Tag: ನಕಲಿ ಔಷಧಿ

  • ನಕಲಿ ಔಷಧ ಮಾರಾಟ ಪ್ರಕರಣ- ಮೂವರಿಗೆ ಮೂರು ವರ್ಷ ಜೈಲು

    ನಕಲಿ ಔಷಧ ಮಾರಾಟ ಪ್ರಕರಣ- ಮೂವರಿಗೆ ಮೂರು ವರ್ಷ ಜೈಲು

    ಹುಬ್ಬಳ್ಳಿ: ಜನರ ನಂಬಿಕೆಯನ್ನು ಬಂಡವಾಳ ಮಾಡಿಕೊಂಡು ನಕಲಿ ಔಷಧ ಮಾರಾಟ ಮಾಡುತ್ತಿದ್ದ ಔಷಧ ಮಳಿಗೆಯ ಇಬ್ಬರು ಮಾಲೀಕರು ಹಾಗೂ ಅವುಗಳನ್ನು ಪೂರೈಸುತ್ತಿದ್ದ ಬೆಂಗಳೂರಿನ ಫಾರ್ಮಾ ಕಂಪನಿ ಮಾಲೀಕರೊಬ್ಬರಿಗೆ ಒಂದನೇ ಸೆಷನ್ಸ್ ಕೋರ್ಟ್ ಮೂರು ವರ್ಷ ಜೈಲು ಶಿಕ್ಷೆ ತಲಾ 10 ಸಾವಿರ ದಂಡ ವಿಧಿಸಿದೆ.

    ಹುಬ್ಬಳ್ಳಿ ಜೆಸಿ ನಗರದ ರಾಧಾ ಫಾರ್ಮಾ ಪ್ರೊಡಕ್ಸನ್ ಔಷಧ ಮಳಿಗೆ ಮಾಲೀಕರಾದ ಗೋವಿಂದ ತ್ರಿವೇದಿ, ಜಗದೀಶ ತ್ರಿವೇದಿ ಮತ್ತು ಬೆಂಗಳೂರಿನ ದೀಪಕ ಇಂಟರ್‍ನ್ಯಾಷನಲ್ ಫಾರ್ಮಾಸುಟಿಕಲ್ಸ್‍ನ ವಿಕ್ರಮ ಭೋಜಾನಿ ಶಿಕ್ಷೆಗೆ ಒಳಗಾದ ಅಪರಾಧಿಗಳು.

    2005ರಲ್ಲಿ ಔಷಧ ಪರಿವೀಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಶರಣಬಸಪ್ಪ ಹನುಮನಾಳ ಅವರು, ತಪಾಸಣೆ ನಡೆಸಿದಾಗ ಐದು ಬಗೆಯ ನಕಲಿ ಔಷಧಿಗಳು ದೊರೆತಿದ್ದವು.

    ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ ಸುಶಾಂತ್ ಚೌಗಲೆ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ. ಆದರೆ, ಪಿಕಾಕ್ ಫಾರ್ಮಾ ಕಂಪನಿಯ ಸತೀಶ ಶರ್ಮಾ ತಲೆಮರೆಸಿಕೊಂಡಿದ್ದು, ಪ್ರಕರಣ ಪ್ರತ್ಯೇಕಿಸಲಾಗಿದೆ. ಪ್ರಕರಣದಲ್ಲಿ ಸಹಾಯಕ ಔಷಧ ನಿಯಂತ್ರಕ ಕೆ.ಎಸ್. ಮಲ್ಲಿಕಾರ್ಜುನ ಅನುಸರಣಾಧಿಕಾರಿ ಆಗಿದ್ದರು.

  • ರಸ್ತೆಯಲ್ಲಿ ಹೋಗೋ ವೃದ್ಧರೇ ಇವರ ಟಾರ್ಗೆಟ್- ನಕಲಿ ಔಷಧಿ ಕೊಡಿಸಿ ಯಾಮಾರಿಸ್ತಿದ್ದ ಗ್ಯಾಂಗ್ ಅರೆಸ್ಟ್

    ರಸ್ತೆಯಲ್ಲಿ ಹೋಗೋ ವೃದ್ಧರೇ ಇವರ ಟಾರ್ಗೆಟ್- ನಕಲಿ ಔಷಧಿ ಕೊಡಿಸಿ ಯಾಮಾರಿಸ್ತಿದ್ದ ಗ್ಯಾಂಗ್ ಅರೆಸ್ಟ್

    ಹುಬ್ಬಳಿ: ಹುಬ್ಬಳ್ಳಿ ಧಾರವಾಡ ಜನರೇ ನೀವು ಔಷಧಿ ತೆಗೆದುಕೊಳ್ಳುವ ಮುನ್ನ ಸ್ವಲ್ಪ ಎಚ್ಚರವಿರಲಿ. ಯಾವುದು ನಕಲಿ, ಯಾವುದು ಅಸಲಿ ಎಂಬುದನ್ನು ಖಾತರಿ ಮಾಡಿಕೊಳ್ಳಿ. ಯಾಕೆಂದರೆ ವೃದ್ಧಾಪ್ಯವನ್ನೇ ಬಂಡವಾಳ ಮಾಡಿಕೊಂಡ ಕೆಲವರು ನಕಲಿ ಔಷಧಿ ಕೊಟ್ಟು ಯಾಮಾರಿಸುತ್ತಿದ್ದಾರೆ.

    ಹೌದು. ಇಂಥದೊಂದು ನಕಲಿ ಔಷಧಿ ಮಾರಾಟ ಮಾಡುವ ತಂಡ ನಿಮ್ಮನ್ನ ರಸ್ತೆಯಲ್ಲಿ ಮಾತನಾಡಿಸಿ ಯಾಮಾರಿಸುತ್ತಾರೆ. ಆದರೆ ಸದ್ಯ ಇವರನ್ನು ಧಾರವಾಡದಲ್ಲಿ ಪೊಲೀಸರು ಬಂಧಿಸಿ ತನಿಖೆ ನಡೆಸಿದ್ದಾರೆ. ರಾಘವೇಂದ್ರ ಆಯುರ್ವೇದಿಕ್ ಎಂಬ ಹೆಸರಿಟ್ಟುಕೊಂಡಿರುವ ಈ ತಂಡ ನಕಲಿ ಔಷಧಿ ಮಾರಾಟ ಮಾಡುತ್ತಿತ್ತು. ವೃದ್ಧ ಜನರು ರಸ್ತೆಯಲ್ಲಿ ಹೋಗುತ್ತಿದ್ದ ವೇಳೆ ಅವರನ್ನು ಮಾತನಾಡಿಸಿ, ನಿಮಗೆ ಒಳ್ಳೆ ಔಷಧಿ ಕೊಡಿಸುತ್ತೇವೆ ಎಂದು ಹೇಳಿ ಲಕ್ಷ ಲಕ್ಷ ಹಣ ಪಡೆದು ಪಾರಾರಿಯಾಗುತ್ತಿದ್ದರು.

    ಇವರು ನೀಡಿದ ಔಷಧಿಯಿಂದ ವೃದ್ಧರಿಗೆ ಯಾವುದೇ ಪರಿಣಾಮವಾಗಿಲ್ಲ. ಈ ಹಿನ್ನೆಲೆಯಲ್ಲಿ ಹಲವು ಜನರು ಹುಬ್ಬಳ್ಳಿ ಅಶೋಕನಗರ ಪೊಲೀಸ್ ಠಾಣೆಯಲ್ಲಿ ದೂರನ್ನು ನೀಡಿದ್ದರು. ಈ ನಿಖರ ಮಾಹಿತಿ ಪಡೆದ ಪೊಲೀಸರು ಧಾರವಾಡದ ಅಂಗಡಿ ಮೇಲೆ ದಾಳಿ ನಡೆಸಿ ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ. ಸದ್ಯ ವೆಂಕಟೇಶ ಹಾಗೂ ಎಲ್ಲಪ್ಪ ಎನ್ನುವವರನ್ನು ನಗರದ ದಾಸನಕೊಪ್ಪ ಕ್ರಾಸ್ ಬಳಿಯ ಅಂಗಡಿಯಲ್ಲಿ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 6 ಲಕ್ಷ ರೂ. ನಗದು ಹಾಗೂ ಚೆಕ್‍ಗಳನ್ನು ವಶಕ್ಕೆ ಪಡೆದಿದ್ದಾರೆ.