Tag: ನದಿ

  • ಹೊತ್ತಿ ಉರಿದ ಭತ್ತದ ಹುಲ್ಲು- ನದಿಗೆ ಲಾರಿ ಇಳಿಸಿದ ಚಾಲಕ

    ಹೊತ್ತಿ ಉರಿದ ಭತ್ತದ ಹುಲ್ಲು- ನದಿಗೆ ಲಾರಿ ಇಳಿಸಿದ ಚಾಲಕ

    ಹಾಸನ: ಭತ್ತದ ಹುಲ್ಲು ತುಂಬಿಕೊಂಡು ಹೋಗುತ್ತಿದ್ದ ಲಾರಿಗೆ ವಿದ್ಯುತ್ ತಂತಿ ಸ್ಪರ್ಶವಾಗಿ ಹುಲ್ಲು ಹೊತ್ತಿ ಉರಿದಿದ್ದು, ಚಾಲಕನ ಸಮಯ ಪ್ರಜ್ಞೆಯಿಂದ ಭಾರೀ ಅನಾಹುತ ತಪ್ಪಿದ ಘಟನೆ ಜಿಲ್ಲೆ ಅರಕಲಗೂಡು ತಾಲೂಕಿನ ಚೌರಗಲ್ ಬಳಿ ನಡೆದಿದೆ.

    ಚಾಲಕ ಲಾರಿಯಲ್ಲಿ ಭತ್ತದ ಹುಲ್ಲು ತುಂಬಿಕೊಂಡು ಬರುತ್ತಿದ್ದನು. ಆದರೆ ಚೌರಗಲ್ ಬಳಿ ವಿದ್ಯುತ್ ಸ್ಪರ್ಶದಿಂದ ಭತ್ತದ ಹುಲ್ಲು ಹೊತ್ತಿಕೊಂಡು ಧಗಧಗ ಉರಿಯಲಾರಂಭಿಸಿದೆ. ಇದನ್ನು ಗಮನಿಸಿದ ಸ್ಥಳೀಯರು ತಕ್ಷಣ ಚಾಲಕನಿಗೆ ಬೆಂಕಿ ಹೊತ್ತಿರುವ ಬಗ್ಗೆ ತಿಳಿಸಿದ್ದಾರೆ. ತಕ್ಷಣ ಚಾಲಕ ಹೆಚ್ಚಿನ ಅನಾಹುತ ತಪ್ಪಿಸಲು ಲಾರಿಯನ್ನು ಸಮೀಪದಲ್ಲಿ ಹರಿಯುತ್ತಿದ್ದ ಹೇಮಾವತಿ ನದಿಗೆ ಇಳಿಸಿದ್ದಾನೆ.

    ನಂತರ ಚಾಲಕ ಲಾರಿಯಿಂದ ಜಿಗಿದು ದಡಕ್ಕೆ ಬಂದು ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಈ ಬಗ್ಗೆ ಮಾಹಿತಿ ತಿಳಿದ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿದ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮೂಲಕ ಚಾಲಕನ ಸಮಯ ಪ್ರಜ್ಞೆಯಿಂದ ಬೆಂಕಿ ಹೊತ್ತಿದ್ದ ಲಾರಿಯನ್ನು ಹೇಮಾವತಿ ನದಿಗೆ ಇಳಿಸಿದ್ದರಿಂದ ಭಾರೀ ಅನಾಹುತ ತಪ್ಪಿದಂತಾಗಿದೆ.

  • ರಾಡ್‍ನಿಂದ ಹೊಡೆದು ಸಹೋದ್ಯೋಗಿಯ ಬರ್ಬರ ಹತ್ಯೆ – ನದಿಯ ಬಳಿ ಸಮಾಧಿ

    ರಾಡ್‍ನಿಂದ ಹೊಡೆದು ಸಹೋದ್ಯೋಗಿಯ ಬರ್ಬರ ಹತ್ಯೆ – ನದಿಯ ಬಳಿ ಸಮಾಧಿ

    – ಶವವನ್ನ ಪ್ಯಾಕ್ ಮಾಡಿ, ಬೈಕಿನಲ್ಲಿ ಹೊತ್ತೊಯ್ದ

    ಭುವನೇಶ್ವರ: ವ್ಯಕ್ತಿಯನ್ನು ಸಹೋದ್ಯೋಗಿಯೇ ಕೊಲೆ ಮಾಡಿ, ನದಿಯ ಬಳಿ ಮೃತದೇಹವನ್ನು ಸಮಾಧಿ ಮಾಡಿರುವ ಘಟನೆ ಒಡಿಶಾದ ಕಟಕ್ ಜಿಲ್ಲೆಯಲ್ಲಿ ನಡೆದಿದೆ.

    ಸೌಮೇಂದ್ರ ಕುಮಾರ್ ಮೃತ ವ್ಯಕ್ತಿ. ಈತ ರೆಂಗಾಲಿಯ ಸಿಮೆಂಟ್ ಕಾರ್ಖಾನೆಯೊಂದರಲ್ಲಿ ಮೇಲ್ವಿಚಾರಕರಾಗಿ ಕೆಲಸ ಮಾಡುತ್ತಿದ್ದನು. ಮೃತ ಕುಟುಂಬದವರು ಫೆ.3 ರಂದು ಕುಮಾರ್ ನಾಪತ್ತೆಯಾಗಿದ್ದಾನೆ ಎಂದು ದೂರು ದಾಖಲಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

    ದೂರು ದಾಖಲಿಸಿಕೊಂಡ ಪೊಲೀಸರು ತನಿಖೆ ಶುರು ಮಾಡಿದ್ದರು. ಈ ವೇಳೆ ಸಿಮೆಂಟ್ ಕಳ್ಳತನಕ್ಕೆ ಸಂಬಂಧಿಸಿದ ವಿಷಯದ ಬಗ್ಗೆ ಮೃತ ಕುಮಾರ್ ಮತ್ತು ಸಹೋದ್ಯೋಗಿ ಬಿಸ್ವಾಜಿತ್ ಸಾಹು ಇಬ್ಬರ ನಡುವೆ ವಾಗ್ವಾದ ನಡೆದಿದೆ. ಆಗ ಕೋಪಗೊಂಡ ಆರೋಪಿ, ಕುಮಾರ್ ಗೆ ಕಬ್ಬಿಣದ ರಾಡ್‍ನಿಂದ ಹೊಡೆದು ಕೊಂದಿದ್ದಾನೆ ಎಂದು ಪೊಲೀಸರು ತನಿಖೆ ವೇಳೆ ಪತ್ತೆ ಹಚ್ಚಿದ್ದಾರೆ.

    ಆರೋಪಿ ಸಾಕ್ಷಿಗಳನ್ನು ನಾಶ ಮಾಡಲು ಕುಮಾರನ ಮೃತದೇಹವನ್ನು ಪ್ಯಾಕ್ ಮಾಡಿ ನದಿಯ ಬಳಿ ಸಮಾಧಿ ಮಾಡಿದ್ದಾನೆ. ತನಿಖೆ ವೇಳೆ ಮೃತದೇಹವನ್ನು ಬೈಕಿನಲ್ಲಿ ಆರೋಪಿ ಸಾಹು ತೆಗೆದುಕೊಂಡು ಹೋಗಿರುವುದು ಸಿಸಿಟಿವಿ ಕ್ಯಾಮೆರಾ ಸೆರೆಯಾಗಿದೆ. ತಕ್ಷಣ ಆರೋಪಿಯನ್ನು ಪೊಲೀಸರು ಬಂಧಿಸಿ ವಿಚಾರಣೆ ಮಾಡಿದ್ದಾರೆ.

    ಆರೋಪಿ ಸಾಹು ವಿಚಾರಣೆ ವೇಳೆ ತಾನೇ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ನಂತರ ಕುಮಾರ್ ಮೃತದೇಹವನ್ನು ಸಮಾಧಿ ಮಾಡಿರುವ ಸ್ಥಳಕ್ಕೆ ಆರೋಪಿಯನ್ನು ಕರೆದುಕೊಂಡು ಹೋಗಿ ಶವವನ್ನು ಹೊರತೆಗೆಯಲಾಗಿದೆ. ಸದ್ಯಕ್ಕೆ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಪಿಯನ್ನು ಬಂಧಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

  • ದಶಕದ ಹಿಂದೆ ಕಳೆದೋಗಿದ್ದ ನದಿ ಮೂಲ ಹುಡುಕಿದ ಯುವಕರು

    ದಶಕದ ಹಿಂದೆ ಕಳೆದೋಗಿದ್ದ ನದಿ ಮೂಲ ಹುಡುಕಿದ ಯುವಕರು

    ಚಿಕ್ಕಮಗಳೂರು: ಹತ್ತು ವರ್ಷಗಳ ಹಿಂದೆ ಬತ್ತಿ ಕಣ್ಮರೆಯಾಗಿದ್ದ ನದಿ ಮೂಲವನ್ನು ಸ್ಥಳೀಯ ಯುವಕರೇ ಹುಡುಕಿಕೊಂಡು ಕೆರೆ ತುಂಬಿಸಿಕೊಳ್ಳಲು ಮುಂದಾಗಿರುವ ಘಟನೆ ತಾಲೂಕಿನ ಹಿರೇಗೌಜ ಗ್ರಾಮದಲ್ಲಿ ನಡೆದಿದೆ.

    ಸಿದ್ದಪ್ಪನ ಬೆಟ್ಟದಿಂದ ಹರಿದು ಬರುತ್ತಿದ್ದ ನದಿ ಮೂಲ ಸಿಕ್ಕಿರುವ ಹಿನ್ನೆಲೆಯಲ್ಲಿ ಸ್ಥಳೀಯ ನಿವಾಸಿಗಳಿಗೆ ಮರಳುಗಾಡಲ್ಲಿ ಓಯಾಸಿಸ್ ಸಿಕ್ಕಂತಾಗಿದೆ. ಗಿಡಘಂಟೆಗಳಿಂದ ತುಂಬಿ ಪಾಳುಬಿದ್ದಿದ್ದ ಕೆರೆಯನ್ನು ಸ್ವಚ್ಛ ಮಾಡಿ, ನೀರು ತುಂಬಿಸಿಕೊಳ್ಳಲು ಮುಂದಾಗಿದ್ದಾರೆ.

    ತಾಲೂಕಿನ ಹಿರೇಗೌಜ ಗ್ರಾಮವಂದ್ರೆ ಭೀಕರ ಬರದ ತವರು. ಜನ, ಜಾನುವಾರುಗಳು ಕುಡಿಯುವ ನೀರಿಗೂ ಹಾಹಾಕಾರ ಅನುಭವಿಸುತ್ತಿದ್ದರು. ನೀರಿನ ಸೌಲಭ್ಯ ನೀಡಬೇಕಿದ್ದ ಗ್ರಾಮ ಪಂಚಾಯಿತಿ ಹಾಗೂ ಅಧಿಕಾರಿಗಳ ನಡೆ ಹಾಗೂ ನುಡಿ ಬಾಯಾರಿಕೆಯ ದಾಹವನ್ನು ನೀಗಿಸುತ್ತಿರಲಿಲ್ಲ. 250 ರಿಂದ 300 ಮನೆಗಳಿದ್ದ ಗ್ರಾಮಕ್ಕೆ ವಾರಕ್ಕೆ ನಾಲ್ಕೈದು ಟ್ಯಾಂಕರ್ ನೀರು ಮಾತ್ರ ಪೂರೈಕೆ ಮಾಡಲಾಗುತ್ತಿತ್ತು.

    ಬೈಕಲ್ಲಿ ನೀರು ತರ್ತಿದ್ದರು: ಪಂಚಾಯಿತಿಯಿಂದ ಪೂರೈಕೆಯಾಗುವ ನೀರು ದಿನನಿತ್ಯದ ಬಳಕೆ ಕಡಿಮೆಯಾಗುತ್ತಿದ್ದ ಕಾರಣ, ಹೆಚ್ಚುವರಿಯಾಗಿ ವಾರಗಟ್ಟಲೇ ಡ್ರಮ್ಮಿನಲ್ಲಿ ನೀರು ಸಂಗ್ರಹಿಸಲಾಗುತ್ತಿತ್ತು. ಗ್ರಾಮದ ಪುರುಷರು ಬೈಕಿನಲ್ಲಿ ತೆರಳಿ ನೀರು ತರುತ್ತಿದ್ದರು. ಮಹಿಳೆಯರು ಕೂಡ ಸುತ್ತಮುತ್ತಲಿನ ತೋಟಗಳಿಂದ ನೀರನ್ನು ಹೊತ್ತು ತರುತ್ತಿದ್ದರು.

    ಸಪ್ತ ನದಿಗಳ ನಾಡು ಎಂದು ಕರೆಸಿಕೊಳ್ಳುವ ಚಿಕ್ಕಮಗಳೂರು ಜಿಲ್ಲೆಯಲ್ಲಿ ನೀರಿಗೆ ಬರ ಎಂದರೇ ಯಾರೂ ನಂಬಲ್ಲ. ಆದರೆ ಜಿಲ್ಲಾ ಕೇಂದ್ರದಿಂದ ಕೂಗಳತೆ ದೂರದಲ್ಲಿರೋ ಹಿರೇಗೌಜ ಗ್ರಾಮದಲ್ಲಿ ನೀರಿನ ಬವಣೆ ಹೇಳತೀರದ್ದಾಗಿತ್ತು. ಜನ ಕೂಲಿ ಮಾಡಿ ನೀರನ್ನು ಕುಡಿಯುತ್ತಿದ್ರು. ಟ್ಯಾಂಕರ್ ನೀರಿಗೆ ನಿತ್ಯ 100 ರಿಂದ 200 ರೂ. ನೀರು ಖರೀದಿ ಮಾಡುತ್ತಿದ್ದರು. ವಿದ್ಯುತ್ ಸಮಸ್ಯೆಯಿಂದ ಟ್ಯಾಂಕರ್ ನೀರು ಕೂಡ ಕಷ್ಟಸಾಧ್ಯವಾಗಿತ್ತು.

    ಗ್ರಾಮದ ಮನೆಗೆ ಬೀಗವೇ ಹಾಕಲ್ಲ: ಹಿರೇಗೌಜ ಗ್ರಾಮದಲ್ಲಿ ಎಲ್ಲರೂ ಕೆಲಸಕ್ಕೆ ಹೋದರೂ ಯಾವ ಮನೆಗೂ ಬೀಗ ಹಾಕುತ್ತಿರಲಿಲ್ಲ. ಕಾರಣ ಪಂಚಾಯತಿ ಅವರು ಯಾವ ಸಂದರ್ಭದಲ್ಲಿಯಾದರೂ ನೀರನ್ನು ಬಿಡುತ್ತಿದ್ದರು. ಕೆಲ ಸಮಯ ದೊರೆಯುವ ನೀರನ್ನು ಸಂಗ್ರಹಿಸಲು ಸದಾ ಮನೆಯಲ್ಲಿ ಒಬ್ಬರು ಇರುತ್ತಿದ್ದರು. ಟ್ಯಾಂಕರ್ ಬಂದಾಗ ನೀರನ್ನು ತುಂಬಿಕೊಳ್ಳೋದಕ್ಕೆ ಮನೆಯಲ್ಲಿದ್ದವರು ಕಾಯುತ್ತಿದ್ದರು.

    ಕಳೆದ ಕೆಲ ವರ್ಷಗಳಿಂದ ಸಮಸ್ಯೆ ಎದುರಿಸುತ್ತಿದ್ದ ಗ್ರಾಮಸ್ಥರು ಸಮಸ್ಯೆ ಬಗೆಹರಿಸಿಕೊಳ್ಳಲು ಚಿಂತನೆ ನಡೆಸಿದ್ದರು. ಹಿಂದೆ ತಮ್ಮ ಊರಿನ ಕೆರೆಗೆ ಬರುತ್ತಿದ್ದ ನೀರಿನ ಮೂಲವನ್ನು ಕಂಡುಕೊಳ್ಳಲು ಪ್ರಯತ್ನಿಸಿದ್ದರು. ಸದ್ಯ ಕೆರೆಗೆ ನೀರು ಬರುತ್ತಿದ್ದ ನದಿಯ ಮೂಲವನ್ನು ಮತ್ತೆ ಗ್ರಾಮಸ್ಥರು ಪತ್ತೆ ಮಾಡಿದ್ದಾರೆ. ಆ ಮೂಲಕ ತುಂಬಿಸಿಕೊಳ್ಳಲು ಮುಂದಾಗಿದ್ದಾರೆ.

    ನೀರಿನ ಮೂಲ ಪತ್ತೆ ಮಾಡಲು ಹೊಯ್ಸಳ ಅಡ್ವೆಂಚರಸ್ ಕ್ಲಬ್ ಆಯೋಜಿಸಿದ್ದ ಚಾರಣದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಅರಣ್ಯ ಇಲಾಖೆ ಸಹಕಾರದೊಂದಿಗೆ ವನ್ಯಜೀವ ಛಾಯಾಗ್ರಾಹಕ ಹಿರೇಗೌಜ ಶಿವು ನೇತೃತ್ವದಲ್ಲಿ ಗ್ರಾಮದ 35 ಯುವಕರು ಕಾಡುಮೇಡುಗಳಲ್ಲಿ ಅಲೆದು ಊಟ-ತಿಂಡಿ, ನೀರನ್ನು ಹೊತ್ತು ಸಂಚರಿಸಿದ್ದರು. ಈ ವೇಳೆ ನದಿಯ ಮೂಲವನ್ನು ಯುವಕರು ಪತ್ತೆ ಮಾಡಿದ್ದಾರೆ. ಗ್ರಾಮದ ಯುವಕರ ಈ ಕೆಲಸಕ್ಕೆ ಸ್ಥಳೀಯರು ಮೆಚ್ಚುಗೆ ಸೂಚಿಸಿದ್ದಾರೆ.

  • 8 ತಿಂಗ್ಳ ಹಿಂದೆಯಷ್ಟೇ ಮದ್ವೆಯಾಗಿದ್ದ ದಂಪತಿ ಆತ್ಮಹತ್ಯೆ ಶರಣು

    8 ತಿಂಗ್ಳ ಹಿಂದೆಯಷ್ಟೇ ಮದ್ವೆಯಾಗಿದ್ದ ದಂಪತಿ ಆತ್ಮಹತ್ಯೆ ಶರಣು

    ಹಾವೇರಿ: ತುಂಗಭದ್ರಾ ನದಿಗೆ ಹಾರಿ ದಂಪತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹಾವೇರಿ ತಾಲೂಕಿನ ಕಂಚಾರಗಟ್ಟಿ ಗ್ರಾಮದ ಬಳಿ ನಡೆದಿದೆ.

    ಮೃತ ದಂಪತಿಯನ್ನು ಪ್ರಕಾಶ್ ನಾಯಕ್ (32) ಮತ್ತು ಭಾರತಿಬಾಯಿ (25) ಎಂದು ಗುರುತಿಸಲಾಗಿದೆ. ಪ್ರಕಾಶ್ ನಾಯಕ್ ಮತ್ತು ಭಾರತಿಬಾಯಿ ಎಂಟು ತಿಂಗಳ ಹಿಂದೆಯಷ್ಟೇ ಮದುವೆಯಾಗಿದ್ದರು. ಇವರು ಬಳ್ಳಾರಿ ಜಿಲ್ಲೆ ಹಗರಿಬೊಮ್ಮನಹಳ್ಳಿ ಮೂಲದ ನಿವಾಸಿಗಳು ಎನ್ನಲಾಗಿದೆ. ಆದರೆ ದಂಪತಿ ಕಳೆದ ಕೆಲವು ದಿನಗಳಿಂದ ಕಬ್ಬು ಕಟಾವು ಮಾಡುವ ಕೆಲಸಕ್ಕಾಗಿ ಹಾವೇರಿಗೆ ಬಂದಿದ್ದರು ಎಂದು ತಿಳಿದು ಬಂದಿದೆ.

    ದಂಪತಿ ಶುಕ್ರವಾರ ರಾತ್ರಿ ನದಿಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಇಂದು ನದಿಯಲ್ಲಿ ದಂಪತಿಯ ಮೃತದೇಹ ಪತ್ತೆಯಾದಾಗ ಈ ಘಟನೆ ಬೆಳಕಿಗೆ ಬಂದಿದೆ. ಕೌಟುಂಬಿಕ ಕಲಹದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಸ್ಥಳೀಯರು ಶಂಕಿಸಿದ್ದಾರೆ.

    ಈ ವಿಷಯ ತಿಳಿಯುತ್ತಿದ್ದಂತೆ ಗುತ್ತಲ ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗುತ್ತಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

  • ರಾಯಚೂರಿನಿಂದ ಹೊಸ ವರ್ಷಾಚರಣೆಗೆ ತೆರಳಿದ್ದವರು ಆಂಧ್ರದಲ್ಲಿ ನದಿಪಾಲು

    ರಾಯಚೂರಿನಿಂದ ಹೊಸ ವರ್ಷಾಚರಣೆಗೆ ತೆರಳಿದ್ದವರು ಆಂಧ್ರದಲ್ಲಿ ನದಿಪಾಲು

    – ಮೂವರು ಬಾಲಕಿಯರು ಸೇರಿ ನಾಲ್ವರು ಸಾವು

    ರಾಯಚೂರು: ಹೊಸ ವರ್ಷಾಚರಣೆಯನ್ನು ಸಂಭ್ರಮಿಸಲು ನದಿದಂಡೆಗೆ ತೆರಳಿದ್ದ ರಾಯಚೂರಿನ ಮೂವರು ಬಾಲಕಿಯರು ಸೇರಿದಂತೆ ಒಟ್ಟು ನಾಲ್ವರು ಆಂಧ್ರ ಪ್ರದೇಶದಲ್ಲಿ ನದಿ ಪಾಲಾಗಿದ್ದಾರೆ.

    ಮದಿಹಾ (12), ಫರಿಯಾ (10) ಮತ್ತು ಲೋದಾ (10) ಮೃತ ದುರ್ದೈವಿಗಳು. ನದಿಗೆ ಬಿದ್ದ ಅಕ್ಕನ ಮಕ್ಕಳನ್ನ ಕಾಪಾಡಲು ಹೋದ ನೂರ್ ಅಹ್ಮದ್ (35) ಸಹ ನದಿಯಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ. ಆಂಧ್ರ ಪ್ರದೇಶದ ಕಡಪ ಜಿಲ್ಲೆಯ ಸಿದ್ದವಟಂನಲ್ಲಿ ಈ ಘಟನೆ ನಡೆದಿದೆ.

    ಹೊಸ ವರ್ಷದ ಸಂಭ್ರಮಾಚರಣೆ ಮಾಡಲು ಆಂಧ್ರದ ಸಿದ್ದವಟಂನಲ್ಲಿನ ಅಜ್ಜಿಯ ಮನೆಗೆ ತೆರಳಿದ್ದರು. ಅಲ್ಲಿ ಮಾವ ನೂರ್ ಅಹ್ಮದ್ ಜೊತೆ ಪೆನ್ನಾ ನದಿಯಲ್ಲಿ ಈಜಲು ತೆರಳಿದ್ದರು. ಈ ವೇಳೆ ನದಿಯಲ್ಲಿ ಮಕ್ಕಳು ಮುಳುಗಿದ್ದಾರೆ. ಮಕ್ಕಳನ್ನ ಕಾಪಾಡಲು ಹೋದ ನೂರ್ ಅಹ್ಮದ್ ಸಹ ನೀರಿನ ಸೆಳೆತಕ್ಕೆ ಕೊಚ್ಚಿ ಹೋಗಿ ಮೃತಪಟ್ಟಿದ್ದಾನೆ.

    ಮೃತ ಮಕ್ಕಳು ರಾಯಚೂರು ನಗರದ ಮೆಥೋಡಿಸ್ಟ್ ಚರ್ಚ್ ಪ್ರದೇಶದ ಇನಾಂದಾರ್ ಕಾಲೋನಿ ನಿವಾಸಿ ಗೌಸ್‍ಪೀರ್ ಎಂಬವರ ಮಕ್ಕಳು ಎಂದು ತಿಳಿದು ಬಂದಿದೆ. ಗೌಸ್‍ಪೀರ್ ಲಾರಿ ಚಾಲಕನಾಗಿ ಕೆಲಸ ಮಾಡುತ್ತಿದ್ದರು. ಮಕ್ಕಳನ್ನ ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.

  • ನದಿಗೆ ಹಾರಿದ್ದಾಳೆಂಬ ಪ್ರಕರಣಕ್ಕೆ ಸಿನಿಮೀಯ ಟ್ವಿಸ್ಟ್ – ಪ್ರಿಯಕರನೊಂದಿಗೆ ಯುವತಿ ಹುಬ್ಬಳ್ಳಿಯಲ್ಲಿ ಪತ್ತೆ

    ನದಿಗೆ ಹಾರಿದ್ದಾಳೆಂಬ ಪ್ರಕರಣಕ್ಕೆ ಸಿನಿಮೀಯ ಟ್ವಿಸ್ಟ್ – ಪ್ರಿಯಕರನೊಂದಿಗೆ ಯುವತಿ ಹುಬ್ಬಳ್ಳಿಯಲ್ಲಿ ಪತ್ತೆ

    ಬಾಗಲಕೋಟೆ: ಡೆತ್‍ನೋಟ್ ಬರೆದು, ನದಿಗೆ ಹಾರಿದ್ದಾಳೆಂಬ ಯುವತಿಯ ಪ್ರಕರಣಕ್ಕೆ ಸಿನಿಮೀಯ ರೀತಿಯಲ್ಲಿ ಟ್ವಿಸ್ಟ್ ಸಿಕ್ಕಿದ್ದು, ಯುವತಿ ಪ್ರಿಯಕರನೊಂದಿಗೆ ಹುಬ್ಬಳ್ಳಿಯಲ್ಲಿ ಪತ್ತೆಯಾಗಿದ್ದಾಳೆ.

    ಈ ಘಟನೆ ಬಾಗಲಕೋಟೆ ತಾಲೂಕಿನ ಕಲಾದಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ದ್ವಿತೀಯ ಪಿಯುಸಿ ಓದುತ್ತಿದ್ದ ಗಾಯತ್ರಿ ಬಡಿಗೇರ್ (18) ತನ್ನ ಸ್ಕೂಟಿಯನ್ನ ಘಟಪ್ರಭಾ ನದಿ ಸೇತುವೆ ಬಳಿ ಬಿಟ್ಟು ನಾಪತ್ತೆಯಾಗುವ ಮೂಲಕ ತನ್ನ ಮನೆಯವರ ಹಾಗೂ ಪೊಲೀಸರ ದಿಕ್ಕು ತಪ್ಪಿಸಿದ್ದಾಳೆ. ತನಿಖೆ ಕೈಗೊಂಡ ಕಲಾದಗಿ ಪೊಲೀಸರು ಅವಳನ್ನ ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

    ಏನಿದು ಪ್ರಕರಣ?
    ಬೀಳಗಿ ತಾಲೂಕಿನ ಅನಗವಾಡಿ ಬಳಿ ಇರುವ ಘಟಪ್ರಭಾ ಸೇತುವೆ ಬಳಿ ನಿನ್ನೆ (ಶುಕ್ರವಾರ) ಮಧ್ಯಾಹ್ನ ಯುವತಿಯೊಬ್ಬಳು ನಂಬರ್ ಪ್ಲೇಟ್ ಇಲ್ಲದ ಸ್ಕೂಟಿಯಲ್ಲಿ ಬಂದಿದ್ದಳು. ನಂತರ ರಸ್ತೆ ಬದಿ ಸ್ಕೂಟಿ ನಿಲ್ಲಿಸಿ, ಘಟಪ್ರಭಾ ಸೇತುವೆ ಮೇಲಿಂದ ನದಿಗೆ ಹಾರಿದ್ದಾಳೆಂಬ ಸುದ್ದಿ ಹರಡಿತ್ತು. ಈ ಸುದ್ದಿ ಮಾಧ್ಯಮಗಳಲ್ಲಿ ವರದಿಯಾಗುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದರು. ಪೊಲೀಸರು ಅಲ್ಲಿರುವ ಸ್ಥಳೀಯರನ್ನ ವಿಚಾರಣೆ ಮಾಡಿ ಯುವತಿಯ ಮನೆಯವರಿಗೆ ಮಾಹಿತಿ ತಿಳಿಸಿದ್ದರು.

    ಯುವತಿ ಸ್ಕೂಟಿಯಲ್ಲಿ ಬಂದು ನದಿಗೆ ಹಾರಿದ್ದಾಳೆಂದು ಅಲ್ಲಿದ್ದ ಕೆಲವರು ಹೇಳಿದ್ದರು. ಇನ್ನೂ ಕೆಲವರು ಯುವತಿ ನಡೆದುಕೊಂಡು ಗದ್ದನಕೇರಿ ಕ್ರಾಸ್ ಕಡೆಗೆ ಹೋಗಿದ್ದಾಳೆ ಎಂದಿದ್ದರು. ಇದನ್ನರಿತ ಪೊಲೀಸರು ಏನೋ ವಿಷಯ ಅಡಗಿದೆ ಎಂದು ಸ್ಕೂಟಿಯನ್ನ ಪರಿಶೀಲನೆ ಮಾಡಿದಾಗ ಯುವತಿ ಡೆತ್‍ನೋಟ್ ಬರೆದಿಟ್ಟಿದ್ದು ಗೊತ್ತಾಯಿತು. ಅದರಲ್ಲಿ “ನನ್ನ ಸಾವಿಗೆ ನಾನೇ ಕಾರಣ, ಎಲ್ಲರೂ ಕ್ಷಮಿಸಿ ಬಿಡಿ, ನಿಮ್ಮ ಋಣ ಎಂದಿಗೂ ಮರೆಯೋದಿಲ್ಲ, ಬದುಕುವ ಆಸೆ ನನಗಿಲ್ಲ ನಿಮ್ಮ ಪ್ರೀತಿಯ ಗಾಯತ್ರಿ” ಎಂದು ಬರೆದಿದ್ದಳು.

    ಪ್ರಕರಣದ ಬೆನ್ನತ್ತಿದ ಪೊಲೀಸರು ಯುವತಿಯ ನಂಬರ್ ಟ್ರೇಸ್ ಮಾಡಿದಾಗ ಹುಬ್ಬಳ್ಳಿಯಲ್ಲಿರುವ ಮಾಹಿತಿ ತಿಳಿಯಿತು. ನಂತರ ಪೊಲೀಸರು ಹುಬ್ಬಳ್ಳಿಗೆ ತೆರಳಿ ರಾತ್ರೋರಾತ್ರಿ ಗಾಯತ್ರಿಯನ್ನ ಪತ್ತೆ ಹಚ್ಚಿದ್ದಾರೆ. ಹುಬ್ಬಳ್ಳಿಯಲ್ಲಿ ಯುವತಿಯ ಜೊತೆ ಪ್ರವೀಣ್ ಎಂಬಾತ ಇರುವುದನ್ನು ಕಂಡ ಪೊಲೀಸರು ಇದು ಲವ್ ಕೇಸ್ ಎಂದು ಖಚಿತ ಮಾಡಿಕೊಂಡಿದ್ದಾರೆ.

    ಮನೆಯವರು ಅವಳ ಪ್ರೀತಿಯನ್ನ ಒಪ್ಪದೇ ಇರುವುದಕ್ಕೆ ಸಿನಿಮೀಯ ರೀತಿಯ ಪ್ಲಾನ್ ಮಾಡಿದ ಗಾಯತ್ರಿ ಎಲ್ಲರ ದಾರಿ ತಪ್ಪಿಸಿದ್ದು ಬೆಳಕಿಗೆ ಬಂದಿದೆ. ಸದ್ಯ ಗಾಯತ್ರಿಯನ್ನ ಅವರ ಮನೆಯವರ ಜವಾಬ್ದಾರಿ ಮೇಲೆ ಮನೆಗೆ ಕಳುಹಿಸಿಕೊಡಲಾಗಿದೆ.

  • ತುಂಗಭದ್ರ ನದಿ ಪಾತ್ರವನ್ನು ಸ್ವಚ್ಛಗೊಳಿಸಲು ಪಣ ತೊಟ್ಟ ಹರಿಹರ ಯುವಜನತೆ

    ತುಂಗಭದ್ರ ನದಿ ಪಾತ್ರವನ್ನು ಸ್ವಚ್ಛಗೊಳಿಸಲು ಪಣ ತೊಟ್ಟ ಹರಿಹರ ಯುವಜನತೆ

    ದಾವಣಗೆರೆ: ವಾಟ್ಸಪ್ ಅಂದ್ರೆ ಯಾರಿಗೆ ಗೊತ್ತಿಲ್ಲ ಹೇಳಿ ಅನಾವಶ್ಯಕ ಚರ್ಚೆಗಳನ್ನು ಮಾಡಿಕೊಂಡು ಕಾಲ ಕಳೆಯುತ್ತಾರೆ. ಆದರೆ ದಾವಣಗೆರೆಯ ಹರಿಹರ ತಾಲೂಕಿನ ಯುವ ಸಮೂಹ ಈ ವಾಟ್ಸಪ್ ಗ್ರೂಪ್ ನಿಂದ ತುಂಗಭದ್ರ ನದಿಯನ್ನು ಸ್ವಚ್ಛಗೊಳಿಸುವ ಕೆಲಸಕ್ಕೆ ಪಣ ತೊಟ್ಟಿದ್ದಾರೆ.

    ತುಂಗಭದ್ರ ನದಿ ದಾವಣಗೆರೆಯ ಹಲವು ತಾಲೂಕುಗಳ ಜೀವನಾಡಿಯಾಗಿದ್ದು, ಹರಿಹರ ತಾಲೂಕಿನ ಪಕ್ಕದಲ್ಲೇ ತುಂಗಭದ್ರ ನದಿ ಹರಿಯುತ್ತಿದ್ದು, ನದಿಯ ಪಾತ್ರದಲ್ಲಿ ಸಾಕಷ್ಟು ಪ್ರವಾಸಿಗರು ಬಂದು ಎಂಜಾಯ್ ಮಾಡಿ ಹೋಗ್ತಾರೆ. ಆದರೆ ಅದರ ಸ್ವಚ್ಛತೆ ಬಗ್ಗೆ ಯಾರೂ ಕೂಡ ಕಾಳಜಿ ವಹಿಸುವುದಿಲ್ಲ.

    ಹರಿಹರದ ಪಟ್ಟಣದ ಯುವ ಸಮೂಹ ವಾಟ್ಸಪ್ ನಲ್ಲಿ ‘ನನ್ನ ಊರು ನನ್ನ ಹೊಣೆ’ ಎಂಬ ಗ್ರೂಪ್ ಕ್ರಿಯೇಟ್ ಮಾಡಿದ್ದಾರೆ. ಅದರ ಉದ್ದೇಶ ಕೇವಲ ಪರಿಸರ ಜಾಗೃತಿ ಹಾಗೂ ಪರಿಸರ ಸ್ವಚ್ಛತೆ ಎಂಬ ಧ್ಯೇಯ. ತಮ್ಮ ಸ್ನೇಹಿತರನ್ನು ಆ ಗ್ರೂಪ್‍ನಲ್ಲಿ ಸೇರ್ಪಡೆ ಮಾಡಿ ವಾರಕ್ಕೆ ಒಮ್ಮೆ ನದಿಯ ಪಾತ್ರದಲ್ಲಿ ಇರುವ ಕಸವನ್ನು ಸ್ವಚ್ಛ ಮಾಡುವುದಕ್ಕೆ ಪಣ ತೊಟ್ಟು ಕೆಲಸ ಮಾಡುತ್ತಿದ್ದಾರೆ.

    ಈಗ ಸಂಕ್ರಾಂತಿ ಹಬ್ಬ ಕೂಡ ಹತ್ತಿರ ಬಂದಿದೆ. ಹರಿಹರ ತುಂಗಭದ್ರಾ ನದಿ ಪಾತ್ರದಲ್ಲಿ ಪುಣ್ಯಸ್ನಾನ, ಪೂಜೆ ಮಾಡುವುದು ಇಲ್ಲಿನ ವಾಡಿಕೆ. ಪ್ರತಿ ವರ್ಷ ಮಕರ ಸಂಕ್ರಾಂತಿಗೆ ಪುಣ್ಯಸ್ನಾನ ಹಾಗೂ ಪೂಜೆಗೆಂದು ಸಾವಿರಾರು ಭಕ್ತರು ಹರಿಹರದ ತುಂಗಭದ್ರಾ ದಂಡೆಯಲ್ಲಿ ಸೇರುತ್ತಾರೆ. ಆ ಸಂದರ್ಭದಲ್ಲಿ ನದಿ ಪಾತ್ರ ಸ್ವಚ್ಛವಾಗಿರಬೇಕಂಬ ಸಂಕಲ್ಪದಿಂದ ನದಿ ಪಾತ್ರ ಸ್ವಚ್ಛತೆ ಆಂದೋಲನ ಆರಂಭಿಸಿದ್ದಾರೆ. ವಾರಕ್ಕೆ ಒಮ್ಮೆ ಬೆಳಗ್ಗೆ ನದಿಪಾತ್ರ ಸ್ವಚ್ಛತೆ ಗ್ರೂಪ್‍ನಲ್ಲಿಂದ ಸದಸ್ಯರು ಮಾತ್ರವಲ್ಲದೇ, ನಗರದ ಜನಪ್ರತಿನಿಧಿಗಳು, ನಾಗರಿಕರು, ಮಹಿಳೆಯರು, ಮಕ್ಕಳು ಕೈಜೋಡಿಸುವ ಕೆಲಸವನ್ನು ಮಾಡುತ್ತಿದ್ದಾರೆ.

  • ನದಿಗೆ ಹಾರಿದ ಮಹಿಳೆ- ಜೀವವನ್ನೇ ಪಣಕ್ಕಿಟ್ಟು ರಕ್ಷಿಸಿದ ಎಎಸ್‍ಐ

    ನದಿಗೆ ಹಾರಿದ ಮಹಿಳೆ- ಜೀವವನ್ನೇ ಪಣಕ್ಕಿಟ್ಟು ರಕ್ಷಿಸಿದ ಎಎಸ್‍ಐ

    ಹೈದರಾಬಾದ್: ಸೈಬರಾಬಾದ್ ಎನ್‍ಕೌಂಟರ್ ಮೂಲಕ ಹೈದರಾಬಾದ್ ಪೊಲೀಸರು ಭಾರೀ ಮೆಚ್ಚುಗೆಗೆ ಪಾತ್ರವಾಗಿದ್ದರು. ಅದೇ ರೀತಿ ಇದೀಗ ಎಎಸ್‍ಐ ಮಹಿಳೆಯ ಪ್ರಾಣ ಉಳಿಸಲು ತಮ್ಮ ಪ್ರಾಣವನ್ನೇ ಪಣಕ್ಕಿಡುವ ಮೂಲಕ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.

    ಅಸಿಸ್ಟೆಂಟ್ ಸಬ್ ಇನ್ಸ್ ಪೆಕ್ಟರ್ ಕೆ.ಮಾಣಿಕ್ಯಲ ರಾವ್ ಅವರು ನದಿಗೆ ಹಾರಿದ್ದ ಮಹಿಳೆಯನ್ನು ರಕ್ಷಿಸಿದ್ದಾರೆ. ಯುವತಿ ಹಾರಿದ ಸೇತುವೆಯಿಂದಲೇ ಜಿಗಿದು ರಕ್ಷಣಾ ಕಾರ್ಯ ನಡೆಸಿದ್ದಾರೆ. ಮಹಿಳೆಯು ಆತ್ಮಹತ್ಯೆ ಮಾಡಿಕೊಳ್ಳಲು ಸೇತುವೆ ಮೇಲಿಂದ ಜಿಗಿದಿದ್ದಳು. ಆಗ 58 ವರ್ಷದ ಎಎಸ್‍ಐ ನದಿಗೆ ಹಾರಿ ಮಹಿಳೆಯನ್ನು ಕಾಪಾಡಿದ್ದಾರೆ.

    ಕೆ.ಮಾಣಿಕ್ಯಲ ರಾವ್ ಅವರು ಆಂಧ್ರ ಪ್ರದೇಶದ ಕೃಷ್ಣಾ ಜಿಲ್ಲೆಯ ಅವನಿಗಡ್ಡ ಪೊಲೀಸ್ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ‘ನೋ ಆಕ್ಸಿಡೆಂಟ್ ಡೇ’ ನಿಮಿತ್ತ ಮಾಣಿಕ್ಯಲ ಅವರು ಸೇತುವೆ ಬಳಿ ಕಾರ್ಯನಿರ್ವಹಿಸುತ್ತಿದ್ದರು. ಆಗ ಮಹಿಳೆ ಸೇತುವೆ ಮೇಲೆ ನಿಂತಿದ್ದಳು. ಸ್ಥಳೀಯರು ಮಹಿಳೆ ಸೇತುವೆ ಮೇಲೆ ನಿಂತಿರುವುದನ್ನು ಕಂಡು ನದಿಗೆ ಜಿಗಿಯುವ ಶಂಕೆಯನ್ನು ವ್ಯಕ್ತಪಡಿಸಿದ್ದಾರೆ. ಆಗ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾಣಿಕ್ಯಲ ಹಾಗೂ ಇವರ ಸಹೋದ್ಯೋಗಿ ಗೋಪಿರಾಜು ಸಹ ಅನುಮಾನ ಪಟ್ಟಿದ್ದರು. ಹೀಗಾಗಿ ಸೇತುವೆ ಬಳಿಯೇ ನಿಂತಿದ್ದರು. ಆದರೆ ಪೊಲೀಸರು ಸ್ಥಳಕ್ಕಾಗಮಿಸುವ ಹೊತ್ತಿಗೆ ಮಹಿಳೆ ಆಗಲೇ ಸೇತುವೆ ಮೇಲಿಂದ ಜಿಗಿದೇ ಬಿಟ್ಟಿದ್ದಳು.

    ಇದನ್ನು ಮಾಣಿಕ್ಯಲ ಅವರು ಗಮನಿಸಿ, ತಕ್ಷಣ ನದಿಗೆ ಹಾರಿದ್ದಾರೆ. ಸುಮಾರು 500 ಮೀಟರ್ ಈಜಿ ನಂತರ ಮಹಿಳೆಯನ್ನು ರಕ್ಷಿಸಿದ್ದಾರೆ. ಆಗ ಗೋಪಿರಾಜು ಅವರು ಮೀನುಗಾರರ ಬಳಿ ತೆರಳಿದ್ದು, ಮೀನುಗಾರರು ಘಟನಾ ಸ್ಥಳಕ್ಕೆ ದೋಣಿಯನ್ನು ತಂದಿದ್ದಾರೆ.

    ಕೊನೆಗೂ ಮಾಣಿಕ್ಯಲ ಅವರು ಮಹಿಳೆಯನ್ನು ರಕ್ಷಿಸಿದ್ದು, ನಂತರ ಅವರನ್ನು ಅವನಿಗಡ್ಡ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ. ಮಹಿಳೆಯ ಸ್ಥಿತಿ ಸಹಜವಾಗಿದೆ. ಘಟನೆ ಕುರಿತು ಮಾಹಿತಿ ತಿಳಿದ ಎಸ್‍ಪಿ ರವೀಂದ್ರನಾಥ ಬಾಬು ಮಾಣಿಕ್ಯಲ ಅವರ ಸಾಹಸವನ್ನು ಹಾಡಿಹೊಗಳಿದ್ದಾರೆ. ಅಲ್ಲದೆ ಮಹಿಳೆ ಯಾಕೆ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದಳು ಎಂಬುದರ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

  • 14 ಅಡಿ ಉದ್ದದ ಮೊಸಳೆ ಬಾಯಿಂದ ತಂಗಿಯನ್ನು ಕಾಪಾಡಿದ ಅಣ್ಣ

    14 ಅಡಿ ಉದ್ದದ ಮೊಸಳೆ ಬಾಯಿಂದ ತಂಗಿಯನ್ನು ಕಾಪಾಡಿದ ಅಣ್ಣ

    ಮನಿಲಾ: ತನ್ನ ತಂಗಿಯನ್ನು ತಿನ್ನಲು ಬಂದ 14 ಅಡಿ ಮೊಸಳೆಯಿಂದ ಅಣ್ಣನೋರ್ವ ತಂಗಿಯನ್ನು ಕಾಪಾಡಿರುವ ಘಟನೆ ಫಿಲಿಪೈನ್ಸ್ ನ ಪಲವಾನ್‍ನಲ್ಲಿ ನಡೆದಿದೆ.

    ಧೈರ್ಯಶಾಲಿಯಾದ 15 ವರ್ಷದ ಹಾಶಿಮ್ ತನ್ನ 12 ವರ್ಷದ ತಂಗಿ ಹೈನಾ ಲಿಸಾ ಜೋಸ್ ಹಬಿಯನ್ನು ಮೊಸಳೆಯ ಬಾಯಿಂದ ಕಾಪಾಡಿದ್ದಾನೆ. ಹಾಶಿಮ್ ಮತ್ತು ಹೈನಾ ಮನೆಗೆ ಹೋಗುತ್ತಿರುವಾಗ ಈ ಘಟನೆ ನಡೆದಿದ್ದು, ಮನೆಗೆ ತೆರಳಲು ಬಿದಿರಿನ ಪಟ್ಟಿಯ ಮೇಲೆ ನದಿ ದಾಟುತ್ತಿದ್ದಾಗ ಮೊಸಳೆ ಹೈನಾಳ ಮೇಲೆ ದಾಳಿ ಮಾಡಿದೆ.

    ಹೈನಾ ಮತ್ತು ಹಾಶಿಮ್ ಇಬ್ಬರು ನದಿ ದಾಟುವಾಗ, ಹಾಶಿಮ್ ಬೇಗ ಮುಂದೆ ಹೋಗಿದ್ದಾನೆ. ಹೈನಾ ನಿಧಾನವಾಗಿ ಬರುತ್ತಿದ್ದ ವೇಳೆ ದಡ ಸಮೀಪಿಸಿದ ಹೈನಾಳ ಬಲಗಾಲನ್ನು ಮೊಸಳೆ ಜಿಗಿದು ಹಿಡಿದುಕೊಂಡಿದೆ. ಈ ವೇಳೆ ಕಿರುಚುತ್ತಿದ್ದ ತಂಗಿಯ ನೆರವಿಗೆ ಬಂದ ಅಣ್ಣ ಹಾಶಿಮ್ ಕಲ್ಲಿನಿಂದ ಮೊಸಳೆಯ ಬಾಯಿಗೆ ಹೊಡೆದು ನಂತರ ತನ್ನ ತಂಗಿಯನ್ನು ತನ್ನ ಕಡೆ ಎಳೆದುಕೊಂಡು ಮೊಸಳೆಯಿಂದ ಕಾಪಾಡಿದ್ದಾನೆ.

    ಈ ವಿಚಾರದ ಬಗ್ಗೆ ಮಾತನಾಡಿರುವ ತಂಗಿ ಹೈನಾ, ಮೊಸಳೆ ನನಗಿಂತ ದೊಡ್ಡದಾಗಿತ್ತು. ನನಗೆ ಅದನ್ನು ನೋಡಿ ಭಯವಾಗಿತ್ತು. ಆದ್ದರಿಂದ ನಾನು ಭಯದಿಂದ ಅಳುತ್ತಿದ್ದೆ. ಅದು ನನ್ನ ಕಾಲನ್ನು ಹಿಡಿದುಕೊಂಡಿತ್ತು. ಆಗ ನನ್ನ ಸಹಾಯಕ್ಕೆ ಹಾಶಿಮ್ ಬಂದ ಅದರ ಬಾಯಿಗೆ ಕಲ್ಲಿನಿಂದ ಹೊಡೆದು ನನ್ನನ್ನು ಕಾಪಾಡಿದ ಎಂದು ಹೇಳಿದ್ದಾಳೆ.

    ಈ ಘಟನೆಯಲ್ಲಿ ಹೈನಾಳ ಬಲಗಾಲಿಗೆ ಗಂಭೀರವಾದ ಗಾಯವಾಗಿದ್ದು, ತಕ್ಷಣ ಆಕೆಯನ್ನು ಹತ್ತಿರದ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲಾಗಿದೆ. ಈ ವಿಚಾರವಾಗಿ ಮಾತನಾಡಿರುವ ಲೆಫ್ಟಿನೆಂಟ್ ಕರ್ನಲ್ ಸಾಕ್ರಟೀಸ್ ಫಾಲ್ಟಾಡೊ, ಈ ಭಾಗದ ನಿವಾಸಿಗಳಿಗೆ ಮೊಸಳೆಯಿಂದ ಇತ್ತೀಚೆಗೆ ಬಹಳ ತೊಂದರೆಯಾಗುತ್ತಿದೆ. ಮೊಸಳೆಗಳನ್ನು ಹಿಡಿದು ಸ್ಥಳಾಂತರ ಮಾಡಲಾಗುವುದು. ಅವರ ಅಣ್ಣನ ಧೈರ್ಯದಿಂದ ಹುಡುಗಿ ಬದುಕಿ ಬಂದಿದ್ದಾಳೆ ಎಂದು ಹೇಳಿದ್ದಾರೆ.

  • ವಿಚಿತ್ರ ಶಬ್ದಕ್ಕೆ ಬೆಚ್ಚಿ ಬಿದ್ದ ಜನ – ಮತ್ತೆ ಜಲಸ್ಫೋಟದ ಆತಂಕ

    ವಿಚಿತ್ರ ಶಬ್ದಕ್ಕೆ ಬೆಚ್ಚಿ ಬಿದ್ದ ಜನ – ಮತ್ತೆ ಜಲಸ್ಫೋಟದ ಆತಂಕ

    ಮಡಿಕೇರಿ: ಕೊಡಗು ಜಿಲ್ಲೆಯ ಪೇರೂರಿನ ಇಗ್ಗುತ್ತಪ್ಪ ಬೆಟ್ಟದಲ್ಲಿ ನಿಗೂಢ ಶಬ್ದ ಕೇಳಿ ಬರುತ್ತಿದೆ. ಭೂಮಿಯೊಳಗಿನಿಂದ ನದಿಯಲ್ಲಿ ನೀರು ಹರಿಯುವಂತಹ ಶಬ್ದ ಕೇಳುತ್ತಿದ್ದು, ಈ ಶಬ್ದಕ್ಕೆ ಜನರು ಬೆಚ್ಚಿಬಿದ್ದಿದ್ದಾರೆ.

    ಮಡಿಕೇರಿ ತಾಲೂಕಿನ ಪೇರೂರಿನಲ್ಲಿರುವ ಕೊಡಗಿನ ಕುಲದೇವರು ಇಗ್ಗುತ್ತಪ್ಪ ಬೆಟ್ಟದಲ್ಲಿ ಈ ಶಬ್ದ ಕೇಳಿ ಬರುತ್ತಿದೆ. ಭಾರೀ ಪ್ರಮಾಣದ ಈ ಬೆಟ್ಟದ ತಪ್ಪಲಿನಲ್ಲಿ 20 ಕುಟುಂಬಗಳಿದ್ದು, ಆಕಸ್ಮಾತ್ ಜಲಸ್ಫೋಟವಾಗಿ ಬೆಟ್ಟ ಕುಸಿದಲ್ಲಿ ಭಾರೀ ಅನಾಹುತವೇ ನಡೆಯಲಿದೆ. ಹೀಗಾಗಿ ಏನಾಗುವುದೋ ಎಂಬ ಆತಂಕ ಜನರಲ್ಲಿ ಮನೆ ಮಾಡಿದೆ.

    ಕಳೆದ ಹಲವು ದಿನಗಳಿಂದಲೂ ಈ ವಿಚಿತ್ರ ಶಬ್ದ ಕೇಳಿ ಬರುತ್ತಿದ್ದು, ಮೂರು ದಿನಗಳಿಂದ ಆ ಶಬ್ದ ಮತ್ತಷ್ಟು ಜೋರಾಗಿದೆ. ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಭಾಗಮಂಡಲ ಸಮೀಪದ ಅಯ್ಯಂಗೇರಿಯಲ್ಲೂ ಒಂದು ವಾರದ ಹಿಂದೆಯಷ್ಟೇ ನಿಗೂಢ ಶಬ್ದ ಕೇಳಿ ಬಂದಿತ್ತು.

    ಆಗಸ್ಟ್ ತಿಂಗಳಲ್ಲಿ ಮಳೆ ಸುರಿದಾಗ ಈ ಇಗ್ಗುತ್ತಪ್ಪ ದೇವಾಲಯದ ಸಮೀಪದಲ್ಲಿ ಬೆಟ್ಟ ಕುಸಿದಿತ್ತು. ಇದೀಗ ಭೂಮಿಯೊಳಗೆ ನದಿ ಹರಿಯುತ್ತಿರುವ ಶಬ್ದ ಕೇಳುತ್ತಿರುವುದರಿಂದ ಅನಾಹುತ ಸಂಭವಿಸುವುದಾ ಎನ್ನುವ ತೀವ್ರ ಆತಂಕ ಜನರಲ್ಲಿ ಕಾಡತೊಡಗಿದೆ.

    2018ರಲ್ಲೂ ಮಡಿಕೇರಿ ಸುತ್ತಮುತ್ತಲಿನ ವ್ಯಾಪ್ತಿಯಲ್ಲಿ ಆದಂತಹ ಭೂಕುಸಿತಕ್ಕೂ ಮೊದಲು ಇದೇ ರೀತಿಯ ಶಬ್ದ ಕೇಳಿ ಬಂದಿತ್ತು. ಬಳಿಕ 7 ಗ್ರಾಮ ಪಂಚಾಯ್ತಿ ವ್ಯಾಪ್ತಿಯ 37 ಗ್ರಾಮಗಳಲ್ಲಿ ಜಲಸ್ಫೋಟ ಸಂಭವಿಸಿತ್ತು. ಕಳೆದ ರಾತ್ರಿಯೇ ಅಧಿಕಾರಿಗಳಿಗೆ ಮಾಹಿತಿ ನೀಡಿದ್ರೂ ಸ್ಥಳಕ್ಕೆ ಭೇಟಿ ನೀಡದ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.