Tag: ನಕ್ಸಲ್ ದಾಳಿ

  • ನಮ್ಮ ಸೈನಿಕರ ತ್ಯಾಗ ವ್ಯರ್ಥವಾಗಲ್ಲ, 2026ರ ಒಳಗೆ ನಕ್ಸಲಿಸಂ ಕೊನೆಗೊಳಿಸುತ್ತೇವೆ: ಮತ್ತೆ ಶಾ ಶಪಥ

    ನಮ್ಮ ಸೈನಿಕರ ತ್ಯಾಗ ವ್ಯರ್ಥವಾಗಲ್ಲ, 2026ರ ಒಳಗೆ ನಕ್ಸಲಿಸಂ ಕೊನೆಗೊಳಿಸುತ್ತೇವೆ: ಮತ್ತೆ ಶಾ ಶಪಥ

    – ನಕ್ಸಲರ ದಾಳಿಗೆ ಛತ್ತೀಸ್‌ಗಢ ಮುಖ್ಯಮಂತ್ರಿ ತೀವ್ರ ಖಂಡನೆ

    ನವದೆಹಲಿ: ಭದ್ರತಾ ಸಿಬ್ಬಂದಿಯಿದ್ದ ವಾಹನವನ್ನು ನಕ್ಸಲರು (Naxals) ಐಇಡಿ (ಸುಧಾರಿತ ಸ್ಫೋಟಕ ಸಾಧನ) ಬಳಸಿ ಸ್ಫೋಟಿಸಿದ ಘಟನೆ ಛತ್ತೀಸ್‌ಗಢ ಬಿಜಾಪುರ ಜಿಲ್ಲೆಯ ಬೇದ್ರೆ-ಕುತ್ರು ರಸ್ತೆಯಲ್ಲಿ ನಡೆದಿದೆ. ಘಟನೆಯಲ್ಲಿ 8 ಡಿಆರ್‌ಜಿ ಜವಾನರು, ಓರ್ವ ಚಾಲಕ ಮೃತಪಟ್ಟಿದ್ದಾರೆ. ಕಳೆದ 2 ವರ್ಷಗಳಲ್ಲಿ ಇದು ಅತಿದೊಡ್ಡ ನಕ್ಸಲ್‌ ದಾಳಿ ಎಂದು ವರದಿಗಳು ತಿಳಿಸಿವೆ. ನಕ್ಸಲರ ಈ ದಾಳಿಯನ್ನು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹಾಗೂ ಛತ್ತೀಸ್‌ಗಢ ಮುಖ್ಯಮಂತ್ರಿ ವಿಷ್ಣು ದೇವ್ ಸಾಯಿ ತೀವ್ರವಾಗಿ ಖಂಡಿಸಿದ್ದಾರೆ.

    ಈ ಕುರಿತು ಎಕ್ಸ್‌ನಲ್ಲಿ ಬರೆದುಕೊಂಡಿರುವ ಅಮಿತ್‌ ಶಾ ಅವರು, ಮಾರ್ಚ್ 2026 ರೊಳಗೆ ಭಾರತದಿಂದ ನಕ್ಸಲಿಸಂ ಅನ್ನು ಕೊನೆಗೊಳಿಸುವುದಾಗಿ ಮತ್ತೊಮ್ಮೆ ಪ್ರತಿಜ್ಞೆ ಮಾಡಿದ್ದಾರೆ.

    ಬಿಜಾಪುರದಲ್ಲಿ (ಛತ್ತೀಸ್‌ಗಢ) ಐಇಡಿ ಸ್ಫೋಟದಲ್ಲಿ ಡಿಆರ್‌ಜಿ ಯೋಧರನ್ನು ಕಳೆದುಕೊಂಡ ಸುದ್ದಿಯಿಂದ ನಾನು ತೀವ್ರ ದುಃಖಿತನಾಗಿದ್ದೇನೆ. ವೀರ ಯೋಧರ ಕುಟುಂಬಗಳಿಗೆ ನಾನು ನನ್ನ ಆಳವಾದ ಸಂತಾಪ ತಿಳಿಸುತ್ತೇನೆ. ಈ ದುಃಖವನ್ನು ಪದಗಳಲ್ಲಿ ಹೇಳಲು ಅಸಾಧ್ಯ, ಆದರೆ ನಾನು ಭರವಸೆ ನೀಡುತ್ತೇನೆ. ನಮ್ಮ ಸೈನಿಕರ ತ್ಯಾಗ ವ್ಯರ್ಥವಾಗುವುದಿಲ್ಲ. ಮಾರ್ಚ್ 2026ರ ಒಳಗೆ ನಕ್ಸಲಿಸಂ ಅನ್ನು ಭಾರತದಿಂದ ಕೊನೆಗೊಳಿಸುತ್ತೇವೆ ಎಂದು ಶಪಥ ಮಾಡಿದ್ದಾರೆ.

    ಅಲ್ಲದೇ ಛತ್ತೀಸ್‌ಗಢ ಸಿಎಂ ಕೂಡ ಈ ದಾಳಿಯನ್ನು ಖಂಡಿಸಿ‌ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ. ಸರ್ಕಾರದ ನಕ್ಸಲ್‌ ನಿರ್ಮೂಲನಾ ಯೋಜನೆಯಿಂದ ನಕ್ಸಲಿಗರು ಹತಾಶರಾಗಿದ್ದಾರೆ. ಹತಾಶೆಯಿಂದ ಈ ಹೇಡಿತನದ ಕೃತ್ಯ ಎಸಗಿದ್ದಾರೆ. ನಮ್ಮ ಯೋಧರ ಬಲಿದಾನ ವ್ಯರ್ಥವಾಗಲ್ಲ. ನಕ್ಸಲಿಸಂ ಅಂತ್ಯಗೊಳಿಸುವ ಹೋರಾಟ ಮುಂದುವರಿಯಲಿದೆ ಎಂದು ಎಚ್ಚರಿಕೆ ಕೊಟ್ಟಿದ್ದಾರೆ.

  • ನಕ್ಸಲ್ ದಾಳಿ: ಯೋಧರ ಬಲಿದಾನ ವ್ಯರ್ಥವಾಗಲು ಬಿಡಲ್ಲ-ಮೋದಿ

    ನಕ್ಸಲ್ ದಾಳಿ: ಯೋಧರ ಬಲಿದಾನ ವ್ಯರ್ಥವಾಗಲು ಬಿಡಲ್ಲ-ಮೋದಿ

    ರಾಯ್ಪುರ: ಛತ್ತಿಸ್‍ಗಢದ ದಂತೇವಾಡಾದ ಬಳಿ ಬಿಜೆಪಿ ನಾಯಕರು ತೆರೆಳುತ್ತಿದ್ದ ಬೆಂಗಾವಲು ವಾಹನದ ಮೇಲೆ ನಕ್ಸಲರು ಸುಧಾರಿತ ಸ್ಫೋಟಕ ಬಳಸಿ ಮಾಡಿದ ದಾಳಿಯನ್ನು ಪ್ರಧಾನಿ ಮೋದಿ ಖಂಡಿಸಿದ್ದಾರೆ.

    ಘಟನೆಯ ಕುರಿತು ಟ್ವೀಟ್ ಮಾಡಿದ ಪ್ರಧಾನಿ, ಛತ್ತೀಸ್‍ಗಢದಲ್ಲಿ ಮಾವೋವಾದಿಗಳು ನಡೆಸಿದ ದಾಳಿಯನ್ನು ಬಲವಾಗಿ ಖಂಡಿಸುತ್ತೇನೆ. ವೀರ ಮರಣವಪ್ಪಿದ ಸೈನಿಕರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ. ವೀರ ಯೋಧರ ಬಲಿದಾನವನ್ನು ಯಾವುದೇ ಕಾರಣಕ್ಕೂ ವ್ಯರ್ಥವಾಗಲು ಬಿಡಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ದಾಳಿಯ ಕುರಿತು ಪ್ರತಿಕ್ರಿಯಿಸಿರುವ ನಕ್ಸಲ್ ವಿರೋಧಿ ಕಾರ್ಯಾಚರಣೆಯ ಡಿಐಜಿ ಪಿ.ಸುಂದರ್ ರಾಜ್, ದಂತೇವಾಡ ಜಿಲ್ಲೆಯ ಕುವಾಂಕೋಡ ಇಲಾಖೆಯಲ್ಲಿ ದಾಳಿ ನಡೆದಿದೆ. ನಕ್ಸಲರು ದಾಳಿಯಲ್ಲಿ ಶಾಸಕರ ವಾಹನದೊಂದಿಗೆ ಭದ್ರತಾ ಸಿಬ್ಬಂದಿಯ ವಾಹನವನ್ನು ಗುರಿಯಾಗಿಸಿಕೊಂಡಿದ್ದರು. ಈ ದಾಳಿಯಲ್ಲಿ ಚಾಲಕ ಮತ್ತು ಮೂವರು ಸೈನಿಕರು ಹುತಾತ್ಮರಾಗಿದ್ದಾರೆ ಎಂದು ತಿಳಿಸಿದ್ದಾರೆ.

    ದಾಳಿಯ ಬೆನ್ನಲ್ಲೆ ದಂತೇವಾಡ ಕ್ಷೇತ್ರದಲ್ಲಿ ಹೆಚ್ಚಿನ ಸಂಖ್ಯೆಯ ಸಿಆರ್ ಪಿಎಫ್ ಮತ್ತು ಪೊಲೀಸ್ ತಂಡಗಳನ್ನು ನೇಮಿಸಲಾಗಿದೆ. ದಾಳಿ ನಡೆದ ಸುತ್ತಲಿನ ಪರಿಸರದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.

    ಏನಿದು ಘಟನೆ?:
    ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಶಾಸಕ ಭೀಮಾ ಮಂಡಾವಿ ಪ್ರಚಾರ ಕಾರ್ಯವನ್ನು ನಡೆಸಲು ತೆರಳುತ್ತಿದ್ದ ವೇಳೆ ನಕ್ಸಲರು ದಾಳಿ ನಡೆಸಿದ್ದರು. ಸ್ಫೋಟದ ತೀವ್ರತೆಗೆ ವಾಹನ ಸಂಪೂರ್ಣವಾಗಿ ಜಖಂಗೊಂಡಿದ್ದು, ಸ್ಥಳದಲ್ಲೇ ಶಾಸಕ ಸೇರಿದಂತೆ ಐವರು ಮೃತಪಟ್ಟಿದ್ದರು.

    ನಕ್ಸಲರ ದಾಳಿಯ ಕುರಿತು ಮಾಹಿತಿ ಲಭಿಸುತ್ತಿದಂತೆ ಸಿಆರ್ ಪಿಎಫ್ ತಂಡ ಸ್ಥಳಕ್ಕೆ ಭೇಟಿ ನೀಡಿದೆ. ಛತ್ತೀಸ್‍ಗಢ ಸಿಎಂ ಭೂಪೇಶ್ ಬಾಗೇಲ್ ಕಠಿಣ ಕ್ರಮಕೈಗೊಳ್ಳುವಂತೆ ಡಿಐಜಿಗೆ ಸೂಚನೆ ನೀಡಿದ್ದಾರೆ. ದಾಳಿ ನಡೆದ ಪ್ರದೇಶದಲ್ಲಿ ಗುರುವಾರ ಚುನಾವಣೆ ನಡೆಯಲಿದೆ. ಚುನಾವಣೆಯ ಹಿನ್ನೆಲೆಯಲ್ಲಿ ರಾಜ್ಯದಲ್ಲಿ 80 ಸಾವಿರ ರಕ್ಷಣಾ ಸಿಬ್ಬಂದಿ, ಡ್ರೋಣ್ ಕ್ಯಾಮೆರಾಗಳನ್ನು ಸರ್ಕಾರ ನಿಯೋಜನೆ ಮಾಡಿದೆ.

  • ನಕ್ಸಲ್ ದಾಳಿ: ಲೈವ್ ವರದಿ ಬಿತ್ತರಿಸಿದ ಪತ್ರಕರ್ತ

    ನಕ್ಸಲ್ ದಾಳಿ: ಲೈವ್ ವರದಿ ಬಿತ್ತರಿಸಿದ ಪತ್ರಕರ್ತ

    -ಇಲ್ಲಿ ಪರಿಸ್ಥಿತಿ ಗಂಭೀರ, ನಾನು ಸಾಯಲೂಬಹುದು ಲವ್ ಯೂ ಅಮ್ಮ

    ರಾಯ್ಪುರ್: ಛತ್ತೀಸಗಢ ರಾಜ್ಯದ ದಂತೇವಾಡಾ ಜಿಲ್ಲೆಯ ಅರನಪುರ ಠಾಣಾ ವ್ಯಾಪ್ತಿಯ ನೀಲವಾಯ ಅರಣ್ಯ ಪ್ರದೇಶದಲ್ಲಿ ಮಂಗಳವಾರ ಚುನಾವಣಾ ಕರ್ತವ್ಯ ನಿರತ ಪೊಲೀಸರ ಮೇಲೆ ನಕ್ಸಲರು ಗುಂಡಿನ ದಾಳಿ ನಡೆಸಿದ್ದಾರೆ. ಈ ಘಟನೆ ವೇಳೆ ಸ್ಥಳದಲ್ಲಿದ್ದ ಪತ್ರಕರ್ತರು ಸಹ ನಕ್ಸಲರ ಬಲೆಗೆ ಸಿಲುಕಿಕೊಂಡಿದ್ದರು.

    ಈ ಗುಂಪಿನಲ್ಲಿದ್ದ ದೂರದರ್ಶನ ವಾಹಿನಿ ಪತ್ರಕರ್ತ ಮೋರಧ್ವಜ್ ಎಂಬವರು ತಮ್ಮ ಮೊಬೈಲ್ ಮೂಲಕ ಘಟನೆಯ ಬಗ್ಗೆ ವರದಿ ಮಾಡಿ, ತಮ್ಮ ತಾಯಿಗೆ ಭಾವನಾತ್ಮಕ ಸಂದೇಶವನ್ನು ರವಾನಿಸಿದ್ದಾರೆ. ಇಲ್ಲಿಯ ಪರಿಸ್ಥಿತಿ ತುಂಬಾ ಗಂಭೀರವಾಗಿದ್ದು, ಪೊಲೀಸರನ್ನು ಮತ್ತು ನಮ್ಮನ್ನು ನಕ್ಸಲರು ಸುತ್ತುವರಿದಿದ್ದಾರೆ. ನಾನು ಬದುಕಿ ಬರುವ ಸಾಧ್ಯತೆಗಳಿಲ್ಲ. ಲವ್ ಯೂ ಅಮ್ಮಾ ಎಂದು ತಾಯಿಗೆ ಭಾವನಾತ್ಮಕ ಸಂದೇಶವನ್ನು ರವಾನಿಸಿದ್ದಾರೆ. ಸೈನಿಕರು ಪ್ರತಿದಾಳಿ ನಡೆಸಿ ನಕ್ಸಲರನ್ನು ಹಿಮ್ಮೆಟ್ಟಿಸಿದ್ದು, ಮೋರಧ್ವಜ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

    ವಿಡಿಯೋದಲ್ಲಿ ಏನಿದೆ?
    ಚುನಾವಣಾ ಕಾರ್ಯ ನಿಮಿತ್ತ ದಂತೇವಾಡ ಜಿಲ್ಲೆಗೆ ನಮ್ಮನ್ನು ನೇಮಿಸಲಾಗಿತ್ತು. ಸೈನಿಕರ ಜೊತೆ ನಾವು ಹೋಗುತ್ತಿದ್ದಾಗ ನಮ್ಮನ್ನು ನಕ್ಸಲರು ಸುತ್ತುವರಿದಿದ್ದಾರೆ. ಈ ದಾಳಿಯಲ್ಲಿ ಬದುಕುತ್ತೇನೆ ಎಂಬ ಭರವಸೆ ನನಗಿಲ್ಲ. ಅಮ್ಮಾ ನಿನ್ನನ್ನು ತುಂಬಾ ಪ್ರೀತಿಸುತ್ತೇನೆ. ಸಾವನ್ನು ಎದುರು ನೋಡುತ್ತಿದ್ದರೂ, ಯಾಕೋ ನನಗೆ ಭಯ ಆಗುತ್ತಿಲ್ಲ. ನಮ್ಮ ಜೊತೆ ಆರೇಳು ಸೈನಿಕರಿದ್ದರೂ, ನಾಲ್ಕು ದಿಕ್ಕುಗಳಿಂದ ನಕ್ಸಲರು ನಮ್ಮನ್ನು ಸುತ್ತುವರಿದಿದ್ದಾರೆ. ಸ್ಥಳದ ಪರಿಸ್ಥಿತಿಯ ಬಗ್ಗೆ ವಿಶ್ಲೇಷಣೆ ಮಾಡಿರುವ ಮೋರಧ್ವಜ್ ವಿಡಿಯೋವನ್ನು ತಮ್ಮ ಸಿಬ್ಬಂದಿಗೆ ಕಳುಹಿಸಿದ್ದಾರೆ. ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಪತ್ರಕರ್ತನ ಕರ್ತವ್ಯ ಪ್ರಜ್ಞೆಗೆ ಮೆಚ್ಚುಗೆ ಸೂಚಿಸಿದ್ದಾರೆ.

    ಮಗಳವಾರ ನಕ್ಸಲರು ನಡೆಸಿದ ದಾಳಿಯಲ್ಲಿ ಡಿಡಿ ವಾಹಿನಿಯ ಕ್ಯಾಮೆರಾ ಮನ್ ಅಚ್ಯುತನಂದ್ ಸಹು ಮತ್ತು ಇಬ್ಬರು ಸಿಆರ್ ಪಿಎಫ್ ಯೋಧರು ಬಲಿಯಾಗಿದ್ದಾರೆ. ಮೋರಧ್ವಜ್ ವಿಡಿಯೋವನ್ನು ಟ್ವೀಟ್ ಮಾಡಿಕೊಂಡಿರುವ ಕೇಂದ್ರ ಸಚಿವೆ ಸ್ಮೃತಿ ಇರಾನಿ, ಪ್ರಾಣ ಹೋಗುವ ಸಂದರ್ಭದಲ್ಲಿಯೂ ವಿಡಿಯೋ ಮಾಡಿದ ನಿಮ್ಮ ಧೈರ್ಯಕ್ಕೆ ನಾನು ಗೌರವ ಸೂಚಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಹುಟ್ಟೂರಲ್ಲಿ ಇಂದು ಹಾಸನ ಯೋಧನ ಅಂತಿಮ ಯಾನ – ಗ್ರಾಮದಲ್ಲಿ ಮಡುಗಟ್ಟಿದೆ ನೀರವ ಮೌನ

    ಹುಟ್ಟೂರಲ್ಲಿ ಇಂದು ಹಾಸನ ಯೋಧನ ಅಂತಿಮ ಯಾನ – ಗ್ರಾಮದಲ್ಲಿ ಮಡುಗಟ್ಟಿದೆ ನೀರವ ಮೌನ

    ಹಾಸನ: ಛತ್ತೀಸಗಡದ ಸುಕ್ಮಾದಲ್ಲಿ ನಕ್ಸಲ್ ದಾಳಿಯಲ್ಲಿ ಹುತಾತ್ಮನಾದ ಹಾಸನದ ಯೋಧ ಚಂದ್ರು ಅವರ ಪಾರ್ಥೀವ ಶರೀರ ಇನ್ನೇನು ಕೆಲವೇ ಕ್ಷಣಗಳಲ್ಲಿ ಹುಟ್ಟೂರು ತಲುಪಿದೆ. ಬುಧವಾರ ಸಂಜೆ ಮಿಲಿಟರಿ ಅಧಿಕಾರಿಗಳ ನೇತೃತ್ವದಲ್ಲಿ ಬಂದ ಯೋಧನ ಪಾರ್ಥಿವ ಶರೀರವನ್ನು ಸಚಿವ ಎ. ಮಂಜು, ಶಾಸಕ ಪ್ರಕಾಶ್, ಡಿಸಿ ರೋಹಿಣಿ ಸಿಂಧೂರಿ ಸೇರಿದಂತೆ ಹಲವರು ಬರಮಾಡಿಕೊಂಡಿದ್ರು.

    ಸದ್ಯ ಹಾಸನ ಜಿಲ್ಲಾಸ್ಪತ್ರೆ ಶವಗಾರದಲ್ಲಿ ಪಾರ್ಥಿವ ಶರೀರವನ್ನು ಇರಿಸಲಾಗಿದ್ದು, ಇನ್ನೇನು ಕೆಲವೇ ಕ್ಷಣಗಳಲ್ಲಿ ಪಾರ್ಥಿವ ಶರೀರವನ್ನು ಅರಕಲಗೂಡಿಗೆ ರವಾನಿಸಲಾಗುತ್ತದೆ. ಅರಕಲಗೂಡು ಪಟ್ಟಣದಲ್ಲಿ ಸಾರ್ವಜನಿಕ ದರ್ಶನಕ್ಕೆ ಅವಕಾಶ ಕೊಟ್ಟು ಬಳಿಕ ಮೆರವಣಿಗೆ ಸಾಗಲಿದೆ.

    ಮಧ್ಯಾಹ್ನ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ಜರುಗಲಿದೆ. ಯೋಧನನನ್ನು ಕಳೆದುಕೊಂಡ ಸ್ವಗ್ರಾಮದಲ್ಲಿ ನೀರವ ಮೌನವಿದ್ದು ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ. ಮಂಗಳವಾರ ನಕ್ಸಲರು ಸಿಆರ್ ಪಿಎಫ್ ನ 212 ಬೆಟಾಲಿಯನ್ ಮುಖ್ಯ ವಾಹನದ ಮೇಲೆ ದಾಳಿ ನಡೆಸಿದ್ದರು. ಈ ದಾಳಿಯಲ್ಲಿ ಸುಮಾರು 9 ಯೋಧರು ಮೃತಪಟ್ಟು, 6 ಯೋಧರು ತೀವ್ರವಾಗಿ ಗಾಯಗೊಂಡಿದ್ದರು.

  • ನಕ್ಸಲರು ರಕ್ತಪಾತ ನಡೆಸಿದ್ದು ಹೇಗೆ? ಹೃದಯ ಕಲಕುವ ಸಿಆರ್‍ಪಿಎಫ್ ಯೋಧನ ಮಾತುಗಳನ್ನು ಓದಿ

    ನಕ್ಸಲರು ರಕ್ತಪಾತ ನಡೆಸಿದ್ದು ಹೇಗೆ? ಹೃದಯ ಕಲಕುವ ಸಿಆರ್‍ಪಿಎಫ್ ಯೋಧನ ಮಾತುಗಳನ್ನು ಓದಿ

    ರಾಯ್‍ಪುರ್: ಛತ್ತೀಸ್‍ಗಢದ ಸುಕ್ಮಾದಲ್ಲಿ ರಸ್ತೆ ಮಾರ್ಗ ತೆರವು ವೇಳೆ ಗಸ್ತಿನಲ್ಲಿದ್ದ ಸಿಆರ್‍ಪಿಎಫ್ ಯೋಧರ ಮೇಲೆ ನಕ್ಸಲರು ದಾಳಿ ನಡೆಸಿದ್ದು, 25 ಯೋಧರು ಹುತಾತ್ಮರಾಗಿದ್ದಾರೆ. ಘಟನೆಯಲ್ಲಿ 6 ಮಂದಿ ಗಾಯಗೊಂಡಿದ್ದಾರೆ.  ಇಂದು ಗೃಹಸಚಿವ ರಾಜನಾಥ್ ಸಿಂಗ್ ಸುಕ್ಮಾ ಜಿಲ್ಲೆಗೆ ಭೇಟಿ ನೀಡಿ ಹುತಾತ್ಮ ಯೋಧರಿಗೆ ಅಂತಿಮ ನಮನ ಸಲ್ಲಿಸಿದ್ರು.

    ಬುರ್ಕಾಪಾಲ್ ಮತ್ತು ಛಿಂಟಾಗುಫಾ ಪ್ರದೇಶದ ನಡುವೆ ಯೋಧರು ಮತ್ತು ನಕ್ಸಲರ ನಡುವೆ ಸೋಮವಾರ ಮಧ್ಯಾಹ್ನ ಈ ಗುಂಡಿನ ದಾಳಿ ನಡೆದಿತ್ತು.

    ಘಟನೆಯಲ್ಲಿ ಪ್ರಾಣಾಪಾಯದಿಂದ ಪಾರಾಗಿರುವ ಯೋಧರೊಬ್ಬರು ಹೇಳಿಕೆ ನೀಡಿದ್ದು, ಸುಮಾರು 300 ನಕ್ಸಲರು ಯೋಧರ ಮೇಲೆ ದಾಳಿ  ಮಾಡಿದ್ರು ಎಂದು ಹೇಳಿದ್ದಾರೆ. ದಾಳಿಗೂ ಮುನ್ನ ನಕ್ಸಲರು ಸ್ಥಳೀಯರನ್ನು ಕಳುಹಿಸಿ ಯೋಧರಿರುವ ಸ್ಥಳದ ಬಗ್ಗೆ ಮಾಹಿತಿ ಪಡೆದಿದ್ರು ಎಂದು ಯೋಧ ಶೇರ್ ಮೊಹಮದ್ ಹೇಳಿದ್ದಾರೆ.

    ಮಧ್ಯಾಹ್ನ 12.25ರ ವೇಳೆಗೆ ಈ ದಾಳಿ ನಡೆಯಿತು. ನಾವು 150 ಮಂದಿ ಇದ್ವಿ, ನಮ್ಮನ್ನು ಸುತ್ತುಗಟ್ಟಿ ಅವರು ದಾಳಿ ನಡೆಸಿದ್ರು, ನಾನು 3-4 ನಕ್ಸಲರ ಎದೆಗೆ ಗುಂಡಿನ ದಾಳಿ ನಡೆಸಿದ್ದೇನೆ ಎಂದು ಅವರು ತಿಳಿಸಿದರು.

    300 ಕ್ಕೂ ಹೆಚ್ಚು ಮಂದಿ ದಾಳಿ ಮಾಡಿದ್ರು. ಅವರಲ್ಲಿ ಗ್ರಾಮಸ್ಥರು, ಮಹಿಳೆಯರು ಹಾಗೂ ಕಪ್ಪು ಸಮವಸ್ತ್ರ ಧರಿಸಿದ್ದವರು ಇದ್ರು. ಅವರ ಬಳಿ ರಾಕೆಟ್ ಲಾಂಚರ್, ಎಕೆ47, ಐಎನ್‍ಎಸ್‍ಎಎಸ್ ರೈಫಲ್‍ಗಳಿದ್ದವು. ನಾವೂ ಕೂಡ ಅವರಲ್ಲಿ ಸಾಕಷ್ಟು ಮಂದಿಯನ್ನ ಹತ್ಯೆಗೈದೆವು. ನಕ್ಸಲರು ತಮ್ಮ ರಕ್ಷಣೆಗೆ ಗ್ರಾಮಸ್ಥರನ್ನು ಬಳಸಿಕೊಂಡ್ರು ಎಂದು ಅವರು ತಿಳಿಸಿದ್ದಾರೆ.

    ಈ ದಾಳಿ ವೇಳೆ ನಕ್ಸಲರು ಯೋಧರ ಬಳಿಯಿದ್ದ ರೈಫಲ್‍ಗಳನ್ನೂ ತೆಗೆದುಕೊಂಡು ಪರಾರಿಯಾಗಿದ್ದಾರೆ.