Tag: ನದಿ

  • ಎಣ್ಣೆ ಮತ್ತಿನಲ್ಲಿ ನದಿಗೆ ಹಾರಿದ ಮಹಿಳೆ- ಸ್ಥಳೀಯ ಯುವಕರಿಂದ ರಕ್ಷಣೆ

    ಎಣ್ಣೆ ಮತ್ತಿನಲ್ಲಿ ನದಿಗೆ ಹಾರಿದ ಮಹಿಳೆ- ಸ್ಥಳೀಯ ಯುವಕರಿಂದ ರಕ್ಷಣೆ

    ಮಡಿಕೇರಿ: ಮಾನಸಿಕವಾಗಿ ನೊಂದು ಜನರು ಆತ್ಮಹತ್ಯೆನೇ ಕೊನೆ ಪರಿಹಾರ ಅಂತ ಸಾವಿಗೆ ಶರಣಾಗೋದನ್ನ ನೀವೆಲ್ಲರೂ ನೋಡಿರ್ತೀರಾ ಕೇಳಿರ್ತೀರಾ. ಆದರೆ ಈ ಮಹಳೆ ಎಣ್ಣೆ ಮತ್ತಿನಲ್ಲಿ ಮೈದುಂಬಿ ಭೋರ್ಗರೆದು ಹರಿಯುತ್ತಿರುವ ನದಿಗೆ ಹಾರಿ ಆತ್ಮಹತ್ಯೆಗೆ ಮುಂದಾಗಿದ್ದಾರೆ.

    ಕೊಡಗು ಜಿಲ್ಲೆ ಮಡಿಕೇರಿ ತಾಲೂಕಿನ ಮೂರ್ನಾಡು ಸಮೀಪದ ಬಲಮುರಿಯಲ್ಲಿ ಈ ಘಟನೆ ನಡೆದಿದೆ. ಮೂರ್ನಾಡಿನ ಮಹಿಳೆ ಮುನಿಯಮ್ಮ ಸೋಮವಾರ ಸಂಜೆ ಬಲಮುರಿಯ ಕಾವೇರಿ ಹೊಳೆ ಬಳಿ ಹೋಗಿದ್ದಾರೆ. ಹೋದವರೆ ಸೇತುವೆ ಮೇಲೆ 20 ಸೆಕೆಂಡ್ ನಿಂತಿದ್ದಾರೆ. ಬಳಿಕ ತುಂಬಿ ಹರಿಯುತ್ತಿರುವ ಕಾವೇರಿ ನದಿಗೆ ಹಾರಿದ್ದಾರೆ.

    ಈ ದೃಶ್ಯವನ್ನು ನದಿಯ ಅನತಿ ದೂರದಲ್ಲಿ ಕುಳಿತಿದ್ದ ಕೆಲ ಯುವಕರು ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ. ದೇವಾಲಯ ಸಮೀಪದಲ್ಲೇ ಇದ್ದ ಸೂರಜ್ ಮತ್ತು ಕಿರಣ್ ಎಂಬ ಯುವಕರು ನದಿ ನೀರಿನಲ್ಲಿ ತೇಲಿ ಹೋಗುತ್ತಿದ್ದ ಮಹಿಳೆಯನ್ನು ನೋಡಿದ್ದಾರೆ. ಕೂಡಲೇ ಮಹಿಳೆ ತೇಲಿ ಹೋದಂತೆ ನದಿ ದಂಡೆಯಲ್ಲೇ ಓಡಿದ್ದಾರೆ. ಹೀಗೆ ನದಿ ದಂಡೆಯಲ್ಲೇ ಒಂದು ಕಿಲೋಮೀಟರ್ ಓಡುತ್ತಲೇ ಬಳಿಕ ಹಗ್ಗವನ್ನು ಪಡೆದು ಅದರ ಸಹಾಯದಿಂದ ಮಹಿಳೆಯನ್ನು ರಕ್ಷಿಸಿದ್ದಾರೆ.

    ನಂತರ ಮಡಿಕೇರಿಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಗಂಡ ಮತ್ತು ಮಗನೊಂದಿಗೆ ಇದ್ದ ಮಹಿಳೆ ಮುನಿಯಮ್ಮ, ಕೂಲಿ ಕೆಲಸ ಮಾಡಿ ಬದುಕುತ್ತಿದ್ದರು. ಆದರೆ ಸೋಮವಾರ ಸಂಜೆ ಹೀಗೆ ಮಾಡಿಕೊಂಡಿರುವುದಕ್ಕೆ ನೈಜ ಕಾರಣ ಏನು ಅನ್ನೋದು ಇನ್ನಷ್ಟೇ ಗೊತ್ತಾಗಬೇಕಾಗಿದೆ. ಮಗ ಮಾತ್ರ ತಾಯಿ ಎಣ್ಣೆ ಹೊಡೆದಿದ್ದರು. ಇದರಿಂದಾಗಿಯೇ ಬಿದ್ದಿದ್ದಾರೆ ಎನ್ನುತ್ತಿದ್ದಾನೆ.

    ಈ ಘಟನೆ ಸಂಬಂಧ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಕೆಆರ್‌ಎಸ್ ಡ್ಯಾಂನ ಒಳ ಹರಿವು ಹೆಚ್ಚಳ – ರೈತರ ಮೊಗದಲ್ಲಿ ಸಂತಸ

    ಕೆಆರ್‌ಎಸ್ ಡ್ಯಾಂನ ಒಳ ಹರಿವು ಹೆಚ್ಚಳ – ರೈತರ ಮೊಗದಲ್ಲಿ ಸಂತಸ

    ಮಂಡ್ಯ: ರಾಜ್ಯದ ಹಲವೆಡೆ ಅನೇಕ ದಿನಗಳಿಂದ ಧಾರಾಕಾರವಾಗಿ ಮಳೆಯಾಗುತ್ತಿದೆ. ಇದರಿಂದ ಈಗಾಗಲೇ ಹಲವು ದಿನಗಳು ತುಂಬಿ ಹರಿಯುತ್ತಿವೆ. ಇದೀಗ ಕಾವೇರಿ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆ ಹಿನ್ನೆಲೆಯಲ್ಲಿ ಕೆಆರ್‌ಎಸ್ ಡ್ಯಾಂನ ಒಳ ಹರಿವಿನಲ್ಲಿ ಹೆಚ್ಚಳವಾಗಿದೆ.

    ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆಆರ್‌ಎಸ್ ಡ್ಯಾಂನಲ್ಲಿ ನೀರಿನ ಒಳ ಹರಿವು ಹೆಚ್ಚಾಗಿದೆ. ಈ ಮೂಲಕ ಡ್ಯಾಂನಲ್ಲಿ ನೀರಿನ ಮಟ್ಟ 107 ಅಡಿ ತಲುಪಿದೆ. ಜೊತೆಗೆ ಕೆಆರ್‌ಎಸ್ ಡ್ಯಾಂಗೆ ನೀರು ಹರಿದು ಬರುತ್ತಿರುವುದರಿಂದ ರೈತರಲ್ಲಿ ಸಂತಸ ಮೂಡಿದೆ. ಕಳೆದ ವರ್ಷ ಇದೇ ದಿನ 90.03 ಅಡಿ ನೀರು ಇತ್ತು. ಅಲ್ಲದೇ 995 ಕ್ಯೂಸೆಕ್ ಒಳ ಹರಿವು ಇತ್ತು.

    ಕಳೆದ ಮೂರು ದಿನಗಳಿಂದ ಕೆಆರ್‌ಎಸ್ ಡ್ಯಾಂಗೆ ಒಳ ಹರಿವು ಹೆಚ್ಚಾಗಿದೆ. ಹೀಗಾಗಿ ಕೆಆರ್‌ಎಸ್ ಅಣೆಕಟ್ಟೆಯಲ್ಲಿ ಪ್ರಸ್ತುತ 107 ಅಡಿ ಸಂಗ್ರಹವಾಗಿದೆ. ಅಣೆಕಟ್ಟೆಯ ಗರಿಷ್ಠ ನೀರಿನ ಮಟ್ಟ 124.80 ಅಡಿ ಇದೆ. ಇಂದಿನ ಒಳ ಹರಿವು 14,620 ಕ್ಯೂಸೆಕ್ ಇದ್ದು, ಹೊರ ಹರಿವು 4,655 ಕ್ಯೂಸೆಕ್ ಇದೆ. ಜೊತೆಗೆ ನೀರಿನ ಸಂಗ್ರಹ 28.810 ಟಿಎಂಸಿ ಇದೆ.

  • ಧಾರಾಕಾರ ಮಳೆಗೆ ಮರುಗಿದ ಮಲೆನಾಡು – ಉಡುಪಿಯಲ್ಲಿ ವರುಣನಿಂದ 4.5 ಲಕ್ಷ ಹಾನಿ

    ಧಾರಾಕಾರ ಮಳೆಗೆ ಮರುಗಿದ ಮಲೆನಾಡು – ಉಡುಪಿಯಲ್ಲಿ ವರುಣನಿಂದ 4.5 ಲಕ್ಷ ಹಾನಿ

    – ಮೈದುಂಬಿ ಹರಿಯುತ್ತಿರೋ ಜೀವನದಿಗಳು

    ಉಡುಪಿ/ಚಿಕ್ಕಮಗಳೂರು: ಜಿಲ್ಲೆಯ ಮಲೆನಾಡು ಭಾಗದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಗೆ ಮಲೆನಾಡು ಅಕ್ಷರಶಃ ಕಂಗಾಲಾಗಿದೆ. ಅದರಲ್ಲೂ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ, ಬಣಕಲ್ ಬಾಳೂರು, ಚೆನ್ನಡ್ಲು, ಭಾಗದಲ್ಲಿ ಭಾರೀ ಮಳೆ ಸುರಿದಿದ್ದು, ಶುಕ್ರವಾರ ರಾತ್ರಿ ಹಾಗೂ ಶನಿವಾರ ರಾತ್ರಿಗೆ ಸುಮಾರು 114.2 ಮಿಲಿ ಮೀಟರ್ ನಷ್ಟು ಮಳೆ ಸುರಿದಿದೆ. ಇದರಿಂದ ಮಲೆನಾಡಿಗರು ಆತಂಕಕ್ಕೀಡಾಗಿದ್ದಾರೆ.

    ಕಳೆದ ಎರಡು ಮೂರು ದಿನಗಳಿಂದ ಹಗಲಿರುಳೆನ್ನದೆ ಸುರಿಯುತ್ತಿರುವ ಧಾರಾಕಾರ ಮಳೆಗೆ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ನಿರಂತರ ಮಳೆಯಿಂದಾಗಿ ಮಲೆನಾಡಿಗರು ಮನೆಯಿಂದ ಹೊರಬರದಂತ ಸ್ಥಿತಿ ನಿರ್ಮಾಣವಾಗಿದ್ದು, ಕೂಲಿ ಕಾರ್ಮಿಕರು ಕೆಲಸಕ್ಕೆ ಹೋಗದಂತಾಗಿದೆ. ಭಾರೀ ಮಳೆ, ಗಾಳಿಗೆ ಮಲೆನಾಡಿನ ಅಲ್ಲಲ್ಲೇ ವಿದ್ಯುತ್ ತಂತಿಗಳ ಮೇಲೆ ಮರ ಬಿದ್ದು ಕೆಲ ಗ್ರಾಮಗಳು ಕತ್ತಲಲ್ಲಿ ಬದುಕುವಂತಾಗಿದೆ.

    ಮಲೆನಾಡಿನ ಧಾರಾಕಾರ ಮಳೆಯಿಂದಾಗಿ ನಾಡಿನ ಜೀವನದಿಗಳು ಮೈದುಂಬಿ ಹರಿಯುತ್ತಿವೆ. ಜಿಲ್ಲೆಯಲ್ಲಿ ಹುಟ್ಟಿ ನಾಡಿನಾದ್ಯಂತ ಹರಿಯುವ ಹೇಮಾವತಿ ಹಾಗೂ ತುಂಗಭದ್ರಾ ನದಿಗಳು ಅಪಾಯದ ಮಟ್ಟದಲ್ಲಿ ಹರಿಯುತ್ತಿವೆ. ಕುದುರೆಮುಖ ಹಾಗೂ ಕಳಸ ಭಾಗದಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಭದ್ರಾ ನದಿಯ ಹರಿವಿನ ಪ್ರಮಾಣದಲ್ಲಿ ಏರಿಕೆಯಾಗಿದೆ.

    ಕಳಸ ಹಾಗೂ ಹೊರನಾಡಿಗೆ ಸಂಪರ್ಕ ಕಲ್ಪಿಸುವ ಹೆಬ್ಬಾಳೆ ಸೇತುವೆ ಮುಳುಗುವ ಹಂತ ತಲುಪಿದೆ. ಈ ಸೇತುವೆ ಮುಳುಗಡೆಯಾದರೆ ನಾಲ್ಕೈದು ಗ್ರಾಮಗಳು ಕಳಸ ಗ್ರಾಮದ ಸಂಪರ್ಕ ಕಳೆದುಕೊಳ್ಳುತ್ತವೆ. ಮಲೆನಾಡಿನ ಭಾರಿ ಮಳೆ ಗಾಳಿಗೆ ಅಲ್ಲಲ್ಲಿ ಮರಗಳು ಧರೆಗುರುಳಿದ ಸಣ್ಣಪುಟ್ಟ ಗುಡ್ಡಗಳು ಹಾಗೂ ಬಂಡೆಗಳು ಕುಸಿದು ಬಿದ್ದಿವೆ.

    ಉಡುಪಿಯಲ್ಲಿ 90 ಮಿಲಿಮೀಟರ್ ಮಳೆ:
    ಉಡುಪಿ ಜಿಲ್ಲೆಯಲ್ಲಿ ಕಳೆದೆರಡು ದಿನಗಳಿಂದ ಸುರಿದ ಮಳೆಗೆ ಸುಮಾರು 4.5ಲಕ್ಷ ರೂ. ಮೌಲ್ಯದ ಆಸ್ತಿ ಪಾಸ್ತಿ ಹಾನಿಗೀಡಾಗಿದೆ. ಎರಡು ಮನೆಗಳು ಸಂಪೂರ್ಣ ಕುಸಿದಿದ್ದು, ಏಳು ಮನೆಗಳಿಗೆ ಭಾಗಶಃ ಹಾನಿ ಸಂಭವಿಸಿದೆ. ಕುಂದಾಪುರ ತಾಲೂಕಿನ ಗಂಗೊಳ್ಳಿ ಗ್ರಾಮದ ಮಧುಕರ ನಾಯಕ್ ಅವರ ವಾಸ್ತವ್ಯದ ಮನೆ ಸಂಪೂರ್ಣ ಹಾನಿಯಾಗಿದೆ. 3 ಲಕ್ಷ ರೂ. ನಷ್ಟ ಆಗಿದೆ ಎಂದು ಅಂದಾಜಿಸಲಾಗಿದೆ ಎಂದು ತಹಶೀಲ್ದಾರ್ ಮಾಹಿತಿ ನೀಡಿದ್ದಾರೆ.

    ಬ್ರಹ್ಮಾವರ ತಾಲೂಕಿನ ಹೇರೂರು ಗ್ರಾಮದ ಗುಲಾಬಿ ಶೆಟ್ಟಿ ಅವರ ಮನೆ ಗಾಳಿ ಮಳೆಯಿಂದ ಸಂಪೂರ್ಣ ಕುಸಿದಿದ್ದು, 1.50 ಲಕ್ಷ ರೂ. ನಷ್ಟವಾಗಿದೆ. ಹಾವಂಜೆ ಗ್ರಾಮದ ಸುಂದರ ಪೂಜಾರಿ ಮನೆಗೆ ಭಾಗಶಃ ಹಾನಿಯಾಗಿ 60ಸಾವಿರ ರೂ., ಹಲುವಳ್ಳಿ ಗ್ರಾಮದ ಅನಂತ ಮರಕಾಲ ಹಾಗೂ ಕಾಡೂರು ಗ್ರಾಮದ ಸೀತಾರಾಮ ನಾಯ್ಕ ಅವರ ಮನೆಗೆ ಸಿಡಿಲು ಬಡಿದು ಭಾಗಶಃ ಹಾನಿ ಸಂಭವಿಸಿ ತಲಾ 50 ಸಾವಿರ ರೂ. ಮತ್ತು ಹೊಸೂರು ಗ್ರಾಮದ ಶಾರದಾ ಬಾಯಿ ಅವರ ಮನೆಗೆ 20 ಸಾವಿರ ರೂ. ನಷ್ಟ ಉಂಟಾಗಿದೆ.

    ಉಡುಪಿ ತಾಲೂಕಿನ ಮಣಿಪುರ ಗ್ರಾಮದ ಶಾಂತಲಕ್ಷ್ಮೀ ಅವರ ಮನೆಗೆ 22ಸಾವಿರ ರೂ. ಕಾರ್ಕಳ ತಾಲೂಕಿನ ಕುಕ್ಕುಂದೂರು ಗ್ರಾಮದ ಕೆ.ಗೋಪ ಪೂಜಾರಿ ಅವರ ಮನೆಗೆ 30 ಸಾವಿರ ರೂ., ಅದೇ ಗ್ರಾಮದ ಉಷಾ ಮನೆಗೆ ಭಾಗಶಃ ಹಾನಿಯಾಗಿ 35 ಸಾವಿರ ರೂ. ನಷ್ಟ ಅಂದಾಜಿಸಲಾಗಿದೆ. ಸುರಿದ ಭಾರೀ ಮಳೆಯಿಂದ ಕುಕ್ಕುಂದೂರು ಗ್ರಾಮದ ಭೋಜ ಸಾಲ್ಯಾನ್ ಅವರ ಬೆಳೆನಷ್ಟ ಉಂಟಾಗಿದೆ. ಇದರಿಂದ 30 ಸಾವಿರ ರೂ. ನಷ್ಟವಾಗಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

  • ಹಾರಂಗಿ ಜಲಾಶಯದಿಂದ 5 ಸಾವಿರ ಕ್ಯೂಸೆಕ್ ನೀರು ಹೊರಕ್ಕೆ

    ಹಾರಂಗಿ ಜಲಾಶಯದಿಂದ 5 ಸಾವಿರ ಕ್ಯೂಸೆಕ್ ನೀರು ಹೊರಕ್ಕೆ

    – ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದ ಸ್ನಾನಘಟ್ಟ ಮುಳುಗಡೆ ಸಾಧ್ಯತೆ

    ಮಡಿಕೇರಿ/ಮಂಗಳೂರು: ಕೊಡಗು ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಿಂದ ಭಾರೀ ಮಳೆ ಸುರಿಯುತ್ತಿದ್ದು, ಜಿಲ್ಲೆಯ ಏಕೈಕ ಜಲಾಶಯ ಹಾರಂಗಿ ಬಹುತೇಕ ಭರ್ತಿಯಾಗಿದೆ.

    8.5 ಟಿಎಂಸಿ ಸಾಮರ್ಥ್ಯದ ಜಲಾಶಯಕ್ಕೆ 6.5 ಟಿಎಂಸಿ ಅಡಿ ನೀರು ಸಂಗ್ರಹವಾಗಿದೆ. ಭಾರೀ ಮಳೆ ಬೀಳುತ್ತಿರುವುದರಿಂದ ಜಲಾಶಯಕ್ಕೆ 4,864 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಜಲಾಶಯದ ಭರ್ತಿಗೆ ಇನ್ನೂ ಎರಡು ಟಿಎಂಸಿ ಅಡಿ ನೀರು ಅಗತ್ಯವಿರುವಾಗಲೇ ಜಲಾಶಯದಿಂದ 5 ಸಾವಿರ ಕ್ಯೂಸೆಕ್ ನೀರನ್ನು ನದಿಗೆ ಹಾರಿಸಲಾಗುತ್ತಿದೆ. ಸದ್ಯಕ್ಕೆ ಜಲಾಶಯದ ಮೂರು ಕ್ರೆಸ್ ಗೇಟ್‍ಗಳನ್ನು ತೆಗೆದು 5 ಸಾವಿರ ಕ್ಯೂಸೆಕ್ ನೀರನ್ನು ಜಲಾಶಯದಿಂದ ನದಿಗೆ ಹಾರಿಸಲಾಗುತ್ತಿದೆ.

    ಕಳೆದ ಎರಡು ವರ್ಷಗಳಲ್ಲೂ ಹಾರಂಗಿ ಜಲಾಶಯದಿಂದ ತಡವಾಗಿ ನೀರು ಹರಿಸಲಾಗಿತ್ತು. ಜೊತೆಗೆ ಕಾವೇರಿ ನದಿಯಲ್ಲೂ ಭಾರೀ ಪ್ರಮಾಣದಲ್ಲಿ ನೀರು ಹರಿಯುತ್ತಿದ್ದರಿಂದ ಜಲಾಶಯದ ನೀರು ಸಹ ನದಿಗೆ ಒಮ್ಮೆಲೆ ಸೇರಿ ಪ್ರವಾಹ ಉಂಟಾಗಿತ್ತು. ಇದರಿಂದ ಹತ್ತಾರು ಬಡಾವಣೆಗಳ ಸಾವಿರಾರು ಮನೆಗಳು ಪ್ರವಾಹದ ನೀರಿನಲ್ಲಿ ಮುಳುಗಿದ್ದವು. ಹೀಗಾಗಿ ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್ ಈ ಬಾರಿ ಮುನ್ನೆಚ್ಚರಿಕೆ ಕ್ರಮವಾಗಿ ಜಲಾಶಯದಲ್ಲಿ ಭಾರೀ ನೀರು ಸಂಗ್ರಹವಾಗುವ ಮೊದಲೇ ನದಿಗೆ ನೀರು ಹರಿಸಿದ್ದಾರೆ.

    ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದ ಸ್ನಾನಘಟ್ಟ ಮುಳುಗಡೆ:
    ದಕ್ಷಿಣ ಕನ್ನಡ ಜಿಲ್ಲಾದ್ಯಂತ ಕಳೆದ ಎರಡು ದಿನಗಳಿಂದ ಉತ್ತಮ ಮಳೆಯಾಗುತ್ತಿದ್ದು, ಇಂದೂ ಮಳೆ ಮುಂದುವರೆದಿದೆ. ಮುಂಜಾನೆಯಿಂದಲೇ ಜಿಲ್ಲಾದ್ಯಂತ ಕತ್ತಲು ಆವರಿಸಿ ಗಾಳಿ ಮಳೆಯಾಗುತ್ತಿದೆ. ಜಿಲ್ಲೆಯ ಸುಬ್ರಹ್ಮಣ್ಯ ಸುಳ್ಯ, ಪುತ್ತೂರು, ಬೆಳ್ತಂಗಡಿಯಲ್ಲಿ ಹೆಚ್ಚಿನ ಮಳೆಯಾಗಿದೆ. ಪಶ್ಚಿಮ ಘಟ್ಟದಲ್ಲೂ ಹೆಚ್ಚಿನ ಮಳೆಯಾಗಿದ್ದು, ಜೀವನದಿಗಳಾದ ನೇತ್ರಾವತಿ, ಕುಮಾರಧಾರ, ಫಲ್ಗುಣಿ, ನಂದಿನಿ ನದಿಗಳಲ್ಲಿ ನೀರಿನ ಹರಿವು ಹೆಚ್ಚಳವಾಗಿದೆ.

    ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದ ಸ್ನಾನಘಟ್ಟದಲ್ಲೂ ನೀರಿನ ಹರಿವು ಹೆಚ್ಚಳವಾಗಿದ್ದು, ಮಳೆ ಇದೇ ರೀತಿ ಮುಂದುವರಿದರೆ ಸ್ನಾನಘಟ್ಟ ಮುಳುಗಡೆಯಾಗುವ ಸಾಧ್ಯತೆ ಇದೆ. ಪುತ್ತೂರು ಹಾಗೂ ಪಾಣಾಜೆ ಸಂಪರ್ಕಿಸುವ ಚೇಳ್ಯಡ್ಕ ಸೇತುವೆ ಮುಳುಗಡೆಯಾಗಿದ್ದು, ಅಲ್ಲಿನ ತಗ್ಗು ಪ್ರದೇಶಗಳಿಗೆ ನೀರು ನುಗ್ಗುವ ಭೀತಿ ಎದುರಾಗಿದೆ. ಇನ್ನೂ ನಾಲ್ಕು ದಿನಗಳ ಕಾಲ ರಾಜ್ಯದ ಕರಾವಳಿಯ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ. ಮೂರು ಜಿಲ್ಲೆಯ ಮೀನುಗಾರರೂ ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ.

  • ರಾಜ್ಯದಲ್ಲಿ ಮತ್ತೆ ಪ್ರವಾಹ ಭೀತಿ- ಮಳೆಯ ಅಬ್ಬರಕ್ಕೆ ರಾಷ್ಟ್ರೀಯ ಹೆದ್ದಾರಿ ಸಂಪೂರ್ಣ ಜಲಾವೃತ

    ರಾಜ್ಯದಲ್ಲಿ ಮತ್ತೆ ಪ್ರವಾಹ ಭೀತಿ- ಮಳೆಯ ಅಬ್ಬರಕ್ಕೆ ರಾಷ್ಟ್ರೀಯ ಹೆದ್ದಾರಿ ಸಂಪೂರ್ಣ ಜಲಾವೃತ

    ಬೆಂಗಳೂರು: ರಾಜ್ಯದಲ್ಲಿ ಡೆಡ್ಲಿ ಕೊರೊನಾ ನಡುವೆಯೇ ಮಳೆರಾಯನ ಆರ್ಭಟ ಜೋರಾಗಿ ಇದೆ. ಕಾರವಾರದಲ್ಲಿ ಭಾರೀ ಮಳೆಗೆ ಅಮದಳ್ಳಿ ಗ್ರಾಮ ಸಂಪೂರ್ಣ ಜಲಾವೃತವಾಗಿದ್ದು, ಮನೆಗಳಿಗೆ ನೀರು ನುಗ್ಗಿದ್ದು ಜನರು ಪರದಾಡುವಂತಾಯ್ತು.

    ಜಿಲ್ಲೆಯ ಬೆಳಗಾವಿಯ ಚಿಕ್ಕೋಡಿ ಉಪ ವಿಭಾಗದ ಕೃಷ್ಣಾ ನದಿ ತೀರದಲ್ಲಿ ಈಗ ಪ್ರವಾಹ ಭೀತಿ ಎದುರಾಗಿದೆ. ಮಹಾರಾಷ್ಟ್ರದ ಕೋಂಕಣ ಪ್ರದೇಶಗಳಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ಭಾರೀ ಪ್ರಮಾಣದಲ್ಲಿ ಮಳೆಯಾಗುತ್ತಿರುವ ಪರಿಣಾಮ ಕರ್ನಾಟಕದ ವೇದಗಂಗಾ, ದೂಧಗಂಗಾ, ಕೃಷ್ಣಾ ನದಿಗೆ ಭಾರೀ ಪ್ರಮಾಣದ ನೀರು ಹರಿದು ಬರುತ್ತಿದೆ. ಚಿಕ್ಕೋಡಿ ಮತ್ತು ನಿಪ್ಪಾಣಿ ತಾಲೂಕಿನ 6 ಕೆಳ ಹಂತದ ಸೇತುವೆಗಳು ಮುಳುಗಡೆಯಾಗಿವೆ.

    ದೂಧಗಂಗಾ ನದಿಗೆ ನಿರ್ಮಿಸಿರುವ ಕಾರದಗಾ-ಭೋಜ, ಭೋಜವಾಡಿ-ಕುನ್ನೂರ, ಸಿದ್ನಾಳ-ಅಕ್ಕೋಳ, ಮಲಿಕವಾಡ-ದತ್ತವಾಡ ವೇದಗಂಗಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಕುನ್ನೂರ-ಬಾರವಾಡ ಹಾಗೂ ಕೃಷ್ಣಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಯಡೂರು-ಕಲ್ಲೋಳ ಸೇತುವೆಗಳು ಮುಳುಗಡೆಯಾಗಿದ್ದು, ಪರ್ಯಾಯ ಮಾರ್ಗಗಳಿಂದ ಜನ ಸಂಚರಿಸುತ್ತಿದ್ದಾರೆ. ಅಲ್ಲದೆ ಕೃಷ್ಣಾ ನದಿಗೆ 65 ಸಾವಿರ ಕ್ಯೂಸೆಕ್ಸ್ ನೀರು ಒಳ ಹರಿವು ಇದ್ದು, ಈ ಪ್ರಮಾಣ 1 ಲಕ್ಷ 50 ಸಾವಿರ ಮೀರಿದರೆ ಕೃಷ್ಣಾ ನದಿ ತನ್ನ ಪಾತ್ರವನ್ನ ಬಿಟ್ಟು ಹೊರಗೆ ಬರುತ್ತದೆ. ಇದೆ ಪ್ರಮಾಣದ ನೀರು ಬರುವ ಸಾಧ್ಯತೆ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲಾಡಳಿತ ಪ್ರವಾಹ ಎದುರಿಸಲು ಸಕಲ ಸಿದ್ಧಗೊಂಡಿದೆ.

    ಕೃಷ್ಣನಗರಿ ಉಡುಪಿಯಲ್ಲಿ ಮಳೆರಾಯ ಅಬ್ಬರಿಸುತ್ತಿದ್ದಾನೆ. ಮುಂಜಾಗ್ರತಾ ಕ್ರಮದಿಂದ ಮುಂದಿನ ಮೂರು ದಿನಗಳ ಕಾಲ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಕಳೆದ 24 ಗಂಟೆಯಲ್ಲಿ ಜಿಲ್ಲೆಯಾದ್ಯಂತ 36 ಮಿಲಿ ಮೀಟರ್ ಮಳೆ ಬಿದ್ದಿದ್ದು, ಕಾಪು ತಾಲೂಕಿನ ಇನ್ನಾ ಗ್ರಾಮದಲ್ಲೇ ಅತೀ ಹೆಚ್ಚು 138 ಮಿಲಿ ಮೀಟರ್ ಮಳೆಯಾಗಿದೆ.

    ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಭಾರೀ ಮಳೆ ಆಗಿದೆ. ಜಿಲ್ಲೆಯ ಸುಳ್ಯ, ಪುತ್ತೂರು, ಬೆಳ್ತಂಗಡಿ ತಾಲೂಕಿನಲ್ಲಿ ಹೆಚ್ಚಿನ ಮಳೆಯಾಗಿದೆ. ನೇತ್ರಾವತಿ ನದಿಯಲ್ಲಿ ರಭಸದಲ್ಲಿ ಹರಿಯುತ್ತಿದ್ದು, ಬಂಟ್ವಾಳದ ತಗ್ಗು ಪ್ರದೇಶಗಳಿಗೆ ನೀರು ನುಗ್ಗುವ ಭೀತಿ ಎದುರಾಗಿದೆ. ಇಂದಿನಿಂದ ಜುಲೈ 14 ರವರೆಗೂ ಕರಾವಳಿಯ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

    ಧಾರವಾಡದಲ್ಲೂ ಭಾರೀ ಮಳೆಯಾಗಿದೆ. ಮನೆಗಳಿಗೆ ನೀರು ನುಗ್ಗಿದ ನೀರನ್ನು ಹೊರ ಹಾಕುವಲ್ಲಿ ಜನರು ಹರಸಾಹಸಪಟ್ಟಿದ್ದಾರೆ. ಇತ್ತ ಗದಗದ ಗಜೇಂದ್ರಗಡ, ರೋಣ, ಶಿರಹಟ್ಟಿ, ಲಕ್ಷ್ಮೇಶ್ವರ ತಾಲೂಕಿನಲ್ಲೂ ಧಾರಾಕಾರ ಮಳೆ ಆಗಿದೆ. ಹಾವೇರಿಯ ಶಿಗ್ಗಾಂವಿ, ಬ್ಯಾಡಗಿ, ಹಿರೇಕೆರೂರು ಹಾಗೂ ಹಾನಗಲ್ ತಾಲೂಕಿನಲ್ಲೂ ಮಳೆ ಆಗಿದೆ.

  • ವರುಣನ ಅಬ್ಬರಕ್ಕೆ ಉಕ್ಕಿ ಹರಿಯುತ್ತಿರೋ ನದಿ, ಹಳ್ಳಕೊಳ್ಳಗಳು- ಜನ ಜೀವನ ಅಸ್ತವ್ಯಸ್ತ

    ವರುಣನ ಅಬ್ಬರಕ್ಕೆ ಉಕ್ಕಿ ಹರಿಯುತ್ತಿರೋ ನದಿ, ಹಳ್ಳಕೊಳ್ಳಗಳು- ಜನ ಜೀವನ ಅಸ್ತವ್ಯಸ್ತ

    – ಉಡುಪಿಯಲ್ಲಿ 3 ದಿನ ಆರೆಂಜ್ ಅಲರ್ಟ್ ಘೋಷಣೆ

    ಕಾರವಾರ/ಉಡುಪಿ: ರಾಜ್ಯದ ಹಲವೆಡೆ ಧಾರಾಕಾರ ಮಳೆಯಾಗುತ್ತಿದ್ದು, ಜನರ ಜೀವನ ಅಸ್ತವ್ಯಸ್ತವಾಗಿತ್ತದೆ. ಇತ್ತ ಮಳೆಯಿಂದ ಅನೇಕ ನದಿಗಳು ತುಂಬಿ ಹರಿಯುತ್ತಿವೆ.

    ಉತ್ತರ ಕನ್ನಡ ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ಅಬ್ಬರದ ಮಳೆ ಸುರಿಯುತ್ತಿದೆ. ಕರಾವಳಿ ಭಾಗದ ಅಂಕೋಲ ಭಾಗದಲ್ಲಿ ಅಬ್ಬರದ ಮಳೆಗೆ ಗಂಗಾವಳಿ ನದಿ ಉಕ್ಕಿ ಹರಿಯುತ್ತಿದೆ. ಪರಿಣಾಮ ತಗ್ಗು ಪ್ರದೇಶ ಶಿರೂರು ಗ್ರಾಮದಲ್ಲಿ ಮನೆಗಳಿಗೆ ನೀರು ನುಗ್ಗಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ.

    ಮಳೆಯ ಅಬ್ಬರಕ್ಕೆ ಆವರ್ಸಾದ ಬಳಿ ವಿದ್ಯುತ್ ಕಂಬ ಉರುಳಿ ಎರಡು ಹಸುಗಳು ಸಾವು ಕಂಡಿವೆ. ಕರಾವಳಿ ಉದ್ದಕ್ಕೂ ಮಳೆ ಪ್ರಮಾಣ ಹೆಚ್ಚಾಗಿದ್ದು, ಸಮುದ್ರದ ಅಲೆಯ ಪ್ರಮಾಣ ಸಹ ಏರಿಕೆಯಾಗಿದೆ. ಹೀಗಾಗಿ ಮೀನುಗಾರಿಕೆ ಸಹ ಬಂದ್ ಮಾಡಲಾಗಿದೆ. ಇನ್ನೂ ನಾಲ್ಕು ದಿನಗಳ ಕಾಲ ಹೆಚ್ಚಿನ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

    ಉಡುಪಿ ಜಿಲ್ಲೆಯಲ್ಲಿ ಧಾರಾಕಾರ ಮಳೆ ಬೀಳುತ್ತಿದ್ದು, ಮೂರು ದಿನ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ. ಮಂಗಳವಾರ ರಾತ್ರಿಯಿಂದ ಜಿಲ್ಲೆಯ ಹಲವೆಡೆ ಉತ್ತಮ ಮಳೆಯಾಗುತ್ತಿದ್ದು, ಇಂದು ಬೆಳಗ್ಗೆಯೂ ಧಾರಾಕಾರ ಮಳೆ ಸುರಿದಿದೆ. ಜಿಲ್ಲೆಯಾದ್ಯಂತ ಕಳೆದ 24 ಗಂಟೆಯಲ್ಲಿ 116 ಮಿಲಿ ಮೀಟರ್ ಮಳೆ ಬಿದ್ದಿದೆ. ಇದೇ ಅವಧಿಯಲ್ಲಿ ಕುಂದಾಪುರ ತಾಲೂಕಿನಲ್ಲಿ ಗರಿಷ್ಠ ಸರಾಸರಿ 129 ಮಿಲಿ ಮೀಟರ್ ಮಳೆಯಾಗಿದೆ. ಉಡುಪಿ ತಾಲೂಕಿನಲ್ಲಿ 106, ಕಾರ್ಕಳ ತಾಲೂಕಿನಲ್ಲಿ 108 ಮಿಲಿ ಮೀಟರ್ ಮಳೆ ಬಿದ್ದಿದೆ. ಮಾನ್ಸೂನ್ ಮಳೆ ಮುಂದುವರೆಯಲಿದೆ.

    ಕಳೆದ ಎರಡು ದಿನಗಳಿಂದ ಜಿಲ್ಲೆಯಲ್ಲಿ ಉತ್ತಮ ಮಳೆಯಾಗುತ್ತಿದೆ. ಹೀಗಾಗಿ ಜಿಲ್ಲೆಯ ಎಲ್ಲಾ ನದಿ, ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿವೆ. ಕಳೆದ 24 ಗಂಟೆಯಿಂದ ತೀರ್ಥಹಳ್ಳಿ ಹಾಗೂ ಹೊಸನಗರ ತಾಲೂಕಿನಲ್ಲಿ ಎಡಬಿಡದೆ ಮಳೆಯಾಗುತ್ತಿದ್ದು, ಹಲವೆಡೆ ವಿದ್ಯುತ್ ವ್ಯತ್ಯಯ ಉಂಟಾಗಿದ್ದು, ಜನಜೀವನ ಅಸ್ತವ್ಯಸ್ಥವಾಗಿದೆ. ಜಿಲ್ಲೆಯಲ್ಲಿ ಸರಾಸರಿ 38.66 ಮಿ.ಮೀ. ಮಳೆಯಾಗಿದೆ. ಜಿಲ್ಲೆಯಲ್ಲಿ ಮಳೆ ಹೆಚ್ಚಿನ ಪ್ರಮಾಣದಲ್ಲಿ ಆಗುತ್ತಿರುವ ಕಾರಣ ಜಿಲ್ಲೆಯ ಜಲಾಶಯಗಳಲ್ಲಿ ಒಳ ಹರಿವು ಹೆಚ್ಚಾಗಿದೆ.

  • ಕೇರಳದ ಆನೆ ಸಾವು ಮಾಸುವ ಮುನ್ನವೇ ಯಾದಗಿರಿಯಲ್ಲಿ ಅಮಾನವೀಯ ಘಟನೆ

    ಕೇರಳದ ಆನೆ ಸಾವು ಮಾಸುವ ಮುನ್ನವೇ ಯಾದಗಿರಿಯಲ್ಲಿ ಅಮಾನವೀಯ ಘಟನೆ

    – ಕಾಲು ಕಳ್ಕೊಂಡು ನದಿಯಲ್ಲಿ ನರಳುತ್ತಿರೋ ಎಮ್ಮೆ

    ಯಾದಗಿರಿ: ಇತ್ತೀಚೆಗೆ ಕೇರಳದಲ್ಲಿ ಆನೆಯೊಂದು ದುಷ್ಟರ ಕೃತ್ಯಕ್ಕೆ ನದಿಯಲ್ಲಿ ನರಳಿ ಪ್ರಾಣ ಬಿಟ್ಟಿದೆ. ಈ ಘಟನೆ ಮಾಸುವ ಮುನ್ನವೇ ಮತ್ತೊಂದು ಅಮಾನವೀಯ ಘಟನೆ ಯಾದಗಿರಿಯಲ್ಲಿ ನಡೆಯುತ್ತಿದೆ.

    ಎಮ್ಮೆಯೊಂದು ಜಿಲ್ಲೆಯ ವಡಗೇರಾ ತಾಲೂಕಿನ ಕೊಡಲ ಗ್ರಾಮದ ಸಮೀಪದ ಕೃಷ್ಣಾ ನದಿ ತೀರದಲ್ಲಿ ಮೊಸಳೆ ಹೊಡೆತಕ್ಕೆ ಸಿಕ್ಕು ಕಾಲು ಕಳೆದುಕೊಂಡಿದೆ. ಆದರೆ ಎಮ್ಮೆ ಕಳೆದ ಎರಡು ದಿನಗಳಿಂದ ನರಳುತ್ತಿದೆ. ಈ ವಿಷಯ ಸ್ಥಳೀಯ ಪಶು ಚಿಕಿತ್ಸಾಲಯ ಕ್ಕೆ ಗೊತ್ತಿದ್ದರೂ ಪಶು ವೈದ್ಯರು ಮಾತ್ರ ಎಮ್ಮೆಗೆ ಚಿಕಿತ್ಸೆ ನೀಡಲು ಮುಂದಾಗಿಲ್ಲ. ಇದರಿಂದ ಅತೀವ ನೋವಿನಿಂದ ನರಳುತ್ತಿರುವ ಎಮ್ಮೆ ನೋವು ತಗ್ಗಿಸಿಕೊಳ್ಳಲು ನದಿಯ ನೀರಿನಲ್ಲಿ ಕಾಲ ಕಳೆಯುತ್ತಿದೆ.

    ಕಳೆದ ಎರಡು ದಿನಗಳ ಹಿಂದೆ ನೀರು ಕುಡಿಯಲು ನದಿ ತೀರಕ್ಕೆ ಎಮ್ಮೆ ತೆರಳಿತ್ತು. ಈ ಸಮಯದಲ್ಲಿ ಮೊಸಳೆಯೊಂದು ಎಮ್ಮೆಯ ಮೇಲೆ ಏಕಾಏಕಿ ದಾಳಿ ಮಾಡಿದೆ. ದಾಳಿಯಲ್ಲಿ ಎಮ್ಮೆಯ ಕಾಲು ಕಟ್ ಆಗಿದ್ದು, ಮೊಸಳೆ ಬಾಯಿಂದ ತಪ್ಪಿಸಿಕೊಂಡು ಎಮ್ಮೆ ಜೀವ ಉಳಿಸಿಕೊಂಡಿದೆ. ತೀವ್ರವಾಗಿ ಗಾಯಗೊಂಡಿರುವ ಎಮ್ಮೆಯ ರಕ್ಷಣೆಗೆ ಯಾರೂ ಧಾವಿಸದ ಹಿನ್ನೆಲೆಯಲ್ಲಿ ಕಳೆದ ಎರಡು ದಿನಗಳಿಂದ ನದಿಯ ನೀರಿನಲ್ಲಿ ಎಮ್ಮೆ ಕುಳಿತಿದೆ.

    ಇನ್ನೂ ನದಿಯಲ್ಲಿ ಮೊಸಳೆ ಇರುವುದರಿಂದ ನದಿಗಿಳಿದು ಎಮ್ಮೆ ಕಾಪಾಡಲು ಸ್ಥಳೀಯರು ಹಿಂದೇಟು ಹಾಕುತ್ತಿದ್ದಾರೆ. ಎರಡು ದಿನವಾದರೂ ಎಮ್ಮೆ ಮಾಲಿಕ ಪತ್ತೆಯಾಗಿಲ್ಲ. ವಿಷಯ ತಿಳಿದಿದ್ದರೂ ಇನ್ನೂ ಸ್ಥಳಕ್ಕೆ ಧಾವಿಸಿದ ಪಶು ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

  • ಬಿಟ್ಟು ಬಿಡದೆ ಸುರಿಯುತ್ತಿರೋ ಮಳೆ- ರಸ್ತೆ ತುಂಬೆಲ್ಲಾ ನೀರು

    ಬಿಟ್ಟು ಬಿಡದೆ ಸುರಿಯುತ್ತಿರೋ ಮಳೆ- ರಸ್ತೆ ತುಂಬೆಲ್ಲಾ ನೀರು

    – ಉಡುಪಿಯಲ್ಲಿ 24 ಗಂಟೆ ಆರೆಂಜ್ ಅಲರ್ಟ್

    ಮಂಗಳೂರು/ಉಡುಪಿ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮುಂಗಾರು ಮಳೆ ಅಬ್ಬರಿಸುತ್ತಿದೆ. ಕಳೆದೆರಡು ದಿನಗಳಿಂದ ಕರಾವಳಿಯಲ್ಲಿ ಆಗ್ಗಾಗೆ ಬರುತ್ತಿದ್ದ ಮಳೆ ಇಂದು ಬಿಟ್ಟು ಬಿಡದೆ ಸುರಿಯುತ್ತಿದೆ.

    ಮಂಗಳೂರು ನಗರ ಸೇರಿದಂತೆ ಜಿಲ್ಲೆಯ ಗ್ರಾಮೀಣ ಪ್ರದೇಶಗಳಾದ ಪುತ್ತೂರು, ಸುಳ್ಯ, ಬೆಳ್ತಂಗಡಿ ತಾಲೂಕುಗಳಲ್ಲೂ ಮಳೆ ಎಡೆಬಿಡದೆ ಸುರಿಯುತ್ತಿದೆ. ಪರಿಣಾಮ ನದಿ, ಹೊಳೆಗಳೆಲ್ಲಾ ಮೈತುಂಬಿ ಹರಿಯುತ್ತಿದೆ. ಮುಂಗಾರು ಆರಂಭವಾಗಿ ತಿಂಗಳುಗಳೇ ಕಳೆದರೂ ಈ ಬಾರಿ ಮಳೆ ಮಾತ್ರ ಬಿರುಸಾಗಿರಲಿಲ್ಲ. ಆದರೆ ಇಂದಿನಿಂದ ಮುಂಗಾರು ಅಬ್ಬರಿಸುತ್ತಿದೆ.

    ಮಂಗಳೂರು ನಗರದಲ್ಲೂ ಭಾರೀ ಮಳೆಯಾಗುತ್ತಿದ್ದು, ದ್ವಿ ಚಕ್ರ ವಾಹನ ಸವಾರರು ಮಳೆಗೆ ಹೈರಾಣಾಗಿದ್ದಾರೆ. ಭಾರೀ ಮಳೆಯಿಂದ ರಸ್ತೆ ತುಂಬೆಲ್ಲಾ ನೀರು ತುಂಬಿ ವಾಹನ ಸಂಚಾರಕ್ಕೆ ಪರದಾಡುವಂತಾಯಿತು. ಪಶ್ಚಿಮ ಘಟ್ಟ ಪ್ರದೇಶದಲ್ಲೂ ಭಾರೀ ಮಳೆ ಸುರಿಯುತ್ತಿರುವ ಕಾರಣ, ನೇತ್ರಾವತಿ, ಕುಮಾರಾಧಾರಾ, ಮಂಗಳೂರಿನ ಫಲ್ಗುಣಿ ನದಿಯಲ್ಲೂ ನೀರಿನ ಹರಿವು ಜಾಸ್ತಿಯಾಗಿದೆ. ಇನ್ನೂ ಎರಡು ದಿನ ಭಾರೀ ಗಾಳಿ ಮಳೆಯಾಗುವ ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಹೀಗಾಗಿ ನದಿ ಪಾತ್ರದ ಜನರು ಎಚ್ಚರಿಕೆಯಿಂದ ಇರುವಂತೆ ಜಿಲ್ಲಾಡಳಿತ ಜನರಿಗೆ ಸೂಚಿಸಿದೆ.

    ಇನ್ನೂ ಉಡುಪಿ ಜಿಲ್ಲೆಯಾದ್ಯಂತ ಧಾರಾಕಾರ ಮಳೆ ಸುರಿಯುತ್ತಿದೆ. ಕಳೆದ ರಾತ್ರಿಯೂ ಜಿಲ್ಲೆಯ ಕಾರ್ಕಳ, ಕುಂದಾಪುರ ತಾಲೂಕಿನಲ್ಲಿ ಭಾರೀ ಮಳೆ ಬಿದ್ದಿದೆ. ಹವಾಮಾನ ಇಲಾಖೆ ಜಿಲ್ಲೆಯಾದ್ಯಂತ ನಿರಂತರ ಮಳೆಯಾಗುವ ಮುನ್ಸೂಚನೆ ಕೊಟ್ಟಿದೆ. ಮುಂದಿನ 24 ಗಂಟೆ ಜಿಲ್ಲೆಯಲ್ಲಿ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ.

    ಉಡುಪಿ ನಗರದಾದ್ಯಂತ ಭಾರೀ ಮಳೆ ಬಿದ್ದಿದ್ದು, ಮಳೆ ನೀರಿನ ರಭಸಕ್ಕೆ ಕಾಲುವೆಗಳೆಲ್ಲಾ ತುಂಬಿಕೊಂಡಿದೆ. ರಸ್ತೆಯಲ್ಲೆಲ್ಲಾ ಮಳೆ ನೀರು ತುಂಬಿ ಹರಿಯುತ್ತಿದೆ. ಗ್ರಾಮೀಣ ಭಾಗದಲ್ಲೂ ವಿಪರೀತ ಮಳೆಯಾಗುತ್ತಿದ್ದು, ನದಿಗಳು ತುಂಬಿ ಹರಿಯುತ್ತಿದೆ. ನಾಡದೋಣಿ ಮೀನುಗಾರರಿಗೆ ಎಚ್ಚರಿಕೆ ನೀಡಿರುವ ಜಿಲ್ಲಾಡಳಿತ, ನದಿ ಪಾತ್ರದ ಜನ ಮುಂಜಾಗ್ರತಾ ಕ್ರಮ ಕೈಗೊಂಡಿರಬೇಕು ಎಂದು ಸೂಚಿಸಿದೆ.

  • ಕುಮಾರಧಾರ ನದಿಗೆ ಮೀನು ಹಿಡಿಯಲು ಹೋಗಿದ್ದ ಯುವಕ ಸಾವು

    ಕುಮಾರಧಾರ ನದಿಗೆ ಮೀನು ಹಿಡಿಯಲು ಹೋಗಿದ್ದ ಯುವಕ ಸಾವು

    ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಎಡಮಂಗಲದ ದೊಳ್ತಿಲ ಎಂಬಲ್ಲಿ ಕುಮಾರಧಾರ ನದಿಗೆ ಮೀನು ಹಿಡಿಯಲು ಹೋದ ಯುವಕನೊಬ್ಬ ನೀರಿನಲ್ಲಿ ಮುಳುಗಿ ನಾಪತ್ತೆಯಾಗಿರುವ ಘಟನೆ ನಿನ್ನೆ ರಾತ್ರಿ ನಡೆದಿತ್ತು. ಇಂದು ಆತ ನಾಪತ್ತೆಯಾಗಿದ್ದ ಸ್ವಲ್ಪ ದೂರದಲ್ಲಿ ಮೃತದೇಹ ನದಿ ನೀರಿನಲ್ಲಿ ಪತ್ತೆಯಾಗಿದೆ.

    ಮೃತ ಯುವಕನನ್ನು ದೊಳ್ತಿಲ ರಾಮಣ್ಣ ನಾಯ್ಕ್ ಅವರ ಪುತ್ರ ಪ್ರಕಾಶ್ (26) ಎಂದು ಗುರುತಿಸಲಾಗಿದೆ. ಪ್ರಕಾಶ್ ಹಾಗೂ ತನ್ನ ಸ್ನೇಹಿತರಿಬ್ಬರ ಜೊತೆ ಮೀನು ಹಿಡಿಯಲು ಬಿಟ್ಟಿದ್ದ. ಬಲೆಯನ್ನು ಈಜಿ ತರುತ್ತಿರುವಾಗ ನೀರಿನ ರಭಸಕ್ಕೆ ಕೊಚ್ಚಿ ಕೊಂಡು ಹೋಗಿದ್ದು ನಾಪತ್ತೆಯಾಗಿದ್ದ. ಸ್ಥಳಕ್ಕೆ ಪುತ್ತೂರು ಅಗ್ನಿಶಾಮಕ ದಳದ ಅಧಿಕಾರಿಗಳು, ಬೆಳ್ಳಾರೆ ಪೊಲೀಸರು ಭೇಟಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದನ್ನು ಓದಿ: ಕರಾವಳಿಯಲ್ಲಿ ಭಾರೀ ಮಳೆ- ತುಂಬುತ್ತಿರುವ ಜಿಲ್ಲೆಯ ಜೀವನದಿಗಳು

  • ವರುಣನ ಅಬ್ಬರಕ್ಕೆ ಜಮೀನು, ರಸ್ತೆ ಜಲಾವೃತ- ಉಕ್ಕಿ ಹರಿಯುತ್ತಿರೋ ಹಳ್ಳಗಳು

    ವರುಣನ ಅಬ್ಬರಕ್ಕೆ ಜಮೀನು, ರಸ್ತೆ ಜಲಾವೃತ- ಉಕ್ಕಿ ಹರಿಯುತ್ತಿರೋ ಹಳ್ಳಗಳು

    ವಿಜಯಪುರ: ಅನೇಕ ದಿನಗಳಿಂದ ರಾಜ್ಯದ ಹಲವೆಡೆ ಧಾರಾಕಾರ ಮಳೆಯಾಗುತ್ತಿದ್ದು, ಜನರ ಜೀವನ ಅಸ್ತವ್ಯಸ್ತವಾಗುತ್ತಿದೆ. ತಡರಾತ್ರಿ ವಿಜಯಪುರ ಜಿಲ್ಲೆಯ ಹಲವೆಡೆ ಮಳೆ ಆಗಿದೆ.

    ಭಾನುವಾರ ಸುರಿದ ಭಾರೀ ಮಳೆಗೆ ಡೋಣಿ ನದಿಯ ಆರ್ಭಟದಿಂದ ಹಳ್ಳಗಳು ಉಕ್ಕಿ ಹರಿಯುತ್ತಿವೆ. ತಾಳಿಕೋಟೆ ತಾಲೂಕಿನ ಮೂಕಿಹಾಳ, ಹಡಗಿನಾಳ, ಕುಚಬಾಳ, ಬಾವೂರು, ಕಲ್ಲದೇವನಹಳ್ಳಿ ಸೇರಿದಂತೆ ಅನೇಕ ಗ್ರಾಮಗಳಲ್ಲಿ ಬಿತ್ತನೆಯಾದ ಜಮೀನುಗಳು ಜಲಾವೃತವಾಗಿದೆ. ಅಲ್ಲದೇ ಡೋಣಿ ನದಿಯ ಎಡ-ಬಲ ಜಮೀನುಗಳು ಸಂಪೂರ್ಣ ಜಲಾವೃತವಾಗಿದೆ.

    ವರುಣನ ಆರ್ಭಟಕ್ಕೆ ಮುದ್ದೇಬಿಹಾಳ ತಾಲೂಕಿನ ಅಡವಿ ಹುಲಗಬಾಳ-ತಾಂಡಾ ಸಂಪರ್ಕಿಸುವ ಸೇತುವೆ ಸಂಪೂರ್ಣ ಜಲಾವೃತಗೊಂಡಿದೆ. ಇದರಿಂದ ಎರಡು ಗ್ರಾಮಗಳ ರಸ್ತೆ ಸಂಚಾರ ಬಂದ್ ಆಗಿದ್ದು, ಹುಲಗಬಾಳ ತಾಂಡಾದ ಸಂಪರ್ಕ ಕಟ್ ಆಗಿದೆ.

    ತಾಳಿಕೋಟೆಯ ಸೋಗಲಿ ಹಳ್ಳದ ಆರ್ಭಟಕ್ಕೆ ರೈತರು ಕಂಗಾಲಾಗಿದ್ದು, ನಲತವಾಡ ಗ್ರಾಮದ ಕೆಲ ಬಡಾವಣೆಗಳಲ್ಲಿ ಮನೆಗಳಿಗೆ ನೀರು ನುಗ್ಗಿದ್ದು, ಬಡಾವಣೆಯ ರಸ್ತೆಯಲ್ಲಿ ಮೊಣಕಾಲುವರೆಗೂ ನೀರು ಹರಿಯುತ್ತಿದೆ.