Tag: ನದಿ

  • ಮಕ್ಕಳಿಗೆ ಈಜು ಕಲಿಸಲು ತೆರಳಿದ್ದ ತಾಯಿ ಬಾವಿಯಲ್ಲಿ ಮುಳುಗಿ ಸಾವು

    ಮಕ್ಕಳಿಗೆ ಈಜು ಕಲಿಸಲು ತೆರಳಿದ್ದ ತಾಯಿ ಬಾವಿಯಲ್ಲಿ ಮುಳುಗಿ ಸಾವು

    – ಇತ್ತ ಮೈಸೂರಿನಲ್ಲಿ ಕಾಲು ಜಾರಿ ನದಿಗೆ ಬಿದ್ದ ಯುವಕ

    ಬೆಳಗಾವಿ/ಮೈಸೂರು: ಮಕ್ಕಳಿಗೆ ಈಜು ಕಲಿಸಲು ತೆರಳಿದ್ದ ತಾಯಿ ಬಾವಿಯಲ್ಲಿ ಮುಳುಗಿ ಮೃತಪಟ್ಟ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ನೇಜ ಗ್ರಾಮದಲ್ಲಿ ನಡೆದಿದೆ.

    ಶಿಲ್ಪಾ ಚನ್ನಗೌಡರ (34) ಮೃತಪಟ್ಟ ತಾಯಿ. ಶಿಲ್ಪಾ ತನ್ನ ಮಕ್ಕಳಾದ ಸುಜಲ ಮತ್ತು ಸುದರ್ಶನನಿಗೆ ನೇಜ ಗ್ರಾಮದ ಹೊರವಲಯದಲ್ಲಿ ತೆರೆದ ಬಾವಿಯಲ್ಲಿ ಈಜು ಕಲಿಸುತ್ತಿದ್ದಳು. ಈ ವೇಳೆ ಶಿಲ್ಪಾ ಮೂರ್ಛೆ ತಪ್ಪಿದ್ದಾಳೆ. ಈಜುವಾಗ ಶಿಲ್ಪಾ ತಂಬಾಕು ಸೇವನೆ ಮಾಡಿದ್ದರಿಂದ ಮೂರ್ಛೆ ಹೋಗಿದ್ದಾಳೆ ಎಂದು ಹೇಳಲಾಗುತ್ತಿದೆ.

    ತಾಯಿ ಮುಳುಗುತ್ತಿರುವುದನ್ನು ನೋಡಿದ ಮಕ್ಕಳು ಸಹಾಯಕ್ಕಾಗಿ ಕೂಗಾಡಿದ್ದಾರೆ. ಅಲ್ಲದೆ ತಾಯಿಯ ರಕ್ಷಣೆ ಮಾಡುವಂತೆ ಮಕ್ಕಳು ನೆರೆ ಹೊರೆಯವರನ್ನು ಬಾವಿಯ ಬಳಿ ಕರೆದುಕೊಂಡು ಬಂದಿದ್ದಾರೆ. ಜನರು ರಕ್ಷಣೆಗೆ ಬರುವಷ್ಟರಲ್ಲಿ ಶಿಲ್ಪಾ ನೀರಲ್ಲಿ ಮುಳುಗಿ ಮೃತಪಟ್ಟಿದ್ದಾಳೆ. ಈ ಬಗ್ಗೆ ಸದಲಗಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಇತ್ತ ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಕೂಡ್ಲೂರು ಗ್ರಾಮದ ಲಕ್ಷ್ಮಣತೀರ್ಥ ನದಿಯಲ್ಲಿ ನೀರು ತರಲು ಹೋಗಿದ್ದ ಯುವಕ ಮೃತಪಟ್ಟಿದ್ದಾನೆ. ಧನುಷ್ (19) ಮೃತ ಯುವಕನಾಗಿದ್ದು, ಬೆಂಗಳೂರಿನಲ್ಲಿ ಡಿಪ್ಲೋಮಾ ಓದುತ್ತಿದ್ದನು.

    ಧನುಷ್ ತನ್ನ ಸೋದರಮಾವನ ತಿಥಿ ಕಾರ್ಯಕ್ಕೆ ಬಂದಿದ್ದನು. ನದಿ ತೀರದ ಸಮಾಧಿ ಸ್ವಚ್ಚಗೊಳಿಸಲು ನೀರು ತರಲು ಹೋಗಿದ್ದ ವೇಳೆ ಧನುಷ್ ಕಾಲು ಜಾರಿ ನದಿಗೆ ಬಿದ್ದಿದ್ದಾನೆ. ಈ ಬಗ್ಗೆ ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • 15 ತಿಂಗಳು ನೀರಿನಲ್ಲಿದ್ದರೂ ಹಾಳಾಗದೇ ಇತ್ತು ಐಫೋನ್ – ಮರಳಿ ಮಾಲೀಕರಿಗೆ ತಲುಪಿಸಿದ ಅಚ್ಚರಿ ಕಥೆ

    15 ತಿಂಗಳು ನೀರಿನಲ್ಲಿದ್ದರೂ ಹಾಳಾಗದೇ ಇತ್ತು ಐಫೋನ್ – ಮರಳಿ ಮಾಲೀಕರಿಗೆ ತಲುಪಿಸಿದ ಅಚ್ಚರಿ ಕಥೆ

    ವಾಷಿಂಗ್ಟನ್: 15 ತಿಂಗಳು ನದಿ ನೀರಿನಲ್ಲಿದ್ದರೂ ಐಫೋನ್ ಹಾಳಾಗದೇ ಮೊದಲಿನಂತೆ ಕೆಲಸ ಮಾಡುತ್ತಿರುವ ವಿಡಿಯೋ ಈಗ ಸದ್ದು ಮಾಡುತ್ತಿದೆ.

    ಈ ಘಟನೆ ಅಮೆರಿಕದ ದಕ್ಷಿಣ ಕ್ಯಾರೋಲಿನಾದಲ್ಲಿ ನಡೆದಿದ್ದು, ಎಡಿಸ್ಟೋ ನದಿಯಲ್ಲಿ ಐಫೋನ್ ಪತ್ತೆಯಾಗಿದೆ ಎಂದು ಮಿಚೇಲ್ ಬೆನ್ನೆಟ್ ಎಂಬುವರು ಐಫೋನ್ ಸಿಕ್ಕ ನಂತರ ಕಾರ್ಯನಿರ್ವಹಿಸುತ್ತಿರುವ ಕುರಿತು ವಿಡಿಯೋವನ್ನು ಅಪ್‍ಲೋಡ್ ಮಾಡಿದ್ದಾರೆ. ಈ ಐಫೋನ್‍ಗೆ ವಾಟರ್‍ಪ್ರೂಫ್ ಕವರ್ ಹಾಕಲಾಗಿತ್ತು. ಹೀಗಾಗಿ ಸುಮಾರು 15 ತಿಂಗಳುಗಳ ಕಾಲ ನೀರಿನಲ್ಲಿದ್ದರೂ ಕಾರ್ಯನಿರ್ವಹಿಸುತ್ತಿದೆ.

    ಅಲ್ಲಿನ ಸ್ಥಳೀಯ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಬೆನೆಟ್ ಈ ಕುರಿತು ಮಾಹಿತಿ ನೀಡಿದ್ದು, ಪ್ರಾರಂಭದಲ್ಲಿ ಈ ಐಫೋನ್‍ನ ಮಾಲೀಕರನ್ನು ಕಂಡುಹಿಡಿಯುವುದು ಕಷ್ಟಕರವಾದ ಕೆಲಸವಾಗಿತ್ತು. ಅಲ್ಲದೆ ಮೊಬೈಲ್‍ಗೆ ಪಾಸ್ವರ್ಡ್ ಹಾಕಿರುವುದರಿಂದ ಮಾಲೀಕನ ಕುರಿತು ಕೆಲ ವಿವರ ಸಿಗುವ ವರೆಗೆ ಮೊಬೈಲ್ ಬಳಕೆ ಮಾಡಲು ಅಸಾಧ್ಯವಾಗಿತ್ತು. ಹೀಗಾಗಿ ನಾನು ಐಫೋನ್‍ನಲ್ಲಿರುವ ಸಿಮ್ ಕಾರ್ಡ್‍ನ್ನು ತೆಗೆದು ಬೇರೆ ಫೋನ್‍ಗೆ ಹಾಕಿದ್ದೆ. ಈ ಮೂಲಕ ಮಾಲೀಕರ ಸಂಪರ್ಕದ ಕುರಿತು ಮಾಹಿತಿ ಪಡೆಯುವಲ್ಲಿ ಯಶಸ್ವಿಯಾದೆ ಎಂದು ಬೆನ್ನೆಟ್ ವಿವರಿಸಿದ್ದಾರೆ.

    2018ರ ಜೂನ್ 19 ರಂದು ಕುಟುಂಬದೊಂದಿಗೆ ಪ್ರವಾಸಕ್ಕೆ ಆಗಮಿಸಿದಾಗ ಮಾಲೀಕ ಎರಿಕಾ ಬೆನ್ನೆಟ್ ಅವರು ಐಫೋನ್ ಕಳೆದುಕೊಂಡಿದ್ದರು. ವಿಶೇಷ ಏನೆಂದರೆ 15 ತಿಂಗಳ ನಂತರವೂ ಐಫೋನ್ ಕಾರ್ಯನಿರ್ವಹಿಸುವ ಸ್ಥಿತಿಯಲ್ಲಿತ್ತು ಎಂದು ಬೆನ್ನೆಟ್ ಸಂತಸ ವ್ಯಕ್ತಪಡಿಸಿದರು.

  • ಮಕ್ಕಳು, ಮುದ್ದಿನ ನಾಯಿ ಜೊತೆ ನದಿಗೆ ಹಾರಿ ಮಹಿಳೆ ಆತ್ಮಹತ್ಯೆ

    ಮಕ್ಕಳು, ಮುದ್ದಿನ ನಾಯಿ ಜೊತೆ ನದಿಗೆ ಹಾರಿ ಮಹಿಳೆ ಆತ್ಮಹತ್ಯೆ

    ಮಂಗಳೂರು: ಒಂದೇ ಕುಟುಂಬದ ಮೂವರು ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿ ನಡೆದಿದೆ.

    ಮೈಸೂರಿನ ಪಿ.ಎಸ್ ನಗರದ ನಿವಾಸಿ ಕವಿತಾ ಮಂದಣ್ಣ ಹಾಗೂ ಮಕ್ಕಳಾದ ಕೌಶಿಕ್ ಮತ್ತು ಕಲ್ಪಿತಾ ತಮ್ಮ ಕಾರನ್ನು ಬಂಟ್ವಾಳದ ಮಂಗಳೂರು ಬಳಿಯ ರಸ್ತೆ ಬದಿ ನಿಲ್ಲಿಸಿ, ನಡೆದುಕೊಂಡು ಸೇತುವೆಯಿಂದ ನದಿಗೆ ಹಾರಿದ್ದಾರೆ. ಶನಿವಾರ ರಾತ್ರಿ ಸುಮಾರು 11 ಗಂಟೆ ವೇಳೆಗೆ ಘಟನೆ ನಡೆದಿದ್ದು, ಸ್ಥಳೀಯರು ಕೂಡಲೇ ನದಿಯಲ್ಲಿ ಮುಳುಗುತ್ತಿದ್ದ ಮಹಿಳೆಯನ್ನು ರಕ್ಷಿಸಿದ್ದಾರೆ. ಆದರೆ ಆಸ್ಪತ್ರೆಗೆ ದಾಖಲಿಸುವಷ್ಟರಲ್ಲಿ ಮಹಿಳೆ ಸಾವನ್ನಪ್ಪಿದ್ದಾರೆ.

    ತಮ್ಮ ಮುದ್ದಿನ ನಾಯಿಯ ಜೊತೆ ಮಹಿಳೆ ನದಿಗೆ ಹಾರಿದ್ದರು. ಇವರು ಮೂಲತಃ ಕೊಡಗು ಜಿಲ್ಲೆಯ ವಿರಾಜಪೇಟೆ ಕಡಂಗಳ ಬಳ್ಳಚಂಡ ಕುಟುಂಬದವರು. ಕವಿತಾ ಮಂದಣ್ಣ ಅವರ ಪತಿ ಕಿಶನ್ ಕೃಷಿಕರಾಗಿದ್ದು, ನಾಲ್ಕು ದಿನಗಳಿಂದ ನಾಪತ್ತೆಯಾಗಿದ್ದರು. ತೀವ್ರ ಹುಡುಕಾಟದ ಬಳಿಕ ಶನಿವಾರ ಮಧ್ಯಾಹ್ನ ಶವ ಪತ್ತೆಯಾಗಿತ್ತು. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿತ್ತು.

    ಇದರಿಂದ ಶಾಕ್‍ಗೆ ಒಳಗಾಗಿದ್ದ ಕುಟುಂಬ ಪತ್ರವನ್ನು ಬರೆದಿಟ್ಟು ಕಾರಿನಲ್ಲಿ ಮಂಗಳೂರು ಕಡೆಗೆ ಹೋಗಿದ್ದಾರೆ. ಶನಿವಾರ ರಾತ್ರಿ ಬಂಟ್ವಾಳದಲ್ಲಿ ನೇತ್ರಾವತಿ ಸೇತುವೆ ಹಾದುಹೋದ ವೇಳೆ ಕಾರನ್ನು ರಸ್ತೆ ಬದಿಯ ಹೋಟೆಲ್ ಪಕ್ಕ ನಿಲ್ಲಿಸಿ, ನದಿಯತ್ತ ತೆರಳಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಬ್ಬರು ಮಕ್ಕಳ ಪತ್ತೆಗಾಗಿ ಬಂಟ್ವಾಳ ಪೊಲೀಸರು ಮತ್ತು ಅಗ್ನಿಶಾಮಕ ದಳ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ.

  • ಇಷ್ಟವಿಲ್ಲದ ಮದ್ವೆ- ಪತ್ರ ಬರೆದು ಯುವಕ ನಾಪತ್ತೆ

    ಇಷ್ಟವಿಲ್ಲದ ಮದ್ವೆ- ಪತ್ರ ಬರೆದು ಯುವಕ ನಾಪತ್ತೆ

    -ವಾಪಸ್ ಬರಲ್ಲ ಸಾರಿ ಬೈ – ಪ್ರೇಯಸಿಗೆ ಸಂದೇಶ

    ಬಾಗಲಕೋಟೆ: ಹೆತ್ತವರ ಒತ್ತಾಯದ ಹಿನ್ನೆಲೆಯಲ್ಲಿ ಇಷ್ಟವಿಲ್ಲದ ಮದುವೆಗೆ ಮನನೊಂದ ಯುವಕ ಪತ್ರ ಬರೆದು ನಾಪತ್ತೆಯಾಗಿರುವ ಘಟನೆ ಜಿಲ್ಲೆಯ ಮುಧೋಳ ತಾಲೂಕಿನ ಚಿಚಖಂಡಿ ಕೆ.ಡಿಯಲ್ಲಿ ನಡೆದಿದೆ.

    ಸಂಗಮೇಶ್ ಹೊಳೆನ್ನವರ (22) ನಾಪತ್ತೆಯಾದ ಯುವಕ. ಈತ ಮುಧೋಳ ತಾಲೂಕಿನ ಹೆಬ್ಬಾಳ ಗ್ರಾಮದ ನಿವಾಸಿಯಾಗಿದ್ದು, ಶನಿವಾರ ರಾತ್ರಿಯಿಂದ ನಾಪತ್ತೆಯಾಗಿದ್ದಾನೆ. ಆದರೆ ಚಿಚಖಂಡಿ ಕೆ.ಡಿ ಬಳಿಯ ಘಟಪ್ರಭಾ ನದಿ ಸೇತುವೆ ಬಳಿ ಯುವಕನ ಬೈಕ್ ಪತ್ತೆಯಾಗಿದೆ. ಹೀಗಾಗಿ ಯುವಕ ಸೇತುವೆಯಿಂದ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಈ ಹಿನ್ನೆಲೆಯಲ್ಲಿ ಲೋಕಾಪುರ ಪೊಲೀಸರು ಯುವಕನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

    ಜೊತೆಗೆ ಡೆತ್ ನೋಟನ್ನು ವಾಟ್ಸಪ್ ಸ್ಟೇಟಸ್‍ನಲ್ಲಿ ಹಾಕಿದ್ದಾನೆ. ಯುವಕನಿಗೆ ಇಷ್ಟವಿಲ್ಲದಿದ್ದರೂ ಅಕ್ಕನ ಮಗಳ ಜೊತೆ ಮದುವೆಗೆ ಮನೆಯವರು ಮುಂದಾಗಿದ್ದರು. ಆದರೆ ಯುವಕ ನನಗೆ ಈಗಲೇ ಮದುವೆ ಇಷ್ಟ ಇರಲಿಲ್ಲ. ನನ್ನ ಯಾವುದೇ ಕೆಲಸಕ್ಕೂ ಹೆತ್ತವರಿಂದ ಸಪೋರ್ಟ್ ಸಿಕ್ಕಿಲ್ಲ. ಪ್ರತಿ ಕೆಲಸದಲ್ಲೂ ಹೆತ್ತವರು ನನ್ನನ್ನು ಹೀಯಾಳಿಸುತ್ತಿದ್ದರು ಎಂದು ಡೆತ್‍ನೋಟ್‍ನಲ್ಲಿ ಬರೆದಿದ್ದಾನೆ.

    ಡೆತ್‍ನೋಟ್‍ನಲ್ಲಿ ಏನಿದೆ?:
    ನಾನು ಏನೇ ಮಾಡಬೇಕು ಅಂದುಕೊಂಡರು ಮನೆಯಲ್ಲಿ ಸಪೋರ್ಟ್ ಕೊಡುತ್ತಿರಲಿಲ್ಲ. ಒಂದು ಸಲ ನಾನು ಟಮ್ ಟಮ್ ತೆಗೆದುಕೊಂಡು ದುಡಿತ್ತೀನಿ ಎಂದೆ. ಆದರೆ ಅವರು ನನ್ನ ಬೈಕ್ ಮಾರಿಸಿ ಹೀಯಾಳಿಸುತ್ತಿದ್ದರು. ಆದರೂ ನಾನು ಸ್ವಂತವಾಗಿ ಏನಾದರೂ ಮಾಡಬೇಕು, ನೆಲೆ ಕಾಣಬೇಕು ಎಂದು ಪ್ರಯತ್ನ ಮಾಡಿದೆ. ಅದಕ್ಕೂ ಮನೆಯಬವರು ಕಲ್ಲು ಹಾಕಿದ್ದರು. ಹೀಗಾಗಿ ನಿಮ್ಮ ಮನೆಯಲ್ಲಿ ಮಕ್ಕಳು ದುಡಿತೀನಿ ಎಂದರೆ ಅವರಿಗೆ ಸಹಾಯ ಮಾಡಿ, ಛಲ ತುಂಬಿ. ನಮ್ಮ ಮನೆಯವರ ತರ ಮಾಡಬೇಡಿ ಎಂದಿದ್ದಾನೆ.

    ಇನ್ನೂ ನನ್ನ ಪ್ರೇಯಸಿ ನೀ ಎಲ್ಲೆ ಇದ್ದರೂ ಚೆನ್ನಾಗಿರುತ್ತೀಯಾ ಅನ್ನೋ ನಂಬಿಕೆ ನನಗೆ ಇದೆ. ನಾನು ಯಾವಾಗಲೂ ನಿನ್ನ ಜೊತೆನೆ ಇರುತ್ತೀನಿ. ಆದರೆ ನಾನು ವಾಪಸ್ ಬರಲ್ಲ ಸಾರಿ ಎಂದು ತನ್ನ ಪ್ರಿಯತಮೆಗೆ ಸಾರಿ ಕೇಳಿದ್ದಾನೆ. ನನಗೆ ಜೀವನ ಅಂದರೆ ಏನು?, ಈ ಜೀವನದಲ್ಲಿ ಹೇಗೆ ಬದುಕಬೇಕು, ಇಲ್ಲಿ ಏನು ಇರಬೇಕು, ಇರಬಾರದು ಎಂದು ತೋರಿಸಿಕೊಟ್ಟ ನನ್ನ ಪ್ರೇಯಸಿಗೆ ನನ್ನ ವಂದನೆಗಳು.

    ನನಗೂ ಜನ, ಸ್ನೇಹಿತರು ಇದ್ದಾರೆ ಎಂದು ತುಂಬಾ ಖುಷಿಯಾಗುತ್ತಿತ್ತು. ಆದರೆ ಯಾಕೋ ಈ ಜೀವನವೇ ಬೇಡವಾಗಿದೆ. ನನಗೆ ನೋವು, ದುಃಖ, ತುಂಬಾ ಸಂತೋಷವಾದಾಗ ನನ್ನ ಜೊತೆ ನೀನು ನಿಂತು ಧೈರ್ಯ ತುಂಬಿದೆ. ನನ್ನ ಸ್ನೇಹಿತರಿಗೆ ವಂದನೆಗಳು, ನನ್ನ ಜೀವನದಲ್ಲಿ ಅತಿ ಹೆಚ್ಚು ಗೌರವಿಸುವುದು ನನ್ನ ಸ್ನೇಹಿತರನ್ನು ಮಾತ್ರ, ಬಾಯ್ ಅಣ್ತಮ್ಮಾಸ್…ಎಂದು ಡೆತ್‍ನೋಟ್‍ ಬರೆದು ನಾಪತ್ತೆಯಾಗಿದ್ದಾನೆ.

  • ನದಿಯಲ್ಲಿ ಮುಳುಗುತ್ತಿದ್ದ ವ್ಯಕ್ತಿಯನ್ನು ರಕ್ಷಿಸಿದ ಆನೆಮರಿ: ವಿಡಿಯೋ

    ನದಿಯಲ್ಲಿ ಮುಳುಗುತ್ತಿದ್ದ ವ್ಯಕ್ತಿಯನ್ನು ರಕ್ಷಿಸಿದ ಆನೆಮರಿ: ವಿಡಿಯೋ

    ದಿಯಲ್ಲಿ ಮುಳುಗುತ್ತಿದ್ದ ವ್ಯಕ್ತಿಯನ್ನು ಆನೆಮರಿ ರಕ್ಷಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

    ಸ್ಟನ್ಸ್ ಗ್ರೌಂಡೆಡ್ ಎಂಬವರು ಈ ವಿಡಿಯೋವನ್ನು ಟ್ವಿಟ್ಟರಿನಲ್ಲಿ ಹಾಕಿ ಅದಕ್ಕೆ, “ನನ್ನ ಹೃದಯ. ಆ ವ್ಯಕ್ತಿ ನದಿಯಲ್ಲಿ ಮುಳುಗುತ್ತಿದ್ದಾನೆ ಎಂದು ತಿಳಿದ ಆನೆಮರಿ ಆತನ ರಕ್ಷಣೆಗೆ ಧಾವಿಸಿದೆ. ನಾವು ನಿಜವಾಗಿಯೂ ಅವರಿಗೆ ಅರ್ಹರಲ್ಲ” ಎಂದು ಟ್ವೀಟ್ ಮಾಡಿಕೊಂಡಿದ್ದಾರೆ.

    ವೈರಲ್ ಆಗಿರುವ ವಿಡಿಯೋದಲ್ಲಿ ಆನೆಗಳ ಹಿಂಡು ನದಿಯಲ್ಲಿ ಅಡ್ಡಾಡುತ್ತಿರುವುದು ಕಂಡು ಬಂದಿದೆ. ಹೀಗಿರುವಾಗ ನದಿಯಲ್ಲಿ ವ್ಯಕ್ತಿಯೊಬ್ಬ ಈಜಿಕೊಂಡು ಎಂಜಾಯ್ ಮಾಡುತ್ತಿದ್ದನು. ಇದನ್ನು ನೋಡಿ ಆನೆಮರಿಯೊಂದು ವ್ಯಕ್ತಿ ನದಿಯಲ್ಲಿ ಮುಳುಗುತ್ತಿದ್ದಾನೆ ಎಂದು ಭಾವಿಸಿ ಆತನ ರಕ್ಷಣೆಗೆ ಧಾವಿಸಿದೆ.

    ಮೊದಲು ಆನೆಮರಿ ಬರುತ್ತಿರುವುದನ್ನು ನೋಡಿದ ವ್ಯಕ್ತಿ ಹೆದರಿಕೊಂಡು ದೂರ ಈಜಲು ಪ್ರಯತ್ನಿಸಿದ್ದಾನೆ. ಬಳಿಕ ಆನೆಮರಿ ತನ್ನನ್ನು ರಕ್ಷಿಸಲು ಬರುತ್ತಿದೆ ಎಂಬುದನ್ನು ವ್ಯಕ್ತಿ ಅರಿತುಕೊಳ್ಳುತ್ತಾನೆ. ಅಷ್ಟರಲ್ಲಿ ಆನೆಮರಿ ಆತನನ್ನು ರಕ್ಷಿಸುತ್ತದೆ. ಈ ವೇಳೆ ವ್ಯಕ್ತಿ ಆನೆಮರಿಗೆ ಧನ್ಯವಾದಗಳು ಎಂದು ಹೇಳಿದ್ದಾನೆ.

    ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ. ಅಲ್ಲದೆ ಈ ವಿಡಿಯೋ ನೋಡಿದ ನೆಟ್ಟಿಗರು ಕಮೆಂಟ್ ಮಾಡುವ ಮೂಲಕ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

  • ಮಕ್ಕಳು, ಸೊಸೆಯರ ಕಿರುಕುಳಕ್ಕೆ ನದಿಗೆ ಹಾರಿದ ಅಜ್ಜಿ- ಗ್ರಾಮಸ್ಥರಿಂದ ರಕ್ಷಣೆ

    ಮಕ್ಕಳು, ಸೊಸೆಯರ ಕಿರುಕುಳಕ್ಕೆ ನದಿಗೆ ಹಾರಿದ ಅಜ್ಜಿ- ಗ್ರಾಮಸ್ಥರಿಂದ ರಕ್ಷಣೆ

    ಬೆಳಗಾವಿ: ಮಕ್ಕಳು ಮತ್ತು ಸೊಸೆಯರ ಕಿರುಕುಳ ಸಹಿಸಲಾರದೆ ನದಿಗೆ ಹಾರಿದ 80 ವರ್ಷದ ಅಜ್ಜಿಯನ್ನು ಕಿಲ್ಲಾ ತೊರಗಲ್ಲ ಗ್ರಾಮಸ್ಥರು ರಕ್ಷಿಸಿದ್ದಾರೆ.

    ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಎಂ ಚಂದರಗಿ ನಿವಾಸಿ ಯಲ್ಲವ್ವ ಕೌಜಲಗಿ ನದಿಗೆ ಹಾರಿದ 80 ವರ್ಷದ ಅಜ್ಜಿ. ಮಕ್ಕಳ ಮತ್ತು ಸೊಸೆಯಂದಿರ ಕಾಟ ತಾಳಲಾರದೆ ರಾಮದುರ್ಗ ತಾಲೂಕಿನ ಕಿಲ್ಲಾ ತೊರಗಲ್ಲ ಬಳಿಯ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.

    ಯಲ್ಲವ್ವನಿಗೆ ಮೂರು ಗಂಡು ಮಕ್ಕಳು ಮತ್ತು ಆರು ಜನ ಹೆಣ್ಣು ಮಕ್ಕಳಿದ್ದು, ಆಸ್ತಿಯನ್ನು ಕಸಿದುಕೊಂಡ ಮಕ್ಕಳು ಅಜ್ಜಿಯನ್ನು ನಡು ರಸ್ತೆಗೆ ಬಿಟ್ಟಿದ್ದಾರೆ. ಮನೆ ಇಲ್ಲದೆ ಕಳೆದ ಮೂರು ದಿನದಿಂದ ಊಟ ಮಾಡದ ಅಜ್ಜಿ ಮನನೊಂದು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಾರೆ. ಕಡಕೋಳ ಪೊಲೀಸ್ ವ್ಯಾಪ್ತಿಯಲ್ಲಿ ನಡೆದ ಘಟನೆ ನಡೆದಿದೆ.

  • ಭಾಗಮಂಡಲ, ನಾಪೋಕ್ಲು ರಸ್ತೆ ಸಂಪರ್ಕ ಕಡಿತ – ಚೋರ್ಲಾ ಘಾಟ್ ನಲ್ಲಿ ಗುಡ್ಡ ಕುಸಿತ

    ಭಾಗಮಂಡಲ, ನಾಪೋಕ್ಲು ರಸ್ತೆ ಸಂಪರ್ಕ ಕಡಿತ – ಚೋರ್ಲಾ ಘಾಟ್ ನಲ್ಲಿ ಗುಡ್ಡ ಕುಸಿತ

    – ದೇವದುರ್ಗ- ಕಲಬುರಗಿ ಮಾರ್ಗದ ರಸ್ತೆ ಸಂಚಾರ ಬಂದ್
    – ಕೂಡಲಸಂಗಮದಲ್ಲಿ ಪ್ರವಾಹ ಭೀತಿ

    ಬೆಂಗಳೂರು: ರಾಜ್ಯದಲ್ಲಿ ವರುಣಾರ್ಭಟ ಜೋರಾಗಿದ್ದು, ಕೃಷ್ಣಾ, ಘಟಪ್ರಭಾ, ಮಲಪ್ರಭಾ, ಭೀಮಾ ನದಿಗಳು ಉಕ್ಕಿ ಹರಿಯುತ್ತಿದೆ. ಈ ಹಿನ್ನೆಲೆ ಈ ನದಿಗಳ ಸುತ್ತಮುತ್ತಲ ಪ್ರದೇಶದಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗಿದೆ. ಅಲ್ಲದೆ ಹಲವೆಡೆ ಸೇತುವೆ ಮುಳುಗಡೆಯಾಗಿದ್ದು, ಹಲವು ಮಾರ್ಗಗಳ ರಸ್ತೆ ಸಂಚಾರ ಸ್ಥಗಿತಗೊಂಡಿದೆ.

    ಕೊಡಗು ಜಿಲ್ಲೆಯ ತಲಕಾವೇರಿ ವ್ಯಾಪ್ತಿಯಲ್ಲಿ ಧಾರಾಕಾರ ಮಳೆ ಹಿನ್ನಲೆ ಭಾಗಮಂಡಲ ತ್ರಿವೇಣಿ ಸಂಗಮ ಮೂರನೇ ಬಾರಿಗೆ ಜಲಾವೃತಗೊಂಡಿದೆ. ಪರಿಣಾಮ ಭಾಗಮಂಡಲ- ನಾಪೋಕ್ಲು ರಸ್ತೆ ಸಂಪರ್ಕ ಕಡಿತಗೊಂಡಿದೆ. ಇದರ ಜೊತೆಗೆ ತಲಕಾವೇರಿಗೆ ಕೂಡ ರಸ್ತೆ ಸಂಪರ್ಕ ಕಡಿತವಾಗುವ ಸಾಧ್ಯತೆಯಿದೆ. ಅಲ್ಲದೆ ದಕ್ಷಿಣ ಕೊಡಗಿನಲ್ಲಿ ವರುಣನ ಅಬ್ಬರ ಮುಂದುವರಿದಿದ್ದು, ಸ್ಥಳೀಯರಲ್ಲಿ ಮತ್ತೆ ಆತಂಕ ಸೃಷ್ಟಿಸಿದೆ.

    ಇತ್ತ ಕೃಷ್ಣಾ ನದಿ ಉಕ್ಕಿ ಹರಿಯುತ್ತಿರುವ ಹಿನ್ನೆಲೆ ನದಿ ತೀರದ ಗ್ರಾಮಗಳು ಪ್ರವಾಹ ಪರಿಸ್ಥಿತಿ ಎದುರಿಸುತ್ತಿದೆ. ಅಲ್ಲದೆ ನಾರಾಯಣಪುರ ಜಲಾಶಯದಿಂದ 2 ಲಕ್ಷ 62 ಸಾವಿರ ಕ್ಯೂಸೆಕ್ ನೀರನ್ನು ಹರಿಬಿಡಲಾಗಿದೆ. ಪರಿಣಾಮ ಲಿಂಗಸೂಗೂರು ತಾಲೂಕಿನ ಶೀಲಹಳ್ಳಿ ಸೇತುವೆ ಸಂಪೂರ್ಣ ಮುಳುಗಡೆಯಾಗಿದೆ. ದೇವದುರ್ಗ ತಾಲೂಕಿನ ಹೂವಿನಹೆಡಗಿ ಸೇತುವೆ ಕೂಡ ಮುಳುಗಡೆಯಾಗಿದ್ದು, ದೇವದುರ್ಗ -ಕಲಬುರಗಿ ಮಾರ್ಗದ ರಸ್ತೆ ಸಂಚಾರ ಬಂದ್ ಆಗಿದೆ. ಪ್ರವಾಹ ಎದುರಿಸಲು ರಾಯಚೂರು ಜಿಲ್ಲಾಡಳಿತ ಮುಂಜಾಗೃತ ಕ್ರಮ ತೆಗೆದುಕೊಳ್ಳುತ್ತಿದ್ದು, ನದಿ ಪಾತ್ರದ ಗ್ರಾಮಗಳಲ್ಲಿ ಡಂಗೂರದ ಮುಖಾಂತರ ಜಾಗೃತಿ ಮೂಡಿಸಲಾಗುತ್ತಿದೆ.

    ಒಂದೆಡೆ ಮಹಾ ಮಳೆ ಕೃಷ್ಣಾ, ಘಟಪ್ರಭಾ, ಮಲಪ್ರಭಾ ನದಿ ಉಕ್ಕಿಹರಿಯುತ್ತಿದೆ. ಇನ್ನೊಂದೆಡೆ ಮೂರು ನದಿಗಳಿಂದ ಕೂಡಿದ ಬಸವಣ್ಣನ ಐಕ್ಯಸ್ಥಳ ಕೂಡಲ ಸಂಗಮದಲ್ಲಿ ಪ್ರವಾಹ ಭೀತಿ ಎದುರಾಗಿದೆ. ಸಂಗಮನಾಥನ ದೇವಸ್ಥಾನ ಜಲಾವೃತಗೊಂಡಿದ್ದು, ನೀರಲ್ಲೇ ನಡೆದುಕೊಂಡು ಹೋಗಿ ಭಕ್ತರು ಸಂಗಮನಾಥನ ದರ್ಶನ ಪಡೆಯುತ್ತಿದ್ದಾರೆ.

    ಪಶ್ಚಿಮ ಘಟ್ಟಗಳಲ್ಲಿ ಮಳೆ ಅಬ್ಬರ ಮುಂದುವರಿದಿದ್ದು, ಬೆಳಗಾವಿ-ಗೋವಾ ಮಧ್ಯದ ರಸ್ತೆಯ ಪಕ್ಕದ ಗುಡ್ಡ ಕುಸಿತವಾಗಿದೆ. ಬೆಳಗಾವಿ ಗಡಿಯ ಚೋರ್ಲಾ ಘಾಟ್‍ನಲ್ಲಿ ಗುಡ್ಡ ಕುಸಿದು ಬಿದ್ದ ಪರಿಣಾಮ ರಸ್ತೆ ಮೇಲೆ ಬೃಹತ್ ಬಂಡೆಗಲ್ಲುಗಳು ಬಿದ್ದಿವೆ. ಹೀಗೆ ಕುಸಿಯುತ್ತಿರುವ ರಸ್ತೆಯಲ್ಲಿ ವಾಹನಗಳು ಸಿಲುಕಿ ಹಾಕಿಕೊಳ್ಳುತ್ತಿದೆ. ಆದ್ದರಿಂದ ಜೆಸಿಬಿಯಿಂದ ಸಿಬ್ಬಂದಿಗಳು ರಸ್ತೆ ಸಂಚಾರ ಸುಗಮಗೊಳಿಸುವ ಪ್ರಯತ್ನ ಮಾಡುತ್ತಿದ್ದಾರೆ.

    ಯಾದಗಿರಿ ಜಿಲ್ಲೆಯಲ್ಲಿ ಎರಡು ನದಿಗಳ ಅಬ್ಬರಕ್ಕೆ ಪ್ರವಾಹ ಪರಿಸ್ಥಿತಿ ಎದುರಾಗಿದೆ. ರಾತ್ರೋರಾತ್ರಿ ಭೀಮಾ ನದಿಗೆ ಅಪಾರ ಪ್ರಮಾಣ ನೀರು ಬಿಡುಗಡೆಯಾದ ಹಿನ್ನೆಲೆ ಯಾದಗಿರಿಯ ಕಂಗಳೇಶ್ವರ ಮತ್ತು ವೀರಾಂಜನೇಯ ದೇವಸ್ಥಾನ ಸಂಪೂರ್ಣ ಮುಳುಗಡೆಯಾಗಿದೆ. ಸಣ್ಣ ಮುನ್ಸೂಚನೆಯನ್ನೂ ನೀಡದೇ ನೀರು ಬಿಡುಗಡೆ ಮಾಡಲಾಗಿದೆ. ಭಾನುವಾರ ರಾತ್ರಿ ಬರಿದಾಗಿದ್ದ ಭೀಮಾ ನದಿ ಬೆಳಕು ಹರಿಯುತ್ತಿದ್ದಂತೆ ಉಕ್ಕಿ ಹರಿಯುತ್ತಿದ್ದು, ನದಿಪಾತ್ರದ ಗ್ರಾಮಗಳಲ್ಲಿ ಆತಂಕ ಹೆಚ್ಚಾಗಿದೆ.

  • ಚಾರ್ಮಾಡಿ ಘಾಟ್‍ನಲ್ಲಿ ಮತ್ತೆ ಮಳೆ- ಆತಂಕದಲ್ಲಿ ಜನ

    ಚಾರ್ಮಾಡಿ ಘಾಟ್‍ನಲ್ಲಿ ಮತ್ತೆ ಮಳೆ- ಆತಂಕದಲ್ಲಿ ಜನ

    ಮಂಗಳೂರು: ಚಾರ್ಮಾಡಿ ಘಾಟ್‍ನಲ್ಲಿ ವರುಣನ ಅರ್ಭಟ ಶುರುವಾಗಿದ್ದು, ಈ ಭಾಗದ ಜನರಿಗೆ ಆತಂಕ ಹೆಚ್ಚಾಗುವಂತೆ ಮಾಡಿದೆ.

    ಚಾರ್ಮಾಡಿ ಘಾಟ್‍ನಲ್ಲಿ ಮಳೆ ಬರುತ್ತಿರುವ ಕಾರಣ, ಚಾರ್ಮಾಡಿಯ ಮೃತ್ಯುಂಜಯ ಹೊಳೆಯಲ್ಲಿ ನೀರಿನ ಒಳ ಹರಿವು ಜಾಸ್ತಿಯಾಗಿದೆ. ಈ ಕಾರಣದಿಂದ ಸ್ಥಳೀಯರಲ್ಲಿ ಆತಂಕ ಹೆಚ್ಚಾಗಿದ್ದು, ನದಿ ಪಾತ್ರದ ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರ ಮಾಡಲಾಗಿದೆ. ಇದನ್ನು ಓದಿ: ಮಹಾರಾಷ್ಟ್ರದ ಘಟ್ಟ ಪ್ರದೇಶದಲ್ಲಿ ಮಳೆ-ಕೊಯ್ನಾದಿಂದ ನೀರು ಬಿಡುಗಡೆ

    ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಪ್ರದೇಶದಲ್ಲಿ ಮಳೆಯ ಅರ್ಭಟ ಮತ್ತೆ ಶುರುವಾದ ಹಿನ್ನೆಲೆಯಲ್ಲಿ ನದಿ ಪಾತ್ರದ ಜನರು ಮನೆ ಬಿಟ್ಟು ಸುರಕ್ಷಿತ ಸ್ಥಳಕ್ಕೆ ತೆರಳುತ್ತಿದ್ದಾರೆ. ಈ ಹಿಂದೆ ಸುರಿದ ಭಾರೀ ಮಳೆಯಿಂದ ಗುಡ್ಡ ಕುಸಿತ ಉಂಟಾಗಿ ಚಾರ್ಮಾಡಿ ಘಾಟ್‍ನ ರಸ್ತೆ ಸಂಚಾರವನ್ನು ತಡೆಹಿಡಿಯಲಾಗಿತ್ತು.

  • ನದಿ ನೀರುಪಾಲಾಗಿದ್ದ ರೈತನ ಮೃತದೇಹ 17 ದಿನಗಳ ಬಳಿಕ ಪತ್ತೆ

    ನದಿ ನೀರುಪಾಲಾಗಿದ್ದ ರೈತನ ಮೃತದೇಹ 17 ದಿನಗಳ ಬಳಿಕ ಪತ್ತೆ

    ಹಾವೇರಿ: ಧರ್ಮಾ ನದಿಯ ನೀರಿನಲ್ಲಿ ಕಾಲು ಜಾರಿ ಬಿದ್ದಿದ್ದ ರೈತನ ಮೃತದೇಹವು 17 ದಿನದ ಬಳಿಕ ಪತ್ತೆಯಾದ ಘಟನೆ ಹಾನಗಲ್ ತಾಲೂಕು ಶೃಂಗೇರಿ ಗ್ರಾಮದಲ್ಲಿ ನಡೆದಿದೆ.

    ಶೃಂಗೇರಿ ಗ್ರಾಮದ ಶಿವಪ್ಪ ಸೊಟ್ಟಕ್ಕನವರ (50) ನೀರುಪಾಲಾಗಿದ್ದ ರೈತ. ಧರ್ಮಾ ನದಿ ಪ್ರವಾಹಕ್ಕೆ ಸಿಲುಕಿದ್ದ ಶಿವಪ್ಪ ಅವರು ಆಗಸ್ಟ್ 6ರಂದು ನೀರುಪಾಲಾಗಿದ್ದರು. ಆದರೆ ಶುಕ್ರವಾರ ಮಧ್ಯಾಹ್ನ ಅವರ ಮೃತ ದೇಹವು ಪತ್ತೆಯಾಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ.

    ಶಿವಪ್ಪ ಅವರು ಆಗಸ್ಟ್ 6ರಂದು ಜಮೀನಿಗೆ ತೆರಳುತ್ತಿದ್ದರು. ಈ ವೇಳೆ ಧರ್ಮಾ ನದಿಯ ನೀರಿನ ಪ್ರಮಾಣ ಹೆಚ್ಚಾಗಿದ್ದರಿಂದ ಶಿವಪ್ಪ ಏಕಾಏಕಿ ಕಾಲು ಜಾರಿ ನದಿಗೆ ಬಿದ್ದಿದ್ದರು. ಅವರ ಮೃತದೇಹ ಪತ್ತೆಗಾಗಿ ಜಿಲ್ಲಾಡಳಿತ ಹಾಗೂ ಕುಟುಂಬಸ್ಥರು ಎಲ್ಲ ರೀತಿಯ ಪ್ರಯತ್ನ ಮಾಡಿದ್ದರೂ ಸಿಕ್ಕಿರಲಿಲ್ಲ.

    ನದಿಯ ನೀರಿನ ಮಟ್ಟವು ಕಡಿಮೆಯಾಗಿದ್ದರಿಂದ ಶುಕ್ರವಾರ ಶಿವಪ್ಪ ಅವರ ಮೃತದೇಹವು ನದಿಯಲ್ಲಿ ಪತ್ತೆಯಾಗಿತ್ತು. ಇದನ್ನು ನೋಡಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣವೇ ಸ್ಥಳಕ್ಕೆ ದೌಡಾಯಿಸಿದ ತಹಶೀಲ್ದಾರ್ ಮತ್ತು ಹಾನಗಲ್ ಪೊಲೀಸರು, ಮೃತ ದೇಹವು ಶಿವಪ್ಪ ಅವರದ್ದೇ ಎಂದು ಖಚಿತ ಪಡಿಸಿದ್ದಾರೆ.

    ಈ ಸಂಬಂಧ ಹಾನಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತ ಶಿವಪ್ಪ ಅವರ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ತಹಶೀಲ್ದಾರ್ ಅವರು, ಸರ್ಕಾರದಿಂದ ಸೂಕ್ತ ಪರಿಹಾರ ಕೊಡಿಸುವ ಭರವಸೆ ನೀಡಿದ್ದಾರೆ.

  • ರಾಯಚೂರಿನಿಂದ ಕಾಣೆಯಾಗಿದ್ದ ವಿದ್ಯಾರ್ಥಿನಿ ಆಂಧ್ರದಲ್ಲಿ ಶವವಾಗಿ ಪತ್ತೆ -ಆಟೋ ಚಾಲಕ ಬಂಧನ

    ರಾಯಚೂರಿನಿಂದ ಕಾಣೆಯಾಗಿದ್ದ ವಿದ್ಯಾರ್ಥಿನಿ ಆಂಧ್ರದಲ್ಲಿ ಶವವಾಗಿ ಪತ್ತೆ -ಆಟೋ ಚಾಲಕ ಬಂಧನ

    ರಾಯಚೂರು: ಎಂಜಿನಿಯರಿಂಗ್ ವಿದ್ಯಾರ್ಥಿನಿ ಮಧುಪತ್ತಾರ್ ಸಾವಿನ ಪ್ರಕರಣ ಮಾಸುವ ಮುನ್ನವೇ, ನಗರದ ಬಸ್ ನಿಲ್ದಾಣದಿಂದ ಕಾಣೆಯಾಗಿದ್ದ ಅಪ್ರಾಪ್ತೆ ಆಂಧ್ರ ಪ್ರದೇಶದ ಕರ್ನೂಲ್ ಬಳಿ ತುಂಗಭದ್ರಾ ನದಿಯಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ನಡೆದಿದೆ.

    17 ವರ್ಷದ ವಿದ್ಯಾರ್ಥಿನಿ ನಾಪತ್ತೆಯಾಗಿದ್ದ ಐದು ದಿನಗಳ ನಂತರ ಶವವಾಗಿ ಪತ್ತೆಯಾಗಿದ್ದಾಳೆ. ಕಾಲೇಜು ತರಗತಿಗಳು ಆರಂಭವಾಗದಿದ್ದರೂ ಪ್ಯಾರಾ ಮಡಿಕಲ್ ವಿದ್ಯಾರ್ಥಿನಿ ಆಗಸ್ಟ್ 16 ರಂದು ಗಣಮೂರು ಗ್ರಾಮದಿಂದ ಕಾಲೇಜಿಗೆ ಹೋಗುವುದಾಗಿ ಮನೆಯಿಂದ ತೆರಳಿದ್ದಳು. ಆದರೆ ಸಂಜೆಯಾದರೂ ಮನೆಗೆ ವಾಪಸ್ ಬಂದಿರಲಿಲ್ಲ.

    ರಾಯಚೂರು ಬಸ್ ನಿಲ್ದಾಣದಿಂದ ಕಾಣೆಯಾಗಿದ್ದಳು. ಇದರಿಂದ ಗಾಬರಿಯಾದ ಪೋಷಕರು ಆಗಸ್ಟ್ 17 ರಂದು ರಾಯಚೂರು ಮಹಿಳಾ ಠಾಣೆಯಲ್ಲಿ ಅಪಹರಣ ಪ್ರಕರಣ ದಾಖಲಿಸಿದ್ದರು. ಆದರೆ ಆಗಸ್ಟ್ 20 ರಂದು ಆಂಧ್ರದ ಕರ್ನೂಲ್‍ನ ಗುಡೂರು ಠಾಣಾ ವ್ಯಾಪ್ತಿಯ ಸುಂಕೇಶ್ವರ ಜಲಾಶಯ ಬಳಿ ತುಂಗಭದ್ರ ನದಿಯಲ್ಲಿ ಶವ ಪತ್ತೆಯಾಗಿದ್ದಾಳೆ.

    ಪೋಷಕರ ಆರೋಪದ ಹಿನ್ನೆಲೆಯಲ್ಲಿ ಗ್ರಾಮದ ಆಟೋ ಚಾಲಕ ವೀರೇಂದ್ರ ಎಂಬವನನ್ನ ಪೊಲೀಸರು ಬಂಧಿಸಿ, ವಿಚಾರಣೆ ನಡೆಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತಿಬ್ಬರನ್ನ ವಶಕ್ಕೆ ಪಡೆದಿರುವ ಪೊಲೀಸರು ವಿದ್ಯಾರ್ಥಿನಿ ಸಾವಿನ ತನಿಖೆಯನ್ನ ಮುಂದುವರಿಸಿದ್ದಾರೆ.

    ವಿದ್ಯಾರ್ಥಿನಿ ಪೋಷಕರು 17ರಂದು ನಮ್ಮ ಮಗಳು ಕಾಣೆಯಾಗಿದ್ದಾಳೆ ಎಂದು ದೂರು ಕೊಟ್ಟಿದ್ದರು. ಅನುಮಾನಾಸ್ಪದ ವ್ಯಕ್ತಿಗಳನ್ನು ಕರೆಸಿ ತನಿಖೆ ಮಾಡಿದ್ದೆವು. ಆದರೆ ದುರದೃಷ್ಟವಶಾತ್ ವಿದ್ಯಾರ್ಥಿನಿ ಶವ ಆಂಧ್ರ ಪ್ರದೇಶದ ಸುಂಕೇಶ್ವರ ಜಲಾಶಯ ಬಳಿ ಪತ್ತೆಯಾಗಿದೆ. ನಮ್ಮ ಇಲಾಖೆ ಪೊಲೀಸರನ್ನು ಅಲ್ಲಿಗೆ ಕಳುಹಿಸಿ ಪರಿಶೀಲನೆ ನಡೆಸಿದ್ದೇವೆ. ಸದ್ಯಕ್ಕೆ ಅವರ ಪೋಷಕರು ಅನುಮಾನ ವ್ಯಕ್ತಪಡಿಸಿರುವ ವ್ಯಕ್ತಿಗಳನ್ನು ವಿಚಾರಣೆ ನಡೆಸುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.