Tag: ನಕಲಿ ಛಾಪಾಕಾಗದ

  • ತೆಲಗಿ ಬದುಕಿದ್ದರೆ ಇನ್ನು 12 ದಿನಗಳಲ್ಲಿ ಜೈಲಿಂದ ಹೊರಬರುತ್ತಿದ್ದನಂತೆ!

    ತೆಲಗಿ ಬದುಕಿದ್ದರೆ ಇನ್ನು 12 ದಿನಗಳಲ್ಲಿ ಜೈಲಿಂದ ಹೊರಬರುತ್ತಿದ್ದನಂತೆ!

    ಹೈದರಾಬಾದ್: ಬಹುಕೋಟಿ ನಕಲಿ ಛಾಪಾಕಾಗದ ಹಗರಣದ ಅಪರಾಧಿ ಕರೀಂ ಲಾಲ್ ತೆಲಗಿ ಇನ್ನು 12 ದಿನಗಳಲ್ಲಿ ತನ್ನ ಮೇಲೆ ದಾಖಲಾಗಿರೋ ಎಲ್ಲಾ ಪ್ರಕರಣಗಳಿಂದ ಮುಕ್ತನಾಗಿ ಜೈಲಿನಿಂದ ಹೊರಬರಬಹುದಿತ್ತು ಎಂದು ವಕೀಲರು ಹೇಳಿದ್ದಾರೆ.

    ಬೇಗಂ ಬಜಾರ್ ಪ್ರಕರಣದಲ್ಲಿ ತೆಲಗಿ ತಪ್ಪೊಪ್ಪಿಕೊಳ್ಳಲು ನಿರ್ಧರಿಸಿದ್ದ. ಹೀಗಾಗಿ ನವೆಂಬರ್ 17ರಂದು ಹೈದರಾಬಾದ್‍ನ ಸಿಬಿಐ ಕೋರ್ಟ್ ನೊಂದಿಗೆ ಬೆಂಗಳೂರಿನ ಜೈಲಿನಿಂದ ವಿಡಿಯೋ ಕಾನ್ಫರೆನ್ಸ್ ಮಾಡಬೇಕಿತ್ತು. ಆದ್ರೆ ಗುರುವಾರದಂದು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ತೆಲಗಿ ಮೃತಪಟ್ಟಿದ್ದಾನೆ.

    ಇತರೆ ಪ್ರಕರಣಗಳಂತೆ ಈ ಕೇಸ್‍ನಲ್ಲೂ ತೆಲಗಿ ತಪ್ಪೊಪ್ಪಿಕೊಳ್ಳಲು ನಿರ್ಧರಿಸಿದ್ದ. ಅನಾರೋಗ್ಯದ ಕಾರಣ ಬೆಂಗಳೂರಿನಿಂದ ಪ್ರಯಾಣ ಮಾಡಲು ಸಾಧ್ಯವಿರಲಿಲ್ಲ. ಈ ಹಿನ್ನೆಲೆಯಲ್ಲಿ ವಿಡಿಯೋ ಕಾನ್ಫರೆನ್ಸ್ ಗಾಗಿ ಮನವಿ ಮಾಡಿದ್ದ ಎಂದು ವರದಿಯಾಗಿದೆ.

    ತೆಲಗಿಗೆ ನ್ಯಾಯ ಸಿಗಲಿಲ್ಲ ಎಂದು ಹಿರಿಯ ವಕೀಲರಾದ ಸಿ ಮಲ್ಲೇಶ್ ರಾವ್ ಹೇಳಿದ್ದಾರೆ. 14ನೇ ಅಡಿಷನಲ್ ಮೆಟ್ರೊಪಾಲಿಟನ್ ಕೋರ್ಟ್ ನಲ್ಲಿ ರಾವ್ ಅವರು ತೆಲಗಿ ಪರವಾಗಿ ಹೋರಾಟ ಮಾಡಿದ್ದರು. ತೆಲಗಿ ಪ್ರಕರಣವನ್ನು ತನಿಖೆ ಮಾಡ್ತಿದ್ದ ಸಿಬಿಐ ಹಲವು ವರ್ಷಗಳಿಂದ ಪ್ರಕರಣವನ್ನ ಎಳೆದಾಡಿಕೊಂಡು ಬಂದಿದೆ ಎಂದು ರಾವ್ ಹೇಳಿದ್ದಾರೆ.

    ಒಂದು ವೇಳೆ ತೆಲಗಿಗೆ ಎಲ್ಲಾ 40ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಶಿಕ್ಷೆಯಾಗಿದ್ದರೂ, ಕಾನೂನಿನ ಪ್ರಕಾರ 7 ವರ್ಷಕ್ಕಿಂತ ಹೆಚ್ಚಿನ ಶಿಕ್ಷೆ ಇರುತ್ತಿರಲಿಲ್ಲ. ನ್ಯಾಯಾಧೀಶರು ತೀರ್ಮಾನಿಸಿದ್ದರೆ 3 ವರ್ಷಗಳ ಶಿಕ್ಷೆ ಮಾತ್ರ ಆಗುತ್ತಿತ್ತು. ಆದ್ರೆ ತೆಲಗಿ 1999 ರಿಂದ ಜೈಲಿನಲ್ಲಿದ್ದ.

    ಬೇಗಂ ಬಜಾರ್ ಪೊಲೀಸರು ತೆಲಗಿ ವಿರುದ್ಧ ಐಪಿಸಿ ಸೆಕ್ಷನ್ 259, 260 ಹಾಗೂ 262ರ ಅಡಿ ಪ್ರಕರಣ ದಾಖಲಿಸಿಕೊಂಡಿದ್ದರು. 1999ರಲ್ಲಿ ಚಿತ್ತೂರಿನ ಶಿವ ಎಂಬ ಸ್ಟ್ಯಾಂಪ್ ಮಾರಾಟಗಾರನನ್ನು ನಕಲಿ ಸ್ಟ್ಯಾಂಪ್ ಕೇಸ್‍ನಲ್ಲಿ ಬಂಧಿಸಿದ ನಂತರ ತೆಲಗಿಯ ಬಂಧನಕ್ಕೆ ಎಡೆ ಮಾಡಿಕೊಟ್ಟಿತ್ತು. 2006ರಲ್ಲಿ ತೆಲಗಿಗಿ 30 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಜೊತೆಗೆ 202 ಕೋಟಿ ರೂ. ದಂಡ ವಿಧಿಸಲಾಗಿತ್ತು.

    ತೆಲಗಿ ವಿರುದ್ಧದ ಪ್ರಕರಣಗಳಲ್ಲಿ ಬೇಗಂ ಬಜಾರ್ ಕೇಸ್ ಪ್ರಮುಖವಾದುದು. ಈ ಪ್ರಕರಣದ ನಂತರವೇ ದೇಶದ ವಿವಿಧೆಡೆ ತೆಲಗಿ ವಿರುದ್ಧ ಹಲವಾರು ಪ್ರಕರಣಗಳು ದಾಖಲಾಗಿದ್ದವು ಎಂದು ಮಲ್ಲೇಶ್ ರಾವ್ ಹೇಳಿದ್ದಾರೆ.

  • ನಕಲಿ ಛಾಪಾಕಾಗದ ಮಾರಾಟ ಜಾಲ ಪತ್ತೆಹಚ್ಚಿದ ಪೊಲೀಸರು- ಓರ್ವನ ಬಂಧನ

    ನಕಲಿ ಛಾಪಾಕಾಗದ ಮಾರಾಟ ಜಾಲ ಪತ್ತೆಹಚ್ಚಿದ ಪೊಲೀಸರು- ಓರ್ವನ ಬಂಧನ

    ದಾವಣಗೆರೆ: ನಕಲಿ ಛಾಪಾಕಾಗದ ಮಾರಾಟ ಜಾಲವನ್ನು ಪೊಲೀಸರು ಪತ್ತೆ ಹಚ್ಚಿ ಅರೋಪಿಗಳನ್ನು ಬಂಧಿಸಿದ ಘಟನೆ ದಾವಣಗೆರೆಯಲ್ಲಿ ನಡೆದಿದೆ.

    ನಗರದ ಮಧ್ಯ ಕರ್ನಾಟಕ ಕೋಳಿ ಸಾಕಣೆದಾರರ ಸಹಕಾರ ಸಂಘದಲ್ಲಿ ಸಾವಿರಾರು ನಕಲಿ ಇ-ಸ್ಟ್ಯಾಂಪ್ ಪೇಪರ್ ಸೃಷ್ಟಿಸಿ ಮಾರಾಟ ಮಾಡುತ್ತಿದ್ದರು. ಹಸಿರು ಸೇನೆ ರೈತ ಸಂಘದ ಜಿಲ್ಲಾಧ್ಯಕ್ಷ ದೇವರಾಜ್ ಮಲ್ಲಾಪುರ ಎಂಬವರಿಗೆ ಸೇರಿದ ಇ-ಸ್ಟ್ಯಾಂಪ್ ಪೇಪರ್ ವಿತರಣಾ ಕೇಂದ್ರದಲ್ಲಿ ಅಕ್ರಮವಾಗಿ ನಕಲಿ ಛಾಪಾಕಾಗದಗಳನ್ನು ಮಾರಾಟ ಮಾಡುತ್ತಿದ್ದರು. ಅಲ್ಲದೇ ನಿತ್ಯ 30 ರಿಂದ 50 ನಕಲಿ ಇ- ಸ್ಟ್ಯಾಂಪ್ ಸೃಷ್ಟಿಸಿ ಸಾರ್ವಜನಿಕರಿಗೆ ಹಾಗೂ ಸರ್ಕಾರಕ್ಕೆ ಮೋಸ ಮಾಡುತ್ತಿದ್ದರು.

    ಸಹಕಾರ ಸಂಘದಲ್ಲಿ ನಕಲಿ ಛಾಪಾಕಾಗದ ಮಾರಾಟ ಮಾಡುತ್ತಿರುವ ಬಗ್ಗೆ ಸಾರ್ವಜನಿಕರು ಎಸ್‍ಪಿ ಗಮನಕ್ಕೆ ತಂದಿದ್ರು. ಇದರಿಂದ ಎಸ್‍ಪಿ ಭೀಮಾಶಂಕರ ಗುಳೇದ್ ರವರ ನೇತೃತ್ವದಲ್ಲಿ ಬಡಾವಣೆ ಪೊಲೀಸ್ ಸಿಬ್ಬಂದಿ ಸ್ವಯಂಪ್ರೇರಿತ ದಾಳಿ ನಡೆಸಿ ಕಂಪ್ಯೂಟರ್ ಮತ್ತು ನಕಲಿ ಛಾಪಾಕಾಗದ ವಶಕ್ಕೆ ಪಡೆದಿದ್ದಾರೆ.

    ನಕಲಿ ಸ್ಟ್ಯಾಂಪ್ ಸೃಷ್ಟಿ ಹಿಂದೆ ಬೃಹತ್ ಜಾಲ ಕಾರ್ಯನಿರ್ವಹಿಸುತ್ತಿರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ರು. ಅಲ್ಲದೇ ಪೊಲೀಸರು ಸಹಕಾರ ಸಂಘದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕಂಪ್ಯೂಟರ್ ಆಪರೇಟರ್ ರಮೇಶ್‍ನನ್ನು ಬಂಧನ ಮಾಡಿದ್ದಾರೆ. ಆದ್ರೆ ಇ-ಸ್ಟ್ಯಾಂಪ್ ವಿತರಣಾ ಕೇಂದ್ರದ ಮಾಲೀಕನ ಮೇಲೆ ಯಾವುದೇ ಕ್ರಮ ಕೈಗೊಂಡಿಲ್ಲ.

    ದಾವಣಗೆರೆಯಲ್ಲಿ ಸಾಕಷ್ಟು ಅಕ್ರಮಗಳನ್ನು ಬಯಲಿಗೆಳೆದಿದ್ದ ರೈತ ಮುಖಂಡ ದೇವರಾಜ್ ಅಕ್ರಮವನ್ನ ಈಗ ಪಬ್ಲಿಕ್ ಟಿವಿ ಬಯಲಿಗೆಳೆದಿದೆ.