Tag: ನಕ್ಷೆ

  • ಲಾಕ್‍ಡೌನ್ ಸರ್ಪಗಾವಲಿನೊಳಗೂ ದಿಯಾಗೆ ಗೆಲುವಿನ ‘ಖುಷಿ’!

    ಲಾಕ್‍ಡೌನ್ ಸರ್ಪಗಾವಲಿನೊಳಗೂ ದಿಯಾಗೆ ಗೆಲುವಿನ ‘ಖುಷಿ’!

    ಮೊದಲ ಹೆಜ್ಜೆಯಲ್ಲೇ ಗೆಲುವಿನ ಗೆಜ್ಜೆ ಘಲ್ಲೆಂದಾಗ..!

    ಊರ ತುಂಬಾ ಕೊರೊನಾ ವೈರಸ್ ಸೃಷ್ಟಿಸಿದ ಬಲವಂತದ ನೀರವ… ಎಲ್ಲವೂ ಸಪಾಟು ಸ್ತಬ್ಧಗೊಂಡಿರುವ ಈ ಘಳಿಗೆಯಲ್ಲಿ ಚಿತ್ರರಂಗವೂ ಸ್ಥಗಿತಗೊಂಡಿದೆ. ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ನೀಡುತ್ತಿದ್ದ ಅದೆಷ್ಟೋ ಚಿತ್ರಗಳು, ಬಿಡುಗಡೆಯ ಹಾದಿಯಲ್ಲಿರುವವುಗಳೆಲ್ಲವೂ ಮಂಕಾಗಿರೋ ಹೊತ್ತಿನಲ್ಲಿಯೇ ಕೆಲ ಸಿನಿಮಾಗಳು ಏಕಾಏಕಿ ಗೆಲುವಿನ ಕಿಡಿ ಹೊತ್ತಿಸಿವೆ. ಆ ಯಾದಿಯಲ್ಲಿ ದಿಯಾ ಪ್ರಧಾನವಾಗಿ ಗುರುತಿಸಿಕೊಳ್ಳುತ್ತದೆ. ಮುದ್ದಾದ ಪ್ರೇಮ ಕಥಾನಕದ ಮೂಲಕ ಪ್ರತೀ ಪ್ರೇಕ್ಷಕರಿಗೂ ಇಷ್ಟವಾಗಿದ್ದ ಈ ಚಿತ್ರ ಕೊರೊನಾ ಬಾಧೆಯಿಂದ ಪ್ರದರ್ಶನ ನಿಲ್ಲಿಸಿತ್ತು. ಆನ ಇಷ್ಟೊಳ್ಳೆ ಚಿತ್ರಕ್ಕೆ ಈ ಥರದ ಆಘಾತವಾಯ್ತಲ್ಲ ಎಂಬ ಬೇಸರದಲ್ಲಿರುವಾಗಲೇ ದಿಯಾ ಅಮೇಜಾನ್ ಪ್ರೈಮ್‍ನಲ್ಲಿ ಪ್ರತ್ಯಕ್ಷವಾಗಿ ಅಲ್ಲಿ ಮತ್ತೊಂದು ಸುತ್ತಿಗೆ ಹಿಟ್ ಆಗಿ ಬಿಟ್ಟಿದೆ. ಇದರೊಂದಿಗೆ ಮೊದಲ ಚಿತ್ರದಲ್ಲಿಯೇ ದಿಯಾ ಪಾತ್ರಧಾರಿ ಖುಷಿ ಸ್ಟಾರ್‍ಗಿರಿಯ ಕಳೆಗಟ್ಟಿಕೊಂಡಿದ್ದಾರೆ.

    ನಿಖರವಾಗಿ ಹೇಳಬೇಕೆಂದರೆ, ಲಾಕ್‍ಡೌನ್‍ನ ಸರ್ಪಗಾವಲಿನೊಳಗೂ ದಿಯಾಗೆ ಗೆಲುವಿನ ಖುಷಿ ಕೈ ಹಿಡಿದಿದೆ. ಇಡೀ ಚಿತ್ರತಂಡವೇ ಈ ಖುಷಿಯಲ್ಲಿ ಮಿಂದೇಳುತ್ತಿದೆ. ಇದೀಗ ಊರು ತುಂಬಾ ದಿಯಾ ಪಾತ್ರಧಾರಿಯಾಗಿ ಅಭಿಮಾನಿಗಳನ್ನು ಗಿಟ್ಟಿಸಿಕೊಂಡಿರೋ ನಟಿ ಖುಷಿಯ ಪಾಲಿಗೆ ಈ ಲಾಕ್‍ಡೌನ್ ಲೋಡುಗಟ್ಟಲೆ ಆಹ್ಲಾದವನ್ನು ತಂದಿಟ್ಟಿದೆ. ಇದು ಅಪರೂಪದ ವಿದ್ಯಮಾನ. ಅದರ ಫಲವಾಗಿಯೀಗ ಎಲ್ಲೆಂದರಲ್ಲಿ ದಿಯಾ ಧ್ಯಾನ ಹರಳುಗಟ್ಟಿಕೊಂಡಿದೆ. ಹಾಗಾದರೆ ಖುಷಿ ಈ ಗೆಲುವನ್ನು ಹೇಗೆ ಸಂಭ್ರಮಿಸುತ್ತಿದ್ದಾರೆ? ಅವರ ಮುಂದಿನ ಹೆಜ್ಜೆಯೇನು? ಎಂಬೆಲ್ಲ ಕುತೂಹಲಗಳಿಗೆ ಉತ್ತರವೆಂಬಂಥ ಒಂದಷ್ಟು ವಿಚಾರಗಳನ್ನ ಖುದ್ದು ಖುಷಿ ಪಬ್ಲಿಕ್ ಟಿವಿಯೊಂದಿಗೆ ಹಂಚಿಕೊಂಡಿದ್ದಾರೆ.

    ಕೊರೊನಾ ಮಹಾಮಾರಿ ಅಮರಿಕೊಳ್ಳುವ ಮುನ್ನವೇ ದಿಯಾ ಚಿತ್ರ ಬಿಡುಗಡೆಯಾಗಿ ಹಿಟ್ ಆಗಿತ್ತು. ಸಾದಾಸೀದ ಛಾಯೆಯ ಮನಮುಟ್ಟುವ ಈ ಕಥೆಗೆ ಎಲ್ಲ ವರ್ಗದ ಪ್ರೇಕ್ಷಕರೂ ಫಿದಾ ಆಗಿದ್ದರು. ಹೀಗೆ ಹಿಟ್ ಆದ ಚಿತ್ರಗಳು ರೂಪುಗೊಂಡಿದ್ದರ ಹಿಂದೆ ನಿಜಕ್ಕೂ ಅಚ್ಚರಿಯಾಗುವಂಥಾ ಕಥೆಗಳಿರುತ್ತವೆ. ಇಂಥಾ ಭಿನ್ನ ಜಾಡಿನ ಕಥೆಗಳನ್ನು ಒಪ್ಪಿಕೊಳ್ಳುವ ಕ್ಷಣದಲ್ಲಿ ಕಲಾವಿದರ ಮನಸ್ಥಿತಿ ಮತ್ತು ಒಳತೋಟಿಗಳದ್ದೂ ಕೂಡಾ ಇಂಟರೆಸ್ಟಿಂಗ್ ಅಧ್ಯಾಯವೇ. ಆ ನಿಟ್ಟಿನಲ್ಲಿ ನೋಡ ಹೋದರೆ ಒಂದಷ್ಟು ಸಂತಸ ಮತ್ತೊಂದಷ್ಟು ಕಳವಳಗಳ ಮಿಶ್ರಣದಂಥ ಮನಸ್ಥಿತಿಯಲ್ಲಿಯೇ ಖುಷಿ ದಿಯಾ ಚಿತ್ರಕ್ಕೆ ನಾಯಕಿಯಾಗಲು ಒಪ್ಪಿಕೊಂಡಿದ್ದರಂತೆ.

    ಮಂಡ್ಯ ಜಿಲ್ಲೆಯ ಮದ್ದೂರು ಮೂಲದವರಾದರೂ ಬೆಂಗಳೂರಿನ ವಾತಾವರಣದಲ್ಲಿಯೇ ಹುಟ್ಟಿ ಬೆಳೆದ ಖುಷಿಯ ಪಾಲಿಗೆ ಶುರುವಾತಿನಿಂದಲೂ ಕಲೆಯತ್ತಲೇ ಪ್ರಧಾನ ಆಸಕ್ತಿಯಿತ್ತು. ಶಾಲಾ ಕಾಲೇಜು ದಿನಗಳಲ್ಲಿಯೇ ನೃತ್ಯ ಮತ್ತು ಸಂಗೀತದಲ್ಲಿ ಆಸಕ್ತಿ ಹೊಂದಿ ಕಲಿಕೆಯನ್ನೂ ಮಾಡಿದ್ದ ಖುಷಿ ಆ ನಂತರದಲ್ಲಿ ಕಾಲೇಜು ವ್ಯಾಸಂಗದೊಂದಿಗೇ ರಂಗಭೂಮಿಯ ಗುಂಗಿಗೆ ಜಾರಿದ್ದರು. ಹಾಗೆ ನಟಿಯಾಗಿಯೂ ರೂಪುಗೊಳ್ಳುತ್ತಾ ಸಾಗಿ ಬಂದ ಅವರೊಳಗೆ ಆ ದಿನಗಳಲ್ಲಿ ಪರಿಪೂರ್ಣವಾದ ನಟಿಯಾಗಬೇಕೆಂಬ ಹಂಬಲವಿತ್ತೇ ಹೊರತು ಸಿನಿಮಾ ನಾಯಕಿಯಾಗಬೇಕೆಂಬ ಯಾವ ಇರಾದೆಯೂ ಇರಲಿಲ್ಲ. ಆದರೆ ಕ್ರಮೇಣ ಅವರೊಳಗಿನ ಪ್ರತಿಭೆಯ ಪ್ರಭೆಯೇ ಸಿನಿಮಾ ರಂಗದ ದಾರಿಯತ್ತ ತಂತಾನೇ ಕರೆದುಕೊಂಡು ಬಂದಿದ್ದೊಂದು ಅಚ್ಚರಿ.

    ಮಗಳು ಕಾಲೇಜು ಮುಗಿಸಿದ ನಂತರ ನಟಿಯಾಗೋ ಕನಸು ಕಂಡಾಗ ಖುಷಿಯ ಪೋಷಕರು ಉತ್ತೇಜನ ನೀಡಿ ಸಾಥ್ ಕೊಟ್ಟಿದ್ದರು. ಹಾಗೇ ರಂಗಭೂಮಿಯಲ್ಲಿ ಸಕ್ರಿಯರಾಗಿದ್ದ ಖುಷಿಗೆ ಒಂದಷ್ಟು ಕಿರುಚಿತ್ರಗಳಲ್ಲಿ ನಟಿಸೋ ಅವಕಾಶವೂ ಕೂಡಿ ಬಂದಿತ್ತು. ನಂತರ ಒಂದಷ್ಟು ಸಿನಿಮಾಗಳಲ್ಲಿ ಸಣ್ಣಪುಟ್ಟ ಪಾತ್ರಗಳನ್ನು ಮಾಡಿದ್ದ ಅವರಿಗೆ ಅದೃಷ್ಟದಂತೆ ಒಲಿದು ಬಂದಿದ್ದು ದಿಯಾ ಚಿತ್ರದ ನಾಯಕಿಯಾಗೋ ಅವಕಾಶ. ನಿರ್ದೇಶಕರು ಈ ಕಥೆ ಹೇಳಿದಾಗ ಖುಷಿಯಿಂದಲೇ ಒಪ್ಪಿಕೊಂಡಿದ್ದರಾದರೂ ಹಾಡಿಲ್ಲದ, ಬಿಲ್ಡಪ್ಪುಗಳಿಲ್ಲದ ಈ ಭಿನ್ನ ಕಥನವನ್ನು ಪ್ರೇಕ್ಷಕರು ಹೇಗೆ ಸ್ವೀಕರಿಸಿಯಾರೆಂಬ ಅಂಜಿಕೆ ಬೆರೆತ ಕುತೂಹಲ ಖುಷಿಯೊಳಗೆ ಇದ್ದೇ ಇತ್ತು.

    ಆದರೆ, ಆ ನಂತರ ಮಿರ್ಯಾಕಲ್ ಎಂಬಂಥಾ ಗೆಲುವು ಖುಷಿಯ ಕೈ ಹಿಡಿದಿದೆ. ಅದರಲ್ಲಿಯೂ ಲಾಕ್‍ಡೌನ್ ಆದ ನಂತರ ಖುಷಿ ದಿಯಾ ಅವತಾರದಲ್ಲಿ ಮತ್ತಷ್ಟು ಜನರ ಮನ ಗೆದ್ದಿದ್ದಾರೆ. ಇದೇ ಆವೇಗದಲ್ಲಿ ಹಲವಾರು ಅವಕಾಶಗಳು ಅವರನ್ನರಸಿಕೊಂಡು ಬಂದಿವೆ. ಈ ಲಾಕ್‍ಡೌನ್ ಕಾಲಾವಧಿಯಲ್ಲಿ ಅವರ ಅಭಿಮಾನಿ ಬಳಗವೂ ಹಿಗ್ಗಲಿಸಿಕೊಂಡಿದೆ. ಹಲವರು ಮುಂದೆ ಇಂತಿಂಥಾದ್ದೇ ಪಾತ್ರಗಳಲ್ಲಿ ನಟಿಸುವಂತೆ ಬೇಡಿಕೆ, ಸಲಹೆಗಳನ್ನೂ ನೀಡುತ್ತಿದ್ದಾರೆ. ಇದು ತನ್ನ ಮೇಲೆ ಹೆಚ್ಚಿಕೊಂಡಿರೋ ಜವಾಬ್ದಾರಿ ಎಂದುಕೊಂಡಿರೋ ಖುಷಿ ಕಥೆಯ ಆಯ್ಕೆ ವಿಚಾರದಲ್ಲಿ ಬಲು ಎಚ್ಚರದಿಂದಲೇ ಮುಂದುವರೆಯುತ್ತಿದ್ದಾರೆ. ಸದ್ಯಕ್ಕೆ ನಕ್ಷೆ ಎಂಬ ಚಿತ್ರದಲ್ಲಿ ನಾಯಕಿಯಾಗಿ ನಟಿಸಲು ಒಪ್ಪಿಗೆಯನ್ನೂ ಸೂಚಿಸಿದ್ದಾರಂತೆ.

    ಎಲ್ಲವೂ ಸರಿಯಾಗಿದ್ದಿದ್ದರೆ ಈ ಹೊತ್ತಿಗೆಲ್ಲ ಖುಷಿ ನಾಯಕಿಯಾಗಿರೋ ಎರಡನೇ ಚಿತ್ರವಾಗಿ ನಕ್ಷೆ ಟೇಕಾಫ್ ಆಗಿರುತ್ತಿತ್ತೇನೋ… ಆದರೆ ಕೊರೊನಾ ದೆಸೆಯಿಂದಾಗಿ ಈ ಸಿನಿಮಾಗೂ ಹಿನ್ನಡೆಯಾಗಿದೆ. ಮಾತುಕತೆಯೆಲ್ಲ ಮುಗಿದು ಈ ಸಿನಿಮಾ ಮೂಲಕ ಪತ್ರಕರ್ತೆಯಾಗಿ ಕಾಣಿಸಿಕೊಳ್ಳಲು ಖುಷಿ ಅಣಿಯಾಗುತ್ತಿದ್ದಾರೆ. ಅದಕ್ಕಾಗಿ ಒಂದಷ್ಟು ತಯಾರಿ ಮಾಡಿಕೊಳ್ಳುತ್ತಲೇ ಹೆಚ್ಚೆಚ್ಚು ಸಿನಿಮಾ ನೋಡೋದಕ್ಕಾಗಿಯೇ ಲಾಕ್‍ಡೌನ್ ಕಾಲಾವಧಿಯನ್ನು ಮೀಸಲಾಗಿಟ್ಟಿದ್ದಾರೆ. ಹೀಗೆ ಸಿನಿಮಾ ನೋಡುತ್ತಾ ಹೊಸತನ್ನು ಒಳಗಿಳಿಸಿಕೊಳ್ಳುವ, ತಮ್ಮನ್ನು ತಾವು ತಿದ್ದಿಕೊಳ್ಳುವ ಸೂತ್ರಕ್ಕೆ ಬದ್ಧರಾಗಿದ್ದಾರೆ. ಅಂತೂ ಖುಷಿ ಪಾಲಿಗೆ ಮೊದಲ ಹೆಜ್ಜೆಯಲ್ಲಿಯೇ ಗೆಲುವಿನ ಗೆಜ್ಜೆ ಘಲ್ಲೆಂದಿದೆ. ಮುಂದಿನ ಸಿನಿಮಾದಲ್ಲಿ ಆ ಸದ್ದು ಮತ್ತಷ್ಟು ತೀವ್ರವಾಗಿರಬೇಕೆಂಬ ಹಂಬಲದೊಂದಿಗೆ ಅವರು ಗೃಹಬಂಧನವನ್ನು ಸದುಪಯೋಗ ಪಡಿಸಿಕೊಳ್ಳುತ್ತಿದ್ದಾರೆ.

  • ಫಸ್ಟ್ ಲುಕ್‍ನಲ್ಲಿ ಕಂಡಿದ್ದು ವಿಭಿನ್ನ ಕ್ರೈಂ ಕಥನದ ನೀಲ’ನಕ್ಷೆ’!

    ಫಸ್ಟ್ ಲುಕ್‍ನಲ್ಲಿ ಕಂಡಿದ್ದು ವಿಭಿನ್ನ ಕ್ರೈಂ ಕಥನದ ನೀಲ’ನಕ್ಷೆ’!

    ಬೆಂಗಳೂರು: ನಮ್ಮ ಸುತ್ತ ನಡೆಯೋ ಅಪರಾಧ ಪ್ರಕರಣಗಳ ನಾನಾ ಮಗ್ಗುಲುಗಳನ್ನು ಬಿಚ್ಚಿಡುವ ಒಂದಷ್ಟು ಕ್ರಿಯಾಶೀಲ ಸಿನಿಮಾಗಳು ಆಗಾಗ ಸುದ್ದಿ ಮಾಡುತ್ತಿರುತ್ತವೆ. ಕ್ರೈಂ ಪ್ರಕರಣಗಳನ್ನು ಬೇರೆಯದ್ದೇ ದೃಷ್ಟಿಕೋನದಲ್ಲಿ ಪ್ರೇಕ್ಷಕರ ಮುಂದೆ ತೆರೆದಿಟ್ಟು ಬೆಚ್ಚಿ ಬೀಳಿಸಿದ ಒಂದಷ್ಟು ಚಿತ್ರಗಳು ಗೆಲುವನ್ನೂ ಕಂಡಿವೆ. ಇದೀಗ ‘ನಕ್ಷೆ’ ಎಂಬ ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿದೆ. ಇದೂ ಕೂಡಾ ಹೊಸ ಅಲೆಯ, ಹೊಸ ಜಾಡಿನ ಅಪರಾಧ ಪ್ರಕರಣಗಳ ಕಥೆಯ ಸುಳಿವಿನೊಂದಿಗೆ ಭರವಸೆ ಮೂಡಿಸಿದೆ.

    ಕೆಜಿಎಫ್ ಚಿತ್ರದಲ್ಲಿ ಜ್ಯೂನಿಯರ್ ರಾಕಿ ಬಾಯ್ ಅಮ್ಮನಾಗಿ ಮನೋಜ್ಞ ಅಭಿನಯ ನೀಡಿದ್ದ, ಆ ಮೂಲಕವೇ ಭಾರೀ ಪ್ರಸಿದ್ಧಿಯನ್ನೂ ಪಡೆದುಕೊಂಡಿದ್ದ ಅರ್ಚನಾ ಜೋಯಿಸ್ ಈ ಚಿತ್ರದ ಮುಖ್ಯಪಾತ್ರದಲ್ಲಿ ನಟಿಸಿದ್ದಾರೆ. ಪ್ರಮೋದ್ ಶೆಟ್ಟಿ ಕೂಡಾ ಅಷ್ಟೇ ಮಹತ್ವದ ಪಾತ್ರದಲ್ಲಿ ನಟಿಸಿರೋ ನಕ್ಷೆಯನ್ನು ಮಧು ನಿರ್ದೇಶನ ಮಾಡುತ್ತಿದ್ದಾರೆ. ಶಿವಪ್ರಕಾಶ್ ಶ್ರಾಫ್ ನಿರ್ಮಾಣದಲ್ಲಿ ಮೂಡಿ ಬರಲಿರೋ ನಕ್ಷೆಯ ಫಸ್ಟ್ ಲುಕ್ ವಿಭಿನ್ನ ಕ್ರೈಂ ಕಥನದ ನೀಲನಕ್ಷೆಯನ್ನು ಪರಿಣಾಮಕಾರಿಯಾಗಿಯೇ ಪ್ರೇಕ್ಷಕರ ಮುಂದಿಟ್ಟಿದೆ.

    ಪೂರ್ಣಚಂದ್ರ ತೇಜಸ್ವಿ ಹಿನ್ನೆಲೆ ಸಂಗೀತ ನೀಡಿರೋ ಈ ಚಿತ್ರ ಮಾಮೂಲಿ ಜಾಡಿನದ್ದಂತೂ ಅಲ್ಲ ಎಂಬ ಸ್ಪಷ್ಟ ಸೂಚನೆಯಂತೂ ಈ ಫಸ್ಟ್ ಲುಕ್ ಮೂಲಕವೇ ಅನಾವರಣಗೊಂಡಿದೆ. ಈಗಾಗಲೇ ಒಂದಷ್ಟು ಚಿತ್ರೀಕರಣ ಮುಗಿಸಿಕೊಂಡಿರೋ ಈ ಸಿನಿಮಾದ ಉಳಿದ ವಿವರಗಳು ಇನ್ನಷ್ಟೇ ಜಾಹೀರಾಗಬೇಕಿವೆ. ಸದ್ಯ ಈ ಫಸ್ಟ್ ಲುಕ್‍ನಲ್ಲಿ ಅರ್ಚನಾ ಜೋಯಿಸ್ ಪಾತ್ರವಷ್ಟೇ ಕಾಣಿಸಿಕೊಂಡಿದೆ. ಬೆಂಗಳೂರಿನ ಮ್ಯಾಪಿನ ಜಾಡಿನೊಂದಿಗೆ ಹೊಸ ಬಗೆಯ ಕಥೆಯ ಹೊಳಹು ನೀಡಿರೋ ನಕ್ಷೆಯ ಬಗ್ಗೆ ಈಗ ಚರ್ಚೆಗಳು ಶುರುವಾಗಿವೆ.

  • ಗೂಗಲ್ ನಕ್ಷೆಯಲ್ಲೂ ಕನ್ನಡ ಕಲರವ ಆರಂಭ

    ಗೂಗಲ್ ನಕ್ಷೆಯಲ್ಲೂ ಕನ್ನಡ ಕಲರವ ಆರಂಭ

    ಬೆಂಗಳೂರು: ಜಗತ್ತಿನ ಅತೀ ದೊಡ್ಡ ಸರ್ಚ್ ಎಂಜಿನ್ ಗೂಗಲ್ ನಕ್ಷೆಯಲ್ಲಿ ಸ್ಥಳಗಳ ಹೆಸರು ಕನ್ನಡದಲ್ಲಿ ಕಾಣಿಸಿಕೊಂಡಿದೆ. ಇನ್ನೂ ಮುಂದೆ ಇಂಗ್ಲಿಷ್ ಸೇರಿದಂತೆ ಪ್ರಾದೇಶಿಕ ಭಾಷೆಯಲ್ಲೂ ಸ್ಥಳಗಳ ಹೆಸರುಗಳು ಕಾಣಿಸಿಕೊಳ್ಳುತ್ತವೆ.

    ಹೌದು, ಇನ್ನೂ ಗೂಗಲ್ ನಕ್ಷೆಯಲ್ಲಿ ಸರ್ಚ್ ಮಾಡುವ ಸಂದರ್ಭದಲ್ಲಿ ಸ್ಥಳಗಳ ಹೆಸರು ಕನ್ನಡದಲ್ಲೇ ಕಾಣಿಸಿಕೊಳ್ಳಲಿದೆ. ಗೂಗಲ್ ನಕ್ಷೆಯಲ್ಲಿ ಭಾರತದ ವಿವಿಧ ಪ್ರಾದೇಶಿಕ ಭಾಷೆಗಳನ್ನು ಅಳವಡಿಸಿಕೊಳ್ಳಲಾಗಿದೆ. ಕನ್ನಡ ಗೂಗಲ್ ನಕ್ಷೆಯಲ್ಲಿ ಕಾಣಿಸಿಕೊಂಡಿರುವ ಕುರಿತು ಸಾಮಾಜಿಕ ಜಾಲತಾಣದಲ್ಲಿ ಕನ್ನಡಿಗರು ಮೆಚ್ಚುಗೆಯನ್ನ ಸೂಚಿಸಿದ್ದು, ಗೂಗಲ್ ಸಂಸ್ಥೆಗೆ ಕನ್ನಡಿಗರು ಧನ್ಯವಾದಗಳನ್ನು ಅರ್ಪಿಸಿದ್ದಾರೆ.

    ಭಾರತದಲ್ಲಿ ಹಲವು ಪ್ರಾದೇಶಿಕ ಭಾಷೆಗಳಿದ್ದು, ಇದರಲ್ಲಿ ಕೆಲವು ಭಾಷೆಗಳಿಗಷ್ಟೇ ಗೂಗಲ್ ಸಂಸ್ಥೆ ಅವಕಾಶವನ್ನು ನೀಡಿದೆ. ಕನ್ನಡ ರಾಜೋತ್ಸವ ಆಚರಣೆಯಲ್ಲಿದ್ದ ಕನ್ನಡಿಗರಿಗೆ ಈಗ ಗೂಗಲ್ ಕೊಡುಗೆಯಾಗಿ ನಕ್ಷೆಯಲ್ಲಿ ಕನ್ನಡವನ್ನು ಸೇರಿಸಿದೆ.

    ಕನ್ನಡ ಭಾಷೆಯನ್ನು ಗೂಗಲ್ ನಕ್ಷೆಯಲ್ಲಿ ಅಳವಡಿಸಿರುವುದು ಅತ್ಯಗತ್ಯ. 7 ಕೋಟಿ ಕನ್ನಡಿಗರಿಗೂ ಇಂಗ್ಲಿಷ್ ಅರ್ಥವಾಗುವುದಿಲ್ಲ. ಗೂಗಲ್ ಕ್ರಮ ಅತ್ಯುತ್ತಮವಾಗಿದೆ ಎಂದು ಹಲವಾರು ತಮ್ಮ ಅಭಿಪ್ರಾಯವನ್ನು ವ್ಯಕ್ತಡಿಸಿದ್ದಾರೆ.

    ದೇಶದ ರಾಜಧಾನಿ ನವದೆಹಲಿಯಲ್ಲಿ ಹಿಂದಿ ಹಾಗೂ ಇಂಗ್ಲಿಷ್ ದ್ವಿಭಾಷೆಯಲ್ಲಿ ಕಾಣಿಸಿಕೊಳ್ಳುತ್ತಿದೆ. ತೆಲಂಗಾಣ ಮತ್ತು ಆಂಧ್ರಪ್ರದೇಶದಲ್ಲಿ ತೆಲುಗು ಭಾಷೆಯಲ್ಲಿ, ತಮಿಳು ನಾಡು ಹಾಗೂ ಕೇರಳದಲ್ಲಿ ಕ್ರಮವಾಗಿ ತಮಿಳು ಹಾಗೂ ಮಲೆಯಾಳಂ ಭಾಷೆಯಲ್ಲಿ ಕಾಣಿಸಿಕೊಳ್ಳುತ್ತಿದೆ.

    https://www.facebook.com/sindhugowda.v/posts/10210668546013891

    https://www.facebook.com/photo.php?fbid=1448211171881018&set=pb.100000764463383.-2207520000.1509702751.&type=3&theater