Tag: ನಕಲಿ ಡಾಕ್ಟರ್

  • ಓದಿದ್ದು 10ನೇ ತರಗತಿ ಮಾಡುವುದು ಡಾಕ್ಟರ್ ವೃತ್ತಿ- ಬಾಗಲಕೋಟೆಯಲ್ಲಿದ್ದಾರೆ 384 ನಕಲಿ ವೈದ್ಯರು

    ಓದಿದ್ದು 10ನೇ ತರಗತಿ ಮಾಡುವುದು ಡಾಕ್ಟರ್ ವೃತ್ತಿ- ಬಾಗಲಕೋಟೆಯಲ್ಲಿದ್ದಾರೆ 384 ನಕಲಿ ವೈದ್ಯರು

    ಬಾಗಲಕೋಟೆ: ಜಿಲ್ಲೆಯಲ್ಲಿ ನಕಲಿ ವೈದ್ಯರ (Fake Doctor) ಹಾವಳಿ ಹೆಚ್ಚಾಗಿದೆ. ನಕಲಿ ವೈದ್ಯರ ಆಚಾತುರ್ಯಕ್ಕೆ ಒಂದು ಜೀವ ಬಲಿ ಆಗಿದೆ. ಪೊಲೀಸರ ಪರಿಶೀಲನೆ ವೇಳೆ ಬಾಗಲಕೋಟೆ ಜಿಲ್ಲೆಯಲ್ಲಿ (Bagalkot District) 384 ಜನರು ನಕಲಿ ವೈದ್ಯರು ಇರುವುದು ಪತ್ತೆಯಾಗಿದೆ.

    ಅಚ್ಚರಿ ಅಂದರೆ ಎಸ್‌ಎಸ್‌ಎಲ್‌ಸಿ, ಪಿಯುಸಿ, ಐಟಿಐ, ಬಿಎ, ಬಿಕಾಂ ಓದಿದವರು ವೈದ್ಯರಾಗಿದ್ದಾರೆ. ಇದು ಜಿಲ್ಲೆಯಲ್ಲಿನ ಆರೋಗ್ಯ ಇಲಾಖೆ ಎಷ್ಟು ನಿರ್ಲಕ್ಷ್ಯ ವಹಿಸಿದೆ ಎಂಬುದಕ್ಕೆ ಹಿಡಿದ ಕನ್ನಡಿಯಾಗಿದೆ.

     
    ಎಲ್ಲೆಲ್ಲಿ ಎಷ್ಟೆಷ್ಟು ನಕಲಿ ವೈದ್ಯರು?
    ಜಮಖಂಡಿ – 60
    ಬೀಳಗಿ – 39
    ಮುಧೋಳ – 37
    ಕಲಾದಗಿ – 29 ಇದನ್ನೂ ಓದಿ: ಮೆದುಳು ತಿನ್ನುವ ಅಮೀಬಾ ಸೋಂಕು – ಕೇರಳದಲ್ಲಿ 4ನೇ ಪ್ರಕರಣ ಪತ್ತೆ

    50ಕ್ಕೂ ಹೆಚ್ಚು ಜನ ಬಿಎಎಂಎಸ್ ಓದಿದವರು ಅಲೋಪಥಿ ಚಿಕಿತ್ಸೆ ನೀಡುತ್ತಿದ್ದಾರೆ. ಒಟ್ಟಾರೆ 384 ಜನ ನಕಲಿ ವೈದ್ಯರ ಪಟ್ಟಿ ಕೈ ಸೇರಿದೆ. ರಬಕವಿಬನಹಟ್ಟಿ ತಾಲ್ಲೂಕಿನ ಮಹಾಲಿಂಗಪುರ ಪಟ್ಟಣದ ಕವಿತಾ ಎಂಬುವರು ಪಿಯುಸಿ ಓದಿದ್ದು ಗರ್ಭಪಾತ ದಂಧೆ ಮಾಡುತ್ತಿದ್ದರು ಎಂಬ ಮಾಹಿತಿ ಸಿಕ್ಕಿದೆ.

    ಜೂನ್ 18ರಂದು ಜಮಖಂಡಿಯಲ್ಲಿ ಸುರೇಖಾ ಚರಕಿ ಎಂಬ ನಕಲಿ ವೈದ್ಯೆ ಸಿಕ್ಕಿಬಿದ್ದಿದ್ದಾಳೆ. ಈಕೆಯ ಆಸ್ಪತ್ರೆಯಲ್ಲಿ ಗರ್ಭಪಾತ ದಂಧೆಗೆ ಬಳಸುವ ವಸ್ತುಗಳು ಸಿಕ್ಕಿವೆ. ಈಕೆ ಓದಿದ್ದು ಎಸ್‌ಎಸ್‌ಎಲ್‌ಸಿ ಮಾತ್ರ. ಆದರೆ ಮಾಡುತ್ತಿದ್ದನ್ನು ವೈದ್ಯ ವೃತ್ತಿ. ಗರ್ಭಪಾತ ಮಹಿಳೆ ಸಾವಿನ ನಂತರ ನಕಲಿ ವೈದ್ಯರ ಬಣ್ಣ ಬಯಲಾಗುತ್ತಿದೆ. ಪೊಲೀಸರು ಕೊಟ್ಟ ವರದಿ ಪ್ರಕಾರ ಆರೋಗ್ಯ ಇಲಾಖೆ ನಕಲಿ ವೈದ್ಯರನ್ನು ಗುರುತಿಸಿ ಕಠಿಣ ಕ್ರಮ ಕೈಗೊಳ್ಳಬೇಕಿದೆ.

  • ನಕಲಿ ಮಾತ್ರೆ ಹಂಚಿಕೆ- ಜಿ.ಪಂ ಮಾಜಿ ಅಧ್ಯಕ್ಷ, ನಕಲಿ ವೈದ್ಯನ ವಿರುದ್ಧ ಎಫ್‍ಐಆರ್

    ನಕಲಿ ಮಾತ್ರೆ ಹಂಚಿಕೆ- ಜಿ.ಪಂ ಮಾಜಿ ಅಧ್ಯಕ್ಷ, ನಕಲಿ ವೈದ್ಯನ ವಿರುದ್ಧ ಎಫ್‍ಐಆರ್

    ಯಾದಗಿರಿ: ಕೊರೊನಾ ವೈರಸ್ ಮಾತ್ರೆಗಳೆಂದು ನಕಲಿ ಮಾತ್ರೆ ಹಂಚಿಕೆ ಮಾಡಿದ ನಕಲಿ ವೈದ್ಯ ಮತ್ತು ಈತನಿಗೆ ಸಹಕರಿಸಿದ ಜಿಲ್ಲಾ ಪಚಾಯತ್ ಮಾಜಿ ಅಧ್ಯಕ್ಷನ ಮತ್ತು ಕಾಂಗ್ರೆಸ್ ಮುಖಂಡ ಬಸವರೆಡ್ಡಿ ಅನ್ನಪೂರ್ ಮೇಲೆ ಮೇಲೆ ಎಫ್‍ಐಆರ್ ದಾಖಲಾಗಿದೆ.

    ಯಾದಗಿರಿ ಜಿಲ್ಲೆಯ ಗುರುಮಿಠಕಲ್ ತಾಲೂಕಿನ ಗುಂಜುನುರೂನಲ್ಲಿ ಶರಣಗೌಡ ಮಾಲಿಪಾಟೀಲ್ ಎಂಬ ವ್ಯಕ್ತಿ ತಾನು ಸರ್ಕಾರಿ ವೈದ್ಯನೆಂದು ಮತ್ತು ಸರ್ಕಾರ ಈ ಮಾತ್ರೆ ಕೊಡಲು ಹೇಳಿದೆ ಎಂದು ಕೊರೊನಾ ವೈರಸ್ ನಕಲಿ ಮಾತ್ರೆ ಹಂಚಿದ್ದಾನೆ. ಈತನಿಗೆ ಜಿ.ಪಂ ಮಾಜಿ ಅಧ್ಯಕ್ಷನ ಮತ್ತು ಕಾಂಗ್ರೆಸ್ ಮುಖಂಡ ಬಸವರೆಡ್ಡಿ ಅನ್ನಪೂರ್ ಸಾಥ್ ನೀಡಿದ್ದಾನೆ.

    ತನ್ನ ಮತ್ತು ಡಿಕೆಶಿ, ಮಲ್ಲಿಕಾರ್ಜುನ ಖರ್ಗೆ ಪೋಟೋ ಇರುವ ಪ್ಯಾಕ್‍ನಲ್ಲಿ ಹೋಮಿಯೋಪತಿ ಮಾತ್ರೆಯಿಟ್ಟು ಜನರಿಗೆ ಉಚಿತವಾಗಿ ಹಂಚಿಕೆ ಮಾಡಿದ್ದಾನೆ. ಆದರೆ ಈ ರೀತಿ ಮಾತ್ರೆ ಹಂಚಿಕೆ ಮಾಡುವಂತೆ ಜಿಲ್ಲಾಡಳಿತ ಯಾರಿಗೂ ಹೇಳಿಲ್ಲ. ಹೀಗಾಗಿ ಇದು ಕಾನೂನು ಬಾಹಿರವಾಗಿದ್ದು, ಈ ಇಬ್ಬರ ಮೇಲೆ ಐಪಿಸಿ ಸೆಕ್ಷನ್ 276, 336(ಇತರರ ಜೀವ ಅಥವಾ ವೈಯಕ್ತಿಕ ಸುರಕ್ಷತೆಗೆ ಅಪಾಯನ್ನುಂಟು ಮಾಡುವ ಕೃತ್ಯದಲ್ಲಿ ಪಾಲ್ಗೊಳ್ಳುವುದು), 419(ಅನುಕರಣೆ ಮೂಲಕ ವಂಚನೆಗಾಗಿ ಶಿಕ್ಷೆ) ಮತ್ತು ಕಲಂ-42 ದಿ ಫಾರ್ಮಸಿ ಆ್ಯಕ್ಟ್ ಮೇಲೆ ಪ್ರಕರಣ ದಾಖಲಾಗಿದೆ.

    ಈ ಸಂಬಂಧ ಗುರುಮಿಠಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಓರಿಜಿನಲ್ ಡಾಕ್ಟರ್ ಮನೆಯಲ್ಲಿ, ನಕಲಿ ಡಾಕ್ಟರ್ ಐಸಿಯುನಲ್ಲಿ ಕೊಡ್ತಾನೆ ಚಿಕಿತ್ಸೆ

    ಓರಿಜಿನಲ್ ಡಾಕ್ಟರ್ ಮನೆಯಲ್ಲಿ, ನಕಲಿ ಡಾಕ್ಟರ್ ಐಸಿಯುನಲ್ಲಿ ಕೊಡ್ತಾನೆ ಚಿಕಿತ್ಸೆ

    ಚಿತ್ರದುರ್ಗ: ಜಿಲ್ಲೆಯ ಸರ್ಕಾರಿ ಆಸ್ಪತ್ರೆಯಲ್ಲಿ ನಕಲಿ ಡಾಕ್ಟರ್ ಐಸಿಯುನಲ್ಲಿ ಕೆಲಸ ಮಾಡುತ್ತಿದ್ದರೇ, ಓರಿಜಿನಲ್ ಡಾಕ್ಟರ್ ಮನೆಯಲ್ಲಿ ಕುಳಿತು ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದಾರೆ.

    ಚಿತ್ರದುರ್ಗ ಜಿಲ್ಲೆಯ ಆರು ತಾಲೂಕುಗಳಿಗೆ ಒಂದೇ ದೊಡ್ಡ ಆಸ್ಪತ್ರೆ. ಜಿಲ್ಲಾಸ್ಪತ್ರೆಯಲ್ಲಿ 32 ಮಂದಿ ಸರ್ಕಾರಿ ವೈದ್ಯರಿದ್ದಾರೆ. ಎಲ್ಲ ವೈದ್ಯರಿಗೂ ಕೈ ತುಂಬ ಸಂಬಳ ನೀಡಲಾಗುತ್ತದೆ. ಆದ್ರೆ ದಿನೇಶ್ ಎಂಬ ನಕಲಿ ವೈದ್ಯ ಕಳೆದ ಆರು ತಿಂಗಳನಿಂದ ಜಿಲ್ಲಾಸ್ಪತ್ರೆಯ ತುರ್ತು ಚಿಕಿತ್ಸಾ ಘಟಕದಲ್ಲಿ ರಾತ್ರಿ ಪಾಳಯದಲ್ಲಿ ರೋಗಿಗಳಿಗೆ ಚಿಕಿತ್ಸೆಯನ್ನ ನೀಡುತ್ತಿದ್ದಾನೆ. ಕೇವಲ ಹೆಲ್ತ್ ಇನ್ಸ್ ಪೆಕ್ಟರ್ ತರಬೇತಿಯನ್ನ ಪಡೆದಿರುವ ದಿನೇಶ್ ಮಾತ್ರ ತಾನೇ ವೈದ್ಯ ಎಂಬಂತೆ ಚಿಕಿತ್ಸೆ ಕೊಡುತ್ತಾನೆ.

    ರಾತ್ರಿ ಪಾಳಯದಲ್ಲಿ ಕೆಲಸ ಮಾಡಬೇಕಾದ ವೈದ್ಯರು ಮಾತ್ರ ಮನೆಯಲ್ಲಿ ಹಾಯಾಗಿ ನಿದ್ರೆಗೆ ಜಾರುತ್ತಾರೆ. ಅಸಲಿ ವೈದ್ಯರ ಬದಲಾಗಿ ದಿನೇಶ್ ಆ ಪಾಳಿಯಲ್ಲಿ ಐಸಿಯುನಲ್ಲಿ ಡಾಕ್ಟರ್ ಆಗಿ ಆರು ತಿಂಗಳಿನಿಂದಲೂ ಅದೆಷ್ಟೋ ಅಮಾಯಕ ಜೀವಗಳ ಜೊತೆಗೆ ಚೆಲ್ಲಾಟವಾಡಿದ್ದಾನೆ.

    ರಾತ್ರಿ ವೇಳೆ ತುರ್ತು ಚಿಕಿತ್ಸೆಗಾಗಿ ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ಬರುತ್ತಿದ್ದ ರೋಗಿಗಳನ್ನ ದಾವಣಗೆರೆ ಮತ್ತು ಬೆಂಗಳೂರಿಗೆ ರೆಫರ್ ಮಾಡಲಾಗುತ್ತಿದೆ. ಇದಕ್ಕೆ ಕಾರಣ ಸರ್ಕಾರಿ ಡಾಕ್ಟರ್ ನೈಟ್ ಡ್ಯೂಟಿಗೆ ಬಾರದೇ ನಕಲಿ ಡಾಕ್ಟರ್ ಇರೋದು. ಈ ಅಕ್ರಮ ಜನರಿಗೆ ಗೊತ್ತಾಗುತ್ತಿದ್ದಂತೆ ನಕಲಿ ಡಾಕ್ಟರ್ ದಿನೇಶ್, ಸಾಮಾಜಿಕ ಹೋರಾಟಗಾರ ಷಫೀವುಲ್ಲಾ ಎಂಬವರ ಬಳಿ ತಪ್ಪೊಪ್ಪಿಕೊಂಡಿದ್ದಾನೆ. ರೋಗಿಗಳ ಜೀವದ ಜೊತೆಗೆ ಚೆಲ್ಲಾಟವಾಡಿರೋ ನಕಲಿ ಡಾಕ್ಟರ್ ಮತ್ತು ಅಕ್ರಮಕ್ಕೆ ಸಾಥ್ ಕೊಟ್ಟವರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕೆಂದು ಷಫೀವುಲ್ಲಾ ಆಗ್ರಹಿಸಿದ್ದಾರೆ.

    ಈ ಅಕ್ರಮಕ್ಕೆ ಜಿಲ್ಲಾ ಸರ್ಜನ್ ಡಾಕ್ಟರ್ ಜಯಪ್ರಕಾಶ್ ಮತ್ತು ಆರ್‍ಎಂಒ ಡಾಕ್ಟರ್ ಆನಂದಪ್ರಕಾಶ್ ಸಾಥ್ ಕೊಟ್ಟಿದ್ದಾರೆ ಅನ್ನೋ ಆರೋಪವಿದ್ದು, ಈ ಅಕ್ರಮವನ್ನ ಮುಚ್ಚಿಹಾಕಲು ಆರ್‍ಟಿಐ ಅಡಿ ಸಿಸಿಟಿವಿ ಫೂಟೇಜ್ ಕೇಳಿ ಅಲ್ಲಿರುವ ದೃಶ್ಯ ಕಾಣದಂತೆ ಬ್ಲರ್ ಮಾಡಿಸಿದ್ದಾರೆ. ಈ ವಿಚಾರವಾಗಿ ಪೊಲೀಸರು ತನಿಖೆಯನ್ನ ನಡೆಸುತ್ತಿದ್ದು, ತಪ್ಪಿತಸ್ಥರ ವಿರುದ್ಧು ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

    ಸಾಮಾಜಿಕ ಹೋರಾಟಗಾರ ಷಫೀವುಲ್ಲಾ ಮತ್ತು ನಕಲಿ ವೈದ್ಯನ ಫೋನ್ ಸಂಭಾಷಣೆ ಹೀಗಿದೆ.

    ಸಾಮಾಜಿಕ ಹೋರಾಟಗಾರ: ಯಾಕಪ್ಪ ಮಾಡೋಕೆ ಹೋದೆ ನೀನು..?
    ನಕಲಿ ಡಾಕ್ಟರ್: ಏನೋ ತಪ್ಪಾಗಿದೆ ಸರ್
    ಹೋರಾಟಗಾರ: ತಪ್ಪಲ್ಲ. ಒಂದು ತಿಂಗಳಲ್ಲ, ಎಷ್ಟು ದಿನಗಳಿಂದ ಮಾಡ್ತಿದ್ಯಾ..? ಕರೆಕ್ಟಾಗಿ ಹೇಳಪ್ಪ. ಸರಿನಾ ನೀ ಮಾಡೋದು…? ಏನ್ ಮಾಡ್ಬೇಕಂತಿದಿರಾ ಮತ್ತೆ…? ಎಷ್ಟು ಜನ ಪೇಷೆಂಟ್‍ಗಳು ಹಾಳಾಗೋಗಿದಾರೆ. ಅದೇನೇನಾಗಿದೆ ಆರೇಳು ತಿಂಗಳುಗಳಿಂದ ಹೇಳು. ನಿಂದು ಕಂಪ್ಲೀಟ್ ಆಗಿದ್ಯಾ, ಇಲ್ಲಪ್ಪ ಹೇಳು.
    ನಕಲಿ ಡಾಕ್ಟರ್: ಸಾರ್…
    ಹೋರಾಟಗಾರ: ಎಷ್ಟು ಜನ ಡಾಕ್ಟರ್..? ಎಷ್ಟು ದುಡ್ಡು ಕೊಟ್ಟಿರಬಹುದು…? ಏನು 500 ಅಥವಾ 1000 ನಾ ಕೊಟ್ಟಿರಬಹುದಾ ನಿನಗೆ…?
    ನಕಲಿ ಡಾಕ್ಟರ್: ಇಲ್ಲ ಅಣ್ಣ, ಏನು ಇಸ್ಕೊಂಡಿಲ್ಲ..
    ಹೋರಾಟಗಾರ: ಅದನ್ನೂ ಕೊಟ್ಟಿಲ್ವಾ…?
    ನಕಲಿ ಡಾಕ್ಟರ್: ಇಲ್ಲಣ್ಣ..ವ್ಯಾಲೆಂಟ್ರಿಯಾಗಿಯೇ ಮಾಡಿದ್ದೀನಿ..
    ಹೋರಾಟಗಾರ: ಅಯ್ಯೋ ಕರ್ಮವೇ..
    ನಕಲಿ ಡಾಕ್ಟರ್: ಒಂದು ರೂಪಾಯಿ ಇಸ್ಕೊಂಡಿಲ್ಲಣ್ಣ

    ಹೋರಾಟಗಾರ: ಮತ್ತೆ ಹಿಂಗಾಗಿ ಬಿಟ್ರೆ ಏನ್ ಕಥೇನಪ್ಪ. ಈಗ ಅವರೆಲ್ಲ ನಿನ್ನ ತಳ್ಳಿದಾರೆ ಮುಂದಕ್ಕೆ. ಸಿಗಾಕ್ಕೊಂಡ್ರೆ ದಿನೇಶ ಸಿಗಾಕ್ಕೊತ್ತಾನೆ ಬಿಡು ಅನ್ನೋ ಮನೋಭಾವ ಆರೇಳು ಜನ ಡಾಕ್ಟರ್‍ಗಳಿಗಿದೆ. ಹೌದಾ…? ಸತ್ಯಾನಾ..?
    ನಕಲಿ ಡಾಕ್ಟರ್: ಗೊತ್ತಿಲ್ಲಣ್ಣ…ಅದಕ್ಕೆ ನಿಮ್ ಹತ್ತಿರ ಬಂದಿದಿನಿ
    ಹೋರಾಟಗಾರ: ಅವರೆಲ್ಲಾ ಸೇಫ್ ಸೈಡ್ ಆಗಿ ನಿನ್ನ ತಳ್ಳಿದಾರೆ ಗೊತ್ತಾ..?
    ನಕಲಿ ಡಾಕ್ಟರ್: ಗೊತ್ತಿಲ್ಲಣ್ಣ… ಒಂದು ರೂಪಾಯಿ ಯಾರತ್ರಾನೂ ಇಸ್ಕೊಂಡಿಲ್ಲಣ್ಣ..
    ಹೋರಾಟಗಾರ: ನಾ ಹಾಗೆ ತಿಳ್ಕೊಂಡೆ. ಏನೋ 500-1000 ಕೊಟ್ಟಿರಬೇಕು. ಏನೋ ಪಾಪ ಡೈಲಿ ಕೆಲಸ ಮಾಡಿದಾನೆ ಹುಡುಗ. ಈಗ ಕೂಲಿ ಕೆಲಸ ಮಾಡೋರು ಇನ್ಯಾವ ಮಟ್ಟಕ್ಕೆ ಇರ್ತಾತರಪ್ಪ. ಅದಕ್ಕೆ ತಾನೆ ಹೋಗೋದು. ಪಾಪ ಇವನು ಅಮಾಯಕ. ಅವರನ್ನೆಲ್ಲ ಮನೆಗೆ ಮಲಗಿಕೊಳ್ಳೋಕೆ ಬಿಟ್ಟು, ಅವರ ಬಗ್ಗೆ ಬಾರಿ ಅನುಮಾನವಿದೆ.

    ನಕಲಿ ಡಾಕ್ಟರ್: ಇಲ್ಲ ಸರ್ ನಾ ಯಾರತ್ರಾನೂ..
    ಹೋರಾಟಗಾರ: ನಾ ಹಾಗೆ ತಿಳ್ಕೊಂಡಿದ್ದೆ. ಸರ್ ಖಂಡಿತ. ಸರ್.. (ಮೂರನೇ ವ್ಯಕ್ತಿ ಜೊತೆ ಮಾತು. ನೀವ್ಯಾರು ಗೊತ್ತಾಗಲಿಲ್ಲ..)
    ಮೂರನೇ ವ್ಯಕ್ತಿ: ನಾ ಲ್ಯಾಬ್ ಟೆಕ್ನಿಷೀಯನ್ ಸರ್..
    ಹೋರಾಟಗಾರ: ಲ್ಯಾಬ್ ಟೆಕ್ನೇಷಿಯನ್ ಏನು.. ಎಲ್ಲಾ ನಿಮ್ ಡಿಪಾರ್ಟ್ಮೆಂಟ್… ಹಹಹ
    ನಕಲಿ ಡಾಕ್ಟರ್: ಒಂದು ರೂಪಾಯಿ ಯಾರತ್ರ ಇಸ್ಕೊಂಡಿಲ್ಲ. ಪೇಷೇಂಟ್ ಹತ್ತಿರ ಆಗಲಿ…
    ಹೋರಾಟಗಾರ: ನಾ ಯಾವತ್ತಾದ್ರೂ ನಿಮ್ ಆಸ್ಪತ್ರೆಗೆ ಬಂದಿದಿನಾ..ನಾ ಹಾಗೆ ಅನ್ಕೊಂಡಿದ್ದೆ.. ಅಲ್ಲ ಪೇಷೆಂಟ್ ನಿನಗೆ ಕೊಡಲ್ಲ. ನೀ ಡಾಕ್ಟರ್ ಅಲ್ಲ, ಪೇಷೆಂಟ್ ಹೇಗೆ ಕೊಡ್ತಾರೆ ನಿನಗೆ..
    ನಕಲಿ ಡಾಕ್ಟರ್: ಇಲ್ಲ ಅಣ್ಣ ಒಂದು ರೂ..
    ಹೋರಾಟಗಾರ: ನಾ ಏನ್ ತಿಳ್ಕೊಂಡಿದ್ದೆ. ಮನೇಲಿ ಮಲ್ಕೋತಾರಲ್ಲ ಡ್ಯೂಟಿ ಡಾಕ್ಟರ್..

    ನಕಲಿ ಡಾಕ್ಟರ್: ಇಲ್ಲಣ್ಣ ಮನೇಲಿ ಮಲಗಲ್ಲಣ್ಣ
    ಹೋರಾಟಗಾರ: ಒಟ್ನಲ್ಲಿ ಅಧಿಕೃತ ಡಾಕ್ಟರ್ ನೀನೆ ಅಲ್ಲಪ್ಪ. ಅಲ್ಲಿ ಅ..
    ನಕಲಿ ಡಾಕ್ಟರ್: ಇಲ್ಲ ಅಣ್ಣ..ರೂಪಾಯಿ…
    ಹೋರಾಟಗಾರ: ಅಲ್ಲ.. ದುಡ್ಡಿಸ್ಕೊಂಡಿಲ್ಲ ಅಂದ್ರೆ ಬೇಡ. ಸುಮ್ನೆ ಯಾಕೆ ನೀ ಅಲ್ಲಿ ಡ್ಯೂಟಿ ಮಾಡಿದೆ…?
    ನಕಲಿ ಡಾಕ್ಟರ್: ಏನೋ ತಪ್ಪು ಮಾಡಿದ್ದೀನಿ ಅಣ್ಣ.. ಸುಮ್ನೆ ವ್ಯಾಲೆಂಟ್ರಿ ಸರ್ವೀಸ್ ಕೊಡೋಣ ಅಂತ ಮಾಡಿದೆ ಅಣ್ಣ…

    ಹೋರಾಟಗಾರ: ಡಾಕ್ಟರ್ ಕೋಟ್ ಎಲ್ಲಾ ಹಾಕ್ಕೊಂಡು ಕೂತಿದ್ದೀಯಾ..?
    ನಕಲಿ ಡಾಕ್ಟರ್: ಕೋಟ್ ಹಾಕಿಲ್ಲಣ್ಣ
    ಹೋರಾಟಗಾರ: ಡಾಕ್ಟರ್ ಕೋಟ್ ಹಾಕಿದ್ಯಾ..? ಸೆಟ್ ಹಾಕ್ಕೊಂಡಿಯ..?
    ನಕಲಿ ಡಾಕ್ಟರ್: ಅಣ್ಣ ಸೆಟ್ ಹಾಕ್ಕೊಂಡಿರಬಹುದು… ಕೋಟ್ ಹಾಕಿಲ್ಲಣ್ಣ..
    ಹೋರಾಟಗಾರ: ಏನಪ್ಪ ನೀನು, ನಾ ಸುಮ್ ಸುಮ್ನೆ ಹೇಳ್ತಿನಾ ನಿನಗೆ. ನನಗೆ ನಿಂದೇನು ಗೊತ್ತಿಲ್ಲ. ನಾ ಸುಮ್ನೆ ಹೇಳ್ತೀನಾ.. ನೀ ಡಾಕ್ಟರ್ ಸೀಟ್‍ನಲ್ಲಿ ಕುಂತಿಲ್ವಾ..?

    ನಕಲಿ ಡಾಕ್ಟರ್: ಹು ಅಣ್ಣ… ಕೂತಿದಿನಿ
    ಹೋರಾಟಗಾರ: ಹು. ನೀ ಡಾಕ್ಟರ್ ಮಾಡಿದಂಗೆ ಮಾಡಿದ್ಯಪ್ಪ..
    ನಕಲಿ ಡಾಕ್ಟರ್: ಇಲ್ಲ ಅಣ್ಣ
    ಹೋರಾಟಗಾರ: ನನಗೆ ಈಗ ಗೊತ್ತಾಗ್ತಿದೆ. ನಾ ಬೇರೆ ತರ ಅನ್ಕೊಂಡಿದ್ದೆ. ನಿನಗೆ ಗೊತ್ತಿಲ್ಲ. ನೀನು ಏನು ಓದಿದಿಯ. ಚಳ್ಳಕೆರೆಲಿ ಓದಿದ್ದು. ನಿನ್ ಬಗ್ಗೆ ನಿಂದೆಲ್ಲಾ ಮಾಹಿತಿ ತಗೊಂಡಿದಿವಿ. ಒಳಗಿಂದು ನಿನಗೇನು ಮಾಹಿತಿ ಇಲ್ಲ. ಮೂರು ಜನ ಟಿವಿಯವರು ನಾನು ಸೇರಿ ನಿನ್ ರಿಪೋರ್ಟ್ ಕಲೆಕ್ಟ್ ಮಾಡರೋದು. ಬೆಂಕಿ ಅದು.ನೀ ಈಗ ಕೊನೆಗೆ ಬಂದಿದಿಯ.

    ಲ್ಯಾಬ್ ಟೆಕ್ನೇಷಿಯನ್: ಇಲ್ಲ ಸಾಹೇಬ್ರು ಬೆಳಿಗ್ಗೆ ಹೇಳಿದ್ರಣ್ಣ.. ಅದಕ್ಕೆ
    ಹೋರಾಟಗಾರ: ಅಲ್ಲ.. ಈಗ ಎಂಡ್‍ಗೆ ಬಂದಿದಿರಿ. ನಾ ಮಾಹಿತಿ ಕೇಳಿ ಇಪ್ಪತ್ತು ದಿನಗಳಾಯ್ತು. ಅವರು ಉದ್ದೇಶ ಪೂರ್ವಕವಾಗಿ ನನಗೆ ಮಾಹಿತಿ ನೀಡಲ್ಲ ಅಂತ ಗೊತ್ತಾಯ್ತು. ಇರಲಿ… ಯಾರೋ ಬಾಳೆಹಣ್ಣು ತಿನ್ನೋದು ಯಾರ್ನೋ ಬಲಿ ಕೊಡೋದು. ಗೊತ್ತಿತ್ತು ನನಗೆ. ಪಾಪ.. ಹು. ಹೇಳಪ್ಪ. ಮತ್ತೆ ಏನ್ ಮಾಡೋಣ.
    ನಕಲಿ ಡಾಕ್ಟರ್: ಏನಾದರೂ ಮಾಡಣ್ಣ..ನ್ಯೂಸ್..
    ಹೋರಾಟಗಾರ: ನನ್ನ ಕೈ ಮೀರೋಗಿದೆ..ನಿಜವಾಗಿಯೋ ಮೀರೋಗಿದೆ. ಟಿವಿಯವ್ರ ಕೈನಲ್ಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಪ್ರತಿಷ್ಠಿತ ವೈದ್ಯರೊಬ್ಬರ ಲೆಟರ್ ಪ್ಯಾಡ್ ನಕಲು ಮಾಡಿ ರೋಗಿಗಳಿಗೆ ಚಿಕಿತ್ಸೆ!

    ಪ್ರತಿಷ್ಠಿತ ವೈದ್ಯರೊಬ್ಬರ ಲೆಟರ್ ಪ್ಯಾಡ್ ನಕಲು ಮಾಡಿ ರೋಗಿಗಳಿಗೆ ಚಿಕಿತ್ಸೆ!

    ಹಾವೇರಿ: ನಗರದ ಪ್ರತಿಷ್ಠಿತ ವೈದ್ಯರೊಬ್ಬರ ಲೆಟರ್ ಪ್ಯಾಡ್ ನಕಲು ಮಾಡಿ ರೋಗಿಗಳಿಗೆ ಚಿಕಿತ್ಸೆ ನೀಡ್ತಿದ್ದ ಆಸಾಮಿಯನ್ನು ಪೊಲೀಸರು ವಶಕ್ಕೆ ಪಡೆದಿರೋ ಘಟನೆ ಹಾವೇರಿ ನಗರದ ಅಶ್ವಿನಿನಗರದಲ್ಲಿ ನಡೆದಿದೆ.

    ವೈದ್ಯ ಡಾ. ಎಸ್.ಡಿ.ಸೀಗಿಹಳ್ಳಿ ಎಂಬವರ ಲೆಟರ್ ಪ್ಯಾಡ್ ನಕಲು ಮಾಡಿಕೊಂಡು ಎಸ್.ಆರ್.ಹುಲ್ಲಾಳ ಎಂಬಾತ ಮನೆಯಲ್ಲಿ ಚಿಕಿತ್ಸೆ ಕೊಡ್ತಿದ್ದ. ಇದನ್ನರಿತ ಅಸಲಿ ವೈದ್ಯ ಕೇಳೋಕೆ ಹೋದ್ರೆ ಆಸಾಮಿ ಹುಲ್ಲಾಳ ಅಸಲಿ ಡಾಕ್ಟರ್ ಮೇಲೆ ಮಚ್ಚಿನಿಂದ ಹಲ್ಲೆ ನಡೆಸೋಕೆ ಮುಂದಾದ.

    ಕೂಡಲೇ ವಿಷಯ ತಿಳಿದ ಡಿವೈಎಸ್ಪಿ ಕುಮಾರಪ್ಪ ಮತ್ತವರ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿದ್ರು. ನಂತರ ಆರೋಗ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ರು. ಲೆಟರ್ ಪ್ಯಾಡ್ ನಕಲು ಮಾಡಿದ್ದ ಆಸಾಮಿ ಹುಲ್ಲಾಳ ಪತ್ನಿ ಸಹ ಆರೋಗ್ಯ ಇಲಾಖೆಯಲ್ಲಿ ಕೆಲಸ ನಿರ್ವಹಿಸಿ ಕೆಲವು ತಿಂಗಳ ಹಿಂದೆ ನಿವೃತ್ತರಾಗಿದ್ದಾರೆ ಅನ್ನೋದು ಗೊತ್ತಾಗಿದೆ.

    ಪೊಲೀಸರು ಮತ್ತು ಅಧಿಕಾರಿಗಳು ಪರಿಶೀಲನೆ ನಡೆಸಿದ ನಂತರ ಹುಲ್ಲಾಳರ ಮನೆಯಲ್ಲಿ ಆರೋಗ್ಯ ಇಲಾಖೆಗೆ ಸೇರಿದ ಸರಕಾರಿ ಔಷಧಿಗಳು ಲಭ್ಯವಾಗಿವೆ. ಈ ಸಂಬಂಧ ತಾಲೂಕು ಆರೋಗ್ಯಾಧಿಕಾರಿ ಡಾ.ದಯಾನಂದ ಹಾವೇರಿ ನಗರ ಪೊಲೀಸ್ ಠಾಣೆಯಲ್ಲಿ ಎಸ್.ಆರ್.ಹುಲ್ಲಾಳ ವಿರುದ್ಧ ದೂರು ದಾಖಲಿಸಿದ್ದಾರೆ.

    ಅಲ್ಲದೇ ಅಸಲಿ ಡಾಕ್ಟರ್ ಸಹ ತಮ್ಮ ಮೇಲೆ ಮಚ್ಚಿನಿಂದ ಹಲ್ಲೆ ಮಾಡೋಕೆ ಬಂದಿದ್ದ ಎಸ್.ಆರ್.ಹುಲ್ಲಾಳ ವಿರುದ್ಧ ದೂರು ದಾಖಲಿಸಿದ್ದಾರೆ. ಸದ್ಯ ಪೊಲೀಸರು ಈಗ ತನಿಖೆ ಆರಂಭಿಸಿದ್ದಾರೆ.