Tag: ನಟ ಪ್ರಕಾಶ್ ರೈ

  • ಅತಂತ್ರ ಸ್ಥಿತಿ ನಿರ್ಮಾಣವಾದ್ರೆ ಬಿಜೆಪಿ ಜೊತೆ ಜೆಡಿಎಸ್ ಕೈ ಜೋಡಿಸಬಾರದು: ಪ್ರಕಾಶ್ ರೈ

    ಅತಂತ್ರ ಸ್ಥಿತಿ ನಿರ್ಮಾಣವಾದ್ರೆ ಬಿಜೆಪಿ ಜೊತೆ ಜೆಡಿಎಸ್ ಕೈ ಜೋಡಿಸಬಾರದು: ಪ್ರಕಾಶ್ ರೈ

    ಮಡಿಕೇರಿ: ರಾಜ್ಯದಲ್ಲಿ ಪ್ರಾದೇಶಿಕ ಪಕ್ಷಗಳು ಗಟ್ಟಿಗೊಳ್ಳಬೇಕು. ಎರಡು ರಾಷ್ಟ್ರೀಯ ಪಕ್ಷಗಳ ಮುಂದೆ ಭಿಕ್ಷೆ ಬೇಡುವ ಹೈಕಮಾಂಡ್ ಸಂಸ್ಕೃತಿ ತೊಲಗಬೇಕು. ಚುನಾವಣೆ ಬಳಿಕ ರಾಜ್ಯದಲ್ಲಿ ಅತಂತ್ರ ನಿರ್ಮಾಣವಾಗಬಹುದು. ಆಗ ಬಿಜೆಪಿ ಜೊತೆ ಜೆಡಿಎಸ್ ಕೈ ಜೋಡಿಸದೆ ನೈತಿಕತೆಯನ್ನು ಉಳಿಸಿಕೊಳ್ಳಬೇಕು ಎಂದು ಬಹುಭಾಷಾ ನಟ ಪ್ರಕಾಶ್ ರೈ ಮನವಿ ಮಾಡಿದ್ದಾರೆ.

    ಮಡಿಕೇರಿಯಲ್ಲಿ ಆಯೋಜಿಸಲಾಗಿದ್ದ ಮಾಧ್ಯಮ ಸಂವಾದ ಕಾರ್ಯಕ್ರಮದಲ್ಲಿ ಮಾತಾನಾಡಿದ ಅವರು, ಜಸ್ಟ್ ಆಸ್ಕಿಂಗ್ ಎನ್ನುವುದು ರಾಜಕೀಯ ವೇದಿಕೆಯಲ್ಲ ರಾಜಕೀಯ ಪಕ್ಷಗಳು ಅಲ್ಪ ಸಂಖ್ಯಾತ ಗುಂಪಿನಲ್ಲಿವೆ, ಪ್ರಶ್ನಿಸುವ ಜನರು ಬಹುಸಂಖ್ಯೆಯಲ್ಲಿದ್ದಾರೆ. ನಾನು ಬಹುಸಂಖ್ಯಾತರ ಪರವಾಗಿ ಪ್ರಶ್ನಿಸಿ ಸಾಮಾನ್ಯನಾಗಿ ಇರುತ್ತೇನೆ. ರಾಜಕೀಯಕ್ಕೆ ಪ್ರವೇಶಿಸಿ ಎಂಎಲ್‍ಎ, ಎಂಪಿ ಆಗುವ ಮೂಲಕ ಸಣ್ಣ ಬಾವಿಗೆ ಬೀಳಲಾರೆ. ಸಾಗರದಂತಿರುವ ಜನರ ಬಳಿಯೇ ನಾನು ಸದಾ ಇರಲು ಇಚ್ಚೆಪಡುತ್ತೇನೆ ಎಂದು ಹೇಳಿದ್ದಾರೆ.

    ಬೆಂಗಳೂರಿನಲ್ಲಿ ನಡೆದ ಗೌರಿ ಲಂಕೇಶ್ ಹತ್ಯೆ ನನ್ನನ್ನು ಪ್ರಶ್ನೆ ಕೇಳುವಂತೆ ಪ್ರೇರಣೆ ನೀಡಿತು. ಆಕೆಯ ಹತ್ಯೆಯನ್ನು ಒಂದು ವರ್ಗದ ಜನರು ಸಂಭ್ರಮ ಆಚರಿಸಿ ಖುಷಿಪಟ್ಟರು. ಬಿಜೆಪಿಯ ಈ ನಡೆಯನ್ನು ಪ್ರಧಾನಿ ಮೋದಿ ತಡೆಯದೆ ಸುಮ್ಮನಿದ್ದರು. ಹಾಗಾಗಿ ನಾನು ಮೊದಲು ಪ್ರಧಾನಿ ಮೋದಿಯನ್ನ ವಿರೋಧಿಸಿದೆ. ನಾನು ಅನ್ಯಾಯವನ್ನು ನಿರಂತರವಾಗಿ ಪ್ರಶ್ನೆ ಮಾಡುತ್ತಲೇ ಇರುತ್ತೇನೆ. ಅಲ್ಲದೇ ಕೋಮುವಾದ ತಡೆಯಲು ಬಿಜೆಪಿ ವಿಫಲವಾಗುತ್ತಿದೆ. ಹಾಗಾಗೀ ನಾನು ಬಿಜೆಪಿಯನ್ನು ವಿರೋಧಿಸುತ್ತೇನೆ ಎಂದು ತಿಳಿಸಿದರು.

    ಕಾವೇರಿ ಸತ್ಯ ಬಹಿರಂಗ: ಕಾವೇರಿ ವಿಚಾರವಾಗಿ ಎರಡು ತಿಂಗಳಲ್ಲಿ ಸತ್ಯವನ್ನು ಬಹಿರಂಗ ಮಾಡುತ್ತೇನೆ. ಈ ವಿಚಾರದಲ್ಲಿ ಎರಡು ರಾಜ್ಯದ ಜನಪ್ರತಿನಿಧಿಗಳು ಎರಡು ರಾಜ್ಯದ ಜನರಿಗೆ ಮೋಸ ಮಾಡಿದ್ದಾರೆ. ಪ್ರಕೃತಿಯನ್ನು ಬದಲಾವಣೆ ಮಾಡಬೇಡಿ. ಪ್ರವೃತ್ತಿಯನ್ನು ಬದಲಾವಣೆ ಮಾಡಿಕೊಳ್ಳಿ ಎಂದು ಸಲಹೆ ನೀಡುತ್ತೇನೆ ಎಂದರು.

     

    ಪ್ರಾದೇಶಿಕ ಪಕ್ಷ ಅಗತ್ಯ: ನಮ್ಮ ರಾಜ್ಯದಲ್ಲಿ ಪ್ರಾದೇಶಿಕ ಪಕ್ಷಗಳು ಗಟ್ಟಿಗೊಳ್ಳಬೇಕು. ಎರಡು ರಾಷ್ಟ್ರೀಯ ಪಕ್ಷಗಳ ಮುಂದೆ ಭಿಕ್ಷೆ ಬೇಡುವ ಹೈಕಮಾಂಡ್ ಸಂಸ್ಕೃತಿ ತೊಲಗಬೇಕು. ಚುನಾವಣೆ ಬಳಿಕ ರಾಜ್ಯದಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗಬಹುದು. ಆಗ ಬಿಜೆಪಿ ಜೊತೆ ಜೆಡಿಎಸ್ ಕೈ ಜೋಡಿಸದೆ ನೈತಿಕತೆಯನ್ನು ಉಳಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.

    ಟಿಪ್ಪು ಜಯಂತಿ ಜನಭಿಪ್ರಾಯ: ಕೊಡಗಿನಲ್ಲಿ ಟಿಪ್ಪು ಜಯಂತಿ ಆಚರಣೆ ವಿಚಾರದ ಬಗ್ಗೆ ಮಾತಾನಾಡಿದ ಅವರು ಜಿಲ್ಲೆಯಲ್ಲಿ ಮುಂದಿನ ದಿನಗಳಲ್ಲಿ ಟಿಪ್ಪು ಜಯಂತಿ ಆಚರಣೆ ಬಗ್ಗೆ ಜನಾಭಿಪ್ರಾಯ ಸಂಗ್ರಹಿಸುತ್ತೇನೆ. ಎಲ್ಲಾ ವರ್ಗದ ಜನರನ್ನು ಗಣನೆಗೆ ತೆಗೆದುಕೊಂಡು ಚರ್ಚೆ ಮಾಡುತ್ತೇನೆ. ಜಯಂತಿ ಆಚರಣೆ ಸಂದರ್ಭ ಚರ್ಚಿಸುವುದಕ್ಕಿಂದ 6 ತಿಂಗಳು ಮುಂಚೆ ಚರ್ಚೆ ಆಗಬೇಕು. ಟಿಪ್ಪು ಜಯಂತಿ ನೆಪದಲ್ಲಿ ಎರಡು ರಾಷ್ಟ್ರೀಯ ಪಕ್ಷಗಳು ರಾಜಕೀಯ ಮಾಡುತ್ತಿದೆ. ಜಿಲ್ಲೆಯ ಸಮಸ್ಯೆಗಳ ಚರ್ಚೆಗೆ ಜಸ್ಟ್ ಆಸ್ಕಿಂಗ್ ವೇದಿಕೆಯಾಗುತ್ತೆ ಎಂದು ತಿಳಿಸಿದ್ದರು.

  • ಬಿಎಸ್‍ಪಿ ಬಳಿಕ ಟಿಆರ್‌ಎಸ್‌  ಪಕ್ಷದೊಂದಿಗೆ ಜೆಡಿಎಸ್ ಮೈತ್ರಿ – ತೃತೀಯ ರಂಗ ಸ್ಥಾಪನೆಗೆ ಮುನ್ನುಡಿ

    ಬಿಎಸ್‍ಪಿ ಬಳಿಕ ಟಿಆರ್‌ಎಸ್‌ ಪಕ್ಷದೊಂದಿಗೆ ಜೆಡಿಎಸ್ ಮೈತ್ರಿ – ತೃತೀಯ ರಂಗ ಸ್ಥಾಪನೆಗೆ ಮುನ್ನುಡಿ

    ಬೆಂಗಳೂರು: ವಿಧಾನಸಭೆ ಚುನಾವಣೆಯಲ್ಲಿ ಶತಾಯ ಗತಾಯ ಗೆಲುವು ಪಡೆಯಲು ಮಯಾವತಿಯವರ ಬಿಎಸ್‍ಪಿ ಪಕ್ಷದೊಂದಿಗೆ ಹೊಂದಾಣಿಕೆ ಮಾಡಿಕೊಂಡಿದ್ದ ಜೆಡಿಎಸ್, ಪ್ರಾದೇಶಿಕ ಪಕ್ಷಗಳೊಂದಿಗೆ ಮೈತ್ರಿ ರಾಜಕಾರಣವನ್ನು ಮುಂದುವರೆಸಿದ್ದು ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್‌) ಪಕ್ಷದೊಂದಿಗೆ ಸೇರಿ ತೃತೀಯ ರಂಗ ರಚಿಸಲು ಹೊರಟಿದೆ.

    ರಾಷ್ಟ್ರ ಮಟ್ಟದಲ್ಲಿ ತೃತಿಯ ರಂಗ ಸ್ಥಾಪನೆ ಸಂಬಂಧ ತೆಲಂಗಾಣ ಮುಖ್ಯಮಂತ್ರಿ ಟಿಆರ್ ಎಸ್ ಪಕ್ಷದ ನಾಯಕ ಕೆಸಿ ಚಂದ್ರಶೇಖರ್ ರಾವ್(ಕೆಸಿಆರ್) ಇಂದು ಮಾಜಿ ಪ್ರಧಾನಿ ದೇವೇಗೌಡರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ನಗರದ ಪದ್ಮನಾಭ ನಗರದ ಎಚ್‍ಡಿಡಿ ನಿವಾಸಕ್ಕೆ ಆಗಮಿಸಿದ ಚಂದ್ರಶೇಖರ್ ರಾವ್ ಅವರು ಸುಮಾರು 2 ಗಂಟೆಕಾಲ ದೇವೇಗೌಡರ ಜೊತೆ ಮಾತುಕತೆ ನಡೆಸಿದರು. ಈ ವೇಳೆ ಮಾಜಿ ಸಿಎಂ ಕುಮಾರಸ್ವಾಮಿ, ನಟ ಪ್ರಕಾಶ್ ರೈ, ಟಿಆರ್ ಎಸ್ ಪಕ್ಷದ ಸಂಸದರು, ಶಾಸಕರು ಚರ್ಚೆಯಲ್ಲಿ ಭಾಗಿದ್ದರು.

    ಎಚ್‍ಡಿಡಿ ನಿವಾಸದಲ್ಲೇ ಮಧ್ಯಾಹ್ನದ ಭೋಜನ ಸೇವಿಸಿದ ಕೆಸಿಆರ್ ಕರ್ನಾಟಕ ವಿಧಾನಸಭಾ ಚನಾವಣೆಯಲ್ಲಿ ಜೆಡಿಎಸ್ ಪಕ್ಷವನ್ನು ಬೆಂಬಲಿಸುವಂತೆ ಕರ್ನಾಟಕದಲ್ಲಿರುವ ಎಲ್ಲ ತೆಲುಗು ಭಾಷಿಕ ಮತದಾರರಿಗೆ ಮನವಿ ಮಾಡುವುದಾಗಿ ಘೋಷಿಸಿದರು. ಅಲ್ಲದೇ ಕುಮಾರಸ್ವಾಮಿ ಅವರು ಎಲ್ಲೆಲ್ಲಿ ನನ್ನ ಅಗತ್ಯ ಇದೆ ಎಂದು ಕರೆಯುತ್ತಾರೋ ಅಲ್ಲಿಗೆ ನಾನು ಪ್ರಚಾರಕ್ಕೆ ಬರುತ್ತೇನೆ ಎಂದರು.

    ಜಂಟಿಯಾಗಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಕೆಸಿಆರ್, ರಾಜ್ಯ ಜೆಡಿಎಸ್ ಬೆಂಬಲದೊಂದಿಗೆ ರಾಷ್ಟ್ರ ಮಟ್ಟದಲ್ಲಿ ತೃತಿಯ ರಂಗ ಸ್ಥಾಪನೆ ವಿಷಯವನ್ನು ಪ್ರಸ್ತಾಪಿಸಿದರು. ಈಗಾಗಲೇ ಪಶ್ಚಿಮ ಬಂಗಾಳ, ಜಾರ್ಖಂಡ್ ರಾಜ್ಯಗಳ ಪ್ರಾದೇಶಿಕ ಪಕ್ಷಗಳ ಜೊತೆ ಚರ್ಚೆ ನಡೆಸಲಾಗಿದೆ. ದೇಶದ ಪ್ರಮುಖ ನದಿಗಳಲ್ಲಿ ಅಗತ್ಯಕ್ಕಿಂತ ಹೆಚ್ಚು ನೀರಿದೆ. ಆದರೆ ರಾಜ್ಯಗಳ ನಡುವೆ ನಿರಂತರವಾಗಿ ನೀರಿಗಾಗಿ ಜಗಳ ನಡೆಯುತ್ತಿದೆ. ಈ ಜಲ ಯುದ್ಧಕ್ಕೆ ಕಾರಣ ಯಾರು? 65 ವರ್ಷ ಕಳೆದರೂ ಸಮಸ್ಯೆ ಪರಿಹಾರ ಸಿಕ್ಕಿಲ್ಲ. ರೈತರಿಗೆ ನೀರು ಸಿಗುತ್ತಿಲ್ಲ. ಕೇಂದ್ರ ಬಿಜೆಪಿ ಸರಕಾರ ಮತ್ತು ಕಾಂಗ್ರೆಸ್ ಟ್ರ್ಯಾಪ್ ನಿಂದ ಪ್ರಾದೇಶಿಕ ಪಕ್ಷಗಳನ್ನು ಹೊರತರಬೇಕಿದೆ. ಇದಕ್ಕಾಗಿ ನೂತನ ತೃತೀಯ ರಂಗ ಸ್ಥಾಪನೆಗೆ ಮುಂದಾಗಿದ್ದೇವೆ ಎಂದರು.

    ಜನಪರ, ಜನ ಸಾಮಾನ್ಯರ, ರೈತರ ಪರವಾದ ತೃತೀಯ ರಂಗವನ್ನು ರಚಿಸುವುದು ನಮ್ಮ ಉದ್ದೇಶ. ದೇಶದಲ್ಲಿ ಸಾಕಷ್ಟು ನೀರು ಇದೆ. ಕರ್ನಾಟಕ, ತಮಿಳುನಾಡು ಸೇರಿದಂತೆ ಎಲ್ಲ ರಾಜ್ಯಗಳಿಗೂ ಸಮರ್ಪಕ ನೀರು ಸಿಗುವಂತೆ ಮಾಡುತ್ತೇವೆ. ಎರಡೂ ರಾಷ್ಟ್ರೀಯ ಪಕ್ಷಗಳಿಂದ ಭಾರತ, ಭಾರತ ಮಾತೆ ಮತ್ತು ಭಾರತೀಯರನ್ನು ರಕ್ಷಿಸಬೇಕಿದೆ. ಈ ನಿಟ್ಟಿನಲ್ಲಿ ಯಾವುದೇ ಪಕ್ಷ ನಮ್ಮ ತೃತೀಯ ರಂಗಕ್ಕೆ ಸೇರಿದರೂ ಆ ಪಕ್ಷಕ್ಕೆ ಸ್ವಾಗತ ಎಂದರು.

    ಈ ವೇಳೆ ಮಾತನಾಡಿದ ಎಚ್‍ಡಿಡಿ ತೃತೀಯ ರಂಗ ಎನ್ನುವುದಕ್ಕಿಂತ ಇದು ರಾಷ್ಟ್ರೀಯ ಪಕ್ಷಗಳ ವಿರುದ್ಧ ಹೋರಾಟ. ಕೆಸಿಆರ್ ತೆಲಂಗಾಣ ಪ್ರತ್ಯೇಕ ರಾಜ್ಯ ನಂತರ ಇದು ಮೊದಲ ಭೇಟಿಯಾಗಿದ್ದು, ರಾಜ್ಯದ ಸಿಎಂ ಆಗಿ ಕೆಸಿಆರ್ ಉತ್ತಮ ಕೆಲಸ ಮಾಡುತ್ತಿದ್ದಾರೆ. ಇಬ್ಬರು ನೀರಾವರಿ ಹಾಗೂ ರೈತರ ಬಗ್ಗೆ ಚರ್ಚೆ ನಡೆಸಿದ್ದೇವೆ ಎಂದು ಹೇಳಿದರು.

    ವಿಶೇಷವಾಗಿ ಈ ಭೇಟಿಯಲ್ಲಿ ಭಾಗವಹಿಸಿದ್ದ ಬಹು ಭಾಷಾ ನಟ ಪ್ರಕಾಶ್ ರೈ ಮಾತನಾಡಿ, ನಾವು ಸಮಾನ ಮನಸ್ಕರು ಒಂದು ವೇದಿಕೆಯಾಡಿ ಬರುವ ಪ್ರಯತ್ನ ಮಾಡುತ್ತಿದ್ದೇವೆ. ನಮ್ಮಲ್ಲಿ ಸಾಕಷ್ಟು ಸಂಪನ್ಮೂಲವಿದ್ದರೂ ರಾಷ್ಟ್ರಾಭಿವೃದ್ದಿ ಸಾಧ್ಯವಾಗಿಲ್ಲ. ಹಾಗಾಗಿ ಯಾರನ್ನೂ ಮುಕ್ತ ಮಾಡುವ ವಿಷಯ ನಮ್ಮದಲ್ಲ. ನಾನು ಯಾವೊಂದು ರಾಜಕೀಯ ಪಕ್ಷವನ್ನೂ ಬೆಂಬಲಿಸುತ್ತಿಲ್ಲ. ಹಾಗಾಗಿಯೇ ಅಭಿವೃದ್ಧಿ ಪರವಾದ ಕೆಸಿಆರ್ ಪ್ರಯತ್ನಕ್ಕೆ ನಾನು ಕೈ ಜೋಡಿಸಿದ್ದೇನೆ ಎಂದರು.

  • ತಾನೊಬ್ಬ ದೊಡ್ಡ ನಟ ಅಂದ್ಕೊಂಡು ರಾಜಕಾರಣಿಗಳನ್ನು ಟೀಕಿಸುವುದು ಸರಿಯಲ್ಲ: ರೈಗೆ ಸಿಂಹ ತಿರುಗೇಟು

    ತಾನೊಬ್ಬ ದೊಡ್ಡ ನಟ ಅಂದ್ಕೊಂಡು ರಾಜಕಾರಣಿಗಳನ್ನು ಟೀಕಿಸುವುದು ಸರಿಯಲ್ಲ: ರೈಗೆ ಸಿಂಹ ತಿರುಗೇಟು

    ಮೈಸೂರು: ನಟ ಪ್ರಕಾಶ್ ರೈ ನಾನೊಬ್ಬ ದೊಡ್ಡ ನಟ ಅಂತ ಬಿಂಬಿಸಿಕೊಳ್ಳುತ್ತಿದ್ದಾರೆ. ಡಾ.ರಾಜ್, ಅಮಿತಾಬ್, ಎನ್.ಟಿ.ಆರ್ ಯಾರೂ ಕೂಡ ನಾನು ದೊಡ್ಡ ನಟ ಅಂತ ಹೇಳಿಕೊಂಡಿಲ್ಲ. ಹೀಗಾಗಿ ರೈ ಹೇಳಿಕೆ ಒಂದು ರೀತಿಯ ಅಭಾಸ ಸೃಷ್ಠಿಸುತ್ತದೆ ಅಂತ ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಕಾಶ್ ರೈ ಒಬ್ಬ ಸಾಮಾನ್ಯ ನಟ ಅಷ್ಟೇ. ಇವರು ತಮ್ಮನ್ನ ದೊಡ್ಡ ನಟ ಅಂದುಕೊಂಡು ರಾಜಕಾರಣಿಗಳನ್ನ ಟೀಕೆ ಮಾಡೋದು ಸರಿಯಲ್ಲ. ಪ್ರಕಾಶ್ ರೈ “ಸ್ಪಿಟ್ ಅಂಡ್ ರನ್ ಥರ. ಗುದ್ದು ಓಡೋದಲ್ಲ. ಉಗಿದು ಓಡೋದು”. ಆದ್ರೆ ನಾನು ಅವರಂತೆ ಇರೋಕೆ ಆಗೋಲ್ಲ. ನನಗೆ ಜವಾಬ್ದಾರಿ ಇದೆ, ಕ್ಷೇತ್ರ ಇದೆ. ಅವರಂತೆ ನಾನು ಓಡಿ ಹೋಗೋಕೆ ಆಗೋಲ್ಲ ಅಂತ ಟಾಂಗ್ ನೀಡಿದ್ರು.

    ನಟ ಪ್ರಕಾಶ್ ರೈ ಕುರಿತು ನಾನು ವೈಯಕ್ತಿಕ ಟೀಕೆ ಮಾಡಿಲ್ಲ. ಅವರಿಗೆ ಮೋದಿ, ಯೋಗಿ ಆದಿತ್ಯನಾಥ್, ಟ್ರಂಪ್ ಚೈನಾ ಅಧ್ಯಕ್ಷರನ್ನು ಪ್ರಶ್ನೆ ಮಾಡುವ ಹಕ್ಕಿದೆ. ಅಂತೆಯೇ ಇವರನ್ನು ಪ್ರಶ್ನೆ ಮಾಡುವ ಹಕ್ಕು ಸಹ ಸಾರ್ವಜನಿಕರಿಗೆ ಹಾಗೂ ನನಗೆ ಇದೆ. ಉತ್ತರಪ್ರದೇಶದ ಮಕ್ಕಳ ಮರಣಕ್ಕೆ ಮಿಡಿಯುವ ಇವರ ಆತ್ಮಸಾಕ್ಷಿ. ಕೋಲಾರದಲ್ಲಿ ಆದ ಮಕ್ಕಳ ಸಾವಿನ ಸರಣಿ ಇವರು ಯಾಕೆ ಮಾತನಾಡೋಲ್ಲ. ಇತರರನ್ನು ಪ್ರಶ್ನೆ ಮಾಡುವ ಧಾವಂತದಲ್ಲಿ ದ್ವಂದ್ವ ನಿಲುವನ್ನು ಬಹಿರಂಗೊಳಿಸುತ್ತಿದ್ದಾರೆ. ಸಚಿವ ರಮಾನಾಥ್ ರೈ ಜೊತೆ ವೇದಿಕೆ ಹಂಚಿಕೊಳ್ಳುವ ಇವರು ಶರತ್ ಮಡಿವಾಳ ಹತ್ಯೆ ಬಗ್ಗೆ ಯಾಕೆ ಪ್ರಶ್ನಿಸೋಲ್ಲ ಅಂತ ಕಿಡಿಕಾರಿದ್ರು.

    ದೇಶದಲ್ಲಿ ಮಾತನಾಡಲು ಭಯವಾಗುತ್ತಿದೆ ಎಂಬ ಪ್ರಕಾಶ್ ರೈ ಹೇಳಿಕೆಗೆ ಇದೇ ಪ್ರತಿಕ್ರಿಯಿಸಿದ ಅವರು, ಇವರೇ ಮೋದಿ ಬಗ್ಗೆ ತುಚ್ಛವಾಗಿ ಮಾತನಾಡುತ್ತಿದ್ದಾರೆ. ಇದಕ್ಕಿಂತ ಸ್ವಾತಂತ್ರ್ಯ ಇನ್ನೆನು ಬೇಕಿದೆ. ಮೋದಿ ಬಗ್ಗೆ ಯಾರೇ ಏನೆ ಮಾತನಾಡಿದ್ರು ಅವರು ಸುಮ್ಮನೆ ಇದ್ದಾರೆ. ಇದಕ್ಕಿಂತ ವಾಕ್ ಸ್ವಾತಂತ್ರ್ಯ ಇನ್ಯಾವ ದೇಶದಲ್ಲಿದೆ ಅಂದ್ರು.

  • ಹಿಂದೂ ಭಯೋತ್ಪಾದನೆ ಕುರಿತ ನಟ ಕಮಲ ಹಾಸನ್ ಹೇಳಿಕೆಗೆ ಪ್ರಕಾಶ್ ರೈ ಬೆಂಬಲ

    ಹಿಂದೂ ಭಯೋತ್ಪಾದನೆ ಕುರಿತ ನಟ ಕಮಲ ಹಾಸನ್ ಹೇಳಿಕೆಗೆ ಪ್ರಕಾಶ್ ರೈ ಬೆಂಬಲ

    ನವದೆಹಲಿ: ದೇಶದಲ್ಲಿ ಹಿಂದೂ ಭಯೋತ್ಪಾದನೆ ಇರುವುದನ್ನು ಬಲಪಂಥೀಯರು ತಳ್ಳಿಹಾಕುವುದಕ್ಕೆ ಸಾಧ್ಯವಿಲ್ಲ ಎಂದು ನಟ ಕಮಲ್ ಹಾಸನ್ ಅವರು ಹೇಳಿಕೆ ನೀಡಿದ ಮರುದಿನವೇ ನಟ ಪ್ರಕಾಶ್ ರೈ ಕಮಲ್ ಹಾಸನ್ ಹೇಳಿಕೆಗೆ ಬೆಂಬಲ ವ್ಯಕ್ತಪಡಿಸುವ ರೀತಿಯಲ್ಲಿ ಭಯೋತ್ಪಾದನೆ ಬಗ್ಗೆ ಟ್ವೀಟ್ ಮಾಡಿದ್ದಾರೆ.

    ಧರ್ಮ, ನೈತಿಕತೆ, ಸಂಸ್ಕೃತಿ ಹೆಸರಲ್ಲಿ ನನ್ನ ದೇಶದ ಬೀದಿಗಳಲ್ಲಿ ಯುವ ಜೋಡಿಗಳ ಮೇಲೆ ಹಲ್ಲೆ ಮಾಡುವುದು ಭಯೋತ್ಪಾದನೆಯಲ್ಲದೆ ಮತ್ತೇನು? ಗೋಹತ್ಯೆ ಬಗ್ಗೆ ಸಣ್ಣ ಅನುಮಾನ ಬಂದ್ರೂ ಕಾನೂನು ಕೈಗೆತ್ತಿಕೊಂಡು ಜನರನ್ನ ಹತ್ಯೆ ಮಾಡೋದು ಭಯೋತ್ಪಾದನೆ ಅಲ್ಲದಿದ್ರೆ, ಪ್ರತಿರೋಧಿ ಧ್ವನಿಗಳನ್ನು ಹತ್ತಿಕ್ಕಲು ನಿಂದನೆ, ಬೆದರಿಕೆ ಮೂಲಕ ಟ್ರೋಲ್ ಮಾಡೋದು ಭಯೋತ್ಪಾದನೆ ಅಲ್ಲದಿದ್ರೆ…. ಹಾಗಾದ್ರೆ ಭಯೋತ್ಪಾದನೆ ಎಂದರೆ ಏನು? ಎಂದು ಪ್ರಶ್ನಿಸಿ ಟ್ವೀಟ್ ಮಾಡಿದ್ದಾರೆ.

    ಕೆಲ ದಿನಗಳ ಹಿಂದೆ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಸಂದರ್ಭದಲ್ಲೂ ಪ್ರಕಾಶ್ ರೈ, ಪ್ರಧಾನಿ ಮೋದಿಯವರ ವಿರುದ್ಧ ಹೇಳಿಕೆಯನ್ನು ನೀಡಿದ್ದರು. ಗೌರಿ ಲಂಕೇಶ್ ಅವರ ಹತ್ಯೆಯನ್ನು ಸಂಭ್ರಮಿಸಿ ಟ್ರೊಲ್ ಮಾಡಿದವರನ್ನು ಮೋದಿ ಫಾಲೋ ಮಾಡುತ್ತಿದ್ದಾರೆ. ನನಗಿಂತ ಅವರು ದೊಡ್ಡ ನಟ ಎಂದು ಹೇಳಿ ಭಾರೀ ವಿವಾದಕ್ಕೆ ಕಾರಣರಾಗಿದ್ದರು. ಈ ಹೇಳಿಕೆಗೆ ದೇಶಾದ್ಯಂತ ಹಲವರು ವಿರೋಧವನ್ನು ವ್ಯಕ್ತಪಡಿಸಿದ್ದರು. ಅಲ್ಲದೇ ನಟ ಪ್ರಕಾಶ್ ಅವರ ವಿರುದ್ಧ ವಕೀಲರೊಬ್ಬರು ಲಕ್ನೋ ಕೋರ್ಟ್‍ನಲ್ಲಿ ಪ್ರಕರಣವನ್ನು ದಾಖಲಿಸಿದ್ದರು.

    ನಂತರ ಕಾರಂತರ ಪ್ರಶಸ್ತಿ ಸ್ವೀಕರಿಸುವ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಕಾಶ್ ರಾಜ್, ನನ್ನ ಮಾತಿನಿಂದ ನೋವಾಗಿದ್ದಾರೆ ಕ್ಷಮಿಸಿ. ನಿಮ್ಮಲ್ಲಿ ಆತಂಕವನ್ನು ಸೃಷ್ಟಿದ್ದಕ್ಕೆ ಕ್ಷಮೆ ಇರಲಿ ಎಂದು ಹೇಳಿದ್ದರು.

    ತಮಿಳು ನಟ ಕಮಲ್ ಹಾಸನ್ ಆನಂದ ವಿಕಟನ್ ಎಂಬ ವಾರ ಪತ್ರಿಕೆಗೆ ಅಂಕಣ ಬರೆದಿದ್ದರು. ಈ ಲೇಖನದಲ್ಲಿ ಹಿಂದೂ ಭಯೋತ್ಪಾದನೆ ಇರುವುದನ್ನು ಬಲಪಂಥೀಯರು ತಳ್ಳಿಹಾಕುವುದಕ್ಕೆ ಸಾಧ್ಯವಿಲ್ಲ ಎಂದು ಯಾವುದೇ ಸಂಘಟನೆ ಹೆಸರನ್ನು ಪ್ರಸ್ತಾಪಿಸದೆ ತಮ್ಮ ಅಭಿಪ್ರಾಯವನ್ನು ವ್ಯಕ್ತ ಪಡಿಸಿದ್ದರು. ನಟ ಕಮಲ್ ರ ಹೇಳಿಕೆಗೆ ಬಲಪಂಥೀಯ ಸಂಘಟನೆಗಳಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಅಲ್ಲದೇ ಅವರ ವಿರುದ್ಧ ಕೋರ್ಟ್‍ನಲ್ಲಿ ಮಾನನಷ್ಟ ಮೊಕದ್ದಮೆ ದಾಖಲಿಸಲಾಗಿದೆ.