Tag: ನದಿ

  • ರಾಜ್ಯದಲ್ಲಿ ಮೊದಲ ಡ್ಯಾಂ ಭರ್ತಿ – 22 ಗೇಟ್‍ಗಳ ಮೂಲಕ ನೀರು ಹೊರಕ್ಕೆ

    ರಾಜ್ಯದಲ್ಲಿ ಮೊದಲ ಡ್ಯಾಂ ಭರ್ತಿ – 22 ಗೇಟ್‍ಗಳ ಮೂಲಕ ನೀರು ಹೊರಕ್ಕೆ

    – ತುಂಬಿದ ತುಂಗೆಯಲ್ಲಿ ಐವರು ಸಾಹಸಿಗಳಿಂದ ರ‍್ಯಾಪ್ಟಿಂಗ್

    ಶಿವಮೊಗ್ಗ: ರಾಜ್ಯದಲ್ಲಿ ಮಳೆಯ ಆರ್ಭಟ ಜೋರಾಗಿದ್ದು, ಈಗಾಗಲೇ ಅನೇಕ ನದಿ, ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿದೆ. ಇದೀಗ ರಾಜ್ಯದಲ್ಲಿ ಮೊದಲ ಡ್ಯಾಂ ಭರ್ತಿ ಯಾಗಿದ್ದು, ಜಲಾಶಯದಿಂದ ನೀರನ್ನು ಹೊರಕ್ಕೆ ಬಿಡಲಾಗುತ್ತಿದೆ.

    ಶಿವಮೊಗ್ಗದ ಗಾಜನೂರಿನ ತುಂಗಾ ಜಲಾಶಯ ಭರ್ತಿಯಾಗಿದ್ದು, 22 ಗೇಟ್‍ಗಳ ಮೂಲಕ 71 ಸಾವಿರ ಕ್ಯೂಸೆಕ್ ನೀರನ್ನು ನದಿಗೆ ಬಿಡಲಾಗುತ್ತಿದೆ. ಮಲೆನಾಡಿನಲ್ಲಿ ನಿರಂತರ ಮಳೆ ಹಿನ್ನೆಲೆಯಲ್ಲಿ ಡ್ಯಾಂ ನಿಂದ ನೀರನ್ನು ಹೊರಕ್ಕೆ ಬಿಡಲಾಗುತ್ತಿದೆ.

    ಶಿವಮೊಗ್ಗದ ಗಾಜನೂರಿನ ತುಂಗಾ ಜಲಾಶಯಕ್ಕೆ ಯಥೇಚ್ಛ ನೀರು ಹರಿದು ಬಂದಿದೆ. ಇದರಿಂದ ಜಲಾಶಯ ಭರ್ತಿಯಾದ ಹಿನ್ನೆಲೆಯಲ್ಲಿ ನೀರಿನ ಮಟ್ಟ 588.24 ಮೀಟರ್‌ಗಿಂತಲೂ ಹೆಚ್ಚು ತಲುಪಿದೆ. ಗಾಜನೂರು ಡ್ಯಾಂ 588.24 ಮೀಟರ್ ಎತ್ತರ ಇದೆ. ಶೃಂಗೇರಿ, ತೀರ್ಥಹಳ್ಳಿ ಭಾಗಗಳಲ್ಲಿ ಮಳೆ ಬೀಳುತ್ತಿರುವ ಕಾರಣ ಜಲಾಶಯಕ್ಕೆ ನೀರು ಹರಿದು ಬರುತ್ತಿದೆ. ಡ್ಯಾಂಗೆ 70 ಸಾವಿರ ಕ್ಯೂಸೆಕ್ ಒಳ ಹರಿವು ಬರುತ್ತಿರುವ ಹಿನ್ನೆಲೆಯಲ್ಲಿ ಜನರು ಸಂತಸ ವ್ಯಕ್ತಪಡಿಸುತ್ತಿದ್ದಾರೆ.

    ತುಂಬಿದ ತುಂಗೆಯಲ್ಲಿ ಐವರು ಸಾಹಸಿಗಳಿಂದ ರ‍್ಯಾಪ್ಟಿಂಗ್
    ಮಲೆನಾಡಿನ ಭಾಗದಲ್ಲಿ ಅತಿ ಹೆಚ್ಚು ಮಳೆ ಆಗುತ್ತಿರುವ ಹಿನ್ನೆಲೆಯಲ್ಲಿ ಶಿವಮೊಗ್ಗದ ಗಾಜನೂರಿನ ತುಂಗಾ ಜಲಾಶಯ ಭರ್ತಿಯಾಗಿದೆ. ಜಲಾಶಯ ಭರ್ತಿಯಾಗಿರುವ ಕಾರಣ 71 ಸಾವಿರ ಕ್ಯೂಸೆಕ್ ನೀರನ್ನು ನದಿಗೆ ಬಿಡಲಾಗುತ್ತಿದೆ. ಈ ತುಂಬಿ ಹರಿಯುತ್ತಿರುವ ತುಂಗೆಯಲ್ಲಿ ಯೂತ್ ಹಾಸ್ಟೆಲ್ ಅಸೋಸಿಯೇಷನ್ ಮತ್ತು ಸಾಹಸಿಗರ ತಂಡದಿಂದ ರ‍್ಯಾಪ್ಟಿಂಗ್ ಆರಂಭಿಸಿದ್ದಾರೆ.

    ಮೂರು ಬೋಟಿನಲ್ಲಿ ಐವರು ರ್‍ಯಾಪ್ಟಿಂಗ್‌ನಲ್ಲಿ ಭಾಗವಹಿಸಿದ್ದು, ಶಿವಮೊಗ್ಗದ ತುಂಗಾನದಿ ಹೊಸ ಸೇತುವೆಯಿಂದ ಪಯಣ ಆರಂಭಿಸಿದ್ದಾರೆ. ಈ ಸಾಹಸಿಗರ ತಂಡ ಪ್ರತಿವರ್ಷ ತುಂಗಾನದಿ ಭರ್ತಿಯಾದ ವೇಳೆ ಈ ರೀತಿಯ ಸಾಹಸ ಕಾರ್ಯದಲ್ಲಿ ತೊಡಗುತ್ತಾರೆ. ಅದೇ ರೀತಿ ಈ ಬಾರಿ ಸಹ ಸಾಹಸ ಪಯಣದಲ್ಲಿ ತೊಡಗಿದ್ದಾರೆ. ಶಿವಮೊಗ್ಗದಿಂದ ಹೊರಟು ಹೊನ್ನಾಳಿ ತಾಲೂಕಿನ ರಾಂಪುರಕ್ಕೆ ತೆರಳಲಿದೆ. ಸುಮಾರು 50 ಕಿ.ಮೀ. ಪಯಣ ಇದಾಗಿದೆ.

  • ಕೊಡಗಿನಲ್ಲಿ ಮತ್ತೆ ಗುಡ್ಡ ಕುಸಿತ – ಸ್ಥಳೀಯ ನಿವಾಸಿಗಳ ಸ್ಥಳಾಂತರ

    ಕೊಡಗಿನಲ್ಲಿ ಮತ್ತೆ ಗುಡ್ಡ ಕುಸಿತ – ಸ್ಥಳೀಯ ನಿವಾಸಿಗಳ ಸ್ಥಳಾಂತರ

    ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಆಶ್ಲೇಷ ಮಳೆಯ ಆರ್ಭಟದ ಹಿನ್ನೆಲೆಯಲ್ಲಿ ಗುರುವಾರ ತಲಕಾವೇರಿ ಬ್ರಹ್ಮಗಿರಿ ಬೆಟ್ಟ ಕುಸಿದಿತ್ತು. ಇದೀಗ ಜಿಲ್ಲೆಯಲ್ಲಿ ಮತ್ತೆ ಗುಡ್ಡ ಕುಸಿತವಾಗಿದೆ. ಇದನ್ನೂ ಓದಿ: ಕೊಡಗಿನಲ್ಲಿ ಬೆಟ್ಟ ಕುಸಿತದಿಂದ ನಾಲ್ವರು ನಾಪತ್ತೆ- ಎನ್‍ಡಿಆರ್‍ಎಫ್ ತಂಡ ಸ್ಥಳಕ್ಕೆ ದೌಡು

    ಮಡಿಕೇರಿ ತಾಲೂಕಿನ ಬೊಟ್ಲಪ್ಪ ಗ್ರಾಮದಲ್ಲಿ ಭೂಕುಸಿತವಾಗಿದ್ದು, ಇದರಿಂದ ಮುನ್ನೆಚ್ಚರಿಕೆಯಾಗಿ ಸ್ಥಳೀಯ ನಿವಾಸಿಗಳನ್ನು ಸ್ಥಳಾಂತರ ಮಾಡಲಾಗುತ್ತಿದೆ. ಸ್ಥಳೀಯರಿಂದ ಕಾರ್ಯಾಚರಣೆ ನಡೆಯುತ್ತಿದ್ದು, ಅಪಾಯದಲ್ಲಿ ಸಿಲುಕಿರುವವರ ರಕ್ಷಣಾ ಕಾರ್ಯ ಮಾಡಲಾಗುತ್ತಿದೆ. ಆದರೆ ಸಂಪರ್ಕ ಕಡಿತಗೊಂಡ ಪರಿಣಾಮ ಕಾರ್ಯಾಚರಣೆಗೆ ಅಡ್ಡಿಯಾಗಿದೆ.

    ಜಿಲ್ಲೆಯಲ್ಲಿ ಧಾರಾಕಾರವಾಗಿ ಸುರಿಯುತ್ತಿರೋ ಮಳೆ ಹಿನ್ನೆಲೆಯಲ್ಲಿ ಭಾಗಮಂಡಲದ ಭಗಂಡೇಶ್ವರ ದೇವಸ್ಥಾನ ಜಲಾವೃತವಾಗಿದೆ. ಸತತವಾಗಿ ಎರಡನೇ ವರ್ಷವೂ ದೇವಲಯದ ಆವರಣಕ್ಕೆ ನೀರು ನುಗ್ಗಿದೆ. ಗುರುವಾರಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ನೀರು ನುಗ್ಗಿದೆ.

    ಇನ್ನೂ ಕಾವೇರಿ ನದಿ ತುಂಬಿ ಹರಿಯುತ್ತಿದ್ದು, ಕುಶಾಲನಗರದ ಜನರು ಪ್ರವಾಹದ ಭೀತಿಯಲ್ಲಿದ್ದಾರೆ. ಇದರಿಂದ ಸಾಯಿ ಬಡಾವಣೆ ಕುವೆಂಪುನಗರ ಮುಳುಗಡೆಯ ಭೀತಿಯಲ್ಲಿದೆ. ಅಲ್ಲದೇ ಮನೆಗಳಿಗೆ ನದಿಯ ನೀರು ನುಗ್ಗಿದ್ದು, ಭಾಗಶಃ ಮನೆಗಳು ಜಲಾವೃತವಾಗಿವೆ. ಇದರಿಂದ ಬಡಾವಣೆಯ ಜನರು ಸಂಕಷ್ಟದಲ್ಲಿದ್ದಾರೆ. ಮಧ್ಯಾಹ್ನದ ವೇಳೆಗೆ ನೀರಿನ ಪ್ರಮಾಣ ಮತ್ತಷ್ಟು ಜಾಸ್ತಿಯಾಗಲಿದೆ.

  • ಕಬಿನಿಯಲ್ಲಿ ಒಳ ಹರಿವು ಹೆಚ್ಚಳ – ಕಪಿಲಾ ನದಿ ಪಾತ್ರದ ಜನತೆಯಲ್ಲಿ ಪ್ರವಾಹದ ಆತಂಕ

    ಕಬಿನಿಯಲ್ಲಿ ಒಳ ಹರಿವು ಹೆಚ್ಚಳ – ಕಪಿಲಾ ನದಿ ಪಾತ್ರದ ಜನತೆಯಲ್ಲಿ ಪ್ರವಾಹದ ಆತಂಕ

    – ಜಲಾಶಯದಿಂದ 40 ಸಾವಿರ ಕ್ಯೂಸೆಕ್ ನೀರು ಹೊರಕ್ಕೆ

    ಮೈಸೂರು: ಕೇರಳದ ವೈನಾಡಿನಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ನಂಜನಗೂಡಿನಲ್ಲಿ ಕಪಿಲಾ ನದಿ ಮೈದುಂಬಿ ಹರಿಯುತ್ತಿದೆ.

    ಕೇರಳದಲ್ಲಿ ಹೆಚ್ಚು ಮಳೆ ಹಿನ್ನೆಲೆಯಲ್ಲಿ ಜಿಲ್ಲೆಯ ಹೆಚ್.ಡಿ.ಕೋಟೆ ತಾಲೂಕಿನ ಬೀಚನಹಳ್ಳಿ ಗ್ರಾಮದ ಕಬಿನಿ ಜಲಾಶಯದ ಒಳ ಹರಿವು ಹೆಚ್ಚಳವಾಗಿದೆ. ಹೀಗಾಗಿ ಜಲಾಶಯದಿಂದ 40 ಸಾವಿರ ಕ್ಯೂಸೆಕ್ ನೀರು ಹೊರಕ್ಕೆ ಬಿಡುಗಡೆ ಮಾಡಲಾಗಿದೆ. ಜಲಾಶಯದಿಂದ ಹೆಚ್ಚು ನೀರನ್ನು ಬಿಡುಗಡೆ ಮಾಡಿದ ಹಿನ್ನೆಲೆಯಲ್ಲಿ ಕಪಿಲಾ ನದಿ ಪಾತ್ರದ ಜನರಿಗೆ ಎಚ್ಚರಿಕೆ ನೀಡಲಾಗಿದೆ.

    ಕಬಿನಿ ಜಲಾಶಯದ ಒಳ ಹರಿವು ಹೆಚ್ಚಾದ ಪರಿಣಾಮ ನಂಜನಗೂಡಿನ ಕಪಿಲಾ ನದಿ ಸ್ನಾನಘಟ್ಟ ಮುಳುಗಡೆಯಾಗಿದೆ. ಅಲ್ಲದೇ ಇಂದು ಮತ್ತು ನಾಳೆ ಇನ್ನೂ ನದಿಯ ಒಳಹರಿವು ಹೆಚ್ಚಾಗುವ ಸಾಧ್ಯತೆ ಇದೆ. ಇದರಿಂದ ನಂಜನಗೂಡಿನ ತೋಪಿನ ಬೀದಿ, ಹಳ್ಳದಕೇರಿ, ಕುರುಬಗೇರಿ, ಮೇದರಗೇರಿ, ಸರಸ್ವತಿ ಕಾಲೋನಿ ಸೇರಿದಂತೆ ವಿವಿಧ ಬಡಾವಣೆಗಳ ಜನತೆಯಲ್ಲಿ ಆತಂಕ ಉಂಟಾಗಿದೆ.

    ಕಳೆದ ಬಾರಿ ಪ್ರವಾಹದಿಂದ ನೂರಾರು ಕುಟುಂಬಕ್ಕೆ ಸಮಸ್ಯೆಯಾಗಿತ್ತು. ಮನೆ ಮುಳುಗಿ ಅನೇಕು ಕುಟುಂಬಗಳು ಬೀದಿಗೆ ಬಂದಿದ್ದವು. ಇದೀಗಾ ಮತ್ತೆ ಕುಟುಂಬಗಳು ಪ್ರವಾಹ ಉಂಟಾಗಬಹುದು ಎಂಬ ಆತಂಕದಲ್ಲಿದ್ದಾರೆ.

    ಕಬಿನಿ ಜಲಾಶಯದ ಇಂದಿನ ಒಳಹರಿವು 38 ಸಾವಿರ ಕ್ಯೂಸೆಕ್ ಆಗಿದ್ದು, ಜಲಾಶಯದ ಇಂದಿನ ಹೊರಹರಿವು ಒಟ್ಟು 40 ಸಾವಿರ ಕ್ಯೂಸೆಕ್ ಆಗಿದೆ. ನಾಲೆಗಳಿಗೆ 600 ಕ್ಯೂಸೆಕ್, ನದಿಗೆ 21,458 ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗುತ್ತಿದೆ. ಜಲಾಶಯದ ಇಂದಿನ ನೀರಿನ ಮಟ್ಟ 79.87 ಅಡಿಯಾಗಿದೆ. ಜಲಾಶಯದ ಗರಿಷ್ಠ ನೀರಿನ ಮಟ್ಟ 84 ಅಡಿ ಆಗಿದೆ. ಜಲಾಶಯ ಒಟ್ಟು 19.52 ಟಿಎಂಸಿ ನೀರಿನ ಸಂಗ್ರಹ ಸಾಮರ್ಥ್ಯ ಹೊಂದಿದೆ. ಜಲಾಶಯದಲ್ಲಿಂದು 16.97 ಟಿಎಂಸಿ ನೀರು ಸಂಗ್ರಹವಾಗಿದೆ.

  • ರಾಜ್ಯದಲ್ಲಿ ವರುಣನ ಆರ್ಭಟ- ಜಮೀನು ಜಲಾವೃತ, ಸೇತುವೆಗಳ ಮೇಲೆ ನೀರು

    ರಾಜ್ಯದಲ್ಲಿ ವರುಣನ ಆರ್ಭಟ- ಜಮೀನು ಜಲಾವೃತ, ಸೇತುವೆಗಳ ಮೇಲೆ ನೀರು

    – ಅಪಾಯದ ಮಟ್ಟ ಮೀರಿ ಹರಿಯುತ್ತಿರೋ ನದಿಗಳು

    ಚಿಕ್ಕಮಗಳೂರು/ಬೆಳಗಾವಿ: ಅನೇಕ ದಿನಗಳಿಂದ ರಾಜ್ಯದ ಹಲವೆಡೆ ಧಾರಾಕಾರ ಮಳೆಯಾಗುತ್ತಿದ್ದು, ಜನರ ಜೀವನ ಅಸ್ತವ್ಯಸ್ತವಾಗಿದೆ. ಮತ್ತೊಂದೆಡೆ ಅಧಿಕ ಮಳೆಯಿಂದ ಅನೇಕ ನದಿ, ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿವೆ.

    ಬೆಳಗಾವಿ ಜಿಲ್ಲೆಯ ವಿವಿಧೆಡೆ ಕಳೆದ 24 ಗಂಟೆಗಳಿಂದ ನಿರಂತರವಾಗಿ ಧಾರಾಕಾರ ಮಳೆಯಾಗುತ್ತಿದ್ದು, ಖಾನಾಪುರ ತಾಲೂಕಿನ ಹಳ್ಳಗಳೆಲ್ಲವೂ ಭರ್ತಿಯಾಗಿವೆ. ಇದರಿಂದ ಹಳ್ಳಗಳೆಲ್ಲವೂ ತುಂಬಿ ಜಮೀನು ಜಲಾವೃತವಾಗಿವೆ. ನೂರಾರು ಎಕರೆಯಲ್ಲಿ ರೈತರು ಭತ್ತದ ನಾಟಿ ಮಾಡಿದ್ದರು. ಆದರೆ ಜಮೀನಿನಲ್ಲಿ ನೀರು ತುಂಬಿದ್ದರಿಂದ ಭತ್ತದ ಬೆಳೆ ನಾಶವಾಗಿದೆ. ಖಾನಾಪುರ ತಾಲೂಕಿನ ಅವರೊಳ್ಳಿ, ಕೊಡಚವಾಡ, ಚಿಕ್ಕದಿನಕೊಪ್ಪ, ಬಿಳಕಿ, ಕಗ್ಗಣಗಿ, ಹಿರೇಮುನವಳ್ಳಿ, ಚಿಕ್ಕಮುನವಳ್ಳಿಯಲ್ಲಿ ಅಪಾರ ಬೆಳೆ ಹಾನಿಯಾಗಿದೆ.

    ಅಲ್ಲದೇ ಖಾನಾಪುರ ತಾಲೂಕಿನ ಹಲವಾರು ಸೇತುವೆಗಳ ಮೇಲೆ ನೀರು ಹರಿಯುತ್ತಿದೆ. ಇದರಿಂದ ನಂದಿಹಳ್ಳಿ-ಖಾನಾಪುರ, ಬಡಾಲ ಅಂಕಲಗಿ-ನಂದಿಹಳ್ಳಿ ರಸ್ತೆ ಸಂಚಾರ ಸ್ಥಗಿತವಾಗಿದೆ. ಮಹಾರಾಷ್ಟ್ರದ ಘಟ್ಟ ಪ್ರದೇಶದಲ್ಲಿ ಕಳೆದ ಎರಡು ದಿನಗಳಿಂದ ಭಾರೀ ಮಳೆಯಾಗುತ್ತಿರುವ ಪರಿಣಾಮ ಚಿಕ್ಕೋಡಿ ಮತ್ತು ನಿಪ್ಪಾಣಿ ತಾಲೂಕಿನ ನದಿ ತೀರದ ಗ್ರಾಮಸ್ಥರಲ್ಲಿ ಪ್ರವಾಹದ ಆತಂಕ ಉಂಟಾಗಿದೆ.  ಕೃಷ್ಣಾ, ವೇದಗಂಗಾ ಮತ್ತು ದೂಧಗಂಗಾ ನದಿಯ ಒಳಹರಿವು ಹೆಚ್ಚಳವಾಗಿದೆ.

    ಮಲೆನಾಡನಲ್ಲೂ ಬಿರುಗಾಳಿ ಸಹಿತ ಮಳೆಗೆ ಜನರು ತತ್ತರಿಸಿದ್ದು, ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಗ್ರಾಮಗಳಾದ ಹ್ಯಾಂಡ್ ಪೋಸ್ಟ್, ಮುತ್ತಿಗೆಪುರ, ಅಣಜೂರಿನಲ್ಲಿ ಮರಗಳು ಉರುಳಿ ಬಿದ್ದಿವೆ. ಇತ್ತ ಭದ್ರಾ ನದಿ ಅಪಾಯದ ಮಟ್ಟದಲ್ಲಿ ಹರಿಯುತ್ತಿದ್ದು, ಮೂಡಿಗೆರೆ ತಾಲೂಕಿನ ಕಳಸ ಸಮೀಪದ ಹೆಬ್ಬಾಳೆ ಸೇತುವೆ ಮುಳುಗಡೆಯಾಗಲು ಒಂದು ಅಡಿಯಷ್ಟೆ ಬಾಕಿ ಇದೆ. ಸೇತುವೆ ಮುಳುಗಡೆಯಾದರೆ ಹೊರನಾಡು-ಕಳಸ ಸಂಪರ್ಕ ಕಡಿತವಾಗುತ್ತದೆ.

    ಧಾರವಾಡದಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಮಳೆಗೆ ಧಾರವಾಡ ಸವದತ್ತಿ ರಸ್ತೆ ಕಡಿತವಾಗಿದೆ. ಹಾರೋ ಬೆಳವಡಿ ಬಳಿ ಇರುವ ಸೇತುವೆ ಬಂದ್ ಮಾಡಲಾಗಿದೆ. ಮಳೆಯಿಂದ ಭಾರೀ ಪ್ರಮಾಣದಲ್ಲಿ ನೀರು ಹರಿದು ಬಂದಿದೆ. ಹೀಗಾಗಿ ಹೆಚ್ಚಿನ ಪ್ರಮಾಣದ ನೀರು ಬಂದಿದ್ದರಿಂದ ಸೇತುವೆ ಪಕ್ಕದ ತಾತ್ಕಾಲಿಕ ರಸ್ತೆ ಬಂದ್ ಮಾಡಲಾಗಿದೆ. ಕಳೆದ ವರ್ಷ ಮಳೆಗೆ ಸೇತುವೆ ಕೊಚ್ಚಿ ಹೋಗಿ ರಸ್ತೆ ಕಡಿತಗೊಂಡಿತ್ತು. ಈ ಹಿನ್ನೆಲೆಯಲ್ಲಿ ತಾತ್ಕಾಲಿಕ ರಸ್ತೆ ನಿರ್ಮಾಣ ಮಾಡಲಾಗಿತ್ತು. ಆದರೆ ಭಾರೀ ಮಳೆಗೆ ತಾತ್ಕಾಲಿಕ ರಸ್ತೆ ಕೂಡ ಕಡಿತವಾಗಿದೆ.

    ಹುಬ್ಬಳ್ಳಿ, ಕೊಡಗು ಜಿಲ್ಲೆಯಲ್ಲಿ ಕಳೆದ ರಾತ್ರಿಯಿಂದ ಬಿಟ್ಟು ಬಿಡದೆ ನಿರಂತರವಾಗಿ ಮಳೆ ಸುರಿಯುತ್ತಿದ್ದು, ಮಳೆಯಿಂದ ಜನ ಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಶಿವಮೊಗ್ಗ ಜಿಲ್ಲೆಯಾದ್ಯಂತ ಮಳೆಯ ಆರ್ಭಟ ಮುಂದುವರಿದಿದ್ದು, ಹೊಸನಗರ, ತೀರ್ಥಹಳ್ಳಿ ತಾಲೂಕಿನಾದ್ಯಂತ ಭಾರೀ ಮಳೆಯಾಗುತ್ತಿದೆ.

    ಇದರಿಂದ ಜನರು ಮನೆಯಿಂದ ಹೊರಬರಲಾಗದೇ ಕಷ್ಟ ಪಡುತ್ತಿದ್ದಾರೆ. ತೀರ್ಥಹಳ್ಳಿ, ಹೊಸನಗರ ತಾಲೂಕಿನ ಹಲವೆಡೆ ವಿದ್ಯುತ್ ಸಂಪರ್ಕ ಕಡಿತವಾಗಿತ್ತು. ಜೊತೆಗೆ ಅಪಾಯದ ಮಟ್ಟ ಮೀರಿ ನದಿಗಳು, ಹಳ್ಳ-ಕೊಳ್ಳಗಳು ಹರಿಯುತ್ತಿವೆ. ಜಿಲ್ಲೆಯ ತುಂಗಾ, ಭದ್ರಾ ಹಾಗೂ ಶರಾವತಿ ನದಿಗಳಲ್ಲಿ ಒಳಹರಿವು ಗಣನೀಯ ಪ್ರಮಾಣದಲ್ಲಿ ಹೆಚ್ಚಳವಾಗಿದೆ.

  • ವರುಣನ ಅಬ್ಬರ – ತುಂಬಿದ ಕಾವೇರಿ, ಲಕ್ಷ್ಮಣ ತೀರ್ಥ ನದಿ

    ವರುಣನ ಅಬ್ಬರ – ತುಂಬಿದ ಕಾವೇರಿ, ಲಕ್ಷ್ಮಣ ತೀರ್ಥ ನದಿ

    – ಜಲಪಾತದಲ್ಲಿ ಧುಮ್ಮಿಕ್ಕಿ ಹರಿಯುತ್ತಿರೋ ಶರಾವತಿ
    – ಮನೆಯ ಮೇಲೆ ಮರ ಬಿದ್ದು ಜಖಂ

    ಶಿವಮೊಗ್ಗ/ಮಡಿಕೇರಿ: ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಸುತ್ತಮುತ್ತ ಕಳೆದ ಎರಡು ದಿನಗಳಿಂದ ಭಾರೀ ಮಳೆಯಾಗುತ್ತಿದೆ. ಭಾರೀ ಗಾಳಿ ಮಳೆಗೆ ಬೃಹತ್ ಗಾತ್ರದ ಮರವೊಂದು ಮನೆಯ ಮೇಲೆ ಬಿದ್ದ ಪರಿಣಾಮ ಮನೆ ಜಖಂಗೊಂಡಿರುವ ಘಟನೆ ನಗರ ಹೋಬಳಿಯ ಮಾಸ್ತಿಕಟ್ಟೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಇಂದ್ರಮನೆಯಲ್ಲಿ ನಡೆದಿದೆ.

    ಘಟನೆಯಲ್ಲಿ ಮನೆಯಲ್ಲಿದ್ದ ಮಗು ಹಾಗೂ ನಾಲ್ವರು ಅಪಾಯದಿಂದ ಪಾರಾಗಿದ್ದು, ಇಬ್ಬರು ಮಹಿಳೆಯರು ಗಾಯಗೊಂಡಿದ್ದಾರೆ. ಗಾಯಾಳು ಮಹಿಳೆಯರಿಗೆ ಮಾಸ್ತಿಕಟ್ಟೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಗಾಳಿ ಮಳೆಗೆ ಮರ ಮನೆ ಮೇಲೆ ಬಿದ್ದ ಪರಿಣಾಮ ಮನೆ ಸಂಪೂರ್ಣ ಹಾನಿಯಾಗಿದ್ದು, ವಾಸ ಮಾಡಲು ಸಾಧ್ಯವಾಗದಂತೆ ಆಗಿದೆ. ಸುಮಾರು 8 ಲಕ್ಷ ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ. ಸ್ಥಳಕ್ಕೆ ಗ್ರಾಮ ಪಂಚಾಯ್ತಿ ಅಧ್ಯಕ್ಷ ಹಾಗೂ ಗ್ರಾಮ ಲೆಕ್ಕಾಧಿಕಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

    ಇತ್ತ ಉತ್ತಮ ಮಳೆಯ ಕಾರಣ ರಾಜ್ಯದ ಪ್ರಸಿದ್ಧ ಜಲಪಾತಗಳಲ್ಲಿ ಒಂದಾದ ಜಿಲ್ಲೆಯ ಸಾಗರ ತಾಲೂಕಿನ ಜೋಗ ಜಲಪಾತದಲ್ಲಿ ಶರಾವತಿ ಧುಮ್ಮಿಕ್ಕಿ ಹರಿಯುತ್ತಿದೆ. ಜೋಗದ ವೈಭೋಗವನ್ನು ವೀಕ್ಷಿಸಲು ಹೊರ ರಾಜ್ಯಗಳಿಂದ ಪ್ರವಾಸಿಗರು ಜೋಗಕ್ಕೆ ಭೇಟಿ ನೀಡುತ್ತಿದ್ದರು. ಆದರೆ ಈ ಬಾರಿ ಕೊರೊನಾದಿಂದ ಜೋಗ ಜಲಪಾತ ವೀಕ್ಷಣೆಗೆ ಪ್ರವಾಸಿಗರು ಇಲ್ಲದಂತಾಗಿದೆ.

    ಇನ್ನೂ ದಕ್ಷಿಣ ಕನ್ನಡ ಜಿಲ್ಲಾದ್ಯಂತ ಮಳೆ ಆರಂಭಗೊಂಡಿದ್ದು, ಸಂಜೆಯಿಂದ ಗಾಳಿ ಮಳೆ ಸುರಿಯಲಾರಂಭಿಸಿದೆ. ನಾಳೆ ರಾತ್ರಿಯವರೆಗೂ ಭಾರೀ ಮಳೆಯಾಗುವ ಮುಸ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದ್ದು, ರೆಡ್ ಅಲರ್ಟ್ ಘೋಷಿಸಿದೆ. ಜಿಲ್ಲೆಯ ಬೆಳ್ತಂಗಡಿ, ಸುಳ್ಯ, ಪುತ್ತೂರು ತಾಲೂಕಿನಾದ್ಯಂತ ಹೆಚ್ಚಿನ ಮಳೆಯಾಗಿದ್ದು, ಮಂಗಳೂರು ನಗರದಲ್ಲೂ ಬಿರುಸಿನ ಮಳೆಯಾಗಿದೆ. ಆಗಸ್ಟ್ 6 ರಿಂದ 9 ರವರೆಗೂ ಮಳೆ ಮುಂದುವರಿಯಲಿದ್ದು, ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಘೋಷಿಸಿದೆ. ಸಮುದ್ರ ಹಾಗೂ ನದಿ ಪಾತ್ರದ ಜನ ಎಚ್ಚರಿಕೆಯಿಂದ ಇರುವಂತೆ ಸೂಚಿಸಿದ್ದು, ಮೀನುಗಾರಿಕೆ ನಡೆಸದಂತೆ ಎಚ್ಚರಿಕೆ ನೀಡಿದೆ.

    ಕೊಡಗು ಜಿಲ್ಲೆಯಲ್ಲಿ ಮಳೆರಾಯ ಎರಡು ದಿನಗಳಿಂದ ಅಬ್ಬರಿಸುತ್ತಿದ್ದಾನೆ. ಪರಿಣಾಮ ಜಿಲ್ಲೆಯ ಕಾವೇರಿ, ಲಕ್ಷ್ಮಣ ತೀರ್ಥ ಮತ್ತು ಬೇಟೋಳಿ ಹೊಳೆಗಳು ತುಂಬಿ ಹರಿಯುತ್ತಿವೆ. ಭಾಗಮಂಡಲ ಸೇರಿದಂತೆ ಕಾವೇರಿ ಜಲಾನಯನ ಪ್ರದೇಶದಲ್ಲಿ ಭಾರೀ ಮಳೆ ಸುರಿಯುತ್ತಿದ್ದು, ಕಾವೇರಿ ನದಿ ಅಪಾಯದ ಮಟ್ಟದಲ್ಲಿ ಹರಿಯುತ್ತಿದೆ.

    ಮಡಿಕೇರಿ ತಾಲ್ಲೂಕಿನ ನಾಪೋಕ್ಲು ಸಮೀಪ ಕಾವೇರಿ ತುಂಬಿ ಹರಿಯುತ್ತಿದ್ದು, ಪ್ರವಾಹ ಪರಿಸ್ಥಿತಿ ಎದುರಾಗಿದೆ. ಮತ್ತೊಂದೆಡೆ ದಕ್ಷಿಣ ಕೊಡಗಿನ ನಿಟ್ಟೂರು ಬಾಳೆಲೆಯಲ್ಲಿ ಹರಿಯುವ ಲಕ್ಷಣತೀರ್ಥ ನದಿ ಕೂಡ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಜಿಲ್ಲೆಯ ಹಲವೆಡೆ ಮರಗಳು ರಸ್ತೆಗೆ ಉರುಳಿ ಬಿದ್ದಿದೆ. ನಿನ್ನೆಗಿಂತಲೂ ಇಂದು ಮಳೆ ಪ್ರಮಾಣ ತೀವ್ರಗೊಂಡಿದೆ.

    ಸುಂಟಿಕೊಪ್ಪ, ಹರದೂರು ನಡುವೆ ಹಲವು ಮರಗಳು ಬಿದ್ದಿದ್ದು, ಸಂಚಾರಕ್ಕೆ ತೀವ್ರ ತೊಂದರೆಯಾಗಿದೆ. ಈ ನಡುವೆ ಜಿಲ್ಲಾ ಪಂಚಾಯಿತಿ ಸದಸ್ಯ ಸುಂಟಿಕೊಪ್ಪದ ಲತೀಫ್ ನೇತೃತ್ವದ ತಂಡ ತಕ್ಷಣವೇ ಕಾರ್ಯಾಚರಣೆ ನಡೆಸಿ ಮರಗಳನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವುಮಾಡುತ್ತಿದೆ.

  • ಕೊಡಗಿನಲ್ಲಿ ಧಾರಾಕಾರ ಮಳೆ – ಕೆರೆಯಂತಾದ ಹೊಲ, ಗದ್ದೆಗಳು

    ಕೊಡಗಿನಲ್ಲಿ ಧಾರಾಕಾರ ಮಳೆ – ಕೆರೆಯಂತಾದ ಹೊಲ, ಗದ್ದೆಗಳು

    – ಹವಾಮಾನ ಇಲಾಖೆಯಿಂದ ಭಾರೀ ಮಳೆಯ ಮುನ್ಸೂಚನೆ

    ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಎರಡು ದಿನಗಳಿಂದ ಧಾರಾಕಾರ ಮಳೆ ಸುರಿಯುತ್ತಿದೆ. ಭಾಗಮಂಡಲ ತಲಕಾವೇರಿ ವ್ಯಾಪ್ತಿಯಲ್ಲಿ ಕಳೆದ 12 ಗಂಟೆ ಅವಧಿಯಲ್ಲಿ 170 ಮಿಲಿ ಮೀಟರ್‌ಗೂ ಹೆಚ್ಚು ಮಳೆ ಸುರಿದಿದೆ. ಜಿಲ್ಲೆಯಾದ್ಯಂತ ಭಾರೀ ಗಾಳಿ ಸಹಿತ ಮಳೆ ಸುರಿಯುತ್ತಿದ್ದು, ಜನ ಜೀವನ ಅಸ್ತವ್ಯಸ್ತವಾಗಿದೆ.

    ಭಾಗಮಂಡಲ ವ್ಯಾಪ್ತಿಯಲ್ಲಿ ಭಾರೀ ಮಳೆ ಸುರಿಯುತ್ತಿರುವುದರಿಂದ ಭಾಗಮಂಡಲ ತ್ರಿವೇಣಿ ಸಂಗಮ ತುಂಬಿ ಹರಿಯುತ್ತಿದೆ. ಮಳೆ ಹೀಗೆ ಮುಂದುವರಿದಲ್ಲಿ ತ್ರಿವೇಣಿ ಸಂಗಮ ಭರ್ತಿಯಾಗಿ ಸೇತುವೆ ಮುಳುಗಡೆಯಾಗುವ ಸಾಧ್ಯತೆ ಇದೆ. ಹಳ್ಳ ಕೊಳ್ಳಗಳಲ್ಲಿ ಭಾರೀ ಪ್ರಮಾಣದ ನೀರು ಹರಿಯುತ್ತಿದೆ. ತಗ್ಗು ಪ್ರದೇಶದ ಹೊಲ-ಗದ್ದೆಗಳೆಲ್ಲಾ ನೀರು ತುಂಬಿ ಕೆರೆಗಳಂತೆ ಆಗಿವೆ.

    ಈಗಾಗಲೇ ಜಿಲ್ಲೆಯಲ್ಲಿ ಭಾರೀ ಮಳೆ ಸುರಿಯುತ್ತಿದ್ದು, 115 ಮಿಲಿ ಮೀಟರ್‌ನಿಂದ 204 ಮಿಲಿಮೀಟರ್ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈಗಾಗಲೇ ಸೋಮವಾರದಿಂದ ಆರೆಂಜ್ ಅಲರ್ಟ್ ಘೋಷಣೆಯಾಗಿದೆ. ಹೀಗಾಗಿ ಇದೇ ತಿಂಗಳ 8ರ ವರೆಗೂ ಬೆಳಗ್ಗೆ 8 ಗಂಟೆವರೆಗೂ ಜಿಲ್ಲೆಯಲ್ಲಿ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ.

  • ನಾಲ್ಕು ಗೇಟ್‍ಗಳ ಮೂಲಕ ಹಾರಂಗಿ ಜಲಾಶಯದಿಂದ ಹೆಚ್ಚುವರಿ ನೀರು ಹೊರಕ್ಕೆ

    ನಾಲ್ಕು ಗೇಟ್‍ಗಳ ಮೂಲಕ ಹಾರಂಗಿ ಜಲಾಶಯದಿಂದ ಹೆಚ್ಚುವರಿ ನೀರು ಹೊರಕ್ಕೆ

    ಮಡಿಕೇರಿ: ಕೊಡಗಿನಲ್ಲಿ ಧಾರಾಕಾರವಾಗಿ ಮಳೆ ಆಗುತ್ತಿರುವ ಹಿನ್ನೆಲೆಯಲ್ಲಿ ಹಾರಂಗಿ ಜಲಾಶಯದಿಂದ ಹೆಚ್ಚುವರಿ ನೀರನ್ನು ಹೊರಕ್ಕೆ ಹರಿಸಲಾಗುತ್ತಿದೆ.

    ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಹಮ್ಮಿಯಾಲ, ಮುಕೋಡ್ಲು ಮಾದಾಪುರ ಸೇರಿದಂತೆ ಜಿಲ್ಲೆಯಾದ್ಯಂತ ಭಾನುವಾರದಿಂದ ಧಾರಾಕಾರ ಮಳೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಜಲಾಶಯಕ್ಕೆ ನೀರಿನ ಒಳ ಹರಿವಿನ ಪ್ರಮಾಣ ಹೆಚ್ಚಾಗಿದೆ. ಆದ್ದರಿಂದ ಮುಂಜಾಗೃತೆಯಿಂದ ಜಲಾಶಯದ ನಾಲ್ಕು ಕ್ರಸ್ಟ್ ಗೇಟ್‍ಗಳ ಮೂಲಕ ಹೆಚ್ಚುವರಿ ನೀರನ್ನು ಹೊರಕ್ಕೆ ಬಿಡಲಾಗುತ್ತಿದೆ.

    ಹಾರಂಗಿ ಜಲಾಶಯದಿಂದ 3,750 ಕ್ಯೂಸೆಕ್ ನದಿಗೆ ಹಾಗೂ 1,000 ಕ್ಯೂಸೆಕ್ ಪ್ರಮಾಣದ ನೀರನ್ನು ಕಾಲುವೆಗೆ ಬಿಡುಗಡೆ ಮಾಡಲಾಗಿದೆ. ಅಲ್ಲದೇ ಜಲಾಶಯದ ವ್ಯಾಪ್ತಿಯ ಜನರಿಗೆ ಎಚ್ಚರಿಕೆಯಿಂದ ಇರುವಂತೆ ಇಲಾಖೆಯ ಅಧಿಕಾರಿಗಳು ಮನವಿ ಮಾಡಿದ್ದಾರೆ. ಭಾನುವಾರದಿಂದ ಸುರಿಯುತ್ತಿರುವ ಮಳೆಯ ಪರಿಣಾಮ ಹಾರಂಗಿಗೆ 3,009 ಕ್ಯೂಸೆಕ್ ನೀರಿನ ಒಳ ಹರಿವು ಹೆಚ್ಚಳವಾಗಿದೆ.

  • ರಾಮಮಂದಿರಕ್ಕಾಗಿ 151 ನದಿಗಳ ನೀರು ಸಂಗ್ರಹಿಸಿದ ಸೋದರರು

    ರಾಮಮಂದಿರಕ್ಕಾಗಿ 151 ನದಿಗಳ ನೀರು ಸಂಗ್ರಹಿಸಿದ ಸೋದರರು

    ನವದೆಹಲಿ: ಸೋದರರಿಬ್ಬರು ರಾಮಮಂದಿರ ನಿರ್ಮಾಣಕ್ಕಾಗಿ 151 ನದಿಗಳ ಸಂಗ್ರಹಿಸಿದ್ದಾರೆ.

    1968 ರಿಂದ ಶ್ರೀಲಂಕಾದ 16 ಸ್ಥಳಗಳಿಂದ 151 ನದಿಗಳ ನೀರು ಸಂಗ್ರಹಿಸಿದ್ದೇವೆ. ಇವುಗಳಲ್ಲಿ 8 ದೊಡ್ಡ ನದಿಗಳು, 3 ಸಮುದ್ರ ಮತ್ತು ಮಣ್ಣನ್ನು ಸಂಗ್ರಹಿಸಿದ್ದೇವೆ ಎಂದು ರಾಧೆ ಶ್ಯಾಮ್ ಪಾಂಡೆ ಹೇಳುತ್ತಾರೆ.

    ರಾಮ ಮಂದಿರದ ಭೂಮಿ ಪೂಜೆಗೆ ಕ್ಷಣಗಣನೆ ಆರಂಭವಾಗಿದ್ದು, ಕೋಟ್ಯಾಂತರ ಭಕ್ತರು ಕಾಯುತ್ತಿದ್ದಾರೆ. ರಾಮ ಮಂದಿರ ಭೂಮಿ ಪೂಜೆಗಾಗಿ ದೇಶದ ವಿವಿಧ ಪುಣ್ಯ ಕ್ಷೇತ್ರಗಳಿಂದ ಪವಿತ್ರ ಜಲ ಮತ್ತು ಮಣ್ಣು ಸಂಗ್ರಹಿಸಿ ಅಯೋಧ್ಯೆಗೆ ತಲುಪಿಸಲಾಗುತ್ತಿದೆ. ಕೊರೊನಾ ಆತಂಕದಿಂದ ಬಹುತೇಕರು ತಾವಿದ್ದ ಸ್ಥಳದಿಂದಲೇ ಮಂತ್ರ ಪಠಣೆಗೆ ಮುಂದಾಗ್ತಿದ್ದಾರೆ.

    ಆಗಸ್ಟ್ 5ರಂದು ನಡೆಯುವ ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಭಾಗಿಯಾಗಲು ಛತ್ತೀಸ್‍ಗಢದ ಮುಸ್ಲಿಂದ ವ್ಯಕ್ತಿ ಫಯಾಜ್ ಖಾನ್ ಕಾಲ್ನಡಿಗೆಯಲ್ಲಿ ಪ್ರಯಾಣ ಆರಂಭಿಸಿದ್ದಾರೆ.  ಗಮನಾರ್ಹ ವಿಷಯವೆಂದರೆ ಭಗವಾನ್ ರಾಮನ ತಾಯಿ ಕೌಸಲ್ಯೆ ಹುಟ್ಟಿದ್ದು ಛತ್ತೀಸ್‍ಗಢದ ಚಂದ್ಖುರಿಯಲ್ಲಿ ಎಂಬ ನಂಬಿಕೆಯಿದೆ. ಈ ಹಿನ್ನೆಲೆಯಲ್ಲಿ ಇದೇ ಗ್ರಾಮದ ನಿವಾಸಿ ಮೊಹಮ್ಮದ್ ಫಯಾಝ್ ಖಾನ್ ಅವರು ಶ್ರೀರಾಮನ ಪರಮ ಭಕ್ತನಾಗಿದ್ದಾರೆ.

    ನನ್ನ ಹೆಸರು ಹಾಗೂ ಧರ್ಮದಲ್ಲಿ ನಾನೊಬ್ಬ ಮುಸ್ಲಿಂ. ಆದರೆ ನನ್ನ ದೇವರು ರಾಮ. ನಾನು ರಾಮನ ಪರಮಭಕ್ತನಾಗಿದ್ದೇನೆ. ನಮ್ಮ ಪೂರ್ವಜರ ಬಗ್ಗೆ ತಿಳಿದುಕೊಂಡರೆ ಅವರು ಹಿಂದೂಗಳಾಗಿರಬಹುದು. ಅಲ್ಲದೆ ಅವರ ಹೆಸರು ರಾಮ್‍ಲಾಲ್ ಅಥವಾ ಶ್ಯಾಮ್‍ಲಾಲ್ ಆಗಿರಬಹುದು. ನಾವು ಚರ್ಚ್ ಅಥವಾ ಮಸೀದಿಗೇ ಹೋಗಲಿ ಆದರೆ ನಾವೆಲ್ಲರೂ ಹಿಂದೂ ಮೂಲವನ್ನು ಹೊಂದಿದ್ದೇವೆ ಎಂದು ಫಯಾಜ್ ಖಾನ್ ಹೇಳುತ್ತಾರೆ.

  • ಮಳೆಯ ಅವಾಂತರ- ಮನೆಗಳು ಜಲಾವೃತ, ಒಡೆದ ಚೆಕ್ ಡ್ಯಾಂ

    ಮಳೆಯ ಅವಾಂತರ- ಮನೆಗಳು ಜಲಾವೃತ, ಒಡೆದ ಚೆಕ್ ಡ್ಯಾಂ

    – ತುಂಬಿದ ನದಿ, ಹಳ್ಳಕೊಳ್ಳಗಳು

    ದಾವಣಗೆರೆ/ರಾಯಚೂರು: ಅನೇಕ ದಿನಗಳಿಂದ ರಾಜ್ಯದ ಹಲವೆಡೆ ಧಾರಾಕಾರವಾಗಿ ಮಳೆ ಸುರಿಯುತ್ತಿದೆ. ಇದರಿಂದ ಜನರ ಜೀವನ ಕೂಡ ಅಸ್ತವ್ಯಸ್ತವಾಗುತ್ತಿದೆ. ಇದೀಗ ಜಿಲ್ಲೆಯಲ್ಲಿ ಏಕಾಏಕಿ ಸುರಿದ ಮಳೆಗೆ ಮನೆಗಳು ಜಲಾವೃತವಾಗಿವೆ.

    ಜಿಲ್ಲೆಯ ಬಾಡಾ ಗ್ರಾಮದಲ್ಲಿ ಸುರಿದ ನಿರಂತರ ಮಳೆಯಿಂದಾಗಿ ಮನೆಗಳಿಗೆ ನೀರು ನುಗ್ಗಿದೆ. ಇದರಿಂದ ರಾತ್ರಿಯಿಡೀ ನೀರನ್ನು ಜನರು ಹೊರಹಾಕಿದ್ದಾರೆ. ಅಲ್ಲದೇ ಮನೆಯಲ್ಲಿದ್ದ ದವಸ, ಧಾನ್ಯಗಳು ಸಾಮಗ್ರಿಗಳು ನೀರುಪಾಲಾಗಿವೆ. ದಾವಣಗೆರೆ, ಚನ್ನಗಿರಿ, ಮಾಯಕೊಂಡ ಸೇರಿದಂತೆ ಹಲವು ಕಡೆಗಳಲ್ಲಿ ಸತತವಾಗಿ ಮಳೆ ಸುರಿಯುತ್ತಿದೆ.

    ಇತ್ತ ರಾತ್ರಿ ಸುರಿದ ಮಳೆಗೆ ಚೆಕ್ ಡ್ಯಾಂ ಒಡೆದು ಹೋಗಿದೆ. ಜಗಳೂರಿನ ಸಾಲಹಳ್ಳಿ ಮತ್ತು ಹಾಲಹಳ್ಳಿ ಮಧ್ಯೆಯಿರುವ ಚೆಕ್ ಡ್ಯಾಮ್ ಒಡೆದು ನೀರು ಪೋಲಾಗುತ್ತಿದೆ. ಕಳಪೆ ಚೆಕ್ ಡ್ಯಾಂ ನಿರ್ಮಾಣ ಮಾಡಿದ್ದಕ್ಕೆ ಒಡೆದು ಹೋಗಿದೆ ಎಂದು ಜನರು ಆರೋಪ ಮಾಡುತ್ತಿದ್ದಾರೆ. ಜೊತೆಗೆ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಜಗಳೂರು ಸುತ್ತಮುತ್ತ ಕೆರೆ ಕಟ್ಟೆಗಳು ತುಂಬಿವೆ.

    ಇನ್ನೂ ರಾಯಚೂರು ಜಿಲ್ಲೆಯಲ್ಲಿ ನಿರಂತರವಾಗಿ ಗುಡುಗು ಸಹಿತ ಭಾರೀ ಮಳೆಯಾಗಿದ್ದು, ಜಿಲ್ಲೆಯಾದ್ಯಂತ ಸುರಿಯುತ್ತಿರುವ ಮಳೆಯಿಂದ ಜನರು ಪರದಾಟ ಮಾಡುತ್ತಿದ್ದಾರೆ. ಧಾರಾಕಾರವಾಗಿ ಮಳೆಯಿಂದಾಗಿ ತಗ್ಗು ಪ್ರದೇಶದ ಮನೆಗಳಿಗೆ ಮಳೆ ನೀರು ನುಗ್ಗಿದೆ. ಅಲ್ಲದೇ ನಿರಂತರ ಮಳೆಯಿಂದ ಬೆಳೆ ಹಾಳಾಗುವ ಆತಂಕದಲ್ಲಿ ಅನ್ನದಾತರು ಕಂಗಾಲಾಗಿದ್ದಾರೆ.

    ಭಾರೀ ಮಳೆಯಿಂದಾಗಿ ಹಳ್ಳಕೊಳ್ಳಗಳು ತುಂಬಿವೆ. ರಾಯಚೂರಿನ ಮಸ್ಕಿ ತಾಲೂಕಿನಲ್ಲಿರುವ ಮಸ್ಕಿ ಜಲಾಶಯ ಭರ್ತಿಯಾಗಿದ್ದು, ಹೆಚ್ಚುವರಿ ನೀರು ಹಳ್ಳಕ್ಕೆ ಬಿಡಲು ಸಿದ್ಧತೆ ಮಾಡಲಾಗುತ್ತಿದೆ. ಯಾವುದೇ ಕ್ಷಣದಲ್ಲಿ ಜಲಾಶಯದಿಂದ ಹಳ್ಳಕ್ಕೆ ನೀರು ಬಿಡುಗಡೆ ಮಾಡುವ ಸಾಧ್ಯತೆ ಇದೆ. ಜಲಾಶಯಕ್ಕೆ ನೀರಿನ ಒಳ ಹರಿವು ಹೆಚ್ಚಾಗಿದೆ. ಹೀಗಾಗಿ ನೀರು ಬಿಡುವುದರಿಂದ ಹಳ್ಳದ ಬಳಿ ಹೋಗದಂತೆ ಸಾರ್ವಜನಿಕರಿಗೆ ಎಚ್ಚರಿಕೆ ನೀಡಲಾಗಿದೆ.

  • ಸೆಲ್ಫಿ ಕ್ಲಿಕ್ಕಿಸ್ತಾ ನದಿ ಮಧ್ಯೆ ಸಿಲುಕಿದ ಯುವತಿಯರು- ವಿಡಿಯೋ

    ಸೆಲ್ಫಿ ಕ್ಲಿಕ್ಕಿಸ್ತಾ ನದಿ ಮಧ್ಯೆ ಸಿಲುಕಿದ ಯುವತಿಯರು- ವಿಡಿಯೋ

    ಭೋಪಾಲ್: ಸೆಲ್ಫಿ ಕುರಿತು ಎಷ್ಟೇ ಅರಿವು ಮೂಡಿಸಿದರೂ ಪ್ರಯೋಜನವಿಲ್ಲದಂತಾಗಿದ್ದು, ಹೆಚ್ಚಿನ ಯುವ ಸಮೂಹ ಸೆಲ್ಫಿಗಾಗಿ ಅಪಾಯ ತಂದೊಡ್ಡಿಕೊಳ್ಳುತ್ತಿದೆ. ಅದೇ ರೀತಿಯ ಪ್ರಕರಣ ಇದೀಗ ಮಧ್ಯ ಪ್ರದೇಶದಲ್ಲಿ ನಡೆದಿದ್ದು, ಸೆಲ್ಫಿ ಕ್ಲಿಕ್ಕಿಸಲು ನದಿ ಮಧ್ಯೆ ಹೋದ ಇಬ್ಬರು ಯುವತಿಯರು ಅಲ್ಲೇ ಸಿಲುಕಿದ್ದಾರೆ.

    ಮಧ್ಯ ಪ್ರದೇಶದ ಚಿಂದ್ವಾರ ಜಿಲ್ಲೆಯ ಪೆಂಚ್ ನದಿಯಲ್ಲಿ ಘಟನೆ ನಡೆದಿದ್ದು, ಯುವತಿಯರಿಬ್ಬರು ಸೆಲ್ಫಿ ಕ್ಲಿಕ್ಕಿಸಲು ಹೋಗಿ ನದಿ ಮಧ್ಯದಲ್ಲೇ ಸಿಲುಕಿ ಪರದಾಡಿದ್ದಾರೆ. ತಮ್ಮ ಪ್ರಾಣವನ್ನೂ ಲೆಕ್ಕಿಸದೆ ಸೆಲ್ಫಿ ಗೀಳಿನಿಂದ ಯುವತಿಯರು ನದಿಗೆ ಇಳಿದಿದ್ದಾರೆ. ಆಗ ಇದ್ದಕ್ಕಿದ್ದಂತೆ ನೀರು ಹೆಚ್ಚಾಗಿದ್ದು, ಇಬ್ಬರೂ ನದಿಯಲ್ಲೇ ಸಿಲುಕಿಕೊಂಡಿದ್ದಾರೆ.

    ನದಿ ಮಧ್ಯೆ ಸಿಲುಕಿದ ಯುವತಿಯರನ್ನು ಪೊಲೀಸರು ಹಾಗೂ ಇತರ ಅಧಿಕಾರಿಗಳು ರಭಸದಿಂದ ಹರಿಯುತ್ತಿದ್ದ ನೀರು ದಾಟಿ ಇಬ್ಬರು ಯುವತಿಯರನ್ನು ರಕ್ಷಿಸಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.

    ಯುವತಿಯರ ಗುಂಪೊಂದು ಪಿಕ್‍ನಿಕ್‍ಗೆ ಬೆಳ್ಕೇಡಿಗೆ ತೆರಳಿದ್ದು, ಕೊರೊನಾ ವೈರಸ್ ಹಿನ್ನೆಲೆ ಗುಂಪಾಗಿ ಸೇರದಂತೆ ಎಲ್ಲರೂ ಇಬ್ಬಿಬ್ಬರಂತೆ ಬೇರೆ ಆಗಿದ್ದಾರೆ. ಆಗ ಈ ಇಬ್ಬರು ಸೆಲ್ಫಿ ತೆಗೆದುಕೊಳ್ಳಲು ನದಿ ಬಳಿ ತೆರಳಿದ್ದಾರೆ. ಈ ವೇಳೆ ನದಿಯ ಮಧ್ಯಕ್ಕೆ ಹೋಗಿದ್ದು, ಸೆಲ್ಫಿ ಕ್ಲಿಕ್ಕಿಸುವಷ್ಟರಲ್ಲಿ ನದಿಗೆ ಭಾರೀ ಪ್ರಮಾಣದ ನೀರು ಹರಿದು ಬಂದಿದೆ. ಈ ವೇಳೆ ಇಬ್ಬರೂ ಮಧ್ಯದಲ್ಲೇ ಸಿಲುಕಿದ್ದಾರೆ. ತಕ್ಷಣವೇ ಇಬ್ಬರು ಹುಡುಗಿಯರ ಉಳಿದ ಸ್ನೇಹಿತೆಯರು ಪೊಲೀಸ್ ಹಾಗೂ ಸ್ಥಳೀಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ನಂತರ ರಕ್ಷಿಸಲಾಗಿದೆ.