Tag: ನಗರಸಭೆ ಸದಸ್ಯ

  • ನೇಹಾ ಹತ್ಯೆ ಖಂಡಿಸಿ ಪ್ರತಿಭಟನೆ – ನಗರಸಭೆ ಸದಸ್ಯ ಅರೆಸ್ಟ್‌

    ನೇಹಾ ಹತ್ಯೆ ಖಂಡಿಸಿ ಪ್ರತಿಭಟನೆ – ನಗರಸಭೆ ಸದಸ್ಯ ಅರೆಸ್ಟ್‌

    ಬೀದರ್: ಹುಬ್ಬಳ್ಳಿಯ ನೇಹಾ (Neha Hiremath) ಹತ್ಯೆ ಖಂಡಿಸಿ ಬೀದರ್‌ನಲ್ಲಿ ಪ್ರತಿಭಟನೆ ಮಾಡುವಾಗ ಗೃಹ ಸಚಿವ ಜಿ.ಪರಮೇಶ್ವರ್, ಪೌರಾಡಳಿತ ಸಚಿವ ರಹೀಂಖಾನ್ ವಿರುದ್ಧ ಅವಾಚ್ಯ ಶಬ್ದಗಳಿಂದ ನಿಂದಿಸಿದ ಆರೋಪದ ಮೇಲೆ ನಗರಸಭೆ ಸದಸ್ಯ ಶಶಿ ಹೊಸಳ್ಳಿ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ.

    ನಗರಸಭೆ ಸದಸ್ಯ ಶಶಿ ಹೊಸಳ್ಳಿ, ಹೋರಾಟಗಾರ ವಿರುಪಾಕ್ಷ ಗಾದಗಿ ವಿರುದ್ಧ ದೂರು ದಾಖಲಾಗಿದೆ. ದೂರು ದಾಖಲಾದ ಹಿನ್ನೆಲೆ ಇಂದು (ಭಾನುವಾರ) ನಗರಸಭೆ ಸದಸ್ಯ ಶಶಿ ಹೊಸಳ್ಳಿ ಅವರನ್ನು ನ್ಯೂಟೌನ್ ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ಇಂದು ಹುಬ್ಬಳ್ಳಿಗೆ ಜೆಪಿ ನಡ್ಡಾ – ನೇಹಾ ಕುಟುಂಬಸ್ಥರ ಭೇಟಿ ಸಾಧ್ಯತೆ

    ಬೀದರ್‌ನಲ್ಲಿರುವ ಶಾಸಕ ಶೈಲೇಂದ್ರ ಬೆಲ್ದಾಳೆ ಅವರ ನಿವಾಸದಲ್ಲಿ ಶಶಿ ಹೊಸಳ್ಳಿಯನ್ನು ಬಂಧಿಸಿ, ಬೀದರ್‌ನ ನ್ಯೂಟೌನ್ ಸಿಪಿಐ ಸಂತೋಷ್ ಜೀಪ್‌ನಲ್ಲಿ ಕರೆದೊಯ್ದಿದ್ದಾರೆ. ಹಳ್ಳದಕೇರಿ (ಕೆ) ಗ್ರಾಮದ ಧನರಾಜ್ ಹಂಗರಗಿ ಎಂಬವರು ಮಾರ್ಕೆಟ್ ಪೊಲೀಸ್‌ ಠಾಣೆಗೆ ದೂರು ನೀಡಿದ್ದು, ಕಲಂ 153B, 504, 505(2) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

    ಶನಿವಾರ ಬಸವೇಶ್ವರ ವೃತ್ತದಲ್ಲಿ ಹಿಂದೂಪರ ಹಾಗೂ ವಿದ್ಯಾರ್ಥಿ ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು. ಕಾಂಗ್ರೆಸ್ ಸರ್ಕಾರ ಬಂದಾಗಿನಿಂದ ಈ ರೀತಿ ಹಿಂದೂ ಸಂಘಟನೆಗಳ ಮೇಲೆ ಅನ್ಯಾಯವಾಗುತ್ತಿದೆ ಎಂದು ಸರ್ಕಾರದ ವಿರುದ್ಧ ಶಾಸಕ ಶೈಲೇಂದ್ರ ಬೆಲ್ದಾಳೆ ಕಿಡಿಕಾರಿದ್ದರು. ಇದನ್ನೂ ಓದಿ: ನೇಹಾ, ಫಯಾಜ್ ಫೋಟೋದೊಂದಿಗೆ ಜಸ್ಟಿಸ್ ಫಾರ್ ಲವ್ ಅಂದ ಯುವಕರು!

  • ಕಾಫಿನಾಡ ನಗರಸಭೆ ಅಧ್ಯಕ್ಷ, ಆಯುಕ್ತರ ಮೇಲೆ ಕೇಸ್ ದಾಖಲು

    ಕಾಫಿನಾಡ ನಗರಸಭೆ ಅಧ್ಯಕ್ಷ, ಆಯುಕ್ತರ ಮೇಲೆ ಕೇಸ್ ದಾಖಲು

    ಚಿಕ್ಕಮಗಳೂರು: ನಗರಸಭೆ ಸದಸ್ಯರೊಬ್ಬರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ ಹಿನ್ನೆಲೆ ನಗರಸಭೆ ಅಧ್ಯಕ್ಷರು ಹಾಗೂ ಆಯುಕ್ತರ ಮೇಲೆ ಪ್ರಕರಣ ದಾಖಲಾಗಿದೆ.

    ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್ ಹಾಗೂ ಆಯುಕ್ತ ಬಸವರಾಜ್ ಮೇಲೆ ದೂರು ದಾಖಲಿಸಲಾಗಿದೆ. ನಗರಸಭೆ ಸದಸ್ಯ ಗೋಪಿ ಅವರನ್ನು ಜಿಲ್ಲೆಯ ನಗರಸಭೆಯ ಅಧಿಕೃತ ವಾಟ್ಸಾಪ್ ಗ್ರೂಪಿನಿಂದ ತೆಗೆದು ಹಾಕಲಾಗಿತ್ತು. ಆ ವಿಚಾರದ ಬಗ್ಗೆ ಹಾಗೂ ತಮ್ಮ ವಾರ್ಡಿನ ಕೆಲಸದ ನಿಮಿತ್ತ ಅಧ್ಯಕ್ಷರ ಬಳಿ ಚರ್ಚಿಸಲು ಹೋಗಿದ್ದರು. ಈ ವೇಳೆ ನಗರಸಭೆ ಆಯುಕ್ತ ಬಸವರಾಜ್ ಕೂಡ ಅಲ್ಲೇ ಇದ್ದರು. ಇದನ್ನೂ ಓದಿ: ಗೋಮಾಂಸವನ್ನು ಹಿಂದೂಗಳು, ಕ್ರಿಶ್ಚಿಯನ್ ಕೂಡ ತಿನ್ನುತ್ತಾರೆ: ಸಿದ್ದರಾಮಯ್ಯ

    ಈ ವೇಳೆ ಅಧ್ಯಕ್ಷರು ಗೋಪಿ ಅವರಿಗೆ ಏನು ಮಾಡಿಕೊಳ್ಳುತ್ತೀಯಾ ಮಾಡಿಕೋ ಎಂದು ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ. ಆಗ ಅಲ್ಲೇ ಇದ್ದ ಆಯುಕ್ತ ಬಸವರಾಜ್ ಕೂಡಾ ನೀನು ಸಿಎಂಸಿ ಗ್ರೂಪಿನಲ್ಲಿ ಇರಲು ಲಾಯಕ್ಕಿಲ್ಲ. ಅದಕ್ಕೆ ತೆಗೆದು ಹಾಕಿದ್ದೇನೆ. ನಿನ್ನ ಕೈಯಲ್ಲಿ ಏನು ಮಾಡಲು ಸಾಧ್ಯ. ಏನು ಬೇಕಾದರು ಮಾಡಿಕೋ ಎಂದು ಅವರೂ ಕೂಡ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ಆರೋಪಿಸಿ ದೂರು ನೀಡಿದ್ದಾರೆ. ಇದನ್ನೂ ಓದಿ: ಮದುವೆ ದಿಬ್ಬಣದಲ್ಲಿ ಟ್ರ್ಯಾಕ್ಟರ್ ಚಾಲಕನಾದ ಶಾಸಕ ರೇಣುಕಾಚಾರ್ಯ

    POLICE JEEP

    ನಗರಸಭೆ ಸದಸ್ಯರ ದೂರಿನ ಅನ್ವಯ ಚಿಕ್ಕಮಗಳೂರು ನಗರ ಠಾಣೆಯಲ್ಲಿ ಅಧ್ಯಕ್ಷ ವೇಣು ಹಾಗೂ ಆಯುಕ್ತ ಬಸವರಾಜ್ ವಿರುದ್ಧ ಕಲಂ 504, (ಉದ್ದೇಶಪೂರ್ವಕ ಅವಮಾನ) 506 (ವಂಚನೆ)ರ ಅಡಿ ಪ್ರಕರಣ ದಾಖಲಾಗಿದೆ.

  • ನಗರಸಭೆ ಸದಸ್ಯನ ಕೊಲೆ ಆರೋಪಿಗಳ ಮೇಲೆ ಪೊಲೀಸರಿಂದ ಫೈರಿಂಗ್

    ನಗರಸಭೆ ಸದಸ್ಯನ ಕೊಲೆ ಆರೋಪಿಗಳ ಮೇಲೆ ಪೊಲೀಸರಿಂದ ಫೈರಿಂಗ್

    – ಪ್ರಕರಣದ ಆರು ಮಂದಿ ಅರೆಸ್ಟ್

    ರಾಯಚೂರು: ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಯಾಗುತ್ತಿದ್ದ ಇಬ್ಬರು ಕೊಲೆ ಆರೋಪಿಗಳ ಮೇಲೆ ರಾಯಚೂರು ಪೊಲೀಸರು ಗುಂಡಿನ ದಾಳಿ ನಡೆಸಿ ಬಂಧಿಸಿದ್ದಾರೆ. ಇದನ್ನೂ ಓದಿ: ರಾಯಚೂರಿನ ನಡುರಸ್ತೆಯಲ್ಲಿ ನಗರಸಭೆ ಸದಸ್ಯನ ಭೀಕರ ಕೊಲೆ

    ಸೋಮವಾರ ರಾತ್ರಿ 9 ಗಂಟೆಗೆ ರಾಯಚೂರಿನ ಜಾಕೀರ್ ಹುಸೇನ್ ವೃತ್ತದಲ್ಲಿ ನಗರಸಭೆ ಜೆಡಿಎಸ್ ಸದಸ್ಯ ಮಕ್ಬೂಲ್ ಕೊಲೆ ಮಾಡಲಾಗಿತ್ತು. ಇದೀಗ ಪ್ರಕರಣದ ಆರು ಜನ ಆರೋಪಿಗಳನ್ನ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಅಜ್ಜು ಅಲಿಯಾಸ್ ಅಜಮುದ್ದೀನ್, ರಿಯಾಜ್, ಮೊಹಮದ್ ಯಾಸಿನ್, ಅಪಸರ್, ಕಾಶಿನಾಥ್ ಮತ್ತು ನಗರಸಭೆ ಮಾಜಿ ಸದಸ್ಯ ಗೋರಾ ಮಾಸುಂ ಎಂದು ಗುರುತಿಸಲಾಗಿದೆ.

    ಕೊಲೆಗೆ ಬಳಸಿದ ಮಾರಕಾಸ್ತ್ರಗಳನ್ನ ವಶಪಡಿಸಿಕೊಳ್ಳುವ ವೇಳೆ ಅಜ್ಜು ಅಲಿಯಾಸ್ ಅಜಮುದ್ದೀನ್ ಮತ್ತು ರಿಯಾಜ್ ಅದೇ ಆಯುಧಗಳಿಂದ ಪೊಲೀಸರ ಮೇಲೆ ದಾಳಿಗೆ ಮುಂದಾಗಿದ್ದಾರೆ. ಈ ವೇಳೆ ಆರೋಪಿಗಳ ಕಾಲಿಗೆ ಗುಂಡು ಹಾರಿಸಲಾಗಿದೆ. ಈ ಘಟನೆಯಲ್ಲಿ ಪೊಲೀಸ್ ಪೇದೆಗಳಾದ ಯಲ್ಲಪ್ಪ, ಚಂದ್ರಕಾಂತ್‍ಗೆ ಗಾಯಗಳಾಗಿದ್ದು, ಗಾಯಾಳುಗಳನ್ನ ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಕೊಲೆ, ಕೊಲೆ ಬೆದರಿಕೆ ಸೇರಿ 20ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಭಾಗಿಯಾಗಿರುವ ರೌಡಿಶೀಟರ್ ನಗರಸಭೆ ಮಾಜಿ ಸದಸ್ಯ ಗೋರಾ ಮಾಸುಂ ಪ್ರಮುಖ ಆರೋಪಿಯಾಗಿದ್ದಾನೆ. ರಿಯಾಜ್ ಹಾಗೂ ಅಜ್ಜು ಸಹ ರೌಡಿಶೀಟರ್‌ಗಳಾಗಿದ್ದು, ಹಲವಾರು ಪ್ರಕರಣಗಳನ್ನ ಎದುರಿಸುತ್ತಿದ್ದಾರೆ. ಮೊಹಮದ್ ಯಾಸಿನ್, ಅಪಸರ್ ಹಾಗೂ ಕಾಶಿನಾಥ್ ಸೇರಿ ಒಟ್ಟು ಆರು ಜನ ಆರೋಪಿಗಳು ಸೆರೆ ಸಿಕ್ಕಿದ್ದಾರೆ.

    ಏಳು ತಿಂಗಳ ಹಿಂದೆ ನಗರಸಭೆ ಸದಸ್ಯ ಮಕ್ಬೂಲ್ ಸಹೋದರನ ಕೊಲೆಯಾಗಿತ್ತು. ಆ ಪ್ರಕರಣದಲ್ಲಿ ಗೋರಾ ಮಾಸುಂ ಬಂಧನವಾಗಿರಲಿಲ್ಲ. ಹೀಗಾಗಿ ಗೋರಾ ಮಾಸುಂ ಪ್ರಮುಖ ಆರೋಪಿ ಅವನನ್ನ ಬಂಧಿಸುವಂತೆ ಮಕ್ಬೂಲ್ ಓಡಾಡುತ್ತಿದ್ದ. ಇದೇ ದ್ವೇಷಕ್ಕೆ ಈ ಆರು ಜನ ಮಕ್ಬೂಲ್‍ನನ್ನ ಕೊಲೆ ಮಾಡಿದ್ದಾರೆ. ಅಲ್ಲದೇ ಹಳೆ ವೈಷಮ್ಯ ಸಹ ಕೊಲೆ ಕಾರಣವಾಗಿದೆ ಅಂತ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಕಾಶ್ ನಿಕಮ್ ತಿಳಿಸಿದ್ದಾರೆ.

  • ಅಕ್ರಮ ಮದ್ಯ ಮಾರಾಟ- ನಗರ ಸಭೆ ಜೆಡಿಎಸ್ ಸದಸ್ಯನ ಬಂಧನ

    ಅಕ್ರಮ ಮದ್ಯ ಮಾರಾಟ- ನಗರ ಸಭೆ ಜೆಡಿಎಸ್ ಸದಸ್ಯನ ಬಂಧನ

    ಮಂಡ್ಯ: ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಮಂಡ್ಯದ ನಗರಸಭೆ ಜೆಡಿಎಸ್ ಸದಸ್ಯ ಪೊಲೀಸ ಅತಿಥಿಯಾಗಿದ್ದು, ನಗರದ 12ನೇ ವಾರ್ಡ್‍ನ ನಗರ ಸಭೆಯ ಜೆಡಿಎಸ್ ಸದಸ್ಯ ಭರತೇಶ್ ಬಂಧಿತ ಆರೋಪಿಯಾಗಿದ್ದಾನೆ.

    ಮಂಡ್ಯ ತಾಲೂಕಿನ ಕೊಮ್ಮೇರಹಳ್ಳಿ ಗ್ರಾಮದ ಬಳಿ ಭರತೇಶ್ ಅಕ್ರಮ ಮದ್ಯ ಮಾರಾಟದ ಜೊತೆಗೆ ಜೂಜಾಟ ನಡೆಸುತ್ತಿದ್ದ ಎಂಬ ದೂರುಗಳು ಹಲವು ದಿನಗಳಿಂದ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ಬರುತ್ತಿದ್ದವು. ಈ ಹಿನ್ನೆಲೆಯಲ್ಲಿ ಇಂದು ಎಎಸ್‍ಪಿ ಕೆ.ಪರಶುರಾಮ್ ಅವರ ಸೂಚನೆ ಮೇರಗೆ ಪೊಲೀಸರು ಕೊಮ್ಮೇರಹಳ್ಳಿಗೆ ತೆರಳಿ ಪರಿಶೀಲನೆ ನಡೆಸಿದ್ದಾರೆ.

    ಪೊಲೀಸ್ ಪರಿಶೀಲನೆ ವೇಳೆ ಭರತೇಶ್ ಅಕ್ರಮ ಮದ್ಯ ಮಾರಟ ಮಾಡುತ್ತಿದ್ದು ಕಂಡುಬಂದಿದೆ. ಸ್ಥಳದಲ್ಲೇ ಪೊಲೀಸರು ಆತನನ್ನು ಬಂಧಿಸಿದ್ದಾರೆ. ಸದ್ಯ ಭರತೇಶ್‍ನನ್ನು ನ್ಯಾಯಾಂಗ ವಶಕ್ಕೆ ನೀಡಿದ್ದಾರೆ. ಈ ಬಗ್ಗೆ ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಉಡುಪಿ ಬಿಜೆಪಿ ಮುಖಂಡನಿಂದ ನಗರಸಭೆ ಅಧಿಕಾರಿಗೆ ಗೂಸಾ

    ಉಡುಪಿ ಬಿಜೆಪಿ ಮುಖಂಡನಿಂದ ನಗರಸಭೆ ಅಧಿಕಾರಿಗೆ ಗೂಸಾ

    ಉಡುಪಿ: ಬಿಜೆಪಿ ನಗರಸಭೆ ಸದಸ್ಯ ಯೋಗೀಶ್ ಸಾಲ್ಯಾನ್, ಕಿರಿಯ ಆರೋಗ್ಯ ನಿರೀಕ್ಷಕನ ಮೇಲೆ ಹಲ್ಲೆ ಮಾಡಿರುವ ಘಟನೆ ಉಡುಪಿಯಲ್ಲಿ ನಡೆದಿದೆ.

    ನಗರಸಭೆ ಕಚೇರಿಯೊಳಗೇ ಈ ಘಟನೆ ನಡೆದಿದ್ದು, ಆರೋಗ್ಯ ನಿರೀಕ್ಷಕರ ಮುಖ, ಕಣ್ಣಿಗೆ ತೀವ್ರ ಗಾಯಗಳಾಗಿವೆ. ಹಲ್ಲೆಗೊಳಗಾದ ಆರೋಗ್ಯ ನಿರೀಕ್ಷರನ್ನು ಉಡುಪಿಯ ಅಜ್ಜರಕಾಡು ಸರಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

    ನಗರಸಭೆಯ ವಡಭಾಂಡೇಶ್ವರ ವಾರ್ಡ್ ನಲ್ಲಿ ನಿನ್ನೆ ರಾತ್ರಿ ಮರ ಬಿದ್ದಿದ್ದು, ಅದನ್ನು ತೆರವು ಗೊಳಿಸುವಂತೆ ವಾರ್ಡ್ ನ ಬಿಜೆಪಿಯ ಸದಸ್ಯ ಯೋಗೀಶ್ ಸಾಲ್ಯಾನ್ ಆರೋಗ್ಯ ನಿರೀಕ್ಷಕ ಪ್ರಸನ್ನ ರವರಿಗೆ ಫೋನ್ ಮೂಲಕ ತಿಳಿಸಿದ್ದರು. ಇಂದು ಬೆಳಿಗಿನವರೆಗೆ ಅದನ್ನ ತೆರವುಗೊಳಿಸದ ಕಾರಣ ಬೆಳಗ್ಗೆ ನಗರ ಸಭೆಯಲ್ಲಿದ್ದ ಪ್ರಸನ್ನರ ಕಚೇರಿಗೆ ಬಂದ ಯೋಗೀಶ್ ಈ ವಿಚಾರದ ಬಗ್ಗೆ ಪ್ರಶ್ನೆ ಕೇಳಿದ್ದಾರೆ.

    ರಸ್ತೆಯಲ್ಲಿ ಮರ, ಕಲ್ಲುಗಳಿದ್ದು ಸಂಚಾರಕ್ಕೆ ಸಮಸ್ಯೆಯಾಗಿದೆ ಎನ್ನುತ್ತಾ, ಏಕಾಏಕಿ ಮುಖಕ್ಕೆ ಪಂಚ್ ಕೊಟ್ಟಿದ್ದಾರೆ. ಕಡಗವಿದ್ದ ಕೈಯ್ಯಲ್ಲಿ ಹಲ್ಲೆ ಮಾಡಿರುವುದರಿಂದ ಅಧಿಕಾರಿ ಪ್ರಸನ್ನರ ಹಣೆ ಮತ್ತು ಬಲ ಕಣ್ಣಿಗೆ ಪೆಟ್ಟು ಬಿದ್ದಿದೆ. ಬಿಜೆಪಿ ಹಾಗೂ ಕಾಂಗ್ರೆಸ್ ನಗರಸಭಾ ಸದಸ್ಯರು ಆಸ್ಪತ್ರೆಗೆ ಭೇಟಿ ನೀಡಿ ಅರೋಗ್ಯ ವಿಚಾರಿಸಿದ್ದಾರೆ. ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ್ ಹೆಗ್ಡೆ ಭೇಟಿ ಕೊಟ್ಟು ಮಾಹಿತಿ ಪಡೆದುಕೊಂಡಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಮಟ್ಟಾರು ರತ್ನಾಕರ ಹೆಗ್ಡೆ, ನಮ್ಮ ಸದಸ್ಯನಿಂದ ತಪ್ಪಾಗಿದ್ದರೆ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ತಪ್ಪು ಸಾಬೀತಾದರೆ ನಮ್ಮ ಸದಸ್ಯನನ್ನು ರಕ್ಷಿಸುವ ಪ್ರಶ್ನೆಯೇ ಇಲ್ಲ. ಸಂಜೆ ಕಚೇರಿಯಲ್ಲಿ ಸಭೆ ಕರೆಯಲಾಗಿದೆ. ಮಾಹಿತಿ ಪಡೆದುಕೊಂಡು ಶಿಸ್ತು ಕ್ರಮ ಕೈಗೊಳ್ಳುವುದಾಗಿ ಹೇಳಿದರು.

    ಬಿಜೆಪಿ ಸಂಸದರು, ಶಾಸಕರು ಹಾಗೂ ನಾಯಕರ ಅಸಭ್ಯ ಹಾಗೂ ಗೂಂಡಾ ವರ್ತನೆಗೆ ಬೇಸತ್ತು ಪ್ರಧಾನಿ ಮೋದಿ ಫುಲ್ ಕ್ಲಾಸ್ ತೆಗೆದುಕೊಳ್ಳುತ್ತಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿ ವಾರ ನಡೆಯುವ ಬಿಜೆಪಿ ಸಂಸದೀಯ ಪಕ್ಷದ ಸಭೆಯಲ್ಲಿ ಎಲ್ಲ ಸಂಸದರು ಹಾಗೂ ನಾಯಕರನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ. ಅಧಿಕಾರಿಗಳ ಮೇಲೆ ಯಾವುದೇ ದರ್ಪ ತೋರಬೇಡಿ, ರೌಡಿಗಳಂತೆ ವರ್ತಿಸಬೇಡಿ. ಜನಪ್ರತಿನಿಧಿಗಳು ಶಿಸ್ತು ಕಾಪಾಡಿಕೊಳ್ಳುವ ಮೂಲಕ ಜನಸಾಮಾನ್ಯರಿಗೆ ಮಾದರಿಯಾಗಬೇಕು ಎಂದು ಸಲಹೆ ನೀಡುತ್ತಿದ್ದಾರೆ.

    ಇತ್ತೀಚೆಗೆ ಮಧ್ಯಪ್ರದೇಶದಲ್ಲಿ ಶಾಸಕ ಆಕಾಶ್ ವಿಜಯ್‍ವರ್ಗಿಯಾ ಕೆಳ ಹಂತದ ಅಧಿಕಾರಿ ಮೇಲೆ ಕ್ರಿಕೆಟ್ ಬ್ಯಾಟ್‍ನಿಂದ ಹಲ್ಲೆ ಮಾಡಿದ್ದಕ್ಕೆ ಪ್ರಧಾನಿ ಮೋದಿ ಆಕ್ರೋಶ ವ್ಯಕ್ತಪಡಿಸಿದ್ದರು. ಅಲ್ಲದೆ, ಯಾವ ನಾಯಕನ ಮಗನಾಗಿದ್ದರೂ ಪಕ್ಷದಿಂದ ಹೊರಗೆ ಹಾಕಿ ಎಂದು ಸೂಚಿಸಿದ್ದರು.

  • ಚಿತ್ರದುರ್ಗದ ಜೆಡಿಎಸ್ ನಗರಸಭೆ ಸದಸ್ಯ ಗಡಿಪಾರು

    ಚಿತ್ರದುರ್ಗದ ಜೆಡಿಎಸ್ ನಗರಸಭೆ ಸದಸ್ಯ ಗಡಿಪಾರು

    ಚಿತ್ರದುರ್ಗ: ವಿವಿಧ ಕೇಸ್‍ಗಳಲ್ಲಿ ಭಾಗಿಯಾಗಿದ್ದ ಚಿತ್ರದುರ್ಗದ ಜೆಡಿಎಸ್ ನಗರಸಭೆ ಸದಸ್ಯ ಚಂದ್ರಶೇಖರ ಅಲಿಯಾಸ್ ಖೋಟಾನೋಟು ಚಂದ್ರನನ್ನು ಗಡಿಪಾರು ಮಾಡಲಾಗಿದೆ.

    ಚಿತ್ರದುರ್ಗದ ವಾರ್ಡ್ ಸಂಖ್ಯೆ 4ರ ಜೆಡಿಎಸ್ ಸದಸ್ಯನಾಗಿರುವ ಚಂದ್ರ ಖೋಟಾ ನೋಟು ಪ್ರಕರಣ ಸೇರಿದಂತೆ ಹಣ ದ್ವಿಗುಣಗೊಳಿಸುವ ಪ್ರಕರಣ ಹಾಗೂ ವಿವಿಧ ವಂಚನೆ ಪ್ರಕರಣಗಳಲ್ಲಿ ಭಾಗಿಯಾಗಿದ್ದನು. ಅಷ್ಟೇ ಅಲ್ಲದೆ ನಗರದಲ್ಲಿ ಅಶಾಂತಿ ನಿರ್ಮಾಣಕ್ಕೆ ಕಾರಣನಾಗಿದ್ದನು.

    ಹೀಗಾಗಿ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯಬಾರದೆಂದು ಮುನ್ನೆಚ್ಚರಿಕಾ ಕ್ರಮವಾಗಿ ಗಡಿಪಾರು ಮಾಡಲಾಗಿದೆ. ಮಾರ್ಚ್ 21 ರಿಂದ ಮೇ 21ರವರೆಗೆ 2 ತಿಂಗಳ ಕಾಲ ಜಿಲ್ಲೆಯಿಂದ ಗಡಿಪಾರುಗೊಳಿಸಲಾಗಿದೆ. ಚಿತ್ರದುರ್ಗ ಜಿಲ್ಲಾಧಿಕಾರಿ ವಿನೋತ್ ಪ್ರಿಯಾ ಅವರು ಈ ಆದೇಶ ಹೊರಡಿಸಿದ್ದಾರೆ.

  • ಅಂಬೇಡ್ಕರ್ ಭವನದಲ್ಲಿ ಗುಂಡಿನ ಪಾರ್ಟಿ – ಗಲಾಟೆ ಮಧ್ಯೆ ಗನ್ ತೋರಿಸಿದ ಕೌನ್ಸಿಲರ್ ಬೆಂಬಲಿಗ

    ಅಂಬೇಡ್ಕರ್ ಭವನದಲ್ಲಿ ಗುಂಡಿನ ಪಾರ್ಟಿ – ಗಲಾಟೆ ಮಧ್ಯೆ ಗನ್ ತೋರಿಸಿದ ಕೌನ್ಸಿಲರ್ ಬೆಂಬಲಿಗ

    ಮಡಿಕೇರಿ: ನಾಮಕರಣ ನಡೆಯುತ್ತಿದ್ದ ಹಾಲ್‍ಗೆ ನುಗ್ಗಿ ಮಡಿಕೇರಿ ನಗರಸಭೆ ಕೌನ್ಸಿಲರ್ ಹಾಗೂ ಅವರ ಬೆಂಬಲಿಗರು ಗನ್ ತೋರಿಸಿ ದಾಂಧಲೆ ನಡೆಸಿರುವ ಘಟನೆ ಮಡಿಕೇರಿಯಲ್ಲಿ ನಡೆದಿದೆ.

    ಮಡಿಕೇರಿಯ ಅಂಬೇಡ್ಕರ್ ಭವನದಲ್ಲಿ ನಾಮಕರಣ ಸಮಾರಂಭವೊಂದು ನಡೆಯುತ್ತಿತ್ತು. ನಗರಸಭೆ ಕೌನ್ಸಿಲರ್ ವೀಣಾಕ್ಷಿ ಹಾಗೂ ಸಮಾರಂಭದಲ್ಲಿ ಮದ್ಯಪಾನ ಮಾಡುತ್ತಿದ್ದ ಹುಡುಗರ ನಡುವೆ ಘರ್ಷಣೆ ಏರ್ಪಟ್ಟಿದ್ದು, ಈ ಸಂದರ್ಭ ಅಲ್ಲಿಗೆ ಬಂದ ವೀಣಾಕ್ಷಿ ಬೆಂಬಲಿಗನೊಬ್ಬ ಗನ್ ತೋರಿಸಿ ಬೆದರಿಸಿದ್ದಾನೆ.

    ಸಮಾರಂಭದಲ್ಲಿ ಕಟ್ಟಡದ ಮೊದಲ ಅಂತಸ್ತಿನಲ್ಲಿ ಕುಳಿತು ಮದ್ಯಪಾನ ಮಾಡುತ್ತಿದ್ದ ಯುವಕರ ಗುಂಪೊಂದು ಅಲ್ಲಿಂದ ಗ್ಲಾಸ್ ಹಾಗೂ ಬಾಟಲಿಗಳನ್ನು ಕೆಳಕ್ಕೆ ಬೀಳಿಸಿದ್ದಾರೆ. ಅದೇ ಕಟ್ಟಡದಲ್ಲಿ ಅಂಗಡಿ ನಡೆಸುತ್ತಿರುವ ನಗರಸಭೆ ಸದಸ್ಯೆ ವೀಣಾಕ್ಷಿ ಇದನ್ನು ಪ್ರಶ್ನಿಸಿದಾಗ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ.

    ಈ ಸಂದರ್ಭ ವೀಣಾಕ್ಷಿ ಹಾಗೂ ಅದೇ ಬಡಾವಣೆಯ ಯುವಕರು ಹಾಲ್‍ಗೆ ನುಗ್ಗಿದ್ದು, ಎರಡು ಗುಂಪುಗಳ ನಡುವೆ ಘರ್ಷಣೆ ನಡೆದಿದೆ. ಆಗ ಏಕಾ ಏಕಿ ಬಂದ ವೀಣಾಕ್ಷಿ ಬೆಂಬಲಿಗ ಎಂದು ಹೇಳಲಾಗುತ್ತಿರುವ ಯುವಕನೊಬ್ಬ ತನ್ನ ಕಾರ್‍ನಿಂದ ಬಂದೂಕು ತಂದು ಅಲ್ಲಿದ್ದವರನ್ನ ಬೆದರಿಸಿದ್ದಾನೆ.