Tag: ನಗರಸಭೆ ಸಿಬ್ಬಂದಿ

  • ಯುಜಿಡಿ ಕಾಮಗಾರಿ ಗುಂಡಿಯಲ್ಲಿ ಬಿದ್ದು ನರಳಾಡಿದ ಮೂಕ ಪ್ರಾಣಿ

    ಯುಜಿಡಿ ಕಾಮಗಾರಿ ಗುಂಡಿಯಲ್ಲಿ ಬಿದ್ದು ನರಳಾಡಿದ ಮೂಕ ಪ್ರಾಣಿ

    ಗದಗ: ಯುಜಿಡಿ ಕಾಮಗಾರಿಯ ಗುಂಡಿಯಲ್ಲಿ ಬಿದ್ದು ಗೂಳಿಯೊಂದು ನರಳಾಡಿದ ಘಟನೆ ಗದಗ ಜಿಲ್ಲೆಯ ಪುಟ್ಟರಾಜ ಗವಾಯಿಗಳ ವೃತ್ತದ ಬಳಿ ಕಂಡು ಬಂದಿದೆ. ಜಂಗಳಿ ಗೂಳಿಯೊಂದು ತಡರಾತ್ರಿನೇ ಈ ಗುಂಡಿನಲ್ಲಿ ಬಿದ್ದಿದೆ ಎಂದು ಹೇಳಲಾಗುತ್ತಿದೆ.

    ಗದಗ-ಬೆಟಗೇರಿ ಅವಳಿ ನಗರದಲ್ಲಿ ಅಮೃತ ಸಿಟಿ ಯೋಜನೆಯಡಿ ಯುಜಿಡಿ ಕಾಮಗಾರಿ ನಡೆಯುತ್ತಿದೆ. ಆದರೆ ಈ ಕಾಮಗಾರಿ ಆಮೆಗತಿನಲ್ಲಿ ಸಾಗುತ್ತಿದೆ. ಜೊತೆಗೆ ಹತ್ತಾರು ಅಡಿ ಆಳದ ಗುಂಡಿಯ ಪಕ್ಕ ಯಾವುದೇ ಸುರಕ್ಷತಾ ಕ್ರಮ ಕೈಗೊಳ್ಳಲ್ಲದ ಕಾರಣ ನಗರಸಭೆ ಅಧಿಕಾರಿಗಳು ಹಾಗೂ ಕಾಮಗಾರಿ ಗುತ್ತಿಗೆದಾರರ ನಿರ್ಲಕ್ಷ್ಯ ವಿರುದ್ಧ ಸಾರ್ವಜನಿಕರು ಇದೀಗ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

    ಇಕ್ಕಟ್ಟಾದ ಗುಂಡಿಯೊಳಗೆ ಹರಿವಿನಲ್ಲಿ ಬಿದ್ದ ಗೂಳಿಯೊಂದು ಮಲಗಲೂ ಆಗದೇ, ತಿರುಗಲೂ ಆಗದೇ, ಮೇಲೆ ಬರಲೂ ಆಗದೆ ನರಳಾಡಿದೆ. ಬೆಳಗ್ಗೆ ಕೆಲಸಕ್ಕೆ ಹೋಗುವ ದಾರಿ ಹೋಕರು ಈ ಮೂಕ ಪ್ರಾಣಿಯ ರೋಧನೆ ಕೇಳಿ, ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ನಂತರ ಸ್ಥಳಕ್ಕೆ ಬಂದ 112 ಪೊಲೀಸ್ ಸಿಬ್ಬಂದಿ, ಅಗ್ನಿಶಾಮಕ ದಳ, ನಗರಸಭೆ ಸಿಬ್ಬಂದಿ ಕಾರ್ಯಾಚರಣೆಯಿಂದ ಗೂಳಿಯ ರಕ್ಷಣೆ ಮಾಡಲಾಯಿತು.

    ಅವಳಿ ನಗರದ ಅನೇಕ ಕಡೆಗಳಲ್ಲಿ ಹೀಗೆ ಸಾಕಷ್ಟು ಗುಂಡಿಗಳಿದ್ದು, ಸಾಕಷ್ಟು ಅವಾಂತರಗಳು ಸಂಭವಿಸಿವೆ. ಅಧಿಕಾರಿಗಳು ಮಾತ್ರ ನಮಗೆ ಸಂಬಂಧವೇ ಇಲ್ಲ ಎನ್ನುವ ರೀತಿ ವರ್ತಿಸುತ್ತಿದ್ದಾರೆ ಎಂಬ ಆಕ್ರೋಶ ಜನರದ್ದಾಗಿದೆ. ಈ ವಿಚಾರವಾಗಿ ಜನ ರೊಚ್ಚಿಗೇಳುವ ಮುನ್ನ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕಿದೆ.

  • ಟಿಕ್‍ಟಾಕ್ ಮಾಡಿ ಮುಜುಗರಕ್ಕೊಳಗಾದ ನಗರಸಭೆ ಸಿಬ್ಬಂದಿ

    ಟಿಕ್‍ಟಾಕ್ ಮಾಡಿ ಮುಜುಗರಕ್ಕೊಳಗಾದ ನಗರಸಭೆ ಸಿಬ್ಬಂದಿ

    – ಸಿಬ್ಬಂದಿ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ ಶಾಸಕ ಶಿವಲಿಂಗೇಗೌಡ

    ಹಾಸನ: ಇಡೀ ಪ್ರಪಂಚವೇ ಕೊರೊನ ವಿರುದ್ಧ ಹೋರಾಟಕ್ಕೆ ನಿಂತಿದೆ. ಆದರೆ ಹಾಸನದ ಅರಸೀಕೆರೆ ನಗರಸಭೆಯ ಕೆಲ ಸಿಬ್ಬಂದಿಗಳು ಮಾತ್ರ ಸರ್ಕಾರಿ ಕಚೇರಿಯೊಳಗೆ ಟಿಕ್‍ಟಾಕ್ ಮಾಡಿ ಸಾರ್ವಜನಿಕರ ಟೀಕೆಗೆ ಗುರಿಯಾಗಿದ್ದಾರೆ.

    ನಗರಸಭೆಯ ಕೆಲ ಸಿಬ್ಬಂದಿಗಳು ಕೊರೊನಾ ಸಂದಿಗ್ಧ ಸಂದರ್ಭದಲ್ಲಿ ಮಾಡಬೇಕಾದ ಕಾರ್ಯಗಳನ್ನು ಮರೆತು ಭಿನ್ನ, ವಿಭಿನ್ನವಾಗಿ ಕಚೇರಿಯೊಳಗೆ ಟಿಕಟಾಕ್ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾರೆ. ಇದನ್ನು ಗಮನಿಸಿದ ಸ್ಥಳೀಯರು ಅರಸೀಕೆರೆ ನಗರಸಭೆಯ ವ್ಯಾಪ್ತಿಯ ಸ್ವಚ್ಛತೆಯ ಬಗ್ಗೆ ನಿಮಗೆ ಅರಿವಿಲ್ಲ. ಕೊರೊನ ವಿರುದ್ಧ ಹೋರಾಡುವ ಕೆಲಸ ಬಿಟ್ಟು ಕಚೇರಿಯೊಳಗೆ ಟಿಕ್‍ಟಾಕ್ ಮಾಡಲು ನಿಮಗೆ ಅನುಮತಿ ಕೊಟ್ಟವರಾರು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಸಾಮಾಜಿಕ ಜಾಲತಾಣದಲ್ಲಿ ಸಿಬ್ಬಂದಿಯ ವಿಡಿಯೋಗಳು ವೈರಲ್ ಆಗಿದೆ. ಸಾರ್ವಜನಿಕರ ವಲಯದಿಂದ ಭಾರಿ ಟೀಕೆ ವ್ಯಕ್ತವಾಗಿದೆ. ಇದೇ ವೇಳೆ ಘಟನೆ ಬಗ್ಗೆ ಅಸಮಾಧಾನ ಹೊರಹಾಕಿರುವ ಅರಸೀಕೆರೆ ಕ್ಷೇತ್ರದ ಶಾಸಕ ಶಿವಲಿಂಗೇಗೌಡ ಅವರು, ಟಿಕ್‍ಟಾಕ್ ವಿಡಿಯೋ ಮಾಡಿರುವ ನಗರಸಭೆ ಸಿಬ್ಬಂದಿ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.

  • ಕಾರ್ಮಿಕರ ದಿನಾಚರಣೆಯಂದು ಚಿಕ್ಕಬಳ್ಳಾಪುರ ಡಿಸಿಯಿಂದ ಕಲ್ಯಾಣಿ ಸ್ವಚ್ಛತೆ

    ಕಾರ್ಮಿಕರ ದಿನಾಚರಣೆಯಂದು ಚಿಕ್ಕಬಳ್ಳಾಪುರ ಡಿಸಿಯಿಂದ ಕಲ್ಯಾಣಿ ಸ್ವಚ್ಛತೆ

    ಚಿಕ್ಕಬಳ್ಳಾಪುರ: ಕಾರ್ಮಿಕರ ದಿನಾಚರಣೆಯಂದು ಪಾಳುಬಿದ್ದು ಕಸದ ತೊಟ್ಟಿಯಾಗಿದ್ದ ಪುರಾತನ ಕಲ್ಯಾಣಿಯನ್ನು ಸಿಬ್ಬಂದಿ ಮತ್ತು ವಿದ್ಯಾರ್ಥಿಗಳ ಜೊತೆ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಅನಿರುದ್ಧ್ ಶ್ರವಣ್ ಸ್ವಚ್ಛತೆ ಮಾಡಿದ್ದಾರೆ.

    ಜಿಲ್ಲಾಧಿಕಾರಿ ಅನಿರುದ್ಧ್ ಶ್ರವಣ್ ನೇತೃತ್ವದಲ್ಲಿ ನಗರಸಭೆ ಸಿಬ್ಬಂದಿ ಹಾಗೂ ಸ್ಕೌಟ್ಸ್ ಅಂಡ್ ಗೈಡ್ಸ್ ವಿದ್ಯಾರ್ಥಿಗಳು ನಗರದ ಬಸಪ್ಪ ಛತ್ರದಲ್ಲಿ ಡಂಪಿಂಗ್ ಯಾರ್ಡ್‍ಗೆ ಮೂಲೆಗುಂಪಾಗಿದ್ದ ಕಲ್ಯಾಣಿಯ ಸ್ವಚ್ಛತಾ ಕಾರ್ಯ ಮಾಡಿದರು.

    ನಗರದ ಬಿಬಿ ರಸ್ತೆಯಲ್ಲಿ ನಿರ್ಮಾಣವಾಗುತ್ತಿರುವ ನೂತನ ರಂಗಮಂದಿರದ ಬಳಿಯೇ ಇರುವ ಈ ಪುರಾತನ ಕಲ್ಯಾಣಿ ಕಸದಿಂದ ತುಂಬಿ ತುಳುಕಿ, ಮುಳ್ಳಿನ ಗಿಡಗಂಟೆಗಳಿಂದ ಮುಚ್ಚಿ ಹೋಗಿತ್ತು. ಈ ಹಿಂದೆ ರಂಗಮಂದಿರ ಕಾಮಗಾರಿ ಪರಿಶೀಲನೆ ವೇಳೆ ಪಾಳುಬಿದ್ದಿದ್ದ ಕಲ್ಯಾಣಿ ಕಂಡಿದ್ದ ಜಿಲ್ಲಾಧಿಕಾರಿ ಕಲ್ಯಾಣಿಗೆ ಮರುಜೀವ ಕೊಡುವ ಸಂಕಲ್ಪ ಮಾಡಿದ್ದರು. ಹೀಗಾಗಿ ಕಾರ್ಮಿಕ ದಿನಾಚರಣೆಯ ದಿನವೇ ವಿದ್ಯಾರ್ಥಿಗಳು, ನಗರಸಭೆ ಸಿಬ್ಬಂದಿ, ಹಾಗೂ ಪತ್ರಕರ್ತರ ಜೊತೆಗೂಡಿ ಜಿಲ್ಲಾಧಿಕಾರಿ ಕಲ್ಯಾಣಿ ಸ್ವಚ್ಛತಾ ಕಾರ್ಯ ನಡೆಸಿದರು. ಸತತ 3 ಗಂಟೆಗೂ ಹೆಚ್ಚು ಕಲ್ಯಾಣಿಯಲ್ಲಿನ ಗಿಡಗಂಟೆಗಳು, ಕಲ್ಲು-ಮಣ್ಣು ಎತ್ತಿ ಹಾಕಿ ಸ್ವಚ್ಛತಾ ಕಾರ್ಯ ನಡೆಯಿತು.

    ಜಿಲ್ಲೆಯ ಎಲ್ಲಾ ಕಲ್ಯಾಣಿ-ಪುಷ್ಕರಣಿಗಳನ್ನ ಪತ್ತೆ ಹಚ್ಚುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದು, ಹಂತ ಹಂತವಾಗಿ ಎಲ್ಲಾ ಕಲ್ಯಾಣಿಗಳ ಸ್ವಚ್ಛತಾ ಕಾರ್ಯ ಮಾಡುವುದಾಗಿ ಈ ವೇಳೆ ಅನಿರುದ್ಧ್ ಶ್ರವಣ್ ತಿಳಿಸಿದರು.