Tag: ನಟ

  • ಅಣ್ಣಾವ್ರ ಕೈ ಸ್ಪರ್ಶಿಸಿದ್ದೇ ನನ್ನ ಭಾಗ್ಯ: ನಟ ಗಣೇಶ್ ರಾವ್ ಕೇಸರ್ಕರ್

    ಅಣ್ಣಾವ್ರ ಕೈ ಸ್ಪರ್ಶಿಸಿದ್ದೇ ನನ್ನ ಭಾಗ್ಯ: ನಟ ಗಣೇಶ್ ರಾವ್ ಕೇಸರ್ಕರ್

    ಟನೆಯ ವ್ಯಾಮೋಹಕ್ಕೆ ಸಿಲುಕಿ ಕೈಯಲ್ಲಿ ಸ್ವಂತ ಕೆಲಸವಿದ್ರೂ ಕಲಾ ಸರಸ್ವತಿಯ ಆರಾಧನೆಗೆ ಬಣ್ಣದ ಲೋಕಕ್ಕೆ ಕಾಲಿಟ್ಟು ಚಿಕ್ಕ ಚಿಕ್ಕ ಪಾತ್ರಗಳಲ್ಲೇ ಖುಷಿಪಡುತ್ತಾ ಇಂದು ಸಾಕಷ್ಟು ಹೆಸರು ಗಳಿಸಿರುವ ನಟ ಗಣೇಶ್ ರಾವ್ ಕೇಸರ್ಕರ್. ತಮ್ಮ 20 ವರ್ಷಗಳ ಕಿರುತೆರೆ, ಹಿರಿತೆರೆ ಜರ್ನಿಯ ಬಗ್ಗೆ ನಮ್ಮೊಂದಿಗೆ ಮಾತನಾಡಿದ್ದಾರೆ.

    * ನಿಮ್ಮ ಹಿನ್ನೆಲೆ ಬಗ್ಗೆ ಹೇಳಿ..
    ಮೂಲತಃ ಕೊಳ್ಳೆಗಾಲದವನು. ನಮ್ಮ ತಂದೆ ಮಿಲಿಟರಿ ಅಧಿಕಾರಿ. ನಾನು ಡಿಪ್ಲೋಮ ಇನ್ ಆಟೋಮೊಬೈಲ್ ಎಂಜಿನಿಯರಿಂಗ್ ಮುಗಿಸಿದ್ದೇನೆ. ಹೈಸ್ಕೂಲ್‍ನಲ್ಲಿದ್ದಾಗ ನಾಟಕವೊಂದಕ್ಕೆ ಬಣ್ಣ ಹಚ್ಚಿದ್ದೆ. ಅದರಲ್ಲಿ ನಾನು ಬಹುಮಾನ ಪಡೆದುಕೊಂಡಿದ್ದೆ. ಅಂದು ಆ ಸಂದರ್ಭ ನನಗೆ ಬಹಳ ಖುಷಿ ಕೊಡ್ತು. ನಾನು ಕಲಾವಿದನಾಗಬೇಕೆಂಬ ಆಸೆ ಮೊಳಕೆಯೊಡೆಯಿತು. ಆದರೆ ಮನೆಯಲ್ಲಿ ಮೊದಲಿನಿಂದಲೂ ಈ ಕ್ಷೇತ್ರದ ಬಗ್ಗೆ ಅಷ್ಟು ಆಸಕ್ತಿ ಇರಲಿಲ್ಲ. ಆದ್ದರಿಂದ ನಾನು ವಿದ್ಯಾಭ್ಯಾಸದ ನಂತರ ನಟನೆಯಲ್ಲಿ ತೊಡಗಿಕೊಳ್ಳೋಣ ಎಂದು ಓದಿನ ಕಡೆ ಗಮನ ಹರಿಸಿದೆ. ಇಂಜಿನಿಯರಿಂಗ್ ಮುಗಿದ ಬಳಿಕ ಕಲಾವಿದನಾಗಲು ನಿರ್ಧರಿಸಿದೆ.

    * ಕಿರುತೆರೆ ನಿಮ್ಮ ಕಲಾ ಬದುಕಿಗೆ ತಂದು ಕೊಟ್ಟ ಶ್ರೇಯಸ್ಸಿನ ಬಗ್ಗೆ ಹೇಳಿ..
    ವಿದ್ಯಾಭ್ಯಾಸದ ಬಳಿಕ ಸ್ವಂತ ಕೆಲಸದಲ್ಲಿ ತೊಡಗಿದ ನನಗೆ ಚಿತ್ರರಂಗದ ಪರಿಚಯಸ್ಥರೊಬ್ಬರ ಮೂಲಕ ಕಿರುತೆರೆಯಲ್ಲಿ ನಟಿಸಲು ಅವಕಾಶ ದೊರೆಯಿತು. ನಾನು ಆರಡಿ ಎತ್ತರ ಅಷ್ಟೇ ಪರ್ಸನಾಲಿಟಿ ಇದ್ದಿದ್ದರಿಂದ ‘ಮಂಜುಕರಗಿತು’ ಧಾರಾವಾಹಿಯಲ್ಲಿ ಪೊಲೀಸ್ ಅಧಿಕಾರಿಯ ಪಾತ್ರ ದೊರೆಯಿತು. ಆ ಪಾತ್ರ ಕ್ಲಿಕ್ ಆಗಿ ಕಿರುತೆರೆಯಲ್ಲಿ ‘ಭಾಗ್ಯಚಕ್ರ’, ‘ಮನ್ವಂತರ’, ‘ಗೋಧೂಳಿ’, ‘ಪುಣ್ಯಕೋಟಿ’ ಹೀಗೆ ಬ್ಯಾಕ್ ಟು ಬ್ಯಾಕ್ ಸೀರಿಯಲ್ ಗಳಲ್ಲಿ ಅಭಿನಯಿಸಿದೆ. ಇದರ ಜೊತೆಗೆ ಪೌರಾಣಿಕ ಧಾರಾವಾಹಿಗಳಲ್ಲಿ ಪಾತ್ರ ಮಾಡಿ ಸೈ ಎನಿಸಿಕೊಂಡೆ. ಕಲಾ ಸರಸ್ವತಿಯ ಆಶೀರ್ವಾದದಿಂದ ಇಂದು ಸುಮಾರು 4000ಕ್ಕೂ ಹೆಚ್ಚು ಧಾರಾವಾಹಿಗಳಲ್ಲಿ ನಟಿಸಲು ಅವಕಾಶ ದೊರಕಿದೆ, ಈಗಲೂ ಅವಕಾಶ ಸಿಗುತ್ತಿದೆ. ಇದನ್ನೂ ಓದಿ: ಪರಿಶ್ರಮ ಪ್ರಯತ್ನದ ಜೊತೆ ತಾಳ್ಮೆ ಇರಲಿ: ನಟಿ ದೀಪಾ ಭಾಸ್ಕರ್

    * ಬೆಳ್ಳಿತೆರೆಯಲ್ಲಿ ನಿಮ್ಮ ಪಯಣ ಶುರುವಾಗಿದ್ದು ಹೇಗೆ?
    ಧಾರಾವಾಹಿಗಳಲ್ಲಿ ಒಂದಾದ ಮೇಲೆ ಒಂದರಂತೆ ನಟಿಸುತ್ತಾ ನನ್ನ ಪಾತ್ರಗಳ ಮೂಲಕ ಚಿತ್ರರಂಗದಿಂದಲೂ ಅವಕಾಶಗಳು ಬರಲು ಆರಂಭವಾಯಿತು. `ಚಾಮುಂಡಿ’ ಚಿತ್ರ ನಾನು ಮೊದಲು ನಟಿಸಿದ ಚಲನಚಿತ್ರ. ಅಲ್ಲಿಂದ ಚಿಕ್ಕ ಪುಟ್ಟ ಪಾತ್ರಗಳ ಮೂಲಕ ಸಿನಿಮಾದಲ್ಲಿ ನಟನೆ ಮಾಡುತ್ತಲೇ ಚಿತ್ರರಂಗದಲ್ಲಿ ಗುರುತಿಸಿಕೊಂಡೆ. ಸುಮಾರು 200 ಸಿನಿಮಾಗಳಲ್ಲಿ ನಾನು ಪೋಷಕ ಪಾತ್ರಗಳಿಗೆ ಬಣ್ಣಹಚ್ಚಿದ್ದೇನೆ. ಈ ಮಧ್ಯೆ ನಾನು ನಮ್ಮವರು ಚಿತ್ರದಲ್ಲಿ ನಾಯಕ ನಟನಾಗಿ ನಟಿಸಿದ್ದೇನೆ. `ಸಚ್ಚಿ’, `ಡಾನ್’, `ಶಾಸ್ತ್ರಿ’, `ತಂಗಿಗಾಗಿ’, `ನಂದ’, ‘ರಾಕ್ಷಸ’, `ಪಾರ್ಥ’ ಹೀಗೆ ಒಂದಾದ ಮೇಲೆ ಒಂದು ಸಿನಿಮಾಗಳಲ್ಲಿ ನಟಿಸುತ್ತಾ ಹೋದೆ. ಅಂಬರೀಶ್, ವಿಷ್ಣುವರ್ಧನ್, ರವಿಚಂದ್ರನ್, ಜಗ್ಗೇಶ್, ಶಿವಣ್ಣ ದರ್ಶನ್, ಸುದೀಪ್ ಸೇರಿದಂತೆ ಚಂದನವನದ ಎಲ್ಲಾ ಸ್ಟಾರ್ ನಟರು ಹಾಗೂ ಈಗಿನ ನವ ನಟರ ಜೊತೆಯೂ ನಟಿಸಿದ್ದೇನೆ. ಇದನ್ನೂ ಓದಿ: ನನ್ನ ಕಡೆ ಎಸೆದ ಕಲ್ಲುಗಳನ್ನು ಮೆಟ್ಟಿಲು ಮಾಡಿಕೊಂಡು ಬೆಳೆದೆ- ಪಾಪಾ ಪಾಂಡು ಖ್ಯಾತಿಯ ಚಿದಾನಂದ್

    * ನಿಮಗೆ ಖ್ಯಾತಿ ತಂದು ಕೊಟ್ಟ ಪಾತ್ರ ಯಾವುದು?
    ಪೊಲೀಸ್ ಇನ್ಸ್ ಪೆಕ್ಟರ್ ಪಾತ್ರಗಳು ನನಗೆ ಹೆಚ್ಚು ಖ್ಯಾತಿಯನ್ನು ತಂದುಕೊಟ್ಟಿದೆ. ನಾನು 200 ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದೇನೆ. ಅದರಲ್ಲಿ ಬಹುತೇಕ ಪೊಲೀಸ್ ಅಧಿಕಾರಿಯಾಗಿ ನಟಿಸಿದ್ದೇ ಹೆಚ್ಚು. ಖಳನಟನಾಗಿ, ಪೊಲೀಸ್ ಅಧಿಕಾರಿಯಾಗಿ ನಟಿಸಿದ ಪಾತ್ರಗಳು ಸಿನಿಮಾದಲ್ಲಿ ನನಗೆ ಖ್ಯಾತಿಯನ್ನು ತಂದು ಕೊಟ್ಟಿದೆ. ಹೆಚ್ಚಾಗಿ ನನ್ನನ್ನು ಪೊಲೀಸ್ ರೋಲ್ ಮಾಡಲೆಂದೇ ಈಗಲೂ ಕರೆಯುತ್ತಾರೆ ಇದು ನನಗೆ ಒಂದು ರೀತಿಯ ಹೆಮ್ಮೆಯ ವಿಚಾರ ಎನ್ನಿಸುತ್ತೆ.  ಇದನ್ನೂ ಓದಿ: ಹಂಡ್ರೆಡ್ ಪರ್ಸೆಂಟ್ ಹ್ಯಾಪಿ ನಾನು- ಖ್ಯಾತ ಕಿರುತೆರೆ ನಟ, ನಿರ್ದೇಶಕ ರವಿಕಿರಣ್

    * ನೀವು ಎಂದೂ ಮರೆಯದ ಘಟನೆ ಯಾವುದು?
    ಅಣ್ಣಾವ್ರು ಕಾಡಿನಿಂದ ಬಂದ ನಂತರ ಅವರ ನೇತೃತ್ವದಲ್ಲಿ ಚಿತ್ರರಂಗದಲ್ಲಿ ಹೋರಾಟ ನಡೆಯಿತು. ರಾಜ್ಯದಲ್ಲಿ ಕನ್ನಡ ಸಿನಿಮಾ ಬಿಡುಗಡೆಯಾದ ಆರು ವಾರದ ನಂತರ ಪರಭಾಷೆ ಸಿನಿಮಾ ಬಿಡುಗಡೆಯಾಗಬೇಕೆಂಬುದು ಆ ಹೋರಾಟದ ಉದ್ದೇಶ. ಈ ಸಮಯಯದಲ್ಲಿ ಡಾ.ರಾಜ್‍ಕುಮಾರ್ ಅವರ ಆರೋಗ್ಯ ಅಷ್ಟು ಚೆನ್ನಾಗಿರಲಿಲ್ಲ. ಅವರ ಕೈ ನಡುಗುತ್ತಿತ್ತು. ಆಗ ಅವರ ಪಕ್ಕದಲ್ಲಿ ನಾನಿದ್ದೆ. ಅಣ್ಣಾವ್ರು ನನ್ನ ಕೈ ಮೇಲೆ ಕೈಯಿಟ್ಟು ಸ್ವಲ್ಪ ಹಿಡಿದುಕೋ ಎಂದು ಹೇಳಿದ್ರು. ಅವರ ಕೈ ಸ್ಪರ್ಶ ನನಗೊಂದು ರೋಮಾಂಚನದ ಅನುಭವ ನೀಡಿತು. ಅವರ ಭಾಷಣ ಮುಗಿಯುವವರೆಗೂ ಕೈಹಿಡಿದುಕೊಂಡೇ ಇದ್ದೆ. ಈಗಲೂ ಆ ಕ್ಷಣ ನನಗೆ ತುಂಬಾ ಖುಷಿ ಕೊಡುತ್ತೆ. ಅವರ ಜೊತೆ ನಟಿಸಲು ಆಗದಿದ್ದರೂ ಅವರ ಕೈ ಹಿಡಿದುಕೊಳ್ಳುವ ಭಾಗ್ಯ ನನ್ನದಾಗಿತಲ್ಲ ಎಂಬ ಧನ್ಯತಾ ಭಾವ ನನ್ನಲ್ಲಿದೆ. ಇದನ್ನೂ ಓದಿ:ಸೋಲು-ಗೆಲುವನ್ನು ಮುಕ್ತ ಮನಸ್ಸಿನಿಂದ ಸ್ವೀಕರಿಸಿದ್ದೇನೆ, ಯಾವುದೇ ರಿಗ್ರೆಟ್ ಇಲ್ಲ- ನಟ ದಿಲೀಪ್ ರಾಜ್ 

    * ಚಿತ್ರರಂಗದಲ್ಲಿ ಎದುರಿಸಿದ ನೋವಿನ ಸಂಗತಿ
    ನಾನು ತುಂಬಾ ಇಷ್ಟಪಟ್ಟು ಈ ಕ್ಷೇತ್ರಕ್ಕೆ ಬಂದಿದ್ದೇನೆ. ಏನೇ ಆದರೂ ಕಲಾವಿದನಾಗೇ ಉಳಿಯಬೇಕು ಎಂದುಕೊಂಡಿದ್ದೇನೆ. ಆದ್ದರಿಂದ ಏನೇ ನೋವಾದರೂ ಸಹಿಸಿಕೊಳ್ಳಲೇಬೇಕು. ಅವಮಾನ, ಅಪಮಾನ ಆದಾಗ ಸಾಕಪ್ಪ ಬಿಟ್ಟು ಹೋಗೋಣ ಅನ್ನಿಸಿದ್ದು ಇದೆ. ಆದರೆ ನಾನು ನಟನೆಯಲ್ಲೇ ಸಾರ್ಥಕತೆ ಕಂಡುಕೊಂಡಿರೋದ್ರಿಂದ ಅದ್ಯಾವುದಕ್ಕೂ ತಲೆಕೆಡಿಸಿಕೊಳ್ಳದೇ ಮುಂದೆ ಸಾಗುತ್ತಿದ್ದೇನೆ.

    * ರಾಜಕೀಯ ರಂಗದಲ್ಲೂ ನೀವು ಗುರುತಿಸಿಕೊಂಡಿದ್ದೀರಿ?
    ನನಗೆ ಸಾಮಾಜಿಕ, ಸಮಾಜಮುಖಿ ಕೆಲಸದಲ್ಲಿ ಮೊದಲಿನಿಂದಲೂ ಆಸಕ್ತಿ. ಸಮಾಜದಲ್ಲಿ ಒಂದೊಳ್ಳೆ ಸ್ಥಾನದಲ್ಲಿ ಗುರುತಿಸಿಕೊಳ್ಳಬೇಕೆಂಬ ಬಯಕೆ ಇದೆ. ಆ ಮೂಲಕ ಜನರ ಸೇವೆ ಮಾಡಬೇಕು ಎಂದುಕೊಂಡಿದ್ದೇನೆ ಇದೇ ನಿಟ್ಟಿನಲ್ಲಿ ರಾಜಕೀಯ ರಂಗದಲ್ಲಿಯೂ ಸಕ್ರಿಯವಾಗಿದ್ದೇನೆ. ಇದನ್ನೂ ಓದಿ: ನಮ್ಮ ಅನುಭವಕ್ಕೆ ಈಗ ಬೆಲೆಯಿಲ್ಲ: ಹಿರಿಯ ನಟ, ರಂಗಭೂಮಿ ಕಲಾವಿದ ಶಂಕರ್ ಭಟ್

    * ಚಿತ್ರರಂಗದಲ್ಲಿ ನಿಮ್ಮ ಮುಂದಿನ ನಡೆ?
    ಒಳ್ಳೊಳ್ಳೆ ಪಾತ್ರಗಳಲ್ಲಿ ನಟಿಸುತ್ತಾ ಹೋಗಬೇಕು ಅನ್ನೋದೊಂದೇ ನನ್ನ ಮುಂದಿರುವ ಗುರಿ. ಸಿನಿಮಾ ನಿರ್ದೇಶನ ಮಾಡುವ ಪ್ಲಾನ್ ಕೂಡ ಇದೆ. ಕಥೆ ಕೂಡ ರೆಡಿ ಮಾಡುತ್ತಿದ್ದೇನೆ. ಇದರ ಬೆನ್ನಲ್ಲೇ ಕಂಠೀರವ ಸ್ಟುಡಿಯೋ ಅಧ್ಯಕ್ಷ ಸ್ಥಾನದ ಚುನಾವಣೆಗೆ ಬೇಡಿಕೆ ಇಟ್ಟಿದ್ದೇನೆ. ಸ್ಟುಡಿಯೋ ಅಭಿವೃದ್ಧಿಗೆ ನನ್ನದೇ ಆದ ಕೊಡುಗೆ ನೀಡಬೇಕು ಎಂಬ ಬಹುದೊಡ್ಡ ಕನಸಿದೆ.

    * ಪ್ರಸ್ತುತ ನಟಿಸುತ್ತಿರುವ ಸೀರಿಯಲ್ ಮತ್ತು ಸಿನಿಮಾಗಳು ಯಾವ್ಯಾವು.?
    ರವಿಬೋಪಣ್ಣ, ಕಿರಿಕ್ ಶಂಕ್ರ, ಯಾರ್ ಮಗ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸುತ್ತಿದ್ದೇನೆ. ಕೆಲವು ಚಿತ್ರಗಳು ಬಿಡುಗಡೆಯಾಗಬೇಕಿದೆ. ಇದರ ಜೊತೆ ಚೈತನ್ಯ ನಿರ್ದೇಶನದ ಆಕೃತಿ ಧಾರಾವಾಹಿಯಲ್ಲಿಯೂ ನಟಿಸುತ್ತಿದ್ದೇನೆ.

  • ಶೀಘ್ರವೇ ಕನ್ನಡದ ಸ್ಟಾರ್ ನಟನಿಗೆ ಎನ್‍ಸಿಬಿ ಡ್ರಗ್ಸ್ ಶಾಕ್

    ಶೀಘ್ರವೇ ಕನ್ನಡದ ಸ್ಟಾರ್ ನಟನಿಗೆ ಎನ್‍ಸಿಬಿ ಡ್ರಗ್ಸ್ ಶಾಕ್

    ಬೆಂಗಳೂರು: ಡ್ರಗ್ಸ್ ಡೀಲ್ ಪ್ರಕರಣಕ್ಕೆ ಶೀಘ್ರವೇ ಸ್ಫೋಟಕ ಟ್ವಿಸ್ಟ್ ದೊರೆಯಲಿದ್ದು, ಸ್ಯಾಂಡಲ್‍ವುಡ್‍ಗೆ ಅತಿ ದೊಡ್ಡ ಶಾಕ್ ಒಂದು ಕಾದಿದೆ.

    ಇದು ಸಿಸಿಬಿ ಅಲ್ಲ, ಮಾದಕ ವಸ್ತು ನಿಯಂತ್ರಣ ಸಂಸ್ಥೆ(ಎನ್‍ಸಿಬಿ)ಯ ದೊಡ್ಡ ಕಾರ್ಯಾಚರಣೆಯಾಗಿದೆ. ಈ ಮೂಲಕ ಡ್ರಗ್ ಕೇಸಿನಲ್ಲಿ ಎನ್‍ಸಿಬಿ ಸೈಲೆಂಟ್ ಆಗಿ ಕೆಲಸ ಮಾಡುತ್ತಿದ್ದು, ಶೀಘ್ರವೇ ಸ್ಯಾಂಡ್‍ಲವುಡ್‍ನ ಬಿಗ್ ಬ್ರೇಕಿಂಗ್ ಸುದ್ದಿಯೊಂದು ಹೊರಬೀಳಲಿದೆ.

    ಕಾರ್ಪೊರೇಟರ್ ಮಗ ಯಶಸ್ ‘ಸ್ಟಾರ್ ನಟ’ನ ಹೆಸರು ಹೇಳಿದ್ದಾನೆ. ಹೀಗಾಗಿ ಸದ್ಯದಲ್ಲೇ ಕನ್ನಡದ ದೊಡ್ಡ ನಟನಿಗೆ ಶಾಕ್ ಸಿಗಲಿದೆ. ಯಶಸ್ ಹೇಳಿಕೆ ಆಧರಿಸಿ ಎನ್‍ಸಿಬಿ ದೊಡ್ಡ ನಟನ ಬೆನ್ನುಬಿದ್ದಿದೆ. ಸ್ಟಾರ್ ನಟ ಆಗಿರೋದ್ರಿಂದ ಪ್ರಬಲ ಸಾಕ್ಷ್ಯಕ್ಕೆ ಎನ್‍ಸಿಬಿ ಶೋಧ ನಡೆಸುತ್ತಿದೆ. ಇದನ್ನೂ ಓದಿ: ಕನ್ನಡಿಗರು ಕೊಟ್ಟ ಹೆಸರಿಗೆ ಧಕ್ಕೆ ಮಾಡಿಲ್ಲ, ಯಾವತ್ತೂ ಮಾಡಲ್ಲ: ಕಣ್ಣೀರಿಟ್ಟ ಅನುಶ್ರೀ

    ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಸ್ಯಾಂಡಲ್‍ವುಡ್ ನಟಿಯರಾದ ರಾಗಿಣಿ ದ್ವಿವೇದಿ, ಸಂಜನಾ ಗಲ್ರಾಣಿ ಹಾಗೂ ಇವರ ಆಪ್ತರು ಪರಪ್ಪನ ಅಗ್ರಹಾರ ಸೇರಿದ್ದಾರೆ. ಇಬ್ಬರೂ ನಟಿಯರ ನ್ಯಾಯಾಂಗ ಬಂಧನ ಅವಧಿಯನ್ನು ಅಕ್ಟೋಬರ್ 23ರವರೆಗೆ ವಿಸ್ತರಿಸಿ ಡಿಪಿಎಸ್ ವಿಶೇಷ ನ್ಯಾಯಾಲಯ ಶುಕ್ರವಾರ ಆದೇಶಿಸಿದೆ. ಈ ಆದೇಶದೊಂದಿಗೆ ಇಬ್ಬರೂ ನಟಿಯರು 23ರವರೆಗೂ ಜೈಲುಶಿಕ್ಷೆ ಅನುಭವಿಸುವುದು ಪಕ್ಕಾ ಆಗಿದೆ. ಇದನ್ನೂ ಓದಿ: ಅನುಶ್ರೀ ಪ್ರಕರಣದ ಮಾಜಿ ಸಿಎಂ ಯಾರೆಂದು ಬಹಿರಂಗಪಡಿಸಿ- ಹೆಚ್‍ಡಿಕೆ ಗರಂ

    ಇತ್ತ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ನಿರೂಪಕಿ ಕಂ ನಟಿ ಅನುಶ್ರೀ ಕೂಡ ಮಂಗಳೂರಿನಲ್ಲಿ ಸಿಸಿಬಿ ವಿಚಾರಣೆ ಎದುರಿಸಿದ್ದಾರೆ. ಪ್ರಕರಣದ ಸಂಬಂಧ ತನಿಖೆ ನಡೆಸುತ್ತಿರುವ ಪೊಲೀಸರು ಅನುಶ್ರೀ ಅವರ ಮೊಬೈಲ್ ಕರೆಗಳ ಪರಿಶೀಲನೆ ನಡೆಸಿದ ಸಂದರ್ಭದಲ್ಲಿ ರಾಜ್ಯದ ಪ್ರಭಾವಿ ನಾಯಕರಿಗೆ ಕರೆ ಮಾಡಿರುವ ಮಾಹಿತಿ ಲಭ್ಯವಾಗಿದೆ ಎನ್ನಲಾಗಿತ್ತು. ಅಲ್ಲದೇ ವಿಚಾರಣೆ ಸಂದರ್ಭದಲ್ಲಿ ಸಿಸಿಬಿ ಪೊಲೀಸರು ಮೊಬೈಲ್ ಸಿಮ್ ಕಾರ್ಡ್ ಗಳನ್ನು ವಶಕ್ಕೆ ಪಡೆದಿದ್ದಾರೆ. ಅನುಶ್ರೀ ಅವರಿಗೆ ನೋಟಿಸ್ ಬಂದ ದಿನ ಮತ್ತು ಮಾರನೇ ದಿನ ರಾಜ್ಯದ ಮೂವರು ಪ್ರಭಾವಿಗಳಿಗೆ ಕರೆ ಮಾಡಿದ್ದಾರೆ. ಮೂವರು ಪ್ರಭಾವಿಗಳಿಗೆ ಕರೆ ಮಾಡಿ ಹೆಚ್ಚು ಸಮಯ ಮಾತನಾಡಿದ್ದಾರೆ ಎಂಬ ಮಾಹಿತಿ ಲಭಿಸಿತ್ತು.  ಇದನ್ನೂ ಓದಿ: 14 ವರ್ಷದ ಹಿಂದೆ ಬಸ್ ಹತ್ಕೊಂಡು ಬಂದು ಬೆಂಗ್ಳೂರಲ್ಲಿ ನೆಲೆ ಕಂಡಿದ್ದೇನೆ: ಗಳಗಳನೇ ಅತ್ತ ಅನುಶ್ರೀ

  • ನಿರ್ದೇಶಕರು ಮಾತ್ರವಲ್ಲ ನಟರಿಂದಲೂ ಎಸ್‍ಪಿಬಿ ಹಾಡಿಗೆ ಪಟ್ಟು

    ನಿರ್ದೇಶಕರು ಮಾತ್ರವಲ್ಲ ನಟರಿಂದಲೂ ಎಸ್‍ಪಿಬಿ ಹಾಡಿಗೆ ಪಟ್ಟು

    ಬೆಂಗಳೂರು: ಕೇವಲ ಸಂಗೀತ ನಿರ್ದೇಶಕರು ಮಾತ್ರವಲ್ಲ. ತಮ್ಮ ಸಿನಿಮಾಗಳ ಹಾಡುಗಳಿಗೆ ಬಾಲು ಕಂಠ ಕಡ್ಡಾಯವಾಗಿ ಬೇಕೇಬೇಕು ಎಂದು ಖ್ಯಾತ ಸಿನಿಮಾ ನಟರು ಪಟ್ಟು ಹಿಡಿದು ಕುಳಿತುಕೊಳ್ಳುತ್ತಿದ್ದರು. ಬಾಲು ಧ್ವನಿಗಾಗಿ ತಿಂಗಳುಗಟ್ಟಲೇ ಕಾದಿದ್ದು ಉಂಟು.

    ಕನ್ನಡದಲ್ಲಿ ಶ್ರೀನಾಥ್, ವಿಷ್ಣುವರ್ಧನ್, ಅಂಬರೀಶ್, ಶಂಕರ್‍ನಾಗ್, ಅನಂತ್‍ನಾಗ್, ರವಿಚಂದ್ರನ್ ಸಿನಿಮಾಗಳಲ್ಲಿ ಬಾಲು ಹಾಡುಗಳು ಇರಲೇಬೇಕಿತ್ತು. ತೆಲುಗಿನಲ್ಲಿ ಎನ್‍ಟಿಆರ್, ಎಎನ್‍ಆರ್,ಕೃಷ್ಣ, ಶೋಭನ್ ಬಾಬು, ಚಿರಂಜೀವಿ, ನಾಗಾರ್ಜುನ, ವೆಂಕಟೇಶ್, ತಮಿಳಿನಲ್ಲಿ ಎಂಜಿಆರ್, ಶಿವಾಜಿಗಣೇಶನ್, ಕಮಲ್ ಹಾಸನ್, ರಜಿನಿಕಾಂತ್ ಅವರ ಸಿನಿಮಾಗಳಿಗೂ ಎಸ್‍ಪಿಬಿ ಗಾಯನ ಕಡ್ಡಾಯವಾಗಿದ್ದ ಕಾಲವೊಂದಿತ್ತು. ಇದನ್ನೂ ಓದಿ: ಡಬ್ಬಿಂಗ್ ಆರ್ಟಿಸ್ಟ್ ಆಗಿದ್ದ ಬಾಲುಗೆ ಪ್ರಶಸ್ತಿ ಸಿಕ್ಕಿತ್ತು

    ರಾಜ್‍ಕುಮಾರ್, ಶಿವರಾಜ್‍ಕುಮಾರ್ ಸಿನಿಮಾಗಳಲ್ಲೂ ಎಸ್‍ಪಿಬಿ ಹಾಡಿದ್ರು. ಎಷ್ಟೋ ದಿನಗಳು, ಮನೆಗೆ ಹೋಗಲಾಗದೇ ಬರೀ ವಿಮಾನ ನಿಲ್ದಾಣದಿಂದ ವಿಮಾನ ನಿಲ್ದಾಣಕ್ಕೆ ಓಡಾಡುತ್ತಾ ಬ್ಯುಸಿ ಇದ್ದ ದಿನಗಳು ಇವೆ. ಒಂದೇ ದಿನದಲ್ಲಿ 10ರಿಂದ 15 ಹಾಡುಗಳನ್ನು ಹಾಡಿದ ಗರಿಮೆ ಕೇವಲ ಎಸ್ಪಿಬಿಗೆ ಮಾತ್ರ ದಕ್ಕುತ್ತದೆ. ಜೊತೆಗೆ ಒಂದೇ ಕುಟುಂಬದ ಮೂರು ತಲೆಮಾರುಗಳ ನಟರಿಗೆ ಹಾಡು ಹಾಡಿದ ಖ್ಯಾತಿಯೂ ಇವರಿಗೆ ಸಲ್ಲುತ್ತದೆ.

    ತಮ್ಮ ಕಾಲಾವಧಿಯ ಖ್ಯಾತನಾಮ ಸಂಗೀತ ನಿರ್ದೇಶಕರೊಂದಿಗೆ ಹಾಡುವ ಅವಕಾಶ ಎಸ್‍ಪಿಬಿಗೆ ಸಿಕ್ಕಿತ್ತು. 1969ರಿಂದಲೇ ಬಾಲು ಫುಲ್ ಬ್ಯುಸಿ ಆದರು. ಪೆಂಡ್ಯಾಲ, ಎಂಎಸ್ ವಿಶ್ವನಾಥನ್, ಕೆವಿ ಮಹದೇವನ್, ಇಳಯರಾಜ, ಜಿಕೆ ವೆಂಟಕೇಶ್, ಚಕ್ರವರ್ತಿ, ರಾಜನ್-ನಾಗೇಂದ್ರ, ರಾಜ್-ಕೋಟಿ, ಕೀರವಾಣಿ, ಹಂಸಲೇಖ ಅವರಂತಹ ನಿರ್ದೇಶಕರ ಸಾರಥ್ಯದಲ್ಲಿ ಕೆಲವು ಸಾವಿರದಷ್ಟು ಮರೆಯಲಾಗದ ಹಾಡುಗಳನ್ನು ಬಾಲು ಹಾಡಿದ್ರು. ಇತ್ತೀಚಿನ ಸಂಗೀತ ನಿರ್ದೇಶಕರ ಜೊತೆಗೂ ಎಸ್‍ಪಿಬಿ ಕೆಲಸ ಮಾಡಿದ್ದರು.

  • ಜಮೀರ್‌ನನ್ನು ಯಾಕೆ ಬಂಧಿಸಿಲ್ಲ- ಸರ್ಕಾರಕ್ಕೆ ಪ್ರತಾಪ್ ಸಿಂಹ ಪ್ರಶ್ನೆ

    ಜಮೀರ್‌ನನ್ನು ಯಾಕೆ ಬಂಧಿಸಿಲ್ಲ- ಸರ್ಕಾರಕ್ಕೆ ಪ್ರತಾಪ್ ಸಿಂಹ ಪ್ರಶ್ನೆ

    ಮೈಸೂರು: ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಯಾಕೆ ಶಾಸಕ ಜಮೀರ್ ಅಹ್ಮದ್‍ನನ್ನು ಬಂಧಿಸಿ ವಿಚಾರಣೆ ನಡೆಸಿಲ್ಲ ಎಂದು ಸಂಸದ ಪ್ರತಾಪ್ ಸಿಂಹ ಪ್ರಶ್ನಿಸಿದ್ದಾರೆ.

    ಈ ಕುರಿತು ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಕೇವಲ ಕೆಲ ಸ್ಯಾಂಡಲ್‍ವುಡ್ ನಟಿಯರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಆದರೆ ಪ್ರಶಾಂತ್ ಸಂಬರಗಿ ನೇರವಾಗಿ ಹೆಸರಿಸಿರುವ ಶಾಸಕ ಜಮೀರ್ ಅಹ್ಮದ್‍ನನ್ನು ಬಂಧಿಸಿ ಯಾಕೆ ವಿಚಾರಣೆ ನಡೆಸುತ್ತಿಲ್ಲ, ಇದರ ಹಿಂದಿನ ಉದ್ದೇಶವೇನು ಎಂಬುದು ಅರ್ಥವಾಗುತ್ತಿಲ್ಲ ಎಂದು ಕಿಡಿ ಕಾರಿದ್ದಾರೆ.

    ಪ್ರಶಾಂತ್ ಸಂಬರಗಿ ಹಲವರ ಹೆಸರು ಹೇಳಿದ್ದಾರೆ. ಈ ಪಟ್ಟಿಯಲ್ಲಿ ಜಮೀರ್ ಅಹಮ್ಮದ್ ಹೆಸರು ಸಹ ಇದೆ. ಈ ವರೆಗೆ ಜಮೀರ್ ಅಹಮ್ಮದ್ ರನ್ನ ಯಾಕೆ ಬಂಧಿಸಿಲ್ಲ. ಇದರ ಹಿಂದಿನ ಉದ್ದೇಶವೇನು? ತನಿಖಾಧಿಕಾರಿಗಳಿಗೆ ಪ್ರಶಾಂತ್ ಸಂಬರಗಿ ಆರೋಪಗಳ ಮೇಲೆ ಅನುಮಾನಗಳಿದ್ದರೆ ಅವರನ್ನೂ ತನಿಖೆಗೆ ಒಳಪಡಿಸಿ. ಅವರ ಆರೋಪಗಳಿಗೆ ಪೂರಕ ದಾಖಲೆಗಳಿದ್ದರೆ ಅದನ್ನು ಸಂಗ್ರಹಿಸಿಕೊಂಡು ತನಿಖೆ ಮುಂದುವರಿಸಿ ಎಂದು ಹೇಳಿದ್ದಾರೆ.

     

    ಪ್ರಶಾಂತ್ ಸಂಬರಗಿ ಯಾರ್ಯಾರ ಹೆಸರು ಹೇಳಿದ್ದಾರೆ. ಅವರೆಲ್ಲರನ್ನೂ ವಿಚಾರಣೆಗೆ ಒಳಪಡಿಸಿ, ಯಾರೋ ಒಬ್ಬಿಬ್ಬರು ಸಿನಿಮಾ ನಟಿಯರನ್ನು ಕೂಡಿ ಹಾಕಿ ವಿಚಾರಣೆ ನಡೆಸಿ ಕಳುಹಿಸಿದರೆ ಸರಿ ಆಗುವುದಿಲ್ಲ. ಈ ಪ್ರಕರಣ ಹೊರ ಬಂದಿದ್ದೇ ಇಂದ್ರಜಿತ್ ಲಂಕೇಶ್ ಅವರ ಧೈರ್ಯದ ನಿರ್ಧಾರದಿಂದ. ಹೀಗಾಗಿ ಅವರು ಹೇಳಿದ ಎಲ್ಲ ವಿಚಾರ ಹಾಗೂ ಮಜಲುಗಳಿಂದ ತನಿಖೆಯಾಗಬೇಕು ಎಂದು ಪ್ರತಾಪ್ ಸಿಂಹ ಆರೋಪಿಸಿದ್ದಾರೆ.

    ಡ್ರಗ್ಸ್ ವಿಚಾರದಲ್ಲಿ ರಾಜಕೀಯ ಪ್ರಭಾವ ಇರುವುದು ಸತ್ಯ. ಇಂತಹ ಪ್ರಕರಣಗಳಲ್ಲಿ ರಾಜಕೀಯ ಬೆರಸಿಕೊಳ್ಳುವುದೂ ಸಹಜ. ಆದರೆ ಗೃಹ ಮಂತ್ರಿಗಳು ಯಾವುದೇ ಪ್ರಭಾವಕ್ಕೆ ಮಣಿಯಲ್ಲ ಎಂದು ಹೇಳಿದ್ದಾರೆ ಅವರ ಮಾತಿನ ಮೇಲೆ ನನಗೆ ನಂಬಿಕೆ ಇದೆ ಎಂದು ಪ್ರತಾಪ್ ಸಿಂಹ ಹೇಳಿದರು.

     

    ಇದು ಶಾಲಾ, ಕಾಲೇಜುಗಳಿಗೂ ಹಬ್ಬುತ್ತಿದ್ದು, ವಿದ್ಯಾರ್ಥಿಗಳು ಡ್ರಗ್ಸ್ ದಾಸರಾಗುತ್ತಿದ್ದಾರೆ. ಇದನ್ನು ಸೇವಿಸಿದರೆ ವಾಸನೆ ಸಹ ಬರುವುದಿಲ್ಲ. ಹೀಗಾಗಿ ಯುವಕರು ಹೆಚ್ಚು ಅಡಿಕ್ಟ್ ಆಗುತ್ತಿದ್ದಾರೆ. ಈ ಸಮಾಜದ ಪಿಡುಗನ್ನು ತೊಲಗಿಸಲು ಸಮಗ್ರ ತನಿಖೆ ಕ್ರಮ ಕೈಗೊಳ್ಳಬೇಕಿದೆ ಎಂದು ಅವರು ಆಗ್ರಹಿಸಿದ್ದಾರೆ.

  • ದಲಿತ ಯುವಕನಿಗೆ ಥಳಿಸಿದ್ದ ಆಂಧ್ರದ ನಟ ಉಡುಪಿಯಲ್ಲಿ ಅರೆಸ್ಟ್

    ದಲಿತ ಯುವಕನಿಗೆ ಥಳಿಸಿದ್ದ ಆಂಧ್ರದ ನಟ ಉಡುಪಿಯಲ್ಲಿ ಅರೆಸ್ಟ್

    ಉಡುಪಿ: ಆಂಧ್ರಪ್ರದೇಶದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದ ದಲಿತ ಯುವಕನ ಮೇಲಿನ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿ ತೆಲುಗು ಚಿತ್ರ ನಿರ್ಮಾಪಕ, ತೆಲುಗು ಬಿಗ್‍ಬಾಸ್ ಸ್ಪರ್ಧಿ ಆರೋಪಿ ನೂತನ್ ನಾಯ್ಡುನನ್ನು ಉಡುಪಿ ಸ್ಥಳೀಯ ಪೊಲೀಸರು ಬಂಧಿಸಿದ್ದಾರೆ.

    ಆಂಧ್ರಪ್ರದೇಶ, ವಿಶಾಖಪಟ್ಟಣ ಪೊಲೀಸರಿಂದ ಶನಿವಾರ ಬೆಳಗ್ಗೆ ಖಚಿತ ಮಾಹಿತಿ ಪಡೆದ ಉಡುಪಿ ಪೊಲೀಸರು ಆರೋಪಿಯನ್ನು ರೈಲ್ಲೇ ನಿಲ್ದಾಣದಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿ ಮಂಗಳೂರಿನಿಂದ ಮುಂಬೈಗೆ ಪರಾರಿಯಾಗಲು ಯತ್ನಿಸಿದ್ದ ಎನ್ನಲಾಗಿದೆ.

    ಉಡುಪಿ ಮತ್ತು ಮಣಿಪಾಲ ಠಾಣೆ ಪಿಎಸ್‍ಐ ನೇತೃತ್ವದ ತಂಡ ಆರೋಪಿಯನ್ನು ಸುತ್ತುವರಿದಾಗ ತನ್ನ ಬಳಿಯಿದ್ದ ಒಂದು ಮೊಬೈಲ್ ಅನ್ನು ಎಸೆಯಲು ಮುಂದಾಗಿದ್ದಾನೆ. ಆರೋಪಿ ನೂತನ್ ಬಳಿಯಿಂದ ನಾಲ್ಕು ಮೊಬೈಲ್ ಫೋನ್‍ಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಒಂದು ಗಂಟೆ ಬಳಿಕ ಆರೋಪಿ ನೂತನ್‍ನ್ನು ವಿಶಾಖಪಟ್ಟಣ ಪೊಲೀಸರು ವಶಕ್ಕೆ ಪಡೆದುಕೊಂಡರು. ವಿಶಾಖಪಟ್ಟಣ ಪೊಲೀಸರು ಆರೋಪಿಯನ್ನು ಉಡುಪಿ ನ್ಯಾಯಾಲಯಕ್ಕೆ ಹಾಜರುಪಡಿಸಿ ವಿಶಾಖಪಟ್ಟಣಕ್ಕೆ ಕರೆದೊಯ್ದಿದ್ದಾರೆ.

  • ನಟ, ನಟಿಯರು ಮಾತ್ರವಲ್ಲ ಯುವ ಪೀಳಿಗೆಯೂ ಡ್ರಗ್ಸ್ ಮಾಫಿಯಾದಲ್ಲಿದೆ: ಶ್ರೀರಾಮುಲು

    ನಟ, ನಟಿಯರು ಮಾತ್ರವಲ್ಲ ಯುವ ಪೀಳಿಗೆಯೂ ಡ್ರಗ್ಸ್ ಮಾಫಿಯಾದಲ್ಲಿದೆ: ಶ್ರೀರಾಮುಲು

    ದಾವಣಗೆರೆ: ಡ್ರಗ್ಸ್ ಮಾಫಿಯಾದಲ್ಲಿ ಕೇವಲ ಸ್ಯಾಂಡಲ್‍ವುಡ್ ನಟ, ನಟಿಯರು ಮಾತ್ರವಲ್ಲ ಯುವ ಪೀಳಿಯೇ ಇದೆ. ಈ ಡ್ರಗ್ಸ್ ಮಾಫಿಯಾವನ್ನು ನಮ್ಮ ಸರ್ಕಾರ ಬೇರು ಸಮೇತ ಕಿತ್ತು ಹಾಕಲಿದೆ ಎಂದು ಆರೋಗ್ಯ ಸಚಿವ ಬಿ.ಶ್ರೀರಾಮುಲು ಹೇಳಿದ್ದಾರೆ.

    ಜಿಲ್ಲೆಯ ಹರಿಹರ ತಾಲೂಕಿನ ರಾಜನಹಳ್ಳಿ ವಾಲ್ಮೀಕಿ ಗುರುಪೀಠದಲ್ಲಿ ಮಾತನಾಡಿದ ಅವರು, ಸ್ಯಾಂಡಲ್‍ವುಡ್ ನಟ, ನಟಿಯರು ಮಾತ್ರ ಡ್ರಗ್ಸ್ ಮಾಫಿಯಾದಲ್ಲಿಲ್ಲ. ಯುವ ಪೀಳಿಗೆಯೂ ಇದೆ. ನಮ್ಮ ಸರ್ಕಾರದ ಡ್ರಗ್ಸ್ ಮಾಫಿಯಾವನ್ನು ಬೇರು ಸಮೇತ ಕಿತ್ತು ಹಾಕಲಿದೆ. ತನಿಖೆ ಪ್ರಗತಿಯಲ್ಲಿದ್ದು, ಪೊಲೀಸರು ಆಳವಾದ ತನಿಖೆ ನಡೆಸಿ ಕ್ರಮ ಕೈಗೊಳ್ಳುತ್ತಾರೆ ಎಂದು ತಿಳಿಸಿದ್ದಾರೆ.

    ನನ್ನ ಮಾತಿಗೆ ಈಗಲೂ ಬದ್ಧ
    ನ್ಯಾ.ನಾಗಮೋಹನ್ ದಾಸ್ ವರದಿಯನ್ನು ಸಿಎಂ ಯಡಿಯೂರಪ್ಪ ಜಾರಿ ಮಾಡಲಿದ್ದಾರೆ. ವರದಿ ನೀಡಿ ಒಂದು ತಿಂಗಳು ಮಾತ್ರ ಆಗಿದೆ. ಅದರ ಬಗ್ಗೆ ಕೂಲಂಕಷವಾಗಿ ಚರ್ಚಿಸಿ ಸಿಎಂ ಬಳಿ ನಿಯೋಗ ಹೋಗಲಿದ್ದೇವೆ. ನಾಗಮೋಹನ್ ದಾಸ್ ವರದಿ ಸರ್ಕಾರದ ಮುಂದಿದೆ. ಕೋವಿಡ್ ಇರುವುದರಿಂದ ತಡೆಹಿಡಿಯಲಾಗಿದೆ. ಅದಷ್ಟು ಬೇಗ ಜಾರಿಗೊಳಿಸಲು ಸಭೆ ನಡೆಸಲಾಗುತ್ತಿದೆ. ಇಂದು ಸಭೆಯಲ್ಲಿ ಚರ್ಚೆ ಮಾಡಿ ಸರ್ಕಾರದ ಗಮನ ಸೆಳೆಯಲಿದ್ದೇವೆ. ವಾಲ್ಮೀಕಿ ಸಮಾಜಕ್ಕೆ ಶೇಕಡಾ 7.5ರಷ್ಟು ಮೀಸಲಾತಿ ಸಿಗುತ್ತದೆ ಎಂಬ ವಿಶ್ವಾಸ ನನಗಿದೆ.

    ಈಗಾಗಲೇ ನ್ಯಾ.ನಾಗಮೋಹನ ದಾಸ್ ವರದಿ ನೀಡಿದ್ದಾರೆ. ಇದರಲ್ಲಿ ಶೇ.5ರಷ್ಟು ಮೀಸಲಾತಿ ಹೆಚ್ಚಳಕ್ಕೆ ನಿರ್ಧರಿಸಲಾಗಿದೆ. ಆದರೆ ಅದು ಶೇ.7.5 ರಷ್ಟು ಮೀಸಲಾತಿ ಹೆಚ್ಚಳ ಆಗಬೇಕು. ಈ ಹಿಂದೆ ನಾನು ನೀಡಿದ ಹೇಳಿಕೆಗೆ ಬದ್ಧನಾಗಿದ್ದೇನೆ. ವಾಲ್ಮೀಕಿ ಸಮಾಜಕ್ಕೆ ಮೀಸಲಾತಿ ಹೆಚ್ಚಳ ಆಗಬೇಕು. ಅದು ಆಗದಿದ್ದರೆ, ಈ ಹಿಂದೆ ನಾನು ಮಾತು ನೀಡಿದಂತೆ ಸಚಿವ ಹಾಗೂ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಹೇಳಿದ್ದಾರೆ.

  • ಸ್ಟಾರ್ ನಟರ ವಿರುದ್ಧ ಚೇತನ್ ಆಕ್ರೋಶ

    ಸ್ಟಾರ್ ನಟರ ವಿರುದ್ಧ ಚೇತನ್ ಆಕ್ರೋಶ

    ಬೆಂಗಳೂರು: ಸ್ಯಾಂಡಲ್ ವುಡ್ ನಲ್ಲಿ ಡ್ರಗ್ಸ್ ಮಾಫಿಯಾ ಇದೆ ಎಂಬುದರ ಬಗ್ಗೆ ತನಿಖೆಗಳು ನಡೆಯುತ್ತಿದೆ. ಈ ಮಧ್ಯೆ ಇದೀಗ ಆ ದಿನಗಳು ಖ್ಯಾತಿ ನಟ ಚೇತನ್ ಸ್ಟಾರ್ ನಟರ ವಿರುದ್ಧ ಗರಂ ಆಗಿದ್ದಾರೆ.

    ಈ ಸಂಬಂಧ ಟ್ವೀಟ್ ಮಾಡಿರುವ ಚೇತನ್, ಪ್ರಸ್ತುವಾಗಿ ಎಲ್ಲರ ಗಮನ ಮಾದಕ ವಸ್ತುಗಳನ್ನು ಖಾಸಗಿಯಾಗಿ ಬಳಸುವ ಚಲನಚಿತ್ರ ಸಿಬ್ಬಂದಿ ಮತ್ತು ನಟರನ್ನು ಬಹಿರಂಗಪಡಿಸುವುದರ ಮೇಲಿದೆ.

    ಕೇವಲ ಹಣಕ್ಕಾಗಿ ಮದ್ಯ(ಸೋಡ), ಗುಟ್ಕಾ/ಪಾನ್ ಮಸಲಾ, ಜೂಜು(ರಮ್ಮಿ) ಇತ್ಯಾದಿಗಳ ಬಗ್ಗೆ ಮುಕ್ತವಾಗಿ ಜಾಹೀರಾತು ನೀಡುವ ‘ಸ್ಟಾರ್ಸ್’ಗಳ ಮೇಲೆ ಬೆರಳು ತೋರಿಸದರಿವುದು ಮೋಸವಲ್ಲವೇ?, ಇವರು ಸಾಮಾಜಿಕ ದೃಷ್ಕøತ್ಯಗಳ ‘ರಾಯಾಭಾರಿಗಳಲ್ಲವೇ’? ಎಂದು ಬರೆದುಕೊಂಡಿದ್ದಾರೆ.

    ನಿನ್ನೆಯಷ್ಟೇ ನಮ್ಮ ನಡುವೆ ಇಲ್ಲದ ವ್ಯಕ್ತಿಯ ಮೇಲೆ ಕೆಸರೆರಚಾಟ ಮಾಡುತ್ತಿರುವುದರ ಬಗ್ಗೆ ದುಃಖವಿದೆ ಎಂದು ನಟ ಚೇತನ್ ನಿರ್ದೇಶಕ ಇಂದ್ರಜಿತ್ ಲಂಕೇಶ್ ಆರೋಪಕ್ಕೆ ಪ್ರತಿಕ್ರಿಯಿಸಿದ್ದರು.

    ಈ ಬಗ್ಗೆ ಟ್ವೀಟ್ ಮಾಡಿದ್ದ ಅವರು, ಮಾದಕ ವಸ್ತುವಿನ ಜಾಗೃತಿ ಅಭಿಯಾನ, ಪುನರ್ವಸತಿ ಕಾರ್ಯಕ್ರಮಗಳು, ಸರ್ಕಾರದ ಉತ್ತಮ ನೀತಿಗಳು, ಮತ್ತು ಸರಿಯಾದ ತನಿಖೆಗಳು ನಮಗೆ ಬೇಕಾಗಿದೆ. ಮಸಿ ಬಳಿಯುವುದು ಮತ್ತು ಉದ್ರೇಕಕಾರಿ ಹೇಳಿಕೆಗಳು ನಮಗೆ ಬೇಡವಾದುದ್ದು ಎಂದು ಬರೆದುಕೊಂಡಿದ್ದಾರೆ.

    ಅಷ್ಟೇ ಅಲ್ಲದೇ ಸಿಗರೇಟು, ಮದ್ಯ, ಮಾದಕ ಮತ್ತು ಪಾರ್ಟಿಗೆ ಹೋಗುವ ಅಭ್ಯಾಸಗಳು ನನಗಿಲ್ಲ. ಮುಂದುವರಿದು ಕನ್ನಡ ಇಂಡಸ್ಟ್ರಿಯಲ್ಲಿ ಯಾವುದೇ ಸಾಮಾಜಿಕ ಅಭ್ಯಾಸಗಳ ಬಗ್ಗೆ ಗೊತ್ತಿಲ್ಲದ ನನಗೆ ನಮ್ಮ ನಡುವೆ ಇಲ್ಲದ ವ್ಯಕ್ತಿಯ ಮೇಲೆ ಕೆಸರೆರಾಚಾಟ ಮಾಡುತ್ತಿರುವುದರ ಬಗ್ಗೆ ದುಃಖವಿದೆ. ನಾವು ಯಾವುದೇ ಆರೋಪಗಳನ್ನು ಹೋರಿಸಿದರೂ ಅದನ್ನು ಸಮರ್ಥಿಸಲು ಅಥವಾ ಉತ್ತರಿಸಲು ಆ ಧ್ವನಿಯೇ ಇಲ್ಲದಿರುವ ಸಮಯದಲ್ಲಿ ಅವರ ಮೇಲೆ ಕೆಸರು ಎರಚುವುದನ್ನು ನಾನು ಖಂಡಿಸುತ್ತೇನೆ ಎಂದು ಚೇತನ್ ಆಕ್ರೋಶ ವ್ಯಕ್ತಪಡಿಸಿದ್ದರು.

  • ಮೊದಲು ಡ್ರಗ್ಸ್ ಮಾಫಿಯಾದ ಬುಡ ಕಿತ್ತು ಬಿಸಾಕಬೇಕು: ನಟ ಜೆಕೆ

    ಮೊದಲು ಡ್ರಗ್ಸ್ ಮಾಫಿಯಾದ ಬುಡ ಕಿತ್ತು ಬಿಸಾಕಬೇಕು: ನಟ ಜೆಕೆ

    – ಸಾಕ್ಷ್ಯ ಇದ್ದು ಮಾತನಾಡಬೇಕು

    ಬೆಂಗಳೂರು: ಯಾರೋ ಡ್ರಗ್ಸ್ ತೆಗೊಂತಿದ್ದಾರೆ ಎಂದು ಅವರನ್ನು ಒಳಗೆ ಹಾಕಿ, ಅವರ ಜೀವನ ಹಾಳು ಮಾಡುವ ಬದಲು ಅದರ ಮೂಲವನ್ನು ಕಂಡುಹಿಡಿಯಬೇಕು. ಈ ಮೂಲಕ ಡ್ರಗ್ಸ್ ಮಾಫಿಯಾದ ಬುಡ ಸಮೇತ ಕಿತ್ತು ಬಿಸಾಕಬೇಕು ಎಂದು ನಟ ಜೆಕೆ ಹೇಳಿದ್ದಾರೆ.

    ನಗರದಲ್ಲಿ ಇಂದು ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಡ್ರಗ್ಸ್ ಮಾಫಿಯಾದಲ್ಲಿ ಸಿಲುಕಿಕೊಂಡವರ ಹೆಸರು ಬಹಿರಂಗಪಡಿಸಿದರೆ ಒಳ್ಳೆಯದು. ಈ ಮಾಫಿಯಾದಲ್ಲಿ ಯಾರೆಲ್ಲ ಇದ್ದಾರೆ ಹಾಗೂ ಅವರಿಗೆ ಎಲ್ಲಿಂದ ಡ್ರಗ್ಸ್ ಬರ್ತಾ ಇದೆ ಎಂಬುದನ್ನು ಕಂಡು ಹಿಡಿದರೆ ಬಹಳ ಒಳ್ಳೆಯದು. ಯಾಕೆಂದರೆ ಯವ ಪೀಳಿಗೆ ಈ ದೇಶವನ್ನು ಒಳ್ಳೆಯ ರೀತಿಯಲ್ಲಿ ಒಂದು ಮಟ್ಟಕ್ಕೆ ತೆಗೆದುಕೊಂಡು ಹೋಗುತ್ತದೆ. ದೇಶದ ಬೆಳವಣಿಗೆಗೆ ಯುವ ಪೀಳಿಗೆ ಪ್ರಮುಖ ಪಾತ್ರ ವಹಿಸುತ್ತದೆ. ಅವರನ್ನು ಡ್ರಗ್ಸ್ ತಪ್ಪು ದಾರಿಗೆ ಎಳೆಯುತ್ತಿದ್ದು, ಅದನ್ನು ನಿಲ್ಲಿಸಬೇಕಾಗಿದೆ ಎಂದರು.

    ಯುವನಟ ಸಾವನ್ನಪ್ಪಿದ್ದಾರೆ ಎಂಬ ಇಂದ್ರಜಿತ್ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಸಂಪೂರ್ಣ ಮಾಹಿತಿ ಇಟ್ಟುಕೊಂಡೇ ಯಾವತ್ತೂ ಮಾತನಾಡಬೇಕು. ಅವರು ಯಾವ ರೀತಿಯಲ್ಲಿ ಮಾತನಾಡಿದ್ದಾರೆ ಹಾಗೂ ಅವರಲ್ಲಿ ಈ ಬಗ್ಗೆ ಎಷ್ಟು ಸಾಕ್ಷ್ಯ ಇದೆ ಎಂದು ನನಗೆ ಗೊತ್ತಿಲ್ಲ. ಹೀಗಾಗಿ ನನ್ನ ಪ್ರಕಾರ ಇದು ತಪ್ಪು. ಯಾಕೆಂದರೆ ಈ ಬಗ್ಗೆ ತನಿಖೆ ಮಾಡಲು ಪೊಲೀಸರು, ಸಿಬಿಐ ಅವರು ಇದ್ದಾರೆ. ಅವರು ತನಿಖೆ ಮಾಡಿ ಅದಕ್ಕೊಂದು ಸಾರಾಂಶ ಕೊಟ್ಟ ಬಳಿಕ ಮಾತನಾಡಿದರೆ ಒಳ್ಳೆಯದು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

    ಇಂದ್ರಜಿತ್ ಅವರು ಇಷ್ಟೊಂದು ಧೈರ್ಯದಿಂದ ಹೇಳುತ್ತಿದ್ದಾರೆ ಅಂದರೆ ಅವರಿಗೆ ತಿಳಿದಿದೆ ಅಂತಾನೇ ಹೇಳಬಹುದು. ಈ ಬಗ್ಗೆ ನಮಗೆ ಗೊತ್ತಿಲ್ಲ. ಆದರೆ ಇದರಿಂದ ಸಮಾಜಕ್ಕೆ ಒಳ್ಳೆಯದಾಗುವುದಿದ್ದರೆ ಇದೊಂದು ಒಳ್ಳೆಯ ಹೆಜ್ಜೆ ಎಂದು ತಿಳಿಸಿದರು.

    10 ವರ್ಷದಿಂದ ಚಿತ್ರರಂಗದಲ್ಲಿ ಇದ್ದೀನಿ ಅಂದರೆ ಅದರ ಮೇಲೆ ಇರುವ ಪ್ರೀತಿಯೇ ಕಾರಣ. ಸ್ಯಾಂಡಲ್‍ವುಡ್ ನನಗೆ ಬೆಳೆಯಲು ಅವಕಾಶ ಕೊಟ್ಟಿದೆ. ಎಲ್ಲಾ ಕೆರಿಯರ್ ನಲ್ಲಿ ಏರಿಳಿತಗಳು ಇವೆ. ತುಂಬಾ ಅಡಚಣೆಗಳು ಬರುತ್ತಾನೇ ಇರುತ್ತವೆ. ಅದನ್ನು ಎದುರಿಸಿಕೊಂಡು ಹೋಗುವುದೇ ಜೀವನ ಎಂದು ಹೇಳಿದರು.

    ಇದೂವರೆಗೂ ನಾವು ಬರೀ ಟಿವಿ ಹಾಗೂ ಸಿನಿಮಾಗಳಲ್ಲಿ ಡ್ರಗ್ಸ್ ಮಾಫಿಯಾ ಬಗ್ಗೆ ನೋಡುತ್ತಿದ್ವಿ. ಆವಾಗ ಅನ್ನಿಸುತ್ತಿತ್ತು ಈ ರೀತಿ ಆಗುತ್ತಾ..? ಯಾಕೆ ಜನ ತಗೊತ್ತಿದ್ದಾರೆ?. ಯಾವ ಕಾರಣಕ್ಕೆ ಡ್ರಗ್ಸ್ ಸೇವನೆ ಮಾಡುತ್ತಾರೆ?. ಅದರಿಂದ ಏನು ಸಿಗುತ್ತೆ ಎಂದು ಯಾವಾಗಲೂ ಯೋಚನೆ ಮಾಡುತ್ತಿದ್ದೆವು. ನನ್ನ ಕಾಲೇಜು ದಿನಗಳಿಂದಲೂ ನಾನು ನೋಡ್ತಾ ಇದ್ದೆ. ಆದರೆ ಯಾವತ್ತೂ ಇದರ ಬಗ್ಗೆ ಆಸಕ್ತಿ ಬಂದಿಲ್ಲ. ಬರೀ ಫಿಟ್ ನೆಸ್ ಬಗ್ಗೆನೇ ಹೆಚ್ಚು ಆಸಕ್ತಿ ಹೊಂದಿದ್ದೆ. ಆದರೆ ಇದು ಚಿತ್ರರಂಗದಲ್ಲಿ ಆಗುತ್ತಿದೆ ಅಂದರೆ ನಿಜಕ್ಕೂ ಬೇಸರವಾಗುತ್ತಿದ್ದು, ಇದು ಆಗಬಾರದು. ಇದನ್ನು ನಿಲ್ಲಿಸಲೇ ಬೇಕು ಎಂದರು.

    ಇದು ಕೇವಲ ಸ್ಯಾಂಡಲ್ ವುಡ್ ಮಾತ್ರವಲ್ಲ, ಇಡೀ ವಿಶ್ವದಲ್ಲೇ ನಡೆಯುತ್ತಿರೋ ಜಾಲವಾಗಿದೆ. ನಮ್ಮ ಸ್ಯಾಂಡಲ್ ವುಡ್ ನಲ್ಲಿ ಈ ರೀತಿ ಆಗ್ತಿದೆ ಅಂದಾಗ ತುಂಬಾನೇ ಬೇಜಾರಾಗುತ್ತದೆ. ಹೀಗಿರುವಾಗ ಈ ಮಾಫಿಯಾದಲ್ಲಿ ಯಾರೂ ಭಾಗಿಯಾಗಿಲ್ಲ ಅಂತ ಹೇಳಿದರೆ ನಮಗೆ ತುಂಬಾನೇ ಖುಷಿಯಾಗುತ್ತದೆ. ಯಾಕಂದರೆ ಸ್ಯಾಂಡಲ್ ವುಡ್ ಅಂದರೆ ನಮಗೆ ಒಂದು ಕುಟುಂಬ ಇದ್ದಂತೆ ಎಂದು ನುಡಿದರು.

     

  • ಸಿನಿ ರಂಗಕ್ಕೆ ಮತ್ತೊಂದು ಆಘಾತ- ಸುಶಾಂತ್ ಬೆನ್ನಲ್ಲೇ ಮತ್ತೊಬ್ಬ ಯುವನಟ ಆತ್ಮಹತ್ಯೆ

    ಸಿನಿ ರಂಗಕ್ಕೆ ಮತ್ತೊಂದು ಆಘಾತ- ಸುಶಾಂತ್ ಬೆನ್ನಲ್ಲೇ ಮತ್ತೊಬ್ಬ ಯುವನಟ ಆತ್ಮಹತ್ಯೆ

    ಮುಂಬೈ: ಬಾಲಿವುಡ್ ನಟ ಆತ್ಮಹತ್ಯೆಗೆ ಶರಣಾಗಿ ಭಾರೀ ಸುದ್ದಿಯಾಗುತ್ತಿರುವ ಬೆನ್ನಲ್ಲೇ ಇದೀಗ ಮತ್ತೊಬ್ಬ ಯುವ ನಟ ಸಾವಿಗೆ ಶರಣಾಗಿದ್ದಾರೆ.

    ಹೌದು. ಮರಾಠಿ ನಟ ಅಶುತೋಷ್ ಭಕ್ರೆ ಆತ್ಮಹತ್ಯೆಗೆ ಶರಣಾಗಿದ್ದಾರೆ. 32 ವರ್ಷದ ನಟ ಮಹಾರಾಷ್ಟ್ರದ ಮರಾಠವಾಡದ ನಂದೇಡ್ ಪಟ್ಟಣದಲ್ಲಿರುವ ತಮ್ಮ ಮನೆಯಲ್ಲಿ ಬುಧವಾರ ನೇಣುಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

    ಅಶುತೋಷ್ ಸೀರಿಯಲ್ ನಟಿ ಮಯೂರಿ ದೇಶ್‍ಮುಖ್ ಪತಿ. ತಿಂಗಳ ಹಿಂದೆಯಷ್ಟೇ ಅಶುತೋಷ್ ನಂದೇಡ್ ನಲ್ಲಿರುವ ತಮ್ಮ ಪೋಷಕರ ಮನೆಗೆ ಬಂದಿದ್ದಾರೆ. ಸದ್ಯ ಆತ್ಮಹತ್ಯೆಗೆ ನಿಖರ ಕಾಣವೇನೆಂದು ತಿಳಿದುಬಂದಿಲ್ಲ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನು ಓದಿ: ಬಾಲಿವುಡ್‍ಗೆ ಬೈ ಹೇಳಿ ಕೊಡಗಿನಲ್ಲಿ ಕೃಷಿ ಮಾಡೋಕೆ ಮುಂದಾಗಿದ್ದ ಸುಶಾಂತ್ ಸಿಂಗ್

    ಅಶುತೋಷ್ ಕೆಲ ದಿನಗಳ ಹಿಂದೆ ಅವರು ಖಿನ್ನತೆಯಿಂದ ಬಳಲುತ್ತಿದ್ದರು. ಅಲ್ಲದೆ ಈ ಹಿಂದೆ, ಒಬ್ಬ ವ್ಯಕ್ತಿ ಯಾಕೆ ಆತ್ಮಹತ್ಯೆಗೆ ಶರಣಾಗುತ್ತಾನೆ ಎಂದು ವಿಶ್ಲೇಷಣೆ ಇರುವ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಕೂಡ ಮಾಡಿಕೊಂಡಿದ್ದರು. ಅಶುತೋಷ್ ಭಕ್ರೆ ಅವರು ‘ಭಕರ್’, ‘ಇಚರ್ ಥಾರ್ಲ ಪಕ್ಕಾ’ ಮೊದಲಾದ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇದನ್ನೂ ಓದಿ: ರಿಯಾಗೆ ನಾನೆಂದೂ ಸುಶಾಂತ್‍ನನ್ನು ಬಿಟ್ಟು ಬರೋಕೆ ಹೇಳಿರಲಿಲ್ಲ: ಮಹೇಶ್ ಭಟ್

    ಇದೀಗ ನಟನ ಆತ್ಮಹತ್ಯೆಗೆ ಸಂಬಂಧಿಸಿದಂತೆ ಶಿವಾಜಿನಗರ ಠಾಣೆಯ ಪೊಲೀಸರು ಆಕಸ್ಮಿಕ ಸಾವು ಎಂದು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಸುಶಾಂತ್ ಡೆಬಿಟ್, ಕ್ರೆಡಿಟ್ ಕಾರ್ಡ್ ಬಳಸ್ತಿದ್ದ ರಿಯಾ

    ಜೂನ್ 14ರಂದು ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಮುಂಬೈನ ಬಾಂದ್ರಾ ನಿವಾಸದಲ್ಲಿ ಪತ್ತೆಯಾಗಿತ್ತು. ಮಾನಸಿಕ ಖಿನ್ನತೆಗೆ ಒಳಗಾಗಿದ್ದರಿಂದ ಸುಶಾಂತ್ ಆತ್ಮಹತ್ಯೆ ಮಾಡಿಕೊಂಡಿದ್ದರು ಎಂದು ಹೇಳಲಾಗಿದೆ. ಆದ್ರೆ ಬಾಲಿವುಡ್ ನಟಿ ಕಂಗನಾ ರಣಾವತ್ ಮತ್ತು ಅಭಿಮಾನಿಗಳು ಇದೊಂದು ಪೂರ್ವಯೋಜಿತ ಕೊಲೆ ಎಂದು ಆರೋಪಿಸುತ್ತಿದ್ದರೆ, ಇತ್ತ ತಂದೆ, ಸುಶಾಂತ್ ಪ್ರೇಯಸಿ ನಟಿ ರಿಯಾ ಚಕ್ರವರ್ತಿ ವಿರುದ್ಧ ದೂರು ನೀಡಿದ್ದಾರೆ.

  • ಮಧ್ಯರಾತ್ರಿ ಅಪಾರ್ಟ್‌ಮೆಂಟ್‌ನಲ್ಲಿ ಜೂಜಾಟ – ಖ್ಯಾತ ನಟ ಸೇರಿ 12 ಮಂದಿ ಅರೆಸ್ಟ್

    ಮಧ್ಯರಾತ್ರಿ ಅಪಾರ್ಟ್‌ಮೆಂಟ್‌ನಲ್ಲಿ ಜೂಜಾಟ – ಖ್ಯಾತ ನಟ ಸೇರಿ 12 ಮಂದಿ ಅರೆಸ್ಟ್

    ಚೆನ್ನೈ: ಕೊರೊನಾ ನಿಯಂತ್ರಣಕ್ಕಾಗಿ ವಿಧಿಸಿರುವ ಲಾಕ್‍ಡೌನ್ ನಿಯಮವನ್ನು ಉಲ್ಲಂಘನೆ ಮಾಡಿ ಮನೆಯಲ್ಲಿಯೇ ಜೂಜಾಟ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ದಕ್ಷಿಣ ಭಾರತದ ಖ್ಯಾತ ಸೇರಿ ಹಲವರನ್ನು ಪೊಲೀಸರು ಬಂಧಿಸಿದ್ದಾರೆ.

    ಖ್ಯಾತ ನಟ ಶ್ಯಾಮ್ ನುಂಗಂಬಕ್ಕಂ ಪ್ರದೇಶದ ಸಮೀಪವಿರುವ ತಮ್ಮ ಅಪಾರ್ಟ್‌ಮೆಂಟ್‌ನಲ್ಲಿ ಜೂಜಾಟ ಆಡುತ್ತಿದ್ದರು. ಅಲ್ಲದೇ ಈ ಜೂಜಾಟದಲ್ಲಿ ತಮಿಳು ನಟರೊಬ್ಬರು ಹಣ ಕಳೆದುಕೊಂಡಿದ್ದಾರೆ ಎಂದು ವರದಿಯಾಗಿದೆ. ಈ ಹಿನ್ನೆಲೆಯಲ್ಲಿ ಖಚಿತ ಮಾಹಿತಿ ಮೇರೆಗೆ ಪೊಲೀಸರು ನಟನ ಅಪಾರ್ಟ್‌ಮೆಂಟ್ ಮೇಲೆ ದಾಳಿ ಮಾಡಿದ್ದಾರೆ. ಆಗ ಪೊಲೀಸರು ನಟ ಶ್ಯಾಮ್ ಸೇರಿದಂತೆ 12 ಜನರನ್ನು ಪೊಲೀಸರು ಬಂಧಿಸಿದ್ದಾರೆ.

    ಲಾಕ್‍ಡೌನ್ ನಡುವೆಯೂ ತಡರಾತ್ರಿ ಅಕ್ರಮ ಚಟುವಟಿಕೆಯಲ್ಲಿ ತೊಡಗಿದ್ದ ಫ್ಲ್ಯಾಟ್‍ನಿಂದ ಜೂಜಾಟಕ್ಕೆ ಬಳಸಿದ ಟೋಕನ್‍ಗಳನ್ನು ವಶಪಡಿಸಿಕೊಳ್ಳಲಾಗಿದೆ. ಸದ್ಯಕ್ಕೆ ನಟ ಶ್ಯಾಮ್ ಮತ್ತು ಇತರ 11 ಮಂದಿಯನ್ನು ಬಂಧಿಸಲಾಗಿದೆ. ಟೋಕನ್‍ಗಳ ಬಳಕೆಯ ಬಗ್ಗೆ ನಾವು ತನಿಖೆ ನಡೆಸುತ್ತಿದ್ದೇವೆ. ಈ ಜೂಜಾಟದಲ್ಲಿ ಹಣದ ರೂಪದಲ್ಲಿ ಟೋಕನ್ ಗಳನ್ನು ಬಳಸಲಾಗುತ್ತದೆ ಎಂಬ ಮಾಹಿತಿ ಲಭ್ಯವಾಗಿದೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.

    ಇತ್ತೀಚೆಗೆ ವಿದ್ಯಾರ್ಥಿಯೊಬ್ಬ ಆನ್‍ಲೈನ್ ಜೂಜಾಟದಲ್ಲಿ ಸುಮಾರು 20 ಸಾವಿರ ಹಣವನ್ನು ಕಳೆದುಕೊಂಡಿದ್ದನು. ಇದೇ ಖಿನ್ನತೆಯಲ್ಲಿ ಯುವಕ ಮನನೊಂದು ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿದ್ದನು. ಈ ಘಟನೆ ಬಳಿಕ ತಮಿಳುನಾಡಿನಲ್ಲಿ ಜೂಜಾಟದ ಅಡ್ಡೆಗಳ ಮೇಲೆ ಪೊಲೀಸರು ನಿರಂತರವಾಗಿ ದಾಳಿ ನಡೆಸುತ್ತಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಲಾಕ್‍ಡೌನ್ ಸಮಯದಲ್ಲಿ ಕೆಲಸವಿಲ್ಲದ ಕಾರಣ ಯುವಕರು ಆನ್‍ಲೈನ್ ಮೂಲಕ ಜೂಜಾಟ ಆಟವಾಡುತ್ತಿದ್ದಾರೆ. ಇದರಿಂದ ಅನೇಕ ಕುಟುಂಬಗಳು ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿವೆ. ಹೀಗಾಗಿ ಅನೇಕ ಆನ್‍ಲೈನ್ ಗೇಮ್‍ಗಳ ನಿಯಂತ್ರಣಕ್ಕೆ ಸರ್ಕಾರ ಕ್ರಮ ತೆಗೆದುಕೊಳ್ಳಬೇಕು ಎಂದು ನ್ಯಾಯಮೂರ್ತಿ ಪುಗಳೇಂದಿ ಹೇಳಿದ್ದಾರೆ. ಅಲ್ಲದೇ ಕೆಲವು ಆನ್‍ಲೈನ್ ಗೇಮ್‍ಗಳ ಪಟ್ಟಿಯನ್ನು ಕೂಡ ಮಾಡಿದ್ದಾರೆ.