Tag: ನಟ ಅನಿರುದ್ಧ್

  • ಬೆಡ್ ಇಲ್ಲ, ವೆಂಟಿಲೇಟರ್ ಸಿಗುತ್ತಿಲ್ಲ, ದಯವಿಟ್ಟು ಜಾಗೃತರಾಗಿರಿ- ಆಪ್ತರನ್ನು ಕಳೆದುಕೊಂಡು ದುಃಖಿತರಾದ ಅನಿರುದ್ಧ್

    ಬೆಡ್ ಇಲ್ಲ, ವೆಂಟಿಲೇಟರ್ ಸಿಗುತ್ತಿಲ್ಲ, ದಯವಿಟ್ಟು ಜಾಗೃತರಾಗಿರಿ- ಆಪ್ತರನ್ನು ಕಳೆದುಕೊಂಡು ದುಃಖಿತರಾದ ಅನಿರುದ್ಧ್

    – ರೆಮ್‍ಡಿಸಿವಿರ್ ಕೊರೆತೆ, ಚಿತಾಗಾರಗಳಲ್ಲಿ ಸಾಲು

    ಬೆಂಗಳೂರು: ಕೊರೊನಾ ಭೀಕರತೆ ಕುರಿತು ಹಲವರು ತಮ್ಮ ಅನುಭವ ಹಂಚಿಕೊಳ್ಳುತ್ತಿದ್ದು, ಇಷ್ಟಾದರೂ ಜನ ಮಾತ್ರ ಎಚ್ಚೆತ್ತುಕೊಳ್ಳುತ್ತಿಲ್ಲ. ಇದೀಗ ನಟ ಅನಿರುದ್ಧ್ ಸಹ ತಮ್ಮ ಆಪ್ತರನ್ನು ಕಳೆದುಕೊಂಡ ದುಃಖದಲ್ಲಿದ್ದು, ಇದೇ ಸಂದರ್ಭದಲ್ಲಿ ಜಾಗೃತರಾಗಿರುವಂತೆ, ನಿಮ್ಮನ್ನು ನೀವು ಕಾಪಾಡಿಕೊಳ್ಳುವಂತೆ ಮನವಿ ಮಾಡಿದ್ದಾರೆ.

    ಸಾಮಾಜಿಕ ಜಾಲತಾಣಗಳಲ್ಲಿ ಈ ಕುರಿತು ವೀಡಿಯೋ ಹಂಚಿಕೊಂಡಿರುವ ಅವರು, ಕೊರೊನಾ ಸೋಂಕಿತ ನಮ್ಮ ಸ್ನೇಹಿತರೊಬ್ಬರಿಗೆ ಆಸ್ಪತ್ರೆಯಲ್ಲಿ ಬೆಡ್ ಕೊಡಿಸಲು ಇನ್ನಿಲ್ಲದ ಪ್ರಯತ್ನ ನಡೆಸಿದೆವು. ಕೊನೆಗೆ ಆಸ್ಪತ್ರೆಯಲ್ಲಿ ಬೆಡ್ ಸಿಕ್ಕು, ಸಾಕಷ್ಟು ಪ್ರಯತ್ನ ನಡೆಸಿದರೂ ಅವರನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಹೀಗಾಗಿ ಎಲ್ಲರೂ ಜಾಗೃತರಾಗಿರಿ, ಮನೆಯಿಂದ ಹೊರಗಡೆ ಬರಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ.

    ಸೋಂಕು ತಗುಲಿದ ಬಳಿಕ ಅವರನ್ನು ಆಸ್ಪತ್ರೆಗೆ ದಾಖಲಿಸಲು ಇನ್ನಿಲ್ಲದ ಪ್ರಯತ್ನ ಮಾಡಿದೆವು. ಸಾಕಷ್ಟು ಕರೆಗಳನ್ನು ಮಾಡಿದ ಬಳಿಕ ಕೊನೆಗೆ ಒಂದು ಆಸ್ಪತ್ರೆಯಲ್ಲಿ ಬೆಡ್ ಸಿಕ್ಕಿತು ಆದರೂ ಅವನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಆಸ್ಪತ್ರೆಗಳಲ್ಲಿ ಬೆಡ್‍ಗಳಿಲ್ಲ, ಯಾರನ್ನೂ ದಾಖಲಿಸಿಕೊಳ್ಳುತ್ತಿಲ್ಲ. ಐಸಿಯು ಇಲ್ಲ, ಇದ್ದರೂ ವೆಂಟಿಲೇಟರ್‍ಗಳಿಲ್ಲ. ಎಲ್ಲ ಇದ್ದರೂ ರೆಮ್‍ಡಿಸಿವಿರ್ ಚುಚ್ಚುಮದ್ದು ಸಿಗುತ್ತಿಲ್ಲ. ಅದು ಬ್ಲಾಕ್ ಮಾರ್ಕೆಟ್‍ನಲ್ಲಿ ಸಿಗುತ್ತಿದೆ. ಅದಕ್ಕೂ ಸಾಕಷ್ಟು ಪರದಾಡಬೇಕು. ಹೀಗಾಗಿ ಎಷ್ಟೆಲ್ಲ ಪ್ರಯತ್ನ ನಡೆಸಿದರೂ ನಮ್ಮ ಆಪ್ತರನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ, ವಿಧಿವಶರಾದರು. ಸಾವನ್ನಪ್ಪಿದ ಬಳಿಕ ಮರುದಿನ ಬೆಳಗ್ಗೆ 5 ಗಂಟೆಗೆ ಅವರ ಶವಸಂಸ್ಕಾರ ಆಯಿತು ಎಂದು ವಿವರಿಸಿದರು.

    ಅವರು ಸಾವನ್ನಪ್ಪಿದ ಬಳಿಕ ಕುಟುಂಬಸ್ಥರು ಬನಶಂಕರಿ ಸ್ಮಶಾನಕ್ಕೆ ದೇಹ ಕೊಂಡೊಯ್ದರು. ಅಲ್ಲಿ 40 ಅಂಬುಲೆನ್ಸ್‍ಗಳು ಸಾಲುಗಟ್ಟಿ ನಿಂತಿದ್ದವು. ಹೀಗಾಗಿ ನಂತರ ಕೆಂಗೇರಿ ಸ್ಮಶಾನಕ್ಕೆ ತೆರಳಿದರು. ಅಲ್ಲಿ 17ನೇ ನಂಬರ್ ಕ್ಯೂ ಸಿಕ್ಕಿತು. ಈ ರೀತಿಯ ಕೆಟ್ಟ ಪರಿಸ್ಥಿತಿ ಇದೆ. ಹೀಗಾಗಿ ಯಾರೂ ಹೊರಗಡೆ ಹೋಗಬೇಡಿ, ಮಾಸ್ಕ್ ಧರಿಸಿ, ಕೈ ಸ್ವಚ್ಛತೆ ಕಾಪಾಡಿಕೊಳ್ಳಿ ಎಂದು ಮನವಿ ಮಾಡಿದರು.

    ಅರ್ಹರೆಲ್ಲರೂ ಕೊರೊನಾ ಲಸಿಕೆ ಪಡೆಯಿರಿ. ಮೇ 1ರಿಂದ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ಸಿಗಲಿದೆ. ಯಾರೂ ಹೊರಗಡೆ ಹೋಗಬೇಡಿ, ಜನರ ಜೊತೆ ಹೆಚ್ಚು ಸಂಪರ್ಕ ಬೆಳೆಸಬೇಡಿ, ನಮಗೆ ಏನಾದರೂ ಆದರೆ ನಮ್ಮ ಇಡೀ ಕುಟುಂಬಕ್ಕೆ ಸಮಸ್ಯೆಯಾಗಲಿದೆ. ನಿಮ್ಮನ್ನು, ನಿಮ್ಮ ಕುಟುಂಬದವರನ್ನು ರಕ್ಷಿಸಿಕೊಳ್ಳಿ ಎಂದು ಕಳಕಳಿಯಿಂದ ಮನವಿ ಮಾಡಿದ್ದಾರೆ.

  • ಬೆಂಗ್ಳೂರಲ್ಲೇ ವಿಷ್ಣು ಸ್ಮಾರಕ್ಕೆ ಪಟ್ಟು – ಡೆಡ್‍ಲೈನ್ ಒಳಗಡೆ ತೀರ್ಮಾನ ಕೈಗೊಳ್ಳದಿದ್ರೆ ಬಂದ್ ಎಚ್ಚರಿಕೆ

    ಬೆಂಗ್ಳೂರಲ್ಲೇ ವಿಷ್ಣು ಸ್ಮಾರಕ್ಕೆ ಪಟ್ಟು – ಡೆಡ್‍ಲೈನ್ ಒಳಗಡೆ ತೀರ್ಮಾನ ಕೈಗೊಳ್ಳದಿದ್ರೆ ಬಂದ್ ಎಚ್ಚರಿಕೆ

    ಬೆಂಗಳೂರು: ನಟ, ಸಾಹಸ ಸಿಂಹ ವಿಷ್ಣುವರ್ಧನ್ ಸ್ಮಾರಕ ನಿರ್ಮಾಣ ಸಂಬಂಧ ಬೆಂಗಳೂರಿನ ಭಾರತಿ ವಿಷ್ಣುವರ್ಧನ್ ಮನೆಯಲ್ಲಿ ವಿಷ್ಣು ಅಭಿಮಾನಿಗಳು ಸಭೆ ಸೇರಿದ್ದರು. ಈ ವೇಳೆ ನಗರದಲ್ಲೇ ವಿಷ್ಣುವರ್ಧನ್ ಅವರ ಸ್ಮಾರಕ ನಿರ್ಮಾಣ ಆಗಬೇಕೆಂಬ ಒತ್ತಾಯ ಕೇಳಿ ಬಂತು.

    ವಿಷ್ಣುವರ್ಧನ್ ಅಳಿಯ ಅನಿರುದ್ಧ್ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ವಿಷ್ಣು ಸ್ಮಾರಕವನ್ನು ಅಭಿಮಾನ್ ಸ್ಟುಡಿಯೋದಲ್ಲೇ ನಿರ್ಮಾಣ ಮಾಡಬೇಕು ಎಂದು ಅಭಿಮಾನಿಗಳು ಒತ್ತಾಯ ಮಾಡಿದರು. ಆದರೆ ಇದಕ್ಕೆ ಒಪ್ಪದೇ ಕೆಲ ಅಭಿಮಾನಿಗಳು, ಮೈಸೂರಿನಲ್ಲಿ ಮಾಡಿ ಎಂದು ಆಗ್ರಹಿಸಿದರು. ಈ ನಡುವೆ ಸಭೆಯಲ್ಲಿ ಮಾತಿನ ಚಕಮಕಿ ನಡೆದು, ಕೆಲವರು ಸಭೆಯ ಅರ್ಧದಲ್ಲೇ ಹೊರನಡೆದರು.

    ಸಭೆ ಬಳಿಕ ಮಾತನಾಡಿದ ನಟ ಅನಿರುದ್ಧ್, ಅಭಿಮಾನ್ ಸ್ಟುಡಿಯೋದಲ್ಲೇ ಸ್ಮಾರಕ ನಿರ್ಮಾಣಕ್ಕೆ ಅನುಮತಿ ನೀಡುವುದಾದರೆ ಎರಡು ಎಕರೆ ಸ್ಥಳ ನೀಡಬೇಕು. ಇಲ್ಲ ಅಂದರೆ ಮೈಸೂರಿನಲ್ಲಿ ಕೊಡಿ ಎಂದರು. ಈ ವೇಳೆ ಮಾತನಾಡಿದ ಅಭಿಮಾನಿಯೊಬ್ಬರು ಸರ್ಕಾರಕ್ಕೆ ಈ ಕುರಿತು ಅಂತಿಮ ತೀರ್ಮಾನ ಕೈಗೊಳ್ಳಲು ಡಿಸೆಂಬರ್ 25 ರ ತನಕ ಸರ್ಕಾರಕ್ಕೆ ಗಡುವು ನೀಡುತ್ತೇವೆ. ಅಷ್ಟರಲ್ಲಿ ನಿರ್ಧಾರ ಕೈಗೊಳ್ಳದಿದ್ದರೆ, ಡಿ.30 ರಂದು ಬೆಂಗಳೂರು ಬಂದ್ ಮಾಡುವುದಾಗಿ ಎಚ್ಚರಿಕೆ ನೀಡಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv