Tag: ನದಿ

  • ಪ್ರವಾಹದಿಂದ 36 ಗ್ರಾಮಗಳು ಸಂಕಷ್ಟ- ನೂರಾರು ಹೆಕ್ಟೇರ್ ತೋಟ ಜಲಾವೃತ

    ಪ್ರವಾಹದಿಂದ 36 ಗ್ರಾಮಗಳು ಸಂಕಷ್ಟ- ನೂರಾರು ಹೆಕ್ಟೇರ್ ತೋಟ ಜಲಾವೃತ

    ಕಾರವಾರ: ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಉತ್ತರ ಕನ್ನಡ ಜಿಲ್ಲೆಯಲ್ಲಿ ನದಿಗಳು ತುಂಬಿ ಹರಿಯುತ್ತಿದ್ದು, ಪ್ರವಾಹ ಸೃಷ್ಟಿಸಿವೆ.

    ಜಿಲ್ಲೆಯ ಅಘನಾಶಿನಿ, ಗಂಗಾವಳಿ, ಕಾಳಿ, ಶರಾವತಿ, ಚಂಡಿಕಾ, ವರದಾ ನದಿಗಳು ತುಂಬಿ ಹರಿಯುವ ಮೂಲಕ ಪ್ರವಾಹ ಸೃಷ್ಟಿಸಿದೆ. ಪ್ರವಾಹದಿಂದ 36 ಗ್ರಾಮಗಳು ಬಾಧಿತವಾಗಿದ್ದು, ಪ್ರವಾಹದಿಂದ ಓರ್ವ ವ್ಯಕ್ತಿ ಮೃತರಾಗಿದ್ದಾರೆ. ಸುಮಾರು 209ಕ್ಕೂ ಅಧಿಕ ಮನೆಗಳು ಭಾಗಶಃ ಹಾನಿಯಾಗಿದೆ. ಇನ್ನೂ ನಾಲ್ಕು ಸೇತುವೆಗಳು ಪ್ರವಾಹದಿಂದ ಮುಳುಗಡೆಯಾಗಿದ್ದು, 10 ರಸ್ತೆಗಳು ಸಂಪರ್ಕ ಕಡಿತಗೊಂಡಿದೆ.

    ಜಿಲ್ಲೆಯಾದ್ಯಂತ ಈವರೆಗೆ 18 ಕಾಳಜಿ ಕೇಂದ್ರ ತೆರೆಯಲಾಗಿದ್ದು, ಅಲ್ಲಿ 699ಕ್ಕೂ ಹೆಚ್ಚು ಜನರು ಆಶ್ರಯ ಪಡೆದಿದ್ದಾರೆ. ಇಂದು ಪ್ರವಾಹದಿಂದ 125 ಹೆಕ್ಟೇರ್ ಕೃಷಿ ಕ್ಷೇತ್ರ,  536.98 ಹೆಕ್ಟೇರ್ ತೋಟಗಾರಿಕಾ ಕ್ಷೇತ್ರಗಳಿಗೆ ಹಾನಿ ಸಂಭವಿಸಿದೆ.

    ಕಳೆದ 24 ಗಂಟೆ ಬಿದ್ದ ಮಳೆಯ ಪ್ರಮಾಣ:
    ಅಂಕೋಲಾದಲ್ಲಿ 73.2 ಮಿ.ಮೀ, ಭಟ್ಕಳ 202.8 ಮಿ.ಮೀ, ಹೊನ್ನಾವರ 115.0 ಮಿ.ಮೀ, ಕಾರವಾರ 42.4 ಮಿ.ಮಿ, ಕುಮಟಾ 137.8 ಮಿ.ಮೀ, ಮುಂಡಗೋಡ 5.2 ಮಿ.ಮೀ, ಸಿದ್ದಾಪುರ 63.4 ಮಿ.ಮೀ ಶಿರಸಿ 74.5 ಮಿ.ಮೀ, ಜೋಯಡಾ 53.4 ಮಿ.ಮೀ, ಯಲ್ಲಾಪುರ 5.4 ಮಿ.ಮೀ. ಮಳೆಯಾಗಿದೆ.

    ಜಿಲ್ಲೆಯ ಜಲಾಶಯಗಳ ಇಂದಿನ ನೀರಿನ ಮಟ್ಟ:
    ಕದ್ರಾ: ಗರಿಷ್ಠ ಮಟ್ಟ 34.50 ಮೀಟರ್ ಆಗಿದ್ದರೆ, ಇಂದಿನ ಮಟ್ಟ 30.62 ಮೀಟರ್ ಆಗಿದೆ. 19,054 ಕ್ಯೂಸೆಕ್ ಒಳಹರಿವು ಇದ್ದರೆ, 15,478 ಕ್ಯೂಸೆಕ್ ಹೊರ ಹರಿವು ಇದೆ.
    ಕೊಡಸಳ್ಳಿ: 75.50 ಮೀ (ಗರಿಷ್ಠ), ಇಂದು 71.05 ಮೀ, 10,461 ಕ್ಯೂಸೆಕ್ ಒಳ ಹರಿವು, 8,663 ಕ್ಯೂಸೆಕ್ ಹೊರ ಹರಿವು
    ಸೂಪಾ: 564.00 ಮೀ (ಗರಿಷ್ಠ), ಇಂದು 542.70 ಮೀ, 21,887 ಕ್ಯೂಸೆಕ್ ಒಳ ಹರಿವು, ಹೊರ ಹರಿವು ಇಲ್ಲ
    ತಟ್ಟಿಹಳ್ಳ: 468.38 ಮೀ (ಗರಿಷ್ಠ), ಇಂದು 461.91 ಮೀ, 1749 ಕ್ಯೂಸೆಕ್ ಒಳ ಹರಿವು,  ಹೊರ ಹರಿವು ಇಲ್ಲ
    ಬೊಮ್ಮನಹಳ್ಳಿ: 438.38 ಮೀ (ಗರಿಷ್ಠ), 436.20 ಮೀ , 1,737 ಕ್ಯೂಸೆಕ್ ಒಳ ಹರಿವು 3,400 ಕ್ಯೂಸೆಕ್ ಹೊರ ಹರಿವು
    ಗೇರುಸೊಪ್ಪ: 55.00 ಮೀ (ಗರಿಷ್ಠ), 51.75 ಮೀ, 7,229 ಕ್ಯೂಸೆಕ್ ಒಳ ಹರಿವು 6,760 ಕ್ಯೂಸೆಕ್ ಹೊರ ಹರಿವು

    ಮುಂದಿನ ಐದು ದಿನಗಳ ಕಾಲ ಜಿಲ್ಲೆಯಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದ್ದು, ಇಂದು ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಘೋಷಿಸಿದೆ. ಕರಾವಳಿ ಭಾಗದಲ್ಲಿ ತೀವ್ರ ಮಳೆ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಜಿಲ್ಲೆಯ ಎಲ್ಲ ಕಡಲ ತೀರಗಳಿಗೆ ಪ್ರವಾಸಿಗರು ಹಾಗೂ ಸಾರ್ವಜನಿಕರು ತೆರಳದಂತೆ ನಿಷೇಧಿಸಲಾಗಿದೆ.

  • ವಿಜಯನಗರದ ಕಾಲುವೆ ಒಡೆದು ಜಮೀನಿಗೆ ನುಗ್ಗಿದ ನೀರು – ಅಪಾರ ಬೆಳೆ ಹಾನಿ

    ವಿಜಯನಗರದ ಕಾಲುವೆ ಒಡೆದು ಜಮೀನಿಗೆ ನುಗ್ಗಿದ ನೀರು – ಅಪಾರ ಬೆಳೆ ಹಾನಿ

    ಕೊಪ್ಪಳ: ವಿಜಯನಗರ ಕಾಲುವೆ ಒಡೆದು ಅಪಾರ ಪ್ರಮಾಣದ ಭತ್ತದ ಬೆಳೆ ಹಾನಿಯಾಗಿರುವ ಘಟನೆ ಕೊಪ್ಪಳದ ಗಂಗಾವತಿಯಲ್ಲಿ ನಡೆದಿದೆ.

    ಗಂಗಾವತಿ ತಾಲೂಕಿನ ಕಡೇಬಾಗಿಲು ಗ್ರಾಮದ ಬಳಿ ವಿಜಯನಗರ ಕಾಲುವೆ ಒಡೆದಿದೆ. ಕಳೆದ ದಿನ ಸುರಿದ ಮಳೆಯಿಂದ ಹೆಚ್ಚಿನ ನೀರು ಕಾಲುವೆಗೆ ಹರಿದು ಬಂದ ಪರಿಣಾಮ ಕಾಲುವೆ ಒಡೆದು ಅಕ್ಕ ಪಕ್ಕದ ಭತ್ತದ ಗದ್ದೆಗಳಿಗೆ ನೀರು ನುಗ್ಗಿದೆ. ಪರಿಣಾಮ ನಾಟಿ ಮಾಡಿದ್ದ ಭತ್ತದ ಬೆಳೆ ನೀರಿಗಾಹುತಿಯಾಗಿದೆ.

    ಇತ್ತೀಚೆಗಷ್ಟೆ ಕಡೇಬಾಗಿಲು ಗ್ರಾಮದ ಬಳಿ ಈ ಕಾಲುವೆಯನ್ನು ದುರಸ್ತಿ ಮಾಡಲಾಗಿತ್ತು. ಅವೈಜ್ಞಾನಿಕ ಮತ್ತು ಕಳಪೆ ಕಾಮಗಾರಿ ಮಾಡಿದ್ದರ ಪರಿಣಾಮ ಕಾಲುವೆ ಒಡೆದು ಹೋಗಿದೆ ಎಂದು ರೈತರು ಆರೋಪಿಸುತ್ತಿದ್ದಾರೆ. ವಿಜಯನಗರದ ಕಾಲುವೆ ದುರಸ್ಥಿ ಕಾರ್ಯ ಇನ್ನೂ ನಡೆಯುತ್ತಿದೆ. ಕಾಲುವೆ ಒಡೆಯಲು ನೀರಾವರಿ ಅಧಿಕಾರಿಗಳೇ ಕಾರಣ, ಕಳಪೆ ಕಾಮಗಾರಿ ಮಾಡಿಸಿದ್ದರ ಪರಿಣಾಮ ಕಾಲುವೆ ಒಡೆದು ಹೋಗಿದೆ. ಹೀಗಾಗಿ ಇಂತಹ ಘಟನೆಗಳು ಮತ್ತೆ ಜರುಗದಂತೆ ಅಧಿಕಾರಿಗಳು ಗುತ್ತಿಗೆದಾರರ ವಿರುದ್ಧ ಕ್ರಮಕೈಕೊಳ್ಳಬೇಕು ಎಂದು ರೈತರು ಒತ್ತಾಯ ಮಾಡಿದರು.

    ಕಾಲುವೆ ದುರಸ್ತಿ
    ವಿಜಯನಗರ ಐತಿಹಾಸಿಕ ಕಾಲುವೆಗಳ ಆಧುನೀಕರಣಕ್ಕೆ 370 ಕೋಟಿ ರೂಪಾಯಿ ಮೀಸಲಿರಿಸಲಾಗಿದೆ. ವಿಜಯನಗರ ಕಾಲುವೆಗಳು ಸುಮಾರು 500ವರ್ಷಗಳ ಹಿಂದೆ ವಿಜಯನಗರ ಸಾಮ್ರಾಜ್ಯ ಕಾಲದಲ್ಲಿ ಬಳ್ಳಾರಿ, ರಾಯಚೂರು ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ ತುಂಗಭದ್ರ ನದಿಗೆ ಅಡ್ಡಲಾಗಿ ಆಯಾ ಸ್ಥಳಗಳಲ್ಲಿ 11 ಅಣೆಕಟ್ಟುಗಳನ್ನು ಹಾಗೂ 16 ಕಾಲುವೆಗಳ ಜಾಲ ನಿರ್ಮಿಸಲಾಗಿದೆ.

    ಒಟ್ಟು ಕಾಲುವೆಗಳ ಉದ್ದ 215 ಕಿ.ಮೀ.ಗಳಿದ್ದು, ಅಣೆಕಟ್ಟು ಪ್ರದೇಶವು 11,154 ಹೆಕ್ಟರ್ (27,561 ಎಕರೆ) ಇರುತ್ತದೆ. ಕೊಪ್ಪಳ ಜಿಲ್ಲೆಯಲ್ಲಿ ಹುಲಿಗಿ, ಶಿವಪುರ, ಆನೆಗುಂದಿ, ಗಂಗಾವತಿಯ ಅಪ್ಪರ್ ಮತ್ತು ಲೋವರ್ ಎಡದಂಡೆ ಕಾಲುವೆಗಳು. ಅಣೆಕಟ್ಟಿನ ಪ್ರದೇಶವು ಒಟ್ಟು 2,899 ಹೆಕ್ಟರ್ ಅಂದರೆ 7,163 ಎಕರೆಯಷ್ಟು ಪ್ರದೇಶವನ್ನಾಗಿ ಗುರುತಿಸಲಾಗಿದೆ.

     

  • ಪ್ರವಾಹ ಭೀತಿ – ನದಿಪಾತ್ರದ ಗ್ರಾಮಗಳ ಸುತ್ತಮುತ್ತ ಡ್ರೋನ್ ಕಣ್ಗಾವಲು

    ಪ್ರವಾಹ ಭೀತಿ – ನದಿಪಾತ್ರದ ಗ್ರಾಮಗಳ ಸುತ್ತಮುತ್ತ ಡ್ರೋನ್ ಕಣ್ಗಾವಲು

    ಚಾಮರಾಜನಗರ: ಜಿಲ್ಲೆಯಲ್ಲಿ ಪ್ರವಾಹ ಭೀತಿಯಲ್ಲಿರುವ ನದಿಪಾತ್ರದ ಗ್ರಾಮಗಳ ಸುತ್ತಮುತ್ತ ಡ್ರೋನ್ ಕಣ್ಗಾವಲು ಇಡಲಾಗಿದೆ.

    ಕೆಆರ್‍ಎಸ್ ಹಾಗೂ ಕಬಿನಿ ಜಲಾಶಯಗಳಿಂದ ಹೆಚ್ಚಿನ ಪ್ರಮಾಣದ ನೀರು ಬಿಡುಗಡೆ ಮಾಡಿರುವುದರಿಂದ ಕಾವೇರಿ ನದಿ ಉಕ್ಕಿ ಹರಿಯುತ್ತಿದೆ. ಇದರಿಂದ ಕೊಳ್ಳೇಗಾಲ ತಾಲೂಕಿನ ಮುಳ್ಳೂರು, ದಾಸನಪುರ, ಹಳೇಹಂಪಾಪುರ, ಹರಳೆ, ಹಳೇ ಅಣಗಳ್ಳಿ, ಹೊಸ ಅಣಗಳ್ಳಿ ಗ್ರಾಮಗಳಲ್ಲಿ ಪ್ರವಾಹ ಭೀತಿ ಎದುರಾಗಿದೆ.

    ಈಗಾಗಲೇ ಜಮೀನುಗಳಿಗೆ ನೀರು ನುಗ್ಗಿ ಅಲ್ಲಲ್ಲಿ ಬೆಳೆ ಹಾನಿಯಾಗಿದೆ. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಈ ಗ್ರಾಮಗಳ ಸುತ್ತಮುತ್ತ ಡ್ರೋನ್ ಕಣ್ಗಾವಲು ಇಡಲಾಗಿದೆ. ಅಲ್ಲದೆ ಚಾಮರಾಜನಗರ ಜಿಲ್ಲಾ ಪೊಲೀಸ್ ವತಿಯಿಂದ ತುರ್ತು ಸಹಾಯವಾಣಿ ತೆರೆಯಲಾಗಿದೆ.

    ತೊಂದರೆ ಎದುರಾದಲ್ಲಿ ಸಾರ್ವಜನಿಕರು ಉಚಿತ ಕರೆ 100ಕ್ಕೆ ಫೋನ್ ಮಾಡಬಹುದು. ದೂರವಾಣಿ 08226-222398, ವಾಟ್ಸಪ್ ನಂಬರ್ 9480804600 ಈ ನಂಬರ್‌ಗಳಿಗೆ ಫೋನ್ ಮಾಡಿ. ಇಲ್ಲವಾದರೆ ಎಸ್‍ಎಂಎಸ್ ಅಥವಾ ವಾಟ್ಸಪ್ ಮಾಡಬಹುದಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದಿವ್ಯಸಾರ ಥಾಮಸ್ ತಿಳಿಸಿದ್ದಾರೆ.

  • 2 ದಿನಗಳ ನಂತ್ರ ಕೊಚ್ಚಿಹೋಗಿದ್ದ ಯುವಕನ ಶವ ಪತ್ತೆ

    2 ದಿನಗಳ ನಂತ್ರ ಕೊಚ್ಚಿಹೋಗಿದ್ದ ಯುವಕನ ಶವ ಪತ್ತೆ

    ಬೆಳಗಾವಿ: ರಾಜ್ಯದಲ್ಲಿ ಮಹಾಮಾರಿ ಕೊರೊನಾ ಅಬ್ಬರ ನಡುವೆ ಮಳೆರಾಯನ ಅಬ್ಬರಕ್ಕೆ ಜನರು ತತ್ತರಿಸುತ್ತಿದ್ದಾರೆ. ಎರಡು ದಿನಗಳ ನಂತರ ನಾಲೆಯಲ್ಲಿ ಕೊಚ್ಚಿಹೋಗಿದ್ದ ಯುವಕನ ಶವ ಪತ್ತೆಯಾಗಿದೆ.

    ರಾಜ್ಯದಲ್ಲಿ ಕೊರೊನಾ ಅಬ್ಬರ ನಡುವೆ ದಿನದಿಂದ ದಿನಕ್ಕೆ ಮಳೆಯಬ್ಬರ ಹೆಚ್ಚುತ್ತಲೇ ಇದೆ. ಇದರ ಪರಿಣಾಮ ಕೆಲವರು ಮನೆಕಳೆದುಕೊಂಡರೆ, ಕೆಲವೆಡೆ ರಸ್ತೆಗಳೆಲ್ಲಾ ಕೆರೆಯಂತಾಗಿದೆ. ಕರ್ನಾಟಕ ಮತ್ತು ಮಹಾರಾಷ್ಟ್ರದ ಜಲಾನಯನ ಪ್ರದೇಶದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಬೆಳಗಾವಿ ಜಿಲ್ಲೆಯ ಎಲ್ಲಾ ಹಳ್ಳ ಕೊಳ್ಳಗಳು ಸಂಪೂರ್ಣ ಭರ್ತಿಯಾಗಿವೆ. ಭಾರೀ ಮಳೆಯಿಂದಾಗಿ ಹಲವೆಡೆ ಜನರು ಸಂಕಷ್ಟಕ್ಕೆ ಸಿಲುಕುವಂತಾಗಿದೆ.

    ಎರಡು ದಿನಗಳ ಹಿಂದೆ ಭಾರೀ ಮಳೆಗೆ ಗೋಕಾಕ್ ತಾಲೂಕಿನ ಡುಮ್ಮಉರುಬಿನಟ್ಟಿ ಗ್ರಾಮದ ನಾಲೆಯಲ್ಲಿ ಯುವಕ ಕೊಚ್ಚಿ ಹೋಗಿದ್ದ. ಸತತ ಎರಡು ದಿನಗಳ ಕಾರ್ಯಚರಣೆ ಬಳಿಕ ಕೊಚ್ಚಿ ಹೋಗಿದ್ದ ಯುವಕನ ಮೃತದೇಹ ಪತ್ತೆಯಾಗಿದೆ. ಗದ್ದೆಗೆ ತೆರಳಿದ್ದ 18 ವರ್ಷದ ನಾಗರಾಜ ಹುಬ್ಬಳ್ಳಿ ನೀರುಪಾಲಾಗಿದ್ದ. ನಾಲೆಯಲ್ಲಿ ಜಾಲಿ ಮರಗಳು ಹಾಗೂ ಮುಳ್ಳಿನ ಕಂಟಿಗಳು ಇದ್ದ ಹಿನ್ನೆಲೆ ಎಸ್‌ಡಿಆರ್‌ಎಫ್, ಅಗ್ನಿಶಾಮಕ ಸಿಬ್ಬಂದಿ ಹಾಗೂ ಪೊಲೀಸರು ನಡೆಸುತ್ತಿದ್ದ ಜಂಟಿ ಕಾರ್ಯಾಚರಣೆಗೆ ಅಡ್ಡಿಯುಂಟಾಗಿತ್ತು.

    ಭಾನುವಾರದಿಂದ ಕಾರ್ಯಾಚರಣೆ ನಡೆಸಿದ್ದ ಎಸ್‌ಡಿಆರ್‌ಎಫ್, ಅಗ್ನಿಶಾಮಕ ಸಿಬ್ಬಂದಿ ಹಾಗೂ ಪೊಲೀಸರಿಗೆ ಯುವಕನ ಸುಳಿವು ಸಿಗಲಿಲ್ಲ. ಕೊನೆಗೆ ಸ್ಥಳೀಯ ಮೀನುಗಾರರ ನೆರವು ಪಡೆಯಲಾಯಿತು. ನಂತರ ಐವರು ಮೀನುಗಾರರು ಹಾಗೂ ಮುಳುಗು ತಜ್ಞರು ಯುವಕನಿಗಾಗಿ ಶೋಧ ಕಾರ್ಯಾಚರಣೆ ನಡೆಸಿದಾಗ ನಾಗರಾಜ್ ಮೃತದೇಹ ಪತ್ತೆಯಾಗಿದೆ.

  • ತುಂಬಿ ಹರಿಯೋ ವರದಾ ನದಿಯ ಸೇತುವೆಯಿಂದ ಜಿಗಿದು ಯುವಕರ ಹುಚ್ಚಾಟ

    ತುಂಬಿ ಹರಿಯೋ ವರದಾ ನದಿಯ ಸೇತುವೆಯಿಂದ ಜಿಗಿದು ಯುವಕರ ಹುಚ್ಚಾಟ

    ಹಾವೇರಿ: ರಾಜ್ಯದಲ್ಲಿ ಮಳೆಯ ಆರ್ಭಟ ಮುಂದುವರಿದಿದೆ. ಜಿಲ್ಲೆಯಲ್ಲಿ ಮಳೆರಾಯ ಎರಡು ದಿನಗಳಿಂದ ಕೊಂಚ ವಿಶ್ರಾಂತಿ ನೀಡಿದ್ದಾನೆ. ಆದರೆ ನದಿಗೆ ಹರಿದು ಬರುತ್ತಿರುವ ನೀರು ಮಾತ್ರ ಕಡಿಮೆಯಾಗಿಲ್ಲ. ಸೇತುವೆ ಮೇಲಿಂದ ತುಂಬಿ ಹರಿಯೋ ನದಿ ನೀರಲ್ಲಿ ಜಿಗಿದು ಈಜಾಡುವ ಮೂಲಕ ಯುವಕರು ಹುಚ್ಚಾಟ ಪ್ರದರ್ಶಿಸಿದ್ದಾರೆ.

    ಹಾವೇರಿ ತಾಲೂಕಿನ ಹೊಸರಿತ್ತಿ ಗ್ರಾಮದ ವರದಾ ನದಿಯಲ್ಲಿ ಘಟನೆ ನಡೆದಿದ್ದು, ಕಳೆದ ಒಂದು ವಾರದಿಂದ ವರದಾ ನದಿ ಭರಪೂರ ತುಂಬಿ ಹರಿಯುತ್ತಿದೆ. ಸ್ಥಳೀಯರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಇಬ್ಬರು ಯುವಕರು ಸೇತುವೆ ಮೇಲಿನಿಂದ ಜಿಗಿದು ಈಜಾಡುವ ಮೂಲಕ ಹುಚ್ಚಾಟ ಮೆರಿದ್ದಾರೆ. ಜೀವದ ಹಂಗು ಲೆಕ್ಕಿಸದೆ ಸೇತುವೆ ಮೇಲಿಂದ ಜಿಗಿದು, ಭರ್ಜರಿಯಾಗಿ ಹರಿಯುತ್ತಿರುವ ವರದಾ ನದಿಯಲ್ಲಿ ಈಜಾಡಿದ್ದಾರೆ.

    ಸೇತುವೆ ಮೇಲಿಂದ ಜಿಗಿದು ಈಜಿ ಯುವಕರು ದಡ ಸೇರಿದ್ದಾರೆ. ಇನ್ನೂ ಕೆಲ ಯುವಕರು ಸೇತುವೆ ಮೇಲೆ ನಿಂತು ಚೀರಾಡಿ, ಕೂಗಾಡಿ ನದಿಗೆ ಹಾರಿದ ಯುವಕರಿಗೆ ಪ್ರೋತ್ಸಾಹ ನೀಡಿದ್ದಾರೆ. ಸ್ವಲ್ಪ ಯಾಮಾರಿದರೂ ಯುವಕರು ನೀರು ಪಾಲಾಗುತ್ತಿದ್ದರು. ಇದಕ್ಕೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದು, ಜೊತೆಗೆ ಆತಂಕವನ್ನೂ ವ್ಯಕ್ತಪಡಿಸಿದ್ದಾರೆ.

  • ಎಚ್ಚರಿಕೆ ಇದ್ರೂ ನೇತ್ರಾವತಿ ನದಿಗೆ ಹಾರಿ ಯುವಕರಿಂದ ಮೋಜು ಮಸ್ತಿ

    ಎಚ್ಚರಿಕೆ ಇದ್ರೂ ನೇತ್ರಾವತಿ ನದಿಗೆ ಹಾರಿ ಯುವಕರಿಂದ ಮೋಜು ಮಸ್ತಿ

    ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನದಿ ನೀರಿನ ಹರಿವು ಕಡಿಮೆಯಾಗಿರುವುದರಿಂದ ಬಂಟ್ವಾಳದ ನೇತ್ರಾವತಿ ನದಿಯಲ್ಲಿ ಯುವಕರು ಮೋಜು ಮಸ್ತಿಯಲ್ಲಿ ತೊಡಗಿದ್ದಾರೆ.

    ಬಂಟ್ವಾಳದ ಪಾಣೆ ಮಂಗಳೂರಿನಲ್ಲಿ ಸ್ಥಳೀಯ ಯುವಕರು ಸೇತುವೆಯಿಂದ ನೇತ್ರಾವತಿ ನದಿಗೆ ಹಾರಿ ಈಜಾಡಿ ಜಲ ಸಾಹಸ ನಡೆಸಿದರು. ಶನಿವಾರ ನೇತ್ರಾವತಿ ನದಿಯಲ್ಲಿ ನೀರಿನ ರಭಸ ಜಾಸ್ತಿಯಾಗಿತ್ತು. ಇಂದು ನದಿ ನೀರಿನ ರಭಸ ಹಾಗೂ ಮಳೆಯೂ ಕಡಿಮೆಯಾಗಿದೆ. ಹೀಗಾಗಿ ಪಾಣೆಮಂಗಳೂರಿನ ಹಳೆಯ ಸೇತುವೆಯಲ್ಲಿ ಯುವಕರು ನದಿಗೆ ಹಾರಿ ಈಜಾಡುತ್ತಿದ್ದಾರೆ.

    ಜಿಲ್ಲೆಯಲ್ಲಿ ಇಂದು ಕೂಡ ರೆಡ್ ಅಲರ್ಟ್ ಇದ್ದು, ನದಿ ಪಾತ್ರದ ಜನ ಎಚ್ಚರಿಕೆಯಿಂದ ಇರುವಂತೆ ಹಾಗೂ ನದಿಗೆ ಇಳಿಯದಂತೆ ಜಿಲ್ಲಾಡಳಿತ ಸೂಚಿಸಿದೆ. ಆದರೂ ಯುವಕರು ಈ ರೀತಿ ಅಪಾಯಕಾರಿ ಸಾಹಸ ನಡೆಸಿ ನದಿಗೆ ಹಾರಿ ಈಜಾಡುತ್ತಿದ್ದಾರೆ. ಅನಾಹುತ ಆಗುವ ಮೊದಲು ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕಾಗಿದೆ ಎಂಬುದು ಸ್ಥಳೀಯರ ಅಭಿಪ್ರಾಯವಾಗಿದೆ.

  • ಆತ್ಮಹತ್ಯೆಗೆ ಮುಂದಾಗಿದ್ದ ಯುವತಿಯನ್ನ ರಕ್ಷಿಸಿದ ಕಾನ್ಸ್‌ಟೇಬಲ್

    ಆತ್ಮಹತ್ಯೆಗೆ ಮುಂದಾಗಿದ್ದ ಯುವತಿಯನ್ನ ರಕ್ಷಿಸಿದ ಕಾನ್ಸ್‌ಟೇಬಲ್

    – ಮೊಬೈಲ್ ಬಳಸಬೇಡ ಒಳ್ಳೆಯದಲ್ಲ ಎಂದಿದ್ದೆ ತಪ್ಪಾಯ್ತು

    ಶಿವಮೊಗ್ಗ: ಆತ್ಮಹತ್ಯೆಗೆ ಮುಂದಾಗಿದ್ದ ಯುವತಿಯನ್ನು ಕೋಟೆ ಟಾಣೆ ಪೊಲೀಸ್ ಕಾನ್ಸ್‌ಟೇಬಲ್ ರಕ್ಷಣೆ ಮಾಡಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.

    ವಿನಾಯಕನಗರ ನಿವಾಸಿ 24 ವರ್ಷದ ಯುವತಿ ಆತ್ಮಹತ್ಯೆಗೆ ಯತ್ನಿಸಿದ್ದು, ಕೋಟೆ ಪೊಲೀಸ್ ಠಾಣೆಯ ಕಾನ್ಸ್‌ಟೇಬಲ್ ಮನು ಶಂಕರ್ ಯುವತಿಯನ್ನು ರಕ್ಷಿಸಿದ್ದಾರೆ. ಯುವತಿ ಮಧ್ಯರಾತ್ರಿ ಬೆಕ್ಕಿನಕಲ್ಮಠದ ಬಳಿ ತುಂಗಾನದಿಗೆ ಹಾರಿ ಆತ್ಮಹತ್ಯೆಗೆ ಮುಂದಾಗಿದ್ದಳು. ಮಧ್ಯರಾತ್ರಿ ವೇಳೆ ಯುವತಿ ರಸ್ತೆಯಲ್ಲಿ ನದಿಯ ಬಳಿ ಏಕಾಂಗಿಯಾಗಿ ಹೋಗುವುದನ್ನು ಕಾನ್ಸ್‌ಟೇಬಲ್ ಮನು ಶಂಕರ್ ಗಮನಿಸಿದರು.

    ಆಗ ಯುವತಿಯನ್ನು ವಿಚಾರಿಸಿದ್ದು. ಈ ವೇಳೆ ಆತ್ಮಹತ್ಯೆಗೆ ಯತ್ನಿಸಿದ್ದಾಳೆ ಎಂಬ ವಿಷಯ ಅರಿತ ಕಾನ್ಸ್‌ಟೇಬಲ್  ಯುವತಿಯನ್ನು ರಕ್ಷಣೆ ಮಾಡಿದ್ದಾರೆ. ಮಗಳು ಮನೆಯಲ್ಲಿ ಇಲ್ಲದಿರುವುದನ್ನು ಪೋಷಕರು ಗಮನಿಸಿದ್ದು, ಮಧ್ಯರಾತ್ರಿಯೇ ಹುಡುಕಿಕೊಂಡು ಹೊರಟಿದ್ದರು. ಈ ವೇಳೆ ದಂಪತಿಗೆ ಜಯನಗರ ಪೊಲೀಸ್ ಠಾಣೆಯ ಪೊಲೀಸ್ ಗಂಗಾಧರ್ ಎದುರಾಗಿದ್ದಾರೆ.

    ಆಗ ಯುವತಿಯ ತಂದೆ, ಮಗಳು ಹೆಚ್ಚು ಮೊಬೈಲ್ ಉಪಯೋಗಿಸುತ್ತಿದ್ದಳು. ಮೊಬೈಲ್ ಹೆಚ್ಚು ಬಳಸಬೇಡ ಒಳ್ಳೆಯದಲ್ಲ ಎಂದು ಬೈದಿದ್ದಕ್ಕೆ ಕೋಪಮಾಡಿಕೊಂಡು ಮನೆ ಬಿಟ್ಟು ಹೋಗಿದ್ದಾಳೆ. ದಯವಿಟ್ಟು ಹುಡುಕಿಕೊಡಿ ಎಂದು ಕೋರಿದ್ದಾರೆ. ಪೊಲೀಸ್ ಗಂಗಾಧರ್ ವಾಕಿಟಾಕಿಯಲ್ಲಿ ಕಂಟ್ರೋಲ್ ರೂಮ್‍ಗೆ ವಿಷಯ ತಿಳಿಸಿದ್ದಾರೆ.

    ಅಷ್ಟರಲ್ಲಿ ಕೋಟೆ ಪೊಲೀಸರು ಆತ್ಮಹತ್ಯೆಗೆ ಮುಂದಾಗಿದ್ದ ಯುವತಿಯನ್ನು ತಡೆದು ನಿಲ್ಲಿಸಿಕೊಂಡಿದ್ದರು. ನಂತರ ಜಯನಗರ ಠಾಣೆಗೆ ಯುವತಿಯನ್ನು ಕರೆತಂದಿದ್ದು, ಪೊಲೀಸರು ಠಾಣೆಯಲ್ಲಿ ಯುವತಿಗೆ ಬುದ್ಧಿವಾದ ಹೇಳಿ ತಂದೆ ಜೊತೆ ಮನೆಗೆ ಕಳುಹಿಸಿದ್ದಾರೆ.

  • ಮಳೆ ಕಡಿಮೆಯಿದ್ರೂ ಮನೆ, ತೋಟಗಳು ಸಂಪೂರ್ಣ ಜಲಾವೃತ

    ಮಳೆ ಕಡಿಮೆಯಿದ್ರೂ ಮನೆ, ತೋಟಗಳು ಸಂಪೂರ್ಣ ಜಲಾವೃತ

    – 3 ವರ್ಷದಿಂದ ಹೊಳೆಗೆ ತಡೆಗೋಡೆ ನಿರ್ಮಿಸಿಲ್ಲ

    ಹಾಸನ: ಜಿಲ್ಲೆಯಲ್ಲಿ ಮಳೆಯ ಪ್ರಮಾಣ ಕೊಂಚ ಕಡಿಮೆಯಾಗಿದೆ. ಆದರೂ ಕಾವೇರಿ ನದಿಯಲ್ಲಿ ನೀರು ಹೆಚ್ಚಿನ ಪ್ರಮಾಣದಲ್ಲಿ ಹರಿದು ಬರುತ್ತಿರುವುದರಿಂದ ಅರಕಲಗೂಡು ತಾಲೂಕಿನ ರಾಮನಾಥಪುರದಲ್ಲಿ ಹೊಳೆ ದಂಡೆಯ ಮನೆಗಳು, ತೋಟಗಳು ಸಂಪೂರ್ಣ ಜಲಾವೃತವಾಗಿದ್ದು, ಸ್ಥಳೀಯರು ಆತಂಕ ಹೊರಹಾಕುತ್ತಿದ್ದಾರೆ.

    ಕಳೆದ ನಾಲ್ಕೈದು ದಿನದಿಂದ ಇದೇ ಪರಿಸ್ಥಿತಿ ನಿರ್ಮಾಣವಾಗಿದೆ. ಅಲ್ಲದೇ ಕಳೆದ ಮೂರು ವರ್ಷದಿಂದ ಇದೇ ಪರಿಸ್ಥಿತಿ ಪುನರಾವರ್ತನೆ ಆಗುತ್ತಿದೆ. ಜೀವನ ನಡೆಸೋದು ಹೇಗೆ ಎಂಬ ಆತಂಕ ಶುರುವಾಗಿದೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ.

    ನಮ್ಮನ್ನು ಬೇರೆಡೆ ಸ್ಥಳಾಂತರ ಮಾಡುತ್ತೇವೆ ಎಂದು ಹೇಳುತ್ತಾರೆ. ಆದರೆ ನಾವು ಎಲ್ಲಿಗೂ ಹೋಗಲು ತಯಾರಿಲ್ಲ. ಅದರ ಬದಲು ನದಿಗೆ ಶಾಶ್ವತವಾಗಿ ಒಂದು ತಡೆಗೋಡೆ ನಿರ್ಮಿಸಿದರೆ ನಮ್ಮ ಮನೆಗಳಿಗೆ ನೀರು ನುಗ್ಗುವುದು ತಪ್ಪುತ್ತದೆ. ಕಳೆದ ಮೂರು ವರ್ಷದಿಂದ ಜನಪ್ರತಿನಿಧಿಗಳು ತಡೆಗೋಡೆ ನಿರ್ಮಿಸುವ ಭರವಸೆ ನೀಡುತ್ತಲೇ ಇದ್ದಾರೆ ಎಂದು ಯುವಕರು ಆರೋಪಿಸಿದ್ದಾರೆ.

    ಶನಿವಾರವಷ್ಟೇ ಸಚಿವ ಗೋಪಾಲಯ್ಯ, ಶಾಸಕರಾದ ಎಟಿ.ರಾಮಸ್ವಾಮಿ ಇಲ್ಲಿಗೆ ಬಂದು ಪುನಃ ತಡೆಗೋಡೆ ನಿರ್ಮಿಸಿ ಕೊಡುವ ಭರವಸೆ ನೀಡಿದ್ದಾರೆ. ಆದರೆ ಈ ಬಾರಿಯೂ ತಡೆಗೋಡೆ ನಿರ್ಮಾಣ ಕೇವಲ ಭರವಸೆಗಷ್ಟೇ ಸೀಮಿತವಾದರೆ ಉಗ್ರ ಹೋರಾಟ ಮಾಡುವ ಎಚ್ಚರಿಕೆ ನೀಡುತ್ತಿದ್ದಾರೆ ಸ್ಥಳೀಯರು.

  • ನದಿಯಲ್ಲಿ ತೇಲಿ ಬಂತು ದೊಡ್ಡ ಗಾತ್ರದ ಮೀನು- ಸ್ಥಳೀಯರಲ್ಲಿ ಆಶ್ಚರ್ಯ

    ನದಿಯಲ್ಲಿ ತೇಲಿ ಬಂತು ದೊಡ್ಡ ಗಾತ್ರದ ಮೀನು- ಸ್ಥಳೀಯರಲ್ಲಿ ಆಶ್ಚರ್ಯ

    ಬೆಳಗಾವಿ/ಚಿಕ್ಕೋಡಿ: ನದಿ ನೀರಿನಲ್ಲಿ ದೊಡ್ಡ ಗಾತ್ರದ ಮೀನು ತೇಲಿ ಬಂದಿದ್ದು, ಇದನ್ನು ಕಂಡ ಗ್ರಾಮಸ್ಥರು ಕಂಗಾಲಾಗಿದ್ದಾರೆ.

    ಜಿಲ್ಲೆಯ ಹುಕ್ಕೇರಿ ತಾಲೂಕಿನ ಬಸಾಪೂರ ಬಳಿ ಮಾರ್ಕಂಡಯ್ಯ ನದಿ ಪ್ರವಾಹದಲ್ಲಿ ಈ ಬೃಹತ್ ಗಾತ್ರದ ಮೀನು ಕಂಡುಬಂದಿದ್ದು, ಸ್ಥಳೀಯರು ಮೊಬೈಲ್ ನಲ್ಲಿ ಮೀನಿನ ವಿಡಿಯೋ ಸೆರೆ ಹಿಡಿದಿದ್ದಾರೆ. ಮೀನು ನೋಡಿದ ಸ್ಥಳೀಯರು ಆಶ್ಚರ್ಯಗೊಂಡಿದ್ದಾರೆ. ಬೆಳಗಾವಿ ಇತಿಹಾಸದಲ್ಲಿಯೇ ಅತೀ ದೊಡ್ಡ ಮೀನು ಪ್ರತ್ಯಕ್ಷವಾಗಿದೆ ಎಂದು ಉದ್ಗಾರ ಹಾಕಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ಇದೀಗ ಸಖತ್ ವೈರಲ್ ಆಗಿದೆ.

    ಬೆಳಗಾವಿ ಜಿಲ್ಲೆಯಾದ್ಯಂತ ಭಾರೀ ಮಳೆಯಾಗುತ್ತಿದ್ದು, ರಾಯಬಾಗ ತಾಲೂಕಿನ ಕುಡಚಿ ಸೇತುವೆ ಮುಳುಗಡೆಯಾಗಿದೆ. ಕೃಷ್ಣಾ ನದಿಗೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದ್ದು, ನೀರು ಹೆಚ್ಚಳದಿಂದ ರಾಜ್ಯ ಹೆದ್ದಾರಿ ಸಂಪರ್ಕ ಕಡಿತವಾಗಿದೆ. ಕುಡಚಿ- ಉಗಾರ ಮದ್ಯದ ಸೇತುವೆ ಜಲಾವೃತವಾಗಿದೆ. ಇದು ಜಮಖಂಡಿ-ಮೀರಜ್ ನ ಮುಖ್ಯ ಅಂತರರಾಜ್ಯ ಹೆದ್ದಾರಿಯಾಗಿದೆ.

    ಅಲ್ಲದೆ ಮಹಾರಾಷ್ಟ್ರಕ್ಕೆ ಸಂಪರ್ಕ ಕಲ್ಪಿಸುವ ನಾಗನೂರ-ಗೋಟುರ ಸೇತುವೆ ಮುಳುಗಡೆಯಾಗಿದೆ. ಹಿರಣ್ಯಕೇಶಿ ನದಿಗೆ ಅಡ್ಡಲಾಗಿ ಈ ಸೇತುವೆ ನಿರ್ಮಿಸಲಾಗಿದ್ದು, ಇದರಿಂದಾಗಿ ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ ನುಗ್ಗುತ್ತಿದ್ದ ಕಳ್ಳ ಮಾರ್ಗ ಬಂದ್ ಆದಂತಾಗಿದೆ. ಮಹಾರಾಷ್ಟ್ರದಿಂದ ಕರ್ನಾಟಕ ಬರುವವರಿಗೆ ನಾಗನೂರ ಸೇತುವೆ ಕಳ್ಳ ಮಾರ್ಗವಾಗಿತ್ತು. ಸೇತುವೆ ಮುಳುಗಡೆಯಿಂದ ಈ ಕಳ್ಳ ಮಾರ್ಗ ಬಂದ್ ಆಗಿದೆ.

    ಹಿರಣ್ಯಕೇಶಿ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿರುವುದರಿಂದ ಸಂಕೇಶ್ವರ ಪಟ್ಟಣದ ಗ್ರಾಮ ದೇವತೆ ಲಕ್ಷ್ಮೀ ದೇವಸ್ಥಾನ ಜಲಾವೃತವಾಗಿದೆ. ಕೆಲವು ಮನೆಗಳಿಗೆ ನದಿಯ ಹಿನ್ನೀರು ನುಗ್ಗಿದ್ದು, ಸಂಕೇಶ್ವರ ಪಟ್ಟಣದಲ್ಲಿ ಪ್ರವಾಹ ಭೀತಿ ಎದುರಾಗಿದೆ. ಅಲ್ಲದೆ ಸಂಕೇಶ್ಚರ ಪಟ್ಟಣದ ಶಂಕರಲಿಂಗ ದೇವಸ್ಥಾನಕ್ಕೂ ನೀರು ನುಗ್ಗಿದೆ.

  • ಕೃಷ್ಣಾ ನದಿಗೆ 1.82 ಲಕ್ಷ ಕ್ಯೂಸೆಕ್ ನೀರು ಬಿಡುಗಡೆ – ರಾಯಚೂರಿನ ಶೀಲಹಳ್ಳಿ ಸೇತುವೆ ಮುಳುಗಡೆ

    ಕೃಷ್ಣಾ ನದಿಗೆ 1.82 ಲಕ್ಷ ಕ್ಯೂಸೆಕ್ ನೀರು ಬಿಡುಗಡೆ – ರಾಯಚೂರಿನ ಶೀಲಹಳ್ಳಿ ಸೇತುವೆ ಮುಳುಗಡೆ

    ರಾಯಚೂರು: ಮಹಾರಾಷ್ಟ್ರದಲ್ಲಿ ಭಾರೀ ಮಳೆ ಹಿನ್ನೆಲೆಯಲ್ಲಿ ರಾಯಚೂರಿನಲ್ಲಿ ಪ್ರವಾಹ ಭೀತಿ ಕ್ಷಣ ಕ್ಷಣಕ್ಕೂ ಹೆಚ್ಚಾಗುತ್ತಿದೆ.

    ನಾರಾಯಣಪುರದ ಬಸವಸಾಗರ ಜಲಾಶಯ ಸಂಪೂರ್ಣ ಭರ್ತಿಯಾಗಿದ್ದು, ಜಲಾಶಯದಿಂದ ಕೃಷ್ಣಾ ನದಿಗೆ 1 ಲಕ್ಷ 82 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ. ಇದರಿಂದ ಲಿಂಗಸೂಗೂರು ತಾಲೂಕಿನ ಶೀಲಹಳ್ಳಿ ಸೇತುವೆ ಸಂಪೂರ್ಣ ಮುಳುಗಡೆಯಾಗಿದೆ. ಹೀಗಾಗಿ ಯರಗೋಡಿ, ಹಂಚಿನಾಳ, ಕಡದರಗಡ್ಡಿ, ಯಳಗುಂದಿ, ಶೀಲಹಳ್ಳಿ ಮಾರ್ಗ ಕಡಿತವಾಗಿದೆ. ಅಲ್ಲದೇ ನದಿ ಪಾತ್ರದ ಜಮೀನುಗಳಿಗೆ ನೀರು ನುಗ್ಗಿ ಬೆಳೆ ಹಾನಿಯಾಗಿದೆ.

    ಇನ್ನೂ ದೇವದುರ್ಗದ ಹೂವಿನಹೆಡಗಿ ಸೇತುವೆ ಮುಳುಗಡೆಗೆ ಕೆಲವೇ ಅಡಿ ಬಾಕಿಯಿದ್ದು, ಈಗಾಗಲೇ ಸಾರಿಗೆ ಬಸ್ ಹಾಗೂ ಖಾಸಗಿ ವಾಹನಗಳ ಓಡಾಟಕ್ಕೆ ನಿರ್ಬಂಧ ಹೇರಲಾಗಿದೆ. ರಾಯಚೂರು-ಕಲಬುರಗಿ ನಡುವಿನ ಸಂಪರ್ಕ ಸೇತುವೆ ಮುಳುಗಡೆ ಭೀತಿಯಿಂದ ರಾಜ್ಯ ಹೆದ್ದಾರಿ ಬಂದ್ ಮಾಡಲಾಗಿದೆ.

    ನದಿ ದಡದಲ್ಲಿನ ಗಡ್ಡಿಗೂಳಿ ಬಸವಣ್ಣ ದೇವಾಲಯ ಸಂಪೂರ್ಣ ಮುಳುಗಡೆಯಾಗಿದೆ. 2.5 ಲಕ್ಷ ಕ್ಯೂಸೆಕ್ ನೀರಿಗೆ ಸೇತುವೆ ಮುಳುಗಡೆಯಾಗಲಿದೆ. ಸದ್ಯ 1 ಲಕ್ಷ 82 ಸಾವಿರ ಕ್ಯೂಸೆಕ್ ನೀರನ್ನು ನಾರಾಯಣಪುರ ಜಲಾಶಯದಿಂದ ಕೃಷ್ಣಾ ನದಿಗೆ ಬಿಡಲಾಗುತ್ತಿದ್ದು, ಇನ್ನೂ ಹೆಚ್ಚಳವಾಗುವ ಸಾಧ್ಯತೆಯಿದೆ. ಹೀಗಾಗಿ ಕೃಷ್ಣಾ ಜಲಾನಯನ ಪ್ರದೇಶದ ಗ್ರಾಮಗಳಲ್ಲಿ ಪ್ರವಾಹ ಆತಂಕ ಹೆಚ್ಚಾಗಿದೆ.