ತೆಲಂಗಾಣ: ತಹಶೀಲ್ದಾರ್ ಅಥವಾ ಮಂಡಲ್ ಕಂದಾಯ ಅಧಿಕಾರಿ(ಎಂಆರ್‍ಓ) ಮನೆ ಮೇಲೆ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ) ದಾಳಿ ನಡೆಸಿ ಬರೋಬ್ಬರಿ 93.5 ಲಕ್ಷ ರೂ ನಗದು, 400 ಗ್ರಾಂ ಚಿನ್ನಾಭರಣವನ್ನು ಜಪ್ತಿ ಮಾಡಿದೆ.
ರಂಗ ರೆಡ್ಡಿ ಜಿಲ್ಲೆಯ ತಹಶೀಲ್ದಾರ್ ಲಾವಣ್ಯ ಅವರ ನಿವಾಸದ ಮೇಲೆ ಬುಧವಾರ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದರು. ಗ್ರಾಮ ಕಂದಾಯ ಅಧಿಕಾರಿ(ವಿಆರ್‍ಓ) ಅಂತಯ್ಯ ಅವರು ರೈತರಾಗಿರುವ ಭಾಸ್ಕರ್ ಅವರ ಬಳಿ ಜಮೀನಿನ ದಾಖಲೆಗಳನ್ನು ಸರಿಪಡಿಸಲು 4 ಲಕ್ಷ ರೂ ಲಂಚ ತೆಗೆದುಕೊಳ್ಳುತ್ತಿದ್ದರು. ಈ ವೇಳೆ ಎಸಿಬಿ ಬಲೆಗೆ ಅಧಿಕಾರಿ ಸಿಕ್ಕಿಬಿದ್ದಿದ್ದರು. ಈ ವಿಚಾರ ತಿಳಿಯುತ್ತಿದ್ದಂತೆಯೇ ತಹಶೀಲ್ದಾರ್ ಲಾವಣ್ಯ ಅವರ ಮನೆ ಮೇಲೆ ಎಸಿಬಿ ದಾಳಿ ನಡೆಸಿದೆ.

ಜಮೀನಿನ ದಾಖಲೆಗಳನ್ನು ಸರಿಪಡಿಬೇಕಾದರೆ 8 ಲಕ್ಷ ಹಣ ನೀಡಬೇಕು ಎಂದು ರೈತನ ಬಳಿ ಅಧಿಕಾರಿಗಳು ಕೇಳಿದ್ದರು. ಅದರಲ್ಲಿ 5 ಲಕ್ಷ ಎಂಆರ್‍ಓ ಗೆ ಹಾಗೂ ಉಳಿದ 3 ಲಕ್ಷ ವಿಆರ್‍ಓಗೆ ನೀಡಬೇಕು ಎಂದು ಬೇಡಿಕೆ ಇಡಲಾಗಿತ್ತು.

ಬಳಿಕ ರೈತ ಹಣವನ್ನು ತಂದಿರುವ ಬಗ್ಗೆ ವಿಆರ್‍ಓ ಅವರು ಎಂಆರ್‍ಓ ಅವರಿಗೆ ಮಾಹಿತಿ ತಿಳಿಸಿದ್ದಾರೆ. ಈ ಬಗ್ಗೆ ಮಾಹಿತಿ ತಿಳಿದ ಎಸಿಬಿ ಅಧಿಕಾರಿಗಳು ಲಾವಣ್ಯ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ ಎನ್ನಲಾಗಿದೆ. ಅಷ್ಟೇ ಅಲ್ಲದೆ ತಮ್ಮ ಮನೆಯ ಮೇಲೆ ಎಸಿಬಿ ದಾಳಿ ಮಾಡಿರುವ ಆರೋಪವನ್ನು ಲಾವಣ್ಯ ಅವರು ನಿರಾಕರಿಸಿದ್ದಾರೆ.

ಇತ್ತೀಚೆಗೆ ರೈತ, ಲಾವಣ್ಯ ಅವರ ಕಾಲಿಗೆ ಬಿದ್ದು, ತನ್ನ ಜಮೀನಿನ ದಾಖಲೆಗಳನ್ನು ಸರಿಪಡಿಸಿಕೊಡಿ ಎನ್ನುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳನ್ನು ಭಾರೀ ವೈರಲ್ ಆಗಿತ್ತು. ಅಲ್ಲದೆ ರೈತನ ಪಾಸ್ ಬುಕ್ ನೀಡಲು ಅವರ ಬಳಿ ವಿಆರ್‍ಓ 30 ಸಾವಿರ ಹಣ ಪಡೆದಿದ್ದಾರೆ ಎನ್ನುವ ಆರೋಪ ಕೂಡ ಅಧಿಕಾರಿಗಳ ಮೇಲೆ ಕೇಳಿಬಂದಿದೆ.

ಜಮೀನಿನ ದಾಖಲೆಗಳನ್ನು ಸರಿಪಡಿಸಿಕೊಡಲು ಈ ಇಬ್ಬರು ಅಧಿಕಾರಿಗಳು ತಮ್ಮ ಬಳಿ ಹಣದ ಬೇಡಿಕೆ ಇಟ್ಟಿದ್ದಾರೆ ಎಂದು ರೈತ ಎಸಿಬಿ ಅಧಿಕಾರಿಗಳಿಗೆ ತಿಳಿಸಿದ್ದಾರೆ.
ಕಳೆದ ಎರಡು ವರ್ಷಗಳ ಹಿಂದೆ ಲಾವಣ್ಯ ಅವರಿಗೆ ಅತ್ಯುತ್ತಮ ತಹಶೀಲ್ದಾರ್ ಪ್ರಶಸ್ತಿಯನ್ನು ನೀಡಿ ತೆಲಂಗಾಣ ಸರ್ಕಾರ ಗೌರವಿಸಿತ್ತು. ಆದರೆ ಈ ಭ್ರಷ್ಟಾಚಾರದ ಆರೋಪ ಲಾವಣ್ಯ ಅವರ ವೃತ್ತಿ ಬದುಕಿಗೆ ಕಪ್ಪು ಚುಕ್ಕೆ ಇಟ್ಟಂತಾಗಿದೆ.