Tag: ನದಿ

  • ರಾಜ್ಯದ ಹಲವೆಡೆ ಧಾರಾಕಾರ ಮಳೆ- ಡ್ಯಾಂ ಭರ್ತಿಯಾಗಿ ರಸ್ತೆಯ ಮೇಲೆ ನೀರು

    ರಾಜ್ಯದ ಹಲವೆಡೆ ಧಾರಾಕಾರ ಮಳೆ- ಡ್ಯಾಂ ಭರ್ತಿಯಾಗಿ ರಸ್ತೆಯ ಮೇಲೆ ನೀರು

    – ರೈತರ ಮೊಗದಲ್ಲಿ ಸಂತಸ
    – ಆನೇಕಲ್‍ನಲ್ಲಿ ಟ್ರಾಫಿಕ್ ಜಾಮ್

    ಬೆಂಗಳೂರು: ರಾಜ್ಯದ ಹಲವೆಡೆ ಅನೇಕ ದಿನಗಳಿಂದ ಧಾರಾಕಾರ ಮಳೆಯಾಗುತ್ತಿದ್ದು, ರೈತರ ಮೊಗದಲ್ಲಿ ಸಂತಸ ಮೂಡುತ್ತಿದೆ. ಮತ್ತೊಂದೆಡೆ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿ ಜನರ ಜೀವನ ಅಸ್ತವ್ಯಸ್ತವಾಗಿದೆ.

    ಹಾವೇರಿ ಜಿಲ್ಲೆಯಾದ್ಯಂತ ಕಳೆದ ರಾತ್ರಿ ಧಾರಾಕಾರವಾಗಿ ಮಳೆಯಾಗಿದೆ. ಜಿಲ್ಲೆಯ ರಾಣೇಬೆನ್ನೂರಿನ ಮೃತ್ಯುಂಜಯ ನಗರ ಸೇರಿದಂತೆ ಹಲವೆಡೆ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿದೆ. ಮನೆಗೆ ನುಗ್ಗಿದ ನೀರು ಹೊರಹಾಕಲು ಜನರು ಹರಸಾಹಸಪಟ್ಟಿದ್ದಾರೆ. ಒಂದು ಗಂಟೆ ಕಾಲ ಸುರಿದ ಮಳೆಯಿಂದ ಕೆಲಕಾಲ ಜನಜೀವನ ಅಸ್ತವ್ಯಸ್ತವಾಗಿತ್ತು. ಅಲ್ಲದೆ ಹಾವೇರಿ ತಾಲೂಕು ಸೇರಿದಂತೆ ಬ್ಯಾಡಗಿ ವಿವಿಧ ಗ್ರಾಮದಲ್ಲಿ ಉತ್ತಮ ಮಳೆ ಆಗಿದೆ. ಕಳೆದ ಒಂದು ವಾರದಿಂದ ಮಳೆ ಇಲ್ಲದೆ ಜಿಲ್ಲೆಯ ಜನರು ಆತಂಕಗೊಂಡಿದ್ದರು. ಇದೀಗ ಮಳೆಯಿಂದ ಜಿಲ್ಲೆಯ ಜನರು ಸಂತಸಗೊಂಡಿದ್ದಾರೆ.

    ಚಿತ್ರದುರ್ಗ ಜಿಲ್ಲೆಯಾದ್ಯಂತ ತಡರಾತ್ರಿ ಸುರಿದ ಮಳೆಯಿಂದಾಗಿ ಹಿರೇಹಳ್ಳ ಮೈದುಂಬಿ ಹರಿಯುತ್ತಿದೆ. ಹೊಸದುರ್ಗ ತಾಲೂಕಿನ ಗೂಳಿಹಟ್ಟಿ ಸಮೀಪದಲ್ಲಿರುವ ಹಿರೇಹಳ್ಳ ಚೆಕ್ ಡ್ಯಾಂ ಭರ್ತಿಯಾಗಿ ರಸ್ತೆಯ ಮೇಲೆ ನೀರು ಹರಿಯುತ್ತಿದೆ.

    ಗಡಿ ಜಿಲ್ಲೆ ಚಾಮರಾಜನಗರದ ಹಲವೆಡೆ ಕಳೆದ ರಾತ್ರಿಯಿಡಿ ಸೋನೆ ಮಳೆಯಾಗಿದೆ. ಗುರುವಾರ ಸಂಜೆ ಆರಂಭವಾದ ತುಂತುರು ಮಳೆ ರಾತ್ರಿಯಿಡಿ ಬಿದ್ದಿದೆ. ಜಿಲ್ಲೆಯ ಗುಂಡ್ಲುಪೇಟೆ, ಕೊಳ್ಳೇಗಾಲ, ಹನೂರು ಸೇರಿದಂತೆ ಹಲವೆಡೆ ಮಳೆಯಾಗಿದ್ದು, ರೈತರು ಕೂಡ ಸಂತಸ ವ್ಯಕ್ತಪಡಿಸಿದ್ದಾರೆ. ಇಂದು ಕೂಡ ಚಾಮರಾಜನಗರದಲ್ಲಿ ಮೋಡ ಮುಸುಕಿದ ವಾತಾವರಣ ಮುಂದುವರಿದಿದ್ದು, ಮಳೆ ಬೀಳುವ ಸಾಧ್ಯತೆಯಿದೆ.

    ಕಲಬುರಗಿ ಜಿಲ್ಲೆಯಲ್ಲಿ ಗುರುವಾರ ತಡರಾತ್ರಿ ಎರಡು ಗಂಟೆಗಳ ಕಾಲ ಸತತ ಮಳೆಯಾಗಿದ್ದು, ಈ ಮೂಲಕ ಬಿಸಿಲಿನಿಂದ ಕಂಗೆಟ್ಟ ಜನರಿಗೆ ಕೊಂಚ ರಿಲ್ಯಾಕ್ಸ್ ಆಗಿದ್ದಾರೆ. ವಾಡಿಕೆ ಪ್ರಕಾರ ಜೂನ್ ಎರಡನೇ ವಾರದಲ್ಲಿ ಜಿಲ್ಲೆಯಲ್ಲಿ ಮಳೆಯಾಗುತ್ತಿತ್ತು. ಆದರೆ ಈ ಬಾರಿ ವಾಡಿಕೆಯಂತೆ ಜಿಲ್ಲೆಯಲ್ಲಿ ಮಳೆಯಾಗಿಲ್ಲ. ಮುಂದಿನ ವಾರದಿಂದ ಜಿಲ್ಲೆಯಲ್ಲಿ ಉತ್ತಮ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

    ಇನ್ನೂ ಗದಗ ಜಿಲ್ಲೆಯಲ್ಲೂ ವರುಣನ ಸಿಂಚನ ಶುರುವಾಗಿದೆ. ತಡರಾತ್ರಿಯಿಂದ ತುಂತುರು ಮಳೆ ಆರಂಭವಾಗಿದ್ದು, ಬಿಸಿಲು, ಧೂಳುನಿಂದ ಕಂಗೆಟ್ಟ ಜನ್ರಿಗೆ ತುಂತುರು ಮಳೆ ಸ್ವಲ್ಪ ತಂಪೆರೆದಂತಾಗಿದೆ. ರೈತರು ಮುಂಗಾರು ಬಿತ್ತನೆಗೆ ಮುಗಿಲಾಚೆ ನೋಡುವಂತಾಗಿತ್ತು. ಸದ್ಯ ಮಳೆ ಆರಂಭವಾಗಿದ್ದು, ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ಧಾರವಾಡದಲ್ಲಿ ಕೂಡ ಧಾರಾಕಾರ ಮಳೆ ಸುರಿದಿದೆ. ಗುಡುಗು ಸಿಡಲು ಸಹಿತ ಸುರಿದ ಮಳೆಯಿಂದ ರೈತರು ಕೊಂಚ ನೆಮ್ಮದಿಯ ನಿಟ್ಡುಸಿರು ಬಿಟ್ಟಿದ್ದಾರೆ. ಹೊಲಗಳಲ್ಲಿ ಬಿತ್ತನೆ ಮಾಡಿದ್ದ ರೈತರಿಗೆ ಮಳೆ ಇಲ್ಲದ ಕಾರಣ ಕಂಗಾಲಾಗಿದ್ದರು. ಈ ಮಳೆಯಿಂದ ರೈತರು ಕೊಂಚ ಸಮಾಧಾನವಾಗುವಂತೆ ಆಗಿದೆ.

    ಟ್ರಾಫಿಕ್ ಜಾಮ್:
    ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನ ಕೊಪ್ಪಗೇಟ್ ಬಳಿ ರಾತ್ರಿ ಸುರಿದ ಧಾರಾಕಾರ ಮಳೆಗೆ ವಿದ್ಯುತ್ ಕಂಬಗಳು ಧರೆಗೆ ಉರುಳಿದ್ದವು. ರಸ್ತೆಗೆ ಅಡ್ಡಲಾಗಿ ವಿದ್ಯುತ್ ತಂತಿಗಳು ಬಿದ್ದಿದ್ದರಿಂದ ಕಿ.ಮೀವರೆಗೂ ಟ್ರಾಫಿಕ್ ಜಾಮ್ ಉಂಟಾಗಿತ್ತು. ಗಂಟೆಗಟ್ಟಲೇ ಟ್ರಾಫಿಕ್ ಜಾಮ್‍ನಲ್ಲಿ ವಾಹನ ಸವಾರರು ಪರದಾಡುವಂತಾಗಿತ್ತು. ಅಲ್ಲದೇ ಟ್ರಾಫಿಕ್ ಜಾಮ್‍ನಿಂದ ಕೊಪ್ಪ ಗೇಟ್ ಗ್ರಾಮದ ಪುಟ್ಟ ರಸ್ತೆಗಳಲ್ಲಿ ಬೈಕ್ ಮತ್ತು ಕಾರುಗಳ ಓಡಾಟಕ್ಕೆ ಸ್ಥಳೀಯರ ವಿರೋಧ ವ್ಯಕ್ತಪಡಿಸಿದ್ದಾರೆ. ಕೊನೆಗೆ ಬೆಸ್ಕಾಂ ಅಧಿಕಾರಿಗಳು ಮತ್ತು ಸಿಬ್ಬಂದಿ ಬಂದು ರಸ್ತೆಗೆ ಅಡ್ಡಲಾಗಿ ಬಿದ್ದಿದ್ದ ಕಂಬ ಮತ್ತು ತಂತಿಗಳನ್ನು ತೆರವು ಮಾಡಿದರು.

  • ನದಿಯಲ್ಲಿ ಕೊಚ್ಚಿ ಹೋಗುತ್ತಿದ್ದ ನವವಿವಾಹಿತರಿದ್ದ ಕಾರು- ಸ್ಥಳೀಯರಿಂದ ವಧು, ವರರ ರಕ್ಷಣೆ

    ನದಿಯಲ್ಲಿ ಕೊಚ್ಚಿ ಹೋಗುತ್ತಿದ್ದ ನವವಿವಾಹಿತರಿದ್ದ ಕಾರು- ಸ್ಥಳೀಯರಿಂದ ವಧು, ವರರ ರಕ್ಷಣೆ

    ರಾಂಚಿ: ನವ ವಿವಾಹಿತ ದಂಪತಿ ಹಾಗೂ ಇತರ ಮೂವರು ಚಲಿಸುತ್ತಿದ್ದ ಕಾರು ನದಿಗೆ ಬಿದ್ದಿದ್ದು, ಸ್ಥಳೀಯರು ಹರಸಾಹಸಪಟ್ಟು ಕೊಚ್ಚಿ ಹೋಗುತ್ತಿದ್ದ ಕಾರಿನಿಂದ ಐವರನ್ನು ರಕ್ಷಿಸಿದ್ದಾರೆ.

    ಜಾರ್ಖಂಡ್‍ನ ಪಲಮು ಜಿಲ್ಲಿಯಲ್ಲಿ ಘಟನೆ ನಡೆದಿದ್ದು, ನದಿಗೆ ಬಿದ್ದ ತಕ್ಷಣ ಕಾರು ಕೊಚ್ಚಿ ಹೋಗಿದೆ. ಇದನ್ನು ಕಂಡ ಸ್ಥಳೀಯರು ರಭಸವಾಗಿ ಹರಿಯುತ್ತಿದ್ದ ನದಿಗೆ ಧುಮಿಕಿ ಕಾರಿನಲ್ಲಿದ್ದವರನ್ನು ರಕ್ಷಿಸಿದ್ದಾರೆ. ಸ್ಥಳೀಯರ ಗುಂಪು ನದಿಗೆ ಜಿಗಿದು, ಅರ್ಧ ಮುಳುಗಿದ್ದ ಕಾರಿನಿಂದ ಐವರನ್ನು ರಕ್ಷಿಸಿದ್ದಾರೆ. ಈ ಮೈನವಿರೇಳಿಸುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಮದುವೆ ಸಮಾರಂಭ ಮುಗಿದ ಬಳಿಕ ದಂಪತಿ ಹಾಗೂ ಇತರ ಮೂವರು ವರನ ಮನೆಗೆ ಆಗಮಿಸುತ್ತಿದ್ದರು. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿ, ಮಲಾಯ್ ನದಿಯ ಸೇತುವೆ ಮೇಲಿಂದ ಕಾರು ನದಿಗೆ ಬಿದ್ದಿದೆ. ನಂತರ ಸುಮಾರು ಅರ್ಧ ಕಿಲೋಮೀಟರ್‍ನಷ್ಟು ನದಿಯಲ್ಲೇ ತೇಲಿಕೊಂಡು ಬಂದಿದ್ದು, ಇದನ್ನು ಕಂಡ ಸ್ಥಳೀಯರು ಕಾರಿನಲ್ಲಿದ್ದವರನ್ನು ರಕ್ಷಿಸಲು ಮುಂದಾಗಿದ್ದಾರೆ. ತಕ್ಷಣವೇ ನದಿಗೆ ಹಾರಿ ಕಾರಿನ ಬಾಗಿಲುಗಳನ್ನು ತೆರೆದು ಒಳಗಿದ್ದವರನ್ನು ಸುರಕ್ಷಿತವಾಗಿ ರಕ್ಷಿಸಿದ್ದಾರೆ.

    ಮುಂಗಾರು ಹಿನ್ನೆಲೆ ಜಾರ್ಖಂಡ್‍ನಲ್ಲಿ ವಿಪರೀತ ಮಳೆಯಾಗುತ್ತಿದ್ದು, ರಾಜ್ಯ ರಾಜಧಾನಿ ರಾಂಚಿ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಭಾರೀ ಮಳೆ ಸುರಿಯುತ್ತಿದೆ.

  • ಮಹಾ ಮಳೆಗೆ ಚಿಕ್ಕೋಡಿಯ ಮತ್ತೆರಡು ಸೇತುವೆ ಜಲಾವೃತ- ಕಾರವಾರದಲ್ಲಿ ಅಂಗಡಿ ಮುಂಗಟ್ಟುಗಳಿಗೆ ನೀರು

    ಮಹಾ ಮಳೆಗೆ ಚಿಕ್ಕೋಡಿಯ ಮತ್ತೆರಡು ಸೇತುವೆ ಜಲಾವೃತ- ಕಾರವಾರದಲ್ಲಿ ಅಂಗಡಿ ಮುಂಗಟ್ಟುಗಳಿಗೆ ನೀರು

    – ಉಡುಪಿಯಲ್ಲಿ ಯೆಲ್ಲೋ ಅಲರ್ಟ್

    ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಮಳೆಯ ಆರ್ಭಟ ಜೋರಾಗಿದ್ದು, ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆ ಸುರಿಯುತ್ತಿದೆ. ಇದರಿಂದ ಹಲವೆಡೆ ಜನಜೀವನ ಅಸ್ತವ್ಯಸ್ಥಗೊಂಡಿದೆ.

    ಮಹಾರಾಷ್ಟ್ರದ ಕೊಂಕಣ ಭಾಗದಲ್ಲಿ ಭಾರೀ ಮಳೆಯಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಚಿಕ್ಕೋಡಿಯ ಮತ್ತೆರಡು ಸೇತುವೆಗಳು ಜಲಾವೃತವಾಗಿವೆ. ಮಹಾ ಮಳೆಯಿಂದಾಗಿ ಕೃಷ್ಣಾ ನದಿಯ ಒಳಹರಿವು ಹೆಚ್ಚಳವಾಗಿದ್ದು, ನದಿ ಪಾತ್ರದ ಜನರಲ್ಲಿ ಆತಂಕ ಮನೆಮಾಡಿದೆ. ಜಲಾವೃತವಾದ ಕಲ್ಲೋಳ-ಯಡೂರ, ಮಲಿಕವಾಡ-ದತ್ತವಾಡ ಸೇತುವೆಗಳು ಅಪಾಯದ ಮಟ್ಟದಲ್ಲಿದ್ದರೂ ಜನ ಬೇಕಾಬಿಟ್ಟಿ ಓಡಾಡುತ್ತಿದ್ದಾರೆ.

    ಮತ್ತೊಂದೆಡೆ ಉತ್ತರ ಕನ್ನಡ ಜಿಲ್ಲೆಯಲ್ಲೂ ಮಳೆಯಬ್ಬರ ಜೋರಾಗಿದೆ. ಕರಾವಳಿಯ ಹಲವು ಭಾಗಗಳಲ್ಲಿ ಮಳೆಯಬ್ಬರದಿಂದಾಗಿ ರಸ್ತೆಗಳಲ್ಲಿ ನೀರು ತುಂಬಿದ್ದು, ಅಂಗಡಿ ಮುಂಗಟ್ಟುಗಳಿಗೂ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ. ಕಾಳಿ ನದಿ ಭಾಗದಲ್ಲಿ ಸತತ ಮಳೆಯಿಂದಾಗಿ ಜಲಾಶಯದ ಒಳಹರಿವಿನ ಪ್ರಮಾಣ ಏರಿಕೆಯಾಗಿದ್ದು, ನದಿ ಪಾತ್ರದ ಜನರನ್ನು ಸುರಕ್ಷಿತ ಸ್ಥಳಗಳಿಗೆ ತೆರಳಲು ಜಿಲ್ಲಾಡಳಿತ ಸೂಚಿಸಿದೆ.

    ಉಡುಪಿಯಲ್ಲೂ ವರುಣ ತನ್ನ ಪ್ರತಾಪ ತೋರುತ್ತಿದ್ದಾನೆ. ಕಳೆದ 24 ಗಂಟೆಯಲ್ಲಿ ಉಡುಪಿಯಲ್ಲಿ 62 ಮಿ.ಮೀ ಮಳೆ ಸುರಿದಿದ್ದು, ಯಲ್ಲೋ ಅಲರ್ಟ್ ಮುಂದುವರಿದಿದೆ. ಬ್ರಹ್ಮಾವರ ತಾಲೂಕಿನಲ್ಲಿ ಸಿಡಿಲು ಬಡಿತಕ್ಕೆ 5 ಮನೆ, 2 ಕೊಟ್ಟಿಗೆಗಳು ಭಾಗಶಃ ಹಾನಿಗೊಳಗಾಗಿದ್ದು, ಸುಮಾರು 1.75 ಲಕ್ಷ ರೂ. ನಷ್ಟವಾಗಿದೆ.

    ಬೀದರ್ ಜಿಲ್ಲೆಯಲ್ಲಿ ಬಿರುಗಾಳಿ ಸಹಿತ ಭಾರೀ ಮಳೆಯಾಗುತ್ತಿದೆ. ಬಿತ್ತನೆ ಮಾಡಲು ಸಿದ್ಧಮಾಡಿಕೊಂಡಿದ್ದ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ಭಾರೀ ಮಳೆ ಒಂದಷ್ಟು ಭಾಗದ ಜನರಿಗೆ ನೆಮ್ಮದಿ ತಂದರೆ, ಮತ್ತೊಂದಷ್ಟು ಭಾಗದ ಜನರ ಜನಜೀವನವನ್ನು ಅಸ್ತವ್ಯಸ್ಥ ಮಾಡಿದೆ.

    ತುಂಗಾ ಜಲಾಶಯ ಬಹುತೇಕ ಭರ್ತಿ
    ಮಲೆನಾಡಿನ ಭಾಗ ಹಾಗೂ ತುಂಗಾ ಜಲಾನಯನ ಪ್ರದೇಶದಲ್ಲಿ ವ್ಯಾಪಕವಾಗಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಶಿವಮೊಗ್ಗ ಜಿಲ್ಲೆ ಗಾಜನೂರು ಸಮೀಪದ ತುಂಗಾ ಜಲಾಶಯ ಈಗಾಗಲೇ ಭರ್ತಿಯಾಗಿದ್ದು, 4 ಕ್ರಸ್ಟ್ ಗೇಟ್ ಮೂಲಕ 2 ಸಾವಿರ ಕ್ಯೂಸೆಕ್ ನೀರನ್ನು ನದಿಗೆ ಬಿಡುಗಡೆ ಮಾಡಲಾಗಿದೆ. ತುಂಗಾ ಜಲಾಶಯ 3.25 ಟಿಎಂಸಿ ಸಂಗ್ರಹ ಸಾಮರ್ಥ್ಯ ಹೊಂದಿದ್ದು, 100 ಮೀ. ಎತ್ತರವಿದೆ. ಮುಂಗಾರು ಆರಂಭದಲ್ಲಿಯೇ ಜಲಾಶಯ ಭರ್ತಿಯಾಗಿದ್ದು, ಜಲಾಶಯಕ್ಕೆ ಪ್ರತಿದಿನ 7 ಸಾವಿರ ಕ್ಯೂಸೆಕ್ ಒಳಹರಿವು ಬರುತ್ತಿದೆ.

    ಒಳಹರಿವು ಮುಂದಿನ ದಿನಗಳಲ್ಲಿ ಮತ್ತಷ್ಟು ಹೆಚ್ಚಳವಾಗುವ ಸಾಧ್ಯತೆ ಇರುವುದರಿಂದ 7 ಸಾವಿರ ಕ್ಯೂಸೆಕ್ ಒಳಹರಿವು ನೀರನ್ನು ಜಲಾಶಯದಿಂದ ಹೊರಗೆ ಬಿಡಲಾಗುತ್ತಿದೆ. ಜಲಾಶಯದ 4 ಕ್ರಸ್ಟ್ ಗೇಟ್ ಗಳ ಮೂಲಕ 2 ಸಾವಿರ ಕ್ಯೂಸೆಕ್ ನೀರನ್ನು ನದಿ ಪಾತ್ರಕ್ಕೆ ಹಾಗೂ 4,750 ಕ್ಯೂಸೆಕ್ ನೀರನ್ನು ವಿದ್ಯುತ್ ಉತ್ಪಾದನೆಗೆ ಬಿಡುಗಡೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಮಳೆ ಮತ್ತಷ್ಟು ಹೆಚ್ಚಳವಾದರೆ ಕ್ರಸ್ಟ್ ಗೇಟ್ ಮೂಲಕ ಮತ್ತಷ್ಟು ನೀರನ್ನು ನದಿಗೆ ಬಿಡಲು ಚಿಂತಿಸಲಾಗುವುದು. ಆದ್ದರಿಂದ ಜಲಾನಯನ ನದಿ ಪಾತ್ರದ ಜನರು ಮುಂಜಾಗ್ರತೆಯಿಂದ ಇರುವಂತೆ ಜಲಾಶಯದ ಕಾರ್ಯಪಾಲಕ ಅಭಿಯಂತರರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

  • ಮಹಾರಾಷ್ಟ್ರದಲ್ಲಿ ಭಾರೀ ಮಳೆ- ಚಿಕ್ಕೋಡಿ ಭಾಗದ ನದಿಗಳ ಒಳ ಹರಿವು ಹೆಚ್ಚಳ

    ಮಹಾರಾಷ್ಟ್ರದಲ್ಲಿ ಭಾರೀ ಮಳೆ- ಚಿಕ್ಕೋಡಿ ಭಾಗದ ನದಿಗಳ ಒಳ ಹರಿವು ಹೆಚ್ಚಳ

    – ನದಿ ತೀರದ ಗ್ರಾಮಸ್ಥರಲ್ಲಿ ಆತಂಕ

    ಚಿಕ್ಕೋಡಿ/ಬೆಳಗಾವಿ: ಮಹಾರಾಷ್ಟ್ರದ ಘಟ್ಟ ಪ್ರದೇಶದಲ್ಲಿ ಭಾರೀ ಮಳೆ ಸುರಿಯುತ್ತಿದ್ದು, ರಾಜ್ಯದ ಚಿಕ್ಕೋಡಿ, ನಿಪ್ಪಾಣಿ ತಾಲೂಕಿನ ನದಿ ತೀರದ ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ.

    ಚಿಕ್ಕೋಡಿ, ನಿಪ್ಪಾಣಿ ಭಾಗದ ನದಿಗಳ ಒಳಹರಿವಿನ ಪ್ರಮಾಣದಲ್ಲಿ ದಿಢೀರ್ ಹೆಚ್ಚಳ ಕಂಡಿದ್ದು, ದೂಧ್ ಗಂಗಾ, ವೇದ ಗಂಗಾ, ಕೃಷ್ಣಾ ನದಿಗಳ ಒಳಹರಿವಿನ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಹೀಗಾಗಿ ಜನರಿಗೆ ಈ ವರ್ಷವೂ ಪ್ರವಾಹದ ಭೀತಿ ಎದುರಾಗಿದೆ. ನಿಪ್ಪಾಣಿ ತಾಲೂಕಿನ ದೂಧ್ ಗಂಗಾ ನದಿಯ ಒಳಹರಿವಿನ ಪ್ರಮಾಣ ಭಾರೀ ಹೆಚ್ಚಳವಾಗಿದ್ದು, ಪರಿಣಾಮ ಕಾರದಗಾ-ಭೋಜ ಗ್ರಾಮಗಳ ನಡುವಿನ ಸಂಪರ್ಕ ಸೇತುವೆ ಜಲಾವೃತವಾಗಿದೆ.

    ಕೆಳ ಹಂತದ ಸೇತುವೆ ಜಲಾವೃತವಾಗಿದ್ದು, ಗ್ರಾಮಸ್ಥರು ಪರ್ಯಾಯ ಮಾರ್ಗವಾಗಿ ಸಂಚರಿಸುತ್ತಿದ್ದಾರೆ. ಚಿಕ್ಕೋಡಿ ತಾಲೂಕಿನ ಕೃಷ್ಣಾ ನದಿಯಲ್ಲಿ ನೀರಿನ ಪ್ರಮಾಣ ದಿಢೀರ್ ಹೆಚ್ಚಳವಾಗಿದ್ದು, ಒಂದೇ ರಾತ್ರಿಯಲ್ಲಿ ನೀರಿನ ಪ್ರಮಾಣ 3 ರಿಂದ 4 ಅಡಿ ಹೆಚ್ಚಳವಾಗಿದೆ. ಹೀಗಾಗಿ ನದಿ ತೀರದ ಗ್ರಾಮಸ್ಥರಲ್ಲಿ ಮತ್ತೆ ಆತಂಕ ಹೆಚ್ಚಿದೆ.

  • ಕರಾವಳಿಯಲ್ಲಿ ಐದು ದಿನ ಭಾರೀ ಮಳೆ- ಹವಾಮಾನ ಇಲಾಖೆಯಿಂದ ಮುನ್ಸೂಚನೆ

    ಕರಾವಳಿಯಲ್ಲಿ ಐದು ದಿನ ಭಾರೀ ಮಳೆ- ಹವಾಮಾನ ಇಲಾಖೆಯಿಂದ ಮುನ್ಸೂಚನೆ

    – ಉಡುಪಿ ಜಿಲ್ಲಾಡಳಿತ ಕಟ್ಟೆಚ್ಚರ ರವಾನೆ

    ಉಡುಪಿ: ಕರಾವಳಿ ಕರ್ನಾಟಕದಲ್ಲಿ ಮುಂಗಾರು ಚುರುಕುಗೊಂಡಿದೆ. ಉಡುಪಿ ಜಿಲ್ಲೆಯಲ್ಲಿ ಮುಂದಿನ ಐದು ದಿನಗಳ ಕಾಲ ಭಾರೀ ಮಳೆಯಾಗುವ ಸಾಧ್ಯತೆ ಇದೆ.

    ಹವಾಮಾನ ಇಲಾಖೆ ಮುನ್ಸೂಚನೆ ಪ್ರಕಟಣೆ ಹೊರಡಿಸಿದ್ದು, ಇಂದಿನಿಂದ ಜೂನ್ 20ರ ವರೆಗೂ ಬಿರುಸಿನ ಮುಂಗಾರು ಸಾಧ್ಯತೆ ಇದೆ. ಹೀಗಾಗಿ ಇಂದು ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ. ಅಲ್ಲದೇ ವಾರಾಂತ್ಯದವರೆಗೂ ಧಾರಾಕಾರ ಮಳೆ ಸುರಿಯಲಿದ್ದು, ಜಿಲ್ಲೆಯಲ್ಲಿ ಹಳದಿ ಅಲರ್ಟನ್ನು ಹವಾಮಾನ ಇಲಾಖೆ ಘೋಷಿಸಿದೆ.

    ಒಂದು ವಾರದ ಅಂತರದಲ್ಲಿ ಸುಮಾರು 500 ಮಿಲಿಮೀಟರ್ ಮಳೆ ಬೀಳುವ ಸಾಧ್ಯತೆ ಇದೆ. ಗುಡುಗು ಮಿಶ್ರಿತ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಕಡಲಿಗಿಳಿದು ಮೀನುಗಾರಿಕೆ ನಡೆಸುವಾಗ ಎಚ್ಚರಿಕೆ ವಹಿಸಬೇಕು ಎಂದು ಜಿಲ್ಲಾಡಳಿತ ಸೂಚನೆ ಕೊಟ್ಟಿದೆ. ಜೊತೆಗೆ ನದಿ ಮತ್ತು ಸಮುದ್ರ ತೀರಕ್ಕೆ ಸಾರ್ವಜನಿಕರು ತೆರಳಬಾರದು ಎಂದು ನದಿ ಪಾತ್ರದ ಜನರಿಗೆ ಎಚ್ಚರಿಕೆಯನ್ನು ನೀಡಿದೆ.

  • ಮಳೆ ಅಬ್ಬರಕ್ಕೆ ಮನೆಗಳು ಜಲಾವೃತ

    ಮಳೆ ಅಬ್ಬರಕ್ಕೆ ಮನೆಗಳು ಜಲಾವೃತ

    ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ನಿಸರ್ಗ ಚಂಡಮಾರುತದ ಅಬ್ಬರ ಇಳಿಕೆಯಾಗುತ್ತಿದ್ದಂತೆ ಮುಂಗಾರು ಪ್ರಾರಂಭವಾಗಿದ್ದು, ಜಿಲ್ಲೆಯಾದ್ಯಾಂತ ವ್ಯಾಪಕ ಮಳೆ ಸುರಿಯುತ್ತಿದೆ.

    ಜಿಲ್ಲೆಯ ಕರಾವಳಿ ಭಾಗದಲ್ಲಿ ಮಳೆಯ ಅಬ್ಬರಕ್ಕೆ ಅಂಕೋಲ ತಾಲೂಕಿನ ನದಿಭಾಗ ಸಮುದ್ರ ತೀರದ ಬಳಿ ಅಘನಾಶಿನಿ ನದಿ ನೀರು ಹೆಚ್ಚು ಹರಿಯುತ್ತಿದೆ. ಪರಿಣಾಮ 40 ಮನೆಗಳಿಗೆ ನೀರು ನುಗ್ಗಿದ್ದು, 80ಕ್ಕೂ ಹೆಚ್ವು ಜನರನ್ನು ನದಿಭಾಗ ಪ್ರದೇಶದಿಂದ ಗಂಜಿ ಕೇಂದ್ರಕ್ಕೆ ಸ್ಥಳಾಂತರ ಮಾಡಲಾಗಿದೆ.

    ನದಿಭಾಗದ ಪ್ರದೇಶದ ಬಳಿ ಒಡ್ಡು ಕಟ್ಟಿದ್ದರಿಂದ ನದಿಯ ನೀರು ಹೆಚ್ಚು ಶೇಖರಣೆಗೊಂಡಿತ್ತು. ಇದರಿಂದಾಗಿ ಹಲವು ಮನೆಗಳಿಗೆ ನೀರು ನುಗ್ಗಿದೆ. ತಕ್ಷಣ ಒಡ್ಡು ಒಡೆದು ಸಮುದ್ರಕ್ಕೆ ನೀರು ಹೋಗಲು ಅವಕಾಶ ಮಾಡಿಕೊಟ್ಟಿದ್ದು, ಪ್ರವಾಹದ ಪ್ರಮಾಣ ಇಳಿಕೆಯಾಗುತ್ತಿದೆ.

    ಜಿಲ್ಲೆಯ ಕರಾವಳಿ ಭಾಗದಲ್ಲಿ ಕಳೆದ ಮೂರ್ನಾಲ್ಕು ದಿನದಿಂದ ಬಿಡುವು ಕೊಟ್ಟಿದ್ದ ಮಳೆ ಶುಕ್ರವಾರದಿಂದ ವ್ಯಾಪಕ ಗಾಳಿ ಸಹಿತ ಮಳೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಜೂನ್ 15 ರಿಂದ ಜುಲೈ 31ರ ವರೆಗೆ 47 ದಿನಗಳ ಕಾಲ ಮೀನುಗಾರಿಕೆಯನ್ನು ಬಂದ್ ಮಾಡಲು ಮೀನುಗಾರಿಕಾ ಇಲಾಖೆ ಮೀನುಗಾರರಿಗೆ ಸೂಚನೆ ನೀಡಿದೆ. ಕರಾವಳಿ ಭಾಗದ ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತವಾಗಿದ್ದು, ಹೆಚ್ಚಿನ ಮಳೆಯಾಗುತ್ತಿದೆ. ಇನ್ನೂ ಒಂದು ವಾರಗಳ ಕಾಲ ಹೆಚ್ಚಿನ ಮಳೆಯಾಗಲಿದೆ.

  • ಮಗನ ಕೈ ಕಟ್ಟಿ ನದಿಯಲ್ಲಿ ಮುಳುಗಿಸಿ ಕೊಂದ- ಮನೆಗೆ ಬಂದು ಕೊಲೆ ವಿಚಾರ ಹೇಳಿದ

    ಮಗನ ಕೈ ಕಟ್ಟಿ ನದಿಯಲ್ಲಿ ಮುಳುಗಿಸಿ ಕೊಂದ- ಮನೆಗೆ ಬಂದು ಕೊಲೆ ವಿಚಾರ ಹೇಳಿದ

    – ಮಗಳ ಹುಟ್ಟುಹಬ್ಬ ಕೇಕ್ ತರಲು ಹೋದಾಗ ಕೃತ್ಯ
    – ನನ್ನ ವಂಶವನ್ನ ಮುಗಿಸಿದ್ದೇನೆಂದು ಪೊಲೀಸರಿಗೆ ಶರಣು

    ಭೋಪಾಲ್: ತಂದೆಯೊಬ್ಬ ಎಂಟು ವರ್ಷದ ಮಗನನ್ನು ನದಿಯಲ್ಲಿ ಮುಳುಗಿಸಿ ಕೊಲೆ ಮಾಡಿರುವ ಘಟನೆ ಮಧ್ಯಪ್ರದೇಶದ ಬಾಲಘಾಟ್‍ನಲ್ಲಿ ನಡೆದಿದೆ.

    ಬಾಲಘಾಟ್‍ನ ವೈಂಗಂಗಾ ನದಿಯಲ್ಲಿ ಶುಕ್ರವಾರ ಈ ಘಟನೆ ನಡೆದಿದ್ದು, ಆರೋಪಿಯನ್ನು ಸರಸ್ವತಿ ನಗರ ಪ್ರದೇಶದ ನಿವಾಸಿ ಸುನಿಲ್ ಜೈಸ್ವಾಲ್ (37) ಎಂದು ಗುರುತಿಸಲಾಗಿದೆ. ಕೊಲೆ ಮಾಡಿದ ನಂತರ ಆರೋಪಿ ಪೊಲೀಸರಿಗೆ ಶರಣಾಗಿದ್ದು, ಕೊರೊನಾ ಲಾಕ್‍ಡೌನ್‍ನಿಂದಾಗಿ ನಿರುದ್ಯೋಗಿಯಾಗಿದ್ದೇನೆ. ಇದರಿಂದ ಕುಟುಂಬವನ್ನು ಪೋಷಿಸಲು ಹಣವಿಲ್ಲ ಎಂದು ತಿಳಿಸಿರುವುದಾಗಿ ಕೊಟ್ವಾಲಿ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ಹೇಳಿದರು.

    ಆರೋಪಿ ತಂದೆ ಮೊದಲಿಗೆ ತನ್ನ ಮಗನ ಕೈಗಳನ್ನು ಕಟ್ಟಿ ನದಿಯಲ್ಲಿ ಮುಳುಗಿಸಿ ಕೊಲೆ ಮಾಡಿದ್ದಾನೆ. ನಂತರ ಆರೋಪಿ ಜೈಸ್ವಾಲ್ ತನ್ನ ಮನೆಗೆ ಹೋಗಿ ಮಗನನ್ನು ಕೊಲೆ ಮಾಡಿರುವ ವಿಚಾರವನ್ನು ತಿಳಿಸಿದ್ದಾನೆ. ನಂತರ ಪೊಲೀಸ್ ಠಾಣೆಗೆ ಹೋಗಿ ಶರಣಾಗಿದ್ದಾನೆ. ಮಾಹಿತಿ ತುಳಿದು ಪೊಲೀಸರು ನದಿಯಲ್ಲಿ ಹುಡುಕಿದಾಗ ಬಾಲಕನ ಮೃತದೇಹ ಪತ್ತೆಯಾಗಿದೆ ಎಂದು ಪೊಲೀಸ್ ಠಾಣೆ ಉಸ್ತುವಾರಿ ವಿಜಯ್ ಸಿಂಗ್ ತಿಳಿಸಿದರು.

    ವಿಚಾರಣೆ ವೇಳೆ ಆರೋಪಿ, ಲಾಕ್‍ಡೌನ್ ಕಾರಣದಿಂದಾಗಿ ನಾನು ನಿರುದ್ಯೋಗಿಯಾಗಿದ್ದೇನೆ. ಹೀಗಾಗಿ ನನ್ನ ಕುಟುಂಬವನ್ನು ಪೋಷಿಸಲು ಸಾಧ್ಯವಾಗಲಿಲ್ಲ. ಆದ್ದರಿಂದ ತನ್ನ ಮಗನನ್ನು ಕೊಂದಿದ್ದೇನೆ. ಮಗನನ್ನು ಕೊಲ್ಲುವ ಮೂಲಕ ನನ್ನ ವಂಶವನ್ನು ಮುಗಿಸಿದ್ದೇನೆ ಎಂದು ಆರೋಪಿ ಹೇಳಿದ್ದಾನೆ.

    ಆರೋಪಿಯ 10 ವರ್ಷದ ಮಗಳ ಜನ್ಮದಿನ ಶುಕ್ರವಾರ ಇತ್ತು. ಅಂದು ತನ್ನ ಮಗನೊಂದಿಗೆ ಕೇಕ್ ತರಲು ಹೋಗಿದ್ದಾಗ ಈ ಕೃತ್ಯ ಎಸಗಿದ್ದಾನೆ. ಸದ್ಯಕ್ಕೆ ಪೊಲೀಸರು ಆರೋಪಿ ಜೈಸ್ವಾಲ್ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

  • ನೇತ್ರಾವತಿ ನದಿಗೆ ಹಾರಿ ಯುವಕ ಆತ್ಮಹತ್ಯೆ

    ನೇತ್ರಾವತಿ ನದಿಗೆ ಹಾರಿ ಯುವಕ ಆತ್ಮಹತ್ಯೆ

    ಮಂಗಳೂರು: ನದಿಗೆ ಹಾರಿ ಯುವಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಪಾಣೆ ಮಂಗಳೂರು ಎಂಬಲ್ಲಿ ನಡೆದಿದೆ.

    ಕಲ್ಲಡ್ಕ ಸಮೀಪದ ಕೊಳಕೀರು ನಿವಾಸಿ ನಿಶಾಂತ್ ಆತ್ಮಹತ್ಯೆ ಮಾಡಿಕೊಂಡ ಯುವಕ. ಬಂಟ್ವಾಳ ಪಾಣೆ ಮಂಗಳೂರಿನ ನೇತ್ರಾವತಿ ನದಿಗೆ ಹಾರಿ ನಿಶಾಂತ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

    ಯುವಕ ನದಿಗೆ ಹಾರಿದಾಕ್ಷಣ ರಕ್ಷಣೆಗೆ ರಂಜಾನ್ ಹಬ್ಬದ ಸಡಗರದಲ್ಲಿದ್ದ ಮುಸ್ಲಿಂ ಯುವಕರು, ನದಿಗೆ ಜಿಗಿದು ಆತನನ್ನು ಮೇಲೆ ತಂದು ಪ್ರಥಮ ಚಿಕಿತ್ಸೆ ನೀಡಿ ಬದುಕಿಸುವ ಪ್ರಯತ್ನ ಮಾಡಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ನಿಶಾಂತ್ ಸಾವನ್ನಪ್ಪಿದ್ದಾನೆ.

    ಈ ಕುರಿತು ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆದರೆ ನಿಶಾಂತ್ ಆತ್ಮಹತ್ಯೆಗೆ ಇನ್ನೂ ನಿಖರವಾದ ಕಾರಣ ತಿಳಿದುಬಂದಿಲ್ಲ.

  • ಈಜಲು ನದಿಗೆ ಧುಮುಕಿದ ಯುವಕ ನಾಪತ್ತೆ

    ಈಜಲು ನದಿಗೆ ಧುಮುಕಿದ ಯುವಕ ನಾಪತ್ತೆ

    – ಮೀನಿನ ಬಲೆಗೆ ಸಿಲುಕಿ ಸಾವನ್ನಪ್ಪಿರುವ ಶಂಕೆ

    ಯಾದಗಿರಿ: ಕೃಷ್ಣಾ ನದಿಯಲ್ಲಿ ಈಜಲು ತೆರಳಿದ್ದ ಮೂವರು ಯುವಕರ ಪೈಕಿ ಓರ್ವ ನಾಪತ್ತೆಯಾಗಿರುವ ಆಘಾತಕಾರಿ ಘಟನೆ ನಡೆದಿದೆ.

    ಜಿಲ್ಲೆಯ ಸುರಪುರ ತಾಲೂಕಿನ ಶೇಳ್ಳಗಿ ಗ್ರಾಮದಲ್ಲಿ ಘಟನೆ ನಡೆದಿದ್ದು, ಚಂದಣ್ಣ ಗೊಂಡಿಕಾರ (35) ನಾಪತ್ತೆಯಾಗಿರುವ ಯುವಕ. ಜಿಲ್ಲೆಯಲ್ಲಿ ಬಿಸಿಲಿನ ತಾಪ ಹೆಚ್ಚಿರುವ ಕಾರಣ ಇಬ್ಬರು ಸ್ನೇಹಿತರೊಂದಿಗೆ ಚಂದಣ್ಣ ಗ್ರಾಮದ ಹತ್ತಿರದ ಕೃಷ್ಣಾನದಿಗೆ ಈಜಲು ತೆರಳಿದ್ದ. ಮೂವರಲ್ಲಿ ಇಬ್ಬರು ಈಜಿ ದಡ ಸೇರಿದ್ದಾರೆ. ಚಂದಣ್ಣ ನದಿಯಿಂದ ಹೊರ ಬರದೆ ನಾಪತ್ತೆಯಾಗಿದ್ದಾನೆ.

    ಶುಕ್ರವಾರ ಮಧ್ಯಾಹ್ನ ಘಟನೆ ನಡೆದಿದ್ದು, ನದಿಯಲ್ಲಿ ಮೀನಿನ ಬಲೆಗೆ ಸಿಲುಕಿ ಚಂದ್ರಣ್ಣ ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿದೆ. ನಾಪತ್ತೆಯಾಗಿರುವ ಚಂದ್ರಣ್ಣನಿಗಾಗಿ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಗ್ರಾಮಸ್ಥರು ಶೋಧ ಕಾರ್ಯ ನಡೆಸುತ್ತಿದ್ದಾರೆ. ಸುರಪುರ ಪೊಲೀಸ್ ಠಾಣೆ ವ್ಯಾಪ್ತಿ ಈ ಪ್ರಕರಣ ನಡೆದಿದೆ.

  • ಪ್ರೀತಿಸಿ ಬೇರೆ ಬೇರೆ ಮದ್ವೆಯಾದ್ರು – 10 ವರ್ಷಗಳ ನಂತ್ರ ಮತ್ತೆ ಲವ್, ಸೂಸೈಡ್

    ಪ್ರೀತಿಸಿ ಬೇರೆ ಬೇರೆ ಮದ್ವೆಯಾದ್ರು – 10 ವರ್ಷಗಳ ನಂತ್ರ ಮತ್ತೆ ಲವ್, ಸೂಸೈಡ್

    – ನದಿಗೆ ಹಾರಿ ಪ್ರೇಮಿಗಳು ಆತ್ಮಹತ್ಯೆ

    ಹೈದರಾಬಾದ್: 10 ವರ್ಷಗಳ ಹಿಂದೆ ಪ್ರೀತಿಸುತ್ತಿದ್ದ ಪ್ರೇಮಿಗಳಿಬ್ಬರು ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತೆಲಂಗಾಣದ ವಾರಂಗಲ್ ಪಟ್ಟಣದಲ್ಲಿ ನಡೆದಿದೆ.

    ರಮ್ಯಾ (29) ಮತ್ತು ರಾಜು (30) ಆತ್ಮಹತ್ಯೆ ಮಾಡಿಕೊಂಡ ಪ್ರೇಮಿಗಳು. ಹತ್ತು ವರ್ಷಗಳ ಹಿಂದೆ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಇವರ ಪ್ರೀತಿಗೆ ಮನೆಯವರು ಒಪ್ಪದ ಕಾರಣ ಬೇರೆ ಬೇರೆ ಮದುವೆಯಾಗಿದ್ದು, ರಮ್ಯಾ ಪತಿ ಇತ್ತೀಚಿಗೆ ಮೃತಪಟ್ಟಿದ್ದರು. ಹೀಗಾಗಿ ಮತ್ತೆ ಇವರಿಬ್ಬರು ಸಂಬಂಧ ಇಟ್ಟುಕೊಂಡಿದ್ದರು. ಈ ಬಗ್ಗೆ ಕುಟುಂವದವರಿಗೆ ಗೊತ್ತಾಗಿದೆ. ಇದರಿಂದ ಭಯಗೊಂಡ ಇವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

    ಏನಿದು ಪ್ರಕರಣ?
    ವಾರಂಗಲ್ ಪಟ್ಟಣದ ಅಂಬಾಲ ಗ್ರಾಮದ ರಮ್ಯಾ ಮತ್ತು ರಾಜು ಒಂದೇ ಗ್ರಾಮದವರಾಗಿದ್ದು, ಹತ್ತು ವರ್ಷಗಳ ಹಿಂದೆ ಪ್ರೀತಿಸುತ್ತಿದ್ದರು. ಇವರ ಪ್ರೀತಿಗೆ ಮನೆಯವರು ಒಪ್ಪಿಗೆ ನೀಡಲಿಲ್ಲ. ಹೀಗಾಗಿ ಇಬ್ಬರು ಮನೆಯಿಂದ ಓಡಿ ಹೋಗಿದ್ದರು. ಆದರೆ ಇಬ್ಬರನ್ನು ಹುಡುಕಿ ಪಂಚಾಯಿತಿ ಮಾಡುವ ಮೂಲಕ ಹಿರಿಯರು ಇಬ್ಬರನ್ನು ಬೇರೆ ಬೇರೆ ಮಾಡಿದ್ದರು. ನಂತರ ರಮ್ಯಾ ಪೋಷಕರು ಬೇರೆ ಹುಡುಗನ ಜೊತೆ ಮದುವೆ ಮಾಡಿಸಿದ್ದರು. ವಿವಾಹವಾದ ಕೆಲವು ದಿನಗಳ ನಂತರ ರಮ್ಯಾ ಪತಿ ಉದ್ಯೋಗಕ್ಕಾಗಿ ದುಬೈಗೆ ತೆರಳಿದ್ದರು. ಇತ್ತ ರಮ್ಯಾ ಇಬ್ಬರು ಮಕ್ಕಳೊಂದಿಗೆ ಅಂಬಾಲದಲ್ಲಿ ವಾಸಿಸುತ್ತಿದ್ದಳು.

    ರಾಜು ಕೂಡ ಬೇರೆ ಹುಡುಗಿಯನ್ನು ಮದುವೆಯಾಗಿದ್ದು, ಈತನಿಗೂ ಇಬ್ಬರು ಗಂಡು ಮಕ್ಕಳಿದ್ದಾರೆ. ರಾಜ ತನ್ನ ಹೆಂಡತಿ ಮತ್ತು ಮಕ್ಕಳೊಂದಿಗೆ ಹೈದರಾಬಾದ್‍ನಲ್ಲಿ ವಾಸಿಸುತ್ತಿದ್ದನು. ರಮ್ಯಾ ಪತಿ 10 ತಿಂಗಳ ಹಿಂದೆ ಅನಾರೋಗ್ಯದಿಂದ ಮೃತಪಟ್ಟಿದ್ದಾರೆ. ಅದೇ ಸಮಯದಲ್ಲಿ ರಾಜು ಕೂಡ ತನ್ನ ಗ್ರಾಮದಲ್ಲಿ ಮನೆ ನಿರ್ಮಿಸಲು ಹೈದರಾಬಾದಿನಿಂದ ಹಿಂದಿರುಗಿದ್ದನು. ಈ ವೇಳೆ ರಮ್ಯಾ ಪತಿ ಮೃತಪಟ್ಟಿರುವ ವಿಚಾರವನ್ನು ತಿಳಿದುಕೊಂಡಿದ್ದಾನೆ.

    ತನ್ನ ಮಾಜಿ ಪ್ರೇಯಿಸಿಗೆ ಸಮಾಧಾನ ಮಾಡುವ ನೆಪದಲ್ಲಿ ಆಗಾಗ ರಮ್ಯಾ ಮನೆಗೆ ಹೋಗುತ್ತಿದ್ದನು. ಈ ವೇಳೆ ಮತ್ತೆ ಇವರಿಬ್ಬರು ಪರಸ್ಪರ ಪ್ರೀತಿಸುತ್ತಿದ್ದು, ದೈಹಿಕ ಸಂಬಂಧ ಕೂಡ ಹೊಂದಿದ್ದರು. ಇವರಿಬ್ಬರ ಸಂಬಂಧದ ಬಗ್ಗೆ ಕುಟುಂಬದವರಿಗೆ ತಿಳಿದಿದೆ. ಇದರಿಂದ ಭಯಗೊಂಡು ರಾಜು ಮತ್ತು ರಮ್ಯಾ ನಾಲ್ಕು ದಿನಗಳ ಹಿಂದೆ ಓಡಿಹೋಗಿದ್ದಾರೆ. ಈ ಕುರಿತು ರಮ್ಯಾ ಕುಟುಂಬದವರು ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ  ಪೊಲೀಸರು ಇಬ್ಬರಿಗಾಗಿ ಶೋಧ ನಡೆಸುತ್ತಿದ್ದರು.

    ಕಳೆದ ದಿನ ನದಿಯಲ್ಲಿ ಎರಡು ಮೃತದೇಹಗಳು ಪತ್ತೆಯಾಗಿವೆ. ಮಾಹಿತಿ ತಿಳಿದು ಪೊಲೀಸರು ಹೋಗಿ ಪರಿಶೀಲನೆ ನಡೆಸಿದ್ದಾರೆ. ಆಗ ಮೃತಪಟ್ಟಿದ್ದವರು ರಾಜು ಮತ್ತು ರಮ್ಯಾ ಎಂದು ಗುರುತಿಸಿದ್ದಾರೆ. ನಂತರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಆಸ್ಪತ್ರೆಗೆ ರವಾನಿಸಿದ್ದಾರೆ. ಇಬ್ಬರು ಗುರುವಾರ ಆಟೋದ ಮೂಲಕ ನದಿಯ ಬಳಿ ಬಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸ್ ತನಿಖೆಯಲ್ಲಿ ತಿಳಿದು ಬಂದಿದೆ.