Tag: ನಕಲಿ ಐಪಿಎಸ್

  • 8 ವರ್ಷಗಳಿಂದ ವಂಚನೆ- ನಕಲಿ ಐಪಿಎಸ್, ಐಎಎಸ್ ಅಧಿಕಾರಿಗಳು ಕೊನೆಗೂ ಅಂದರ್

    8 ವರ್ಷಗಳಿಂದ ವಂಚನೆ- ನಕಲಿ ಐಪಿಎಸ್, ಐಎಎಸ್ ಅಧಿಕಾರಿಗಳು ಕೊನೆಗೂ ಅಂದರ್

    ಲಕ್ನೋ: 8 ವರ್ಷಗಳಿಂದ ಐಪಿಎಸ್, ಐಎಎಸ್ ಅಧಿಕಾರಿಗಳೆಂದು ಜನರನ್ನು ವಂಚಿಸುತ್ತ ಬಂದಿದ್ದ ಇಬ್ಬರು ವ್ಯಕ್ತಿಗಳನ್ನು ಉತ್ತರಪ್ರದೇಶದ ನೋಯ್ಡಾ ಪೊಲೀಸರು ಸೆರೆಹಿಡಿದಿದ್ದಾರೆ.

    ಆರೋಪಿಗಳನ್ನು ಗೌರವ್ ಮಿಶ್ರಾ ಹಾಗೂ ಆಶುತೋಶ್ ರಾತಿ ಎಂದು ಗುರುತಿಸಲಾಗಿದೆ. ಕಳೆದ 8 ವರ್ಷಗಳಿಂದ ಈ ಇಬ್ಬರು ಆರೋಪಿಗಳು ಪೊಲೀಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡುವುದಾಗಿ ಬೆದರಿಸಿ, ಅವರ ಬಳಿ ಹಣ ಪಡೆಯುತ್ತಿದ್ದರು ಎನ್ನಲಾಗಿದೆ. ಅಲ್ಲದೆ ಐಪಿಎಸ್, ಐಎಎಸ್ ಹೆಸರು ಬಳಸಿಕೊಂಡು ಹಣಕ್ಕಾಗಿ ಜನರನ್ನೂ ಕೂಡ ವಂಚಿಸಿದ್ದರು ಎಂಬ ಆರೋಪ ಕೇಳಿ ಬಂದಿದೆ.

    ಈ ನಕಲಿ ಅಧಿಕಾರಿಗಳ ಬಳಿ ಪೊಲೀಸರ ಖಾಕಿ ಸಮವಸ್ತ್ರ, ನಕಲಿ ಐಡಿ ಕಾರ್ಡ್ ಹಾಗೂ ಐಪಿಎಸ್, ಐಎಎಸ್ ಬ್ಯಾಡ್ಜ್ ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಆರೋಪಿಗಳ ಮೇಲೆ ಪ್ರಕರಣ ಕೂಡ ದಾಖಲಿಸಿಕೊಂಡಿದ್ದಾರೆ. ವ್ಯಕ್ತಿಯೊಬ್ಬರು ನೀಡಿದ ದೂರಿನಿಂದಾಗಿ ಆರೋಪಿಗಳ ನಿಜ ಬಣ್ಣ ಬೆಳಕಿಗೆ ಬಂದಿದೆ.

    ಈ ಹಿಂದೆ ಕೂಡ ರಾಷ್ಟ್ರ ರಾಜಧಾನಿಯಲ್ಲಿ ಇಂತಹ ಪ್ರಕರಣಗಳು ಬೆಳಕಿಗೆ ಬಂದಿತ್ತು. ಘಾಜಿಯಾಬಾದಿನ ನಿವಾಸಿ ಆಶೀಷ್ ಚೌಧರಿಯನ್ನು ದೆಹಲಿ ಪೊಲೀಸರು ಬಂಧಿಸಿದ್ದರು. ಆಶೀಷ್ ದೆಹಲಿ ಪೊಲೀಸ್ ಪರೀಕ್ಷೆಯನ್ನು ಅನುತ್ತೀರ್ಣನಾಗಿದ್ದನು. ಆದರೆ ಈ ಬಗ್ಗೆ ತನ್ನ ಕುಟುಂಬಕ್ಕೆ ಹಾಗೂ ತಾನು ಮದುವೆಯಾಗಬೇಕಿದ್ದ ಹುಡುಗಿಗೆ ತಿಳಿಸಲು ಹೆದರಿ ಪೊಲೀಸ್ ಆಗಿದ್ದೇನೆ ಎಂದು ಸುಳ್ಳು ಹೇಳಿ ನಂಬಿಸಿದ್ದನು. ಅಲ್ಲದೆ ನಕಲಿ ಪೊಲೀಸ್ ಆಗಿ ಜನರಿಂದ ಹಣ ಪಡೆದು ಹತ್ತಿರದ ಪೊಲೀಸ್ ಠಾಣೆಯ ಹೆಸರು ಹೇಳಿ ವಂಚಿಸುತ್ತಿದ್ದನು. ಈ ಖತರ್ನಾಕ್ ವಂಚಕನನ್ನು ಇದೇ ಜುಲೈನಲ್ಲಿ ಬಂಧಿಸಲಾಗಿತ್ತು.

    ಹಾಗೆಯೇ ಜೂನ್‍ನಲ್ಲಿ ಐಪಿಎಸ್ ಅಧಿಕಾರಿಯೆಂದು ತಿರುಗಾಡುತ್ತಿದ್ದ ಆರೋಪಿ ಹಾಗೂ ಆತನ ಸ್ನೇಹಿತನನ್ನು ಪೊಲೀಸರು ಬಂಧಿಸಿದ್ದರು. ನೋಯ್ಡಾದ ಆದಿತ್ಯ ದೀಕ್ಷಿತ್ ಹಾಗೂ ಆತನ ಸ್ನೇಹಿತ ಅಖಿಲೇಶ್ ಯಾದವ್‍ನನ್ನು ಪೊಲೀಸರು ಸೆರೆಹಿಡಿದಿದ್ದರು.

    ಗೃಹ ಸಚಿವಾಲಯದ ಸೈಬರ್ ಕ್ರೈಂ ಅಧಿಕಾರಿಯೆಂದು ಇಬ್ಬರು ಆರೋಪಿಗಳು ಹೋಟೆಲ್‍ವೊಂದರಲ್ಲಿ ತಂಗಿದ್ದರು. ಅಲ್ಲದೆ ಹೋಟೆಲ್‍ಗೆ ಒಂದು ರೂ. ಕೂಡ ಹಣ ತುಂಬದೆ ಮಜಾ ಮಾಡಿದ್ದರು. ಆದರೆ ಈ ವೇಳೆ ಹೋಟೆಲ್ ಸಿಬ್ಬಂದಿಗೆ ಅನುಮಾನ ಮೂಡಿ ಪೊಲೀಸರಿಗೆ ಮಾಹಿತಿ ನೀಡಿದಾಗ ಆರೋಪಿಗಳ ಸತ್ಯಾಂಶ ಹೊರಬಿದ್ದಿತ್ತು. ಬಳಿಕ ಇಬ್ಬರನ್ನೂ ಬಂಧಿಸಿ, ಐಪಿಸಿ ಸೆಕ್ಷನ್ ಅನ್ವಯ ಪ್ರಕರಣ ದಾಖಲಿಸಿಕೊಂಡಿದ್ದರು.