Tag: ನಟರು

  • ಪ್ರಧಾನಿ ನರೇಂದ್ರ ಮೋದಿ ತಾಯಿ ನಿಧನಕ್ಕೆ ಸಿನಿಮಾ ಸೆಲೆಬ್ರಿಟಿಗಳ ಕಂಬನಿ

    ಪ್ರಧಾನಿ ನರೇಂದ್ರ ಮೋದಿ ತಾಯಿ ನಿಧನಕ್ಕೆ ಸಿನಿಮಾ ಸೆಲೆಬ್ರಿಟಿಗಳ ಕಂಬನಿ

    ಪ್ರಧಾನಿ ನರೇಂದ್ರ ಮೋದಿ ಅವರ ತಾಯಿ ಹೀರಾಬೆನ್ ಮೋದಿ ನಿಧನಕ್ಕೆ ಭಾರತೀಯ ಸಿನಿಮಾ ರಂಗದ ಅನೇಕ ಕಲಾವಿದರು ಕಂಬನಿ ಮಿಡಿದಿದ್ದಾರೆ. ಮೃತರ ಆತ್ಮಕ್ಕೆ ಶಾಂತಿ ಕೋರುವುದರ ಜೊತೆಗೆ ಮೋದಿ ಕುಟುಂಬಕ್ಕೆ ಆ ನೋವನ್ನು ಭರಿಸುವ ಶಕ್ತಿಯನ್ನು ಭಗವಂತ ಕೊಡಲಿ ಎಂದು ಪ್ರಾರ್ಥಿಸಿದ್ದಾರೆ. ಮಧ್ಯರಾತ್ರಿ ನಿಧನರಾಗಿರುವ ಹೀರಾಬೆನ್ ಅವರ ತ್ಯಾಗವನ್ನೂ ಹಲವರು ಕೊಂಡಾಡಿದ್ದಾರೆ.

    ದಕ್ಷಿಣ ಭಾರತದ ಪ್ರಸಿದ್ಧ ಕಲಾವಿದ ಪ್ರಕಾಶ್ ರೈ, ಬಾಲಿವುಡ್ ನಟಿ ಕಂಗನಾ ರಣಾವತ್, ಸ್ಯಾಂಡಲ್ ವುಡ್ ನಟಿ ಹಾಗೂ ಸಂಸದೆ ಸುಮಲತಾ ಅಂಬರೀಶ್, ಬಾಲಿವುಡ್ ನಟರಾದ  ಅಕ್ಷಯ್ ಕುಮಾರ್, ಸೋನು ಸೂದ್, ಅನುಪಮ್ ಖೇರ್, ಅಜಯ್ ದೇವಗನ್ ಸೇರಿದಂತೆ ಸಾಕಷ್ಟು ಕಲಾವಿದರು ನಿಧನಕ್ಕೆ ಕಂಬನಿ ಮಿಡಿದು ಸೋಷಿಯಲ್ ಮೀಡಿಯಾ ಮೂಲಕ ತಮ್ಮ ದುಃಖವನ್ನು ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ನಟಿ ತುನಿಷಾ ಶರ್ಮಾ ಸಾವು ಪ್ರಕರಣ – ಆರೋಪಿ ಶಿಜಾನ್‌ ಖಾನ್‌ ಬೆಂಬಲಕ್ಕೆ ನಿಂತ ಊರ್ಫಿ

    ಇಳಿವಯಸ್ಸಿನ ಹೀರಾಬೆನ್ ಮೋದಿ ಅವರು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಮೊನ್ನೆಯಷ್ಟೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸ್ವತಃ ಮೋದಿ ಅವರು ಆಸ್ಪತ್ರೆಗೆ ಭೇಟಿ ನೀಡಿ ತಾಯಿಯ ಆರೋಗ್ಯವನ್ನು ವಿಚಾರಿಸಿದ್ದರು. ಇದೀಗ ಚಿಕಿತ್ಸೆ ಫಲಕಾರಿಯಾಗದೇ ಮಧ್ಯರಾತ್ರಿ ಹೀರಾಬೆನ್ ಕೊನೆಯುಸಿರು ಬಿಟ್ಟಿದ್ದಾರೆ. ಇಂದು ಅವರ ಅಂತ್ಯಸಂಸ್ಕಾರ ಕೂಡ ನಡೆದಿದೆ.

    Live Tv
    [brid partner=56869869 player=32851 video=960834 autoplay=true]

  • ಹುಟ್ಟುಹಬ್ಬದಂದು ಅಪ್ಪು ನೆನೆದ ಸ್ಯಾಂಡಲ್‍ವುಡ್ ತಾರೆಯರು

    ಹುಟ್ಟುಹಬ್ಬದಂದು ಅಪ್ಪು ನೆನೆದ ಸ್ಯಾಂಡಲ್‍ವುಡ್ ತಾರೆಯರು

    ರುನಾಡ ರಾಜರತ್ನ ನಟ ಪವರ್‍ಸ್ಟಾರ್ ಡಾ. ಪುನೀತ್ ರಾಜ್‌ಕುಮಾರ್‌ಗೆ ಇಂದು 47ನೇ ಹುಟ್ಟುಹಬ್ಬವಾಗಿದ್ದು, ನಟ ಗೋಲ್ಡನ್ ಸ್ಟಾರ್ ಗಣೇಶ್, ರಕ್ಷಿತ್ ಶೆಟ್ಟಿ, ರಮೇಶ್ ಅರವಿಂದ್ ಹೀಗೆ ಚಂದನವನದ ಬಹುತೇಕ ತಾರೆಯರು ಪ್ರೀತಿಯ ಅಪ್ಪುವಿಗೆ ಸಾಮಾಜಿಕ ಜಾಲತಾಣದಲ್ಲಿ ಶುಭಾಶಯ ಕೋರಿದ್ದಾರೆ.

    ನಟನೆ, ಡ್ಯಾನ್ಸ್, ಫೈಟಿಂಗ್ ಅಷ್ಟೇ ಅಲ್ಲದೇ ತಮ್ಮ ಸಮಾಜಮುಖಿ ಕಾರ್ಯಗಳಿಂದ ಕರುನಾಡಿನ ಜನತೆಯ ಪ್ರೀತಿಯನ್ನು ಸಂಪಾದಿಸಿದ ಅಪ್ಪು, ಎಲ್ಲರನ್ನು ಅಗಲಿ ನಾಲ್ಕೂವರೆ ತಿಂಗಳಾದರೂ, ಅಭಿಮಾನಿಗಳ ಮನದಲ್ಲಿ ಸದಾ ಅಜರಾಮರರಾಗಿದ್ದಾರೆ ಎಂದರೆ ತಪ್ಪಾಗಲಾರದು. ಸದ್ಯ ಇಂದು ಪುನೀತ್ ಹುಟ್ಟುಹಬ್ಬವನ್ನು ಅಭಿಮಾನಿಗಳು ರಾಜ್ಯಾದ್ಯಂತ ಬಹಳ ಸಂತಸದಿಂದ ಅದ್ದೂರಿಯಾಗಿ ಆಚರಿಸುತ್ತಿದ್ದಾರೆ. ಅಲ್ಲದೇ ಈ ವಿಶೇಷ ದಿನದಂದು ಸ್ಯಾಂಡಲ್‍ವುಡ್‍ನ ಬಹುತೇಕ ಎಲ್ಲ ನಟ, ನಟಿಯರು ಅಪ್ಪು ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವ ಮೂಲಕ ಶುಭಾಶಯಗಳ ಸುರಿಮಳೆಯನ್ನೇ ಹರಿಸುತ್ತಿದ್ದಾರೆ.

    ಗಣೇಶ್ ಅವರು ತಮ್ಮ ಟ್ವಿಟ್ಟರ್‌ನಲ್ಲಿ ಪುನೀತ್ ವಿಶೇಷವಾದ ಫೋಟೋವನ್ನು ಶೇರ್ ಮಾಡಿಕೊಂಡಿದ್ದು, ಕ್ಯಾಪ್ಷನ್‍ನಲ್ಲಿ ನಿಷ್ಕಲ್ಮಶ ನಗು, ಅಪರಿಮಿತ ವಿನಯವಂತಿಕೆ, ಸದಾ ಸ್ನೇಹಮಯಿ, ಕಲೆ ಇರುವವರೆಗೂ ನೀವು ಅಮರ ಅಪ್ಪು ಸರ್, ಹುಟ್ಟು ಹಬ್ಬದ ಸವಿ ನೆನಪುಗಳು ಎಂದು ಬರೆದುಕೊಂಡಿದ್ದಾರೆ.

    ರಕ್ಷಿತ್ ಶೆಟ್ಟಿ: ಪುನೀತ್ ಅವರ ವ್ಯಕ್ತಿತ್ವವು ಅವರ ಹೆಸರನ್ನು ಪ್ರತಿಬಿಂಬಿಸುತ್ತದೆ. ಡಾ. ಪುನೀತ್ ರಾಜ್ ಕುಮಾರ್ ಅವರ ಜನ್ಮದಿನದಂದು ನಮ್ಮ ಪ್ರೀತಿಯ ಅಪ್ಪು ಸರ್ ಅವರನ್ನು ಸ್ಮರಿಸುತ್ತಿದ್ದೇವೆ. ಅವರಂತೆಯೇ ಜೇಮ್ಸ್ ಸಿನಿಮಾ ಎಲ್ಲ ಪ್ರೀತಿಗಳಿಸುತ್ತದೆ ಎಂದು ನಾನು ಭಾವಿಸುತ್ತೇನೆ. ಜೇಮ್ಸ್ ಚಿತ್ರತಂಡಕ್ಕೆ ನನ್ನ ಶುಭಾಶಯಗಳು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಜೇಮ್ಸ್ ಸಿನಿಮಾ ನೋಡೋಕೆ 10 ಅಲ್ಲ, 100 ಕಾರಣ

    ದುನಿಯಾ ವಿಜಯ್: ನಿಮ್ಮ ಜನ್ಮ ವಾರ್ಷಿಕೋತ್ಸವದಂದು ನಿಮ್ಮ ಅಧ್ಬುತ ನಟನೆ ಹಾಗೂ ನೀವು ಮಾಡಿರುವ ಅನೇಕ ಸಮಾಜ ಕಲ್ಯಾಣ ಕಾರ್ಯಕ್ರಮಗಳನ್ನು ಸ್ಮರಿಸುತ್ತ, ನಿಮ್ಮ ಮರೆಯಲಾರದ ನೆನಪುಗಳನ್ನು ಮೆಲುಕು ಹಾಕುತ್ತಿದ್ದೇನೆ. ನಿಮ್ಮ ಅಗಲಿಕೆ ಕನ್ನಡ ಚಿತ್ರಂಗಕ್ಕೆ ಹಾಗೂ ವೈಯಕ್ತಿಕವಾಗಿ ನನಗೆ ತುಂಬಾ ನೋವುಂಟು ಮಾಡಿದೆ. ಜೇಮ್ಸ್ ಚಿತ್ರ ನಿಮ್ಮ ಕ್ರಿಯಾಶೀಲತೆ ಹಾಗೂ ನಿಮ್ಮ ಇಡೀ ಚಿತ್ರತಂಡ ಪರಿಶ್ರಮಕ್ಕೆ ಹಿಡಿದ ಕೈಗನ್ನಡಿ. ನಮ್ಮೆಲ್ಲರ ಮನಸುಗಳಲ್ಲಿ ವಿಜಯಭೇರಿ ಬಾರಿಸಿ ನೂತನ ದಾಖಲೆ ಸೃಷ್ಟಿಸುವತ್ತ ಹೊರಟಿರುವ ಜೇಮ್ಸ್ ಚಿತ್ರವನ್ನು ಬರಮಾಡಿಕೊಳ್ಳಲು ಕಾಯುತ್ತಿರುವ ನಿಮ್ಮ ಕೋಟ್ಯಾಂತರ ಅಭಿಮಾನಿಗಳಲ್ಲಿ ನಾನು ಒಬ್ಬ ಎಂದು ಪತ್ರದ ಮೂಲಕ ತಿಳಿಸಿದ್ದಾರೆ.

    ಶರಣ್: ಅಪ್ಪು ಸರ್ ನಿಮ್ಮ ದರ್ಶನ ಸಿಕ್ಕರೆ ಸಾಕು ಎಂದು ಹಲವಾರು ರಾಜ್ಯಗಳಿಂದ ಅಭಿಮಾನಿಗಳು ಬರೋದರ ಮಧ್ಯೆ, ನನಗೆ ನಿಮ್ಮೊಂದಿಗೆ ಬೆಳ್ಳಿತೆರೆ ಹಂಚಿಕೊಳ್ಳಲು ಸಿಕ್ಕ ಅವಕಾಶವನ್ನು ನನ್ನ ಅತಿ ದೊಡ್ಡ ಅದೃಷ್ಟ ಎಂದರೆ ತಪ್ಪಾಗಲಾರದು. ನೀವು ನಮ್ಮ ನೆನಪುಗಳು ಸದಾ ಚಿರಂಜೀವಿ ಎಂದು ಬಣ್ಣಿಸಿದ್ದಾರೆ.

    ಪ್ರೇಮ್: ಒಬ್ಬ ರಾಜಕುಮಾರ ಇದ್ದ. ಯಾವುದೇ ಯುದ್ದವನ್ನು ಮಾಡದೆ ಇಡೀ ರಾಜ್ಯವನ್ನೇ ಗೆದ್ದಿದ್ದ ಹೆಸರು ಪುನೀತ್ ರಾಜಕುಮಾರ್ ಎಂದು ಹೊಗಳಿದ್ದಾರೆ. ಇದನ್ನೂ ಓದಿ: ಮದಗಜ ಚಿತ್ರ ಖ್ಯಾತಿಯ ನಿರ್ದೇಶಕ ಮಹೇಶ್ ಕಂಡಂತೆ ‘ಜೇಮ್ಸ್’ ಸಿನಿಮಾ: ಸೆಲೆಬ್ರಿಟಿ ಫಸ್ಟ್ ರಿವ್ಯೂ

    ರಮೇಶ್ ಅರವಿಂದ್: ಪ್ರೀತಿಯ ಅಪ್ಪು ಅವರ ಸಿಹಿ ನೆನಪುಗಳಿಗೆ ನನ್ನ ನಮನಗಳು. ಅವರ ಜನ್ಮದಿನದಂದು ಅವರನ್ನು ಪ್ರೀತಿಯಿಂದ ನೆನಪಿಸಿಕೊಳ್ಳಿ. ಖಂಡಿತವಾಗಿ ಜೇಮ್ಸ್ ಐತಿಹಾಸಿಕ ಯಶಸ್ಸು ಸಾಧಿಸುತ್ತದೆ ಎಂದು ಶುಭಾಹಾರೈಸಿದ್ದಾರೆ.

    ಸಂತೋಷ್ ಆನಂದ್ ರಾಮ್: ನೀವು ಇಂದಿಗೂ ಎಂದಿಗೂ ನಾನಿರುವವರೆಗೂ ನನ್ನಲ್ಲಿ ಜೀವಂತ. ನಿಮ್ಮ ನೆನಪಲ್ಲಿ, ನಿಮ್ಮ ದಾರಿಯಲ್ಲಿ ನಾವು. ಲವ್ ಯೂ ಅಣ್ಣ ಎಂದು ಶುಭ ಕೋರುವ ಮೂಲಕ ನೆನಪಿಸಿಕೊಂಡಿದ್ದಾರೆ. ಇದನ್ನೂ ಓದಿ: ವಿಭಿನ್ನ, ವಿಶಿಷ್ಟ, ಭಾವನಾತ್ಮಕ ಡಿಪಿಗಳಲ್ಲಿ ಪುನೀತ್ ರಾಜ್ ಕುಮಾರ್

    ದಿನಾಕರ್ ತೂಗುದೀಪ: ಕರುನಾಡಿನ ಪ್ರೀತಿಯ ಅಪ್ಪು ಡಾ.ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು. ಇಂದು ಅವರ ಜೇಮ್ಸ್ ಸಿನಿಮಾ ಬಿಡುಗಡೆಯಾಗಿದ್ದು, ಇಡೀ ಜೇಮ್ಸ್ ಚಿತ್ರ ತಂಡಕ್ಕೆ ದೊಡ್ಡ ಯಶಸ್ಸು ಕೀರ್ತಿ ಸಿಗಲೆಂದು ಹಾರೈಸೋಣ ಎಂದು ಶುಭಕೋರಿದ್ದಾರೆ.

    ಅದಿತಿ ಪ್ರಭುದೇವ್: ಕರುನಾಡ ರತ್ನ ನಮ್ಮ ಪ್ರೀತಿಯ ಪವರ್ ಸ್ಟಾರ್ ಡಾ. ಪುನೀತ್ ರಾಜ್‍ಕುಮಾರ್ ಅಣ್ಣನಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು ಎಂದು ತಿಳಿಸಿದ್ದಾರೆ.

    ರವಿಶಂಕರ ಗೌಡ: ಗಾಂಧಿ ನಗಿಸುವ ಕಾಯಕ ಮಾಡುವವನಿಗೆ ನಿಷ್ಕಲ್ಮಶ ಹೃದಯದಿಂದ ಎಲ್ಲರೂ ಆತ್ಮೀಯರೆಂಬ ಭಾವನೆಯೆ ಹೆಚ್ಚು. ಈ ಚಿತ್ರಕ್ಕೆ ವಿವರಣೆ ಬೇಕಿಲ್ಲ. ಕರುನಾಡ ತಾಯಿ ಭುವನೇಶ್ವರಿಯ ಮಕ್ಕಳಿಬ್ಬರಿಗೂ ಜನುಮ ದಿನದ ಶುಭಾಶಯಗಳು ಅಣ್ಣ ಎಂದು ಟ್ವೀಟ್ ಮಾಡಿದ್ದಾರೆ.

    ರಘು ಮುಖರ್ಜಿ: ನಾವು ಒಮ್ಮೆ ಆನಂದಿಸಿದ್ದನ್ನು ನಾವು ಎಂದಿಗೂ ಕಳೆದುಕೊಳ್ಳುವುದಿಲ್ಲ, ನಾವು ಆಳವಾಗಿ ಪ್ರೀತಿಸುವ ಎಲ್ಲವೂ ನಮ್ಮ ಭಾಗವಾಗುತ್ತದೆ, ನೀವು ಯಾವಾಗಲೂ ಇರುತ್ತೀರಿ ಎಂದಿದ್ದಾರೆ.

    ಪ್ರಣಿತ: ಹುಟ್ಟು ಹಬ್ಬದ ಶುಭಾಶಯಗಳು ಅಪ್ಪು ಸರ್. ನೀವು ಎಲ್ಲಿದ್ದರೂ ನಿಮಗೆ ವಿಶ್ವದ ಎಲ್ಲ ಸಂತೋಷ ಸಿಗಲಿ ಎಂದು ಶುಭಾಶಯ ತಿಳಿಸಿದ್ದಾರೆ. ಹೀಗೆ ನಟ ಸತೀಶ್ ನೀನಾಸಂ ಅವರು ವಿಶೇಷವಾದ ಪುನೀತ್ ವೀಡಿಯೋ ಶೇರ್ ಮಾಡಿಕೊಂಡಿದ್ದರೆ, ನಟ ಡಾಲಿ ಧನಂಜಯ್, ನಟಿ ಶಾನ್ವಿ ಶ್ರೀವತ್ಸವ್, ನಟ ಸಾಯಿ ಕುಮಾರ್ ಪುನೀತ್ ಫೋಟೋ ಶೇರ್ ಮಾಡಿಕೊಳ್ಳುವ ಮೂಲಕ ವಿಶ್ ಮಾಡಿದ್ದಾರೆ.

  • ಡ್ರಗ್ಸ್ ಕೇಸ್ ತನಿಖೆಗೆ ಟ್ವಿಸ್ಟ್- ಶುರುವಾಯ್ತು ಮೂವರು ಸ್ಟಾರ್ ನಟರಿಗೆ ಢವ ಢವ!

    ಡ್ರಗ್ಸ್ ಕೇಸ್ ತನಿಖೆಗೆ ಟ್ವಿಸ್ಟ್- ಶುರುವಾಯ್ತು ಮೂವರು ಸ್ಟಾರ್ ನಟರಿಗೆ ಢವ ಢವ!

    ಬೆಂಗಳೂರು: ಸ್ಯಾಂಡಲ್‍ವುಡ್ ನಶೆ ನಂಟಿನ ಘಾಟು ದಿನೇದಿನೇ ಹೆಚ್ಚಾಗ್ತಾ ಇದೆ. ಸಿಸಿಬಿ ವಿಚಾರಣೆ ವೇಳೆ ನಟಿಯರಾದ ಸಂಜನಾ ಮತ್ತು ನಟಿ ರಾಗಿಣಿ ದೊಡ್ಡದೊಡ್ಡವರ ಹೆಸರು, ರಾಜಕಾರಣಿಗಳ ಮಕ್ಕಳ ಹೆಸರು, ವಿವಿಐಪಿಗಳ ಹೆಸರುಗಳನ್ನ ಹೇಳಿದ್ದಾರೆ ಎನ್ನಲಾಗಿದೆ. ಇದೀಗ ಚಂದನವನದ ಮೂರು ಸ್ಟಾರ್ ನಟರು ಡ್ರಗ್ಸ್ ಸುಳಿಯಲ್ಲಿ ಸಿಲುಕಿಕೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

    ಡ್ರಗ್ಸ್ ಪ್ರಕರಣದಲ್ಲಿ ಬಂಧನವಾಗಿರುವ ಮಾದಕ ನಟಿಯರಾದ ರಾಗಿಣಿ ದ್ವಿವೇದಿ, ಸಂಜನಾ ಗಲ್ರಾಣಿ ಒಂದ್ಕಡೆ ವಿಚಾರಣೆ ಎದುರಿಸುತ್ತಿದ್ದಾರೆ. ಇªಬ್ಬರ ಹೇಳಿಕೆಯಿಂದ ಸ್ಯಾಂಡಲ್‍ವುಡ್‍ನ ಮೂವರು ಬಿಗ್ ಸ್ಟಾರ್‍ಗಳಿಗೆ ಆತಂಕ ಹೆಚ್ಚಾಗಿದೆ. ಸ್ಯಾಂಡಲ್‍ವುಡ್‍ನ ಮೂವರು ಬಿಗ್ ಬಜೆಟ್ ಹೀರೋಗಳಿಗೆ ಡ್ರಗ್ಸ್ ಜಾಲ ಉರುಳಾಗುವ ಸಾಧ್ಯತೆ ಇದೆ. ರಾಗಿಣಿ, ಗಲ್ರಾಣಿ ಅರೆಸ್ಟ್ ಆಗಿರೋ ಬೆನ್ನಲ್ಲೇ ಈಗ ಡ್ರಗ್ಸ್ ಜಾಲದ ಚೆಂಡು ಈ ಮೂವರು ಸ್ಟಾರ್ ಹೀರೋಗಳ ಅಂಗಳದಲ್ಲಿದೆ ಅಂತ ತಿಳಿದು ಬಂದಿದೆ.

    ಯಾರು ಮೂವರು ನಟರು?: ಕನ್ನಡದಲ್ಲಿ ಸೂಪರ್ ಹಿಟ್ ಸಿನಿಮಾಗಳನ್ನ ನೀಡಿರುವ ಮೂವರು ನಟರು ಪದೇ ಪದೇ ಶ್ರೀಲಂಕಾದ ಕ್ಯಾಸಿನೋಗೆ ಭೇಟಿ ನೀಡಿದ್ದಾರೆ. ಈ ನಟರ ಓಡಾಟದ ಮಾಹಿತಿ ಜಾರಿ ನಿರ್ದೇಶನಾಲಯಕ್ಕೆ ಲಭ್ಯವಾಗಿದೆ ಎನ್ನಲಾಗಿದೆ. ಇದನ್ನೂ ಓದಿ: ‘ಗಂಡ-ಹೆಂಡತಿ’ ನಟಿ ಮದುವೆ ಸೀಕ್ರೆಟ್- ಮ್ಯಾರೇಜ್ ಆಗಿಲ್ಲ ಅಂತ ಸುಳ್ಳು ಹೇಳಿದ್ರಾ ಸಂಜನಾ?

    ಇದರ ನಡುವೆ, ಹಣಕಾಸು ಅವ್ಯವಹಾರ, ಹವಾಲ ದಂಧೆ ನಡೆದಿರುವ ಬಗ್ಗೆ ಆರೋಪಗಳು ಕೇಳಿ ಬಂದಿದೆ. ಈ ಕಾರಣದಿಂದಾಗಿ, ಎನ್‍ಸಿಬಿ, ಸಿಸಿಬಿ ಜೊತೆಗೆ ಈಗ ಜಾರಿ ನಿರ್ದೇಶನಾಲಯವೂ ಎಂಟ್ರಿಯಾಗಲು ಸಿದ್ಧತೆ ನಡೆಸಿದೆ. ಸ್ಯಾಂಡಲ್‍ವುಡ್ ನಲ್ಲಿ ಹವಾಲಾ ಹಣ ಸದ್ದು ಮಾಡುತ್ತಿದೆ. ಅಕ್ರಮವಾಗಿ ಕೋಟ್ಯಂತರ ರೂಪಾಯಿ ಹಣ ವರ್ಗಾವಣೆ ಆಗಿರುವ ಆರೋಪಗಳು ಕೇಳಿ ಬಂದಿವೆ. ಈ ಹಿನ್ನೆಲೆ ಜಾರಿ ನಿರ್ದೇಶನಾಲಯ ಪ್ರಕರಣ ಕೈಗೆತ್ತಿಕೊಳ್ಳುವ ಸಾಧ್ಯತೆಗಳಿವೆ. ಇದನ್ನೂ ಓದಿ: ರಾಗಿಣಿ, ಸಂಜಾನಾಗೆ ಶಾಕ್- ಸಿಸಿಬಿ ಕಚೇರಿಗೆ ಇಡಿ ಅಧಿಕಾರಿಗಳ ಎಂಟ್ರಿ

  • ಮಹೇಶ್ ಬಾಬು ಸಿನಿಮಾದಲ್ಲಿ ಕನ್ನಡಿಗರಿಗೆ ಪ್ರಾಶಸ್ತ್ಯ

    ಮಹೇಶ್ ಬಾಬು ಸಿನಿಮಾದಲ್ಲಿ ಕನ್ನಡಿಗರಿಗೆ ಪ್ರಾಶಸ್ತ್ಯ

    ಹೈದರಾಬಾದ್: ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳನ್ನು ನೀಡುತ್ತಿದ್ದು, ಟಾಲಿವುಟ್‍ನಲ್ಲಿ ಸಖತ್ ಸೆನ್ಸೇಶನ್ ಕ್ರಿಯೇಟ್ ಮಾಡುತ್ತಿದ್ದಾರೆ. ಅದೇ ರೀತಿ ಇದೀಗ ಕನ್ನಡಿಗರಿಗೆ ಅಪ್ಯಾಯಮಾನವಾಗುವಂತಹ ನಿರ್ಧಾರ ಕೈಗೊಂಡಿದ್ದಾರೆ. ಇದರಿಂದಾಗಿ ಕನ್ನಡ ಕಲಾವಿದರಿಗೆ ತುಂಬಾ ಸಹಾಯವಾಗಲಿದೆ. ಅಲ್ಲದೆ ಕನ್ನಡದ ಮಹೇಶ್ ಬಾಬು ಫ್ಯಾನ್ಸ್ ಸಹ ಫುಲ್ ಖುಷ್ ಆಗಿದ್ದಾರೆ.

    ಈಗಾಗಲೇ ವಿವಿಧ ಭಾಷೆಗಳಲ್ಲಿ ಕನ್ನಡದ ಕಲಾವಿದರು ನಟಿಸುತ್ತಿದ್ದು, ತೆಲುಗಿನಲ್ಲಿ ಸಹ ಹೆಚ್ಚು ನಟಿಸುತ್ತಿದ್ದಾರೆ. ಸಿನಿಮಾ, ಧಾರಾವಾಹಿಗಳಲ್ಲಿ ಕನ್ನಡದ ಕಲಾವಿದರು ಹೆಚ್ಚು ಕಾಣಿಸಿಕೊಳ್ಳುತ್ತಿದ್ದಾರೆ. ಇದೀಗ ಮಹೇಶ್ ಬಾಬು ನಿರ್ಧಾರದಿಂದಾಗಿ ತೆಲುಗು ಸಿನಿಮಾ ರಂಗದಲ್ಲಿ ಕನ್ನಡಿಗರಿಗೆ ಇನ್ನೂ ಹೆಚ್ಚಿನ ಆದ್ಯತೆ ಸಿಗಲಿದೆ. ಟಾಲಿವುಡ್ ಪ್ರಿನ್ಸ್ ತಮ್ಮ ಸಿನಿಮಾಗಳಲ್ಲಿ ಕನ್ನಡ ಕಲಾವಿದರಿಗೆ ಆದ್ಯತೆ ನೀಡಲು ಮುಂದಾಗಿದ್ದಾರೆ. ಈ ಕುರಿತು ನಿರ್ಧಾರವನ್ನು ಮಹೇಶ್ ಬಾಬು ಮಾಡಿದ್ದು, ಇನ್ನು ತಮ್ಮ ಸಿನಿಮಾಗಳಲ್ಲಿ ಕನ್ನಡಿಗಡಿಗೆ ಪ್ರಾಶಸ್ತ್ಯ ನೀಡುವುದಾಗಿ ತಿಳಿಸಿದ್ದಾರೆ.

    ಮಹೇಶ್ ಬಾಬು ಮಲ್ಟಿಫ್ಲೆಕ್ಸ್ ಜೊತೆಗೆ ಸಿನಿಮಾ ನಿರ್ಮಾಣಕ್ಕೂ ಕೈ ಹಾಕಿದ್ದು, ಸಿನಿ ರಂಗದಲ್ಲಿ ತಮ್ಮ ವ್ಯಾಪ್ತಿಯನ್ನು ಹೆಚ್ಚಿಸಿಕೊಳ್ಳುತ್ತಿದ್ದಾರೆ. ಇದೇ ಸಂದರ್ಭದಲ್ಲಿ ತಮ್ಮ ಸಿನಿಮಾಗಳಲ್ಲಿ ಕನ್ನಡ ಕಲಾವಿದರಿಗೆ ಅವಕಾಶ ನೀಡುವುದಾಗಿ ತಿಳಿಸಿದ್ದಾರೆ. ಅವರ ಬಹು ನಿರೀಕ್ಷಿತ ಚಿತ್ರ ‘ಸರ್ಕಾರು ವಾರಿ ಪಾಟ’ ಸಿನಿಮಾದಲ್ಲಿ ಮಹೇಶ್ ಬಾಬು ಅವರಿಗೆ ಖಳನಾಯಕನಾಗಿ ಸುದೀಪ್ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿತ್ತು. ಆದರೆ ಇದೀಗ ಪ್ರಿನ್ಸ್ ಮಹೇಶ್ ಬಾಬು ಎದುರು ಉಪೇಂದ್ರ ತೊಡೆ ತಟ್ಟಲಿದ್ದಾರೆ ಎನ್ನಲಾಗಿದೆ.

    ತೆಲುಗು ಸಿನಿಮಾಗಳಿಗೆ ಕರ್ನಾಟಕದಲ್ಲಿಯೂ ಬೇಡಿಕೆ ಹೆಚ್ಚುತ್ತಿದೆ. ಟಾಲಿವುಡ್ ಸಿನಿಮಾಗಳು ರಾಜ್ಯದಲ್ಲಿ ಕೋಟಿ ಕೋಟಿ ಗಳಿಸುತ್ತಿವೆ. ಮಾತ್ರವಲ್ಲದೆ ಬೇರೆ ಭಾಷೆಗಳ ಸಿನಿಮಾಗಳು ಸಹ ಕನ್ನಡಕ್ಕೆ ಡಬ್ ಆಗುತ್ತಿವೆ. ಇಂತಹ ಸಂದರ್ಭದಲ್ಲಿ ಕನ್ನಡ ನಟರನ್ನು ಹಾಕಿಕೊಂಡರೆ ಇನ್ನೂ ಹೆಚ್ಚು ಕನ್ನಡ ಪ್ರೇಕ್ಷಕರನ್ನು ಸೆಳೆಯಬಹುದು ಎಂಬುದು ಮಹೇಶ್ ಬಾಬು ಅವರ ಚಿಂತನೆ. ಹೀಗಾಗಿ ತಮ್ಮ ಚಿತ್ರಗಳಲ್ಲಿ ಕನ್ನಡ ನಟನಿಗೆ ವಿಶೇಷ ಸ್ಥಾನ ನೀಡುವುದಾಗಿ ಹೇಳಿದ್ದಾರಂತೆ.

    ಸರ್ಕಾರು ವಾರಿ ಪಾಟ ಸಿನಿಮಾದಲ್ಲಿ ಉಪೇಂದ್ರ ನಟಿಸುತ್ತಿರುವ ಕುರಿತು ಮಾಹಿತಿಯಷ್ಟೇ ಲಭ್ಯವಾಗಿದ್ದು, ಅಧಿಕೃತ ಹೇಳಿಕೆ ಹೊರ ಬಿದ್ದಿಲ್ಲ. ಆದರೆ ಬಹುತೇಕ ಉಪೇಂದ್ರ ಅವರೇ ಖಳನಾಯಕನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಚಿತ್ರವನ್ನು ಪರಶುರಾಮ್ ನಿರ್ದೇಶಿಸುತ್ತಿದ್ದು, ಚಿತ್ರ ಬ್ಯಾಂಕ್ ಸ್ಕ್ಯಾಮ್ ಕುರಿತ ಕಥಾ ಹಂದರ ಹೊಂದಿದೆ ಎನ್ನಲಾಗಿದೆ. ಹೀಗಾಗಿ ಸಿನಿಮಾ ಭಾರೀ ನಿರೀಕ್ಷೆ ಹುಟ್ಟಿಸಿದೆ.

  • ಕೊರೊನಾ ವಿರುದ್ಧ ಹೋರಾಟಕ್ಕೆ ಟಾಲಿವುಡ್ ನಾಯಕರ ಆರ್ಥಿಕ ಸಹಾಯ – ಯಾರು ಎಷ್ಟು ಕೊಟ್ಟಿದ್ದಾರೆ?

    ಕೊರೊನಾ ವಿರುದ್ಧ ಹೋರಾಟಕ್ಕೆ ಟಾಲಿವುಡ್ ನಾಯಕರ ಆರ್ಥಿಕ ಸಹಾಯ – ಯಾರು ಎಷ್ಟು ಕೊಟ್ಟಿದ್ದಾರೆ?

    ಹೈದರಾಬಾದ್: ಕೊರೊನಾ ಸೋಂಕು ಹರಡುವ ಹಿನ್ನೆಲೆಯಲ್ಲಿ ಭಾರತ ಬಂದ್ ಆಗಿದೆ. ಇಡೀ ದೇಶದ ಜನರು ಕೋವಿಂಡ್ ವಿರುದ್ಧ ಹೋರಾಡಲು ಒಗ್ಗಟ್ಟಾಗಿದ್ದಾರೆ. ಈ ನಡುವೆ ಪ್ರಧಾನಿ ನರೇಂದ್ರ ಮೋದಿಯಿಂದ ಹಿಡಿದು ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳು ಆರ್ಥಿಕ ಸಹಾಯ ಮಾಡುವಂತೆ ದೇಶದ ಜನರನ್ನು ಕೋರಿದ್ದಾರೆ.

    ಪಿಎಂ ಮತ್ತು ಸಿಎಂಗಳ ಮನವಿ ಸ್ಪಂದಿಸಿರುವ ಟಾಲಿವುಡ್ ನಾಯಕರು ಸರ್ಕಾರದ ನೆರವಿಗೆ ಬಂದಿದ್ದಾರೆ. ನಟ ಪವನ್ ಕಲ್ಯಾಣ ಎರಡು ಕೋಟಿ ಆರ್ಥಿಕ ನೆರವು ನೀಡಿದ್ದಾರೆ. ಈ ಪೈಕಿ ಪ್ರಧಾನ ಮಂತ್ರಿ ಪರಿಹಾರ ನಿಧಿಗೆ ಒಂದು ಕೋಟಿ, ಆಂಧ್ರ ಪ್ರದೇಶ ಮತ್ತು ತೆಲಂಗಾಣ ಮುಖ್ಯಮಂತ್ರಿ ಪರಿಹಾರ ನಿಧಿಗೆ ತಲಾ 50 ಲಕ್ಷ ರೂ. ನೆರವು ನೀಡಿದ್ದಾರೆ.

    ಟಾಲಿವುಡ್‍ನ ಮತ್ತೋರ್ವ ನಟ ಮಹೇಶ್ ಬಾಬು ಆಂಧ್ರ ಪ್ರದೇಶ ಮತ್ತು ತೆಲಂಗಾಣ ಮುಖ್ಯಮಂತ್ರಿ ಪರಿಹಾರ ನಿಧಿಗೆ ಒಂದು ಕೋಟಿ ನೀಡಿ ಸಹಾಯ ಹಸ್ತ ಚಾಚಿದ್ದಾರೆ.

    ಪವನ್ ಕಲ್ಯಾಣ ಆರ್ಥಿಕ ಸಹಾಯ ಮಾಡಿದ್ದನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದರು. ಇದರಿಂದ ಪ್ರೇರಣೆಗೊಂಡ ನಟ ರಾಮ್‍ಚರಣ್ 70 ಲಕ್ಷ ರೂ. ಆರ್ಥಿಕ ನೆರವು ನೀಡಿದ್ದು, ಕೇಂದ್ರ ಸರ್ಕಾರ ಮತ್ತು ಆಂಧ್ರ ಪ್ರದೇಶ, ತೆಲಂಗಾಣ ಸರ್ಕಾರ ಪರಿಹಾರ ನಿಧಿಗೆ ಹಂಚಿಕೆ ಮಾಡಿದ್ದಾರೆ.

    ಕೊರೊನಾ ವಿರುದ್ಧದ ಹೋರಾಟಕ್ಕೆ ಎಲ್ಲರೂ ಒಂದಾಗಬೇಕಿದ್ದು, ಸರ್ಕಾರದ ನೆರವಿಗೆ ನಿಲ್ಲಬೇಕಿದೆ. ಎಲ್ಲರೂ ಸಾಧ್ಯವಾದಷ್ಟು ನೆರವು ನೀಡಿ ಎಂದು ಈ ನಟರು ಮನವಿ ಮಾಡಿಕೊಂಡಿದ್ದಾರೆ.

  • ಒಂದೇ ದಿನ ಮದುವೆಯಾದ ಇಬ್ಬರು ನಟರು

    ಒಂದೇ ದಿನ ಮದುವೆಯಾದ ಇಬ್ಬರು ನಟರು

    ಬೆಂಗಳೂರು: ಕಿರುತೆರೆಯ ಇಬ್ಬರು ನಟರು ಒಂದೇ ದಿನ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

    ಕಿರುತೆರೆ ನಟ ವಿಠ್ಠಲ್ ಕಾಮತ್ ಅಲಿಯಾಸ್ ಸೂರ್ಯ ಮತ್ತು ತಾರಕ್ ಪೊನ್ನಪ್ಪ ಮದುವೆಯಾಗಿದ್ದಾರೆ. ನಟ ತಾರಕ್ ಪೊನ್ನಪ್ಪ ಕೊಡಗು ಮೂಲದ ರಾಧಿಕಾರನ್ನು ಮದುವೆಯಾಗಿದ್ದಾರೆ. ಹೀಗಾಗಿ ಈ ಜೋಡಿಯ ಮದುವೆ ಕೊಡಗಿನ ಸಂಪ್ರದಾಯದಂತೆ ನೆರವೇರಿದೆ.

    ತಾರಕ್ ಪೊನ್ನಪ್ಪ ಯಶ್ ಅಭಿನಯದ ‘ಕೆಜಿಎಫ್ ಚಾಪ್ಟರ್ 1’ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಜೊತೆಗೆ ‘ಅಧ್ಯಕ್ಷ ಇನ್ ಅಮೆರಿಕ’ ಚಿತ್ರದಲ್ಲೂ ನಟಿಸಿದ್ದಾರೆ. ಅಷ್ಟೇ ಅಲ್ಲದೇ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘ರಾಜಾ ರಾಣಿ’ ಸೀರಿಯಲ್ ಮೂಲಕ ತಾರಕ್ ಖ್ಯಾತಿ ಪಡೆದುಕೊಂಡಿದ್ದಾರೆ.

    ಮತ್ತೊಬ್ಬ ಕಿರುತೆರೆಯ ನಟ ಸೂರ್ಯ ಸಹ ಹಸೆಮಣೆ ಏರಿದ್ದು, ತಮ್ಮ ಪ್ರಿಯತಮೆ ಶುಭಶ್ರೀ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಶುಭಶ್ರೀ ಖಾಸಗಿ ಕಂಪನಿಯಲ್ಲಿ ಎಚ್‍ಆರ್ ಆಗಿ ಕೆಲಸ ಮಾಡುತ್ತಿದ್ದಾರೆ. ಸೂರ್ಯ ಮತ್ತು ಶುಭಶ್ರೀ ಇಬ್ಬರೂ ಕೆಲವು ವರ್ಷಗಳಿಂದ ಪ್ರೀತಿಸುತ್ತಿದ್ದರು. ಇವರ ಪ್ರೀತಿಯ ವಿಚಾರವನ್ನು ಮನೆಯಲ್ಲಿ ಹೇಳಿದ್ದಾರೆ. ಎರಡು ಮನೆಯವರು ಇವರ ಮದುವೆಗೆ ಒಪ್ಪಿಗೆ ಸೂಚಿಸಿದ್ದು, ಭಾನುವಾರ ಕೊಪ್ಪದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

    ಸೂರ್ಯ ಅನೇಕ ಧಾರಾವಾಹಿ ಮತ್ತು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ‘ದೇವಿ’, ‘ಅಕ್ಕ’, ‘ಇಷ್ಟದೇವತೆ’ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಜೊತೆಗೆ ‘ಪ್ರೀತಿಯಲ್ಲಿ ಸಹಜ’ ಸಿನಿಮಾದಲ್ಲೂ ಅಭಿನಯಿಸಿದ್ದಾರೆ.

  • 2019ರಲ್ಲಿ ಹೊಸ ಲುಕ್‍ನಲ್ಲಿ ಮಿಂಚಿದ ಹೀರೋಗಳು

    2019ರಲ್ಲಿ ಹೊಸ ಲುಕ್‍ನಲ್ಲಿ ಮಿಂಚಿದ ಹೀರೋಗಳು

    ಬೆಂಗಳೂರು: ಇನ್ನೇನು ಕೆಲ ದಿನಗಳು ಮುಗಿದರೆ 2020 ಆರಂಭವಾಗುತ್ತೆ. ಹೊಸ ವರ್ಷದ ಇದೇ ಖುಷಿಯಲ್ಲಿ 2019ರಲ್ಲಿ ಸ್ಯಾಂಡಲ್‍ವುಡ್ ಅಂಗಳದಲ್ಲಿ ಹೊಸ ತಾರೆಯರು, ಸಿನಿಮಾಗಳು, ಹೀರೋಗಳ ಹೊಸ ಲುಕ್ ಸಖತ್ ಸದ್ದು ಮಾಡಿರೋದನ್ನ ಮರಿಯಲು ಆಗಲ್ಲ. ಹೀಗೆ 2019ರಲ್ಲಿ ಸ್ಟಾರ್ ಹೀರೋಗಳು ಹೊಸ ಲುಕ್ ಮೂಲಕ ಅಭಿಮಾನಿಗಳ ಮನ ಗೆದ್ದಿದ್ದಾರೆ.

    ರಾಕಿಂಗ್ ಸ್ಟಾರ್ ಯಶ್, ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್, ಗೊಲ್ಡನ್ ಸ್ಟಾರ್ ಗಣೇಶ್, ಜೊತೆ ಜೊತೆಯಲಿ ಧಾರಾವಾಹಿ ನಟ ಅನಿರುದ್ಧ್, ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್, ರಿಷಬ್ ಶೆಟ್ಟಿ ಹೀಗೆ ಹಲವು ನಟರ ಹೊಸ ಲುಕ್‍ಗೆ ಅಭಿಮಾನಿಗಳು ಫಿದಾ ಆಗಿದ್ದರು.

    ಕೆಜಿಎಫ್-1 2018ರ ಡಿಸೆಂಬರ್ ನಲ್ಲಿ ಬಿಡುಗಡೆಯಾಗಿದ್ದರೂ ಅದರಲ್ಲಿ ಯಶ್ ಅವರ ರಾಕಿಭಾಯ್ ಲುಕ್ 2019ರಲ್ಲಿ ಸಖತ್ ಕ್ರೇಜ್ ಹುಟ್ಟಿಸಿತ್ತು. ರಾಕಿಭಾಯ್ ರೀತಿಯೇ ಅಭಿಮಾನಿಗಳು ಹೇರ್‌ಸ್ಟೈಲ್‌, ಗಡ್ಡ ಬಿಡುವುದೇ ಒಂದು ರೀತಿ ಟ್ರೆಂಡ್ ಆಗಿಬಿಟ್ಟಿತ್ತು. ಈ ಚಿತ್ರದಲ್ಲಿ ಶ್ರೀನಿಧಿ ಶೆಟ್ಟಿ ರಾಕಿಭಾಯ್‍ಗೆ ರೀನಾ ಆಗಿ ಸಾಥ್ ಕೊಟ್ಟಿದ್ದರು. ಕೋಲಾರದ ಚಿನ್ನದ ಗಣಿಯಲ್ಲಿ ಪ್ರಶಾಂತ್ ನೀಲ್ ಅವರ ನಿರ್ದೇಶನದಲ್ಲಿ ತಯಾರಾದ ಕೆಜಿಎಫ್-1 ಭಾರತ ಚಿತ್ರರಂಗವೇ ಕನ್ನಡ ಸಿನಿಮಾದತ್ತ ತಿರುಗಿ ನೋಡುವಂತೆ ಮಾಡಿತ್ತು.

    ಇನ್ನೂ ನಟಸಾರ್ವಭೌಮನಾಗಿ ಮಿಂಚಿದ ಪುನೀತ್ ರಾಜ್‍ಕುಮಾರ್ ಸೈಡ್ ಕಟ್ ಹೇರ್‌ಸ್ಟೈಲ್‌, ಸಿನಿಮಾದಲ್ಲಿ ಕನ್ನಡಕ ಧರಿಸಿ ಮಿಂಚಿದ ಹೊಸ ಲುಕ್ ಅಭಿಮಾನಿಗಳ ಮನಗೆದ್ದಿತ್ತು. ಅವರ ರೀತಿಯೇ ಅಭಿಮಾನಿಗಳು ಲುಕ್ ಚೇಂಜ್ ಮಾಡಿಕೊಂಡು ಖುಷಿಪಟ್ಟಿದ್ದರು. ಈ ಚಿತ್ರದಲ್ಲಿ ಡಿಂಪಲ್ ಕ್ವೀನ್ ರಚಿತಾ ರಾಮ್ ಹಾಗೂ ಅನುಪಮ ಪರಮೇಶ್ವರನ್ ಪವರ್ ಸ್ಟಾರ್‌ಗೆ ನಾಯಕ ನಟಿಯರಾಗಿ ಸಾಥ್ ಕೊಟ್ಟಿದ್ದರು. ಗೂಗ್ಲಿ ಖ್ಯಾತಿಯ ನಿರ್ದೇಶಕ ಪವನ್ ಒಡೆಯರ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ.

    ಇತ್ತ 99 ಸಿನಿಮಾದಲ್ಲಿ ರಾಮಚಂದ್ರ ಪಾತ್ರದಲ್ಲಿ ಅಭಿಮಾನಿಗಳ ಮನಕದ್ದ ಗಣೇಶ್ ಅವರ ಲುಕ್ ಕೂಡ ಎಲ್ಲರ ಗಮನ ಸೆಳೆದಿತ್ತು. ಗಡ್ಡ ಬಿಟ್ಟುಕೊಂಡ ಗಣೇಶ್ ಅವರ ಹೊಸ ಲುಕ್ ಫ್ಯಾನ್ಸ್‌ಗೆ ಅಚ್ಚುಮೆಚ್ಚು ಆಗಿಬಿಟ್ಟುತ್ತು. ಈ ಚಿತ್ರದಲ್ಲಿ ರಾಮಚಂದ್ರನ ಜಾನು ಆಗಿ ಭಾವನ ಮಿಂಚಿದ್ದರು. ಎಷ್ಟೇ ವರ್ಷವಾದ್ರು ಸ್ಕೂಲ್ ಲವ್ ಮಾತ್ರ ಮನಸಲ್ಲಿ ಹಚ್ಚೆ ಹಾಕಿರುತ್ತೆ ಎನ್ನೋದನ್ನ ಪ್ರೀತಮ್ ಗುಬ್ಬಿ ಚೆನ್ನಾಗಿ ನಿರ್ದೇಶಿಸಿದ್ದಾರೆ. ಈ ಚಿತ್ರ ತಮಿಳಿನ 96 ಚಿತ್ರದ ರಿಮೇಕ್ ಆಗಿದ್ದರೂ ಕನ್ನಡ ಸಿನಿ ಪ್ರಿಯರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿತ್ತು.

    ವಯಸ್ಸು ನನಗೆ ಮ್ಯಾಟರ್ ಅಲ್ಲ ಎನ್ನುವಂತೆ ರುಸ್ತುಮ್‍ನಲ್ಲಿ ಖಡಕ್ ಪೊಲೀಸ್ ಆಫಿಸರ್ ಆಗಿ ಗರ್ಜಿಸಿದ ಶಿವಣ್ಣನ ಮೀಸೆ ಲುಕ್ ಎಲ್ಲರ ಗಮನ ಸೆಳೆದಿತ್ತು. ಮೀಸೆ ತಿರುವುತ್ತಾ ಪೊಲೀಸ್ ಬೇಬಿ ಆದ ಶಿವರಾಜ್‍ಕುಮಾರ್ ಲುಕ್ ಸಿಕ್ಕಪಟ್ಟೆ ಸದ್ದು ಮಾಡಿತ್ತು. ರುಸ್ತುಮ್‍ನಲ್ಲಿ ಶ್ರದ್ಧಾ ಶ್ರೀನಾಥ್ ಹ್ಯಾಟ್ರಿಕ್ ಹೀರೋಗೆ ನಟಿಯಾಗಿ ಅಭಿನಯಿಸಿದ್ದಾರೆ. ಈ ಚಿತ್ರ ರವಿ ವರ್ಮಾ ಅವರ ನಿರ್ದೇಶನದಲ್ಲಿ ಮೂಡಿಬಂದಿದೆ.

    ಇನ್ನೊಂದೆಡೆ ನಿರ್ದೇಶನಕ್ಕೂ ಸೈ, ಆ್ಯಕ್ಟಿಂಗ್‍ಗೂ ಜೈ ಎನ್ನುವಂತೆ ರಿಷಬ್ ಶೆಟ್ಟಿ ಡಿಟೆಕ್ವಿವ್ ದಿವಾಕರ್ ಆಗಿ ಬೆಲ್‍ಬಾಟಂನಲ್ಲಿ ಸಖತ್ ಸದ್ದು ಮಾಡಿದ್ದರು. ರಿಷಬ್ ಶೆಟ್ಟಿ ರೆಟ್ರೊ ಲುಕ್‍ನಲ್ಲಿ ಮಿಂಚಿದ್ದರು. ಡಿಟೆಕ್ವಿವ್ ದಿವಾಕರನಿಗೆ ಕುಸುಮಾ ಆಗಿ ಹರಿಪ್ರಿಯಾ ಸಾಥ್ ಕೊಟ್ಟಿದ್ದರು. ಈ ಚಿತ್ರ ಜಯತೀರ್ಥ ನಿರ್ದೇಶನದಲ್ಲಿ ಮೂಡಿಬಂದಿದ್ದು, ರಿಷಬ್ ರೆಟ್ರೋ ಲುಕ್‍ಗೆ ಅಭಿಮಾನಿಗಳು ಫಿದಾ ಆಗಿದ್ದರು.

    ಕೇವಲ ಸಿನಿಮಾ ನಟರು ಮಾತ್ರವಲ್ಲಿ ಕಿರುತೆರೆ ನಟರು ಕೂಡ 2019ರಲ್ಲಿ ಹೊಸ ಲುಕ್‍ನಲ್ಲಿ ಮಿಂಚಿ ಸಖತ್ ಫೇಮಸ್ ಆಗಿದ್ದಾರೆ. ಖಾಸಗಿ ಚಾನೆಲ್‍ನಲ್ಲಿ ಪ್ರಸಾರವಾಗುವ ಜೊತೆ ಜೊತೆಯಲಿ ಧಾರಾವಾಹಿಯ ಆರ್ಯವರ್ಧನ್(ಅನಿರುದ್ಧ್) ಅವರ ಪೆಪ್ಪರ್ ಸಾಲ್ಟ್ ಹೇರ್ ಸ್ಟೈಲ್, ಬಿಯರ್ಡ್ ಲುಕ್ ಕೂಡ ಅಭಿಮಾನಿಗಳಲ್ಲಿ ಕ್ರೇಜ್ ಹುಟ್ಟಿಸಿದೆ. ಸಾಕಷ್ಟು ಮಂದಿ ಅನಿರುದ್ಧ್ ಲುಕ್‍ಗೆ ಫಿದಾ ಆಗಿದ್ದಾರೆ. ಅದರಲ್ಲೂ ಧಾರವಾಹಿ ವೀಕ್ಷಿಸುವ ಯುವತಿಯರಿಗೆ ಅನಿರುದ್ ಹಾಟ್ ಫೆವರೆಟ್ ಆಗಿಬಿಟ್ಟಿದ್ದಾರೆ. ಈ ಧಾರವಾಹಿಯಲ್ಲಿ ಆರ್ಯವರ್ಧನ್‍ಗೆ ಅನು ಆಗಿ ಮೇಘಾ ಶೆಟ್ಟಿ ಸಾಥ್ ಕೊಡುತ್ತಿದ್ದಾರೆ. ಈ ಕ್ಯೂಟ್ ಜೋಡಿ ನಾವೆಂದು ಜೊತೆ ಜೊತೆಯಲಿ ಅಂತ ಮೋಡಿ ಮಾಡುತ್ತಿರುವುದಂತೂ ಸುಳ್ಳಲ್ಲ.

    ಹೀಗೆ 2019ರಲ್ಲಿ ಸಾಕಷ್ಟು ಸಿನಿಮಾ ನಟರು, ಕಿರುತೆರೆ ನಟರು ಹೊಸ ಲುಕ್ ಮೂಲಕ ಮಿಂಚಿದ್ದಾರೆ. ಇದಿಷ್ಟು ಈ ವರ್ಷದಲ್ಲಿ ಹೊಸ ಲುಕ್ ಮೂಲಕ ಸಖತ್ ಸದ್ದು ಮಾಡಿದ್ದ ನಟರು. ಇನ್ನು 2020ರಲ್ಲಿ ಇನ್ನು ಯಾವ್ಯಾವ ನಟರು ಹೊಸ ಲುಕ್ ಮೂಲಕ ಅಭಿಮಾನಿಗಳ ಮನ ಗೆಲ್ಲಲಿದ್ದಾರೆ ಎನ್ನೋದನ್ನು ಕಾದು ನೋಡಬೇಕು.

  • ಫೋನ್‌ಗಳನ್ನು ಹೊರಗಿಟ್ಟರೂ, ತಾರೆಯರು ಮೋದಿ ಜೊತೆ ಹೇಗೆ ಸೆಲ್ಫಿ ಕ್ಲಿಕ್ಕಿಸಿದ್ರು: ಎಸ್‌ಪಿಬಿ ಪ್ರಶ್ನೆ

    ಫೋನ್‌ಗಳನ್ನು ಹೊರಗಿಟ್ಟರೂ, ತಾರೆಯರು ಮೋದಿ ಜೊತೆ ಹೇಗೆ ಸೆಲ್ಫಿ ಕ್ಲಿಕ್ಕಿಸಿದ್ರು: ಎಸ್‌ಪಿಬಿ ಪ್ರಶ್ನೆ

    ನವದೆಹಲಿ: ತಮ್ಮ ಭಾವನೆಗಳನ್ನು ಬಹಿರಂಗಪಡಿಸುವ ಮೂಲಕ ಆಗಾಗ ಸುದ್ದಿಯಾಗುವ ಖ್ಯಾತ ಗಾಯಕ ಎಸ್.ಪಿ.ಬಾಲಸುಬ್ರಹ್ಮಣ್ಯಂ, ಇದೀಗ ಫೇಸ್‌ಬುಕ್ ಪೋಸ್ಟ್ ಮೂಲಕ ಅಚ್ಚರಿ ಮೂಡಿಸಿದ್ದಾರೆ.

    ಬಾಲಿವುಟ್ ನಟ, ನಟಿಯರು ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು. ಈ ಕುರಿತು ಗಾಯಕ ಎಸ್.ಪಿ.ಬಾಲಸುಬ್ರಹ್ಮಣ್ಯಂ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ನಟ, ನಟಿಯರೊಂದಿಗೆ ಎಸ್.ಪಿ.ಬಾಲಸುಬ್ರಹ್ಮಣ್ಯಂ ಸಹ ಪ್ರಧಾನಿ ಮೋದಿಯವರ ಮನೆಗೆ ತೆರಳಿದ್ದರು. ಆಗ ತಮ್ಮನ್ನು ಇತರ ನಟರಂತೆ ಆಧರಿಸಿಲ್ಲ, ತಾರತಮ್ಯ ಎಸಗಲಾಗಿದೆ ಎಂದು ಪರೋಕ್ಷವಾಗಿ ಎಸ್‌ಪಿಬಿ ಅಸಮಾಧಾನ ಹೊರ ಹಾಕಿದ್ದಾರೆ.

    https://www.facebook.com/SPB/posts/2672550912802732

    ಎಲ್ಲರ ಫೋನ್‌ಗಳನ್ನು ಭದ್ರತಾ ಸಿಬ್ಬಂದಿ ಹೊರಗೆ ತೆಗೆದುಕೊಂಡು, ಟೋಕನ್ ನೀಡಿ ಕಳುಹಿಸಿದ್ದಾರೆ. ಆದರೆ ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಬಾಲಿವುಡ್ ತಾರೆಯರಿಗೆ ಮಾತ್ರ ಹೇಗೆ ಮತ್ತು ಏಕೆ ಮೊಬೈಲ್ ಒಳಗೆ ಕೊಂಡೊಯ್ದು, ಸೆಲ್ಫಿ ತೆಗೆಯಲು ಅನುಮತಿ ನೀಡಲಾಯಿತು ಎಂದು ಪ್ರಶ್ನಿಸಿದ್ದಾರೆ. ಎಸ್‌ಪಿಬಿಯವರ ಈ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ಇದೀಗ ವೈರಲ್ ಆಗಿದೆ.

    ರಾಮೋಜಿ ರಾವ್ ಅವರಿಗೆ ನಾನು ಆಭಾರಿಯಾಗಿದ್ದೇನೆ. ಏಕೆಂದರೆ ಇವರಿಂದಲೇ ನಾನು ಅಕ್ಟೋಬರ್ 29ರಂದು ನಮ್ಮ ಗೌರವಾನ್ವಿತ ಪ್ರಧಾನ ಮಂತ್ರಿಯವರ ಮನೆಯಲ್ಲಿ ಆಯೋಜಿಸಿದ್ದ ಸ್ವಾಗತ ಕಾರ್ಯಕ್ರಮಕ್ಕೆ ನಾನು ಹಾಜರಾಗಲು ಸಾಧ್ಯವಾಯಿತು. ಮನೆಯ ಆವರಣದೊಳಗೆ ಪ್ರವೇಶಿಸುವುದಕ್ಕೂ ಮುನ್ನ ನಮ್ಮ ಸೆಲ್‌ಫೋನ್‌ಗಳನ್ನು ಭದ್ರತಾ ಸಿಬ್ಬಂದಿ ಬಳಿ ನೀಡಲಾಯಿತು. ಇದಕ್ಕೆ ಪ್ರತಿಯಾಗಿ ಟೋಕನ್‌ಗಳನ್ನು ನೀಡಲಾಯಿತು. ಆದರೆ ಆ ದಿನ ಪ್ರಧಾನ ಮಂತ್ರಿಯೊಂದಿಗೆ ನಟ, ನಟಿಯರು ಸೆಲ್ಫಿ ತೆಗೆದುಕೊಳ್ಳುತ್ತಿದ್ದುದನ್ನು ನೋಡಿ ದಿಗ್ಬ್ರಾಂತನಾದೆ. ಥಿಂಗ್ಸ್ ದ್ಯಾಟ್ ಮೇಕ್ ಯು ಗೋ ಹೂಂ????? ಎಂಬ ಸಾಲುಗಳನ್ನು ಬರೆದು ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ.

    ಮಹಾತ್ಮಾ ಗಾಂಧೀಜಿಯ 150ನೇ ಜನ್ಮ ದಿನಾಚರಣೆ ಅಂಗವಾಗಿ ಅವರ ತತ್ವ ಸಿದ್ಧಾಂತಗಳನ್ನು ಜನರಿಗೆ ತಲುಪಿಸಲು ಹಾಗೂ ಅಭಿಯಾನವನ್ನು ಉತ್ತೇಜಿಸಲು ‘ಚೇಂಜ್ ವಿಥಿನ್’ ಕಾರ್ಯಕ್ರಮವನ್ನು ಪ್ರಧಾನಿ ಮೋದಿ ಏರ್ಪಡಿಸಿದ್ದರು. ಇದರಲ್ಲಿ ಶಾರುಖ್ ಖಾನ್, ಅಮಿರ್ ಖಾನ್ ಹಾಗೂ ಚಿತ್ರೋದ್ಯಮದ ಹಲವು ಗಣ್ಯರು ಸೇರಿದಂತೆ ತಾರೆಯರು ಭಾಗವಹಿಸಿದ್ದರು.

    ದಕ್ಷಿಣ ರಾಜ್ಯಗಳ ಏಕೈಕ ಪ್ರತಿನಿಧಿಯಾಗಿ ತೆಲುಗು ನಿರ್ಮಾಪಕ ದಿಲ್ ರಾಜು ಭಾಗವಹಿಸಿದ್ದರು. ಕಾರ್ಯಕ್ರಮದ ನಂತರ ರಾಮ್ ಚರಣ ಅವರ ಪತ್ನಿ ಹಾಗೂ ಉದ್ಯಮಿ ಉಪಾಸನಾ ಕಾಮಿನೇನಿ ಈ ಕುರಿತು ಧ್ವನಿ ಎತ್ತಿ ದಕ್ಷಿಣ ರಾಜ್ಯಗಳಿಗೆ ಮಾನ್ಯತೆ ನೀಡಿಲ್ಲ ಎಂದು ಪ್ರಶ್ನಿಸಿದ್ದರು. ಈ ಕುರಿತು ಚಿತ್ತ ಹರಿಸುವಂತೆ ಪ್ರಧಾನಿ ಮೋದಿ ಬಳಿ ಮನವಿ ಮಾಡಿದ್ದರು.

  • ಸ್ಯಾಂಡಲ್‍ವುಡ್‍ನಲ್ಲಿ ಈಗ ಖಾಕಿ ಖದರ್

    ಸ್ಯಾಂಡಲ್‍ವುಡ್‍ನಲ್ಲಿ ಈಗ ಖಾಕಿ ಖದರ್

    ಬೆಂಗಳೂರು: ಸಿನಿಮಾ ಎಂದರೆ ಅನೇಕ ಪಾತ್ರಗಳು ಬರುತ್ತವೆ. ಒಂದೊಂದು ಪಾತ್ರವೂ ತನ್ನದೇ ಆದ ಪಾಮುಖ್ಯತೆಯನ್ನು ಹೊಂದಿರುತ್ತವೆ. ಅದರಲ್ಲೂ ಪೊಲೀಸ್ ಅಧಿಕಾರಿಗಳ ಪಾತ್ರ ಎಂದರೆ ಖಡಕಾಗಿ ಇರುತ್ತವೆ. ಇತ್ತೀಚೆಗೆ ಬರುತ್ತಿರುವ ಸಿನಿಮಾಗಳಲ್ಲಂತೂ ನಿರ್ದೇಶಕರು ಖಾಕಿಗಳನ್ನು ಹೀರೋಗಳಂತೆ ತೋರಿಸುತ್ತಿದ್ದು, ಪೊಲೀಸ್ ಪಾತ್ರಕ್ಕೆ ಹೈಪರ್ ಕ್ರಿಯೇಟ್ ಮಾಡಿದ್ದಾರೆ.

    ಸ್ಯಾಂಡಲ್‍ವುಡ್‍ನಲ್ಲಿ ದಶಕಗಳಿಂದಲೂ ಪೊಲೀಸ್ ಪಾತ್ರಗಳು ತೆರೆಯ ಮೇಲೆ ಭರ್ಜರಿಯಾಗಿ ಮಿಂಚಿದ್ದಾವೆ. ಹಿಂದೆ ನಟ ಶಂಕರ್ ನಾಗ್, ಸಾಯಿ ಕುಮಾರ್, ದೇವರಾಜ್ ಸೇರಿದಂತೆ ಅನೇಕ ನಟರು ಖಡಕ್ ಪೊಲೀಸ್ ಪಾತ್ರದಲ್ಲಿ ಅಭಿನಯಿಸುವ ಮೂಲಕ ಖಾಕಿಗಳಿಗೆ ವಿಶೇಷ ಗೌರವ ತಂದು ಕೊಟ್ಟಿದ್ದರು. ಮುಂದುವರಿದಂತೆ ಶಿವಣ್ಣ, ದರ್ಶನ್ ಮತ್ತು ಸುದೀಪ್ ಕೂಡ ಸಿನಿಮಾಗಳಲ್ಲಿ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದೀಗ ಮತ್ತೆ ಸ್ಯಾಂಡಲ್‍ವುಡ್‍ನಲ್ಲಿ ಖಾಕಿಗಳ ಅಬ್ಬರ ಶುರುವಾಗಿದೆ.

    ‘ಕೆಂಪೇಗೌಡ 2′ ಚಿತ್ರದಲ್ಲಿ ಕೋಮಲ್, `100′ ಹೆಸರಿನ ಸಿನಿಮಾದಲ್ಲಿ ನಟ ರಮೇಶ್ ಅರವಿಂದ್, `ಇನ್ಸ್ ಪೆಕ್ಟರ್ ವಿಕ್ರಮ್’ ಚಿತ್ರದ ಪ್ರಜ್ವಲ್ ದೇವರಾಜ್ ಮತ್ತು `ಸಲಗ’ ಸಿನಿಮಾದಲ್ಲಿ ನಟ ಡಾಲಿ ಧನಂಜಯ್ ಅವರು ಪೊಲೀಸ್ ಅಧಿಕಾರಿ ಲುಕ್‍ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದೇ ತಿಂಗಳು ಬಿಡುಗಡೆಗೆ ಸಿದ್ಧವಾಗಿರುವ ‘ಕೆಂಪೇಗೌಡ 2’ ಸಿನಿಮಾದಲ್ಲಿ ನಟ ಕೋಮಲ್ ಪೊಲೀಸ್ ಅಧಿಕಾರಿಯಾಗಿ ಅಭಿನಯಿಸಿದ್ದಾರೆ. ಸಿನಿಮಾದಲ್ಲಿ ಪೊಲೀಸ್ ಪಾತ್ರ ಮಾಡಲು ಕೋಮಲ್ ಅವರು ಬರೋಬ್ಬರಿ ಎರಡು ವರ್ಷ ಸಿದ್ಧತೆ ಮಾಡಿಕೊಂಡಿದ್ದಾರೆ. ಪೊಲೀಸ್ ಅಧಿಕಾರಿಯಾಗಿ ಫಿಟಾಗಿ ಕಾಣಿಸಿಕೊಳ್ಳಲು ಕೋಮಲ್ ಅವರು 20 ಕೆ.ಜಿ ತೂಕವನ್ನು ಇಳಿಸಿಕೊಂಡಿದ್ದಾರೆ.

    ನಟ ಪ್ರಜ್ವಲ್ ದೇವರಾಜ್ ಕೂಡ ನರಸಿಂಹ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ `ಇನ್ಸ್ ಪೆಕ್ಟರ್ ವಿಕ್ರಮ್’ ಸಿನಿಮಾದಲ್ಲಿ ಖಡಕ್ ಪೊಲೀಸ್ ಆಫೀಸರ್ ಆಗಿ ನಟಿಸುತ್ತಿದ್ದಾರೆ. ಪೊಲೀಸ್ ಅಧಿಕಾರಿಯ ಪಾತ್ರ ಮಾಡಲು ತಯಾರಿ ಮಾಡಿಕೊಳ್ಳಬೇಕು. ಈ ಹಿನ್ನೆಲೆಯಲ್ಲಿ ನಾನು ಕೂಡ ಪಾತ್ರಕ್ಕೆ ಒಂದಿಷ್ಟು ತಯಾರಿ ಮಾಡಿಕೊಂಡಿದ್ದೇನೆ ಎಂದು ಪ್ರಜ್ವಲ್ ದೇವರಾಜ್ ಹೇಳಿದ್ದಾರೆ.

    ದುನಿಯಾ ವಿಜಯ್ ನಿರ್ದೇಶನದ ‘ಸಲಗ’ ಸಿನಿಮಾದಲ್ಲಿ ಟಗರು ಡಾಲಿ ಖ್ಯಾತಿಯ ಧನಂಜಯ್ ಮಾಲಾಧಾರಿ ಪೊಲೀಸ್ ಆಗಿ ಕಾಣಿಸಿಕೊಂಡಿದ್ದಾರೆ. ಬಾಲ್ಯದಿಂದಲೂ ನನಗೆ ಪೊಲೀಸ್ ಅಧಿಕಾರಿ ಆಗಬೇಕು ಎಂದು ಕನಸು ಕಂಡಿದ್ದೆ, ಇದೀಗ ಸಿನಿಮಾದಲ್ಲಿ ಪೊಲೀಸ್ ಅಧಿಕಾರಿಯ ಪಾತ್ರ ಮಾಡುತ್ತಿದ್ದೇನೆ. ಅನೇಕ ಪ್ರಾಮಾಣಿಕ ಪೊಲೀಸ್ ಅಧಿಕಾರಿಗಳೇ ನನಗೆ ಪ್ರೇರಣೆ ಎಂದು ಧನಂಜಯ್ ಅವರು ತಿಳಿಸಿದ್ದಾರೆ.

    ನಟ ರಮೇಶ್ ಅರವಿಂದ್ ಅವರು `100′ ಹೆಸರಿನ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ಪೊಲೀಸ್ ಅಧಿಕಾರಿ ಆಗಿದ್ದರೂ ರಮೇಶ್ ಅವರು ಎರಡು ಶೇಡ್‍ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅಷ್ಟೇ ಅಲ್ಲದೇ ‘ಭೈರಾದೇವಿ’ ಸಿನಿಮಾದಲ್ಲಿ ಕ್ರೈ ಬ್ರಾಂಚ್ ಪೊಲೀಸ್ ಆಗಿ, ‘ಶಿವಾಜಿ ಸುರತ್ಕಲ್’ ಚಿತ್ರದಲ್ಲಿ ಪತ್ತೇದಾರಿ ಪಾತ್ರವನ್ನು ಮಾಡುತ್ತಿದ್ದಾರೆ.

  • 109 ಕೋಟಿ ಅಘೋಷಿತ ಆಸ್ತಿ ಪತ್ತೆ – ಇಡಿ ಎಂಟ್ರಿಯಾದ್ರೆ ನಟರಿಗೆ ಸಂಕಷ್ಟ ಗ್ಯಾರಂಟಿ!

    109 ಕೋಟಿ ಅಘೋಷಿತ ಆಸ್ತಿ ಪತ್ತೆ – ಇಡಿ ಎಂಟ್ರಿಯಾದ್ರೆ ನಟರಿಗೆ ಸಂಕಷ್ಟ ಗ್ಯಾರಂಟಿ!

    ಬೆಂಗಳೂರು: ಸ್ಟಾರ್ ನಟರು ಮತ್ತು ನಿರ್ಮಾಪಕರ ಮನೆ ಮೇಲಿನ ಐಟಿ ದಾಳಿ ವೇಳೆ 109 ಕೋಟಿಯಷ್ಟು ಅಘೋಷಿತ ಆಸ್ತಿ ಪತ್ತೆಯಾಗಿದ್ದು, 2.85 ಕೋಟಿ ನಗದು ಸೇರಿದಂತೆ 11 ಕೋಟಿಯಷ್ಟು ಚಿನ್ನಾಭರಣ ಸೀಜ್ ಮಾಡಿದ್ದಾರೆ. ಈಗ ಈ ಐಟಿ ದಾಳಿಗೆ ಇಡಿ ಎಂಟ್ರಿಯಾದರೆ ನಟರಿಗೆ ಸಂಕಷ್ಟ ಗ್ಯಾರಂಟಿಯಾಗಿದೆ.

    ಐಟಿ ಅಧಿಕಾರಿಗಳು ಸತತ ಮೂರು ದಿನಗಳ ಕಾಲ ಸ್ಟಾರ್ ನಟರು ಮತ್ತು ನಿರ್ಮಾಪಕರು ಟ್ಯಾಕ್ಸ್ ಹೋಲ್ಡರ್ ಗಳಾದರೂ ತೆರಿಗೆ ವಂಚಿಸಿ ಆಸ್ತಿ ಮತ್ತು ಆದಾಯವನ್ನ ಮುಚ್ಚಿಟ್ಟಿರೋದನ್ನ ಐಟಿ ಅಧಿಕಾರಿಗಳು ಪತ್ತೆ ಮಾಡಿದ್ದಾರೆ. ಬ್ಯುಸಿನೆಸ್‍ನಲ್ಲಿ ಬಂದ ಆದಾಯ, ಥಿಯೇಟರ್ ಟಿಕೆಟ್‍ ನಲ್ಲಿ ವಂಚನೆ, ಆಡಿಯೊ ರೈಟ್ಸ್, ಡಿಜಿಟಲ್ ರೈಟ್ಸ್ ಮತ್ತು ಸ್ಯಾಟಲೈಟ್ ರೈಟ್ಸ್ ಗಳ ಅಕೌಂಟ್ಯಾಬಿಲಿಟಿ ಇಲ್ಲ ಅನ್ನೋದನ್ನ ಐಟಿ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ.

    ಈಗಾಗಲೇ ನೋಟಿಸ್ ಸಿದ್ಧ ಮಾಡಿಕೊಂಡಿರುವ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು, ನಟರು ಮತ್ತು ನಿರ್ಮಾಪರಕರನ್ನ ವಿಚಾರಣೆಗೆ ಕರೆಯಲಿದೆ. ಇವತ್ತಿನಿಂದ ನಾಲ್ವರು ಸ್ಟಾರ್ ನಟರು ಮತ್ತು ನಿರ್ಮಾಪರಕು ಐಟಿ ಬಾಗಿಲು ಕಾಯಬೇಕಾದ ಪರಿಸ್ಥಿತಿ ಬಂದೊದಗಿದೆ. ಕೆಲವೊಂದಿಷ್ಟು ಪ್ರಶ್ನೋತ್ತರಗಳನ್ನ ರೆಡಿ ಮಾಡಿಟ್ಟುಕೊಂಡಿರುವ ಅಧಿಕಾರಿಗಳು ಪ್ರತಿಯೊಂದು ಪ್ರಶ್ನೆಗೂ ಉತ್ತರ ಪಡೆಯಲಿದ್ದಾರೆ. ಉತ್ತರ ಸಮಂಜಸವಾಗಿಲ್ಲದಿದ್ದರೆ, ದಾಖಲಾತಿಗಳನ್ನ ಹಾಜರು ಪಡಿಸಬೇಕಾಗುತ್ತದೆ. 109 ಕೋಟಿಯ ಆದಾಯದ ಮೂಲ ಯಾವುದು, ತೆರಿಗೆಯಿಂದ ಈ ಆಸ್ತಿಯನ್ನ ಮುಚ್ಚಿಟ್ಟಿದ್ದೇಕೆ, ಥಿಯೇಟರ್ ಟಿಕೆಟ್‍ನಿಂದ ಹಿಡಿದು ಸ್ಯಾಟಲೈಟ್ ರೈಟ್ಸ್‍ವರೆಗೂ ಲೆಕ್ಕಪತ್ರಗಳು ಯಾಕಿಲ್ಲ? ತೆರಿಗೆ ವಂಚನೆ ಮಾಡುವ ಉದ್ದೇಶದಿಂದಲೇ ಹೀಗೆ ಮಾಡಿದ್ದೀರಿ ತಾನೆ? ಇದಕ್ಕಾಗಿ ಪೆನಾಲ್ಟಿ ಎಷ್ಟಿದೆ ಗೊತ್ತಾ.? ಹೀಗೆ ಪ್ರಶ್ನೆಗಳ ಸುರಿಮಳೆಗೈದು ನಟರು ಮತ್ತು ನಿರ್ಮಾಪಕರನ್ನು ಇಕ್ಕಟ್ಟಿಗೆ ಸಿಲುಕಿಸುವ ಸಾಧ್ಯತೆಗಳಿವೆ.

    ಬರೀ ಐಟಿ ವಿಚಾರಣೆಯಾದರೆ ಪರವಾಗಿಲ್ಲ. ತೆರಿಗೆ ಕಟ್ಟದಿದ್ದರೆ ಶೇ.100 ರಿಂದ 300ರಷ್ಟು ದಂಡ ಹಾಕಿ ಬಿಟ್ಟು ಕಳಿಸುತ್ತಾರೆ. 10 ಲಕ್ಷಕ್ಕಿಂತ ಹೆಚ್ಚಿನ ಹಣ ಅಕ್ರಮವಾಗಿ ವರ್ಗಾವಣೆಯಾಗಿದ್ದರೆ ಅಂಥಾ ಪ್ರಕರಣಗಳನ್ನ ಜಾರಿ ನಿರ್ದೇಶನಾಲಯಕ್ಕೆ ವರ್ಗಾವಣೆ ಮಾಡಬೇಕು. ಸ್ಟಾರ್ ನಟರ ಐಟಿ ದಾಳಿ ವೇಳೆ 109 ಕೋಟಿ ಅಘೋಷಿತ ಆಸ್ತಿ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಪ್ರಕರಣವನ್ನ ಇಡಿಗೆ ವರ್ಗಾಯಿಸಲು ಐಟಿ ಅಧಿಕಾರಿಗಳು ತಯಾರಿ ಮಾಡಿಕೊಳ್ಳುತ್ತಿದ್ದಾರೆ ಎಂಬ ಮಾಹಿತಿಗಳು ಲಭ್ಯವಾಗುತ್ತಿವೆ. ಒಮ್ಮೆ ಇಡಿ ಎಂಟ್ರಿಯಾದರೆ ನಟರು ಮತ್ತು ನಿರ್ಮಾಪಕರಿಗೆ ಸಂಕಷ್ಟ ಗ್ಯಾರಂಟಿಯಾಗಿದ್ದು, ವಿದೇಶಿ ವ್ಯವಹಾರ ಮತ್ತು ಮನಿ ಲಾಂಡ್ರಿಗ್ ಅಡಿ ಪ್ರಕರಣ ಕೈಗೆತ್ತಿಕೊಳ್ಳವ ಇಡಿ ಅಧಿಕಾರಿಗಳು ಎಫ್‍ಐಆರ್ ದಾಖಲು ಮಾಡಿಕೊಳ್ಳುತ್ತಾರೆ. ನಂತರ ಪ್ರತಿಯೊಬ್ಬರ ವಿಚಾರಣೆ ಮಾಡುತ್ತಾರೆ. ಹೀಗಾಗಿ ಐಟಿ ಮತ್ತು ಇಡಿ ಬಾಗಿಲುಗಳಿಗೆ ಪ್ರತಿ ದಿನ ಅಲೆಯಬೇಕಾದ ಪರಿಸ್ಥಿತಿ ನಟರು ಮತ್ತು ನಿರ್ಮಾಪಕರಿಗೆ ಬಂದೊದಗಿದೆ. ಅಗತ್ಯ ಬಿದ್ದರೆ ಅರೆಸ್ಟ್ ಮಾಡುವ ಅಧಿಕಾರ ಜಾರಿ ನಿರ್ದೇಶನಾಲಯಕ್ಕೆ ಇದೆ.

    ಸ್ಟಾರ್ ನಟರ ಆದಾಯ ಮತ್ತು ತೆರಿಗೆ ನಡುವಿನ ವ್ಯತ್ಯಾಸವನ್ನ ಐಟಿ ಅಧಿಕಾರಿಗಳು ಬಯಲು ಮಾಡಿದ್ದಾರೆ. ಈಗ ಮುಂದೆ ತನಿಖೆ ಯಾವ ರೀತಿ ಸವಾಲೊಡ್ಡುತ್ತದೆ ಅನ್ನೋದು ಸ್ವಲ್ಪ ದಿನಗಳಲ್ಲೇ ಗೊತ್ತಾಗಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv