Tag: ನದಿ

  • ವಿಷಯ ಕೇಳಿ ನಂಗೆ ಶಾಕ್ ಆಯ್ತು: ಯು.ಟಿ ಖಾದರ್

    ವಿಷಯ ಕೇಳಿ ನಂಗೆ ಶಾಕ್ ಆಯ್ತು: ಯು.ಟಿ ಖಾದರ್

    – ಯಾರ ಮೇಲೂ ದರ್ಪ ತೋರಿದವರಲ್ಲ

    ಮಂಗಳೂರು: ಉದ್ಯಮಿ ಸಿದ್ಧಾರ್ಥ್ ಅವರು ನಡೆದುಕೊಂಡು ಬಂದು ಇಲ್ಲಿ ಕಾಣೆಯಾಗಿದ್ದಾರೆ. ಈ ವಿಷಯ ಕೇಳಿ ನಮಗೆ ಆಘಾತವಾಗಿದೆ. ಸಿದ್ಧಾರ್ಥ್ ಅವರು ಆಗರ್ಭ ಶ್ರೀಮಂತರಾಗಿದ್ದು, ಸಾವಿರಾರು ಮಂದಿಗೆ ಕೆಲಸ ನೀಡಿದ್ದಾರೆ ಎಂದು ಶಾಸಕ ಯು.ಟಿ.ಖಾದರ್ ಹೇಳಿದ್ದಾರೆ.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ವಿಧಾನಸಭೆ ಮುಗಿಸಿ ರಾತ್ರಿ ಬರುವ ವೇಳೆ ನನಗೆ ಈ ಬಗ್ಗೆ ಮಾಹಿತಿ ತಿಳಿಯಿತು. ತಕ್ಷಣ ನಾನು ರಾತ್ರಿ ಸುಮಾರು 1.30ಕ್ಕೆ ಇಲ್ಲಿಗೆ ಬಂದೆ. ಇಲ್ಲಿ ಬಂದಾಗ ಪೊಲೀಸರು, ರೆವೆನ್ಯೂ ಡಿಪಾರ್ಟ್ ಮೆಂಟ್ ಮತ್ತು ಖಾಸಗಿ ತಜ್ಞರು ಈ ಪ್ರದೇಶಕ್ಕೆ ಬಂದಿದ್ದು, ಶೋಧಕಾರ್ಯ ಮುಂದುವರಿಸಿದ್ದರು. ಸಿದ್ಧಾರ್ಥ್ ಅವರು ಇಲ್ಲಿ ಕಾಲು ಜಾರಿ ಬಿದ್ದಿದ್ದಾರಾ ಅಥವಾ ಬೇರೆ ಕಡೆ ಹೋಗಿದ್ದಾರಾ ಎಂಬ ಸ್ಪಷ್ಟ ಮಾಹಿತಿ ಸಿಕ್ಕಿಲ್ಲ. ಸದ್ಯಕ್ಕೆ ಪೊಲೀಸರು ಮತ್ತು ಜಿಲ್ಲಾಧಿಕಾರಿಗಳು ಶೋಧ ಕಾರ್ಯ ನಡೆಸುತ್ತಿದ್ದಾರೆ ಎಂದರು.

    ಸಿದ್ಧಾರ್ಥ್ ಅವರು ಈವರೆಗೂ ಸಾವಿರಾರು ಮಂದಿಗೆ ಕೆಲಸ ನೀಡಿದ್ದಾರೆ. ಅವರಿಗೆ ಅಧಿಕಾರ ಇದ್ದರೂ ಯಾವತ್ತೂ ಯಾರ ಮೇಲೂ ದರ್ಪ ತೋರಲಿಲ್ಲ. ನಮಗೆ ಯಾವಾತ್ತಾದರೂ ಸಿಕ್ಕಿದ್ದಾಗ ತುಂಬಾ ಪ್ರೀತಿಯಿಂದ, ಆತ್ಮೀಯತೆಯಿಂದ ಮಾತನಾಡಿಸುತ್ತಿದ್ದರು ಎಂದು ಸಿದ್ಧಾರ್ಥ್ ಬಗ್ಗೆ ಮಾತನಾಡಿದರು.

    ಏನಾಗಿದೆ ಎಂದು ನನಗೂ ಗೊತ್ತಿಲ್ಲ. ತನಿಖೆ ಮಾಡಿದ ನಂತರ ತಿಳಿಯ ಬೇಕು. ರಾತ್ರಿ ಎಸ್‍.ಎಂ ಕೃಷ್ಣ ಅವರು ಫೋನ್ ಮಾಡಿ ಮಾಹಿತಿ ತಿಳಿದುಕೊಂಡಿದ್ದಾರೆ. ಜೊತೆಗೆ ಡಿ.ಕೆ ಶಿವಕುಮಾರ್ ಅವರು ಕೂಡ ಫೋನ್ ಮಾಹಿತಿ ಪಡೆಯುತ್ತಿದ್ದಾರೆ. ಹೀಗಾಗಿ ಅವರು ಸುರಕ್ಷಿತವಾಗಿ ವಾಪಸ್ ಬಂದರೆ ಸಾಕು ಎಂದು ಖಾದರ್ ಹೇಳಿದರು.

  • ಭರಚುಕ್ಕಿಯಲ್ಲಿ ಹಾಲ್ನೊರೆಯಂತೆ ಹರಿಯುತ್ತಿದ್ದಾಳೆ ಕಾವೇರಿ

    ಭರಚುಕ್ಕಿಯಲ್ಲಿ ಹಾಲ್ನೊರೆಯಂತೆ ಹರಿಯುತ್ತಿದ್ದಾಳೆ ಕಾವೇರಿ

    ಚಾಮರಾಜನಗರ: ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕಬಿನಿ ಹಾಗೂ ಕೆಆರ್‍ಎಸ್ ನಿಂದ ನದಿಗೆ ಹೆಚ್ಚಿನ ಪ್ರಮಾಣದ ನೀರು ಬಿಡುಗಡೆಯಾಗುತ್ತಿರುವುದರಿಂದ ಭರಚುಕ್ಕಿಗೆ ಮತ್ತೆ ಜೀವಕಳೆ ಬಂದಿದೆ.

    ಕೇರಳದ ವೈನಾಡು ಹಾಗೂ ಕೊಡಗಿನಲ್ಲಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ನದಿಗೆ ಕಬಿನಿ ಹಾಗೂ ಕೆಆರ್‌ಎಸ್‌ ನಿಂದ 12 ಸಾವಿರ ಕ್ಯುಸೆಕ್ಸ್ ನೀರು ಬಿಡುಗಡೆ ಮಾಡಲಾಗಿದೆ. ಹೀಗಾಗಿ ಜಿಲ್ಲೆಯ ಭರಚುಕ್ಕಿಯಲ್ಲಿ ಕಾವೇರಿ ಅತ್ಯಂತ ವಿಶಾಲವಾಗಿ ಕವಲು ಕವಲಾಗಿ, ಧುಮ್ಮಿಕ್ಕಿ ಹರಿಯುತ್ತಿದ್ದಾಳೆ.

    ಕಳೆದ ಹಲವಾರು ತಿಂಗಳಿಂದ ಬಣಗುತ್ತಿದ್ದ ಭರಚುಕ್ಕಿಗೆ ಮತ್ತೆ ಜೀವಕಳೆ ಬಂದಿದೆ. ಕಾವೇರಿ ಭರ್ರೆಂದು ಧುಮ್ಮಿಕ್ಕುವ ಭರಚುಕ್ಕಿ ಜಲಪಾತದ ಸೊಬಗು ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿದೆ. ಸುತ್ತಲು ಹಸಿರಿನಿಂದ ಕಂಗೊಳಿಸುತ್ತಿರುವ ಬೆಟ್ಟಗುಡ್ಡಗಳು, ಬೆಟ್ಟಗುಡ್ಡಗಳ ನಡುವೆ ಧುಮ್ಮಿಕ್ಕಿ ಹರಿಯುತ್ತಿರುವ ಕಾವೇರಿ ನದಿ. ನೋಡಲು ಎರಡು ಕಣ್ಣು ಸಾಲದು ಎಂದು ಬೆಂಗಳೂರಿನಿಂದ ಬಂದಿರುವ ಪ್ರವಾಸಿ ಕೀರ್ತಿ ಹೇಳಿದ್ದಾರೆ.

    ಇಲ್ಲಿನ ಪ್ರಕೃತಿಯ ಸೊಬಗಂತು ಅತ್ಯಾದ್ಭುತ. ಹಸಿರು ಬೆಟ್ಟಗುಡ್ಡಗಳ ನಡುವೆ ಹಾಲ್ನೊರೆಯಂತೆ ಹರಿಯುವ ಕಾವೇರಿಯ ಐಸಿರಿ ನಯನ ಮನೋಹರವಾಗಿದೆ. ಈ ದೃಶ್ಯವೈಭವಕ್ಕೆ ಮನಸೋಲದ ಜನರೇ ಇಲ್ಲ ಎಂದು ಪ್ರವಾಸಿಗರಾದ ಸುಗುಣ ಮತ್ತು ಶಿವಕುಮಾರ್ ಹೇಳಿದರು.

    ಕಾವೇರಿಯ ದೃಶ್ಯ ವೈಭವವನ್ನು ಕಣ್ತುಂಬಿಕೊಳ್ಳಲು ಭರಚುಕ್ಕಿಗೆ ಪ್ರವಾಸಿಗರ ದಂಡೇ ಹರಿದು ಬರುತ್ತಿದೆ. ಮರಗಿಡಗಳು ಹಸಿರಿನಿಂದ ಕಂಗೊಳಿಸುತ್ತಾ ಕಾವೇರಿಯ ಸೊಬಗನ್ನು ಇಮ್ಮಡಿಗೊಳಿಸಿವೆ.

  • ಮಹಾರಾಷ್ಟ್ರದಲ್ಲಿ ಮುಂದುವರಿದ ಮಳೆಯಬ್ಬರ – ಕೃಷ್ಣಾ ನದಿ ತೀರದಲ್ಲಿ ಪ್ರವಾಹ

    ಮಹಾರಾಷ್ಟ್ರದಲ್ಲಿ ಮುಂದುವರಿದ ಮಳೆಯಬ್ಬರ – ಕೃಷ್ಣಾ ನದಿ ತೀರದಲ್ಲಿ ಪ್ರವಾಹ

    ಬೆಂಗಳೂರು: ಕರಾವಳಿ, ಮಲೆನಾಡು ಭಾಗದಲ್ಲಿ ಮಳೆ ಮತ್ತಷ್ಟು ಕ್ಷೀಣಿಸಿದೆ. ಆದರೆ ಮಹಾರಾಷ್ಟ್ರದಲ್ಲಿ ಕಳೆದ ಮೂರು ದಿನಗಳಿಂದ ಭಾರೀ ಮಳೆಯಾಗುತ್ತಿರುವುರಿಂದ ಕೃಷ್ಣಾ ನದಿ ತೀರದಲ್ಲಿ ಪ್ರವಾಹ ಉಂಟಾಗಿದೆ.

    ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನಲ್ಲಿ ಮೂರು ಸೇತುವೆಗಳು ಜಲಾವೃತವಾಗಿವೆ. ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಮಡ್ಲಿ ಗ್ರಾಮದಲ್ಲಿ ಮಳೆ ಗಾಳಿಗೆ ಮನೆಯೊಂದು ನೆಲಸಮವಾಗಿದೆ. ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ ಗುಡ್ಡ ಕುಸಿದು ಕೃಷ್ಣಾಶ್ರಮ ಮಠಕ್ಕೆ ನೀರು ನುಗ್ಗಿದೆ. ಕೊಡಗು ಜಿಲ್ಲೆಯಲ್ಲಿ ಮಳೆ ಬಿಡುವು ನೀಡಿದ್ದು, ಗದಗ, ಹಾವೇರಿ, ದಕ್ಷಿಣ ಕನ್ನಡ, ಚಿಕ್ಕಮಗಳೂರಿನಲ್ಲಿ ಸ್ವಲ್ಪ ಮಳೆಯಾಗಿದೆ.

    ಇತ್ತ ಮುಂಬೈನಲ್ಲಿ ಭಾರೀ ಮಳೆಯಾಗುತ್ತಿದ್ದು ಮತ್ತೆ ವಾಣಿಜ್ಯ ನಗರಿಯ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಮುರ್ಬಾದ್ ಮತ್ತು ಕಲ್ಯಾಣ್ ನಗರ ಸಂಪರ್ಕಿಸುವ ರಾಯ್ತಾ ಎಂಬಲ್ಲಿ ಉಲಾಸ್ ನದಿಗೆ ಕಟ್ಟಿದ ಸೇತುವೆಯೇ ಕುಸಿದು ಬಿದ್ದಿದೆ. ಬೈಕುಲ್ಲಾದಲ್ಲಿ ಕಟ್ಟಡ ಕುಸಿದು ಒಬ್ಬರಿಗೆ ಗಾಯಗಳಾಗಿದೆ. ರೈಲು ಹಳಿಗಳಲ್ಲಿ ನೀರು ನಿಂತ ಪರಿಣಾಮ 5 ರೈಲುಗಳ ಸಂಚಾರ ನಿಷೇಧಿಸಲಾಗಿದೆ. 6ಕ್ಕೂ ಹೆಚ್ಚು ರೈಲುಗಳ ಮಾರ್ಗ ಬದಲಾಯಿಸಲಾಗಿದೆ. ಹವಾಮಾನ ಇಲಾಖೆ ಮುಂದಿನ 24 ಗಂಟೆಗಳಲ್ಲಿ ಭಾರೀ ಮಳೆಯ ಎಚ್ಚರಿಕೆ ನೀಡಿದೆ.

    ಮುಂಬೈ, ಥಾಣೆ, ರಾಯ್‍ಗಡ್, ಪಲ್ಘಾಟ್‍ನಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ 1,311 ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ. ಈಗಾಗಲೇ ಎನ್‍ಡಿಆರ್ ಎಫ್ ತಂಡ ಪ್ರವಾಹಪೀಡಿತ ಸ್ಥಳಗಳಲ್ಲಿ ಬೀಡುಬಿಟ್ಟಿದೆ. ಗೋವಾ, ಗುಜರಾತ್, ರಾಜಸ್ಥಾನದಲ್ಲೂ ಭಾರೀ ಮಳೆ ಆಗುತ್ತಿದೆ. ಜಮ್ಮುವಿನಲ್ಲಿ ಮಳೆ ಮತ್ತು ಹಿಮಪಾತದ ಕಾರಣ ಅಮರನಾಥ ಯಾತ್ರೆಯನ್ನು ರದ್ದು ಮಾಡಲಾಗಿದೆ.

  • ಮಂಗಳೂರಿನಲ್ಲಿ ಕೊಂಚ ತಗ್ಗಿದ ವರುಣ

    ಮಂಗಳೂರಿನಲ್ಲಿ ಕೊಂಚ ತಗ್ಗಿದ ವರುಣ

    ಮಂಗಳೂರು: ಕಳೆದ ಮೂರು ದಿನಗಳಲ್ಲಿ ಕರಾವಳಿಯಲ್ಲಿ ಸುರಿಯುತ್ತಿದ್ದ ಮಳೆರಾಯ ಇಂದು ಕಾಣೆಯಾಗಿದ್ದಾನೆ. ಬೆಳಗ್ಗಿನಿಂದ ಮಂಗಳೂರು ಸೇರಿದಂತೆ ಕರಾವಳಿಯ ತೀರ ಪ್ರದೇಶದಲ್ಲಿ ಮೋಡದ ವಾತಾವರಣ ನೆಲೆಸಿದ್ದು, ಅಲ್ಲಲ್ಲಿ ತುಂತುರು ಮಳೆಯಾಗಿದೆ.

    ಎರಡು ದಿನಗಳ ಭರ್ಜರಿ ಮಳೆಯಿಂದಾಗಿ ನದಿಗಳು ತುಂಬಿ ಹರಿದಿದ್ದು, ತಗ್ಗು ಪ್ರದೇಶಕ್ಕೆ ನೀರು ನುಗ್ಗಿ ಕೃಷಿ ಭೂಮಿಯನ್ನು ಹಾನಿ ಮಾಡಿದೆ. ಮಂಗಳೂರಿನ ಕಿನ್ನಿಗೋಳಿ ಪರಿಸರದ ಹಲವೆಡೆ ನಂದಿನಿ ನದಿಯಲ್ಲಿ ಪ್ರವಾಹ ಉಂಟಾಗಿ ಕೃಷಿ ಭೂಮಿಗೆ ನೀರು ನುಗ್ಗಿತ್ತು. ಇಂದು ಮಳೆ ಕಡಿಮೆಯಾದರೂ ಅಲ್ಲಿನ ನೆರೆ ಪರಿಸ್ಥಿತಿ ಕಡಿಮೆಯಾಗಿಲ್ಲ.

    ಅಡಿಕೆ, ತೆಂಗಿನ ತೋಟಗಳಲ್ಲಿ ನೀರು ನಿಂತಿದ್ದು, ಕೃಷಿಕರು ಹಾನಿ ಭೀತಿ ಎದುರಿಸುತ್ತಿದ್ದಾರೆ. ಫಲ್ಗುಣಿ ನದಿಯೂ ತುಂಬಿ ಹರಿಯುತ್ತಿದ್ದು, ಗುರುಪುರದಲ್ಲಿ ನೆರೆ ಭೀತಿ ಎದುರಾಗಿದೆ. ಆದರೆ ಪಶ್ಚಿಮ ಘಟ್ಟಗಳ ಭಾಗದಲ್ಲಿ ಅಷ್ಟೇನು ಮಳೆಯಾಗದ ಕಾರಣ ನೇತ್ರಾವತಿ ನದಿಯಲ್ಲಿ ಇನ್ನೂ ಪ್ರವಾಹ ಭೀತಿ ಎದುರಾಗಿಲ್ಲ.

    ಉಪ್ಪಿನಂಗಡಿಯ ಕುಮಾರಧಾರ ನದಿಯಲ್ಲೂ ನೀರಿನ ಮಟ್ಟ ಏರಿಕೆಯಾಗಿಲ್ಲ. ಹೀಗಾಗಿ ಜೀವನದಿ ನೇತ್ರಾವತಿ ಮಳೆಗಾಲದಲ್ಲಿಯೇ ಸೊರಗಿ ಹೋದಳೇ ಅನ್ನುವ ಆತಂಕ ಎದುರಾಗಿದೆ. ಕಳೆದು ಮೂವರು ದಿನಗಳಿಂದ ಜಿಲ್ಲೆಯಲ್ಲಿ ಧಾರಾಕಾರ ಮಳೆಯಾಗಿದ್ದು, ಜನಜೀವನ ಅಸ್ತವ್ಯಸ್ತವಾಗಿತ್ತು. ಇಂದು ಮಳೆ ಕಡಿಮೆಯಾಗಿರುದರಿಂದ ಜನರು ನಿಟ್ಟುಸಿರು ಬಿಟ್ಟಿದ್ದಾರೆ.

     

  • ಮಳೆಯಬ್ಬರಕ್ಕೆ ಕರಾವಳಿ, ಮಲೆನಾಡಿನ ಜನ ತತ್ತರ – ಉಡುಪಿಯಲ್ಲಿ ಶಾಲಾ, ಕಾಲೇಜಿಗೆ ರಜೆ

    ಮಳೆಯಬ್ಬರಕ್ಕೆ ಕರಾವಳಿ, ಮಲೆನಾಡಿನ ಜನ ತತ್ತರ – ಉಡುಪಿಯಲ್ಲಿ ಶಾಲಾ, ಕಾಲೇಜಿಗೆ ರಜೆ

    ಬೆಂಗಳೂರು: ರಾಜ್ಯದ ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ಮಳೆಯ ಅಬ್ಬರ ಮುಂದುವರಿದಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.

    ಉತ್ತರ ಕನ್ನಡ ಜಿಲ್ಲೆಯಲ್ಲಿ ಹಲವೆಡೆ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತವಾಗಿದೆ. ಜಿಲ್ಲೆಯ ಕರಾವಳಿ ಭಾಗದ ಕುಮಟ ತಾಲೂಕಿನ ಕೂಜಳ್ಳಿ, ಕೋನಳ್ಳಿ ಗ್ರಾಮ ಬಹುತೇಕ ಜಲಾವೃತವಾಗಿದ್ದು, ಕುಮಟ ತಾಲೂಕಿನ ಬಡಗಣಿ ನದಿ ತುಂಬಿ ಹರಿಯುತ್ತಿದೆ. ಇದರಿಂದ ಪ್ರವಾಹದ ಭೀತಿ ಎದುರಾಗಿದೆ. ಸ್ಥಳಕ್ಕೆ ಪೊಲೀಸರು ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿ ಭೇಟಿ ನೀಡಿ ಅಗತ್ಯ ಕ್ರಮಕ್ಕೆ ಮುಂದಾಗಿದ್ದಾರೆ.

    ಹೆಚ್ಚಿನ ಮಳೆಯಾದಲ್ಲಿ ಮೂರಕ್ಕೂ ಹೆಚ್ಚು ಗ್ರಾಮಗಳು ಮುಳುಗುವ ಸಾಧ್ಯತೆ ಇದೆ. ಹೀಗಾಗಿ ಗಂಜಿ ಕೇಂದ್ರ ತೆರೆಯಲು ಜಿಲ್ಲಾಡಳಿತ ಸೂಚಿಸಿದೆ. ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಭಾಗದಲ್ಲಿ ಕಳೆದ ಎರಡು ದಿನದಿಂದ ಭಾರೀ ಮಳೆಯಾಗುತ್ತಿದ್ದು, ಇಂದು ಹೈ ಅಲರ್ಟ್ ಘೋಷಣೆ ಮಾಡಿದೆ.

    ಕೊಡಗು ಜಿಲ್ಲೆಯಾದ್ಯಂತ ಉತ್ತಮ ಮಳೆಯಾಗುತ್ತಿದ್ದು, ಜಿಲ್ಲೆಯಲ್ಲಿ ರೇಡ್ ಅಲರ್ಟ್ ನಡುವೆ ತಲಕಾವೇರಿ ಭಾಗಮಂಡಲದಲ್ಲಿ ಮಳೆಯ ಪ್ರಮಾಣ ಕೊಂಚ ಕಡಿಮೆಯಾದ ಹಿನ್ನೆಲೆಯಲ್ಲಿ ತ್ರಿವೇಣಿ ಸಂಗಮದಲ್ಲಿ ನೀರಿನ ಮಟ್ಟ ಕೊಂಚ ಇಳಿಕೆಯಾಗಿದೆ. ಮಳೆ ಕಡಿಮೆಯಾದ ಹಿನ್ನೆಲೆಯಲ್ಲಿ ಭಗಂಡೇಶ್ವರ ದೇವಾಲಯಕ್ಕೆ ಉಡುಪಿಯ ಪೇಜಾವರ ಮಠಾದೀಶ ವಿಶ್ವೇಶ ತೀರ್ಥ ಸ್ವಾಮೀಜಿ ಅವರು ಭೇಟಿ ನೀಡಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಇತ್ತ ಮಂಜಿನ ನಗರಿ ಮಡಿಕೇರಿಯಲ್ಲಿ ಮಳೆ ಸಹಿತ ಚಳಿ ಇದೆ. ಹೀಗಾಗಿ ಮುಂಜಾಗೃತಾ ಕ್ರಮವಾಗಿ ಎನ್‍ಡಿಆರ್‍ಎಫ್ ತಂಡವು ಜಿಲ್ಲೆಯಲ್ಲಿ ಬೀಡುಬಿಟ್ಟಿದೆ.

    ಉಡುಪಿ ಜಿಲ್ಲೆಯಲ್ಲಿ ಕಳೆದ ಐದು ದಿನಗಳಿಂದ ಮುಂಗಾರು ಮಳೆ ನಿರಂತರವಾಗಿ ಸುರಿಯುತ್ತಿದೆ. ಈ 24 ಗಂಟೆಯಲ್ಲಿ 135 ಮಿಲಿ ಮೀಟರ್ ಮಳೆ ಬಿದ್ದಿದೆ. ಕುಂದಾಪುರ ತಾಲೂಕಲ್ಲಿ ಅತೀ ಹೆಚ್ಚು 155 ಮಿಲಿಮೀಟರ್ ಮಳೆಯಾಗಿದೆ. ಉಡುಪಿಯಲ್ಲಿ 130, ಕಾರ್ಕಳದಲ್ಲಿ 90 ಮಿಲಿಮೀಟರ್ ಮಳೆಯಾಗಿದೆ. ಕಳೆದ ರಾತ್ರಿಯಿಂದ ಭಾರೀ ಮಳೆಯಾಗುತ್ತಿದ್ದು, ತಗ್ಗು ಪ್ರದೇಶಗಳು ಜಲಾವೃತವಾಗಿದೆ. ಉಡುಪಿ ನಗರದ ಕಲ್ಸಂಕ- ಬನ್ನಂಜೆ ವ್ಯಾಪ್ತಿಯ ಹತ್ತಾರು ಮನೆಗಳಿಗೆ ಕೃತಕ ನೆರೆ ನೀರು ನುಗ್ಗಿದೆ.

    ಬೈಲಕೆರೆಯ ಸುಮಾರು 15 ಮನೆಗಳಿಗೆ ಕಾಲುವೆಯ ನೀರು ನುಗ್ಗಿದೆ. ಮೂಡನಿಡಂಬೂರು ವ್ಯಾಪ್ತಿಯಲ್ಲಿ ಕಾಲುವೆ ಉಕ್ಕಿ ಹರಿದಿದೆ. ಗದ್ದೆಗಳೆಲ್ಲ ಜಲಾವೃತವಾಗಿದೆ. ಮಳೆ ನೀರು ರಸ್ತೆಯಲ್ಲೆಲ್ಲ ಹರಿದಿದ್ದು ವಾಹನ ಸಂಚಾರ ಮತ್ತು ಪಾದಾಚಾರಿಗಳಿಗೆ ಸಮಸ್ಯೆಯಾಗಿತ್ತು. ಅಂಬಾಗಿಲು ರಸ್ತೆಯಲ್ಲಿ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿದ್ದು, ಕೆಲಮನೆಗಳಿಗೆ ಜಲ ದಿಗ್ಭಂಧನವಾಗಿದೆ. ಐದು ದಿನಗಳಲ್ಲಿ ಜಿಲ್ಲೆಯಲ್ಲಿ 500 ಮಿಲಿಮೀಟರ್ ಮಳೆಯಾಗಿದ್ದು, ಮುಂಗಾರು ಪ್ರಬಲವಾಗಿರುವುದಕ್ಕೆ ಪ್ರೌಢಶಾಲೆಯವರೆಗೆ ಡಿಸಿ ರಜೆ ಘೋಷಣೆ ಮಾಡಿದ್ದರು. ಇಂದು ವಿಪರೀತ ಮಳೆಯಾಗಿದ್ದರಿಂದ ಪದವಿ ಕಾಲೇಜಿನ ವಿದ್ಯಾರ್ಥಿಗಳು ಮತ್ತು ಪೋಷಕರ ಒತ್ತಡಕ್ಕೆ ಮಣಿದು ಡಿಗ್ರಿ ಕಾಲೇಜುಗಳಿಗೂ ರಜೆ ಘೋಷಣೆ ಮಾಡಿದ್ದಾರೆ.

    ಹವಾಮಾನ ಇಲಾಖೆ ಅಂದಾಜಿನ ಪ್ರಕಾರ, ಇನ್ನೂ ಎರಡು ದಿನ ಮಳೆಯಾಗಲಿದ್ದು, ವಿಕೋಪ ನಿರ್ವಹಣೆಗೆ ಜಿಲ್ಲಾಡಳಿತ ಎಲ್ಲ ರೀತಿಯಲ್ಲಿ ಸಜ್ಜಾಗಿದೆ. ಇದೇ ವೇಳೆ ಮಂಗಳೂರು – ಬೆಂಗಳೂರು ಸಂಚರಿಸುವ ಎಲ್ಲ ರೀತಿಯ ರೈಲುಗಳನ್ನು ಸಂಪೂರ್ಣ ರದ್ದುಪಡಿಸಲಾಗಿದೆ. ಕೇರಳದ ಕಣ್ಣೂರು ಮತ್ತು ಕಾರವಾರದಿಂದ ಬೆಂಗಳೂರಿಗೆ ಹೋಗುವ ರೈಲು ಸೇವೆಯನ್ನು ಮಂಗಳೂರಿನವರೆಗೆ ಮಾತ್ರ ನಡೆಸಲಾಗುತ್ತಿದೆ. ಇದರಿಂದ ರೈಲು ಪ್ರಯಾಣಿಕರು ಸಂಕಷ್ಟ ಪಡುವಂತಾಗಿದೆ.

  • ಕೊಡಗು, ಉತ್ತರ ಕನ್ನಡದಲ್ಲಿ ರೆಡ್ ಅಲರ್ಟ್ – ಕರಾವಳಿಯಲ್ಲಿ ಶಾಲೆಗಳಿಗೆ ರಜೆ

    ಕೊಡಗು, ಉತ್ತರ ಕನ್ನಡದಲ್ಲಿ ರೆಡ್ ಅಲರ್ಟ್ – ಕರಾವಳಿಯಲ್ಲಿ ಶಾಲೆಗಳಿಗೆ ರಜೆ

    ಬೆಂಗಳೂರು: ಮಲೆನಾಡು, ಕೊಡಗು, ಕರಾವಳಿ ಭಾಗಗಳಲ್ಲಿ ಮುಂಗಾರು ಮಳೆಯ ಅಬ್ಬರ ಜೋರಾಗಿದೆ. ನದಿ, ಹಳ್ಳ, ಕೊಳ್ಳ, ತೊರೆಗಳು ತುಂಬಿ ಹರಿಯುತ್ತಿವೆ.

    ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಉಡುಪಿಯಲ್ಲಿ ಇವತ್ತು ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದ್ದು, ಉಳ್ಳಾಲದಲ್ಲಿ ಕಡಲ್ಕೊರೆತ ಹೆಚ್ಚಾಗಿದೆ. ಸೋಮೇಶ್ವರ ಉಚ್ಚಿಲದಲ್ಲಿ ಸಮುದ್ರ ತೀರಕ್ಕೆ ಬೃಹದಾಕಾರದ ಅಲೆಗಳು ಬಂದು ಅಪ್ಪಳಿಸುತ್ತಿವೆ. ನೇತ್ರಾವತಿ, ಕುಮಾರಧಾರ ಸೇರಿದಂತೆ ಜಿಲ್ಲೆಯ ಬಹುತೇಕ ನದಿಗಳ ನೀರಿನ ಮಟ್ಟದಲ್ಲಿ ಏರಿಕೆಯಾಗಿದೆ.

    ಉಡುಪಿ ಜಿಲ್ಲೆಯ ಕುಂದಾಪುರ, ಬೈಂದೂರು, ಕಾರ್ಕಳದಲ್ಲಿ ಧಾರಾಕಾರ ಮಳೆಯಾಗುತ್ತಿದೆ. ಇದೇ ರೀತಿ ಮಳೆ ಮುಂದುವರಿದರೆ ನಾಳೆ ತಗ್ಗು ಪ್ರದೇಶದಲ್ಲಿ ನೆರೆಯಾಗುವ ಭೀತಿಯಿದೆ. ಕಳೆದ 24 ಗಂಟೆಯಲ್ಲಿ 60 ಮಿಲಿಮೀಟರ್ ಮಳೆ ಬಿದ್ದಿದೆ. ಜೂನ್ ನಲ್ಲಿ ಮುಂಗಾರು ದುರ್ಬಲವಾಗಿದ್ದು, ಜುಲೈನಲ್ಲಿ ಮಳೆ ರೈತರ ಕೈ ಹಿಡಿದಿದೆ.

    ಮತ್ತೆ ಉತ್ತರ ಕನ್ನಡ ಜಿಲ್ಲೆಯಲ್ಲಿ ರೆಡ್ ಅಲರ್ಟ್ ಮುಂದುವರಿದಿದೆ. ಮಳೆಯಿಂದಾಗಿ ಹೊನ್ನಾವರದ ಕರ್ಕಿ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಮರಬಿದ್ದು 15 ತಾಸಿಗೂ ಹೆಚ್ಚುಕಾಲ ಮಂಗಳೂರು ಉಡುಪಿ ಸಂಚಾರ ಸಂಪೂರ್ಣ ಬಂದ್ ಆಗಿತ್ತು. ಕರಾವಳಿ ಭಾಗದ ಹಲವು ರಸ್ತೆಗಳಲ್ಲಿ ನೀರು ತುಂಬಿ ಜನಜೀವನ ಅಸ್ತವ್ಯಸ್ತವಾಗಿದೆ. ಇತ್ತ ಕಾರವಾರದಲ್ಲಿ ಕೂಡ ಮಳೆಯ ಆರ್ಭಟಕ್ಕೆ ವಿದ್ಯುತ್ ಕಂಬಗಳು ಧರೆಗುರುಳಿದ್ದು, ಹಲವು ಭಾಗದಲ್ಲಿ ವಿದ್ಯುತ್ ವ್ಯತ್ಯಯವಾಗಿದೆ.

    ಮಳೆ ಮತ್ತೆ ತೀವ್ರತೆ ಪಡೆಯುವ ಸಾಧ್ಯತೆ ಇರುವುದರಿಂದ ಜುಲೈ 24ರವರೆಗೆ `ರೆಡ್ ಅಲರ್ಟ್` ಘೋಷಿಸಲಾಗಿದ್ದು, 204 ಮಿ.ಮೀಗಿಂತ ಅಧಿಕ ಮಳೆ ಬೀಳುವ ಎಚ್ಚರಿಕೆ ನೀಡಲಾಗಿದೆ. ಸಮುದ್ರದಲ್ಲಿ ಅಲೆಗಳ ಅಬ್ಬರ ಹೆಚ್ಚಾಗುತ್ತಿದ್ದು, ದೇವಭಾಗ್, ಶಿರವಾಡ, ಸೇರಿದಂತೆ ಹಲವು ಭಾಗದಲ್ಲಿ ಕಡಲಕೊರೆತ ಹೆಚ್ಚಾಗುತ್ತಿದೆ. ಸಮುದ್ರದ ಅಬ್ಬರಕ್ಕೆ ನಾಡದೋಣಿ ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ. ತಗ್ಗು ಪ್ರದೇಶ ಹಾಗೂ ನದಿ ತಡದ ಜನರಿಗೆ ಸುರಕ್ಷಿತ ಸ್ಥಳದಲ್ಲಿ ಇರುವಂತೆ ಜಿಲ್ಲಾಡಳಿತ ಸೂಚಿಸಿದೆ.

    ಕೊಡಗಿನಲ್ಲಿ ಮತ್ತೆ ರೆಡ್ ಅಲರ್ಟ್ ಘೋಷಿಸಲಾಗಿದೆ. ಬ್ರಹ್ಮಗಿರಿ ಬೆಟ್ಟ ಶ್ರೇಣಿಯಲ್ಲಿ ಉತ್ತಮ ಮಳೆ ಆಗುತ್ತಿದ್ದು, ಭಾಗಮಂಡಲ ತ್ರಿವೇಣಿ ಸಂಗಮದಲ್ಲಿ ನೀರಿನ ಮಟ್ಟ ಏರುತ್ತಿದೆ.

    ಬೆಂಗಳೂರಿನ ಹಲವೆಡೆ ರಾತ್ರಿಯೆಲ್ಲಾ ಮಳೆಯಾಗಿದ್ದು, ಹಲವೆಡೆ ಟ್ರಾಫಿಕ್ ಜಾಮ್ ಉಂಟಾಗಿತ್ತು. ಬೆಳಗ್ಗೆಯಾದರೂ ಮಳೆ ನಿಲ್ಲದೆ ತುಂತುರು ಮಳೆಯಾಗುತ್ತಿದೆ. ನಿರಂತರ ಮಳೆಯಿಂದಾಗಿ ರಸ್ತೆಗಳೆಲ್ಲ ನೀರು ನಿಂತಿದ್ದು, ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

  • ದಕ್ಷಿಣ ಕನ್ನಡ, ಉಡುಪಿ, ಕೊಡಗಿನಲ್ಲಿ ಮಳೆ ಜೋರು- ಎಲ್ಲೆಲ್ಲಿ ಏನಾಗಿದೆ?

    ದಕ್ಷಿಣ ಕನ್ನಡ, ಉಡುಪಿ, ಕೊಡಗಿನಲ್ಲಿ ಮಳೆ ಜೋರು- ಎಲ್ಲೆಲ್ಲಿ ಏನಾಗಿದೆ?

    ಬೆಂಗಳೂರು: ರಾಜ್ಯದ ವಿವಿಧ ಭಾಗಗಳಲ್ಲಿ ಮಳೆರಾಯನ ಅಬ್ಬರ ಜೋರಾಗಿದೆ. ಕೊಡಗಿನಲ್ಲಿ ಮಳೆ ಅಬ್ಬರಕ್ಕೆ ಹಲವಾರು ಅವಾಂತರಗಳು ಸೃಷ್ಟಿಯಾಗಿವೆ. ಕೊಡಗು ಜಿಲ್ಲೆಯಲ್ಲಿ ಮಳೆ ಆಗುತ್ತಿದೆ. ಮಡಿಕೇರಿ, ವಿರಾಜಪೇಟೆಯಲ್ಲಿ ಮಳೆ ಆಗುತ್ತಿದ್ದು, ಭಾಗಮಂಡಲದ ಸಂಗಮದಲ್ಲಿ ನೀರಿನ ಮಟ್ಟ ಹೆಚ್ಚಳವಾಗಿದೆ.

    ದಕ್ಷಿಣ ಕನ್ನಡ, ಉತ್ತರ ಕನ್ನಡ ಜಿಲ್ಲೆಯಲ್ಲಿ ವರುಣನ ಪ್ರತಾಪ ಜೋರಾಗಿದೆ. ಭಟ್ಕಳದಲ್ಲಿ ರಸ್ತೆ ಅಂಗಡಿಗಳಿಗೆ ನೀರು ನುಗ್ಗಿದೆ. ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನೀರು ನಿಂತು ವಾಹನ ಸವಾರರು ಪರದಾಡಿದ್ದರು. ಇದರಿಂದ ಉಡುಪಿ- ಭಟ್ಕಳ ಭಾಗದ ಹೆದ್ದಾರಿ ಸಂಚಾರ ಅಸ್ತವ್ಯಸ್ತವಾಗಿದಲ್ಲದೇ ಮಳೆಯಿಂದ ಜನಜೀವನ ಅಸ್ತವ್ಯಸ್ತವಾಗಿತ್ತು. ಹಾವೇರಿ ಜಿಲ್ಲೆಯಲ್ಲಿ ಧಾರಾಕಾರ ಮಳೆಯಾಗಿದ್ದು, ಜಿಲ್ಲೆಯ ಬ್ಯಾಡಗಿ, ರಾಣೇಬೆನ್ನೂರು ಸೇರಿದಂತೆ ಹಲವೆಡೆ ಉತ್ತಮ ಮಳೆಯಾಗಿದೆ.

    ಆರೆಂಜ್ ಅಲರ್ಟ್ ನಲ್ಲಿರುವ ಕೊಡಗಿನ ವಿವಿಧೆಡೆ ಮಳೆ ಅವಾಂತರವನ್ನೇ ಸೃಷ್ಟಿಸಿದೆ. ವಿರಾಜಪೇಟೆ ತಾಲೂಕಿನಲ್ಲಿ ಸುರಿದ ಜಿಟಿ ಜಿಟಿ ಮಳೆಗೆ ಮಲೆತಿರಕೆ ಬೆಟ್ಟದ ಸಮೀಪ ಇರುವ ಎರಡು ಮನೆಗಳ ಮೇಲೆ ಮಣ್ಣು ಕುಸಿದಿದ್ದು, ನಿವಾಸಿಗಳನ್ನು ಸಮುದಾಯ ಭವನಕ್ಕೆ ಸ್ಥಳಾಂತರಿಸಿದ್ದಾರೆ.

    ನಾಪೋಕ್ಲು ಬಳಿ ಕಾವೇರಿ ನದಿ ಉಕ್ಕಿ ಹರಿಯುತ್ತಿದ್ದು, ರಸ್ತೆ ಮುಳುಗಡೆಯಾಗುವ ಭೀತಿ ಹೆಚ್ಚಿದೆ. ಬ್ರಹ್ಮಗಿರಿ ತಪ್ಪಲಿನಲ್ಲಿ ಭಾರೀ ಮಳೆಯಾಗುತ್ತಿರುವುದರಿಂದ ತ್ರಿವೇಣಿ ಸಂಗಮದಲ್ಲಿ ನೀರಿನ ಪ್ರಮಾಣದಲ್ಲಿ ಗಣನೀಯ ಏರಿಕೆಯಾಗುತ್ತಿದೆ. ಇದೇ ರೀತಿ ಮೂರು ದಿನ ನಿರಂತರ ಮಳೆಯಾದರೆ ತ್ರಿವೇಣಿ ಸಂಗಮ ಮುಳುಗಡೆಯಾಗುವ ಸಾಧ್ಯತೆಯಿದೆ.

    ಉಡುಪಿಯಲ್ಲಿ ಕಳೆದ ಮೂರು ದಿನಗಳಲ್ಲಿ 300 ಮಿಲಿಮೀಟರ್ ನಷ್ಟು ಮಳೆಯಾಗಿದೆ. ಮೊದಲೆರಡು ದಿನ 100 ಮಿಲಿ ಮೀಟರ್ ಮಳೆ ಬಿದ್ದಿದ್ದು, ಮೂರನೇ ದಿನವೂ ಚೆನ್ನಾಗಿ ಮಳೆಯಾಗಿದೆ. ಜಿಲ್ಲೆಯ ಕಾರ್ಕಳ ತಾಲೂಕಲ್ಲಿ 110 ಮಿಲಿ ಮೀಟರ್, ಕುಂದಾಪುರದಲ್ಲಿ 102 ಮಿಲಿಮೀಟರ್, ಉಡುಪಿಯಲ್ಲಿ 88 ಮಿಲಿಮೀಟರ್ ಮಳೆಯಾಗಿದೆ.

    ಕೇರಳದಲ್ಲಿ ನಾಲ್ವರು ಸಾವನ್ನಪ್ಪಿದ್ದು, ಮೂವರು ಕಣ್ಮರೆಯಾಗಿದ್ದಾರೆ. ಬಿಹಾರದಲ್ಲಿ ಪ್ರವಾಹದಿಂದ 12 ಲಕ್ಷ ಮಂದಿ ಸಂಕಷ್ಟಕ್ಕೀಡಾಗಿದ್ದು, ಸಾವಿನ ಸಂಖ್ಯೆ 102ಕ್ಕೆ ಏರಿದೆ. ಅಸ್ಸಾಂನಲ್ಲಿ 38 ಲಕ್ಷ ಜನ ಪ್ರವಾಹಪೀಡಿತರಾಗಿದ್ದು, 64 ಮಂದಿ ಬಲಿಯಾಗಿದ್ದಾರೆ.

  • ಉಡುಪಿ ಜಿಲ್ಲೆಯಾದ್ಯಂತ 2 ದಿನಗಳಿಂದ ನಿರಂತರ ವರ್ಷಧಾರೆ

    ಉಡುಪಿ ಜಿಲ್ಲೆಯಾದ್ಯಂತ 2 ದಿನಗಳಿಂದ ನಿರಂತರ ವರ್ಷಧಾರೆ

    ಉಡುಪಿ: ಜಿಲ್ಲೆಯಾದ್ಯಂತ ಎರಡು ದಿನಗಳಿಂದ ನಿರಂತರ ವರ್ಷಧಾರೆ ಆಗುತ್ತಿದ್ದು, ಸಮುದ್ರ ತೀರದಲ್ಲಿ ಮಾತ್ರ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ.

    ಜಿಲ್ಲೆಯಲ್ಲಿ 102 ಮಿಲಿಮೀಟರ್ ಮಳೆ ದಾಖಲಾಗಿದೆ. ಉಡುಪಿ 101, ಕುಂದಾಪುರ 99.02, ಕಾರ್ಕಳದಲ್ಲಿ 105 ಮಿ.ಮೀ ಮಳೆ ಆಗಿದೆ. ಮೀನುಗಾರರು ಕಡಲಿಗೆ ಇಳಿಯದಂತೆ ಹವಾಮಾನ ಇಲಾಖೆ ಸೂಚನೆ ನೀಡಿದೆ.

    ತಗ್ಗುಪ್ರದೇಶದಲ್ಲಿ ವಾಸಿಸುವವರಿಗೂ ಅಲರ್ಟ್ ಇರುವಂತೆ ಮನವಿ ಮಾಡಿಕೊಂಡಿದೆ. ನದಿ ಪಾತ್ರಗಳಿಗೆ ತೆರಳದಂತೆ ಜನರಿಗೆ ಸೂಚನೆ ನೀಡಲಾಗಿದ್ದು, ಎರಡು ದಿನ ಮಳೆ ಮುಂದುವರಿಯುವ ಸಾಧ್ಯತೆ ಇದೆ.

    ಕೊಡಗು ಜಿಲ್ಲೆಯಲ್ಲಿ ಭಾರೀ ಮಳೆಯ ಮುನ್ಸೂಚನೆ ಹಿನ್ನೆಲೆಯಲ್ಲಿ ಕೊಡಗು ಜಿಲ್ಲಾಡಳಿತ ರೆಡ್ ಅಲರ್ಟ್ ಘೋಷಣೆ ಮಾಡಿದೆ. ಕೇಂದ್ರ ಹವಾಮಾನ ಇಲಾಖೆ ಜುಲೈ 18ರಿಂದ 23 ರವರೆಗೆ ಕರಾವಳಿ ಹಾಗೂ ದಕ್ಷಿಣ ಒಳನಾಡಿನಲ್ಲಿ ಭಾರೀ ಮಳೆಯಾಗಲಿದೆ ಎಂಬ ಮುನ್ಸೂಚನೆ ನೀಡಿದೆ.

  • ಕೊಡಗಲ್ಲಿ 3 ದಿನ ಭರ್ಜರಿ ಮಳೆ – ಆತಂಕದಲ್ಲಿ `ಕರ್ನಾಟಕ ಕಾಶ್ಮೀರ’ದ ಜನ

    ಕೊಡಗಲ್ಲಿ 3 ದಿನ ಭರ್ಜರಿ ಮಳೆ – ಆತಂಕದಲ್ಲಿ `ಕರ್ನಾಟಕ ಕಾಶ್ಮೀರ’ದ ಜನ

    ಬೆಂಗಳೂರು: ಈ ಬಾರಿ ಮುಂಗಾರು ಲೇಟಾಗಿ ಎಂಟ್ರಿ ಕೊಟ್ಟಿದ್ದರೂ ಮಳೆಯ ಅಬ್ಬರ ಜೋರಾಗಿಯೇ ಇದೆ. ರಾಜ್ಯದ ಹಲವೆಡೆ ಉತ್ತಮ ಮಳೆಯಾಗುತ್ತಿದ್ದು, ಕೆಲವೆಡೆ ಜನಜೀವನ ಅಸ್ತವ್ಯಸ್ತಗೊಂಡಿದೆ.

    ಕೊಡಗಿನಲ್ಲಿ ಈ ಬಾರಿ ಆರಂಭದಲ್ಲಿ ತಣ್ಣಗಿದ್ದ ವರುಣ ಆರೆಂಜ್ ಅಲರ್ಟ್ ಆದ ಬಳಿಕ ಅಂದರೆ ಶುಕ್ರವಾರದಿಂದ ಸುರಿಯಲಾರಂಭಿಸಿದ್ದಾನೆ. ಮುಂದಿನ ಮೂರು ದಿನ ಭರ್ಜರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆಯೂ ಎಚ್ಚರಿಸಿದೆ. ಈ ಹಿನ್ನೆಲೆಯಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ.

    ಎಲ್ಲೆಲ್ಲೂ ಮಂಜು ಮುಸುಕಿದ್ದು, 48 ಗಂಟೆಗಳಿಂದ ಸೂರ್ಯನ ದರ್ಶನವೇ ಇಲ್ಲವಾಗಿದೆ. ನದಿ, ತೊರೆ, ಹಳ್ಳ, ಕೊಳ್ಳಗಳು ಉಕ್ಕಿ ಹರಿಯುತ್ತಿದ್ದು, ಹಾರಂಗಿ ಜಲಾಶಯದ ಒಳಹರಿವು ಹೆಚ್ಚಾಗಿದೆ. ಕಳೆದ ಬಾರಿ ಪ್ರವಾಹಕ್ಕೆ ನಲುಗಿದ್ದ ಕೊಡಗು ಜನರಲ್ಲಿ ಈ ಮಳೆ ಆತಂಕ ಹುಟ್ಟುಹಾಕಿದೆ.

    ಕರಾವಳಿ ತೀರ ದಕ್ಷಿಣ ಕನ್ನಡದಲ್ಲೂ ಮಳೆಯಬ್ಬರ ಜೋರಾಗಿದ್ದು, ಜುಲೈ 22ರವರೆಗೆ 200 ಮಿಲಿಮೀಟರ್ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ. ಮುಂಜಾಗ್ರತಾ ಕ್ರಮವಾಗಿ ಇಂದು ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದ್ದು, ಮೀನುಗಾರರು ಸಮುದ್ರಕ್ಕೆ ಇಳಿಯಬಾರದೆಂದು ಜಿಲ್ಲಾಡಳಿತ ಸೂಚನೆ ನೀಡಿದೆ.

    ರಾಯಚೂರು ಜಿಲ್ಲೆಯಲ್ಲೂ ಮಳೆಯಬ್ಬರ ಜೋರಾಗಿದ್ದು, ದೇವದುರ್ಗದ ವಂದಲಿ ಗ್ರಾಮದಲ್ಲಿ ಸಿಡಿಲು ಬಡಿದು ರೈತ ಭೀಮನಗೌಡ ಸಾವನ್ನಪ್ಪಿದ್ದಾರೆ. ಇತ್ತ ಬೆಂಗಳೂರಿನಲ್ಲೂ ಧಾರಾಕಾರ ಮಳೆ ಸುರಿಯುತ್ತಿದ್ದು, ಹೆಬ್ಬಾಳ ಫ್ಲೈ ಓವರ್ ಮೇಲೆ ನೀರು ನಿಂತಿತ್ತು. ಜೊತೆಗೆ ಬಳ್ಳಾರಿ ರಸ್ತೆಯಲ್ಲಿ ಫುಲ್ ಟ್ರಾಫಿಕ್ ಜಾಂ ಉಂಟಾಗಿ ವಾಹನ ಸವಾರರು ಪರದಾಡುವಂತಾಗಿತ್ತು.

  • ರಾಜ್ಯದೆಲ್ಲೆಡೆ ವರುಣನ ಆರ್ಭಟ -ಚರಂಡಿ ಬ್ಲಾಕಾಗಿ ರಸ್ತೆ, ಮನೆ, ರೈಲ್ವೆ ನಿಲ್ದಾಣಗಳಿಗೆ ನೀರು

    ರಾಜ್ಯದೆಲ್ಲೆಡೆ ವರುಣನ ಆರ್ಭಟ -ಚರಂಡಿ ಬ್ಲಾಕಾಗಿ ರಸ್ತೆ, ಮನೆ, ರೈಲ್ವೆ ನಿಲ್ದಾಣಗಳಿಗೆ ನೀರು

    ಬೆಂಗಳೂರು: ರಾಜ್ಯದೆಲ್ಲೆಡೆ ಮಳೆ ಜೋರಾಗಿದ್ದು, ಕರಾವಳಿ, ಉತ್ತರ ಕರ್ನಾಟಕ ಮತ್ತು ದಕ್ಷಿಣ ಒಳನಾಡಿನಲ್ಲಿ ಮಳೆ ಮುಂದುವರಿದಿದೆ.

    ಕರಾವಳಿಯಲ್ಲಿ ಮಳೆ ಬಿರುಸು ಪಡೆದಿದ್ದು, ಮಂಗಳೂರು ನಗರದ ವಿವಿಧೆಡೆ ಮಳೆ ನೀರು ಅವಾಂತರ ಸೃಷ್ಟಿಸಿದೆ. ಚರಂಡಿ ಬ್ಲಾಕ್ ಆಗಿ ಮಳೆ ನೀರು ಹರಿಯಲು ಸಾಧ್ಯವಾಗದೆ ಮಂಗಳೂರು ರೈಲು ನಿಲ್ದಾಣಕ್ಕೂ ನೀರು ನುಗ್ಗಿತ್ತು. ರೈಲು ನಿಲ್ದಾಣದ ಮುಂಭಾಗದಲ್ಲಿ ಕಾಮಗಾರಿ ನಡೆಯುತ್ತಿದ್ದ ಹಿನ್ನೆಲೆಯಲ್ಲಿ ಚರಂಡಿ ಬ್ಲಾಕ್ ಆಗಿತ್ತು. ಗುರುವಾರ ಒಂದೇ ಸಮನೆ ಸುರಿದ ಮಳೆಗೆ ನೀರು ರೈಲು ನಿಲ್ದಾಣದ ಒಳಗೆ ನುಗ್ಗಿದೆ.

    ಟಿಕೆಟ್ ಕೌಂಟರ್ ನಲ್ಲಿ ನೀರು ನಿಂತಿತ್ತು. ನಿನ್ನೆ ರಾತ್ರಿ ಮಳೆಯಾಗಿದ್ದರಿಂದ ಮಳೆ ಇಲ್ಲದೆ ಕಂಗಾಲಾಗಿದ್ದ ಕರಾವಳಿ ಜನ ನಿಟ್ಟುಸಿರು ಬಿಟ್ಟಿದ್ದಾರೆ. ಮಳೆಗಾಲ ಶುರುವಾಗಿ ಒಂದೂವರೆ ತಿಂಗಳಾದರೂ ಮಳೆ ಬಿರುಸು ಪಡೆಯದೆ ಕೃಷಿ ಚಟುವಟಿಕೆಗಳಿಗೆ ತೊಂದರೆಯಾಗಿತ್ತು. ಈಗ ಎರಡು ದಿನಗಳಿಂದ ಒಂದಷ್ಟು ಮಟ್ಟಿಗೆ ಮಳೆಯಾಗಿದೆ. ಆದರೆ ನದಿಗಳು ಮಾತ್ರ ತುಂಬಿ ಹರಿದಿಲ್ಲ. ನೇತ್ರಾವತಿ, ಕುಮಾರಧಾರ ನದಿಗಳು ತುಂಬದೇ ಇರುವುದು ಆತಂಕ ಸೃಷ್ಟಿಸಿದೆ.

    ಇದೇ ವೇಳೆ ಲಾಲ್ ಬಾಗ್ ಬಳಿಯೂ ಚರಂಡಿ ಬ್ಲಾಕ್ ಆಗಿ ಮಳೆ ನೀರು ರಸ್ತೆಯಲ್ಲಿ ನಿಂತಿದ್ದು, ವಾಹನಗಳ ಸಂಚಾರಕ್ಕೆ ತೊಂದರೆ ಉಂಟಾಗಿತ್ತು. ಹಳೆ ಬಂದರಿಗೆ ಸಾಗುವ ರಸ್ತೆಯಲ್ಲೂ ನೀರು ನಿಂತು ಬ್ಲಾಕ್ ಆಗಿದ್ದರಿಂದ ವ್ಯಾಪಾರಿಗಳು ಸಂಕಷ್ಟಕ್ಕೀಡಾಗಿದ್ದರು. ನಗರದ ಎಂ.ಜಿ.ರಸ್ತೆಯಲ್ಲೂ ರಸ್ತೆಯಲ್ಲೇ ನೀರು ನಿಂತಿದ್ದು, ಜನ ಸಂಕಷ್ಟಕ್ಕೀಡಾಗಿದ್ದರು.

    ಹಾವೇರಿ ಜಿಲ್ಲೆಯ ರಾಣೇಬೆನ್ನೂರು ತಾಲೂಕಿನಲ್ಲಿ ಧಾರಾಕಾರ ಮಳೆ ಆಗಿದೆ. ಹೆಡಿಯಾಲ ಗ್ರಾಮದ ಕೆರೆ ಒಡೆದು ಮನೆಗಳಿಗೆ ನೀರು ನುಗ್ಗಿದೆ. ಅಂತರವಳ್ಳಿ ಕ್ರಾಸ್‍ನಲ್ಲಿ 50ಕ್ಕೂ ಅಧಿಕ ಗುಡಿಸಲುಗಳಿಗೆ ಮಳೆ ನೀರು ನುಗ್ಗಿದೆ. ಧಾರವಾಡದಲ್ಲಿ ಭರ್ಜರಿ ಮಳೆಯಾಗಿದ್ದು, ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿತ್ತು. ಜನ್ನತ್ ನಗರ ಬಡಾವಣೆ ಜಲಾವೃತವಾಗಿತ್ತು. ಕೊಡಗು ಜಿಲ್ಲೆಯಲ್ಲಿ 5 ದಿನ ಭಾರೀ ಮಳೆ ಆಗುತ್ತೆ ಎಂದು ಆರೆಂಜ್ ಅಲರ್ಟ್ ಘೋಷಿಸಲಾಗಿತ್ತು. ಆದರೆ ಇದೂವರೆಗೆ ಮಳೆ ಬರುವ ಲಕ್ಷಣಗಳೇ ಕಾಣುತ್ತಿಲ್ಲ.

    ಬಿಸಿಲಿನಿಂದ ಕೆಂಗೆಟ್ಟಿದ್ದ ಬೀದರ್ ಜಿಲ್ಲೆಯ ರೈತರಿಗೆ ಹಾಗೂ ಜನರಿಗೆ ವರುಣ ದೇವ ಕೃಪೆ ತೋರಿದ್ದು, ಸತತ ಒಂದು ಗಂಟೆ ಮಳೆ ಸುರಿದಿದೆ. ಬೀದರ್ ನಗರ ಹಾಗೂ ತಾಲೂಕು ಸೇರಿದಂತೆ ಹಲವು ಕಡೆ ಮಳೆರಾಯ ಕೃಪೆ ತೋರಿದ್ದು, ಮಳೆರಾಯನ ಆಗಮನದಿಂದಾಗಿ ಜಿಲ್ಲೆಯ ರೈತರಲ್ಲಿ ಮಂದಹಾಸ ಮೂಡಿದೆ.