Tag: ನದಿ

  • ಪಾಕಿಗೆ ಹರಿಯತ್ತಿರುವ ನೀರನ್ನು ನಿಲ್ಲಿಸುವ ಕೆಲಸ ಆರಂಭಗೊಂಡಿದೆ – ಕೇಂದ್ರ ಸರ್ಕಾರ

    ಪಾಕಿಗೆ ಹರಿಯತ್ತಿರುವ ನೀರನ್ನು ನಿಲ್ಲಿಸುವ ಕೆಲಸ ಆರಂಭಗೊಂಡಿದೆ – ಕೇಂದ್ರ ಸರ್ಕಾರ

    ಮುಂಬೈ: ಉಗ್ರರನ್ನು ಉತ್ಪಾದಿಸಿ ಭಾರತಕ್ಕೆ ಕಳುಹಿಸುತ್ತಿರುವ ಪಾಕಿಸ್ತಾನ ತಿರುಗೇಟು ನೀಡಲು ಭಾರತ ಈಗ ಜಲಾಸ್ತ್ರವನ್ನು ಪ್ರಯೋಗಿಸಿದ್ದು, ಕೆಲಸ ಈಗಾಗಲೇ ಆರಂಭಗೊಂಡಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

    ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಈ ವಿಚಾರದ ಬಗ್ಗೆ ಪ್ರತಿಕ್ರಿಯಿಸಿ, ಇಂಡಸ್ ಒಪ್ಪಂದವನ್ನು ಉಲ್ಲಂಘಿಸದೇ ಪಾಕಿಸ್ತಾನಕ್ಕೆ ಹರಿಯುತ್ತಿರುವ ನೀರನ್ನು ನಿಲ್ಲಿಸುವ ಕಾರ್ಯ ಈಗಾಗಲೇ ಆರಂಭಗೊಂಡಿದೆ ಎಂದು ಹೇಳಿದ್ದಾರೆ.

    ನಾನು ಪಾಕಿಸ್ತಾನಕ್ಕೆ ಹರಿಯುವ ನೀರನ್ನು ನಿಲ್ಲಿಸುತ್ತಿರುವ ಬಗ್ಗೆ ಮಾತನಾಡುತ್ತೇನೆಯೇ ಹೊರತು ಇಂಡಸ್ ಒಪ್ಪಂದ ಉಲ್ಲಂಘನೆ ಮಾಡುತ್ತಿರುವ ಬಗ್ಗೆ ಅಲ್ಲ. ಪಾಕಿಸ್ತಾನಕ್ಕೆ ನಮ್ಮ ನೆಲದಿಂದ ಜಾಸ್ತಿ ನೀರು ಹರಿದು ಹೋಗುತ್ತದೆ. ನೀರನ್ನು ಸಂಗ್ರಹಿಸಲು ನಾವು ಜಲಾಶಯವನ್ನು ನಿರ್ಮಿಸುತ್ತಿದ್ದೇವೆ. ನಂತರ ಕಾಲುವೆಗಳ ಮೂಲಕ ನೀರನ್ನು ಹರಿಸಲಾಗುತ್ತದೆ ಎಂದು ವಿವರಿಸಿದರು.

    ವಿದ್ಯುತ್ ಉತ್ಪಾದನೆಗೆ ಮಾತ್ರ ಜಲಾಶಯ ನಿರ್ಮಿಸುತ್ತಿಲ್ಲ. ಮಳೆ ಕಡಿಮೆಯಾದ ಸಂದರ್ಭದಲ್ಲಿ ನೀರನ್ನು ಹರಿಸಲು ಈ ಡ್ಯಾಂ ನಿರ್ಮಾಣ ಮಾಡುತ್ತಿದ್ದೇವೆ ಎಂದು ಸರ್ಕಾರದ ಕ್ರಮಕ್ಕೆ ಅವರು ಸಮರ್ಥನೆ ನೀಡಿದರು.

    2016ರಲ್ಲಿ ಉರಿ ಸೇನಾ ನೆಲೆಯ ಮೇಲೆ ದಾಳಿ ನಡೆದ ಬಳಿಕ ಕೇಂದ್ರ ಸರ್ಕಾರ ಪಾಕಿಸ್ತಾನಕ್ಕೆ ಹರಿಯುತ್ತಿರುವ ನೀರನ್ನು ಭಾರತದತ್ತ ತಿರುಗಿಸಲು ಯೋಜನೆ ರೂಪಿಸಿತ್ತು. ಈ ವಿಚಾರದ ಬಗ್ಗೆ ಮೊದಲ ಬಾರಿಗೆ ಮಾತನಾಡಿದ್ದ ಅಂದಿನ ಜಲಸಂಪನ್ಮೂಲ ಸಚಿವ ನಿತಿನ್ ಗಡ್ಕರಿ, ಉಗ್ರರಿಗೆ ಸಹಕಾರ ನೀಡುವುದನ್ನು ಮುಂದುವರಿಸಿದರೆ ಮುಂದೆ ಸಂಪೂರ್ಣವಾಗಿ ಭಾರತದಿಂದ ಪಾಕಿಸ್ತಾನಕ್ಕೆ ನೀರು ಹರಿಸುವುದನ್ನು ನಿಲ್ಲಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದರು.

    ಪಾಕಿಸ್ತಾನ ನಿರಂತರವಾಗಿ ಉಗ್ರರಿಗೆ ಸಹಕಾರ ನೀಡುತ್ತಾ ಬಂದಿದೆ. ಇನ್ನು ಮುಂದೆಯೂ ಸಹಕಾರ ನೀಡಿದರೆ ಭಾರತದಿಂದ ಹರಿಯುವ ನೀರನ್ನು ನಿಲ್ಲಿಸುತ್ತೇವೆ. ಪಾಕಿಸ್ತಾನಕ್ಕೆ ಹರಿಯುವ ನೀರನ್ನು ಹರ್ಯಾಣ, ಪಂಜಾಬ್, ರಾಜಸ್ಥಾನಕ್ಕೆ ಹರಿಸಲಾಗುವುದು. ಈ ಸಂಬಂಧ ಈಗಾಗಲೇ ಅಧ್ಯಯನ ಆರಂಭಗೊಂಡಿದೆ ಎಂದು ತಿಳಿಸಿದ್ದರು.

    ಮೂರು ನದಿಗಳ ನೀರು ಪಾಕಿಸ್ತಾನಕ್ಕೆ ಹರಿಯುತ್ತಿದೆ. ಈ ನೀರನ್ನು ನಿಲ್ಲಸಬೇಕು ಎನ್ನುವ ಇಚ್ಛೆ ನಮಗಿಲ್ಲ. ನದಿ ನೀರಿನ ವಿಚಾರದಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ಸ್ನೇಹಯುತ ಸಂಬಂಧ ಇದ್ದ ಕಾರಣ ಈ ನದಿ ಒಪ್ಪಂದ ನಡೆದಿದೆ. ಆದರೆ ಈಗ ಎರಡು ದೇಶಗಳ ನಡುವಿನ ಸಂಬಂಧ ಮುರಿದು ಬಿದ್ದಿದೆ. ಹೀಗಾಗಿ ಈ ಒಪ್ಪಂದವನ್ನು ಪಾಲನೆ ಮಾಡಬೇಕಾದ ಅಗತ್ಯ ನಮಗಿಲ್ಲ ಎಂದು ಗಡ್ಕರಿ ಖಡಕ್ ಮಾತುಗಳನ್ನು ಆಡಿದ್ದರು.

    ಮಾಜಿ ಪ್ರಧಾನಿ ಜವಾಹರಲಾಲ್ ಮತ್ತು ಪಾಕಿಸ್ತಾನದ ಅಧ್ಯಕ್ಷ ಅಯುಬ್ ಖಾನ್ ನಡುವೆ 1960 ರಲ್ಲಿ ಇಂಡಸ್ ನದಿ ಯೋಜನೆ ಒಪ್ಪಂದ ನಡೆದಿತ್ತು. ಈ ಒಪ್ಪಂದದ ಪ್ರಕಾರ ಮೂರು ನದಿಗಳು ಭಾರತಕ್ಕೆ ಹಂಚಿಕೆಯಾದರೆ ಮೂರು ನದಿಗಳು ಪಾಕಿಸ್ತಾನಕ್ಕೆ ಹಂಚಿಕೆಯಾಗಿದೆ.

    ಇಂಡಸ್ ನದಿ ನೀರಿನ ಒಪ್ಪಂದದ ಪ್ರಕಾರ ರಾವಿ, ಸಟ್ಲೇಜ್, ಬೀಯಾಸ್ ನದಿ ನೀರಿನ ಬಳಕೆ ಭಾರತಕ್ಕೆ ಮೀಸಲಾಗಿದ್ದರೆ, ಜೇಲಂ, ಚೀನಾಬ್ ಮತ್ತು ಇಂಡಸ್ ನದಿ ನೀರು ಪಾಕಿಸ್ತಾನಕ್ಕೆ ಹಂಚಿಕೆಯಾಗಿದೆ. ಈ ಒಪ್ಪಂದದ ಪ್ರಕಾರ ಭಾರತಕ್ಕೆ ಮೀಸಲಾಗಿರುವ ಮೂರು ನದಿಗಳ ನೀರನ್ನು ನೀರಾವರಿ ಮತ್ತು ವಿದ್ಯುತ್ ಉತ್ಪಾದನೆಗೆ ಬಳಸಬಹುದಾಗಿದೆ.

    ಈಗಾಗಲೇ ಯಮುನಾ ನದಿಯ ಪುನಶ್ಚೇತನಕ್ಕೆ ಹಲವು ಯೋಜನೆಗಳನ್ನು ಆರಂಭಿಸಲಾಗಿದೆ. ಭಾರತ ಮತ್ತು ಪಾಕಿಸ್ತಾನ ವಿಭಜನೆಯಾದಾಗ ಮೂರು ನದಿಗಳು ಭಾರತಕ್ಕೆ, ಮೂರು ನದಿಗಳನ್ನು ಪಾಕಿಸ್ತಾನಕ್ಕೆ ನೀಡಲಾಯಿತು. ಆದರೆ ಭಾರತ ಉದಾರ ಮನಸ್ಸಿನಿಂದ ನಿರಂತರವಾಗಿ ಪಾಕಿಸ್ತಾನಕ್ಕೆ ನೀರನ್ನು ನೀಡುತ್ತಲೇ ಇದೆ. ಆದರೆ ಈಗ ಪಾಕಿಸ್ತಾನಕ್ಕೆ ಹರಿಯುತ್ತಿರುವ ನೀರನ್ನು ಸಂಗ್ರಹಿಸಿ ನೀರಾವರಿ ಯೋಜನೆಯ ಮೂಲಕ ಜಮ್ಮು ಕಾಶ್ಮೀರ ಮತ್ತು ಪಂಜಾಬ್‍ಗೆ ನೀಡಲು ಮುಂದಾಗಿದ್ದೇವೆ ಎಂದು ಗಡ್ಕರಿ ತಿಳಿಸಿದ್ದರು.

    ಈಗಾಗಲೇ ಪಂಜಾಬಿನ ಪಠಾಣ್‍ಕೋಟ್ ಜಿಲ್ಲೆಯ ಶಾಪಕುರ್ಕಿಂಡಿಯಲ್ಲಿ ರವಿ ನದಿಗೆ ಅಡ್ಡಲಾಗಿ ಜಲಾಶಯ ನಿರ್ಮಾಣವಾಗುತ್ತಿದೆ. ಪಾಕಿಸ್ತಾನಕ್ಕೆ ಹರಿಯುವ ನೀರನ್ನು ಈ ಜಲಾಶಯದಲ್ಲಿ ಸಂಗ್ರಹಿಸಿಟ್ಟುಕೊಳ್ಳಬಹುದು. ರವಿ ನದಿ ವ್ಯಾಪ್ತಿಯ ರಾಜ್ಯಗಳಿಗೆ ಈ ನೀರನ್ನು ಹರಿಸಲಾಗುತ್ತದೆ. ಈ ಯೋಜನೆಗಳು ರಾಷ್ಟ್ರೀಯ ಯೋಜನೆಗಳಾಗಿ ಘೋಷಿಸಲ್ಪಟ್ಟಿವೆ ಎಂದು ಗಡ್ಕರಿ ಟ್ವೀಟ್ ಮಾಡಿ ತಿಳಿಸಿದ್ದರು.

    ಪುಲ್ವಾಮಾ ದಾಳಿಯ ಬಳಿಕ ಪಾಕಿಸ್ತಾನಕ್ಕೆ ನೀಡಿದ್ದ ಪರಮಾಪ್ತ ರಾಷ್ಟ್ರ ಸ್ಥಾನಮಾನವನ್ನು ಕಿತ್ತೆಸೆದು ಅಲ್ಲಿಂದ ದೇಶಕ್ಕೆ ರಫ್ತಾಗುತ್ತಿದ್ದ ಉತ್ಪನ್ನಗಳ ಮೇಲೆ ಶೇ.200 ರಷ್ಟು ಆಮದು ಸುಂಕವನ್ನು ಭಾರತ ವಿಧಿಸಿದೆ.

  • ಕೃಷ್ಣೆಯ ಅಬ್ಬರಕ್ಕೆ ಕೊಚ್ಚಿಹೋದ ಚಿಕ್ಕಪಡಸಗಿ ಸೇತುವೆ – ರಸ್ತೆಗೆ ಕುಸಿದ ಬೃಹತ್ ಗುಡ್ಡ

    ಕೃಷ್ಣೆಯ ಅಬ್ಬರಕ್ಕೆ ಕೊಚ್ಚಿಹೋದ ಚಿಕ್ಕಪಡಸಗಿ ಸೇತುವೆ – ರಸ್ತೆಗೆ ಕುಸಿದ ಬೃಹತ್ ಗುಡ್ಡ

    ಬೆಂಗಳೂರು: ಕೃಷ್ಣಾ ನದಿ ಪ್ರವಾಹದ ಎಫೆಕ್ಟ್ ಗೆ ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಚಿಕ್ಕಪಡಸಲಗಿ ಸಮೀಪದ ರಸ್ತೆ ಸೇತುವೆ ಕೊಚ್ಚಿ ಹೋಗಿದೆ.

    ಹುಬ್ಬಳ್ಳಿ-ವಿಜಯಪುರ ರಾಜ್ಯ ಹೆದ್ದಾರಿ-34ರಲ್ಲಿರುವ ಸೇತುವೆ ಸಂಪೂರ್ಣ ಹಾಳಾಗಿದೆ. ಪ್ರವಾಹದಲ್ಲಿ ಈ ಸೇತುವೆ ಮುಳುಗಿದ್ದ ಕಾರಣ ಕಳೆದ 15ದಿನದಿಂದ ವಾಹನ ಸಂಚಾರ ಬಂದ್ ಮಾಡಲಾಗಿತ್ತು. ಆದರೆ ನೀರಿನ ಹರಿವು ಕಡಿಮೆ ಆಗದ ಕಾರಣ ಸೇತುವೆ ಹಾಳಾಗಿದೆ. ಪರಿಣಾಮ ಜಮಖಂಡಿ ತಾಲೂಕಿನ 20ಕ್ಕೂ ಹೆಚ್ಚು ಗ್ರಾಮಗಳ ಜನ ಪರ್ಯಾಯ ಮಾರ್ಗದ ಮೂಲಕ ಸಂಚರಿಸುವಂತಾಗಿದೆ.

    ಕೃಷ್ಣಾ ಪ್ರವಾಹಕ್ಕೆ ಮುಳುಗಡೆಯಾಗಿದ್ದ ಸೇತುವೆ ಬಿರುಕುಬಿಟ್ಟಿದ್ದು, ಯಾವುದೇ ಕ್ಷಣದಲ್ಲಾದರೂ ಸೇತುವೆ ಕುಸಿಯುವ ಭೀತಿ ಹಿನ್ನೆಲೆಯಲ್ಲಿ ದರೂರು ಹಲ್ಯಾಳ ಸೇತುವೆ ಸಂಚಾರಕ್ಕೆ ನಿಷೇಧಿಸಲಾಗಿದೆ. ದರೂರು ಹಲ್ಯಾಳ ಗ್ರಾಮದ ಬಳಿ ಕೃಷ್ಣಾ ನದಿಗೆ ಅಡ್ಡಲಾಗಿ ನಿರ್ಮಿಸಿದ್ದ ಸೇತುವೆ ಇದಾಗಿದ್ದು, ಸುಮಾರು ಒಂದು ಕಿ.ಮೀನಷ್ಟು ಬಾಯಿಬಿಟ್ಟಿರುವ ಸೇತುವೆಯ ಬಳಿ ರಸ್ತೆಯಿದೆ. ಹೀಗಾಗಿ ಭಾರೀ ವಾಹನ ಸಂಚಾರಕ್ಕೆ ಅಥಣಿ ಪೊಲೀಸರು ಅನುವು ಮಾಡಿಕೊಟ್ಟಿಲ್ಲ. ಮಹಾರಾಷ್ಟ್ರ ಮತ್ತು ಕರ್ನಾಟಕದ ಸಂಪರ್ಕದ ಕೊಂಡಿಯಾಗಿದ್ದ ಸೇತುವೆ ಇದಾಗಿದೆ. ಯಾವುದೇ ಕ್ಷಣದಲ್ಲಿ ಸೇತುವೆ ಕುಸಿಯುವ ಭೀತಿ ಹಿನ್ನೆಲೆಯಲ್ಲಿ ಅಥಣಿ ಪೊಲೀಸರಿಂದ ಸೇತುವೆ ಬಳಿ ಬಿಗಿ ಭದ್ರತೆಗೊಳಿಸಲಾಗಿದೆ.

    ಮಳೆ ನಿಂತು ನಾಲ್ಕೈದು ದಿನ ಕಳೆದರೂ ಗುಡ್ಡ ಕುಸಿತ ನಿಲ್ಲುತ್ತಿಲ್ಲ. ಯಾಕೆಂದರೆ ಕಳಸ-ಹೊರನಾಡು ರಸ್ತೆ ಮೇಲೆ ಮೂಡಿಗೆರೆ ಸಮೀಪ ಮತ್ತೆ ಬೃಹತ್ ಗುಡ್ಡ ಕುಸಿದಿದೆ. ಸುಮಾರು ನಾಲ್ಕರಿಂದ ಐದು ಸಾವಿರ ಲಾರಿ ಲೋಡ್‍ನಷ್ಟು ಮಣ್ಣು ಅರ್ಧ ಕಿಲೋಮೀಟರ್ ರಸ್ತೆಯನ್ನು ಆವರಿಸಿದೆ. ಅದೃಷ್ಟವಶಾತ್ ಗುಡ್ಡ ಕುಸಿಯುವಾಗ ಯಾವ ವಾಹನಗಳು ಓಡಾಡಿಲ್ಲ. ರಸ್ತೆ ಮೇಲಿರುವ ಮಣ್ಣನ್ನ ತೆಗೆದರೂ ಮತ್ತೆ ಅದೇ ಜಾಗದಲ್ಲಿ ರಸ್ತೆ ನಿರ್ಮಾಣ ಅಸಾಧ್ಯವಾಗಿದೆ. ಯಾಕೆಂದರೆ ರಸ್ತೆ ಕೆಳಭಾಗದ ಮಣ್ಣು ಕೂಡ ಕೊಚ್ಚಿ ಹೋಗಿದೆ. ರಸ್ತೆ ಬದಿಯ 150-200 ಅಡಿ ಎತ್ತರದ ಗುಡ್ಡವನ್ನ ಕೊರೆದು ಹೊಸ ರಸ್ತೆ ನಿರ್ಮಾಣ ಮಾಡಬೇಕು. ಈ ಮಾರ್ಗದಲ್ಲಿ ಕನಿಷ್ಠ ಅಂದರೂ 10 ದಿನ ಯಾವುದೇ ವಾಹನ ಸಂಚಾರ ಅಸಾಧ್ಯವಾಗಿದೆ.

    ಇತ್ತ ಮಳೆಯ ಅಬ್ಬರಕ್ಕೆ ಉತ್ತರ ಕನ್ನಡ ಜಿಲ್ಲೆಯ ಜೊಯಿಡಾ ತಾಲೂಕಿನ ನಗರಿ ಎಂಬ ಗ್ರಾಮದ ಜನರ ಬದುಕು ದುಸ್ತರವಾಗಿದೆ. ರಸ್ತೆಗೆ ಬೃಹತ್ ಮರ ಉರುಳಿ 10 ದಿನ ಕಳೆದಿದೆ. ಅದನ್ನು ತೆರವು ಮಾಡಲು ಅರಣ್ಯ ಇಲಾಖೆ ಮನಸ್ಸೇ ಮಾಡುತ್ತಿಲ್ಲ. ಹೀಗಾಗಿ ವಾಹನ ಸಂಚಾರ ಬಂದ್ ಆಗಿದೆ. ಜೊಯಿಡಾ ಕೇಂದ್ರದಿಂದ 4 ಕಿಮೀ ದೂರದ ನಗರಿ ಗ್ರಾಮದ ಸಂಪರ್ಕ ಕಟ್ ಆಗಿದೆ. ಪ್ರತಿ ವರ್ಷ ಮಳೆ ಬಂದಾಗಲೂ ಇಲ್ಲಿನ ಜನರ ಗೋಳು ಹೇಳತೀರದ್ದು. ಅಧಿಕಾರಿಗಳು ಕೂಡ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಹೀಗಾಗಿ ಯಾರೇ ಅನಾರೋಗ್ಯಕ್ಕೊಳಗಾದರೂ ಇಲ್ಲಿನ ಜನರು ಜೋಲಿಯಲ್ಲಿ ಹೊತ್ತು ತರುವಂತಹ ಸ್ಥಿತಿ ನಿರ್ಮಾಣವಾಗಿದೆ.

  • ಬೈಂದೂರಿನಲ್ಲಿ 100 ವರ್ಷದ ಹಳೇಯ ಶಾಲೆಯ ಕಟ್ಟಡ ಕುಸಿತ

    ಬೈಂದೂರಿನಲ್ಲಿ 100 ವರ್ಷದ ಹಳೇಯ ಶಾಲೆಯ ಕಟ್ಟಡ ಕುಸಿತ

    ಉಡುಪಿ: ಭಾರೀ ಮಳೆಯಿಂದಾಗಿ ಗುಡ್ಡ ಕುಸಿಯುತ್ತಿರುವುದು ಒಂದೆಡೆಯಾದರೆ, ಇನ್ನೊಂದೆಡೆ ಮನೆ, ಶಾಲೆ ಸೇರಿದಂತೆ ಕಟ್ಟಡಗಳು ನೆಲಸಮವಾಗುತ್ತಿದ್ದು, ಸಾರ್ವಜನಿರಿಕರು ಭಯದ ವಾತಾವರಣದಲ್ಲೇ ಬದುಕುವಂತಾಗಿದೆ.

    ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಕೆರ್ಗಾಲು ನಂದನವನ ಶಾಲೆ ಕುಸಿದುಬಿದ್ದಿದೆ. ಕಳೆದ ಕೆಲವು ದಿನಗಳಿಂದ ವ್ಯಾಪಕ ಮಳೆಯಾದ ಪರಿಣಾಮ ಈ ಶಾಲೆ ಕಟ್ಟಡ ನೆಲಕ್ಕೆ ಉರುಳಿದೆ. ಶನಿವಾರ ತಡರಾತ್ರಿ ಈ ಅವಘಡ ಸಂಭವಿಸಿದ್ದು, ಸಾರ್ವಜನಿಕರಲ್ಲಿ ಆತಂಕ ಮನೆ ಮಾಡಿದೆ.

    ಶನಿವಾರ ಮಧ್ಯಾಹ್ನದ ವೇಳೆಗೆ ಶಾಲೆಯ ಗೋಡೆಗಳು ಉದುರಲು ಪ್ರಾರಂಭವಾಗಿತ್ತು. ರಾತ್ರಿ 10 ಗಂಟೆ ಸುಮಾರಿಗೆ ಭಾರಿ ಶಬ್ದದೊಂದಿಗೆ ಕಟ್ಟಡ ಬಹುತೇಕ ನೆಲಕಚ್ಚಿದೆ. ರಾತ್ರಿ ಈ ದುರ್ಘಟನೆ ಸಂಭವಿಸಿದ ಕಾರಣ ಯಾವುದೇ ಅನಾಹುತ ಸಂಭವಿಸಿಲ್ಲ.

    ಕಟ್ಟಡ ಪೂರ್ತಿ ನೆಲಸಮವಾಗಿದ್ದು ಶಾಲೆಯ ಮಧ್ಯವಿರುವ ಕೊಠಡಿ ಸಂಪೂರ್ಣ ನೆಲಸಮಗೊಂಡಿದೆ. ಈ ಶಾಲೆಯಲ್ಲಿ ಎಲ್‍ಕೆಜಿ, ಯುಕೆಜಿ ಸಹಿತ 25 ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. ಶಾಲೆಯ ಪಕ್ಕದ ಹೊಳೆಯಲ್ಲಿ ನೀರಿನ ಮಟ್ಟ ಏರಿಕೆಯಾದ ಹಿನ್ನಲೆಯಲ್ಲಿ ಕಟ್ಟಡ ತೇವವಾಗಿದೆ. ಹೀಗಾಗಿ ಕುಸಿದು ಬಿದ್ದಿದೆ. 100 ವರ್ಷ ಇತಿಹಾಸ ಇರುವ ಶಾಲೆ ಇದಾಗಿದ್ದು, ಕಟ್ಟಡ ಸುಮಾರು 45 ವರ್ಷ ಹಳೆಯದಾಗಿದೆ. ಸ್ಥಳಕ್ಕೆ ಶಾಸಕರು, ವಿವಿಧ ಅಧಿಕಾರಿಗಳು, ಪಂಚಾಯತ್ ಪ್ರತಿನಿಧಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

  • ಸಿಎಂ ಯಡಿಯೂರಪ್ಪ ಸುದ್ದಿಗೋಷ್ಠಿ – ಪ್ರವಾಹದ ಸಂಪೂರ್ಣ ಮಾಹಿತಿ

    ಸಿಎಂ ಯಡಿಯೂರಪ್ಪ ಸುದ್ದಿಗೋಷ್ಠಿ – ಪ್ರವಾಹದ ಸಂಪೂರ್ಣ ಮಾಹಿತಿ

    ಬೆಂಗಳೂರು: ರಾಜ್ಯದಲ್ಲಿ ಪ್ರವಾಹ ಪರಿಸ್ಥಿತಿ ಹಿನ್ನೆಲೆಯಲ್ಲಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗೋಷ್ಠಿ ನಡೆಸಿದರು.

    ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ ಬಿಎಸ್‍ವೈ, ಕಳೆದ ಒಂದು ವಾರದಿಂದ ಮಹಾರಾಷ್ಟ್ರ ಮತ್ತು ನಮ್ಮ ರಾಜ್ಯದಲ್ಲಿ ಭಾರೀ ಮಳೆಯಾಗುತ್ತಿದೆ. ಉತ್ತರ ಕರ್ನಾಟಕ, ಕರಾವಳಿ ಹಾಗೂ ಮಲೆನಾಡು ಜಿಲ್ಲೆಗಳಲ್ಲಿ ಪ್ರವಾಹ ಮತ್ತು ಭೂ ಕುಸಿತದಿಂದಾಗಿ ಜನತೆ ತೀವ್ರ ಸಂಕಷ್ಟದಲ್ಲಿದ್ದಾರೆ. ಆಸ್ತಿ- ಪಾಸ್ತಿ ಸೇರಿದಂತೆ ಸಾಕಷ್ಟು ನಷ್ಟವಾಗಿದೆ. ರಾಜ್ಯದ ಸುಮಾರು ಅರ್ಧ ಭಾಗ ವರುಣನ ರುದ್ರನರ್ತನಕ್ಕೆ ಬಲಿಯಾಗಿದೆ. ಕಳೆದ 45 ವರ್ಷದಲ್ಲಿ ಇಷ್ಟು ದೊಡ್ಡ ಭೀಕರ ಪ್ರವಾಹವನ್ನು ರಾಜ್ಯ ಕಂಡಿರಲಿಲ್ಲ ಎಂದು ಹೇಳಿದರು.

    ಪ್ರವಾಹದ ಮಾಹಿತಿ:
    ಈವರೆಗೆ 16 ಜಿಲ್ಲೆಗಳ 80 ತಾಲೂಕುಗಳಲ್ಲಿ ಪ್ರವಾಹ ಪರಿಸ್ಥಿತಿ ಇದೆ. ಇದರಿಂದ 24 ಜನ ಮೃತಪಟ್ಡಿದ್ದಾರೆ. ಈಗಾಗಲೇ ಮೃತ ಕುಟುಂಬದವರಿಗೆ 5 ಲಕ್ಷ ರೂ. ಪರಿಹಾರ ಕೊಡಲಾಗಿದೆ. ಅಧಿಕಾರಿಗಳ ಜೊತೆ ಚರ್ಚೆ ಮಾಡಿ 80 ತಾಲೂಕುಗಳನ್ನು ಪ್ರವಾಹ ಪೀಡಿತ ಎಂದು ಘೋಷಿಸಿದ್ದೇವೆ. ಒಟ್ಟು 1,024 ಗ್ರಾಮಗಳು ಮಳೆ ಮತ್ತು ಪ್ರವಾಹದ ಭೀಕರತೆಯನ್ನು ಎದುರಿಸುತ್ತಿವೆ. 2.35 ಲಕ್ಷ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಲಾಗಿದೆ. 220 ಜಾನುವಾರುಗಳ ಸಾನ್ನಪ್ಪಿದ್ದು, 44 ಸಾವಿರ ಜಾನುವಾರಗಳನ್ನು ಸ್ಥಳಾಂತರ ಮಾಡಲಾಗಿದೆ. ರಾಜ್ಯದಲ್ಲಿ ಒಟ್ಟು 624 ಪರಿಹಾರ ಕೇಂದ್ರಗಳ ತೆರೆಯಲಾಗಿದೆ ಎಂದರು. ಪರಿಹಾರ ಕೇಂದ್ರದಲ್ಲಿ 1.57 ಲಕ್ಷಕ್ಕೂ ಹೆಚ್ಚ ಜನ ಆಶ್ರಯ ಮಾಡುತ್ತಿದ್ದಾರೆ. ಅವರಿಗೆ ಬೇಕಾದ ಎಲ್ಲ ಸೌಲಭ್ಯವನ್ನು ಒದಗಿಸಲಾಗಿದೆ. 3.22 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದ್ದು, 12,651 ಮನೆಗಳು ಸಂಪೂರ್ಣ ಹಾನಿಯಾಗಿದೆ ಎಂದು ಸಿಎಂ ಬಿಎಸ್‍ವೈ ಅವರು ತಿಳಿಸಿದರು.

    ಮಂಗಳೂರಿಗೆ ರೈಲು ಮತ್ತು ರಸ್ತೆ ಸಂಪರ್ಕ ಕಡಿದುಹೋಗಿದೆ. ಇತ್ತ ಕೊಡಗಿನಲ್ಲಿ ಭೂಕುಸಿತ ಉಂಟಾಗಿದೆ. ಪ್ರವಾಹ ಪೀಡಿತ ಪ್ರದೇಶಗಳಿಗೆ ಮೂರು ತಂಡಗಳಾಗಿ ಶಾಸಕರು ತೆರಳಿದ್ದಾರೆ. ಬೆಳಗಾವಿ, ಧಾರವಾಡ, ಗದಗ, ಚಿಕ್ಕೋಡಿ, ಬಾಗಲಕೋಟೆ, ಕೂಡಲಸಂಗಮ, ಬಾದಾಮಿ ಸೇರಿದಂತೆ ಅನೇಕ ಕಡೆ ಭೇಟಿ ನೀಡಿದ್ದೇನೆ. ಈಗಾಗಲೇ ನದಿ ತೀರದ ಜನರಿಗೆ ಎಚ್ಚರಿಕೆ ಕೊಡಲಾಗಿದೆ. ಹೇಮಾವತಿ ಮತ್ತು ತುಂಗಭದ್ರಾ ನದಿಗಳಲ್ಲೂ ಹೆಚ್ಚುವರಿ ನೀರು ಹರಿಸಲು ನಿರ್ಧಾರ ಆಗಿದೆ. ಜಲಾಶಯಗಳಿಗೆ ಹೆಚ್ವುವರಿ ಒಳಹರಿವು ಬರುತ್ತಿದೆ. ಆದ್ದರಿಂದ ಹೊರ ಹರಿವು ಹೆಚ್ಚಿಸಲಾಗಿದೆ ಎಂದರು.

    ಕೇಂದ್ರ ಸರ್ಕಾರ ಸಕಾಲಕ್ಕೆ ಸ್ಪಂದಿಸಿದೆ. ವಾಯು, ಭೂ, ನೌಕಾ ಪಡೆಗಳ ಸಿಬ್ಬಂದಿ ತುರ್ತು ಕಾರ್ಯಾಚರಣೆಗೆ ಇಳಿದಿವೆ. ವಾಯುಪಡೆಯ ನಾಲ್ಕು ಹೆಲಿಕಾಪ್ಟರ್‌ಗಳು, ಅಗ್ನಿಶಾಮಕ ದಳ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ. ಪಕ್ಷಾತೀತವಾಗಿ ಶಾಸಕರು, ಸಂಸದರ ತಂಡಗಳು ವಾಸ್ತವ ಸ್ಥಿತಿ ಅರಿತುಕೊಂಡು ಕಾರ್ಯಾಚರಣೆ ಮಾಡುತ್ತಿದ್ದಾರೆ. ಯಾರೂ ಧೈರ್ಯಗುಂದುವ ಅಗತ್ಯ ಇಲ್ಲ. ರಾಜ್ಯ, ಕೇಂದ್ರ ಸರ್ಕಾರಗಳ ನೆರವು ಕೊಡಲು ಸಿದ್ಧ ಇವೆ. ಎಷ್ಟೇ ಖರ್ಚಾದರೂ ಸಂತ್ರಸ್ತರಿಗೆ ಸುರಕ್ಷತೆ ಮತ್ತು ಪುನರ್ವಸತಿ ಕಲ್ಪಿಸಿ ಕೊಡುತ್ತೇವೆ ಎಂದರು.

    ಪರಿಹಾರ ನಿಧಿ:
    ಸರ್ಕಾರಿ ನೌಕರರು ತಮ್ಮ ಒಂದು ದಿನದ ವೇತನ 150 ಕೋಟಿ ರೂ. ಕೊಡುವುದಾಗಿ ಫೋಷಿಸಿದ್ದಾರೆ. ಬೇರೆ ಬೇರೆ ನಿಗಮ ಮಂಡಳಿಯಿಂದ 50 ಕೋಟಿ ಕೊಡುತ್ತೇವೆ ಎಂದಿದ್ದಾರೆ. ಸುಧಾಮೂರ್ತಿ ಅವರು 10 ಕೋಟಿ ರೂ. ಕೊಟ್ಟಿದ್ದಾರೆ. ಪೊಲೀಸ್ ಮತ್ತು ಸಾರಿಗೆ ಇಲಾಖೆ ಒಂದು ದಿನ ಸಂಬಳವನ್ನು ಕೊಡಲು ಒಪ್ಪಿದ್ದಾರೆ. ಹಾಲು ಉತ್ಪಾದಕ ಘಟಕದಿಂದ 1 ಕೋಟಿ ರೂ. ಕೊಟ್ಟಿದ್ದಾರೆ. ಶಾಸಕರ ಕ್ಷೇಮಾಭಿವೃದ್ದಿ ನಿಧಿಯಿಂದ 2 ಕೋಟಿ ರೂ. ಕೊಡಲಾಗಿದೆ. ಹೀಗೆ ಅನೇಕರು ಅವರ ಕೈಲಾದಷ್ಟು ಸಹಾಯ ಮಾಡುತ್ತಿದ್ದಾರೆ ಎಂದು ಸಿಎಂ ಬಿಎಸ್‍ವೈ ಅವರು ತಿಳಿಸಿದರು.

  • ಚಿಕ್ಕಮಗಳೂರು ನದಿಯಲ್ಲಿ ತೇಲಿ ಬರುತ್ತಿವೆ ಶವಗಳು

    ಚಿಕ್ಕಮಗಳೂರು ನದಿಯಲ್ಲಿ ತೇಲಿ ಬರುತ್ತಿವೆ ಶವಗಳು

    ಚಿಕ್ಕಮಗಳೂರು: ಮಲೆನಾಡಿನಲ್ಲಿ ಮಳೆಯ ಅಬ್ಬರಕ್ಕೆ ಜನರ ಬದುಕು ನೀರಿನಲ್ಲಿ ಕೊಚ್ಚಿ ಹೋಗಿದ್ದು, ಈಗ ನದಿಯಲ್ಲಿ ಶವಗಳು ತೇಲಿ ಬರುತ್ತಿವೆ.

    ಮಳೆಯಿಂದಾಗಿ ಮಲೆನಾಡಲ್ಲಿ ಊರೂರೇ ಕೊಚ್ಚಿ ಹೋಗುತ್ತಿದ್ದು, ನೂರಾರು ಜನ ಸಂಕಷ್ಟದಲ್ಲಿ ಸಿಲುಕಿಕೊಂಡಿದ್ದಾರೆ. ಅಲ್ಲದೆ ಗ್ರಾಮಗಳು ನೀರಲ್ಲಿ ಮುಳುಗಿ ಜನ ಕಂಗಾಲಾಗಿದ್ದಾರೆ. ಈಗಾಗಲೇ ಜಿಲ್ಲಾಡಳಿತ ಒಂದು ಪರಿಹಾರ ಕೇಂದ್ರವನ್ನು ತೆರೆದಿದ್ದು, ಈಗ ಅಧಿಕಾರಿಗಳನ್ನು ಅಲರ್ಟ್ ಮಾಡಬೇಕಿದೆ. ಮಳೆಯಿಂದಾಗಿ ಹೇಮಾವತಿ, ತುಂಗಾ-ಭದ್ರಾ ನದಿ ಪಾತ್ರದ ಹಲವು ಗ್ರಾಮಗಳು ಮುಳುಗಡೆ ಆಗಿದೆ.

    ಚಿಕ್ಕಮಗಳೂರಿನ ಮೂಡಿಗೆರೆಯಲ್ಲಿ ವರುಣನ ಆರ್ಭಟ ಮುಂದುವರಿದಿದ್ದು, ಅನೇಕ ಗ್ರಾಮಗಳು ಹೊರ ಜಗತ್ತಿನ ಸಂಪರ್ಕ ಕಳೆದುಕೊಂಡಿದೆ. ಮುಗ್ರಹಳ್ಳಿ, ಕೋಳೂರು, ಬಕ್ಕಿ, ಬೆಟ್ಟಗೆರೆ, ಹಾಲೂರು, ಕಿತ್ತಲೆಗಂಡಿ ಸೇರಿದಂತೆ ಹತ್ತಾರು ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ. ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಸೇತುವೆ ಸೇರಿದಂತೆ ರಸ್ತೆಗಳು ಸಂಪೂರ್ಣ ಮುಳುಗಡೆ ಆಗಿದ್ದು, ಸಾವಿರಾರು ಮಂದಿ ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಕುಳಿತಿದ್ದಾರೆ. ಸದ್ಯ ಜನರು ಜಿಲ್ಲಾಡಳಿತದ ನೆರವನ್ನು ಎದುರು ನೋಡುತ್ತಿದ್ದಾರೆ.

    ಇತ್ತ ಮಹಾಮಳೆಯಿಂದಾಗಿ ಪ್ರವಾಹದ ಮಟ್ಟ ಮೀರಿ ಭದ್ರಾ ನದಿ ಹರಿಯಿತ್ತಿದೆ. ಭದ್ರಾ ನದಿ ಆರ್ಭಟಕ್ಕೆ ಖಾಂಡ್ಯ- ಬಾಳೆಗದ್ದೆ ತೂಗು ಸೇತುವೆ ನೀರಿನಲ್ಲಿ ಕೊಚ್ಚಿ ಹೋಗಿದೆ. ತೂಗು ಸೇತುವೆ ಕೊಚ್ಚಿ ಹೋದ ಪರಿಣಾಮ ಬಾಳೆಗದ್ದೆ ಗ್ರಾಮಸ್ಥರು ಆತಂಕಗೊಂಡಿದ್ದಾರೆ. ಭದ್ರಾ ನದಿ ದಾಟಲು ಈ ಗ್ರಾಮಕ್ಕೆ ಈ ತೂಗು ಸೇತುವೆಯೇ ಆಸರೆಯಾಗಿತ್ತು. ಆದರೆ ಈಗ ಸೇತುವೆ ಕೊಚ್ಚಿ ಹೋದ ಕಾರಣ 50ಕ್ಕೂ ಹೆಚ್ಚು ಕುಟುಂಬಗಳ ಸಂಪರ್ಕ ಬಂದ್ ಆಗಿದೆ.

  • ಮಳೆ ನಿಲ್ತಿಲ್ಲ, ಪ್ರಳಯ ಕಮ್ಮಿ ಆಗ್ತಿಲ್ಲ – ಜಿಲ್ಲೆಗಳಲ್ಲಿ ರೆಡ್ ಅಲರ್ಟ್

    ಮಳೆ ನಿಲ್ತಿಲ್ಲ, ಪ್ರಳಯ ಕಮ್ಮಿ ಆಗ್ತಿಲ್ಲ – ಜಿಲ್ಲೆಗಳಲ್ಲಿ ರೆಡ್ ಅಲರ್ಟ್

    ಬೆಂಗಳೂರು: ಅನೇಕ ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಜನರು ಜೀವನ ಅಸ್ತವ್ಯಸ್ತವಾಗಿದೆ. ಇನ್ನೊಂದೆಡೆ ಪ್ರಳಯ ಮಳೆ, ಡ್ಯಾಂಗಳಿಂದ ಮುನ್ನುಗ್ಗಿ ಬರುತ್ತಿರುವ ಜಲರಾಶಿಯ ನಡುವೆ ತೇವಾಂಶದಿಂದ ಮಣ್ಣು ಸಡಿಲುಗೊಂಡು ಬಹುತೇಕ ಕಡೆಗಳಲ್ಲಿ ಭೂಕುಸಿತವಾಗುತ್ತಿದೆ. ಅತಿಯಾದ ಮಳೆಯಿಂದಾಗಿ ಉತ್ತರ ಕರ್ನಾಟಕದ ಅನೇಕ ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಫೋಷಣೆ ಮಾಡಲಾಗಿದೆ.

    ಮನೆ, ಕಟ್ಟಡಗಳು ನೋಡನೋಡುತ್ತಿದ್ದಂತೆ ನೆಲಕ್ಕುರುಳುತ್ತಿವೆ. ರಸ್ತೆಗಳು ಬಿರುಕು ಬಿಡುತ್ತಿದ್ದು, ಗುಡ್ಡಗಳು ಹೊರಳಿ ಬೀಳುತ್ತಿವೆ. ಕಣ್ಣ ಮುಂದೆಯೇ ಎಲ್ಲವನ್ನೂ ಕಳೆದುಕೊಂಡು ಸಂತ್ರಸ್ತರಾಗಿರುವವರ ಕಣ್ಣೀರು, ಗೋಳಾಟ ಕೇಳಿದರೆ ಹೊಟ್ಟೆ ಉರಿಯುತ್ತದೆ. ಪ್ರವಾಹದ ಎದುರು ಈಜಲಾಗದು, ಬದುಕು ಮೂರಾಬಟ್ಟೆ ಆಗಿದೆ. ಇನ್ನಾದರೂ ಮಳೆ ಶಾಂತವಾಗಿ ಪ್ರವಾಹ ಇಳಿಯಲಿ ಎಂದು ಸಂತ್ರಸ್ತರು ಪ್ರಕೃತಿಗೆ ಕೈಮುಗಿದು ಬೇಡಿಕೊಳ್ಳುತ್ತಿದ್ದಾರೆ.

    ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನೇತ್ರಾವತಿ ರೌದ್ರ ರೂಪ ತಾಳಿದ್ದು, ಬೆಳ್ತಂಗಡಿ ತಾಲೂಕಿನ ಕಿಲ್ಲೂರು ಪೇಟೆ ಪ್ರವಾಹಕ್ಕೆ ಕಂಗೆಟ್ಟಿದೆ. ಪುಟ್ಟ ಊರಿಗೆ ನುಗ್ಗಿದ ನೇತ್ರಾವತಿ ಅನಾಹುತಗಳನ್ನೇ ಸೃಷ್ಟಿಸಿದ್ದಾಳೆ. ಬೆಳಗಾವಿ ಜಿಲ್ಲೆಯ ನವಿಲುತೀರ್ಥದಲ್ಲಿರುವ ರೇಣುಕಾ ಜಲಾಶಯದಿಂದ ನೀರು ಬಿಟ್ಟಿರುವ ರಭಸಕ್ಕೆ ಮುನವಳ್ಳಿಯ ತೋರಗಣಲ್‍ಕೋಟೆ ಬಳಿರುವ ತೂಗುಸೇತುವೆ ಧ್ವಂಸಗೊಂಡಿದೆ. ಪ್ರವಾಹ ಅಪ್ಪಳಿಸಿದ ರಭಸಕ್ಕೆ ತೂಗು ಸೇತುವೆ ಮೇಲಕ್ಕೆ ಹಾರಿತ್ತು.

    ಕೊಡಗಿನಲ್ಲಿ ವರುಣನ ಅಬ್ಬರ ಮುಂದುವರಿದಿದ್ದು, ಭಾಗಮಂಡಲ ಸಂಪೂರ್ಣ ಜಲಾವೃತವಾಗಿದೆ. ಭಗಂಡೇಶ್ವರ ದೇವಸ್ಥಾನದ ಗೋಪುರದವರೆಗೂ ನೀರು ಬಂದಿದ್ದು, ಸತತವಾಗಿ ಸುರಿಯುತ್ತಿರುವ ಮಳೆಯಿಂದ ಕೊಡಗಿನಲ್ಲಿ ಸಾಲು ಸಾಲು ಅವಘಡಗಳು ಸಂಭವಿಸುತ್ತಿವೆ. ಶುಕ್ರವಾರ ರಾತ್ರಿ ಇಡೀ ಮಡಿಕೇರಿಯಲ್ಲಿ ಗಾಳಿ ಸಹಿತ ಮಳೆಯಾಗಿದ್ದು, ಮಡಿಕೇರಿ ಪಟ್ಟಣ ಸೇರಿದಂತೆ ವಿರಾಜಪೇಟೆ, ಸೋಮವಾರಪೇಟೆ ತಾಲೂಕುಗಳಲ್ಲಿ ಭಾರೀ ಮಳೆಯಾಗಿದೆ. ವಿರಾಜಪೇಟೆ ತಾಲೂಕಿನ ನಾಪೋಕ್ಲು ಗ್ರಾಮದಲ್ಲಿ ನೋಡನೋಡುತ್ತಿದ್ದಂತೆ ಮನೆ ಕುಸಿದಿದೆ.

  • ಹಾವೇರಿಯಲ್ಲಿ ವರುಣನ ಆರ್ಭಟ – ಹಲವು ಕಡೆ ರಸ್ತೆ ಸಂಚಾರ ಸ್ಥಗಿತ

    ಹಾವೇರಿಯಲ್ಲಿ ವರುಣನ ಆರ್ಭಟ – ಹಲವು ಕಡೆ ರಸ್ತೆ ಸಂಚಾರ ಸ್ಥಗಿತ

    ಹಾವೇರಿ: ಜಿಲ್ಲೆಯಲ್ಲಿ ವರುಣನ ಆರ್ಭಟ ಮುಂದುವರಿದಿದ್ದು, ಜಿಲ್ಲೆಯಲ್ಲಿನ ವರದಾ, ಧರ್ಮಾ ಮತ್ತು ಕುಮುದ್ವತಿ ನದಿಗಳು ತುಂಬಿ ಹರಿಯುತ್ತಿವೆ.

    ನದಿಗಳು ತುಂಬಿ ಹರಿಯುತ್ತಿದ್ದರಿಂದ ಕರ್ಜಗಿ-ಕಲಕೋಟಿ, ದೇವಗಿರಿ-ಕಳಸೂರು, ನಾಗನೂರು-ಕೂಡಲ, ಮಾಸೂರು-ಶಿಕಾರಿಪುರ, ಹಾನಗಲ್-ಬಂಕಾಪುರ ಸೇರಿದಂತೆ ಹಲವು ರಸ್ತೆಗಳ ಸಂಪರ್ಕ ಕಡಿತಗೊಂಡಿವೆ.

    ಶಿಗ್ಗಾಂವಿ ತಾಲೂಕಿನ ನಾಗನೂರು ಕೆರೆ ತುಂಬಿ ಕೋಡಿ ಬಿದ್ದಿದ್ದರಿಂದ ಕೆರೆ ನೀರು ಪೂನಾ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ನಾಲ್ಕರ ಮೇಲೆ ಹರಿಯುತ್ತಿದೆ. ಇದರಿಂದ ರಸ್ತೆ ಸಂಚಾರಕ್ಕೆ ತೊಂದರೆ ಉಂಟಾಗಿದೆ. ಅಲ್ಲದೇ ಜಿಲ್ಲೆಯ ಹಲವೆಡೆ ಕೆರೆ ಮತ್ತು ನದಿಗಳ ನೀರು ರೈತರ ಜಮೀನುಗಳಿಗೆ ನುಗ್ಗಿದ್ದು, ಸಾವಿರಾರು ಎಕರೆ ಜಲಾವೃತಗೊಂಡಿದೆ. ರೈತರ ಜಮೀನಿನಲ್ಲಿ ಬೆಳೆದಿದ್ದ ಮೆಕ್ಕೆಜೋಳ, ಮೆಣಸಿನಕಾಯಿ, ಶೇಂಗಾ, ಹತ್ತಿ ಸೇರಿದಂತೆ ವಿವಿಧ ಬೆಳೆಗಳು ನಾಶವಾಗಿವೆ.

  • ರಸ್ತೆಯ ಸಂಪರ್ಕವಿಲ್ಲ, 4 ಗ್ರಾಮಕ್ಕೆ ಒಂದೇ ತೂಗುಸೇತುವೆ

    ರಸ್ತೆಯ ಸಂಪರ್ಕವಿಲ್ಲ, 4 ಗ್ರಾಮಕ್ಕೆ ಒಂದೇ ತೂಗುಸೇತುವೆ

    – ಜೀವ ಕೈಯಲ್ಲಿಟ್ಟುಕೊಂಡು ಬದುಕುತ್ತಿದ್ದಾರೆ ಜನ

    ಬೆಳಗಾವಿ: ನಾಲ್ಕು ಗ್ರಾಮಗಳಿಗೆ ಒಂದೇ ತೂಗುಸೇತುವೆ ಆಧಾರವಾಗಿದ್ದು, ಮಳೆಗಾಲ ಬಂದರೆ ಸಾಕು ಈ ಊರಿನ ಜನರು ಮೂರು ತಿಂಗಳು ಬೇಕಾಗುವಷ್ಟು ಸಾಮಾಗ್ರಿಗಳನ್ನು ಮೊದಲೇ ಸ್ಟಾಕ್ ಮಾಡಿಕೊಳ್ಳಬೇಕು. ಈಗ ಮತ್ತೆ ಮಳೆ ಅಬ್ಬರ ಕೂಡ ಜೋರಾಗಿದ್ದು ಗ್ರಾಮಸ್ಥರ ಜೀವನ ಅತಂತ್ರ ಬದುಕಾಗಿಬಿಟ್ಟಿದೆ.

    ಬೆಳಗಾವಿಯ ಖಾನಾಪುರ ತಾಲೂಕು ಬಹುತೇಕ ದಟ್ಟ ಅರಣ್ಯಕ್ಕೆ ಹೊಂದಿಕೊಂಡಿರುವುದರಿಂದ ಅನೇಕ ಹಳ್ಳಿಗಳು ಈ ಅರಣ್ಯ ಪ್ರದೇಶದಲ್ಲಿವೆ. ಮುಖ್ಯವಾಗಿ ಸಾತಳಿ, ಮಾಚಳಿ ಗ್ರಾಮದ, ಕಿರವಾಡ, ಹಣಬರವಾಡ ಸೇರಿದಂತೆ ಇಪ್ಪತ್ತಕ್ಕೂ ಅಧಿಕ ಗ್ರಾಮಗಳು ಈ ಅರಣ್ಯ ಪ್ರದೇಶದಲ್ಲಿದ್ದು, ಮಳೆಗಾಲ ಆರಂಭವಾದರೆ ಸಾಕು ಈ ಗ್ರಾಮಗಳ ಜನರು ಜೀವಭಯದಲ್ಲಿ ಬದುಕುತ್ತಿದ್ದಾರೆ. ಸಾತಳಿ, ಮಾಚಳಿ, ಕಿರವಾಡ, ಹಣಬರವಾಡ ಗ್ರಾಮಕ್ಕೆ ಒಂದೇ ತೂಗು ಸೇತುವೆ ಆಧಾರವಾಗಿದೆ. ಇಲ್ಲಿನ ಜನರು ರಸ್ತೆಯನ್ನೇ ಕಂಡಿಲ್ಲ. ಕಟ್ಟಿಗೆಗಳಿಂದ ನಿರ್ಮಾಣ ಮಾಡಿರುವ ಈ ಸೇತುವೆ ಯಾವಾಗ ಬೇಕಾದರೂ ಕಳಚಿ ಬೀಳುವ ಸಾಧ್ಯತೆಯಿದ್ದರೂ ಕೂಡ ಈ ನಾಲ್ಕು ಗ್ರಾಮದ ಜನರು ಮಾತ್ರ ಈ ಸೇತುವೆ ಮೇಲೆಯೇ ಜೀವನ ಸಾಗಿಸುತ್ತಿದ್ದಾರೆ.

    ಹಲವು ದಶಕಗಳಿಂದ ಇವರ ಸಮಸ್ಯೆಗೆ ಯಾವುದೇ ಸರ್ಕಾರ ಸ್ಪಂದಿಸುತ್ತಿಲ್ಲ. ಈ ಕಾರಣಕ್ಕೆ ಅನಿವಾರ್ಯವಾಗಿ ಇಲ್ಲಿನ ಜನರು ತಮ್ಮ ಬದುಕನ್ನ ತಾವೇ ಕಟ್ಟಿಕೊಳ್ಳುತ್ತಿದ್ದಾರೆ. ದಟ್ಟ ಅರಣ್ಯ ಒಂದು ಕಡೆಯಾದರೆ ಇನ್ನೊಂದು ಕಡೆ ಕಾಡು ದಾಟಿ ನಾಡಿಗೆ ಬರಬೇಕಾದರೆ ಪಾಂಡರಿ ನದಿಯನ್ನು ಜನರು ದಾಟಬೇಕು. ಆದರೆ ಈ ನದಿಗೆ ಅಡ್ಡಲಾಗಿ ಯಾವುದೇ ಸೇತುವೆಯಾಗಲಿ, ದೋಣಿ ಸಂಪರ್ಕವಾಗಲಿ ಇಲ್ಲ. ಹೀಗಾಗಿ ಗ್ರಾಮಸ್ಥರೇ ಕಟ್ಟಿಗೆಗಳಿಂದ ಏಣಿ ರೀತಿಯಲ್ಲಿ ತೂಗುಸೇತುವೆ ಮಾಡಿಕೊಂಡು ಓಡಾಡುತ್ತಿದ್ದಾರೆ. ಇದು ಯಾವಾಗ ಕಳಚಿ ಬೀಳುತ್ತೆ ಎಂಬ ಜೀವಭಯದಲ್ಲೇ ನಿತ್ಯವೂ ನಾಲ್ಕು ಗ್ರಾಮದ ಜನರು ಇಲ್ಲಿ ಓಡಾಡುತ್ತಿದ್ದಾರೆ.

    ಕೆಲವೊಮ್ಮೆ ನಿರಂತರವಾಗಿ ಮಳೆ ಸುರಿಯಲು ಆರಂಭವಾದರೆ ಗ್ರಾಮಸ್ಥರು ಕಟ್ಟಿಕೊಂಡಿರುವ ತೂಗುಸೇತುವೆ ಕೂಡ ಮುಳುಗಡೆಯಾಗುತ್ತೆ. ಪರಿಣಾಮ ಈ ಗ್ರಾಮಗಳು ನಾಡಿನ ಸಂಪರ್ಕವನ್ನೇ ಕಳೆದುಕೊಳ್ಳುತ್ತವೆ. ಈ ಕಾರಣಕ್ಕೆ ಗ್ರಾಮಸ್ಥರು ಮಳೆಗಾಲ ಆರಂಭಕ್ಕೂ ಮೂರು ತಿಂಗಳು ಮುನ್ನವೇ ಮಳೆಗಾಲ ಮುಗಿಯುವವರೆಗೂ ಜೀವನಕ್ಕೆ ಬೇಕಾಗುವ ಎಲ್ಲಾ ಸಾಮಾಗ್ರಿಗಳನ್ನ ಖರೀದಿ ಮಾಡಿ ಶೇಖರಿಸಿಟ್ಟುಕೊಂಡಿರುತ್ತಾರೆ. ಆದರೆ ಆರೋಗ್ಯ ಸಮಸ್ಯೆ ಏನಾದರು ಹೇಗೆ ನಿಭಾಯಿಸಬೇಕು ಎಂಬುದೇ ಈ ಗ್ರಾಮಸ್ಥರಿಗೆ ತೋಚುತ್ತಿಲ್ಲ. ಅನೇಕ ಬಾರಿ ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಗದೆ ಇಲ್ಲಿನ ಜನರು ಜೀವ ಬಿಟ್ಟಿರುವ ಪ್ರಕರಣ ಕೂಡ ಇದೆ. ಅಷ್ಟೇ ಅಲ್ಲದೆ ಗರ್ಭಿಣಿಯರನ್ನ ನಾಲ್ಕು ಜನರು ಕೂಡಿ ಹೆಗಲ ಮೇಲೆ ಹೊತ್ತುಕೊಂಡು ಆಸ್ಪತ್ರೆಗೆ ಸೇರಿಸಿದ ಉದಾಹರಣೆ ಕೂಡ ಇಲ್ಲಿವೆ.

    ಜಿಲ್ಲೆಯ ಲೋಂಡಾ ಗ್ರಾಮದಲ್ಲಿ ಆಸ್ಪತ್ರೆ ಸೇರಿದಂತೆ ಮಾರುಕಟ್ಟೆ ಇರುವುದರಿಂದ ಈ ನಾಲ್ಕು ಗ್ರಾಮದ ಜನರು ಇಲ್ಲಿಗೆ ಬರುತ್ತಾರೆ. ಆದರೆ ವಾಹನದಲ್ಲಿ ಓಡಾಡಲು ರಸ್ತೆ ಇಲ್ಲದ್ದರಿಂದ ಜನರು ಅನಿವಾರ್ಯವಾಗಿ 8 ಕಿ.ಮೀ. ನಷ್ಟು ನಡೆದುಕೊಂಡೇ ಜೀವನ ಸಾಗಿಸುತ್ತಿದ್ದಾರೆ. ಇಷ್ಟಾದರೂ ಜಿಲ್ಲಾಡಳಿತ ಮಾತ್ರ ಎಚ್ಚೆತ್ತುಕೊಳ್ಳುತ್ತಿಲ್ಲ. ಗ್ರಾಮಸ್ಥರಿಗಾಗಿ ಒಂದು ಸೇತುವೆ ಹಾಗೂ ಗ್ರಾಮಕ್ಕೆ ಸಂಪರ್ಕಿಸುವಂತೆ ರಸ್ತೆಯನ್ನ ಮಾಡಲು ಮುಂದಾಗುತ್ತಿಲ್ಲ. ಆದ್ದರಿಂದ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರು ಹಿಡಿಶಾಪ ಹಾಕುತ್ತಿದ್ದಾರೆ.

    ಮಕ್ಕಳು ಸೇರಿದಂತೆ ಮಹಿಳೆಯರು, ವಯಸ್ಸಾದವರು ಜೀವ ಕೈಯಲ್ಲಿ ಹಿಡಿದುಕೊಂಡು ತೂಗು ಸೇತುವೆ ಮೇಲೆ ಓಡಾಡುತ್ತಿದ್ದಾರೆ. ಸರಿಯಾದ ರಸ್ತೆ ಇಲ್ಲದ್ದರಿಂದ ನಡೆದುಕೊಂಡು ಓಡಾಡುವ ಈ ಮಂದಿ ಅನೇಕ ಬಾರಿ ಬಿದ್ದು ಪೆಟ್ಟು ಮಾಡಿಕೊಂಡಿದ್ದಾರೆ. ಪ್ರತಿ ವರ್ಷ ಮಳೆಗಾಲ ಬಂದಾಗಲೂ ಸರ್ಕಾರಕ್ಕೆ ಮನವಿ ಮಾಡಿಕೊಳ್ಳುವ ಗ್ರಾಮಸ್ಥರಿಗೆ ಯಾರು ಕೂಡ ಸ್ಪಂದನೆ ಮಾಡುತ್ತಿಲ್ಲ. ಈಗಲಾದರೂ ಈ ನಾಲ್ಕು ಗ್ರಾಮಗಳಿಗೆ ಸರಿಯಾದ ರಸ್ತೆ, ಒಂದು ಸೇತುವೆಯನ್ನ ಸರ್ಕಾರ ಕಟ್ಟಿಸಿಕೊಡುವ ಚಿಂತನೆ ಮಾಡುತ್ತದೋ, ಇಲ್ಲವೋ ಎನ್ನುವುದನ್ನ ಕಾದುನೋಡಬೇಕಿದೆ.

  • ನದಿಯಲ್ಲಿ ತೇಲುತ್ತಿದ್ದ ಕಟ್ಟಡ ನೋಡಿ ದಂಗಾದ ನೆಟ್ಟಿಗರು- ವಿಡಿಯೋ ವೈರಲ್

    ನದಿಯಲ್ಲಿ ತೇಲುತ್ತಿದ್ದ ಕಟ್ಟಡ ನೋಡಿ ದಂಗಾದ ನೆಟ್ಟಿಗರು- ವಿಡಿಯೋ ವೈರಲ್

    ಬೀಜಿಂಗ್: ನದಿಯಲ್ಲಿ ಕಟ್ಟಡವೊಂದು ತೇಲುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಈ ದೃಶ್ಯವನ್ನು ನೋಡಿ ನೆಟ್ಟಿಗರು ದಂಗಾಗಿದ್ದಾರೆ.

    ಮೊದಲು ವಿಡಿಯೋ ನೋಡಿದಾಗ ಜನರು ಪ್ರವಾಹಕ್ಕೆ ಕಟ್ಟಡ ತೇಲುತ್ತಿದೆಯೇನೊ ಎಂದು ಅಂದುಕೊಂಡಿದ್ದರು. ಬಳಿಕ ವಿಡಿಯೋದ ನಿಜ ಸಂಗತಿ ತಿಳಿದು ಅಚ್ಚರಿ ಪಟ್ಟಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಐದು ಮಹಡಿಯ ಕಟ್ಟಡ ತೇಲುತ್ತಿರುವ ವಿಡಿಯೋದ ತುಣುಕೊಂದನ್ನು ನೋಡಿ ನಾನಾ ರೀತಿ ಕಮೆಂಟ್ ಮಾಡಿ ನೆಟ್ಟಿಗರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

    ಈ ದೃಶ್ಯ ಕಂಡು ಬಂದಿದ್ದು ಚೀನಾದಲ್ಲಿ. ಅಲ್ಲಿನ ಯಾಂಗ್ಟ್‍ಜೆ ನದಿಯಲ್ಲಿ ಬಹುಮಹಡಿ ಕಟ್ಟಡ ತೇಲುತ್ತಿರುವ ದೃಶ್ಯವನ್ನು 2018ರ ನವೆಂಬರ್ ನಲ್ಲಿ ಸಾರ್ವಜನಿಕರೊಬ್ಬರು ಸೆರೆಹಿಡಿದಿದ್ದರು. ನಿಜಾಂಶ ಏನೆಂದರೆ ನದಿಯಲ್ಲಿ ತೇಲುತ್ತಿದ್ದ ಕಟ್ಟಡವು ಒಂದು ಫ್ಲೋಟಿಂಗ್ ರೆಸ್ಟೋರೆಂಟ್ ಆಗಿದ್ದು, ಕಾರಣಾಂತರದಿಂದ ಅದನ್ನು ಒಂದು ಕಡೆಯಿಂದ ಇನ್ನೊಂದು ಪ್ರದೇಶಕ್ಕೆ ಸ್ಥಳಾಂತರಿಸಲಾಗುತ್ತಿತ್ತು. ಈ ವೇಳೆ ದೂರದಿಂದ ಕಟ್ಟಡವನ್ನು ನದಿಯಲ್ಲಿ ನೋಡಿದವರು ಅದು ತೇಲುತ್ತಿದೆ ಎಂದು ಶಾಕ್ ಆಗಿದ್ದರು.

    ಆದರೆ ಈ ವಿಡಿಯೋವನ್ನು ಟ್ವಿಟ್ಟರ್ ನಲ್ಲಿ ಸ್ಥಳೀಯರೊಬ್ಬರು ಇತ್ತೀಚಿಗೆ ಹಂಚಿಕೊಂಡಿದ್ದಾರೆ. ವಿಡಿಯೋ ಅಪ್ಲೋಡ್ ಆಗುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿಬಿಟ್ಟಿದೆ.

  • ಇದು ಅತ್ಯಂತ ನೋವಿನ ಸಂಗತಿ, ಬಹಳ ಬೇಸರವಾಗ್ತಿದೆ: ಯು.ಟಿ ಖಾದರ್

    ಇದು ಅತ್ಯಂತ ನೋವಿನ ಸಂಗತಿ, ಬಹಳ ಬೇಸರವಾಗ್ತಿದೆ: ಯು.ಟಿ ಖಾದರ್

    ಮಂಗಳೂರು: ಇದು ಅತ್ಯಂತ ನೋವಿನ ಸಂಗತಿ ಹಾಗೂ ಬಹಳ ಬೇಸರವಾಗುತ್ತಿದೆ ಎಂದು ಉಳ್ಳಾಲ ಶಾಸಕ ಯು.ಟಿ ಖಾದರ್ ಅವರು ಹೇಳಿದರು.

    ಸಿದ್ಧಾರ್ಥ್ ಮೃತದೇಹ ಸಿಕ್ಕಿದ ಬಳಿಕ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಸಿದ್ಧಾರ್ಥ್ ಅವರು ಈ ರೀತಿ ನಮಗೆ ಸಿಕ್ಕಿದ್ದು, ಒಂದು ರೀತಿಯಲ್ಲಿ ಬೇಸರ ಆಗುತ್ತಿದೆ. ಮೊದಲು ಸಿದ್ಧಾರ್ಥ್ ಮೃತದೇಹವನ್ನು ಸ್ಥಳೀಯರು ನೋಡಿದ್ದಾರೆ. ಮೃತದೇಹವನ್ನು ಎಲ್ಲಿಗೆ ತೆಗೆದುಕೊಂಡು ಹೋಗಬೇಕು ಎಂಬುದು ಚರ್ಚೆ ಮಾಡುತ್ತೇವೆ. ಅದಕ್ಕೂ ಮೊದಲು ಕೆಲವು ಪ್ರಕ್ರಿಯೆ ಇದೆ. ಅದನ್ನು ಮುಗಿಸಿಕೊಳ್ಳಬೇಕು ಎಂದು ಹೇಳಿದ್ದಾರೆ.

    ಬಳಿಕ ಮೃತದೇಹವನ್ನು ಪತ್ತೆ ಮಾಡಿದ ರಿತೇಶ್ ಪಬ್ಲಿಕ್ ಟಿವಿ ಜೊತೆ ಮಾತನಾಡಿ, ನಾವು ನದಿಯಲ್ಲಿ ಹೋಗುವಾಗ ಬೆಳಗ್ಗೆ 7 ಗಂಟೆಗೆ ಮೃತದೇಹ ಸಿಕ್ಕಿದೆ. ಅಲ್ಲದೆ ಸಿದ್ಧಾರ್ಥ್ ಅವರನ್ನು ಹುಡುಕಲು ನಮ್ಮ ಸಂಸ್ಥೆಯಿಂದ ಸೂಚನೆ ಸಿಕ್ಕಿತ್ತು. ಮಂಗಳವಾರ ರಾತ್ರಿ ಸಿಗದ ಕಾರಣ ಇಂದು ಬೆಳಗ್ಗೆ ನೋಡಿದ ತಕ್ಷಣ ಸಿದ್ಧಾರ್ಥ್ ಅವರೇ ಎಂದು ಅನುಮಾನ ಬಂತು. ಬಳಿಕ ಅವರ ಮೃತದೇಹವನ್ನು ದಡಕ್ಕೆ ತಂದು ಪೊಲೀಸರಿಗೆ ಮಾಹಿತಿ ನೀಡಿದೆವು ಎಂದು ಹೇಳಿದ್ದಾರೆ.

    ಸೋಮವಾರ ತಡರಾತ್ರಿಯಿಂದ ಮಂಗಳವಾರ ತಡರಾತ್ರಿವರೆಗೆ ಶೋಧ ಕಾರ್ಯ ನಡೆಸಲಾಗಿದ್ದು, ಆ ಬಳಿಕ ಸ್ಥಗಿತಗೊಳಿಸಲಾಗಿತ್ತು. ಇಂದು ಮುಂಜಾನೆ 4 ಗಂಟೆ ಸುಮಾರಿನಿಂದ ಮತ್ತೆ ಕಾರ್ಯಾಚರಣೆ ಆರಂಭಿಸಲಾಗಿತ್ತು. ಈ ಮಧ್ಯೆ ಹೊಯಿಗೆ ಬಜಾರ್ ಎಂಬ ಪ್ರದೇಶದ ನದಿಭಾಗದಲ್ಲಿ ಮೃತದೇಹ ಪತ್ತೆಯಾಗಿರುವ ಕುರಿತು ಸ್ಥಳೀಯ ಮೀನುಗಾರರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

    ಒಟ್ಟಿನಲ್ಲಿ 36 ಗಂಟೆಗಳ ನಿರಂತರ ಕಾರ್ಯಾಚರಣೆಯ ಬಳಿಕ ಇದೀಗ ಸಿದ್ಧಾರ್ಥ್ ಪತ್ತೆಯಾಗಿದ್ದಾರೆ. ಮಂಗಳಾದೇವಿ ದೇವಸ್ಥಾನದ ಹಿಂಭಾಗದಲ್ಲಿ ರಸ್ತೆಯಿದೆ. ಆ ರಸ್ತೆಯಲ್ಲಿ ಹೊಯಿಗೆ ಬಜಾರ್ ಎಂಬ ಪ್ರದೇಶವಿದೆ. ಇಲ್ಲಿ ನದಿ ಒಂದು ಕಡೆಯಿಂದ ಮಂಗಳೂರು ಬಂದರನ್ನು ತಲುಪುತ್ತದೆ. ಇನ್ನೊಂದು ಕಡೆಯಿಂದ ಸಮುದ್ರವನ್ನು ತಲುಪುತ್ತದೆ. ಈ ಪ್ರದೇಶದಲ್ಲಿ ಸಿದ್ಧಾರ್ಥ್ ಮೃತದೇಹ ಸಿಕ್ಕಿದೆ.