Tag: ನದಿ

  • ಪ್ರತೀತಿಯಂತೆ ದೇವಿಗೆ ನೈಸರ್ಗಿಕ ಅಭಿಷೇಕ ಮಾಡಿದ ಕುಬ್ಜಾ ನದಿ

    ಪ್ರತೀತಿಯಂತೆ ದೇವಿಗೆ ನೈಸರ್ಗಿಕ ಅಭಿಷೇಕ ಮಾಡಿದ ಕುಬ್ಜಾ ನದಿ

    ಉಡುಪಿ: ಕುಂದಾಪುರ ತಾಲೂಕಿನ ಪ್ರಸಿದ್ಧ ಕಮಲಶಿಲೆ ಬ್ರಾಹ್ಮಿ ದುರ್ಗಾಪರಮೇಶ್ವರಿ ದೇವಾಲಯಕ್ಕೆ ಪ್ರತೀತಿಯಂತೆ ಕುಬ್ಜಾ ನದಿಯು ನೈಸರ್ಗಿಕ ಅಭಿಷೇಕ ಮಾಡಿದೆ.

    ಜಿಲ್ಲೆಯ ಪ್ರಸಿದ್ಧ ಪುಣ್ಯಕ್ಷೇತ್ರಗಳಲ್ಲೊಂದಾದ ಕುಂದಾಪುರ ತಾಲೂಕಿನ ಕಮಲಶೀಲೆ ಬ್ರಾಹ್ಮಿ ದುರ್ಗಾಪರಮೇಶ್ವರ ದೇವಾಲಯದಲ್ಲಿನ ದೇವಿಗೆ ನೈಸರ್ಗಿಕ ಅಭಿಷೇಕವಾಗಿದೆ. ಕುಬ್ಜಾ ನದಿಯ ಪಕ್ಕದಲ್ಲೇ ಪುಣ್ಯಕ್ಷೇತ್ರವಿದ್ದು, ಮೈದುಂಬಿ ಹರಿಯುತ್ತಿರುವ ಕುಬ್ಜಾನದಿಯು ಇಂದು ಬೆಳಗಿನ ಜಾವದಂದು ದೇವಾಲಯ ಆವರಣ ಹಾಗೂ ಗರ್ಭಗುಡಿಯೊಳಗೆ ನುಗ್ಗಿದೆ.

    ಪ್ರತೀ ವರ್ಷದ ವಾಡಿಕೆಯಂತೆ ಗರ್ಭಗುಡಿಗೆ ಬಂದ ನೀರು, ದೇವಿಯನ್ನು ಅಭಿಷೇಕ ಮಾಡುತ್ತದೆ. ದೇವಸ್ಥಾನಕ್ಕೆ ನೀರು ನುಗ್ಗುತ್ತಿದ್ದಂತೆ ಅರ್ಚಕರುಗಳು ದೇವಿಗೆ ವಿಶೇಷ ಮಂಗಳಾರತಿ ಮಾಡಿ ವಂದನೆ ಸಲ್ಲಿಸಿದರು. ಅನಾಧಿಕಾಲದಿಂದ ವರ್ಷಕ್ಕೊಂದು ಬಾರಿ ದೇವಿಗೆ ಕುಬ್ಜಾ ನದಿಯು ನೈಸರ್ಗಿಕವಾಗಿ ಅಭಿಷೇಕ ಮಾಡುತ್ತಾ ಬಂದಿರುವುದು ವಿಶೇಷವಾಗಿದೆ ಎಂದು ದೇವಾಲಯದ ಪ್ರಧಾನ ಅರ್ಚಕರು ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

  • ಕರ್ನಾಟಕ ಸೇರಿ ದೇಶದ ಹಲವೆಡೆ ಮುಂದುವರಿದ ಮಳೆ – ಕರಾವಳಿ, ಮಲೆನಾಡು ಭಾಗದಲ್ಲಿ ಶಾಲಾ, ಕಾಲೇಜುಗಳಿಗೆ ರಜೆ

    ಕರ್ನಾಟಕ ಸೇರಿ ದೇಶದ ಹಲವೆಡೆ ಮುಂದುವರಿದ ಮಳೆ – ಕರಾವಳಿ, ಮಲೆನಾಡು ಭಾಗದಲ್ಲಿ ಶಾಲಾ, ಕಾಲೇಜುಗಳಿಗೆ ರಜೆ

    ಬೆಂಗಳೂರು: ಕರ್ನಾಟಕ ಸೇರಿ ದೇಶದ ಹಲವೆಡೆ ವರುಣ ತಂದ ಅವಾಂತರ ಅಷ್ಟಿಷ್ಟಲ್ಲ. ಕಂಡು ಕೇಳರಿಯದ ಮಳೆಗೆ ಕೇರಳ ಅಕ್ಷರಶಃ ನಲುಗಿ ಹೋಗಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಉತ್ತರ ಭಾರತದಲ್ಲೂ ಮೇಘಸ್ಫೋಟ ಮಳೆಯಿಂದ ಮನೆ, ಮರ, ಕಟ್ಟಡಗಳೆಲ್ಲಾ ಮುಳುಗಿ ಹೋಗಿವೆ. ರಾಜ್ಯದ ಪಶ್ಚಿಮಘಟ್ಟ ಹಾಗೂ ಕರಾವಳಿ, ಕೊಡಗು ಭಾಗದಲ್ಲಿ ಮಳೆ ಭಾರೀ ಅವಾಂತರ ಸೃಷ್ಟಿಸಿದೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಧಾರಾಕಾರ ಮಳೆ ಮುಂದುವರಿದಿದೆ. ಹೊಳೆಯಲ್ಲಿ ಕೊಚ್ಚಿ ಹೋಗಿದ್ದ ವೃದ್ಧನ ಶವ ಪತ್ತೆಯಾಗಿದೆ. ಜಿಲ್ಲೆಯಲ್ಲಿ ನದಿ-ತೊರೆಗಳು ಉಕ್ಕಿ ಹರಿಯುತ್ತಿದ್ದು ಮಂಗಳೂರು, ಬೆಳ್ತಂಗಡಿಯ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.

    ಹಾಸನ ಜಿಲ್ಲೆ ಸಕಲೇಶಪುರದಲ್ಲೂ ಮಳೆ ಮುಂದುವರಿದಿದ್ದು ಜನ ಜೀವನ ಅಸ್ತವ್ಯಸ್ತವಾಗಿದೆ. ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಸಕಲೇಶಪುರ ಮತ್ತು ಆಲೂರನಲ್ಲಿ ಮಳೆ ಮುಂದುವರಿದಿದೆ. ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ಭದ್ರಾ, ತುಂಗಾ ನದಿಗಳು ಅಪಾಯಮಟ್ಟ ಮೀರಿ ಹರೀತಿವೆ. ಜಮೀನುಗಳಿಗೆ ನೀರು ನುಗ್ಗಿದ್ದು ಮುಳ್ಳಯ್ಯನಗಿರಿ ಬಳಿ ಗುಡ್ಡ ಕುಸಿದಿದೆ. ಶೃಂಗೇರಿ, ಮೂಡಿಗೆರೆ, ಕೊಪ್ಪ, ಎನ್.ಆರ್.ಪುರದಲ್ಲೂ ಮಳೆ ಮುಂದುವರಿದಿದ್ದು ಶಾಲಾ-ಕಾಲೇಜಗಳಿಗೆ ರಜೆ ನೀಡಲಾಗಿದೆ. ಕೊಡಗಿನಲ್ಲೂ ಗಾಳಿ ಸಮೇತ ಭಾರೀ ಮಳೆಯಾಗುತ್ತಿದ್ದು ಭಾಗಮಂಡಲದ ತ್ರಿವೇಣಿ ಸಂಗಮ ಮತ್ತೊಮ್ಮೆ ಜಲಾವೃತವಾಗಿದೆ. ಭಾರೀ ಮಳೆಗೆ ಕಾವೇರಿ, ಕನ್ನಿಕೆ, ಸುಜೋತಿ ನದಿಗಳು ಮೈದುಂಬಿ ಹರಿಯುತ್ತಿವೆ. ಭಾರೀ ವರ್ಷಧಾರೆಯಿಂದ ಜನ ತತ್ತರಿಸಿದ್ದಾರೆ.

    ಉತ್ತರ ಕನ್ನಡ ಜಿಲ್ಲೆಯಲ್ಲೂ ಮಳೆ ಮುಂದುವರಿದಿದ್ದು ಶಿರಸಿ, ಸಿದ್ದಾಪುರ, ಯಲ್ಲಾಪುರ, ಕಾರವಾರ, ಅಂಕೋಲಾ ತಾಲೂಕಿನ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಶಿವಮೊಗ್ಗದಲ್ಲೂ ಮಳೆ ಮುಂದುವರಿದಿದ್ದು, ಜಿಲ್ಲೆಯ ತೀರ್ಥಹಳ್ಳಿ, ಹೊಸನಗರ ತಾಲೂಕಿನ ಶಾಲೆಗಳಿಗೆ ರಜೆ ನೀಡಲಾಗಿದೆ. ಕಾವೇರಿ ಕೊಳ್ಳದಲ್ಲಿಯೂ ಧಾರಾಕಾರ ಮಳೆ ಆಗುತ್ತಿರೋದರಿಂದ ಮಂಡ್ಯದ ಕೆಆರ್‍ಎಸ್ ಡ್ಯಾಂನಿಂದ 60 ಸಾವಿರ ಕ್ಯೂಸೆಕ್ ನೀರು ಬಿಡುಗಡೆ. ಕಬಿನಿಯಿಂದ ನೀರು ಬಿಟ್ಟ ಹಿನ್ನೆಲೆ ಎಲ್ಲೆಡೆ ಪ್ರವಾಹ ಭೀತಿ ಉಂಟಾಗಿದೆ.

    ತುಳುನಾಡು ಉಡುಪಿ ಜಿಲ್ಲೆಯಲ್ಲಿ ಸುಂಟರಗಾಳಿ ಸಹಿತ ಮಳೆ ಸುರಿದು 50ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದ್ದು, ಲಕ್ಷಾಂತರ ರೂಪಾಯಿ ನಷ್ಟವಾಗಿದೆ, ಕಾಪು ತಾಲೂಕಿನ ಪೆರ್ಣಂಕಿಲ ಗ್ರಾಮದ ಜಡ್ಡು, ಜನತಾನಗರ, ವರ್ವಾಡಿ ಸುತ್ತಮುತ್ತ ಮನೆಗಳ ಹಂಚು, ತಗಡು ಶೀಟುಗಳಿಗೆ ಹಾನಿಯಾಗಿದೆ. ಹಲಸು, ಮಾವು ಸಹಿತ ನೂರಾರು ಮರಗಳು, ವಿದ್ಯುತ್ ಕಂಬಗಳು ಧರೆಗುರುಳಿವೆ. ಕುಂದಾಪುರ ಬಳಿ ಟೆಂಪೋ ಮೇಲೆ ಮರದ ಕೊಂಬೆ ಬಿದ್ದು ಜಖಂ ಆಗಿದೆ. ಆದ್ರೆ ಟೆಂಪೋದಲ್ಲಿದ್ದ ತಂದೆ-ಮಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

    ಕೇರಳ:
    ನೆರೆಯ ಕೇರಳದಲ್ಲೂ ಮಳೆ ಅಬ್ಬರ ಮುಂದುವರಿದಿದೆ. ಮಳೆಯಿಂದಾಗಿ ಇದುವರೆಗೆ 40 ಮಂದಿ ಸಾವನ್ನಪ್ಪಿದ್ದಾರೆ. ಪಂಪಾ ನದಿ ಉಕ್ಕಿ ಹರಿಯುತ್ತಿರೋದ್ರಿಂದ ಶಬರಿಮಲೆಗೆ ಜಲದಿಗ್ಭಂಧನ ಹೇರಿದೆ. ಪ್ರವಾಹ ಪರಿಸ್ಥಿತಿಯಿಂದಾಗಿ ವನ್ಯಜೀವಿಗಳೂ ಒದ್ದಾಡಿ ಹೋಗಿವೆ. ಪೆರಿಯಾರ್ ನದಿಯಲ್ಲಿ ಮರಿಯಾನೆ ಸೇರಿ ಜಿಂಕೆಗಳು, ಮುಂಗೂಸಿಗಳು ಎಲ್ಲವೂ ಕೊಚ್ಚಿ ಹೋಗಿವೆ. ಹಿಮಾಚಲ ಪ್ರದೇಶದ ರಾಜಧಾನಿ ಶಿಮ್ಲಾದ ಮಂಡಿಯಲ್ಲಿ ಮೇಘಸ್ಫೋಟಕ್ಕೆ ಕೆಸರಿನ ಮಣ್ಣೆಲ್ಲಾ ಮನೆ, ಶಾಲಾ-ಕಾಲೇಜುಗಳಿಗೆ ನುಗ್ಗಿ ಅವಾಂತರ ಸೃಷ್ಟಿಸಿದೆ.

  • ರಮಣೀಯವಾಗಿ ಗೋಚರಿಸುತ್ತಿದೆ ಹೊಗೆನಕಲ್ ಫಾಲ್ಸ್: ಕಣ್ತುಂಬಿಕೊಳ್ಳಲು ಪ್ರವಾಸಿಗರಿಗೆ ಅವಕಾಶವಿಲ್ಲ

    ರಮಣೀಯವಾಗಿ ಗೋಚರಿಸುತ್ತಿದೆ ಹೊಗೆನಕಲ್ ಫಾಲ್ಸ್: ಕಣ್ತುಂಬಿಕೊಳ್ಳಲು ಪ್ರವಾಸಿಗರಿಗೆ ಅವಕಾಶವಿಲ್ಲ

    ಚಾಮರಾಜನಗರ: ಕಬಿನಿ ಮತ್ತು ಕೆಆರ್‍ಎಸ್ ನಿಂದ ಅಧಿಕ ಪ್ರಮಾಣದ ನೀರು ಹರಿಸಿರುವುದರಿಂದ ಹೊಗೆನಕಲ್ ಫಾಲ್ಸ್ ರಮಣೀಯವಾಗಿ ಗೋಚರಿಸುತ್ತಿದೆ.

    ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಗಡಿಯಲ್ಲಿರುವ ಹೊಗೆನಕಲ್ ಪ್ರದೇಶದಲ್ಲಿ ಎಲ್ಲಿ ನೋಡಿದರು ಬಂಡೆಗಳನ್ನು ಸೀಳಿಕೊಂಡು ಬರುವ ನೀರು ಗೋಚರವಾಗುತ್ತಿದೆ. ಆದರೆ ಈ ರಮಣೀಯ ದೃಶ್ಯವನ್ನು ಕಣ್ತುಂಬಿಕೊಳ್ಳಲು ಪ್ರವಾಸಿಗರಿಗೆ ಮಾತ್ರ ಅವಕಾಶವಿಲ್ಲ.

    ಅಧಿಕ ಪ್ರಮಾಣದಲ್ಲಿ ಇಲ್ಲಿ ನೀರು ಹರಿಯುತ್ತಿರುದರಿಂದ ಯಾವುದೇ ರೀತಿಯ ಅವಘಡಗಳು ಜರುಗಬಾರದೆಂದು ನೀರಿನ ರಭಸ ಕಡಿಮೆ ಆಗುವವರೆಗೂ ಪ್ರವಾಸಿಗರಿಗೆ ನಿಷೇಧ ಹೇರಲಾಗಿದೆ. ಸದ್ಯ ಹೊಗೆನಕಲ್ ಪ್ರದೇಶ 1.40 ಲಕ್ಷ ಕ್ಯೂಸೆಕ್ ನೀರಿನಿಂದ ಮುಳುಗಡೆಯಾಗಿದೆ.

    ಕಬಿನಿ ಹಾಗೂ ಕೆಆರ್ ಎಸ್ ಜಲಾಶಯಗಳಿಂದ ಅಧಿಕ ನೀರು ಹರಿಸಿರುವ ಹಿನ್ನೆಲೆಯಲ್ಲಿ ನದಿ ಅಪಾಯ ಮಟ್ಟಿ ಮೀರಿ ಹರಿಯುತ್ತಿವೆ. ಕಬಿನಿ ಜಲಾಶಯದಿಂದ 80 ಸಾವಿರ ಕ್ಯೂಸೆಕ್ ನೀರು ಹೊರ ನೀಡುತ್ತಿರುವ ಕಾರಣ ಎಲ್ಲೆಡೆ ಜಲಪ್ರವಾಹ ಉಂಟಾಗಿದೆ.

    ಕೇರಳ, ತಮಿಳುನಾಡಿಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ ಮೇಲೆ ಕಪಿಲಾ ನದಿ ಉಕ್ಕಿ ಹರಿಯುತ್ತಿದೆ. ಕಳೆದ ಮೂರು ದಿನಗಳಿಂದ ಮೈಸೂರು ಊಟಿ ರಾಷ್ಟ್ರೀಯ ಹೆದ್ದಾರಿ ಸಂಪರ್ಕ ಕಡಿತವಾಗಿದೆ. ಹೆದ್ದಾರಿ ಸಂಪರ್ಕ ಕಡಿತದಿಂದ ವಾಹನ ಸವಾರರ ಪರದಾಡುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

  • ಮೈಸೂರಿನಲ್ಲಿ ಪ್ರವಾಹದ ದೃಶ್ಯಗಳು ಡ್ರೋನ್ ಕ್ಯಾಮೆರಾದಲ್ಲಿ ಸೆರೆ

    ಮೈಸೂರಿನಲ್ಲಿ ಪ್ರವಾಹದ ದೃಶ್ಯಗಳು ಡ್ರೋನ್ ಕ್ಯಾಮೆರಾದಲ್ಲಿ ಸೆರೆ

    ಮೈಸೂರು: ಕಬಿನಿಯಿಂದ ನದಿಗೆ ದಾಖಲೆ ಪ್ರಮಾಣದಲ್ಲಿ ನೀರು ಬಿಟ್ಟ ಹಿನ್ನೆಲೆಯಲ್ಲಿ ಜಿಲ್ಲೆಯ ನಂಜನಗೂಡು ತಾಲೂಕಿನ ಹಲವೆಡೆ ಪ್ರವಾಹ ಉಂಟಾಗಿದ್ದು, ಪ್ರವಾಹದ ದೃಶ್ಯಗಳು ಡ್ರೋನ್ ಕ್ಯಾಮೆರಾದಲ್ಲಿ ಸೆರೆಯಾಗಿದೆ.

    ಸುತ್ತೂರು ಶ್ರೀ ಕ್ಷೇತ್ರದ ಸುತ್ತ ಕಪಿಲಾ ನದಿಯ ನೀರು ಹರಿಯುತ್ತಿದೆ. ಪರಿಣಾಮ ಗದ್ದೆಗಳಿಗೆ ನೀರು ನುಗ್ಗಿ ಅಪಾರ ಬೆಳೆ ನಷ್ಟವಾಗಿದೆ. ಸೇತುವೆ ಮೇಲೆ ಹರಿಯುತ್ತಿರುವ ನೀರಿನ ದೃಶ್ಯ ಮತ್ತು ಗದ್ದೆಗಳ ಮೇಲೆ ಹರಿಯುತ್ತಿರುವ ನೀರಿನ ದೃಶ್ಯಗಳು ಡ್ರೋನ್ ಕ್ಯಾಮೆರಾದಲ್ಲಿ ಸೆರೆಯಾಗಿದೆ.

    ಕೆಲವು ದಿನಗಳಿಂದ ಸುರಿಯುತ್ತಿದ್ದ ಮಳೆ ಇಂದು ಮೈಸೂರಿನ ನಂಜನಗೂಡಿನಲ್ಲಿ ಕೊಂಚ ಪ್ರಮಾಣದಲ್ಲಿ ತಗ್ಗಿದೆ. ಕಬಿನಿ ಜಲಾಶಯದಿಂದ ಬರೋಬ್ಬರಿ 80 ಸಾವಿರ ಕ್ಯೂಸೆಕ್ಸ್ ನೀರು ಹೊರಕ್ಕೆ ಬಿಡಲಾಗುತ್ತಿತ್ತು. ಆದರೆ ಕೇರಳದ ವೈನಾಡಿನಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿದ್ದರಿಂದ ಕಬಿನಿ ಡ್ಯಾಂನಿಂದ 40 ಸಾವಿರ ಕ್ಯೂಸೆಕ್ಸ್ ನೀರು ಬಿಡುಗಡೆಯಾಗುತ್ತಿದೆ. ನೀರಿನ ಪ್ರಮಾಣ 80 ಸಾವಿರದಿಂದ 40 ಸಾವಿರ ಕ್ಯೂಸೆಕ್ಸ್ ಗೆ ಇಳಿದಿದೆ. ಆದರೂ ರಸ್ತೆ ಮೇಲೆ ನೀರು ಹರಿಯುತ್ತಿದೆ. ಸದ್ಯಕ್ಕೆ ಮೂರು ದಿನಗಳ ನಂತರ ನಂಜನಗೂಡು ಮುಖ್ಯ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಮುಕ್ತವಾಗಿದೆ.

    ಕಳೆದ 4 ದಿನಗಳಿಂದ ಕಬಿನಿ ಜಲಾಶಯದಿಂದ ಅತಿ ಹೆಚ್ಚು ನೀರನ್ನು ನದಿಗೆ ಬಿಟ್ಟ ಹಿನ್ನೆಲೆಯಲ್ಲಿ ಜಿಲ್ಲೆಯ ಸೇತುವೆಗಳು ಬಿರುಕು ಬಿಟ್ಟಿವೆ. ಮೈಸೂರಿನ ಹೆಚ್.ಡಿ.ಕೋಟೆಯ ಹರದನಹಳ್ಳಿ ಶಂಕರಹಳ್ಳಿ ಮಾರ್ಗದ ಸೇತುವೆಯಲ್ಲಿ ಬಿರುಕು ಮೂಡಿದೆ. ಸೇತುವೆ ಮೇಲ್ಛಾವಣಿಯಲ್ಲಿ ಬಿರುಕು ಬಿಟ್ಟ ಹಿನ್ನೆಲೆಯಲ್ಲಿ ಸೇತುವೆ ಮೇಲೆ ತೆರಳಲು ಗ್ರಾಮಸ್ಥರು ಹಿಂದೇಟು ಹಾಕುತ್ತಿದ್ದಾರೆ. ಸೇತುವೆ ಮೇಲೆ ತೇಲಿ ಬಂದಿರುವ ಕಸಗಳನ್ನು ತೆಗೆದುಹಾಕಲು ಗ್ರಾಮಸ್ಥರ ಹರಸಾಹಸ ಪಡುತ್ತಿದ್ದಾರೆ. ಗ್ರಾಮಸ್ಥರೆಲ್ಲ ಒಗ್ಗೂಡಿ ಕಸ ತೆಗೆಯಲು ಮುಂದಾಗಿದ್ದಾರೆ.

    ನೀರಿನ ಪ್ರವಾಹ ಪರಿಣಾಮ ಸೇತುವೆ ಪಕ್ಕದ ನೂರಾರು ಏಕರೆ ಬೆಳೆ ಹಾನಿಯಾಗಿದೆ. ರೈತರು ಬೆಳೆದಿದ್ದ ಕಬ್ಬು, ರಾಗಿ, ಭತ್ತದ ಬೆಳೆ ನಾಶವಾಗಿದೆ. ಸಿದ್ದರಾಮಯ್ಯ ತಮ್ಮ ಅಧಿಕಾರವಧಿಯಲ್ಲಿ ಕೊನೆಯಲ್ಲಿ ಉದ್ಘಾಟಿಸಿದ್ದ ನಂಜನಗೂಡು ಬಳಿಯ ಹೆಜ್ಜಿಗೆ ಸೇತುವೆ ಬಿರುಕು ಮೂಡಿದೆ. ಕಪಿಲ ನದಿಯ ನೀರಿನ ರಭಸಕ್ಕೆ ಸೇತುವೆ ಬಿರುಕು ಬಿಟ್ಟಿದೆ. ಸುಮಾರು 18 ಕೋಟಿ ವೆಚ್ಚದಲ್ಲಿ ಈ ಸೇತುವೆ ನಿರ್ಮಿಸಲಾಗಿದ್ದು, ಈ ಸೇತುವೆ ಸುಮಾರು 230ಮೀ ಉದ್ದವಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

  • ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿ ಕಾವೇರಿಗೆ ಬಾಗಿನ ಅರ್ಪಣೆ

    ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿ ಕಾವೇರಿಗೆ ಬಾಗಿನ ಅರ್ಪಣೆ

    ಮಡಿಕೇರಿ: ತಲಕಾವೇರಿಯಲ್ಲಿ ಹುಟ್ಟಿ ದಕ್ಷಿಣ ಭಾರತದಲ್ಲಿ ಹರಿಯುವ ಕಾವೇರಿ ನದಿಗೆ ಬಾಗಿನ ಅರ್ಪಿಸುವ ಕಾರ್ಯಕ್ರಮ ಶನಿವಾರ ಅದ್ಧೂರಿಯಾಗಿ ನಡೆಯಿತು.

    ಭಾಗಮಂಡಲದ ಭಗಂಡೇಶ್ವರ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ, ದೇವಾಲಯದಿಂದ ಉತ್ಸವ ಮಂಟಪವನ್ನು ತ್ರಿವೇಣಿ ಸಂಗಮಕ್ಕೆ ತಂದು ಮಳೆ ಕಡಿಮೆಯಾಗಿ ಕಾವೇರಿ ಮಾತೆ ಶಾಂತವಾಗಿ ಹರಿಯಲಿ ಎಂದು ಪ್ರಾರ್ಥಿಸಿ ಬಾಗಿನವನ್ನು ಸಮರ್ಪಣೆ ಮಾಡಲಾಯಿತು. ಪ್ರತಿವರ್ಷ ಮಳೆ ಸುರಿದು ತ್ರಿವೇಣಿ ಸಂಗಮ ಭರ್ತಿಯಾದ ನಂತರದ ಕರ್ಕಾಟಕ ಅಮವಾಸ್ಯೆಯಂದು ಪೊಲಿಂಕಾನ ಅಥವಾ ಬಾಗಿನ ಅರ್ಪಿಸುವ ಕಾರ್ಯಕ್ರಮ ನಡೆಯುತ್ತದೆ.

    ಈ ವೇಳೆ ಭಗಂಡೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆಯ ನಂತರ ಬಾಳೆ ಕಂಬದಿಂದ ವಿಶೇಷವಾಗಿ ಸಿದ್ಧಗೊಳಿಸಿದ ಉತ್ಸವ ಮಂಟಪದಲ್ಲಿ ಮುತ್ತೈದೆಯರಿಗೆ ನೀಡೋ ಬಳೆ, ಬಿಚ್ಚೋಲೆ, ಅರಿಶಿಣ ಕುಂಕುಮ, ಸೀರೆ, ಕರಿಮಣಿ ಸೇರಿದಂತೆ ಮುಂತಾದ ಪೂಜಾ ವಸ್ತುಗಳನ್ನು ಇಟ್ಟು ತ್ರಿವೇಣಿ ಸಂಗಮದಲ್ಲಿ ಕಾವೇರಿ ಮಾತೆಗೆ ಅರ್ಪಣೆಮಾಡಲಾಗುತ್ತದೆ. ಅಲ್ಲದೇ ಇದೇ ಮಂಟಪಕ್ಕೆ ಚಿನ್ನ ಹಾಗೂ ಬೆಳ್ಳಿಯನ್ನೂ ತೊಟ್ಟಿಲಲ್ಲಿ ಹಾಕಿ ನೀರಿನಲ್ಲಿ ಬಿಡಲಾಗುತ್ತದೆ.

    ರಾಜ್ಯದಲ್ಲಿ ಉತ್ತಮ ಮಳೆ ಸುರಿಸಿ ಕೃಷಿ ಚಟುವಟಿಕೆ ಸುಭೀಕ್ಷೆಯಾಗಿ ನಡೆಯಲು ಅನುವುಮಾಡಿದ ಕಾವೇರಿಗೆ ವಂದಿಸುತ್ತಾ, ಮುಂದೆ ಪ್ರವಾಹ ಬಾರದಂತೆ ಬೇಡೋದು ಈ ಉತ್ಸವದ ಪ್ರಮುಖ ಉದ್ದೇಶವಾಗಿದೆ. ಈ ಕಾರ್ಯಕ್ರಮಕ್ಕೆ ನೂರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಶ್ರದ್ದಾಭಕ್ತಿಯಿಂದ ವರ್ಷವಿಡೀ ಅನ್ನ ನೀರು ನೀಡೋ ಮಾತೆಗೆ ವಂದಿಸಿ ಪುನೀತರಾಗುತ್ತಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

  • ಉಕ್ಕಡಗಾತ್ರಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣ ಮುಳುಗಡೆ!

    ಉಕ್ಕಡಗಾತ್ರಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣ ಮುಳುಗಡೆ!

    – ಇತ್ತ ದೇವಾಲಯ ಮುಂಭಾಗದವರೆಗೂ ನೀರು

    ದಾವಣಗೆರೆ: ತುಂಗಾಭದ್ರಾ ನದಿ ನೀರಿನ ಮಟ್ಟ ಹೆಚ್ಚಾದ ಪರಿಣಾಮ ಜಿಲ್ಲೆಯ ಹರಿಹರ ತಾಲೂಕಿನ ಉಕ್ಕಡಗಾತ್ರಿಯ ಅಜ್ಜಯ್ಯನ ದೇವಸ್ಥಾನ ಮುಂಭಾಗದವರೆಗೂ ನೀರು ಬಂದಿದೆ.

    ತುಂಗಾ ಹಾಗೂ ಭದ್ರಾ ನದಿಯ ನೀರು ಹೆಚ್ಚಾಗಿದ್ದು, ಬಳ್ಳಾರಿ ಸಮೀಪದ ಟಿಬಿ ಡ್ಯಾಂಗೆ ನೀರು ಬಿಡಲಾಗುತ್ತಿದೆ. ಆದರೆ ಕಳೆದ ಎರಡು ದಿನಗಳಿಂದ ನೀರಿನ ಹರಿವು ಜೋರಾಗಿದೆ. ಇದರ ಪರಿಣಾಮ ಉಕ್ಕಡಗಾತ್ರಿ ಅಜ್ಜಯ್ಯನ ದೇವಸ್ಥಾನದ ಮುಂಭಾಗದವರೆಗೂ ನೀರು ನಿಂತಿದ್ದು, ಸಾಕಷ್ಟು ಅಂಗಡಿ ಶೆಡ್ ಗಳು ಮುಳುಗಡೆಗೊಂಡಿವೆ.

    ಪ್ರತಿನಿತ್ಯ ನೂರಾರು ಭಕ್ತರು ಬಂದು ದೇವರ ದರ್ಶನ ಪಡೆಯುತ್ತಿದ್ದರು. ಅದರಲ್ಲೂ ಅಮಾವಾಸ್ಯೆ ದಿನದಂದು ಸಾವಿರಾರು ಭಕ್ತರು ಹೊಳೆಯಲ್ಲಿ ಸ್ನಾನ ಮಾಡಿ ದೇವರ ದರ್ಶನ ಪಡೆಯುತ್ತಾರೆ. ಆದರೆ ಹೊಳೆಯಲ್ಲಿ ಸ್ನಾನ ಮಾಡುವಾಗ ಯಾವುದೇ ರೀತಿಯ ಸೂಚನಾ ಫಲಕಗಳು ಹಾಕಿಲ್ಲ. ಇದರಿಂದ ಭಯದ ವಾತಾವರಣದಲ್ಲಿ ಭಕ್ತರು ಹೊಳೆಯಲ್ಲಿ ಸ್ನಾನ ಮಾಡಿ ದೇವರ ದರ್ಶನ ಪಡೆಯುತ್ತಿದ್ದಾರೆ.

    ತುಂಗಾಭದ್ರಾ ನದಿಯ ನೀರಿನ ಮಟ್ಟ ಹೆಚ್ಚಾದ ಪರಿಣಾಮ ಹರಿಹರ ತಾಲೂಕಿನ ಉಕ್ಕಡಗಾತ್ರಿ ಗ್ರಾಮಕ್ಕೆ ಸಂಪರ್ಕ ಹೊಂದುವ ರಸ್ತೆ ಸಂಪೂರ್ಣ ಮುಳುಗಡೆಗೊಂಡಿದೆ. ಹರಿಹರದಿಂದ ಉಕ್ಕಡಗಾತ್ರಿಗೆ ಇದೊಂದೆ ರಸ್ತೆ ಇದ್ದು ರಸ್ತೆಯ ಸೇತುವೆ ಮುಳುಗಡೆಗೊಂಡಿದೆ. ಗ್ರಾಮಕ್ಕೆ ಹೋಗಬೇಕು ಎಂದರೆ ಎಂಟು ಕಿ.ಮೀ ಸುತ್ತಿಕೊಂಡು ಬರಬೇಕಾದ ಪರಿಸ್ಥಿತಿ ಎದುರಾಗಿದೆ. ಹಲವು ಬಾರಿ ಸಚಿವರಿಗೆ ಮತ್ತು ಶಾಸಕರಿಗೆ ಸಮಸ್ಯೆ ಬಗ್ಗೆ ಮನವರಿಕೆ ಮಾಡಿದರು ಯಾವುದೇ ಪ್ರಯೋಜನವಾಗಿಲ್ಲ ಅಂತ ಸ್ಥಳೀಯರು ದೂರಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

  • ಕಪಿಲಾ ನದಿ ಪ್ರವಾಹ: ಮೈಸೂರು-ಊಟಿ ರಾಷ್ಟ್ರೀಯ ಹೆದ್ದಾರಿ ಸಂಪೂರ್ಣ ಬಂದ್

    ಕಪಿಲಾ ನದಿ ಪ್ರವಾಹ: ಮೈಸೂರು-ಊಟಿ ರಾಷ್ಟ್ರೀಯ ಹೆದ್ದಾರಿ ಸಂಪೂರ್ಣ ಬಂದ್

    ಮೈಸೂರು: ಕಪಿಲಾ ನದಿ ಪ್ರವಾಹ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಮೇಲೆ ನದಿ ಉಕ್ಕಿ ಹರಿಯುತ್ತಿದ್ದು, ಪರಿಣಾಮ ಮೈಸೂರು- ಊಟಿ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ ಕಡಿತಗೊಂಡಿದೆ.

    72 ಸಾವಿರ ಕ್ಯೂಸೆಕ್ ನೀರು ಕಬಿನಿ ಜಲಾಶಯದಿಂದ ಹೊರಹರಿಯುತ್ತಿದೆ. ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ 766ರಲ್ಲಿ ಸಂಪೂರ್ಣ ಸಂಚಾರ ಬಂದ್ ಆಗಿದ್ದು, ಪೊಲೀಸರು ಬದಲಿ ರಸ್ತೆ ಮೂಲಕ ವಾಹನ ಸವಾರರ ಮಾರ್ಗ ಬದಲಿಸುತ್ತಿದ್ದಾರೆ. ಇದನ್ನೂ ಓದಿ: ಕಬಿನಿ ಜಲಾಶಯದಿಂದ ದಾಖಲೆ ಪ್ರಮಾಣದಲ್ಲಿ ನೀರು ಹೊರಕ್ಕೆ

    ಹಲವು ವರ್ಷಗಳ ನಂತರ ಕಪಿಲಾ ನದಿ ರಾಷ್ಟ್ರೀಯ ಹೆದ್ದಾರಿ ಮೇಲೆ ಉಕ್ಕಿ ಹರಿಯುತ್ತಿದೆ. ಹೆದ್ದಾರಿ ಸಂಪರ್ಕ ಕಡಿತದಿಂದ ವಾಹನ ಸವಾರರು ಪರದಾಡುತ್ತಿದ್ದಾರೆ. ಇದರಿಂದ ನಂಜನಗೂಡಿಗೆ ತೆರಳುವ ಭಕ್ತರಿಗೂ ಸಂಕಷ್ಟ ಎದುರಾಗಿದೆ. ನಂಜನಗೂಡು ದೇವಾಲಯದ ಸಮೀಪದ ಸ್ನಾನಘಟ್ಟ ಹಾಗೂ 16 ಕಾಲು ಮಂಟಪ ಸಹ ಸಂಪೂರ್ಣ ಮುಳುಗಡೆಯಾಗಿದೆ. ಜೊತೆಗೆ ಅಪಾಯದ ಮಟ್ಟ ಮೀರಿ ನದಿ ಹರಿಯುತ್ತಿದೆ.

    ಮೈಸೂರಿನ ಕಬಿನಿ ಜಲಾಶಯದಿಂದ 74 ಸಾವಿರ ಕ್ಯೂಸೆಕ್ ನೀರು ಹೊರ ಬಿಟ್ಟಿರುವ ಕಾರಣ ಸುತ್ತೂರು ಶ್ರೀ ಕ್ಷೇತ್ರಕ್ಕೆ ಸಂಪರ್ಕ ಕಲ್ಪಿಸುವ ಸುತ್ತೂರು ಸೇತುವೆ ಸಂಪೂರ್ಣ ಮುಳುಗಡೆ ಆಗಿದೆ. ಅಲ್ಲದೆ ಸೇತುವೆ ಮೇಲೆ ನದಿ ನೀರು ತುಂಬಿ ಹರಿಯುತ್ತಿದೆ. ಇದರಿಂದ ಸೇತುವೆ ಸುತ್ತಮುತ್ತಲಿನ ನೂರಾರು ಎಕರೆ ಜಮೀನಿಗೆ ನೀರು ನುಗ್ಗಿ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ.

    ಕಬಿನಿ ಜಲಾನಯನ ಪ್ರದೇಶದಲ್ಲಿ ಪ್ರವಾಹ ಉಂಟಾಗಿದ್ದು, ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. ಎಚ್.ಡಿ.ಕೋಟೆ ತಾಲೂಕಿನ ಡಿ.ಬಿ.ಕುಪ್ಪೆ, ವಡಕನಮಾಳ ಗ್ರಾಮಕ್ಕೆ ನೀರು ನುಗಿದ್ದು, ಹಿನ್ನೀರಿನ ಪ್ರದೇಶ ನೀರಿನಿಂದ ಮುಳುಗಡೆಯಾಗಿದೆ. ಕಬಿನಿ ಜಲಾಶಯಕ್ಕೆ ಕ್ಷಣ ಕ್ಷಣಕ್ಕು ಒಳಹರಿವು ಹೆಚ್ಚಾಗುತ್ತಿದೆ. ಸದ್ಯಕ್ಕೆ ಕಬಿನಿ ಜಲಾಶಯದಿಂದ ಬರೋಬ್ಬರಿ 80 ಸಾವಿರ ಕ್ಯೂಸೆಕ್ ನೀರು ಹೊರಕ್ಕೆ ಬಿಡಲಾಗುತ್ತಿದೆ. ಇದೇ ಮೊದಲ ಬಾರಿಗೆ 80 ಸಾವಿರ ಕ್ಯೂಸೆಕ್ ನೀರು ಹೊರಕ್ಕೆ ಬಿಡಲಾಗುತ್ತಿದೆ. ಯಾವುದೇ ಕ್ಷಣದಲ್ಲಿ ಮತ್ತಷ್ಟು ಜಲಾಶಯಕ್ಕೆ ಒಳಹರಿವು ಸಾಧ್ಯತೆ ಇದೆ. ಆದ್ದರಿಂದ ನದಿ ಪಾತ್ರದ ಜನರು ಎಚ್ಚರಿಕೆಯಿಂದಿರುವಂತೆ ಸೂಚನೆ ನೀಡಲಾಗಿದೆ. ಆದರೆ ಇದೇ ಮೊದಲ ಬಾರಿಗೆ ಕಪಿಲಾ ನದಿ ದಾಖಲೆ ರೂಪದಲ್ಲಿ ಉಕ್ಕಿ ಹರಿಯುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

    https://www.youtube.com/watch?v=xeVIcu1_BXQ

  • ಅಂಬುತೀರ್ಥದಲ್ಲಿ ಸೆಲ್ಫಿ ಕ್ಲಿಕ್ಕಿಸೋ ವೇಳೆ ಬಿದ್ದಿದ್ದ ಟೆಕ್ಕಿಯ ಮೃತದೇಹ ನದಿಯಲ್ಲಿ ತೇಲಿ ಬಂತು!

    ಅಂಬುತೀರ್ಥದಲ್ಲಿ ಸೆಲ್ಫಿ ಕ್ಲಿಕ್ಕಿಸೋ ವೇಳೆ ಬಿದ್ದಿದ್ದ ಟೆಕ್ಕಿಯ ಮೃತದೇಹ ನದಿಯಲ್ಲಿ ತೇಲಿ ಬಂತು!

    ಚಿಕ್ಕಮಗಳೂರು: ಕಳಸ ಸಮೀಪದ ಅಂಬುತೀರ್ಥದಲ್ಲಿ ಸೆಲ್ಫಿ ತೆಗೆಯುವ ವೇಳೆ ಕಾಲುಜಾರಿ ಬಿದ್ದಿದ್ದ ಯುವಕನ ಮೃತದೇಹವು 15 ದಿನಗಳ ನಂತರ ಜಿಲ್ಲೆಯ ಮಾಗುಂಡಿ ಸಮೀಪದ ಭದ್ರಾ ನದಿಯಲ್ಲಿ ಪತ್ತೆಯಾಗಿದೆ.

    ಜುಲೈ 26 ರಂದು ಮಂಗಳೂರಿನ ಟೆಕ್ಕಿ ಕಿರಣ್ ಕೋಟ್ಯಾನ್ ಕಳಸ ಸಮೀಪದ ಅಂಬುತೀರ್ಥದಲ್ಲಿ ಸೆಲ್ಫಿ ತೆಗೆಯುವ ವೇಳೆ ಕಾಲುಜಾರಿ ಬಿದ್ದು, ನದಿಯಲ್ಲಿ ಕೊಚ್ಚಿಹೋಗಿದ್ದರು. ಕೊಚ್ಚಿಹೋಗಿದ್ದ ಕಿರಣ್ ಮೃತದೇಹ 15 ದಿನಗಳ ಬಳಿಕ ಮಾಗುಂಡಿ ಸಮೀಪದ ಭದ್ರಾ ನದಿಯಲ್ಲಿ ಪತ್ತೆಯಾಗಿದೆ. ಜಿಲ್ಲೆಯಲ್ಲಿ ಧಾರಾಕಾರವಾಗಿ ಮಳೆಯಾಗುತ್ತಿರುವುದರಿಂದ ಭದ್ರಾ ನದಿಯ ನೀರಿನ ಹರಿಯು ಹೆಚ್ಚಾಗಿದ್ದರಿಂದ ಮೃತದೇಹ ತೇಲಿ ಬಂದಿದೆ.

    ಕಿರಣ್ ಕೋಟ್ಯಾನ್ ಮೂಲತಃ ಮಂಗಳೂರಿನ ತುಂಬೆ ಗ್ರಾಮದವರಾಗಿದ್ದು, ವೃತ್ತಿಯಲ್ಲಿ ಇಂಜಿನಿಯರ್ ಆಗಿದ್ದರು. ಕಳೆದ ಜುಲೈ 26ರಂದು ತಮ್ಮ 13 ಮಂದಿ ಸ್ನೇಹಿತರ ತಂಡದೊಂದಿಗೆ ಜಿಲ್ಲೆಯ ಕುದುರೆಮುಖ ಸುತ್ತಮುತ್ತ ಪ್ರವಾಸಕ್ಕೆಂದು ಬಂದಿದ್ದರು. ಈ ವೇಳೆ ಅಂಬುತೀರ್ಥದ ಬಳಿ ಬಂಡೆ ಮೇಲಿಂದ ಸೆಲ್ಫಿ ತೆಗೆಯುವ ವೇಳೆ ಕಾಲು ಜಾರಿ ನದಿಗೆ ಬಿದ್ದಿದ್ದರು. ಕೂಡಲೇ ಸ್ನೇಹಿತರು ಹುಡುಕಾಡುವ ಪ್ರಯತ್ನ ಮಾಡಿದರೂ ಪ್ರಯೋಜನವಾಗಿರಲಿಲ್ಲ. ಇದನ್ನೂ ಓದಿ: ಕಾಲುಜಾರಿ ಭದ್ರಾ ನದಿಗೆ ಬಿದ್ದು ಕೊಚ್ಚಿ ಹೋದ ಮಂಗ್ಳೂರು ಎಂಜಿನಿಯರ್

    ವಿಷಯ ತಿಳಿಯುತ್ತಿದ್ದಂತೆ ಕೂಡಲೇ ಸ್ಥಳಕ್ಕೆ ಆಗಮಿಸಿದ ಎನ್.ಡಿ.ಆರ್.ಎಫ್ ರಕ್ಷಣಾ ತಂಡ ಕಿರಣ್ ಗಾಗಿ ವ್ಯಾಪಕ ಶೋಧ ಕೈಗೊಂಡಿತ್ತು. ಆದರೆ ಭದ್ರಾ ನದಿಯಲ್ಲಿ ನೀರಿನ ರಭಸ ಜಾಸ್ತಿಯಾಗಿದ್ದರಿಂದ ಇತ್ತೀಚೆಗೆ ರಕ್ಷಣಾ ಕಾರ್ಯಚರಣೆಯನ್ನು ಕೈಬಿಟ್ಟಿತ್ತು. ಘಟನೆ ಸಂಬಂಧ ಕಳಸ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

  • ಕೊಡಗಿನಲ್ಲಿ ಮತ್ತೆ ಮುಂದುವರಿದ ಮಳೆ: ಭಾಗಮಂಡಲ ಸಂಪೂರ್ಣ ಜಲಾವೃತ

    ಕೊಡಗಿನಲ್ಲಿ ಮತ್ತೆ ಮುಂದುವರಿದ ಮಳೆ: ಭಾಗಮಂಡಲ ಸಂಪೂರ್ಣ ಜಲಾವೃತ

    ಕೊಡಗು: ಕಳೆದೊಂದು ವಾರದಿಂದ ಜಿಲ್ಲೆಯಲ್ಲಿ ಶಾಂತನಾಗಿದ್ದ ವರುಣ ಮಂಗಳವಾರದಿಂದ ಮತ್ತೆ ತನ್ನ ಆರ್ಭಟ ಶುರು ಮಾಡಿದ್ದಾನೆ.

    ಜಿಲ್ಲೆಯಾದ್ಯಂತ ಮಂಗಳವಾರದ ಬೆಳಗ್ಗಿನಿಂದಲೇ ಸಾಧಾರಣವಾಗಿಯೇ ಸುರಿಯುತ್ತಿದ್ದ ಮಳೆ ಸಂಜೆಯಾಗುತ್ತಲೇ ಬಿರುಸುಗೊಂಡಿದ್ದು, ಭಾರೀ ಗಾಳಿಯೊಂದಿಗೆ ಧಾರಾಕಾರವಾಗಿ ಸುರಿಯುತ್ತಿದೆ. ಮಡಿಕೇರಿಯಲ್ಲಿ ರಾತ್ರಿಯಿಡೀ ಎಡೆಬಿಡದೆ ಸುರಿದ ಮಳೆ ಈಗಲೂ ತನ್ನ ಅಬ್ಬರ ಮುಂದುವರಿಸಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ಥಗೊಂಡಿದೆ.

    ಬ್ರಹ್ಮಗಿರಿ ತಪ್ಪಲಿನಲ್ಲಿ ರಾತ್ರಿಯಿಡೀ ಧಾರಾಕಾರವಾಗಿ ಮಳೆ ಸುರಿಯುತ್ತಿರುವುದರಿಂದ ಕಾವೇರಿ, ಕನ್ನಿಕೆ ಹಾಗೂ ಸುಜೋತಿ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ನದಿ ನೀರಿನ ಪ್ರಮಾಣ ಹೆಚ್ಚಾದ್ದರಿಂದ ಭಾಗಮಂಡಲ ತ್ರಿವೇಣಿ ಸಂಗಮ ಮತ್ತೊಮ್ಮೆ ಜಲಾವೃತವಾಗಿದ್ದು, ಭಾಗಮಂಡಲ- ನಾಪೋಕ್ಲು ರಸ್ತೆ ಸಂಪರ್ಕ ಕಡಿತಗೊಂಡಿದೆ.

    ಇದೇ ರೀತಿ ಮಳೆ ಮುಂದುವರಿದರೆ ಮಡಿಕೇರಿ ತಲಕಾವೇರಿ ರಸ್ತೆ ಸಂಪರ್ಕ ಕಡಿತ ಸಾಧ್ಯತೆ ಇದ್ದು, ಜಿಲ್ಲಾಡಳಿತ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ ಎಂದು ತಿಳಿದು ಬಂದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

  • ಪತ್ನಿ ಮೇಲಿನ ಸಿಟ್ಟಿಗೆ ಮೂವರು ಮಕ್ಕಳನ್ನು ನದಿಗೆ ಎಸೆದು ಕೊಂದ!

    ಪತ್ನಿ ಮೇಲಿನ ಸಿಟ್ಟಿಗೆ ಮೂವರು ಮಕ್ಕಳನ್ನು ನದಿಗೆ ಎಸೆದು ಕೊಂದ!

    ಹೈದರಾಬಾದ್: ಆಂಧ್ರದ ವ್ಯಕ್ತಿಯೊಬ್ಬ ಪತ್ನಿ ಮೇಲಿನ ಸಿಟ್ಟಿಗೆ ತನ್ನ ಮೂವರು ಗಂಡು ಮಕ್ಕಳನ್ನು ನದಿಗೆ ಎಸೆದು ಕೊಲೆ ಮಾಡಿರುವ ಘಟನೆ ಚಿತ್ತೂರ್ ಜಿಲ್ಲೆಯಲ್ಲಿ ನಡೆದಿದೆ.

    ಮಕ್ಕಳಾದ ಪುನೀತ್(5), ಸಂಜಯ್(3), ಮತ್ತು ರಾಹುಲ್(2 ತಿಂಗಳು) ಕೊಲೆ ಮಾಡಿ ವೆಂಕಟೇಶ್ ಹತ್ಯೆಗೈದು ಈಗ ಪರಾರಿಯಾಗಿದ್ದಾನೆ.

    ಭಾನುವಾರ ರಾತ್ರಿ ಈ ಘಟನೆ ನಡೆದಿದ್ದು, ತನ್ನ ಹೆಂಡತಿಯೊಂದಿಗೆ ಗಲಾಟೆ ಮಾಡಿಕೊಂಡ ಬಳಿಕ ತಂದೆ ವೆಂಕಟೇಶ್ ಮೂವರು ಮಕ್ಕಳನ್ನು ಕರೆದುಕೊಂಡು ಹೋಗಿ ನದಿಯೊಳಗೆ ಎಸೆದಿದ್ದಾನೆ. ನಂತರ ಸೋಮವಾರ ಬೆಳಗ್ಗೆ ಮಕ್ಕಳ ಮೃತದೇಹಗಳು ನೀರಿನಲ್ಲಿ ತೇಲಾಡುತ್ತಿರುವುದನ್ನು ಗ್ರಾಮಸ್ಥರು ನೋಡಿದ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ.

    ವೆಂಕಟೇಶ್ ಕಟ್ಟಡ ನಿರ್ಮಾಣದ ಕೆಲಸವನ್ನು ಮಾಡುತ್ತಿದ್ದನು. ಪತ್ನಿ ಅಮರಾವತಿ ಈತನಿಗೆ ಎರಡನೇ ಪತ್ನಿ. ಮೊದಲ ಹೆಂಡತಿಗೆ ಮಕ್ಕಳಾಗದ ಕಾರಣ ಎರಡನೇ ಮದುವೆಯಾಗಿದ್ದನು.

    ವೆಂಕಟೇಶ್ ಮದ್ಯಸೇವನೆ ಮಾಡಿ ನೀಡುತ್ತಿದ್ದ ಕಿರುಕುಳವನ್ನು ತಾಳಲಾರದೇ ಪತ್ನಿ ಅಮರಾವತಿ ಮಕ್ಕಳೊಂದಿಗೆ ತವರು ಮನೆಗೆ ತೆರಳಿದ್ದಳು. ಭಾನುವಾರ ರಾತ್ರಿ ವೆಂಕಟೇಶ್ ಮದ್ಯಸೇವನೆ ಮಾಡಿ ಅಮರಾವತಿ ತವರು ಮನೆಗೆ ತೆರಳಿ ಆಕೆಯನ್ನು ಮನೆಗೆ ಬರುವಂತೆ ಒತ್ತಾಯಿಸಿದ್ದಾನೆ. ಅಮರಾವತಿ ನಾನು ಆತನ ಜೊತೆ ತೆರಳುವುದಿಲ್ಲ ಎಂದು ಹೇಳಿದ್ದಾಳೆ. ವೆಂಕಟೇಶ್ ಕುಡಿದ ನಶೆಯಲ್ಲೇ ತನ್ನ ಮೂವರು ಮಕ್ಕಳನ್ನು ಕರೆದುಕೊಂಡು ಹಳ್ಳಿಗೆ ತೆರಳುತ್ತಾನೆ. ಹಳ್ಳಿಗೆ ಬರುವ ದಾರಿ ಮಧ್ಯದಲ್ಲಿ ಮೂವರು ಮಕ್ಕಳನ್ನು ನದಿಯೊಳಗೆ ಎಸೆದು ಏನು ಆಗಿಯೇ ಇಲ್ಲವೆಂಬಂತೆ ಮನೆಗೆ ತೆರಳಿ ಮಲಗುತ್ತಾನೆ. ಸೋಮವಾರ ನೀರಿನಲ್ಲಿ ತೆಲುತ್ತಿದ್ದ ಕಂದಮ್ಮಗಳ ದೇಹವನ್ನು ಕಂಡ ಗ್ರಾಮಸ್ಥರು ಅಮರಾವತಿಗೆ ಮಾಹಿತಿ ತಿಳಿಸುತ್ತಾರೆ.

    ವೆಂಕಟೇಶ್ ತನ್ನ ಮಕ್ಕಳನ್ನು ಈ ರೀತಿ ಕ್ರೂರವಾಗಿ ಕೊಲ್ಲುತ್ತಾನೆಂದು ಅಂದುಕೊಂಡಿರಲಿಲ್ಲ ಎಂದು ಅಮರಾವತಿ ಪೊಲೀಸರಿಗೆ ತಿಳಿಸಿದ್ದಾರೆ. ಸದ್ಯ ಪೊಲೀಸರು ಈ ಕೃತ್ಯವನ್ನು ಎಸಗಿ ಪರಾರಿಯಾಗಿರುವ ಆರೋಪಿ ವೆಂಕಟೇಶ್‍ನನ್ನು ಪತ್ತೆ ಹಚ್ಚಲು ಬಲೆ ಬೀಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews