Tag: ನದಿ

  • ಪ್ರವಾಹಕ್ಕೆ ನಲುಗಿದ ಬಿಹಾರ- 13 ಸಾವು, ಸಂಕಷ್ಟದಲ್ಲಿ 18 ಲಕ್ಷ ಮಂದಿ

    ಪ್ರವಾಹಕ್ಕೆ ನಲುಗಿದ ಬಿಹಾರ- 13 ಸಾವು, ಸಂಕಷ್ಟದಲ್ಲಿ 18 ಲಕ್ಷ ಮಂದಿ

    ಪಾಟ್ನಾ: ಬಿಹಾರದಲ್ಲಿ ಭಾರೀ ಮಳೆಗೆ ನದಿಗಳು ಅಪಾಯ ಮಟ್ಟವನ್ನು ಮೀರಿ ಹರಿಯುತ್ತಿದ್ದು ರಾಜ್ಯದ 9 ಜಿಲ್ಲೆಗಳು ಪ್ರವಾಹಕ್ಕೆ ತತ್ತರಿಸಿ ಹೋಗಿದೆ. ಈವರೆಗೆ 13 ಮಂದಿ ಸಾವನ್ನಪ್ಪಿರುವ ಬಗ್ಗೆ ವರದಿಯಾಗಿದ್ದು, ಸುಮಾರು 18 ಲಕ್ಷ ಮಂದಿ ಸಂಕಷ್ಟಕ್ಕೆ ಸಿಲುಕಿದ್ದಾರೆ ಎನ್ನಲಾಗಿದೆ.

    ಅರೇರಿಯಾ, ಕಿಶನ್‍ಗಂಜ್, ಶಿಯೋಹರ್, ಸೀತಮಾರ್ಹಿ, ಪೂರ್ವ ಚಂಪಾರನ್, ಸುಪಾಲ್, ಮಧುಬನಿ, ದರ್ಭಂಗಾ ಮತ್ತು ಮುಜಾಫರ್‍ಪುರ ಜಿಲ್ಲೆಗಳು ಪ್ರವಾಹಕ್ಕೆ ಅತಿ ಹೆಚ್ಚು ಹಾನಿಗೊಳಗಾಗಿದ್ದು, ಈ ಜಿಲ್ಲೆಗಳ ಸುಮಾರು 18 ಲಕ್ಷ ಮಂದಿ ಪರದಾಡುತ್ತಿದ್ದಾರೆ. ಈವರೆಗೆ ಪ್ರವಾಹಕ್ಕೆ ಕನಿಷ್ಠ 13 ಮಂದಿ ಸಾವನ್ನಪ್ಪಿದ್ದಾರೆ. ಇನ್ನೂ ಹಲವರು ಕಾಣೆಯಾಗಿದ್ದಾರೆ.

    ವರದಿಯಾಗಿರುವ ಮೃತರಲ್ಲಿ 9 ಮಂದಿ ಅರೇರಿಯಾ ಜಿಲ್ಲೆಯ ನಿವಾಸಿಗಳು ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ಬೈದ್ಯನಾಥ ಯಾದವ್ ತಿಳಿಸಿದ್ದಾರೆ. ಜೊತೆಗೆ ಮೃತರ ಕುಟುಂಬಗಳಿಗೆ ತಲಾ 4 ಲಕ್ಷ ರೂ. ಪರಿಹಾರವನ್ನೂ ಕೂಡ ಘೋಷಿಸಲಾಗಿದೆ.

    ಸೀತಾಮರ್ಹಿ ಜಿಲ್ಲಾಡಳಿತ ಅಧಿಕಾರಿಗಳ ಪ್ರಕಾರ, ಪ್ರವಾಹಕ್ಕೆ ಜಿಲ್ಲೆಯಲ್ಲಿ ಇಬ್ಬರು ಬಲಿಯಾಗಿದ್ದಾರೆ, ನಾಲ್ವರು ನಾಪತ್ತೆಯಾಗಿದ್ದಾರೆ. ಆದರೆ ಪರಿಸ್ಥಿತಿಯನ್ನು ನಿಭಾಯಿಸಲು ಆಡಳಿತವು ಸರಿಯಾದ ಕ್ರಮ ಕೈಗೊಂಡಿಲ್ಲ. ಸಹಾಯವಾಣಿಗಾಗಿ ಸ್ಥಾಪಿಸಲಾದ ದೂರವಾಣಿ ಮಾರ್ಗವೂ ಕೂಡ ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದು ಕೆಲವರು ಆರೋಪಿಸಿದ್ದಾರೆ. ಅಷ್ಟೇ ಅಲ್ಲದೆ ಅರೇರಿಯಾದಲ್ಲಿ ಸ್ಥಾಪಿಸಲಾದ ನಿಯಂತ್ರಣ ಕೊಠಡಿಯಲ್ಲಿ ಅಧಿಕಾರಿಗಳು ವಿಪತ್ತು ನಿರ್ವಹಣೆಯನ್ನು ಹೊರತುಪಡಿಸಿ ಇತರೆ ಕೆಲಸಗಳನ್ನು ಮಾಡುತ್ತಿದ್ದಾರೆ ಎಂಬ ಆರೋಪ ಕೂಡ ಕೇಳಿಬಂದಿದೆ.

    ಸಾಮಾನ್ಯ ಜನರು ಕಂಟ್ರೋಲ್ ರೂಮ್‍ಗೆ ಕರೆ ಮಾಡಬೇಕಾದರೆ ಮೊದಲು ಸ್ಥಳೀಯ ಮುಖಂಡರನ್ನು ಅವರು ಸಂಪರ್ಕಿಸಬೇಕು. ಆ ನಂತರ ಕಟ್ರೋಲ್ ರೂಮ್‍ಗೆ ಕರೆ ಕನೆಕ್ಟ್ ಮಾಡಲಾಗುತ್ತದೆ. ಹೀಗಾಗಿ ಅಧಿಕಾರಿಯೊಬ್ಬರು ತಮ್ಮ ವೈಯಕ್ತಿಕ ಫೋನ್ ನಂಬರ್ ಕೆಲವು ಸ್ಥಳೀಯ ಪಂಚಾಯತ್ ಪ್ರತಿನಿಧಿಗಳೊಂದಿಗೆ ಹಂಚಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.

    ಪ್ರವಾಹದಿಂದ ತತ್ತರಿಸಿರುವ ಬಿಹಾರದ ಕುರಿತು ಸಿಎಂ ನಿತೀಶ್ ಕುಮಾರ್ ವೈಮಾನಿಕ ಸಮೀಕ್ಷೆ ನಡೆಸಿದ್ದಾರೆ. ಆದರೆ ಸಿಎಂ ಅವರ ಈ ನಡೆಗೆ ವಿರೋಧ ಪಕ್ಷದ ಕೆಲ ನಾಯಕರು ವಿರೋಧಿಸಿದ್ದು, ರಾಷ್ಟ್ರೀಯ ಲೋಕ ಸಮತ ಪಕ್ಷದ ನಾಯಕ ಉಪೇಂದ್ರ ಖುಷ್ವಾಹ ಅವರು ನಿತೀಶ್ ಕುಮಾರ್ ವಿರುದ್ಧ ಕಿಡಿಕಾರಿದ್ದಾರೆ.

    ಈ ರೀತಿ ಪ್ರತಿ ವರ್ಷ ರಾಜ್ಯದಲ್ಲಿ ಪ್ರವಾಹ ಉಂಟಾದಾಗ ವೈಮಾನಿಕ ಸಮೀಕ್ಷೆ ನಡೆಸಿ ಸಿಎಂ ವ್ಯರ್ಥ ಮಾಡುತ್ತಿದ್ದಾರೆ. ಇದರ ಬದಲು ಪ್ರವಾಹದ ಕುರಿತು ಕ್ರಮ ಕೈಗೊಂಡು, ಜನರನ್ನು ಪ್ರವಾಹದ ಸಂಕಷ್ಟದಿಂದ ದೂರ ಮಾಡುವ ಕೆಲಸ ಮಾಡಬೇಕು. ಸರ್ಕಾರ ಪ್ರವಾಹ ಬಂದಾಗ ಜನರು ಎದುರಿಸುವ ಸಮಸ್ಯೆಗೆ ಪರಿಹಾರ ಬಿಡುಗಡೆ ಮಾಡುವಲ್ಲಿ ಸೋತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

  • ಮೀನು ಹಿಡಿಯಲು ಹೋದ ಬಾಲಕ ನೀರುಪಾಲು

    ಮೀನು ಹಿಡಿಯಲು ಹೋದ ಬಾಲಕ ನೀರುಪಾಲು

    ಬೆಳಗಾವಿ (ಚಿಕ್ಕೋಡಿ): ಮೀನು ಹಿಡಿಯಲು ಹೋಗಿ ಬಾಲಕನೊಬ್ಬ ನೀರುಪಾಲಾದ ಘಟನೆ ಚಿಕ್ಕೋಡಿ ತಾಲೂಕಿನ ಚಾಂದಶಿರದವಾಡ ಗ್ರಾಮದ ಬಳಿ ನಡೆದಿದೆ.

    ಚಾಂದಶಿರದವಾಡ ಗ್ರಾಮದ ಸಂಸ್ಕಾರ್ ಪವಾರ (14) ಮೃತ ದುರ್ದೈವಿ. ದೂಧಗಂಗಾ ನದಿಯಲ್ಲಿ ಶನಿವಾರ ಬಾಲಕ ಮೃತಪಟ್ಟಿದ್ದಾನೆ. ದೂಧಗಂಗಾ ನದಿ ಪಾತ್ರದಲ್ಲಿ ಭಾರೀ ಮಳೆಯಾಗಿದ್ದರಿಂದ ಪ್ರವಾಹ ಹೆಚ್ಚಾಗಿದೆ. ಹೀಗಾಗಿ ಬಾಲಕ ಸಂಸ್ಕಾರ್ ಮೀನು ಹಿಡಿಯಲು ನದಿಗೆ ಹೋಗಿದ್ದ. ಈ ವೇಳೆ ಆಯತಪ್ಪಿ ನದಿಗೆ ಬಿದ್ದು, ನೀರು ಪಾಲಾಗಿದ್ದಾನೆ.

    ಸಂಸ್ಕಾರ್ ನದಿಗೆ ಬಿದ್ದಿದ್ದನ್ನು ನೋಡಿದ ಸ್ಥಳೀಯರು ರಕ್ಷಣೆಗೆ ಮುಂದಾಗಿದ್ದರು. ಆದರೆ ಬಾಲಕ ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದ. ಈ ಕುರಿತು ಸ್ಥಳೀಯರು ಮಾಹಿತಿ ನೀಡುತ್ತಿದ್ದ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳವು ಬಾಲಕನ ಶವಕ್ಕಾಗಿ ಶೋಧ ಆರಂಭಿಸಿದರು.

    ಘಟನಾ ಸ್ಥಳದಿಂದ ಸ್ವಲ್ಪ ದೂರದಲ್ಲಿ ಬಾಲಕ ಸಂಸ್ಕಾರ್ ಮೃತದೇಹ ಪತ್ತೆಯಾಗಿದ್ದು, ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಸದಲಗಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

  • ಕುಂದಾಪುರದ ಕುಬ್ಜಾ ನದಿಯಲ್ಲಿ ಮಗುವಿನ ಶವ ಪತ್ತೆ

    ಕುಂದಾಪುರದ ಕುಬ್ಜಾ ನದಿಯಲ್ಲಿ ಮಗುವಿನ ಶವ ಪತ್ತೆ

    ಉಡುಪಿ: ಕುಂದಾಪುರ ತಾಲೂಕಿನ ಎಡಮೊಗೆ ಗ್ರಾಮದಲ್ಲಿ ಗುರುವಾರ ಮುಂಜಾನೆ 4 ಗಂಟೆಯ ಸುಮಾರಿಗೆ ಹೆಣ್ಣು ಮಗುವಿನ ಅಪಹರಣ ಪ್ರಕರಣ ಎಂಬ ಬಗ್ಗೆ ಸುದ್ದಿಯಾಗಿತ್ತು. ಆದರೆ ಇದೀಗ ಮಗುವಿನ ಶವ ಕುಬ್ಜಾ ನದಿಯಲ್ಲಿ ಪತ್ತೆಯಾಗಿದೆ.

    ಸಾನ್ವಿಕಾ ಮೃತ ಮಗು. ಸಂತೋಷ್ ನಾಯ್ಕ ಮತ್ತು ರೇಖಾ ದಂಪತಿ ಮಗು ಅಪಹರಣ ಆಗಿತ್ತೆಂದು ಪೊಲೀಸರಿಗೆ ದೂರು ನೀಡಲಾಗಿತ್ತು. ದೂರು ನೀಡಿ ಒಂದು ದಿನ ಆಗುವಷ್ಟರಲ್ಲಿ ಹೆಣ್ಣು ಮಗುವಿನ ಮೃತದೇಹ ಕುಬ್ಜಾ ನದಿಯಲ್ಲಿ ಪತ್ತೆಯಾಗಿದೆ.

    ಕುಂದಾಪುರದ ಎಡಮೊಗೆ ಗ್ರಾಮದ ಕುಮ್ಟಿಬೇರು ಸಮೀಪದ ಮನೆಯಲ್ಲಿ ತಾಯಿ ಮತ್ತು ಇಬ್ಬರು ಮಕ್ಕಳು ಮಲಗಿದ್ದರು. ಈ ಸಂದರ್ಭದಲ್ಲಿ ಇಬ್ಬರು ಮುಸುಕುಧಾರಿಗಳು ಹಿಂದಿನ ಬಾಗಿಲಿನ ಮೂಲಕ ಬಂದು ಮಗುವನ್ನು ಕಿಡ್ನಾಪ್ ಮಾಡಿದ್ದಾರೆ ಎಂದು ತಾಯಿ ದೂರಿದ್ದರು. ಆದರೆ ಈಗ ನದಿಯ ನಡುವೆ ಇರುವ ಪೊದೆಯಲ್ಲಿ ಮಗು ಸಾನ್ವಿಕಾಳ ಮೃತದೇಹ ಸಿಕ್ಕಿಹಾಕಿಕೊಂಡಿರುವ ಸ್ಥಿತಿಯಲ್ಲಿ ಪತ್ತೆಯಾಗಿದೆ.

    ಅಪಹರಣದ ಕಥೆ ಕಟ್ಟಿದ್ಳಾ ತಾಯಿ?
    ರೇಖಾ ಇಬ್ಬರು ಮಕ್ಕಳ ಜೊತೆ ಆತ್ಮಹತ್ಯೆ ಮಾಡಿಕೊಳ್ಳಲು ನದಿಗೆ ಹಾರಿದ್ದಾರೆ ಎನ್ನಲಾಗಿದೆ. ಪ್ರಾಣ ಭಯದಿಂದ ಮಗ ಮತ್ತು ತಾಯಿ ನೀರಿಂದ ಮೇಲೆ ಬಂದಿರಬಹುದು. ಒಂದು ವರ್ಷ ಮೂರು ತಿಂಗಳ ಮಗು ನೀರಿನ ರಭಸಕ್ಕೆ ಕೊಚ್ಚಿ ಹೋಗಿದೆ. ಗಂಡ ಬಂದ ಸಂದರ್ಭದಲ್ಲಿ ಭಯಗೊಂಡು ಅಪಹರಣದ ಕಥೆ ಕಟ್ಟಿದ್ದಾಳೆ ಎನ್ನಲಾಗಿದೆ. ವಿಡಿಯೋವೊಂದಲ್ಲಿ ತಂದೆ ಕಣ್ಣೀರಿಡುತ್ತಿದ್ದರೆ, ತಾಯಿ ಭಯದಲ್ಲಿರುವುದು ಕಂಡುಬಂದಿದೆ.

    ಸದ್ಯಕ್ಕೆ ಕುಂದಾಪುರ ಡಿವೈಎಸ್‍ಪಿ ದಿನೇಶ್ ಕುಮಾರ್ ಸ್ಥಳಕ್ಕೆ ಭೇಟಿ ಕೊಟ್ಟು ಪರಿಶೀಲನೆ ನಡೆಸಿದ್ದಾರೆ. ಮಗುವಿನ ತಾಯಿಯನ್ನು ಶಂಕರ ನಾರಾಯಣ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

  • ನದಿ ಪಾಲಾಗಿದ್ದ ತಾಯಿ, ಮಗಳನ್ನು ರಕ್ಷಿಸಿ ಹೀರೋ ಆದ 11ರ ಪೋರ

    ನದಿ ಪಾಲಾಗಿದ್ದ ತಾಯಿ, ಮಗಳನ್ನು ರಕ್ಷಿಸಿ ಹೀರೋ ಆದ 11ರ ಪೋರ

    ಗುವಾಹಾಟಿ: ನದಿ ಪಾಲಾಗಿದ್ದ ತಾಯಿ ಹಾಗೂ ಮಗಳನ್ನು ರಕ್ಷಿಸುವ ಮೂಲಕ ಅಸ್ಸಾಂನ 5ನೇ ತರಗತಿ ಬಾಲಕನೊಬ್ಬ ಹೀರೋ ಆಗಿದ್ದಾನೆ.

    ಅಸ್ಸಾಂನ ಆದಿವಾಸಿ ಸಮುದಾಯಕ್ಕೆ ಸೇರಿದ ಉತ್ತಮ್ ತಂತಿ ತಾಯಿ-ಮಗಳನ್ನು ರಕ್ಷಿಸಿದ ಬಾಲಕ. ಉತ್ತಮ್ ಸಾಧನೆ, ಧೈರ್ಯವನ್ನು ಮೆಚ್ಚಿರುವ ರಾಜ್ಯ ಸರ್ಕಾರವು ಬಾಲಕನ ಹೆಸರನ್ನು ರಾಷ್ಟ್ರೀಯ ಶೌರ್ಯ ಪ್ರಶಸ್ತಿಗೆ ನಾಮನಿರ್ದೇಶನ ಮಾಡಲು ನಿರ್ಧರಿಸಿದೆ.

    ಆಗಿದ್ದೇನು?:
    ಬಾಲಕ ಉತ್ತಮ್ ಭಾನುವಾರ ತಮ್ಮ ನಿವಾಸದ ಸಮೀಪದ ನದಿಯ ಕಡೆಗೆ ಬಂದಿದ್ದ. ಈ ವೇಳೆ ಅಂಜಲಿ (35) ತನ್ನ ಇಬ್ಬರು ಪುತ್ರಿಯರಾದ ರಿಯಾ (6) ಮತ್ತು ದಿಪ್ತಿ (18 ತಿಂಗಳು) ಜೊತೆಗೆ ನದಿಗೆ ಬಿದ್ದಿದ್ದರು. ಇದನ್ನು ದೂರದಿಂದ ನೋಡಿದ್ದ ಉತ್ತಮ್ ತಕ್ಷಣವೇ ನದಿಗೆ ಹಾರಿ, ಕೊಚ್ಚಿ ಹೋಗುತ್ತಿದ್ದ ಅಂಜಲಿ ಹಾಗೂ ರಿಯಾ ಅವರನ್ನು ಎರಡನೇ ಪ್ರಯತ್ನದಲ್ಲಿ ರಕ್ಷಿಸಿದ್ದಾನೆ. ಆದರೆ ಕೇವಲ 18 ತಿಂಗಳ ಮುಗ್ದ ಮಗು ದಿಪ್ತಿಯ ರಕ್ಷಣೆ ತಡವಾದರಿಂದ ನೀರುಪಾಲಾಗಿದ್ದಾಳೆ.

    ಅಸ್ಸಾಂ ಮುಖ್ಯಮಂತ್ರಿ ಸರ್ಬಾನಂದಾ ಸೊನಾವಾಲ್ ಅವರು, ಉತ್ತಮ್ ಧೈರ್ಯ, ಸಾಹಸದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಟ್ವೀಟ್ ಮಾಡಿದ್ದಾರೆ. ಉತ್ತಮ್ ಧೈರ್ಯವನ್ನು ಬಣ್ಣಿಸಲು ಪದಗಳೇ ಸಿಗುತ್ತಿಲ್ಲ. ನದಿಯ ನೀರುಪಾಲಾಗಿದ್ದ ತಾಯಿ-ಮಗಳನ್ನು ರಕ್ಷಿಸಿದ ಆತನ ಸಾಹಸಕ್ಕೆ ಹ್ಯಾಟ್ಸ್ ಆಪ್ ಎಂದು ಹೇಳಿದ್ದಾರೆ.

    ಸೊನಿತ್‍ಪುರ್ ಜಿಲ್ಲಾಡಳಿತವು ಉತ್ತಮ್‍ಗೆ ಸನ್ಮಾನ ಮಾಡಿದೆ. ಜೊತೆಗೆ 5ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಆತನಿಗೆ ಸೈಕಲ್ ಹಾಗೂ ಹಣಕಾಸಿನ ನೆರವು ನೀಡಿದ್ದಾರೆ. ಈ ವೇಳೆ ಮಾತನಾಡಿದ ಬಾಲಕ ಉತ್ತಮ್, ನಾನು ದೇಶ ಕಾಯುವ ಯೋಧನಾಗಬೇಕು ಎಂದು ಸೈನ್ಯ ಸೇರುವ ಇಚ್ಛೆಯನ್ನು ವ್ಯಕ್ತಪಡಿಸಿದ್ದಾನೆ.

    ನೀರಲ್ಲಿ ಕೊಚ್ಚಿ ಹೋಗುತ್ತಿದ್ದ ತಾಯಿ, ಮಗಳು ರಕ್ಷಿಸಿರುವ ಬಾಲಕ ಧೈರ್ಯಶಾಲಿ. ಉತ್ತಮ್ ಕುಟುಂಬದವರು ಬಡವರಾಗಿದ್ದು, ಅವರಿಗೆ ಸರ್ಕಾರದಿಂದ ಆರ್ಥಿಕ ನೆರವನ್ನು ಒದಗಿಸಲಾಗುತ್ತದೆ. ಜೊತೆಗೆ ವೈಯಕ್ತಿಕವಾಗಿ ನೆರವು ನೀಡುತ್ತೇನೆ ಎಂದು ಜಿಲ್ಲಾಧಿಕಾರಿ ನರ್‍ಸಿಂಗ್ ಪವಾರ್ ತಿಳಿಸಿದ್ದಾರೆ.

  • ಉಡುಪಿಯಲ್ಲಿ ವರುಣನ ಆರ್ಭಟ – 24 ಗಂಟೆಯಲ್ಲಿ 123 ಮಿಲಿ ಮೀಟರ್ ಮಳೆ

    ಉಡುಪಿಯಲ್ಲಿ ವರುಣನ ಆರ್ಭಟ – 24 ಗಂಟೆಯಲ್ಲಿ 123 ಮಿಲಿ ಮೀಟರ್ ಮಳೆ

    ಉಡುಪಿ: ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ಧಾರಾಕಾರ ಮಳೆ ಸುರಿಯುತ್ತಿದ್ದು, ಕಳೆದ 24 ಗಂಟೆಯಲ್ಲಿ 123 ಮಿಲಿ ಮೀಟರ್ ಮಳೆ ಬಿದ್ದಿದೆ.

    ಕುಂದಾಪುರ ತಾಲೂಕಿನಲ್ಲಿ ಅತೀ ಹೆಚ್ಚು 125 ಮಿಲಿಮೀಟರ್ ಮಳೆಯಾಗಿದೆ. ಜೂನ್ ಆರಂಭದಲ್ಲಿ ವಾಯು ಚಂಡ ಮಾರುತ ಕರಾವಳಿ ಜಿಲ್ಲೆ ಉಡುಪಿಗೆ ಮಳೆ ಹೊತ್ತು ತಂದಿತ್ತು. ಜುಲೈ 10ರವರೆಗೂ ಮುಂಗಾರು ಮಳೆ ಸಂಪೂರ್ಣ ದುರ್ಬಲವಾಗಿತ್ತು. ಇದೀಗ ಕಳೆದ ಮೂರು ದಿನಗಳಿಂದ ಉಡುಪಿಯಲ್ಲಿ ನಿರಂತರ ಮಳೆಯಾಗುತ್ತಿದೆ. ಇದರಿಂದ ತೊರೆ ಮತ್ತು ನದಿಗಳು ತುಂಬಿ ಹರಿಯುತ್ತಿದೆ.

    ಉಡುಪಿ ಜಿಲ್ಲೆಯಾದ್ಯಂತ ಅನೇಕ ಮಳೆ ಹಾನಿ ಪ್ರಕರಣ ದಾಖಲಾಗಿದೆ. ಕುಂದಾಪುರದಲ್ಲಿ ಗಾಳಿ ಮಳೆ ಬಿದ್ದಿದ್ದರಿಂದ ಮನೆಗಳ ಮೇಲೆ ಮರ ಬಿದ್ದಿದೆ. ಸುಮಾರು 10 ಮನೆಗಳಿಗೆ ಮರ ಬಿದ್ದು ಭಾಗಶಃ ಹಾನಿಯಾಗಿದೆ. ಕುಂದಾಪುರದಲ್ಲಿ ಒಂದು ಅಂಗಡಿಗೆ ತೆಂಗಿನ ಮರ ಬಿದ್ದು 15 ಸಾವಿರ ರೂಪಾಯಿ ನಷ್ಟವಾಗಿದೆ. ಅಷ್ಟೇ ಅಲ್ಲದೇ ಐದು ದನದ ಕೊಟ್ಟಿಗೆಗೆ ಮರ ಬಿದ್ದಿದ್ದು ಸಾವಿರಾರು ರೂಪಾಯಿ ನಷ್ಟವಾಗಿದೆ.

    ಉಡುಪಿ ಜಿಲ್ಲೆಯ ಒಟ್ಟು ಏಳು ತಾಲೂಕಿನಲ್ಲೂ ಧಾರಾಕಾರ ಮಳೆಯಾಗಿದ್ದು, ಸುಮಾರು ಮೂರು ಲಕ್ಷ ರೂಪಾಯಿಯಷ್ಟು ನಷ್ಟವಾಗಿದೆ. ಜಿಲ್ಲೆಯಲ್ಲಿ 50ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಧರೆಗುರುಳಿದ್ದು, ಅಲ್ಲಲ್ಲಿ ವಿದ್ಯುತ್ ವ್ಯತ್ಯಯವಾಗಿದೆ. ಕಾರ್ಮೋಡ ಮುಸುಕಿದ ವಾತಾವರಣವಿರುವುದರಿಂದ ಮಳೆ ಮುಂದುವರಿಯುವ ಸಾಧ್ಯತೆಯಿದೆ.

  • ಯುವಕನೊಂದಿಗೆ 16ರ ಬಾಲಕಿಯ ಸಂಬಂಧ – ಮಗಳನ್ನೇ ಕೊಂದು ಗಂಗಾ ನದಿಗೆ ಎಸೆದ್ರು

    ಯುವಕನೊಂದಿಗೆ 16ರ ಬಾಲಕಿಯ ಸಂಬಂಧ – ಮಗಳನ್ನೇ ಕೊಂದು ಗಂಗಾ ನದಿಗೆ ಎಸೆದ್ರು

    ಕೋಲ್ಕತ್ತಾ: ಪೋಷಕರೇ ತಮ್ಮ 16 ವರ್ಷದ ಮಗಳನ್ನು ಕೊಂದು ಆಕೆಯ ದೇಹವನ್ನು ಗಂಗಾ ನದಿಯಲ್ಲಿ ಎಸೆದಿರುವ ಘಟನೆ ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯಲ್ಲಿ ನಡೆದಿದೆ.

    ಆರೋಪಿಗಳನ್ನು ಧಿರೇನ್ ಮೊಂಡಾಲ್ ಮತ್ತು ಆತನ ಪತ್ನಿ ಸುಮತಿ ಮೊಂಡಾಲ್ ಎಂದು ಗುರುತಿಸಲಾಗಿದೆ. ಈ ಘಟನೆ ಭೂತ್ನಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಮಹೇಂದ್ರತೋಲಾ ಗ್ರಾಮದಲ್ಲಿ ಶುಕ್ರವಾರ ನಡೆದಿದೆ. ಶನಿವಾರ ದಂಪತಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಏನಿದು ಪ್ರಕರಣ?
    9ನೇ ತರಗತಿ ವ್ಯಾಸಂಗ ಮಾಡುತ್ತಿದ್ದ 16 ವರ್ಷದ ಬಾಲಕಿ ಪಕ್ಕದ ಹಳ್ಳಿಯ ನಿವಾಸಿ ಅಚಿಂತ್ಯ ಮೊಂಡಾಲ್ ಯುವಕನೊಂದಿಗೆ ಸಂಬಂಧ ಹೊಂದಿದ್ದಳು. ಈ ಬಗ್ಗೆ ತಿಳಿದ ಬಾಲಕಿಯ ಪೋಷಕರು ಅವರಿಬ್ಬರ ಸಂಬಂಧಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಆದರೂ ಬಾಲಕಿ ಯುವಕನೊಂದಿಗೆ ಸಂಬಂಧ ಮುಂದುವರಿಸಿದ್ದಾಳೆ. ಇದರಿಂದ ಕೋಪಗೊಂಡ ಪೋಷಕರು ಮಗಳನ್ನು ಕೊಲೆ ಮಾಡಿ ನಂತರ ಮೂಟೆಯಲ್ಲಿ ಮೃತದೇಹವನ್ನು ತುಂಬಿ ಗಂಗಾನದಿಯಲ್ಲಿ ಎಸೆದಿದ್ದಾರೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

    ಈ ಬಗ್ಗೆ ಮಾಹಿತಿ ತಿಳಿದು ಆರೋಪಿಗಳ ಮನೆಗೆ ಹೋಗಿ ಧಿರೇನ್ ಮತ್ತು ಆತನ ಪತ್ನಿ ಸುಮತಿ ಇಬ್ಬರನ್ನು ಬಂಧಿಸಲಾಗಿದೆ. ಇದೊಂದು ಮಾರ್ಯಾದಾ ಹತ್ಯೆ ಎಂದು ಶಂಕಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಸದ್ಯಕ್ಕೆ ಐಪಿಸಿ ಸೆಕ್ಷನ್ ಅಡಿಯಲ್ಲಿ ಈ ಕುರಿತು ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

  • ಚಿಕ್ಕೋಡಿಯಲ್ಲಿ 6 ಸೇತುವೆಗಳು ಜಲಾವೃತ

    ಚಿಕ್ಕೋಡಿಯಲ್ಲಿ 6 ಸೇತುವೆಗಳು ಜಲಾವೃತ

    ಚಿಕ್ಕೋಡಿ/ಬೆಳಗಾವಿ: ನೆರೆಯ ಮಹಾರಾಷ್ಟ್ರದ ಘಟ್ಟ ಪ್ರದೇಶಗಳಲ್ಲಿ ಭಾರೀ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಕೃಷ್ಣಾ ನದಿಯ ಉಪನದಿಗಳಾದ ವೇದಗಂಗಾ ಹಾಗೂ ದೂಧಗಂಗಾ ನದಿಗಳು ತುಂಬಿ ಹರಿಯುತ್ತಿದ್ದು, ಕೃಷ್ಣಾ ನದಿ ನೀರಿನ ಪ್ರಮಾಣದಲ್ಲಿ ಸಾಕಷ್ಟು ಏರಿಕೆಯಾಗಿದೆ.

    ನದಿಗಳು ತುಂಬಿ ಹರಿಯುತ್ತಿರುವ ಕಾರಣ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ 6 ಸೇತುವೆಗಳು ಜಲಾವೃತಗೊಂಡಿವೆ. ಕೃಷ್ಣಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಕಲ್ಲೋಳ_ ಯಡೂರ, ದೂಧಗಂಗಾ ನದಿಯ ಕಾರದಗಾ_ ಭೋಜ, ವೇದಗಂಗಾ ನದಿಯ ಭೊಜವಾಡಿ_ ಕುಣ್ಣೂರ, ವೇದಗಂಗಾ ನದಿಯ ಸಿದ್ನಾಳ – ಅಕ್ಕೋಳ, ವೇದಗಂಗಾ ನದಿಯ ಜತರಾಟ- ಭೀವಶಿ ಹಾಗೂ ದೂಧಗಂಗಾ ನದಿಯ _ ಮಲಿಕವಾಡ_ ದತ್ತವಾಡ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುತ್ತಿದ್ದ ಸೇತುವೆಗಳು ಮುಳುಗಡೆಯಾಗಿವೆ.

    ಸೇತುವೆ ಮುಳುಗಡೆ ಹಿನ್ನೆಲೆಯಲ್ಲಿ ವಾಹನ ಸವಾರರು ಪರದಾಡುತ್ತಿದ್ದು, ಸುತ್ತುವರಿದು ಪರ್ಯಾಯ ಮಾರ್ಗಗಳಿಂದ ಪ್ರಯಾಣ ಬೆಳೆಸುತ್ತಿದ್ದಾರೆ. ಕೇವಲ ಮಳೆ ನೀರಿನಿಂದ ಮಾತ್ರ ಕೃಷ್ಣಾ ನದಿಗೆ 25 ಸಾವಿರ ಕ್ಯೂಸೆಕ್ ಪ್ರಮಾಣದ ನೀರು ಹರಿದು ಬರುತ್ತಿದೆ.

  • ಧಾರಾಕಾರ ಮಳೆ- ತೋಟಗಳು ಜಲಾವೃತ, ಮೈದುಂಬಿ ಹರೀತಿವೆ ನದಿಗಳು

    ಧಾರಾಕಾರ ಮಳೆ- ತೋಟಗಳು ಜಲಾವೃತ, ಮೈದುಂಬಿ ಹರೀತಿವೆ ನದಿಗಳು

    ಚಿಕ್ಕಮಗಳೂರು: ಕಾಫಿನಾಡಿನ ಮಲೆನಾಡು ಭಾಗದಲ್ಲಿ ಭಾರೀ ಮಳೆ ಸುರಿಯುತ್ತಿದ್ದು, ತೋಟಗಳು ಜಲಾವೃತವಾಗಿ ನದಿಗಳು ಮೈ ದುಂಬಿ ಹರಿಯುತ್ತಿವೆ.

    ಮೂಡಿಗೆರೆ ತಾಲೂಕಿನಾದ್ಯಂತ ಗುರುವಾರದಿಂದ ಸುರಿಯುತ್ತಿರುವ ವರುಣನ ಅಬ್ಬರಕ್ಕೆ ಹೊಲ-ಗದ್ದೆ, ಕಾಫಿ ತೋಟಗಳು ಜಲಾವೃತಗೊಂಡಿವೆ. ಮೂಡಿಗೆರೆ ತಾಲೂಕಿನ ಮುಗ್ರಹಳ್ಳಿ, ಹೊರಟ್ಟಿ, ಕೊಟ್ಟಿಗೆಹಾರ, ಜಾಣಿಗೆ, ಗೋಣಿಬೀಡು ಸೇರಿದಂತೆ ಸುತ್ತಮುತ್ತ ಭಾರೀ ಮಳೆಯಾಗುತ್ತಿದೆ.

    ಜಾಣಿಗೆ ಗ್ರಾಮದ ಹೇಮಾವತಿ ಸೇರುವ ಹುಕ್ಕೇರಿ ಹಳ್ಳದ ನೀರು ಅಕ್ಕಪಕ್ಕದ ತೋಟಗಳಿಗೆ ನುಗ್ಗಿದ್ದು, ತೋಟಗಳ ಮಧ್ಯೆ ಅಡಿ ಎತ್ತರದಲ್ಲಿ ನೀರು ನಿಂತಿದೆ. ಮೂಲರಹಳ್ಳಿಯಲ್ಲಿ ಭಾರೀ ಮಳೆಯಿಂದ ಗ್ರಾಮೀಣ ಭಾಗದ ರಸ್ತೆ ಕೂಡ ಕುಸಿದಿದೆ. ಪಶ್ಚಿಮಘಟ್ಟಗಳ ಸಾಲಲ್ಲೂ ಮೃಗಶೀರ ಮಳೆ ಅಬ್ಬರಕ್ಕೆ ಜೀವ ನದಿಗಳಾದ ತುಂಗಾ, ಭದ್ರಾ, ಹೇಮಾವತಿ ನದಿಗಳು ಕೂಡ ತಮ್ಮ ವೇಗವನ್ನ ಹೆಚ್ಚಿಸಿಕೊಂಡಿವೆ. ಎನ್.ಆರ್.ಪುರ, ಶೃಂಗೇರಿ, ಕೊಪ್ಪ ಸೇರಿದಂತೆ ದಟ್ಟ ಕಾನನದ ಭಾಗದಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಮಲೆನಾಡಿಗರು ಸಂತಸದಿಂದಿದ್ದಾರೆ.

    ಇತ್ತ ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಮಳೆ ಮುಂದುವರಿದಿದ್ದು, ಬ್ರಹ್ಮಗಿರಿ ಬೆಟ್ಟದ ಶ್ರೇಣಿಯಲ್ಲಿ ಉತ್ತಮ ಮಳೆಯಾಗಿದೆ. ಈ ಹಿನ್ನೆಲೆಯಲ್ಲಿ ಕಾವೇರಿ ಕನ್ನಿಕೆ ಸುಜೋತಿ ಮೈದುಂಬಿ ಹರಿಯುತ್ತಿದೆ. ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಭಾಗಮಂಡಲ ತ್ರಿವೇಣಿ ಸಂಗಮದಲ್ಲೂ ನೀರಿನ ಮಟ್ಟ ಏರುತ್ತಿದೆ. ಒಂದು ವೇಳೆ ಮಳೆ ಇದೇ ರೀತಿ ಮುಂದುವರಿದಲ್ಲಿ ಎರಡು ದಿನದಲ್ಲಿ ಸಂಗಮ ಭರ್ತಿಯಾಗುವ ಸಾಧ್ಯತೆ ಇದೆ.

  • ಬೆಳಗಾವಿ, ಧಾರಾವಾಡದಲ್ಲಿ ಭಾರೀ ಮಳೆ – ಮೇಲ್ಛಾವಣಿ ಕುಸಿತ, ಸೇತುವೆ ಮುಳುಗಡೆ

    ಬೆಳಗಾವಿ, ಧಾರಾವಾಡದಲ್ಲಿ ಭಾರೀ ಮಳೆ – ಮೇಲ್ಛಾವಣಿ ಕುಸಿತ, ಸೇತುವೆ ಮುಳುಗಡೆ

    ಬೆಳಗಾವಿ/ಧಾರಾವಾಡ: ಬೆಳಗಾವಿ ಜಿಲ್ಲೆಯಲ್ಲಿ ಮಳೆ ಮುಂದುವರಿದಿದ್ದು, ಮಳೆಯ ನೀರಿಗೆ ನೆನೆದು ಮನೆಯ ಮೇಲ್ಛಾವಣಿ ಕುಸಿದಿದೆ.

    ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಪಟ್ಟಿಹಾಳ ಕೆ. ಬಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮಳೆಯ ನೀರಿಗೆ ನೆನೆದು ಮನೆಯ ಮೇಲ್ಛಾವಣಿ ಕುಸಿದಿದ್ದು, ಭಾರೀ ಅನಾಹುತ ತಪ್ಪಿದಂತಾಗಿದೆ. ಇರಪ್ಪ ಕಮ್ಮಾರ ಅವರಿಗೆ ಈ ಮನೆ ಸೇರಿದ್ದು, ಮೇಲ್ಛಾವಣಿ ಕುಸಿಯುವಾಗ ಜನರು ಪಕ್ಕದ ಮನೆಯಲ್ಲಿ ಇದ್ದರು. ಈ ಗ್ರಾಮದಲ್ಲಿ 5ಕ್ಕೂ ಹೆಚ್ಚು ಮನೆ ಕುಸಿದಿದೆ. ಇದನ್ನು ಓದಿ: 100 ವರ್ಷದಲ್ಲಿ 5ನೇ ಬಾರಿ ಕಡಿಮೆ ಮಳೆ ದಾಖಲು

    ಮಹಾರಾಷ್ಟ್ರದ ಘಟ್ಟ ಪ್ರದೇಶದಲ್ಲಿ ಭಾರಿ ಮಳೆ ಸುರಿಯುತ್ತಿದ್ದು, ಭಾರಿ ಮಳೆಗೆ ದೂದಗಂಗಾ ಹಾಗೂ ವೇದಗಂಗಾ ನದಿಗಳು ತುಂಬಿ ಹರಿಯುತ್ತಿದೆ. ನದಿ ತುಂಬಿದ ಹಿನ್ನೆಲೆಯಲ್ಲಿ ಮೂರು ಗ್ರಾಮಗಳ ಕೆಳ ಹಂತದ ಸಂಪರ್ಕ ಸೇತುವೆಗಳು ಮುಳುಗಡೆಯಾಗಿವೆ. ಇದನ್ನು ಓದಿ: ಭಾರೀ ಮಳೆಗೆ ನೋಡ ನೋಡುತ್ತಿದ್ದಂತೆ ಸೇತುವೆ ಕುಸಿದು ಬಿತ್ತು – ವಿಡಿಯೋ

    ಕಾರದಗಾ – ಭೋಜ ಹಾಗೂ ಬಾರವಾಡ- ಕುನ್ನೂರ ಗ್ರಾಮಗಳ ಸಂಪರ್ಕ ಸೇತುವೆ ದೂದಗಂಗಾ ನದಿಗೆ ಅಡ್ಡಲಾಗಿ ಇದೆ. ವೇದಗಂಗಾ ನದಿಗೆ ಅಡ್ಡಲಾಗಿ ಇರುವ ಭೋಜವಾಡಿ-ಕೂನ್ನೂರ ಗ್ರಾಮಗಳ ಸಂಪರ್ಕ ಸೇತುವೆಯೂ ಮುಳುಗಡೆ ಆಗಿದೆ. ಕಳೆದ ಮೂರು ತಿಂಗಳಿನಿಂದ ದೂದಗಂಗಾ ನದಿ ಬತ್ತಿ ಬರಿದಾಗಿತ್ತು.

    ಧಾರವಾಡ ಜಿಲ್ಲೆಯಲ್ಲಿ ಸತತ ಮಳೆ ಆಗುತ್ತಿರುವ ಹಿನ್ನೆಲೆಯಲ್ಲಿ ನವಲಗುಂದ ತಾಲೂಕಿನ ಶಿರೂರ ಗ್ರಾಮದಲ್ಲಿ ಮನೆ ಕುಸಿತವಾಗಿದೆ. ಅಶೋಕ್ ದುರಣ್ಣವರ ಎಂಬವರ ಮನೆ ಕುಸಿದಿದೆ. ಇಂದು ಬೆಳಗಿನ ಜಾವ ಎಲ್ಲರೂ ಇದ್ದಾಗಲೇ ಮನೆ ಕುಸಿದಿದೆ. ಮನೆಯಲ್ಲಿ ಇದ್ದವರಿಗೆ ಸಣ್ಣಪುಟ್ಟ ಗಾಯಗಳಾಗಿದೆ.

  • ಮುಳುಗುತ್ತಿದ್ದ ಹಸು ಉಳಿಸಲು ನದಿಯಲ್ಲಿ ಜೀವ ಪಣಕ್ಕಿಟ್ಟ ಗೆಳೆಯರು

    ಮುಳುಗುತ್ತಿದ್ದ ಹಸು ಉಳಿಸಲು ನದಿಯಲ್ಲಿ ಜೀವ ಪಣಕ್ಕಿಟ್ಟ ಗೆಳೆಯರು

    ಉಡುಪಿ: ಜೀವ ಪಣಕ್ಕಿಟ್ಟ ಯುವಕರು ನದಿಯಲ್ಲಿ ಮುಳುಗುತ್ತಿದ್ದ ಹಸು ರಕ್ಷಿಸಿದ ಘಟನೆ ಗಂಗೊಳ್ಳಿಯಲ್ಲಿ ನಡೆದಿದೆ.

    ಜಿಲ್ಲೆಯಲ್ಲಿ ಮುಂಗಾರು ಕೊಂಚ ಚುರುಕಾಗಿರುವುದರಿಂದ ಕುಂದಾಪುರದ ಪಂಚ ಗಂಗಾವಳಿ ನದಿ ತುಂಬಿ ಹರಿಯುತ್ತಿದೆ. ಕಳೆದೆರಡು ದಿನದಿಂದ ನದಿಯ ರಭಸ ಜಾಸ್ತಿಯಾಗಿದೆ. ನದಿ ನೀರಿನ ಸೆಳೆತಕ್ಕೆ ಹಸುವೊಂದು ಸಿಕ್ಕಿ ಹಾಕಿಕೊಂಡು ಜೀವನ್ಮರಣದ ನಡುವೆ ಹೋರಾಟ ನಡೆಸುತ್ತಿತ್ತು.

    ಗಂಗೊಳ್ಳಿಯ ಕೆಲ ಯುವಕರಿಗೆ ಇದು ಗೊತ್ತಾಗಿದೆ. ಕೂಡಲೇ ನಾಲ್ಕಾರು ಯುವಕರು ದೋಣಿ ಹತ್ತಿ ನದಿಗಿಳಿದಿದ್ದಾರೆ. ಈಜುತ್ತಾ ಮುಳುಗುತ್ತಿದ್ದ ಹಸುವಿನ ಚೂಪು ಕೊಂಬಿಗೆ ಹಗ್ಗ ಹಾಕಿದ್ದಾರೆ. ಸಮುದ್ರದ ಕಡೆ ಸಾಗಿ ಹೋಗುತ್ತಿದ್ದ ಹಸುವನ್ನು ದಡಕ್ಕೆ ಮುಟ್ಟಿಸಲು ಸರ್ವ ಪ್ರಯತ್ನ ಮಾಡಿದ್ದಾರೆ. ಉದ್ದ ಹಗ್ಗದ ತುದಿ ದಡದಲ್ಲಿರುವವರಿಗೆ ಸಿಕ್ಕ ಕೂಡಲೇ ಹಸುವನ್ನು ದಡಕ್ಕೆ ಎಳೆಯುವಲ್ಲಿ ಯಶಸ್ವಿಯಾಗಿದ್ದಾರೆ.

    ಗಂಗೊಳ್ಳಿಯ ಸ್ಥಳೀಯರಾದ ರಾಮ ಖಾರ್ವಿ, ರಾಜ ಮಲ್ಯರಬೆಟ್ಟು, ಅಣ್ಣಪ್ಪ ಹಾಗೂ ಗೆಳೆಯರು ಜೀವ ಪಣಕ್ಕಿಟ್ಟು ಕೊನೆಗೂ ಹಸುವನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮುಳುಗುವವನಿಗೆ ಹುಲುಕಡ್ಡಿ ಸಿಕ್ಕರೂ ಒಮ್ಮೆ ಬಚಾವ್ ಆಗುತ್ತದೆಯಂತೆ. ಅದರಂತೆ ಈಗ ಯುವಕರು ಸಾಹಸದಿಂದ ಹಸು ತನ್ನ ಪ್ರಾಣವನ್ನು ಉಳಿಸಿಕೊಂಡಿದೆ.

    ನಾವು ಸಮುದ್ರ ತೀರದವರು, ಸಮುದ್ರ ಮತ್ತು ನದಿಯಲ್ಲಿ ಈಜಿ ದಡ ಸೇರುವ ಚಾಕಚಕ್ಯತೆ ಇದೆ. ದನವೂ ಈಜುತ್ತದೆ. ಆದರೆ ನೀರಿನ ರಭಸ ಜಾಸ್ತಿಯಾಗಿರುವುದರಿಂದ ಸಮುದ್ರದ ಕಡೆ ಹೋಗುತಿತ್ತು. ಹಗ್ಗ ಹಾಕಿ ನೀರಿನ ವಿರುದ್ಧ ದಿಕ್ಕಿಗೆ ಎಳೆದು ಹಾಕಿದ್ದೇವೆ ಎಂದು ಅಣ್ಣಪ್ಪ ಹೇಳಿದ್ದಾರೆ.