Tag: ನಕಲಿ

  • ಕುಡಿದ ಮತ್ತಿನಲ್ಲಿಯೇ ಚಿಕಿತ್ಸೆ ನೀಡ್ತಿದ್ದ ವೈದ್ಯನ ಮನೆ ಮೇಲೆ ದಾಳಿ!

    ಕುಡಿದ ಮತ್ತಿನಲ್ಲಿಯೇ ಚಿಕಿತ್ಸೆ ನೀಡ್ತಿದ್ದ ವೈದ್ಯನ ಮನೆ ಮೇಲೆ ದಾಳಿ!

    ಹಾವೇರಿ: ಹಾನಗಲ್ ತಾಲೂಕಿನ ಶಂಕ್ರಿಕೊಪ್ಪ ಗ್ರಾಮದಲ್ಲಿ ಕುಡಿದ ಮತ್ತಿನಲ್ಲಿಯೇ ಚಿಕಿತ್ಸೆ ನೀಡುತ್ತಿದ್ದ ನಕಲಿ ವೈದ್ಯನ ಮನೆ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

    ನಕಲಿ ವೈದ್ಯ ಬಾನಪ್ಪ ವಾಲ್ಮೀಕಿ ಮನೆ ಮೇಲೆ ತಾಲೂಕು ಆರೋಗ್ಯಾಧಿಕಾರಿ ಡಾ.ಮಾರುತಿ ಚಿಕ್ಕಣ್ಣವರ ನೇತೃತ್ವದಲ್ಲಿ ದಾಳಿ ನಡೆದಿದೆ. ಈ ವೇಳೆ ಅಧಿಕಾರಿಗಳನ್ನು ಕಂಡ ನಕಲಿ ವೈದ್ಯ ಸ್ಥಳದಿಂದ ಪರಾರಿಯಾಗಿದ್ದಾನೆ. ಅಧಿಕಾರಿಗಳು ಮನೆಯನ್ನು ಪರಿಶೀಲನೆ ನಡೆಸಿದಾಗ ಮನೆಯಲ್ಲಿ ಸ್ಕೆತಾಸ್ಕೋಪ್, ಸಿರಿಂಜ್, ಔಷಧಿ ಬರೆಯಲು ಉಪಯೋಗಿಸುತ್ತಿದ್ದ ಚೀಟಿ ಮತ್ತು ವಿವಿಧ ಕಂಪೆನಿಯ ಔಷಧಿಗಳು ಪತ್ತೆಯಾಗಿವೆ.

    ಔಷಧಿಗಳು ಮತ್ತು ದಾಳಿ ವೇಳೆ ಸಿಕ್ಕ ವಸ್ತುಗಳನ್ನು ತಾಲೂಕು ವೈದ್ಯಾಧಿಕಾರಿಗಳು ವಶಪಡಿಸಿಕೊಂಡು ಸೀಜ್ ಮಾಡಿದ್ದಾರೆ. ಈ ಎಣ್ಣೆ ಡಾಕ್ಟರ್ ಕಳೆದ ಕೆಲವು ವರ್ಷಗಳಿಂದ ಮನೆಯಲ್ಲೇ ರಾಜಾರೋಷವಾಗಿ ಕ್ಲಿನಿಕ್ ನಡೆಸ್ತಿದ್ದನು. ಯಾವುದೇ ಕೋರ್ಸ್ ಕಲಿಯದೆ ಬಾನಪ್ಪ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದ ಎಂದು ತಿಳಿದುಬಂದಿದೆ.

    ಘಟನೆ ಸಂಬಂಧ ಆಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

  • ಗಮನಿಸಿ, ಐಟಿ ರಿಟರ್ನ್ಸ್ ಹೆಸರಲ್ಲಿ ಬರೋ ಇಮೇಲ್ ಓಪನ್ ಮಾಡೋ ಮೊದಲು ಈ ಸುದ್ದಿ ಓದಿ

    ಗಮನಿಸಿ, ಐಟಿ ರಿಟರ್ನ್ಸ್ ಹೆಸರಲ್ಲಿ ಬರೋ ಇಮೇಲ್ ಓಪನ್ ಮಾಡೋ ಮೊದಲು ಈ ಸುದ್ದಿ ಓದಿ

    ಮುಂಬೈ: ಐಟಿ ರಿಟರ್ನ್ಸ್ ಸಲ್ಲಿಸಲು ಡೆಡ್‍ಲೈನ್ ಹತ್ತಿರವಾಗುತ್ತಿರುವುದರಿಂದ ಸೈಬರ್ ವಂಚಕರು ಜನರಿಗೆ ಟೋಪಿ ಹಾಕಲು ಮುಂದಾಗಿದ್ದಾರೆ. ಐಟಿ ಇಲಾಖೆಗೆ ಸಂಬಂಧ ಪಟ್ಟ ಇಮೇಲ್ ಮಾದರಿಯಲ್ಲೇ ಅದೇ ತರಹದ ಇಮೇಲನ್ನು ಸೈಬರ್ ವಂಚಕರು ಸೃಷ್ಟಿಸಿದ್ದಾರೆ. ಹೀಗಾಗಿ ನೀವು ಆದಾಯ ತೆರಿಗೆದಾರರಾಗಿದ್ದರೆ ವಂಚಕರ ಜಾಲದಿಂದ ತಪ್ಪಿಸಿಕೊಳ್ಳಲು ಸಾಕಷ್ಟು ಎಚ್ಚರಿಕೆ ವಹಿಸಬೇಕಾಗುತ್ತದೆ.

    ಹೌದು. ಆದಾಯ ತೆರಿಗೆ ರಿಟರ್ನ್ಸ್ ಹಣವನ್ನು ಮರಳಿ ಪಡೆಯಲು ನೆಟ್ ಬ್ಯಾಂಕಿಂಗ್ ಮಾಹಿತಿಗಳನ್ನು ನೀಡಬೇಕೆಂದು ಸ್ಪ್ಯಾಮ್ ಮೇಲ್‍ಗಳ ಮೂಲಕ ಆದಾಯ ತೆರಿಗೆದಾರರನ್ನು ವಂಚಿಸಲು ನಾನಾ ರೀತಿಯ ಪ್ರಯತ್ನಗಳನ್ನು ಸೈಬರ್ ವಂಚಕರು ನಡೆಸಿರುವುದು ಈಗ ಬೆಳಕಿಗೆ ಬಂದಿದೆ.

    ಸರಕಾರಿ ವೆಬ್‍ಸೈಟ್ ಅಥವಾ ಇಮೇಲ್ ವಿಳಾಸಗಳ ರೀತಿಯಲ್ಲೇ ಸೈಬರ್ ವಂಚಕರು ನಕಲಿ ವೆಬ್‍ಸೈಟ್, ಇಮೇಲ್‍ಗಳನ್ನು ಸೃಷ್ಟಿಸಿ ಆದಾಯ ತೆರಿಗೆದಾರರನ್ನು ಬಲೆಗೆ ಕೆಡವಲು ಯತ್ನಿಸಿದ್ದಾರೆ. ಐಟಿ ರಿಟರ್ನ್ಸ್ ಸಲ್ಲಿಸಲು ಆದಾಯ ಇಲಾಖೆ ತನ್ನ @donotreplyincometaxindiaefiling.gov.in ಇಮೇಲ್ ಮೂಲಕ ಸಂದೇಶ ಬರುತ್ತದೆ. ಆದರೆ ಸೈಬರ್ ವಂಚಕರು @donotreplyincometaxindiafilling.gov.in ಎಂಬ ನಕಲಿ ಮೇಲ್ ಐಡಿಯನ್ನು ಸೃಷ್ಟಿಸಿದ್ದಾರೆ. ಇದರಲ್ಲಿ efiling ನಲ್ಲಿ e ನಾಪತ್ತೆಯಾಗಿದ್ದು, filing ಬದಲು filling ಎಂದು ಬಳಸಿ ನಕಲಿ ಮೇಲ್ ಐಡಿ ಓಪನ್ ಮಾಡಿದ್ದಾರೆ.

    ಈ ಕುರಿತು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಪ್ರತಿಕ್ರಿಯಿಸಿದ್ದು, ನಾವು ನಮ್ಮ ವೆಬ್‍ಸೈಟಿನಲ್ಲಿ ಹಾಗೂ ಮೊಬೈಲ್‍ಗೆ ಸಂದೇಶಗಳನ್ನು ಕಳುಹಿಸಿ ಆನ್‍ಲೈನ್ ವಂಚಕರ ಬಗ್ಗೆ ಎಚ್ಚರಿಕೆ ನೀಡುತ್ತಿರುತ್ತೇವೆ. ಅನುಮಾನಾಸ್ಪದ ಇ-ಮೇಲ್‍ಗಳಿಗೆ ಜನರು ಯಾವುದೇ ಕಾರಣಕ್ಕೂ ಉತ್ತರಿಸುವುದು ಬೇಡ. ಇಂತಹ ವೆಬ್ ಸೈಟ್‍ಗಳಲ್ಲಿ ಯಾವುದೇ ಕಾರಣಕ್ಕೂ ನಿಮ್ಮ ಬ್ಯಾಂಕ್ ಅಕೌಂಟ್‍ನ ಮಾಹಿತಿ, ಡೆಬಿಟ್ ಹಾಗೂ ಕ್ರೆಡಿಟ್ ಕಾರ್ಡಿನ ಮಾಹಿತಿಯನ್ನು ನೀಡಬೇಡಿ. ಈ ರೀತಿಯ ಮಾಹಿತಿಗಳನ್ನು ಆದಾಯ ತೆರಿಗೆ ಇಲಾಖೆ ಕೇಳುವುದಿಲ್ಲ ಎಂದು ತಿಳಿಸಿದ್ದಾರೆ.

    ಜುಲೈ 31 ಡೆಡ್‍ಲೈನ್ ಹತ್ತಿರ ಬರುತ್ತಿರುವುದರಿಂದ ಈ ರೀತಿಯ ಸ್ಪ್ಯಾಮ್ ಮೇಲ್‍ಗಳು ಹೆಚ್ಚಾಗುತ್ತಿವೆ. ಐಟಿ ಇಲಾಖೆ ಕಡೆಯಿಂದ ಎಂದು ಹೇಳಿಕೊಂಡು ವಂಚಕರು ನಿಮಗೆ ದೂರವಾಣಿ ಕರೆಗಳನ್ನು ಹಾಗೂ ಇ-ಮೇಲ್ ಮಾಡುತ್ತಿರುತ್ತಾರೆ. ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಯಾವುದೇ ಕಾರಣಕ್ಕೂ ಗ್ರಾಹಕರಿಗೆ ಫೋನ್ ಮಾಡಿ ದಾಖಲೆಗಳನ್ನು ಕೇಳುವುದಿಲ್ಲ. ಈ ಕುರಿತು ಗ್ರಾಹಕರು ಎಚ್ಚರಿಕೆ ವಹಿಸಬೇಕು ಎಂದು ಹೇಳಿದ್ದಾರೆ.

  • ಕ್ರಿಕೆಟ್ ಆಟಗಾರ್ತಿ ಹರ್ಮನ್‍ಪ್ರೀತ್ ಕೌರ್ ಗೆ  ಡಿಎಸ್‍ಪಿ ಹುದ್ದೆ ರದ್ದು!

    ಕ್ರಿಕೆಟ್ ಆಟಗಾರ್ತಿ ಹರ್ಮನ್‍ಪ್ರೀತ್ ಕೌರ್ ಗೆ ಡಿಎಸ್‍ಪಿ ಹುದ್ದೆ ರದ್ದು!

    ಚಂಡೀಗಡ: ನಕಲಿ ಪದವಿ ಪ್ರಮಾಣ ಪತ್ರಗಳನ್ನು ನೀಡಿದ್ದ ಕಾರಣ ಟೀಂ ಇಂಡಿಯಾ ಮಹಿಳಾ ಟಿ-20 ಕ್ರಿಕೆಟ್ ತಂಡದ ನಾಯಕಿ ಹರ್ಮನ್‍ಪ್ರೀತ್ ಕೌರ್ ಅವರಿಗೆ ಗೌರವಾರ್ಥವಾಗಿ ನೀಡಿದ್ದ ಡಿಎಸ್‍ಪಿ ಹುದ್ದೆಯನ್ನು ಪಂಜಾಬ್ ಸರ್ಕಾರ ಹಿಂಪಡೆದುಕೊಂಡಿದೆ.

    2017ರಲ್ಲಿ ಇಂಗ್ಲೆಂಡ್‍ನಲ್ಲಿ ನಡೆದ ಮಹಿಳಾ ಏಕದಿನ ವಿಶ್ವಕಪ್ ನಲ್ಲಿ ಭಾರತ ರನ್ನರ್ ಅಪ್ ಪ್ರಶಸ್ತಿಗಳಿಸಲು ಹರ್ಮತ್‍ಪ್ರೀತ್ ನಿರ್ಣಾಯಕ ಪಾತ್ರ ವಹಿಸಿದ್ದರು. ಈ ಹಿನ್ನೆಲೆಯಲ್ಲಿ ಪಂಜಾಬ್ ಸರ್ಕಾರ ಡಿಎಸ್‍ಪಿ ಹುದ್ದೆಯನ್ನು ನೀಡಿ ಗೌರವಿಸಿತ್ತು.

    ಈ ಮೊದಲು ಭಾರತೀಯ ರೈಲ್ವೆಯಲ್ಲಿ ಉದ್ಯೋಗಿಯಾಗಿದ್ದ ಅವರು ಪೊಲೀಸ್ ಇಲಾಖೆಯಲ್ಲಿ ಕೆಲಸ ನಿರ್ವಹಿಸುವ ದೃಷ್ಟಿಯಿಂದ ರೈಲ್ವೆ ಇಲಾಖೆ ನೀಡಿದ್ದ ಕೆಲಸಕ್ಕೆ ರಾಜೀನಾಮೆ ನೀಡಿ ಡಿಎಸ್‍ಪಿ ಹುದ್ದೆಯನ್ನು ಅಲಂಕರಿಸಿದ್ದರು.

    ಮಾರ್ಚ್ 1 ರಂದು ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ಮತ್ತು ಡಿಎಸ್‍ಪಿ ಸುರೇಶ್ ಅರೋರರವರು ಹರ್ಮನ್‍ಪ್ರೀತ್ ಕೌರ್ ರವರಿಗೆ ಡಿಎಎಸ್‍ಪಿ ಹುದ್ದೆ ಜವಾಬ್ದಾರಿಯನ್ನು ನೀಡಿ ಗೌರವಿಸಿದ್ದರು. ಡಿಎಸ್‍ಪಿ ಹುದ್ದೆಗೆ ಸಂಬಂಧಿಸಿದಂತೆ ಅವರು ಉತ್ತರ ಪ್ರದೇಶದ ಮೀರತ್ ನ ಚೌಧರಿ ಸಿಂಗ್ ವಿಶ್ವ ವಿದ್ಯಾನಿಲಯದಲ್ಲಿ ಪದವಿ ಪೂರ್ಣಗೊಳಿಸಿದರ ಪ್ರಮಾಣ ಪತ್ರವನ್ನು ಇಲಾಖೆಗೆ ಸಲ್ಲಿಸಿದ್ದರು.

    ಇಲಾಖೆಗೆ ಸಲ್ಲಿಸಿದ್ದ ದಾಖಲೆಗಳನ್ನು ಸಂಬಂಧಪಟ್ಟ ವಿಶ್ವವಿದ್ಯಾಲಯದ ಜೊತೆ ಪರಿಶೀಲನೆ ನಡೆಸಿದಾಗ ಡಿಗ್ರಿ ಪ್ರಮಾಣಪತ್ರಗಳು ನಕಲಿಯೆಂದು ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಹರ್ಮನ್‍ಪ್ರೀತ್ ಕೌರ್ ರವರಿಗೆ ನೀಡಿದ ಡಿಎಸ್‍ಪಿ ಹುದ್ದೆಯನ್ನು ಪಂಜಾಬ್ ಸರ್ಕಾರ ಹಿಂತೆಗೆದುಕೊಂಡಿದೆ.

    ಪದವಿ ಪ್ರಮಾಣಪತ್ರಗಳು ನಕಲಿ ಆಗಿರುವುದರಿಂದ ಅವರು ಡಿಎಸ್‍ಪಿ ಹುದ್ದೆಯಲ್ಲಿ ಮುಂದುವರಿಯಲು ಸಾಧ್ಯವಿಲ್ಲ. ಅವರ ಕನಿಷ್ಠ ವಿದ್ಯಾರ್ಹತೆ 12ನೇ ತರಗತಿ ಆಗಿರುವುದರಿಂದ ಅವರು ಪೊಲೀಸ್ ಕಾನ್ ಸ್ಟೇಬಲ್ ಹುದ್ದೆಯಲ್ಲಿ ಮುಂದುವರೆಯಬಹುದು. ಈ ಕುರಿತು ಕ್ರಿಕೆಟ್ ಆಟಗಾರ್ತಿಯ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲಾಗುವುದಿಲ್ಲ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

    ಈ ಹಿಂದೆ ಕಾಮನ್‍ವೇಲ್ತ್ ಕೂಟದಲ್ಲಿ ಚಿನ್ನದ ಪದಕ ನೀಡಿದ್ದ ಮಂದೀಪ್ ಕೌರ್ ಅವರಿಗೆ ಪಂಜಾಬ್ ಸರ್ಕಾರ ಡಿಎಸ್‍ಪಿ ಹುದ್ದೆಯನ್ನು ನೀಡಿತ್ತು. ಬಳಿಕ ದಾಖಲಾತಿ ಪರಿಶೀಲನೆ ವೇಳೆ ನಕಲಿ ಪ್ರಮಾಣಪತ್ರ ಸಲ್ಲಿಕೆ ಮಾಡಿದ ಹಿನ್ನೆಲೆಯಲ್ಲಿ ಅವರಿಗೆ ನೀಡಲಾಗಿದ್ದ ಡಿಎಸ್‍ಪಿ ಹುದ್ದೆಯನ್ನು ಹಿಂದಕ್ಕೆ ಪಡೆದುಕೊಂಡಿತ್ತು.

  • ಮತ್ತೆ ಪಿಯುಸಿ ಪ್ರಶ್ನೆ ಪತ್ರಿಕೆ ಸೋರಿಕೆ?

    ಮತ್ತೆ ಪಿಯುಸಿ ಪ್ರಶ್ನೆ ಪತ್ರಿಕೆ ಸೋರಿಕೆ?

    – ಸೋರಿಕೆಯಾಗಿಲ್ಲ ಸಿಬ್ಬಂದಿಯೇ ವಾಟ್ಸಪ್‍ನಲ್ಲಿ ಕಳುಹಿಸಿರಬಹುದು
    – ಪಬ್ಲಿಕ್ ಟಿವಿಗೆ ನಿರ್ದೇಶಕಿ ಶಿಖಾ ಸ್ಪಷ್ಟನೆ

    ರಾಯಚೂರು: ಪಿಯುಸಿ ಪ್ರಶ್ನೆ ಪತ್ರಿಕೆ ಮತ್ತೆ ಸೋರಿಕೆಯಾಗಿದೆಯಾ ಎನ್ನುವ ಶಂಕೆ ಈಗ ಹುಟ್ಟಿಕೊಂಡಿದೆ. ಇಂದು ನಡೆದ ವಾಣಿಜ್ಯ ವಿಭಾಗದ ಅಕೌಂಟಿನ್ಸಿ ಪ್ರಶ್ನೆ ಪತ್ರಿಕೆ ವಾಟ್ಸಪ್‍ನಲ್ಲಿ ಹರಿದಾಡಿರುವುದೇ ಈ ಶಂಕೆ ಮೂಡಲು ಕಾರಣವಾಗಿದೆ.

    ರಾಯಚೂರಿನ ಮಾನ್ವಿಯ ಗಾಂಧಿ ಮೆಮೋರಿಯಲ್ ಪಿಯು ಕಾಲೇಜಿನಲ್ಲಿ ಪರೀಕ್ಷೆ ಬರೆದ ವಿದ್ಯಾರ್ಥಿಗಳಿಗೆ ವಾಟ್ಸಪ್‍ನಲ್ಲಿ ಪ್ರಶ್ನೆ ಪತ್ರಿಕೆ ಸಿಕ್ಕಿದೆ. ಪ್ರಶ್ನೆ ಪತ್ರಿಕೆಯನ್ನು ಬೆಳಗ್ಗೆ 10.15ಕ್ಕೆ ನೀಡಿದರೆ, 10.30ಕ್ಕೆ ಉತ್ತರ ಪತ್ರಿಕೆಯನ್ನು ನೀಡಲಾಗುತ್ತದೆ. ಆದರೆ ಈ ಪ್ರಶ್ನೆಪತ್ರಿಕೆ ಬೆಳಗ್ಗೆ 10.50ಕ್ಕೆ ವಾಟ್ಸಪ್‍ನಲ್ಲಿ ಹರಿದಾಡಿದೆ.

    ಪಿಯು ಪರೀಕ್ಷೆ ಆರಂಭಗೊಂಡ ಬಳಿಕ ವಿದ್ಯಾರ್ಥಿಯೊಬ್ಬ ಮಧ್ಯದಲ್ಲಿ ಪರೀಕ್ಷೆ ಮುಗಿಸಿ ಹೋದರೂ ಪ್ರಶ್ನೆ ಪತ್ರಿಕೆಯನ್ನು ತೆಗೆದುಕೊಂಡು ಹೋಗುವಂತಿಲ್ಲ. 1.30ಕ್ಕೆ ನಿಗದಿತ ಅವಧಿ ಮುಗಿದ ಬಳಿಕವೇ ವಿದ್ಯಾರ್ಥಿ ಪ್ರಶ್ನೆ ಪತ್ರಿಕೆಯನ್ನು ತೆಗೆದುಕೊಂಡು ಹೋಗಬೇಕಾಗುತ್ತದೆ. ಆದರೆ ಪರೀಕ್ಷೆ ಆರಂಭಗೊಂಡ ಕೆಲವೇ ನಿಮಿಷದಲ್ಲಿ ಪ್ರಶ್ನೆ ಪತ್ರಿಕೆ ಹೊರಗಡೆ ಬಂದಿರುವುದು ಈಗ ಹಲವು ಅನುಮಾನಗಳಿಗೆ ಕಾರಣವಾಗಿದೆ.

    ಪರೀಕ್ಷಾ ಕೇಂದ್ರದ ಒಳಗಡೆ ವಿದ್ಯಾರ್ಥಿಗಳಿಗೆ ಮೊಬೈಲ್ ತೆಗೆದುಕೊಂಡು ಹೋಗಲು ಅನುಮತಿ ಇಲ್ಲ. ಆದರೆ ಈ ಪ್ರಶ್ನೆ ಪತ್ರಿಕೆ ವಾಟ್ಸಪ್‍ನಲ್ಲಿ ಹೊರ ಬಂದಿದ್ದು ಹೇಗೆ ಎನ್ನುವ ಪ್ರಶ್ನೆ ಈಗ ಹುಟ್ಟಿಕೊಂಡಿದೆ. ಈ ಕೇಂದ್ರದಲ್ಲಿ ಯಾವುದೇ ಸಿಸಿಟಿವಿ ಇಲ್ಲ. ಹೀಗಾಗಿ ಯಾರು ಈ ಫೋಟೋವನ್ನು ಕ್ಲಿಕ್ಕಿಸಿದ್ದಾರೆ ಎನ್ನುವುದನ್ನು ತಿಳಿಯುವುದು ಕಷ್ಟ. ಪರೀಕ್ಷಾ ಕೇಂದ್ರಕ್ಕೆ ಆಗಮಿಸಿದ ಸಿಬ್ಬಂದಿಯಿಂದಲೇ ಈ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ ಎನ್ನಲಾಗಿದೆ.

    ಅಕ್ರಮ ನಡೆಯುತ್ತಾ?
    ಒಂದು ವೇಳೆ ಪ್ರಶ್ನೆ ಪತ್ರಿಕೆ ವಾಟ್ಸಪ್‍ನಲ್ಲಿ ಸಿಕ್ಕಿದರೆ ಉತ್ತರವನ್ನು ತಯಾರು ಮಾಡಿ ಚೀಟಿ ಮೂಲಕ ವಿದ್ಯಾರ್ಥಿಗಳಿಗೆ ನೀಡುವ ಸಾಧ್ಯತೆಯನ್ನು ನಾವು ತಳ್ಳಿ ಹಾಕುವಂತಿಲ್ಲ. ವಿದ್ಯಾರ್ಥಿಗಳ ಪೋಷಕರ ಜೊತೆ ಸೇರಿ ಶಿಕ್ಷಕರೇ ಕಾಪಿಗೆ ಸಹಕಾರ ನೀಡುತ್ತಿರುವ ಸಿಸಿಟಿವಿಯಲ್ಲಿ ಸೆರೆಯಾಗಿರುವ ಸುದ್ದಿಯನ್ನು ಪಬ್ಲಿಕ್ ಟಿವಿ ಭಾನುವಾರ ಪ್ರಸಾರ ಮಾಡಿತ್ತು. ಇದರಲ್ಲಿ ವಾಟರ್ ಬಾಯಿ ವಿದ್ಯಾರ್ಥಿಗಳಿಗೆ ಚೀಟಿ ನೀಡಿ ಹೋಗುತ್ತಿರುವುದು ಸೆರೆಯಾಗಿತ್ತು. ಹೀಗಾಗಿ ಈ ಒಂದು ಪ್ರಶ್ನೆ ಪತ್ರಿಕೆಯ ಫೋಟೋ ರಾಜ್ಯದ ಹಲವು ಭಾಗಗಳಿಗೆ ತಲುಪಿರುವ ಸಾಧ್ಯತೆಯು ಇದೆ. ಈ ಒಂದು ಪ್ರಶ್ನೆ ಪತ್ರಿಕೆ ಈಗ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ. ಈ ಹಿಂದಿನ ಪರೀಕ್ಷೆಯ ವೇಳೆಯೂ ಈ ರೀತಿ ನಡೆದಿತ್ತಾ ಎನ್ನುವುದು ತಿಳಿದು ಬಂದಿಲ್ಲ.

    ಸೋರಿಕೆಯಾಗಿಲ್ಲ: ರಾಯಚೂರಿನಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿಲ್ಲ. ಸಿಬ್ಬಂದಿ ಅಕ್ರಮದಿಂದಾಗಿ ಪ್ರಶ್ನೆ ಪತ್ರಿಕೆ ವಾಟ್ಸಪ್‍ನಲ್ಲಿ ಬಂದಿರಬಹುದು. ಆ ಕೇಂದ್ರದಲ್ಲಿ ಏನಾಗಿದೆ ಎನ್ನುವುದನ್ನು ತನಿಖೆ ನಡೆಸುತ್ತೇವೆ ಎಂದು ಪದವಿ ಪೂರ್ವ ಶಿಕ್ಷಣಾ ಇಲಾಖೆಯ ನಿರ್ದೇಶಕಿ ಶಿಖಾ ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ.

    ಬೀದರ್‍ನಲ್ಲಿ ಏನಾಗಿತ್ತು?
    ಮಾರ್ಚ್ 9ರಂದು ನಡೆದ ಜೀವಶಾಸ್ತ್ರ ಪರೀಕ್ಷೆಯಲ್ಲಿ ಬೀದರ್‍ನ ನೂರ ಕಾಲೇಜಿನಲ್ಲಿ ಪ್ರಾಂಶುಪಾಲರು, ಪರೀಕ್ಷೆ ನಿರ್ವಹಿಸುವ ಅಧಿಕಾರಿಗಳು, ಕಾಲೇಜಿನ ಸಿಬ್ಬಂದಿಗಳು ಪರೀಕ್ಷೆಯಲ್ಲಿ ನಕಲು ಮಾಡಲು ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಮಾಡಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿತ್ತು. ಕೋಣೆ ನಂಬರ್ 1, ಸಿಸಿ ಕ್ಯಾಮರಾ 10 ರಲ್ಲಿ ನಕಲಿಗೆ ಸಿಬ್ಬಂದಿಗಳು ಪ್ರೋತ್ಸಾಹ ಮಾಡುತ್ತಿರುವ ದೃಶ್ಯಗಳು ಸೆರೆಯಾಗಿವೆ. ವ್ಯಕ್ತಿಯೊಬ್ಬ ರಾಜಾರೋಷವಾಗಿ ವಿದ್ಯಾರ್ಥಿನಿಗೆ ಮೊಬೈಲ್ ನೀಡಿ ನಕಲು ಮಾಡಲು ಸಹಕಾರ ಮಾಡುತ್ತಿದ್ದು ಜೊತೆಗೆ ವಾಟರ್‍ಬಾಯಿ ಕೂಡ ವಿದ್ಯಾರ್ಥಿಗಳಿಗೆ ಚೀಟಿಗಳನ್ನು ನೀಡಿ ಹೋಗುತ್ತಿರುವ ದೃಶ್ಶ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

    https://www.youtube.com/watch?v=uLxQjBR3pXw