Tag: ನದಿ

  • ಚೆನ್ನೈನಲ್ಲಿ ನೀರಿಗೆ ಹಾಹಾಕಾರ – ಮಳೆಗಾಗಿ ತಮಿಳುನಾಡು ಸರ್ಕಾರದಿಂದ ಯಜ್ಞ

    ಚೆನ್ನೈನಲ್ಲಿ ನೀರಿಗೆ ಹಾಹಾಕಾರ – ಮಳೆಗಾಗಿ ತಮಿಳುನಾಡು ಸರ್ಕಾರದಿಂದ ಯಜ್ಞ

    ಚೆನ್ನೈ: ತಮಿಳುನಾಡಿನ ರಾಜಧಾನಿ ಚೆನ್ನೈನಲ್ಲಿ ನೀರಿನ ಹಾಹಾಕಾರ ಮುಂದುವರಿದಿದ್ದು, ರಾಜ್ಯ ಸರ್ಕಾರ ವರುಣನ ಮೊರೆ ಹೋಗಿದೆ.

    ತಮಿಳುನಾಡು ಸರ್ಕಾರ ಪೆರೂರಿನ ಪಟ್ಟೀಶ್ವರ ದೇವಸ್ಥಾನದಲ್ಲಿ ಹಾಗೂ ಎಐಎಡಿಎಂಕೆ ನಾಯಕರು ಪುರಸವಾಲ್ಕಂನಲ್ಲಿರುವ ಅರುಲ್ಮಿಗು ಗಂಗಾದೀಶ್ವರ ದೇವಸ್ಥಾನದಲ್ಲಿ ವರುಣನಿಗಾಗಿ ಯಜ್ಞ ನಡೆಸುತ್ತಿವೆ.

    ಚೆನ್ನೈ ನಗರದಲ್ಲಿ ಅನೇಕ ಕೆರೆಗಳನ್ನು ಒತ್ತುವರಿ ಮಾಡಲಾಗಿದೆ. ಅಷ್ಟೇ ಅಲ್ಲದೆ ಕೆಲವು ಕೆರೆಗಳನ್ನು ನೆಲಸಮಗೊಳಿಸಿ ಐಟಿ ಕಂಪನಿಗಳನ್ನು ತೆರೆಯಲಾಗಿದೆ. ಇದರಿಂದಾಗಿ ನೀರಿನ ಸಂಗ್ರಹಿಸಲು ಸೂಕ್ತ ವ್ಯವಸ್ಥೆಯಿಲ್ಲ ಸರ್ಕಾರ ಭಾರೀ ಸವಾಲುಗಳನ್ನು ಎದುರಿಸುತ್ತಿದೆ. ಹೀಗಾಗಿ ನೀರಿನ ಹಾಹಾಕಾರವನ್ನು ಚೆನ್ನೈ ಎದುರಿಸುತ್ತಿದೆ ಎಂದು ವರದಿಯಾಗಿದೆ.

    2400 ಎಕರೆ ಕಣ್ಮರೆ:
    ಚೆನ್ನೈ ಕಳೆದ ನಾಲ್ಕು ದಶಕಗಳಲ್ಲಿ ವೆಲಾಚೇರಿ ಸರೋವರದ ಹತ್ತು ಪಟ್ಟು ಪ್ರಮಾಣದಲ್ಲಿ ಜಲಮೂಲಗಳನ್ನು ಕಳೆದುಕೊಂಡಿದೆ. ಹೀಗಾಗಿ ದೀರ್ಘಕಾಲಿಕ ನೀರಿನ ಮೂಲಗಳಿಂದ ಚೆನ್ನೈ ಪರದಾಡುವಂತಾಗಿದೆ.

    ವೇಗವಾಗಿ ಬೆಳೆದ ನಗರೀಕರಣದಿಂದ ಚೆನ್ನೈನ ನಗರದ ವ್ಯಾಪ್ತಿಯ ಕೆರೆಗಳು ಮತ್ತು ಗದ್ದೆಗಳು ನಿಧಾನವಾಗಿ ಮುಚ್ಚಲ್ಪಟ್ಟವು. ಈ ನಿರ್ಲಕ್ಷ್ಯದ ಅತ್ಯಂತ ಭೀಕರವಾದ ದೋಷಾರೋಪಣೆಯು ಪ್ರವಾಹದ ನಂತರ ತಮಿಳುನಾಡು ವಿಧಾನಸಭೆಯಲ್ಲಿ ಮಂಡಿಸಲಾದ ಮಹಾಲೇಖಪಾಲರ (ಸಿಎಜಿ) ವರದಿಯಲ್ಲಿ ಬೆಳಕಿಗೆ ಬಂದಿತ್ತು.

    ಈ ವರದಿಯಲ್ಲಿ ನಿಯಮಗಳನ್ನು ಪಾಲಿಸದೆ ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡುವಲ್ಲಿ ಚೆನ್ನೈ ಮಹಾನಗರ ಅಭಿವೃದ್ಧಿ ಪ್ರಾಧಿಕಾರದ (ಸಿಎಂಡಿಎ) ಲೋಪವನ್ನು ಎತ್ತಿ ತೋರಿಸಿದೆ. ಸಿಎಂಡಿಎ ನಿರ್ಲಕ್ಷ್ಯದಿಂದಾಗಿ 1979 ಮತ್ತು 2016ರ ನಡುವೆ ಜಲಮೂಲಗಳ ಪ್ರದೇಶವು 2389 ಎಕರೆಗಳಷ್ಟು ಕುಗ್ಗಿದೆ ಎಂದು ತಿಳಿಸಿತ್ತು.

    ಮೊಗಪ್ಪೈರ್ ಸರೋವರ, ಅಂಬತ್ತೂರು ಟ್ಯಾಂಕ್ ಮತ್ತು ಪಲ್ಲಿಕರಾನೈ ಮಾರ್ಷ್ ಇತರ ಜಲಮೂಲಗಳು ಕುಗ್ಗುತ್ತಿರುವ ಬಗ್ಗೆಯೂ ವರದಿಯಲ್ಲಿ ತಿಳಿಸಲಾಗಿದೆ.

    ನಗರದಲ್ಲಿನ ಜಲಾಶಯಗಳು, ಸರೋವರಗಳು, ಟ್ಯಾಂಕ್‍ಗಳ ಪುನಃಸ್ಥಾಪನೆ ಮತ್ತು ಸರಿಯಾದ ನಿರ್ವಹಣೆ ಕಳೆದ ಎರಡು ದಶಕಗಳಿಂದ ನಿರ್ಲಕ್ಷ್ಯೆಗೆ ಒಳಗಾಗಿದೆ. ಜಲಮೂಲಗಳನ್ನು ನಿರ್ಮಿಸಲು ಮತ್ತು ಪುನಃಸ್ಥಾಪಿಸಲು ಕಳಪೆ ಪ್ರಯತ್ನಗಳು ನಡೆದಿವೆ.

    ಜಲಮೂಲಗಳ ಪುನಃಸ್ಥಾಪನೆಗೆ ಸಂಬಂಧಿಸಿದಂತೆ, ನೀರಿನ ಕೊರತೆ ಕುರಿತು ಮದ್ರಾಸ್ ಹೈಕೋರ್ಟ್ ಗೆ ಚೆನ್ನೈ ಮೆಟ್ರೋ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಮುಖ್ಯ ಎಂಜಿನಿಯರ್ ಮಾಹಿತಿ ನೀಡಿ, ನಗರದ 210ರ ಜಲಮೂಲಗಳ ಪೈಕಿ ಐದು ಮಾತ್ರ ಪುನಃಸ್ಥಾಪಿಸಲಾಗಿದೆ. ಇದು 2017 ರಲ್ಲಿ ಪ್ರಾರಂಭವಾದ ಸಹಕಾರಿ ನೀರು ನಿರ್ವಹಣಾ ಯೋಜನೆಗೆ ಸಂಬಂಧಿಸಿದೆ. ಅನೇಕ ಪ್ರದೇಶಗಳಲ್ಲಿನ ಸಮುದಾಯಗಳು ಸ್ವಯಂಸೇವಾ ಸಂಸ್ಥೆಗಳು ಸ್ವಯಂ ಪ್ರೇರಣೆಯಿಂದ ಕೆರೆಗಳ ಅಭಿವೃದ್ಧಿಗೆ ಶ್ರಮಿಸುತ್ತಿವೆ ಎಂದು ತಿಳಿಸಿದ್ದಾರೆ.

    ಸಾಮರ್ಥ್ಯ ಇಳಿಕೆ:
    ಪೂಂಡಿ, ರೆಡ್ ಹಿಲ್ಸ್, ಚೋಲವರಂ ಮತ್ತು ಚೆಂಬರಂಬಕ್ಕಂ ನಾಲ್ಕು ಪ್ರಮುಖ ಜಲಾಶಯಗಳ ನಿರ್ವಹಣೆ ಸರಿಯಾಗಿ ಆಗುತ್ತಿಲ್ಲ. ಹೀಗಾಗಿ ಅವುಗಳ ಶೇಖರಣಾ ಸಾಮರ್ಥ್ಯದಲ್ಲಿ ಶೇ.20 ರಷ್ಟು ಇಳಿಕೆಯಾಗಿದೆ. ಚೆನ್ನೈಗೆ ನೀರು ಸರಬರಾಜಿಗಾಗಿ 1944ರಲ್ಲಿ ಪೂಂಡಿ ಜಲಾಶಯ ನಿರ್ಮಿಸಲಾಯಿತು. ಥರ್ವೊಯ್ ಕಂಡಿಗೈನಲ್ಲಿ ದೀರ್ಘಾವಧಿಯ ಐದನೇ ಜಲಾಶಯವನ್ನು 2013ರಲ್ಲಿ ಕಾರ್ಯಾರಂಭ ಮಾಡಲಾಯಿತು. ಆದರೆ ಭೂಸ್ವಾಧೀನ ವಿಳಂಬದಿಂದಾಗಿ ಈ ವರ್ಷದ ಅಂತ್ಯದವರೆಗೂ ಜಲಾಶಯವು ಕಾರ್ಯನಿರ್ವಹಿಸದಂತಾಗಿದೆ.

    ನಗರದಲ್ಲಿ ಹರಿಯುವ ಮೂರು ನದಿಗಳು ಹೆಚ್ಚು ಕಲುಷಿತಗೊಂಡಿದ್ದು, ಅವುಗಳ ಶುದ್ಧಿಕರಣಕ್ಕೆ ಸರ್ಕಾರ ಯಾವುದೇ ಕ್ರಮಕೈಗೊಂಡಿಲ್ಲ. ಸಿಎಜಿ ವರದಿಯು ರಾಜ್ಯದ ಕಡೆಯಿಂದ ಈ ವೈಫಲ್ಯವನ್ನು ಎತ್ತಿ ತೋರಿಸುತ್ತಿದೆ. ಕೊಸಸ್ಥಲಿಯಾರ್ ನದಿಯಲ್ಲಿ ಕೈಗಾರಿಕಾ ತಾಜ್ಯವನ್ನ ಹರಿಬಿಡಲಾಗುತ್ತಿದೆ. ಅಡ್ಯಾರ್ ನದಿಯಲ್ಲೂ ಕಸದ ರಾಶಿ ಹೆಚ್ಚಾಗಿತ್ತು. ರಾಷ್ಟ್ರೀಯ ಹಸಿರು ನ್ಯಾಯಪೀಠ ಈ ವಿಚಾರಕ್ಕೆ ಸಂಬಂಧಿಸಿದ ಅರ್ಜಿ ವಿಚಾರಣೆಯಲ್ಲಿ ರಾಜ್ಯ ಸರ್ಕಾರಕ್ಕೆ 100 ಕೋಟಿ ರೂ. ದಂಡ ವಿಧಿಸಿತ್ತು.

    [wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]

  • ನದಿಯಲ್ಲಿ ಬೀಳ್ತಿದ್ದ ಪುಟ್ಟ ಪೋರಿಯನ್ನು ರಕ್ಷಿಸಿದ ನಾಯಿ: ವಿಡಿಯೋ

    ನದಿಯಲ್ಲಿ ಬೀಳ್ತಿದ್ದ ಪುಟ್ಟ ಪೋರಿಯನ್ನು ರಕ್ಷಿಸಿದ ನಾಯಿ: ವಿಡಿಯೋ

    ದಿಯಲ್ಲಿ ಬೀಳುತ್ತಿದ್ದ ಪುಟ್ಟ ಬಾಲಕಿಯನ್ನು ನಾಯಿ ರಕ್ಷಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

    16 ಸೆಕೆಂಡ್ ಈ ವಿಡಿಯೋದಲ್ಲಿ ಬಾಲಕಿ ಆಳವಾದ ನದಿಯಲ್ಲಿ ಬಿದ್ದ ಬಾಲನ್ನು ತೆಗೆದುಕೊಳ್ಳಲು ಮುಂದಾಗುತ್ತಾಳೆ. ಈ ವೇಳೆ ಅಲ್ಲಿಯೇ ಕುಳಿತಿದ್ದ ನಾಯಿ ಆಕೆಯ ಫ್ರಾಕ್ ಹಿಡಿದು ಹಿಂದೆ ಎಳೆದು ಕೆಳಗೆ ಬೀಳಿಸುತ್ತದೆ. ಬಳಿಕ ತಾನೇ ನದಿ ಬಳಿ ಹೋಗಿ ಬಾಲ್ ತೆಗೆದುಕೊಂಡು ಬರುತ್ತದೆ.

    ಈ ವಿಡಿಯೋವನ್ನು 41 ಸಾವಿರ ಫಾಲೋವರ್ಸ್ ವುಳ್ಳ ಫಿಸಿಕ್ಸ್ ಆಸ್ಟ್ರೋನೋಮಿ. ಆರ್ ಗನೈಸೇಶನ್ ತನ್ನ ಟ್ವಿಟ್ಟರ್ ಖಾತೆಯಲ್ಲಿ ಟ್ವೀಟ್ ಮಾಡಿದೆ. ಈ ವಿಡಿಯೋಗೆ ಇದುವರೆಗೂ 93,000ಕ್ಕೂ ಹೆಚ್ಚು ರೀ-ಟ್ವೀಟ್ ಬಂದಿದೆ ಹಾಗೂ 30 ಲಕ್ಷಕ್ಕೂ ಹೆಚ್ಚು ವ್ಯೂ ಬಂದಿದೆ.

    ಕೆಲವರು ಈ ವಿಡಿಯೋ ನೋಡಿ ‘ಯಾವುದೇ ಪದ ಇಲ್ಲ’ ಎಂದು ಕಮೆಂಟ್ ಮಾಡಿದರೆ, ಮತ್ತೆ ಕೆಲವರು ‘ಯಾಕೆ ಮನುಷ್ಯರು ನಾಯಿಗಿಂತ ಹೆಚ್ಚಾಗಿ ಇರುವುದಿಲ್ಲ ಹಾಗೂ ಎಲ್ಲರನ್ನು ರಕ್ಷಿಸುವುದಿಲ್ಲ’ ಎಂದು ಟ್ವೀಟ್ ಮಾಡಿದ್ದಾರೆ. ಮತ್ತೆ ಕೆಲವರು ‘ಹೀರೋ’, ‘ಗುಡ್ ಡಾಗ್’ ಎಂದು ಕಮೆಂಟ್ ಮಾಡಿದ್ದಾರೆ.

  • ಮಾಂತ್ರಿಕನ ಜೊತೆ ಸೆಕ್ಸ್‌ಗೆ ನಿರಾಕರಿಸಿದ್ದಕ್ಕೆ ಪತ್ನಿಯನ್ನು ನದಿಯಲ್ಲಿ ಮುಳುಗಿಸ್ದ

    ಮಾಂತ್ರಿಕನ ಜೊತೆ ಸೆಕ್ಸ್‌ಗೆ ನಿರಾಕರಿಸಿದ್ದಕ್ಕೆ ಪತ್ನಿಯನ್ನು ನದಿಯಲ್ಲಿ ಮುಳುಗಿಸ್ದ

    ಲಕ್ನೋ: ಮಾಂತ್ರಿಕನ ಜೊತೆ ಸೆಕ್ಸ್‌ಗೆ ನಿರಾಕರಿಸಿದ್ದಕ್ಕೆ ಪತಿಯೊಬ್ಬ ತನ್ನ ಪತ್ನಿಯನ್ನು ನದಿಯಲ್ಲಿ ಮುಳುಗಿಸಿ ಕೊಲೆ ಮಾಡಿದ ಘಟನೆ ಉತ್ತರ ಪ್ರದೇಶದ ಅಲಿಘರ್ ನಲ್ಲಿ ನಡೆದಿದೆ.

    ಮಾನ್‍ಪಾಲ್ ಕೊಲೆ ಮಾಡಿದ ಆರೋಪಿ. ಮಾನ್‍ಪಾಲ್ ತನ್ನ ಪತ್ನಿಯನ್ನು ಕೊಲೆ ಮಾಡುತ್ತಿರುವುದನ್ನು ಆತನ ಮಗ ನೋಡಿದ್ದಾನೆ. ಅಲ್ಲದೆ ತನ್ನ ತಾಯಿಯನ್ನು ರಕ್ಷಿಸಲು ಮುಂದಾದರೆ ಕೊಲುವುದಾಗಿ ಮಹಿಳೆಯ ಸಹೋದರ ಬೆದರಿಕೆ ಹಾಕಿದ್ದನು.

    ಈ ಬಗ್ಗೆ ಮಹಿಳೆಯ ಸಹೋದರ ರಾಜೇಶ್ ಕುಮಾರ್ ದೂರು ನೀಡಲು ದಾಡೋನ್ ಪೊಲೀಸ್ ಠಾಣೆಗೆ ಹೋಗಿದ್ದರು. ಅಲ್ಲದೆ ಎರಡು ದಿನಗಳ ಹಿಂದೆ ನನ್ನ ಸಹೋದರಿ ಭಯಗೊಂಡು ನನಗೆ ಕರೆ ಮಾಡಿ ಈ ವಿಷಯದಲ್ಲಿ ಮಧ್ಯಸ್ಥಿಕೆ ವಹಿಸಲು ಹೇಳಿದ್ದಳು ಎಂದು ರಾಜೇಶ್ ತಿಳಿಸಿದ್ದಾರೆ ಎಂದು ಎಸ್‍ಎಸ್‍ಪಿ ಆಕಾಶ್ ಕುಲ್ಹಾರಿ ತಿಳಿಸಿದ್ದಾರೆ.

    ಮಾಂತ್ರಿಕನ ವಿಷಯಕ್ಕಾಗಿ ಪತಿ -ಪತ್ನಿ ನಡುವೆ ಜಗಳ ನಡೆಯುತ್ತಿತ್ತು. ಬಳಿಕ ಗುರುವಾರ ಈ ವಿಷಯ ಇತ್ಯರ್ಥವಾಗಿ ಮಾನ್‍ಪಾಲ್ ನದಿ ಬಳಿ ಹೋಗೋಣ ಎಂದು ತನ್ನ ಪತ್ನಿಯನ್ನು ಕರೆದುಕೊಂಡು ಹೋದನು. ಅಲ್ಲಿಗೆ ಹೋಗುತ್ತಿದ್ದಂತೆ ಮಾನ್‍ಪಾಲ್ ಆಕೆಯನ್ನು ನದಿಗೆ ತಳ್ಳಿ ಕೊಲೆ ಮಾಡಿದ್ದಾನೆ.

    ಮಹಿಳೆಯನ್ನು ಕೊಲೆ ಮಾಡಿದ ನಂತರ ಮಾನ್‍ಪಾಲ್ ಹಾಗೂ ಮಾಂತ್ರಿಕ ಸಂತ್‍ದಾಸ್ ದುರ್ಗಾ ದಾಸ್ ನದಿಯಲ್ಲಿ ಈಜಿ ನೆರೆಯ ಬದೌನ್ ಜಿಲ್ಲೆಗೆ ಪರಾರಿಯಾದರು. ಈ ಬಗ್ಗೆ ದೂರು ನೀಡಿದ ಬಳಿಕ ಪೊಲೀಸರು ಇಬ್ಬರನ್ನು ಬಂಧಿಸಿ, ನದಿಯಿಂದ ಮಹಿಳೆಯ ಶವವನ್ನು ಹೊರ ತೆಗೆದರು.

  • ಬೆಂಗ್ಳೂರಿಗೆ ನೀರು ಪೂರೈಸಲು ಸಿಎಂ ಮೆಗಾಪ್ಲಾನ್ – ಲಿಂಗನಮಕ್ಕಿ ಜೊತೆಗೆ ತುಂಗಭದ್ರಾ ಮೇಲೂ ಕಣ್ಣು

    ಬೆಂಗ್ಳೂರಿಗೆ ನೀರು ಪೂರೈಸಲು ಸಿಎಂ ಮೆಗಾಪ್ಲಾನ್ – ಲಿಂಗನಮಕ್ಕಿ ಜೊತೆಗೆ ತುಂಗಭದ್ರಾ ಮೇಲೂ ಕಣ್ಣು

    – ಎಲ್ಲಾ ರಸ್ತೆಗಳಲ್ಲಿ ಟೋಲ್ ಸಂಗ್ರಹ

    ಬೆಂಗಳೂರು: ಶರವೇಗದಲ್ಲಿ ಬೆಳೆಯುತ್ತಿರುವ ಬೆಂಗಳೂರು ನಗರದ ನೀರಿನ ಸಮಸ್ಯೆ ನಿವಾರಿಸಲು ಸಮ್ಮಿಶ್ರ ಸರ್ಕಾರ ಹೊಸ ಉಪಾಯ ಹುಡುಕುತ್ತಿದೆ.

    ಕಾವೇರಿ ನೀರಿಗೆ ಪರ್ಯಾಯವಾಗಿ ಲಿಂಗನಮಕ್ಕಿ ಜಲಾಶಯದಿಂದ ಕುಡಿಯುವ ನೀರು ತರುವ ಯೋಜನೆ ಜೊತೆಗೆ ತುಂಗಭದ್ರಾ ನದಿಯಿಂದಲೂ ನೀರು ಹರಿಸುವ ಯತ್ನಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ. ತುಂಗಭದ್ರಾ ನದಿಯಿಂದ ಬೆಂಗಳೂರಿಗೆ 18 ಟಿಎಂಸಿ ನೀರು ತರುವ ಬಗ್ಗೆ ಯೋಜನೆಯ ರೂಪುರೇಷೆ ಸಿದ್ಧಪಡಿಸುವಂತೆ ಮುಖ್ಯಮಂತ್ರಿಗಳು ಸೂಚಿಸಿದ್ದಾರೆ.

    ಜಲಸಂಪನ್ಮೂಲ ಇಲಾಖೆಯ ಸಭೆಯಲ್ಲಿ ತುಂಗಭದ್ರಾ ನದಿಯಿಂದ ಬೆಂಗಳೂರಿಗೆ ನೀರು ತರುವ ಬಗ್ಗೆ ಎಂಜಿನಿಯರ್ ಗಳು ಪ್ರಸ್ತಾಪಿಸಿದ್ದಾರೆ. ಇದಕ್ಕೆ ಸ್ಪಂದಿಸಿರುವ ಮುಖ್ಯಮಂತ್ರಿಗಳು ಯೋಜನೆ ಸಿದ್ಧಪಡಿಸಿ ಎಂದು ಸೂಚಿಸಿದ್ದಾರೆ ಎಂದು ಮೂಲಗಳು ಹೇಳಿವೆ.

    ಲಿಂಗನಮಕ್ಕಿಯಿಂದ 30 ಟಿಎಂಸಿ ನೀರುವ ತರುವ ಯೋಜನೆ ಹಿಂದಿನ ಸರ್ಕಾರದ್ದಾಗಿದ್ದು, ಅದರ ವಿಸ್ತೃತ ಯೋಜನಾ ವರದಿ ಸಿದ್ಧಪಡಿಸುವಂತೆಯೂ ಸಿಎಂ ಸಲಹೆ ನೀಡಿದ್ದಾರೆ. ಲಿಂಗನಮಕ್ಕಿಯಿಂದ ಬೆಂಗಳೂರಿಗೆ ನೀರು ತಂದಲ್ಲಿ ಕೋಲಾರ, ಚಿಕ್ಕಬಳ್ಳಾಪುರಗಳಿಗೂ ಕುಡಿಯಲು ಕೊಡಬಹುದು ಅನ್ನೋದು ಮುಖ್ಯಮಂತ್ರಿಗಳ ಚಿಂತನೆಯಾಗಿದೆ.

    ಈ ಮಧ್ಯೆ ರಾಜ್ಯದಲ್ಲಿ ಮುಂದಿನ ದಿನಗಳಲ್ಲಿ 1,117 ಕಿ.ಮೀ. ರಸ್ತೆ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ. ಇದಕ್ಕಾಗಿ ಎಲ್ಲ ರಸ್ತೆಗಳಲ್ಲಿ ಟೋಲ್ ಸಂಗ್ರಹಕ್ಕೆ ಲೋಕೋಪಯೋಗಿ ಸಚಿವ ರೇವಣ್ಣ ಸೂಚಿಸಿದ್ದಾರೆ.

  • ನೀರಿಗೆ ಬರ – ಸ್ತಬ್ಧವಾಗ್ತಿದೆ ಏಷ್ಯಾದ ಮೂರನೇ ಅತಿದೊಡ್ಡ ನೌಕಾನೆಲೆ

    ನೀರಿಗೆ ಬರ – ಸ್ತಬ್ಧವಾಗ್ತಿದೆ ಏಷ್ಯಾದ ಮೂರನೇ ಅತಿದೊಡ್ಡ ನೌಕಾನೆಲೆ

    ಕಾರವಾರ: ಏಷ್ಯಾದಲ್ಲಿಯೇ ಮೂರನೇ ಅತಿದೊಡ್ಡ ನೌಕಾನೆಲೆ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿರುವ ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕದಂಬಾ ನೌಕಾನೆಲೆಗೀಗ ಬರದ ಕರಿ ಛಾಯೆ ತಟ್ಟಿದೆ. ಇಡೀ ನೌಕಾನೆಲೆಗೆ ನೀರಿನ ಕೊರತೆಯಿಂದಾಗಿ ನೌಕಾನೆಲೆಯ ಕೆಲಸಕಾರ್ಯಗಳನ್ನೇ ಬಂದ್ ಮಾಡಲು ನೌಕಾ ದಳ ಹೊರಟಿದೆ.

    ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಅರಗಾದಲ್ಲಿರುವ ಭಾರತೀಯ ನೌಕಾದಳವು 11,500 ಎಕರೆ ಪ್ರದೇಶವನ್ನು ಹೊಂದುವ ಮೂಲಕ ಏಷ್ಯಾದಲ್ಲಿಯೇ ಮೂರನೇ ಅತಿದೊಡ್ಡ ನೌಕಾನೆಲೆ ಎನ್ನುವ ಹೆಗ್ಗಳಿಕೆಯನ್ನು ಗಿಟ್ಟಿಸಿಕೊಂಡಿದೆ. ಹೀಗಾಗಿ ಈ ನೌಕಾನೆಲೆಯಲ್ಲಿ ಫೇಸ್-2 ಹಂತದ ಅಭಿವೃದ್ಧಿ ಕಾರ್ಯಗಳು ನಡೆಯುತಿದ್ದು, ನೌಕಾನೆಲೆಯನ್ನು ವಿಸ್ತರಣೆ ಮಾಡಲಾಗುತ್ತಿದೆ.

    ಇಲ್ಲಿಯೇ ದೇಶದ ಅತಿದೊಡ್ಡ ಯುದ್ಧ ನೌಕೆ ವಿಕ್ರಮಾದಿತ್ಯ ಹಡಗು, ಯುದ್ಧ ನೌಕೆಗಳು, ಸಬ್ ಮೆರಿನ್‍ಗಳ ನಿಲ್ದಾಣವಿದೆ. ಹೀಗಾಗಿ ಒಂದು ದಿನಕ್ಕೆ ನೌಕಾನೆಲೆಗೆ ಪ್ರತಿ ದಿನ ಆರು ಮಿಲಿಯನ್ ಲೀಟರ್ ನೀರು ಬೇಕಾಗುತ್ತದೆ. ಇದಲ್ಲದೇ ಇಲ್ಲಿನ ಕಾಲೋನಿ, ನಗರವ್ಯಾಪ್ತಿ ಸೇರಿ ಹದಿನೆಂಟು ಮಿಲಿಯನ್ ನೀರು ಒಂದು ದಿನಕ್ಕೆ ಬೇಕಿದೆ. ಈ ನೀರಿಗೆ ಮೂಲ ಅಂಕೋಲ ತಾಲೂಕಿನ ಗಂಗಾವಳಿ ನದಿಯಾಗಿದ್ದು, ಈ ನದಿಯಿಂದಲೇ ಅಂಕೋಲ ಪಟ್ಟಣ ಸೇರಿದಂತೆ ಕಾರವಾರಕ್ಕೂ ನೀರು ಪೂರೈಸಬೇಕು.

    ಗಂಗಾವಳಿ ನದಿಯಲ್ಲಿ ಈಗ ಮಳೆ ಬಾರದೆ ಸಂಪೂರ್ಣ ಬತ್ತಿ ಹೋಗಿದ್ದು, ಎಲ್ಲಿಯೂ ನೀರು ಪೂರೈಸದ ಸ್ಥಿತಿ ನಿರ್ಮಾಣವಾಗಿದೆ. ಸದ್ಯ ನೌಕಾನೆಲೆಗೆ ನಾಲ್ಕು ದಿನಕ್ಕೆ ಒಂದು ಸಾರಿ ನೀರು ಪೂರೈಕೆಯಾಗುತ್ತಿದ್ದು, ಜೂನ್ ಆದರೂ ಮಳೆ ಬಾರದ ಹಿನ್ನೆಲೆಯಲ್ಲಿ ಅದನ್ನೂ ಪೂರೈಕೆ ಮಾಡಲು ಸಾಧ್ಯವಾಗದೆ ಕರ್ನಾಟಕ ನಗರ ನೀರು ಪೂರೈಕೆ ಮತ್ತು ಒಳಚರಂಡಿ ಮಂಡಳಿ ಕೈಚೆಲ್ಲಿ ಕುಳಿತಿದೆ. ಹೀಗಾಗಿ ಇನ್ನೆರಡು ದಿನದಲ್ಲಿ ಮಳೆ ಬಾರದಿದ್ದಲ್ಲಿ ನೌಕಾನೆಲೆಯ ಫೇಸ್-2 ಕಾಮಗಾರಿ ಹಾಗೂ ಅಭಿವೃದ್ಧಿ ಕೆಲಸಗಳನ್ನು ಸಂಪೂರ್ಣ ನಿಲ್ಲಿಸಲು ನೌಕಾದಳ ತೀರ್ಮಾನಿಸಿದೆ.

    ನೌಕಾನೆಲೆಗೆ ನಮ್ಮಿಂದ ಎಷ್ಟು ಸಾಧ್ಯವೋ ಅಷ್ಟು ನೀರನ್ನು ಪೂರೈಸುತ್ತಿದ್ದೇವೆ. ಸದ್ಯದ ಪರಿಸ್ಥಿತಿಯಲ್ಲಿ ನದಿ ಹರಿಯುವ ಸ್ಥಳದಲ್ಲಿ ಅಳಿದುಳಿದ ನೀರಿಗೆ ಪಂಪ್‍ಗಳನ್ನು ಅಳವಡಿಸಿ ನೀರನ್ನು ಪೂರೈಕೆ ಮಾಡಿದ್ದೇವೆ. ಪ್ರತಿ ದಿನ 6 ಮಿಲಿಯನ್ ನಷ್ಟು ನೀರು ನೌಕಾನೆಲೆಗೆ ಬೇಕಾಗುತ್ತಿದೆ. ಇದನ್ನು ಪೂರೈಸಲು ಸಾಧ್ಯವಾಗುತ್ತಿಲ್ಲ. ಇನ್ನೆರಡು ದಿನದಲ್ಲಿ ಮಳೆ ಬಾರದಿದ್ರೆ ನೌಕಾನೆಲೆಗೆ ನೀರು ಪೂರೈಸಲು ಸಾಧ್ಯವಾಗದು ಎಂದು ನೌಕಾನೆಲೆಗೆ ನೀರು ಪೂರೈಕೆ ಜವಾಬ್ದಾರಿ ಹೊತ್ತಿರುವ ಕರ್ನಾಟಕ ನಗರ ನೀರು ಪೂರೈಕೆ ಹಾಗೂ ಒಳಚರಂಡಿ ಮಂಡಳಿಯ ಸಹಾಯಕ ಎಂಜಿನಿಯರ್ ಸುರೇಶ್ ಹೇಳಿದ್ದಾರೆ.

    ನೀರಿಲ್ಲದೆ ನೌಕೆಗಳೇ ಸ್ಥಳಾಂತರ!
    ಕಾರವಾರದ ಅರಗಾದಲ್ಲಿರುವ ಕದಂಬ ನೌಕಾನೆಲೆಗೆ ಅಂಕೋಲ ತಾಲೂಕಿನಲ್ಲಿರುವ ಗಂಗಾವಳಿ ನದಿಯಿಂದ ನೀರನ್ನು ಹೊನ್ನಳ್ಳಿಗೆ ತಂದು ಶುದ್ಧೀಕರಿಸಲಾಗುತ್ತದೆ. ಬಳಿಕ ನೀರನ್ನು ಸುಮಾರು 35 ಕಿಲೋಮೀಟರ್ ದೂರದಲ್ಲಿರುವ ಕದಂಬ ನೌಕಾನೆಲೆ ಹಾಗೂ ನೌಕಾ ನೆಲೆಯ ವಸತಿ ಗೃಹಕ್ಕೆ ನೀಡಲಾಗುತ್ತದೆ. ಕಳೆದ ಎಂಟು ದಿನದಿಂದ ನೀರಿನ ಸಮಸ್ಯೆ ಹೆಚ್ಚಾಗಿದೆ. ಇದರಿಂದಾಗಿ 2 ಮಿ.ಲೀಟರ್ ನೀರನ್ನು ನಾಲ್ಕು ದಿನಕ್ಕೆ ಒಂದು ಬಾರಿ ಪೂರೈಕೆ ಮಾಡಿದರೆ ಅಲ್ಪ ನೀರನ್ನು ಟ್ಯಾಂಕರ್ ಮೂಲಕ ಕಾಲೋನಿಗೆ ವಿತರಿಸಲಾಗಿತ್ತು.

    ಆದರೆ ಎರಡು ದಿನದಿಂದ ಅದನ್ನೂ ಪೂರೈಕೆ ಮಾಡಲು ಕಷ್ಟವಾಗುತ್ತಿದೆ. ಇದರಿಂದಾಗಿ ಯುದ್ಧ ನೌಕೆಗಳಿಗೆ ಹಾಗೂ ಫೇಸ್ -2 ಕಾಮಗಾರಿಗಳಿಗೆ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ಹೀಗಾಗಿ ನೌಕಾನೆಲೆಯಲ್ಲಿ ನಡೆಯುತ್ತಿದ್ದ ವಿಸ್ತರಣಾ ಕಾರ್ಯಕ್ಕೆ ಅಡ್ಡಿಯಾಗಿದ್ದು, ಕೆಲವು ಭಾಗದಲ್ಲಿ ಕೆಲಸವನ್ನು ನಿಲ್ಲಿಸಲಾಗಿದೆ. ಶುದ್ಧ ಕುಡಿಯುವ ನೀರು ಕೊರತೆಯಿಂದ ಯುದ್ಧ ಹಡಗುಗಳು, ಸಬ್ ಮೆರಿನ್‍ಗಳು ಕಾರವಾರದ ಕದಂಬಾ ನೌಕಾನೆಲೆಯಿಂದ ಮುಂಬೈ ನೌಕಾನೆಲೆಗೆ ತಮ್ಮ ಸ್ಥಾನ ಬದಲಿಸಿದೆ. ಹವಾಮಾನ ಇಲಾಖೆ ಮಾಹಿತಿಯಂತೆ ಜೂನ್ 8 ರೊಳಗೆ ಮಳೆ ಬರುವ ಸೂಚನೆ ನೀಡಿದೆ. ಒಂದು ವೇಳೆ ನಿಗದಿಯಂತೆ ಮಳೆ ಬಾರದಿದ್ದರೆ ಏಷ್ಯಾದ ಮೂರನೇ ಅತಿದೊಡ್ಡ ನೌಕಾನೆಲೆಯ ಪ್ರಮುಖ ಕಾರ್ಯಗಳು ಸ್ತಬ್ಧವಾಗಲಿವೆ.

  • ನೇತ್ರಾವತಿಯಲ್ಲಿ ನೀರಿಲ್ಲ – ಧರ್ಮಸ್ಥಳ ದೊಂಡೋಲೆ ಬಾವಿಯಲ್ಲಿ ಮೊಸಳೆ ಪ್ರತ್ಯಕ್ಷ

    ನೇತ್ರಾವತಿಯಲ್ಲಿ ನೀರಿಲ್ಲ – ಧರ್ಮಸ್ಥಳ ದೊಂಡೋಲೆ ಬಾವಿಯಲ್ಲಿ ಮೊಸಳೆ ಪ್ರತ್ಯಕ್ಷ

    ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆ ಬರದೇ ನೀರಿನ ಸಮಸ್ಯೆ ಜಾಸ್ತಿಯಾಗುತ್ತಿದೆ. ಈ ಬರದ ಪರಿಣಾಮ ನೀರಲ್ಲದ ಬಾವಿಯಲ್ಲಿ ಮೊಸಳೆಯೊಂದು ಪ್ರತ್ಯಕ್ಷವಾಗಿದೆ.

    ಪುಣ್ಯಕ್ಷೇತ್ರ ಧರ್ಮಸ್ಥಳ ಸಮೀಪ ಇರುವ ದೊಂಡೋಲೆ ಗ್ರಾಮದ ದಾಮೋದರ್ ಅವರ ಮನೆಯ ಬಾವಿಯಲ್ಲಿ ಮೊಸಳೆಯೊಂದು ಪತ್ತೆಯಾಗಿದೆ.

    ಬರದ ಹಿನ್ನೆಲೆಯಲ್ಲಿ ನೇತ್ರಾವತಿ ನೀರಿಲ್ಲದೆ ಬತ್ತಿಹೋಗಿದೆ. ಈ ಕಾರಣಕ್ಕೆ ನೀರನ್ನು ಅರಸಿ ನೇತ್ರಾವತಿ ನದಿ ತಟದಲ್ಲಿರುವ ದೊಂಡೋಲೆ ಗ್ರಾಮಕ್ಕೆ ಮೊಸಳೆ ಬಂದಿದೆ ಎಂದು ಶಂಕಿಸಲಾಗಿದೆ. ನೀರಿಲ್ಲದ ಬಾವಿಯಲ್ಲಿ ಮೊಸಳೆ ಕಂಡ ಗ್ರಾಮಸ್ಥರು ಭಯಬಿದ್ದಿದ್ದಾರೆ.

  • ದೇವಸ್ಥಾನದ ಪುಷ್ಕರಣಿಯಲ್ಲೂ ನೀರಿಲ್ಲ- ಆಡಳಿತ ಮಂಡಳಿಯಿಂದ ಕೆಸರೆತ್ತುವ ಕಾರ್ಯ

    ದೇವಸ್ಥಾನದ ಪುಷ್ಕರಣಿಯಲ್ಲೂ ನೀರಿಲ್ಲ- ಆಡಳಿತ ಮಂಡಳಿಯಿಂದ ಕೆಸರೆತ್ತುವ ಕಾರ್ಯ

    ಉಡುಪಿ: ಕರಾವಳಿ ಜಿಲ್ಲೆ ಉಡುಪಿಯಲ್ಲಿ ಹಿಂದೆಂದೂ ಇಲ್ಲದ ನೀರಿನ ಸಮಸ್ಯೆ ಈ ಬಾರಿ ಎದುರಾಗಿದೆ. ನದಿಗಳೆಲ್ಲಾ ಬತ್ತಿದ್ದು, ಕೆರೆ ಬಾವಿಯ ನೀರು ಆವಿಯಾಗಿದೆ. ದೇವಸ್ಥಾನಗಳ ಪುಷ್ಕರಣಿಗಳು ಕೂಡ ನೀರಿಲ್ಲದೆ ಒಣಗುತ್ತಿದೆ.

    ಈ ಪರಿಸ್ಥಿತಿಯನ್ನು ಉಪಯೋಗಿಸಲು ಹೊರಟಿರುವ ದೇವಸ್ಥಾನದ ಆಡಳಿತ ಮಂಡಳಿ, ಕೆರೆಯ ಕೆಸರೆತ್ತುವ ಕೆಲಸ ಮಾಡುತ್ತಿದೆ. ಉಡುಪಿಯ ಬನ್ನಂಜೆ ಮಹಾಲಿಂಗೇಶ್ವರ ದೇವಸ್ಥಾನದ ಕೆರೆಯ ಹೂಳೆತ್ತುವ ಕೆಲಸ ಬಿರುಸಿನಿಂದ ನಡೆಯುತ್ತಿದೆ.

    ಕಳೆದ ನಾಲ್ಕು ದಿನದಿಂದ ಈ ಕೆಲಸ ನಡೆಯುತ್ತಿದ್ದು, ಭಾರೀ ಪ್ರಮಾಣದ ಹೂಳು ಮೇಲೆತ್ತಲಾಗಿದೆ. ಬನ್ನಂಜೆ ಮಹಾಲಿಂಗೇಶ್ವರ ದೇವಸ್ಥಾನ ಉಡುಪಿಯ ಪುರಾತನ ದೇವಸ್ಥಾನವಾಗಿದ್ದು, ಕಳೆದ 30 ವರ್ಷದಲ್ಲಿ ಇದೇ ಮೊದಲ ಬಾರಿಗೆ ಕೆಸರೆತ್ತಲಾಗಿದೆ.

    ಸದ್ಯ ಅಭಿಷೇಕ ಪ್ರಿಯನಾಗಿರುವ ಈಶ್ವರ ದೇವರಿಗೆ ಈ ಮಳೆಗಾಲದಲ್ಲಿ ಶುದ್ಧ ನೀರು ಲಭ್ಯವಾಗಲಿದೆ.

  • ಮೀನು ಬೇಟೆಯಾಡಿ ಪ್ರಸಾದವನ್ನಾಗಿ ಸ್ವೀಕರಿಸುತ್ತಾರೆ ಭಕ್ತರು!

    ಮೀನು ಬೇಟೆಯಾಡಿ ಪ್ರಸಾದವನ್ನಾಗಿ ಸ್ವೀಕರಿಸುತ್ತಾರೆ ಭಕ್ತರು!

    – ಮಂಗ್ಳೂರಿನ ಮೂಲ್ಕಿಯಲ್ಲಿ ಮೀನು ಜಾತ್ರೆ

    ಮಂಗಳೂರು: ಈ ದೈವಸ್ಥಾನದ ಪಕ್ಕದಲ್ಲಿರುವ ನದಿಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಸೇರಿದ ಜನ ಮೀನು ಹಿಡಿಯುತ್ತಾರೆ. ಹಾಗಂತ ಅವರೆಲ್ಲರು ಮೀನುಗಾರರು ಅಲ್ಲ. ಬದಲಾಗಿ ಭಕ್ತರು. ತಾವು ಹಿಡಿದ ಮೀನನ್ನು ದೇವರ ಪ್ರಸಾದವನ್ನಾಗಿ ಸ್ವೀಕರಿಸುತ್ತಾರೆ.

    ಮಾರಿ ಜಾತ್ರೆ, ದೈವ ಜಾತ್ರೆ, ಊರ ಜಾತ್ರೆ ಎಲ್ಲಾ ಕೇಳಿರುತ್ತೇವೆ. ಆದರೆ ಮಂಗಳೂರಿನ ಮೂಲ್ಕಿ ಸಮೀಪದ ಚೇಳ್ಯಾರು ಧರ್ಮರಸು ಉಳ್ಳಾಯ ದೈವಸ್ಥಾನದಲ್ಲಿ ಮೀನು ಜಾತ್ರೆ ನಡೆಯುತ್ತದೆ. ಭಕ್ತರು ಮೀನು ಹಿಡಿಯುವ ಮೂಲಕ ವರ್ಷಕ್ಕೊಮ್ಮೆ ಈ ಜಾತ್ರೆ ನಡೆಯುತ್ತಿದೆ.

    ನಂದಿನಿ ನದಿಗೆ ಪ್ರಸಾದ ಹಾಕಿದ ನಂತರ ಪಟಾಕಿ ಸಿಡಿಸಲಾಗತ್ತದೆ. ಆಗ ಮಕ್ಕಳು, ಮುದುಕರೆನ್ನದೆ ಎಲ್ಲರೂ ನೀರಿಗಿಳಿದು ಮೀನಿನ ಬೇಟೆ ಆರಂಭಿಸುತ್ತಾರೆ. ದೈವದ ಅನುಗ್ರಹದಿಂದ ಅಂದು ಹೆಚ್ಚಿನ ಮೀನುಗಳು ಇರುತ್ತದೆ ಎನ್ನುವುದು ಭಕ್ತರ ನಂಬಿಕೆ. ಹೀಗಾಗಿ ನದಿಗಿಳಿದ ಪ್ರತಿಯೊಬ್ಬರಿಗೂ ಪದಾರ್ಥಕ್ಕೆ ಬೇಕಾಗುವ ಮೀನು ಸಿಗದೇ ಇರೋದಿಲ್ಲವಂತೆ.

    ಸಾವಿರಾರು ಭಕ್ತರು ನದಿಗಿಳಿಯೋದರಿಂದ ನೀರು ತಲ್ಲಣಗೊಂಡು ಮೀನುಗಳು ಮೇಲಕ್ಕೆ ಬರುತ್ತವೆ. ಮುಂಜಾನೆಯಿಂದ ಮೀನಿನ ಬೇಟೆಯಲ್ಲಿರುವ ಭಕ್ತರು ಸೂರ್ಯ ನೆತ್ತಿ ಮೇಲೆ ಬಂದಾಗ ಬಲೆಗೆ ಬಿದ್ದ ಮೀನನ್ನೆಲ್ಲಾ ಮನೆಗೆ ಕೊಂಡೊಯ್ದು ದೇವರ ಪ್ರಸಾದವಾಗಿ ಸ್ವೀಕರಿಸುತ್ತಾರೆ. ಈ ಜಾತ್ರೆಯ ಮೀನನ್ನು ತಿಂದರೆ ವರ್ಷವಿಡೀ ಯಾವುದೇ ರೋಗರುಜಿನಗಳು ಬರೋದಿಲ್ಲ ಎನ್ನುವುದು ಭಕ್ತರ ನಂಬಿಕೆ.

    ಈ ಶ್ರದ್ಧಾ ಭಕ್ತಿಯ ಮೀನು ಹಿಡಿಯುವ ಉತ್ಸವದೊಂದಿಗೆ ತುಳುನಾಡಿನ ಎಲ್ಲಾ ಜಾತ್ರೆಗಳಿಗೆ ತೆರೆ ಬೀಳುತ್ತದೆ.

  • ಸ್ನಾನ ಮಾಡಲು ಹೋದ ಯುವಕರಿಬ್ಬರು ನೀರು ಪಾಲು

    ಸ್ನಾನ ಮಾಡಲು ಹೋದ ಯುವಕರಿಬ್ಬರು ನೀರು ಪಾಲು

    ಹಾವೇರಿ: ತುಂಗಭದ್ರಾ ನದಿಯಲ್ಲಿ ಸ್ನಾನ ಮಾಡಲು ಹೋಗಿದ್ದ ಇಬ್ಬರು ಯುವಕರು ನೀರು ಪಾಲಾದ ಘಟನೆ ಜಿಲ್ಲೆಯ ರಟ್ಟೀಹಳ್ಳಿ ತಾಲೂಕಿನ ಬೈರನಪಾದ ಗ್ರಾಮದ ಬಳಿ ನಡೆದಿದೆ.

    ಮೃತರು ಬುಳ್ಳಾಪುರ ಗ್ರಾಮದ ಸಂತೋಷ್ ಆಲದಗೇರಿ(20) ಹಾಗೂ ಅಶೋಕ್ ನಂದೀಹಳ್ಳಿ (20) ಎಂದು ತಿಳಿದುಬಂದಿದೆ. ಈ ಇಬ್ಬರು ಯುವಕರು ಸ್ನಾನ ಮಾಡಲೆಂದು ತುಂಗಭದ್ರಾ ನದಿಗೆ ಹೋಗಿದ್ದಾರೆ. ಸ್ನಾನ ಮಾಡುವಾಗ ನೀರಿನಲ್ಲಿ ಕೊಚ್ಚಿಕೊಂಡು ಹೋಗಿ ಮೃತಪಟ್ಟಿದ್ದಾರೆ. ಸರಿಯಾಗಿ ಈಜು ಬಾರದ ಕಾರಣ ಇಬ್ಬರು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.

    ಈ ದುರ್ಘಟನೆ ನಡೆದಾಗ ಸ್ಥಳದಲ್ಲಿ ಯಾರೂ ಇಲ್ಲದ ಕಾರಣ ಅವರನ್ನು ರಕ್ಷಿಸಲು ಸಾಧ್ಯವಾಗಿಲ್ಲ. ಈ ಬಗ್ಗೆ ಮಾಹಿತಿ ತಿಳಿದು ಸ್ಥಳಕ್ಕೆ ಪೊಲೀಸರು ಬಂದು ಸ್ಥಳೀಯರ ಸಹಾಯದಿಂದ ಯುವಕರಿಬ್ಬರ ಮೃತದೇಹವನ್ನ ಹೊರತೆಗೆದಿದ್ದಾರೆ. ಈ ವೇಳೆ ಸ್ಥಳದಲ್ಲಿ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿತ್ತು.

    ಈ ಘಟನೆ ರಟ್ಟೀಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

  • ತೆಪ್ಪದಲ್ಲೇ ರೋಗಿಯನ್ನು ನದಿ ದಾಟಿಸಿದ ಸ್ಥಳೀಯರು- ಚಿಕ್ಕಮಗ್ಳೂರಲ್ಲಿ ಮನಕಲಕುವ ಘಟನೆ

    ತೆಪ್ಪದಲ್ಲೇ ರೋಗಿಯನ್ನು ನದಿ ದಾಟಿಸಿದ ಸ್ಥಳೀಯರು- ಚಿಕ್ಕಮಗ್ಳೂರಲ್ಲಿ ಮನಕಲಕುವ ಘಟನೆ

    ಚಿಕ್ಕಮಗಳೂರು: ತೆಪ್ಪದಲ್ಲಿ ರೋಗಿಯನ್ನು ಕುರ್ಚಿಯಲ್ಲಿ ಕೂರಿಸಿಕೊಂಡು ಸ್ಥಳೀಯರು ಭದ್ರಾ ನದಿ ದಾಟಿಸಿದ ಮನಕಲಕುವ ಘಟನೆಯೊಂದು ಚಿಕ್ಕಮಗಳೂರಲ್ಲಿ ನಡೆದಿದೆ.

    ಮೂಡಿಗೆರೆ ತಾಲೂಕಿನ ಹಿರೆಕೂಡಿಗೆ ಗ್ರಾಮದಲ್ಲಿ ಈ ಘಟನೆ ನಡೆದಿದೆ. ರುದ್ರಯ್ಯ ಅವರು ಉಬ್ಬಸದಿಂದ ಬಳಲುತ್ತಿದ್ದರು. ಹೀಗಾಗಿ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲು ಸ್ಥಳೀಯರು ತೆಪ್ಪದ ಮೂಲಕ ಕಳುಹಿಸಿದ್ದಾರೆ. ನಂತರ ಕುಟುಂಬಸ್ಥರು ಅವರನ್ನು ಮಂಗಳೂರಿಗೆ ಕರೆದೊಯ್ದಿದ್ದಾರೆ.

    ಕೆಲ ತಿಂಗಳ ಹಿಂದೆ ಮೃತದೇಹವನ್ನು ಕೂಡ ಇದೇ ರೀತಿ ಸಾಗಿಸಿದ್ದರು. ಇಲ್ಲಿನ ಜನರು ಮೂರ್ನಾಲ್ಕು ದಶಕಗಳಿಂದ ಇದೇ ರೀತಿ ಬದುಕುತ್ತಿದ್ದಾರೆ. ತೆಪ್ಪ ಇಲ್ಲದಿದ್ದರೆ ಇವರಿಗೇ ಬದುಕೇ ಇಲ್ಲ. ಮಳೆಗಾಲದಲ್ಲಿ ಮಕ್ಕಳು ವಾರಗಟ್ಟಲೆ ಶಾಲೆಗೆ ಹೋಗುವುದಿಲ್ಲ. ಮನೆಗೆ ಒಂದು ಬೆಂಕಿ ಪೊಟ್ಟಣ ಬೇಕಂದ್ರೂ ನದಿ ದಾಟಿಯೇ ಬರಬೇಕು ಎಂದು ಸ್ಥಳೀಯರು ತಮ್ಮ ಅಳಲು ತೋಡಿಕೊಂಡಿದ್ದಾರೆ.

    ಈ ಹಿಂದೆ ಸ್ಥಳಕ್ಕೆ ಮೂಡಿಗೆರೆ ಶಾಸಕ ಕುಮಾರಸ್ವಾಮಿ ಭೇಟಿ ನೀಡಿದ್ದು, ರಸ್ತೆ ಅಥವಾ ತೂಗು ಸೇತುವೆ ನಿರ್ಮಿಸಿಕೊಡುವ ಭರವಸೆ ನೀಡಿದ್ದರು. ಆದರೆ ಶಾಸಕರ ಭರವಸೆ, ಭರವಸೆಯಾಗಿಯೇ ಉಳಿದಿದೆ. ಈ ಬಗ್ಗೆ ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತಕ್ಕೆ ಸಾಕಷ್ಟು ಮನವಿ ಕೂಡ ಮಾಡಲಾಗಿದೆ. ಆದರೆ ಇಲ್ಲಿಯವರೆಗೆ ಯಾರೊಬ್ಬರು ಬಡಜನರ ಮನವಿಗೆ ಸ್ಪಂದಿಸಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.