Tag: ನದಿ

  • ಸುತ್ತಾಡ್ಕೊಂಡು ಬರುತ್ತೇವೆಂದು ಹೋಗಿದ್ದ ನವದಂಪತಿ ಶವವಾಗಿ ಪತ್ತೆ – 2 ತಿಂಗಳ ಹಿಂದೆಯಷ್ಟೇ ಮದುವೆ

    ಸುತ್ತಾಡ್ಕೊಂಡು ಬರುತ್ತೇವೆಂದು ಹೋಗಿದ್ದ ನವದಂಪತಿ ಶವವಾಗಿ ಪತ್ತೆ – 2 ತಿಂಗಳ ಹಿಂದೆಯಷ್ಟೇ ಮದುವೆ

    ಹಾಸನ: ಸುತ್ತಾಡಿಕೊಂಡು ಬರುತ್ತೇವೆ ಎಂದು ಹೊರಟಿದ್ದ ನವದಂಪತಿಯ ಶವ ಹೇಮಾವತಿ ನದಿಯಲ್ಲಿ ಪತ್ತೆಯಾಗಿರುವ ಮನಕಲಕುವ ಘಟನೆ ಜಿಲ್ಲೆ ಸಕಲೇಶಪುರ ತಾಲೂಕಿನ ಹೆನ್ನಲಿ ಗ್ರಾಮದಲ್ಲಿ ನಡೆದಿದೆ.

    ಬೇಲೂರು ತಾಲೂಕು ಮುರಹಳ್ಳಿ ಗ್ರಾಮದ ಅರ್ಥೇಶ್ (27) ಹಾಗೂ ಹೆನ್ನಲಿ ಗ್ರಾಮದ ಕೃತಿಕಾ (23) ಮೃತ ದಂಪತಿ. ಕಳೆದ ಎರಡು ತಿಂಗಳ ಹಿಂದೆಯಷ್ಟೆ ಇವರಿಬ್ಬರ ಮದುವೆಯಾಗಿತ್ತು. ಅರ್ಥೇಶ್ ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ. ಲಾಕ್‍ಡೌನ್ ಹಿನ್ನೆಲೆಯಲ್ಲಿ ತನ್ನ ಸ್ವಗ್ರಾಮ ಬೇಲೂರು ತಾಲೂಕಿನ ಮುರಹಳ್ಳಿ ಗ್ರಾಮಕ್ಕೆ ಕಳೆದ ಕೆಲವು ದಿನಗಳ ಹಿಂದಷ್ಟೆ ಬಂದಿದ್ದ.

    ಬುಧವಾರ ಹೆನ್ನಲಿ ಗ್ರಾಮದಲ್ಲಿರುವ ಪತ್ನಿ ಕೃತಿಕಾ ಮನೆಗೆ ಬಂದಿದ್ದನು. ಗುರುವಾರ ಸಂಜೆ ದಂಪತಿ ತಿರುಗಾಡಿಕೊಂಡು ಬರುತ್ತೇವೆ ಎಂದು ಬೈಕ್‍ನಲ್ಲಿ ಹೊರ ಹೋಗಿದ್ದಾರೆ. ಆದರೆ ತುಂಬಾ ಸಮಯವಾದರು ಮನೆಗೆ ವಾಪಸ್ ಆಗದ ಕಾರಣ ಮನೆಯವರು ಫೋನ್ ಮಾಡಿದ್ದಾರೆ. ಆದರೆ ಇಬ್ಬರ ಮೊಬೈಲ್ ಸ್ಬಿಚ್ ಆಫ್ ಆಗಿತ್ತು. ಕೊನೆಗೆ ಮನೆಯವರು ಅವರನ್ನು ಹುಡುಕಲು ಶುರುಮಾಡಿದ್ದರು.

    ಈ ಸಂರ್ದಭದಲ್ಲಿ ಹೇಮಾವತಿ ನದಿ ಸಮೀಪದ ರಸ್ತೆಯಲ್ಲಿ ಬೈಕ್ ಕಾಣಿಸಿದೆ. ಇಬ್ಬರನ್ನು ಹುಡುಕುತ್ತಾ ಹೊರಟಾಗ ಮೀನುಗಾರರು ಹಾಕಿದ್ದ ಬಲೆಗೆ ಕೃತಿಕಾ ಶವ ಸಿಕ್ಕಿದೆ. ನಂತರ ಅರ್ಥೇಶ್ ಮೃತದೇಹ ಕೂಡ ಸಿಕ್ಕಿದೆ. ನವದಂಪತಿ ಸಾವಿನ ಬಗ್ಗೆ ಹಲವು ಅನುಮಾನಗಳು ಹುಟ್ಟಿಕೊಂಡಿದ್ದು, ನದಿಯ ಬಳಿ ಸೆಲ್ಫೀ ತೆಗೆಯಲು ಹೋದಾಗ ಕಾಲು ಜಾರಿ ಬಿದ್ದು ಸಾವನ್ನಪ್ಪಿರಬಹುದು ಎನ್ನಲಾಗಿದೆ.

    ಘಟನೆ ಬಗ್ಗೆ ಮಾಹಿತಿ ತಿಳಿದು ಸಕಲೇಶಪುರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. ಸ್ಥಳದಲ್ಲಿ ಸಂಬಂಧಿಕರ ಆಕ್ರಂದನ ಮುಗಿಲುಮುಟ್ಟಿದ್ದು, ಈ ಕುರಿತು ಸಕಲೇಶಪುರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ವಿಷ ಹಾಕಿ ಮೀನುಗಳ ಮಾರಣ ಹೋಮ- ಇಬ್ಬರ ಬಂಧನ

    ವಿಷ ಹಾಕಿ ಮೀನುಗಳ ಮಾರಣ ಹೋಮ- ಇಬ್ಬರ ಬಂಧನ

    ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯ ದಾಡೇಲು ಎಂಬಲ್ಲಿ ಫಲ್ಗುಣಿ ನದಿಗೆ ವಿಷ ಹಾಕಿ ಸಾವಿರಾರು ಮೀನುಗಳ ಮಾರಣ ಹೋಮ ಮಾಡಿದ ಇಬ್ಬರನ್ನು ಬೆಳ್ತಂಗಡಿ ಪೊಲೀಸರು ಬಂಧಿಸಿದ್ದಾರೆ.

    ಮೂಡುಕೋಡಿಯ ಇರ್ಷಾದ್ ಹಾಗೂ ಮಹಮ್ಮದ್ ಹನೀಫ್ ಬಂಧಿತ ಆರೋಪಿಗಳು. ಕಿಡಿಗೇಡಿಗಳು ನದಿಗೆ ವಿಷ ಹಾಕಿದ ಪರಿಣಾಮ ಬೆಳ್ತಂಗಡಿಯ ವೇಣೂರು ಸಮೀಪದ ಮೂಡುಕೋಡಿ ಗ್ರಾಮದ ನಡ್ತಿಕಲ್ಲಿನ ದಾಡೇಲು ನದಿಯ ದಡದಲ್ಲಿ ರಾಶಿ ರಾಶಿ ಮೀನುಗಳು ಸತ್ತು ಬಿದ್ದು, ದುರ್ನಾತದಿಂದ ಆ ಪರಿಸರಕ್ಕೆ ಹೋಗದಂತಹ ಸ್ಥಿತಿ ನಿರ್ಮಾಣವಾಗಿತ್ತು.

    ಪ್ರಾಣಿ ಪಕ್ಷಿಗಳು ಈ ವಿಷ ನೀರನ್ನೇ ಕುಡಿಯುತ್ತಿದ್ದು, ಅವುಗಳು ಕೂಡ ಸಾಯುವ ಸ್ಥಿತಿ ನಿರ್ಮಾಣವಾಗಿತ್ತು. ಅದೇ ರೀತಿ ಕೆಲವು ಹಕ್ಕಿಗಳು ಸತ್ತು ಬಿದ್ದಿರುವ ವಿಷಯುಕ್ತ ಮೀನುಗಳನ್ನು ತಿನ್ನುತ್ತಿದವು. ಈ ಕೆಲಸ ಯಾರೇ ಮಾಡಿರಲಿ ಅವರಿಗೆ ತಕ್ಕ ಶಿಕ್ಷೆಯಾಗಬೇಕು ಎಂದು ಸ್ಥಳೀಯರು ಠಾಣೆಗೆ ದೂರು ನೀಡಿದ್ದರು. ಸರಿಯಾದ ಶಿಕ್ಷೆ ಆಗದೇ ಇದ್ದಲ್ಲಿ ಹೋರಾಟದ ಎಚ್ಚರಿಕೆಯನ್ನು ಸ್ಥಳೀಯರು ನೀಡಿದ್ದರು.

    ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಬೆಳ್ತಂಗಡಿ ಪೊಲೀಸರು ತನಿಖೆ ಆರಂಭಿಸಿದ್ದರು. ಈ ವೇಳೆ ಇರ್ಷಾದ್ ಹಾಗೂ ಮಹಮ್ಮದ್ ಮೇಲೆ ಶಂಕೆ ವ್ಯಕ್ತಪಡಿಸಿ ವಿಚಾರಣೆ ನಡೆಸಿದಾಗ ಕೃತ್ಯ ಬೆಳಕಿಗೆ ಬಂದಿದೆ.

  • ಶೆಲ್ ಫಿಶ್ ಬೇಟೆ ಜೋರು – ನದಿಗೆ ಧುಮುಕಿದ ಮತ್ಸ್ಯಪ್ರಿಯರು

    ಶೆಲ್ ಫಿಶ್ ಬೇಟೆ ಜೋರು – ನದಿಗೆ ಧುಮುಕಿದ ಮತ್ಸ್ಯಪ್ರಿಯರು

    ಉಡುಪಿ: ನಾಡದೋಣಿ ಮೀನುಗಾರಿಕೆಗೆ ಸರ್ಕಾರ ಅವಕಾಶ ನೀಡಿದ್ದೇ ತಡ ಕರಾವಳಿಯ ಮೀನುಗಾರರು ನದಿಗೆ ಧುಮುಕಿದ್ದಾರೆ. ಸಮುದ್ರ ಸೇರುವ ಮುನ್ನ ಚಿಪ್ಪು ಮೀನು ಹಿಡಿಯುತ್ತಿದ್ದಾರೆ.

    ಕರಾವಳಿ ಜನ ಕಳೆದ 15 ದಿನದಿಂದ ಮೀನು ಸಿಗದೆ ಕಂಗಾಲಾಗಿದ್ದಾರೆ. ಪ್ರತಿದಿನ ಮೀನು ತಿನ್ನುತ್ತಿದ್ದವರಿಗೆ ತರಕಾರಿ ತಿನ್ನೋದು ಅಂದರೆ ಬಹಳ ಕಷ್ಟ. ಮಲ್ಪೆ ಮೀನುಗಾರಿಕಾ ಬಂದರಲ್ಲಿ ಸಾವಿರಾರು ಜನ ಜಮಾಯಿಸುವುದರಿಂದ ಆಳಸಮುದ್ರ ಮತ್ತು ಪರ್ಸಿನ್ ಮೀನುಗಾರಿಕೆಯನ್ನು ಜಿಲ್ಲಾಡಳಿತ ತಡೆ ಹಿಡಿದಿತ್ತು. ಆದರೆ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಅಸಾಧ್ಯವಾದಾಗ ಡಿಸಿ ಖಡಕ್ ಕ್ರಮ ಕೈಗೊಂಡಿದ್ದರು. ಈ ಆದೇಶದಿಂದ ಮತ್ಸ್ಯಪ್ರಿಯರು ಒಣ ಮೀನಿನ ಕಡೆ ಮುಖ ಮಾಡಿದ್ದರು.

    ಮೀನುಗಾರಿಕೆಗೆ ಸರ್ಕಾರದ ಆದೇಶದ ನಂತರ ಇದೀಗ ಮಹಿಳೆಯರು ಮಕ್ಕಳೂ ನದಿಗಿಳಿದು ಮರುವಾಯಿ ಹೆಕ್ಕುತ್ತಿದ್ದಾರೆ. ಸಿಕ್ಕಾಪಟ್ಟೆ ಟೇಸ್ಟಿಯಾಗಿರುವ ಈ ಶೆಲ್ ಫಿಶ್‍ಗೆ ಈಗ ಭಾರೀ ಡಿಮ್ಯಾಂಡ್ ಇದೆ. ಲಾಕ್‍ಡೌನ್ ಸಂದರ್ಭದಲ್ಲಿ ಇದೀಗ ಇದು ಟೈಂ ಪಾಸ್ ಹಾಬಿಯಾಗಿ ಮಾರ್ಪಾಡಾಗಿದೆ. ಬೆಳಗ್ಗೆ ಸಂಜೆ ಜನ ನದಿ, ತೊರೆಗೆ ಇಳಿದು ಮರುವಾಯಿ ಬಾಚಿಕೊಳ್ಳುತ್ತಿದ್ದಾರೆ.

    ಮರುವಾಯಿ ಹೆಕ್ಕುತ್ತಿದ್ದ ವಾಮನ್ ಮಾತನಾಡಿ, ದಿನದ ಒಂದು ಊಟಕ್ಕಾದರೂ ಮೀನು ಬೇಕೇಬೇಕು. ಫ್ರೆಶ್ ಮೀನು ಮಾರ್ಕೆಟ್‍ಗೆ ಬರುತ್ತಿಲ್ಲ. ಹಾಗಾಗಿ ಗೆಳೆಯರೆಲ್ಲ ಉದ್ಯಾವರ ನದಿಗೆ ಇಳಿದಿದ್ದೇವೆ. ಚಿಪ್ಪು ಹಿಡಿಯುತ್ತಿದ್ದೇವೆ ಎಂದು ಹೇಳಿದರು. ಪ್ರವೀಣ್ ಮತ್ತು ಗಣೇಶ್ ಮಾತಮಾಡಿ, ಚಿಪ್ಪಿನೊಳಗೆ ಇರುವ ಸಣ್ಣ ಪ್ರಮಾಣದ ಮಾಂಸವನ್ನು ಟೇಸ್ಟ್ ಮಾಡಿದವರಿಗೆ ಗೊತ್ತು. ಬೇರೆ ಸಮಯದಲ್ಲಿ ಇದಕ್ಕೆ ಅಷ್ಟೊಂದು ಡಿಮ್ಯಾಂಡಿಲ್ಲ. ಈಗ ಬಹಳ ಬೇಡಿಕೆ ಇದೆ ಎಂದರು.

    ಮರುವಾಯಿ ಸಾರು ಮತ್ತು ಡ್ರೈ ಸುಕ್ಕದ ಜೊತೆ ನೀರ್ ದೋಸೆ ಸೂಪರ್ ಕಾಂಬಿನೇಶನ್. ಕುಚ್ಚಿಲು ಅನ್ನದ ಜೊತೆಗೂ ಬಹಳ ಟೇಸ್ಟ್ ಆಗುತ್ತದೆ. ಕರಾವಳಿ ಜಿಲ್ಲೆ ಉಡುಪಿಯ ನದಿಯಲ್ಲಿ ಸಿಗುವ ಮರುವಾಯಿ ಮಾರುಕಟ್ಟೆ ಸೇರದೆ ಸೀದಾ ಅಡುಗೆ ಮನೆ ಸೇರುತ್ತಿದೆ. ನಾಡದೋಣಿ ಸಮುದ್ರಕ್ಕೆ ಇಳಿದ ಮೇಲೆ ಜನಕ್ಕೆ ತಾಜಾ ಮೀನುಗಳು ಸಿಗಲಿವೆ.

  • ಪತ್ನಿ, ಮಗು ನೋಡಿ ವಾಪಸ್ ಬರೋವಾಗ ಲಾಕ್‍ಡೌನ್ ಅಡ್ಡಿ – ಹುಚ್ಚು ಸಾಹಸಕ್ಕೆ ಕೈ ಹಾಕಿ ಜೀವಬಿಟ್ಟ ಕಂಡಕ್ಟರ್

    ಪತ್ನಿ, ಮಗು ನೋಡಿ ವಾಪಸ್ ಬರೋವಾಗ ಲಾಕ್‍ಡೌನ್ ಅಡ್ಡಿ – ಹುಚ್ಚು ಸಾಹಸಕ್ಕೆ ಕೈ ಹಾಕಿ ಜೀವಬಿಟ್ಟ ಕಂಡಕ್ಟರ್

    ಬಾಗಲಕೋಟೆ: ಪತ್ನಿ ಮತ್ತು ಮಗು ನೋಡಿಕೊಂಡು ವಾಪಸ್ ಬರುವಾಗ ಕೊರೊನಾ ಲಾಕ್‍ಡೌನ್ ಅಡ್ಡಿಯಾದ ಪರಿಣಾಮ, ಕೆಎಸ್ಆರ್‌ಟಿಸಿ ಕಂಡಕ್ಟರ್ ಓರ್ವ ಹುಚ್ಚು ಸಾಹಸಕ್ಕೆ ಕೈ ಹಾಕಿ ಮೃತಪಟ್ಟಿರುವ ಘಟನೆ ಬಾಗಲಕೋಟೆ ಜಿಲ್ಲೆಯಲ್ಲಿ ನಡೆದಿದೆ.

    ಹುನಗುಂದದ ನಿವಾಸಿ ಮಲ್ಲಪ್ಪ ಬೊಮ್ಮಣಗಿ (45) ಮೃತ ಕೆಎಸ್ಆರ್‌ಟಿಸಿ ಕಂಡಕ್ಟರ್. ಈ ಘಟನೆ ಸೋಮವಾರ ರಾತ್ರಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಮಲ್ಲಪ್ಪ ತನ್ನ ಪತ್ನಿ ಮತ್ತು ಮಗುವನ್ನು ನೋಡಲು ಗ್ರಾಮಕ್ಕೆ ತೆರಳಿದ್ದನು. ಬಳಿಕ ಇಬ್ಬರನ್ನು ನೋಡಿಕೊಂಡು ವಾಪಸ್ ಬರುತ್ತಿದ್ದನು. ಈ ವೇಳೆ ಚೆಕ್‍ಪೋಸ್ಟ್ ಬಳಿ ಹೋದರೆ ಪೊಲೀಸರು ಹೋಗಲು ಬಿಡುವುದಿಲ್ಲ ಎಂದುಕೊಂಡು ತಂಗಡಗಿ ಬಳಿಯ ನದಿಯಲ್ಲಿ ಈಜಿ ದಡ ಸೇರಲು ಯತ್ನಿಸಿದ್ದಾನೆ.

    ಅದರಂತೆಯೇ ಮಲ್ಲಪ್ಪ ಕೃಷ್ಣಾ ನದಿಯಲ್ಲಿ ಈಜಲು ಮುಂದಾಗಿದ್ದಾನೆ. ಆದರೆ ನದಿಯಲ್ಲಿ ಈಜಲಾಗದೇ ಕಂಡಕ್ಟರ್ ಮಲ್ಲಪ್ಪ ಮೃತಪಟ್ಟಿದ್ದಾನೆ. ಮಾಹಿತಿ ತಿಳಿದು ಸ್ಥಳಕ್ಕೆ ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಬಂದು ಪರಿಶೀಲನೆ ನಡೆಸಿ, ಮೃತದೇಹವನ್ನು ನದಿಯಿಂದ ಮೇಲಕ್ಕೆತ್ತಿದ್ದಾರೆ.

    ಮೃತ ಮಲ್ಲಪ್ಪ ಚೆಕ್‍ಪೋಸ್ಟ್ ಬಳಿ ಹೋಗಿ ಪೊಲೀಸರು ಹತ್ತಿರ ಮನವಿ ಮಾಡಿಕೊಂಡಿಲ್ಲ. ಆದರೆ ಪೊಲೀಸರಿಗೆ ಹೆದರಿ ನದಿಯಿಂದ ಈಜಿ ತಡ ಸೇರುವ ಯತ್ನ ಮಾಡಿ ಮೃತಪಟ್ಟಿದ್ದಾನೆ.

  • ಭಾರತ್ ಲಾಕ್‍ಡೌನ್ – ನಿರ್ಮಲಳಾದ ಯಮುನಾ

    ಭಾರತ್ ಲಾಕ್‍ಡೌನ್ – ನಿರ್ಮಲಳಾದ ಯಮುನಾ

    ನವದೆಹಲಿ: ಲಾಕ್‍ಡೌನ್ ಹಿನ್ನೆಲೆಯಲ್ಲಿ ದೆಹಲಿ ಮತ್ತು ಎನ್‍ಸಿಆರ್ ಪ್ರದೇಶ ಸಂಪೂರ್ಣ ಸ್ತಬ್ಧವಾಗಿದ್ದು, ಈಗ ಪ್ರಕೃತಿಯಲ್ಲಿ ಚೇತರಿಕೆ ಕಾಣಿಸಿಕೊಳ್ಳುತ್ತಿದೆ. ವಾಹನಗಳ ದಟ್ಟಣೆ ಇಳಿಮುಖವಾದ ಬಳಿಕ ದೆಹಲಿಯಲ್ಲಿ ವಾಯು ಮಾಲಿನ್ಯದ ಮಟ್ಟ ಇಳಿಕೆಯಾಗಿ ಶುದ್ಧ ಗಾಳಿಯಾಗಿ ಬದಲಾಗಿತ್ತು.

    ಈಗ ದೆಹಲಿಯ ಹೊರ ವಲಯದಲ್ಲಿರುವ ಕಾರ್ಖಾನೆಗಳು, ಕೈಗಾರಿಕೆಗಳು ಬಂದ್ ಆಗಿರುವ ಕಾರಣ ಯಮುನಾ ನದಿಯೂ ಶುದ್ಧವಾಗುತ್ತಿದೆ. ನದಿಯ ಮಾಲಿನ್ಯ ಪ್ರಮಾಣ ನಿಯಂತ್ರಣವಾಗಿದೆ ಎಂದು ಮಾಲಿನ್ಯ ನಿಯಂತ್ರಣ ಮಂಡಳಿ ಹೇಳಿದೆ.

    ಕೈಗಾರಿಕೆಗಳಿಂದ ನದಿಗೆ ಬಿಡಲಾಗುತ್ತಿದ್ದ ತಾಜ್ಯದ ಪ್ರಮಾಣ ಇಳಿಕೆಯಾದ ಕಾರಣ ನದಿಯಲ್ಲಿನ ನೀರು ಶುದ್ಧವಾಗಿದೆ. ನೀರಿನಲ್ಲಿನಲ್ಲಿದ್ದ ವಿಷಕಾರಿ ಅಂಶಗಳ ಪ್ರಮಾಣ ಕಡಿಮೆಯಾಗಿದೆ ಎಂದು ಜಲ ಮಂಡಳಿ ಉಪಾಧ್ಯಕ್ಷ ರಾಘವ್ ಚಾಧ್ ತಿಳಿಸಿದ್ದಾರೆ.

    ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಲಾಕ್‍ಡೌನ್‍ಗೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದರು. ಆದ್ದರಿಂದ ದೆಹಲಿ ಸಂಪೂರ್ಣ ಬಂದ್ ಆಗಿದ್ದು, ನದಿ ನೀರು ಮತ್ತು ಗಾಳಿಯ ಗುಣಮಟ್ಟದಲ್ಲಿ ಮಾಲಿನ್ಯ ಇಳಿಕೆಯಾಗಿದೆ. ಆದರೆ ಈ ಬೆಳವಣಿಗೆ ತಾತ್ಕಾಲಿಕ, ಯಾಕೆಂದರೆ ಲಾಕ್‍ಡೌನ್ ತೆರವುಗೊಳಿಸದ ಬಳಿಕ ಮತ್ತೆ ಹಳೆ ಪರಿಸ್ಥಿತಿ ಮುಂದುವರಿಯಲಿದೆ ಎಂದು ಸ್ಥಳೀಯರು ಕಳವಳ ವ್ಯಕ್ತಪಡಿಸಿದ್ದಾರೆ.

    ಆಮ್ ಅದ್ಮಿ ಯಮುನಾ ನದಿ ಸ್ವಚ್ಛಗೊಳಿಸುವ ಭರವಸೆ ನೀಡಿದ್ದರು. ಈಗ ಅದನ್ನು ಮುಂದುವರಿಸಲು ಸೂಕ್ತ ಎಂದು ಅಭಿಪ್ರಾಯಪಟ್ಟಿದ್ದಾರೆ.

  • ಸ್ನಾನಕ್ಕೆಂದು ನದಿಗೆ ಇಳಿದ ಯುವಕ ನೀರಲ್ಲಿ ಮುಳುಗಿ ಸಾವು

    ಸ್ನಾನಕ್ಕೆಂದು ನದಿಗೆ ಇಳಿದ ಯುವಕ ನೀರಲ್ಲಿ ಮುಳುಗಿ ಸಾವು

    ಮಂಗಳೂರು: ಸ್ನಾನಕ್ಕೆಂದು ನದಿಗೆ ತೆರಳಿದ ಯುವಕನೊಬ್ಬ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಕುಮಾರಧಾರ ನದಿಯಲ್ಲಿ ನಡೆದಿದೆ.

    ಅರ್ಫಾದ್(22) ಮೃತಪಟ್ಟ ದುರ್ದೈವಿ. ಅರ್ಫಾದ್ ಕೊಯಿಲ ಜನತಾ ಕಾಲೋನಿ ನಿವಾಸಿ ಯೂಸುಫ್ ಎಂಬವರ ಪುತ್ರನಾಗಿದ್ದು, ಗುರುವಾರದಂದು ತನ್ನ ಸ್ನೇಹಿತರೊಂದಿಗೆ ಸ್ನಾನಕ್ಕೆಂದು ಕೊಯಿಲ ಗ್ರಾಮದ ಸುದೆಂಗಳ ಸಮೀಪ ಕುಮಾರಧಾರ ನದಿಗೆ ಇಳಿದಿದ್ದನು.

    ನದಿಗೆ ಇಳಿದ ಸ್ವಲ್ಪ ಹೊತ್ತಿನ ಬಳಿಕ ಅರ್ಫಾದ್ ನೀರಿನಲ್ಲಿ ಮುಳುಗಿ ಕಣ್ಮರೆಯಾಗಿದ್ದನು. ಅರ್ಫಾದ್ ಕಣ್ಮರೆ ಆಗುತ್ತಿದ್ದಂತೆ ಸ್ನೇಹಿತರು ಪೋಷಕರಿಗೆ ವಿಷಯ ತಿಳಿಸಿದ್ದಾರೆ. ಬಳಿಕ ಅರ್ಫಾದ್‍ಗಾಗಿ ನದಿಯಲ್ಲಿ ಶೋಧ ಕಾರ್ಯ ನಡೆಸಲಾಯಿತು.

    ಸ್ಥಳಕ್ಕೆ ಕಡಬ ಪೊಲೀಸರು, ಅಗ್ನಿಶಾಮಕ ದಳದ ಅಧಿಕಾರಿಗಳು, ಭೇಟಿ ನೀಡಿದ್ದರು. ಕೆಲ ಸಮಯದ ಹುಡುಕಾಟದ ಬಳಿಕ ಯುವಕನ ಮೃತದೇಹ ನದಿ ನೀರಿನಲ್ಲಿ ಪತ್ತೆಯಾಗಿದೆ. ಈ ಬಗ್ಗೆ ಕಡಬ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

  • ನದಿಗೆ ಬಿದ್ದ ಬಸ್ – ಮದ್ವೆ ಮುಗಿಸಿ ವಾಪಸ್ ಬರ್ತಿದ್ದ 25ಕ್ಕೂ ಹೆಚ್ಚಿನ ಮಂದಿ ಜಲಸಮಾಧಿ

    ನದಿಗೆ ಬಿದ್ದ ಬಸ್ – ಮದ್ವೆ ಮುಗಿಸಿ ವಾಪಸ್ ಬರ್ತಿದ್ದ 25ಕ್ಕೂ ಹೆಚ್ಚಿನ ಮಂದಿ ಜಲಸಮಾಧಿ

    – ಸೇತುವೆ ಮೇಲೆ ಯಾವುದೇ ತಡೆಗೋಡೆ ಇಲ್ಲ

    ಜೈಪುರ: ಮದುವೆ ಮುಗಿಸಿ ವಾಪಸ್ ಬರುತ್ತಿದ್ದ ಖಾಸಗಿ ಬಸ್ ನದಿಗೆ ಬಿದ್ದ ಪರಿಣಾಮ 25ಕ್ಕೂ ಅಧಿಕ ಮಂದಿ ಮೃತಪಟ್ಟಿರುವ ಘಟನೆ ರಾಜಸ್ಥಾನದ ಬುಂಡಿ ಜಿಲ್ಲೆಯಲ್ಲಿ ನಡೆದಿದೆ.

    ಬುಂಡಿ ಜಿಲ್ಲೆಯ ಕೋಟಾ-ದೌಸಾ ಹೆದ್ದಾರಿಯಲ್ಲಿ ಈ ಘಟನೆ ನಡೆದಿದೆ. ಮಾಹಿತಿಯ ಪ್ರಕಾರ, ಅಪಘಾತದಲ್ಲಿ 30 ಜನರು ಸಾವನ್ನಪ್ಪಿದ್ದಾರೆ. ಆದರೆ ಈವರೆಗೆ 24 ಮೃತದೇಹಗಳು ಪತ್ತೆಯಾಗಿರುವ ಕುರಿತು ವರದಿಯಾಗಿದ್ದು, ಅನೇಕರು ಗಾಯಗೊಂಡಿದ್ದಾರೆ. ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತದ ನಂತರ ರಾಜ್ಯ ಸರ್ಕಾರವು ಅಪಘಾತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ 2 ಲಕ್ಷ ರೂ. ಪರಿಹಾರ ಘೋಷಣೆ ಮಾಡಿದೆ.

    ಬುಂಡಿ ಜಿಲ್ಲೆಯ ಕೇಶೋರೈಪಟಾನ್ ಪ್ರದೇಶದಲ್ಲಿ ಪ್ರಯಾಣಿಕರು ತುಂಬಿದ ಬಸ್ ನದಿಗೆ ಬಿದ್ದಿದೆ. ಬುಂಡಿಯ ಮೇಜ್ ನದಿಯ ಕಲ್ವರ್ಟ್ ನಲ್ಲಿ ಈ ಅಪಘಾತ ಸಂಭವಿಸಿದೆ. ಬಸ್‍ನಲ್ಲಿದ್ದವರು ವಿವಾಹ ಸಮಾರಂಭಕ್ಕೆ ಹೋಗಿ ವಾಪಸ್ ಬರುತ್ತಿದ್ದರು. ಬಸ್ ಸಾಮರ್ಥ್ಯಕ್ಕಿಂತ ಹೆಚ್ಚಿನ ಪ್ರಯಾಣಿಕರನ್ನು ಹೊಂದಿತ್ತು. ಹೀಗಾಗಿ ನದಿ ಸೇತುವೆಯ ಮೇಲೆ ಬಸ್ಸನ್ನು ನಿಯಂತ್ರಿಸಲು ಚಾಲಕನಿಗೆ ಸಾಧ್ಯವಾಗಲಿಲ್ಲ.  ಅಲ್ಲದೇ ಕಲ್ವರ್ಟ್ ನಲ್ಲಿ ಯಾವುದೇ ಸುರಕ್ಷತಾ ಗೋಡೆ ಇಲ್ಲ. ಹೀಗಾಗಿ ಬಸ್ ನದಿಗೆ ಬಿದ್ದಿದೆ ಎಂದು ಸಬ್ ಇನ್ಸ್‌ಪೆಕ್ಟರ್ ರಾಜೇಂದ್ರ ಕುಮಾರ್ ತಿಳಿಸಿದ್ದಾರೆ.

    ಪರಿಣಾಮ 25ಕ್ಕೂ ಅಧಿಕ ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತರಲ್ಲಿ ಪುರುಷರು, ಮಹಿಳೆಯರು ಮತ್ತು ಮಕ್ಕಳು ಸೇರಿದ್ದಾರೆ. ಇನ್ನೂ ಅಪಘಾತದಲ್ಲಿ ಗಾಯಾಗೊಂಡವರನ್ನು ಲೆಖಾರಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ತೀವ್ರವಾಗಿ ಗಾಯಗೊಂಡವರನ್ನು ಕೋಟಾದ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

    ಮಾಹಿತಿ ತಿಳಿದು ತಕ್ಷಣ ಪೊಲೀಸರು ಸ್ಥಳಕ್ಕೆ ತಲುಪಿ, ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ಚುರುಕುಗೊಳಿಸಿದ್ದಾರೆ. ಸದ್ಯಕ್ಕೆ ಮೃತದೇಹಗಳನ್ನು ಬಸ್‍ನಿಂದ ಹೊರತೆಗೆಯುವ ಕಾರ್ಯಾಚರಣೆಯನ್ನು ಪೊಲೀಸರು ಮಾಡುತ್ತಿದ್ದಾರೆ.

    ಅಪಘಾತದ ಬಗ್ಗೆ ತಿಳಿದು ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಟ್ವೀಟ್ ಮಾಡಿದ್ದಾರೆ, “ಬುಂಡಿಯಲ್ಲಿ ಸಂಭವಿಸಿದ ದುರಂತದ ಬಗ್ಗೆ ತಿಳಿದು ನಾನು ತುಂಬಾ ದುಃಖಿತನಾಗಿದ್ದೇನೆ. ಬಸ್ ಮೇಜ್ ನದಿಗೆ ಬಿದ್ದ ನಂತರ ಸುಮಾರು 24 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಈ ದುರಂತದಲ್ಲಿ ತಮ್ಮವರನ್ನು ಕಳೆದುಕೊಂಡಿರುವ ಕುಟುಂಬಗಳಿಗೆ ನಾನು ಸಂತಾಪ ಸೂಚಿಸುತ್ತೇನೆ. ಅಪಘಾತದಲ್ಲಿ ಗಾಯಗೊಂಡಿರುವವರು ಶೀಘ್ರವಾಗಿ ಚೇತರಿಸಿಕೊಳ್ಳಬೇಕೆಂದು ನಾನು ಬಯಸುತ್ತೇನೆ” ಎಂದು ಬರೆದುಕೊಂಡಿದ್ದಾರೆ.

  • ಕಾವೇರಿ ಬಳಿಕ ತಮಿಳುನಾಡಿನಿಂದ ಮತ್ತೊಂದು ಕಿರಿಕ್

    ಕಾವೇರಿ ಬಳಿಕ ತಮಿಳುನಾಡಿನಿಂದ ಮತ್ತೊಂದು ಕಿರಿಕ್

    ನವದೆಹಲಿ: ಕೋಲಾರ ಜಿಲ್ಲೆಯಲ್ಲಿ ನಿರ್ಮಿಸಲಾಗುತ್ತಿರುವ ಮಾರ್ಕಂಡೇಯ ಜಲಾಶಯದಿಂದ ನಮಗೆ ತೊಂದರೆಯಾಗಲಿದ್ದು, ನಾಲ್ಕು ಜಿಲ್ಲೆಗಳ ನದಿ ಪಾತ್ರ ಮತ್ತು ಕುಡಿಯುವ ನೀರಿಗೆ ತೊಂದರೆಯಾಗಲಿದೆ ಎಂದು ತಮಿಳುನಾಡು ಆರೋಪಿಸಿದೆ.

    ಇಂದು ದೆಹಲಿಯ ಸೇವಾ ಭವನದಲ್ಲಿ ನಡೆದ ತಜ್ಞರ ಸಭೆಯಲ್ಲಿ ಅಭಿಪ್ರಾಯ ಮಂಡಿಸಿದ್ದ ತಮಿಳುನಾಡಿನ ಪರ ಅಧಿಕಾರಿಗಳು ಮಾರ್ಕಂಡೇಯ ಜಲಾಶಯ ಯೋಜನೆ ವಿರೋಧಿಸಿ ದಾಖಲೆಗಳು ಸಲ್ಲಿಸಿದರು. ಈ ಯೋಜನೆಯಿಂದ ಪೆನ್ನಾರ್ ನದಿಯ ನೈಸರ್ಗಿಕ ಹರಿವಿಗೆ ತೊಂದರೆಯಾಗಲಿದೆ. 4 ಜಿಲ್ಲೆಗಳಲ್ಲಿ ಹರಿಯುವ ನದಿ ಪಾತ್ರಕ್ಕೆ ತೊಂದರೆಯಾಗಲಿದ್ದು ಮತ್ತು ಕೃಷಿ ಮತ್ತು ಕುಡಿಯುವ ನೀರಿಗೆ ಕೊರತೆ ಉಂಟಾಗಲಿದೆ ಎಂದು ಆರೋಪಿಸಿದರು.

    ಸಭೆಯಲ್ಲಿ ತಮಿಳುನಾಡು ಅಧಿಕಾರಿಗಳ ಆರೋಪಕ್ಕೆ ಪ್ರತ್ಯುತ್ತರ ನೀಡಿದ ರಾಜ್ಯದ ಅಧಿಕಾರಿಗಳು ಪೆನ್ನಾರ್ ನದಿಯ ದಕ್ಷಿಣ ವ್ಯಾಪ್ತಿಯ ನೀರನ್ನು ಕುಡಿಯುವ ನೀರಿನ ಉದ್ದೇಶಕ್ಕೆ ಬಳಸಿಕೊಳ್ಳಲಾಗುತ್ತದೆ. ಹೀಗಾಗಿ ನೈಸರ್ಗಿಕ ನೀರಿನ ಹರಿವಿಗೆ ತೊಂದರೆ ಇಲ್ಲ ತಮಿಳುನಾಡು ಆರೋಪಕ್ಕೆ ಉತ್ತರಿಸಲು ಕಾಲಾವಕಾಶ ನೀಡುವಂತೆ ಮನವಿ ಮಾಡಿದರು. ರಾಜ್ಯದ ಅಧಿಕಾರಿಗಳ ಮನವಿ ಹಿನ್ನಲೆ ಮಾರ್ಚ್ 10ಕ್ಕೆ ಮತ್ತೊಂದು ಸಭೆ ನಡೆಸಲು ಸಮಿತಿ ನಿರ್ಧಿರಿಸಿದೆ.

    ಕೋಲಾರ ಜಿಲ್ಲೆಯಲ್ಲಿ ಮಾರ್ಕಂಡೇಯ ಜಲಾಶಯ ನಿರ್ಮಾಣ ವಿಚಾರ ಸಂಬಂಧಿಸಿದಂತೆ ನ್ಯಾಯಾಧೀಕರಣ ರಚಿಸುವಂತೆ ತಮಿಳುನಾಡು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿಕೊಂಡಿತ್ತು. ತಮಿಳುನಾಡಿನ ಮನವಿ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ತಜ್ಞರನ್ನೊಳಗೊಂಡ ಸಮಾಲೋಚನಾ ಸಮಿತಿ ರಚನೆ ಮಾಡಿತ್ತು. ಈ ಸಮಿತಿ ಇಂದು ಮೊದಲ ಸಭೆ ನಡೆಸಿತ್ತು.

  • ಒಂದೇ ಗೋತ್ರದವನ ಜೊತೆ ಮದ್ವೆ – ರೊಚ್ಚಿಗೆದ್ದು ಮಗಳನ್ನು ಕೊಂದು 80 ಕಿ.ಮೀ ದೂರದಲ್ಲಿ ಎಸೆದ್ರು

    ಒಂದೇ ಗೋತ್ರದವನ ಜೊತೆ ಮದ್ವೆ – ರೊಚ್ಚಿಗೆದ್ದು ಮಗಳನ್ನು ಕೊಂದು 80 ಕಿ.ಮೀ ದೂರದಲ್ಲಿ ಎಸೆದ್ರು

    – 25 ವರ್ಷ ಮಗಳನ್ನು ಹತ್ಯೆಗೈದ ಪೋಷಕರು
    – ಪ್ರಿಯಕರನ ಜೊತೆ ರಹಸ್ಯ ವಿವಾಹ
    – ಪೋಷಕರು ಸೇರಿದಂತೆ 6 ಮಂದಿಯಿಂದ ಕೃತ್ಯ

    ನವದೆಹಲಿ: ಒಂದೇ ಗೋತ್ರದ ಹುಡುಗನನ್ನು ರಹಸ್ಯವಾಗಿ ಮದುವೆಯಾಗಿದ್ದಕ್ಕೆ ಪೋಷಕರೇ ಮಗಳನ್ನು ಕೊಲೆ ಮಾಡಿದ ಪ್ರಕರಣವನ್ನು ದೆಹಲಿ ಪೊಲೀಸರು 20 ದಿನಗಳ ನಂತರ ಬೇಧಿಸಿಸಿದ್ದಾರೆ.

    ಶೀತಲ್ ಚೌಧರಿ(25) ಕೊಲೆಯಾದ ಮಹಿಳೆ. ಪೋಷಕರಾದ ರವೀಂದರ್, ಸುಮನ್ ಜೊತೆಗೆ ಕೃತ್ಯಕ್ಕೆ ಸಹಕರಿಸಿದ್ದಕ್ಕೆ ನಾಲ್ವರು ಸಂಬಂಧಿಕರನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.

    ಕಿಡ್ನಾಪ್ ದೂರು:
    ಜನವರಿ 31ರಂದು ಶೀತಲ್ ಚೌಧರಿ ಕಾಣಿಸದೇ ಇದ್ದಾಗ ಪತಿ ಅಂಕಿತ್ ಭಾಟಿ ಅತ್ತೆ, ಮಾವನ ಮನೆಗೆ ಹೋಗಿ ವಿಚಾರಿಸಿದ್ದಾರೆ. ಶೀತಲ್ ಚೌಧರಿಯ ಸಂಬಂಧಿಕರು, ಸ್ನೇಹಿತರನ್ನು ವಿಚಾರಿಸಿದಾಗಲೂ ಎಲ್ಲೂ ಪತ್ತೆಯಾಗದೇ ಇದ್ದಾಗ ಫೆ.17 ರಂದು ನ್ಯೂ ಅಶೋಕ್ ನಗರ ಪೊಲೀಸ್ ಠಾಣೆಯಲ್ಲಿ ಪತಿ ಅಂಕಿತ್ ಭಾಟಿ ಅಪಹರಣ ದೂರು ದಾಖಲಿಸುತ್ತಾರೆ.

    ಜನವರಿ 20 ರಂದು ಪತ್ನಿಯ ತಾನು ಮದುವೆಯಾದ ವಿಚಾರವನ್ನು ಪೋಷಕರಿಗೆ ತಿಳಿಸಿದ್ದಾಳೆ. ಈ ವಿಚಾರ ತಿಳಿದು ಆಕೆಯ ಮೇಲೆ ಹಲ್ಲೆ ಮಾಡಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದರು.

    ರಹಸ್ಯ ಮದುವೆ: ಶೀತಲ್ ಚೌಧರಿ ಮತ್ತು ಅಂಕಿತ್ ಭಾಟಿ ಕುಟುಂಬ ಡೈರಿ ಉದ್ಯಮ ನಡೆಸುತ್ತಿದ್ದು ಎರಡು ಕುಟುಂಬಗಳು ಸಮೀಪವೇ ನೆಲೆಸಿತ್ತು. ಇಬ್ಬರು ಪರಿಚಯದಲ್ಲಿದ್ದ ಕಾರಣ ಮೂರು ವರ್ಷದ ಹಿಂದೆ ಶೀತಲ್ ಮತ್ತು ಅಂಕಿತ್ ರಹಸ್ಯವಾಗಿ ಡೇಟಿಂಗ್ ಮಾಡುತ್ತಿದ್ದರು.

    ರಹಸ್ಯವಾಗಿ ಸುತ್ತಾಡುತ್ತಿದ್ದ ಇವರಿಬ್ಬರು ಕಳೆದ ಅಕ್ಟೋಬರ್ ತಿಂಗಳಿನಲ್ಲಿ ಮದುವೆಯಾಗಿದ್ದರು. ಮದುವೆಯಾಗಿದ್ದರೂ ದಂಪತಿ ಪ್ರತ್ಯೇಕವಾಗಿ ಪೋಷಕರ ಜೊತೆ ನೆಲೆಸಿದ್ದರು.

    ಜನವರಿ 29 ರಂದು ಮನೆಯಲ್ಲಿ ಮದುವೆ ವಿಚಾರ ಪ್ರಸ್ತಾಪಗೊಂಡಾಗ ಶೀತಲ್ ತಾನು ರಹಸ್ಯವಾಗಿ ಮದುವೆಯಾದ ವಿಚಾರವನ್ನು ತಿಳಿಸಿದ್ದಾಳೆ. ಈ ವಿಚಾರ ಕೇಳಿ ಕೋಪಗೊಂಡ ಪೋಷಕರು ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ.

    ಕಾಲುವೆಗೆ ಎಸೆದ್ರು:
    ಕೊಲೆ ಮಾಡಿದ ಮೃತದೇಹವನ್ನು ಏನು ಮಾಡುವುದು ತಿಳಿಯದೇ ಇದ್ದಾಗ ಕಾರಿನಲ್ಲಿ ಎಸೆದು ಬರುವ ನಿರ್ಧಾರ ಮಾಡಿದ್ದಾರೆ. ಇದಕ್ಕಾಗಿ ಎರಡು ಕಾರಿನಲ್ಲಿ 6 ಮಂದಿ 80 ಕಿ.ಮೀ ದೂರ ಪ್ರಯಾಣಿಸಿ ಉತ್ತರ ಪ್ರದೇಶದ ಸಿಕಂದರಾಬಾದ್ ಬಳಿಯ ಕಾಲುವೆಯಲ್ಲಿ ಎಸೆದು ಮನೆಗೆ ಬಂದಿದ್ದಾರೆ.

    ಕಾಲುವೆಗೆ ಬಿದ್ದ ಶೀತಲ್ ಮೃತ ದೇಹ ನೀರಿನಲ್ಲಿ ತೇಲಿಕೊಂಡು ಅಲಿಘಢಕ್ಕೆ ಬಂದಿತ್ತು. ಗ್ರಾಮಸ್ಥರು ಶವವನ್ನು ನೋಡಿ ಪೊಲೀಸರಿಗೆ ತಿಳಿಸಿದ್ದರು. ಕಾಲುವೆಯಲ್ಲಿ ಅಪರಚಿತ ಮಹಿಳೆಯ ಶವಪತ್ತೆಯಾದ ಹಿನ್ನೆಲೆಯಲ್ಲಿ ಉತ್ತರಪ್ರದೇಶ ಪೊಲೀಸರು ಮರಣೋತ್ತರ ಪರೀಕ್ಷೆ ನಡೆಸಿ ಹೆಣವನ್ನು ಸುಟ್ಟಿದ್ದರು. ಈ ವೇಳೆ ಶವದಲ್ಲಿದ್ದ ಉಡುಪು ಮತ್ತು ಆಕೆ ದೇಹದಲ್ಲಿದ್ದ ಇತರೇ ವಸ್ತುಗಳನ್ನು ರಕ್ಷಿಸಿಟ್ಟಿದ್ದರು.

    ಫೆ.17 ರಂದು ಪ್ರಕರಣ ದಾಖಲಿಸಿದ ನಂತರ ದೆಹಲಿ ಪೊಲೀಸರು ಶೀತಲ್ ಆಪ್ತರನ್ನು ಸ್ನೇಹಿತರನ್ನು ವಿಚಾರಿಸಿದ್ದಾರೆ. ಬಳಿಕ ಪೋಷಕರನ್ನು ವಿಚಾರಿಸಿದಾಗ ಗೊಂದಲದ ಹೇಳಿಕೆ ನೀಡಿದ್ದಾರೆ. ಅನುಮಾನ ಬಂದು ಮತ್ತಷ್ಟು ವಿಚಾರಿಸಿದಾಗ ಪುತ್ರಿಯನ್ನು ಸಂಬಂಧಿಕರ ಜೊತೆ ಕೊಲೆ ಮಾಡಿದ್ದನ್ನು ಒಪ್ಪಿಕೊಂಡಿದ್ದಾರೆ.

    ಪ್ರಕರಣದ ತನಿಖೆ ನಡೆಸಿದ ಪೊಲೀಸ್ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿ, ಶೀತಲ್ ಕುಟುಂಬದ ಒಬ್ಬ ಸದಸ್ಯರನ್ನು ಪ್ರತ್ಯೇಕವಾಗಿ ವಿಚಾರಣೆ ನಡೆಸಿದ್ದೆವು. ಈ ವೇಳೆ ಒಬ್ಬರ ಹೇಳಿಕೆಗೂ ಮತ್ತೊಬ್ಬರ ಹೇಳಿಕೆಗೂ ತಾಳೆ ಆಗುತ್ತಿರಲಿಲ್ಲ. ಒಬ್ಬ ಸಂಬಂಧಿ ಅವಳು ಈಗಾಗಲೇ ಸತ್ತಿದ್ದಾಳೆ, ಅವಳು ಬರುವುದಿಲ್ಲ ಎಂದು ಬಾಯಿಬಿಟ್ಟಿದ್ದ. ಈ ಹೇಳಿಕೆ ಬರುತ್ತಿದ್ದಂತೆ ಆಕೆಯನ್ನು ಕೊಲೆ ಮಾಡಿರುವುದು ದೃಢವಾಯಿತು ಎಂದು ತಿಳಿಸಿದ್ದಾರೆ.

    ಒಂದೇ ಗೋತ್ರ:
    ಮಗಳ ಮತ್ತು ಆಕೆಯ ಪತಿ ಗೋತ್ರ ಒಂದೇ ಆಗಿದೆ. ಈ ಕಾರಣಕ್ಕೆ ನಾವು ಕೊಲೆ ಮಾಡಿ ಸಂಬಂಧಿಕರ ಸಹಾಯದಿಂದ ಕಾಲುವೆಗೆ ಶವವವನ್ನು ಎಸೆದಿದ್ದೆವು ಎಂದು ತಿಳಿಸಿದ್ದಾರೆ. ಈ ಹೇಳಿಕೆಯ ಹಿನ್ನೆಲೆಯಲ್ಲಿ ನೆಟ್‍ವರ್ಕ್ ಪರಿಶೀಲನೆ ವೇಳೆ ಜ.29 ರಂದು ಕೊಲೆ ಮಾಡಿದ ಸ್ಥಳದಲ್ಲೇ ಆರೋಪಿಗಳು ಓಡಾಡಿದ್ದರು ಎನ್ನುವುದಕ್ಕೆ ಮೊಬೈಲ್ ಟವರ್ ಲೋಕೇಶನ್ ಸಾಕ್ಷ್ಯ ಸಿಕ್ಕಿತ್ತು.

  • ಚಾಮುಂಡಿ ಬೆಟ್ಟದ ನಂದಿ ವಿಗ್ರಹದಲ್ಲಿ ಬಿರುಕು!

    ಚಾಮುಂಡಿ ಬೆಟ್ಟದ ನಂದಿ ವಿಗ್ರಹದಲ್ಲಿ ಬಿರುಕು!

    ಮೈಸೂರು: ಚಾಮುಂಡಿ ಬೆಟ್ಟದಲ್ಲಿನ ನಂದಿ ವಿಗ್ರಹದಲ್ಲಿ ಬಿರುಕು ಕಾಣಿಸಿಕೊಂಡಿದೆ ಎಂದು ಕೆಲವರು ಆತಂಕ ಮತ್ತು ಅನುಮಾನ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಪುರಾತತ್ವ ಇಲಾಖೆ ಅಧಿಕಾರಿಗಳ ನೇತೃತ್ವದ ತಂಡ ನಂದಿ ವಿಗ್ರಹ ಪರಿಶೀಲನೆ ನಡೆಸಿದೆ.

    ನಂದಿ ವಿಗ್ರಹ ಬಿರುಕು ಬಿಟ್ಟಿದೆ ಎಂಬ ಮಾತುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಪಾರಂಪರಿಕ ತಜ್ಞರ ಸಮಿತಿಯನ್ನು ರಚಿಸಿ ವಿಗ್ರಹ ಪರಿಶೀಲನೆಗೆ ಸೂಚಿಸಿತ್ತು. ಈ ಹಿನ್ನಲೆಯಲ್ಲಿ ಅಧಿಕಾರಿಗಳು ಹಾಗೂ ಶಿಲ್ಪಿ ತಂಡ ವಿಗ್ರಹ ಪರಿಶೀಲನೆ ನಡೆಸಿದೆ. ಕೆಲವು ಕಡೆ ಬಿರುಕು ಬಿಟ್ಟಿರುವ ರೀತಿ ಮೇಲ್ನೋಟಕ್ಕೆ ಕಾಣುತ್ತಿದೆ. ಆದರೆ ಅದು ಬಿರುಕಲ್ಲ, ಕಲ್ಲಿನ ನೈಜತೆ ಎಂದು ಸಮಿತಿ ಸದಸ್ಯರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಸಂಪೂರ್ಣವಾಗಿ ಪರಿಶೀಲನೆ ನಡೆಸಿ ಸಮಿತಿ ವರದಿ ನೀಡಲಿದ್ದು, ಬಿರುಕು ಬಿಟ್ಟಿದೆ ಎಂದು ತಜ್ಞರು ಸ್ಪಷ್ಟಪಡಿಸಿದರೆ ಅದನ್ನು ಮುಚ್ಚಲು ಕೂಡ ಜಿಲ್ಲಾಡಳಿತ ಮುಂದಾಗಲಿದೆ.

    ಸುಮಾರು 400 ವರ್ಷಗಳ ಹಳೆಯದಾದ ನಂದಿ ವಿಗ್ರಹ ಇದ್ದಾಗಿದ್ದು, 1659-73ರಲ್ಲಿ ನಿರ್ಮಾಣಗೊಂಡಿದೆ. ಚಾಮುಂಡಿ ಬೆಟ್ಟದ ಪ್ರಮುಖ ಕೇಂದ್ರ ಬಿಂದುವೇ ಈ ನಂದಿ ವಿಗ್ರಹ. ವಿಗ್ರಹದ ಕಾಲು, ಕುತ್ತಿಗೆ ಹಾಗೂ ಮುಖದ ಕೆಲವೆಡೆ ಬಿರುಕು ಕಾಣಿಸಿಕೊಂಡಿದೆ ಎಂದು ಭಕ್ತರು ಜಿಲ್ಲಾಡಳಿತಕ್ಕೆ ತಿಳಿಸಿದ್ದರು. ಕಪ್ಪಾಗಿದ್ದ ನಂದಿ ವಿಗ್ರಹವನ್ನು ಇತ್ತೀಚೆಗೆ ಪಾಲಿಶ್ ಮಾಡಿ ಹೊಸ ರೂಪ ಕೊಡಲಾಗಿತ್ತು. ಈ ವೇಳೆ ಬಿರುಕು ಬಿಟ್ಟಿರುವುದು ಪತ್ತೆಯಾಗಿತ್ತು.