Tag: ನಟ ಗಣೇಶ್

  • ನಾಳೆ ಬಿಡುಗಡೆಗೊಳ್ಳಲಿದೆ ನಟಭಯಂಕರನ ಮತ್ತೊಂದು ಹಾಡು!

    ನಾಳೆ ಬಿಡುಗಡೆಗೊಳ್ಳಲಿದೆ ನಟಭಯಂಕರನ ಮತ್ತೊಂದು ಹಾಡು!

    ಬೆಂಗಳೂರು: ಪ್ರಥಮ್ ನಿರ್ದೇಶನ ಮಾಡೋದರ ಜೊತೆಗೆ ನಾಯಕನಾಗಿಯೂ ನಟಿಸಿರುವ ಚಿತ್ರ ‘ನಟ ಭಯಂಕರ’. ನಿರ್ದೇಶನವನ್ನೇ ಪ್ರಧಾನ ಆಸಕ್ತಿಯಾಗಿಸಿಕೊಂಡಿದ್ದರೂ ನಟನೆಯನ್ನು ನೆಚ್ಚಿಕೊಂಡಿದ್ದ ಪ್ರಥಮ್ ಈ ಸಿನಿಮಾ ಮೂಲಕ ತಮ್ಮ ಪ್ರತಿಭೆಯನ್ನು ಸಾಣೆ ಹಿಡಿಯಲು ಮುಂದಾಗಿದ್ದಾರೆ. ಈ ಸಿನಿಮಾ ಆರಂಭವಾದಾಗಿಂದ ಚಿತ್ರಮಂದಿರದ ಹೊಸ್ತಿಲು ತಲುಪಿಕೊಳ್ಳೋವರೆಗೆ ಪ್ರತೀ ಹೆಜ್ಜೆಯೂ ಹೊಸತನದಿಂದ ಕೂಡಿರಬೇಕೆಂಬ ಇಂಗಿತ ಅವರಲ್ಲಿದೆ. ಆದ್ದರಿಂದಲೇ ಹಂತ ಹಂತವಾಗಿ ನಟ ಭಯಂಕರ ಸದ್ದು ಮಾಡುತ್ತಾ ಬಂದಿದ್ದಾನೆ.

    ಇತ್ತೀಚೆಗಷ್ಟೇ ರಿಯಲ್ ಸ್ಟಾರ್ ಉಪೇಂದ್ರ ಹಾಡಿದ್ದ ಟೈಟಲ್ ಟ್ಯ್ರಾಕ್ ಲಾಂಚ್ ಆಗಿತ್ತು. ಅದು ಟ್ರೆಂಡ್ ಸೆಟ್ ಮಾಡಿರುವಾಗಲೇ ಪ್ರಥಮ್ ಮತ್ತೊಂದು ಹಾಡು ಬಿಡುಗಡೆಗೊಳಿಸಲು ತಯಾರಾಗಿದ್ದಾರೆ. ನಾಳೆ ನಟಭಯಂಕರ ಚಿತ್ರದ ಎರಡನೇ ಹಾಡು ಬಿಡುಗಡೆಯಾಗಲಿದೆ. ಈ ಸಿನಿಮಾದಲ್ಲಿ ಪ್ರತಿಯೊಂದನ್ನೂ ಕಣ್ಣಲ್ಲಿ ಕಣ್ಣಿಟ್ಟು ಮುಂದಡಿ ಇಡುತ್ತಿರೋ ಪ್ರಥಮ್ ಈ ಹಾಡನ್ನೂ ಕೂಡಾ ಟ್ರೆಂಡ್ ಸೆಟ್ ಮಾಡುವಂತೆಯೇ ರೂಪಿಸಿದ್ದಾರಂತೆ. ಆದರೆ ಅದರ ರೂಪುರೇಷೆಗಳನ್ನು ಮಾತ್ರ ಗೌಪ್ಯವಾಗಿಟ್ಟಿದ್ದಾರೆ. ಅದೆಲ್ಲವೂ ನಾಳೆ ಎಲ್ಲರೆದುರು ಅನಾವರಣಗೊಳ್ಳಲಿದೆ.

    ಪ್ರಥಮ್ ಪಾಲಿಗೆ ಇದು ನಾಯಕನಾಗಿ ಅನ್ನೋದಕ್ಕಿಂತಲೂ ನಿರ್ದೇಶಕನಾಗಿ ಅತ್ಯಂತ ಮಹತ್ವದ ಚಿತ್ರ. ಈ ಕಾರಣದಿಂದಲೇ ಎಲ್ಲ ನೀಲ ನಕ್ಷೆಯನ್ನು ರೆಡಿ ಮಾಡಿಕೊಂಡೇ ಅವರು ನಟಭಯಂಕರನ ಸಾರಥ್ಯ ವಹಿಸಿಕೊಂಡಿದ್ದರು. ಎಲ್.ಕೆ.ಅಡ್ವಾಣಿ ಅವರಿಂದ ಕ್ಲಾಪ್ ಮಾಡಿಸೋ ಮೂಲಕ ನಟಭಯಂಕರನಿಗೆ ಚಾಲನೆ ಕೊಟ್ಟಿದ್ದ ಪ್ರಥಮ್ ಈ ವರೆಗೂ ತಿರುಗಿ ನೋಡಿಯೇ ಇಲ್ಲ. ಅಷ್ಟಕ್ಕೂ ಈ ಸಿನಿಮಾ ಸುಖಾ ಸುಮ್ಮನೆ ಸದ್ದು ಮಾಡುತ್ತಿಲ್ಲ. ಇದರಲ್ಲಿ ಮಹತ್ವದ್ದೇನೋ ಕಂಟೆಂಟ್ ಇದೆ ಎಂಬ ಸುಳಿವು ಗಾಂಧಿನಗರದ ಗುಂಟ ಪಸರಿಸಿಕೊಂಡಿದೆ. ಆದ್ದರಿಂದಲೇ ಸ್ಟಾರ್ ನಟರೆಲ್ಲರೂ ಪ್ರಥಮ್‍ರನ್ನು ಬೆನ್ತಟ್ಟಿ ಪ್ರೋತ್ಸಾಹಿಸುತ್ತಿದ್ದಾರೆ.

    ರಿಯಲ್ ಸ್ಟಾರ್ ಉಪೇಂದ್ರ ಟೈಟಲ್ ಟ್ರ್ಯಾಕ್ ಹಾಡಿ ಸಾಥ್ ಕೊಡುವ ಮೂಲಕ ನಟ ಭಯಂಕರನಿಗೆ ಮತ್ತಷ್ಟು ಮೈಲೇಜು ಸಿಕ್ಕಿತ್ತು. ನಟ, ನಿರ್ದೇಶಕ ರಕ್ಷಿತ್ ಶೆಟ್ಟಿ ಕೂಡಾ ಪ್ರಥಮ್ ಕಸುಬುದಾರಿಕೆ ಕಂಡು ಬೆರಗಾಗಿದ್ದಾರೆ. ಇನ್ನು ಹೆಚ್ಚಾಗಿ ಯಾವ ಸಿನಿಮಾ ಸೆಟ್‍ಗಳಿಗೂ ಭೇಟಿ ನೀಡದ ಗೋಲ್ಡನ್ ಸ್ಟಾರ್ ಗಣೇಶ್ ನಟ ಭಯಂಕರ ಸೆಟ್ಟಿಗಾಗಮಿಸಿ ಎಲ್ಲ ಕೆಲಸ ಕಾರ್ಯಗಳ ಮಾಹಿತಿ ಪಡೆದುಕೊಂಡಿದ್ದರು. ಪ್ರಥಮ್‍ಗೆ ಬೆನ್ತಟ್ಟಿ ಪ್ರೋತ್ಸಾಹಿಸುತ್ತಲೇ ಸಿನಿಮಾ ಮೂಡಿ ಬಂದಿರೋ ರೀತಿಯನ್ನು ಮೆಚ್ಚಿಕೊಂಡಿದ್ದರು. ಒಟ್ಟಾರೆಯಾಗಿ ಚಿತ್ರಂಗವೇ ನಟಭಯಂಕರನ ಬೆನ್ನಿಗೆ ನಿಂತಿದೆ. ನಾಳೆ ಬಿಡುಗಡೆಯಾಗಲಿರೋ ಹಾಡು ಈ ಸಿನಿಮಾದ ಕ್ರೇಜ್ ಅನ್ನು ಮತ್ತಷ್ಟು ಮಿರುಗಿಸಲಿದೆ.

  • ಗೋಲ್ಡನ್ ಸ್ಟಾರ್ ’99’ ಚಿತ್ರಕ್ಕೆ ತಡೆ ನೀಡಲು ಕೋರ್ಟ್ ನಕಾರ

    ಗೋಲ್ಡನ್ ಸ್ಟಾರ್ ’99’ ಚಿತ್ರಕ್ಕೆ ತಡೆ ನೀಡಲು ಕೋರ್ಟ್ ನಕಾರ

    ಬೆಂಗಳೂರು: ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ’99’ ಚಿತ್ರಕ್ಕೆ ತಡೆ ನೀಡುವಂತೆ ಕೋರಿ ಸಲ್ಲಿಕೆ ಆಗಿದ್ದ ಅರ್ಜಿಯನ್ನು ಸ್ವೀಕರಿಸಿದ ನ್ಯಾಯಾಲಯ ಚಿತ್ರಕ್ಕೆ ತಡೆ ನೀಡಲು ನಿರಾಕರಿಸಿ ಪ್ರಕರಣದ ವಿಚಾರಣೆಯನ್ನು ಮಂಗಳವಾರಕ್ಕೆ ಮುಂದೂಡಿದೆ.

    ’99’ ಚಿತ್ರದ ಬಿಡುಗಡೆಗೆ ತಡೆ ಕೋರಿ ಲಕ್ಷ್ಮಿ ಫೈನಾನ್ಸ್ ಹಾಗೂ ಪಲ್ಲವಿ ಚಿತ್ರ ಮಂದಿರದ ಮಾಲೀಕರಾಗಿರುವ ಹರೀಶ್ ಕುಮಾರ್ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಚಿತ್ರದ ನಿರ್ಮಾಪಕ ರಾಮು ಅವರು ನನ್ನಿಂದ 65 ಲಕ್ಷ ರೂ. ಸಾಲ ಪಡೆದಿದ್ದು, ಮರು ಪಾವತಿ ಮಾಡಿಲ್ಲ ಎಂದು ಹರೀಶ್ ಆರೋಪಿಸಿದ್ದರು.

    ಗಂಗಾ ಚಿತ್ರದ ಫ್ರೀ ಪ್ರೊಡಕ್ಷನ್ ವೇಳೆ ಸಾಲ ಪಡೆದಿದ್ದ ರಾಮು ಅವರು ಸಾಲ ಪಡೆದಿದ್ದು, ಸಾಲ ಮರುಪಾವತಿ ಮಾಡದ ಹಿನ್ನೆಲೆಯಲ್ಲಿ ಅರ್ಜಿ ಸಲ್ಲಿಸಲಾಗಿದೆ. ನಿರ್ಮಾಪಕ ರಾಮು ಅವರು ನಟಿ ಮಾಲಾಶ್ರೀ ಪತಿ ಆಗಿದ್ದು, ಅವರೇ 99 ಚಿತ್ರ ನಿರ್ಮಾಪಕರಾಗಿದ್ದಾರೆ.

    ಸದ್ಯ ನ್ಯಾಯಾಲಯ ರಾಮು ಅವರಿಗೆ ತುರ್ತು ನೋಟಿಸ್ ಜಾರಿ ಮಾಡಿದ್ದು, ಅರ್ಜಿ ವಿಚಾರಣೆ ಮುಂದೂಡಿದೆ. ಅಂದಹಾಗೇ ಮೇ 1 ರಂದು ’99’ ಚಿತ್ರ ಬಿಡುಗಡೆ ಆಗಲಿದೆ.

  • ಶ್ರೀಲಂಕಾ ಬಾಂಬ್ ಸ್ಫೋಟ – ಅಗಲಿದ ಗೆಳೆಯನನ್ನು ನೆನೆದ ನಟ ಗಣೇಶ್

    ಶ್ರೀಲಂಕಾ ಬಾಂಬ್ ಸ್ಫೋಟ – ಅಗಲಿದ ಗೆಳೆಯನನ್ನು ನೆನೆದ ನಟ ಗಣೇಶ್

    ಬೆಂಗಳೂರು: ಶ್ರೀಲಂಕಾ ಪ್ರವಾಸಕ್ಕೆ ತೆರಳಿದಲ್ಲಿದ್ದ ಕನ್ನಡಿಗರಲ್ಲಿ 7 ಮಂದಿ ಸಾವನ್ನಪ್ಪಿದ್ದು, ತಮ್ಮ ಆತ್ಮೀಯ ಗೆಳೆಯರನ್ನು ನೆನೆದು ನಟ ಗಣೇಶ್ ಭಾವುಕ ಪೋಸ್ಟ್ ಮಾಡಿದ್ದಾರೆ.

    ತಮ್ಮ ಟ್ವಿಟ್ಟರ್ ನಲ್ಲಿ ಗೆಳೆಯರೊಂದಿಗಿನ ಫೋಟೋ ಹಂಚಿಕೊಂಡಿರುವ ನಟ ಗಣೇಶ್, ನೀವು ಇಲ್ಲ ಎಂಬುವುದನ್ನು ನಂಬಲು ಆಗುತ್ತಿಲ್ಲ. ಈ ಸಂದರ್ಭದಲ್ಲಿ ನೋವನ್ನು ಹಂಚಿಕೊಳ್ಳಲು ಪದಗಳೇ ಸಿಗುತ್ತಿಲ್ಲ. ಪುಟ್ಟರಾಜು, ಎನ್ ಮಾರೇಗೌಡ (ಅಪ್ಪಿ) ನಿಮ್ಮನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಶ್ರೀಲಂಕಾದಲ್ಲಿ ನಡೆದ ಉಗ್ರರ ದಾಳಿಯನ್ನು ನಾನು ಖಂಡಿಸುತ್ತೇನೆ ಎಂದು ತಿಳಿಸಿದ್ದಾರೆ.

    ಇತ್ತ ಸ್ಫೋಟದಲ್ಲಿ ಸಾವನ್ನಪ್ಪಿದ್ದ 7 ಕನ್ನಡಿಗರ ಮೃತದೇಹ ಇಂದು ಮಧ್ಯರಾತ್ರಿ ಬೆಂಗಳೂರಿಗೆ ರವಾನೆಯಾಗುವ ಸಂಭವವಿದ್ದು, ವಿಶೇಷ ವಿಮಾನದಲ್ಲಿ ಕೊಲಂಬೋದಿಂದ ಮೃತದೇಹಗಳನ್ನು ತರಲಾಗುತ್ತಿದೆ. ಈ ಬಗ್ಗೆ ಕೊಲಂಬೋದಲ್ಲಿನ ಭಾರತೀಯ ರಾಯಭಾರಿ ಕಚೇರಿಯ ಅಧಿಕಾರಿ ಮಂಜುನಾಥ್ ಮಾಹಿತಿ ನೀಡಿದ್ದಾರೆ.