Tag: ನಗರ ಸಭೆ

  • ಲೋಕಲ್ ವಾರ್‌ಗೆ ಮುಹೂರ್ತ ಫಿಕ್ಸ್ – ಯಾವೆಲ್ಲ ನಗರಸಭೆ? ಪಟ್ಟಣ ಪಂಚಾಯತ್‍ಗೆ ಚುನಾವಣೆ?

    ಲೋಕಲ್ ವಾರ್‌ಗೆ ಮುಹೂರ್ತ ಫಿಕ್ಸ್ – ಯಾವೆಲ್ಲ ನಗರಸಭೆ? ಪಟ್ಟಣ ಪಂಚಾಯತ್‍ಗೆ ಚುನಾವಣೆ?

    ಬೆಂಗಳೂರು: ಲೋಕಸಭಾ ಚುನಾವಣಾ ಸಮರದ ಬೆನ್ನಲ್ಲೇ ರಾಜ್ಯದಲ್ಲಿ ಲೋಕಲ್ ವಾರ್‌ಗೆ ಮುಹೂರ್ತ ಫಿಕ್ಸ್ ಆಗಿದೆ.

    ಸುದ್ದಿಗೋಷ್ಠಿ ನಡೆಸಿ ರಾಜ್ಯ ಚುನಾವಣಾಧಿಕಾರಿ ಶ್ರೀನಿವಾಸಚಾರಿ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಮಾಹಿತಿಯನ್ನು ನೀಡಿದರು. ರಾಜ್ಯದ 8 ನಗರ ಸಭೆ, 33 ಪುರಸಭೆ, 22 ಪಟ್ಟಣ ಪಂಚಾಯತಿ, 63 ಸ್ಥಳೀಯ ಸಂಸ್ಥೆಗಳಿಗೆ ಹಾಗೂ 1,361 ವಾರ್ಡ್ ಗಳಿಗೆ ಚುನಾವಣೆ ಘೋಷಣೆಯಾಗಿದೆ.

    ಇಂದಿನಿಂದಲೇ ನೀತಿ ಸಂಹಿತೆ ಜಾರಿಯಾಗಿದ್ದು, ನಾಮಪತ್ರ ಸಲ್ಲಿಕೆಯು ಮೇ 9 ರಿಂದ ಶುರುವಾಗಲಿದೆ. ನಾಮಪತ್ರ ಸಲ್ಲಿಸಲು ಮೇ 16 ಕೊನೆಯ ದಿನವಾಗಿದೆ. ಮೇ 29 ರಂದು ಮತದಾನ ನಡೆಯಲಿದ್ದು, ಮೇ 31ಕ್ಕೆ ಫಲಿತಾಂಶ ಪ್ರಕಟವಾಗಲಿದೆ.

    ಈ ಚುನಾವಣೆಗೆ ಮತಪತ್ರ ಬದಲು, ಮತಯಂತ್ರ ಬಳಸಲಾಗುತ್ತದೆ. 8 ಜಿಲ್ಲೆಯ 8 ತಾಲೂಕು ಪಂಚಾಯತ್‍ಗಳ 10 ಕ್ಷೇತ್ರಗಳ ಸದಸ್ಯ ಸ್ಥಾನಗಳಿಗೆ ಹಾಗೂ ಗ್ರಾಮ ಪಂಚಾಯತ್‍ಗಳಲ್ಲಿ ತೆರವಾಗಿರುವ 202 ಸದಸ್ಯ ಸ್ಥಾನಗಳಿಗೆ ಉಪಚುನಾವಣೆ ನಡೆಯಲಿದೆ. ಆದರೆ ಕುಂದಗೋಳದಲ್ಲಿ ವಿಧಾನಸಭೆ ಉಪ ಚುನಾವಣೆ ಇರುವುದರಿಂದ ಅಲ್ಲಿನ ನಗರಸಭೆ ಚುನಾವಣೆ ನಡೆಸುವುದಿಲ್ಲ. ಹೀಗಾಗಿ ಎಲ್ಲೆಲ್ಲಿ ಚುನಾವಣೆ ಇರುತ್ತದೆಯೋ ಅಲ್ಲಿ ಮಾತ್ರ ನೀತಿ ಸಂಹಿತೆ ಜಾರಿ ಅನ್ವಯವಾಗಲಿದೆ.

    ನಗರ ಸಭೆ:
    ಹಿರಿಯೂರು, ಹರಿಹರ, ಶಿಡ್ಲಘಟ್ಟ, ಸಾಗರ, ತಿಪಟೂರು, ನಂಜನಗೂಡು, ಬಸವಕಲ್ಯಾಣ, ಶಹಾಪುರ,

    ಪಟ್ಟಣ ಪಂಚಾಯತ್:
    ಹೊಳಲ್ಕೆರೆ, ಶಿರಾಳಕೊಪ್ಪ, ಸೊರಬ, ಹೊಸನಗರ, ತುರುವೇಕೆರೆ, ಕೊಪ್ಪ, ಶೃಂಗೇರಿ, ಮೂಡಿಗೆರೆ, ನರಸಿಂಹರಾಜಪುರ, ಮೂಲ್ಕಿ, ಸುಳ್ಯ, ಆಲೂರು, ಅರಕಲಗೂಡು, ಎಳಂದೂರು, ಹನೂರು, ಅಳ್ನಾವರ, ಹೊನ್ನಾವರ, ಸಿದ್ದಾಪುರ, ಔರದ್, ಕಮಲಾಪುರ, ಆನೇಕಲ್, ದೇವನಹಳ್ಳಿ, ನೆಲಮಂಗಲ, ಮೊಳಕಾಲ್ಮೂರು, ಬಂಗಾರಪೇಟೆ, ಶ್ರೀನಿವಾಸಪುರ, ಮಾಲೂರು, ಬಾಗೇಪಲ್ಲಿ, ಶಿಕಾರಿಪುರ, ಪಾವಗಡ, ಕುಣಿಗಲ್, ಕೆ.ಆರ್. ನಗರ, ಬನ್ನೂರ್, ಕಡೂರು, ಮೂಡಬಿದ್ರೆ, ಮಳವಳ್ಳಿ, ಶ್ರೀರಂಗಪಟ್ಟಣ, ಕೆ.ಆರ್ ಪೇಟೆ, ಗುಂಡ್ಲುಪೇಟೆ, ಬಸವನ ಬಾಗೇವಾಡಿ, ಇಂಡಿ, ತಾಳಿಕೋಟೆ, ನವಲಗುಂದ, ಮುಂಡರಗಿ, ನರಗುಂದ, ಶಿಗ್ಗಾಂವ್, ಭಟ್ಕಳ, ಬಸವಕಲ್ಯಾಣ, ಬಾಲ್ಕಿ, ಹುಮ್ನಾಬಾದ್, ಚಿಟಗುಪ್ಪ, ಸಂಡೂರು, ಹರಪನಹಳ್ಳಿ ಹಾಗೂ ಹೆಚ್ ಹಡಗಲಿಯಲ್ಲಿ ಚುನಾವಣೆ ನಡೆಯಲಿದೆ.

  • ಲೋಕಲ್ ದಂಗಲ್ ಅಂತಿಮ ಫಲಿತಾಂಶ: ಯಾವ ಜಿಲ್ಲೆಯಲ್ಲಿ ಗೆದ್ದವರು ಯಾರು? ಎಲ್ಲೆಲ್ಲಿ ಅತಂತ್ರ?

    ಲೋಕಲ್ ದಂಗಲ್ ಅಂತಿಮ ಫಲಿತಾಂಶ: ಯಾವ ಜಿಲ್ಲೆಯಲ್ಲಿ ಗೆದ್ದವರು ಯಾರು? ಎಲ್ಲೆಲ್ಲಿ ಅತಂತ್ರ?

    ಬೆಂಗಳೂರು: ರಾಜ್ಯದ ಜನರ ಮನಸ್ಥಿತಿಯೇ ಅತಂತ್ರವಾದಂತಿದೆ. 6 ತಿಂಗಳ ಹಿಂದೆಯಷ್ಟೇ ನಡೆದ ವಿಧಾನಸಭೆ ಚುನಾವಣೆಯಲ್ಲೂ ಯಾವೊಬ್ಬ ಪಕ್ಷಕ್ಕೂ ಮತದಾರ ಬಹುಮತ ನೀಡಿರಲಿಲ್ಲ. ಈಗ ಸ್ಥಳೀಯ ಸಂಸ್ಥೆಗಳ ಮೊದಲ ಹಂತದ ಚುನಾವಣೆಯಲ್ಲೂ ಇದೇ ಸ್ಥಿತಿಯೇ ಪುನರಾವರ್ತನೆಯಾಗಿದೆ.

    ಲೋಕಸಭೆಗೆ ಮುನ್ನ ನಡೆದ ಲೋಕಲ್ ಫೈಟ್‍ನಲ್ಲಿ ಪಕ್ಷವಾರು ಫಲಿತಾಂಶ ನೋಡಿದರೆ ಅತಂತ್ರ ಸ್ಥಿತಿ ನಿರ್ಮಾಣವಾಗಿದೆ. ಆದರೆ, ದೋಸ್ತಿ ಸರ್ಕಾರದ ಮೈತ್ರಿ ದೃಷ್ಟಿಯಲ್ಲಿ ಬಿಜೆಪಿಯನ್ನು ಮತ್ತೆ ಕಾಂಗ್ರೆಸ್-ಜೆಡಿಎಸ್ ಅಧಿಕಾರದಿಂದ ದೂರ ಇರಿಸಲಿವೆ. ಮೈಸೂರು, ತುಮಕೂರು, ಶಿವಮೊಗ್ಗ ಪಾಲಿಕೆ ಸೇರಿ 22 ಜಿಲ್ಲೆಗಳ 29 ನಗರಸಭೆ, 53 ಪುರಸಭೆ, 20 ಪಟ್ಟಣ ಪಂಚಾಯತ್ ಸೇರಿ 105 ಸಂಸ್ಥೆಗಳಿಗೆ ನಡೆದ ಚುನಾವಣೆಯಲ್ಲಿ ಅತಂತ್ರ ಪರಿಸ್ಥಿತಿ ನಿರ್ಮಾಣವಾಗಿದೆ.

    ಯಾವ ಪಕ್ಷಕ್ಕೆ ಎಷ್ಟು ಸ್ಥಾನ?
    ಒಟ್ಟು 2,527 ವಾರ್ಡ್ ಗಳಿಗೆ ಚುನಾವಣೆ ನಡೆದಿದ್ದು ಕಾಂಗ್ರೆಸ್ 946, ಬಿಜೆಪಿ 875, ಜೆಡಿಎಸ್ 345, ಪಕ್ಷೇತರರು 315, ಎಸ್‍ಡಿಪಿಐ 17, ಬಿಎಸ್‍ಪಿ 12, ಕೆಪಿಜೆಪಿ 10, ಎಸ್‍ಪಿ 4, ಕೆಆರ್‍ಆರ್‍ಎಸ್ 1, ನ್ಯೂ ಇಂಡಿಯನ್ ಕಾಂಗ್ರೆಸ್ 1, ಡಬ್ಲ್ಯೂಪಿಐ 1ರಲ್ಲಿ ಗೆದ್ದುಕೊಂಡಿದೆ.

    ಮಹಾನಗರ ಪಾಲಿಕೆ:
    ಮೈಸೂರು, ಶಿವಮೊಗ್ಗ, ತುಮಕೂರು ಮಹಾನಗರ ಪಾಲಿಕೆ ಚುನಾವಣೆಯ ಒಟ್ಟು 135 ವಾರ್ಡ್ ಗಳಲ್ಲಿ ಬಿಜೆಪಿ 54, ಕಾಂಗ್ರೆಸ್ 36, ಜೆಡಿಎಸ್ 30, ಪಕ್ಷೇತರರು 14, ಬಿಎಸ್‍ಪಿ 1 ವಾರ್ಡ್ ನಲ್ಲಿ ಜಯಗಳಿಸಿದೆ. ಮೈಸೂರು ಮತ್ತು ತುಮಕೂರಿನಲ್ಲಿ ಅತಂತ್ರ ಪರಿಸ್ಥಿತಿ ನಿರ್ಮಾಣವಾದರೆ ಶಿವಮೊಗ್ಗ ಪಾಲಿಕೆಯನ್ನು ಬಿಜೆಪಿ ಗೆದ್ದುಕೊಂಡಿದೆ.

    ನಗರ ಸಭೆ ಚುನಾವಣೆ:
    ಒಟ್ಟು 926 ವಾರ್ಡ್ ಗಳಲ್ಲಿ ಬಿಜೆಪಿ 370, ಕಾಂಗ್ರೆಸ್ 294, ಜೆಡಿಎಸ್ 106, ಪಕ್ಷೇತರ 123, ಬಿಎಸ್‍ಪಿ 10, ಎಸ್‍ಡಿಪಿಐ 13, ಕೆಪಿಜೆಪಿ 10 ವಾರ್ಡ್ ನಲ್ಲಿ ಗೆದ್ದಿದೆ. ಒಟ್ಟು 29 ನಗರಸಭೆಗಳ ಪೈಕಿ ಬಿಜೆಪಿ 9 ರಲ್ಲಿ ವಿಜಯ ಪತಾಕೆ ಹಾರಿಸಿದ್ದು, ಕಾಂಗ್ರೆಸ್ 5 ಕಡೆ, ಜೆಡಿಎಸ್ 2 ಕಡೆ ಸ್ವತಂತ್ರವಾಗಿ ಗದ್ದುಗೆ ಏರಲಿದೆ. ಗೋಕಾಕ್‍ನಲ್ಲಿ ಇತರರು ಕ್ಲೀನ್ ಸ್ವೀಪ್ ಮಾಡಿದ್ದಾರೆ. 13 ಕಡೆ ಅತಂತ್ರ ಪರಿಸ್ಥಿತಿ ನಿರ್ಮಾಣವಾಗಿದೆ.

    ಬಿಜೆಪಿ – ಶಿರಸಿ, ಪುತ್ತೂರು, ಉಡುಪಿ, ರಬಕವಿ-ಬನಹಟ್ಟಿ, ಬಾಗಲಕೋಟೆ, ಸುರಪುರ, ಮುಧೋಳ, ಇಳಕಲ್, ಯಾದಗಿರಿ
    ಕಾಂಗ್ರೆಸ್ – ಸಿಂಧನೂರು, ಜಮಖಂಡಿ, ಚಳ್ಳಕೆರೆ, ದಾಂಡೇಲಿ, ಶಹಾಬಾದ್,
    ಜೆಡಿಎಸ್ -ಅರಸಿಕೆರೆ ಮತ್ತು ಮಂಡ್ಯ

    ಅತಂತ್ರ – ಹಾವೇರಿ, ಕಾರವಾರ, ಉಳ್ಳಾಲ, ರಾಣೆಬೆನ್ನೂರು, ಕೊಳ್ಳೇಗಾಲ, ಚಾಮರಾಜನಗರ, ರಾಯಚೂರು, ನಿಪ್ಪಾಣಿ, ಗೋಕಾಕ್, ಹಾಸನ, ಚಿತ್ರದುರ್ಗ, ಕೊಪ್ಪಳ, ಗಂಗಾವತಿ.

    ಪುರಸಭೆ ಚುನಾವಣೆ:
    ಒಟ್ಟು 1246 ವಾರ್ಡ್ ಗಳಲ್ಲಿ ಕಾಂಗ್ರೆಸ್ 514, ಬಿಜೆಪಿ 375, ಜೆಡಿಎಸ್ 210, ಪಕ್ಷೇತರರು 135, ಬಿಎಸ್‍ಪಿ 2, ಎಸ್‍ಡಿಪಿಐ 4, ಕೆಆರ್‍ಆರ್‍ಎಸ್ 1, ಎಸ್‍ಪಿ 4, ಡಬ್ಲ್ಯೂಪಿಐ 1ರಲ್ಲಿ ಜಯಗಳಿಸಿದೆ. ಒಟ್ಟು 53 ಪುರಸಭೆಯಲ್ಲಿ ಕಾಂಗ್ರೆಸ್ 18, ಬಿಜೆಪಿ 11, ಜೆಡಿಎಸ್ 8 ಕಡೆ ಗೆದ್ದುಕೊಂಡಿದ್ದು 16 ಪುರಸಭೆ ಅತಂತ್ರವಾಗಿದೆ. ಈ ಪೈಕಿ 11 ಪುರಸಭೆಗಳ ಪೈಕಿ 6ರಲ್ಲಿ ಕಾಂಗ್ರೆಸ್- ಜೆಡಿಎಸ್ ಮೈತ್ರಿ ಅಧಿಕಾರ ಹಿಡಿಯುವ ಎಲ್ಲಾ ಸಾಧ್ಯತೆಗಳಿವೆ. ಬಂಟ್ವಾಳದಲ್ಲಿ ಕಾಂಗ್ರೆಸ್ ಎಸ್‍ಡಿಪಿಐ ಜೊತೆ ಮೈತ್ರಿ ಮಾಡಿಕೊಂಡು ಗದ್ದುಗೆ ಹಿಡಿಯುವ ಸಾಧ್ಯತೆಯಿದೆ. ಸಂಕೇಶ್ವರ ಮತ್ತು ತೇರದಾಳದಲ್ಲಿ ಪಕ್ಷೇತರರ ಬೆಂಬಲ ಪಡೆದು ಬಿಜೆಪಿ ಅಧಿಕಾರಕ್ಕೇರುವ ಸಂಭವ ಇದೆ. ಲಕ್ಷೇಶ್ವರ ಮತ್ತು ಅಂಕೋಲದಲ್ಲಿ ಅಧಿಕಾರ ಯಾರ ಕೈಗೆ ಸಿಗುತ್ತದೋ . ಇಬ್ಬರಿಗೂ ಫಿಫ್ಟಿ, ಫಿಫ್ಟಿ ಚಾನ್ಸ್ ಇದೆ. ಪಕ್ಷೇತರರ ಕೃಪೆಗಾಗಿ ಕಾಂಗ್ರೆಸ್ ಮತ್ತು ಬಿಜೆಪಿ ಶತ ಪ್ರಯತ್ನ ನಡೆಸಿವೆ

    ಕಾಂಗ್ರೆಸ್ – ಬದಾಮಿ, ಗುಳೇದಗುಡ್ಡ, ಬೈಲಹೊಂಗಲ, ಕುಡಚಿ, ಹುಕ್ಕೇರಿ, ಹಳ್ಳಿಖೇಡ, ರೋಣ, ಹಾನಗಲ್, ಸವಣೂರು, ಚಿತ್ತಾಪೂರ, ಚಿಂಚೋಳಿ, ಅಫ್ಜಲ್‍ಪುರ, ಕುಷ್ಟಗಿ, ಲಿಂಗಸುಗೂರು, ಮುದಗಲ್, ಮಧುಗಿರಿ, ಹಳಿಯಾಳ, ಗುರುಮಿಠ್ಕಲ್

    ಬಿಜೆಪಿ – ಮಹಾಲಿಂಗಪುರ, ಹುನಗುಂದ, ರಾಮದುರ್ಗ, ಸವದತ್ತಿ, ಸದಲಗ, ಹೊಸದುರ್ಗ, ಗಜೇಂದ್ರಗಡ, ಸೇಡಂ, ಜೇವರ್ಗಿ, ಕುಂದಾಪುರ, ಅಂಕೋಲ

    ಜೆಡಿಎಸ್ – ಚನ್ನರಾಯಪಟ್ಟಣ, ಸಕಲೇಶಪುರ, ಹೊಳೆನರಸೀಪುರ, ಪಾಂಡವಪುರ, ಮದ್ದೂರು, ನಾಗಮಂಗಲ, ಪಿರಿಯಾಪಟ್ಟಣ, ಚಿಕ್ಕನಾಯಕನಹಳ್ಳಿ

    ಅತಂತ್ರ – ತೇರದಾಳ, ಸಂಕೇಶ್ವರ, ಮೂಡಲಗಿ, ಕೊಣ್ಣರು, ಬಂಟ್ವಾಳ, ಚನ್ನಗಿರಿ, ಲಕ್ಷ್ಮೇಶ್ವರ, ಆಳಂದ, ಟಿ.ನರಸೀಪುರ, ಹೆಚ್‍ಡಿ ಕೋಟೆ, ದೇವದುರ್ಗ, ಮಾನ್ವಿ , ಕಾರ್ಕಳ, ಮುದ್ದೆಬಿಹಾಳ, ಅಂಕೋಲ

    ಪಟ್ಟಣ ಪಂಚಾಯತ್:
    ಒಟ್ಟು 355 ವಾರ್ಡ್ ಗಳ ಕಾಂಗ್ರೆಸ್ 138, ಬಿಜೆಪಿ 130, ಪಕ್ಷೇತರರು 57, ಜೆಡಿಎಸ್ 29, ಇಂಡಿಯನ್ ನ್ಯೂ ಕಾಂಗ್ರೆಸ್ 1ರಲ್ಲಿ ಗೆದ್ದಿದೆ. ಒಟ್ಟು 20 ಪಟ್ಟಣ ಪಂಚಾಯತ್ ನಲ್ಲಿ ಕಾಂಗ್ರೆಸ್ 7, ಬಿಜೆಪಿ 7, ಜೆಡಿಎಸ್ 2 ಕಡೆ ಗೆದ್ದುಕೊಂಡಿದೆ. 3 ಪಟ್ಟಣ ಪಂಚಾಯ್ತಿಗಳಲ್ಲಿ ಅತಂತ್ರ ಫಲಿತಾಂಶ ಹೊರಬಿದ್ದಿದೆ. ಖಾನಾಪುರದಲ್ಲಿ ಯಾವೊಂದು ಪಕ್ಷವೂ ಖಾತೆ ತೆರೆದಿಲ್ಲ. ಇತರರು ಎಲ್ಲಾ ಸ್ಥಾನಗಳನ್ನ ಸ್ವೀಪ್ ಮಾಡಿದ್ದಾರೆ. ಆದ್ರೆ ಪಕ್ಷೇತರರ ಪೈಕಿ ಬಹುತೇಕರು ಶಾಸಕಿ ಅಂಜಲಿ ನಿಂಬಾಳ್ಕರ್ ಬೆಂಬಲಿಗರು ಎನ್ನಲಾಗಿದೆ. ಇದು ಪಕ್ಷಕ್ಕೆ ನೀಡುವ ಎಚ್ಚರಿಕೆಯೋ ಏನು ಗೊತ್ತಿಲ್ಲ. ಅತಂತ್ರ ಫಲಿತಾಂಶ ಹೊರಬಿದ್ದಿರೋ 3 ಕ್ಷೇತ್ರಗಳ ಪೈಕಿ ಕೆರೂರಿನಲ್ಲಿ 9 ಸ್ಥಾನ ಗೆದ್ದಿರೋ ಬಿಜೆಪಿ ಅಧಿಕಾರ ಹಿಡಿಯುವ ಸಾಧ್ಯತೆ ಇದೆ. ಹಿರೆಕೆರೂರು ಮತ್ತು ಕೊಟ್ಟೂರಿನಲ್ಲಿ ಕಾಂಗ್ರೆಸ್ ಅಧಿಕಾರ ಗಿಟ್ಟಿಸಿಕೊಳ್ಳುವ ಸಾಧ್ಯತೆಗಳಿವೆ.

    ಕಾಂಗ್ರೆಸ್ – ಕುಡಿತಿನಿ, ರಾಯಬಾಗ, ಮುಳಗುಂದ, ಶಿರಹಟ್ಟಿ, ಬೆಳ್ಳೂರು, ಹಟ್ಟಿ, ಯಲ್ಲಾಪುರ
    ಬಿಜೆಪಿ – ಬೀಳಗಿ, ಹೊನ್ನಾಳಿ, ಜಗಳೂರು, ನರೇಗಲ್, ಯಲಬುರ್ಗಾ, ಸಾಲಿಗ್ರಾಮ, ಮುಂಡಗೋಡು
    ಜೆಡಿಎಸ್ – ಗುಬ್ಬಿ, ಕೊರಟಗೆರೆ
    ಅತಂತ್ರ – ಕೆರೂರು, ಹಿರೆಕೆರೂರು, ಕೊಟ್ಟೂರು
    ಇತರರು – ಖಾನಾಪುರ

  • ರಾಮನಗರದ ಈ ವಾರ್ಡಿನಲ್ಲಿ ಹಸಿತ್ಯಾಜ್ಯ ಬಳಸಿ ವಿದ್ಯುತ್ ಉತ್ಪಾದನೆ

    ರಾಮನಗರದ ಈ ವಾರ್ಡಿನಲ್ಲಿ ಹಸಿತ್ಯಾಜ್ಯ ಬಳಸಿ ವಿದ್ಯುತ್ ಉತ್ಪಾದನೆ

    ಹನುಮಂತು ಕೆ. 

    ರಾಮನಗರ: ಕಸದಿಂದ ರಸ ಎನ್ನೋದು ನಾಣ್ಣುಡಿ, ಅದ್ರಂತೆ ಅನುಪಯುಕ್ತ ಹಸಿ ತ್ಯಾಜ್ಯ ಈಗ ಬೀದಿ ದೀಪಗಳಲ್ಲಿ ಬೆಳಕಾಗಿ ಉರಿಯಲಿದೆ. ಹೌದು ಕಸದಿಂದ ರಸವಾಗಿ ಇದೀಗ ವಿದ್ಯುತ್ ಉತ್ಪಾದನೆ ರೇಷ್ಮೆನಗರಿ ರಾಮನಗರದ ದ್ಯಾವರಸೇಗೌಡನ ದೊಡ್ಡಿ ಗ್ರಾಮದ ಬಳಿ ನಡೆಯುತ್ತಿದೆ.

    ನಮಗೆ ಬೇಡವೆಂದು ಬಿಸಾಡುವ ಊಟ, ಸೊಪ್ಪು, ತರಕಾರಿ ತಾಜ್ಯ ಸೇರಿದಂತೆ ಹಸಿ ತ್ಯಾಜ್ಯಗಳು ಇನ್ಮುಂದೆ ನಗರದ ಬೀದಿ ದೀಪಗಳನ್ನು ಬೆಳಗಿಸಲಿವೆ. ಪ್ರತಿನಿತ್ಯ ಮನೆ, ಹೋಟೆಲ್, ಕಲ್ಯಾಣ ಮಂಟಪಗಳಲ್ಲಿ ಉತ್ಪತ್ತಿಯಾಗುವ ತ್ಯಾಜ್ಯಗಳನ್ನು ವಿದ್ಯುತ್ ಶಕ್ತಿಯನ್ನಾಗಿ ಪರಿವರ್ತಿಸುವ ಮೂಲಕ ಕಸದಿಂದ ರಸ ಎನ್ನುವ ನಾಣ್ಣುಡಿಯನ್ನು ರಾಮನಗರ ನಗರಸಭೆ ಕಸದಿಂದ ವಿದ್ಯುತ್ ಎಂದು ಬದಲಾಯಿಸಿ ಕಾರ್ಯಾರೂಪಕ್ಕಿಳಿಸಿದೆ.

    ನಗರಸಭೆಯ 1ನೇ ವಾರ್ಡಿನ ದ್ಯಾವರಸೇಗೌಡನ ದೊಡ್ಡಿಯಲಿ ಮಿಥೇನ್ ಬಯೋ ಎಲೆಕ್ಟ್ರಿಸಿಟಿ ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸಿಕೊಂಡಿರುವ ನಗರಸಭೆ ಪ್ರತಿನಿತ್ಯ 10 ಕೆ.ವಿ ವಿದ್ಯುತ್ ಉತ್ಪಾದಿಸುವ ಪ್ರಾಯೋಗಿಕ ಚಾಲನೆಯಲ್ಲಿ ಯಶಸ್ವಿಯಾಗಿದೆ. ಈ ತಂತ್ರಜ್ಞಾನ ಬಿಬಿಎಂಪಿ ಸೇರಿದಂತೆ ಮಂಗಳೂರು, ಮೈಸೂರು ಮಹಾನಗರ ಪಾಲಿಕೆಗಳಲ್ಲಿ ಚಾಲ್ತಿಯಲ್ಲಿದ್ದರೂ ನಗರಸಭೆ, ಪುರಸಭೆಗಳ ಹಂತದಲ್ಲಿ ಈ ಪ್ರಯತ್ನ ಯಶಸ್ವಿಯಾಗಿರುವುದು ಇದೇ ಮೊದಲು ಎಂದು ರಾಮನಗರ ನಗರಸಭೆ ಆಯುಕ್ತ ಮಾಯಣ್ಣಗೌಡ್ರು ಹೇಳುತ್ತಾರೆ.

    ದ್ಯಾವರಸೇಗೌಡನ ದೊಡ್ಡಿಯಲ್ಲಿ ನಿರ್ಮಾಣ ಮಾಡಿರುವ ಮಿಥೇನ್ ಬಯೋ ಎಲೆಕ್ಟ್ರಿಸಿಟಿ ಉತ್ಪಾದನೆ ಘಟಕದಲ್ಲಿ ಪ್ರತಿನಿತ್ಯ 10 ಕಿಲೋ ವೋಲ್ಟ್ ವಿದ್ಯುತ್ ಉತ್ಪಾದಿಸಲಾಗುತ್ತಿದೆ. ಘಟಕಕ್ಕೆ ಬೇಕಾದ ವಿದ್ಯುತ್‍ನ್ನು ಇಲ್ಲಿಂದಲೇ ಬಳಸಿಕೊಳ್ಳುವ ಜೊತೆಗೆ ದ್ಯಾವರಸೇಗೌಡನದೊಡ್ಡಿಯ ಪಾರ್ಕ್, ಬೀದಿ ದೀಪಗಳೂ ಸಹ ಬೆಳಗುತ್ತಿವೆ.

    ವೆಚ್ಚ ಎಷ್ಟು? ಘಟಕವನ್ನು 20 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ. 12 ಲಕ್ಷ ರೂ. ನಿರ್ಮಾಣ ಕಾಮಗಾರಿಗೆ, 8 ಲಕ್ಷ ರೂ. ಯಂತ್ರೋಪಕರಣ ಅಳವಡಿಕೆ ಮತ್ತು ಸಂಪರ್ಕ ವ್ಯವಸ್ಥೆಗೆ ಬಳಸಲಾಗಿದೆ. ಪ್ರತಿನಿತ್ಯ 1.5 ಟನ್ ಹಸಿ ತ್ಯಾಜ್ಯವನ್ನು ವಿದ್ಯುತ್ ಶಕ್ತಿಯಾಗಿ ಪರಿವರ್ತಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ರಾಮನಗರದ ಪೂಲ್ಬಾಗ್ ಪ್ರದೇಶದಲ್ಲಿ 4 ಟನ್ ಸಾಮರ್ಥ್ಯದ ಘಟಕ ನಿರ್ಮಿಸಲು ಉದ್ದೇಶಿಸಲಾಗಿದೆ.

    ವಿದ್ಯುತ್ ಉತ್ಪಾದನೆ ಹೇಗೆ?: ಹಸಿ ತ್ಯಾಜ್ಯವನ್ನು ವಿಂಗಡನೆ ಮಾಡಿ, ಬಯೋ ಗ್ಯಾಸ್ ತೊಟ್ಟಿಯಲ್ಲಿ ಸುರಿಯಲಾಗುವುದು. ಇದರಿಂದ ಮಿಥೇನ್ ಗ್ಯಾಸ್, ಇಂಗಾಲ ಡೈ ಆಕ್ಸೈಡ್ ಅನಿಲಗಳು ಹೊರಹೊಮ್ಮುತ್ತವೆ. ಮಿಥೇನ್ ಗ್ಯಾಸನ್ನು ಪ್ರತ್ಯೇಕಿಸಿ, ಮಿಥೇನ್ ಬಯೋ ಎಲೆಕ್ಟ್ರಿಸಿಟಿ ಜನೆರೇಟರ್‍ಗೆ ಹಾಯಿಸುವ ಮೂಲಕ ವಿದ್ಯುತ್ ಉತ್ಪಾದಿಸಲಾಗುತ್ತಿದೆ. ಜೊತೆಗೆ ಅನಿಲ ಘಟಕದಿಂದ ಹೊರ ಬರುವ ತ್ಯಾಜ್ಯ ಉತ್ತಮ ಸಾವಯವ ಗೊಬ್ಬರವಾಗಿ ಪರಿವರ್ತನೆಯಾಗುತ್ತದೆ.

    ಎಷ್ಟು ಉಳಿತಾಯ?: ಇಲ್ಲಿ ಉತ್ಪಾದನೆಯಾಗುವ ವಿದ್ಯುತ್‍ನ್ನು ಆರ್ಥಿಕವಾಗಿ ಲೆಕ್ಕಾಚಾರ ಮಾಡುವುದಾದರೆ 10 ಕೆ.ವಿ. ವಿದ್ಯುತ್ ಬೆಲೆ ಪ್ರಸ್ತುತ ಮಾರುಕಟ್ಟೆ ದರ 1.20 ರೂ. ಆಗಲಿದೆ. ಅಲ್ಲದೇ ಗೃಹ ಬಳಕೆಗೆ ಬಳಸಬಹುದಾದರೆ ಸುಮಾರು 200 ಮನೆಗಳಿಗೆ ಬಳಸಬಹುದು. ಪ್ರತಿದಿನ ಒಂದು ಸಾವಿರ ರೂ. ವಿದ್ಯುತ್ ಬಿಲ್ ಉಳಿತಾಯವಾದರೆ, ತಿಂಗಳಿಗೆ 30 ಸಾವಿರ, ವಾರ್ಷಿಕ 3.60 ಲಕ್ಷ ಉಳಿತಾಯ ಮಾಡಬಹುದಾಗಿದೆ.

    ಒಟ್ಟಾರೆ ಪಟ್ಟಣ ಹಾಗೂ ನಗರ ಪ್ರದೇಶಗಳಲ್ಲಿ ತ್ಯಾಜ್ಯ ವಿಲೇವಾರಿ ಮಾಡುವುದು ದೊಡ್ಡ ಸಮಸ್ಯೆಯಾಗಿದೆ. ಹಸಿರು ತ್ಯಾಜ್ಯ ಮತ್ತು ಮನೆ, ಹೊಟೇಲ್ ಹಾಗೂ ಕಲ್ಯಾಣ ಮಂಟಪಗಳಲ್ಲಿ ಉತ್ಪತ್ತಿಯಾಗುವ ಅನುಪಯುಕ್ತ ಹಸಿ ಕಸ ನಗರದ ನೈರ್ಮಲ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಇದನ್ನು ಈಗ ಮಿಥೇನ್ ಬಯೋ ಎಲೆಕ್ಟ್ರಿಸಿಟಿ ತಂತ್ರಜ್ಞಾನದ ಮೂಲಕ ಹಸಿ ತ್ಯಾಜ್ಯಕ್ಕೆ ಮುಕ್ತಿ ಹಾಡಲು ಮುಂದಾಗಿರೋದು ಶ್ಲಾಘನೀಯವಾಗಿದೆ.