳವಾಗಿದೆ.

    ಮಡಿಕೇರಿ ತಾಲೂಕಿನ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಆದರೆ ಎಸ್‍ಎಸ್‍ಎಲ್‍ಸಿ ಪೂರಕ ಪರೀಕ್ಷೆ ಎಂದಿನಂತೆ ನಡೆಯಲಿದೆ ಎಂದು ಡಿಡಿಪಿಐ ಮಂಜುಳಾ ಅವರು ಪ್ರಕಟಿಸಿದ್ದಾರೆ.

    ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಳೆಯ ಅಬ್ಬರ ಮುಂದುವರಿದಿದ್ದು, ಧಾರಾಕಾರ ಮಳೆಗೆ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಜಿಲ್ಲೆಯ ಮೂಡಿಗೆರೆ, ಕೊಪ್ಪ, ಶೃಂಗೇರಿ, ಎನ್.ಆರ್.ಪುರದಲ್ಲಿ ಗಾಳಿ ಸಹಿತ ವರುಣನ ಅಬ್ಬರ ಮುಂದುವರೆದಿದೆ. ಕಳೆದ ಹದಿನೈದು ದಿನಗಳ ಹಿಂದೆ ಸುರಿದ ಮಳೆಯ ಅವಾಂತರಗಳಿಂದ ಜನಸಾಮಾನ್ಯರು ಹೊರಬರುವ ಮುನ್ನವೇ ಮಲೆನಾಡಿನಲ್ಲಿ ಮತ್ತೆ ವರುಣನ ಅಬ್ಬರ ಮುಂದುವರೆದಿದೆ.

    ಕಳಸ, ಚಾರ್ಮಾಡಿ, ಬಾಳೆಹೊನ್ನೂರು ಭಾಗದಲ್ಲಿ ದಟ್ಟ ಮಂಜು ಸೇರಿದಂತೆ ಧಾರಾಕಾರ ಮಳೆಯಾಗಿದೆ. ತುಂಗಾಭದ್ರಾ ಹಾಗೂ ಹೇಮಾವತಿ ಮೈದುಂಬಿ ಹರಿಯುತ್ತಿದ್ದು, ನದಿಪಾತ್ರದ ಹೊಲಗದ್ದೆಗಳು ಮಳೆಯಿಂದ ತೋಯ್ದು ಹೋಗಿವೆ. ಇನ್ನೂ ಶೃಂಗೇರಿ ಸುತ್ತಮುತ್ತಲೂ ಭಾರೀ ಮಳೆಯಾಗಿದ್ದು, ತುಂಗಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಶಾರದಾಂಬೆ ದೇಗುಲದ ಕಪ್ಪೆಶಂಕರನಾರಾಯಣ, ಶ್ರೀಗಳ ಸಂಧ್ಯಾವಂದನೆ ಮಂಟಪ ಮುಳುಗುವ ಹಂತ ತಲುಪಿದೆ. ಶೃಂಗೇರಿ ದೇವಾಲಯಕ್ಕೆ ಹೋಗುವುದಕ್ಕೆ ಇದ್ದ ಮತ್ತೊಂದು ರಸ್ತೆ ಕೂಡ ಮುಳುಗಡೆಯಾಗಿದ್ದು, ಗಾಂಧಿ ಮೈದಾನಕ್ಕೂ ಆವರಿಸಿದೆ. ಮಲೆನಾಡಿನ ಸರಾಸರಿ ಮಳೆಗಿಂತ ಈ ಬಾರಿ ಶೇಕಡಾ 82ರಷ್ಟು ಮಳೆ ಹೆಚ್ಚಾಗಿರುವುದರಿಂದ ಮಲೆನಾಡು ಮಳೆಯಿಂದ ಮುಚ್ಚಿಕೊಂಡಂತಾಗಿದೆ.

  • ಉಮ್ಮಳೆ ಜೋಗ್ ಗ್ರಾಮದ ಯುವಕರು ಮದ್ವೆಯಾಗಬೇಕೆಂದ್ರೆ ಊರು ಬಿಡ್ಲೇ ಬೇಕು!

    ಉಮ್ಮಳೆ ಜೋಗ್ ಗ್ರಾಮದ ಯುವಕರು ಮದ್ವೆಯಾಗಬೇಕೆಂದ್ರೆ ಊರು ಬಿಡ್ಲೇ ಬೇಕು!

    ಕಾರವಾರ: ಇಲ್ಲಿನ ಉಮ್ಮಳೆ ಜೋಗ್ ಗ್ರಾಮದ ಯುವಕರಿಗೆ ಹೆಣ್ಣು ಕೊಡುವುದಿಲ್ಲ. ಮದುವೆಯಾಗಲೇಬೇಕು ಅಂದರೆ ಊರನ್ನ ಬಿಡಲೇ ಬೇಕು. ಇನ್ನು ಈ ಗ್ರಾಮದ ಜನರಿಗೆ ಸ್ವಂತ ಮನೆಯಿದ್ದರು ಬಾಡಿಗೆ ಮನೆಯಲ್ಲಿ ಇರುವ ಸ್ಥಿತಿ ಇಲ್ಲಿಯದ್ದು, ಇದೊಂದು ಶಾಪಗ್ರಸ್ಥ ಗ್ರಾಮವಾಗಿದೆ.

    ಉತ್ತರ ಕನ್ನಡ ಜಿಲ್ಲೆಯ ಕಾರವಾರ ನಗರದಿಂದ 20 ಕಿಲೋಮೀಟರ್ ದೂರದ ವೈಲವಾಡ ಗ್ರಾಮಪಂಚಾಯ್ತಿ ವ್ಯಾಪ್ತಿಯ ಉಮ್ಮಳೆ ಜೋಗ್ ಗ್ರಾಮದಲ್ಲಿ ಯುವಕರಿಗೆ ಮದುವೆಯಾಗದಂತೆ ಅಡ್ಡಿಯಾಗಿರುವುದು. ಈ ಗ್ರಾಮದ ಸುತ್ತಲೂ ಕಾಳಿ ನದಿನೀರು ಹರಿಯುತಿದ್ದು, ದ್ವೀಪ ಪ್ರದೇಶವಾಗಿದೆ. ಹೀಗಾಗಿ ಈ ಗ್ರಾಮಕ್ಕೆ ತೆರಳಬೇಕೆಂದರೆ ಸಣ್ಣ ಪಾತಿ ದೋಣಿಯಲ್ಲಿ ಕುಳಿತು ಜೀವ ಕೈಯಲ್ಲಿ ಹಿಡಿದು ಪ್ರಯಾಣಿಸಬೇಕು.

    ಸುಮಾರು 35 ಮನೆಗಳಿರುವ ಈ ದ್ವೀಪದಲ್ಲಿ 50 ಎಕರೆ ವಿಸ್ತೀರ್ಣ ಹೊಂದಿರುವ ಕೃಷಿ ಪ್ರದೇಶವಾಗಿದೆ. ಸುಮಾರು 500 ಜನರು ಈ ಗ್ರಾಮದಲ್ಲಿ ವಾಸವಾಗಿದ್ದು, ವ್ಯವಸಾಯವನ್ನು ನಂಬಿ ಬದುಕುತಿದ್ದಾರೆ. ಇಷ್ಟೆಲ್ಲಾ ಜನರಿದ್ದರೂ ವಿದ್ಯುತ್ ಹೊರತುಪಡಿಸಿ ಸರ್ಕಾರದಿಂದ ಈ ಗ್ರಾಮಕ್ಕೆ ರಸ್ತೆಯಾಗಲಿ ಸೇತುವೆಯನ್ನಾಗಲಿ ನಿರ್ಮಿಸಿಲ್ಲ. ಹೀಗಾಗಿ ಈ ಗ್ರಾಮದ ಯುವಕರಿಗೆ ಹೊರಗಿನವರು ಹೆಣ್ಣು ಕೂಡ ಕೊಡುತ್ತಿಲ್ಲ. ಮೊದಲು ಒಪ್ಪಿದರೂ ಈ ಗ್ರಾಮಮನ್ನು ನೋಡಿ ಮದುವೆ ಮಾತುಕತೆ ಮರಿದುಕೊಂಡ ನಿದರ್ಶನಗಳಿವೆ. ಹೀಗಾಗಿ 30 ವರ್ಷ ದಾಟಿದ 10ಕ್ಕೂ ಹೆಚ್ಚು ಯುವಕರು ಮದುವೆಯಾಗದೇ ಉಳಿದಿದ್ದಾರೆ. ಇನ್ನು ಇಲ್ಲಿನ ಮಕ್ಕಳು ವಿದ್ಯಾಭ್ಯಾಸ ಮಾಡಬೇಕೆಂದರೆ ಪಕ್ಕದ ಗ್ರಾಮದಲ್ಲಿ ಸಂಬಂಧಿಕರ ಮನೆಯಲ್ಲಿ ಇರಿಸಿ ವಿದ್ಯಾಭ್ಯಾಸ ಮಾಡಿಸುವ ಸ್ಥಿತಿ ನಿರ್ಮಾಣವಾಗಿದೆ.

    ಈ ಭಾಗದಲ್ಲಿ ಭತ್ತ, ತೆಂಗು, ಬಾಳೆ ಫಸಲನ್ನು ಬೆಳಸುತ್ತೇವೆ. ಆದರೆ ಅವುಗಳನ್ನು ಮಾರಾಟ ಮಾಡಲು ಚಿಕ್ಕ ದೋಣಿಯಲ್ಲಿ ಕೊಂಡೊಯ್ಯಬೇಕಿದ್ದು ಬಲು ತ್ರಾಸದಾಯಕವಾಗಿದೆ. ಹೀಗಾಗಿ ಹಲವರು ವ್ಯವಸಾಯವನ್ನು ಮಾಡುವುದು ಬಿಟ್ಟು ನಗರದಲ್ಲಿ ಕೂಲಿ ಕೆಲಸಕ್ಕೆ ಹೋಗುತ್ತಿದ್ದಾರೆ. ಇನ್ನು ಸ್ವಲ್ಪ ವಿದ್ಯಾಭ್ಯಾಸ ಮಾಡಿದ ಯುವಕರು ನೆರೆಯ ಗೋವಾದಲ್ಲಿ ನೆಲೆ ಕಂಡುಕೊಂಡಿದ್ದಾರೆ. ನದಿ ಭಾಗದಿಂದ ಸುಮಾರು 150 ಮೀಟರ್ ಅಂತರವಿರುವ ಈ ಗ್ರಾಮದಿಂದ ಮೊತ್ತೊಂದೆಡೆ ಸಾಗಬೇಕಿದ್ದರೆ ದೋಣಿಗಾಗಿ ಕೋಗಿಟ್ಟು ಕರೆಯಬೇಕು. ಈ ದ್ವನಿ ಮೊತ್ತೊಂದು ದಡದಲ್ಲಿ ಇರುವವರಿಗೆ ಕೇಳಿದರೆ ಮಾತ್ರ ದೋಣಿ ತೆಗೆದುಕೊಂಡು ಬರುತ್ತಾರೆ. ಮಳೆಗಾಲದಲ್ಲಿ ಪ್ರವಾಹ ಹೆಚ್ಚಾದಾಗ ಈ ಗ್ರಾಮದ ಸಂಚಾರವೇ ಸಂಪೂರ್ಣ ಬಂದ್ ಆಗುತ್ತದೆ. ಹೀಗಾಗಿ ಊರನ್ನು ಬಿಟ್ಟು ಬೇರೆಡೆ ಮನೆ ಮಾಡಿಕೊಂಡು ಮಳೆಗಾಲ ಮುಗಿಯುವವರೆಗೂ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಅನೇಕ ವರ್ಷಗಳಿಂದ ತಮ್ಮ ಗ್ರಾಮಕ್ಕೆ ಸೇತುವೆ ಮಾಡಿಕೊಡುವಂತೆ ಸರ್ಕಾರಕ್ಕೆ ಬೇಡಿಕೆ ಇಟ್ಟಿದ್ದರೂ ಇಲ್ಲಿವರೆಗೂ ಈಡೇರಿಲ್ಲ ಎಂದು ಸ್ಥಳೀಯರು ಬೇಸರ ವ್ಯಕ್ತಪಡಿಸುತ್ತಾರೆ.

    ಭೂಮಿಯನ್ನೇ ನಂಬಿ ಇಲ್ಲಿನ ಜನರು ಬದುಕು ಕಟ್ಟಿಕೊಂಡಿದ್ದಾರೆ. ಅನೇಕ ವರ್ಷಗಳಿಂದ ಈ ಗ್ರಾಮಕ್ಕೆ ಸೇತುವೆ ನಿರ್ಮಿಸುವಂತೆ ಸರ್ಕಾರಕ್ಕೆ ಪ್ರತಿಭಟನೆ ನಡೆಸಿ ಮನವಿ ಸಹ ನೀಡಿದ್ದಾರೆ. ಆದರೆ ಈವರೆಗೂ ಸರ್ಕಾರ ಮಾತ್ರ ಜಾಣ ಕುರುಡು ಪ್ರದರ್ಶಿಸುತ್ತಿದೆ. ತಮ್ಮ ಊರಿಗೆ ಒಂದು ಸೇತುವೆಯಾದರೆ ಊರಿನಲ್ಲಿ ಮದುವೆಯಾಗದೇ ಉಳಿದ ಯುವಕರಿಗೆ ಮದುವೆ ಭಾಗ್ಯ ಸಿಗುತ್ತದೆ. ಕೆಲಸಮಾಡಲಾಗದೇ ಬರಡಾಗಿ ಬಿಟ್ಟ ಭೂಮಿ ಹಸನಾಗುತ್ತದೆ ಎಂಬ ಆಶಾ ಭಾವನೆಯಲ್ಲಿ ಈ ಗ್ರಾಮದವರು ಇಟ್ಟುಕೊಂಡಿದ್ದಾರೆ.

  • ತೆಪ್ಪ ವಶಪಡಿಸಿಕೊಂಡು ನದಿ ತೀರದಲ್ಲೇ ಸುಟ್ಟು ಹಾಕಿದ್ರು!

    ತೆಪ್ಪ ವಶಪಡಿಸಿಕೊಂಡು ನದಿ ತೀರದಲ್ಲೇ ಸುಟ್ಟು ಹಾಕಿದ್ರು!

    ಹಾವೇರಿ: ತುಂಗಭದ್ರಾ ನದಿಯ ತೀರದಲ್ಲಿ ಅಕ್ರಮ ಮರಳು ಗಣಿಗಾರಿಕೆ ಮಾಡುತ್ತಿದ್ದ 9 ತೆಪ್ಪಗಳನ್ನ ವಶಪಡಿಸಿಕೊಂಡು ಸುಟ್ಟು ಹಾಕಿದ ಘಟನೆ ಹಾವೇರಿ ತಾಲೂಕು ಕಂಚಾರಗಟ್ಟಿ ಗ್ರಾಮದ ಬಳಿ ನಡೆದಿದೆ.

    ಕಳೆದ ಕೆಲವು ದಿನಗಳಿಂದ ತುಂಗಭದ್ರಾ ನದಿ ತೀರದಲ್ಲಿ ತೆಪ್ಪಗಳ ಮೂಲಕ ಅಕ್ರಮ ಗಣಿಗಾರಿಕೆ ಮಾಡುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ಸ್ಥಳಕ್ಕೆ ದೌಡಾಯಿಸಿದ ಹಾವೇರಿಯ ತಹಶೀಲ್ದಾರರು ಬಿದಿರಿನ ತೆಪ್ಪಗಳನ್ನ ವಶಕ್ಕೆ ಪಡೆದು, ನದಿ ತೀರದಲ್ಲಿ ಸುಟ್ಟು ಹಾಕಿದ್ದಾರೆ.

    ಇದೇ ವೇಳೆ ಮರಳು ಗಣಿಗಾರಿಕೆ ಮಾಡುತ್ತಿದ್ದ ವ್ಯಕ್ತಿಗಳು ಪರಾರಿಯಾಗಿದ್ದಾರೆ. ಹಾವೇರಿ ತಹಶೀಲ್ದಾರರ ನವೀನ ಹುಲ್ಲೂರು ಹಾಗೂ ಉಪತಹಶೀಲ್ದಾರ್ ಗವಿಸಿದ್ದಪ್ಪ ಸೇರಿದಂತೆ ಅಧಿಕಾರಿಗಳು ಕಾರ್ಯಚರಣೆ ಭಾಗವಹಿಸಿದ್ದಾರೆ.

    ಗುತ್ತಲ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

  • ಫಸ್ಟ್ ಟೈಂ ಮುಳುಗಿತು ನೆಲ್ಲಿಬೀಡು ಸೇತುವೆ- ಚಾರ್ಮಾಡಿ ಆಯ್ತು, ಈಗ ಬದಲಿ ಕುದುರೆಮುಖ ರಸ್ತೆಯೂ ಬಂದ್!

    ಫಸ್ಟ್ ಟೈಂ ಮುಳುಗಿತು ನೆಲ್ಲಿಬೀಡು ಸೇತುವೆ- ಚಾರ್ಮಾಡಿ ಆಯ್ತು, ಈಗ ಬದಲಿ ಕುದುರೆಮುಖ ರಸ್ತೆಯೂ ಬಂದ್!

    ಚಿಕ್ಕಮಗಳೂರು: ಜಿಲ್ಲೆಯಲ್ಲಿ ಮಳೆಯ ಅಬ್ಬರ ಮುಂದುವರಿದಿದ್ದು, ಮಲೆನಾಡು ಭಾಗದ ಪ್ರಮುಖ ರಸ್ತೆಗಳು ಬಂದ್ ಆಗಿದೆ.

    ಜಿಲ್ಲೆಯ ಮಲೆನಾಡು ಭಾಗದ ಪ್ರಮುಖ ರಸ್ತೆಗಳಾದ ಚಾರ್ಮಾಡಿ ಘಾಟ್, ಕಳಸ-ಕುದುರೆಮುಖ-ಮಂಗಳೂರು ರಸ್ತೆ ಸಂಚಾರ, ಕಳಸ-ಹೊರನಾಡು ರಸ್ತೆ ಸಂಚಾರ, ಶೃಂಗೇರಿ-ದಕ್ಷಿಣ ಕನ್ನಡ ರಾಷ್ಟ್ರೀಯ ಹೆದ್ದಾರಿ 169 ಬಂದ್ ಆಗಿದ್ದು, ಪ್ರಯಾಣಿಕರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

    ಭದ್ರಾ ಹಾಗೂ ಶೃಂಗೇರಿ ಶಾರದಾಂಭ ದೇವಾಲಯದ ಪಕ್ಕದಲ್ಲಿರುವ ತುಂಗಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಸಂಧ್ಯವಂದನಾ ಮಂಟಪ ಹಾಗೂ ಕಪ್ಪೆ ಶಂಕರ ದೇವಸ್ಥಾನ ಮುಳುಗಡೆಯಾಗಿದೆ. ಶೃಂಗೇರಿ ದೇವಸ್ಥಾನಕ್ಕೆ ಸಾಗುವ ಪ್ಯಾರಲಲ್ ರಸ್ತೆ ಸಹ ಮುಳುಗಡೆಯಾಗಿದೆ.

    ಇನ್ನೂ ರಾಷ್ಟ್ರೀಯ ಹೆದ್ದಾರಿ 169 ಶೃಂಗೇರಿ ಕೆರೆಕಟ್ಟೆ ಮಂಗಳೂರು ಬಸ್ ಸಂಚಾರ ಸ್ಥಗಿತವಾಗಿದ್ದು, ದಕ್ಷಿಣ ಕನ್ನಡದಿಂದ ಚಿಕ್ಕಮಗಳೂರು ಜಿಲ್ಲೆಗೆ ಸಂಪರ್ಕ ಸಂಪೂರ್ಣ ಕಡಿತಗೊಂಡಿದೆ. ಸದ್ಯಕ್ಕೆ ಶಿವಮೊಗ್ಗ ಜಿಲ್ಲೆಯ ಅಗುಂಬೆ ಘಾಟ್ ನಲ್ಲಿ ಮಿನಿ ವಾಹನಗಳು ಸಂಚರಿಸುತ್ತಿದೆ.

    ಚಿಕ್ಕಮಗಳೂರಲ್ಲಿ ಮುಂದುವರೆದ ಮಳೆಯಿಂದಾಗಿ ಚಿಕ್ಕಮಗಳೂರು-ಮಂಗಳೂರು ಬದಲಿ ಮಾರ್ಗವೂ ಬಂದ್ ಆಗಿದೆ. ಕಳಸ, ಕುದುರೆಮುಖ, ಮಂಗಳೂರು ಮಾರ್ಗವೂ ಬಂದ್ ಆಗಿದ್ದು, ಚಾರ್ಮಾಡಿ ರಸ್ತೆ ಬಂದ್ ಆದ ಮೇಲೆ ಕುದುರೆಮುಖ ಮಾರ್ಗವಾಗಿ ವಾಹನಗಳು ಸಂಚರಿಸುತ್ತಿತ್ತು. ಆದರೆ ಈಗ ಕಳಸ ಕುದುರೆಮುಖ ಮಾರ್ಗವೂ ಜಲಾವೃತಗೊಂಡಿದ್ದು, ಕಳಸಾದ 150 ಅಡಿ ನೆಲ್ಲಿಬೀಡು ಸೇತುವೆ ಇತಿಹಾಸದಲ್ಲಿ ಮೊದಲ ಬಾರಿ ಮುಳುಗಿದೆ.

    ಇನ್ನೂ ಮೂಡಿಗೆರೆ ತಾಲೂಕಿನ ಕಳಸ ಹಾಗೂ ಕುದುರೆಮುಖದಲ್ಲಿ ಬಾರಿ ಮಳೆಯಿಂದ ರಸ್ತೆ ಮೇಲೆ ನೀರು ಹರಿಯುತ್ತಿದ್ದು, ಒಂದು ಕಿ.ಮೀವರೆಗೂ ವಾಹನಗಳು ಸಾಲುಗಟ್ಟಿ ನಿಂತಿದೆ. ಶೃಂಗೇರಿಯ ಎಸ್.ಕೆ.ಬಾರ್ಡ್ ರಸ್ತೆ ಮಧ್ಯೆಯೇ ಮರ ಬಿದ್ದು ಹಾಗೂ ಮಣ್ಣು ಕುಸಿತವಾಗಿದೆ. ಹಾಗಾಗಿ ಬೈಕ್ ಹಾಗೂ ಲಘು ವಾಹನಗಳಿಗೆ ಮಾತ್ರ ಸಂಚಾರಕ್ಕೆ ಅವಕಾಶ ನೀಡಲಾಗುತ್ತಿದೆ. ಇನ್ನೂ ಬಾರಿ ವಾಹನ ಸಂಚಾರಕ್ಕೆ ಪೊಲೀಸರು ತಡೆ ನೀಡಿದ್ದಾರೆ. ಕಳೆದೊಂದು ವಾರದಿಂದ ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ.

    ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ರಸ್ತೆಗಳು ಕೆರೆಯಂತಾಗಿದ್ದು, ಕೊಟ್ಟಿಗೆಹಾರದ ರಸ್ತೆ ಮೇಲೆ ನೀರಿ ವೈಭವ ಹರಿಯುತ್ತಿದೆ. ಅನೇಕ ಕಡೆಗಳಲ್ಲಿ ರಸ್ತೆ ಕಾಣದಂತೆ ಸಂಪೂರ್ಣ ನೀರು ಆವರಿಸಿದೆ. ಹಾಗಾಗಿ ರಸ್ತೆ ಸಂಚಾರಕ್ಕೆ ತೊಂದರೆ ಆಗಿದೆ. ಗುಡ್ಡದ ಮೇಲಿನಿಂದ ನೀರು ಹರಿದು ಬರುತ್ತಿರುವ ದೃಶ್ಯ ಸ್ಥಳೀಯರ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಕಳೆದೊಂದು ವಾರದಿಂದ ಧಾರಾಕಾರವಾಗಿ ಮಳೆ ಸುರಿಯುತ್ತಿದೆ.

    ಇನ್ನೂ ಮೂಡಿಗೆರೆ ತಾಲೂಕಿನ ಹೊರನಾಡು ಸಮೀಪದಲ್ಲಿರುವ ಹೆಬ್ಬಾಳೆ ಸೇತುವೆ ಕಾಣದಂತೆ ನೀರು ಹರಿಯುತ್ತಿದ್ದು, ಸೇತುವೆ ಸಂಪೂರ್ಣ ಮುಳುಗಿದೆ. ಕಳಸ – ಹೊರನಾಡು – ಕುದುರೆಮುಖ ಭಾಗದಲ್ಲಿ ಭಾರೀ ಮಳೆ ಹಿನ್ನೆಲೆಯಲ್ಲಿ ನೀರಿನ ಪ್ರಮಾಣ ತಗ್ಗುವವರೆಗೂ ಖಾಸಗಿ ಬಸ್, ಪ್ರವಾಸಿ ವಾಹನಗಳಿಗೆ ಸಂಚಾರ ಇಲ್ಲ. ಅಲ್ಲದೇ ಕಳಸ- ಹೊರನಾಡು ಸಂಪರ್ಕ ಬಂದ್ ಆಗಿದೆ. ಭದ್ರಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ನದಿ ಪಾತ್ರದ ಜನರು ಆತಂಕದಲ್ಲಿದ್ದಾರೆ.

    ಚಿಕ್ಕಮಗಳೂರಲ್ಲಿ ಮುಂದುವರಿದ ಮಳೆಯ ಅಬ್ಬರಕ್ಕೆ ಶೃಂಗೇರಿಯ ಭಾರತಿ ಬೀದಿ ಹಾಗೂ ರಸ್ತೆಗಳು ಕೆರೆಯಂತಾಗಿದೆ. ಕಳೆದೊಂದು ವಾರದಿಂದ ಧಾರಾಕಾರವಾಗಿ ಸುರಿಯುತ್ತಿರುವ ಮಳೆಗೆ ಶಂಗೇರಿಯ ಅನೇಕ ಕಡೆಗಳಲ್ಲಿ ರಸ್ತೆ ಕಾಣದಂತೆ ಸಂಪೂರ್ಣ ನೀರು ಆವರಿಸಿದೆ. ರಸ್ತೆಯ ತುಂಬೆಲ್ಲ ನೀರು ಹರಿಯುತ್ತಿದ್ದು ಸಂಚಾರಕ್ಕೆ ತೊಂದರೆ ಆಗಿದೆ. ಅಲ್ಲದೇ ತುಂಗಾ ನದಿ ತುಂಬಿ ಅಕ್ಕಪಕ್ಕದ ಜಮೀನಿಗೂ ನೀರು ನುಗ್ಗುತ್ತಿದೆ. ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ.

    ಮಳೆಯಿಂದಾಗಿ ಶೃಂಗೇರಿ, ಕೊಪ್ಪ ತಾಲೂಕಿನ ಶಾಲೆಗಳಿಗೆ ರಜೆ ಘೋಷಿಸಿದ್ದಾರೆ. ಭದ್ರಾ, ತುಂಗಾ, ಹೇಮಾವತಿ ನದಿಗಳ ಒಳಹರಿವು ಭಾರೀ ಪ್ರಮಾಣದಲ್ಲಿ ಹೆಚ್ಚಾಗಿದ್ದು, ಅಪಾಯ ಮಟ್ಟವನ್ನು ಮೀರಿ ನೀರು ಹರಿಯುತ್ತಿದೆ.

  • ಮುಂದುವರಿದ ವರುಣನ ಆರ್ಭಟ- ಶಾಲಾ-ಕಾಲೇಜಿಗೆ ರಜೆ, ಅಪಾಯದ ಮಟ್ಟ ಮೀರಿದ ತುಂಗಾಭದ್ರ ಜಲಾಶಯ

    ಮುಂದುವರಿದ ವರುಣನ ಆರ್ಭಟ- ಶಾಲಾ-ಕಾಲೇಜಿಗೆ ರಜೆ, ಅಪಾಯದ ಮಟ್ಟ ಮೀರಿದ ತುಂಗಾಭದ್ರ ಜಲಾಶಯ

    ಬೆಂಗಳೂರು: ರಾಜ್ಯದಲ್ಲಿ ವರುಣನ ಅಬ್ಬರ ಮುಂದುವರೆದಿದೆ. ದಕ್ಷಿಣ ಕನ್ನಡ, ಚಿಕ್ಕಮಗಳೂರು, ಮಡಿಕೇರಿ ಮೊದಲಾದ ಕಡೆಗಳಲ್ಲಿ ಭಾರೀ ಮಳೆಯಾಗುತ್ತಿದೆ.

    ಕರ್ನಾಟಕ – ಕೇರಳ ಸಂಪರ್ಕ ಕಲ್ಪಿಸುವ ಹೆದ್ದಾರಿಯಲ್ಲಿ ಸಂಚಾರ ಸ್ಥಗಿತಗೊಳಿಸಲಾಗಿದೆ. ಪೆರುಂಬಾಡಿ – ಮಾಕುಟ್ಟ ರಾಜ್ಯ ಹೆದ್ದಾರಿಯಲ್ಲಿ 25 ಕಡೆಗಳಲ್ಲಿ ಭೂ ಕುಸಿತವಾದ ಹಿನ್ನೆಲೆಯಲ್ಲಿ ಮುಂಜಾಗೃತ ಕ್ರಮವಾಗಿ ಜುಲೈ 12ರ ವರೆಗೆ ವಾಹನ ಸಂಚಾರ ನಿಷೇಧಗೊಳಿಸಿ ಡಿಸಿ ಶ್ರೀ ವಿದ್ಯಾ ಆದೇಶಿಸಿದ್ದಾರೆ. ಮಳೆಯಿಂದಾಗಿ ಅಂಗನವಾಡಿ ಸೇರಿದಂತೆ ಜಿಲ್ಲೆಯ ಎಲ್ಲಾ ಶಾಲಾ – ಕಾಲೇಜುಗಳಿಗೆ ಇಂದೂ ಸಹ ರಜೆ ಘೋಷಿಸಲಾಗಿದೆ.

    ಮಲೆನಾಡು ಕೊಡಗು ಜಿಲ್ಲೆಯಲ್ಲಿ ಮುಂಗಾರು ತೀವ್ರಗೊಂಡಿದ್ದು, ಬಿಟ್ಟುಬಿಡದೇ ನಿರಂತರವಾಗಿ ಮಳೆ ಆಗುತ್ತಿದೆ. ಮಡಿಕೇರಿಯಲ್ಲಿ ಬುಧವಾರ ರಾತ್ರಿ ನಿಲ್ಲಿಸಿದ್ದ ಕಾರಿನ ಮೇಲೆ ಮಣ್ಣು ಕುಸಿದಿದ್ದು, ಸದ್ಯ ಯಾವುದೇ ಪ್ರಾಣಾಪಾಯ ಆಗಿಲ್ಲ. ಬ್ರಹ್ಮಗಿರಿ ತಪ್ಪಲಿನಲ್ಲಿ ನಿರಂತರ ಮಳೆಯಿಂದ ಭಾಗಮಂಡಲದ ತ್ರಿವೇಣಿ ಸಂಗಮ ಸಂಪೂರ್ಣ ಭರ್ತಿ ಆಗಿದೆ. ಇದರಿಂದ ಭಗಂಡೇಶ್ವರ ದೇವಾಲಯ ಜಲಾವೃತವಾಗಿದೆ.

    ಮಡಿಕೇರಿ, ಭಾಗಮಂಡಲ, ತಲಕಾವೇರಿ ರಸ್ತೆ ಸಂಪರ್ಕ ಕಡಿತಗೊಂಡಿದ್ದು, ಭಾಗಮಂಡಲ ದೇವಾಲಯಕ್ಕೆ ತೆರಳಲು ಜಿಲ್ಲಾಡಳಿತದಿಂದ ದೋಣಿ ವ್ಯವಸ್ಥೆ ಮಾಡಲಾಗಿದೆ. ಕನಿಕೆ, ಸುಜೋತಿ, ಕಾವೇರಿ ಹಾಗೂ ಲಕ್ಷ್ಮಣ ತೀರ್ಥ ನದಿಗಳು ತುಂಬಿ ಹರಿಯುತ್ತಿದೆ. ಬೆಟ್ಟಗುಡ್ಡ ಹಾಗೂ ನದಿ ಅಂಚಿನಲ್ಲಿರುವ ಜನರಿಗೆ ಸುರಕ್ಷಿತ ಸ್ಥಳಗಳಿಗೆ ತೆರಳಲು ಸೂಚಿಸಲಾಗಿದೆ. ದಕ್ಷಿಣ ಕನ್ನಡದಲ್ಲೂ ನಿರಂತರ ಮಳೆ ಆಗುತ್ತಿದ್ದು, ಪುತ್ತೂರು ತಾಲೂಕಿನ ಶಾಲಾ ಕಾಲೇಜುಗಳಿಗೆ ರಜೆ ನೀಡಲಾಗಿದೆ.

    ಚಿಕ್ಕಮಗಳೂರಿನ ಶೃಂಗೇರಿ, ಕೊಪ್ಪ, ಮೂಡಿಗೆರೆ, ಎನ್.ಆರ್ ಪುರ ತಾಲೂಕಿನಲ್ಲಿ ಮಳೆ ಅಬ್ಬರ ಮುಂದುವರೆದಿದೆ. ಶೃಂಗೇರಿ, ಕೊಪ್ಪ ತಾಲೂಕಿನ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ತುಂಗಾ ಮತ್ತು ಭದ್ರಾ ನದಿಗಳು. ಹೇಮಾವತಿ ನದಿಗಳ ಒಳಹರಿವು ಭಾರೀ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ನಿರಂತರ ಮಳೆಯಿಂದಾಗಿ ಇಂದು ಸಹ ಚಾರ್ಮಾಡಿ ಘಾಟ್‍ ನಲ್ಲಿ ಭೂ ಕುಸಿತ ಉಂಟಾಗಿದೆ.

  • ಮೈದುಂಬಿ, ಬೋರ್ಗರೆಯುತ್ತಿದೆ ವಿಶ್ವವಿಖ್ಯಾತ ಜೋಗ್ ಫಾಲ್ಸ್: ವಿಡಿಯೋ ನೋಡಿ

    ಮೈದುಂಬಿ, ಬೋರ್ಗರೆಯುತ್ತಿದೆ ವಿಶ್ವವಿಖ್ಯಾತ ಜೋಗ್ ಫಾಲ್ಸ್: ವಿಡಿಯೋ ನೋಡಿ

    ಶಿವಮೊಗ್ಗ: ಮಲೆನಾಡು ಕ್ರಮೇಣ ಮಳೆನಾಡಾಗುತ್ತಿದೆ. ಕಳೆದ ಒಂದು ವಾರದಿಂದ ಸುರಿದ ಮಳೆಗೆ ಮಲೆನಾಡಿನ ನದಿಗಳು ಮೈದುಂಬಿಕೊಂಡಿವೆ. ವಿಶ್ವವಿಖ್ಯಾತ ಜೋಗ ಜಲಪಾತ ಸಹ ತುಂಬಿ ಹರಿಯುತ್ತಿದೆ.

    ದಟ್ಟ ಮೋಡ, ಮಂಜಿನ ನಡುವೆ ಬಿಸಿಲು ಬಿದ್ದು, ಕಂಡು ಕಾಣದಂತೆ ಮರೆಯಾಗುವ ಜಲಪಾತ ನೋಡುಗರ ಕಣ್ಣಿಗೆ ಹಬ್ಬವಾಗಿದೆ. ರಾಜಾ, ರೋರರ್, ರಾಕೆಟ್, ರಾಣಿ ಧುಮ್ಮಿಕ್ಕುತ್ತಿದ್ದು ಜೋಗದ ಗುಂಡಿ ನೋಡಲು ಎರಡೂ ಕಣ್ಣು ಸಾಲದಂತಾಗಿದೆ.

    ಮುಂಭಾಗದಿಂದ ಸಹಜ ಸುಂದರವಾಗಿ ಕಾಣುವ ಜಲಪಾತ ಅತ್ತ ಮದ್ರಾಸ್ ಐಬಿ ಕಡೆಯಿಂದ ರುದ್ರ ರಮಣೀಯವಾಗಿ ಕಾಣುತ್ತಿದೆ. ಜಲಪಾತದ ನೆತ್ತಿಯಲ್ಲಿ ನಿಂತು ನೋಡುವುದು ರೋಮಾಂಚನಕಾರಿ ಆಗಿ ಕಾಣುತ್ತದೆ.

    ಶರಾವತಿ ನದಿ ಜಲಾನಯನ ಪ್ರದೇಶಗಳಾದ ಹೊಸನಗರ, ಸಾಗರ ತಾಲೂಕುಗಳಲ್ಲಿ ಕಳೆದ ಒಂದು ವಾರದಿಂದ ನಿರಂತರವಾಗಿ ಮಳೆ ಆಗುತ್ತಿರುವುದು ಜಲಪಾತ ಕಳೆಕಟ್ಟಲು ಕಾರಣವಾಗಿದೆ.

  • ಮೂರು ವರ್ಷದ ಕಂದನ ಜೊತೆ ನದಿಗೆ ಜಿಗಿದ ಸಲಿಂಗಿ ಜೋಡಿ

    ಮೂರು ವರ್ಷದ ಕಂದನ ಜೊತೆ ನದಿಗೆ ಜಿಗಿದ ಸಲಿಂಗಿ ಜೋಡಿ

    ಗಾಂಧಿನಗರ: ಇಬ್ಬರು ಸಲಿಂಗಿಗಳು ಮೂರು ವರ್ಷದ ಕಂದಮ್ಮನ ಜೊತೆ ಅಹಮದಾಬಾದ್ ಬಳಿಯ ಸಾಬರಮತಿಗೆ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸೋಮವಾರ ಬೆಳಗಿನ ಜಾವ ನದಿಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದು, ಸಾಯುವ ಮುನ್ನ ಲಿಪ್‍ಸ್ಟಿಕ್ ಬಳಸಿ ಕಲ್ಲಿನ ಮೇಲೆ ಡೆತ್ ನೋಟ್ ಬರೆದಿದ್ದಾರೆ.

    ಆಶಾ ಠಾಕೂರ್ (30), ಭಾವನಾ ಠಾಕೂರ್ (28) ಮತ್ತು ಆಶಾಳ ಮೂರು ವರ್ಷದ ಮಗು ಮೇಘಾ ಸಾವನ್ನಪ್ಪಿದವರು. ಮೃತರ ದೇಹಗಳು ಎಲ್ಲೆ ಬ್ರಿಡ್ಜ್ ಬಳಿ ಪತ್ತೆಯಾಗಿದ್ದು, ಮಹಿಳೆಯರಿಬ್ಬರು ಸಲಿಂಗಿಗಳಾಗಿದ್ದು, ಹಲವು ವರ್ಷಗಳಿಂದ ಸಂಬಂಧದಲ್ಲಿದ್ದರು ಎಂದು ತಿಳಿದು ಬಂದಿದೆ.

    ಬಾವ್ಲಾ ನಗರದ ರಾಂಚೋಡ್ ಗ್ರಾಮದ ನಿವಾಸಿಗಳಾದ ಆಶಾ ಮತ್ತು ಭಾವನಾ ಹಲವು ವರ್ಷಗಳಿಂದ ರಿಲೇಶನ್ ಶಿಪ್‍ನಲ್ಲಿದ್ದರು. ಇಬ್ಬರಿಗೂ ಮದುವೆಯಾಗಿದ್ದು, ಎರಡು ಮಕ್ಕಳನ್ನು ಹೊಂದಿದ್ದಾರೆ.

    ಆಶಾ ಮತ್ತು ಭಾವನಾ ಜೂನ್ 8ರಿಂದ ಮೇಘಾ ಜೊತೆ ಮನೆಯಿಂದ ಕಾಣೆಯಾಗಿದ್ರು. ಆದ್ರೆ ಕುಟುಂಬಸ್ಥರು ಹುಡುಕುವ ಪ್ರಯತ್ನ ಅಥವಾ ನಾಪತ್ತೆ ದೂರು ಸಹ ದಾಖಲಿಸಿರಲಿಲ್ಲ. ಭಾನುವಾರ ಸಂಜೆ ನದಿ ದಂಡೆಗೆ ಬಂದ ಜೋಡಿ ಅಲ್ಲಿಯೇ ಊಟ ಮಾಡಿದ್ದಾರೆ. ನಮ್ಮ ಸಂಬಂಧವನ್ನು ಸಮಾಜ ಒಪ್ಪಿಕೊಳ್ಳುತ್ತಿಲ್ಲ ಅಂತಾ ಒಬ್ಬರನ್ನೊಬ್ಬರು ಒಂದೇ ದುಪ್ಪಟಾದಲ್ಲಿ ಕಟ್ಟಿಕೊಂಡು ಮಗುವಿನ ಜೊತೆ ನದಿಗೆ ಜಿಗಿದಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಎಂ.ಎಸ್.ಸಿಂಗ್ ತಿಳಿಸಿದ್ದಾರೆ.

    ಡೆತ್ ನೋಟ್‍ನಲ್ಲಿ ಏನಿತ್ತು: ಸಮಾಜ ನಮ್ಮನ್ನು ಬದುಕಲು ಬಿಡುತ್ತಿಲ್ಲ. ನಮ್ಮಿಬ್ಬರ ಪ್ರೀತಿ ಸಂಬಂಧವನ್ನು ಒಪ್ಪಿಕೊಳ್ಳದೇ ನಮ್ಮನ್ನು ಅವಮಾನಿಸುತ್ತಿದೆ. ಹಾಗಾಗಿ ನಾವಿಬ್ಬರೂ ಜೊತೆಯಾಗಿಯೇ ಸಾಯುತ್ತಿದ್ದೇವೆ ಎಂದು ಕಲ್ಲಿನ ಮೇಲೆ ಬರೆದಿದ್ದಾರೆ.

    ಪ್ರಸ್ತುತ ಸಮಾಜದಲ್ಲಿ ಇಬ್ಬರು ಯುವತಿಯರು ಒಂದೇ ಮನೆ ಮಾಡಿಕೊಂಡು ಜೀವನ ನಡೆಸುತ್ತಿದ್ದರೆ ಅವರನ್ನು ಕೆಟ್ಟ ದೃಷ್ಟಿಕೋನದಿಂದ ನೋಡಲಾಗುತ್ತದೆ. ಆದ್ರೆ ಹುಡುಗರು ರೂಮ್ ಮಾಡಿಕೊಂಡಿದ್ದರೆ ಸಮಾಜದಲ್ಲಿ ಯಾವ ಸಮಸ್ಯೆಗಳನ್ನು ಎದುರಿಸಲ್ಲ. ಒಂದು ವೇಳೆ ಇಬ್ಬರು ಮಹಿಳೆಯರು ಒಂದೇ ಮನೆಯಲ್ಲಿದ್ದು, ಸಂಬಂಧದಲ್ಲಿ ಇದ್ದಾರೆ ಅಂತಾ ತಿಳಿದ್ರೆ ಅವರು ಎಲ್ಲರ ಬೆಂಬಲ ಕಳೆದುಕೊಳ್ಳುತ್ತಾರೆ. ಎಲ್ಲರಿಂದ ದೂರವಾದ ಬಳಿಕ ಕೊನೆದೆ ವಿಧಿ ಇಲ್ಲದೇ ಆತ್ಮಹತ್ಯೆಗೆ ಮುಂದಾಗುತ್ತಾರೆ ಅಂತಾ ಲೈಂಗಿಕ ಅಲ್ಪಸಂಖ್ಯಾತರ ಎನ್‍ಜಿಓ ಸದಸ್ಯರೊಬ್ಬರು ಅಸಮಾಧಾನ ಹೊರ ಹಾಕಿದ್ದಾರೆ.