Tag: ನಕಲಿ ಬಿತ್ತನೆ ಬೀಜ

  • ರೈತರಿಗೆ ನಕಲಿ ಬಿತ್ತನೆ ಬೀಜ, ಗೊಬ್ಬರ ಕೊಟ್ಟ ಕಂಪನಿ ಮೇಲೆ ಕಠಿಣ ಕ್ರಮ: ಈಶ್ವರಪ್ಪ

    ರೈತರಿಗೆ ನಕಲಿ ಬಿತ್ತನೆ ಬೀಜ, ಗೊಬ್ಬರ ಕೊಟ್ಟ ಕಂಪನಿ ಮೇಲೆ ಕಠಿಣ ಕ್ರಮ: ಈಶ್ವರಪ್ಪ

    ಬೆಂಗಳೂರು: ನಕಲಿ ಬಿತ್ತನೆ ಬೀಜ ಮತ್ತು ನಕಲಿ ಗೊಬ್ಬರ ಮಾರಾಟ ಮಾಡುವ ಕಂಪನಿ ಹಾಗೂ ಮಾಲೀಕರು ಎಷ್ಟೇ ಪ್ರಭಾವಿಗಳಾಗಿದ್ದರೂ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಎಚ್ಚರಿಕೆ ನೀಡಿದರು.

    ಬಿಜೆಪಿ ಸದಸ್ಯ ರವಿಕುಮಾರ್ ಪ್ರಶ್ನೆಗೆ ಕೃಷಿ ಸಚಿವರ ಪರವಾಗಿ ಉತ್ತರ ನೀಡಿದ ಈಶ್ವರಪ್ಪ, ರೈತರಿಗೆ ಮೋಸ ಮಾಡುವ ಕಂಪನಿಗಳನ್ನು ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಎಂದು ಎಚ್ಚರಿಕೆ ಕೊಟ್ಟರು.

    ಬಿಜೆಪಿ ಸದಸ್ಯ ರವಿಕುಮಾರ್, ರಾಜ್ಯದಲ್ಲಿ ನಕಲಿ ಬೀಜಗಳ ಹಾವಳಿ ಹೆಚ್ಚಾಗಿದೆ. ಒಂದೇ ವರ್ಷದಲ್ಲಿ 8,500 ಕ್ವಿಂಟಾಲ್ ನಕಲಿ ಬೀಜ ಸಿಕ್ಕಿದೆ. ಕೃಷಿ ಇಲಾಖೆಯೇ ದಾಳಿ ಮಾಡಿ ಸುಮಾರು 500 ಕ್ವಿಂಟಾಲ್ ವಶ ಮಾಡಿಕೊಂಡಿದೆ. 12-15 ಕೋಟಿ ಮೊತ್ತ ಇದರ ಬೆಲೆಯಾಗಿದೆ. ನಕಲಿ ಹಾಗೂ ಅಕ್ರಮ ಬೀಜದಿಂದ ರೈತರಿಗೆ ಅನ್ಯಾಯವಾಗುತ್ತಿದೆ ಎಂದರು. ಇದನ್ನೂ ಓದಿ: ಓಬಿಸಿ ಮೀಸಲಾತಿ ಕೈ ಬಿಟ್ಟು ತಾಲೂಕು, ಜಿಲ್ಲಾ ಪಂಚಾಯತಿ ಚುನಾವಣೆ ನಡೆಸುವುದಿಲ್ಲ: ಈಶ್ವರಪ್ಪ

    ಇಷ್ಟೆಲ್ಲಾ ಆದರೂ ಕೇವಲ 10 ಕೇಸ್‌ಗಳು ಮಾತ್ರ ಈ ವರ್ಷ ದಾಖಲಾಗಿವೆ. ಇದು ಸರಿಯಲ್ಲ. ಲೈಸೆನ್ಸ್ ಇಲ್ಲದೆ ಕಂಪನಿಗಳು ನಕಲಿ ಬೀಜ ಮಾರಾಟ ಮಾಡುತ್ತಿವೆ. ಓದಲು ಬಾರದ ರೈತರಿಗೆ ಕಂಪನಿಗಳು ಅನ್ಯಾಯ ಮಾಡುತ್ತಿವೆ. ಈ ಬಗ್ಗೆ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ರವಿಕುಮಾರ್ ಒತ್ತಾಯ ಮಾಡಿದರು.

    ಇದಕ್ಕೆ ಉತ್ತರ ನೀಡಿದ ಸಚಿವ ಈಶ್ವರಪ್ಪ, ನಕಲಿ ಬಿತ್ತನೆ ಬೀಜ ಮಾರಾಟ ಮಾಡುವುದು ಆಘಾತಕಾರಿ ವಿಷಯ. ರೈತರಿಗೆ ಮೋಸ ಮಾಡುವ ಯಾವುದೇ ಕಂಪನಿಗಳನ್ನು ಬಿಡುವುದಿಲ್ಲ. ಬಿತ್ತನೆ ಬೀಜ ಆಗಲಿ ಅಥವಾ ಗೊಬ್ಬರದಲ್ಲಿಯೇ ಆಗಲಿ ಯಾರೇ ಮೋಸ ಮಾಡಿದರೂ ಅಂತಹ ಕಂಪನಿ ಮೇಲೆ ಕ್ರಮ ತೆಗೆದುಕೊಳ್ಳುತ್ತೇವೆ. ಎಷ್ಟೇ ಪ್ರಭಾವಿಗಳಾದರೂ ಯಾರನ್ನೂ ರಕ್ಷಣೆ ಮಾಡುವುದಿಲ್ಲ ಎಂದು ಭರವಸೆ ನೀಡಿದರು. ಇದನ್ನೂ ಓದಿ: ಪಂಚರಾಜ್ಯಗಳ ಸೋಲು ಕಾಂಗ್ರೆಸ್‍ಗೆ ಬದಲಾವಣೆ ಆಗೋದಕ್ಕೆ ಪಾಠ: ಸತೀಶ್ ಜಾರಕಿಹೊಳಿ

    ಈ ಬಗ್ಗೆ ಶೀಘ್ರವೇ ಕೃಷಿ ಇಲಾಖೆ, ಸಚಿವರ ಜೊತೆ ಪರಿಷತ್ ಸದಸ್ಯರ ಸಭೆ ಮಾಡಿ ಅಂತಹ ಕಂಪನಿಗಳ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳುವ ಬಗ್ಗೆ ನಿರ್ಧಾರ ಮಾಡುತ್ತೇವೆ ಎಂದು ತಿಳಿಸಿದರು.

  • ನಕಲಿ ಬಿತ್ತನೆ ಬೀಜದ ವಿಷಯದಲ್ಲಿ ಕೆಲ ರಾಜಕಾರಣಿಗಳಿಂದ ಒತ್ತಡ: ಬಿ.ಸಿ ಪಾಟೀಲ್

    ನಕಲಿ ಬಿತ್ತನೆ ಬೀಜದ ವಿಷಯದಲ್ಲಿ ಕೆಲ ರಾಜಕಾರಣಿಗಳಿಂದ ಒತ್ತಡ: ಬಿ.ಸಿ ಪಾಟೀಲ್

    ಹಾವೇರಿ: ನಕಲಿ ಬಿತ್ತನೆ ಬೀಜ ಸಂಗ್ರಹ ಮಾಡಿ ಇಟ್ಟಿದ್ದವರ ಮೇಲೆ ಕ್ರಮ ಕೈಗೊಳ್ಳದಂತೆ ಕೆಲವು ರಾಜಕಾರಣಿಗಳು ಮತ್ತು ಜನಪ್ರತಿನಿಧಿಗಳು ಒತ್ತಡ ಹೇರುತ್ತಿದ್ದಾರೆ. ಆದರೆ ನಾನು ಯಾವುದೇ ಒತ್ತಡಕ್ಕೆ ಮಣಿಯುವುದಿಲ್ಲ. ಒತ್ತಡಕ್ಕೆ ಮಣಿದರೆ ರೈತರ ಪರಿಸ್ಥಿತಿ ತಾಯಿಯೇ ಮಗನಿಗೆ ವಿಷ ಹಾಕಿದಂತಾಗುತ್ತದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದ್ದಾರೆ.

    ಹಾವೇರಿ ಜಿಲ್ಲೆ ಹಿರೇಕೆರೂರು ಪಟ್ಟಣದ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿದ ಮಾತನಾಡಿದ ಅವರು, ಕಳೆದ ವಾರ ಹಾವೇರಿ ಜಿಲ್ಲೆ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಕೃಷಿ ಇಲಾಖೆ ಅಧಿಕಾರಿಗಳು ನಕಲಿ ಬಿತ್ತನೆ ಬೀಜ ಸಂಗ್ರಹ ಮಾಡಿದ್ದ ಅಡ್ಡೆಗಳ ಮೇಲೆ ದಾಳಿ ಮಾಡಿದ್ದರು ಎಂದು ತಿಳಿಸಿದ್ದಾರೆ.

    ದಾಳಿ ವೇಳೆ ಒಂದು 1 ಲಕ್ಷದ 685 ಕ್ವಿಂಟಲ್ ನಕಲಿ ಬಿತ್ತನೆ ಬೀಜವನ್ನು ಜಪ್ತಿ ಮಾಡಲಾಗಿದೆ. ಆದರೆ ಪೊಲೀಸ್ ಇಲಾಖೆ ಈವರೆಗೂ ಒಬ್ಬ ಆರೋಪಿಯನ್ನೂ ಬಂಧನ ಮಾಡಿಲ್ಲ. ಇದು ಬೇಸರದ ಸಂಗತಿ. ನಕಲಿ ಬೀಜ ಸಂಗ್ರಹ ಮಾಡಿದ್ದವರು ಮತ್ತು ನಕಲಿ ಬೀಜ ಮಾರಾಟ ಮಾಡುತ್ತಿದ್ದವರನ್ನು ಬಂಧಿಸಿ ಜೈಲಿಗೆ ಅಟ್ಟುವಂತೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಹಾಗೂ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಪತ್ರ ಬರೆದಿದ್ದೇನೆ ಎಂದು ಹೇಳಿದರು.

    ನಕಲಿ ಬಿತ್ತನೆ ಬೀಜ ತಯಾರಿಸುತ್ತಿರುವ ಮೂಲವನ್ನು ಪತ್ತೆ ಮಾಡಿ ರೈತರಿಗೆ ಆಗುತ್ತಿರುವ ದೊಡ್ಡ ಅನ್ಯಾಯವನ್ನು ತಪ್ಪಿಸುವಂತೆ ಗೃಹ ಸಚಿವರು ಮತ್ತು ಪೊಲೀಸ್ ಅಧಿಕಾರಿಗಳಲ್ಲಿ ಮನವಿ ಮಾಡಿಕೊಂಡಿದ್ದೇನೆ. ಅಲ್ಲದೇ ಅವಧಿ ಮೀರಿದ ರಸಗೊಬ್ಬರ ಮಾರಾಟ ಮಾಡೋದು ಕಂಡುಬಂದರೆ ಅಂಥಾ ಅಂಗಡಿಗಳ ಲೈಸನ್ಸ್ ರದ್ದು ಮಾಡುವುದಾಗಿ ತಿಳಿಸಿದರು. ಪ್ರಸಕ್ತ ವರ್ಷ ರೈತರಿಗೆ ಬೇಕಾದ ಬಿತ್ತನೆ ಬೀಜ ಮತ್ತು ರಸಗೊಬ್ಬರದ ಕೊರತೆ ಆಗದಂತೆ ಕ್ರಮ ಕೈಗೊಂಡಿದ್ದೇವೆ ಎಂದು ಸಚಿವ ಪಾಟೀಲ್ ಹೇಳಿದರು.