Tag: ನದಿ

  • ಜಲ ದಿಗ್ಬಂಧನದ ಭೀತಿಯಲ್ಲಿ ನಂಜುಂಡೇಶ್ವರ ದೇಗುಲ: ಅರ್ಧ ಕಿಲೋಮೀಟರ್ ವ್ಯಾಪ್ತಿಯ ಜನರ ಸ್ಥಳಾಂತರ

    ಜಲ ದಿಗ್ಬಂಧನದ ಭೀತಿಯಲ್ಲಿ ನಂಜುಂಡೇಶ್ವರ ದೇಗುಲ: ಅರ್ಧ ಕಿಲೋಮೀಟರ್ ವ್ಯಾಪ್ತಿಯ ಜನರ ಸ್ಥಳಾಂತರ

    ಮೈಸೂರು: ಕಪಿಲ ನದಿಯಲ್ಲಿ ನೀರು ಹೆಚ್ಚಾದ ಪರಿಣಾಮ ಮತ್ತೊಮ್ಮೆ ದಕ್ಷಿಣ ಕಾಶಿ ನಂಜನಗೂಡಿನ ಜನವಸತಿ ಪ್ರದೇಶಕ್ಕೆ ಪ್ರವಾಹದ ನೀರು ನುಗ್ಗಿದೆ.

    ಪ್ರವಾಹದ ನೀರು ನಂಜುಂಡೇಶ್ವರ ಸ್ವಾಮಿಯ ದೇಗಲದತ್ತ ಹರಿದು ಬರುತ್ತಿದ್ದು, ದೇಗುಲ ಜಲ ದಿಗ್ಬಂಧನದ ಭೀತಿಯಲ್ಲಿದೆ. ಈಗಾಗಲೇ ನಂಜುಂಡೇಶ್ವರ ಸ್ವಾಮಿ ದೇಗುಲದ ಸಮೀಪದಲ್ಲಿರುವ ದಾಸೋಹ ಭವನ ಮತ್ತು ವಾಣಿಜ್ಯ ಮಳಿಗೆಗಳ ಕಟ್ಟಡಗಳು ಜಲಾವೃತಗೊಂಡಿವೆ. ಅಷ್ಟೇ ಅಲ್ಲದೇ ಕಪಿಲ ನದಿ ತೀರದಲ್ಲಿರುವ ಪರಶುರಾಮ, ಚಾಮುಂಡೇಶ್ವರಿ, ಅಯ್ಯಪ್ಪಸ್ವಾಮಿ, ಕಾಶಿ ವಿಶ್ವನಾಥ ಸ್ವಾಮಿ, ಸತ್ಯನಾರಾಯಣ ಸ್ವಾಮಿ ದೇಗುಲ ಸೇರಿದಂತೆ ನದಿ ತೀರದ ಎಲ್ಲಾ ದೇಗುಲಗಳು ಜಲಾವೃತವಾಗುವ ಸಾಧ್ಯತೆ ಇದೆ.

    ಹದಿನಾರು ಕಾಲು ಮಂಟಪ ಶೇಕಡ 90% ಮುಳುಗಡೆಯಾಗಿದೆ. ಇತ್ತ ನಂಜನಗೂಡು ಮತ್ತು ಚಾಮರಾಜನಗರಕ್ಕೆ ಸಂಪರ್ಕ ಕಲ್ಪಿಸುವ ಬೈಪಾಸ್ ರಸ್ತೆಗೂ ನೀರು ನುಗ್ಗಿದೆ. ನೀರಿನ ಪ್ರಮಾಣ ಮತ್ತಷ್ಟು ಹೆಚ್ಚಾದರೆ ನಂಜನಗೂಡು ಚಾಮರಾಜನಗರ, ಗುಂಡ್ಲುಪೇಟೆ, ಕೇರಳ, ತಮಿಳುನಾಡು ನಡುವಿನ ಸಂಪರ್ಕ ಕಡಿತಗೊಳ್ಳುವ ಸಾಧ್ಯತೆ ಇದೆ.

    ನಂಜನಗೂಡು ನಂಜುಂಡೇಶ್ವರ ಸ್ವಾಮಿಯ ದೇವಾಲಯದ ಸುತ್ತಮುತ್ತಲ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ ಪರಿಣಾಮ ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇಂದು ಸಂಜೆ ವೇಳೆಗೆ ಕಬಿನಿಯಿಂದ ಮತ್ತಷ್ಟು ನೀರನ್ನು ನದಿಗೆ ಬಿಡುವ ಸಾಧ್ಯತೆ ಇದ್ದು, ಕಬಿನಿ ಹೊರ ಹರಿವು 90 ಸಾವಿರ ಕ್ಯೂಸೆಕ್ ಆಗುವ ಸಾಧ್ಯತೆ ಇದೆ. ಆದ್ದರಿಂದ ದೇವಾಲಯದ ಸುತ್ತಮುತ್ತಲ ಸುಮಾರು ಅರ್ಧ ಕಿಲೋಮೀಟರ್ ಸುತ್ತ ವಾಸವಿರುವ ನಿವಾಸಿಗಳು ಮತ್ತು ತಗ್ಗು ಪ್ರದೇಶದಲ್ಲಿರುವ ಸಾರ್ವಜನಿಕರಿಗೆ ಬೇರೆಡೆಗೆ ತೆರಳಲು ಜಿಲ್ಲಾಧಿಕಾರಿ ಮತ್ತು ತಾಲೂಕು ದಂಡಾಧಿಕಾರಿ ಸೂಚನೆ ನೀಡಿದ್ದಾರೆ. ಈಗಾಗಲೇ ದೇವಾಲಯದ ಸುತ್ತಮುತ್ತಲಿರುವ ಹಲವು ಮನೆಗಳು ಜಲಾವೃತವಾಗೊಂಡಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಬಸವಸಾಗರ ಜಲಾಶಯ ಭರ್ತಿ –  ನದಿ ಕಡೆ ತೆರಳದಂತೆ ಮುನ್ನೆಚ್ಚರಿಕೆ

    ಬಸವಸಾಗರ ಜಲಾಶಯ ಭರ್ತಿ – ನದಿ ಕಡೆ ತೆರಳದಂತೆ ಮುನ್ನೆಚ್ಚರಿಕೆ

    ಯಾದಗಿರಿ: ತಿಂಗಳುಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಬಸವಸಾಗರ ಜಲಾಶಯ ಭರ್ತಿಯಾಗಿದ್ದು, ಕೃಷ್ಣಾ ನದಿಗೆ ಭಾರೀ ಪ್ರಮಾಣದಲ್ಲಿ ನೀರು ಬಿಡಲಾಗುತ್ತಿದೆ.

    ಕೃಷ್ಣಾ ನದಿ ಒಡಲು ಈಗ ಉಕ್ಕಿ ಹರಿಯುತ್ತಿದ್ದು, ನೀಲಕಂಠರಾಯನಗಡ್ಡಿ ಗ್ರಾಮ ಈಗ ನಡುಗಡ್ಡೆಯಾಗಿದೆ. ಜಿಲ್ಲೆಯ ಸುರಪುರ ತಾಲೂಕಿನ ನಾರಾಯಣಪುರ ಗ್ರಾಮದ ಸಮೀಪವಿರುವ ಬಸವಸಾಗರ ಜಲಾಶಯ ಮಹಾರಾಷ್ಟ್ರದಲ್ಲಿ ಸುರಿದ ಭಾರೀ ಮಳೆಗೆ ಹೆಚ್ಚಿನ ಒಳಹರಿವು ಬಂದ ಹಿನ್ನೆಲೆಯಲ್ಲಿ ಇದೀಗ ಜಲಾಶಯ ಭರ್ತಿಯಾಗಿದೆ.

    ಜಲಾಶಯದ 15 ಕ್ರಸ್ಟ್ ಗೇಟುಗಳ ಮೂಲಕ 1,60 ಸಾವಿರ ಕ್ಯೂಸೆಕ್ ನೀರನ್ನು ಕೃಷ್ಣಾ ನದಿಗೆ ಬಿಡಲಾಗುತ್ತಿದ್ದು, ನದಿ ಒಡಲು ಅಪಾಯದಮಟ್ಟ ಮೀರಿ ಹರಿಯುತ್ತಿದೆ. ಆದ್ದರಿಂದ ಪ್ರವಾಹ ಭೀತಿ ಎದುರಾಗುವ ಸಂಭವ ಹೆಚ್ಚಾಗಿದ್ದು, ಮುನ್ನೆಚ್ಚರಿಕೆಯಾಗಿ ಜಿಲ್ಲಾಡಳಿತವು ಸಕಲ ಸಿದ್ಧತೆ ಮಾಡಿಕೊಂಡಿದೆ. ನದಿ ತೀರದ ಗ್ರಾಮಸ್ಥರು ನದಿ ಕಡೆ ತೆರಳದಂತೆ ಕೃಷ್ಣಾ ಭಾಗ್ಯ ಜಲ ನಿಗಮದ ಅಧಿಕಾರಿಗಳು ಮುನ್ಸೂಚನೆ ನೀಡಿದ್ದಾರೆ.

    ಕಳೆದ ದಿನ ನದಿಗೆ ಭಾರೀ ಪ್ರಮಾಣದ ನೀರು ಬಿಟ್ಟಿರುವ ಹಿನ್ನೆಲೆಯಲ್ಲಿ ತುಂಬು ಗರ್ಭಿಣಿಯೊಬ್ಬರು ಸಂಕಷ್ಟಕ್ಕೆ ಸಿಲುಕಿದ್ದರು. ಪೂಜಮ್ಮ, ತುಂಬು ಗರ್ಭಿಣಿಯಾಗಿರುವುದರಿಂದ ಯಾವುದೇ ಸಮಯದಲ್ಲಿ ಹೆರಿಗೆ ಆಗುವ ಸಾಧ್ಯತೆ ಇತ್ತು. ಹಾಗಾಗಿ ಪೂಜಮ್ಮ ತಪಾಸಣೆಗೆಂದು ಆಸ್ಪತ್ರೆಗೆ ಹೋಗಲು ನರಳಾಡುವಂತ ಪರಿಸ್ಥಿತಿ ನಿರ್ಮಾಣವಾಗಿತ್ತು. ಗ್ರಾಮದ ಜನರು ಅಗತ್ಯ ವಸ್ತುಗಳನ್ನು ಖರೀದಿಸಲು ಕಕ್ಕೇರಾಕ್ಕೆ ತೆರಳದೆ ತತ್ತರಿಸಿ ಹೋಗಿದ್ದಾರೆ. ಅದೇ ರೀತಿ ಗ್ರಾಮದ ಸಂಪರ್ಕ ಕಡಿದುಕೊಂಡ ಕಾರಣ ಶಾಲಾ ಶಿಕ್ಷಕ ಬಸನಗೌಡ ಕೂಡ ಸೋಮವಾರದಿಂದ ಗ್ರಾಮದಲ್ಲೇ ತಂಗಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಭಾರೀ ಮಳೆಯಿಂದಾಗಿ ಮಂಡಗದ್ದೆಯಲ್ಲಿ ಮೂಕ ಪಕ್ಷಿಗಳ ರೋಧನೆ!

    ಭಾರೀ ಮಳೆಯಿಂದಾಗಿ ಮಂಡಗದ್ದೆಯಲ್ಲಿ ಮೂಕ ಪಕ್ಷಿಗಳ ರೋಧನೆ!

    ಶಿವಮೊಗ್ಗ: ಜಿಲ್ಲೆಯಾದ್ಯಂತ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ತುಂಗಾ ನದಿಯು ಅಪಾಯಮಟ್ಟ ಮೀರಿ ಹರಿಯುತ್ತಿದ್ದು, ಜಿಲ್ಲೆಯ ಪ್ರಸಿದ್ಧ ಮಂಡಗದ್ದೆ ಪಕ್ಷಿಧಾಮದಲ್ಲಿ ನೀರಿನ ರಭಸಕ್ಕೆ ಸಾವಿರಾರು ಪಕ್ಷಿಗಳು ಕೊಚ್ಚಿ ಹೋಗಿವೆ.

    ಪ್ರಸಿದ್ಧ ಪಕ್ಷಿಧಾಮ ಮಂಡಗದ್ದೆಯಲ್ಲೀಗ ಶೋಕ ಮಡುಗಟ್ಟಿದ್ದು, ಪ್ರತಿ ವರ್ಷ ಸಂತಾನಭಿವೃದ್ಧಿಗೆ ಬರುವ ಸಾವಿರಾರು ಪಕ್ಷಿಗಳು ತುಂಗೆಯ ಅಬ್ಬರಕ್ಕೆ ತತ್ತರಿಸಿ ಹೋಗಿವೆ. ನಿರಂತರ ಮಳೆಯಿಂದಾಗಿ ತುಂಗಾ ನದಿಯು ಅಪಾಯದಮಟ್ಟ ಮೀರಿ ಹರಿಯುತ್ತಿದೆ. ಪ್ರವಾಹದಲ್ಲಿ ಇಲ್ಲಿನ ಸಾವಿರಾರು ಪಕ್ಷಿಗಳ ಗೂಡುಗಳು ಕೊಚ್ಚಿಕೊಂಡು ಹೋಗಿವೆ.

    ಪ್ರತಿ ವರ್ಷ ಉತ್ತರ ಭಾರತದಿಂದ ಮೇ ಹಾಗೂ ಜೂನ್ ತಿಂಗಳಲ್ಲಿ ಬರುವ ಜಾಲಪಾದ, ತುಪ್ಪಳದ ಹಕ್ಕಿಗಳು ಇಲ್ಲಿ ಗೂಡು ಕಟ್ಟಿ, ಮೊಟ್ಟೆ ಇಟ್ಟು ಮರಿಗಳೊಂದಿಗೆ ಅಕ್ಟೋಬರ್ ವೇಳೆಗೆ ಹಿಂತಿರುಗುತ್ತವೆ. ಆದರೆ ಈ ವರ್ಷ ಪ್ರವಾಹದಿಂದಾಗಿ ತಳಮಟ್ಟದಲ್ಲಿದ್ದ ಗೂಡುಗಳು ಮೊಟ್ಟೆ-ಮರಿಗಳ ಸಮೇತ ಕೊಚ್ಚಿಕೊಂಡು ಹೋಗಿವೆ.

    ಮೇಲ್ಭಾಗದಲ್ಲಿ ಇರುವ ಕೆಲವು ಗೂಡುಗಳು ಮಾತ್ರ ಉಳಿದುಕೊಂಡಿದ್ದು, ನಿರಂತರ ಮಳೆಯಿಂದಾಗಿ ಪಕ್ಷಿಗಳು ತತ್ತರಿಸಿ ಹೋಗಿವೆ. ಎಂದು ಮಳೆ ನಿಲ್ಲುವುದೋ ಎಂದು ಪಕ್ಷಿಗಳು ಆಕಾಶ ನೋಡುವಂತಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ದಾವಣಗೆರೆಯಲ್ಲಿ ಶಾಲಾ ಮಕ್ಕಳು, ಗ್ರಾಮಸ್ಥರ ಸಂಚಾರ ಅಸ್ತವ್ಯಸ್ತ!

    ದಾವಣಗೆರೆಯಲ್ಲಿ ಶಾಲಾ ಮಕ್ಕಳು, ಗ್ರಾಮಸ್ಥರ ಸಂಚಾರ ಅಸ್ತವ್ಯಸ್ತ!

    ದಾವಣಗೆರೆ: ತುಂಗ ಹಾಗೂ ಭದ್ರಾ ನದಿಯ ನೀರು ಹೊರ ಬಿಟ್ಟ ಪರಿಣಾಮ ದಾವಣಗೆರೆಯ ನದಿಯ ತಟದಲ್ಲಿರುವ ಪ್ರದೇಶಗಳು ಸಂಪೂರ್ಣವಾಗಿ ಜಲಾವೃತಗೊಂಡಿದ್ದು, ಇದರಿಂದಾಗಿ ಚಿಕ್ಕ ಬಿದರಿಯಿಂದ ಸಾರಥಿ ಗ್ರಾಮಕ್ಕೆ ಬರುವ ಶಾಲಾ ಮಕ್ಕಳು ಶಾಲೆಗೆ ಬರುವುದನ್ನೇ ಬಿಟ್ಟಿದ್ದಾರೆ.

    ಚಿಕ್ಕಬಿದರಿ ಹಾಗೂ ಸಾರಥಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಸೇತುವೆ ಸಂಪೂರ್ಣವಾಗಿ ಮುಳುಗಡೆಯಾಗಿದೆ. ಪ್ರತಿನಿತ್ಯ ನೂರಾರು ವಾಹನಗಳು ಓಡಾಡುತ್ತಿದ್ದು, ಸೇತುವೆ ಮುಳುಗಡೆಯಿಂದ ಸಂಚಾರ ಅಸ್ತವ್ಯಸ್ತವಾಗಿದೆ. ಅದರಲ್ಲೂ ಚಿಕ್ಕ ಬಿದರಿಯಿಂದ ಸಾರಥಿ ಗ್ರಾಮಕ್ಕೆ ಬರುವ ನೂರಾರು ಶಾಲಾ ಮಕ್ಕಳು ಶಾಲೆಗೆ ಬರುವುದನ್ನೇ ಬಿಟ್ಟಿದ್ದಾರೆ. ಎರಡು ಗ್ರಾಮಗಳಿಗೆ ಸಂಚರಿಸಲು ಬೋಟ್ ಬಿಟ್ಟಿದ್ದು ಅದು ಕೂಡ ಉಪಯೋಗವಿಲ್ಲದಂತಾಗಿದೆ. ಶಾಸಕರು ಅಧಿಕಾರಿಗಳು ಬಂದಾಗ ಮಾತ್ರ ಬೋಟ್ ಸರಿಯಾಗಿ ಕೆಲಸ ಮಾಡುತ್ತದೆ ಬಾಕಿ ಸಮಯದಲ್ಲಿ ಕೆಟ್ಟು ನಿಂತಿರುತ್ತದೆ ಎಂದು ಗ್ರಾಮಸ್ಥರು ಕಿಡಿಕಾರುತ್ತಿದ್ದಾರೆ.

    ಬೆಳಗ್ಗೆಯಿಂದಲೇ ಗ್ರಾಮದ ಜನರು ಕೆಲಸ ಕಾರ್ಯಗಳಿಗೆ ಹೋಗುವುದಕ್ಕೂ ತೊಂದರೆಯಾಗುತ್ತಿದೆ. ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೂ ಮಾತ್ರ ಬೋಟ್ ನ ವ್ಯವಸ್ಥೆ ಇದ್ದು, ಅದು ಕೂಡ ಕೇವಲ ಎರಡ್ಮೂರು ಬಾರಿ ಮಾತ್ರ ಸಂಚರಿಸುತ್ತದೆ. ಜಿಲ್ಲಾ ಉಸ್ತುವಾರಿ ಸಚಿವರು ಕೂಡ ಇಲ್ಲಿಗೆ ಬಂದು ವೀಕ್ಷಣೆ ಮಾಡಿದ್ದಾರೆಯೇ ವಿನಃ ಯಾವುದೇ ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಿಳಿಸಿಲ್ಲ. ಅಲ್ಲದೆ ನದಿಯ ತಟದಲ್ಲಿರುವ ಹೊಲ ಗದ್ದೆಗಳು ಸಂಪೂರ್ಣವಾಗಿ ಮುಳುಗಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಭಾರೀ ಮಳೆಯಿಂದಾಗಿ ಚಿಕ್ಕೋಡಿಯ 4 ಕೆಳ ಹಂತದ ಸೇತುವೆ ಮುಳುಗಡೆ!

    ಭಾರೀ ಮಳೆಯಿಂದಾಗಿ ಚಿಕ್ಕೋಡಿಯ 4 ಕೆಳ ಹಂತದ ಸೇತುವೆ ಮುಳುಗಡೆ!

    ಚಿಕ್ಕೋಡಿ: ಕೃಷ್ಣಾ ನದಿ ಅಚ್ಚುಕಟ್ಟು ಪ್ರದೇಶದಲ್ಲಿ ಭಾರೀ ಮಳೆ ಮುಂದುವರಿದಿದ್ದು, ಕೃಷ್ಣಾ ಹಾಗೂ ಕೃಷ್ಣೆಯ ಉಪ ನದಿಗಳಾದ ದೂದ ಗಂಗಾ ಹಾಗೂ ವೇದಗಂಗಾ ನದಿಗಳು ತುಂಬಿ ಹರಿಯುತ್ತಿವೆ. ಇದರಿಂದಾಗಿ ಚಿಕ್ಕೋಡಿ ತಾಲೂಕಿನ 4 ಕೆಳ ಹಂತದ ಸೇತುವೆ ಮುಳುಗಡೆಯಾಗಿವೆ.

    ಕೃಷ್ಣಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಯಡೂರು- ಕಲ್ಲೋಳ, ವೇದಗಂಗಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಭೋಜ- ಕಾರದಗಾ ಹಾಗೂ ದೂದಗಂಗಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಭೋಜವಾಡ-ಕುನ್ನೂರು, ದತ್ತವಾಡ-ಮಲಿಕವಾಡ ಸೇತುವೆಗಳು ಮುಳುಗಡೆಯಾಗಿದ್ದು ಪರ್ಯಾಯ ಮಾರ್ಗವಾಗಿ ಜನರು ಸಂಚಾರ ಮಾಡುತ್ತಿದ್ದಾರೆ.

    ಎರಡು ಕೆಳ ಹಂತದ ಸೇತುವೆಗಳು ಇಂದು ಮುಳುಗಡೆಯಾಗುವ ಸಾಧ್ಯತೆ ಇದೆ. ಹೀಗಾಗಿ 80 ಸಾವಿರ ಕ್ಕೂ ಹೆಚ್ಚು ಕ್ಯೂಸೆಕ್ ನೀರು ಕೃಷ್ಣಾ ನದಿಯ ಒಳ ಹರಿದು ಬರುತ್ತಿದೆ. 60 ಸಾವಿರ ಕ್ಯೂಸೆಕ್ ನೀರನ್ನ ಹಿಪ್ಪರಗಿ ಜಲಾಶಯದ ಮೂಲಕ ಹೊರ ಬಿಡಲಾಗುತ್ತಿದ್ದು, ಈ ಕುರಿತು ನದಿ ತೀರದ ಜನರಲ್ಲಿ ನದಿಗೆ ಇಳಿಯದಂತೆ ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಡ್ಯಾಂ ನೋಡಲು ಬಂದ ಜನಸಾಗರ – 10ಕ್ಕೂ ಹೆಚ್ಚು ಅಪಘಾತ, ಓರ್ವ ಸಾವು, 25 ಮಂದಿಗೆ ಗಾಯ

    ಡ್ಯಾಂ ನೋಡಲು ಬಂದ ಜನಸಾಗರ – 10ಕ್ಕೂ ಹೆಚ್ಚು ಅಪಘಾತ, ಓರ್ವ ಸಾವು, 25 ಮಂದಿಗೆ ಗಾಯ

    ಬಳ್ಳಾರಿ: ತುಂಗಭದ್ರಾ ಡ್ಯಾಂನ 32 ಕ್ರಸ್ಟ್ ಗೆಟ್ ಮೂಲಕ ಒಂದು ಲಕ್ಷಕ್ಕೂ ಹೆಚ್ಚು ನೀರು ನದಿಯ ಮೂಲಕ ಬಿಡುಗಡೆ ಮಾಡಿದ ಹಿನ್ನೆಲೆಯಲ್ಲಿ ಡ್ಯಾಂ ನೋಡಲು ಜನಸಾಗರ ಬಂದಿದ್ದು, ಹತ್ತಕ್ಕೂ ಹೆಚ್ಚು ಅಪಘಾತಗಳು ನಡೆದಿದೆ.

    ಟಿಬಿ ಡ್ಯಾಮ್ ಸುರಂಗ ಮಾರ್ಗದ ಬಳಿ ಅಪಘಾತ ಸಂಭವಿಸಿದ್ದು, ಮರಿಯಮ್ಮನಹಳ್ಳಿ ನಿವಾಸಿ ಅನಿಲ್ ಕುಮಾರ್ ಶೆಟ್ಟಿ (23) ಮೃತ ಪಟ್ಟಿದ್ದಾನೆ. ಬಸ್ಸಿಗೆ ಹಿಂದಿನಿಂದ ಬೈಕ್ ಡಿಕ್ಕಿ ಹೊಡೆದು ಕೆಳಗೆ ಬಿದ್ದು ಪರಿಣಾಮ ಸ್ಥಳದಲ್ಲೇ ಅನಿಲ್ ಮೃತಪಟ್ಟಿದ್ದಾನೆ. ಈತನ ಜೊತೆಯಲ್ಲಿದ್ದ ಮತ್ತೊಬ್ಬನಿಗೆ ಗಂಭೀರವಾಗಿ ಗಾಯವಾಗಿದೆ.

    ಇತ್ತ ಗುಂಡ ಪಾರಿಸ್ಟ್ ಬಳಿ ಟಾಟಾ ಸೋಮೊ ಮತ್ತು ಬಸ್ಸು ಡಿಕ್ಕಿಯಾಗಿ ನಾಲ್ಕು ಜನರಿಗೆ ಗಾಯವಾಗಿದೆ. ಗಾಯಗೊಂಡವರನ್ನು ಹನುಮಕ್ಕ (25), ಶೇಬಕ್(30) ಮತ್ತು ಪಾರಮ್ಮ (65) ಎಂದು ಗುರುತಿಸಲಾಗಿದೆ. ಬೇರೆ ಬೇರೆ ಅಪಘಾತದಲ್ಲಿ ರಾಘವೇಂದ್ರ(25), ವೆಂಕಣ್ಣ ಗೌಡ(56) ಸೇರಿದಂತೆ 25 ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿವೆ. ಅಪಘಾತದಲ್ಲಿ ಗಾಯಗೊಂಡವರನ್ನು ಹೊಸಪೇಟೆ ಸಾರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ನೀಡಲಾಗಿದೆ.

    ಅನೇಕ ದಿನಗಳಿಂದ ಜಿಲ್ಲೆಯಾದ್ಯಂತ ಎಡೆಬಿಡದೆ ಮಳೆ ಸುರಿಯುತ್ತಿರುವ ಪರಿಣಾಮ ಎಲ್ಲ ನದಿಗಳು ತುಂಬಿ ಹರಿಯುತ್ತಿವೆ. ತುಂಗಭದ್ರಾ ನದಿ ಕೂಡ ತುಂಬಿ ಹರಿಯುತ್ತಿದ್ದು, ಬುಧವಾರ ನದಿಯ ಒಳಹರಿವು ಹೆಚ್ಚಾದ ಕಾರಣ 32 ಕ್ರಸ್ಟ್ ಗೇಟ್ ಗಳ ಮೂಲಕ ಸುಮಾರು ಒಂದು ಲಕ್ಷಕ್ಕಿಂತಲೂ ಅಧಿಕ ನೀರನ್ನು ಹೊರ ಬಿಡಲಾಗಿದೆ. ಆದ್ದರಿಂದ ಜನರು ಡ್ಯಾಂ ನೋಡಲು ಬಂದಿದ್ದಾರೆ. ಈ ವೇಳೆ ಕೆಲವು ಅಪಘಾತ ಸಂಭವಿಸಿವೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಪ್ರವಾಹದ ಭೀತಿ – ಗ್ರಾಮ ತೊರೆದ ಗ್ರಾಮಸ್ಥರು

    ಪ್ರವಾಹದ ಭೀತಿ – ಗ್ರಾಮ ತೊರೆದ ಗ್ರಾಮಸ್ಥರು

    ಚಾಮರಾಜನಗರ: ಕೆಆರ್ ಎಸ್ ಹಾಗೂ ಕಬಿನಿ ಜಲಾಶಯಗಳಿಂದ ಅಧಿಕ ನೀರು ಹೊರ ಬಿಡುತ್ತಿರುವ ಹಿಲೆನ್ನೆಯಲ್ಲಿ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಹಲವು ಗ್ರಾಮದ ಜನರು ಪ್ರವಾಹದ ಭೀತಿಯಿಂದ ಗ್ರಾಮಗಳಿಂದ ವಲಸೆ ಹೋಗುತ್ತಿದ್ದಾರೆ.

    ಕೊಳ್ಳೇಗಾಲ ತಾಲೂಕಿನ ದಾಸನಪುರ, ಹಳೆಹಂಪಾಪುರ, ಎಡಕೂರಿಯ, ಹಣೆಗನಹಳ್ಳಿ ಮತ್ತು ಮುಳ್ಳುರು ಸೇರಿದಂತೆ ಇನ್ನಿತರ ಗ್ರಾಮಗಳಿಗೆ ಇದೀಗ ಪ್ರವಾಹದ ಭೀತಿ ಎದುರಾಗಿದೆ. ಹೀಗಾಗಿ ಇಲ್ಲಿನ ಗ್ರಾಮಸ್ಥರು ತಮ್ಮ ಗ್ರಾಮವನ್ನು ಬಿಟ್ಟು ತಮ್ಮ ಸಂಬಂಧಿಕರ ಮನೆಗಳಿಗೆ ಹಾಗೂ ಗಂಜಿಕೇಂದ್ರಗಳತ್ತ ತೆರಳುತ್ತಿದ್ದಾರೆ.

    ಈಗಾಗಲೇ ಗ್ರಾಮದ ಎಲ್ಲಾ ಜಮೀನುಗಳು ಜಲಾವೃತಗೊಂಡಿದ್ದು, ಇದರಿಂದ ಜಮೀನಿನಲ್ಲಿ ಬೆಳೆಯುತ್ತಿದ್ದ ಕಬ್ಬು, ಭತ್ತ, ರಾಗಿ, ಜೋಳೆ ಸೇರಿದಂತೆ ಇನ್ನಿತರ ಬೆಳೆಗಳು ನಾಶವಾಗಿವೆ. ಇದಲ್ಲದೇ ನೀರಿನ ಪ್ರಮಾಣ ಕ್ಷಣ ಕ್ಷಣಕ್ಕೂ ಹೆಚ್ಚುತ್ತಿರುವುದರಿಂದ ಗ್ರಾಮಗಳ ಅನೇಕ ಮನೆಗಳು ಈಗಾಗಲೇ ಮುಳುಗಡೆಯಾಗಿವೆ.

    ಹೀಗಾಗಿ ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ಗ್ರಾಮಗಳಿ ಭೇಟಿ ನೀಡಿ ಗ್ರಾಮದಲ್ಲಿನ ಜನರನ್ನು ಬೇರೊಂದು ಕಡೆ ವಲಸೆ ಹೋಗುವಂತೆ ಅಥವಾ ಗಂಜಿ ಕೇಂದ್ರಗಳಿಗೆ ತೆರಳುವಂತೆ ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಭೋರ್ಗರೆಯುತ್ತಿರುವ ನದಿಯಲ್ಲಿ ಹುಚ್ಚು ಸಾಹಸಗೈದು ಯುವಕರಿಂದ ಧ್ವಜಾರೋಹಣ!

    ಭೋರ್ಗರೆಯುತ್ತಿರುವ ನದಿಯಲ್ಲಿ ಹುಚ್ಚು ಸಾಹಸಗೈದು ಯುವಕರಿಂದ ಧ್ವಜಾರೋಹಣ!

    ಕೊಪ್ಪಳ: ಭೋರ್ಗರೆದು ಹರಿಯುತ್ತಿರುವ ನದಿಯಲ್ಲಿ ಹುಲಗಿ ಗ್ರಾಮದ ಯುವಕರು ಹುಚ್ಚು ಸಾಹಸ ಮಾಡಿ ಧ್ವಜವನ್ನು ಹಾರಿಸಿದ್ದಾರೆ.

    ಯುವಕರು ಅಪಾಯಮಟ್ಟ ಮೀರಿ ಹರಿಯುತ್ತಿರುವ ತುಂಗಾಭದ್ರ ನದಿಯಲ್ಲಿ ಈಜಿ, ನದಿಯ ಮಧ್ಯದಲ್ಲಿ ಕಲ್ಲುಗಳನ್ನು ಜೋಡಿಸಿ ಧ್ವಜವನ್ನು ನೆಟ್ಟಿದ್ದಾರೆ.

    ಈ ದೃಶ್ಯವನ್ನು ನೋಡುತ್ತಿದ್ದ ಗ್ರಾಮಸ್ಥರು ಸಾಹಸ ಮಾಡಲು ಹೋಗಬೇಡಿ ಎಂದು ಎಚ್ಚರಿಕೆ ನೀಡಿದ್ದರೂ ಯುವಕರು ನದಿಯ ಮಧ್ಯದಲ್ಲೇ ಧ್ವಜವನ್ನು ಹಾರಿಸಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು ಈ ರೀತಿ ಸಾಹಸ ಮಾಡಿ ದೇಶ ಪ್ರೇಮ ತೋರಿಸುವ ಅಗತ್ಯವಿಲ್ಲ. ಹೆಚ್ಚು ಕಡಿಮೆಯಾಗಿ ಪ್ರಾಣಕ್ಕೆ ಅಪಾಯ ಸಂಭವಿಸಿದರೆ ಅದಕ್ಕೆ ಹೊಣೆ ಯಾರು ಎಂದು ಪ್ರಶ್ನಿಸಿ ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ. ಇನ್ನು ಕೆಲವರು ನೀವು ರಾಷ್ಟ್ರ ಧ್ವಜವನ್ನು ಹಾರಿಸದೇ ಇದ್ದರೂ ಬೇಸರವಿಲ್ಲ. ಆದರೆ ದಯವಿಟ್ಟು ಈ ರೀತಿಯ ಹುಚ್ಚು ಸಾಹಸವನ್ನು ಯಾರು ಮಾಡಲು ಹೋಗಬೇಡಿ ಎಂದು ಕಮೆಂಟ್ ಮಾಡುತ್ತಿದ್ದಾರೆ.

    ಮಲೆನಾಡು ಭಾಗದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ತುಂಗಾಭದ್ರ ನದಿಯು ಅಪಾಯದಮಟ್ಟವನ್ನು ಮೀರಿ ಹರಿಯುತ್ತಿದೆ. ಈಗಾಗಲೇ ತುಂಗಭದ್ರಾ ಜಲಾಶಯವು ಸಹ ತುಂಬಿದ್ದು, ಜಲಾಶಯದಿಂದ ಭಾರೀ ಪ್ರಮಾಣದ ನೀರನ್ನು ಹೊರಕ್ಕೆ ಬಿಡಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ತುಂಗಭದ್ರಾ ಜಲಾಶಯ ಎಲ್ಲಾ ಗೇಟ್ ಓಪನ್ – ಗಂಗಾವತಿ ಕಂಪ್ಲಿ ಸೇತುವೆ ಮುಳುಗಡೆ

    ತುಂಗಭದ್ರಾ ಜಲಾಶಯ ಎಲ್ಲಾ ಗೇಟ್ ಓಪನ್ – ಗಂಗಾವತಿ ಕಂಪ್ಲಿ ಸೇತುವೆ ಮುಳುಗಡೆ

    ಕೊಪ್ಪಳ: ತುಂಗಭದ್ರಾ ಜಲಾಶಯಕ್ಕೆ ಒಳ ಹರಿವು ಹೆಚ್ಚಾದ ಹಿನ್ನೆಲೆಯಲ್ಲಿ ಮಂಗಳವಾರ ಸಂಜೆ ಜಲಾಶಯದ ಎಲ್ಲಾ ಗೇಟುಗಳ ಮೂಲಕ ನೀರನ್ನು ನದಿಗೆ ಹರಿದು ಬಿಡಲಾಗಿದೆ. ಈ ಹಿನ್ನೆಲೆಯಲ್ಲಿ ಕೊಪ್ಪಳದ ಗಂಗಾವತಿ ತಾಲೂಕಿನ ಚಿಕ್ಕಜಂತಕಲ್ ಬಳಿ ಇರುವ ಕಂಪ್ಲಿ ಸೇತುವೆ ನೀರಿನಲ್ಲಿ ಮುಳುಗಡೆಯಾಗಿದೆ.

    ಅಧಿಕ ಪ್ರಮಾಣದ ನೀರು ಹರಿಸಿದ ಪರಿಣಾಮ ಮಂಗಳವಾರ ರಾತ್ರಿಯೇ ಸೇತುವೆ ಮೇಲೆ ವಾಹನ ಸಂಚಾರವನ್ನು ಬಂದ್ ಮಾಡಲಾಗಿತ್ತು. ಅಲ್ಲದೇ ಮುನ್ನೆಚ್ಚರಿಕಾ ದೃಷ್ಟಿಯಿಂದ ಸೇತುವೆ ಬಳಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.

    ಚಿಕ್ಕ ಜಂತಕಲ್ ಸೇತುವೆಯನು 1961ರಲ್ಲಿ ನಿರ್ಮಿಸಲಾಗಿದ್ದು, ಕಳೆದ 10 ವರ್ಷದ ಹಿಂದೆ ಈ ಸೇತುವೆ ಶೀತಲಗೊಂಡ ಬಗ್ಗೆ ಗಂಗಾವತಿ ಲೋಕೋಪಯೋಗಿ ಇಲಾಖೆ ಸರ್ಕಾರಕ್ಕೆ ಮನವಿಯನ್ನು ಸಲ್ಲಿಸಿತ್ತು. ಇದೇ ವೇಳೆ ಸೇತುವೆ ಮೇಲೆ ಭಾರೀ ವಾಹನಗಳ ಸಂಚಾರವನ್ನು ನಿಷೇಧ ಮಾಡಲು ಮನವಿ ಸಲ್ಲಿಸಿಲಾಗಿತ್ತು. ಆದರೆ ಈ ಕುರಿತು ಜಿಲ್ಲಾಡಳಿತ ನಿರ್ಲಕ್ಷ್ಯ ವಹಿಸುತ್ತಿದ್ದು, ಸೇತುವೆ ಭಾರೀ ವಾಹನ ಓಡಾಟಕ್ಕೆ ನಿಷೇಧಸಲು ಯಾವುದೇ ಕ್ರಮಕೈಗೊಂಡಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.

    ಪ್ರತಿ ಸಾರಿ ತುಂಗಾಭದ್ರಾ ಡ್ಯಾಂನಿಂದ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿಬಿಟ್ಟಾಗಲೆಲ್ಲಾ ಸೇತುವೆ ಮೇಲೆ ನೀರು ಹರಿದು ಬರುತ್ತಿದ್ದು ಪ್ರಯಾಣಿಕರಿಗೆ ಸಂಕಷ್ಟ ತಂದಿದೆ. ಗಂಗಾವತಿಯಿಂದ ಕೇವಲ 5 ಕಿಮೀ ದೂರದಲ್ಲಿರುವ ಕಂಪ್ಲಿಗೆ ತೆರಳಲು ಈ ಮಾರ್ಗ ಹತ್ತಿರವಾಗಿದ್ದು, ಸಂಪರ್ಕ ಕಡಿತಗೊಂಡರೆ ಸುಮಾರು 50 ಕಿಮೀ ಹೆಚ್ಚು ಪ್ರಯಾಣ ನಡೆಸಬೇಕಾಗುತ್ತದೆ.

    ಸದ್ಯ ಈ ಮಾರ್ಗದ ಪರ್ಯಾಯವಾಗಿ ಗಂಗಾವತಿಯ ಕಡೆಬಾಗಿಲು ಬುಕ್ಕಸಾಗರ ಸೇತುವೆಯಲ್ಲಿ ವಾಹನ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ಇದೇ ವೇಳೆ ನದಿಯಲ್ಲಿ ಹೆಚ್ಚು ನೀರು ಹರಿದುಹೋಗುತ್ತಿರುವುದರಿಂದ ಸಾರ್ವಜನಿಕರು ಅಪಾಯವನ್ನು ಲೆಕ್ಕಿಸದೇ ಸೆಲ್ಫಿ ಕ್ಲಿಕ್ಕಿಸುತ್ತಿದ್ದು, ವಾಹನ ಸಂಚಾರಕ್ಕೆ ಸಮಸ್ಯೆಯಾಗುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ನೂರಕ್ಕೂ ಹೆಚ್ಚು ಮನೆಗಳಿಗೆ ನುಗ್ಗಿದ ನೀರು -ಪ್ರವಾಹದ ಭೀತಿಯಲ್ಲಿ ಜನರು

    ನೂರಕ್ಕೂ ಹೆಚ್ಚು ಮನೆಗಳಿಗೆ ನುಗ್ಗಿದ ನೀರು -ಪ್ರವಾಹದ ಭೀತಿಯಲ್ಲಿ ಜನರು

    ದಾವಣಗೆರೆ: ಮಲೆನಾಡು ಭಾಗದಲ್ಲಿ ಕಳೆದ ಕೆಲ ದಿನಗಳಿಂದ ಉತ್ತಮ ಮಳೆಯಾಗುತ್ತಿದ್ದು, ತುಂಗಾ ಹಾಗೂ ಭದ್ರಾ ನದಿಗಳಿಂದ ಸುಮಾರು 1.45 ಲಕ್ಷ ಕ್ಯೂಸೆಕ್ಸ್ ನೀರು ನದಿಗೆ ಬಿಟ್ಟ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಪ್ರವಾಹದ ಭೀತಿ ಎದುರಾಗಿದೆ.

    ಹೊನ್ನಾಳಿ ಪಟ್ಟಣದ ಬಾಲರಾಜ್ ಘಾಟ್ ನೂರಕ್ಕೂ ಹೆಚ್ಚು ಮನೆಗಳಿಗೆ ನುಗ್ಗಿದ್ದು, ಸಂತ್ರಸ್ಥರಿಗೆ ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಗಂಜಿ ಕೇಂದ್ರಗಳನ್ನು ವ್ಯವಸ್ಥೆ ಮಾಡಲಾಗಿದೆ. ನದಿಯ ತಟದಲ್ಲಿರುವ ಹರಿಹರ ತಾಲೂಕಿನ ಉಕ್ಕಡಗಾತ್ರಿಯ ಅಜ್ಜಯ್ಯನ ದೇವಸ್ಥಾನದ ಮುಂಭಾಗಕ್ಕೆ ನೀರು ನುಗ್ಗಿದ್ದು, ದೇವಸ್ಥಾನದ ಮುಂಭಾಗವಿರುವ ಮನೆಗಳಿಗೆ ಹಾಗೂ ಅಂಗಡಿ ಮುಂಗಟ್ಟುಗಳಿಗೆ ಹೊಳೆ ನೀರು ನುಗ್ಗಿದೆ.

    ಪರಿಣಾಮ ತೆಪ್ಪದ ಮೂಲಕ ಸಾಮಾಗ್ರಿಗಳನ್ನು ಸಾಗಿಸುತ್ತಿದ್ದಾರೆ. ಇನ್ನೊಂದೆಡೆ ಹರಿಹರ ತಾಲೂಕಿನ ಚಿಕ್ಕಬಿದರೆ ಹಾಗೂ ಸಾರಥಿ ಗ್ರಾಮಗಳಿಗೆ ಸಂಪರ್ಕ ಸಂಪೂರ್ಣ ಕಡಿತವಾಗಿದೆ. ಜಿಲ್ಲಾಡಳಿತ ಬೆಳಗ್ಗಿನಿಂದಲೇ ದೋಣಿ ಸಂಚಾರ ಆರಂಭಿಸಿದ್ದು, ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಳಿಸಲಾಗಿದೆ.

    ನದಿಯಲ್ಲಿ 11.06 ಮೀಟರ್ ಎತ್ತರದಲ್ಲಿ ನೀರು ಹರಿಯುತ್ತಿದ್ದು, ಇನ್ನಷ್ಟು ನೀರು ಬಂದರೆ 12 ಗ್ರಾಮಗಳಿಗೆ ಪ್ರವಾಹದ ಭೀತಿಯಲ್ಲಿವೆ. ಕ್ಷಣ ಕ್ಷಣಕ್ಕೆ ಹೆಚ್ಚಾಗುತ್ತಿರುವ ನೀರಿನ ಮಟ್ಟದಿಂದ ನದಿ ಪಾತ್ರದ ಜನರು ಆತಂಕದಲ್ಲಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv