Tag: ನದಿ

  • ರಾಜ್ಯದಲ್ಲಿ ನಿಲ್ಲದ ಮಳೆ, ತಗ್ಗದ ಪ್ರವಾಹ – ಆಗುಂಬೆ ಸೂರ್ಯಾಸ್ತ ಗೋಪುರ ರಸ್ತೆ ಕುಸಿತ – KRS, ಹೇಮಾವತಿ ಇಂದು ಸಂಪೂರ್ಣ

    ರಾಜ್ಯದಲ್ಲಿ ನಿಲ್ಲದ ಮಳೆ, ತಗ್ಗದ ಪ್ರವಾಹ – ಆಗುಂಬೆ ಸೂರ್ಯಾಸ್ತ ಗೋಪುರ ರಸ್ತೆ ಕುಸಿತ – KRS, ಹೇಮಾವತಿ ಇಂದು ಸಂಪೂರ್ಣ

    ಬೆಂಗಳೂರು: ರಾಜ್ಯಾದ್ಯಂತ ಮಳೆರಾಯನ ಅಬ್ಬರ ಮತ್ತಷ್ಟು ಜೋರಾಗಿದೆ. ಕರಾವಳಿ, ಮಲೆನಾಡು ಜನರಿಗೆ ಸಾಕು ಅನ್ನಿಸುವಷ್ಟು ಮಳೆಯಾಗುತ್ತಿದ್ದರೆ, ಬಯಲು ಸೀಮೆಯ ಜನರಲ್ಲಿ ಖುಷಿಯೋ ಖುಷಿ. ಯಾಕಂದ್ರೆ ಎಲ್ಲಾ ಡ್ಯಾಮ್‍ಗಳಿಗೂ ಜೀವಕಳೆ ಬಂದಿದೆ.

    124.80 ಅಡಿ ಸಾಮರ್ಥ್ಯದ ಕೆಆರ್ ಎಸ್‍ನಲ್ಲೀಗ 121.40 ಅಡಿ ನೀರು ಬಂದಿದ್ದು, ಭರ್ತಿಗೆ ಮೂರು ಅಡಿ ಬಾಕಿ ಇದೆ. ಹೇಮಾವತಿಗೂ 3 ಅಡಿ ಬಾಕಿಯಿದ್ದು, ಎರಡು ಜಲಾಶಯಗಳು ಇವತ್ತೇ ಬಹುತೇಕ ತುಂಬಿಕೊಳ್ಳುವ ಸಾಧ್ಯತೆ ಇದೆ. ಹೀಗಾಗಿ ನದಿ ತಟದ ಜನರಿಗೆ ಪ್ರವಾಹದ ಮುನ್ನೆಚ್ಚರಿಕೆ ನೀಡಲಾಗಿದೆ.

    ಕಬಿನಿ ಜಲಾಶಯದಿಂದ 45 ಸಾವಿರ ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದ್ದು, ಕಪಿಲಾ ನದಿ ಉಕ್ಕಿ ಹರಿಯುತ್ತಿದೆ. ನಂಜನಗೂಡಲ್ಲಿರುವ ಕಪಿಲಾ ನದಿ ಅಕ್ಕ-ಪಕ್ಕದ ಹಳ್ಳಿಗಳಲ್ಲಿ ಪ್ರವಾಹ ಉಂಟಾಗಿದೆ. ಮನೆಗಳು ಜಲಾವೃತಗೊಂಡಿದ್ದು, ಸ್ಥಳೀಯರು ಮನೆ ತೊರೆದು ಸಾಮಾನು ಸರಂಜಾಮುಗಳೊಂದಿಗೆ ಸುರಕ್ಷಿತ ಪ್ರದೇಶಗಳಿಗೆ ತೆರಳುತ್ತಿದ್ದಾರೆ. ಅತ್ತ, ಮಹಾರಾಷ್ಟ್ರದಲ್ಲಿ ವಿಪರೀತ ಮಳೆ ಆಗುತ್ತಿರೋ ಕಾರಣ ಕೃಷ್ಣಾನದಿಗೆ ಮತ್ತಷ್ಟು ನೀರು ಹರಿದು ಬಂದಿದೆ. ಚಿಕ್ಕೋಡಿ ಸುತ್ತಮುತ್ತ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ.

    ಶಿವಮೊಗ್ಗದ ತೀರ್ಥಹಳ್ಳಿ ತಾಲೂಕಿನಾದ್ಯಂತ ಭಾರೀ ಮಳೆಯಾಗಿದೆ. ಮಾಲತಿ ನದಿ ತುಂಬಿ ಹರಿಯುತ್ತಿದೆ. ಗುಡ್ಡೇಕೇರಿ- ಬಿದರಗೋಡು ರಸ್ತೆ ಮೇಲೆ ಮೂರು ಅಡಿ ನೀರು ನಿಂತಿದ್ದು, ಶೃಂಗೇರಿ-ತೀರ್ಥಹಳ್ಳಿ ಸಂಪರ್ಕ ಬಂದ್ ಆಗಿದೆ. ಗ್ರಾಮೀಣ ಪ್ರದೇಶದ ಜನ ಜೀವನ ಅಸ್ತವ್ಯಸ್ತವಾಗಿದೆ. ಇನ್ನು ಆಗುಂಬೆ ಘಾಟ್‍ನಲ್ಲಿ ಮತ್ತೆ ಭೂ ಕುಸಿತವಾಗಿದೆ. ಆಗುಂಬೆ ಸನ್ ಸೆಟ್ ಪಾಯಿಂಟ್ ಬಳಿ ರಸ್ತೆ ಪಕ್ಕದಲ್ಲಿ ಭೂ ಕುಸಿದಿದ್ದು, ಸೂರ್ಯಾಸ್ತ ವೀಕ್ಷಣೆಗೆ ಸಾರ್ವಜನಿಕರಿಗೆ ನಿಷೇಧ ಹೇರಿದ್ದಾರೆ. ಚಿಕ್ಕಮಗಳೂರಿನಲ್ಲಿ ಚಿಕ್ಕ ಆಣೆಕಟ್ಟುಗಳೆಲ್ಲಾ ಭರ್ತಿ ಆಗಿದ್ದು, ರಸ್ತೆ, ಸೇತುವೆ, ಮನೆ ಗೋಡೆ, ಗುಡ್ಡಗಳೆಲ್ಲಾ ಕುಸಿಯುತ್ತಿವೆ.

    ರಾಮನಗರದ ಹಲವೆಡೆ ಗಾಳಿ ಸಹಿತ ಧಾರಾಕಾರ ಮಳೆಯಾಗಿದೆ. ಚನ್ನಪಟ್ಟಣ, ಕನಕಪುರದಲ್ಲಿ ಸೇರಿ ಹಲವೆಡೆ ಮಳೆಯಾಗಿದ್ದು ರಸ್ತೆಯ ಮೇಲೆ ಮಳೆ ನೀರು ನಿಂತು ವಾಹನ ಸವಾರರು ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿತ್ತು. ಅಲ್ಲದೇ ಮಳೆಯಿಂದ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಕೆಲ ಕಾಲ ಸಂಚಾರ ಅಸ್ತವ್ಯಸ್ತವಾಗಿ ದ್ವಿಚಕ್ರ ವಾಹನ ಸವಾರರು ಸಮಸ್ಯೆ ಅನುಭವಿಸಿದರು.

    ಮಲೆನಾಡಿನಲ್ಲಿ ಸಾಕು ಅನ್ನುವಷ್ಟು ಮಳೆಯಾಗ್ತಿದ್ರೆ, ಬಿಸಿಲನಾಡು ರಾಯಚೂರು, ಧಾರವಾಡ, ಹಾವೇರಿಯಲ್ಲಿ ಮಾತ್ರ ವರುಣದೇವ ತನ್ನ ಕೃಪೆ ತೋರಿಲ್ಲ. ಉದ್ದು, ಹೆಸರು, ಎಳ್ಳು ಬಿತ್ತನೆ ಮಾಡಿದ್ದ ರೈತರು ಮೊಳಕೆ ಬಾರದೆ ನಷ್ಟ ಅನುಭವಿಸಿದ್ದಾರೆ. ಮೋಡಕವಿದ ವಾತಾವರಣವಿದ್ದರೂ ದೊಡ್ಡ ಮಳೆ ಬಾರದೆ ಕಂಗಾಲಾಗಿ ವಿಶೇಷ ಪೂಜೆಗಳನ್ನ ಮಾಡುತ್ತಿದ್ದಾರೆ. ಇತ್ತ ನವಲಗುಂದ ಪಟ್ಟಣದ ಬಿರಲಿಂಗೇಶ್ವರ ಯುವಕ ಮಂಡಳಿಯವರು ಮಳೆಗಾಗಿ ಕತ್ತೆಗಳ ಮದುವೆ ಮಾಡಿದ್ದಾರೆ.

    ರಾಷ್ಟ್ರ ರಾಜಧಾನಿ ದೆಹಲಿಯಲ್ಲೂ ಭಾರೀ ಮಳೆಯಾಗಿದೆ. ಮಳೆ ರುದ್ರನರ್ತನಕ್ಕೆ ನಗರದ ರಸ್ತೆಗಳು, ತಗ್ಗು ಪ್ರದೇಶಗಳು ಸಂಪೂರ್ಣ ಜಲಾವೃತವಾಗಿದೆ. ವಸತಿ ಪ್ರದೇಶಗಳಲ್ಲಿ ನೀರು ನುಗ್ಗಿದ್ದು, ಜನರು ಪರದಾಡುತ್ತಿದ್ದಾರೆ. ಮಿಂಟೋ ಸೇತುವೆಯ ಅಡಿ ಮಳೆ ನೀರು ತುಂಬಿ ಹೋಗಿದೆ. ರಸ್ತೆಗಳು ಕೆರೆಯಂತಾಗಿದ್ದು, ಹಲವಾರು ಬಸ್‍ಗಳು ಮಳೆ ನೀರಿನಲ್ಲಿ ಮುಳುಗಿ ಹೋಗಿದೆ. ಸಂಚಾರ ಸಂಪೂರ್ಣ ಅಸ್ತವ್ಯಸ್ಯಗೊಂಡಿದೆ.

  • ಮೆಟ್ಟಿಲುವರೆಗೆ ಬಂತು ನೀರು – ಉಕ್ಕಡಗಾತ್ರಿ ಭಕ್ತರಿಗೆ ತುಂಗಾಭದ್ರಾ ನದಿಗೆ ಇಳಿಯದಂತೆ ಎಚ್ಚರಿಕೆ!

    ಮೆಟ್ಟಿಲುವರೆಗೆ ಬಂತು ನೀರು – ಉಕ್ಕಡಗಾತ್ರಿ ಭಕ್ತರಿಗೆ ತುಂಗಾಭದ್ರಾ ನದಿಗೆ ಇಳಿಯದಂತೆ ಎಚ್ಚರಿಕೆ!

    ದಾವಣಗೆರೆ: ಮಲೆನಾಡು ಭಾಗಗಳಲ್ಲಿ ಮಳೆರಾಯ ಆರ್ಭಟಿಸುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ತುಂಗಭದ್ರೆ ಮೈ ದುಂಬಿ ಹರಿಯುತ್ತಿದ್ದು, ಜಿಲ್ಲೆಯ ಹರಿಹರ ತಾಲೂಕಿನ ಉಕ್ಕಡಗಾತ್ರಿ ಪುಣ್ಯಕ್ಷೇತ್ರದ ಭಕ್ತರಿಗೆ ನದಿಗೆ ಇಳಿಯದಂತೆ ಆಡಳಿತ ಮಂಡಳಿ ಎಚ್ಚರಿಕೆ ನೀಡಿದೆ.

    ಮಲೆನಾಡು ಭಾಗಗಳಲ್ಲಿ ಮಳೆರಾಯ ಆರ್ಭಟಿಸುತ್ತಿರುವುದರಿಂದ ತುಂಗಭದ್ರಾ ನದಿಯು ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ನದಿ ನೀರಿನಲ್ಲಿ ದಿನೇ ದಿನೇ ಏರಿಕೆ ಕಂಡುಬರುತ್ತಿದ್ದು, ಉಕ್ಕಡಗಾತ್ರಿ ಕರಿಬಸವೇಶ್ವರ ದೇವಾಲಯದ ಮೆಟ್ಟಿಲುವರೆಗೂ ನದಿ ನೀರು ಬಂದಿದೆ. ಹೀಗಾಗಿ ಉಕ್ಕಡಗಾತ್ರಿ ಪುಣ್ಯಕ್ಷೇತ್ರಕ್ಕೆ ಬರುವ ಭಕ್ತರಿಗೆ ನದಿಗೆ ಇಳಿಯದಂತೆ ಆಡಳಿತ ಮಂಡಳಿ ಎಚ್ಚರಿಕೆ ನೀಡಿದೆ.

    ಉಕ್ಕಡಗಾತ್ರಿ ದೇವಸ್ಥಾನಕ್ಕೆ ಬರುವ ಭಕ್ತರು ನದಿ ನೀರಲ್ಲಿ ಸ್ನಾನ ಮಾಡಿ ದೇವರ ದರ್ಶನ ಮಾಡೋದು ವಾಡಿಕೆಯಾಗಿದೆ. ಆದರೆ ನದಿ ನೀರಿನ ಪ್ರಮಾಣ ಜಾಸ್ತಿಯಾಗಿರುವುದರಿಂದ ಭಕ್ತರು ಯಾವುದೇ ಕಾರಣಕ್ಕೂ ನದಿಗೆ ಇಳಿಯದಂತೆ ಕ್ಷೇತ್ರದ ಆಡಳಿತ ಮಂಡಳಿ ಎಚ್ಚರಿಕೆ ವಹಿಸಿದೆ. ಅಲ್ಲದೇ ದಡದ ಸುತ್ತಲೂ ಹಗ್ಗವನ್ನು ಕಟ್ಟಿ ತೆಪ್ಪದಲ್ಲಿ ಕಾವಲು ಕಾಯುತ್ತಿದ್ದಾರೆ.

  • ಚಿಕ್ಕೋಡಿಯಲ್ಲಿ ವರುಣನ ಆರ್ಭಟ – ದೇವಸ್ಥಾನಕ್ಕೆ ನುಗ್ಗಿದ ನೀರು, 6 ಸೇತುವೆಗಳು ಜಲಾವೃತ, ಉಕ್ಕಿ ಹರಿದ ಪಂಚಾನದಿ

    ಚಿಕ್ಕೋಡಿಯಲ್ಲಿ ವರುಣನ ಆರ್ಭಟ – ದೇವಸ್ಥಾನಕ್ಕೆ ನುಗ್ಗಿದ ನೀರು, 6 ಸೇತುವೆಗಳು ಜಲಾವೃತ, ಉಕ್ಕಿ ಹರಿದ ಪಂಚಾನದಿ

    ಬೆಳಗಾವಿ: ಮಹಾರಾಷ್ಟ್ರದ ಘಟ್ಟ ಪ್ರದೇಶದಲ್ಲಿ ಮಳೆ ಅಬ್ಬರ ಮುಂದುವರಿದಿದ್ದು, ನದಿಗಳು ಉಕ್ಕಿ ಹರಿಯುತ್ತಿದೆ.

    ಮಳೆಯಿಂದಾಗಿ ಚಿಕ್ಕೋಡಿ ತಾಲೂಕಿನ ಕಾರದಗಾ ಗ್ರಾಮದ ಗ್ರಾಮದೇವತೆ ಬಂಗಾಳಿ ಬಾಬಾ ದೇವಸ್ಥಾನ ಆವರಣದಲ್ಲಿ ನದಿ ನೀರು ನುಗ್ಗಿದೆ. ಈ ದೇವಸ್ಥಾನ ದೂದ ಗಂಗಾ ನದಿ ಸಮೀಪದಲ್ಲಿದೆ. ಕೊಲ್ಹಾಪುರ ಜಿಲ್ಲೆಯಲ್ಲಿ ಪ್ರಸಿದ್ಧ ದೇವಸ್ಥಾನ ನರಸಿಂಹವಾಡಿಯ ಗರ್ಭಗುಡಿ, ಪಂಚ ಗಂಗಾ ಮತ್ತು ಕೃಷ್ಣಾ ನದಿಯ ಸಂಗಮ ಸ್ಥಳದ ದೇವಸ್ಥಾನಕ್ಕೂ ನದಿ ನೀರು ನುಗ್ಗಿದೆ.

    ಕೃಷ್ಣಾ ನದಿ ಹಾಗೂ ಉಪನದಿಗಳ ನೀರಿನ ಒಳ ಹರಿವಿನಲ್ಲಿ ಹೆಚ್ಚಳವಾಗಿದೆ. ಕೃಷ್ಣಾ, ದೂದಗಂಗಾ, ವೇದಗಂಗಾ ಹಾಗೂ ಪಂಚಗಂಗಾ ನದಿಗಳು ಉಕ್ಕಿ ಹರಿಯುತ್ತಿವೆ. ಇದರಿಂದ ಕೃಷ್ಣಾ ಸೇರಿ ಉಪ ನದಿಗಳಿಗೆ ಅಡ್ಡಲಾಗಿ ನಿರ್ಮಿಸಿರುವ ಒಟ್ಟು 6 ಸೇತುವೆಗಳು ಜಲಾವೃತಗೊಂಡಿವೆ. ಕೊಲ್ಲಾಪೂರ ಹಾಗೂ ಸಾಂಗಲಿ ಜಿಲ್ಲೆಯ ಸುಮಾರು 54 ಕೆಳ ಹಂತದ ಸೇತುವೆಗಳು ಜಲಾವೃತಗೊಂಡಿವೆ.

    ಕೃಷ್ಣಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಕಲ್ಲೋಳ- ಯಡೂರು ಸೇತುವೆ, ವೇದಗಂಗಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಕಾರದಗಾ-ಭೋಜ ಸೇತುವೆ, ಭೋಜವಾಡಿ-ಕುನ್ನೂರು, ಅಕ್ಕೋಳ-ಸಿದ್ನಾಳ, ಜತ್ರಾಟ-ಭಿವಶಿ ಮತ್ತು ದೂದಗಂಗಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ದತ್ತವಾಡ – ಮಲಿಕವಾಡ ಗ್ರಾಮಗಳ ಸೇತುವೆಗಳು ಜಲಾವೃತಗೊಂಡಿವೆ. ಇದರಿಂದ ಚಿಕ್ಕೋಡಿಯ 12 ಗ್ರಾಮದ ಜನರು ಪರ್ಯಾಯ ಮಾರ್ಗವಾಗಿ ಸಂಚಾರ ಮಾಡುತ್ತಿದ್ದಾರೆ.

  • ಸತತ 4 ವರ್ಷಗಳ ನಂತರ ಹೇಮಾವತಿ ಭರ್ತಿ

    ಸತತ 4 ವರ್ಷಗಳ ನಂತರ ಹೇಮಾವತಿ ಭರ್ತಿ

    ಹಾಸನ: ಪಶ್ಚಿಮ ಘಟ್ಟಗಳ ಮಲೆನಾಡು ಭಾಗದಲ್ಲಿ ಉತ್ತಮ ಮಳೆಯ ಪರಿಣಾಮ ಹಾಸನದ ಗೊರೂರು ಹೇಮಾವತಿ ಜಲಾಶಯ ಭರ್ತಿಯಾಗುವ ಹಂತ ತಲುಪಿದೆ.

    ಜಿಲ್ಲೆಯಾದ್ಯಂತ ಮಳೆ ಆರ್ಭಟ ಜೋರಾಗಿದೆ. ಮಲೆನಾಡು ಭಾಗದ ಸಕಲೇಶಪುರ, ಆಲೂರು, ಬೇಲೂರು ಹಾಗೂ ಅರಕಲಗೂಡು ತಾಲೂಕುಗಳಲ್ಲಿ ಎಡೆಬಿಡದೆ ಮಳೆ ಸುರಿಯುತ್ತಿದೆ. ಇದರಿಂದಾಗಿ ಜನಜೀವನ ಕೂಡ ಅಸ್ತವ್ಯಸ್ತವಾಗಿದೆ. ಚಿಕ್ಕಮಗಳೂರು ಸೇರಿದಂತೆ ಮಲೆನಾಡು ಭಾಗದಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ಜಿಲ್ಲೆಯ ಜೀವನದಿ ಹೇಮಾವತಿ ಒಳಹರಿವು 20 ಸಾವಿರ ಕ್ಯೂಸೆಕ್ ದಾಟಿದೆ. ಇದನ್ನೂ ಓದಿ: ಕೆಆರ್ ಎಸ್ ಭರ್ತಿಗೆ ಇನ್ನು 13 ಅಡಿ ಬಾಕಿ -5 ದಿನಗಳ ಕಾಲ ರಾಜ್ಯಾದ್ಯಂತ ಮಳೆ

    ಜಲಾಶಯದ ನೀರಿನ ಮಟ್ಟ 2,913 ಅಡಿಗೇರಿದೆ. ಜಲಾಶಯದ ಗರಿಷ್ಠ ಮಟ್ಟ 2,922 ಅಡಿಗಳಾಗಿದ್ದು, ಡ್ಯಾಂ ಭರ್ತಿಗೆ ಕೇವಲ 9 ಅಡಿ ನೀರು ಬರಬೇಕಿದೆ. ಮಳೆ ಹೀಗೇ ಮುಂದುವರಿದರೆ ಒಂದೆರಡು ದಿನಗಳಲ್ಲಿ ಹೇಮಾವತಿ ಭರ್ತಿಯಾಗಲಿದ್ದಾಳೆ. ಈ ಹಿನ್ನೆಲೆಯಲ್ಲಿ ಯಾವುದೇ ಕ್ಷಣದಲ್ಲಾದರೂ, ಕ್ರಸ್ಟ್ ಗೇಟ್ ಗಳ ಮೂಲಕ ನದಿಗೆ ನೀರು ಬಿಡುವ ಸಾಧ್ಯತೆ ಇದ್ದು, ನದಿಪಾತ್ರದ ಜನರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಹೇಮಾವತಿ ಜಲಾಶಯದ ಅಧಿಕಾರಿಗಳು ಸೂಚಿಸಿದ್ದಾರೆ. ಅತಿ ಖುಷಿಯ ಸಂಗತಿ ಎಂದರೆ ಸತತ 4 ವರ್ಷಗಳ ನಂತರ ಜೀವನದಿ ಭರ್ತಿ ಹಂತ ತಲುಪಿರುವುದು ಹೇಮೆ ನಂಬಿರುವ ಲಕ್ಷಾಂತರ ಜನರಲ್ಲಿ ಹರ್ಷ ತರಿಸಿದೆ.

    ಈ ಮೂಲಕ ನಿರಂತರ ಬರದ ಬೇಗೆ ನೀಗಲಿದೆ ಎಂಬ ಆಶಾಭಾವ ರೈತರದ್ದು, ಮತ್ತೊಂದೆಡೆ ಜನಜೀವನ ಅಸ್ತವ್ಯಸ್ತವಾಗಿದ್ದು, ಕೃಷಿ ಚಟುವಟಿಕೆಗೂ ಕೆಲವೆಡೆ ಹಿನ್ನಡೆಯಾಗಿದೆ. ಅರಕಲಗೂಡು, ಹಾಸನ ಮೊದಲಾದ ಕಡೆಗಳಲ್ಲಿ ತಂಬಾಕು, ಆಲೂಗೆಡ್ಡೆ ಮೊದಲಾದ ಬೆಳೆ ಅತಿವೃಷ್ಟಿಯಿಂದ ಹಾಳಾಗಿದೆ. ಸಕಲೇಶಪುರ ವಿವಿಧೆಡೆ ಗುಡ್ಡ ಕುಸಿತ ಉಂಟಾಗಿದೆ. ಹೆಚ್ಚು ಮಳೆಗೆ ವಿದ್ಯುತ್ ಕಂಬ ಮುರಿದು ಬಿದ್ದು, ಕಾಡಂಚಿನ ಗ್ರಾಮಗಳಲ್ಲಿ ಕರೆಂಟ್ ಕೈ ಕೊಟ್ಟಿದ್ದು, ಜನರು ಪರದಾಡುವಂತಾಗಿದೆ. ಬೆಳೆನಷ್ಟಕ್ಕೆ ಸೂಕ್ತ ಪರಿಹಾರ ನೀಡುವಂತೆ ರೈತರು ಮನವಿ ಮಾಡಿದ್ದಾರೆ.

  • ಶಿವಮೊಗ್ಗ ಜಿಲ್ಲೆಯಾದ್ಯಂತ ಉತ್ತಮ ಮಳೆ- ತೀರ್ಥಹಳ್ಳಿ, ಸಾಗರ, ಹೊಸನಗರ ತಾಲೂಕಿನ ಎಲ್ಲಾ ಶಾಲಾ ಕಾಲೇಜುಗಳಿಗೆ ರಜೆ

    ಶಿವಮೊಗ್ಗ ಜಿಲ್ಲೆಯಾದ್ಯಂತ ಉತ್ತಮ ಮಳೆ- ತೀರ್ಥಹಳ್ಳಿ, ಸಾಗರ, ಹೊಸನಗರ ತಾಲೂಕಿನ ಎಲ್ಲಾ ಶಾಲಾ ಕಾಲೇಜುಗಳಿಗೆ ರಜೆ

    ಶಿವಮೊಗ್ಗ: ಜಿಲ್ಲೆಯಾದ್ಯಂತ ಉತ್ತಮ ಮಳೆಯಾಗುತ್ತಿದೆ. ನದಿಗಳು- ಹಳ್ಳ-ಕೊಳ್ಳಗಳು ತುಂಬಿ ಅಪಾಯದ ಮಟ್ಟದಲ್ಲಿ ಹರಿಯುತ್ತಿವೆ. ಈ ಹಿನ್ನೆಲೆಯಲ್ಲಿ ಎಚ್ಚರಿಕೆಯಿಂದ ಇರುವಂತೆ ಜಿಲ್ಲಾಡಳಿತ ಸೂಚನೆ ನೀಡಿದೆ.

    ಶಿಥಿಲಾವಸ್ಥೆಯಲ್ಲಿರುವ ಮನೆ, ಕಟ್ಟಡಗಳಲ್ಲಿರುವ ವಾಸ್ತವ್ಯ ಸ್ಥಳಾಂತರಿಸಬೇಕು. ಕಾಲುಹಾದಿ, ಕಾಲು ಸಂಕ, ಹರಿಯುವ ನೀರಿನ ಬದಿಗಳಲ್ಲಿ ನಡೆಯುವ ಸಂದರ್ಭಗಳಲ್ಲಿ ಅತ್ಯಂತ ಎಚ್ಚರಿಕೆ ವಹಿಸಬೇಕು. ಸಣ್ಣ ಮಕ್ಕಳನ್ನು ಅಂತಹ ಸ್ಥಳಗಳಿಗೆ ಒಬ್ಬಂಟಿಯಾಗಿ ಕಳುಹಿಸಬಾರದು. ಅತಿ ಹೆಚ್ಚು ಮಳೆಯಾಗುತ್ತಿರುವ ತೀರ್ಥಹಳ್ಳಿ, ಸಾಗರ ಮತ್ತು ಹೊಸನಗರ ತಾಲೂಕಿನ ಎಲ್ಲಾ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಮಕ್ಕಳು ಆದಷ್ಟು ಮನೆಯೊಳಗೆ ಸುರಕ್ಷಿತವಾಗಿರಬೇಕು ಎಂದು ಜಿಲ್ಲಾಡಳಿತ ಸೂಚಿಸಿದೆ.

    ಜಿಲ್ಲೆಯ ನದಿಗಳಾದ ತುಂಗ-ಭದ್ರಾ, ಮಾಲತಿ, ಶರಾವತಿ ನದಿಗಳಲ್ಲಿ ನೀರಿನ ಹರಿವು ತೀವ್ರ ಪ್ರಮಾಣದಲ್ಲಿ ಹೆಚ್ಚಾಗಿದೆ. ತೀರ್ಥಹಳ್ಳಿಯ ತಗ್ಗು ಪ್ರದೇಶದ ಗದ್ದೆಗಳಲ್ಲಿ ನೀರು ನಿಂತಿದೆ. ಇದೇ ಮಳೆ ಪ್ರಮಾಣ ಮುಂದುವರೆದಲ್ಲಿ ತೀವ್ರ ಹಾನಿ ಸಾಧ್ಯತೆ ಹೆಚ್ಚಾಗಿದೆ.

  • ವರುಣನ ರೌದ್ರಾವತಾರಕ್ಕೆ ತುಂಬಿದ ಕೆರೆ-ಕುಂಟೆ – ದಕ್ಷಿಣ ಕನ್ನಡ, ಉಡುಪಿ ಶಾಲಾ-ಕಾಲೇಜುಗಳಿಗೆ ರಜೆ

    ವರುಣನ ರೌದ್ರಾವತಾರಕ್ಕೆ ತುಂಬಿದ ಕೆರೆ-ಕುಂಟೆ – ದಕ್ಷಿಣ ಕನ್ನಡ, ಉಡುಪಿ ಶಾಲಾ-ಕಾಲೇಜುಗಳಿಗೆ ರಜೆ

    ಬೆಂಗಳೂರು: ದಿನೇ ದಿನೇ ವರುಣನ ಆರ್ಭಟ ಹೆಚ್ಚಾಗುತ್ತಿದ್ದು, ಕೆರೆ, ಕುಂಟೆ ಮತ್ತು ನದಿಗಳು ತುಂಬಿ ಹರಿಯುತ್ತಿದೆ. ಇದರಿಂದ ಜನರ ಜೀವನ ಅಸ್ತವ್ಯಸ್ತವಾಗಿದೆ.

    ಕರಾವಳಿಯಲ್ಲಿ ಸ್ವಲ್ಪ ಬಿಡುವು ಕೊಟ್ಟ ವರುಣ ಈಗ ಉಡುಪಿ, ಮಡಿಕೇರಿ, ಚಿಕ್ಕಮಗಳೂರು ಭಾಗಗಳಲ್ಲಿ ಅಬ್ಬರಿಸುತ್ತಿದ್ದಾನೆ. ಎಲ್ಲಿ ನೋಡಿದರು ನೀರು ನಿಂತಿದ್ದು, ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನು ನಾಲ್ಕು ದಿನ ಭಾರೀ ಮಳೆಯ ಮುನ್ಸೂಚನೆ ಇರುವುದರಿಂದ ಕೊಡಗು, ಉಡುಪಿ, ದಕ್ಷಿಣಕನ್ನಡ ಜಿಲ್ಲೆಯಲ್ಲಿ ಶಾಲಾ ಕಾಲೇಜುಗಳಿಗೆ ಇಂದು ಕೂಡ ರಜೆ ಘೋಷಿಸಲಾಗಿದೆ. ಇದನ್ನೂ ಓದಿ: ರಾತ್ರಿಯಿಂದ ಸುರಿದ ಧಾರಾಕಾರ ಮಳೆ- ಜನ ಜೀವನ ಅಸ್ತವ್ಯಸ್ತ, ಶಾಲಾ ಕಾಲೇಜುಗಳಿಗೆ ರಜೆ!

    ಇನ್ನು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈಗಾಗಲೇ ಎನ್‍ಡಿಆರ್ ತಂಡ ಆಯಕಟ್ಟಿನ ಜಾಗಗಳಲ್ಲಿ ನಿಯೋಜನೆಗೊಂಡಿದೆ. ಮೂಲ್ಕಿ ಭಾಗದಲ್ಲಿ ನೆರೆಗೆ ಕಾರಣವಾಗಿದ್ದ ಶಾಂಭವಿ ನದಿಯಲ್ಲಿ ನೀರು ಇಳಿಕೆಯಾಗಿದೆ. ಆದರು ಇಲ್ಲಿನ ಕೃಷಿ ಜಮೀನು, ತಗ್ಗು ಪ್ರದೇಶದ ಮನೆಗಳಿಗೆ ನುಗ್ಗಿದ್ದ ನೀರು ಕಡಿಮೆಯಾಗಿಲ್ಲ. ಹೀಗಾಗಿ ಶಿಬರೂರು, ಕಿಲೆಂಜೂರು ಭಾಗದ ಸಂತ್ರಸ್ತರಿಗಾಗಿ ಪ್ರಾಥಮಿಕ ಶಾಲೆಗಳಲ್ಲಿ ತಾತ್ಕಾಲಿಕ ಗಂಜಿ ಕೇಂದ್ರ ಆರಂಭಿಸಲಾಗಿದೆ.

    ಬಿಟ್ಟು ಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಹಳ್ಳಕೊಳ್ಳಗಳು, ಕೆರೆಗಳು ತುಂಬಿ ಹರಿಯುತ್ತಿದ್ದು, ನದಿಗಳಲ್ಲಿ ನೀರಿನ ಹರಿವು ಹೆಚ್ಚಾಗಿದೆ. ಕೆಆರ್‍ಎಸ್ ಭರ್ತಿಗೆ ಇನ್ನು 15.45 ಅಡಿ ಬಾಕಿ ಇದ್ದು, ಒಳಹರಿವು 10,124 ಕ್ಯೂಸೆಕ್ ಇದ್ದರೆ, ಹೊರ ಹರಿವು 3,494 ಕ್ಯೂಸೆಕ್ ಇದೆ. ಬರೋಬ್ಬರಿ 15 ವರ್ಷಗಳ ಬಳಿಕ ಒಂದೇ ತಿಂಗಳಲ್ಲಿ ತುಂಗಭದ್ರಾ ಡ್ಯಾಂನಲ್ಲಿ 42 ಟಿಎಂಸಿ ನೀರು ಸಂಗ್ರಹವಾಗಿದೆ. ಇನ್ನು ಹಾರಂಗಿ ಜಲಾಶಯ ಭರ್ತಿಯಾಗಿದ್ದು ಒಳ ಹರಿವು ಹೆಚ್ಚಳವಾಗಿದೆ.

    ನಿರಂತರ ಮಳೆಯಿಂದಾಗಿ ಪಶ್ಚಿಮ ಘಟ್ಟದಿಂದ ಹರಿದು ಬರುವ ಬಹುತೇಕ ನದಿಗಳು ತುಂಬಿಕೊಂಡಿದೆ. ಗಡಿನಾಡು ಕಾಸರಗೋಡು ಜಿಲ್ಲೆಯ ಇತಿಹಾಸ ಪ್ರಸಿದ್ಧ ಮಧೂರು ಸಿದ್ಧಿವಿನಾಯಕ ಕ್ಷೇತ್ರಕ್ಕೆ ನದಿಯ ನೆರೆ ನೀರು ನುಗ್ಗಿದೆ. ದೇವಸ್ಥಾನದ ಅಂಗಣದ ಒಳಭಾಗದಲ್ಲಿ ಭಾನುವಾರ ರಾತ್ರಿಯಿಂದ ಎರಡು ಅಡಿಯಷ್ಟು ನೀರು ನಿಂತಿತ್ತು. ಬೆಳಗ್ಗೆ ಮತ್ತು ಮಧ್ಯಾಹ್ನದ ಪೂಜೆಗಳು ನೀರಿನ ಮಧ್ಯೆಯೇ ನಡೆದಿದೆ. ಭಕ್ತರು ನೀರಿನಲ್ಲಿ ನಿಂತೇ ದೇವರ ಸೇವೆ ಪೂರೈಸಿದ್ದಾರೆ. ದೇವಸ್ಥಾನದ ಮುಂಭಾಗದಲ್ಲಿ ಹರಿಯುವ ಮಧುವಾಹಿನಿ ಹೊಳೆಯಲ್ಲಿ ನೀರಿನ ಪ್ರಮಾಣ ಏರಿಕೆಯಾದಾಗ ಪ್ರತಿವರ್ಷವೂ ನೆರೆ ನೀರು ದೇಗುಲಕ್ಕೆ ನುಗ್ಗುತ್ತದೆ.

    ಉಡುಪಿ ಜಿಲ್ಲೆಯಲ್ಲಿ ಮೂರು ದಿನ ನಿರಂತರ ಮುಂಗಾರು ಮಳೆ ಆರ್ಭಟಿಸಿದ್ದು ಸ್ವರ್ಣಾ ನದಿ ಉಕ್ಕಿ ಹರಿದಿದೆ. ನದಿಯ ರಭಸಕ್ಕೆ ಬಜೆ ಅಣೆಕಟ್ಟು ಸಂಪೂರ್ಣ ಮುಳುಗಡೆಯಾಗಿದೆ. ಕಾರ್ಕಳ, ಉಡುಪಿಯಲ್ಲಿ ಸುರಿದ ಧಾಕಾರಾರ ಮಳೆ ಪರಿಣಾಮ ಅಣೆಕಟ್ಟು ಮೇಲಿಂದ ನದಿ ತುಂಬಿ ಹರಿಯುತ್ತಿದೆ. ಸುತ್ತ ಮುತ್ತಲಿನ ತೋಟಗಳಿಗೆ ನದಿ ನೀರು ನುಗ್ಗಿದೆ. ಪುನರ್ವಸು ಮಳೆಗೆ ಉಡುಪಿ ಜಿಲ್ಲೆ ತತ್ತರಗೊಂಡಿದ್ದು ಅಪಾರ ಪ್ರಮಾಣದ ಹಾನಿ ಸಂಭವಿಸಿದೆ.

    ಉಡುಪಿನಗರ, ಮಲ್ಪೆ, ಬ್ರಹ್ಮಾವರ ಮತ್ತು ಕೋಟ ಭಾಗಗಳಲ್ಲಿ ಹಲವು ಮನೆಗಳಿಗೆ ನೀರು ನುಗ್ಗಿವೆ. ಕುಂದಾಪುರದ ಖಾರ್ವಿಕೆರೆಯಲ್ಲಿ ಮೂರು ಮನೆಗಳು ಕುಸಿದಿವೆ. ಕೊಲ್ಲೂರಿನಲ್ಲಿ ಮಳೆಯಿಂದಾಗಿ ಜನಜೀವನ ಅಕ್ಷರಶಃ ಅಸ್ತವ್ಯಸ್ತಗೊಂಡಿತು. ಇನ್ನು ಕಾರ್ಕಳ ತಾಲೂಕಿನಲ್ಲೂ ಅತಿ ಹೆಚ್ಚು ಮಳೆಯಾಗಿದೆ. ಕಟಪಾಡಿಯ ಕಲ್ಲಾಪುವಿನಲ್ಲಿ ರಾಷ್ಡ್ರೀಯ ಹೆದ್ದಾರಿಯಲ್ಲಿ ನೆರೆ ನೀರು ಆವರಿಸಿದೆ. ನೆರೆಪೀಡಿತ ಪ್ರದೇಶಗಳಿಗೆ ಜಿಲ್ಲಾಧಿಕಾರಿ ಭೇಟಿ ನೀಡಿದ್ದು, ತುರ್ತು ಕಾಮಗಾರಿಗೆ ಆದೇಶ ನೀಡಿದ್ದಾರೆ.

  • 4 ವರ್ಷಗಳ ಬಳಿಕ ತುಂಬಿದ ಹೇಮಾವತಿ ನದಿಗೆ ಬಾಗಿನ

    4 ವರ್ಷಗಳ ಬಳಿಕ ತುಂಬಿದ ಹೇಮಾವತಿ ನದಿಗೆ ಬಾಗಿನ

    ಚಿಕ್ಕಮಗಳೂರು: ಕಳೆದ ಮೂರು-ನಾಲ್ಕು ವರ್ಷಗಳಿಂದ ನೀರಿಲ್ಲದೆ ಸೊರಗಿದ್ದ ಹೇಮಾವತಿ ನದಿ ಕುಂಭದ್ರೋಣ ಮಳೆಯಿಂದಾಗಿ ಮೈದುಂಬಿ ಹರಿಯುತ್ತಿದೆ.

    ಜಿಲ್ಲೆಯ ಮೂಡಿಗೆರೆ ತಾಲೂಕಿನ ಜಾವಳಿ ಸಮೀಪ ಹುಟ್ಟೋ ಹೇಮಾವತಿ ನದಿ ಕಳೆದ ಹದಿನೈದು ದಿನಗಳಿಂದು ಸುರಿಯುತ್ತಿರುವ ಮಳೆಗೆ ಮೈದುಂಬಿ ಹರಿಯುತ್ತಿದ್ದು, ನದಿಯ ಇಕ್ಕೆಲಗಳ ಜಮೀನು ಕೂಡ ಜಲಾವೃತಗೊಂಡಿದೆ. ಈ ಹಿನ್ನೆಲೆಯಲ್ಲಿ ಕಳೆದ ನಾಲ್ಕು ವರ್ಷಗಳಿಂದ ಮೈದುಂಬಿ ಹರಿಯದ ಹೇಮಾವತಿ ನದಿಗೆ ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿ ಬಾಗಿನ ಅರ್ಪಿಸಿದ್ದಾರೆ.

    ಹೇಮಾವತಿ ಮೈದುಂಬಿ ಹರಿಯುತ್ತಿರುವುದರಿಂದ ಜನ ಕೂಡ ಸಂತಸ ವ್ಯಕ್ತಪಡಿಸಿದ್ದಾರೆ. ಈ ವೇಳೆ ಮಾತನಾಡಿದ ಅವರು, ನಮ್ಮ ಮಲೆನಾಡಿನ ಜೀವನದಿಯ ಉಗಮ ಸ್ಥಾನವಾದ ಹೇಮಾವತಿ ನದಿ ಈ ಬಾರಿ ಮಳೆಯಿಂದ ಭರ್ತಿಯಾಗಿದೆ. ಸಮೃದ್ಧಿ ಮಳೆಯಾಗಿರುವುದರಿಂದ ಮೊಟ್ಟ ಮೊದಲ ಬಾರಿಗೆ ಈ ನದಿಗೆ ಬಾಗಿನ ಕೊಟ್ಟಿದ್ದೇವೆ. ಇಲ್ಲಿ ತುಂಬಿ ಮೈಸೂರು ನಗರದ ಕೆಆರ್ ಎಸ್ ಗೆ ಹೋಗಿ ತಲುಪುತ್ತದೆ. ಇದರಿಂದ ರೈತರಿಗೆ ಅನುಕೂಲವಾಗಲಿ ಎಂದು ಹೇಳಿದ್ದಾರೆ.

  • ಬೋಟ್ ನಲ್ಲಿಯೇ ಸಾಗುತ್ತಿದೆ 6 ಗ್ರಾಮಗಳ ಗ್ರಾಮಸ್ಥರ ಜೀವ

    ಬೋಟ್ ನಲ್ಲಿಯೇ ಸಾಗುತ್ತಿದೆ 6 ಗ್ರಾಮಗಳ ಗ್ರಾಮಸ್ಥರ ಜೀವ

    ಬಾಗಲಕೋಟೆ: ದಿನನಿತ್ಯ ಜೀವ ಕೈಯಲ್ಲಿ ಹಿಡಿದುಕೊಂಡು ಮಹಿಳೆಯರು, ಮಕ್ಕಳು ಸಾಗುವಂತಹ ಪ್ರಯಾಣವನ್ನು ಜಿಲ್ಲೆಯ ಜನರು ಮಾಡುತ್ತಿದ್ದಾರೆ.

    ಬಾಗಲಕೋಟೆ ಪಟ್ಟಣದ ಬಳಿಯಿರುವ ಘಟಪ್ರಭಾ ನದಿಯಲ್ಲಿ ಮಳೆಗಾಲ ಬಂತೆಂದರೆ ಬಾಗಲಕೋಟೆ ಸಮೀಪದ ಕದಾಂಪುರ, ಯಂಕಂಚಿ, ಶಾಳಗೊಂದಿ, ನಕ್ಕರಗುಂದಿ ಸೇರಿದಂತೆ 6 ಗ್ರಾಮಗಳು ನಡುಗಡ್ಡೆಯಂತಾಗುತ್ತವೆ. ಈ ವೇಳೆ ಗ್ರಾಮಸ್ಥರು ಬಾಗಲಕೋಟೆಗೆ ಬರಲು ದೋಣಿ ಪ್ರಯಾಣ ಅವಲಂಬಿಸಿದ್ದಾರೆ. ಬಸ್ ನಲ್ಲಿ ಬಾಗಲಕೋಟೆಗೆ ಬರಬೇಕಾದರೆ 35 ಕಿಮೀ ಸುತ್ತುವರೆದು ಬರಬೇಕು. ಇದರಿಂದ ಸಮಯ, ದುಡ್ಡು ಎರಡೂ ವ್ಯರ್ಥ ಅನ್ನುವುದು ಜನರ ಅಭಿಪ್ರಾಯ. ಇದರಿಂದ ದಿನಬೆಳಗಾದರೆ ತರಕಾರಿ, ಮೊಸರು, ಹಾಲು ಮಾರಲು ಬರುವ ಮಹಿಳೆಯರು, ರೈತರು ಶಾಲಾ ಕಾಲೇಜ್ ಮಕ್ಕಳು ಈ ಬೋಟ್ ಮೂಲಕ ನಗರಕ್ಕೆ ಬರುತ್ತಾರೆ.

    ನದಿಯಲ್ಲಿ ಜೀವ ಭಯದಿಂದ ಸಂಚರಿಸುವ ಇವರ ಪ್ರಯಾಣ ತುಂಬಾನೆ ಅಪಾಯಕಾರಿಯಾಗಿದೆ. ಈ ಪರಿಸ್ಥಿತಿಗೆ ಗ್ರಾಮಗಳನ್ನು ಸಂಪೂರ್ಣ ಸ್ಥಳಾಂತರಿಸದೆ ಇರೋದೆ ಕಾರಣ. ಆಲಮಟ್ಟಿ ಹಿನ್ನೀರಿನ ನದಿಯಲ್ಲಿನ ಈ ಪ್ರಯಾಣದಲ್ಲಿ ಯಾವುದೇ ರೀತಿ ಸುರಕ್ಷತೆ ಕ್ರಮ ಕೈಗೊಂಡಿಲ್ಲ. ಯಾವುದೇ ಒಂದು ದೋಣಿಯಲ್ಲಿ ಪ್ರಯಾಣಿಸಬೇಕಾದರೆ ಅಲ್ಲಿ ಸುರಕ್ಷಾ ಜಾಕೆಟ್ ಗಳು, ದೋಣಿ ಟ್ಯೂಬ್‍ಗಳು ಇರಬೇಕಾಗುತ್ತದೆ. ಆದರೆ ಇಲ್ಲಿನ ದೋಣಿಗಳಲ್ಲಿ ಇಂತಹ ಯಾವುದೇ ಪರಿಕರಗಳಿಲ್ಲ. ಇದರಿಂದ ನೀರಿನ ಜೋರಾದ ಅಲೆಗಳಿಗೆ ದೋಣಿ ಮುಗುಚಿದರೆ ಜನ ನದಿನೀರಿನಲ್ಲಿ ಲೀನವಾಗೋದಂತೂ ಖಚಿತ.

    ಇನ್ನು ದಿನಾಲು ತರಕಾರಿ, ಹಾಲು, ಮೊಸರು ಮಾರಲು ಬರುವ ಮಹಿಳೆಯರು ವೃದ್ಧರೂ ಈ ದೋಣಿ ಮೂಲಕವೇ ಪ್ರಯಾಣ ಮಾಡುತ್ತಿದ್ದಾರೆ. ಗ್ರಾಮದಿಂದ ಬಾಗಲಕೋಟೆ ನಗರಕ್ಕೆ ಸುತ್ತುವರೆದು ಬರಬೇಕು. ಇನ್ನು ಈ ಬಗ್ಗೆ ಬಂದರು ಮತ್ತು ಜಲಸಾರಿಗೆ ಅಧಿಕಾರಿಗಳನ್ನು ಕೇಳಿದರೆ, ಪ್ರತಿ ವರ್ಷ ನದಿ ತುಂಬಿದಾಗ ಇಲ್ಲಿ ದೋಣಿ ಪ್ರಯಾಣ ಸಾಮಾನ್ಯವಾಗಿದೆ. ಸುರಕ್ಷತೆಗಾಗಿ ಜಾಕೆಟ್ ಗಳು ಮತ್ತು ಟ್ಯೂಬ್ ಗಳಿದ್ದು, ಇದೀಗ ದೋಣಿ ಪ್ರಯಾಣ ಶುರುವಾಗಿದ್ದರಿಂದ ಅವುಗಳನ್ನು ದೋಣಿಯಲ್ಲಿ ಇಟ್ಟಿರಲಿಲ್ಲ. ಕೂಡಲೆ ಅವುಗಳನ್ನು ದೋಣಿಯಲ್ಲಿರಿಸಿ ದೋಣಿ ಪ್ರಯಾಣಿಕರ ಸುರಕ್ಷತೆಗೆ ಕ್ರಮಕೈಗೊಳ್ಳುತ್ತೇವೆ ಎನ್ನುತ್ತಾರೆ.

  • ವರುಣ ಗಂಡಾಂತರ..!!

    ವರುಣ ಗಂಡಾಂತರ..!!

    https://www.youtube.com/watch?v=L0GOYEXpDpA

  • ಮಳೆಯೋ ಮಳೆ..!

    ಮಳೆಯೋ ಮಳೆ..!

    https://www.youtube.com/watch?v=U_X1zNND338