Tag: ನಟ

  • ತಪ್ಪಿರುವ ದಾರಿಯನ್ನ ಸರಿ ಮಾಡಿಕೊಳ್ಳುವ ನಿಟ್ಟಿನಲ್ಲಿ ಸಾಗುತ್ತೇನೆ: ರವಿಚಂದ್ರನ್

    ತಪ್ಪಿರುವ ದಾರಿಯನ್ನ ಸರಿ ಮಾಡಿಕೊಳ್ಳುವ ನಿಟ್ಟಿನಲ್ಲಿ ಸಾಗುತ್ತೇನೆ: ರವಿಚಂದ್ರನ್

    ಬೆಂಗಳೂರು: ತಪ್ಪಿರುವ ದಾರಿಯನ್ನು ಸರಿ ಮಾಡಿಕೊಳ್ಳುವ ನಿಟ್ಟಿನಲ್ಲಿ ಸಾಗುತ್ತೇನೆ ಎಂದು ನಟ, ನಿರ್ಮಾಪಕ ಮತ್ತು ನಿರ್ದೇಶಕ ಡಾ. ವಿ ರವಿಚಂದ್ರನ್ ಅವರು ಹೇಳಿದ್ದಾರೆ.

    ಇಂದು ಸಿಎಂಆರ್ ಯುನಿರ್ವಸಿಟಿ 4ನೇ ಘಟಿಕೋತ್ಸವ ಕಾರ್ಯಕ್ರಮದಲ್ಲಿ ನಟ ರವಿಚಂದ್ರನ್‌ಗೆ ಡಾಕ್ಟರೇಟ್ ಗೌರವ ನೀಡಲಾಯಿತು. ಬೆಂಗಳೂರಿನ ಸಿಎಂಆರ್ ಕಾಲೇಜಿನಲ್ಲಿ ಅವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ರವಿಚಂದ್ರನ್ ಅವರ ಪತ್ನಿ ಸುಮತಿ, ಮಗಳು ಗೀತಾಂಜಲಿ, ಅಳಿಯ ಅಜಯ್, ಮಕ್ಕಳಾದ ವಿಕ್ರಂ ಮತ್ತು ಮನೋರಂಜನ್ ಭಾಗಿಯಾಗಿದ್ದರು.

    ಈ ವೇಳೆ ಡಾಕ್ಟರೇಟ್ ಗೌರವ ಪಡೆದು ಮಾತನಾಡಿದ ರವಿಚಂದ್ರನ್, ಇನ್ನೂ ಮುಂದೆ ತಪ್ಪಿರುವ ದಾರಿಯನ್ನು ಸರಿ ಮಾಡಿಕೊಳ್ಳುವ ನಿಟ್ಟಿನಲ್ಲಿ ಸಾಗುತ್ತೇನೆ. ಡಾಕ್ಟರೇಟ್ ಗೌರವ ಸ್ವೀಕರಿಸಿ, ಇನ್ಮುಂದೆ ಹೊಸ ದಾರಿಯನ್ನು ಹಿಡಿಯುತ್ತೇನೆ. ನನ್ನನ್ನು ಗುರುತಿಸಿ ಸಿಎಂಆರ್ ಯುನಿವರ್ಸಿಟಿಯವರು ಡಾಕ್ಟರೇಟ್ ಗೌರವ ನೀಡಿದ್ದಕ್ಕೆ ಧನ್ಯವಾದಗಳು ಎಂದು ಹೇಳಿದ್ದಾರೆ.

    ಈ ಹಿಂದೆಯೇ ಮೂರು ದಶಕಗಳಿಂದ ಚಿತ್ರರಂಗದಲ್ಲಿ ರವಿಚಂದ್ರನ್ ಅವರು ಮಾಡಿದ ಸೇವೆಗೆ ಗೌರವ ಡಾಕ್ಟರೇಟ್ ನೀಡಬೇಕು ಎಂದು ಅಭಿಮಾನಿಗಳು ತಮ್ಮ ಆಸೆಯನ್ನು ವ್ಯಕ್ತಪಡಿಸಿದ್ದರು. ಅವರ ಬಹುದಿನದ ಆಸೆ ಈಡೇರಿರುವುದರಿಂದ ಅಭಿಮಾನಿಗಳು ಖುಷಿಯಾಗಿದ್ದಾರೆ. ಸ್ಯಾಂಡಲ್‌ವುಡ್‌ನಲ್ಲಿ ರವಿಚಂದ್ರನ್ ಅವರು ನಟ, ನಿರ್ದೇಶಕ, ನಿರ್ಮಾಪಕ, ಗೀತ ರಚನೆ, ಸಂಗೀತ, ಸಂಭಾಷಣೆ ಸೇರಿದಂತೆ ಹಲವು ವಿಭಾಗಗಳಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ಅಲ್ಲದೆ 85ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಾಯಕ ನಟರಾಗಿ ಅಭಿನಯಿಸಿದ್ದಾರೆ.

    ಭಾರತೀಯ ಚಿತ್ರರಂಗದಲ್ಲಿ ವರನಟ ರಾಜ್‌ಕುಮಾರ್ ಅವರು ಮೊದಲು ಡಾಕ್ಟರೇಟ್ ಪದವಿಯನ್ನು ಪಡೆದಿದ್ದು, ಆ ಬಳಿಕ ವಿಷ್ಣುವರ್ಧನ್, ಅಂಬರೀಶ್, ಶಿವರಾಜ್ ಕುಮಾರ್ ಸೇರಿದಂತೆ ಹಲವರು ಗೌರವ ಡಾಕ್ಟರೇಟ್ ಪದವಿ ಪಡೆದಿದ್ದಾರೆ. ಈ ಸಾಲಿಗೆ ಈಗ ರವಿಚಂದ್ರನ್ ಅವರು ಕೂಡ ಸೇರ್ಪಡೆಯಾಗಿದ್ದಾರೆ.

  • ತವರು ಮನೆಗೆ ಹಣ ಕಳಿಸಿದ್ದಕ್ಕೆ ಪತ್ನಿ ಮೇಲೆ ನಟ ಹಲ್ಲೆ

    ತವರು ಮನೆಗೆ ಹಣ ಕಳಿಸಿದ್ದಕ್ಕೆ ಪತ್ನಿ ಮೇಲೆ ನಟ ಹಲ್ಲೆ

    ಬೆಂಗಳೂರು: ತವರು ಮನೆಗೆ ಹಣ ಕಳಿಸಿದ್ದಕ್ಕೆ ಸ್ಯಾಂಡಲ್‍ವುಡ್ ನಟ ಬಾಲು ನಾಗೇಂದ್ರ ತಮ್ಮ ಧರ್ಮಪತ್ನಿಯ ಮೇಲೆ ಹಲ್ಲೆ ನಡೆಸಿದ್ದಾನೆ.

    ಹುಲಿರಾಯ, ಕಪಟನಾಟಕ ಪಾತ್ರಧಾರಿ, ಕಡ್ಡಿಪುಡಿ ಹೀಗೆ ಹಲವಾರು ಚಿತ್ರಗಳಲ್ಲಿ ನಟಿಸಿರುವ ಬಾಲು ನಾಗೇಂದ್ರ, ಪತ್ನಿ ತವರು ಮನೆಗೆ ಹಣ ಕಳಿಸುತ್ತಿರುವುದಕ್ಕೆ ಹಲ್ಲೆ ಮಾಡಿದ್ದಾರೆ ಎಂದು ಅವರ ಪತ್ನಿ ದೂರು ನೀಡಿದ್ದಾರೆ.

    ದೂರಿನಲ್ಲೇನಿದೆ?:
    ರೇಡಿಯೋ ಜಾಕಿಯಾಗಿ ಕೆಲಸ ಮಾಡುತ್ತಿದ್ದ ನಾಗೇಂದ್ರ ಅವರ ಪತ್ನಿ, ಪ್ರತೀ ತಿಂಗಳು 8000 ಹಣವನ್ನು ತವರು ಮನೆಗೆ ಕಳುಹಿಸುತ್ತಿದ್ದರು. ಇದರಿಂದ ಕೋಪಗೊಂಡ ನಟ, ನನಗೆ ದಿನ ಹೊಡೆಯುತ್ತಿದ್ದರು. ಅಲ್ಲದೆ ಪ್ರತೀ ದಿನ ಕೆಲಸಕ್ಕೆ ಬಿಡುವಾಗ ರಸ್ತೆಯುದ್ದಕ್ಕೂ ಥಳಿಸುತ್ತಿದ್ದರು ಎಂದು ಬಾಲು ಪತ್ನಿ ಆರೋಪ ಮಾಡಿದ್ದಾರೆ.

    ನಟ ನಾಗೇಂದ್ರ ಹೆಂಡತಿ ಮಗುವನ್ನು ಹೊಡೆದು ತವರು ಮನೆಗೆ ಕಳುಹಿಸಿದ್ದಾರೆ ಎನ್ನಲಾಗಿದೆ. ಇದರ ಜೊತೆಗೆ ಕೆಲಸಕ್ಕೆ ಹೋಗಲ್ಲ ಓದ್ಕೋಬೇಕು ಎಂದು ಪತ್ನಿ ಹೇಳಿದ್ದಕ್ಕೆ ಕೋಪಗೊಂಡ ನಾಗೇಂದ್ರ ಕೆಲಸಕ್ಕೆ ಹೋಗುವಂತೆ ದಿನ ಹಿಂಸೆ ನೀಡುತ್ತಿದ್ದರು. ನನ್ನ ಬಳಿಯಿಂದ ಪಡೆದ 1.5 ಲಕ್ಷ ಹಣವನ್ನು ವಾಪಸ್ ಮಾಡಿಲ್ಲ ಎಂದು ದೂರಿನಲ್ಲಿ ತಿಳಿಸಿದ್ದಾರೆ.

    ಇವೆಲ್ಲಾ ವಿಚಾರಗಳಿಂದ ಬೇಸತ್ತು ಬಸವನಗುಡಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಪತ್ನಿ ದೂರು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ನಟನ ವಿರುದ್ಧ ಐಪಿಸಿ ಸೆಕ್ಷನ್ 498ಎ (ಪತ್ನಿಗೆ ಹಿಂಸೆ) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

  • ಅಪಘಾತ ಮಾಡಿ, ರಿಪೇರಿ ಖರ್ಚು ಕೊಡ್ತೀನೆಂದು ಕೈಕೊಟ್ಟ ಧಾರವಾಹಿ ನಟ

    ಅಪಘಾತ ಮಾಡಿ, ರಿಪೇರಿ ಖರ್ಚು ಕೊಡ್ತೀನೆಂದು ಕೈಕೊಟ್ಟ ಧಾರವಾಹಿ ನಟ

    – ನಟ ದಿಲೀಪ್ ಶೆಟ್ಟಿ ವಿರುದ್ಧ ದೂರು ದಾಖಲು

    ಬೆಂಗಳೂರು: ಅಪಘಾತ ಮಾಡಿ, ರಿಪೇರಿ ಖರ್ಚು ಕೊಡುತ್ತೇನೆ ಎಂದು ಹೇಳಿ ಈಗ ಉಲ್ಟಾ ಹೊಡೆದ ಆರೋಪದ ಹಿನ್ನೆಲೆಯಲ್ಲಿ ವಿದ್ಯಾವಿನಾಯಕ ಧಾರವಾಹಿ ನಟ ದಿಲೀಪ್ ಶೆಟ್ಟಿ ವಿರುದ್ಧ ದೂರು ದಾಖಲಾಗಿದೆ.

    ಈ ಘಟನೆ ತಡರಾತ್ರಿ 2.30 ರ ವೇಳೆಗೆ ಚಾಮರಾಜಪೇಟೆ ನಾಲ್ಕನೇ ಮುಖ್ಯ ರಸ್ತೆಯಲ್ಲಿ ನಡೆದಿದ್ದು, ಯುವತಿಯ ಜೊತೆ ಕಾರಿನಲ್ಲಿ ಬಂದ ದಿಲೀಪ್, ಇನ್ನೋವಾ ಕಾರಿಗೆ ಡಿಕ್ಕಿ ಹೊಡೆದು ದೂರು ನೀಡಬೇಡಿ ಕಾರಿನ ರಿಪೇರಿ ಖರ್ಚು ನಾನೇ ಕೊಡುತ್ತೇನೆ ಎಂದು ಹೇಳಿದ್ದಾರೆ.

    ಇಂದು ಬೆಳಗ್ಗೆ ಬಂದು ಇನ್ನೋವಾ ಕಾರಿನ ಚಾಲಕನೇ ನನಗೆ ಡಿಕ್ಕಿ ಹೊಡೆದಿದ್ದಾನೆ ಎಂದು ದಿಲೀಪ್ ಆರೋಪಿಸಿದ್ದಾರೆ. ಈಗ ಕಾರು ಚಾಲಕ ತಿಪ್ಪೇಸ್ವಾಮಿ ಮತ್ತು ದಿಲೀಪ್ ಇಬ್ಬರು ಪರಸ್ಪರ ಆರೋಪ ಪ್ರತ್ಯಾರೋಪ ಮಾಡಿಕೊಂಡು, ಇಬ್ಬರು ಚಿಕ್ಕಪೇಟೆ ಸಂಚಾರಿ ಠಾಣೆಯಲ್ಲಿ ದೂರು ನೀಡಿದ್ದಾರೆ.

  • ಪ್ರಪಂಚದ ಅತೀ ಹೆಚ್ಚು ಸಂಭಾವನೆ ಪಡೆಯುವ ನಟರಲ್ಲಿ ಅಕ್ಷಯ್‍ಗೆ 4ನೇ ಸ್ಥಾನ

    ಪ್ರಪಂಚದ ಅತೀ ಹೆಚ್ಚು ಸಂಭಾವನೆ ಪಡೆಯುವ ನಟರಲ್ಲಿ ಅಕ್ಷಯ್‍ಗೆ 4ನೇ ಸ್ಥಾನ

    ನವದೆಹಲಿ: ಬಾಲಿವುಡ್ ಕಿಲಾಡಿ ಅಕ್ಷಯ್ ಕುಮಾರ್ ಅವರು ಪ್ರಪಂಚದ ಅತೀ ಹೆಚ್ಚು ಸಂಭಾವನೆ ಪಡೆಯುವ ನಟರ ಪೈಕಿ ನಾಲ್ಕನೇ ಸ್ಥಾನ ಪಡೆದಿದ್ದಾರೆ.

    ಇಂದು ಫೋರ್ಬ್ಸ್ ಸಂಸ್ಥೆ ಬಿಡುಗಡೆ ಮಾಡಿರುವ ಪ್ರಪಂಚದ ಅತೀ ಹೆಚ್ಚು ಸಂಭಾವನೆ ಪಡೆಯುವ ನಟರ ಪಟ್ಟಿಯಲ್ಲಿ ಅಕ್ಷಯ್ ಕುಮಾರ್ ಅವರು ನಾಲ್ಕನೇ ಸ್ಥಾನ ಪಡೆದಿದ್ದಾರೆ. ಇವರನ್ನು ಬಿಟ್ಟರೆ ಹಾಲಿವುಡ್‍ನ ಡ್ವೇಯ್ನ್ ‘ದಿ ರಾಕ್’ ಜಾನ್ಸನ್ ಅವರು ಮೊದಲನೇ ಸ್ಥಾನದಲ್ಲಿ ಇದ್ದಾರೆ. ಇವರ ನಂತರ ಕ್ರಿಸ್ ಹೆಮ್ಸ್ವರ್ತ್ ಮತ್ತು ರಾಬರ್ಟ್ ಡೌನಿ ಜೂನಿಯರ್ ಇದ್ದಾರೆ.

    ಜೂನ್ 1 2018ರಿಂದ 2019 ಜೂನ್ 1ರ ಅವಧಿಯಲ್ಲಿ ಪಡೆದಿರುವ ಸಂಭಾವನೆಯನ್ನು ಲೆಕ್ಕದಲ್ಲಿ ಇಟ್ಟಿಕೊಂಡು ಫೋರ್ಬ್ಸ್ ಸಂಸ್ಥೆ ಈ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಇದರ ಪ್ರಕಾರ ಅಕ್ಷಯ್ ಕುಮಾರ್ ಅವರು 65 ಮಿಲಿಯನ್ ಅಂದರೆ ಸುಮಾರು 466 ಕೋಟಿಯನ್ನು ಈ ವರ್ಷದಲ್ಲಿ ಸಂಭಾವನೆ ಪಡೆದಿದ್ದಾರೆ ಎಂದು ವರದಿ ಮಾಡಿದೆ.

    ಈ ವರ್ಷ ಈಗಾಗಲೇ ಅಕ್ಷಯ್ ಕುಮಾರ್ ಅಭಿನಯದ ಅನುರಾಗ್ ಸಿಂಗ್ ನಿರ್ದೇಶನದ ಕೇಸರಿ ಮತ್ತು ಜಗನ್ ಶಕ್ತಿ ನಿರ್ದೇಶನದ ಮಿಷನ್ ಮಂಗಲ್ ಬಿಡುಗಡೆಯಾಗಿ ಯಾಶಸ್ವಿ ಪ್ರದರ್ಶನ ಕಂಡಿವೆ. ಇದರ ಜೊತೆಗೆ ಬಾಲಿವುಡ್‍ನಲ್ಲಿ ತುಂಬ ಬೇಡಿಕೆಯ ನಟನಾಗಿರುವ ಅಕ್ಕಿ ಮುಂಬರುವ ಚಿತ್ರಗಳಲ್ಲಿ ಫರ್ಹಾದ್ ಸಂಜಿಯ ಹೌಸ್‍ಫುಲ್ 4, ರಾಜ್ ಮೆಹ್ತಾ ಅವರ ಗುಡ್ ನ್ಯೂಸ್, ರಾಘವ ಲಾರೆನ್ಸ್ ಅವರ ಲಕ್ಷ್ಮಿ ಬಾಂಬ್, ರೋಹಿತ್ ಶೆಟ್ಟಿಯ ಸೂರ್ಯವಂಶಿ ಮತ್ತು ಫರ್ಹಾದ್ ಸಂಜಿಯ ಬಚ್ಚನ್ ಪಾಂಡೆ ಚಿತ್ರಗಳಲ್ಲಿ ಅಭಿನಯ ಮಾಡಲಿದ್ದಾರೆ.

    ಚಲನಚಿತ್ರಗಳ ಜೊತೆಗೆ ಅಕ್ಷಯ್ ಅವರು ಬ್ರಾಂಡ್ ಅಂಬಾಸಿಡರ್ ಆಗಿ ಕೂಡ ಗಮನಾರ್ಹ ಸಂಭಾವನೆ ಪಡೆಯುತ್ತಿದ್ದಾರೆ. ಪ್ರಸ್ತುತ ಅವರು ವಿವಿಧ ವಿಭಾಗಗಳಲ್ಲಿ 20 ಕ್ಕೂ ಹೆಚ್ಚು ಉನ್ನತ ಬ್ರಾಂಡ್‍ಗಳಿಗೆ ಅಂಬಾಸಿಡರ್ ಆಗಿದ್ದಾರೆ. ಈ ವರ್ಷದ ಆರಂಭದಲ್ಲಿ ಬಿಡುಗಡೆಯಾದ 2019ರ ವಿಶ್ವದ ಅತಿ ಹೆಚ್ಚು ಸಂಭಾವನೆ ಪಡೆಯುವ ಸೆಲೆಬ್ರಿಟಿಗಳ ಪಟ್ಟಿಯಲ್ಲಿ ಅಕ್ಷಯ್ 33 ನೇ ಸ್ಥಾನದಲ್ಲಿದ್ದರು. ಈ ವೇಳೆ ಕಾರ್ಯಕ್ರಮದಲ್ಲಿ ನೀಡಿದ ಸಂದರ್ಶನವೊಂದರಲ್ಲಿ ಈ ಬಗ್ಗೆ ಕೇಳಿದಾಗ, ನಾನು ತುಂಬಾ ಪರಿಶ್ರಮದಿಂದ ಒಂದೊಂದು ರೂಪಾಯಿಯನ್ನು ಗಳಿಸಿದ್ದೇನೆ ಎಂದು ಹೇಳಿದ್ದರು.

    ಈ ವಿಚಾರವಾಗಿ ಮಾತನಾಡಿದ್ದ ಅಕ್ಷಯ್ ನನಗೆ ಹಣ ಮುಖ್ಯ ಆದರೆ ನನಗೆ ಎಷ್ಟು ಬೇಕು ಅಷ್ಟು ಮಾತ್ರ ಹಣವನ್ನು ಮಿತವಾಗಿ ಬಳಸುತ್ತೇನೆ. ನಾನು ಹಣವನ್ನು ಪರಿಶ್ರಮದಿಂದ ದುಡಿಯುತ್ತೇನೆ. ಹಣ ಸುಲಭವಾಗಿ ಬರುವುದಿಲ್ಲ. ಅದಕ್ಕಾಗಿ ಬೆವರು ಮತ್ತು ರಕ್ತವನ್ನು ಕೆಲವೊಮ್ಮೆ ತ್ಯಾಗ ಮಾಡುತ್ತೇನೆ. ನಾನು ನನ್ನ ವೃತ್ತಿ ಜೀವನದಲ್ಲಿ ಹಲವಾರು ಭಾರಿ ಏರಿಳಿತಗಳನ್ನು ನೋಡಿದ್ದೇನೆ. ಆದು ಎಲ್ಲಾ ನಟನ ಜೀವನದಲ್ಲಿ ಬರುತ್ತದೆ. ಆದರೆ ನಾನು ಸೋಲಿನಿಂದ ಕುಗ್ಗುವುದಿಲ್ಲ ಎಂದು ಹೇಳಿದ್ದರು.

    ಸಮಾಜದಲ್ಲಿ ಏನೂ ಇಲ್ಲದ ಜನರು ತುಂಬಾ ಜನ ಇದ್ದಾರೆ. ನಾನು ಸಿನಿಮಾ ನಟ ಆಗಬೇಕು ಎಂದು ಮುಂಬೈಗೆ ಬಂದಾಗ ನನ್ನ ಬಳಿ 200ರೂ. ದುಡ್ಡು ಇರಲಿಲ್ಲ ದೇವರು ಈಗ ಎಲ್ಲವನ್ನು ಕೊಟ್ಟಿದ್ದಾನೆ. ದೇವರು ತುಂಬಾ ಕರುಣಾಮಯಿ ಎಂದು ಅಕ್ಷಯ್ ಕುಮಾರ್ ಅವರು ಹೇಳಿದ್ದಾರೆ.

  • ವಸಿಷ್ಠ ಸಿಂಹ ಹೆಸ್ರಲ್ಲಿ ನಕಲಿ ಫೇಸ್‍ಬುಕ್ ಖಾತೆ- ಮಹಿಳೆಗೆ 25 ಸಾವಿರ ವಂಚನೆ

    ವಸಿಷ್ಠ ಸಿಂಹ ಹೆಸ್ರಲ್ಲಿ ನಕಲಿ ಫೇಸ್‍ಬುಕ್ ಖಾತೆ- ಮಹಿಳೆಗೆ 25 ಸಾವಿರ ವಂಚನೆ

    ಬೆಂಗಳೂರು: 22 ವರ್ಷದ ವ್ಯಕ್ತಿಯೊಬ್ಬ ನಟ, ಗಾಯಕ ವಸಿಷ್ಠ ಎನ್. ಸಿಂಹ ಹೆಸರಲ್ಲಿ ನಕಲಿ ಫೇಸ್ ಬುಕ್ ಖಾತೆ ತೆರೆದು ಮಹಿಳೆಯೊಬ್ಬರಿಗೆ 25 ಸಾವಿರ ರೂ. ವಂಚನೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.

    ಪ್ರಕರಣ ಸಂಬಂಧ ನಟ ದೂರು ದಾಖಲಿಸಿದ ಬಳಿಕ ಸುಂಕದಕಟ್ಟೆಯ ಹೊಯ್ಸಳ ನಗರ ನಿವಾಸಿ ವೆಂಕಟೇಶ್ ಬವಸರ್ ನನ್ನು ಸೈಬರ್ ಕ್ರೈಂ ಪೊಲೀಸರು ಶನಿವಾರ ಬಂಧಿಸಿದ್ದಾರೆ.

    ಏನಿದು ಘಟನೆ?:
    ಆರೋಪಿ ವೆಂಕಟೇಶ್ ವಸಿಷ್ಠ ಸಿಂಹ ಹೆಸರಿನಲ್ಲಿ ನಕಲಿ ಫೇಸ್‍ಬುಕ್ ಖಾತೆಯನ್ನು ತೆರೆದಿದ್ದಾನೆ. ಬಳಿಕ ಮಹಿಳೆಯರಿಗೆ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿ ಚಾಟ್ ಮಾಡಲು ಆರಂಭಿಸಿದ್ದಾನೆ. ಅಲ್ಲದೆ ಹೀಗೆ ಮಾತಾಡುತ್ತಾ ಅವರಿಗೆ ತನ್ನ ವಾಟ್ಸಾಪ್ ನಂಬರ್ ಕೂಡ ಕಳುಹಿಸಿದ್ದಾನೆ. ಆರೋಪಿ ಕೊಟ್ಟ ನಂಬರನ್ನು ಟ್ರೂ ಕಾಲರ್ ನಲ್ಲಿ ನೋಡಿದಾಗ ಅಲ್ಲಿಯೂ ವಸಿಷ್ಠ ಸಿಂಹ ಅಂತಾನೇ ಬಂದಿರುವುದರಿಂದ ಎಲ್ಲರೂ ನಟ ಅಂತಾನೇ ನಂಬಿದ್ದಾರೆ.

    ಹೀಗೆ ಫೇಸ್ ಬುಕ್ ನಲ್ಲಿ ಪರಿಚಯವಾದ ಮಹಿಳೆಯೊಬ್ಬರಿಗೆ ಆರೋಪಿ ನಿಮಗೆ ಸಿನಿಮಾ ಅಥವಾ ಟಿವಿ ಸೀರಿಯಲ್ ನಲ್ಲಿ ನಟನೆ ಮಾಡಲು ಅವಕಾಶ ಮಾಡಿಕೊಡುವುದಾಗಿ ನಂಬಿಸಿದ್ದಾನೆ. ಈ ಮೂಲಕ ಆಕೆಯ ಜೊತೆ ನಿರಂತರವಾಗಿ ಸಂಪರ್ಕದಲ್ಲಿದ್ದನು. ಅಲ್ಲದೆ ಡಿಸೆಂಬರ್ ಕೊನೆಯವರೆಗೆ ನಾನು ಯಾವುದೇ ಕರೆಗಳನ್ನು ಸ್ವೀಕರಿಸಲ್ಲ. ಹೀಗಾಗಿ ನಾನು ಮೆಸೇಜ್ ಮಾತ್ರ ಮಾಡುವುದಾಗಿ ಮಹಿಳೆ ಜೊತೆ ಸುಳ್ಳು ಹೇಳಿದ್ದಾನೆ.

    ಈ ಮಧ್ಯೆ ಆರೋಪಿ ವೆಂಕಟೇಶ್ ಮಹಿಳೆಗೆ ತನ್ನದೇ ಇನ್ನೊಂದು ನಂಬರ್ ನೀಡಿ, ನನ್ನ ಅಸಿಸ್ಟೆಂಟ್ ವೆಂಕಿ ರಾವ್ ನಂಬರ್ ಎಂದು ಮಹಿಳೆಗೆ ನೀಡಿದ್ದಾನೆ.

    ಇತ್ತ ಫಿಲಂ ಇಂಡಸ್ಟ್ರಿ ಅವರ ಪರಿಚಯ ಇದೆ ಎಂದು ನಂಬಿಸಲು ವೆಂಕಿ ರಾವ್ ಮಹಿಳೆಯನ್ನು ಶೂಟಿಂಗ್ ಸ್ಥಳಕ್ಕೂ ಕರೆದುಕೊಂಡು ಹೋಗಿದ್ದಾನೆ. ಹೀಗೆ ಶೂಟಿಂಗ್ ಸ್ಥಳಕ್ಕೆ ಬರುತ್ತಿದ್ದ ಮಹಿಳೆ ಒಂದು ದಿನ ತನ್ನ ಮಗಳನ್ನೂ ಜೊತೆಗೆ ಕರೆದುಕೊಂಡು ಬಂದಿದ್ದರು. ಈ ವೇಳೆ ವೆಂಕಿ, ನಿಮ್ಮ ಜೊತೆ ನಿಮ್ಮ ಮಗಳಿಗೂ ನಟಿಸಲು ಅವಕಾಶ ಕೊಡುವುದಾಗಿ ಹೇಳಿ ಆಕೆಯ ಕೈಯಿಂದ 25,000 ರೂ. ಪೀಕಿಸಿದ್ದಾನೆ.

    ವಸಿಷ್ಠ ಸಿಂಹನ ಅಭಿಮಾನಿಯಾಗಿರೋ ಮಹಿಳೆಯಲ್ಲಿ, ವಸಿಷ್ಠ ನಿಮ್ಮ ಮಗಳನ್ನು ಇಷ್ಟ ಪಡುತ್ತಿದ್ದಾರೆ. ಅಲ್ಲದೆ ಆಕೆಯನ್ನು ಮದುವೆ ಕೂಡ ಆಗಲು ನಿರ್ಧರಿಸಿದ್ದಾರೆ ಎಂದು ಮತ್ತೆ ಸುಳ್ಳು ಹೇಳಿದ್ದಾನೆ. ಇಷ್ಟೆಲ್ಲ ಸುಳ್ಳುಗಳನ್ನು ನಂಬಿದ್ದ ಮಹಿಳೆ ಒಂದು ದಿನ ಅಚಾನಕ್ ಆಗಿ ವಿಡಿಯೋ ಕಾಲ್ ಮಾಡಿದ್ದಾರೆ. ಈ ವೇಳೆ ಆತ, ವಸಿಷ್ಠ ಅವರು ರೈಡ್‍ಗೆ ಹೋಗಿದ್ದಾರೆ ಎಂದು ಮಹಿಳೆಯನ್ನು ಮತ್ತೆ ನಂಬಿಸಿದ್ದಾನೆ.

    ಇದರಿಂದ ಅನುಮಾನಗೊಂಡ ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾರೆ. ಈ ವೇಳೆ ವೆಂಕಟೇಶ್ ಗೆ ಕನ್ನಡ ಫಿಲಂ ಹಾಗೂ ಸೀರಿಯಲ್ ಗಳ ಮೇಕಪ್ ಆರ್ಟಿಸ್ಟ್ ಗಳು ಮಾತ್ರ ಪರಿಚಯವಿರುವುದಾಗಿ ಬೆಳಕಿಗೆ ಬಂದಿದೆ.

  • ದಯವಿಟ್ಟು ಹಾಳಾಗುವಂತಹ ಪದಾರ್ಥಗಳನ್ನು ಸಂತ್ರಸ್ತರಿಗೆ ಕಳುಹಿಸಬೇಡಿ- ವಿಜಯ ರಾಘವೇಂದ್ರ ಮನವಿ

    ದಯವಿಟ್ಟು ಹಾಳಾಗುವಂತಹ ಪದಾರ್ಥಗಳನ್ನು ಸಂತ್ರಸ್ತರಿಗೆ ಕಳುಹಿಸಬೇಡಿ- ವಿಜಯ ರಾಘವೇಂದ್ರ ಮನವಿ

    ಬೆಂಗಳೂರು: ಉತ್ತರ ಕರ್ನಾಟಕ ನೆರೆ ಸಂತ್ರಸ್ತರ ಸಹಾಯಕ್ಕಾಗಿ ಸ್ಯಾಂಡಲ್ ವುಡ್, ಬಾಲಿವುಡ್ ಸೇರಿದಂತೆ ಹಲವಾರು ಮಂದಿ ಮುಂದೆ ಬಂದಿದ್ದಾರೆ. ಈ ಮಧ್ಯೆ ನಟ ವಿಜಯ ರಾಘವೇಂದ್ರ ಅವರು ಸಹಾಯ ಹಸ್ತ ಚಾಚುವವರಲ್ಲಿ ಮನವಿ ಮಾಡಿಕೊಂಡಿದ್ದು, ಸಂತ್ರಸ್ತರಿಗೆ ಧೈರ್ಯ ತುಂಬಿದ್ದಾರೆ.

    ಫೇಸ್ ಬುಕ್ ಲೈವ್ ಬಂದ ನಟ, ಧೈರ್ಯಗೆಡಬೇಡಿ, ಹೆಗಲಾಗಿ, ತೋಳಾಗಿ ನಾವು ನಿಮ್ಮ ಜೊತೆ ನಿಂತಿರುತ್ತೇವೆ ಎಂದು ನೆರೆ ಸಂತ್ರಸ್ತರ ಬಳಿ ಮನವಿ ಮಾಡಿಕೊಂಡಿದ್ದಾರೆ.

    ವಿಡಿಯೋದಲ್ಲೇನಿದೆ..?
    ಕರ್ನಾಟಕದ ಉತ್ತರ ಭಾಗದಲ್ಲಿ ಪ್ರಕೃತಿ ವಿಕೋಪದಿಂದಾಗಿ ಎಷ್ಟೋ ಜೀವಗಳು ಸಂಕಷ್ಟಕ್ಕೆ ಕಾರಣವಾಗಿರುವ ಈ ಮಳೆ, ಪ್ರವಾಹವನ್ನು ನೋಡುತ್ತಿದ್ದರೆ ಒಂದೆಡೆ ಭಯ ಉಂಟಾಗುತ್ತದೆ. ಇನ್ನೊಂದೆಡೆ ಜವಾಬ್ದಾರಿ ಮತ್ತೆ ತಲೆ ಎತ್ತಿ ನಿಲ್ಲುವಂತೆ ಮಾಡಿದೆ.

    ಸಿನಿಮಾರಂಗದಲ್ಲಿ ತಮ್ಮ ಅಭಿಮಾನಿಗಳು ದೇವರುಗಳಿಗೆ ಕಷ್ಟ ಬಂದಾಗ ಯಾರೂ ಕೂಡ ಸುಮ್ಮನಿರುವುದಿಲ್ಲ. ಹಾಗಾಗಿ ಮಿತಿ ಮೀರಿದ ಸಹಾಯಹಸ್ತವನ್ನು ಎಲ್ಲರೂ ಚಾಚುತ್ತಿದ್ದಾರೆ. ಆದರೆ ಮುಖ್ಯವಾದ ವಿಚಾರವೆಂದರೆ, ಅಲ್ಲಿಗೆ ಬ್ಲಾಂಕೆಟ್ ಗಳು, ಅಡುಗೆ ಮಾಡುವುದಕ್ಕೆ ಬೇಕಾದಂತಹ ಸಾಮಾಗ್ರಿಗಳು ಜೊತೆಗೆ ಸ್ಯಾನಿಟರಿ ನ್ಯಾಪ್ ಕಿನ್, ಫಿನಾಯಿಲ್ ಹೀಗೆ ಅಲ್ಲಿ ಉಪಯೋಗಕ್ಕೆ ಬರುವಂತಹ ವಸ್ತುಗಳನ್ನು ಕಳುಹಿಸಿ ಎಂದು ಮನವಿ ಮಾಡಿಕೊಂಡಿದ್ದಾರೆ.

    ಹಾಳಾಗುವಂತಹ ತಿಂಡಿ ಪದಾರ್ಥಗಳನ್ನು ಕಳುಹಿಸುವುದು ಬೇಡ, ಬದಲಾಗಿ ಬಿಸ್ಕೆಟ್, ಮ್ಯಾಗಿಯನ್ನು ಕಳುಹಿಸಬಹುದು. ಇವುಗಳು ತುರ್ತು ಪರಿಸ್ಥಿತಿಗೆ ಸಹಾಯವಾಗುತ್ತದೆ ಎಂದರು. ಇದನ್ನೂ ಓದಿ: ಉತ್ತರ ಕರ್ನಾಟಕ ಸಂತ್ರಸ್ತರ ನೆರವಿಗೆ ನಿಂತ ಯಶೋಮಾರ್ಗ

    ಕೆಎಸ್‍ಆರ್‍ಟಿಸಿ ಅವರು ಇಲ್ಲಿಂದ ವಸ್ತುಗಳನ್ನು ಉಚಿತವಾಗಿ ಅಲ್ಲಿಗೆ ತಲುಪಿಸುತ್ತಿದ್ದಾರೆ. ನೀವುಗಳು ವಸ್ತುಗಳನ್ನು ಅವರ ಬಳಿ ಕೊಟ್ಟರೆ ಸಾಕು, ಅವರು ಎಲ್ಲೆಲ್ಲಿ ಅವುಗಳ ಅಗತ್ಯತೆ ಇದೆಯೋ ಅಲ್ಲಿಗೆ ತಲುಪಿಸುವ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದಾರೆ. ಹೀಗಾಗಿ ನಮ್ಮ ಕೆಲಸ ನಿಲ್ಲಿಸೋದು ಬೇಡ ಎಂದು ವಿಜಯ ರಾಘವೇಂದ್ರ ಸಹಾಯ ಮಾಡುವವರ ಬಳಿ ಕೇಳಿಕೊಂಡರು.

    ನೀವು ಯಾರೂ ಹೆದರಿಕೊಳ್ಳಬೇಡಿ. ಯಾವುದೇ ಸಂದರ್ಭದಲ್ಲೂ ನಿಮ್ಮ ಜೊತೆ ನಾವಿರುತ್ತೇವೆ. ಹೆಗಲಾಗಿ, ತೋಳಾಗಿ ನಿಂತಿರುತ್ತೇವೆ. ಧೈರ್ಯವಾಗಿರಿ ಎಂದು ನೆರೆ ಸಂತ್ರಸ್ತರಲ್ಲಿ ನಟ ಮನವಿ ಮಾಡಿಕೊಂಡಿದ್ದಾರೆ.

  • ಪತ್ನಿ ಹತ್ಯೆ ಕೇಸ್ – ಬಾಹುಬಲಿ ನಟ ಅರೆಸ್ಟ್

    ಪತ್ನಿ ಹತ್ಯೆ ಕೇಸ್ – ಬಾಹುಬಲಿ ನಟ ಅರೆಸ್ಟ್

    ಹೈದರಾಬಾದ್: ಎಸ್.ಎಸ್ ರಾಜಮೌಳಿ ನಿರ್ದೇಶನದ ಬಾಹುಬಲಿ ಚಿತ್ರದಲ್ಲಿ ಚಿಕ್ಕ ಪಾತ್ರ ಮಾಡಿದ್ದ ನಟ ಮಧು ಪ್ರಕಾಶ್‍ನನ್ನು ಪೊಲೀಸರು ಬಂಧಿದ್ದಾರೆ.

    ಮಧು ಪ್ರಕಾಶ್ ಪತ್ನಿ ಭಾರತಿ ಅವರು ಮಂಗಳವಾರ ತಮ್ಮ ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಸಂಬಂಧ ಭಾರತಿ ಅವರ ಸಾವಿಗೆ ಮಧು ಪ್ರಕಾಶ್ ಕಾರಣ ಆರೋಪಿಸಿ ಅರೆಸ್ಟ್ ಮಾಡಲಾಗಿದೆ.

    ಈ ವಿಚಾರವಾಗಿ ಮಧು ಪತ್ನಿ ಎಂ.ಎಸ್ ಭಾರತಿ ಅವರ ತಂದೆ ನನ್ನ ಮಗಳಿಗೆ ನನ್ನ ಅಳಿಯ ಮತ್ತು ಆತನ ಮನೆಯವರು ವರದಕ್ಷಿಣೆ ಕಿರುಕುಳ ನೀಡುತ್ತಿದ್ದರು. ಈ ವಿಚಾರಕ್ಕೆ ಅವಳಿಗೆ ಆಗಾಗ ಹಲ್ಲೆ ಮಾಡುತ್ತಿದ್ದರು. ಇದರಿಂದ ಮನನೊಂದ ನನ್ನ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ನನ್ನ ಮಗಳ ಸಾವಿಗೆ ಮಧು ಪ್ರಕಾಶ್ ಕಾರಣ ಎಂದು ಪೊಲೀಸ್ ಠಾಣೆಗೆ ದೂರು ನೀಡಿದ್ದರು.

    ಭಾರತಿ ತಂದೆ ನೀಡಿದ ದೂರಿನ ಮೇರೆಗೆ ಮಧುವನ್ನು ಅರೆಸ್ಟ್ ಮಾಡಿರುವ ಪೊಲೀಸರು ವರದಕ್ಷಿಣೆ ಸಾವಿನ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮಧುವನ್ನು ಇಂದು ವಿಚಾರಣೆಗೆ ನ್ಯಾಯಾಲಯಕ್ಕೆ ಹಾಜರು ಪಡಿಸುವುದಾಗಿ ತಿಳಿಸಿದ್ದಾರೆ.

  • ಗರ್ಭಿಣಿ ಪತ್ನಿ ಮೇಲೆ ಹಲ್ಲೆ – ನಟನ ವಿರುದ್ಧ ಗಂಭೀರ ಆರೋಪ

    ಗರ್ಭಿಣಿ ಪತ್ನಿ ಮೇಲೆ ಹಲ್ಲೆ – ನಟನ ವಿರುದ್ಧ ಗಂಭೀರ ಆರೋಪ

    ಇಸ್ಲಾಮಾಬಾದ್: ಪಾಕಿಸ್ತಾನ ನಟ, ಸಿಂಗರ್ ಮೋಸಿನ್ ಅಬ್ಬಾಸ್ ಹೈದರ್ ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಪತ್ನಿ ಫೇಸ್‍ಬುಕ್‍ನಲ್ಲಿ ಪೋಸ್ಟ್ ಮಾಡುವ ಮೂಲಕ ಗಂಭೀರ ಆರೋಪ ಮಾಡಿದ್ದಾರೆ.

    ಫಾತಿಮಾ ಸೋಹೆಲ್ ಆರೋಪ ಮಾಡಿದ ಪತ್ನಿ. ನನ್ನ ಪತಿ ಮೋಸಿನ್ ನನಗೆ ಮೋಸ ಮಡುತ್ತಿದ್ದಾರೆ ಎಂಬ ವಿಷಯ ನನಗೆ ತಿಳಿಯಿತು. ಇದನ್ನು ಪ್ರಶ್ನಿಸಿದ್ದಾಗ ಅವರು ನಾನು ಗರ್ಭಿಣಿ ಎಂಬುದನ್ನು ನೋಡದೇ ನನ್ನ ಮೇಲೆ ಹಲ್ಲೆ ಮಾಡಿದ್ದರು ಎಂದು ಆರೋಪಿಸಿ ಹಲ್ಲೆಗೊಳಗಾಗಿರುವ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ.

    ಪೋಸ್ಟ್ ನಲ್ಲಿ ಏನಿದೆ?
    ನವೆಂಬರ್ 26, 2018ರಂದು ನನ್ನ ಪತಿ ನನಗೆ ಮೋಸ ಮಾಡುತ್ತಿದ್ದಾರೆ ಎಂಬ ವಿಷಯ ನನಗೆ ತಿಳಿಯಿತು. ಈ ವಿಷಯದ ಬಗ್ಗೆ ನಾನು ಅವರನ್ನು ಪ್ರಶ್ನಿಸಿದ್ದಾಗ ಅವರು ಮುಜುಗರಕ್ಕೊಳಗಾಗುವ ಬದಲು ನನ್ನ ಮೇಲೆ ಹಲ್ಲೆ ನಡೆಸಿದ್ದರು. ಆ ಸಂದರ್ಭದಲ್ಲಿ ನಾನು ಗರ್ಭಿಣಿಯಾಗಿದ್ದೆ. ಮೋಸಿನ್ ನನ್ನ ತಲೆಕೂದಲು ಎಳೆದು, ನನಗೆ ನೆಲದ ಮೇಲೆ ಬೀಳಿಸಿ, ನನ್ನ ಮುಖಕ್ಕೆ ಹೊಡೆದಿದ್ದಾರೆ. ನನ್ನ ಪತಿ ನನ್ನ ಮೇಲೆ ಕ್ರೂರವಾಗಿ ಹಲ್ಲೆ ನಡೆಸಿದ್ದಾರೆ ಎಂದು ಪೋಸ್ಟಿನಲ್ಲಿ ಉಲ್ಲೇಖಿಸಿದ್ದಾರೆ.

    ಅಲ್ಲದೆ ನಾನು ಮಗುವಿಗೆ ಜನ್ಮ ನೀಡಿದ ಸಮಯದಲ್ಲಿ ಅವರು ನನ್ನ ಜೊತೆ ಇರಲಿಲ್ಲ. ಬದಲಿಗೆ ಅವರು ತಮ್ಮ ಗರ್ಲ್ ಫ್ರೆಂಡ್ ಜೊತೆ ಇದ್ದರು. ಮಗುವಿಗೆ ಜನ್ಮ ನೀಡಿದ ಎರಡು ದಿನದ ಬಳಿಕ ಸಾರ್ವಜನಿಕರ ಗಮನ ಸೆಳೆಯಲು ಅವರು ನನ್ನ ಬಳಿ ಬಂದು ಫೋಟೋ ಕ್ಲಿಕ್ಕಿಸಿಕೊಂಡರು ಎಂದು ಪೋಸ್ಟ್ ನಲ್ಲಿ ಫಾತಿಮಾ ಬರೆದಿದ್ದಾರೆ.

    ಈ ಬಗ್ಗೆ ಪ್ರತಿಕ್ರಿಯೆ ನೀಡಿದ ನಟ ಮೋಸಿನ್, “ನಾನು ಸತ್ಯದೊಂದಿಗೆ ಬರುತ್ತೇನೆ. ಆಕೆ ಈ ರೀತಿ ಮಾಡಿದ್ದು ನನಗೆ ಖುಷಿ ಇದೆ. ನಾನು ಸುಮಾರು ದಿನಗಳಿಂದ ಇದಕ್ಕಾಗಿ ಕಾಯುತ್ತಿದ್ದೆ. ಈಗ ನಾನು ಸಾಕ್ಷಿ ಸಮೇತ ಸಾರ್ವಜನಿಕರ ಮುಂದೆ ಬರುತ್ತೇನೆ. ಕಳೆದ ಮೂರು ವರ್ಷದಲ್ಲಿ ನಮ್ಮ ಸಂಬಂಧದಲ್ಲಿ ಏನೂ ನಡೆಯಿತು ಎನ್ನುವುದನ್ನು ಇಡೀ ಜಗತ್ತಿಗೆ ಹೇಳುತ್ತೇನೆ. ಶೀಘ್ರದಲ್ಲೇ ನಾನು ಸುದ್ದಿಗೋಷ್ಠಿಯನ್ನು ಸಕರೆಯುತ್ತೇನೆ ಎಂದು ಹೇಳಿದ್ದಾರೆ.

  • ಹೀರೋ ಜೊತೆ ಡೇಟ್ ಮಾಡದ್ದಕ್ಕೆ ಸಿನಿಮಾ ಆಫರ್ ಸಿಗಲಿಲ್ಲ: ಮಲ್ಲಿಕಾ ಶೆರಾವತ್

    ಹೀರೋ ಜೊತೆ ಡೇಟ್ ಮಾಡದ್ದಕ್ಕೆ ಸಿನಿಮಾ ಆಫರ್ ಸಿಗಲಿಲ್ಲ: ಮಲ್ಲಿಕಾ ಶೆರಾವತ್

    ಮುಂಬೈ: ಬಾಲಿವುಡ್ ಬೆಡಗಿ ಮಲ್ಲಿಕಾ ಶೆರಾವತ್ ಹೀರೋ ಜೊತೆ ಡೇಟ್ ಮಾಡದ್ದಕ್ಕೆ ಸಿನಿಮಾ ಆಫರ್ ಸಿಗಲಿಲ್ಲ ಎಂದು ಹೇಳಿದ್ದಾರೆ.

    ಈ ಬಗ್ಗೆ ಮಾತನಾಡಿದ ಮಲ್ಲಿಕಾ ಶೆರಾವತ್, ನಾನು ನಟ, ನಿರ್ದೇಶಕ ಹಾಗೂ ನಿರ್ಮಾಪಕನ ಮಾತು ಕೇಳಲಿಲ್ಲ. ಹಾಗಾಗಿ ನನಗೆ ಸಿನಿಮಾ ಅವಕಾಶಗಳು ಸಿಗಲಿಲ್ಲ. ಅಲ್ಲದೆ ಕೆಲವು ನಟ, ನಿರ್ದೇಶಕ ಹಾಗೂ ನಿರ್ಮಾಪಕರು ಕೇವಲ ತಮ್ಮ ಗರ್ಲ್ ಫ್ರೆಂಡ್ ಜೊತೆ ಸಿನಿಮಾ ಮಾಡಲು ಇಷ್ಟಪಡುತ್ತಾರೆ ಎಂದು ಹೇಳಿದ್ದಾರೆ.

     

    View this post on Instagram

     

    New poster of upcoming horror comedy web series @tusshark89 @altbalaji @krushna30 @kikusharda @vipulroy

    A post shared by Mallika Sherawat (@mallikasherawat) on

    ನಾನು ಯಾವುದೇ ನಟನ ಜೊತೆಯೂ ಡೇಟಿಂಗ್ ಮಾಡಲಿಲ್ಲ. ನಾನು ಯಾರಿಗೂ ಗರ್ಲ್ ಫ್ರೆಂಡ್ ಕೂಡ ಆಗಲಿಲ್ಲ. ಹಾಗಾಗಿ ನನಗೆ ಬಾಲಿವುಡ್‍ನಲ್ಲಿ ಸಿನಿಮಾಗಳ ಅವಕಾಶ ಸಿಕ್ಕಿಲ್ಲ. ಅಲ್ಲದೆ ಕೆಲವರು ನನಗೆ ಚಿತ್ರದಿಂದಲೇ ಹೊರ ತೆಗೆದಿದ್ದರು ಎಂದು ಮಲ್ಲಿಕಾ ತಿಳಿಸಿದ್ದಾರೆ.

     

    View this post on Instagram

     

    ???????? #sundayfunday #sunday @dior @marco.tassini

    A post shared by Mallika Sherawat (@mallikasherawat) on

    ಬಾಲಿವುಡ್ ಚಿತ್ರರಂಗದಲ್ಲಿ ನನಗೆ ಯಾರೂ ಲೈಂಗಿಕ ಬೇಡಿಕೆ ಇಟ್ಟಿಲ್ಲ. ನಾನು ತುಂಬಾ ಬೋಲ್ಡ್ ಇರುವ ಕಾರಣ ನನ್ನ ಬಳಿ ಬಂದು ಯಾರೂ ಲೈಂಗಿಕ ಬೇಡಿಕೆಯಿಡುವ ಧೈರ್ಯ ಮಾಡಲಿಲ್ಲ ಎಂದಿದ್ದಾರೆ.

    ಮಲ್ಲಿಕಾ ಈಗ ಏಕ್ತಾ ಕಪೂರ್ ವೆಬ್ ಸಿರೀಸ್‍ನ ‘ಬೂ ಸಬ್ಕಿ ಫಟೇಗಿ’ಯಲ್ಲಿ ನಟಿಸುತ್ತಿದ್ದಾರೆ. ಮಲ್ಲಿಕಾ, ನಟ ತುಷಾರ್ ಜೊತೆ ನಟಿಸುತ್ತಿದ್ದು, ಬೂ ಸಬ್ಕಿ ಫಟೇಗಿ ಮೂಲಕ ಅವರು ಡಿಜಿಟಲ್‍ನಲ್ಲಿ ಡೆಬ್ಯೂ ಮಾಡಲಿದ್ದಾರೆ. ಇದು ಹಾರರ್ ಹಾಗೂ ಕಾಮಿಡಿ ಚಿತ್ರ ಎಂದು ಹೇಳಲಾಗುತ್ತಿದೆ.

  • ಸರ್ಕಾರಿ ಶಾಲಾ ಮಕ್ಕಳಿಗೆ ಸ್ಕೂಲ್ ಶೂ ತೊಡಿಸಿದ ಕಿಚ್ಚ ಸುದೀಪ್ – ವಿಡಿಯೋ ನೋಡಿ

    ಸರ್ಕಾರಿ ಶಾಲಾ ಮಕ್ಕಳಿಗೆ ಸ್ಕೂಲ್ ಶೂ ತೊಡಿಸಿದ ಕಿಚ್ಚ ಸುದೀಪ್ – ವಿಡಿಯೋ ನೋಡಿ

    ಬೆಂಗಳೂರು: ಸರ್ಕಾರಿ ಶಾಲಾ ಮಕ್ಕಳಿಗೆ ಶೂ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕಿಚ್ಚ ಸುದೀಪ್ ಅವರು ಮಕ್ಕಳಿಗೆ ಸ್ಕೂಲ್ ಶೂ ತೊಡಿಸಿ ತಮ್ಮಲ್ಲಿರುವ ಸಾಮಾಜಿಕ ಕಳಕಳಿಯನ್ನು ತೋರಿದ್ದಾರೆ.

    ಇಂದು ಕೆಂಗೇರಿಯ ಸರ್ಕಾರಿ ಶಾಲಾ ಮಕ್ಕಳಿಗೆ ಕಿಚ್ಚಸುದೀಪ್ ಚಾರಿಟೇಬಲ್ ಟ್ರಸ್ಟ್ ಮೂಲಕ ಮಕ್ಕಳಿಗೆ ಶೂ ವಿತರಣೆ ಮಾಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಶೂ ವಿತರಣೆ ಕಾರ್ಯಕ್ರಮಕ್ಕೆ ಸುದೀಪ್ ಅಭಿಮಾನಿಗಳು ಸುದೀಪ್ ಅವರನ್ನು ಆಹ್ವಾನ ಮಾಡಿದ್ದರು.

    ಕಾರ್ಯಕ್ರಮಕ್ಕೆ ಆಗಮಿಸಿದ ಕಿಚ್ಚ ಸುದೀಪ್ ಅವರು ಸರ್ಕಾರಿ ಶಾಲಾ ಮಕ್ಕಳಿಗೆ ಸ್ಕೂಲ್ ಶೂ ಮತ್ತು ಸಾಕ್ಸ್ ವಿತರಣೆ ಮಾಡಿದರು. ಈ ಸಂದರ್ಭದಲ್ಲಿ ಕಿಚ್ಚ ಸುದೀಪ್ ಅವರು ಸ್ವತಃ ತಾವೇ ಕೆಲವು ಮಕ್ಕಳಿಗೆ ಶೂ ತೊಡಿಸಿದ್ದು ವಿಶೇಷವಾಗಿತ್ತು.

    ಸುದೀಪ್ ಅವರು ಪೈಲ್ವಾನ್ ಮತ್ತು ಬಾಲಿವುಡ್‍ನ ದಬಾಂಗ್ ಸಿನಿಮಾ ಶೂಟಿಂಗ್ ಮುಗಿಸಿದ್ದಾರೆ. ಇನ್ನೂ ಕನ್ನಡದ ಕೋಟಿಗೊಬ್ಬ-3 ಬಹುತೇಕ ಕಂಪ್ಲಿಟ್ ಆಗಿದೆ. ತೆಲುಗಿನಲ್ಲಿ ಸೈರಾ ಚಿತ್ರವೂ ಮುಗಿದಿದೆ. ಈಗ ಅನೂಪ್ ಭಂಡಾರಿ ನಿರ್ದೇಶನದ ರಂಗ ಬಿಲ್ಲಾ ಬಾಷಾ ಸಿನಿಮಾ ಆರಂಭಿಸಲಿದ್ದಾರೆ.

    https://twitter.com/KicchafansKKSFA/status/1136924107830726657